Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
2 ರಾಜರುಗಳು 20

ಹಿಜ್ಕೀಯನಿಗೆ ಕಾಯಿಲೆ

20 ಆ ಸಮಯದಲ್ಲಿ ಹಿಜ್ಕೀಯನಿಗೆ ಕಾಯಿಲೆಯಾಗಿ ಸತ್ತಂತಾದನು. ಆಮೋಚನ ಮಗನೂ ಪ್ರವಾದಿಯೂ ಆದ ಯೆಶಾಯನು ಹಿಜ್ಕೀಯನ ಬಳಿಗೆ ಹೋಗಿ, “ಯೆಹೋವನು ಹೀಗೆನ್ನುತ್ತಾನೆ. ‘ನಿನ್ನ ಮನೆಯನ್ನು ವ್ಯವಸ್ಥೆಗೊಳಿಸು; ಏಕೆಂದರೆ ನೀನು ಸಾಯುವೆ, ಬದುಕುವುದಿಲ್ಲ!’” ಎಂದು ಹೇಳಿದನು.

ಹಿಜ್ಕೀಯನು ತನ್ನ ಮುಖವನ್ನು ಗೋಡೆಯ ಕಡೆಗೆ ತಿರುಗಿಸಿ ಯೆಹೋವನಲ್ಲಿ ಪ್ರಾರ್ಥಿಸುತ್ತಾ, “ಯೆಹೋವನೇ, ನಾನು ಪೂರ್ಣಮನಸ್ಸಿನಿಂದ ನಿಜವಾಗಿಯೂ ನಿನ್ನ ಸೇವೆಮಾಡಿದ್ದೇನೆಂಬುದನ್ನು ನೆನಪುಮಾಡಿಕೊ. ನೀನು ಯೋಗ್ಯವೆಂದು ಹೇಳಿದವುಗಳನ್ನು ನಾನು ಮಾಡಿದೆನು” ಎಂದು ಹೇಳಿದನು. ನಂತರ ಹಿಜ್ಕೀಯನು ಬಹಳ ಜೋರಾಗಿ ಗೋಳಾಡಿದನು.

ಯೆಶಾಯನು ಅರಮನೆಯ ಮಧ್ಯಪ್ರಾಕಾರವನ್ನು ಬಿಡುವುದಕ್ಕೆ ಮುಂಚೆಯೇ, ಯೆಹೋವನ ವಾಕ್ಯವು ಅವನಿಗೆ ಬಂದಿತು. ಯೆಹೋವನು “ಹಿಂದಿರುಗಿ ಹೋಗಿ, ನನ್ನ ಜನರ ನಾಯಕನಾದ ಹಿಜ್ಕೀಯನಿಗೆ ಇದನ್ನು ಹೇಳು: ‘ನಿನ್ನ ಪೂರ್ವಿಕನಾದ ದಾವೀದನ ದೇವರಾದ ಯೆಹೋವನು ಹೀಗೆನ್ನುತ್ತಾನೆ: ನಾನು ನಿನ್ನ ಪ್ರಾರ್ಥನೆಯನ್ನು ಕೇಳಿದೆನು; ನಿನ್ನ ಕಣ್ಣೀರನ್ನು ನೋಡಿದೆನು. ಆದ್ದರಿಂದ ನಾನು ನಿನ್ನನ್ನು ಗುಣಪಡಿಸುತ್ತೇನೆ. ಮೂರನೆಯ ದಿನ, ನೀನು ದೇವಾಲಯಕ್ಕೆ ಹೋಗುವೆ. ನಾನು ನಿನ್ನ ಜೀವಕ್ಕೆ ಹದಿನೈದು ವರ್ಷಗಳನ್ನು ಕೂಡಿಸುತ್ತೇನೆ. ನಾನು ನಿನ್ನನ್ನು ಮತ್ತು ಈ ನಗರವನ್ನು ಅಶ್ಶೂರದ ರಾಜನ ಅಧಿಕಾರದಿಂದ ರಕ್ಷಿಸುತ್ತೇನೆ. ನಾನು ಈ ನಗರವನ್ನು ಸಂರಕ್ಷಿಸುತ್ತೇನೆ. ನಾನು ನನ್ನ ಸೇವಕನಾದ ದಾವೀದನಿಗೆ ವಾಗ್ದಾನ ಮಾಡಿದ್ದಕ್ಕಾಗಿಯೂ ನನಗಾಗಿಯೂ ಇದನ್ನು ಮಾಡುತ್ತೇನೆ’” ಎಂದು ಹೇಳಿದನು.

ಆಗ ಯೆಶಾಯನು, “ಅಂಜೂರದ ಹಣ್ಣಿನಿಂದ ಒಂದು ಉಂಡೆಯನ್ನು ಮಾಡಿಸಿ ಅದನ್ನು ಕುರುವಿನ ಮೇಲೆ ಇಡು” ಎಂದು ಹೇಳಿದನು.

ಅಂತೆಯೇ ಅವರು ಅಂಜೂರಹಣ್ಣಿನ ಒಂದು ಉಂಡೆಯನ್ನು ಹಿಜ್ಕೀಯನ ಕುರುವಿನ ಮೇಲೆ ಇಟ್ಟರು. ಆಗ ಹಿಜ್ಕೀಯನಿಗೆ ಗುಣವಾಯಿತು.

ಹಿಜ್ಕೀಯನು ಯೆಶಾಯನಿಗೆ, “ಯೆಹೋವನು ನನ್ನನ್ನು ಗುಣಪಡಿಸುತ್ತಾನೆಂಬುದಕ್ಕೆ ಮತ್ತು ಮೂರನೆಯ ದಿನ ನಾನು ದೇವಾಲಯದವರೆಗೆ ಹೋಗುವೆನೆಂಬುದಕ್ಕೆ ಏನು ಗುರುತು?” ಎಂದು ಕೇಳಿದನು.

ಯೆಶಾಯನು, “ನೆರಳು ಹತ್ತು ಮೆಟ್ಟಲು ಮುಂದಕ್ಕೆ ಹೋಗಬೇಕೋ ಅಥವಾ ಹತ್ತು ಮೆಟ್ಟಲು ಹಿಂದಕ್ಕೆ ಹೋಗಬೇಕೋ?[a] ನಿನಗೆ ಯಾವುದು ಬೇಕಾಗಿದೆ? ಯೆಹೋವನು ತಾನು ಹೇಳಿದ್ದನ್ನು ಮಾಡುತ್ತಾನೆಂಬುದಕ್ಕೆ ಇದೇ ನಿನಗೆ ಗುರುತು” ಎಂದು ಹೇಳಿದನು.

10 ಹಿಜ್ಕೀಯನು, “ನೆರಳು ಮುಂದೆ ಹೋಗುವುದು ಸುಲಭ, ಆದ್ದರಿಂದ ಹತ್ತು ಮೆಟ್ಟಲು ಹಿಂದೆ ಬರುವಂತೆ ಮಾಡು” ಎಂದು ಉತ್ತರಿಸಿದನು.

11 ಆಗ ಯೆಶಾಯನು ಯೆಹೋವನಲ್ಲಿ ಪ್ರಾರ್ಥಿಸಿದನು. ಯೆಹೋವನು ಈಗಾಗಲೇ ಹತ್ತು ಮೆಟ್ಟಲು ಮುಂದೆ ಹೋಗಿದ್ದ ನೆರಳನ್ನು ಹತ್ತು ಮೆಟ್ಟಲು ಹಿಂದಕ್ಕೆ ಬರುವಂತೆ ಮಾಡಿದನು.

ಹಿಜ್ಕೀಯನು ತನ್ನ ಭಂಡಾರವನ್ನು ಬಾಬಿಲೋನಿನ ಜನರಿಗೆ ತೋರಿಸಿದನು

12 ಆ ಸಮಯದಲ್ಲಿ, ಬಲದಾನನ ಮಗನಾದ ಬೆರೋದಕ ಬಲದಾನ ಎಂಬುವನು ಬಾಬಿಲೋನಿನ ರಾಜನಾಗಿದ್ದನು. ಅವನು ಹಿಜ್ಕೀಯನಿಗೆ ಪತ್ರಗಳನ್ನು ಮತ್ತು ಕಾಣಿಕೆಯನ್ನು ಕಳುಹಿಸಿದನು. ಹಿಜ್ಕೀಯನು ಅಸ್ವಸ್ಥನಾಗಿದ್ದಾನೆ ಎಂಬುದನ್ನು ಬೆರೋದಕ ಬಲದಾನನು ತಿಳಿದುಕೊಂಡದ್ದರಿಂದ ಹೀಗೆ ಮಾಡಿದನು. 13 ಹಿಜ್ಕೀಯನು ಬಾಬಿಲೋನಿನ ಜನರನ್ನು ಸ್ವಾಗತಿಸಿ, ಅವರಿಗೆ ತನ್ನ ಮನೆಯಲ್ಲಿದ್ದ ಎಲ್ಲಾ ಬೆಲೆಬಾಳುವ ವಸ್ತುಗಳನ್ನು ತೋರಿಸಿದನು. ಅವನು ತನ್ನ ಭಂಡಾರದಲ್ಲಿದ್ದ ಬೆಳ್ಳಿಬಂಗಾರಗಳನ್ನು, ಸುಗಂಧದ್ರವ್ಯಗಳನ್ನು, ಪರಿಮಳಭರಿತ ತೈಲವನ್ನು, ಆಯುಧಗಳನ್ನು ತೋರಿಸಿದನು. ಹಿಜ್ಕೀಯನ ಮನೆಯಲ್ಲಿ ಮತ್ತು ಅವನ ರಾಜ್ಯದಲ್ಲಿ ಅವರಿಗೆ ತೋರಿಸದೆ ಉಳಿದದ್ದು ಏನೂ ಇರಲಿಲ್ಲ.

14 ನಂತರ ಪ್ರವಾದಿಯಾದ ಯೆಶಾಯನು ರಾಜನಾದ ಹಿಜ್ಕೀಯನ ಬಳಿಗೆ ಬಂದು, “ಈ ಜನರು ಹೇಳುವುದೇನು? ಇವರು ಎಲ್ಲಿಂದ ಬಂದರು?” ಎಂದು ಕೇಳಿದನು.

ಹಿಜ್ಕೀಯನು, “ಅವರು ಬಹಳ ದೂರದೇಶದಿಂದ, ಬಾಬಿಲೋನಿನಿಂದ ಬಂದಿದ್ದಾರೆ” ಎಂದನು.

15 ಯೆಶಾಯನು, “ಅವರು ನಿನ್ನ ಮನೆಯಲ್ಲಿ ಏನನ್ನು ನೋಡಿದರು?” ಎಂದು ಕೇಳಿದನು.

ಹಿಜ್ಕೀಯನು, “ಅವರು ನನ್ನ ಮನೆಯಲ್ಲಿರುವುದನ್ನೆಲ್ಲಾ ನೋಡಿದರು. ಅವರಿಗೆ ತೋರಿಸದೆ ಉಳಿದಿರುವುದು ನನ್ನ ಭಂಡಾರದಲ್ಲಿ ಏನೂ ಇಲ್ಲ” ಎಂದು ಉತ್ತರಿಸಿದನು.

16 ಆಗ ಯೆಶಾಯನು ಹಿಜ್ಕೀಯನಿಗೆ, “ಯೆಹೋವನಿಂದ ಬಂದ ಈ ಸಂದೇಶವನ್ನು ಆಲಿಸು. 17 ನಿನ್ನ ಮನೆಯಲ್ಲಿರುವ ವಸ್ತುಗಳೆಲ್ಲವನ್ನು ನಿನ್ನ ಮನೆಯಿಂದ ಬಾಬಿಲೋನಿಗೆ ಕೊಂಡೊಯ್ಯುವ ಕಾಲವು ಬರುತ್ತಿದೆ; ನಿನ್ನ ಪೂರ್ವಿಕರು ಇಂದಿನವರೆಗೆ ರಕ್ಷಿಸಿದ ವಸ್ತುಗಳೆಲ್ಲವನ್ನು ಬಾಬಿಲೋನಿಗೆ ತೆಗೆದುಕೊಂಡುಹೋಗುವ ಸಮಯವು ಬರುತ್ತಿದೆ. ಏನನ್ನೂ ಬಿಡುವುದಿಲ್ಲ! ಯೆಹೋವನೇ ಇದನ್ನು ನುಡಿದಿದ್ದಾನೆ. 18 ಬಾಬಿಲೋನಿನವರು ನಿನ್ನ ಮಕ್ಕಳನ್ನೂ ತೆಗೆದುಕೊಂಡು ಹೋಗುವರು. ನಿನ್ನ ಮಕ್ಕಳು ಬಾಬಿಲೋನಿನ ರಾಜನ ಅರಮನೆಯಲ್ಲಿ ಕಂಚುಕಿಗಳಾಗುತ್ತಾರೆ” ಎಂದು ಹೇಳಿದನು.

19 ಹಿಜ್ಕೀಯನು ತನ್ನ ಜೀವಮಾನದಲ್ಲಿ ಹೇಗೂ ಶಾಂತಿಯಿರುವುದೆಂದು ತಿಳಿದುಕೊಂಡು ಯೆಶಾಯನಿಗೆ, “ಯೆಹೋವನ ಈ ಸಂದೇಶವು ಒಳ್ಳೆಯದಾಗಿದೆ” ಎಂದು ಹೇಳಿದನು.

20 “ಯೆಹೂದದ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಹಿಜ್ಕೀಯನು ಮಾಡಿದ ಇತರ ಎಲ್ಲಾ ಮಹಾಕಾರ್ಯಗಳನ್ನೂ ಅವನು ನಗರಕ್ಕೆ ಕೆರೆಯಿಂದ ಕೊಳವೆಗಳ ಮೂಲಕ ನೀರಿನ ವ್ಯವಸ್ಥೆಮಾಡಿದ್ದನ್ನೂ ಬರೆಯಲಾಗಿದೆ. 21 ಹಿಜ್ಕೀಯನು ತೀರಿಕೊಂಡಾಗ ಅವನನ್ನು ಅವನ ಪೂರ್ವಿಕರ ಬಳಿ ಸಮಾಧಿಮಾಡಲಾಯಿತು. ಹಿಜ್ಕೀಯನ ನಂತರ ಅವನ ಮಗನಾದ ಮನಸ್ಸೆಯು ಹೊಸ ರಾಜನಾದನು.

ಇಬ್ರಿಯರಿಗೆ 2

ನಮ್ಮ ರಕ್ಷಣೆಯು ಧರ್ಮಶಾಸ್ತ್ರಕ್ಕಿಂತ ಉತ್ತಮವಾದುದು

ಆದ್ದರಿಂದ ನಮಗೆ ಬೋಧಿಸಲ್ಪಟ್ಟ ಸಂಗತಿಗಳನ್ನು ಬಹಳ ಎಚ್ಚರಿಕೆಯಿಂದ ಅನುಸರಿಸಬೇಕು. ಸತ್ಯಮಾರ್ಗವನ್ನು ಬಿಟ್ಟು ತಪ್ಪಿಹೋಗದಂತೆ ಎಚ್ಚರಿಕೆಯಿಂದಿರಬೇಕು. ದೇವರು ತನ್ನ ದೂತರ ಮೂಲಕ ಕೊಟ್ಟ ವಾಕ್ಯವು ನಿಜವಾದದ್ದೆಂದು ತೋರಿಸಲ್ಪಟ್ಟಿದೆ. ಯೆಹೂದ್ಯರು ಈ ವಾಕ್ಯಕ್ಕೆ ವಿರುದ್ಧವಾಗಿ ತಪ್ಪು ಮಾಡಿದಾಗಲೆಲ್ಲಾ ಮತ್ತು ಅವಿಧೇಯರಾದಾಗಲೆಲ್ಲಾ ತಕ್ಕ ದಂಡನೆ ಹೊಂದುತ್ತಿದ್ದರು. ನಮಗೆ ದಯಪಾಲಿಸಲ್ಪಟ್ಟ ಈ ವಿಶೇಷ ರಕ್ಷಣೆಯನ್ನು ನಾವು ಅಲಕ್ಷ್ಯ ಮಾಡಿದರೆ ದಂಡನೆಯಂತೂ ಖಂಡಿತ. ಇದು ಪ್ರಭುವಿನಿಂದ ಮೊದಲು ಹೇಳಲ್ಪಟ್ಟಿತು. ಆತನಿಂದ ಕೇಳಿದವರೇ ಈ ರಕ್ಷಣೆಯ ಕುರಿತಾಗಿ ನಮಗೆ ಸ್ಥಿರಪಡಿಸಿದರು. ಇದಲ್ಲದೆ, ದೇವರು ಅದ್ಭುತಕಾರ್ಯಗಳಿಂದ, ಸೂಚಕಕಾರ್ಯಗಳಿಂದ, ನಾನಾ ವಿಧವಾದ ಮಹತ್ಕಾರ್ಯಗಳಿಂದ ಮತ್ತು ಪವಿತ್ರಾತ್ಮನ ವರಗಳನ್ನು ತನ್ನ ಇಷ್ಟಾನುಸಾರವಾಗಿ ದಯಪಾಲಿಸುವುದರ ಮೂಲಕ ಅದನ್ನು ಸ್ಥಿರಪಡಿಸಿದನು.

ಜನರನ್ನು ರಕ್ಷಿಸಲು ಕ್ರಿಸ್ತನು ಜನರಂತೆಯೇ ಆದನು

ಮುಂದೆ ಬರುವ ನೂತನ ಲೋಕವನ್ನು ಆಳಲು ದೇವರು ದೇವದೂತರನ್ನು ಆರಿಸಲಿಲ್ಲ. ಈಗ ನಾವು ನಿಮಗೆ ಹೇಳುತ್ತಿರುವುದು ಆ ಲೋಕದ ಕುರಿತಾಗಿಯೇ. ಅದನ್ನು ಪವಿತ್ರ ಗ್ರಂಥದಲ್ಲಿ ಬರೆಯಲಾಗಿದೆ:

“ದೇವರೇ, ನೀನು ಮಾನವರನ್ನು ಏಕೆ ನೆನಪುಮಾಡಿಕೊಳ್ಳಬೇಕು?
ನೀನು ಮನುಷ್ಯನಿಗೋಸ್ಕರ ಏಕೆ ಚಿಂತಿಸಬೇಕು?
    ಅವನು ಅಷ್ಟೊಂದು ಮುಖ್ಯನಾದವನೇ?
ಕೇವಲ ಸ್ವಲ್ಪಕಾಲದವರೆಗೆ ನೀನು ಅವನನ್ನು ದೇವದೂತರಿಗಿಂತ ಸ್ವಲ್ಪವೇ ಕಡಿಮೆ ಮಾಡಿದೆ.
    ನೀನು ಅವನಿಗೆ ವೈಭವವನ್ನೂ ಗೌರವವನ್ನೂ ಕಿರೀಟವಾಗಿ ಇಟ್ಟಿರುವೆ.
ನೀನು ಎಲ್ಲವನ್ನು ಅವನಿಗೆ ಅಧೀನಗೊಳಿಸಿರುವೆ.”(A)

ದೇವರು ಎಲ್ಲವನ್ನೂ ಆತನಿಗೆ ಅಧೀನಗೊಳಿಸಿದ್ದರೆ, ಆತನು ಆಳದೆ ಇರುವಂಥದ್ದು ಒಂದಾದರೂ ಇಲ್ಲ. ಆದರೆ ಸಮಸ್ತದ ಮೇಲೆ ಅವನು ಆಳ್ವಿಕೆ ಮಾಡುತ್ತಿರುವುದು ನಮಗಿನ್ನೂ ಕಾಣುತ್ತಿಲ್ಲ. ಕೇವಲ ಸ್ವಲ್ಪಕಾಲದವರೆಗೆ ಯೇಸುವು ದೇವದೂತರಿಗಿಂತ ಸ್ವಲ್ಪವೇ ಕಡಿಮೆಯಾಗಿ ಮಾಡಲ್ಪಟ್ಟನು. ಆದರೆ ನಾವೀಗ ವೈಭವ, ಗೌರವಗಳೆಂಬ ಕಿರೀಟ ಧರಿಸಿರುವ ಆತನನ್ನು ನೋಡುತ್ತೇವೆ. ಏಕೆಂದರೆ ದೇವರ ಕೃಪೆಯ ನಿಮಿತ್ತ ಆತನು ಎಲ್ಲರಿಗೋಸ್ಕರ ಸಂಕಟ ಅನುಭವಿಸಿ ಮರಣಹೊಂದಿದನು.

10 ಸಮಸ್ತವನ್ನು ಸೃಷ್ಟಿಸಿದಾತನು ದೇವರೇ. ಸಮಸ್ತವು ಆತನ ಮಹಿಮೆಗಾಗಿಯೇ ಸೃಷ್ಟಿಯಾಯಿತು. ದೇವರು ತನ್ನವರೇ ಆದ ಅನೇಕ ಜನರನ್ನು ಹೊಂದಿಕೊಂಡು ಅವರೊಂದಿಗೆ ತನ್ನ ಮಹಿಮೆಯನ್ನು ಹಂಚಿಕೊಳ್ಳಲು ಬಯಸಿದನು. ಆದ್ದರಿಂದ ಆತನು ಅವರನ್ನು ರಕ್ಷಣೆಗೆ ನಡೆಸಲು ಪರಿಪೂರ್ಣನಾದ ಒಬ್ಬಾತನನ್ನು ನಿರ್ಮಿಸಿದನು. ಆತನೇ ಯೇಸು. ದೇವರು ಆತನನ್ನು ಬಾಧೆಗಳ ಮೂಲಕವೇ ಪರಿಪೂರ್ಣನಾದ ರಕ್ಷಕನನ್ನಾಗಿ ಮಾಡಿದನು.

11 ಜನರನ್ನು ಪರಿಶುದ್ಧರನ್ನಾಗಿ ಮಾಡುವ ಯೇಸುವೂ ಮತ್ತು ಆತನಿಂದ ಪರಿಶುದ್ಧರಾಗುವ ಜನರೂ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಆದ್ದರಿಂದ ಆ ಜನರನ್ನು ಸಹೋದರರೆಂದೂ ಸಹೋದರಿಯರೆಂದೂ ಕರೆಯಲು ಆತನು (ಯೇಸು) ನಾಚಿಕೆಪಡುವುದಿಲ್ಲ. 12 ಯೇಸು ಹೇಳುತ್ತಾನೆ:

“ದೇವರೇ, ನಿನ್ನನ್ನು ಕುರಿತು ನನ್ನ ಸಹೋದರ ಸಹೋದರಿಯರಿಗೆ ತಿಳಿಸುತ್ತೇನೆ;
    ನಿನ್ನ ಜನರೆಲ್ಲರ ಮುಂದೆ ನಿನ್ನ ಸ್ತೋತ್ರಗೀತೆಗಳನ್ನು ಹಾಡುತ್ತೇನೆ.”(B)

13 ಆತನು ಮತ್ತೆ ಹೇಳುತ್ತಾನೆ:

“ನಾನು ದೇವರಲ್ಲಿ ಭರವಸೆ ಇಡುತ್ತೇನೆ.”(C)

ಆತನು ಹೇಳುತ್ತಾನೆ:

“ನಾನಿಲ್ಲಿದ್ದೇನೆ. ದೇವರು ನನಗೆ ದಯಪಾಲಿಸಿರುವ ಮಕ್ಕಳು ನನ್ನೊಂದಿಗಿದ್ದಾರೆ.”(D)

14 ಆ ಮಕ್ಕಳು ಭೌತಿಕ ಶರೀರ ಹೊಂದಿದ್ದರು. ಆದ್ದರಿಂದ ಯೇಸು ತಾನೇ ಅವರಂತಾದನು. ಆತನು ತನ್ನ ಸಾವಿನ ಮೂಲಕ ಮರಣಾಧಿಕಾರಿಯನ್ನು ಅಂದರೆ ಸೈತಾನನನ್ನು ನಾಶಗೊಳಿಸಿ, 15 ಅವರನ್ನು ಬಿಡುಗಡೆಗೊಳಿಸಬೇಕೆಂದು, ಅವರಂತೆಯೇ ಆಗಿ, ಮರಣ ಹೊಂದಿದನು. ಅವರು ಮರಣಭಯದಿಂದ, ಜೀವಮಾನವೆಲ್ಲ ಗುಲಾಮರಂತೆ ಜೀವಿಸುತ್ತಿದ್ದರು. 16 ಆತನು ಸಹಾಯ ಮಾಡುವುದು ಅಬ್ರಹಾಮನ ಸಂತತಿಯವರಿಗೇ ಹೊರತು ದೇವದೂತರಿಗಲ್ಲ. 17 ಈ ಕಾರಣದಿಂದಲೇ ಆತನು ಎಲ್ಲಾ ವಿಧದಲ್ಲಿಯೂ ತನ್ನ ಸಹೋದರ ಸಹೋದರಿಯರಿಗೆ ಸಮಾನನಾಗಬೇಕಾಯಿತು. ದೇವರ ಸೇವೆಯಲ್ಲಿ ಆತನು ಜನರಿಗೆ ಕರುಣೆಯುಳ್ಳವನೂ ನಂಬಿಗಸ್ತನೂ ಆದ ಪ್ರಧಾನ ಯಾಜಕನಾದನು. ಹೀಗೆ ಆತನು ಜನರ ಪಾಪಗಳಿಗೆ ಕ್ಷಮೆಯನ್ನು ತರಲು ಸಾಧ್ಯವಾಯಿತು. 18 ತಾನೇ ಶೋಧಿಸಲ್ಪಟ್ಟು ಸಂಕಟಕ್ಕೆ ಒಳಗಾದುದರಿಂದ, ಶೋಧಿಸಲ್ಪಡುವ ಜನರಿಗೆ ಸಹಾಯ ಮಾಡಲು ಈಗ ಆತನು ಸಮರ್ಥನಾಗಿದ್ದಾನೆ.

ಹೋಶೇಯ 13

ಇಸ್ರೇಲ್ ತನ್ನನ್ನು ತಾನೇ ನಾಶಮಾಡಿಕೊಂಡಿತು

13 “ಎಫ್ರಾಯೀಮ್ ಇಸ್ರೇಲರೊಳಗೆ ತನ್ನನ್ನು ತಾನೇ ಮುಖ್ಯಸ್ಥನನ್ನಾಗಿ ಮಾಡಿಕೊಂಡನು. ಎಫ್ರಾಯೀಮನು ಮಾತನಾಡಿದಾಗ ಜನರು ಹೆದರಿ ನಡುಗಿದರು. ಆದರೆ ಅವನು ಪಾಪದಲ್ಲಿ ಬಿದ್ದನು. ಬಾಳನನ್ನು ಪೂಜಿಸಲು ಪ್ರಾರಂಭಿಸಿದನು. ಈಗ ಇಸ್ರೇಲರು ಹೆಚ್ಚೆಚ್ಚಾಗಿ ಪಾಪ ಮಾಡುತ್ತಿರುತ್ತಾರೆ. ತಮಗಾಗಿ ವಿಗ್ರಹಗಳನ್ನು ಮಾಡಿಕೊಳ್ಳುತ್ತಾರೆ. ಅಕ್ಕಸಾಲಿಗರು ಬೆಳ್ಳಿಯಿಂದ ವಿಗ್ರಹಗಳನ್ನು ಮಾಡುವರು. ತಾವು ಮಾಡಿದ ಮೂರ್ತಿಗಳೊಂದಿಗೆ ಮಾತನಾಡುವರು. ಆ ವಿಗ್ರಹಗಳಿಗೆ ಯಜ್ಞವನ್ನರ್ಪಿಸುವರು. ಬಂಗಾರದ ಬಸವನ ವಿಗ್ರಹಕ್ಕೆ ಮುದ್ದು ಕೊಡುವರು. ಆದ್ದರಿಂದ ಆ ಜನರು ಬೇಗನೇ ಕಣ್ಮರೆಯಾಗುವರು. ಅವರು ಬೆಳಗಿನ ಜಾವದ ಇಬ್ಬನಿಯಂತೆ ಬೇಗನೇ ಮಾಯವಾಗುವರು. ಇಸ್ರೇಲರು ಕಣದಲ್ಲಿರುವ ಹೊಟ್ಟಿನಂತೆ ಗಾಳಿಯಲ್ಲಿ ಹೊಡೆದುಕೊಂಡು ಹೋಗುವರು. ಇಸ್ರೇಲರು ಮನೆಯೊಳಗಿಂದ ಮೇಲಕ್ಕೆ ಹೊರಟು ಆಮೇಲೆ ಕಾಣದೆಹೋಗುವ ಹೊಗೆಯಂತಿದ್ದಾರೆ.

“ನೀವು ಈಜಿಪ್ಟಿನಲ್ಲಿದ್ದ ದಿವಸಗಳಿಂದ ನಾನೇ ನಿಮ್ಮ ಯೆಹೋವನಾಗಿದ್ದೇನೆ. ನನ್ನ ಹೊರತು ಬೇರೆ ಯಾವ ದೇವರನ್ನೂ ನೀವು ತಿಳಿದಿರಲಿಲ್ಲ. ನನ್ನ ಹೊರತು ಬೇರೆ ಯಾವ ರಕ್ಷಕನೂ ಇಲ್ಲ. ಮರುಭೂಮಿಯಲ್ಲಿ ನಿಮ್ಮನ್ನು ತಿಳಿದುಕೊಂಡಿದ್ದೆನು. ಆ ಒಣಭೂಮಿಯಲ್ಲಿ ನಾನು ನಿಮ್ಮನ್ನು ಬಲ್ಲೆನು. ನಾನು ಇಸ್ರೇಲರಿಗೆ ಆಹಾರ ಒದಗಿಸಿದೆನು. ಅವರು ಆ ಆಹಾರವನ್ನು ಉಂಡು ತಿಂದು ತೃಪ್ತರಾಗಿ ಕೊಬ್ಬೇರಿದ್ದರಿಂದ ನನ್ನನ್ನು ಮರೆತರು.

“ಆದ್ದರಿಂದಲೇ ನಾನು ಅವರಿಗೆ ಸಿಂಹದಂತಿರುವೆನು. ದಾರಿ ಬದಿಯಲ್ಲಿ ಹೊಂಚುಹಾಕುವ ಚಿರತೆಯಂತಿರುವೆನು. ತನ್ನ ಮರಿಗಳನ್ನು ಕಳೆದುಕೊಂಡ ಕರಡಿಯಂತೆ ಅವರ ಮೇಲರಗಿ ಅವರನ್ನು ಗಾಯಗೊಳಿಸಿ ಅವರ ಎದೆಯನ್ನು ಸೀಳಿ ಬಿಡುವೆನು. ನಾನು ಸಿಂಹದಂತೆಯೂ ಕ್ರೂರ ಮೃಗದಂತೆಯೂ ಅವರನ್ನು ಸೀಳಿ ತಿಂದುಬಿಡುವೆನು.”

ದೈವಕೋಪದಿಂದ ಯಾರೂ ಇಸ್ರೇಲರನ್ನು ರಕ್ಷಿಸಲಾರರು

“ಇಸ್ರೇಲೇ, ನಾನು ನಿನಗೆ ಸಹಾಯ ಮಾಡಿದರೂ ನೀನು ನನಗೆ ವಿರೋಧವಾಗಿ ಎದ್ದಿರುವೆ. ಆದ್ದರಿಂದ ನಾನು ನಿನ್ನನ್ನು ನಾಶಮಾಡುವೆನು. 10 ನಿನ್ನ ಅರಸನೆಲ್ಲಿ? ನಿನ್ನ ಯಾವ ಪಟ್ಟಣದಲ್ಲಿಯಾಗಲಿ ಅವನು ನಿನ್ನನ್ನು ರಕ್ಷಿಸಲಾರ. ನಿನ್ನ ನ್ಯಾಯಾಧೀಶರುಗಳೆಲ್ಲಿ? ನೀನು, ‘ನಮಗೆ ರಾಜನನ್ನೂ ನಾಯಕರನ್ನೂ ಕೊಡು’ ಎಂದು ಕೇಳಿಕೊಂಡೆ. 11 ನಾನು ಕೋಪಗೊಂಡೆನು ಮತ್ತು ಒಬ್ಬ ಅರಸನನ್ನು ಕೊಟ್ಟೆನು. ನಾನು ಹೆಚ್ಚಾಗಿ ಕೋಪಗೊಂಡಾಗ ಅವನನ್ನು ತೆಗೆದುಬಿಟ್ಟೆನು.

12 “ಎಫ್ರಾಯೀಮ್ ತನ್ನ ಅಪರಾಧವನ್ನು ಮುಚ್ಚಿಟ್ಟುಕೊಳ್ಳಲು ಪ್ರಯತ್ನಿಸಿದನು.
    ತಾನು ಮಾಡಿದ ಪಾಪಗಳು ಯಾರಿಗೂ ತಿಳಿದಿಲ್ಲವೆಂದು ಅವನು ಭಾವಿಸಿದನು;
    ಆದರೆ ಅವನು ಶಿಕ್ಷಿಸಲ್ಪಡುವನು;
13 ಅವನಿಗಾಗುವ ಶಿಕ್ಷೆಯು ಒಬ್ಬ ಸ್ತ್ರೀಯ ಪ್ರಸವವೇದನೆಯಂತಿರುವದು.
    ಅವನು ಜಾಣನಾದ ಮಗನಾಗಿರುವದಿಲ್ಲ;
ಹುಟ್ಟುವ ಸಮಯ ಬಂದರೂ
    ಅವನು ಜೀವಿಸುವದಿಲ್ಲ.

14 “ಸಮಾಧಿಯಿಂದ ಅವರನ್ನು ರಕ್ಷಿಸುವೆನು;
    ಮರಣದಿಂದ ಅವರನ್ನು ಪಾರುಮಾಡುವೆನು.
ಮರಣವೇ, ನಿನ್ನ ವ್ಯಾಧಿಗಳೆಲ್ಲಿ?
    ಸಮಾಧಿಯೇ, ನಿನ್ನ ಶಕ್ತಿ ಎಲ್ಲಿ?
    ನಾನು ಪ್ರತಿಕಾರ ಸಲ್ಲಿಸುವದಿಲ್ಲ.
15 ಇಸ್ರೇಲ್ ತನ್ನ ಸಹೋದರರ ಮಧ್ಯದಲ್ಲಿ ಬೆಳೆಯುವನು.
    ಒಂದು ಬಲವಾದ ಪೂರ್ವದಿಕ್ಕಿನ ಗಾಳಿಯು ಬರುವದು.
    ಯೆಹೋವನ ಗಾಳಿಯು ಮರುಭೂಮಿಯಿಂದ ಬೀಸುವದು.
ಅವನ ನೀರಿನ ಒರತೆಯು ಒಣಗಿಹೋಗುವದು,
    ಆ ಗಾಳಿಯು ಇಸ್ರೇಲರ ಐಶ್ವರ್ಯವನ್ನೆಲ್ಲಾ ಎತ್ತಿಕೊಂಡು ಹೋಗಿಬಿಡುವದು.
16 ಸಮಾರ್ಯವು ಶಿಕ್ಷಿಸಲ್ಪಡಬೇಕು.
    ಯಾಕೆಂದರೆ ಆಕೆಯು ತನ್ನ ದೇವರಿಗೆ ವಿರುದ್ಧವಾಗಿ ನಡೆದಳು.
ಇಸ್ರೇಲರು ಖಡ್ಗದಿಂದ ಸಾಯುವರು.
    ಅವರ ಮಕ್ಕಳು ಹರಿಯಲ್ಪಟ್ಟು ಚೂರುಚೂರಾಗುವರು.
    ಅವರ ಗರ್ಭಿಣಿ ಸ್ತ್ರೀಯರನ್ನು ಸೀಳಿಬಿಡುವರು.”

ಕೀರ್ತನೆಗಳು 137-138

137 ನಾವು ಬಾಬಿಲೋನ್ ದೇಶದ ನದಿಗಳ ಬಳಿಯಲ್ಲಿ ಕುಳಿತುಕೊಂಡು
    ಚೀಯೋನನ್ನು ನೆನಸಿಕೊಳ್ಳುತ್ತಾ ಅತ್ತೆವು.
ಸಮೀಪದಲ್ಲಿದ್ದ ನೀರವಂಜಿ ಮರಗಳಿಗೆ ನಾವು ನಮ್ಮ ಹಾರ್ಪ್‌ವಾದ್ಯಗಳನ್ನು ತೂಗುಹಾಕಿದೆವು.
ನಮ್ಮನ್ನು ಸೆರೆಹಿಡಿದಿದ್ದ ಜನರು
    ಬಾಬಿಲೋನಿನಲ್ಲಿ ನಮಗೆ ಚೀಯೋನಿನ ಕುರಿತು ಹರ್ಷಗೀತೆಗಳನ್ನು ಹಾಡಲು ಹೇಳಿದರು.
ಆದರೆ ಪರದೇಶದಲ್ಲಿ
    ಯೆಹೋವನ ಹಾಡುಗಳನ್ನು ನಾವು ಹಾಡುವಂತಿಲ್ಲ!
ಜೆರುಸಲೇಮೇ, ನಿನ್ನನ್ನು ನಾನೆಂದಾದರೂ ಮರೆಯುವುದಾದರೆ,
    ನಾನು ಮತ್ತೆಂದಿಗೂ ಹಾಡನ್ನು ಹಾಡದಂತಾಗಲಿ.
ಜೆರುಸಲೇಮೇ, ನಿನ್ನನ್ನು ನಾನೆಂದಾದರೂ ಮರೆಯುವುದಾದರೆ,
    ನಾನು ಮತ್ತೆಂದಿಗೂ ಹಾಡಲು ಶಕ್ತನಾಗದಂತಾಗಲಿ.
ಜೆರುಸಲೇಮೇ, ನಿನ್ನ ವಿಷಯದಲ್ಲೇ
    ನಾನು ಅತ್ಯಾನಂದಪಡುವೆನೆಂದು ಪ್ರಮಾಣ ಮಾಡುವೆ.

ಯೆಹೋವನೇ ನಿಶ್ಚಯವಾಗಿ ಎದೋಮ್ಯರನ್ನು ದಂಡಿಸು.
    ಯಾಕೆಂದರೆ ಜೆರುಸಲೇಮ್ ಸೆರೆಹಿಡಿಯಲ್ಪಟ್ಟಾಗ
ಅವರು, “ಅದರ ಕಟ್ಟಡಗಳನ್ನು ಕೆಡವಿಹಾಕಿ.
    ಅವುಗಳನ್ನು ಅಸ್ತಿವಾರ ಸಹಿತ ಹಾಳುಮಾಡಿರಿ” ಎಂದು ಆರ್ಭಟಿಸಿದರು.
ಬಾಬಿಲೋನೇ, ನೀನು ನಾಶವಾಗುವೆ!
    ನಿನಗೆ ತಕ್ಕ ದಂಡನೆಯನ್ನು ಕೊಡುವವನು ಧನ್ಯನು.
    ನೀನು ನಮ್ಮನ್ನು ನೋಯಿಸಿದಂತೆ ನಿನ್ನನ್ನೂ ನೋಯಿಸುವವನು ಧನ್ಯನು.
    ನಿನ್ನ ಮಕ್ಕಳನ್ನು ಹಿಡಿದು ಬಂಡೆಗೆ ಅಪ್ಪಳಿಸುವವನು ಧನ್ಯನು.

ಸ್ತುತಿಗೀತೆ. ರಚನೆಗಾರ: ದಾವೀದ.

138 ಯೆಹೋವನೇ, ಪೂರ್ಣಹೃದಯದಿಂದ ನಿನ್ನನ್ನು ಕೊಂಡಾಡುವೆನು.
    ನಿನ್ನ ಹಾಡುಗಳನ್ನು ಎಲ್ಲಾ ದೇವರುಗಳ ಎದುರಿನಲ್ಲಿ ಹಾಡುವೆನು.
ನಾನು ನಿನ್ನ ಪರಿಶುದ್ಧಾಲಯದ ಕಡೆಗೆ ಅಡ್ಡಬೀಳುವೆನು.
    ನಾನು ನಿನ್ನ ಹೆಸರನ್ನೂ ನಿನ್ನ ಪ್ರೀತಿಯನ್ನೂ ನಿನ್ನ ನಂಬಿಗಸ್ತಿಕೆಯನ್ನೂ ಕೊಂಡಾಡುವೆನು.
ನೀನು ನಿನ್ನ ವಾಕ್ಯವನ್ನು ನೆರವೇರಿಸಿ ನಿನ್ನ ನಾಮಮಹತ್ವವನ್ನು ಹೆಚ್ಚಿಸಿರುವೆ.
ನಾನು ಸಹಾಯಕ್ಕಾಗಿ ನಿನಗೆ ಮೊರೆಯಿಟ್ಟಾಗ
    ನೀನು ನನಗೆ ಸದುತ್ತರವನ್ನು ದಯಪಾಲಿಸಿದೆ; ನನಗೆ ಬಲವನ್ನು ಅನುಗ್ರಹಿಸಿದೆ.

ಯೆಹೋವನೇ, ಭೂರಾಜರುಗಳೆಲ್ಲಾ ನಿನ್ನ ನುಡಿಗಳನ್ನು ಕೇಳಿ
    ನಿನ್ನನ್ನು ಕೊಂಡಾಡಬೇಕೆಂಬುದು ನನ್ನ ಅಪೇಕ್ಷೆ.
ಅವರೆಲ್ಲರೂ ಯೆಹೋವನ ಮಾರ್ಗವನ್ನು ಹಾಡಿ ಕೊಂಡಾಡುವರು;
    ಯಾಕೆಂದರೆ ಯೆಹೋವನ ಮಹಿಮೆಯು ಮಹತ್ವವಾದದ್ದು.
ಯೆಹೋವನೇ ಮಹೋನ್ನತನು.
    ಆದರೂ ಆತನು ದೀನರಿಗೋಸ್ಕರ ಚಿಂತಿಸುವನು.
ಗರ್ವಿಷ್ಠರ ಕಾರ್ಯಗಳು ಆತನಿಗೆ ಗೊತ್ತಿವೆ.
    ಆದರೆ ಆತನು ಅವರಿಗೆ ದೂರವಾಗಿಯೇ ಇರುತ್ತಾನೆ.
ಯೆಹೋವನೇ, ನಾನು ಆಪತ್ತಿನಲ್ಲಿದ್ದರೆ, ನನ್ನ ಪ್ರಾಣವನ್ನು ಕಾಪಾಡು.
    ನನ್ನ ವೈರಿಗಳು ನನ್ನ ಮೇಲೆ ಕೋಪಗೊಂಡಿದ್ದರೆ, ನನ್ನನ್ನು ಅವರಿಂದ ರಕ್ಷಿಸು.
ಯೆಹೋವನೇ, ನಿನ್ನ ವಾಗ್ದಾನಗಳನ್ನು ನೆರವೇರಿಸು.
    ಯೆಹೋವನೇ, ನಿನ್ನ ಪ್ರೀತಿಯು ಶಾಶ್ವತವಾದದ್ದು.
ನಮ್ಮನ್ನು ಸೃಷ್ಟಿಸಿದಾತನು ನೀನೇ. ನಮ್ಮನ್ನು ಕೈಬಿಡಬೇಡ!

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International