M’Cheyne Bible Reading Plan
ಅಹಾಜನು ಯೆಹೂದದ ರಾಜನಾದನು
16 ರೆಮಲ್ಯನ ಮಗನಾದ ಪೆಕಹನು ಇಸ್ರೇಲಿನ ರಾಜನಾಗಿದ್ದ ಹದಿನೇಳನೆಯ ವರ್ಷದಲ್ಲಿ ಯೋತಾಮನ ಮಗನಾದ ಅಹಾಜನು ಯೆಹೂದದ ರಾಜನಾದನು. 2 ಅಹಾಜನು ರಾಜನಾದಾಗ ಅವನಿಗೆ ಇಪ್ಪತ್ತು ವರ್ಷ ವಯಸ್ಸಾಗಿತ್ತು. ಅಹಾಜನು ಜೆರುಸಲೇಮನ್ನು ಹದಿನಾರು ವರ್ಷ ಆಳಿದನು. ಯೆಹೋವನ ದೃಷ್ಟಿಯಲ್ಲಿ ಒಳ್ಳೆಯದಾಗಿದ್ದ ಕಾರ್ಯಗಳನ್ನು ಅಹಾಜನು ಮಾಡಲಿಲ್ಲ. ಅವನ ಪೂರ್ವಿಕನಾದ ದಾವೀದನು ದೇವರಿಗೆ ವಿಧೇಯನಾಗಿದ್ದನು; ಆದರೆ ಅಹಾಜನು ವಿಧೇಯನಾಗಲಿಲ್ಲ. 3 ಅಹಾಜನು ಇಸ್ರೇಲಿನ ರಾಜರುಗಳಂತೆ ಜೀವಿಸಿದನು. ಅವನು ತನ್ನ ಮಗನನ್ನೇ ಬೆಂಕಿಯಲ್ಲಿ ಆಹುತಿಕೊಟ್ಟನು. ಇಸ್ರೇಲರು ದೇಶಕ್ಕೆ ಬಂದ ಕಾಲದಲ್ಲಿ ಯೆಹೋವನು ಬಲಾತ್ಕಾರದಿಂದ ಓಡಿಸಿದ ಜನಾಂಗಗಳ ಅಸಹ್ಯ ಪಾಪಗಳನ್ನು ಅವನು ಅನುಸರಿಸಿದನು. 4 ಅಹಾಜನು ಉನ್ನತಸ್ಥಳಗಳಲ್ಲಿ ಮತ್ತು ಬೆಟ್ಟಗಳ ಮೇಲೆ ಮತ್ತು ಹಸಿರು ಮರಗಳ ಕೆಳಗೆ ಯಜ್ಞಗಳನ್ನು ಅರ್ಪಿಸಿದನು ಮತ್ತು ಧೂಪವನ್ನು ಸುಟ್ಟನು.
5 ಅರಾಮ್ಯರ ರಾಜನಾದ ರೆಚೀನನು ಮತ್ತು ರೆಮಲ್ಯನ ಮಗನೂ ಇಸ್ರೇಲಿನ ರಾಜನೂ ಆದ ಪೆಕಹನು ಜೆರುಸಲೇಮಿನ ವಿರುದ್ಧ ಯುದ್ಧಕ್ಕೆ ಬಂದರು. ರೆಚೀನ ಮತ್ತು ಪೆಕಹ ಅಹಾಜನಿಗೆ ಮುತ್ತಿಗೆ ಹಾಕಿದರು. ಆದರೆ ಅವನನ್ನು ಸೋಲಿಸಲಾಗಲಿಲ್ಲ. 6 ಆ ಸಮಯಲ್ಲಿ ಅರಾಮ್ಯರ ರಾಜನಾದ ರೆಚೀನನು ಏಲತ್ ಪಟ್ಟಣವನ್ನು ಅರಾಮ್ಯಕ್ಕೆ ಸೇರಿಸಿಕೊಂಡನು. ರೆಚೀನನು ಏಲತ್ ಪಟ್ಟಣದಲ್ಲಿ ವಾಸಿಸುತ್ತಿದ್ದ ಯೆಹೂದ್ಯರನ್ನೆಲ್ಲಾ ಓಡಿಸಿದನು. ಅರಾಮ್ಯರು ಬಂದು ಏಲತ್ ಪಟ್ಟಣದಲ್ಲಿ ನೆಲೆಸಿದರು; ಅವರು ಇಂದಿನವರೆಗೂ ಅಲ್ಲಿಯೇ ವಾಸಿಸುತ್ತಿದ್ದಾರೆ.
7 ಅಹಾಜನು ಅಶ್ಶೂರದ ರಾಜನಾದ ತಿಗ್ಲತ್ಪಿಲೆಸರನ ಬಳಿಗೆ ಸಂದೇಶಕರನ್ನು ಕಳುಹಿಸಿದನು. ಆ ಸಂದೇಶವೇನೆಂದರೆ: “ನಾನು ನಿನ್ನ ಸೇವಕ. ನಾನು ನಿನಗೆ ಮಗನಂತಿದ್ದೇನೆ. ನೀನು ಬಂದು, ಅರಾಮ್ಯರ ರಾಜನಿಂದ ಮತ್ತು ಇಸ್ರೇಲಿನ ರಾಜನಿಂದ ನನ್ನನ್ನು ರಕ್ಷಿಸು. ಅವರು ನನ್ನ ವಿರುದ್ಧ ಯುದ್ಧಕ್ಕೆ ಬಂದಿದ್ದಾರೆ.” 8 ಅಹಾಜನು ಯೆಹೋವನ ಆಲಯದಲ್ಲಿದ್ದ ಮತ್ತು ರಾಜನ ಅರಮನೆಯಲ್ಲಿದ್ದ ಬೆಳ್ಳಿಬಂಗಾರಗಳನ್ನು ತೆಗೆದುಕೊಂಡು ಅಶ್ಶೂರದ ರಾಜನಿಗೆ ಕಾಣಿಕೆಯಾಗಿ ಕಳುಹಿಸಿದನು. 9 ಅಶ್ಶೂರದ ರಾಜನು ಅಹಾಜನ ಮಾತುಗಳನ್ನು ಕೇಳಿ ದಮಸ್ಕದ ವಿರುದ್ಧ ಯುದ್ಧಕ್ಕೆ ಹೊರಟು ಆ ನಗರಕ್ಕೆ ಮುತ್ತಿಗೆಹಾಕಿ, ದಮಸ್ಕದ ಜನರನ್ನು ಸೆರೆಹಿಡಿದುಕೊಂಡು ಕೀರ್‌ಗೆ ಒಯ್ದನು. ಅವನು ರೆಚೀನನನ್ನು ಕೊಂದುಹಾಕಿದನು.
10 ರಾಜನಾದ ಅಹಾಜನು ಅಶ್ಶೂರದ ರಾಜನಾದ ತಿಗ್ಲತ್ಪಿಲೆಸರನನ್ನು ಭೇಟಿಮಾಡಲು ದಮಸ್ಕಕ್ಕೆ ಹೋದನು. ಅಹಾಜನು ದಮಸ್ಕದಲ್ಲಿದ್ದ ಯಜ್ಞವೇದಿಕೆಯನ್ನು ನೋಡಿದನು. ರಾಜನಾದ ಅಹಾಜನು ಯಜ್ಞವೇದಿಕೆಯ ವಿನ್ಯಾಸವನ್ನು ಮತ್ತು ಮಾದರಿಯನ್ನು ಯಾಜಕನಾದ ಊರೀಯನಿಗೆ ಕಳುಹಿಸಿದನು. 11 ಆಗ ಯಾಜಕನಾದ ಊರೀಯನು, ದಮಸ್ಕದಿಂದ ರಾಜನಾದ ಅಹಾಜನು ತನಗೆ ಕಳುಹಿಸಿದ ಯಜ್ಞವೇದಿಕೆಯ ಮಾದರಿಯಲ್ಲೇ ಮತ್ತೊಂದು ಯಜ್ಞವೇದಿಕೆಯೊಂದನ್ನು ನಿರ್ಮಿಸಿದನು. ಹೀಗೆ ರಾಜನಾದ ಅಹಾಜನು ದಮಸ್ಕದಿಂದ ಹಿಂತಿರುಗುವುದಕ್ಕೆ ಮೊದಲೇ ಊರೀಯನು ಯಜ್ಞವೇದಿಕೆಯೊಂದನ್ನು ನಿರ್ಮಿಸಿದ್ದನು.
12 ರಾಜನು ದಮಸ್ಕದಿಂದ ಹಿಂದಿರುಗಿಬಂದು ಯಜ್ಞವೇದಿಕೆಯನ್ನು ನೋಡಿದನು. ಅವನು ಯಜ್ಞಗಳನ್ನು ಅದರ ಮೇಲೆ ಅರ್ಪಿಸಿದನು. 13 ಅಹಾಜನು ಯಜ್ಞವೇದಿಕೆಯ ಮೇಲೆ ಸರ್ವಾಂಗಹೋಮವನ್ನು ಮತ್ತು ಧಾನ್ಯನೈವೇದ್ಯವನ್ನು ಅರ್ಪಿಸಿದನು; ಪಾನನೈವೇದ್ಯವನ್ನು ಸುರಿಸಿದನು; ಸಮಾಧಾನಯಜ್ಞಕ್ಕಾಗಿ ವಧಿಸಿದ ಪಶುಗಳ ರಕ್ತವನ್ನು ಯಜ್ಞವೇದಿಕೆಯ ಮೇಲೆ ಚಿಮಿಕಿಸಿದನು.
14 ಅಹಾಜನು ದೇವಾಲಯದ ಎದುರಿನಲ್ಲಿ ಯೆಹೋವನ ಸನ್ನಿಧಿಯಲ್ಲಿದ್ದ ತಾಮ್ರದ ಯಜ್ಞವೇದಿಕೆಯನ್ನು ತೆಗೆಸಿದನು. ಈ ತಾಮ್ರದ ಯಜ್ಞವೇದಿಕೆಯು ಅಹಾಜನ ಯಜ್ಞವೇದಿಕೆ ಮತ್ತು ದೇವಾಲಯದ ನಡುವೆ ಇದ್ದಿತು. ಅಹಾಜನು ತಾಮ್ರದ ಯಜ್ಞವೇದಿಕೆಯನ್ನು ತನ್ನ ಸ್ವಂತ ಯಜ್ಞವೇದಿಕೆಯ ಉತ್ತರದಿಕ್ಕಿನಲ್ಲಿಡಿಸಿದನು. 15 ಅಹಾಜನು ಯಾಜಕನಾದ ಊರೀಯನಿಗೆ, “ಈ ದೇಶದ ಜನರೆಲ್ಲರೂ ಪ್ರಾತಃಕಾಲದಲ್ಲಿ ಸರ್ವಾಂಗಹೋಮವನ್ನೂ ಸಾಯಂಕಾಲದಲ್ಲಿ ಧಾನ್ಯನೈವೇದ್ಯವನ್ನೂ ಮತ್ತು ಪಾನದ್ರವ್ಯಗಳನ್ನೂ ಸಮರ್ಪಿಸಲು ಮಹಾವೇದಿಕೆಯನ್ನು ಬಳಸಬೇಕು; ಸರ್ವಾಂಗಹೋಮಕ್ಕಾಗಿ ಮತ್ತು ಸಮಾಧಾನಯಜ್ಞಕ್ಕಾಗಿ ವಧಿಸುವ ಪಶುಗಳ ರಕ್ತವನ್ನು ಈ ಮಹಾವೇದಿಕೆಯ ಮೇಲೆ ಚಿಮುಕಿಸಿ. ಆದರೆ ನಾನು ದೇವರಿಂದ ದೈವೋತ್ತರಗಳನ್ನು ಕೇಳಲು ತಾಮ್ರವೇದಿಕೆಯನ್ನು ಉಪಯೋಗಿಸುತ್ತೇನೆ” ಎಂದು ಹೇಳಿದನು. 16 ರಾಜನಾದ ಅಹಾಜನು ಆಜ್ಞಾಪಿಸಿದಂತೆಯೇ ಯಾಜಕನಾದ ಊರೀಯನು ಮಾಡಿದನು.
17 ನಂತರ ರಾಜನಾದ ಅಹಾಜನು ಪೀಠಗಳ ಪಟ್ಟಿಗಳನ್ನು ಕತ್ತರಿಸಿದನು. ಅವುಗಳ ಮೇಲಿದ್ದ ಗಂಗಾಳಗಳನ್ನು ತೆಗೆದಿಟ್ಟನು; ಸಮುದ್ರವೆಂಬ ತೊಟ್ಟಿಯನ್ನು ತಾಮ್ರದ ಹೋರಿಗಳಿಂದ ಕೆಳಗಿಳಿಸಿ ಕಲ್ಲುಕಟ್ಟೆಯ ಮೇಲಿಟ್ಟನು. 18 ಅಹಾಜನು ಸಬ್ಬತ್ ದಿನಕ್ಕಾಗಿ ಕಟ್ಟಿದ ಮಂಟಪವನ್ನು ಬದಲಾಯಿಸಿದನು. ಕೆಲಸಗಾರರು ಆಲಯದ ಒಳಗೆ ಇದನ್ನು ನಿರ್ಮಿಸಿದ್ದರು. ಅಹಾಜನು ರಾಜನಿಗಾಗಿ ಇದ್ದ ಹೊರಭಾಗದ ಬಾಗಿಲನ್ನು ಬದಲಾಯಿಸಿದನು. ಅಹಾಜನು ದೇವಾಲಯದಿಂದ ಇವುಗಳನ್ನೆಲ್ಲಾ ಅಶ್ಶೂರದ ರಾಜನ[a] ದೆಸೆಯಿಂದ ಬದಲಾಯಿಸಿದನು.
19 “ಯೆಹೂದದ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಅಹಾಜನು ಮಾಡಿದ ಇತರ ಮಹಾಕಾರ್ಯಗಳನ್ನು ಬರೆಯಲಾಗಿದೆ. 20 ಅಹಾಜನು ಸತ್ತಮೇಲೆ ಅವನನ್ನು ಅವನ ಪೂರ್ವಿಕರ ಬಳಿ ದಾವೀದನಗರದಲ್ಲಿ ಸಮಾಧಿಮಾಡಿದರು. ಅಹಾಜನ ಮಗನಾದ ಹಿಜ್ಕೀಯನು ಅವನ ನಂತರ ಹೊಸ ರಾಜನಾದನು.
ಸತ್ಯಬೋಧನೆಯನ್ನು ಅನುಸರಿಸಿರಿ
2 ಸತ್ಯಬೋಧನೆಯನ್ನು ಅನುಸರಿಸಲು ಜನರು ಮಾಡಬೇಕಾದ ಕಾರ್ಯಗಳನ್ನು ಅವರಿಗೆ ನೀನು ತಿಳಿಸು. 2 ವೃದ್ಧರಾದವರು, ಜಿತೇಂದ್ರಿಯರೂ ಗಂಭೀರ ಸ್ವಭಾವದವರೂ ವಿವೇಕವುಳ್ಳವರೂ ಆಗಿರಬೇಕೆಂದು ತಿಳಿಸು. ಅವರು ತಮ್ಮ ನಂಬಿಕೆಯಲ್ಲಿ, ಪ್ರೀತಿಯಲ್ಲಿ ಮತ್ತು ತಾಳ್ಮೆಯಲ್ಲಿ ಬಲವಾಗಿರಬೇಕೆಂದು ತಿಳಿಸು.
3 ಅಂತೆಯೇ ವೃದ್ಧ ಸ್ತ್ರೀಯರು ಸಭ್ಯರಾಗಿ ವರ್ತಿಸಬೇಕು. ಅವರು ಚಾಡಿ ಹೇಳಬಾರದು; ಮದ್ಯಾಸಕ್ತರಾಗಿರಬಾರದು. ಅವರು ಒಳ್ಳೆಯದನ್ನೇ ಉಪದೇಶಿಸಬೇಕು. 4 ಅವರು ಗೃಹಿಣಿಯರಿಗೆ, “ನಿಮ್ಮ ಗಂಡಂದಿರನ್ನು ಮತ್ತು ಮಕ್ಕಳನ್ನು ಪ್ರೀತಿಸಿರಿ. 5 ಜ್ಞಾನವುಳ್ಳವರಾಗಿರಿ, ಪರಿಶುದ್ಧರಾಗಿರಿ, ನಿಮ್ಮ ಮನೆಕೆಲಸವನ್ನು ನೋಡಿಕೊಳ್ಳಿರಿ, ದಯೆಯುಳ್ಳವರಾಗಿರಿ, ನಿಮ್ಮ ಗಂಡಂದಿರಿಗೆ ವಿಧೇಯರಾಗಿರಿ” ಎಂದು ಉಪದೇಶಿಸಬೇಕು. ಆಗ ದೇವರು ನಮಗೆ ದಯಪಾಲಿಸಿದ ಬೋಧನೆಯನ್ನು ಟೀಕಿಸಲು ಯಾರಿಗೂ ಸಾಧ್ಯವಾಗುವುದಿಲ್ಲ.
6 ಇದೇ ರೀತಿಯಲ್ಲಿ ಯುವಕರಿಗೆ ಜ್ಞಾನಿಗಳಾಗಿರಲು ತಿಳಿಸು. 7 ನೀನು ಒಳ್ಳೆಯ ಕಾರ್ಯಗಳನ್ನು ಮಾಡುತ್ತಾ ಯುವಕರಿಗೆ ಸರ್ವವಿಧದಲ್ಲಿಯೂ ಮಾದರಿಯಾಗಿರಬೇಕು. ನಿನ್ನ ಉಪದೇಶದಲ್ಲಿ ಯಥಾರ್ಥತೆಯನ್ನು ಮತ್ತು ಗಂಭೀರತೆಯನ್ನು ತೋರಿಸಿಕೊಡು. 8 ನೀನು ಸತ್ಯವನ್ನೇ ಮಾತನಾಡು. ಆಗ ನಿನ್ನನ್ನು ಟೀಕಿಸಲು ಸಾಧ್ಯವಿಲ್ಲದೆ ನಿನ್ನ ವಿರೋಧಿಗಳು ಅಪಮಾನಕ್ಕೆ ಗುರಿಯಾಗುವರು.
9 ಗುಲಾಮರಿಗೆ ಈ ಸಂಗತಿಗಳನ್ನು ತಿಳಿಸು: ಅವರು ತಮ್ಮ ಯಜಮಾನರಿಗೆ ಯಾವಾಗಲೂ ವಿಧೇಯರಾಗಿದ್ದು ಅವರನ್ನು ಮೆಚ್ಚಿಸಲು ಪ್ರಯತ್ನಿಸಬೇಕು. ಅವರು ತಮ್ಮ ಯಜಮಾನರ ಜೊತೆಯಲ್ಲಿ ವಾಗ್ವಾದ ಮಾಡಬಾರದು; 10 ಅವರು ವಸ್ತುಗಳನ್ನು ಕದಿಯಬಾರದು; ಮತ್ತು ತಾವು ನಂಬಿಗಸ್ತರೆಂಬುದನ್ನು ತೋರಿಸಿಕೊಡಬೇಕು. ಗುಲಾಮರು ಹೀಗೆ ನಡೆದುಕೊಳ್ಳುವುದಾದರೆ, ಅವರು ಮಾಡುವ ಪ್ರತಿಯೊಂದು ಕೆಲಸದಲ್ಲಿಯೂ ನಮ್ಮ ರಕ್ಷಕನಾದ ದೇವರ ಉಪದೇಶವು ಶ್ರೇಷ್ಠವಾದದ್ದೆಂದು ತೋರ್ಪಡಿಸಲು ಸಾಧ್ಯವಾಗುತ್ತದೆ.
11 ಎಲ್ಲರಿಗೂ ರಕ್ಷಣೆಯನ್ನು ಕೊಡುವ ದೇವರ ಕೃಪೆಯು ಪ್ರತ್ಯಕ್ಷವಾಗಿದೆ. 12 ನಾವು ದೇವರಿಗೆ ವಿರುದ್ಧವಾಗಿ ಜೀವಿಸದಂತೆಯೂ ಲೋಕದ ಜನರು ಮಾಡಲಪೇಕ್ಷಿಸುವ ಕೆಟ್ಟಕಾರ್ಯಗಳನ್ನು ಮಾಡದಂತೆಯೂ ಅದು ತಡೆಯುತ್ತದೆ. ನಾವು ದೇವರ ಸೇವೆಯನ್ನು ಮಾಡುತ್ತಿದ್ದೇವೆ ಎಂಬುದನ್ನು ತೋರಿಸುವುದಕ್ಕಾಗಿ ನೀತಿವಂತರಾಗಿಯೂ ಜ್ಞಾನಿಗಳಾಗಿಯೂ ಲೋಕದಲ್ಲಿ ಈಗ ಬಾಳಬೇಕೆಂದು ಅದು ಬೋಧಿಸುತ್ತದೆ. 13 ನಮ್ಮ ಮಹಾದೇವರು ಮತ್ತು ರಕ್ಷಕನಾದ ಯೇಸುಕ್ರಿಸ್ತನ ಪ್ರತ್ಯಕ್ಷತೆಯನ್ನು ಎದುರುನೋಡುತ್ತಿರುವ ನಾವು ಆ ರೀತಿಯಲ್ಲಿಯೇ ಬಾಳಬೇಕು. ಆತನೇ ನಮ್ಮ ಮಹಾ ನಿರೀಕ್ಷೆಯಾಗಿದ್ದಾನೆ. ಆತನು ತನ್ನ ಮಹಿಮೆಯೊಂದಿಗೆ ಬರುತ್ತಾನೆ. 14 ಆತನು ನಮಗೋಸ್ಕರ ತನ್ನನ್ನು ಒಪ್ಪಿಸಿಕೊಟ್ಟನು. ನಮ್ಮನ್ನು ಪಾಪದಿಂದ ಬಿಡುಗಡೆ ಮಾಡಲು ಮತ್ತು ಯಾವಾಗಲೂ ಒಳ್ಳೆಯ ಕಾರ್ಯಗಳನ್ನೇ ಮಾಡ ಬಯಸುವ ತನ್ನ ಪರಿಶುದ್ಧ ಜನರನ್ನಾಗಿ ಮಾಡಲು ಆತನು ಮರಣ ಹೊಂದಿದನು.
15 ಈ ಸಂಗತಿಗಳನ್ನು ಜನರಿಗೆ ತಿಳಿಸಲು ನಿನಗೆ ಸಂಪೂರ್ಣ ಅಧಿಕಾರವಿದೆ. ಜನರನ್ನು ಬಲಗೊಳಿಸಲು ಈ ಅಧಿಕಾರವನ್ನು ಬಳಸಿಕೊಂಡು, ಅವರು ಮಾಡಬೇಕಾದುದನ್ನು ತಿಳಿಸು. ನೀನು ಮುಖ್ಯನಾದವನಲ್ಲವೆಂದು ಯಾರೂ ನಿನ್ನನ್ನು ಪರಿಗಣಿಸದಂತೆ ನೋಡಿಕೊ.
ಸೆರೆವಾಸದ ದುಃಖ
9 ಇಸ್ರೇಲೇ, ಇತರ ಜನಾಂಗಗಳವರಂತೆ ಹಬ್ಬವನ್ನು ಆಚರಿಸಬೇಡ, ಉಲ್ಲಾಸಗೊಳ್ಳಬೇಡ. ನೀನು ವೇಶ್ಯೆಯಂತೆ ವರ್ತಿಸಿ ನಿನ್ನ ದೇವರನ್ನು ತೊರೆದುಬಿಟ್ಟೆ. ಪ್ರತಿಯೊಂದು ಕಣದ ಮೇಲೆ ಲೈಂಗಿಕ ಪಾಪವನ್ನು ನಡೆಸಿದಿ. 2 ಆದರೆ ಆ ಕಣದಲ್ಲಿ ತೂರಿದ ಧಾನ್ಯವು ಇಸ್ರೇಲಿಗೆ ಸಾಕಾಗುವಷ್ಟು ಆಹಾರವನ್ನು ಒದಗಿಸದು. ಇಸ್ರೇಲಿಗೆ ಬೇಕಾಗುವಷ್ಟು ದ್ರಾಕ್ಷಾರಸವಿರದು.
3 ಯೆಹೋವನ ದೇಶದಲ್ಲಿ ಇಸ್ರೇಲು ವಾಸಿಸದು. ಎಫ್ರಾಯೀಮ್ ಈಜಿಪ್ಟಿಗೆ ಹಿಂದಿರುಗುವದು. ಅಶ್ಶೂರ್ಯದಲ್ಲಿ ಅವರು ತಮಗೆ ನಿಷೇಧಿಸಲ್ಪಟ್ಟ ಆಹಾರವನ್ನು ತಿನ್ನುವರು. 4 ಇಸ್ರೇಲರು ಯೆಹೋವನಿಗೆ ದ್ರಾಕ್ಷಾರಸದ ಸಮರ್ಪಣೆ ಮಾಡುವದಿಲ್ಲ. ಆತನಿಗೆ ಯಜ್ಞವನ್ನರ್ಪಿಸುವದಿಲ್ಲ. ಅವರ ಯಜ್ಞಗಳು ಸಮಾಧಿಗಳಲ್ಲಿ ಉಣ್ಣುವ ಆಹಾರದಂತಿರುವದು. ಅದನ್ನು ಯಾವನಾದರೂ ಉಂಡಲ್ಲಿ ಅವನು ಅಶುದ್ಧನಾಗುವನು. ಅವರ ರೊಟ್ಟಿಯು ದೇವರ ಆಲಯದೊಳಗೆ ಇಡಲ್ಪಡುವದಿಲ್ಲ. ಅವರೇ ಅದನ್ನು ತಿನ್ನಬೇಕು. 5 ಯೆಹೋವನ ಹಬ್ಬಗಳನ್ನಾಗಲಿ ವಿಶ್ರಾಂತಿ ದಿನವನ್ನಾಗಲಿ ಅವರಿಗೆ ಆಚರಿಸಲಾಗದು.
6 ಶತ್ರುಗಳು ಇಸ್ರೇಲರಿಂದ ಎಲ್ಲವನ್ನು ದೋಚಿಕೊಂಡು ಹೋದುದರಿಂದ ಇಸ್ರೇಲರು ಬಿಟ್ಟು ಹೊರಟರು. ಈಜಿಪ್ಟ್ ಅವರನ್ನು ಒಟ್ಟಿಗೆ ಸೇರಿಸಿಕೊಳ್ಳುವುದು. ಮೆಂಫಿಸ್ ಪಟ್ಟಣವು ಅವರನ್ನು ಹೂಳಿಡುವದು. ಅವರ ಬೆಳ್ಳಿಯ ನಿಕ್ಷೇಪದ ಮೇಲೆ ಕಳೆ ಬೆಳೆಯುವದು. ಇಸ್ರೇಲರು ವಾಸಿಸಿದ್ದಲ್ಲಿ ಮುಳ್ಳಿನ ಗಿಡಗಳು ಬೆಳೆಯುವವು.
ನಿಜ ಪ್ರವಾದಿಗಳನ್ನು ಇಸ್ರೇಲ್ ನಿರಾಕರಿಸಿದರು
7 ಪ್ರವಾದಿಯು ಹೀಗೆ ಹೇಳುತ್ತಾನೆ, “ಇಸ್ರೇಲೇ, ಇದನ್ನು ಕಲಿತುಕೋ. ಶಿಕ್ಷೆಯ ಸಮಯವು ಬಂದದೆ. ನೀನು ಮಾಡಿದ ದುಷ್ಟತನಕ್ಕೆ ಪ್ರತಿಯಾಗಿ ದೊರಕಬೇಕಾದ ಸಂಬಳ (ಫಲ)ದ ಸಮಯವು ಬಂತು.” ಆದರೆ ಇಸ್ರೇಲ್ ಜನರು ಹೀಗೆ ಹೇಳುತ್ತಾರೆ: “ಪ್ರವಾದಿಯು ಮೂರ್ಖನಾಗಿದ್ದಾನೆ. ದೇವರಾತ್ಮನುಳ್ಳ ಈ ಮನುಷ್ಯನು ಹುಚ್ಚನಾಗಿದ್ದಾನೆ.” ಪ್ರವಾದಿಯು ಹೀಗೆ ಹೇಳಿದನು, “ನಿನ್ನ ಕೆಟ್ಟ ಪಾಪಗಳಿಗಾಗಿ ನೀನು ಶಿಕ್ಷಿಸಲ್ಪಡುವೆ. ನೀನು ಹಗೆ ಮಾಡಿದುದಕ್ಕೆ ನೀನು ಶಿಕ್ಷೆ ಅನುಭವಿಸುವೆ.” 8 ದೇವರೂ ಪ್ರವಾದಿಯೂ ಕಾವಲುಗಾರರಂತೆ ಎಫ್ರಾಯೀಮನ್ನು ಕಾಪಾಡುತ್ತಿದ್ದಾರೆ. ಆದರೆ ದಾರಿಯಲ್ಲಿ ಅನೇಕ ಉರುಲುಗಳಿವೆ. ಜನರು ಪ್ರವಾದಿಯನ್ನು ಹಗೆ ಮಾಡುತ್ತಾರೆ. ದೇವರ ಆಲಯದಲ್ಲಿಯೂ ಅವನನ್ನು ಹಗೆ ಮಾಡುತ್ತಾರೆ.
9 ಗಿಬ್ಯದ ಕಾಲದಂತೆ ಇಸ್ರೇಲರು ನಾಶನದ ಕಡೆಗೆ ಆಳವಾಗಿ ಇಳಿದಿದ್ದಾರೆ. ಯೆಹೋವನು ಇಸ್ರೇಲರ ಪಾಪಗಳನ್ನು ತನ್ನ ನೆನಪಿಗೆ ತಂದುಕೊಂಡು ಅವರನ್ನು ಶಿಕ್ಷಿಸುವನು.
ವಿಗ್ರಹಾರಾಧನೆಯಿಂದ ಇಸ್ರೇಲ್ ನಾಶವಾಗುತ್ತಿದೆ
10 “ನನಗೆ ಇಸ್ರೇಲ್ ಜನಾಂಗವು ಮರುಭೂಮಿಯಲ್ಲಿ ದೊರಕಿದ ದ್ರಾಕ್ಷಿಹಣ್ಣಿನಂತಿತ್ತು. ನಿನ್ನ ಪೂರ್ವಿಕರು ಫಲಕಾಲದ ಆರಂಭದಲ್ಲಿ ದೊರೆತ ಅಂಜೂರದ ಹಣ್ಣಿನಂತಿದ್ದರು. ಆದರೆ ಅವರು ಬಾಳ್‌ಪೆಗೋರಿಗೆ ಬಂದಾಗ ಅವರು ಬದಲಾದರು. ಅವರು ಕೊಳೆತುಹೋದ ವಸ್ತುವಿನಂತೆ ಆದರು. ಅವರು ಪ್ರೀತಿಸಿದ ಭಯಂಕರ ವಿಗ್ರಹಗಳಂತೆ ಆದರು.
ಇಸ್ರೇಲರಿಗೆ ಸಂತಾನವೃದ್ಧಿಯಾಗದು
11 “ಎಫ್ರಾಯೀಮ್ಯರ ಮಹಿಮೆಯು ಪಕ್ಷಿಯಂತೆ ಹಾರಿ ಹೋಗುವದು. ಅವರಲ್ಲಿ ಗರ್ಭಿಣಿಯರು ಇರುವದಿಲ್ಲ. ಹೆರುವದೂ ಇಲ್ಲ. ಶಿಶುಗಳೂ ಇರುವದಿಲ್ಲ. 12 ಒಂದುವೇಳೆ ಇಸ್ರೇಲರಿಗೆ ಮಕ್ಕಳು ಹುಟ್ಟಿದರೂ ಪ್ರಯೋಜನವಿಲ್ಲ. ಯಾಕೆಂದರೆ ಆ ಮಕ್ಕಳನ್ನು ಅವರಿಂದ ತೆಗೆದುಬಿಡುವೆನು. ನಾನು ಅವರನ್ನು ತೊರೆದುಬಿಡುವೆನು. ಆಗ ಅವರಿಗೆ ಸಂಕಟದ ಮೇಲೆ ಸಂಕಟವು ಪ್ರಾಪ್ತಿಯಾಗುವದು.”
13 ಎಫ್ರಾಯೀಮನು ತನ್ನ ಮಕ್ಕಳನ್ನು ಉರುಲಿನ ಕಡೆಗೆ ನಡೆಸುತ್ತಿರುವದನ್ನು ನಾನು ನೋಡುತ್ತಿದ್ದೇನೆ. ಕೊಲೆಗಡುಕನೆದುರು ಎಫ್ರಾಯೀಮನು ತನ್ನ ಮಕ್ಕಳನ್ನು ತರುತ್ತಿದ್ದಾನೆ. 14 ಯೆಹೋವನೇ, ನಿನ್ನ ಇಚ್ಛೆಯ ಪ್ರಕಾರ ಅವರಿಗೆ ಕೊಡು. ಮಗುವನ್ನು ಹೆರಲಾರದ ಗರ್ಭವನ್ನು ಅವರಿಗೆ ಕೊಡು. ಮೊಲೆಹಾಲು ಉಣಿಸಲಾರದ ಸ್ತನಗಳನ್ನು ಅವರಿಗೆ ಕೊಡು.
15 ಅವರ ದುಷ್ಟತನವೆಲ್ಲಾ ಗಿಲ್ಗಾಲಿನಲ್ಲಿದೆ.
ಅಲ್ಲಿಯೇ ನಾನು ಅವರನ್ನು ದ್ವೇಷಿಸಲು ಪ್ರಾರಂಭಿಸಿದೆನು.
ಅವರು ಮಾಡುವ ದುಷ್ಕೃತ್ಯಗಳ ದೆಸೆಯಿಂದ
ನಾನು ಅವರನ್ನು ನನ್ನ ಮನೆಯಿಂದ ಹೊರಡಿಸುವೆನು.
ಇನ್ನು ಮುಂದೆ ಅವರನ್ನು ನಾನು ಪ್ರೀತಿಸುವುದಿಲ್ಲ.
ಅವರ ನಾಯಕರು ನನಗೆ ವಿರುದ್ಧವಾಗಿ ದಂಗೆ ಎದ್ದವರು; ನನ್ನ ವಿರುದ್ಧವಾಗಿ ತಿರುಗಿಬಿದ್ದರು.
16 ಎಫ್ರಾಯೀಮ್ ಶಿಕ್ಷಿಸಲ್ಪಡುವುದು.
ಅದರ ಬೇರು ಒಣಗುತ್ತಲಿದೆ.
ಇನ್ನು ಅವರಿಗೆ ಮಕ್ಕಳಾಗದು.
ಒಂದುವೇಳೆ ಮಕ್ಕಳಾದಲ್ಲಿ
ಅವರ ದೇಹದಿಂದ ಬರುವ ಆ ಅಮೂಲ್ಯ ಶಿಶುವನ್ನು ನಾನು ಸಾಯಿಸುವೆನು.
17 ಆ ಜನರು ನನ್ನ ದೇವರ ಮಾತನ್ನು ಕೇಳಲೊಲ್ಲರು.
ಆದ್ದರಿಂದ ಆತನು ಅವರಿಗೆ ಕಿವಿಗೊಡುವದಿಲ್ಲ;
ಅವರು ದೇಶದೇಶಗಳಲ್ಲಿ ವಾಸಸ್ಥಾನಗಳಿಲ್ಲದೆ ಅಲೆಯುವರು.
ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.
126 ಯೆಹೋವನು ನಮ್ಮನ್ನು ಸೆರೆಯಿಂದ ತಿರಿಗಿ
ಚೀಯೋನಿಗೆ ಬರಮಾಡಿದಾಗ ನಾವು ಕನಸು ಕಂಡವರಂತಿದ್ದೆವು!
2 ನಾವು ನಗುತ್ತಿದ್ದೆವು; ಹರ್ಷಗೀತೆಗಳನ್ನು ಹಾಡುತ್ತಿದ್ದೆವು.
“ಯೆಹೋವನು ಇಸ್ರೇಲರಿಗೆ ಮಹತ್ಕಾರ್ಯಗಳನ್ನು ಮಾಡಿದ್ದಾನೆ”
ಎಂದು ಅನ್ಯ ಜನಾಂಗಗಳು ಮಾತಾಡಿಕೊಂಡರು.
3 ಹೌದು, ನಾವು ಸಂತೋಷದಿಂದ್ದೇವೆ ಯಾಕೆಂದರೆ ಯೆಹೋವನು ನಮಗೋಸ್ಕರ ಮಹತ್ಕಾರ್ಯಗಳನ್ನು ಮಾಡಿದನು.
4 ಯೆಹೋವನೇ, ಬತ್ತಿಹೋದ ತೊರೆಗಳು ನೀರಿನಿಂದ
ಮತ್ತೆ ತುಂಬಿ ಹರಿಯುವಂತೆ ನಮ್ಮನ್ನು ಬಿಡಿಸು.
5 ಅಳುತ್ತಾ ಬೀಜವನ್ನು ಬಿತ್ತುವವನು
ಹರ್ಷದಿಂದ ಕೊಯ್ಯುವನು.
6 ಅಳುತ್ತಾ ಹೊಲಕ್ಕೆ ಬೀಜವನ್ನು ಹೊತ್ತುಕೊಂಡು ಹೋಗುವವನು
ಹರ್ಷದಿಂದ ಸಿವುಡುಗಳನ್ನು ಹೊತ್ತುಕೊಂಡು ಬರುವನು!
ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ. ರಚನೆಗಾರ: ಸೊಲೋಮೋನ.
127 ಯೆಹೋವನು ಮನೆಯನ್ನು ಕಟ್ಟದಿದ್ದರೆ,
ಕಟ್ಟುವವರ ಸಮಯವೆಲ್ಲಾ ವ್ಯರ್ಥ.
ಯೆಹೋವನು ಪಟ್ಟಣವನ್ನು ಕಾಯದಿದ್ದರೆ,
ಕಾವಲುಗಾರರ ಸಮಯವೆಲ್ಲಾ ವ್ಯರ್ಥ.
2 ಕೇವಲ ಹೊಟ್ಟೆಪಾಡಿಗಾಗಿ ಮುಂಜಾನೆಯಲ್ಲೇ ಎದ್ದು
ರಾತ್ರಿಯವರೆಗೂ ದುಡಿಯುವುದು ಕೇವಲ ವ್ಯರ್ಥ.
ಯಾಕೆಂದರೆ ದೇವರು ತನ್ನ ಪ್ರಿಯರಿಗೆ
ಆಹಾರವನ್ನು ನಿದ್ರೆಯಲ್ಲೂ ದಯಪಾಲಿಸುವನು.
3 ಮಕ್ಕಳು ಯೆಹೋವನ ಕೊಡುಗೆ.
ತಾಯಿಯ ಗರ್ಭಫಲವು ಆತನ ಬಹುಮಾನ.
4 ಯೌವನಸ್ಥನ ಗಂಡುಮಕ್ಕಳು ಸೈನಿಕನ ಬತ್ತಳಿಕೆಯಲ್ಲಿರುವ ಬಾಣಗಳಂತಿದ್ದಾರೆ.
5 ತನ್ನ ಬತ್ತಳಿಕೆಯಲ್ಲಿ ಗಂಡುಮಕ್ಕಳನ್ನು ತುಂಬುವವನು ಭಾಗ್ಯವಂತನಾಗಿದ್ದಾನೆ.
ಅವನಿಗೆ ಸೋಲೇ ಇಲ್ಲ.
ಅವನ ಗಂಡುಮಕ್ಕಳು ಅವನ ಪರವಾಗಿಯೂ ಅವನ ಶತ್ರುಗಳ ವಿರೋಧವಾಗಿಯೂ ನ್ಯಾಯಸ್ಥ್ಥಾನಗಳಲ್ಲಿ ವಾದಿಸುವರು.
ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.
128 ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿ
ಆತನ ಚಿತ್ತಾನುಸಾರವಾಗಿ ಜೀವಿಸುವವರೆಲ್ಲರು ಧನ್ಯರಾಗಿದ್ದಾರೆ.
2 ನೀನು ದುಡಿದು ಸಂಪಾದಿಸಿದ್ದನ್ನು ನೀನೇ ಅನುಭವಿಸುವೆ.
ನೀನು ಸಂತೋಷದಿಂದಿರುವೆ.
ನಿನಗೆ ಒಳ್ಳೆಯದಾಗುವುದು.
3 ಮನೆಯಲ್ಲಿರುವ ನಿನ್ನ ಹೆಂಡತಿ ಫಲಭರಿತವಾದ ದ್ರಾಕ್ಷಿಬಳ್ಳಿಯಂತಿರುವಳು.
ಊಟದ ಮೇಜಿನ ಸುತ್ತಲೂ ಕುಳಿತುಕೊಳ್ಳುವ ನಿನ್ನ ಮಕ್ಕಳು, ನೀನು ನೆಟ್ಟ ಆಲಿವ್ ಮರಗಳಂತಿರುವರು.
4 ಯೆಹೋವನು ತನ್ನಲ್ಲಿ ಭಯಭಕ್ತಿಯುಳ್ಳವರನ್ನು ಹೀಗೆಯೇ ಆಶೀರ್ವದಿಸುವನು.
5 ಯೆಹೋವನು ನಿನ್ನನ್ನು ಚೀಯೋನಿನಿಂದ ಆಶೀರ್ವದಿಸಲಿ.
ನಿನ್ನ ಜೀವಮಾನವೆಲ್ಲಾ ನೀನು ಜೆರುಸಲೇಮಿನಲ್ಲಿ ಆಶೀರ್ವಾದಗಳನ್ನು ಅನುಭವಿಸುವಂತಾಗಲಿ.
6 ನೀನು ಜೀವದಿಂದಿದ್ದು ನಿನ್ನ ಮೊಮ್ಮಕ್ಕಳನ್ನು ಕಾಣುವಂತಾಗಲಿ.
ಇಸ್ರೇಲಿನಲ್ಲಿ ಶಾಂತಿ ನೆಲೆಸಿರಲಿ.
Kannada Holy Bible: Easy-to-Read Version. All rights reserved. © 1997 Bible League International