M’Cheyne Bible Reading Plan
ಮನಸ್ಸೆಯು ತನ್ನ ಕೆಟ್ಟ ಆಳ್ವಿಕೆಯನ್ನು ಯೆಹೂದದಲ್ಲಿ ಆರಂಭಿಸಿದನು
21 ಮನಸ್ಸೆಯು ಆಳಲಾರಂಭಿಸಿದಾಗ ಅವನಿಗೆ ಹನ್ನೆರಡು ವರ್ಷ ವಯಸ್ಸಾಗಿತ್ತು. ಅವನು ಐವತ್ತೈದು ವರ್ಷ ಜೆರುಸಲೇಮಿನಲ್ಲಿ ಆಳಿದನು. ಅವನ ತಾಯಿಯ ಹೆಸರು ಹೆಫ್ಜೆಬಾ.
2 ಯೆಹೋವನು ಕೆಟ್ಟದ್ದೆಂದು ಹೇಳಿದ ಕಾರ್ಯಗಳನ್ನು ಮನಸ್ಸೆಯು ಮಾಡಿದನು. ಇಸ್ರೇಲರು ತಮ್ಮ ದೇಶಕ್ಕೆ ಬಂದಾಗ ಯೆಹೋವನು ಹೊರಗಟ್ಟಿದ ಅನ್ಯಜನಾಂಗಗಳ ಅಸಹ್ಯಕೃತ್ಯಗಳನ್ನು ಮನಸ್ಸೆಯು ಮಾಡಿದನು. 3 ಮನಸ್ಸೆಯು ತನ್ನ ತಂದೆಯಾದ ಹಿಜ್ಕೀಯನು ನಾಶಪಡಿಸಿದ್ದ ಉನ್ನತಸ್ಥಳಗಳನ್ನು ಮತ್ತೆ ನಿರ್ಮಿಸಿದನು. ಮನಸ್ಸೆಯು ಇಸ್ರೇಲಿನ ರಾಜನಾದ ಅಹಾಬನಂತೆ ಬಾಳನಿಗಾಗಿ ಯಜ್ಞವೇದಿಕೆಯನ್ನು ಮತ್ತು ಅಶೇರಸ್ತಂಭಗಳನ್ನು ನಿರ್ಮಿಸಿದನು. ಮನಸ್ಸೆಯು ಪರಲೋಕದ ನಕ್ಷತ್ರಗಳನ್ನು ಆರಾಧಿಸಿ ಅವುಗಳ ಸೇವೆಮಾಡಿದನು. 4 ಮನಸ್ಸೆಯು ಸುಳ್ಳುದೇವತೆಗಳನ್ನು ಗೌರವಿಸಲು ದೇವಾಲಯದಲ್ಲಿ ಯಜ್ಞವೇದಿಕೆಗಳನ್ನು ನಿರ್ಮಿಸಿದನು. (“ನಾನು ನನ್ನ ಹೆಸರನ್ನು ಜೆರುಸಲೇಮಿನಲ್ಲಿ ಸ್ಥಾಪಿಸುತ್ತೇನೆ” ಎಂದು ಯೆಹೋವನು ಮಾತನಾಡುವಾಗ ಹೇಳುತ್ತಿದ್ದ ಸ್ಥಳವು ಇದೇ ಆಗಿತ್ತು.) 5 ಮನಸ್ಸೆಯು ಪರಲೋಕದ ನಕ್ಷತ್ರಗಳಿಗಾಗಿ ದೇವಾಲಯದ ಎರಡು ಪ್ರಾಕಾರಗಳಲ್ಲಿ ಯಜ್ಞವೇದಿಕೆಗಳನ್ನು ನಿರ್ಮಿಸಿದನು. 6 ಮನಸ್ಸೆಯು ತನ್ನ ಮಗನನ್ನು ಆಹುತಿಕೊಟ್ಟು ಅವನನ್ನು ಯಜ್ಞವೇದಿಕೆಯ ಮೇಲೆ ಹೋಮಮಾಡಿದನು. ಮನಸ್ಸೆಯು ಭವಿಷ್ಯತ್ಕಾಲವನ್ನು ಅರಿಯಲು ಅನೇಕ ಮಾರ್ಗಗಳಲ್ಲಿ ಪ್ರಯತ್ನಿಸುತ್ತಿದ್ದನು. ಅವನು ಪ್ರೇತಾತ್ಮಗಳನ್ನು ವಶಪಡಿಸಿಕೊಂಡಿರುವ ಮಾಂತ್ರಿಕರನ್ನು ಮತ್ತು ತಾಂತ್ರಿಕರನ್ನು ಭೇಟಿಮಾಡಿದನು.
ಯೆಹೋವನು ಕೆಟ್ಟದ್ದೆಂದು ಹೇಳಿದ ಅನೇಕಾನೇಕ ಕಾರ್ಯಗಳನ್ನು ಮನಸ್ಸೆಯು ಮಾಡಿದನು. ಯೆಹೋವನು ಕೋಪಗೊಳ್ಳಲು ಇದು ಕಾರಣವಾಯಿತು. 7 ಮನಸ್ಸೆಯು ಅಶೇರ ವಿಗ್ರಹಗಳನ್ನು ಕೆತ್ತಿಸಿದನು. ಅವನು ಈ ವಿಗ್ರಹಗಳನ್ನು ಆಲಯದಲ್ಲಿ ಇರಿಸಿದನು. ಯೆಹೋವನು ದಾವೀದನಿಗೆ ಮತ್ತು ದಾವೀದನ ಮಗನಾದ ಸೊಲೊಮೋನನಿಗೆ ಈ ಆಲಯವನ್ನು ಕುರಿತು ಹೀಗೆ ಹೇಳಿದ್ದನು: “ಇಸ್ರೇಲಿನಲ್ಲಿರುವ ಎಲ್ಲಾ ನಗರಗಳಿಂದ ನಾನು ಜೆರುಸಲೇಮನ್ನು ಆರಿಸಿದ್ದೇನೆ. ನಾನು ನನ್ನ ಹೆಸರನ್ನು ಜೆರುಸಲೇಮಿನ ಆಲಯದಲ್ಲಿ ಎಂದೆಂದಿಗೂ ಇರಿಸುತ್ತೇನೆ. 8 ಇಸ್ರೇಲಿನ ಜನರು ತಮ್ಮ ದೇಶವನ್ನು ತೊರೆದು ಅಲೆದಾಡದೆ ತಮ್ಮ ಪೂರ್ವಿಕರಿಗೆ ಕೊಡಲ್ಪಟ್ಟ ದೇಶದಲ್ಲಿಯೇ ನೆಲೆಸುವಂತೆ ನಾನು ಮಾಡುತ್ತೇನೆ. ನಾನು ನನ್ನ ಸೇವಕನಾದ ಮೋಶೆಯ ಮೂಲಕ ಅವರಿಗೆ ಬೋಧಿಸಿದ ಆಜ್ಞೆಗಳಿಗೆಲ್ಲಾ ಅವರು ವಿಧೇಯರಾಗಿದ್ದರೆ, ನಾನು ಅವರನ್ನು ಅವರ ದೇಶದಲ್ಲಿ ನೆಲೆಗೊಳಿಸುವೆನು.” 9 ಆದರೆ ಜನರು ದೇವರ ಮಾತನ್ನು ಆಲಿಸಲಿಲ್ಲ. ಇಸ್ರೇಲರು ಕಾನಾನಿಗೆ ಬರುವುದಕ್ಕೆ ಮುಂಚೆ ಅಲ್ಲಿ ವಾಸಿಸುತ್ತಿದ್ದ ಜನಾಂಗಗಳು ಮಾಡಿದ್ದಕ್ಕಿಂತ ಹೆಚ್ಚು ಕೆಟ್ಟಕಾರ್ಯಗಳನ್ನು ಮನಸ್ಸೆಯಿಂದ ಪ್ರೇರಿತರಾಗಿ ಮಾಡಿದರು. ಇಸ್ರೇಲರು ಅವರ ದೇಶಗಳನ್ನು ವಶಪಡಿಸಿಕೊಳ್ಳಲು ಬಂದಾಗ ಯೆಹೋವನು ಆ ಜನಾಂಗಗಳನ್ನು ನಾಶಪಡಿಸಿದನು.
10 ಯೆಹೋವನು ತನ್ನ ಸೇವಕರಾದ ಪ್ರವಾದಿಗಳಿಂದ ಈ ಸಂಗತಿಗಳನ್ನು ತಿಳಿಸಿದನು. 11 “ಯೆಹೂದದ ರಾಜನಾದ ಮನಸ್ಸೆಯು ತನಗಿಂತಲೂ ಮುಂಚೆ ಇದ್ದ ಅಮೋರಿಯರಿಗಿಂತ ಹೆಚ್ಚು ಅಸಹ್ಯವಾದ ಕೃತ್ಯಗಳನ್ನು ಮಾಡಿದನು. ಮನಸ್ಸೆಯು ತನ್ನ ವಿಗ್ರಹಗಳಿಂದ ಯೆಹೂದವನ್ನು ಪಾಪಕ್ಕೆ ಪ್ರೇರೇಪಿಸಿದನು. 12 ಆದ್ದರಿಂದ ಇಸ್ರೇಲಿನ ದೇವರು ಹೀಗೆನ್ನುತ್ತಾನೆ: ‘ಇಗೋ, ಜೆರುಸಲೇಮಿಗೂ ಯೆಹೂದಕ್ಕೂ ಎಷ್ಟು ತೊಂದರೆಯನ್ನು ತರುತ್ತೇನೆಂದರೆ, ಅದನ್ನು ಕೇಳಿದ ಯಾರಾದರೂ ನಡುಗಿಬಿಡಬೇಕು. 13 ನಾನು ಸಮಾರ್ಯದ ಮೇಲೆ ಚಾಚಿದ ಮಟ್ಟಗೋಲನ್ನೂ ಅಹಾಬನ ಕುಟುಂಬದ ಮೇಲಿಟ್ಟ ತೂಕದ ಗುಂಡನ್ನೂ ಜೆರುಸಲೇಮಿನ ಮೇಲೆ ಚಾಚುತ್ತೇನೆ. ಒಬ್ಬನು ಒಂದು ಪಾತ್ರೆಯನ್ನು ಒರೆಸಿ, ಅದನ್ನು ಕೆಳಮುಖವಾಗಿ ತಿರುಗಿಸುವಂತೆ ನಾನು ಜೆರುಸಲೇಮಿಗೆ ಮಾಡುತ್ತೇನೆ. 14 ಆದರೂ ಅಲ್ಲಿ ನನ್ನ ಕೆಲವು ಜನರು ಉಳಿದುಕೊಳ್ಳುತ್ತಾರೆ. ನಾನು ಅವರನ್ನು ಬಿಟ್ಟುಬಿಡುತ್ತೇನೆ. ನಾನು ಅವರನ್ನು ಅವರ ಶತ್ರುಗಳಿಗೆ ಒಪ್ಪಿಸುತ್ತೇನೆ. ಅವರ ಶತ್ರುಗಳು ಅವರನ್ನು ಸೆರೆಯಾಳುಗಳನ್ನಾಗಿ ಇಟ್ಟುಕೊಳ್ಳುವರು; ಯುದ್ಧಗಳಲ್ಲಿ ಸೈನಿಕರು ವಶಪಡಿಸಿಕೊಳ್ಳುವ ಬೆಲೆಯುಳ್ಳ ವಸ್ತುಗಳಂತೆ ಅವರಿರುವರು. 15 ಏಕೆಂದರೆ ನಾನು ಕೆಟ್ಟದ್ದೆಂದು ಹೇಳಿದ ಕಾರ್ಯಗಳನ್ನೇ ನನ್ನ ಜನರು ಮಾಡಿದರು. ಅವರ ಪೂರ್ವಿಕರು ಈಜಿಪ್ಟಿನಿಂದ ಹೊರಬಂದ ದಿನದಿಂದ ಅವರು ನನ್ನನ್ನು ರೇಗಿಸಿದರು. 16 ಮನಸ್ಸೆಯು ಅನೇಕ ನಿರಪರಾಧಿಗಳನ್ನು ಕೊಂದುಹಾಕಿದನು; ಜೆರುಸಲೇಮನ್ನು ಒಂದು ಕೊನೆಯಿಂದ ಮತ್ತೊಂದು ಕೊನೆಯವರೆಗೆ ರಕ್ತದಿಂದ ತುಂಬಿಸಿದನು. ಯೆಹೂದವನ್ನು ಪಾಪಕ್ಕೆ ಪ್ರೇರೇಪಿಸಿದ್ದರ ಜೊತೆಗೆ ಅವನ ಈ ಪಾಪಗಳು ಕೂಡಿಕೊಂಡವು. ಯೆಹೋವನು ಕೆಟ್ಟದ್ದೆಂದು ಹೇಳಿದ ಕಾರ್ಯಗಳನ್ನು ಯೆಹೂದವು ಮಾಡುವಂತೆ ಮನಸ್ಸೆಯು ಪ್ರೇರೇಪಿಸಿದನು.’”
17 “ಯೆಹೂದದ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಮನಸ್ಸೆಯು ಮಾಡಿದ ಎಲ್ಲಾ ಕಾರ್ಯಗಳನ್ನೂ ಅವನು ಮಾಡಿದ ಪಾಪಕೃತ್ಯಗಳನ್ನೂ ಬರೆಯಲಾಗಿದೆ. 18 ಮನಸ್ಸೆಯು ಸತ್ತುಹೋದನು ಮತ್ತು ಅವನನ್ನು ಅವನ ಪೂರ್ವಿಕರ ಬಳಿ ಸಮಾಧಿಮಾಡಿದರು. ಮನಸ್ಸೆಯನ್ನು “ಉಜ್ಜನ ವನ”ದಲ್ಲಿ ಸಮಾಧಿಮಾಡಿದರು. ಈ ವನವು ಅವನ ಸ್ವಂತ ಮನೆಯಲ್ಲಿತ್ತು. ಮನಸ್ಸೆಯ ನಂತರ ಅವನ ಮಗನಾದ ಆಮೋನನು ಹೊಸ ರಾಜನಾದನು.
ಆಮೋನನ ಸ್ವಲ್ಪಕಾಲದ ಆಳ್ವಿಕೆ
19 ಆಮೋನನು ಆಳಲಾರಂಭಿಸಿದಾಗ ಅವನಿಗೆ ಇಪ್ಪತ್ತೆರಡು ವರ್ಷ ವಯಸ್ಸಾಗಿತ್ತು. ಅವನು ಎರಡು ವರ್ಷ ಜೆರುಸಲೇಮಿನಲ್ಲಿ ಆಳಿದನು. ಅವನ ತಾಯಿಯ ಹೆಸರು ಮೆಷುಲ್ಲೆಮೆತ್. ಅವಳು ಯೊಟ್ಟಾ ಊರಿನ ಹಾರೂಚನ ಮಗಳು.
20 ಆಮೋನನು ಅವನ ತಂದೆಯಾದ ಮನಸ್ಸೆಯಂತೆ ಯೆಹೋವನು ಕೆಟ್ಟದ್ದೆಂದು ಹೇಳಿದವುಗಳನ್ನೆಲ್ಲಾ ಮಾಡಿದನು. 21 ಆಮೋನನು ತನ್ನ ತಂದೆಯಂತೆ ಜೀವಿಸಿದ್ದನು. ತನ್ನ ತಂದೆಯು ಪೂಜಿಸಿದ ವಿಗ್ರಹಗಳನ್ನು ಆಮೋನನು ಪೂಜಿಸಿದನು. 22 ಆಮೋನನು ತನ್ನ ಪೂರ್ವಿಕರ ದೇವರಾದ ಯೆಹೋವನನ್ನು ತ್ಯಜಿಸಿದನು ಮತ್ತು ಯೆಹೋವನಿಗೆ ಮೆಚ್ಚಿಗೆಯಾದ ಮಾರ್ಗದಲ್ಲಿ ಜೀವಿಸಲಿಲ್ಲ.
23 ಆಮೋನನ ಸೇವಕರು ಅವನ ವಿರುದ್ಧ ಒಳಸಂಚು ಮಾಡಿದರು ಮತ್ತು ಅವನ ಸ್ವಂತ ಮನೆಯಲ್ಲಿಯೇ ಅವನನ್ನು ಕೊಂದುಹಾಕಿದರು. 24 ರಾಜನಾದ ಆಮೋನನ ವಿರುದ್ಧ ಒಳಸಂಚು ಮಾಡಿದ ಅವನ ಅಧಿಕಾರಿಗಳನ್ನು ಆ ದೇಶದ ಜನಸಾಮಾನ್ಯರು ಕೊಂದುಹಾಕಿದರು. ಆಮೋನನ ಮಗನಾದ ಯೋಷೀಯನನ್ನು ಜನರು ಅವನ ನಂತರ ಹೊಸ ರಾಜನನ್ನಾಗಿ ಮಾಡಿದರು.
25 “ಯೆಹೂದದ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಆಮೋನನು ಮಾಡಿದ ಇತರ ಕಾರ್ಯಗಳನ್ನು ಕುರಿತು ಬರೆಯಲಾಗಿದೆ. 26 ಆಮೋನನನ್ನು ಉಜ್ಜನವನದಲ್ಲಿ ಅವನ ಸ್ಮಶಾನದಲ್ಲಿ ಸಮಾಧಿಮಾಡಿದರು. ಆಮೋನನ ಮಗನಾದ ಯೋಷೀಯನು ಹೊಸ ರಾಜನಾದನು.
ಯೇಸು ಮೋಶೆಗಿಂತ ಶ್ರೇಷ್ಠನು
3 ಆದ್ದರಿಂದ ನನ್ನ ಸಹೋದರ ಸಹೋದರಿಯರೇ, ಪರಿಶುದ್ಧ ಜನರಾಗುವುದಕ್ಕಾಗಿ ದೇವರಿಂದ ಕರೆಯಲ್ಪಟ್ಟವರಾದ ನೀವು ಯೇಸುವನ್ನೇ ಕುರಿತು ಆಲೋಚಿಸಿರಿ. ದೇವರು ಆತನನ್ನು ನಮ್ಮ ಬಳಿಗೆ ಕಳುಹಿಸಿದನು. ಆತನೇ ನಮ್ಮ ನಂಬಿಕೆಯ ಪ್ರಧಾನಯಾಜಕನು. 2 ಯೇಸುವನ್ನು ದೇವರು ನಮ್ಮ ಬಳಿಗೆ ಕಳುಹಿಸಿ, ಆತನನ್ನು ನಮ್ಮ ಪ್ರಧಾನಯಾಜಕನನ್ನಾಗಿ ಮಾಡಿದನು. ಆತನು ಮೋಶೆಯಂತೆ ದೇವರಿಗೆ ನಂಬಿಗಸ್ತನಾಗಿದ್ದನು. ದೇವರ ಮನೆಯಲ್ಲಿ ದೇವರ ಇಷ್ಟಕ್ಕನುಗುಣವಾಗಿ ಮಾಡಬೇಕಾದುದನ್ನೆಲ್ಲ ಆತನು ಮಾಡಿದನು. 3 ಒಬ್ಬ ಮನುಷ್ಯನು ಮನೆಯನ್ನು ಕಟ್ಟಿದಾಗ, ಜನರು ಮನೆಗಿಂತಲೂ ಅವನಿಗೇ ಹೆಚ್ಚು ಮಾನ್ಯತೆಯನ್ನು ಕೊಡುವಂತೆಯೇ ಯೇಸು ಮೋಶೆಗಿಂತ ಹೆಚ್ಚು ಮಾನ್ಯತೆಯನ್ನು ಹೊಂದಿದ್ದಾನೆ. 4 ಪ್ರತಿಯೊಂದು ಮನೆಯು ಯಾರಾದರೊಬ್ಬರಿಂದ ಕಟ್ಟಲ್ಪಟ್ಟಿರಬೇಕು. ಆದರೆ ದೇವರು ಎಲ್ಲವನ್ನು ನಿರ್ಮಿಸಿದನು. 5 ದೇವರ ಮನೆಯಲ್ಲೆಲ್ಲಾ ಮೋಶೆಯು ಸೇವಕನಂತೆ ನಂಬಿಗಸ್ತನಾಗಿದ್ದನು. ಮುಂದೆ ಪ್ರಕಟವಾಗಲಿದ್ದ ಸಂಗತಿಗಳಿಗೆ ಅವನು ಸಾಕ್ಷಿಯಾಗಿದ್ದನು. 6 ಕ್ರಿಸ್ತನಾದರೋ ಮಗನಾಗಿ ದೇವರ ಮನೆಯನ್ನು ಆಳುವುದರಲ್ಲಿ ನಂಬಿಗಸ್ತನಾಗಿದ್ದಾನೆ. ವಿಶ್ವಾಸಿಗಳಾದ ನಾವು ನಮಗಿರುವ ಮಹಾ ನಿರೀಕ್ಷೆಯಲ್ಲಿ ದೃಢವಾಗಿಯೂ ಹೆಮ್ಮೆಯಿಂದಲೂ ಇರುವುದಾಗಿದ್ದರೆ ದೇವರ ಮನೆಯವರಾಗಿದ್ದೇವೆ.
ನಾವು ದೇವರನ್ನು ಅನುಸರಿಸಲೇಬೇಕು
7 ಆದ್ದರಿಂದ ಪವಿತ್ರಾತ್ಮನು ಹೇಳುವ ಪ್ರಕಾರ,
“ನೀವು ಈ ಹೊತ್ತು ದೇವರ ಸ್ವರಕ್ಕೆ ಕಿವಿಗೊಟ್ಟರೆ,
8 ಪೂರ್ವಕಾಲದಲ್ಲಿ ನಿಮ್ಮ ಹಿರಿಯರು ದೇವರಿಗೆ ವಿರುದ್ಧವಾಗಿದ್ದಂತೆ ನಿಮ್ಮ ಹೃದಯಗಳನ್ನು ಕಠಿಣಮಾಡಿಕೊಳ್ಳಬೇಡಿ.
ಅಂದು ಅವರು ಮರುಭೂಮಿಯಲ್ಲಿ ದೇವರನ್ನು ಪರೀಕ್ಷಿಸಿದರು.
9 ನಾನು ಮರಳುಗಾಡಿನಲ್ಲಿ ನಲವತ್ತು ವರ್ಷಗಳ ಕಾಲ ಮಾಡಿದ್ದನ್ನು ನಿಮ್ಮ ಪೂರ್ವಿಕರು ನೋಡಿದರೂ
ನನ್ನನ್ನೂ ನನ್ನ ತಾಳ್ಮೆಯನ್ನೂ ಪರೀಕ್ಷಿಸಿದರು.
10 ಆದ್ದರಿಂದ ಅವರ ಮೇಲೆ ನಾನು ಕೋಪಗೊಂಡಿದ್ದೆನು.
‘ಅವರ ಆಲೋಚನೆಗಳು ಯಾವಾಗಲೂ ತಪ್ಪಾಗಿವೆ.
ನನ್ನ ಮಾರ್ಗವನ್ನು ಅವರು ಅರ್ಥಮಾಡಿಕೊಳ್ಳಲೇ ಇಲ್ಲ’ ಎಂದು ನಾನು ಹೇಳಿದೆನು.
11 ‘ಆ ಜನರು ನನ್ನ ವಿಶ್ರಾಂತಿಯಲ್ಲಿ ಎಂದಿಗೂ ಪ್ರವೇಶಿಸುವುದಿಲ್ಲ’
ಎಂದು ನಾನು ಕೋಪಗೊಂಡು ಪ್ರಮಾಣ ಮಾಡಿದೆನು.”(A)
12 ಆದ್ದರಿಂದ ಸಹೋದರ ಸಹೋದರಿಯರೇ, ನಿಮ್ಮಲ್ಲಿ ಯಾರೂ ಕೆಟ್ಟಬುದ್ಧಿಯುಳ್ಳವರಾಗದಂತೆ, ನಂಬದವರಾಗದಂತೆ, ಜೀವಸ್ವರೂಪನಾದ ದೇವರನ್ನು ತೊರೆಯದಂತೆ ಎಚ್ಚರಿಕೆಯಿಂದಿರಿ. 13 ಆದರೆ ಒಬ್ಬರನ್ನೊಬ್ಬರು ಪ್ರತಿದಿನವೂ ಸಂತೈಸಿರಿ. “ಈ ದಿನ”ವು ಇನ್ನೂ ಇರುವಾಗಲೇ ಇದನ್ನೆಲ್ಲ ಮಾಡಿರಿ. ಪಾಪದಿಂದಾಗಲಿ ಪಾಪವು ಮೋಸಗೊಳಿಸುವ ರೀತಿಯಿಂದಾಗಲಿ ನಿಮ್ಮಲ್ಲಿ ಯಾರೂ ಕಠಿಣರಾಗದಂತೆ ಒಬ್ಬರಿಗೊಬ್ಬರು ಸಹಾಯ ಮಾಡಿರಿ. 14 ನಾವೆಲ್ಲರೂ ಒಟ್ಟಾಗಿ ಕ್ರಿಸ್ತನಲ್ಲಿ ಪಾಲುಗಾರರಾಗಿದ್ದೇವೆ. ಆರಂಭದಲ್ಲಿ ನಮಗಿದ್ದ ದೃಢನಂಬಿಕೆಯನ್ನು ಅಂತ್ಯದವರೆಗೂ ಬಲವಾಗಿ ಹಿಡಿದುಕೊಳ್ಳುವುದಾದರೆ ಇದು ನಿಜವಾಗುತ್ತದೆ. 15 ಪವಿತ್ರ ಗ್ರಂಥವು ಹೇಳುವುದೇನೆಂದರೆ:
“ನೀವು ಈ ಹೊತ್ತು ದೇವರ ಸ್ವರಕ್ಕೆ ಕಿವಿಗೊಟ್ಟರೆ,
ಪೂರ್ವಕಾಲದಲ್ಲಿ ನಿಮ್ಮ ಹಿರಿಯರು ದೇವರಿಗೆ ವಿರುದ್ಧವಾಗಿದ್ದಂತೆ ನಿಮ್ಮ ಹೃದಯಗಳನ್ನು ಕಠಿಣಮಾಡಿಕೊಳ್ಳಬೇಡಿ.”(B)
16 ದೇವರ ಸ್ವರವನ್ನು ಕೇಳಿಯೂ ಆತನಿಗೆ ವಿರುದ್ಧರಾದವರು ಯಾರು? ಮೋಶೆಯ ಮೂಲಕ ಈಜಿಪ್ಟಿನಿಂದ ಬಿಡುಗಡೆ ಹೊಂದಿದವರಲ್ಲವೇ? 17 ನಲವತ್ತು ವರ್ಷಗಳ ಕಾಲ ದೇವರು ಯಾರ ಮೇಲೆ ಕೋಪಗೊಂಡಿದ್ದನು? ಪಾಪವನ್ನು ಮಾಡಿದವರ ಮೇಲಲ್ಲವೇ? ಅವರೆಲ್ಲರೂ ಮರುಭೂಮಿಯಲ್ಲಿ ಸತ್ತುಹೋದರು. 18 ತನ್ನ ವಿಶ್ರಾಂತಿಯಲ್ಲಿ ಅವರು ಸೇರುವುದೇ ಇಲ್ಲವೆಂದು ದೇವರು ಪ್ರಮಾಣ ಮಾಡಿದಾಗ, ಆತನು ಯಾರೊಡನೆ ಮಾತಾಡುತ್ತಿದ್ದನು? ತನಗೆ ಅವಿಧೇಯರಾದ ಜನರ ಬಗ್ಗೆ ಅಲ್ಲವೇ? 19 ಆದ್ದರಿಂದ ದೇವರ ವಿಶ್ರಾಂತಿಯಲ್ಲಿ ಪ್ರವೇಶಿಸಲು ಆ ಜನರಿಗೆ ಅವಕಾಶ ದೊರೆಯಲಿಲ್ಲ. ಅವರಲ್ಲಿ ನಂಬಿಕೆ ಇಲ್ಲದಿದ್ದ ಕಾರಣವೇ ಅವರು ಪ್ರವೇಶಿಸಲಿಲ್ಲ.
ಯೆಹೋವನ ಬಳಿಗೆ ಹಿಂದಿರುಗಿರಿ
14 ಇಸ್ರೇಲೇ, ನೀನು ಜಾರಿಬಿದ್ದು ದೇವರಿಗೆ ವಿರುದ್ಧವಾಗಿ ಪಾಪಮಾಡಿದಿ. ನಿನ್ನ ದೇವರಾದ ಯೆಹೋವನ ಬಳಿಗೆ ಹಿಂದಿರುಗಿ ಬಾ. 2 ನೀನು ಹೇಳಬೇಕಾದ ವಿಷಯಗಳ ಕುರಿತು ನೀನು ಆಲೋಚಿಸು ಮತ್ತು ಯೆಹೋವನ ಬಳಿಗೆ ಹಿಂದಿರುಗಿ ಬಾ ಮತ್ತು ಆತನಿಗೆ ಹೀಗೆ ಹೇಳು:
“ನಮ್ಮ ಪಾಪಗಳನ್ನು ನಮ್ಮಿಂದ ತೆಗೆ.
ನಾವು ಮಾಡುವ ಒಳ್ಳೆಯ ಕಾರ್ಯಗಳನ್ನು ಸ್ವೀಕರಿಸು.
ಆಗ ನಮ್ಮ ತುಟಿಗಳಿಂದ ನಿನಗೆ ಸ್ತೋತ್ರವೆಂಬ ಕಾಣಿಕೆಯನ್ನು ಸಮರ್ಪಿಸುವೆವು.
3 ಅಶ್ಶೂರವು ನಮ್ಮನ್ನು ರಕ್ಷಿಸಲಾರದು.
ನಾವು ಕುದುರೆ ಮೇಲೆ ಸವಾರಿ ಮಾಡುವದಿಲ್ಲ.
ನಮ್ಮ ಕೈಗಳು ತಯಾರಿಸಿದ ಬೊಂಬೆಗಳಿಗೆ ನಾವು ಇನ್ನು
‘ನಮ್ಮ ದೇವರು’ ಎಂದು ಹೇಳುವದಿಲ್ಲ.
ಯಾಕೆಂದರೆ ಅನಾಥರಿಗೆ
ಕರುಣೆಯನ್ನು ತೋರಿಸುವವನು ನೀನೇ.”
ಯೆಹೋವನು ಇಸ್ರೇಲನ್ನು ಕ್ಷಮಿಸುವನು
4 ಯೆಹೋವನು ಹೇಳುವುದೇನೆಂದರೆ,
“ಅವರು ನನ್ನನ್ನು ತೊರೆದುಬಿಟ್ಟಿದ್ದನ್ನು ನಾನು ಕ್ಷಮಿಸುವೆನು.
ಅವರನ್ನು ಅಧಿಕವಾಗಿಯೂ ಸ್ವಇಚ್ಛೆಯಿಂದಲೂ ಪ್ರೀತಿಸುವೆನು.
ಈಗ ಅವರ ಮೇಲೆ ನಾನು ಕೋಪಿಸುವದಿಲ್ಲ.
5 ಇಸ್ರೇಲಿಗೆ ನಾನು ಇಬ್ಬನಿಯಂತಿರುವೆನು.
ನೆಲದಾವರೆಯಂತೆ ಇಸ್ರೇಲ್ ಅರಳುವನು.
ಲೆಬನೋನಿನ ದೇವದಾರು ವೃಕ್ಷಗಳಂತೆ ಸೊಂಪಾಗಿ ಬೆಳೆಯುವನು.
6 ಅವನ ಕೊಂಬೆಗಳು ಬೆಳೆದು ಹರಡಿಕೊಳ್ಳುತ್ತವೆ;
ಅವನು ಅಂದವಾದ ಆಲೀವ್ ಮರದಂತಿರುವನು.
ಲೆಬನೋನಿನ ದೇವದಾರು ಮರಗಳ ಸುವಾಸನೆಯಂತೆ
ಅವನು ಗಮಗಮಿಸುವನು.
7 ಇಸ್ರೇಲಿನ ಜನರು ಮತ್ತೆ ನನ್ನ ಆಶ್ರಯದಲ್ಲಿ ವಾಸಿಸುವರು.
ಧಾನ್ಯದ ಸಸಿಗಳಂತೆ ಬೆಳೆಯುವರು,
ದ್ರಾಕ್ಷಾಲತೆಯಿಂದ ಚಿಗುರುವರು.
ಲೆಬನೋನಿನ ದ್ರಾಕ್ಷಿಬಳ್ಳಿಯಂತೆ ಅವರು ಇರುವರು.”
ವಿಗ್ರಹಗಳ ಬಗ್ಗೆ ಯೆಹೋವನ ಎಚ್ಚರಿಕೆ
8 “ಎಫ್ರಾಯೀಮೇ, ಇನ್ನುಮುಂದೆ ವಿಗ್ರಹವು ನಿನ್ನಲ್ಲಿರಬಾರದು.
ನಿನ್ನ ಪ್ರಾರ್ಥನೆಗೆ ಉತ್ತರಿಸುವವನು ನಾನೇ.
ನಿನ್ನನ್ನು ಕಾಯುವವನು ನಾನೇ.
ನಾನು ತುರಾಯಿ ಮರದಂತೆ ಸದಾ ಹಸಿರಾಗಿರುವೆನು.
ನಿನ್ನ ಫಲಗಳು ನನ್ನಿಂದ ಬರುವದು.”
ಅಂತಿಮ ಸಲಹೆ
9 ಬುದ್ಧಿವಂತ ಮನುಷ್ಯನು ಇವುಗಳನ್ನು ಅರ್ಥಮಾಡಿಕೊಳ್ಳುತ್ತಾನೆ.
ಜಾಣನು ಇದನ್ನು ಕಲಿತುಕೊಳ್ಳುತ್ತಾನೆ.
ಯೆಹೋವನ ಮಾರ್ಗವು ಸರಿಯಾದದ್ದು.
ಒಳ್ಳೆಯ ಜನರು ಅವರೊಂದಿಗೆ ಜೀವಿಸುವರು.
ಪಾಪಿಗಳು ಅವುಗಳಿಂದ ಸಾಯುವರು.
ಸ್ತುತಿಗೀತೆ. ರಚನೆಗಾರ: ದಾವೀದ.
139 ಯೆಹೋವನೇ, ನೀನು ನನ್ನನ್ನು ಪರೀಕ್ಷಿಸಿ
ಸಂಪೂರ್ಣವಾಗಿ ತಿಳಿದುಕೊಂಡಿರುವೆ.
2 ನಾನು ಕುಳಿತುಕೊಳ್ಳುವುದೂ ಎದ್ದೇಳುವುದೂ ನಿನಗೆ ತಿಳಿದಿದೆ.
ನೀನು ಬಹುದೂರದಿಂದಲೇ ನನ್ನ ಆಲೋಚನೆಗಳನ್ನು ತಿಳಿದಿರುವೆ.
3 ನಾನು ಎಲ್ಲಿಗೇ ಹೋಗುತ್ತಿದ್ದರೂ ಎಲ್ಲೇ ಮಲಗಿದ್ದರೂ ನಿನಗೆ ತಿಳಿದಿರುತ್ತದೆ.
ನನ್ನ ಕಾರ್ಯಗಳೆಲ್ಲಾ ನಿನಗೆ ತಿಳಿದಿದೆ.
4 ಯೆಹೋವನೇ, ನನ್ನ ಬಾಯಿಂದ ಮಾತುಗಳು ಹೊರಡುವುದಕ್ಕಿಂತ ಮೊದಲೇ
ನಾನು ಹೇಳಬೇಕೆಂದಿರುವುದು ನಿನಗೆ ತಿಳಿದಿದೆ.
5 ನೀನು ನನ್ನ ಸುತ್ತಲೂ ಆವರಿಸಿರುವೆ;
ನಿನ್ನ ಹಸ್ತವನ್ನು ನನ್ನ ಮೇಲೆ ಇಟ್ಟಿರುವೆ.
6 ನನ್ನ ವಿಷಯವಾಗಿ ನನಗಿಂತಲೂ ನಿನಗೆ ಎಷ್ಟೋ ಹೆಚ್ಚಾಗಿ ತಿಳಿದಿರುವುದು ನನ್ನನ್ನು ಆಶ್ಚರ್ಯಗೊಳಿಸಿದೆ,
ಅದನ್ನು ಗ್ರಹಿಸಿಕೊಳ್ಳುವುದಕ್ಕೂ ನನ್ನಿಂದಾಗದು.
7 ನಾನು ನಿನ್ನ ಆತ್ಮದಿಂದ ತಪ್ಪಿಸಿಕೊಳ್ಳಲು ಎಲ್ಲಿಗೆ ಓಡಿಹೋಗಲಿ!
ನಿನ್ನ ಕಣ್ಣಿಗೆ ಮರೆಯಾಗಲು ಎಲ್ಲಿಗೆ ಹೋಗಲಿ?
8 ನಾನು ಪರಲೋಕಕ್ಕೆ ಏರಿಹೋದರೆ ಅಲ್ಲಿಯೂ ನೀನಿರುವೆ.
ಪಾತಾಳಕ್ಕೆ ಇಳಿದುಹೋದರೆ ಅಲ್ಲಿಯೂ ನೀನಿರುವೆ.
9 ಪೂರ್ವದಿಕ್ಕಿನಲ್ಲಿ ಸೂರ್ಯನು ಉದಯಿಸುವ ಸ್ಥಳಕ್ಕೆ ಹೋದರೆ ಅಲ್ಲಿಯೂ ನೀನಿರುವೆ
ಪಶ್ಚಿಮದಿಕ್ಕಿನಲ್ಲಿ ಸಮದ್ರದ ಕಟ್ಟಕಡೆಗೆ ಹೋದರೆ ಅಲ್ಲಿಯೂ ನೀನಿರುವೆ.
10 ಅಲ್ಲಿಯೂ ನಿನ್ನ ಕೈ ನನ್ನನ್ನು ನಡೆಸುವುದು.
ನಿನ್ನ ಬಲಗೈ ನನ್ನನ್ನು ಭದ್ರವಾಗಿ ಹಿಡಿದಿರುವುದು.
11 ನಾನು ನನ್ನನ್ನು ನಿನ್ನಿಂದ ಮರೆಮಾಡಿಕೊಳ್ಳಲು ಪ್ರಯತ್ನಿಸಿ,
“ಹಗಲು ಹೋಗಿ ಕತ್ತಲಾಯಿತು,
ಖಂಡಿತವಾಗಿ ಕಾರ್ಗತ್ತಲೆಯು ನನ್ನನ್ನು ಮರೆಮಾಡುವುದು” ಎಂದೆನ್ನಬಹುದು.
12 ಆದರೆ ಕಾರ್ಗತ್ತಲೆಯೂ ನಿನಗೆ ಕತ್ತಲೆಯಲ್ಲ.
ಕಾರ್ಗತ್ತಲೆಯು ನಿನಗೆ ಹಗಲಿನಂತೆ ಪ್ರಕಾಶಮಾನವಾಗಿರುವುದು.
13 ನನ್ನ ಅಂತರೀಂದ್ರಿಯಗಳನ್ನು ಸೃಷ್ಟಿಮಾಡಿದವನೂ ನೀನೇ.
ತಾಯಿಯ ಗರ್ಭದಲ್ಲಿ ನನ್ನನ್ನು ರೂಪಿಸಿದವನೂ ನೀನೇ.
14 ನಿನ್ನ ಎಲ್ಲಾ ಅದ್ಭುತಕಾರ್ಯಗಳಿಗಾಗಿ ನಿನಗೆ ಕೃತಜ್ಞತಾಸ್ತುತಿ ಮಾಡುವೆನು.
ನಿನ್ನ ಕಾರ್ಯಗಳು ಅದ್ಭುತಕರವಾಗಿವೆಯೆಂದು ನಾನು ಗ್ರಹಿಸಿಕೊಂಡಿರುವೆ.
15 ನನ್ನ ವಿಷಯವೆಲ್ಲಾ ನಿನಗೆ ಗೊತ್ತಿದೆ.
ತಾಯಿಗರ್ಭದಲ್ಲಿ ನನ್ನ ದೇಹ ರೂಪಗೊಳ್ಳುತ್ತಿದ್ದಾಗ ನನ್ನ ಎಲುಬುಗಳು ಬೆಳೆಯುವುದನ್ನೂ ನೀನು ನೋಡಿದೆ.
16 ನನ್ನ ದೇಹದ ಅಂಗಾಂಗಗಳು ಬೆಳೆಯುವುದನ್ನೂ ನೀನು ಗಮನಿಸಿದೆ.
ನನ್ನ ಆಯುಷ್ಕಾಲದ ಮೊದಲನೆ ದಿನ ಆರಂಭವಾಗುವುದಕ್ಕಿಂತ ಮೊದಲೇ ಅದರ ಎಲ್ಲಾ ದಿನಗಳು ನಿನ್ನ ಪುಸ್ತಕದಲ್ಲಿ ಬರೆಯಲ್ಪಟ್ಟವು.
17 ದೇವರೇ, ನಿನ್ನ ಆಲೋಚನೆಗಳು ನನಗೆ ಎಷ್ಟೋ ಮುಖ್ಯವಾಗಿವೆ.
ಅವು ಅಸಂಖ್ಯಾತವಾಗಿವೆ.
18 ಅವುಗಳನ್ನು ಎಣಿಸುವುದಾದರೆ, ಸಮುದ್ರದ ಮರಳಿಗಿಂತಲೂ ಹೆಚ್ಚಾಗಿವೆ.
ನಾನು ಎಚ್ಚರಗೊಂಡಾಗ ಮುಂಚಿನಂತೆ ನಿನ್ನೊಂದಿಗೇ ಇರುವೆನು.
19 ಯೆಹೋವನೇ, ದುಷ್ಟರನ್ನು ಸಂಹರಿಸು.
ಆ ಕೊಲೆಗಾರರನ್ನು ನನ್ನಿಂದ ದೂರಮಾಡು.
20 ಆ ದುಷ್ಟರು ನಿನ್ನನ್ನು ದೂಷಿಸುತ್ತಾರೆ.
ಅಯೋಗ್ಯಕ್ಕಾಗಿ ನಿನ್ನ ಹೆಸರನ್ನು ಹೇಳುತ್ತಾರೆ.
21 ಯೆಹೋವನೇ, ನಿನ್ನನ್ನು ದ್ವೇಷಿಸುವವರನ್ನು ನಾನೂ ದ್ವೇಷಿಸುವೆನು.
ನಿನ್ನನ್ನು ವಿರೋಧಿಸುವವರನ್ನು ನಾನೂ ವಿರೋಧಿಸುವೆನು.
22 ನಾನು ಅವರನ್ನು ಸಂಪೂರ್ಣವಾಗಿ ದ್ವೇಷಿಸುವೆನು!
ನಿನ್ನ ವೈರಿಗಳನ್ನು ನನ್ನ ವೈರಿಗಳೆಂದೇ ಪರಿಗಣಿಸಿದ್ದೇನೆ.
23 ದೇವರೇ, ನನ್ನನ್ನು ಪರೀಕ್ಷಿಸಿ ನನ್ನ ಹೃದಯವನ್ನು ತಿಳಿದುಕೋ.
ನನ್ನನ್ನು ಶೋಧಿಸಿ ನನ್ನ ಆಲೋಚನೆಗಳನ್ನು ಗ್ರಹಿಸಿಕೋ.
24 ನನ್ನಲ್ಲಿ ದುರಾಲೋಚನೆಗಳಿದ್ದರೆ ಕಂಡುಕೊ.
ನನ್ನನ್ನು ಸನಾತನ ಮಾರ್ಗದಲ್ಲಿ ನಡೆಸು.
Kannada Holy Bible: Easy-to-Read Version. All rights reserved. © 1997 Bible League International