M’Cheyne Bible Reading Plan
ಹೋಶೇಯನು ಇಸ್ರೇಲಿನಲ್ಲಿ ತನ್ನ ಆಳ್ವಿಕೆಯನ್ನು ಆರಂಭಿಸಿದನು
17 ಏಲನ ಮಗನಾದ ಹೋಶೇಯನು ಸಮಾರ್ಯದಲ್ಲಿ ಇಸ್ರೇಲನ್ನು ಆಳಲಾರಂಭಿಸಿದನು. ಇದು ಅಹಾಜನು ಯೆಹೂದದ ರಾಜನಾಗಿದ್ದ ಹನ್ನೆರಡನೆಯ ವರ್ಷದಲ್ಲಾಯಿತು. ಹೋಶೇಯನು ಒಂಭತ್ತು ವರ್ಷ ಆಳಿದನು. 2 ಯೆಹೋವನು ಕೆಟ್ಟದ್ದೆಂದು ಹೇಳಿದ ಕಾರ್ಯಗಳನ್ನು ಹೋಶೇಯನು ಮಾಡಿದನು. ಆದರೆ ಹೋಶೇಯನು ಅವನಿಗಿಂತ ಮೊದಲು ಇಸ್ರೇಲನ್ನು ಆಳಿದ ರಾಜರುಗಳಷ್ಟು ಕೆಟ್ಟವನಲ್ಲ.
3 ಅಶ್ಶೂರದ ರಾಜನಾದ ಶಲ್ಮನೆಸರನು ಹೋಶೇಯನ ವಿರುದ್ಧ ಯುದ್ಧಕ್ಕೆ ಬಂದನು. ಶಲ್ಮನೆಸರನು ಹೋಶೇಯನನ್ನು ಸೋಲಿಸಿದನು. ಆದ್ದರಿಂದ ಹೋಶೇಯನು ಶಲ್ಮನೆಸರನಿಗೆ ಸೇವಕನಾಗಿ ಕಪ್ಪಕಾಣಿಕೆಯನ್ನು ಕೊಟ್ಟನು.
4 ಹೋಶೇಯನು ಈಜಿಪ್ಟಿನ ರಾಜನಲ್ಲಿಗೆ ಸಂದೇಶಕರನ್ನು ಕಳುಹಿಸಿದ್ದನು. ಈಜಿಪ್ಟಿನ ರಾಜನಿಗೆ ಸೋ ಎಂಬ ಹೆಸರಿತ್ತು. ಹೋಶೇಯನು ಅಶ್ಶೂರದ ರಾಜನಿಗೆ ಪ್ರತಿವರ್ಷ ಕಪ್ಪಕಾಣಿಕಯನ್ನು ಕೊಡುತ್ತಿದ್ದನು, ಆದರೆ ಆ ವರ್ಷ ಕೊಡಲಿಲ್ಲ. ಆದರೆ ಅಶ್ಶೂರದ ರಾಜನಿಗೆ ಹೋಶೇಯನು ತನ್ನ ವಿರುದ್ಧ ಮಾಡಿರುವ ಒಳಸಂಚು ತಿಳಿದುಬಂದಿತು. ಆದ್ದರಿಂದ ಅಶ್ಶೂರದ ರಾಜನು ಹೋಶೇಯನನ್ನು ಬಂಧಿಸಿ, ಸೆರೆಯಲ್ಲಿಟ್ಟನು.
5 ನಂತರ ಅಶ್ಶೂರದ ರಾಜನು ಇಸ್ರೇಲಿನಲ್ಲೆಲ್ಲಾ ಸಂಚರಿಸಿ ಸಮಾರ್ಯಕ್ಕೆ ಬಂದನು. ಅವನು ಸಮಾರ್ಯವನ್ನು ಮೂರು ವರ್ಷ ಮುತ್ತಿಗೆ ಹಾಕಿದನು. 6 ಹೋಶೇಯನು ಇಸ್ರೇಲಿನ ರಾಜನಾಗಿದ್ದ ಒಂಭತ್ತನೆಯ ವರ್ಷದಲ್ಲಿ ಅಶ್ಶೂರದ ರಾಜನು ಸಮಾರ್ಯವನ್ನು ಸ್ವಾಧೀನಪಡಿಸಿಕೊಂಡನು. ಅಶ್ಶೂರದ ರಾಜನು ಇಸ್ರೇಲರನ್ನು ಸೆರೆಯಾಳುಗಳನ್ನಾಗಿ ಒಯ್ದು ಹಲಹು ಪ್ರಾಂತ್ಯದಲ್ಲಿಯೂ ಹಾಬೋರ್ ಹೊಳೆಯಿರುವ ಗೋಜಾನ್ ಪ್ರಾಂತ್ಯದಲ್ಲಿಯೂ ಮೇದ್ಯರ ನಗರಗಳಲ್ಲಿಯೂ ಇರಿಸಿದನು.
7 ಇಸ್ರೇಲರು ತಮ್ಮ ದೇವರಾದ ಯೆಹೋವನ ವಿರುದ್ಧ ಪಾಪಗಳನ್ನು ಮಾಡಿದ್ದರಿಂದ ಇವೆಲ್ಲವೂ ಸಂಭವಿಸಿದವು. ಈಜಿಪ್ಟಿನ ರಾಜನಾದ ಫರೋಹನ ಆಳ್ವಿಕೆಯಿಂದ ಇಸ್ರೇಲರನ್ನು ತಪ್ಪಿಸಿ ಯೆಹೋವನು ಅವರನ್ನು ಈಜಿಪ್ಟ್ ದೇಶದಿಂದ ಹೊರತಂದಿದ್ದನು. ಆದರೆ ಇಸ್ರೇಲರು ಬೇರೆ ದೇವರುಗಳನ್ನು ಪೂಜಿಸಲು ಆರಂಭಿಸಿ 8 ಅನ್ಯರು ಮಾಡುವಂತಹ ಕಾರ್ಯಗಳನ್ನೇ ಮಾಡತೊಡಗಿದರು. ಇಸ್ರೇಲರು ಈಜಿಪ್ಟಿನಿಂದ ತಮ್ಮ ದೇಶಕ್ಕೆ ಬಂದಾಗ ಯೆಹೋವನು ಅಲ್ಲಿಯ ನಿವಾಸಿಗಳನ್ನು ಬಲವಂತವಾಗಿ ಹೊರಗಟ್ಟಿದ್ದನು. ಆದರೆ ಇಸ್ರೇಲರು ತಮ್ಮನ್ನು ಆಳುವುದಕ್ಕಾಗಿ ದೇವರನ್ನು ತೊರೆದು ರಾಜರನ್ನು ಆರಿಸಿಕೊಂಡರು. 9 ಇಸ್ರೇಲರು ತಮ್ಮ ದೇವರಾದ ಯೆಹೋವನ ವಿರುದ್ಧ ರಹಸ್ಯವಾದ ಕೆಟ್ಟಕಾರ್ಯಗಳನ್ನು ಮಾಡಿದರು.
ಇಸ್ರೇಲರು ಚಿಕ್ಕ ಊರಿನಿಂದಿಡಿದು ದೊಡ್ಡ ನಗರದವರೆಗೂ ತಮ್ಮ ಎಲ್ಲಾ ನಗರಗಳಲ್ಲಿ ಉನ್ನತಸ್ಥಳಗಳನ್ನು ನಿರ್ಮಿಸಿದರು. 10 ಇಸ್ರೇಲರು ಪ್ರತಿಯೊಂದು ಬೆಟ್ಟದ ಮೇಲೂ ಪ್ರತಿಯೊಂದು ಹಸಿರುಗಿಡಗಳ ಅಡಿಯಲ್ಲೂ ಸ್ಮಾರಕಕಲ್ಲುಗಳನ್ನು ಮತ್ತು ಅಶೇರ್ ವಿಗ್ರಹಕಲ್ಲುಗಳನ್ನು ನಿಲ್ಲಿಸಿದರು. 11 ಇಸ್ರೇಲರು ಪೂಜಾಸ್ಥಳಗಳಲ್ಲೆಲ್ಲಾ ಧೂಪವನ್ನು ಸುಡುತ್ತಿದ್ದರು. ಯೆಹೋವನು ಆ ದೇಶದಿಂದ ಬಲವಂತವಾಗಿ ಹೊರಗಟ್ಟಿದ ಆ ಮೊದಲಿನ ಜನಾಂಗಗಳಂತೆ ಇಸ್ರೇಲರು ಮಾಡಿದರು. ಇಸ್ರೇಲರು ಮಾಡಿದ ದುಷ್ಕೃತ್ಯಗಳಿಂದ ಯೆಹೋವನು ಕೋಪಗೊಂಡನು. 12 ಅವರು ವಿಗ್ರಹಗಳ ಸೇವೆಮಾಡಿದರು. ಯೆಹೋವನು ಇಸ್ರೇಲರಿಗೆ, “ನೀವು ವಿಗ್ರಹಗಳನ್ನು ಪೂಜಿಸಲೇಬಾರದು” ಎಂದು ಹೇಳಿದ್ದನು.
13 ಇಸ್ರೇಲ್ ಮತ್ತು ಯೆಹೂದಗಳನ್ನು ಎಚ್ಚರಿಸಲು ಯೆಹೋವನು ಪ್ರತಿಯೊಬ್ಬ ಪ್ರವಾದಿಯನ್ನು ಮತ್ತು ದೇವದರ್ಶಿಯನ್ನು ಬಳಸಿಕೊಂಡನು. ಯೆಹೋವನು, “ನಿಮ್ಮ ಕೆಟ್ಟಕಾರ್ಯಗಳಿಂದ ದೂರವಾಗಿ! ನನ್ನ ಆಜ್ಞೆಗಳಿಗೆ ಮತ್ತು ಧರ್ಮಶಾಸ್ತ್ರಗಳಿಗೆ ವಿಧೇಯತೆಯಿಂದಿರಿ. ನಿಮ್ಮ ಪೂರ್ವಿಕರಿಗೆ ನಾನು ನೀಡಿದ ಕಟ್ಟಳೆಗಳನ್ನೆಲ್ಲಾ ಅನುಸರಿಸಿ. ನಾನು ನನ್ನ ಸೇವಕರಾದ ಪ್ರವಾದಿಗಳ ಮೂಲಕ ಇವುಗಳನ್ನು ನೀಡಿದ್ದೇನೆ” ಎಂದು ಹೇಳಿದ್ದನು.
14 ಆದರೆ ಅವರು ಯೆಹೋವನ ಮಾತುಗಳಿಗೆ ಕಿವಿಗೊಡಲಿಲ್ಲ; ತಮ್ಮ ದೇವರಾದ ಯೆಹೋವನನ್ನು ನಂಬದೆಹೋದ ತಮ್ಮ ಪೂರ್ವಿಕರನ್ನೇ ಅನುಸರಿಸಿದರು. 15 ಯೆಹೋವನು ಅವರ ಪೂರ್ವಿಕರೊಂದಿಗೆ ಮಾಡಿಕೊಂಡಿದ್ದ ಒಡಂಬಡಿಕೆಯನ್ನು ಮತ್ತು ಆತನ ನಿಯಮಗಳನ್ನು ಅವರು ಒಪ್ಪಲಿಲ್ಲ. ಅವರು ಯೆಹೋವನ ಎಚ್ಚರಿಕೆಗೆ ಗಮನವನ್ನೂ ನೀಡಲಿಲ್ಲ. ಅವರು ನಿರರ್ಥಕವಾದ ವಿಗ್ರಹಗಳನ್ನು ಅನುಸರಿಸಿ ನಿಷ್ಪ್ರಯೋಜಕರಾದರು, ಅವರು ತಮ್ಮ ಸುತ್ತಮುತ್ತಲಿನ ಜನಾಂಗಗಳನ್ನು ಅನುಸರಿಸಿದರು. ಯೆಹೋವನು ಇಸ್ರೇಲಿನ ಜನರಿಗೆ ಮಾಡಬಾರದೆಂದು ಎಚ್ಚರಿಸಿ ಹೇಳಿದ್ದನ್ನು ಈ ಜನಾಂಗಗಳು ಮಾಡಿದವು.
16 ಜನರು ತಮ್ಮ ದೇವರಾದ ಯೆಹೋವನ ಆಜ್ಞೆಗಳನ್ನು ಅನುಸರಿಸುವುದನ್ನು ನಿಲ್ಲಿಸಿದರು. ಅವರು ಚಿನ್ನದ ಎರಡು ಬಸವನ ಮೂರ್ತಿಗಳನ್ನು ನಿರ್ಮಿಸಿದರು. ಅವರು ಅಶೇರ ಸ್ತಂಭಗಳನ್ನು ನಿರ್ಮಿಸಿದರು. ಅವರು ಪರಲೋಕದ ಎಲ್ಲಾ ನಕ್ಷತ್ರಗಳನ್ನು ಮತ್ತು ಬಾಳ್ ದೇವರನ್ನು ಪೂಜಿಸಿದರು. 17 ಅವರು ತಮ್ಮ ಗಂಡುಮಕ್ಕಳನ್ನು ಮತ್ತು ಹೆಣ್ಣುಮಕ್ಕಳನ್ನು ಬೆಂಕಿಯಲ್ಲಿ ಆಹುತಿಕೊಟ್ಟರು. ಅವರು ಭವಿಷ್ಯವನ್ನು ತಿಳಿಯಲು ಮಾಂತ್ರಿಕ ವಿದ್ಯೆಯನ್ನು ಮತ್ತು ಕಣಿಹೇಳುವುದನ್ನು ಕಲಿತರು. ಯೆಹೋವನು ಕೆಟ್ಟದ್ದೆಂದು ಹೇಳಿದ್ದಕ್ಕೆ ತಮ್ಮನ್ನು ತಾವು ಮಾರಿಕೊಂಡು ಯೆಹೋವನಿಗೆ ಕೋಪವನ್ನು ಉಂಟುಮಾಡಿದರು. 18 ಆದ್ದರಿಂದ ಯೆಹೋವನು ಇಸ್ರೇಲಿನ ಬಗ್ಗೆ ಉಗ್ರಕೋಪಿಯಾಗಿ, ಅವರನ್ನು ತನ್ನ ದೃಷ್ಟಿಯಿಂದ ದೂರಮಾಡಿದನು. ಯೆಹೂದಕುಲದವರ ಹೊರತಾಗಿ ಇಸ್ರೇಲರಲ್ಲಿ ಯಾರೂ ಉಳಿಯಲಿಲ್ಲ!
ಯೆಹೂದದ ಜನರೂ ಸಹ ತಪ್ಪಿತಸ್ಥರಾದರು
19 ಆದರೆ ಯೆಹೂದದ ಜನರೂ ಸಹ ತಮ್ಮ ದೇವರಾದ ಯೆಹೋವನ ಆಜ್ಞೆಗಳಿಗೆ ವಿಧೇಯರಾಗಿರಲಿಲ್ಲ. ಯೆಹೂದದ ಜನರು ಇಸ್ರೇಲಿನ ಜನರಂತೆಯೇ ಜೀವಿಸುತ್ತಿದ್ದರು.
20 ಯೆಹೋವನು ಇಸ್ರೇಲಿನ ಜನರೆಲ್ಲರನ್ನೂ ತಿರಸ್ಕರಿಸಿದನು. ಅವನು ಅವರಿಗೆ ಅನೇಕ ತೊಂದರೆಗಳನ್ನು ಉಂಟುಮಾಡಿದನು. ಅವರನ್ನು ನಾಶಗೊಳಿಸಲು ನಾಶಕರಿಗೆ ಆತನು ಅವಕಾಶ ನೀಡಿದನು. ಕೊನೆಗೆ, ಆತನು ಅವರನ್ನು ದೂರತಳ್ಳಿ, ತನ್ನ ದೃಷ್ಟಿಯಿಂದ ಅವರನ್ನೂ ದೂರಮಾಡಿದನು. 21 ಯೆಹೋವನು ಇಸ್ರೇಲನ್ನು ದಾವೀದನ ವಂಶಾವಳಿಯಿಂದ ಕಿತ್ತುಹಾಕಿದನು. ಇಸ್ರೇಲರು ನೆಬಾಟನ ಮಗನಾದ ಯಾರೊಬ್ಬಾಮನನ್ನು ತಮ್ಮ ರಾಜನನ್ನಾಗಿಸಿಕೊಂಡರು. ಯಾರೊಬ್ಬಾಮನು ಇಸ್ರೇಲರನ್ನು ಯೆಹೋವನಿಂದ ದೂರಮಾಡಿದನು. ಇಸ್ರೇಲರು ಮಹಾಪಾಪಗಳನ್ನು ಮಾಡುವಂತೆ ಯಾರೊಬ್ಬಾಮನು ಪ್ರೇರೇಪಿಸಿದನು. 22 ಆದ್ದರಿಂದ ಇಸ್ರೇಲರು ಯಾರೊಬ್ಬಾಮನು ಮಾಡಿದ ಪಾಪಗಳನ್ನೆಲ್ಲ ಅನುಸರಿಸಿದರು. 23 ಯೆಹೋವನು ಇಸ್ರೇಲನ್ನು ತನ್ನ ದೃಷ್ಟಿಯಿಂದ ದೂರ ತಳ್ಳುವವರೆಗೆ, ಅವರು ಈ ಪಾಪಗಳನ್ನು ಮಾಡುವುದನ್ನು ನಿಲ್ಲಿಸಲೇ ಇಲ್ಲ. ಇದು ಸಂಭವಿಸುತ್ತದೆಂದು ಯೆಹೋವನು ಹೇಳಿದ್ದನು! ಆತನು ಜನರಿಗೆ ಇದನ್ನು ಮುಂಚೆಯೇ ತಿಳಿಸಲು ತನ್ನ ಪ್ರವಾದಿಗಳನ್ನು ಕಳುಹಿಸಿದ್ದನು. ಆದ್ದರಿಂದಲೇ ಇಸ್ರೇಲರನ್ನು ತಮ್ಮ ದೇಶದಿಂದ ಅಶ್ಶೂರಿಗೆ ಸೆರೆಹಿಡಿದು ಒಯ್ದರು. ಅವರು ಇಂದಿಗೂ ಅಲ್ಲಿಯೇ ಇದ್ದಾರೆ.
ಸಮಾರ್ಯದ ಜನರ ಆರಂಭ ಕಾಲ
24 ಇಸ್ರೇಲರನ್ನು ಸಮಾರ್ಯದಿಂದ ಅಶ್ಶೂರದ ರಾಜನು ಒಯ್ದನು. ನಂತರ ಅಶ್ಶೂರದ ರಾಜನು ಬಾಬಿಲೋನ್, ಕೂತಾ, ಅವ್ವಾ, ಹಮಾತ್ ಮತ್ತು ಸೆಫರ್ವಯಿಮ್‌ಗಳಿಂದ ಜನರನ್ನು ಕರೆತಂದು ಇಸ್ರೇಲರ ಬದಲಾಗಿ ಅವರನ್ನು ಸಮಾರ್ಯದಲ್ಲಿ ನೆಲೆಗೊಳಿಸಿದನು. ಅವರು ಸಮಾರ್ಯವನ್ನು ಹೊಂದಿಕೊಂಡು ಅವರ ಸುತ್ತಲಿನ ನಗರಗಳಲ್ಲಿ ವಾಸಿಸಿದರು. 25 ಆದರೆ ಅವರು ಯೆಹೋವನನ್ನು ಗೌರವಿಸಲಿಲ್ಲ. ಆದ್ದರಿಂದ ಅವರ ಮೇಲೆ ಆಕ್ರಮಣಮಾಡಲು ಯೆಹೋವನು ಸಿಂಹಗಳನ್ನು ಕಳುಹಿಸಿದನು. ಈ ಸಿಂಹಗಳು ಆ ಜನರಲ್ಲಿ ಕೆಲವರನ್ನು ಕೊಂದುಹಾಕಿದವು. 26 ಅಶ್ಶೂರದ ರಾಜನಿಗೆ ಕೆಲವು ಜನರು, “ನೀನು ಕೆಲವು ಜನರನ್ನು ಒಯ್ದು ಸಮಾರ್ಯ ನಗರಗಳಲ್ಲಿ ಇರಿಸಿದೆ. ಅವರು ಆ ದೇಶದ ದೇವರ ನಿಯಮಗಳ ಬಗ್ಗೆ ತಿಳಿದುಕೊಂಡಿಲ್ಲ. ಆದ್ದರಿಂದ ಅವರನ್ನು ಆಕ್ರಮಣಮಾಡಲು ದೇವರು ಸಿಂಹಗಳನ್ನು ಕಳುಹಿಸಿದನು. ಆ ದೇಶದ ದೇವರ ನಿಯಮಗಳನ್ನು ಅವರು ತಿಳಿದಿಲ್ಲದಿರುವುದರಿಂದ ಅವರನ್ನು ಸಿಂಹಗಳು ಕೊಂದುಹಾಕಿದವು” ಎಂದು ಹೇಳಿದರು.
27 ಆದ್ದರಿಂದ ಅಶ್ಶೂರದ ರಾಜನು, “ನೀವು ಸಮಾರ್ಯದಿಂದ ಕೆಲವು ಯಾಜಕರನ್ನು ಕರೆದೊಯ್ದಿರುವಿರಿ. ನಾನು ಸಮಾರ್ಯದಿಂದ ಸೆರೆಹಿಡಿದು ತಂದಿರುವ ಯಾಜಕರಲ್ಲೊಬ್ಬನನ್ನು ಅಲ್ಲಿಗೆ ಕಳುಹಿಸಿ. ಆ ಯಾಜಕನು ಹೋಗಿ ಅಲ್ಲಿಯೇ ನೆಲೆಸಲಿ. ನಂತರ ಆ ಯಾಜಕನ ಆ ದೇಶದ ದೇವರ ಕಟ್ಟಳೆಗಳನ್ನು ಜನರಿಗೆ ಬೋಧಿಸಲಿ” ಎಂದು ಆಜ್ಞಾಪಿಸಿದನು.
28 ಹೀಗೆ ಅಶ್ಶೂರದವರು ಸಮಾರ್ಯದಿಂದ ಕರೆದೊಯ್ದಿದ್ದ ಯಾಜಕರಲ್ಲೊಬ್ಬನು ಬೇತೇಲಿನಲ್ಲಿ ವಾಸಿಸಲು ಬಂದನು. ಈ ಯಾಜಕನು ಜನರಿಗೆ, ಯೆಹೋವ ಭಕ್ತಿಯನ್ನು ಬೋಧಿಸಿದನು.
29 ಆದರೆ ಅವರೆಲ್ಲರೂ ತಮ್ಮ ಸ್ವಂತ ದೇವರುಗಳನ್ನು ನಿರ್ಮಿಸಿ, ಅವುಗಳನ್ನು ಸಮಾರ್ಯದವರು ನಿರ್ಮಿಸಿದ್ದ ಉನ್ನತಸ್ಥಳಗಳಲ್ಲಿನ ಆಲಯಗಳಲ್ಲಿ ಇರಿಸಿದರು. ಅವರು ಎಲ್ಲೆಲ್ಲಿ ವಾಸಿಸುತ್ತಿದ್ದರೋ ಅಲ್ಲೆಲ್ಲಾ ಹೀಗೆಯೇ ಮಾಡಿದರು. 30 ಬಾಬಿಲೋನಿನ ಜನರು ಸುಳ್ಳುದೇವತೆಯಾದ ಸುಕ್ಕೋತ್ಬೆನೋತನ್ನು ನಿರ್ಮಿಸಿದರು. ಕೂತದ ಜನರು ಸುಳ್ಳುದೇವತೆಯಾದ ನೇರ್ಗಲ್‌ಯನ್ನು ಮಾಡಿದರು. ಹಮಾತಿನ ಜನರು ಸುಳ್ಳುದೇವತೆಯಾದ ಅಷೀಮಾವನ್ನು ಮಾಡಿದರು. 31 ಅವ್ವೀಯರು ಸುಳ್ಳುದೇವತೆಯಾದ ನಿಭಜ್ ಮತ್ತು ತರ್ತಕ್‌ಗಳನ್ನು ಮಾಡಿದರು. ಸೆಫರ್ವಯಿಮಿನವರು ತಮ್ಮ ದೇವರುಗಳಾದ ಅದ್ರಮ್ಮೆಲೆಕ್ ಮತ್ತು ಅನ್ನಮ್ಮೆಲೆಕ್‌ಗಳನ್ನು ಗೌರವಿಸಲು ತಮ್ಮ ಮಕ್ಕಳನ್ನು ಬೆಂಕಿಯಲ್ಲಿ ಆಹುತಿಕೊಟ್ಟರು.
32 ಆದರೆ ಅವರು ಯೆಹೋವನಲ್ಲಿಯೂ ಭಕ್ತಿಯನ್ನಿಟ್ಟಿದ್ದರು. ಅವರು ಉನ್ನತಸ್ಥಳಗಳಿಗೆ ಯಾಜಕರನ್ನು ಜನರಲ್ಲಿಯೇ ಆಯ್ಕೆ ಮಾಡಿಕೊಂಡರು. ಆ ಯಾಜಕರು ಜನರಿಗಾಗಿ ಉನ್ನತಸ್ಥಳಗಳಲ್ಲಿನ ದೇವಾಲಯಗಳಲ್ಲಿ ಯಜ್ಞವನ್ನು ಅರ್ಪಿಸಿದರು. 33 ಅವರು ಯೆಹೋವನಲ್ಲಿ ಭಕ್ತಿಯಿಟ್ಟಿದ್ದರು, ಆದರೆ ತಮ್ಮ ಸ್ವಂತ ದೇವರುಗಳ ಸೇವೆಯನ್ನೂ ಮಾಡಿದರು. ಅವರು ತಮ್ಮನ್ನು ತೆಗೆದುಕೊಂಡುಬಂದ ದೇಶಗಳಲ್ಲಿ ಮಾಡುತ್ತಿದ್ದಂತೆ ತಮ್ಮ ದೇವರುಗಳ ಸೇವೆಯನ್ನು ಮಾಡಿದರು.
34 ಇಂದಿಗೂ ಸಹ ಅವರು ಪೂರ್ವಕಾಲದಲ್ಲಿ ಮಾಡುತ್ತಿದ್ದಂತೆಯೇ ಜೀವಿಸುತ್ತಿದ್ದಾರೆ. ಅವರಿಗೆ ಯೆಹೋವನಲ್ಲಿ ಭಕ್ತಿಯಿಲ್ಲ. ಅವರು ಇಸ್ರೇಲರ ನಿಯಮಗಳಿಗೆ ಮತ್ತು ಆಜ್ಞೆಗಳಿಗೆ ವಿಧೇಯರಾಗುವುದಿಲ್ಲ. ಯೆಹೋವನು ಯಾಕೋಬನ ಸಂತತಿಗೆ ನೀಡಿದ ನಿಯಮಗಳನ್ನು ಮತ್ತು ಆಜ್ಞೆಗಳನ್ನು ಅನುಸರಿಸುವುದಿಲ್ಲ. 35 ಯೆಹೋವನು ಇಸ್ರೇಲಿನ ಜನರೊಂದಿಗೆ ಒಂದು ಒಡಂಬಡಿಕೆಯನ್ನು ಮಾಡಿಕೊಂಡು ಅವರಿಗೆ, “ನೀವು ಅನ್ಯದೇವತೆಗಳನ್ನು ಪೂಜಿಸಬಾರದು; ನೀವು ಅವುಗಳಿಗೆ ಕೈಮುಗಿಯಬಾರದು; ಅವುಗಳ ಸೇವೆಯನ್ನು ಮಾಡಬಾರದು; ಅವುಗಳಿಗೆ ಯಜ್ಞಗಳನ್ನು ಅರ್ಪಿಸಬಾರದು. 36 ಆದರೆ ನೀವು ಯೆಹೋವನನ್ನು ಅನುಸರಿಸಲೇಬೇಕು. ನಿಮ್ಮನ್ನು ಈಜಿಪ್ಟಿನಿಂದ ಹೊರಗೆತಂದ ದೇವರೇ ನಿಮ್ಮ ಯೆಹೋವ. ಯೆಹೋವನು ನಿಮ್ಮನ್ನು ರಕ್ಷಿಸಲು ತನ್ನ ಮಹಾಶಕ್ತಿಯನ್ನು ಬಳಸಿದನು. ನೀವು ಯೆಹೋವನನ್ನು ಗೌರವಿಸಿ ಆರಾಧಿಸಬೇಕು ಮತ್ತು ಆತನಿಗೆ ಯಜ್ಞಗಳನ್ನು ಅರ್ಪಿಸಬೇಕು. 37 ಆತನು ನಿಮಗೆ ಬರೆಯಿಸಿಕೊಟ್ಟ ನಿಯಮಗಳಿಗೆ, ಶಾಸ್ತ್ರಗಳಿಗೆ, ಉಪದೇಶಗಳಿಗೆ ಮತ್ತು ಆಜ್ಞೆಗಳಿಗೆ ನೀವು ವಿಧೇಯರಾಗಿರಬೇಕು. ನೀವು ಎಲ್ಲಾ ಕಾಲದಲ್ಲೂ ಇವುಗಳಿಗೆ ವಿಧೇಯತೆಯಿಂದಿರಬೇಕು. ನೀವು ಅನ್ಯದೇವತೆಗಳನ್ನು ಪೂಜಿಸಲೇಬಾರದು. 38 ನಾನು ನಿಮ್ಮೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನು ನೀವು ಮರೆಯಲೇಬಾರದು. ನೀವು ಅನ್ಯದೇವರುಗಳನ್ನು ಪೂಜಿಸಬಾರದು. 39 ನೀವು ನಿಮ್ಮ ದೇವರಾದ ಯೆಹೋವನನ್ನು ಮಾತ್ರ ಆರಾಧಿಸಬೇಕು. ಆಗ ಆತನು ನಿಮ್ಮನ್ನು ನಿಮ್ಮ ಶತ್ರುಗಳಿಂದ ರಕ್ಷಿಸುತ್ತಾನೆ” ಎಂದು ಆಜ್ಞಾಪಿಸಿದನು.
40 ಆದರೆ ಇಸ್ರೇಲರು ಆತನ ಮಾತಿಗೆ ಕಿವಿಗೊಡದೆ ತಮ್ಮ ಮೊದಲಿನ ಕಾರ್ಯಗಳನ್ನೇ ಮುಂದುವರಿಸಿದರು. 41 ಅನ್ಯಜನಾಂಗಗಳು ಯೆಹೋವನಲ್ಲಿ ಭಕ್ತಿಯಿಂದಿದ್ದರೂ ತಮ್ಮ ಸ್ವಂತ ವಿಗ್ರಹಗಳನ್ನು ಪೂಜಿಸುತ್ತಿದ್ದರು. ಅವರ ಮಕ್ಕಳು ಮತ್ತು ಮೊಮ್ಮಕ್ಕಳು ತಮ್ಮ ಪೂರ್ವಿಕರು ಮಾಡಿದಂತಹ ಕಾರ್ಯಗಳನ್ನು ಮಾಡುತ್ತಿದ್ದರು. ಅವರು ಇಂದಿಗೂ ಇಂತಹ ಕಾರ್ಯಗಳನ್ನು ಮಾಡುತ್ತಿದ್ದಾರೆ.
ಜೀವಿಸಲು ಯೋಗ್ಯವಾದ ಮಾರ್ಗ
3 ನೀನು ಜನರಿಗೆ ತಿಳಿಸಬೇಕಾದದ್ದೇನೆಂದರೆ: ನಿಮ್ಮ ಅಧಿಪತಿಗಳಿಗೂ ಅಧಿಕಾರಿಗಳಿಗೂ ಅಧೀನರಾಗಿರಿ; ಸಕಲ ಸತ್ಕಾರ್ಯಗಳನ್ನು ಮಾಡಲು ಸಿದ್ಧರಾಗಿರಿ. 2 ಯಾರನ್ನೂ ದೂಷಿಸದೆ, ಯಾರೊಂದಿಗೂ ಜಗಳವಾಡದೆ ಮೃದುವಾಗಿ ಎಲ್ಲರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳಿರಿ.
3 ಮೊದಲು ನಾವು ಸಹ ಅವಿವೇಕಿಗಳಾಗಿದ್ದೆವು. ನಾವು ವಿಧೇಯರಾಗಿರಲಿಲ್ಲ. ನಾವು ಮೋಸಹೋಗಿದ್ದೆವು. ಅನೇಕ ಬಗೆಯ ಆಸೆಗಳಿಗೆ ಮತ್ತು ಭೋಗಗಳಿಗೆ ದಾಸರಾಗಿದ್ದೆವು; ಕೆಟ್ಟದ್ದನ್ನು ಮಾಡುವವರೂ ಹೊಟ್ಟೆಕಿಚ್ಚುಳ್ಳವರೂ ಆಗಿದ್ದೆವು. ಜನರು ನಮ್ಮನ್ನು ದ್ವೇಷಿಸುತ್ತಿದ್ದರು. ನಾವು ಒಬ್ಬರನ್ನೊಬ್ಬರು ದ್ವೇಷಿಸುತ್ತಿದ್ದೆವು. 4 ಆಗ ನಮ್ಮ ರಕ್ಷಕನಾದ ದೇವರ ಪ್ರೀತಿಯೂ ಕೃಪೆಯೂ ಪ್ರತ್ಯಕ್ಷವಾದವು. 5 ಆತನು ನಮ್ಮನ್ನು ರಕ್ಷಿಸಿದ್ದು ತನ್ನ ಕರುಣೆಯಿಂದಲೇ ಹೊರತು ನೀತಿವಂತರಾಗಲು ನಾವು ಮಾಡಿದ ಒಳ್ಳೆಯ ಕಾರ್ಯಗಳಿಂದಲ್ಲ. ಆತನು ನಮ್ಮನ್ನು ಸ್ನಾನದ ಮೂಲಕವಾಗಿಯೂ ಪವಿತ್ರಾತ್ಮನ ಮೂಲಕವಾಗಿಯೂ ಹೊಸಬರನ್ನಾಗಿ ಮಾಡಿ ರಕ್ಷಿಸಿದನು. 6 ನಮ್ಮ ರಕ್ಷಕನಾದ ಯೇಸುಕ್ರಿಸ್ತನ ಮೂಲಕ ದೇವರು ಪವಿತ್ರಾತ್ಮನನ್ನು ನಮ್ಮ ಮೇಲೆ ಸಮೃದ್ಧಿಯಾಗಿ ಸುರಿಸಿದನು. 7 ದೇವರು ತನ್ನ ಕೃಪೆಯಿಂದ ನಮ್ಮನ್ನು ನೀತಿವಂತರನ್ನಾಗಿ ಮಾಡಿದನು. ನಾವು ನಿತ್ಯಜೀವವನ್ನು ಪಡೆಯುವಂತೆ ಆತನು ನಮಗೆ ಪವಿತ್ರಾತ್ಮನನ್ನು ಕೊಟ್ಟನು. ಅದೇ ನಮ್ಮ ನಿರೀಕ್ಷೆ. 8 ಈ ಬೋಧನೆಯು ಸತ್ಯವಾದದ್ದು.
ನೀನು ಜನರಿಗೆ ಈ ಸಂಗತಿಗಳನ್ನು ಒತ್ತಿಹೇಳಬೇಕೆಂದು ನಾನು ಅಪೇಕ್ಷಿಸುತ್ತೇನೆ. ಆಗ, ದೇವರಲ್ಲಿ ನಂಬಿಕೆ ಇಟ್ಟಿರುವವರು ಜಾಗರೂಕರಾಗಿದ್ದು ತಮ್ಮ ಜೀವನದಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡುವರು. ಇವು ಎಲ್ಲರಿಗೂ ಹಿತಕರವಾಗಿವೆ ಮತ್ತು ಪ್ರಯೋಜನಕರವಾಗಿವೆ.
9 ಬುದ್ಧಿಯಿಲ್ಲದೆ ಕುತರ್ಕ ಮಾಡುವ ಜನರಿಂದ, ನಿರರ್ಥಕವಾದ ವಂಶಾವಳಿಗಳ ಚರಿತ್ರೆಯ ಬಗ್ಗೆ ಮಾತನಾಡುವ ಜನರಿಂದ, ಮೋಶೆಯು ಬರೆದಿರುವ ಧರ್ಮಶಾಸ್ತ್ರದಲ್ಲಿರುವ ನಿಯಮಗಳ ಬಗ್ಗೆ ತೊಂದರೆಯನ್ನು ಉಂಟುಮಾಡುವ ಮತ್ತು ವಾಗ್ವಾದ ಮಾಡುವ ಜನರಿಂದ ದೂರವಾಗಿರು. ಅವುಗಳಿಗೆ ಯಾವ ಬೆಲೆಯೂ ಇಲ್ಲ, ಅವುಗಳಿಂದ ಜನರಿಗೆ ಯಾವ ಪ್ರಯೋಜನವೂ ಇಲ್ಲ. 10 ಯಾವನಾದರೂ ಭೇದ ಹುಟ್ಟಿಸುತ್ತಿದ್ದರೆ, ಅವನಿಗೆ ಎಚ್ಚರಿಕೆ ನೀಡು. ಅವನಿನ್ನೂ ಮುಂದುವರಿಸಿದರೆ ಮತ್ತೊಮ್ಮೆ ಎಚ್ಚರಿಕೆ ನೀಡು. ಆದರೂ ಅವನು ಕೇಳದೆಹೋದರೆ ಅವನ ಸಹವಾಸವನ್ನು ತೊರೆದುಬಿಡು. 11 ಅಂಥವನು ಕೆಟ್ಟವನೂ ಪಾಪಪೂರಿತನೂ ಆಗಿದ್ದಾನೆ ಎಂಬುದು ನಿನಗೂ ತಿಳಿದಿದೆ. ಅವನು ತನ್ನ ಸ್ವಕಾರ್ಯಗಳಿಂದಲೇ ತಪ್ಪಿತಸ್ಥನೆಂಬ ತೀರ್ಪನ್ನು ಹೊಂದಿದ್ದಾನೆ.
ನೆನಪಿನಲ್ಲಿಡಬೇಕಾದ ಕೆಲವು ಸಂಗತಿಗಳು
12 ನಾನು ನಿನ್ನ ಬಳಿಗೆ ಅರ್ತೆಮನನ್ನು ಮತ್ತು ತುಖಿಕನನ್ನು ಕಳುಹಿಸಿದಾಗ, ನಿಕೊಪೊಲಿಯಲ್ಲಿರುವ ನನ್ನ ಬಳಿಗೆ ಬರಲು ಆದಷ್ಟು ಪ್ರಯತ್ನಿಸು. ನಾನು ಈ ಚಳಿಗಾಲವನ್ನು ಅಲ್ಲಿಯೇ ಕಳೆಯಬೇಕೆಂದಿದ್ದೇನೆ. 13 ವಕೀಲನಾದ ಜೇನನೂ ಅಪೊಲ್ಲೋಸನೂ ಅಲ್ಲಿಂದ ಪ್ರಯಾಣ ಮಾಡುತ್ತಾರೆ. ಅವರ ಪ್ರಯಾಣಕ್ಕೆ ನಿನ್ನಿಂದ ಸಾಧ್ಯವಾದಷ್ಟು ಸಹಾಯಮಾಡು. ಅವರಿಗೆ ಯಾವ ಕೊರತೆಯೂ ಆಗದಂತೆ ನೋಡಿಕೊ. 14 ನಮ್ಮ ಜನರು ತಮ್ಮ ಜೀವನವು ನಿಷ್ಪ್ರಯೋಜಕವಾಗದಂತೆ ಪರೋಪಕಾರವನ್ನು ಕಲಿತುಕೊಂಡು ಕೊರತೆಯಲ್ಲಿರುವವರಿಗೆ ಉಪಕಾರ ಮಾಡಬೇಕು.
15 ಇಲ್ಲಿ ನನ್ನೊಡನೆ ಇರುವ ಜನರೆಲ್ಲರೂ ನಿನಗೆ ವಂದನೆ ಹೇಳುತ್ತಾರೆ. ಕ್ರಿಸ್ತನಲ್ಲಿ ನಂಬಿಕೆ ಇಟ್ಟವರಾಗಿದ್ದು ನಮ್ಮನ್ನು ಪ್ರೀತಿಸುವವರಿಗೆಲ್ಲ ನಮ್ಮ ವಂದನೆ ತಿಳಿಸು.
ದೇವರ ಕೃಪೆಯು ನಿಮ್ಮೊಂದಿಗಿರಲಿ.
ಇಸ್ರೇಲರು ಧನಿಕರಾದುದರಿಂದ ವಿಗ್ರಹಾರಾಧನೆಗೆ ನಡಿಸಲ್ಪಟ್ಟರು
10 ಇಸ್ರೇಲ್ ಅಧಿಕ ಹಣ್ಣುಗಳನ್ನು
ಕೊಡುವ ದ್ರಾಕ್ಷಿಬಳ್ಳಿಯಂತಿದೆ.
ಆದರೆ ಇಸ್ರೇಲ್ ಅಭಿವೃದ್ಧಿ ಹೊಂದಿದ ಹಾಗೆ
ಅವರು ಸುಳ್ಳುದೇವರುಗಳನ್ನು ಪೂಜಿಸಲು ಹೆಚ್ಚುಹೆಚ್ಚು ವೇದಿಕೆಗಳನ್ನು ಕಟ್ಟಿದರು.
ಅವರ ದೇಶವು ಉತ್ತಮವಾಗುತ್ತಾ ಬರುತ್ತಿರುವಾಗ
ಅವರು ತಮ್ಮ ಸುಳ್ಳುದೇವರುಗಳಿಗೆ ಉತ್ತಮ ಕಲ್ಲುಗಳಿಂದ ವೇದಿಕೆಗಳನ್ನು ಕಟ್ಟಲು ಪ್ರಾರಂಭಿಸಿದರು.
2 ಇಸ್ರೇಲ್ ಜನರು ದೇವರನ್ನು ಮೋಸಪಡಿಸಲು ನೋಡಿದರು.
ಆದರೆ ಈಗ ಅವರು ತಮ್ಮ ತಪ್ಪನ್ನು ಒಪ್ಪಿಕೊಳ್ಳಬೇಕಾಗುತ್ತದೆ.
ಯೆಹೋವನು ಅವರು ಯಜ್ಞವೇದಿಕೆಗಳನ್ನು ನಾಶಮಾಡುವನು.
ಅವರ ಸ್ಮಾರಕಕಲ್ಲುಗಳನ್ನು ಆತನು ಪುಡಿ ಮಾಡುವನು.
ಇಸ್ರೇಲರ ದುಷ್ಟ ಯೋಜನೆಗಳು
3 ಈಗ ಇಸ್ರೇಲರು ಹೇಳುವುದೇನೆಂದರೆ, “ನಮಗೆ ರಾಜನಿಲ್ಲ, ನಾವು ಯೆಹೋವನನ್ನು ಗೌರವಿಸುವದಿಲ್ಲ. ಆತನ ಅರಸನು ನಮಗೇನೂ ಮಾಡಲು ಸಾಧ್ಯವಿಲ್ಲ.”
4 ಅವರು ವಾಗ್ದಾನ ಮಾಡುತ್ತಾರೆ. ಆದರೆ ಅದು ಕೇವಲ ಸುಳ್ಳು, ಅವರು ಕೊಟ್ಟ ಮಾತನ್ನು ನಡಿಸುವದಿಲ್ಲ. ಬೇರೆ ದೇಶಗಳವರೊಂದಿಗೆ ಅವರು ಒಪ್ಪಂದ ಮಾಡುತ್ತಾರೆ. ದೇವರು ಆ ಒಪ್ಪಂದವನ್ನು ಒಪ್ಪುವುದಿಲ್ಲ. ಅವರ ನ್ಯಾಯಾಧೀಶರು ಉತ್ತ ಹೊಲದಲ್ಲಿ ಬೆಳೆಯುವ ವಿಷದ ಹಣಜಿಯಂತಿದ್ದಾರೆ.
5 ಸಮಾರ್ಯದ ಜನರು ಬೇತಾವೆನಿನಲ್ಲಿ ಬಸವನನ್ನು ಆರಾಧಿಸುತ್ತಾರೆ. ಆ ಜನರು ನಿಜವಾಗಿಯೂ ಅಳುವರು. ಅವರ ಪೂಜಾರಿಗಳೂ ಅಳುವರು, ಯಾಕೆಂದರೆ ಅವರ ಸುಂದರವಾದ ವಿಗ್ರಹವು ಇಲ್ಲವಾಗುವದು. ಅದು ಒಯ್ಯಲ್ಪಡುವುದು. 6 ಅಶ್ಶೂರದ ಅರಸನಿಗೆ ಬಹುಮಾನವಾಗಿ ಅದು ಒಯ್ಯಲ್ಪಡುವುದು; ಅವನು ಇಸ್ರೇಲರ ನಾಚಿಕೆಗೆಟ್ಟ ವಿಗ್ರಹವನ್ನು ಇಟ್ಟುಕೊಳ್ಳುವನು. ಇಸ್ರೇಲ್ ತನ್ನ ವಿಗ್ರಹಕ್ಕಾಗಿ ನಾಚಿಕೆಪಡುವದು. 7 ಸಮಾರ್ಯದ ಸುಳ್ಳುದೇವರು ನಾಶಮಾಡಲ್ಪಡುವದು. ಅದು ಮರದ ಹಲಗೆಯ ತುಂಡೊಂದು ನೀರಿನ ಮೇಲೆ ತೇಲುವಂತಿರುವದು.
8 ಇಸ್ರೇಲ್ ಪಾಪ ಮಾಡುತ್ತಾ ಇನ್ನೂ ಹೆಚ್ಚಾಗಿ ಎತ್ತರವಾದ ಸ್ಥಳಗಳನ್ನು ಕಟ್ಟಿತು. ಆವೆನ್‌ನಲ್ಲಿರುವ ಎತ್ತರವಾದ ಸ್ಥಳ ನಾಶಮಾಡಲ್ಪಡುವದು. ಅದರ ಮೇಲೆ ಮುಳ್ಳುಗಿಡಗಳೂ ಹಣಜಿಗಳೂ ಬೆಳೆಯುವವು. ಆಗ ಅವರು ಪರ್ವತಗಳಿಗೆ, “ನಮ್ಮನ್ನು ಮುಚ್ಚಿರಿ” ಎಂದೂ ಬೆಟ್ಟಗಳಿಗೆ, “ನಮ್ಮ ಮೇಲೆ ಬೀಳಿರಿ” ಎಂದೂ ಹೇಳುವರು.
ಇಸ್ರೇಲ್ ತನ್ನ ಪಾಪದ ಪ್ರತಿಫಲವನ್ನು ಅನುಭವಿಸುವದು
9 “ಇಸ್ರೇಲೇ, ನೀನು ಗಿಬ್ಯದವರ ಕಾಲದಿಂದಲೂ ಪಾಪ ಮಾಡುತ್ತಲೇ ಬಂದಿರುವೆ. (ಆ ಜನರು ಅಲ್ಲಿ ಪಾಪವನ್ನು ಮಾಡುತ್ತಲೇ ಇದ್ದಾರೆ.) ಗಿಬ್ಯದ ಆ ದುಷ್ಟ ಜನರನ್ನು ಯುದ್ಧವು ಹಿಡಿದುಕೊಳ್ಳುವುದು. 10 ಅವರನ್ನು ಶಿಕ್ಷಿಸಲು ನಾನು ಬರುವೆನು. ಸೈನ್ಯಗಳು ಒಟ್ಟಾಗಿ ಅವರಿಗೆ ವಿರುದ್ಧವಾಗಿ ಬರುವವು. ಅವರು ಬಂದು ಇಸ್ರೇಲರನ್ನು ಅವರಿಬ್ಬರ ಪಾಪಗಳಿಗಾಗಿ ಶಿಕ್ಷಿಸುವರು.
11 “ಎಫ್ರಾಯೀಮ್ ಹತೋಟಿಗೆ ಬಂದು ಕಣ ತುಳಿಯಲು ಇಷ್ಟಪಡುವ ಪ್ರಾಯದ ಹಸುವಿನಂತಿದೆ. ಆಕೆಯ ಕುತ್ತಿಗೆಗೆ ನಾನು ಒಂದು ಒಳ್ಳೆಯ ನೊಗವನ್ನಿಡುವೆನು. ಎಫ್ರಾಯೀಮನಿಗೆ ನಾನು ಹಗ್ಗದಿಂದ ಬಂಧಿಸುವೆನು. ಆಗ ಯೆಹೂದವು ಭೂಮಿಯನ್ನು ಉಳುವದು. ಯಾಕೋಬನು ಮಣ್ಣಿನ ಗೆಡ್ಡೆಗಳನ್ನು ಒಡೆದು ಪುಡಿಮಾಡುವನು.”
12 ನೀನು ಒಳ್ಳೆಯತನವನ್ನು ಬಿತ್ತಿದರೆ ಪ್ರೀತಿಯೆಂಬ ಬೆಳೆಯನ್ನು ಕೊಯ್ಯುವೆ. ನಿನ್ನ ನೆಲವನ್ನು ಉಳುಮೆ ಮಾಡು. ಆಗ ನೀನು ಯೆಹೋವನೊಂದಿಗೆ ಬೆಳೆಯನ್ನು ಕೊಯ್ಯುವೆ. ಆತನು ಬರುವನು. ಮತ್ತು ಆತನ ಒಳ್ಳೆಯತನವು ನಿನ್ನ ಮೇಲೆ ಮಳೆಯಂತೆ ಸುರಿಯುವದು.
13 ಆದರೆ ನೀನು ದುಷ್ಟತನವನ್ನು ಬಿತ್ತಿ ಸಂಕಟವೆಂಬ ಬೆಳೆಯನ್ನು ಕೊಯ್ದಿರುವೆ. ನಿನ್ನ ಸುಳ್ಳಿನ ಪ್ರತಿಫಲವನ್ನು ತಿಂದಿರುವೆ. ಯಾಕೆಂದರೆ ನೀನು ನಿನ್ನ ಸಾಮರ್ಥ್ಯ ಮತ್ತು ನಿನ್ನ ಸೈನ್ಯದ ಮೇಲೆ ಭರವಸವಿಟ್ಟಿರುವೆ. 14 ನಿನ್ನ ಸೈನ್ಯಕ್ಕೆ ರಣರಂಗದ ಸ್ವರವು ಕೇಳಿಸುವದು. ನಿನ್ನ ಕೋಟೆಗಳೆಲ್ಲವೂ ಕೆಡವಲ್ಪಡುವದು. ಬೇತ್‌ಅರ್ಬೇಲನ್ನು ಶಲ್ಮಾನನು ಕೆಡವಿದಂತೆ ಆಗುವದು. ಆ ಯುದ್ಧದ ಸಮಯದಲ್ಲಿ ತಾಯಿಯು ತನ್ನ ಮಕ್ಕಳೊಂದಿಗೆ ಕೊಲ್ಲಲ್ಪಡುವಳು. 15 ಆ ದಿನದಲ್ಲಿ ಬೇತೇಲು ನಿನಗೆ ಆ ದುರ್ಗತಿಯನ್ನು ತರುವದು. ಯಾಕೆಂದರೆ ನೀನು ಅನೇಕ ಕೆಟ್ಟಕಾರ್ಯಗಳನ್ನು ಮಾಡಿರುವೆ. ಅದು ಪ್ರಾರಂಭವಾದಾಗ ಇಸ್ರೇಲಿನ ಅರಸನು ಸಂಪೂರ್ಣವಾಗಿ ನಾಶವಾಗುವನು.
ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.
129 ನನ್ನ ಜೀವಮಾನವೆಲ್ಲಾ ನನಗೆ ಅನೇಕ ಶತ್ರುಗಳಿದ್ದರು.
ಇಸ್ರೇಲೇ, ಆ ಶತ್ರುಗಳ ಬಗ್ಗೆ ನಮಗೆ ಹೇಳು.
2 ನನ್ನ ಜೀವಮಾನವೆಲ್ಲಾ ನನಗೆ ಅನೇಕ ಶತ್ರುಗಳಿದ್ದರು.
ಆದರೆ ಅವರೆಂದೂ ಗೆಲ್ಲಲಿಲ್ಲ.
3 ನನ್ನ ಬೆನ್ನಿನ ಮೇಲೆ ಹೊಡೆದು
ಹೊಲವನ್ನು ಉಳುವಂತೆ ಗಾಯ ಮಾಡಿದರು.
4 ಆದರೆ ನೀತಿಸ್ವರೂಪನಾದ ಯೆಹೋವನು ಹಗ್ಗಗಳನ್ನು ಕತ್ತರಿಸಿ
ಆ ದುಷ್ಟರಿಂದ ನನ್ನನ್ನು ಬಿಡುಗಡೆ ಮಾಡಿದನು.
5 ಚೀಯೋನನ್ನು ದ್ವೇಷಿಸಿದ ಜನರು ಸೋತುಹೋದರು.
ಅವರು ಹೋರಾಟವನ್ನು ನಿಲ್ಲಿಸಿ ಓಡಿಹೋದರು.
6 ಅವರು ಮನೆಯ ಮೇಲೆ ಬೆಳೆಯುವ ಹುಲ್ಲಿನಂತಿದ್ದರು.
ಅದು ಬೆಳೆಯುವುದಕ್ಕಿಂತ ಮೊದಲೇ ಒಣಗಿಹೋಗುವುದು.
7 ಅದನ್ನು ಕೊಯ್ಯುವವನ ಹಿಡಿಯೂ ತುಂಬುವುದಿಲ್ಲ
ಸಿವುಡು ಕಟ್ಟುವವನ ಉಡಿಲೂ ತುಂಬುವುದಿಲ್ಲ.
8 ಅವರ ಸಮೀಪದಲ್ಲಿ ನಡೆದುಹೋಗುವವರು,
“ಯೆಹೋವನು ನಿಮ್ಮನ್ನು ಆಶೀರ್ವದಿಸಲಿ” ಎಂದು ಹೇಳುವುದಿಲ್ಲ.
“ಯೆಹೋವನ ಹೆಸರಿನಲ್ಲಿ ನಿಮಗೆ ಆಶೀರ್ವಾದವಾಗಲಿ”
ಎಂದು ಜನರು ಅವರನ್ನು ಆಶೀರ್ವದಿಸುವುದಿಲ್ಲ.
ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.
130 ಯೆಹೋವನೇ, ಮಹಾ ಇಕ್ಕಟ್ಟಿನಲ್ಲಿ ಸಿಕ್ಕಿಕೊಂಡಿದ್ದೇನೆ;
ಸಹಾಯಕ್ಕಾಗಿ ನಿನ್ನನ್ನೇ ಕೂಗಿಕೊಳ್ಳುತ್ತಿದ್ದೇನೆ.
2 ನನ್ನ ಒಡೆಯನೇ, ನನಗೆ ಕಿವಿಗೊಡು.
ನನ್ನ ಮೊರೆಯನ್ನು ಆಲಿಸು.
3 ಯೆಹೋವನೇ, ನೀನು ಮನುಷ್ಯರನ್ನು ಅವರೆಲ್ಲರ ಪಾಪಗಳಿಗೆ ತಕ್ಕಂತೆ ದಂಡಿಸಿದರೆ
ಒಬ್ಬನೂ ಜೀವಂತವಾಗಿ ಉಳಿಯಲಾರ.
4 ಯೆಹೋವನೇ, ನಿನ್ನ ಜನರನ್ನು ಕ್ಷಮಿಸು.
ಆಗ, ನಿನ್ನನ್ನು ಆರಾಧಿಸುವುದಕ್ಕೆ ಜನರಿರುವರು.
5 ನಾನು ಯೆಹೋವನ ಸಹಾಯಕ್ಕಾಗಿ ಕಾಯುತ್ತಿದ್ದೇನೆ.
ನನ್ನ ಪ್ರಾಣವು ಆತನಿಗಾಗಿ ಕಾದುಕೊಂಡಿರುವುದು.
ಆತನು ನುಡಿಯನ್ನು ನಂಬಿಕೊಂಡಿದ್ದೇನೆ.
6 ನಾನು ನನ್ನ ಒಡೆಯನಿಗಾಗಿ ಮುಂಜಾನೆಗೋಸ್ಕರ ಎದುರುನೋಡುತ್ತಿರುವ
ಕಾವಲುಗಾರರಂತೆ ನಿರೀಕ್ಷಿಸುತ್ತಿದ್ದೇನೆ.
7 ಇಸ್ರೇಲೇ, ಯೆಹೋವನಲ್ಲಿ ಭರವಸವಿಡು.
ಆತನಲ್ಲಿ ಮಾತ್ರ ನಿಜವಾದ ಪ್ರೀತಿಯಿದೆ.
ಆತನು ನಮ್ಮನ್ನು ಯಾವಾಗಲೂ ರಕ್ಷಿಸುವನು.
8 ಆತನೇ ಇಸ್ರೇಲರ ಎಲ್ಲಾ ಪಾಪಗಳನ್ನು ಕ್ಷಮಿಸುವನು.
ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.
131 ಯೆಹೋವನೇ, ನನ್ನ ಹೃದಯದಲ್ಲಿ ಗರ್ವವಿಲ್ಲ.
ನನ್ನ ಕಣ್ಣುಗಳಲ್ಲಿ ಸೊಕ್ಕಿಲ್ಲ.
ಮಹಾಕಾರ್ಯಗಳನ್ನಾಗಲಿ ಅಸಾಧ್ಯ ಕಾರ್ಯಗಳನ್ನಾಗಲಿ
ಮಾಡಲು ನಾನು ಪ್ರಯತ್ನಿಸುವುದಿಲ್ಲ.
2 ನಾನು ಸಮಾಧಾನದಿಂದಿರುವೆ.
ನನ್ನ ಆತ್ಮವು ನೆಮ್ಮದಿಯಿಂದಿದೆ.
ತನ್ನ ತಾಯಿಯ ತೋಳುಗಳಲ್ಲಿ ಸಂತೃಪ್ತಿಯಾಗಿರುವ ಮಗುವಿನಂತೆ
ನನ್ನ ಆತ್ಮವು ಸಮಾಧಾನದಿಂದಲೂ ನೆಮ್ಮದಿಯಿಂದಲೂ ಇದೆ.
3 ಇಸ್ರೇಲೇ, ಯೆಹೋವನಲ್ಲಿ ಭರವಸವಿಡು.
ಈಗಲೂ ಆತನಲ್ಲಿ ಭರವಸವಿಡು.
ಎಂದೆಂದಿಗೂ ಆತನಲ್ಲಿ ಭರವಸವಿಡು!
Kannada Holy Bible: Easy-to-Read Version. All rights reserved. © 1997 Bible League International