M’Cheyne Bible Reading Plan
ಹಿಜ್ಕೀಯನು ತನ್ನ ಅಧಿಕಾರಿಗಳನ್ನು ಪ್ರವಾದಿಯಾದ ಯೆಶಾಯನ ಬಳಿಗೆ ಕಳುಹಿಸಿದನು
19 ರಾಜನಾದ ಹಿಜ್ಕೀಯನು ಅವುಗಳನ್ನೆಲ್ಲ ಕೇಳಿ ದುಃಖದಿಂದ ತನ್ನ ಬಟ್ಟೆಗಳನ್ನು ಹರಿದುಕೊಂಡು ಗೋಣಿತಟ್ಟನ್ನು ಕಟ್ಟಿಕೊಂಡು ಯೆಹೋವನ ಆಲಯದೊಳಕ್ಕೆ ಹೋದನು.
2 ಹಿಜ್ಕೀಯನು ರಾಜಗೃಹಾಧಿಪತಿಯಾದ ಎಲ್ಯಾಕೀಮ್, ಕಾರ್ಯದರ್ಶಿಯಾದ ಶೆಬ್ನ ಮತ್ತು ಹಿರಿಯರಾದ ಯಾಜಕರನ್ನು ಆಮೋಚನ ಮಗನೂ ಪ್ರವಾದಿಯೂ ಆಗಿದ್ದ ಯೆಶಾಯನ ಬಳಿಗೆ ಕಳುಹಿಸಿದನು. ಅವರು ತಮ್ಮ ದುಃಖವನ್ನೂ ಕಳವಳವನ್ನೂ ತೋರ್ಪಡಿಸುವಂತೆ ಗೋಣಿತಟ್ಟನ್ನು ಧರಿಸಿದ್ದರು. 3 ಅವರು ಯೆಶಾಯನಿಗೆ, “ಹಿಜ್ಕೀಯನು ಹೇಳುವುದೇನೆಂದರೆ, ಇಂದು ಮಹಾಕಷ್ಟದ ದಿನವಾಗಿದೆ. ನಾವು ಶಿಕ್ಷೆಯನ್ನೂ ನಿಂದೆಯನ್ನೂ ಅನುಭವಿಸಬೇಕಾಯಿತು. ಇದು ಪ್ರಸವವೇದನೆಯ ದಿನದಂತಿದೆ. ಆದರೆ ಹೆರಲು ಶಕ್ತಿಯೇ ಇಲ್ಲವಾಗಿದೆ. 4 ಸೇನಾಧಿಪತಿಯ ಒಡೆಯನಾದ ಅಶ್ಶೂರದ ರಾಜನು, ಜೀವಸ್ವರೂಪನಾದ ದೇವರ ಬಗ್ಗೆ ಕೆಟ್ಟದ್ದನ್ನು ನುಡಿಯಲು ಅವನನ್ನು ಕಳುಹಿಸಿದನು. ನಿಮ್ಮ ದೇವರಾದ ಯೆಹೋವನು ಅವುಗಳನ್ನೆಲ್ಲ ಕೇಳಿರುತ್ತಾನೆ. ಯೆಹೋವನು ಶತ್ರುಗಳನ್ನು ತಪ್ಪಿತಸ್ಥರೆಂದು ನಿರ್ಧರಿಸಬಹುದು! ಆದ್ದರಿಂದ ಇನ್ನೂ ಜೀವಸಹಿತ ಉಳಿದಿರುವ ಜನರಿಗಾಗಿ ಪ್ರಾರ್ಥಿಸಿ” ಎಂದು ಹೇಳಿದರು.
5 ರಾಜನಾದ ಹಿಜ್ಕೀಯನ ಅಧಿಕಾರಿಗಳು ಯೆಶಾಯನ ಬಳಿಗೆ ಹೋದರು. 6 ಯೆಶಾಯನು ಅವರಿಗೆ, “ನಿಮ್ಮ ಒಡೆಯನಾದ ಹಿಜ್ಕೀಯನಿಗೆ ಈ ಸಂದೇಶವನ್ನು ತಿಳಿಸಿ: ‘ಯೆಹೋವನು ಹೀಗೆನ್ನುತ್ತಾನೆ: ಅಶ್ಶೂರದ ರಾಜನ ಅಧಿಕಾರಿಗಳು ನನ್ನನ್ನು ಅಪಹಾಸ್ಯಮಾಡಲೆಂದು ಹೇಳಿದ ಸಂಗತಿಗಳಿಂದ ನೀವು ಹೆದರಬೇಡಿ. 7 ನಾನು ಅವನಲ್ಲಿ ಒಂದು ಆತ್ಮವನ್ನಿರಿಸುತ್ತೇನೆ. ಅವನು ಒಂದು ಸುದ್ದಿಯನ್ನು ಕೇಳುತ್ತಾನೆ. ನಂತರ ಅವನು ತನ್ನ ಸ್ವಂತ ದೇಶಕ್ಕೆ ಹಿಂದಿರುಗಿ ಓಡಿಹೋಗುತ್ತಾನೆ. ನಾನು ಅವನನ್ನು ಅವನ ಸ್ವಂತ ದೇಶದಲ್ಲಿ ಖಡ್ಗದಿಂದ ಕೊಲ್ಲಲ್ಪಡುವಂತೆ ಮಾಡುತ್ತೇನೆ’” ಎಂದು ಹೇಳಿದನು.
ಅಶ್ಶೂರದ ರಾಜ ಹಿಜ್ಕೀಯನನ್ನು ಮತ್ತೆ ಎಚ್ಚರಿಸುವನು
8 ಅಶ್ಶೂರದ ರಾಜನು ಲಾಕೀಷನ್ನು ಬಿಟ್ಟುಹೋದನೆಂಬ ಸುದ್ದಿಯನ್ನು ಸೇನಾಧಿಪತಿಯು ಕೇಳಿ ಲಿಬ್ನಕ್ಕೆ ಹೋದಾಗ ರಾಜನು ಲಿಬ್ನದ ವಿರುದ್ಧ ಯುದ್ಧ ಮಾಡುತ್ತಿದ್ದನು. 9 ಇಥಿಯೋಪಿಯದ ರಾಜ ತಿರ್ಹಾಕನ ಬಗ್ಗೆ ಅಶ್ಶೂರದ ರಾಜ ಒಂದು ಗಾಳಿ ಸುದ್ದಿಯನ್ನು ಕೇಳಿದನು. “ತಿರ್ಹಾಕನು ನಿನ್ನ ವಿರುದ್ಧ ಹೋರಾಡಲು ಬಂದಿದ್ದಾನೆ” ಎಂಬುದೇ ಆ ಗಾಳಿಸುದ್ದಿಯಾಗಿತ್ತು.
ಆದ್ದರಿಂದ ಅಶ್ಶೂರದ ರಾಜನು ಹಿಜ್ಕೀಯನ ಬಳಿಗೆ ಮತ್ತೆ ಸಂದೇಶಕರನ್ನು ಕಳುಹಿಸಿದನು. ಅಶ್ಶೂರದ ರಾಜನು ಈ ಸಂದೇಶಕರಿಗೆ ಒಂದು ಸಂದೇಶವನ್ನು ನೀಡಿದನು. 10 ಯೆಹೂದದ ರಾಜನಾದ ಹಿಜ್ಕೀಯನಿಗೆ ಇದನ್ನು ಹೇಳಿ:
“ನೀನು ನಂಬುವ ದೇವರು ನಿನ್ನನ್ನು ಮೋಸಗೊಳಿಸಲು ಅವಕಾಶ ನೀಡಬೇಡ. ಅಶ್ಶೂರದ ರಾಜ ಜೆರುಸಲೇಮನ್ನು ಸೋಲಿಸುವುದಿಲ್ಲ ಎಂಬ ನಿನ್ನ ದೇವರ ಮಾತನ್ನು ನಂಬಬೇಡ. 11 ಅಶ್ಶೂರದ ರಾಜನು ಇತರ ಎಲ್ಲಾ ಜನಾಂಗಗಳಿಗೆ ಮಾಡಿದವುಗಳನ್ನು ನೀನು ಕೇಳಿರುವೆ. ನಾವು ಅವರನ್ನು ಸಂಪೂರ್ಣವಾಗಿ ನಾಶಗೊಳಿಸಿದೆವು! ನೀನು ರಕ್ಷಿಸಲ್ಪಡುವೆಯಾ? ಇಲ್ಲ! 12 ಆ ರಾಜ್ಯಗಳ ದೇವರುಗಳು ತಮ್ಮ ಜನರನ್ನು ರಕ್ಷಿಸಲಾಗಲಿಲ್ಲ. ನನ್ನ ಪೂರ್ವಿಕರು ಅವರನ್ನೆಲ್ಲ ನಾಶಗೊಳಿಸಿದರು. ಅವರು ಗೋಜಾನ್, ಖಾರಾನ್, ರೆಚೆಫ್ ಮತ್ತು ತೆಲಸ್ಸಾರ್‌ನ ಎದೆನಿನ ಜನರನ್ನು ನಾಶಗೊಳಿಸಿದರು! 13 ಹಮಾತಿನ ರಾಜನು ಎಲ್ಲಿದ್ದಾನೆ? ಅರ್ಪಾದ್‌ನ ರಾಜನೆಲ್ಲಿ? ಸೆಫರ್ವಯಿಮ್ ರಾಜನೆಲ್ಲಿ? ಹೇನ ಮತ್ತು ಇವ್ವಾಗಳ ರಾಜರೆಲ್ಲಿ?” (ಅವರೆಲ್ಲರೂ ಹತರಾದರು!)
ಹಿಜ್ಕೀಯನು ಯೆಹೋವನಿಗೆ ಪ್ರಾರ್ಥಿಸುವನು
14 ಹಿಜ್ಕೀಯನು ಸಂದೇಶಕರಿಂದ ಬಂದ ಪತ್ರಗಳನ್ನು ತೆಗೆದುಕೊಂಡು ಓದಿದನು. ನಂತರ ಹಿಜ್ಕೀಯನು ದೇವಾಲಯದವರೆಗೆ ಹೋಗಿ, ಯೆಹೋವನ ಸನ್ನಿಧಿಯಲ್ಲಿ ಆ ಪತ್ರಗಳನ್ನಿರಿಸಿದನು. 15 ಹಿಜ್ಕೀಯನು ಯೆಹೋವನ ಸನ್ನಿಧಿಯಲ್ಲಿ, “ಯೆಹೋವನೇ, ಕೆರೂಬಿಗಳ ಮೇಲೆ ರಾಜನಾಗಿ ಕುಳಿತುಕೊಳ್ಳುವ ಇಸ್ರೇಲರ ದೇವರೇ, ಲೋಕದ ರಾಜ್ಯಗಳಿಗೆಲ್ಲಾ ನೀನೊಬ್ಬನೇ ದೇವರಾಗಿರುವೆ. ನೀನು ಪರಲೋಕವನ್ನು ಮತ್ತು ಈ ಲೋಕವನ್ನು ಸೃಷ್ಟಿಸಿದೆ! 16 ಯೆಹೋವನೇ, ದಯವಿಟ್ಟು ನನ್ನ ಮಾತುಗಳನ್ನು ಆಲಿಸು! ಯೆಹೋವನೇ, ನಿನ್ನ ಕಣ್ಣುಗಳನ್ನು ತೆರೆದು, ಈ ಪತ್ರವನ್ನು ನೋಡು. ಸನ್ಹೇರೀಬನು ಜೀವಸ್ವರೂಪನಾದ ದೇವರನ್ನು ನಿಂದಿಸಿ ಕಳುಹಿಸಿರುವ ಈ ವಾಕ್ಯವನ್ನು ಕೇಳು! 17 ಯೆಹೋವನೇ, ಅಶ್ಶೂರದ ರಾಜರು ಆ ರಾಜ್ಯಗಳನ್ನೆಲ್ಲ ನಾಶಗೊಳಿಸಿದ್ದು ನಿಜ! 18 ಅವರು ಆ ದೇಶಗಳ ದೇವರುಗಳನ್ನು ಬೆಂಕಿಯಲ್ಲಿ ಎಸೆದರು. ಆದರೆ ಅವು ನಿಜವಾದ ದೇವರುಗಳಲ್ಲ. ಅವುಗಳು ಮಾನವರಿಂದ ಮರ ಮತ್ತು ಕಲ್ಲುಗಳಿಂದ ನಿರ್ಮಿತವಾಗಿದ್ದವು. ಆದಕಾರಣವೇ ಅಶ್ಶೂರದ ರಾಜರುಗಳು ಅವುಗಳನ್ನು ನಾಶಗೊಳಿಸಿದರು. 19 ನಮ್ಮ ದೇವರಾದ ಯೆಹೋವನೇ, ಅಶ್ಶೂರದ ರಾಜನಿಂದ ನಮ್ಮನ್ನು ರಕ್ಷಿಸು. ಭೂಲೋಕದ ರಾಜ್ಯಗಳೆಲ್ಲ ನೀನೊಬ್ಬನೇ ದೇವರಾದ ಯೆಹೋವನೆಂದು ತಿಳಿದುಕೊಳ್ಳುವಂತೆ ನಮ್ಮನ್ನು ಇವನ ಕೈಯಿಂದ ಬಿಡಿಸು” ಎಂದು ಪ್ರಾರ್ಥಿಸಿದನು.
20 ಆಮೋಚನ ಮಗನಾದ ಯೆಶಾಯನು ಹಿಜ್ಕೀಯನಿಗೆ ಈ ಸಂದೇಶವನ್ನು ಕಳುಹಿಸಿದನು: “ಇಸ್ರೇಲಿನ ದೇವರಾದ ಯೆಹೋವನು ಹೀಗೆನ್ನುತ್ತಾನೆ: ಅಶ್ಶೂರದ ರಾಜನಾದ ಸನ್ಹೇರೀಬನ ವಿರುದ್ಧವಾಗಿ ನೀವು ನನ್ನಲ್ಲಿ ಪಾರ್ಥಿಸಿರುವಿರಿ. ನಾನು ನಿಮ್ಮ ಪ್ರಾರ್ಥನೆಯನ್ನು ಕೇಳಿದ್ದೇನೆ. 21 ಸನ್ಹೇರೀಬನನ್ನು ಕುರಿತು ಯೆಹೋವನು ಹೇಳುವುದೇನೆಂದರೆ:
“ಚೀಯೋನ್ ಕುವರಿಯು ನಿನ್ನನ್ನು ತಿರಸ್ಕರಿಸುತ್ತಾಳೆ;
ನಿನ್ನನ್ನು ಪರಿಹಾಸ್ಯ ಮಾಡುತ್ತಾಳೆ.
ಜೆರುಸಲೇಮಿನ ಕುವರಿಯು
ನಿನ್ನ ಹಿಂದಿನಿಂದ ತಲೆಯಾಡಿಸುತ್ತಾಳೆ.
22 ನೀನು ಯಾರನ್ನು ನಿಂದಿಸಿ ಪರಿಹಾಸ್ಯ ಮಾಡಿದೆ?
ನೀನು ಯಾರ ವಿರುದ್ಧ ಮಾತನಾಡಿದೆ?
ನೀನು ಇಸ್ರೇಲಿನ ಪವಿತ್ರನಿಗೆ ವಿರೋಧಿಯಲ್ಲವೆ!
ನೀನು ಅವನಿಗಿಂತ ಉತ್ತಮನಂತೆ ನಟಿಸಿದೆ!
23 ನೀನು ಯೆಹೋವನನ್ನು ನಿಂದಿಸಲು ನಿನ್ನ ಸಂದೇಶಕರನ್ನು ಬಳಸಿದೆ,
‘ನಾನು ನನ್ನ ಅನೇಕ ರಥಗಳೊಂದಿಗೆ ಉನ್ನತಗಿರಿಗಳಿಗೆ ಬಂದೆನು.
ನಾನು ಲೆಬನೋನಿನ ದುರ್ಗಮ ಸ್ಥಳಗಳಿಗೆ ಹೋದೆನು.
ನಾನು ಲೆಬನೋನಿನ ಎತ್ತರವಾದ ದೇವದಾರು ಮರಗಳನ್ನೂ
ಲೆಬನೋನಿನ ಉತ್ತಮ ತುರಾಯಿಮರಗಳನ್ನೂ ಕಡಿದುರುಳಿಸಿದೆನು.
24 ನಾನು ಬಾವಿಗಳನ್ನು ತೋಡಿ ಹೊಸ ಸ್ಥಳಗಳಲ್ಲಿ ನೀರು ಕುಡಿದೆನು.
ನಾನು ಈಜಿಪ್ಟಿನ ನದಿಗಳನ್ನು ಬತ್ತಿಸಿದ್ದೇನೆ;
ಆ ದೇಶದ ಮೇಲೆಲ್ಲಾ ನಡೆದಾಡಿದ್ದೇನೆ’ ಎಂದು ನೀನು ಹೇಳಿದೆ.
25 “ಆದರೆ ನೀನು ಕೇಳಿಲ್ಲವೇ?
ನಾನು ಬಹುಕಾಲದ ಹಿಂದೆಯೇ ಅದನ್ನು ಯೋಜಿಸಿದ್ದೆನು.
ಪುರಾತನ ಕಾಲದಿಂದಲೇ ಅದನ್ನು ಆಲೋಚಿಸಿದ್ದೆನು,
ಈಗ ನಾನು ಅದನ್ನು ನೆರವೇರಿಸಿದ್ದೇನೆ.
ನೀನು ಬಲಾಢ್ಯ ನಗರಗಳನ್ನು ಹಾಳುದಿಬ್ಬಗಳನ್ನಾಗಿ
ಮಾಡಲು ಅವಕಾಶ ನೀಡಿದವನು ನಾನೇ.
26 ನಗರಗಳಲ್ಲಿ ವಾಸಿಸುವ ಜನರು ಬಲವಿಲ್ಲದವರಾಗಿ
ನಿರಾಶೆಯಿಂದ ಗಲಿಬಿಲಿಗೊಂಡರು.
ಜನರು ಹೊಲಗಳಲ್ಲಿನ ಹುಲ್ಲಿನಂತೆಯೂ ಹಸಿರುಗಿಡಗಳಂತೆಯೂ
ಮಾಳಿಗೆಯ ಮೇಲೆ ಒಣಗಿ ಹಾಳಾಗುವ ಹುಲ್ಲಿನಂತೆಯೂ ಇದ್ದರು.
27 ನೀನು ಮೇಲೇಳುವುದೂ ಕುಳಿತುಕೊಳ್ಳುವುದೂ ನನಗೆ ಗೊತ್ತಿದೆ.
ನೀನು ಒಳಗೆ ಬರುವುದೂ ಹೊರಗೆ ಹೋಗುವುದೂ ನನಗೆ ತಿಳಿದಿದೆ.
ನೀನು ನನ್ನ ವಿರುದ್ಧ ಯಾವಾಗ ದಂಗೆಯೇಳುವೆ ಎಂಬುದೂ ನನಗೆ ತಿಳಿದಿದೆ.
28 ನೀನು ನನ್ನ ವಿರುದ್ಧ ದಂಗೆ ಎದ್ದಿರುವೆ.
ನಿನ್ನ ಗರ್ವದ ನಿಂದನೆಯನ್ನು ನಾನು ಕೇಳಿರುವೆ.
ಆದ್ದರಿಂದ ನಾನು ನಿನ್ನ ಬಾಯಿಗೆ ಕಡಿವಾಣವನ್ನು ಹಾಕಿ
ನೀನು ಬಂದ ದಾರಿಯಲ್ಲಿಯೇ ಹಿಂದಿರುಗುವಂತೆ ಮಾಡುತ್ತೇನೆ.”
ಹಿಜ್ಕೀಯನಿಗೆ ಯೆಹೋವನ ಸಂದೇಶ
29 “ನಾನು ನಿನಗೆ ಸಹಾಯ ಮಾಡುತ್ತೇನೆಂಬುದಕ್ಕೆ ಇದು ಸಾಕ್ಷಿಯ ಗುರುತಾಗಿದೆ: ಈ ವರ್ಷ ನೀವು ತಾನಾಗಿಯೇ ಬೆಳೆಯುವ ಧಾನ್ಯವನ್ನು ತಿನ್ನುತ್ತೀರಿ. ಮುಂದಿನ ವರ್ಷ ನೀವು ಬೀಜದಿಂದ ಬೆಳೆಯುವ ಧಾನ್ಯವನ್ನು ತಿನ್ನುತ್ತೀರಿ. ಆದರೆ ಮೂರನೆಯ ವರ್ಷದಲ್ಲಿ ನೀವು ಬೆಳೆಸಿದ ಧಾನ್ಯವನ್ನು ಒಟ್ಟುಗೂಡಿಸುತ್ತೀರಿ. ನೀವು ದ್ರಾಕ್ಷಿತೋಟಗಳನ್ನು ಬೆಳೆಸುತ್ತೀರಿ; ಅವುಗಳ ದ್ರಾಕ್ಷಿಯನ್ನು ತಿನ್ನುತ್ತೀರಿ. 30 ತಪ್ಪಿಸಿಕೊಂಡು ಉಳಿದ ಯೆಹೂದ ಕುಲದವರು ಮತ್ತೆ ವೃದ್ಧಿಯಾಗುವರು. ಅವರು ಆಳವಾಗಿ ಬೇರೂರಿ ಫಲವನ್ನು ಫಲಿಸುವರು. 31 ಜೆರುಸಲೇಮಿನಲ್ಲಿ ಉಳಿದವರು ಹರಡಿಕೊಳ್ಳುವರು; ಚಿಯೋನ್ ಪರ್ವತದಲ್ಲಿ ತಪ್ಪಿಸಿಕೊಂಡವರು ಅಭಿವೃದ್ಧಿ ಹೊಂದುವರು; ಯೆಹೋವನ ಸ್ವಾಭಿಮಾನವೇ ಇದನ್ನು ನೆರವೇರಿಸುವುದು.
32 “ಯೆಹೋವನು ಅಶ್ಶೂರದ ರಾಜನನ್ನು ಕುರಿತು ಹೀಗೆನ್ನುತ್ತಾನೆ:
‘ಅವನು ಈ ನಗರದೊಳಕ್ಕೆ ಬರುವುದಿಲ್ಲ.
ಅವನು ಈ ನಗರದಲ್ಲಿ ಒಂದು ಬಾಣವನ್ನೂ ಎಸೆಯುವುದಿಲ್ಲ.
ಅವನು ಈ ನಗರದ ವಿರುದ್ಧ ಗುರಾಣಿಗಳೊಂದಿಗೆ ಬರುವುದಿಲ್ಲ.
ಅವನು ಈ ನಗರವನ್ನು ಮುತ್ತಲು ಮಣ್ಣಿನ ದಿಬ್ಬವನ್ನು ನಿರ್ಮಿಸುವುದಿಲ್ಲ.
33 ಅವನು ತಾನು ಬಂದ ದಾರಿಯಲ್ಲೇ ಹಿಂದಕ್ಕೆ ಹೋಗುತ್ತಾನೆ.
ಅವನು ಈ ನಗರದೊಳಕ್ಕೆ ಬರುವುದಿಲ್ಲ.
ಯೆಹೋವನೇ ಇದನ್ನು ನುಡಿದಿದ್ದಾನೆ.
34 ನಾನು ಈ ನಗರವನ್ನು ಕಾಪಾಡುತ್ತೇನೆ ಮತ್ತು ಇದನ್ನು ರಕ್ಷಿಸುತ್ತೇನೆ.
ನನಗಾಗಿಯೂ ನನ್ನ ಸೇವಕನಾದ ದಾವೀದನಿಗಾಗಿಯೂ ನಾನು ಇದನ್ನು ಮಾಡುತ್ತೇನೆ.’”
ಅಶ್ಶೂರದ ಸೇನೆಯು ನಾಶಗೊಳಿಸಲ್ಪಟ್ಟಿತು
35 ಆ ರಾತ್ರಿ ಯೆಹೋವನ ದೂತನು ಹೊರಕ್ಕೆ ಹೋಗಿ, ಅಶ್ಶೂರದ ಶಿಬಿರದಲ್ಲಿ ಒಂದು ಲಕ್ಷದ ಎಂಭತ್ತೈದು ಸಾವಿರ ಜನರನ್ನು ಕೊಂದುಹಾಕಿದನು. ಜನರು ಬೆಳಗಿನ ಜಾವದಲ್ಲಿ ಮೇಲಕ್ಕೆದ್ದಾಗ ಸತ್ತ ದೇಹಗಳನ್ನು ನೋಡಿದರು.
36 ಆಗ ಅಶ್ಶೂರದ ರಾಜನಾದ ಸನ್ಹೇರೀಬನು ತಾನು ವಾಸಿಸುತ್ತಿದ್ದ ನಿನವೆಗೆ ಹಿಂದಿರುಗಿಹೋದನು. 37 ಸನ್ಹೇರೀಬನು ಒಂದು ದಿನ ತನ್ನ ದೇವರಾದ ನಿಸ್ರೋಕನನ್ನು ಆಲಯದಲ್ಲಿ ಆರಾಧಿಸುತ್ತಿದ್ದನು. ಅವನ ಮಕ್ಕಳಾದ ಅದ್ರಮ್ಮೆಲೆಕ್ ಮತ್ತು ಸರೆಚೆರ್ ಅವನನ್ನು ಖಡ್ಗದಿಂದ ಇರಿದುಕೊಂದರು. ನಂತರ ಅದ್ರಮ್ಮೆಲೆಕ್ ಮತ್ತು ಸರೆಚೆರ್ ಅರರಾಟ್ ದೇಶಕ್ಕೆ ತಪ್ಪಿಸಿಕೊಂಡು ಹೋದರು. ಸನ್ಹೇರೀಬನ ಮಗನಾದ ಏಸರ್‌ಹದ್ದೋನನು ಅವನ ನಂತರ ಹೊಸ ರಾಜನಾದನು.
ದೇವರು ತನ್ನ ಮಗನ ಮೂಲಕ ಮಾತನಾಡಿದನು
1 ಪೂರ್ವಕಾಲದಲ್ಲಿ ದೇವರು ಪ್ರವಾದಿಗಳ ಮೂಲಕ ನಮ್ಮ ಜನರೊಂದಿಗೆ ಹಲವಾರು ವಿಧದಲ್ಲಿ ಅನೇಕ ಸಲ ಮಾತನಾಡಿದನು. 2 ಈಗ, ಕೊನೆಯ ದಿನಗಳಲ್ಲಿ ದೇವರು ಮತ್ತೆ ನಮ್ಮ ಜೊತೆಯಲ್ಲಿ ತನ್ನ ಮಗನ ಮೂಲಕ ಮಾತನಾಡಿದನು. ದೇವರು ತನ್ನ ಮಗನ ಮೂಲಕ ಲೋಕವನ್ನೆಲ್ಲ ಸೃಷ್ಟಿಸಿ, ಸಮಸ್ತಕ್ಕೂ ಆತನನ್ನೇ ಬಾಧ್ಯಸ್ತನನ್ನಾಗಿ ಮಾಡಿದನು. 3 ದೇವರ ಮಹಿಮೆಯು ಆತನಲ್ಲಿ ತೋರಿಬಂದಿತು. ಆತನು ದೇವರ ಸ್ವಭಾವದ ಪ್ರತಿರೂಪವಾಗಿದ್ದಾನೆ. ಆತನು ತನ್ನ ಶಕ್ತಿಯ ಆಜ್ಞೆಯಿಂದ ಪರಿಪಾಲಿಸುತ್ತಿದ್ದಾನೆ. ಆತನು ಜನರನ್ನು ಅವರ ಪಾಪಗಳಿಂದ ಶುದ್ಧಿಮಾಡಿ, ಸ್ವರ್ಗದಲ್ಲಿ ಮಹತ್ವವುಳ್ಳ ದೇವರ ಬಲಗಡೆಯಲ್ಲಿ ಆಸನಾರೂಢನಾದನು. 4 ದೇವರು ಆತನಿಗೆ ದೇವದೂತರಿಗಿಂತ ಎಷ್ಟೋ ಶ್ರೇಷ್ಠವಾದ ಹೆಸರನ್ನು ದಯಪಾಲಿಸಿದನು. ಆತನು ದೇವದೂತರಿಗಿಂತ ಅಷ್ಟೊಂದು ಶ್ರೇಷ್ಠನಾದನು.
5 ದೇವರು ಯಾವ ದೂತರಿಗೂ ಈ ಸಂಗತಿಗಳನ್ನು ಎಂದೂ ಹೇಳಿಲ್ಲ:
“ನೀನು ನನ್ನ ಮಗ;
ಈ ದಿನ ನಾನು ನಿನ್ನ ತಂದೆಯಾದೆನು.”(A)
ದೇವರು ದೂತನೊಬ್ಬನಿಗೆ ಎಂದೂ ಹೀಗೆ ಹೇಳಿಲ್ಲ:
“ನಾನು ಅವನ ತಂದೆಯಾಗಿರುವೆನು,
ಅವನು ನನ್ನ ಮಗನಾಗಿರುವನು.”(B)
6 ದೇವರು ತನ್ನ ಚೊಚ್ಚಲ ಮಗನನ್ನು ಈ ಲೋಕಕ್ಕೆ ಬರಮಾಡುವಾಗ, ಆತನು ಹೇಳುವುದೇನೆಂದರೆ,
“ದೇವದೂತರೆಲ್ಲರೂ ಆತನನ್ನು ಆರಾಧಿಸಲಿ.”[a]
7 ದೇವರು ತನ್ನ ದೂತರನ್ನು ಕುರಿತು ಹೇಳಿದ್ದು ಹೀಗಿದೆ:
“ದೇವರು ತನ್ನ ದೂತರನ್ನು ಗಾಳಿಗಳನ್ನಾಗಿ ಮಾಡಿದನು.
ಆತನು ತನ್ನ ಸೇವಕರನ್ನು ಬೆಂಕಿಯ ಜ್ವಾಲೆಗಳಂತೆ ಮಾಡಿದನು.”(C)
8 ಆದರೆ ದೇವರು ತನ್ನ ಮಗನನ್ನು ಕುರಿತು ಹೀಗೆ ಹೇಳಿದನು:
“ದೇವರೇ, ನಿನ್ನ ಸಿಂಹಾಸನವು ಯುಗಯುಗಾಂತರಗಳಲ್ಲೂ ಇರುವುದು.
ನೀನು ನಿನ್ನ ರಾಜ್ಯವನ್ನು ಸಮರ್ಪಕವಾದ ತೀರ್ಪುಗಳೊಡನೆ ಆಳುವೆ.
9 ನೀನು ಒಳ್ಳೆಯದನ್ನು ಪ್ರೀತಿಸುವೆ, ಕೆಟ್ಟದ್ದನ್ನು ದ್ವೇಷಿಸುವೆ.
ಆದ್ದರಿಂದ ದೇವರು, ಹೌದು, ನಿನ್ನ ದೇವರೇ ನಿನ್ನನ್ನು
ನಿನ್ನ ಸಂಗಡಿಗರಿಗಿಂತ ಉನ್ನತಸ್ಥಾನಕ್ಕೆ ಏರಿಸಿ ಪರಮಾನಂದದ ತೈಲದಿಂದ ಅಭಿಷೇಕಿಸಿದ್ದಾನೆ.”(D)
10 ಇದಲ್ಲದೆ ದೇವರು ಹೀಗೆನ್ನುತ್ತಾನೆ:
“ಪ್ರಭುವೇ, ಆದಿಯಲ್ಲಿ ನೀನು ಈ ಲೋಕವನ್ನು ಸೃಷ್ಟಿಸಿದೆ.
ಗಗನಮಂಡಲವು ನಿನ್ನ ಕೈಕೆಲಸವಾಗಿದೆ.
11 ಇವೆಲ್ಲವು ನಾಶವಾಗುತ್ತವೆ, ಆದರೆ ನೀನು ಶಾಶ್ವತವಾಗಿರುವೆ.
ಎಲ್ಲಾ ವಸ್ತುಗಳೂ ವಸ್ತ್ರಗಳಂತೆ ಹಳೆಯವಾಗುವವು.
12 ನೀನು ಅವುಗಳನ್ನು ಮೇಲಂಗಿಯಂತೆ ಮಡಿಚಿಡುವೆ.
ಅವು ವಸ್ತ್ರಗಳಂತೆ ಬದಲಾಗುತ್ತವೆ.
ಆದರೆ ನೀನು ಎಂದೆಂದಿಗೂ ಬದಲಾಗುವುದಿಲ್ಲ.
ನಿನ್ನ ಜೀವಕ್ಕೆ ಅಂತ್ಯವೆಂಬುದಿಲ್ಲ.”(E)
13 ದೇವರು ಯಾವ ದೂತನಿಗೂ ಇದನ್ನೆಂದೂ ಹೇಳಿಲ್ಲ:
“ನಾನು ನಿನ್ನ ಶತ್ರುಗಳನ್ನು ನಿನಗೆ ಪಾದಪೀಠವನ್ನಾಗಿ ಮಾಡುವತನಕ,
ನೀನು ನನ್ನ ಬಲಗಡೆಯಲ್ಲಿ ಕುಳಿತುಕೊ.”(F)
14 ದೇವದೂತರೆಲ್ಲರೂ ದೇವರ ಸೇವೆಮಾಡುವ ಆತ್ಮಗಳಾಗಿದ್ದಾರೆ ಮತ್ತು ರಕ್ಷಣೆಯನ್ನು ಹೊಂದಿಕೊಳ್ಳುವ ಜನರ ಸಹಾಯಕ್ಕಾಗಿ ಕಳುಹಿಸಲ್ಪಟ್ಟವರಾಗಿದ್ದಾರೆ.
ಯೆಹೋವನು ಇಸ್ರೇಲಿಗೆ ವಿರುದ್ಧವಾಗಿದ್ದಾನೆ
12 ಎಫ್ರಾಯೀಮ್ ಸಮಯವನ್ನು ಹಾಳು ಮಾಡುತ್ತಿದ್ದಾನೆ. ಇಸ್ರೇಲು ದಿನವಿಡೀ ಗಾಳಿಯನ್ನು ಹಿಮ್ಮೆಟ್ಟುತ್ತಿದ್ದಾನೆ. ಜನರು ಹೆಚ್ಚೆಚ್ಚಾಗಿ ಸುಳ್ಳು ಹೇಳುತ್ತಿದ್ದಾರೆ; ಹೆಚ್ಚೆಚ್ಚಾಗಿ ಕದಿಯುತ್ತಾರೆ. ಅಶ್ಶೂರ್ಯದವರೊಂದಿಗೆ ಒಪ್ಪಂದ ಮಾಡಿರುತ್ತಾರೆ. ತಮ್ಮ ಆಲೀವ್ ಎಣ್ಣೆಯನ್ನು ಈಜಿಪ್ಟಿಗೆ ಕೊಂಡೊಯ್ಯುತ್ತಿದ್ದಾರೆ.
2 ಯೆಹೋವನು ಹೇಳುವುದೇನೆಂದರೆ, “ಇಸ್ರೇಲಿಗೆ ವಿರುದ್ಧವಾಗಿ ನಾನು ವಾದ ಮಾಡುತ್ತೇನೆ. ತಾನು ಮಾಡಿದ ಸಂಗತಿಗಳಿಗಾಗಿ ಯಾಕೋಬನು ಶಿಕ್ಷೆ ಅನುಭವಿಸಬೇಕು. 3 ತನ್ನ ತಾಯಿಯ ಗರ್ಭದಲ್ಲಿರುವಾಗಲೇ ಯಾಕೋಬನು ತನ್ನ ಅಣ್ಣನಿಗೆ ಮೋಸ ಮಾಡಲು ಪ್ರಾರಂಭಮಾಡಿದ್ದನು. ಯಾಕೋಬನು ಬಲಶಾಲಿಯಾದ ಯೌವನಸ್ಥನು. ಆಗ ಅವನು ದೇವರೊಂದಿಗೆ ಹೋರಾಡಿದನು. 4 ಯಾಕೋಬನು ದೇವದೂತನೊಡನೆ ಹೋರಾಡಿ ಗೆದ್ದನು. ಅವನು ಕನಿಕರಕ್ಕಾಗಿ ಮೊರೆಯಿಟ್ಟನು. ಇದು ಬೇತೇಲ್ ಎಂಬಲ್ಲಿ ನಡೆಯಿತು. ಆ ಸ್ಥಳದಲ್ಲಿ ಆತನು ನಮ್ಮೊಂದಿಗೆ ಮಾತನಾಡಿದನು. 5 ಹೌದು ಯೆಹೋವನು ಸೈನ್ಯಗಳ ದೇವರಾಗಿದ್ದಾನೆ. ಆತನ ಹೆಸರು ಯೆಹೋವನು. 6 ಆದ್ದರಿಂದ ನಿನ್ನ ಯೆಹೋವನ ಬಳಿಗೆ ಹಿಂದಿರುಗಿ ಬಾ. ಆತನಿಗೆ ವಿಧೇಯನಾಗಿರು. ಸರಿಯಾಗಿರುವದನ್ನೇ ಮಾಡು. ಯಾವಾಗಲೂ ನಿನ್ನ ದೇವರ ಮೇಲೆ ಭರವಸವಿಡು.
7 “ಯಾಕೋಬನು ಒಬ್ಬ ವ್ಯಾಪಾರಿ.[a] ಅವನು ತನ್ನ ಸ್ನೇಹಿತನಿಗೇ ಮೋಸಮಾಡುತ್ತಾನೆ. ಅವನ ತ್ರಾಸು ಮೋಸದ್ದು, 8 ಎಫ್ರಾಯೀಮು, ‘ನಾನು ಐಶ್ವರ್ಯವಂತನು. ನನ್ನಲ್ಲಿ ನಿಜವಾದ ಐಶ್ವರ್ಯವಿದೆ. ನನ್ನ ಅಪರಾಧಗಳನ್ನು ಯಾರೂ ಕಂಡುಹಿಡಿಯಲಾರರು. ನನ್ನ ದುಷ್ಟತ್ವದ ಬಗ್ಗೆ ಯಾರಿಗೂ ತಿಳಿಯದು’ ಎಂದು ಅನ್ನುತ್ತಾನೆ.
9 “ಆದರೆ ನೀನು ಈಜಿಪ್ಟ್ ದೇಶದಲ್ಲಿರುವಾಗಲೇ ನಾನು ನಿನ್ನ ದೇವರಾಗಿದ್ದೇನೆ. ನೀನು ಗುಡಾರಗಳಲ್ಲಿ ವಾಸಿಸುವಂತೆ ಮಾಡುವೆನು. 10 ನಾನು ಪ್ರವಾದಿಗಳೊಂದಿಗೆ ಮಾತನಾಡಿದೆನು. ಅವರಿಗೆ ಅನೇಕ ದರ್ಶನಗಳನ್ನು ಕೊಟ್ಟೆನು. ನನ್ನ ಪಾಠಗಳನ್ನು ನಿಮಗೆ ಕಲಿಸುವಂತೆ ಅನೇಕ ಮಾರ್ಗಗಳನ್ನು ಪ್ರವಾದಿಗಳಿಗೆ ತೋರಿಸಿಕೊಟ್ಟೆನು. 11 ಆದರೆ ಗಿಲ್ಯಾದಿನ ಜನರು ಪಾಪ ಮಾಡಿದ್ದಾರೆ. ಅವರ ಬಳಿಯಲ್ಲಿ ಅನೇಕ ಭಯಂಕರವಾದ ವಿಗ್ರಹಗಳಿವೆ. ಗಿಲ್ಗಾಲಿನಲ್ಲಿ ಬಸವನ ವಿಗ್ರಹಗಳಿಗೆ ಜನರು ಯಜ್ಞವನ್ನರ್ಪಿಸುತ್ತಾರೆ. ಅವರಲ್ಲಿ ಅನೇಕ ಯಜ್ಞವೇದಿಕೆಗಳಿವೆ. ಹೇಗೆ ಉಳಿಮೆ ಮಾಡಿದ ಹೊಲದಲ್ಲಿ ಮಣ್ಣಿನ ಸಾಲುಗಳಿರುತ್ತದೋ ಅದೇ ರೀತಿಯಲ್ಲಿ ಅವರ ಬಳಿಯಲ್ಲಿ ವಿಗ್ರಹಗಳ ಸಾಲಿದೆ.
12 “ಯಾಕೋಬನು ಅರಾಮ್ ದೇಶಕ್ಕೆ ಓಡಿಹೋದನು. ಅಲ್ಲಿ ಇಸ್ರೇಲನು ಒಬ್ಬ ಹೆಂಡತಿಗಾಗಿ ಸೇವೆ ಮಾಡಿದನು. ಇನ್ನೊಂದು ಹೆಂಡತಿಯನ್ನು ಮಾಡಿಕೊಳ್ಳಲಿಕ್ಕೆ ಕುರಿಗಳನ್ನು ಕಾಯ್ದನು. 13 ಆದರೆ ದೇವರು ಇಸ್ರೇಲರನ್ನು ಈಜಿಪ್ಟಿನಿಂದ ಹೊರತರುವದಕ್ಕಾಗಿ ಒಬ್ಬ ಪ್ರವಾದಿಯನ್ನು ಉಪಯೋಗಿಸಿದನು. ಇಸ್ರೇಲರನ್ನು ಪ್ರವಾದಿಯ ಮೂಲಕ ಬಿಡಿಸಿದನು. 14 ಆದರೆ ಎಫ್ರಾಯೀಮನು ಯೆಹೋವನನ್ನು ಅತಿಯಾಗಿ ಕೋಪಿಸಿಕೊಳ್ಳುವಂತೆ ಮಾಡಿದನು. ಎಫ್ರಾಯೀಮನು ಅನೇಕ ಮಂದಿಯನ್ನು ಕೊಲೆ ಮಾಡಿದನು. ಅವನ ಅಪರಾಧಗಳಿಗಾಗಿ ಅವನು ಶಿಕ್ಷಿಸಲ್ಪಡುವನು. ಅವನ ದೇವರಾದ ಯೆಹೋವನು ಅವನು ಮಾಡಿದ ಅಪರಾಧಕ್ಕೆ ತಕ್ಕ ದಂಡನೆಯನ್ನು ವಿಧಿಸಿ ಅವಮಾನ ಹೊರುವಂತೆ ಮಾಡುವನು.”
135 ಯೆಹೋವನಿಗೆ ಸ್ತೋತ್ರವಾಗಲಿ!
ಯೆಹೋವನ ಸೇವಕರೇ, ಆತನ ಹೆಸರನ್ನು ಸ್ತುತಿಸಿರಿ!
2 ಯೆಹೋವನ ಆಲಯದಲ್ಲಿ ನಿಂತಿರುವವರೇ, ಆತನನ್ನು ಸ್ತುತಿಸಿರಿ!
ದೇವಾಲಯದ ಅಂಗಳದಲ್ಲಿ ನಿಂತಿರುವವರೇ, ಆತನನ್ನು ಸ್ತುತಿಸಿರಿ!
3 ಯೆಹೋವನಿಗೆ ಸ್ತೋತ್ರ ಮಾಡಿರಿ, ಯಾಕೆಂದರೆ ಆತನು ಒಳ್ಳೆಯವನು.
ಆತನ ಹೆಸರನ್ನು ಸ್ತುತಿಸಿರಿ, ಅದು ಮನೋಹರವಾಗಿದೆ.
4 ಯೆಹೋವನು ಯಾಕೋಬನನ್ನು ಆರಿಸಿಕೊಂಡನು.
ಇಸ್ರೇಲ್, ಆತನಿಗೆ ಸೇರಿದ್ದು.
5 ಯೆಹೋವನು ಮಹೋನ್ನತನೆಂದೂ
ನಮ್ಮ ಒಡೆಯನು ಬೇರೆಲ್ಲಾ ದೇವರುಗಳಿಗಿಂತ ಮಹೋನ್ನತನೆಂದೂ ನಮಗೆ ಗೊತ್ತಿದೆ.
6 ಯೆಹೋವನು ಆಕಾಶದಲ್ಲಿಯೂ ಭೂಮಿಯಲ್ಲಿಯೂ
ಸಮುದ್ರಗಳಲ್ಲಿಯೂ ಆಳವಾದ ಸಾಗರಗಳಲ್ಲಿಯೂ ತನ್ನ ಇಷ್ಟಾನುಸಾರವಾಗಿ ಮಾಡುವನು.
7 ಆತನು ಭೂಮಿಯ ಮೇಲೆಲ್ಲಾ ಮೋಡಗಳನ್ನು ಏಳಮಾಡುವನು;
ಮಿಂಚನ್ನೂ ಮಳೆಯನ್ನೂ ಬರಮಾಡುವನು;
ಗಾಳಿಯನ್ನು ಬೀಸಮಾಡುವನು.
8 ಆತನು ಈಜಿಪ್ಟಿನಲ್ಲಿ ಚೊಚ್ಚಲು ಪುರುಷರನ್ನೂ ಪ್ರಾಣಿಗಳನ್ನೂ ನಾಶಮಾಡಿದನು.
9 ಆತನು ಈಜಿಪ್ಟಿನಲ್ಲಿ ಅನೇಕ ಅದ್ಭುತಕಾರ್ಯಗಳನ್ನು ಮತ್ತು ಮಹತ್ಕಾರ್ಯಗಳನ್ನು
ಫರೋಹನಿಗೂ ಅವನ ಸೇವಕರುಗಳಿಗೂ ವಿರೋಧವಾಗಿ ಮಾಡಿದನು.
10 ಆತನು ಅನೇಕ ಜನಾಂಗಗಳನ್ನು ಸೋಲಿಸಿದನು.
ಬಲಿಷ್ಠ ರಾಜರುಗಳನ್ನು ಕೊಂದುಹಾಕಿದನು.
11 ಆತನು ಅಮೋರಿಯರ ರಾಜನಾದ ಸೀಹೋನನನ್ನು ಸೋಲಿಸಿದನು;
ಬಾಷಾನಿನ ರಾಜನಾದ ಓಗನನ್ನೂ ಕಾನಾನ್ ದೇಶದ ಎಲ್ಲಾ ಜನಾಂಗಗಳನ್ನೂ ಸೋಲಿಸಿದನು.
12 ಆತನು ಅವರ ದೇಶವನ್ನು ತನ್ನ ಜನರಾದ ಇಸ್ರೇಲರಿಗೆ ಕೊಟ್ಟನು.
13 ಯೆಹೋವನೇ, ನೀನು ಸದಾಕಾಲ ಪ್ರಸಿದ್ಧನಾಗಿರುವೆ!
ಯೆಹೋವನೇ, ಜನರು ನಿನ್ನನ್ನು ಸದಾಕಾಲ ನೆನಸಿಕೊಳ್ಳುವರು.
14 ಯೆಹೋವನು ಜನಾಂಗಗಳನ್ನು ದಂಡಿಸಿದನು.
ತನ್ನ ಜನರಿಗಾದರೋ ಕರುಣೆಯುಳ್ಳವನಾಗಿದ್ದನು.
15 ಅನ್ಯಜನರ ದೇವರುಗಳು ಮನುಷ್ಯರಿಂದಲೇ ಮಾಡಲ್ಪಟ್ಟ
ಬೆಳ್ಳಿಬಂಗಾರಗಳ ಪ್ರತಿಮೆಗಳಾಗಿದ್ದವು.
16 ಆ ಪ್ರತಿಮೆಗಳಿಗೆ ಬಾಯಿಗಳಿದ್ದರೂ ಮಾತಾಡಲಾಗಲಿಲ್ಲ;
ಕಣ್ಣುಗಳಿದ್ದರೂ ನೋಡಲಾಗಲಿಲ್ಲ;
17 ಆ ಪ್ರತಿಮೆಗಳಿಗೆ ಕಿವಿಗಳಿದ್ದರೂ ಕೇಳಲಾಗಲಿಲ್ಲ;
ಮೂಗುಗಳಿದ್ದರೂ ಮೂಸಿನೋಡಲಾಗಲಿಲ್ಲ;
18 ಆ ಪ್ರತಿಮೆಗಳನ್ನು ಮಾಡಿದವರೂ ಅವುಗಳಂತೆಯೇ ಆಗುವರು!
ಯಾಕೆಂದರೆ, ಅವರು ಸಹಾಯಕ್ಕಾಗಿ ಆ ಪ್ರತಿಮೆಗಳನ್ನೇ ನಂಬಿಕೊಂಡಿದ್ದಾರೆ.
19 ಇಸ್ರೇಲಿನ ಮನೆತನದವರೇ, ಯೆಹೋವನನ್ನು ಕೊಂಡಾಡಿರಿ.
ಆರೋನನ ಮನೆತನದವರೇ, ಯೆಹೋವನನ್ನು ಸ್ತುತಿಸಿರಿ.
20 ಲೇವಿಯ ಮನೆತನದವರೇ, ಯೆಹೋವನನ್ನು ಕೊಂಡಾಡಿರಿ!
ಯೆಹೋವನ ಭಕ್ತರೇ, ಆತನನ್ನು ಸ್ತುತಿಸಿರಿ.
21 ಯೆಹೋವನಿಗೆ ಚೀಯೋನಿನಿಂದಲೂ
ಆತನ ವಾಸಸ್ಥಾನವಾದ ಜೆರುಸಲೇಮಿನಿಂದಲೂ ಸ್ತೋತ್ರವಾಗಲಿ!
ಯೆಹೋವನಿಗೆ ಸ್ತೋತ್ರವಾಗಲಿ!
136 ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ; ಆತನು ಒಳ್ಳೆಯವನು.
ಆತನ ಪ್ರೀತಿ ಶಾಶ್ವತವಾದದ್ದು.
2 ದೇವಾಧಿದೇವನಿಗೆ ಕೃತಜ್ಞತಾಸ್ತುತಿಮಾಡಿರಿ!
ಆತನ ಪ್ರೀತಿ ಶಾಶ್ವತವಾದದ್ದು.
3 ಪ್ರಭುಗಳ ಪ್ರಭುವಿಗೆ ಕೃತಜ್ಞತಾಸ್ತುತಿಮಾಡಿರಿ.
ಆತನ ಪ್ರೀತಿ ಶಾಶ್ವತವಾದದ್ದು.
4 ಮಹತ್ಕಾರ್ಯಗಳನ್ನು ಮಾಡಬಲ್ಲ ಆತನಿಗೆ ಸ್ತೋತ್ರಮಾಡಿರಿ.
ಆತನ ಪ್ರೀತಿ ಶಾಶ್ವತವಾದದ್ದು.
5 ಜ್ಞಾನದಿಂದ ಆಕಾಶವನ್ನು ನಿರ್ಮಿಸಿದ ಆತನೊಬ್ಬನನ್ನೇ ಸ್ತುತಿಸಿರಿ!
ಆತನ ಪ್ರೀತಿ ಶಾಶ್ವತವಾದದ್ದು.
6 ಆತನು ಭೂಮಿಯನ್ನು ಜಲರಾಶಿಗಳ ಮೇಲೆ ಹಾಸಿದ್ದಾನೆ.
ಆತನ ಪ್ರೀತಿ ಶಾಶ್ವತವಾದದ್ದು.
7 ಆತನು ಮಹಾಬೆಳಕುಗಳನ್ನು ಸೃಷ್ಟಿಮಾಡಿದನು.
ಆತನ ಪ್ರೀತಿ ಶಾಶ್ವತವಾದದ್ದು.
8 ಹಗಲನ್ನು ಆಳುವುದಕ್ಕಾಗಿ ಆತನು ಸೂರ್ಯನನ್ನು ಸೃಷ್ಟಿಮಾಡಿದನು.
ಆತನ ಪ್ರೀತಿ ಶಾಶ್ವತವಾದದ್ದು.
9 ರಾತ್ರಿಯನ್ನು ಆಳುವುದಕ್ಕಾಗಿ ಆತನು ಚಂದ್ರನನ್ನೂ ನಕ್ಷತ್ರಗಳನ್ನೂ ಸೃಷ್ಟಿಮಾಡಿದನು.
ಆತನ ಪ್ರೀತಿ ಶಾಶ್ವತವಾದದ್ದು.
10 ಆತನು ಈಜಿಪ್ಟಿನಲ್ಲಿ ಚೊಚ್ಚಲು ಪುರುಷರನ್ನೂ ಪ್ರಾಣಿಗಳನ್ನೂ ಸಂಹರಿಸಿದನು.
ಆತನ ಪ್ರೀತಿ ಶಾಶ್ವತವಾದದ್ದು.
11 ಆತನು ಇಸ್ರೇಲರನ್ನು ಈಜಿಪ್ಟಿನಿಂದ ಹೊರತಂದನು.
ಆತನ ಪ್ರೀತಿ ಶಾಶ್ವತವಾದದ್ದು.
12 ಆತನು ತನ್ನ ಮಹಾಶಕ್ತಿಯನ್ನೂ ಬಲವನ್ನೂ ತೋರಿದನು.
ಆತನ ಪ್ರೀತಿ ಶಾಶ್ವತವಾದದ್ದು.
13 ಆತನು ಕೆಂಪು ಸಮುದ್ರವನ್ನು ಎರಡು ಭಾಗವನ್ನಾಗಿ ಮಾಡಿದನು.
ಆತನ ಪ್ರೀತಿ ಶಾಶ್ವತವಾದದ್ದು.
14 ಆತನು ಇಸ್ರೇಲರನ್ನು ಸಮುದ್ರದ ಮಧ್ಯದಲ್ಲಿ ನಡೆಸಿದನು.
ಆತನ ಪ್ರೀತಿ ಶಾಶ್ವತವಾದದ್ದು.
15 ಆತನು ಫರೋಹನನ್ನೂ ಅವನ ಸೈನ್ಯವನ್ನೂ ಕೆಂಪು ಸಮುದ್ರದಲ್ಲಿ ಮುಳುಗಿಸಿದನು.
ಆತನ ಪ್ರೀತಿ ಶಾಶ್ವತವಾದದ್ದು.
16 ಆತನು ತನ್ನ ಜನರನ್ನು ಅರಣ್ಯದೊಳಗೆ ನಡೆಸಿದನು.
ಆತನ ಪ್ರೀತಿ ಶಾಶ್ವತವಾದದ್ದು.
17 ಆತನು ಶಕ್ತಿಯುತರಾದ ರಾಜರುಗಳನ್ನು ಸೋಲಿಸಿದನು.
ಆತನ ಪ್ರೀತಿ ಶಾಶ್ವತವಾದದ್ದು.
18 ಆತನು ಬಲಿಷ್ಠರಾದ ರಾಜರುಗಳನ್ನು ಸೋಲಿಸಿದನು.
ಆತನ ಪ್ರೀತಿ ಶಾಶ್ವತವಾದದ್ದು.
19 ಆತನು ಅಮೋರಿಯರ ರಾಜನಾದ ಸೀಹೋನನನ್ನು ಸೋಲಿಸಿದನು.
ಆತನ ಪ್ರೀತಿ ಶಾಶ್ವತವಾದದ್ದು.
20 ಆತನು ಬಾಷಾನಿನ ರಾಜನಾದ ಓಗನನ್ನು ಸೋಲಿಸಿದನು.
ಆತನ ಪ್ರೀತಿ ಶಾಶ್ವತವಾದದ್ದು.
21 ಆತನು ಅವರ ದೇಶಗಳನ್ನು ಇಸ್ರೇಲರಿಗೆ ಕೊಟ್ಟನು.
ಆತನ ಪ್ರೀತಿ ಶಾಶ್ವತವಾದದ್ದು.
22 ಆತನು ಆ ದೇಶಗಳನ್ನು ಇಸ್ರೇಲರಿಗೆ ಉಡುಗೊರೆಯಾಗಿ ಕೊಟ್ಟನು.
ಆತನ ಪ್ರೀತಿ ಶಾಶ್ವತವಾದದ್ದು.
23 ನಾವು ಸೋತುಹೋಗಿದ್ದಾಗ ಆತನು ನಮ್ಮನ್ನು ಜ್ಞಾಪಿಸಿಕೊಂಡನು.
ಆತನ ಪ್ರೀತಿ ಶಾಶ್ವತವಾದದ್ದು.
24 ಆತನು ನಮ್ಮನ್ನು ನಮ್ಮ ಶತ್ರುಗಳಿಂದ ರಕ್ಷಿಸಿದನು.
ಆತನ ಪ್ರೀತಿ ಶಾಶ್ವತವಾದದ್ದು.
25 ಆತನು ಪ್ರತಿಯೊಬ್ಬರಿಗೂ ಆಹಾರವನ್ನು ಕೊಡುವನು.
ಆತನ ಪ್ರೀತಿ ಶಾಶ್ವತವಾದದ್ದು.
26 ಪರಲೋಕದ ದೇವರನ್ನು ಸ್ತುತಿಸಿರಿ!
ಆತನ ಪ್ರೀತಿ ಶಾಶ್ವತವಾದದ್ದು.
Kannada Holy Bible: Easy-to-Read Version. All rights reserved. © 1997 Bible League International