Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
2 ರಾಜರುಗಳು 14

ಅಮಚ್ಯನು ಯೆಹೂದದಲ್ಲಿ ತನ್ನ ಆಳ್ವಿಕೆಯನ್ನು ಆರಂಭಿಸುವನು

14 ಯೆಹೋವಾಹಾಜನ ಮಗನಾದ ಯೋವಾಷನು ಇಸ್ರೇಲಿನ ರಾಜನಾಗಿದ್ದ ಎರಡನೆಯ ವರ್ಷದಲ್ಲಿ ಯೆಹೋವಾಷನ ಮಗ ಅಮಚ್ಯನು ಯೆಹೂದದ ರಾಜನಾದನು. ಅಮಚ್ಯನು ಆಳಲಾರಂಭಿಸಿದಾಗ ಅವನಿಗೆ ಇಪ್ಪತ್ತೈದು ವರ್ಷ ವಯಸ್ಸಾಗಿತ್ತು. ಅಮಚ್ಯನು ಜೆರುಸಲೇಮಿನಲ್ಲಿ ಇಪ್ಪತ್ತೊಂಭತ್ತು ವರ್ಷ ಆಳಿದನು. ಜೆರುಸಲೇಮಿನ ಯೆಹೋವದ್ದೀನಳು ಅಮಚ್ಯನ ತಾಯಿ. ಯೆಹೋವನು ಸರಿಯೆಂದು ಹೇಳಿದ ಕಾರ್ಯಗಳನ್ನು ಅಮಚ್ಯನು ಮಾಡಿದನು. ಆದರೆ ಅವನು ತನ್ನ ಪೂರ್ವಿಕನಾದ ದಾವೀದನು ಅನುಸರಿಸಿದಂತೆ ಸಂಪೂರ್ಣವಾಗಿ ಯೆಹೋವನನ್ನು ಅನುಸರಿಸಲಿಲ್ಲ. ಅಮಚ್ಯನು ತನ್ನ ತಂದೆಯಾದ ಯೆಹೋವಾಷನು ಮಾಡಿದ ಕಾರ್ಯಗಳನ್ನೆಲ್ಲ ಮಾಡಿದನು. ಆದರೆ ಅವನು ಉನ್ನತ ಪೂಜಾಸ್ಥಳಗಳನ್ನು ನಾಶಗೊಳಿಸಲಿಲ್ಲ. ಜನರು ಪೂಜಾಸ್ಥಳಗಳಲ್ಲಿ ಇನ್ನೂ ಯಜ್ಞಗಳನ್ನು ಅರ್ಪಿಸುತ್ತಿದ್ದರು ಮತ್ತು ಧೂಪ ಹಾಕುತ್ತಿದ್ದರು.

ಅಮಚ್ಯನು ರಾಜ್ಯಾಧಿಕಾರವನ್ನು ಬಿಗಿಗೊಳಿಸಿಕೊಂಡ ಮೇಲೆ, ತನ್ನ ತಂದೆಯನ್ನು ಕೊಂದ ಅಧಿಕಾರಿಗಳನ್ನು ಕೊಂದುಹಾಕಿದನು. ಆದರೆ ಮೋಶೆಯ ಧರ್ಮಶಾಸ್ತ್ರದಲ್ಲಿನ ನಿಯಮಗಳಿಗನುಸಾರವಾಗಿ ಅವನು ಕೊಲೆಗಾರರ ಮಕ್ಕಳನ್ನು ಕೊಂದುಹಾಕಲಿಲ್ಲ. ಮೋಶೆಯ ಧರ್ಮಶಾಸ್ತ್ರದಲ್ಲಿ ಯೆಹೋವನು, “ಮಕ್ಕಳು ಮಾಡಿದ ತಪ್ಪಿಗೆ ತಂದೆತಾಯಿಗಳನ್ನು ಸಾವಿಗೆ ಗುರಿಪಡಿಸಬಾರದು. ತಂದೆತಾಯಿಗಳು ಮಾಡಿದ ತಪ್ಪಿಗೆ ಅವರ ಮಕ್ಕಳನ್ನು ಸಾವಿಗೆ ಗುರಿಪಡಿಸಬಾರದು. ಒಬ್ಬ ವ್ಯಕ್ತಿಯನ್ನು ಅವನು ಮಾಡಿದ ಕೆಟ್ಟಕಾರ್ಯಕ್ಕಾಗಿ ಮಾತ್ರ ಸಾವಿಗೆ ಗುರಿಪಡಿಸಬೇಕು” ಎಂದು ಆಜ್ಞಾಪಿಸಿದ್ದಾನೆ.

ಅಮಚ್ಯನು ಉಪ್ಪಿನ ಕಣಿವೆಯಲ್ಲಿ ಹತ್ತುಸಾವಿರ ಎದೋಮ್ಯರನ್ನು ಕೊಂದುಹಾಕಿ ಅವರಿಂದ ಸೆಲ ದುರ್ಗವನ್ನು ವಶಪಡಿಸಿಕೊಂಡು ಅದನ್ನು “ಯೊಕ್ತೆಯೇಲ್” ಎಂದು ಕರೆದನು. ಆ ಸ್ಥಳಕ್ಕೆ ಇಂದಿಗೂ ಅದೇ ಹೆಸರಿದೆ.

ಯೋವಾಷನ ವಿರುದ್ಧ ಯುದ್ಧಮಾಡಲು ಅಮಚ್ಯನ ಅಪೇಕ್ಷೆ

ಇಸ್ರೇಲರ ರಾಜನೂ ಯೇಹುವಿನ ಮೊಮ್ಮಗನೂ ಯೆಹೋವಾಹಾಜನ ಮಗನೂ ಆದ ಯೋವಾಷನ ಬಳಿಗೆ ಅಮಚ್ಯನು ಸಂದೇಶಕರನ್ನು ಕಳುಹಿಸಿದನು. ಅಮಚ್ಯನು ಸಂದೇಶದಲ್ಲಿ, “ಬಾ, ನಾವು ಪರಸ್ಪರ ಯುದ್ಧ ಮಾಡೋಣ!” ಎಂದು ಹೇಳಿದ್ದನು.

ಇಸ್ರೇಲಿನ ರಾಜನಾದ ಯೋವಾಷನು ಯೆಹೂದದ ರಾಜನಾದ ಅಮಚ್ಯನಿಗೆ, “ಲೆಬನೋನಿನ ಒಂದು ಮುಳ್ಳುಗಿಡವು ಲೆಬನೋನಿನ ದೇವದಾರುಮರಕ್ಕೆ ಒಂದು ಸಂದೇಶವನ್ನು ಕಳುಹಿಸಿತು. ಅದು, ‘ನನ್ನ ಮಗನಿಗೆ ನಿನ್ನ ಮಗಳನ್ನು ಕೊಟ್ಟು ಮದುವೆ ಮಾಡು’ ಎಂದಿತು. ಆದರೆ ಲೆಬನೋನಿನ ಒಂದು ಕಾಡುಮೃಗವು ಆ ದಾರಿಯಲ್ಲಿ ಹೋಗುವಾಗ, ಮುಳ್ಳುಗಿಡದ ಮೇಲೆ ಹಾದುಹೋಯಿತು. 10 ನೀನು ಎದೋಮ್ಯರನ್ನು ಸೋಲಿಸಿದೆಯೆಂಬುದು ನಿಜ. ಆದರೆ ನೀನು ಎದೋಮ್ಯರ ಮೇಲೆ ಜಯಗಳಿಸಿದ್ದರಿಂದ ಗರ್ವಿತನಾಗಿರುವೆ. ನೀನು ನಿನ್ನ ಮನೆಯಲ್ಲೇ ಕುಳಿತು ಬಡಾಯಿಕೊಚ್ಚಿಕೋ. ನಿನಗೆ ತೊಂದರೆಯನ್ನು ತಂದುಕೊಳ್ಳಬೇಡ. ಇಲ್ಲವಾದರೆ ನೀನೂ ಬೀಳುವುದಲ್ಲದೆ, ಯೆಹೂದವೂ ನಿನ್ನೊಂದಿಗೆ ಬಿದ್ದುಹೋಗುವುದು!” ಎಂದು ಹೇಳಿದನು.

11 ಆದರೆ ಯೋವಾಷನ ಎಚ್ಚರಿಕೆಯನ್ನು ಅಮಚ್ಯನು ಆಲಿಸಲೇ ಇಲ್ಲ. ಆದ್ದರಿಂದ ಇಸ್ರೇಲಿನ ರಾಜನಾದ ಯೋವಾಷನು ಯೆಹೂದದ ರಾಜನಾದ ಅಮಚ್ಯನ ವಿರುದ್ಧ ಹೋರಾಟ ಮಾಡಲು ಯೆಹೂದದ ಬೇತ್ಷೆಮೆಷಿಗೆ ಹೋದನು. 12 ಯೆಹೂದ್ಯರನ್ನು ಇಸ್ರೇಲರು ಸೋಲಿಸಿದರು. ಯೆಹೂದದ ಪ್ರತಿಯೊಬ್ಬರೂ ಮನೆಗೆ ಓಡಿಹೋದರು. 13 ಇಸ್ರೇಲಿನ ರಾಜನಾದ ಯೋವಾಷನು ಬೇತ್ಷೆಮೆಷಿನಲ್ಲಿ ಯೆಹೂದದ ರಾಜನಾದ ಅಮಚ್ಯನನ್ನು ಸೆರೆಹಿಡಿದನು. ಅಮಚ್ಯನು ಯೆಹೋವಾಷನ ಮಗನೂ ಅಹಜ್ಯನ ಮೊಮ್ಮಗನೂ ಆಗಿದ್ದನು. ಯೋವಾಷನು ಜೆರುಸಲೇಮಿಗೆ ಬಂದು ಎಫ್ರಾಯೀಮ್ ಬಾಗಿಲಿನಿಂದ ಮೂಲೆಯ ಬಾಗಿಲಿನವರೆಗೆ ಆರುನೂರು ಅಡಿ ಉದ್ದದ ಗೋಡೆಯನ್ನು ಒಡೆದುಹಾಕಿದನು. 14 ನಂತರ ಯೋವಾಷನು ದೇವಾಲಯದಲ್ಲಿದ್ದ ಮತ್ತು ಅರಮನೆಯ ಭಂಡಾರದಲ್ಲಿದ್ದ ಬೆಳ್ಳಿಬಂಗಾರಗಳನ್ನು ಮತ್ತು ಪಾತ್ರೆಗಳನ್ನೆಲ್ಲ ತೆಗೆದುಕೊಂಡನು. ಇದಲ್ಲದೆ ಯೋವಾಷನು ಜನರನ್ನು ಸಹ ತನ್ನ ಸೆರೆಯಾಳುಗಳನ್ನಾಗಿ ತೆಗೆದುಕೊಂಡು ಸಮಾರ್ಯಕ್ಕೆ ಹಿಂದಿರುಗಿದನು.

15 “ಇಸ್ರೇಲಿನ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಯೋವಾಷನು ಮಾಡಿದ ಇತರ ಮಹಾಕಾರ್ಯಗಳನ್ನೂ ಯೆಹೂದದ ರಾಜನಾದ ಅಮಚ್ಯನ ವಿರುದ್ಧ ಅವನು ಹೇಗೆ ಹೋರಾಡಿದನೆಂಬುದನ್ನೂ ಬರೆಯಲಾಗಿದೆ. 16 ಯೋವಾಷನು ತೀರಿಕೊಂಡಾಗ ಅವನನ್ನು ಅವನ ಪೂರ್ವಿಕರಾದ ಇಸ್ರೇಲಿನ ರಾಜರೊಡನೆ ಸಮಾರ್ಯದಲ್ಲಿ ಸಮಾಧಿಮಾಡಿದರು. ಯೋವಾಷನ ನಂತರ ಅವನ ಮಗನಾದ ಯಾರೊಬ್ಬಾಮನು ನೂತನ ರಾಜನಾದನು.

ಅಮಚ್ಯನ ಸಾವು

17 ಇಸ್ರೇಲರ ರಾಜನೂ ಯೆಹೋವಾಹಾಜನ ಮಗನೂ ಆದ ಯೋವಾಷನು ಸತ್ತನಂತರ ಹದಿನೈದು ವರ್ಷ ಯೆಹೂದದ ರಾಜನೂ ಯೆಹೋವಾಷನ ಮಗನೂ ಆದ ಅಮಚ್ಯನು ಬದುಕಿದ್ದನು. 18 “ಯೆಹೂದದ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಅಮಚ್ಯನು ಮಾಡಿದ ಇತರ ಮಹಾಕಾರ್ಯಗಳನ್ನೆಲ್ಲ ಬರೆಯಲಾಗಿದೆ. 19 ಜನರು ಜೆರುಸಲೇಮಿನಲ್ಲಿ ಅಮಚ್ಯನ ವಿರುದ್ಧವಾಗಿ ಒಳಸಂಚು ಮಾಡಿದರು. ಅಮಚ್ಯನು ಲಾಕೀಷಿಗೆ ಓಡಿಹೋದನು. ಆದರೆ ಜನರು ಅಮಚ್ಯನ ಹಿಂದೆ ಲಾಕೀಷಿಗೆ ಆಳುಗಳನ್ನು ಕಳುಹಿಸಿದರು. ಅವರು ಲಾಕೀಷಿನಲ್ಲಿ ಅಮಚ್ಯನನ್ನು ಕೊಂದುಹಾಕಿದರು. 20 ಅಮಚ್ಯನ ದೇಹವನ್ನು ಜನರು ಕುದುರೆಗಳ ಮೇಲೆ ತೆಗೆದುಕೊಂಡು ಬಂದರು. ಅಮಚ್ಯನನ್ನು ಜೆರುಸಲೇಮಿನಲ್ಲಿರುವ ದಾವೀದನಗರದಲ್ಲಿ ಅವನ ಪೂರ್ವಿಕರ ಬಳಿ ಸಮಾಧಿಮಾಡಿದರು.

ಅಜರ್ಯನು ಯೆಹೂದದಲ್ಲಿ ತನ್ನ ಆಳ್ವಿಕೆಯನ್ನು ಆರಂಭಿಸಿದನು

21 ನಂತರ ಯೆಹೂದದ ಜನರೆಲ್ಲರೂ ಅಜರ್ಯನನ್ನು ನೂತನ ರಾಜನನ್ನಾಗಿ ಮಾಡಿದರು. ಅಜರ್ಯನಿಗೆ ಹದಿನಾರು ವರ್ಷ ವಯಸ್ಸಾಗಿತ್ತು. 22 ರಾಜನಾದ ಅಮಚ್ಯನು ಸತ್ತಮೇಲೆ ಅವನನ್ನು ಅವನ ಪೂರ್ವಿಕರ ಸ್ಮಶಾನದಲ್ಲಿ ಸಮಾಧಿ ಮಾಡಿದರು. ನಂತರ ಅಜರ್ಯನು ಏಲತ್ ಪಟ್ಟಣವನ್ನು ಮತ್ತೆ ನಿರ್ಮಿಸಿ ಅದನ್ನು ಯೆಹೂದ ರಾಜ್ಯಕ್ಕೆ ಸೇರಿಸಿಕೊಂಡನು.

ಎರಡನೆಯ ಯಾರೊಬ್ಬಾಮನು ಇಸ್ರೇಲಿನಲ್ಲಿ ತನ್ನ ಆಳ್ವಿಕೆಯನ್ನು ಆರಂಭಿಸಿದನು

23 ಯೆಹೂದದ ರಾಜನೂ ಯೆಹೋವಾಷನ ಮಗನೂ ಆದ ಅಮಚ್ಯನ ಆಳ್ವಿಕೆಯ ಹದಿನೈದನೆಯ ವರ್ಷದಲ್ಲಿ ಇಸ್ರೇಲರ ರಾಜನೂ ಯೋವಾಷನ ಮಗನೂ ಆದ ಯಾರೊಬ್ಬಾಮನು ಸಮಾರ್ಯದಲ್ಲಿ ಆಳಲಾರಂಭಿಸಿದನು. ಯಾರೊಬ್ಬಾಮನು ನಲವತ್ತೊಂದು ವರ್ಷ ಆಳಿದನು. 24 ಯೆಹೋವನು ಕೆಟ್ಟದ್ದೆಂದು ಹೇಳಿದ ಕಾರ್ಯಗಳನ್ನು ಯಾರೊಬ್ಬಾಮನು ಮಾಡಿದನು. ಇಸ್ರೇಲರನ್ನು ಪಾಪಮಾಡುವಂತೆ ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಪಾಪಕೃತ್ಯಗಳನ್ನು ಮಾಡುವುದನ್ನು ಯಾರೊಬ್ಬಾಮನು ನಿಲ್ಲಿಸಲಿಲ್ಲ. 25 ಲೆಬೊಹಮಾತಿನಿಂದ ಅರಾಬ ಸಮುದ್ರದವರೆಗೆ ಹಬ್ಬಿದ ಇಸ್ರೇಲರ ದೇಶವನ್ನು ಯಾರೊಬ್ಬಾಮನು ಮತ್ತೆ ವಶಪಡಿಸಿಕೊಂಡನು. ಇಸ್ರೇಲರ ಯೆಹೋವನು ತನ್ನ ಸೇವಕನೂ ಅಮಿತ್ತೈನ ಮಗನೂ ಗತ್‌ಹೇಫೆರಿನ ಪ್ರವಾದಿಯೂ ಆದ ಯೋನಾ ಎಂಬವನ ಮೂಲಕ ಮೊದಲೇ ತಿಳಿಸಿದ್ದಂತೆ ಇದು ಸಂಭವಿಸಿತು. 26 ಇಸ್ರೇಲಿನ ಸ್ವತಂತ್ರರಾದ ಜನರೂ ಗುಲಾಮರೂ ಬಾಧೆಪಡುತ್ತಿರುವುದನ್ನು ಯೆಹೋವನು ನೋಡಿದನು. ಇಸ್ರೇಲರಿಗೆ ಸಹಾಯ ಮಾಡುವವರು ಯಾರೂ ಇರಲಿಲ್ಲ. 27 ಈ ಲೋಕದಿಂದ ಇಸ್ರೇಲರ ಹೆಸರನ್ನೇ ತಾನು ಅಳಿಸಿಹಾಕುತ್ತೇನೆಂದು ಯೆಹೋವನು ಹೇಳಿರಲಿಲ್ಲ. ಆದ್ದರಿಂದ ಇಸ್ರೇಲಿನ ಜನರನ್ನು ರಕ್ಷಿಸಲು ಯೆಹೋವನು ಯೋವಾಷನ ಮಗನಾದ ಯಾರೊಬ್ಬಾಮನನ್ನು ಉಪಯೋಗಿಸಿಕೊಂಡನು.

28 “ಇಸ್ರೇಲಿನ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಯಾರೊಬ್ಬಾಮನು ಮಾಡಿದ ಇತರ ಮಹಾಕಾರ್ಯಗಳ ಬಗ್ಗೆ ಬರೆಯಲಾಗಿದೆ. ಯಾರೊಬ್ಬಾಮನು ಇಸ್ರೇಲಿಗಾಗಿ ದಮಸ್ಕವನ್ನು ಮತ್ತು ಹಮಾತನ್ನು ವಶಪಡಿಸಿಕೊಂಡದ್ದನ್ನು ಇದು ಒಳಗೊಂಡಿದೆ. (ಈ ನಗರಗಳು ಯೆಹೂದಕ್ಕೆ ಸೇರಿದ್ದವು.) 29 ಯಾರೊಬ್ಬಾಮನು ಸತ್ತಮೇಲೆ ಅವನನ್ನು ಅವನ ಪೂರ್ವಿಕರಾದ ಇಸ್ರೇಲಿನ ರಾಜರುಗಳ ಸ್ಮಶಾನದಲ್ಲಿ ಸಮಾಧಿಮಾಡಿದರು. ಯಾರೊಬ್ಬಾಮನ ಮಗನಾದ ಜೆಕರ್ಯನು ಅವನ ನಂತರ ಹೊಸ ರಾಜನಾದನು.

2 ತಿಮೊಥೆಯನಿಗೆ 4

ಜೀವಂತರಾಗಿರುವ ಜನರಿಗೂ ಸತ್ತುಹೋಗಿರುವ ಜನರಿಗೂ ನ್ಯಾಯತೀರಿಸುವಾತನು ಕ್ರಿಸ್ತ ಯೇಸುವೇ. ಆತನು ತನ್ನ ರಾಜ್ಯವನ್ನು ಹೊಂದಿದ್ದಾನೆ. ಆತನು ಮತ್ತೆ ಬರುವನು. ಆದ್ದರಿಂದ ಯೇಸು ಕ್ರಿಸ್ತನ ಮತ್ತು ದೇವರ ಸನ್ನಿಧಿಯಲ್ಲಿ ನಾನು ನಿನಗೆ ಆಜ್ಞಾಪಿಸುವುದೇನೆಂದರೆ, ಸುವಾರ್ತೆಯನ್ನು ಜನರಿಗೆ ತಿಳಿಸು. ಕಾಲವು ಅನುಕೂಲವಾಗಿದ್ದರೂ ಅನಾನುಕೂಲವಾಗಿದ್ದರೂ ಬೋಧನೆಯನ್ನು ಮುಂದುವರಿಸು. ಜನರು ಮಾಡಬೇಕಾದುದನ್ನು ಅವರಿಗೆ ತಿಳಿಸು. ಅವರು ತಪ್ಪು ಮಾಡಿದಾಗ ಅದನ್ನು ಅವರಿಗೆ ತೋರಿಸಿಕೊಡು. ಅವರನ್ನು ಗದರಿಸು, ಇವುಗಳನ್ನು ಬಹಳ ತಾಳ್ಮೆಯಿಂದಲೂ ಎಚ್ಚರಿಕೆಯಿಂದಲೂ ಮಾಡು.

ಜನರು ಸತ್ಯೋಪದೇಶವನ್ನು ಕೇಳದಿರುವ ಕಾಲವು ಬರಲಿದೆ. ಜನರು ತಮ್ಮನ್ನು ಮೆಚ್ಚಿಸುವಂಥ ಬೋಧಕರನ್ನು ಮತ್ತು ತಮ್ಮ ಕಿವಿಗೆ ಹಿತವೆನಿಸುವ ಬೋಧನೆಯನ್ನು ನೀಡುವ ಬೋಧಕರನ್ನು ಕಂಡುಕೊಳ್ಳುವರು. ಜನರು ಸತ್ಯವನ್ನು ಕೇಳದೆ ಸುಳ್ಳುಕಥೆಗಳನ್ನು ಕೇಳಲಾರಂಭಿಸುತ್ತಾರೆ. ಆದರೆ ನೀನು ಎಲ್ಲಾ ಕಾಲದಲ್ಲಿಯೂ ಸ್ವಸ್ಥಚಿತ್ತನಾಗಿರು. ತೊಂದರೆಗಳು ಬಂದಾಗ ಸಹಿಸಿಕೊ. ಸುವಾರ್ತೆಯನ್ನು ಪ್ರಚಾರಮಾಡು. ದೇವರ ಸೇವಕನಿಗೆ ಯೋಗ್ಯವಾದ ಎಲ್ಲಾ ಕಾರ್ಯಗಳನ್ನು ಮಾಡುತ್ತಿರು.

ನನ್ನ ಜೀವಿತವನ್ನು ದೇವರಿಗಾಗಿ ಅರ್ಪಿಸುತ್ತಿದ್ದೇನೆ. ನಾನು ಈ ಲೋಕವನ್ನು ಬಿಟ್ಟುಹೋಗುವ ಕಾಲವು ಸಮೀಪಿಸಿದೆ. ಶ್ರೇಷ್ಠ ಹೋರಾಟವನ್ನು ಮಾಡಿದ್ದೇನೆ. ಪಂದ್ಯದಲ್ಲಿ ನನ್ನ ಓಟವನ್ನು ಮುಗಿಸಿದ್ದೇನೆ; ನನ್ನ ನಂಬಿಕೆಯನ್ನು ಕಾಪಾಡಿಕೊಂಡಿದ್ದೇನೆ. ನೀತಿವಂತರಿಗೆ ದೊರೆಯುವ ಜಯಮಾಲೆಯು ಈಗ ನನಗೆ ಸಿದ್ಧವಾಗಿದೆ. ನೀತಿಯುಳ್ಳ ನ್ಯಾಯಾಧಿಪತಿಯಾಗಿರುವ ಪ್ರಭುವೇ ನನಗೆ ಅದನ್ನು ಆ ದಿನದಂದು ಕೊಡುವನು. ನನಗೆ ಮಾತ್ರವಲ್ಲದೆ ಆತನ ಬರುವಿಕೆಯನ್ನು ಅಪೇಕ್ಷಿಸಿ ಅದಕ್ಕಾಗಿ ಕಾಯುತ್ತಿದ್ದವರಿಗೆಲ್ಲ ಆತನು ಆ ಜಯಮಾಲೆಯನ್ನು ದಯಪಾಲಿಸುವನು.

ವೈಯಕ್ತಿಕ ಮಾತುಗಳು

ನಿನಗೆ ಸಾಧ್ಯವಾದಷ್ಟು ಬೇಗನೆ ನನ್ನ ಬಳಿಗೆ ಬಾ. 10 ದೇಮನು ಈ ಲೋಕವನ್ನು ಬಹಳ ಪ್ರೀತಿಸಿದನು. ಆದಕಾರಣವೇ ಅವನು ನನ್ನನ್ನು ಬಿಟ್ಟು ಥೆಸಲೋನಿಕಕ್ಕೆ ಹೋದನು. ಕ್ರೆಸ್ಕನು ಗಲಾತ್ಯಕ್ಕೆ ಹೋದನು. ತೀತನು ದಲ್ಮಾತ್ಯಕ್ಕೆ ಹೋದನು. 11 ಲೂಕನೊಬ್ಬನು ಮಾತ್ರ ನನ್ನ ಜೊತೆಯಲ್ಲಿದ್ದಾನೆ. ನೀನು ಬರುವಾಗ ಮಾರ್ಕನನ್ನೂ ನಿನ್ನ ಜೊತೆಯಲ್ಲಿ ಕರೆದುಕೊಂಡು ಬಾ. ಅವನು ನನ್ನ ಸೇವೆಗೆ ಸಹಾಯ ಮಾಡಬಲ್ಲನು. 12 ತುಖಿಕನನ್ನು ಎಫೆಸಕ್ಕೆ ಕಳುಹಿಸಿದೆನು.

13 ನಾನು ತ್ರೋವದಲ್ಲಿದ್ದಾಗ ಕರ್ಪನ ಬಳಿ ನನ್ನ ಮೇಲಂಗಿಯನ್ನು ಬಿಟ್ಟು ಬಂದಿದ್ದೇನೆ. ನೀನು ನನ್ನ ಬಳಿಗೆ ಬರುವಾಗ ಅದನ್ನು ತೆಗೆದುಕೊಂಡು ಬಾ. ನನ್ನ ಪುಸ್ತಕಗಳನ್ನೂ ಮುಖ್ಯವಾಗಿ, ಕುರಿಚರ್ಮದಿಂದ ಮಾಡಿದ ಪುಸ್ತಕಗಳನ್ನು ತೆಗೆದುಕೊಂಡು ಬಾ.

14 ಕಂಚುಗಾರನಾದ ಅಲೆಗ್ಸಾಂಡರನು ನನಗೆ ಅನೇಕ ಕೆಡಕುಗಳನ್ನು ಮಾಡಿದನು. ಅವನು ಮಾಡಿದ ಕೃತ್ಯಗಳಿಗಾಗಿ ಪ್ರಭುವು ಅವನನ್ನು ದಂಡಿಸುವನು. 15 ಅವನು ನಿನಗೂ ತೊಂದರೆ ಕೊಡಲಾಗದಂತೆ ಎಚ್ಚರವಾಗಿರು. ಅವನು ನಮ್ಮ ಉಪದೇಶದ ವಿರುದ್ಧ ಬಹಳ ಹೋರಾಡಿದನು.

16 ಮೊದಲ ಸಲ ನಾನು ನನ್ನನ್ನು ಸಮರ್ಥಿಸಿಕೊಂಡಾಗ ನನಗೆ ಯಾರೂ ಸಹಾಯಮಾಡಲಿಲ್ಲ. ಎಲ್ಲರೂ ನನ್ನನ್ನು ಬಿಟ್ಟುಹೋದರು. ದೇವರು ಅವರನ್ನು ಕ್ಷಮಿಸಲಿ ಎಂದು ಪ್ರಾರ್ಥಿಸುತ್ತೇನೆ. 17 ಆದರೆ ಪ್ರಭುವು ನನ್ನ ಬಳಿಯೇ ಇದ್ದನು. ನಾನು ಸುವಾರ್ತೆಯನ್ನು ಯೆಹೂದ್ಯರಲ್ಲದವರಿಗೆ ಸಂಪೂರ್ಣವಾಗಿ ಬೋಧಿಸಲು ಪ್ರಭುವು ನನಗೆ ಶಕ್ತಿಯನ್ನು ದಯಪಾಲಿಸಿದನು. ಆ ಸುವಾರ್ತೆಯನ್ನು ಯೆಹೂದ್ಯರಲ್ಲದ ಜನರೆಲ್ಲರೂ ಕೇಳುವುದು ಪ್ರಭುವಿನ ಇಷ್ಟವಾಗಿತ್ತು. ಆತನು ನನ್ನನ್ನು ಸಿಂಹದ (ಶತ್ರು) ಬಾಯಿಂದ ರಕ್ಷಿಸಿದನು. 18 ಯಾರಾದರೂ ನನಗೆ ತೊಂದರೆ ಮಾಡಲು ಪ್ರಯತ್ನಿಸಿದರೆ, ಪ್ರಭುವು ನನ್ನನ್ನು ರಕ್ಷಿಸುವನು. ಪ್ರಭುವು ನನ್ನನ್ನು ಸುರಕ್ಷಿತವಾಗಿ ತನ್ನ ಪರಲೋಕರಾಜ್ಯಕ್ಕೆ ಸೇರಿಸುವನು. ಯುಗಯುಗಾಂತರಗಳಲ್ಲಿಯೂ ಪ್ರಭುವಿಗೆ ಮಹಿಮೆಯಾಗಲಿ.

ಅಂತಿಮ ವಂದನೆಗಳು

19 ಪ್ರಿಸ್ಕಳಿಗೆ, ಅಕ್ವಿಲ್ಲನಿಗೆ ಮತ್ತು ಒನೇಸಿಫೋರನ ಮನೆಯವರಿಗೆ ವಂದನೆಗಳನ್ನು ಹೇಳು. 20 ಎರಸ್ತನು ಕೊರಿಂಥದಲ್ಲಿ ನೆಲಸಿದನು. ತ್ರೊಫಿಮನು ಅಸ್ವಸ್ಥನಾಗಿದ್ದುದರಿಂದ ನಾನು ಅವನನ್ನು ಮಿಲೇತದಲ್ಲಿ ಇರಿಸಬೇಕಾಯಿತು. 21 ಚಳಿಗಾಲಕ್ಕೆ ಮುಂಚೆಯೇ ನನ್ನ ಬಳಿಗೆ ಬರಲು ನಿನ್ನಿಂದಾದಷ್ಟು ಪ್ರಯತ್ನಿಸು.

ಯುಬೂಲ, ಪೊದೇಯ, ಲೀನ, ಕ್ಲೌದ್ಯ, ಇವರುಗಳು ಮತ್ತು ಇತರ ಸಹೋದರರೆಲ್ಲರೂ ನಿನಗೆ ವಂದನೆಗಳನ್ನು ಹೇಳಿದ್ದಾರೆ.

22 ಪ್ರಭುವು ನಿನ್ನ ಆತ್ಮದ ಸಂಗಡ ಇರಲಿ. ಆತನ ಕೃಪೆಯು ನಿನ್ನೊಂದಿಗಿರಲಿ.

ಹೋಶೇಯ 7

“ನಾನು ಇಸ್ರೇಲನ್ನು ಗುಣಪಡಿಸುವೆನು.
    ಆಗ ಎಫ್ರಾಯೀಮನು ಪಾಪಮಾಡಿದ್ದಾನೆಂದು ಜನರಿಗೆ ತಿಳಿದುಬರುವದು.
ಜನರಿಗೆ ಸಮಾರ್ಯದವರ ಸುಳ್ಳು ತಿಳಿದುಬರುವದು.
    ಆ ನಗರದಲ್ಲಿ ಕಳ್ಳರು ಬರುತ್ತಾ ಹೋಗುತ್ತಾ ಇರುವದನ್ನು ಜನರು ತಿಳಿಯುವರು.
ನಾನು ಅವರ ದುಷ್ಟತ್ವವನ್ನು ನೆನಪಿನಲ್ಲಿಟ್ಟಿರುತ್ತೇನೆಂಬುದನ್ನು ಅವರು ನಂಬುವದಿಲ್ಲ.
    ಅವರು ಮಾಡಿದ ದುಷ್ಟತನವು ಸುತ್ತಲೂ ಕಾಣಿಸುವದು.
    ನಾನು ಅವರ ಪಾಪಗಳನ್ನು ಸ್ಪಷ್ಟವಾಗಿ ನೋಡುತ್ತೇನೆ.
ಅವರ ದುಷ್ಟತನವು ಅವರ ಅರಸರನ್ನು ಸಂತಸಗೊಳಿಸುತ್ತದೆ.
    ಅವರ ಸುಳ್ಳುಗಳು ಅವರ ನಾಯಕರನ್ನು ಸಂತೋಷಪಡಿಸುತ್ತವೆ.
ರೊಟ್ಟಿಯನ್ನು ಸುಡಲು ರೊಟ್ಟಿಗಾರನು ಹಿಟ್ಟನ್ನು ನಾದುವನು.
    ರೊಟ್ಟಿಯು ಶಾಖದಿಂದ ಉಬ್ಬುತ್ತಿರುವಾಗ ರೊಟ್ಟಿಗಾರನು ಒಲೆಯನ್ನು ಮತ್ತಷ್ಟು ಉರಿಸುವುದಿಲ್ಲ.
ಇಸ್ರೇಲರಾದರೋ ಹಾಗಲ್ಲ,
    ಅವರು ಒಲೆಯನ್ನು ಮತ್ತಷ್ಟು ಉರಿಸುತ್ತಾರೆ.
ನಮ್ಮ ಅರಸನ ದಿವಸದಲ್ಲಿ ನಾಯಕರು ಅತಿಯಾಗಿ ಕುಡಿದು ರೋಗಗ್ರಸ್ತರಾಗುವರು.
    ಅವರು ದ್ರಾಕ್ಷಾರಸದಿಂದ ಅಮಲೇರಿದವರಾಗಿ
    ದೇವರನ್ನು ಅಪಹಾಸ್ಯಮಾಡುವ ಜನರೊಂದಿಗೆ ಒಪ್ಪಂದ ಮಾಡಿಕೊಳ್ಳುವರು.
ಜನರು ಗುಪ್ತವಾಗಿ ಯೋಜನೆಯನ್ನು ತಯಾರಿಸುವರು.
    ಉರಿಯುವ ಒಲೆಯಂತೆ ಅವರ ಹೃದಯವು ಉತ್ಸಾಹಗೊಳ್ಳುವುದು.
ಅವರ ಉತ್ಸಾಹವು ರಾತ್ರಿಯೆಲ್ಲಾ ಉರಿಯುವುದು.
    ಅದು ಮುಂಜಾನೆಯಲ್ಲಿ ಧಗಧಗಿಸುವ ಬೆಂಕಿಯ ಕಾವಿನಂತಿರುವದು.
ಅವರು ಬಿಸಿ ಮಾಡಲ್ಪಟ್ಟ ಕುಲುಮೆಯಂತಿರುವರು.
    ಅವರು ತಮ್ಮನ್ನು ಆಳುವವರನ್ನು ನಾಶಮಾಡಿದರು.
ಅವರ ರಾಜರುಗಳೆಲ್ಲಾ ಬಿದ್ದುಹೋದರು.
    ಅವರಲ್ಲಿ ಒಬ್ಬರಾದಲೂ ಸಹಾಯಕ್ಕಾಗಿ ನನಗೆ ಮೊರೆಯಿಡಲಿಲ್ಲ.”

ತಾನು ನಾಶವಾಗುತ್ತೇನೆಂದು ಇಸ್ರೇಲಿಗೆ ಗೊತ್ತಿಲ್ಲ

“ಎಫ್ರಾಯೀಮು ಬೇರೆ ದೇಶಗಳೊಂದಿಗೆ ಬೆರೆತುಹೋಗುತ್ತದೆ.
    ಎಫ್ರಾಯೀಮು ತಿರುವಿಹಾಕದ ಚಪಾತಿಯಂತಿದೆ.
ಅನ್ಯರು ಎಫ್ರಾಯೀಮನ ಶಕ್ತಿಯನ್ನು ಮುರಿಯುವರು.
    ಆದರೆ ಅವನಿಗೆ ಅದು ತಿಳಿದಿರುವದಿಲ್ಲ.
ಎಫ್ರಾಯೀಮನ ತಲೆಯಲ್ಲಿ ನರೆಕೂದಲು ಬಂದಾಗ್ಯೂ
    ಅದಕ್ಕೆ ತಿಳಿವಳಿಕೆ ಬಂದಿರುವುದಿಲ್ಲ.
10 ಎಫ್ರಾಯೀಮನ ಹೆಮ್ಮೆಯು ಅವನಿಗೆ ವಿರುದ್ಧವಾಗಿ ಸಾಕ್ಷಿ ಕೊಡುತ್ತದೆ.
    ಜನರಿಗೆ ನಾನಾ ತರದ ಸಂಕಟಗಳು ಬಂದಾಗ್ಯೂ
ಅವರು ತಮ್ಮ ದೇವರಾದ ಯೆಹೋವನ ಬಳಿಗೆ ಹೋಗಲಿಲ್ಲ.
    ಜನರು ತಮ್ಮ ಸಹಾಯಕ್ಕಾಗಿ ಆತನಿಗೆ ಮೊರೆಯಿಡಲಿಲ್ಲ.
11 ಹೀಗೆ ಎಫ್ರಾಯೀಮ್ ತಿಳಿವಳಿಕೆ ಇಲ್ಲದ ಮೂರ್ಖ ಪಾರಿವಾಳದಂತಾಗಿದೆ.
    ಜನರು ಸಹಾಯಕ್ಕಾಗಿ ಈಜಿಪ್ಟನ್ನು ಕರೆದರು,
    ಅಶ್ಶೂರ್ಯದ ಕಡೆಗೆ ಓಡಿದರು.
12 ಅವರು ಆ ದೇಶಗಳಿಗೆ ಹೋಗುವಾಗ
    ನಾನು ಅವರನ್ನು ಉರುಲಿನೊಳಗೆ ಸಿಕ್ಕಿಸುವೆನು.
ನನ್ನ ಬಲೆಯನ್ನು ಅವರ ಮೇಲೆ ಬೀಸುವೆನು.
    ಆಕಾಶದ ಪಕ್ಷಿಗಳ ರೀತಿಯಲ್ಲಿ ಅವರನ್ನು ಕೆಳಗೆ ಬೀಳಿಸುವೆನು.
    ಅವರು ಮಾಡಿದ ಒಪ್ಪಂದಕ್ಕಾಗಿ ನಾನು ಅವರನ್ನು ಶಿಕ್ಷಿಸುವೆನು.
13 ಅವರು ನನ್ನನ್ನು ಬಿಟ್ಟು ತೊಲಗಿದರು. ಇದು ಅವರಿಗೆ ಕೆಡುಕು ಉಂಟುಮಾಡುವದು.
    ಅವರು ನನಗೆ ವಿಧೇಯರಾಗಲು ಇಷ್ಟಪಡಲಿಲ್ಲ. ಆದ್ದರಿಂದ ಅವರು ನಾಶವಾಗುವರು.
ನಾನು ಅವರನ್ನು ರಕ್ಷಿಸಿ ಕಾಪಾಡಿದ್ದಾಗ್ಯೂ
    ಅವರು ನನಗೆ ವಿರುದ್ಧವಾಗಿ ಸುಳ್ಳಾಡಿದರು.
14 ಹೃದಯಪೂರ್ವಕವಾಗಿ ಅವರು ನನ್ನನ್ನು ಕರೆಯಲಿಲ್ಲ.
    ಹೌದು, ಅವರು ತಮ್ಮ ಹಾಸಿಗೆಗಳ ಮೇಲೆ ಅಳುವರು.
ಆಹಾರಧಾನ್ಯ, ಹೊಸ ದ್ರಾಕ್ಷಾರಸವನ್ನು ಕೇಳುವಾಗ, ಬೇರೆಯವರ ದೇಶಗಳಲ್ಲಿ ಆಹಾರಕ್ಕಾಗಿ ಅಲೆದಾಡುವಾಗ ಅವರು ಅಳುವರು.
    ಆದರೆ ತಮ್ಮ ಹೃದಯಗಳಲ್ಲಿ ಅವರು ನನ್ನಿಂದ ದೂರವಾಗಿದ್ದಾರೆ.
15 ನಾನು ಅವರಿಗೆ ತರಬೇತಿಕೊಟ್ಟು ಅವರ ತೋಳುಗಳನ್ನು ಬಲಪಡಿಸಿದೆನು.
    ಆದರೆ ನನಗೆ ವಿರುದ್ಧವಾಗಿ ಅವರು ದುರಾಲೋಚನೆಯನ್ನು ಮಾಡಿದರು.
16 ಅವರು ದೇವರಲ್ಲದ್ದಕ್ಕೆ ತಿರುಗಿಕೊಂಡರು.
    ಮೋಸದ ಬಿಲ್ಲಿನಂತೆ ಅವರಾದರು.
ಅವರ ನಾಯಕರು ತಮ್ಮ ಶಕ್ತಿಯ ಬಗ್ಗೆ ಹೆಚ್ಚಳಪಟ್ಟರು.
    ಆದರೆ ಅವರು ಕತ್ತಿಯಲ್ಲಿ ಸಾಯುವರು.
ಆಗ ಈಜಿಪ್ಟಿನ ಜನರು
    ಅವರನ್ನು ನೋಡಿ ನಗಾಡುವರು.

ಕೀರ್ತನೆಗಳು 120-122

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.

120 ನಾನು ಆಪತ್ತಿನಲ್ಲಿದ್ದಾಗ
    ಯೆಹೋವನಿಗೆ ಮೊರೆಯಿಟ್ಟೆನು.
    ಆತನು ನನಗೆ ಸದುತ್ತರವನ್ನು ದಯಪಾಲಿಸಿದನು.
ಯೆಹೋವನೇ, ಸುಳ್ಳಾಡುವವರಿಂದಲೂ
    ವಂಚಕರಿಂದಲೂ ನನ್ನನ್ನು ರಕ್ಷಿಸು.

ಸುಳ್ಳುಗಾರರೇ, ನಿಮಗೆ ದೇವರಿಂದ ಬರುವ ದಂಡನೆಯನ್ನು ಬಲ್ಲಿರಾ?
    ನಿಮಗೆ ಯಾವ ಶಿಕ್ಷೆಯನ್ನು ಒದಗಿಸಬೇಕು?
ಯುದ್ಧವೀರನ ತೀಕ್ಷ್ಣವಾದ ಬಾಣದಿಂದಲೂ ಉರಿಯುವ ಕೆಂಡಗಳಿಂದಲೂ ದೇವರು ನಿಮ್ಮನ್ನು ದಂಡಿಸುವನು.

ಸುಳ್ಳುಗಾರರಾದ ನಿಮ್ಮ ಸಮೀಪದಲ್ಲಿ ವಾಸಿಸುವುದು
    ಮೇಷೆಕಿನಲ್ಲಿಯೂ ಕೇದಾರಿನ ಗುಡಾರಗಳಲ್ಲಿಯೂ[a] ವಾಸಿಸುವಂತಿರುವುದು.
ಶಾಂತಿದ್ವೇಷಕರೊಂದಿಗೆ ನಾನು ಬಹುಕಾಲ ವಾಸಿಸಿದ್ದೇನೆ.
ಶಾಂತಿ ನೆಲೆಸಿರಲಿ ಎಂದು ನಾನು ಹೇಳಿದರೂ ಅವರು ಯುದ್ಧವನ್ನೇ ಇಷ್ಟಪಡುತ್ತಾರೆ.

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.

121 ನಾನು ಕಣ್ಣೆತ್ತಿ ಪರ್ವತಗಳ ಕಡೆಗೆ ನೋಡುತ್ತೇನೆ.
    ನನಗೆ ಸಹಾಯವು ಎಲ್ಲಿಂದ ಬರುವುದು?
ಭೂಮ್ಯಾಕಾಶಗಳ ಸೃಷ್ಟಿಕರ್ತನಾದ ಯೆಹೋವನಿಂದಲೇ
    ನನಗೆ ಸಹಾಯವು ಬರುವುದು.
ಆತನು ನಿನ್ನನ್ನು ಬೀಳಗೊಡಿಸುವುದಿಲ್ಲ;
    ನಿನ್ನ ಸಂರಕ್ಷಕನು ನಿದ್ರೆಹೋಗುವುದಿಲ್ಲ.
ಇಸ್ರೇಲಿನ ಸಂರಕ್ಷಕನು ತೂಕಡಿಸುವುದಿಲ್ಲ,
    ನಿದ್ರಿಸುವುದೂ ಇಲ್ಲ!
ನಿನ್ನನ್ನು ಕಾಯುವವನು ಯೆಹೋವನೇ.
    ನಿನ್ನನ್ನು ರಕ್ಷಿಸಲು ಆತನು ನಿನ್ನ ಬಲಗಡೆಯಲ್ಲಿ ನಿಂತಿದ್ದಾನೆ.
ಹಗಲಲ್ಲಿ ಸೂರ್ಯನೂ
    ರಾತ್ರಿಯಲ್ಲಿ ಚಂದ್ರನೂ ನಿನ್ನನ್ನು ಬಾಧಿಸುವುದಿಲ್ಲ.
ಯೆಹೋವನು ನಿನ್ನನ್ನು ಎಲ್ಲಾ ಅಪಾಯಗಳಿಂದ ರಕ್ಷಿಸುವನು;
    ನಿನ್ನ ಪ್ರಾಣವನ್ನು ಕಾಯುವನು.
ನೀನು ಹೋಗುವಾಗಲೂ ಬರುವಾಗಲೂ ಯೆಹೋವನು ನಿನಗೆ ಸಹಾಯಮಾಡುವನು.
    ಆತನು ನಿನ್ನನ್ನು ಸದಾಕಾಲ ಕಾಪಾಡುವನು.

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ. ರಚನೆಗಾರ: ದಾವೀದ.

122 “ಯೆಹೋವನ ಆಲಯಕ್ಕೆ ಹೋಗೋಣ”
    ಎಂದು ಜನರು ಹೇಳಿದಾಗ ನನಗೆ ಬಹು ಸಂತೋಷವಾಯಿತು.
ನಾವು ಜೆರುಸಲೇಮಿನ ಬಾಗಿಲುಗಳ ಬಳಿಯಲ್ಲಿ ನಿಂತಿದ್ದೇವೆ.
ಇದು ಹೊಸ ಜೆರುಸಲೇಮ್!
    ಈ ಪಟ್ಟಣವು ಏಕೀಕರಣಗೊಂಡ ನಗರದಂತೆ ಮತ್ತೆ ಕಟ್ಟಲ್ಪಟ್ಟಿದೆ.
ಇಸ್ರೇಲಿನ ಕುಲಗಳವರು ಅಂದರೆ ಯೆಹೋವನ ಕುಲಗಳವರು
    ಯೆಹೋವನ ಹೆಸರನ್ನು ಕೊಂಡಾಡಲು ಅಲ್ಲಿಗೆ ಹೋಗುವರು.
ದಾವೀದನ ಕುಟುಂಬದ ರಾಜರುಗಳು ಜನರಿಗೆ
    ನ್ಯಾಯತೀರ್ಪು ನೀಡಲು ತಮ್ಮ ಸಿಂಹಾಸನಗಳನ್ನು ಅಲ್ಲಿ ಸ್ಥಾಪಿಸಿದರು.

ಜೆರುಸಲೇಮಿನ ಶಾಂತಿಗೋಸ್ಕರ ಪ್ರಾರ್ಥಿಸಿರಿ:
    “ನಿನ್ನನ್ನು ಪ್ರೀತಿಸುವ ಜನರು ಅಲ್ಲಿ ಶಾಂತಿಯನ್ನು ಕಂಡುಕೊಳ್ಳಲಿ.
    ನಿನ್ನ ಕೋಟೆಗಳೊಳಗೆ ಶಾಂತಿ ನೆಲಸಿರಲಿ
    ನಿನ್ನ ಮಹಾ ಕಟ್ಟಡಗಳಲ್ಲಿ ಸುರಕ್ಷತೆಯಿರಲಿ.”

ನನ್ನ ಸಹೋದರರ ಮತ್ತು ನೆರೆಯವರ ಒಳ್ಳೆಯದಕ್ಕಾಗಿ
    ಅಲ್ಲಿ ಶಾಂತಿ ನೆಲೆಸಿರಲೆಂದು ಪ್ರಾರ್ಥಿಸುವೆನು.
ನಮ್ಮ ದೇವರಾದ ಯೆಹೋವನ ಆಲಯಕ್ಕೋಸ್ಕರ
    ಈ ಪಟ್ಟಣಕ್ಕೆ ಒಳ್ಳೆಯದಾಗಲೆಂದು ಪ್ರಾರ್ಥಿಸುವೆನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International