Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
2 ರಾಜರುಗಳು 15

ಯೆಹೂದದಲ್ಲಿ ಅಜರ್ಯನ ಆಳ್ವಿಕೆ

15 ಯಾರೊಬ್ಬಾಮನು ಇಸ್ರೇಲಿನ ರಾಜನಾಗಿದ್ದ ಇಪ್ಪತ್ತೇಳನೆಯ ವರ್ಷದಲ್ಲಿ ಅಮಚ್ಯನ ಮಗನಾದ ಅಜರ್ಯನು ಯೆಹೂದದ ರಾಜನಾದನು. ಅಜರ್ಯನು ಆಳಲಾರಂಭಿಸಿದಾಗ ಅವನಿಗೆ ಹದಿನಾರು ವರ್ಷ ವಯಸ್ಸಾಗಿತ್ತು. ಅವನು ಜೆರುಸಲೇಮಿನಲ್ಲಿ ಐವತ್ತೆರಡು ವರ್ಷ ಆಳಿದನು. ಜೆರುಸಲೇಮಿನ ಯೆಕೊಲ್ಯ ಎಂಬ ಹೆಸರಿನವಳು ಅಜರ್ಯನ ತಾಯಿ. ಅಜರ್ಯನು ತನ್ನ ತಂದೆಯಾದ ಅಮಚ್ಯನಂತೆ ಯೆಹೋವನ ದೃಷ್ಟಿಗೆ ಯೋಗ್ಯವಾದ ಕಾರ್ಯಗಳನ್ನು ಮಾಡಿದನು. ಅಜರ್ಯನು ತನ್ನ ತಂದೆಯಾದ ಅಮಚ್ಯನು ಮಾಡಿದ ಕಾರ್ಯಗಳನ್ನೇ ಅನುಸರಿಸಿದನು. ಆದರೆ ಅವನು ಉನ್ನತಸ್ಥಳಗಳನ್ನು ನಾಶಗೊಳಿಸಲಿಲ್ಲ. ಈ ಪೂಜಾಸ್ಥಳಗಳಲ್ಲಿ ಜನರು ಇನ್ನೂ ಯಜ್ಞಗಳನ್ನು ಅರ್ಪಿಸುತ್ತಿದ್ದರು ಮತ್ತು ಧೂಪವನ್ನು ಸುಡುತ್ತಿದ್ದರು.

ರಾಜನಾದ ಅಜರ್ಯನು ಕುಷ್ಠರೋಗ ಪೀಡಿತನಾಗುವಂತೆ ಯೆಹೋವನು ಮಾಡಿದನು. ಅವನು ಸಾಯುವವರೆಗೂ ಕುಷ್ಠರೋಗಿಯಾಗಿಯೇ ಇದ್ದನು. ಅಜರ್ಯನು ಪ್ರತ್ಯೇಕವಾದ ಮನೆಯಲ್ಲಿ ವಾಸಿಸುತ್ತಿದ್ದನು. ರಾಜನ ಮಗನಾದ ಯೋತಾಮನು ರಾಜನ ಅರಮನೆಯನ್ನು ನೋಡಿಕೊಳ್ಳುತ್ತಿದ್ದನು ಮತ್ತು ಜನರನ್ನು ಪಾಲಿಸುತ್ತಿದ್ದನು.

“ಯೆಹೂದದ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಅಜರ್ಯನು ಮಾಡಿದ ಇತರ ಮಹಾಕಾರ್ಯಗಳನ್ನು ಕುರಿತು ಬರೆಯಲಾಗಿದೆ. ಅಜರ್ಯನು ಸತ್ತಮೇಲೆ ಅವನನ್ನು ಅವನ ಪೂರ್ವಿಕರ ಬಳಿ, ದಾವೀದ ನಗರದಲ್ಲಿ ಸಮಾಧಿಮಾಡಲಾಯಿತು. ಅಜರ್ಯನ ನಂತರ ಅವನ ಮಗನಾದ ಯೋತಾಮನು ಹೊಸ ರಾಜನಾದನು.

ಜೆಕರ್ಯನು ಇಸ್ರೇಲನ್ನು ಸ್ವಲ್ಪ ಕಾಲ ಆಳುವನು

ಯಾರೊಬ್ಬಾಮನ ಮಗನಾದ ಜೆಕರ್ಯನು ಇಸ್ರೇಲಿನ ಸಮಾರ್ಯದಲ್ಲಿ ಆರು ತಿಂಗಳ ಕಾಲ ಆಳಿದನು. ಅದು ಯೆಹೂದದ ರಾಜನಾಗಿದ್ದ ಅಜರ್ಯನ ಆಳ್ವಿಕೆಯ ಮೂವತ್ತೆಂಟನೆಯ ವರ್ಷವಾಗಿತ್ತು. ಯೆಹೋವನು ಕೆಟ್ಟದ್ದೆಂದು ಹೇಳಿದ ಕಾರ್ಯಗಳನ್ನು ಜೆಕರ್ಯನು ಮಾಡಿದನು. ಅವನ ಪೂರ್ವಿಕರು ಮಾಡಿದಂತೆಯೇ ಅವನೂ ಮಾಡಿದನು. ಇಸ್ರೇಲರನ್ನು ಪಾಪಮಾಡುವಂತೆ ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನು ಮಾಡಿದಂತಹ ಪಾಪಕೃತ್ಯಗಳನ್ನು ಅವನು ನಿಲ್ಲಿಸಲಿಲ್ಲ.

10 ಯಾಬೇಷನ ಮಗನಾದ ಶಲ್ಲೂಮನು ಜೆಕರ್ಯನ ವಿರುದ್ಧವಾಗಿ ಸಂಚುಗಳನ್ನು ಮಾಡಿದನು. ಶಲ್ಲೂಮನು ಜೆಕರ್ಯನನ್ನು ಜನರ ಮುಂದೆ ಕೊಂದುಹಾಕಿ ಹೊಸ ರಾಜನಾದನು. 11 “ಇಸ್ರೇಲಿನ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಜೆಕರ್ಯನು ಮಾಡಿದ ಇತರ ಕಾರ್ಯಗಳನ್ನೆಲ್ಲ ಬರೆಯಲಾಗಿದೆ. 12 ಹೀಗೆ ಯೆಹೋವನ ವಾಕ್ಯವು ನೆರವೇರಿತು. ಯೇಹುವಿನ ಸಂತತಿಯವರು ನಾಲ್ಕನೆಯ ತಲೆಮಾರಿನವರೆಗೆ ಇಸ್ರೇಲಿನ ರಾಜರಾಗಿರುತ್ತಾರೆ ಎಂದು ಯೆಹೋವನು ಅವನಿಗೆ ಮೊದಲೇ ತಿಳಿಸಿದ್ದನು.

ಶಲ್ಲೂಮನು ಇಸ್ರೇಲನ್ನು ಸ್ವಲ್ಪ ಕಾಲ ಆಳುವನು

13 ಯೆಹೂದದ ರಾಜನಾದ ಉಜ್ಜೀಯನ ಮೂವತ್ತೊಂಭತ್ತನೆಯ ವರ್ಷದ ಆಳ್ವಿಕೆಯಲ್ಲಿ ಯಾಬೇಷನ ಮಗನಾದ ಶಲ್ಲೂಮನು ಇಸ್ರೇಲಿನ ರಾಜನಾದನು. ಶಲ್ಲೂಮನು ಸಮಾರ್ಯದಲ್ಲಿ ಒಂದು ತಿಂಗಳು ಆಳಿದನು.

14 ಗಾದಿಯ ಮಗನಾದ ಮೆನಹೇಮನು ತಿರ್ಚದಿಂದ ಸಮಾರ್ಯಕ್ಕೆ ಬಂದನು. ಮೆನಹೇಮನು ಯಾಬೇಷನ ಮಗನಾದ ಶಲ್ಲೂಮನನ್ನು ಕೊಂದುಹಾಕಿದನು. ನಂತರ ಮೆನಹೇಮನು ಅವನ ನಂತರ ಹೊಸ ರಾಜನಾದನು.

15 “ಇಸ್ರೇಲಿನ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಶಲ್ಲೂಮನು ಮಾಡಿದ ಕಾರ್ಯಗಳನ್ನೂ ಜೆಕರ್ಯನ ವಿರುದ್ಧವಾಗಿ ಅವನು ಯೋಜಿಸಿದ ಉಪಾಯಗಳನ್ನೂ ಬರೆಯಲಾಗಿದೆ.

ಇಸ್ರೇಲಿನಲ್ಲಿ ಮೆನಹೇಮನ ಆಳ್ವಿಕೆ

16 ಶಲ್ಲೂಮನು ಸತ್ತನಂತರ, ಮೆನಹೇಮನು ತಿಪ್ಸಹುವನ್ನು ಮತ್ತು ಅದರ ಸುತ್ತಲಿನ ಪ್ರದೇಶವನ್ನು ಸೋಲಿಸಿದನು. ಜನರು ನಗರದ ಬಾಗಿಲನ್ನು ಅವನಿಗೆ ತೆರೆಯಲು ನಿರಾಕರಿಸಿದರು. ಆದ್ದರಿಂದ ಮೆನಹೇಮನು ಅವರನ್ನು ಸೋಲಿಸಿ ಆ ನಗರದಲ್ಲಿದ್ದ ಗರ್ಭಿಣಿ ಸ್ತ್ರೀಯರ ಹೊಟ್ಟೆಗಳನ್ನು ಸೀಳಿಸಿದನು.

17 ಅಜರ್ಯನು ಯೆಹೂದದ ರಾಜನಾಗಿದ್ದ ಮೂವತ್ತೊಂಭತ್ತನೆಯ ವರ್ಷದಲ್ಲಿ ಗಾದಿಯ ಮಗನಾದ ಮೆನಹೇಮನು ಇಸ್ರೇಲಿನ ರಾಜನಾದನು. ಮೆನಹೇಮನು ಸಮಾರ್ಯದಲ್ಲಿ ಹತ್ತು ವರ್ಷಗಳ ಕಾಲ ಆಳಿದನು. 18 ಯೆಹೋವನು ಕೆಟ್ಟದ್ದೆಂದು ಹೇಳಿದ ಕಾರ್ಯಗಳನ್ನು ಮೆನಹೇಮನು ಮಾಡಿದನು. ಇಸ್ರೇಲರನ್ನು ಪಾಪಕ್ಕೆ ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಪಾಪಕೃತ್ಯಗಳನ್ನು ಮೆನಹೇಮನು ಮುಂದುವರಿಸಿದನು.

19 ಅಶ್ಶೂರ್ ದೇಶದ ರಾಜನಾದ ಪೂಲನು ಇಸ್ರೇಲಿನ ವಿರುದ್ಧ ಯುದ್ಧಕ್ಕೆ ಬಂದನು. ಮೆನಹೇಮನು ಪೂಲನಿಗೆ ಮೂವತ್ನಾಲ್ಕು ಕಿಲೋಗ್ರಾಂ ಬೆಳ್ಳಿಯನ್ನು ಕೊಟ್ಟನು. ಪೂಲನು ಮೆನಹೇಮನಿಗೆ ಬೆಂಬಲವನ್ನು ನೀಡಲು ಮತ್ತು ಮೆನಹೇಮನ ರಾಜ್ಯವನ್ನು ಬಲಪಡಿಸಲು ಹೀಗೆ ಮಾಡಿದನು: 20 ಶ್ರೀಮಂತರು ಮತ್ತು ಅಧಿಕಾರವುಳ್ಳ ಜನರು ತೆರಿಗೆಯನ್ನು ನೀಡುವಂತೆ ಮಾಡಿ, ಮೆನಹೇಮನು ಈ ಹಣವನ್ನು ಸಂಗ್ರಹಿಸಿದನು. ಮೆನಹೇಮನು ಪ್ರತಿಯೊಬ್ಬ ಮನುಷ್ಯನಿಗೂ ಆರುನೂರು ಗ್ರಾಂ ಬೆಳ್ಳಿಯ ತೆರಿಗೆಯನ್ನು ವಿಧಿಸಿದನು. ನಂತರ ಮೆನಹೇಮನು ಅಶ್ಶೂರದ ರಾಜನಿಗೆ ಹಣವನ್ನು ಕೊಟ್ಟನು. ಆದ್ದರಿಂದ ಅಶ್ಶೂರದ ರಾಜನು ಬಿಟ್ಟುಹೋದನು; ಅವನು ಇಸ್ರೇಲಿನಲ್ಲೇ ನೆಲೆಸಲಿಲ್ಲ.

21 “ಇಸ್ರೇಲಿನ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಮೆನಹೇಮನು ಮಾಡಿದ ಉಳಿದ ಮಹಾಕಾರ್ಯಗಳನ್ನು ಬರೆಯಲಾಗಿದೆ. 22 ಮೆನಹೇಮನು ಸತ್ತಮೇಲೆ ಅವನನ್ನು ಅವನ ಪೂರ್ವಿಕರ ಬಳಿ ಸಮಾಧಿಮಾಡಿದರು. ಮೆನಹೇಮನ ನಂತರ ಅವನ ಮಗನಾದ ಪೆಕಹ್ಯನು ಹೊಸ ರಾಜನಾದನು.

ಇಸ್ರೇಲನ್ನು ಪೆಕಹ್ಯನು ಆಳಿದನು

23 ಅಜರ್ಯನು ಯೆಹೂದದ ರಾಜನಾಗಿದ್ದ ಐವತ್ತನೆಯ ವರ್ಷದಲ್ಲಿ ಮೆನಹೇಮನ ಮಗನಾದ ಪೆಕಹ್ಯನು ಸಮಾರ್ಯದಲ್ಲಿ ಇಸ್ರೇಲಿನ ರಾಜನಾದನು. ಪೆಕಹ್ಯನು ಎರಡು ವರ್ಷ ಆಳಿದನು. 24 ಯೆಹೋವನು ಕೆಟ್ಟದ್ದೆಂದು ಹೇಳಿದ ಕಾರ್ಯಗಳನ್ನು ಪೆಕಹ್ಯನು ಮಾಡಿದನು. ಇಸ್ರೇಲರನ್ನು ಪಾಪಕೃತ್ಯಗಳಿಗೆ ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಪಾಪಕೃತ್ಯಗಳನ್ನೇ ಪೆಕಹ್ಯನು ಮುಂದುವರಿಸಿದನು.

25 ಪೆಕಹ್ಯನ ಸೇನೆಗೆ ರೆಮಲ್ಯನ ಮಗನಾದ ಪೆಕಹನು ಸೇನಾಧಿಪತಿಯಾಗಿದ್ದನು. ಅವನು ಪೆಕಹ್ಯನನ್ನು ಕೊಂದುಹಾಕಿದನು. ಅವನು ಸಮಾರ್ಯದಲ್ಲಿರುವ ರಾಜನ ಅರಮನೆಯಲ್ಲಿ ಪೆಕಹ್ಯನು ಅರ್ಗೋಬ್ ಮತ್ತು ಅರ್ಯೇ ಎಂಬವರನ್ನು ಸಹ ಕೊಂದುಹಾಕಿದನು. ಪೆಕಹ್ಯನನ್ನು ಪೆಕಹನು ಕೊಂದುಹಾಕಿದಾಗ ಅವನ ಸಂಗಡ ಗಿಲ್ಯಾದಿನ ಐವತ್ತು ಜನರಿದ್ದರು. ಪೆಕಹ್ಯನ ನಂತರ ಪೆಕಹನು ಹೊಸ ರಾಜನಾದನು.

26 “ಇಸ್ರೇಲಿನ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಪೆಕಹ್ಯನು ಮಾಡಿದ ಇತರ ಮಹಾಕಾರ್ಯಗಳನ್ನು ಕುರಿತು ಬರೆಯಲಾಗಿದೆ.

ಇಸ್ರೇಲನ್ನು ಪೆಕಹನು ಆಳುವನು

27 ಅಜರ್ಯನು ಯೆಹೂದದ ರಾಜನಾಗಿದ್ದ ಐವತ್ತೆರಡನೆಯ ವರ್ಷದಲ್ಲಿ ರೆಮಲ್ಯನ ಮಗನಾದ ಪೆಕಹನು ಸಮಾರ್ಯದಲ್ಲಿ ಇಸ್ರೇಲನ್ನು ಆಳಲಾರಂಭಿಸಿದನು. ಪೆಕಹನು ಇಪ್ಪತ್ತು ವರ್ಷ ಆಳಿದನು. 28 ಯೆಹೋವನು ಕೆಟ್ಟದ್ದೆಂದು ಹೇಳಿದ ಕಾರ್ಯಗಳನ್ನೇ ಪೆಕಹನು ಮಾಡಿದನು. ಇಸ್ರೇಲರನ್ನು ಪಾಪಮಾಡುವಂತೆ ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಪಾಪಕೃತ್ಯಗಳನ್ನು ಪೆಕಹನು ಮುಂದುವರಿಸಿದನು.

29 ಅಶ್ಶೂರದ ರಾಜನಾದ ತಿಗ್ಲತ್ಪಿಲೆಸರನೆಂಬವನು ಇಸ್ರೇಲಿನ ವಿರುದ್ಧ ಯುದ್ಧಕ್ಕೆ ಬಂದನು. ಪೆಕಹನು ಇಸ್ರೇಲಿನ ರಾಜನಾಗಿದ್ದ ಸಂದರ್ಭದಲ್ಲಿ ಇದು ಸಂಭವಿಸಿತು. ತಿಗ್ಲತ್ಪಿಲೆಸರನು ಇಯ್ಯೋನ್, ಅಬೇಲ್ಬೇತ್ಮಾಕಾ, ಯಾನೋಹ, ಕದೆಷ್, ಹಾಚೋರ್, ಗಿಲ್ಯಾದ್, ಗಲಿಲಾಯ ಮತ್ತು ನಫ್ತಾಲಿಯ ಪ್ರಾಂತ್ಯಗಳನ್ನೆಲ್ಲ ಸ್ವಾಧೀನಪಡಿಸಿಕೊಂಡನು. ತಿಗ್ಲತ್ಪಿಲೆಸರನು ಈ ಸ್ಥಳಗಳಲ್ಲಿದ್ದ ಜನರನ್ನು ಸೆರೆಯಾಳುಗಳನ್ನಾಗಿಸಿ ಅಶ್ಶೂರಿಗೆ ಕೊಂಡೊಯ್ದನು.

30 ಏಲನ ಮಗನಾದ ಹೋಶೇಯನು ರೆಮಲ್ಯನ ಮಗನಾದ ಪೆಕಹನ ವಿರುದ್ಧ ಸಂಚುಗಳನ್ನು ಮಾಡಿ ಪೆಕಹನನ್ನು ಕೊಂದುಹಾಕಿದನು. ಪೆಕಹನ ನಂತರ ಹೋಶೇಯನು ಹೊಸ ರಾಜನಾದನು. ಉಜ್ಜೀಯನ ಮಗನಾದ ಯೋತಾಮನು ಯೆಹೂದದ ರಾಜನಾಗಿದ್ದ ಇಪ್ಪತ್ತನೆಯ ವರ್ಷದಲ್ಲಿ ಹೀಗಾಯಿತು.

31 “ಇಸ್ರೇಲಿನ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಪೆಕಹನು ಮಾಡಿದ ಇತರ ಮಹಾಕಾರ್ಯಗಳನ್ನು ಬರೆಯಲಾಗಿದೆ.

ಯೆಹೂದವನ್ನು ಯೋತಾಮನು ಆಳುವನು

32 ಉಜ್ಜೀಯನ ಮಗನಾದ ಯೋತಾಮನು ಯೆಹೂದದ ರಾಜನಾದನು. ರೆಮಲ್ಯನ ಮಗನಾದ ಪೆಕಹನು ಇಸ್ರೇಲಿನ ರಾಜನಾದ ಎರಡನೆಯ ವರ್ಷದಲ್ಲಿ ಹೀಗಾಯಿತು. 33 ಯೋತಾಮನು ರಾಜನಾದಾಗ ಅವನಿಗೆ ಇಪ್ಪತ್ತೈದು ವರ್ಷ ವಯಸ್ಸಾಗಿತ್ತು. ಯೋತಾಮನು ಜೆರುಸಲೇಮಿನಲ್ಲಿ ಹದಿನಾರು ವರ್ಷ ಆಳಿದನು. ಯೋತಾಮನ ತಾಯಿಯು ಚಾದೋಕನ ಮಗಳಾದ ಯೆರೂಷಾ ಎಂಬ ಹೆಸರಿನವಳು. 34 ಯೋತಾಮನು ತನ್ನ ತಂದೆಯಾದ ಉಜ್ಜೀಯನಂತೆ ಯೆಹೋವನು ಯೋಗ್ಯವೆಂದು ಹೇಳಿದ ಕಾರ್ಯಗಳನ್ನು ಮಾಡಿದನು. 35 ಆದರೆ ಅವನು ಉನ್ನತಸ್ಥಳಗಳನ್ನು ನಾಶಗೊಳಿಸಲಿಲ್ಲ. ಈ ಪೂಜಾಸ್ಥಳಗಳಲ್ಲಿ ಜನರು ಯಜ್ಞಗಳನ್ನು ಅರ್ಪಿಸುತ್ತಿದ್ದರು ಮತ್ತು ಧೂಪವನ್ನು ಸುಡುತ್ತಿದ್ದರು. ಯೋತಾಮನು ಯೆಹೋವನ ಆಲಯಕ್ಕೆ ಮೇಲ್ಬಾಗಿಲನ್ನು ನಿರ್ಮಿಸಿದನು. 36 “ಯೆಹೂದದ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಯೋತಾಮನು ಮಾಡಿದ ಇತರ ಮಹಾಕಾರ್ಯಗಳನ್ನು ಬರೆಯಲಾಗಿದೆ.

37 ಆ ಕಾಲದಲ್ಲಿ, ಅರಾಮ್ಯರ ರಾಜನಾದ ರೆಚೀನನನ್ನು ಮತ್ತು ರೆಮಲ್ಯನ ಮಗನಾದ ಪೆಕಹನನ್ನು ಯೆಹೂದದ ವಿರುದ್ಧ ಹೋರಾಡಲು ಯೆಹೋವನು ಕಳುಹಿಸಲಾರಂಭಿಸಿದನು.

38 ಯೋತಾಮನು ಸತ್ತಮೇಲೆ ಅವನನ್ನು ಅವನ ಪೂರ್ವಿಕರ ಬಳಿಯಲ್ಲಿ ಸಮಾಧಿಮಾಡಿದರು. ಯೋತಾಮನನ್ನು ಅವನ ಪೂರ್ವಿಕನಾದ ದಾವೀದನ ನಗರದಲ್ಲಿ ಸಮಾಧಿಮಾಡಿದರು. ಯೋತಾಮನ ನಂತರ ಅವನ ಮಗನಾದ ಅಹಾಜನು ಹೊಸ ರಾಜನಾದನು.

ತೀತನಿಗೆ 1

ದೇವರ ಸೇವಕನಾದ ಮತ್ತು ಯೇಸು ಕ್ರಿಸ್ತನ ಅಪೊಸ್ತಲನಾದ ಪೌಲನು ಬರೆಯುವ ಪತ್ರ. ದೇವರು ಆರಿಸಿಕೊಂಡ ಜನರ ನಂಬಿಕೆಯನ್ನು ವೃದ್ಧಿಗೊಳಿಸುವುದಕ್ಕಾಗಿ ಮತ್ತು ಅವರಿಗೆ ಸತ್ಯವನ್ನು ತಿಳಿಸುವುದಕ್ಕಾಗಿ ನನ್ನನ್ನು ಕಳುಹಿಸಲಾಯಿತು. ದೇವರ ಸೇವೆಯನ್ನು ಹೇಗೆ ಮಾಡಬೇಕೆಂಬುದನ್ನು ಆ ಸತ್ಯವು ತೋರ್ಪಡಿಸುತ್ತಿದೆ. ನಿತ್ಯಜೀವದ ಮೇಲೆ ನಮಗಿರುವ ನಿರೀಕ್ಷೆಯಿಂದಲೇ ಆ ನಂಬಿಕೆ ಮತ್ತು ಜ್ಞಾನಗಳು ಉಂಟಾಗಿವೆ. ನಿತ್ಯಜೀವವನ್ನು ಕೊಡುವುದಾಗಿ ದೇವರು ನಮಗೆ ಅನಾದಿಕಾಲದಲ್ಲಿಯೇ ವಾಗ್ದಾನ ಮಾಡಿದ್ದನು. ದೇವರು ಸುಳ್ಳು ಹೇಳುವುದಿಲ್ಲ. ತಕ್ಕಕಾಲ ಬಂದಾಗ ದೇವರು ಆ ನಿತ್ಯಜೀವವನ್ನು ಲೋಕಕ್ಕೆ ಪ್ರಕಟಿಸಿದನು. ನನಗೊಪ್ಪಿಸಿರುವ ಈ ಸಂದೇಶವನ್ನು ನಮ್ಮ ರಕ್ಷಕನಾದ ದೇವರ ಆಜ್ಞೆಗನುಸಾರವಾಗಿ ಸಾರುತ್ತಿದ್ದೇನೆ.

ನಾನು ಈ ಪತ್ರವನ್ನು ತೀತನಿಗೆ ಬರೆಯುತ್ತಿದ್ದೇನೆ. ನಮ್ಮೆಲ್ಲರ ನಂಬಿಕೆಯ ಸಂಬಂಧದಲ್ಲಿ ನೀನು ನನಗೆ ನಿಜವಾದ ಮಗನಂತಿರುವೆ.

ನಮ್ಮ ತಂದೆಯಾದ ದೇವರಿಂದಲೂ ನಮ್ಮ ರಕ್ಷಕನಾದ ಕ್ರಿಸ್ತ ಯೇಸುವಿನಿಂದಲೂ ನಿನಗೆ ಕೃಪೆಯೂ ಶಾಂತಿಯೂ ಲಭಿಸಲಿ.

ಕ್ರೇತದಲ್ಲಿ ತೀತನ ಕಾರ್ಯ

ಇನ್ನೂ ಪೂರ್ಣವಾಗಿಲ್ಲದ ಕಾರ್ಯಗಳನ್ನು ಪೂರ್ಣಗೊಳಿಸುವುದಕ್ಕಾಗಿಯೂ ಪ್ರತಿಯೊಂದು ಪಟ್ಟಣದಲ್ಲಿ ಸಭಾಹಿರಿಯರನ್ನು ಆರಿಸುವುದಕ್ಕಾಗಿಯೂ ನಾನು ನಿನ್ನನ್ನು ಕ್ರೇತದಲ್ಲಿ ಬಿಟ್ಟು ಬಂದೆನು. ಸಭೆಯ ಹಿರಿಯನಾಗುವವನು ಅಪರಾಧಿಯೆಂಬ ನಿಂದನೆಗೆ ಗುರಿಯಾಗಿರಬಾರದು. ಅವನಿಗೆ ಒಬ್ಬಳೇ ಪತ್ನಿಯಿರಬೇಕು. ಅವನ ಮಕ್ಕಳು ವಿಶ್ವಾಸಿಗಳಾಗಿರಬೇಕು; ಅವರು ದುಷ್ಟರೆಂದಾಗಲಿ ಅವಿಧೇಯರೆಂದಾಗಲಿ ಹೇಳಿಸಿಕೊಂಡಿರಬಾರದು. ಸಭಾಹಿರಿಯನು ದೇವರ ಸೇವೆಯ ಜವಾಬ್ದಾರಿಯನ್ನು ಹೊತ್ತು ಕೊಂಡವನಾಗಿದ್ದಾನೆ. ಆದ್ದರಿಂದ ಅವನು ಅಪರಾಧಿಯೆಂಬ ನಿಂದನೆಗೆ ಒಳಗಾಗಿರಬಾರದು; ಗರ್ವಿಷ್ಠನಾಗಿರಬಾರದು; ಸ್ವಾರ್ಥಿಯಾಗಿರಬಾರದು ಮತ್ತು ಮುಂಗೋಪಿಯಾಗಿರಬಾರದು; ದ್ರಾಕ್ಷಾರಸವನ್ನು ಅತಿಯಾಗಿ ಕುಡಿಯುವವನಾಗಿರಬಾರದು; ಜಗಳಗಂಟನಾಗಿರಬಾರದು; ಜನರನ್ನು ವಂಚಿಸಿ ಶ್ರೀಮಂತನಾಗಲು ಪ್ರಯತ್ನಿಸುವವನಾಗಿರಬಾರದು. ಸಭಾಹಿರಿಯನು ಜನರನ್ನು ತನ್ನ ಮನೆಗೆ ಆಹ್ವಾನಿಸಿ ಅತಿಥಿಸತ್ಕಾರ ಮಾಡಲು ಸಿದ್ಧನಾಗಿರಬೇಕು. ಅವನು ಒಳ್ಳೆಯದನ್ನು ಪ್ರೀತಿಸಬೇಕು; ಜ್ಞಾನಿಯಾಗಿರಬೇಕು; ನ್ಯಾಯವಂತನಾಗಿರಬೇಕು; ಪವಿತ್ರನಾಗಿರಬೇಕು. ಅವನು ತನ್ನನ್ನು ಹತೋಟಿಯಲ್ಲಿ ಇಟ್ಟುಕೊಂಡಿರಬೇಕು. ನಾವು ಬೋಧಿಸುವ ಸತ್ಯವಾಕ್ಯವನ್ನು ಅವನು ನಂಬಿಗಸ್ತಿಕೆಯಿಂದ ಅನುಸರಿಸಬೇಕು. ಸತ್ಯವಾದ ಮತ್ತು ಯೋಗ್ಯವಾದ ಬೋಧನೆಯಿಂದ ಅವನು ಜನರಿಗೆ ಸಹಾಯ ಮಾಡುವವನಾಗಿರಬೇಕು. ಅವನು ಸತ್ಯಬೋಧನೆಗೆ ವಿರುದ್ಧವಾದ ಜನರಿಗೆ ಅವರ ತಪ್ಪನ್ನು ತೋರಿಸಿಕೊಡುವ ಸಾಮರ್ಥ್ಯ ಉಳ್ಳವನಾಗಿರಬೇಕು.

10 ಅವಿಧೇಯರಾಗಿರುವ ಜನರು ಅನೇಕರಿದ್ದಾರೆ. ಅವರು ನಿರರ್ಥಕವಾದುದನ್ನು ಕುರಿತು ಮಾತನಾಡುತ್ತಲೇ ಇರುತ್ತಾರೆ ಮತ್ತು ಉಳಿದ ಜನರನ್ನು ತಪ್ಪುದಾರಿಗೆ ಎಳೆಯುತ್ತಾರೆ. ಯೆಹೂದ್ಯರಲ್ಲದ ಜನರೆಲ್ಲರೂ ಸುನ್ನತಿ ಮಾಡಿಸಿಕೊಳ್ಳಬೇಕೆಂದು ಬೋಧಿಸುವ ಜನರ ಬಗ್ಗೆಯೇ ನಾನು ಹೇಳುತ್ತಿರುವುದು. 11 ಆ ಜನರ ಬೋಧನೆ ತಪ್ಪೆಂದು ನಿರೂಪಿಸಲು ಮತ್ತು ಉಪಯೋಗವಿಲ್ಲದ ಆ ಸಂಗತಿಗಳನ್ನು ಬೋಧಿಸದಂತೆ ಮಾಡಲು ಸಭಾಹಿರಿಯನು ಸಮರ್ಥನಾಗಿರಬೇಕು. ಅವರು ಉಪದೇಶ ಮಾಡಬಾರದ ಸಂಗತಿಗಳನ್ನು ಉಪದೇಶಿಸುತ್ತಾ ಇಡೀ ಕುಟುಂಬಗಳನ್ನೇ ಸಂಪೂರ್ಣವಾಗಿ ನಾಶಗೊಳಿಸುತ್ತಿದ್ದಾರೆ. ಅವರು ಜನರನ್ನು ವಂಚಿಸಿ, ಹಣವನ್ನು ಸಂಪಾದಿಸುವುದಕ್ಕೋಸ್ಕರ ಆ ಸಂಗತಿಗಳನ್ನು ಉಪದೇಶಿಸುತ್ತಿದ್ದಾರೆ. 12 ಅವರ ಪ್ರವಾದಿಗಳಲ್ಲಿ ಒಬ್ಬನು, “ಕ್ರೇತದ ಜನರು ಯಾವಾಗಲೂ ಸುಳ್ಳು ಹೇಳುತ್ತಾರೆ. ಅವರು ದುಷ್ಟ ಮೃಗಗಳಾಗಿದ್ದಾರೆ; ಸೋಮಾರಿತನದಿಂದ ಕೆಲಸವನ್ನೇ ಮಾಡದೆ ಹೊಟ್ಟೆಬಾಕರಾಗಿದ್ದಾರೆ” ಎಂದು ಹೇಳಿದ್ದಾನೆ. 13 ಪ್ರವಾದಿಯು ಹೇಳಿದ ಮಾತುಗಳು ಸತ್ಯವಾಗಿವೆ. ಆದ್ದರಿಂದ ಅವರು ಮಾಡುತ್ತಿರುವ ತಪ್ಪುಗಳನ್ನು ಅವರಿಗೆ ತಿಳಿಸು. ನೀನು ಅವರ ವಿಷಯದಲ್ಲಿ ಕಟ್ಟುನಿಟ್ಟಾಗಿರಬೇಕು. ಆಗ ಅವರು ತಮ್ಮ ನಂಬಿಕೆಯಲ್ಲಿ ದೃಢವಾಗಿದ್ದು, 14 ಯೆಹೂದ್ಯರ ಕಟ್ಟುಕಥೆಗಳನ್ನು ಒಪ್ಪಿಕೊಳ್ಳುವುದಿಲ್ಲ ಮತ್ತು ಸತ್ಯವನ್ನು ಒಪ್ಪಿಕೊಳ್ಳದ ಜನರ ಆಜ್ಞೆಗಳನ್ನು ಅನುಸರಿಸುವುದಿಲ್ಲ.

15 ಪರಿಶುದ್ಧರಾದ ಜನರಿಗೆ ಎಲ್ಲಾ ಸಂಗತಿಗಳು ಪರಿಶುದ್ಧವಾಗಿರುತ್ತವೆ. ಆದರೆ ಪಾಪಗಳನ್ನೇ ತುಂಬಿಕೊಂಡಿರುವ ಮತ್ತು ನಂಬಿಕೆಯಿಲ್ಲದ ಜನರಿಗೆ ಯಾವುದೂ ಪರಿಶುದ್ಧವಾಗಿರುವುದಿಲ್ಲ. ನಿಜವಾಗಿಯೂ, ಅವರ ಮನಸ್ಸುಗಳು ಮತ್ತು ಮನಸ್ಸಾಕ್ಷಿಗಳು ಮಲಿನವಾಗಿವೆ. 16 ದೇವರ ಬಗ್ಗೆ ತಮಗೆ ತಿಳಿದಿದೆಯೆಂದು ಅವರು ಹೇಳಿದರೂ ಅವರು ದೇವರನ್ನು ತಿಳಿದಿಲ್ಲವೆಂದು ಅವರ ಕೆಟ್ಟಕಾರ್ಯಗಳೇ ಸ್ಪಷ್ಟಪಡಿಸುತ್ತವೆ. ಅವರು ಭಯಂಕರವಾದ ಜನರು ಮತ್ತು ಅವಿಧೇಯರು. ಯಾವ ಸತ್ಕಾರ್ಯಗಳನ್ನು ಮಾಡುವುದಕ್ಕೂ ಅವರು ಯೋಗ್ಯರಲ್ಲ.

ಹೋಶೇಯ 8

ವಿಗ್ರಹಾರಾಧನೆಯು ಇಸ್ರೇಲರ ನಾಶನಕ್ಕೆ ಕಾರಣ

“ಯೆಹೋವನಾಲಯದ ಕಾವಲುಗಾರನಂತೆ ತುತ್ತೂರಿಯನ್ನು ನಿನ್ನ ತುಟಿಗಳಲ್ಲಿಟ್ಟು ಊದು. ಇಸ್ರೇಲರು ನನ್ನ ಕಟ್ಟಳೆಗಳಿಗೆ ಅವಿಧೇಯರಾಗಿ ನನ್ನ ಒಡಂಬಡಿಕೆಯನ್ನು ಮುರಿದಿದ್ದಾರೆ. ‘ನಮ್ಮ ದೇವರೇ, ಇಸ್ರೇಲಿನಲ್ಲಿರುವ ನಾವು ನಿನ್ನನ್ನು ಅರಿತಿದ್ದೇವೆ’ ಎಂದು ಅವರು ಕಿರುಚುವರು. ಆದರೆ ಇಸ್ರೇಲ್ ಒಳ್ಳೇದನ್ನು ನಿರಾಕರಿಸಿತು. ಆದ್ದರಿಂದ ಶತ್ರುಗಳು ಅವರನ್ನು ಓಡಿಸಿದರು. ಇಸ್ರೇಲರು ತಮಗಾಗಿ ಅರಸನನ್ನು ಆರಿಸಿಕೊಂಡರು. ಆದರೆ ಸಲಹೆಗಳಿಗಾಗಿ ನನ್ನ ಬಳಿಗೆ ಬರಲಿಲ್ಲ. ಇಸ್ರೇಲರು ತಮ್ಮ ನಾಯಕರನ್ನು ಆರಿಸಿಕೊಂಡರು. ಆದರೆ ನಾನು ತಿಳಿದಿರುವ ನಾಯಕರನ್ನು ಆರಿಸಿಕೊಳ್ಳಲಿಲ್ಲ. ಇಸ್ರೇಲರು ತಮಗೆ ವಿಗ್ರಹಗಳನ್ನು ತಯಾರಿಸಲು ತಮ್ಮ ಬೆಳ್ಳಿಬಂಗಾರವನ್ನು ಉಪಯೋಗಿಸಿದರು. ಆದ್ದರಿಂದ ಅವರು ನಾಶವಾಗುವರು. 5-6 ಯೆಹೋವನು ನೀವು ಮಾಡಿಕೊಂಡ ಬಸವನನ್ನು ನಿರಾಕರಿಸಿದ್ದಾನೆ. ಸಮಾರ್ಯವೇ, ಯೆಹೋವನು ಹೇಳುವುದೇನೆಂದರೆ, ‘ನಾನು ಇಸ್ರೇಲರ ವಿರುದ್ಧವಾಗಿ ತುಂಬಾ ಕೋಪಗೊಂಡಿದ್ದೇನೆ.’ ಇಸ್ರೇಲಿನ ಜನರು ಅವರ ಪಾಪಗಳಿಗಾಗಿ ಶಿಕ್ಷಿಸಲ್ಪಡುವರು. ಶಿಲ್ಪಿಯು ಅವರ ವಿಗ್ರಹಗಳನ್ನು ಮಾಡಿದನು. ಅವು ದೇವರಲ್ಲ. ಸಮಾರ್ಯದ ಬಸವನ ವಿಗ್ರಹಗಳು ಚೂರುಚೂರಾಗಿ ಒಡೆಯಲ್ಪಡುವವು. ಇಸ್ರೇಲರು ಅಜ್ಞಾನದ ಕಾರ್ಯ ಮಾಡಿದರು. ಅವರು ಗಾಳಿಯನ್ನು ನೆಡಲು ಪ್ರಯತ್ನಿಸಿದರು. ಆದರೆ ಅವರಿಗೆ ತೊಂದರೆಗಳೇ ಪ್ರಾಪ್ತವಾಗುವದು. ಅವರು ಸುಂಟರಗಾಳಿಯನ್ನು ಕೊಯ್ಯುವರು. ಹೊಲದಲ್ಲಿ ಧಾನ್ಯವು ಬೆಳೆಯುವದು. ಆದರೆ ಅವು ಆಹಾರವನ್ನು ಕೊಡುವದಿಲ್ಲ. ಒಂದುವೇಳೆ ಅದು ಕೊಟ್ಟರೂ ಅಪರಿಚಿತರು ಅದನ್ನು ತಿನ್ನುವರು.

“ಇಸ್ರೇಲ್ ನಾಶವಾಯಿತು.
    ಅವರು ಯಾರಿಗೂ ಬೇಡವಾದ ಪಾತ್ರೆಯನ್ನು ಬಿಸಾಡಿದಂತೆ
    ಜನಾಂಗಗಳ ಮಧ್ಯದಲ್ಲಿ ಚದರಿಸಲ್ಪಟ್ಟರು.
ಎಫ್ರಾಯೀಮನು ತನ್ನ ಪ್ರೇಮಿಗಳ ಬಳಿಗೆ ಹೋದನು.
    ಕಾಡುಕತ್ತೆಯಂತೆ ಅಶ್ಶೂರ್ಯದ ಕಡೆಗೆ ಅಡ್ಡಾಡುತ್ತಾ ಹೋದನು.
10 ಜನಾಂಗಗಳ ಮಧ್ಯೆ ಇರುವ ತನ್ನ ಪ್ರಿಯತಮರ ಕಡೆಗೆ ಇಸ್ರೇಲು ಹೋದನು.
    ಆದರೆ ನಾನು ಇಸ್ರೇಲರನ್ನು ಒಟ್ಟುಸೇರಿಸುವೆನು.
ಆದರೆ ಅದರ ಮೊದಲು ಆ ಬಲಿಷ್ಠ ರಾಜನ ಕೈಯಿಂದ
    ಅವರ ಸಂಕಟ ಅನುಭವಿಸಬೇಕು.

ಇಸ್ರೇಲು ಯೆಹೋವನನ್ನು ಮರೆತು ವಿಗ್ರಹಗಳನ್ನು ಪೂಜಿಸಿದ್ದು

11 “ಎಫ್ರಾಯೀಮ್ ಹೆಚ್ಚೆಚ್ಚಾಗಿ ಯಜ್ಞವೇದಿಕೆಗಳನ್ನು ಕಟ್ಟಿಸಿದನು.
    ಅದು ಪಾಪವಾಗಿತ್ತು.
    ಆ ವೇದಿಕೆಗಳ ಮೇಲೆಯೇ ಅವರು ಪಾಪಮಾಡಿದರು.
12 ಎಫ್ರಾಯೀಮನಿಗೆ ನಾನು ಸಾವಿರಾರು ವಿಧಿನಿಯಮಗಳನ್ನು ಬರೆದರೂ
    ಅವನು ಅವುಗಳನ್ನು ಬೇರೆಯವರಿಗಾಗಿ ಬರೆದದೆ ಎಂದು ತಿಳಿದುಕೊಳ್ಳುವನು.
13 ಇಸ್ರೇಲರು ಯಜ್ಞವನ್ನು ಪ್ರೀತಿಸುತ್ತಾರೆ.
    ಅವರು ಮಾಂಸವನ್ನು ಯಜ್ಞಮಾಡಿ ತಿನ್ನುತ್ತಾರೆ.
ಯೆಹೋವನು ಅವರ ಯಜ್ಞವನ್ನು ಸ್ವೀಕರಿಸುವುದಿಲ್ಲ.
    ಅವರ ಪಾಪಗಳನ್ನು ತನ್ನ ನೆನಪಿಗೆ ತಂದು
ಅವರನ್ನು ಶಿಕ್ಷಿಸುವನು.
    ಅವರು ಈಜಿಪ್ಟಿಗೆ ಸೆರೆಯಾಳುಗಳಾಗಿ ಒಯ್ಯಲ್ಪಡುವರು.
14 ಇಸ್ರೇಲರು ರಾಜರ ಅರಮನೆಗಳನ್ನು ಕಟ್ಟಿದರು.
    ಆದರೆ ಅದರ ನಿರ್ಮಾಣಿಕನನ್ನು ಮರೆತರು.
ಯೆಹೂದವು ಕೋಟೆಗಳನ್ನು ಕಟ್ಟುತ್ತಾನೆ;
    ಆದರೆ ಯೆಹೂದದ ಪಟ್ಟಣಗಳ ಮೇಲೆ ನಾನು ಬೆಂಕಿಯನ್ನು ಕಳುಹಿಸುವೆನು.
    ಆ ಬೆಂಕಿಯು ಅರಮನೆಗಳನ್ನು ನಾಶಮಾಡುವದು.”

ಕೀರ್ತನೆಗಳು 123-125

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.

123 ಪರಲೋಕದಲ್ಲಿ ಸಿಂಹಾಸನಾರೂಢನಾಗಿರುವಾತನೇ,
    ನಿನ್ನ ಕಡೆಗೆ ಕಣ್ಣೆತ್ತಿ ನೋಡುತ್ತಾ ಪ್ರಾರ್ಥಿಸುವೆನು.
ಸೇವಕರು ತಮಗೆ ಬೇಕಾದವುಗಳಿಗಾಗಿ ತಮ್ಮ ಯಜಮಾನರನ್ನು ಅವಲಂಬಿಸಿಕೊಳ್ಳುವರು;
    ಸೇವಕಿಯರು ತಮ್ಮ ಯಜಮಾನಿಯರನ್ನು ಅವಲಂಬಿಸಿಕೊಳ್ಳುವರು.
ಅಂತೆಯೇ, ನಾವು ನಮ್ಮ ದೇವರಾದ ಯೆಹೋವನನ್ನು ಅವಲಂಬಿಸಿಕೊಳ್ಳುವೆವು.
    ಆತನ ಕರುಣೆಯನ್ನೇ ನಿರೀಕ್ಷಿಸುವೆವು.
ಯೆಹೋವನೇ, ನಮಗೆ ಕರುಣೆತೋರು,
    ಬಹುಕಾಲದಿಂದ ನಾವು ಅವಮಾನಿತರಾಗಿದ್ದೇವೆ.
ಗರ್ವಿಷ್ಠರೂ ಮೊಂಡರೂ
    ನಮ್ಮನ್ನು ಸಾಕಷ್ಟು ಗೇಲಿ ಮಾಡಿದ್ದಾರೆ.

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ. ರಚನೆಗಾರ: ದಾವೀದ.

124 ಯೆಹೋವನು ನಮ್ಮ ಕಡೆ ಇಲ್ಲದಿದ್ದಿದ್ದರೆ ನಮ್ಮ ಗತಿ ಏನಾಗುತ್ತಿತ್ತು?
    ಇಸ್ರೇಲರೇ, ನನಗೆ ಉತ್ತರಹೇಳಿ.
ವೈರಿಗಳು ನಮ್ಮ ಮೇಲೆ ಆಕ್ರಮಣ ಮಾಡಿದಾಗ
    ಯೆಹೋವನು ನಮ್ಮ ಕಡೆ ಇಲ್ಲದಿದ್ದಿದ್ದರೆ ನಮ್ಮ ಗತಿ ಏನಾಗುತ್ತಿತ್ತು?
ಶತ್ರುಗಳು ನಮ್ಮಮೇಲೆ ಕೋಪಗೊಂಡಾಗಲೆಲ್ಲಾ
    ನಮ್ಮನ್ನು ಜೀವಂತವಾಗಿ ನುಂಗಿಬಿಡುತ್ತಿದ್ದರು.
ಶತ್ರುಸೈನ್ಯಗಳು ನಮ್ಮನ್ನು ಕೊಚ್ಚಿಕೊಂಡು ಹೋಗುವ
    ಪ್ರವಾಹದಂತೆಯೂ ಮುಳುಗಿಸುವ ನದಿಯಂತೆಯೂ ಆಗಿರುತ್ತಿದ್ದರು.
ಆ ಗರ್ವಿಷ್ಠರು ನಮ್ಮ ಪಾಲಿಗೆ ಬಾಯಿಯವರೆಗೂ
    ಮೇಲೇರಿ ಮುಳುಗಿಸುವ ನೀರಿನಂತಾಗುತ್ತಿದ್ದರು.

ಯೆಹೋವನಿಗೆ ಸ್ತೋತ್ರವಾಗಲಿ!
    ನಮ್ಮ ಶತ್ರುಗಳು ನಮ್ಮನ್ನು ಹಿಡಿದು ಕೊಲ್ಲಲು ಆತನು ಅವಕಾಶ ಕೊಡಲಿಲ್ಲ.

ನಾವು ಬಲೆಯಿಂದ ತಪ್ಪಿಸಿಕೊಂಡ ಪಕ್ಷಿಯಂತಿದ್ದೇವೆ.
    ಬಲೆಯು ಹರಿದುಹೋದದ್ದರಿಂದ ನಾವು ತಪ್ಪಿಸಿಕೊಂಡೆವು.
ನಮಗೆ ಸಹಾಯವು ಯೆಹೋವನಿಂದಲೇ ಬಂದಿತು.
    ಭೂಮ್ಯಾಕಾಶಗಳನ್ನು ಸೃಷ್ಟಿಮಾಡಿದವನು ಆತನೇ.

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.

125 ಯೆಹೋವನಲ್ಲಿ ಭರವಸವಿಟ್ಟಿರುವವರು ಚೀಯೋನ್ ಪರ್ವತದಂತಿರುವರು.
    ಅವರೆಂದಿಗೂ ಕದಲದೆ ಶಾಶ್ವತವಾಗಿರುವರು.
ಪರ್ವತಗಳು ಜೆರುಸಲೇಮಿನ ಸುತ್ತಲೂ ಇವೆ.
    ಯೆಹೋವನು ತನ್ನ ಜನರ ಸುತ್ತಲೂ ಇರುವನು.
    ಆತನು ತನ್ನ ಜನರನ್ನು ಸದಾಕಾಲ ಸಂರಕ್ಷಿಸುವನು.
ದುಷ್ಟರು ನೀತಿವಂತರನ್ನು ಶಾಶ್ವತವಾಗಿ ಆಳುವುದಿಲ್ಲ.
    ಅವರು ಶಾಶ್ವತವಾಗಿ ಆಳಿದರೆ ನೀತಿವಂತರೂ ದುಷ್ಕೃತ್ಯಗಳನ್ನು ಮಾಡತೊಡಗಬಹುದು.

ಯೆಹೋವನೇ, ನೀತಿವಂತರಿಗೂ
    ಯಥಾರ್ಥವಂತರಿಗೂ ಉಪಕಾರಮಾಡು.
ದುಷ್ಟರು ಕುತಂತ್ರಗಳನ್ನು ಮಾಡುವರು.
    ಯೆಹೋವನು ಅವರನ್ನು ದಂಡಿಸುವನು.

ಇಸ್ರೇಲಿನಲ್ಲಿ ಶಾಂತಿ ನೆಲೆಸಿರಲಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International