Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
2 ರಾಜರುಗಳು 13

ಯೆಹೋವಾಹಾಜನು ತನ್ನ ಆಳ್ವಿಕೆಯನ್ನು ಆರಂಭಿಸಿದನು

13 ಯೆಹೂದದ ಅರಸನೂ ಅಹಜ್ಯನ ಮಗನೂ ಆದ ಯೆಹೋವಾಷನ ಆಳ್ವಿಕೆಯ ಇಪ್ಪತ್ತಮೂರನೆಯ ವರ್ಷದಲ್ಲಿ ಯೇಹುವಿನ ಮಗನಾದ ಯೆಹೋವಾಹಾಜನು ಸಮಾರ್ಯದಲ್ಲಿ ಇಸ್ರೇಲಿನ ರಾಜನಾದನು. ಯೆಹೋವಾಹಾಜನು ಹದಿನೇಳು ವರ್ಷ ಆಳಿದನು.

ಯೆಹೋವನು ತಪ್ಪೆಂದು ಹೇಳಿದ ಕಾರ್ಯಗಳನ್ನು ಯೆಹೋವಾಹಾಜನು ಮಾಡಿದನು. ಇಸ್ರೇಲರನ್ನು ಪಾಪಮಾಡುವಂತೆ ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಪಾಪಗಳನ್ನೂ ಯೆಹೋವಾಹಾಜನು ಅನುಸರಿಸುತ್ತಲೇ ಹೋದನು. ಆಗ ಯೆಹೋವನು ಇಸ್ರೇಲಿಗೆ ವಿರುದ್ಧವಾಗಿ ಕೋಪಗೊಂಡು ಅರಾಮ್ಯರ ರಾಜನಾದ ಹಜಾಯೇಲನ ಮತ್ತು ಅವನ ಮಗನಾದ ಬೆನ್ಹದದನ ಅಧೀನಕ್ಕೆ ಇಸ್ರೇಲನ್ನು ಒಪ್ಪಿಸಿದನು.

ಇಸ್ರೇಲಿನ ಮೇಲೆ ಯೆಹೋವನ ಕರುಣೆ

ಆಗ ಯೆಹೋವಾಹಾಜನು ಯೆಹೋವನಿಗೆ ಮೊರೆಯಿಟ್ಟನು. ಯೆಹೋವನು ಅವನ ಮೊರೆಯನ್ನು ಕೇಳಿ, ಅರಾಮ್ಯರ ರಾಜನಿಂದ ಬಾಧೆಗೆ ಒಳಗಾಗಿದ್ದ

ಇಸ್ರೇಲನ್ನು ರಕ್ಷಿಸಲು ಒಬ್ಬನನ್ನು ಯೆಹೋವನು ಕಳುಹಿಸಿದನು. ಇಸ್ರೇಲರು ಅರಾಮ್ಯದಿಂದ ಬಿಡುಗಡೆಗೊಂಡು ಸ್ವತಂತ್ರರಾದರು. ಇಸ್ರೇಲರು ತಮ್ಮ ಸ್ವಂತ ಮನೆಗಳಿಗೆ ಹಿಂದಿರುಗಿ ಸುರಕ್ಷಿತವಾಗಿ ವಾಸಿಸಿದರು.

ಆದರೂ ಇಸ್ರೇಲರು ಪಾಪಗಳನ್ನು ಮಾಡುವಂತೆ ಪ್ರೇರೇಪಿಸಿದ ಯಾರೊಬ್ಬಾಮನ ಕುಟುಂಬದ ಪಾಪಗಳನ್ನು ಮಾಡುವುದನ್ನು ಇಸ್ರೇಲರು ನಿಲ್ಲಿಸಲಿಲ್ಲ. ಇಸ್ರೇಲರು ಯಾರೊಬ್ಬಾಮನ ಪಾಪಗಳನ್ನು ಮಾಡುತ್ತಲೇ ಹೋದರು. ಅವರು ಸಮಾರ್ಯದಲ್ಲಿ ಅಶೇರ ವಿಗ್ರಹಸ್ತಂಭವನ್ನು ನೆಟ್ಟರು.

ಅರಾಮ್ಯರ ರಾಜನು ಯೆಹೋವಾಹಾಜನ ಸೇನೆಯನ್ನು ಸೋಲಿಸಿದನು. ಅರಾಮ್ಯರ ರಾಜನು ಐವತ್ತು ಮಂದಿ ರಾಹುತರನ್ನು, ಹತ್ತು ರಥಗಳನ್ನು ಮತ್ತು ಹತ್ತು ಸಾವಿರ ಭೂಸೈನಿಕರನ್ನು ಬಿಟ್ಟು ಉಳಿದವರೆಲ್ಲರನ್ನು ಸುಗ್ಗಿಯ ಕಾಲದಲ್ಲಿ ಗಾಳಿಗೆ ಹಾರಿಹೋಗುವ ಹೊಟ್ಟಿನಂತೆ ನಾಶಮಾಡಿದನು.

“ಇಸ್ರೇಲಿನ ರಾಜರುಗಳು ಇತಿಹಾಸ” ಎಂಬ ಪುಸ್ತಕದಲ್ಲಿ ಯೆಹೋವಾಹಾಜನು ಮಾಡಿದ ಇತರ ಮಹಾಕಾರ್ಯಗಳನ್ನು ಕುರಿತು ಬರೆಯಲಾಗಿದೆ. ಯೆಹೋವಾಹಾಜನು ತೀರಿಕೊಂಡಾಗ ಅವನನ್ನು ಅವನ ಪೂರ್ವಿಕರ ಬಳಿ ಸಮಾರ್ಯದಲ್ಲಿ ಸಮಾಧಿಮಾಡಿದರು. ಯೆಹೋವಾಹಾಜನ ನಂತರ ಅವನ ಮಗನಾದ ಯೋವಾಷನು ನೂತನ ರಾಜನಾದನು.

ಇಸ್ರೇಲಿನಲ್ಲಿ ಯೋವಾಷನ ಆಳ್ವಿಕೆ

10 ಯೆಹೂದದ ರಾಜನಾಗಿದ್ದ ಯೆಹೋವಾಷನ ಆಳ್ವಿಕೆಯ ಮೂವತ್ತೇಳನೆಯ ವರ್ಷದಲ್ಲಿ ಯೆಹೋವಾಹಾಜನ ಮಗನಾದ ಯೋವಾಷನು ಸಮಾರ್ಯದಲ್ಲಿ ಇಸ್ರೇಲಿನ ರಾಜನಾದನು. ಯೋವಾಷನು ಇಸ್ರೇಲನ್ನು ಹದಿನಾರು ವರ್ಷ ಆಳಿದನು. 11 ಯೆಹೋವನು ತಪ್ಪೆಂದು ಹೇಳಿದ ಕಾರ್ಯಗಳನ್ನು ಇಸ್ರೇಲಿನ ರಾಜನಾದ ಯೋವಾಷನು ಮಾಡಿದನು. ಇಸ್ರೇಲರು ಪಾಪಗಳನ್ನು ಮಾಡುವಂತೆ ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಪಾಪಗಳನ್ನು ಮತ್ತೆ ಮಾಡುವುದನ್ನು ಅವನು ನಿಲ್ಲಿಸಲಿಲ್ಲ. 12 ಯೋವಾಷನು ಮಾಡಿದ ಮಹಾಕಾರ್ಯಗಳನ್ನು ಮತ್ತು ಯೆಹೂದದ ರಾಜನಾದ ಅಮಚ್ಯನ ವಿರುದ್ಧವಾಗಿ ಅವನು ಮಾಡಿದ ಯುದ್ಧಗಳನ್ನು, “ಇಸ್ರೇಲರ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಬರೆಯಲಾಗಿದೆ. 13 ಯೋವಾಷನು ತೀರಿಕೊಂಡಾಗ ಅವನ ಪೂರ್ವಿಕರ ಬಳಿಯಲ್ಲಿ ಅವನನ್ನು ಸಮಾಧಿಮಾಡಿದರು. ಅನಂತರ ಯಾರೊಬ್ಬಾಮನು ಯೋವಾಷಾನ ಸಿಂಹಾಸನದ ಮೇಲೆ ಕುಳಿತುಕೊಂಡು ನೂತನ ರಾಜನಾದನು. ಯೋವಾಷನನ್ನು ಸಮಾರ್ಯದಲ್ಲಿ ಇಸ್ರೇಲಿನ ರಾಜರುಗಳ ಜೊತೆ ಸಮಾಧಿಮಾಡಿದರು.

ಯೋವಾಷನು ಎಲೀಷನನ್ನು ಸಂಧಿಸುವನು

14 ಎಲೀಷನು ಕಾಯಿಲೆ ಬಿದ್ದನು. ತರುವಾಯ, ಈ ಕಾಯಿಲೆಯಿಂದ ಎಲೀಷನು ಸತ್ತುಹೋದನು. ಇಸ್ರೇಲಿನ ರಾಜನಾದ ಯೋವಾಷನು ಎಲೀಷನ ಬಳಿಗೆ ಹೋದನು. ಯೋವಾಷನು ಎಲೀಷನಿಗಾಗಿ ಗೋಳಾಡಿದನು. ಯೋವಾಷನು, “ನನ್ನ ತಂದೆಯೇ, ನನ್ನ ತಂದೆಯೇ, ದೇವರು ಬಂದು ನಿನ್ನನ್ನು ತೆಗೆದುಕೊಂಡು ಹೋಗಲು ಇದು ಸಕಾಲವೇ?”[a] ಎಂದು ಹೇಳಿದನು.

15 ಎಲೀಷನು ಯೋವಾಷನಿಗೆ, “ಒಂದು ಬಿಲ್ಲು ಮತ್ತು ಕೆಲವು ಬಾಣಗಳನ್ನು ತೆಗೆದುಕೋ” ಎಂದು ಹೇಳಿದನು.

ಯೋವಾಷನು ಒಂದು ಬಿಲ್ಲು ಮತ್ತು ಕೆಲವು ಬಾಣಗಳನ್ನು ತೆಗೆದುಕೊಂಡನು. 16 ಆಗ ಎಲೀಷನು ಇಸ್ರೇಲಿನ ರಾಜನಿಗೆ, “ಬಿಲ್ಲಿನ ಮೇಲೆ ನಿನ್ನ ಕೈಯನ್ನು ಇಡು” ಎಂದು ಹೇಳಿದನು. ಯೋವಾಷನು ತನ್ನ ಕೈಯನ್ನು ಬಿಲ್ಲಿನ ಮೇಲಿಟ್ಟನು. ನಂತರ ಎಲೀಷನು ತನ್ನ ಕೈಗಳನ್ನು ರಾಜನ ಕೈಗಳ ಮೇಲಿಟ್ಟನು. 17 ಎಲೀಷನು, “ಪೂರ್ವದಿಕ್ಕಿನ ಕಿಟಕಿಯನ್ನು ತೆಗೆ” ಎಂದು ಹೇಳಿದನು.

ಯೋವಾಷನು ಕಿಟಕಿಯನ್ನು ತೆರೆದನು. ಆಗ ಎಲೀಷನು, “ಹೊಡಿ” ಎಂದನು. ಯೋವಾಷನು ಹೊಡೆದನು. ಆಗ ಎಲೀಷನು, “ಅದು ಯೆಹೋವನ ವಿಜಯದ ಬಾಣ! ಅರಾಮ್ಯರ ಮೇಲಿನ ವಿಜಯದ ಬಾಣ! ನೀನು ಅರಾಮ್ಯರನ್ನು ಅಫೇಕದಲ್ಲಿ ಸೋಲಿಸುವೆ. ನೀನು ಅವರನ್ನು ನಾಶಗೊಳಿಸುವೆ” ಎಂದು ಹೇಳಿದನು.

18 ಎಲೀಷನು, “ಬಾಣಗಳನ್ನು ತೆಗೆದುಕೋ” ಎಂದನು. ಯೋವಾಷನು ಬಾಣಗಳನ್ನು ತೆಗೆದುಕೊಂಡನು. ಆಗ ಎಲೀಷನು ಇಸ್ರೇಲಿನ ರಾಜನಿಗೆ, “ನೆಲದ ಮೇಲೆ ಹೊಡಿ” ಎಂದನು.

ಯೋವಾಷನು ನೆಲವನ್ನು ಮೂರು ಸಲ ಹೊಡೆದನು. ನಂತರ ಅವನು ನಿಲ್ಲಿಸಿದನು. 19 ದೇವಮನುಷ್ಯನು (ಎಲೀಷನು) ಯೋವಾಷನ ಮೇಲೆ ಕೋಪಗೊಂಡು, “ನೀನು ಐದು ಅಥವಾ ಆರು ಸಲ ಹೊಡೆಯಬೇಕಾಗಿತ್ತು! ಆಗ ನೀನು ಅರಾಮ್ಯರನ್ನು ನಾಶಗೊಳಿಸುವವರೆಗೆ ಸೋಲಿಸಿ ಬಿಡಬಹುದಾಗಿತ್ತು! ಆದರೆ ಈಗ ನೀನು ಅರಾಮ್ಯರನ್ನು ಮೂರು ಸಲ ಮಾತ್ರ ಸೋಲಿಸುವೆ!” ಎಂದು ಹೇಳಿದನು.

ಎಲೀಷನ ಸಮಾಧಿಯಲ್ಲಿ ಸಂಭವಿಸಿದ ಆಶ್ಚರ್ಯಕರವಾದ ಸಂಗತಿ

20 ಎಲೀಷನು ತೀರಿಕೊಂಡಾಗ ಜನರು ಅವನನ್ನು ಸಮಾಧಿಮಾಡಿದರು.

ವಸಂತಮಾಸದ ಒಂದು ದಿನ, ಮೋವಾಬ್ಯ ಸೈನಿಕರ ಒಂದು ಗುಂಪು ಇಸ್ರೇಲಿಗೆ ಸುಲಿಗೆ ಮಾಡಲು ಬಂದಿತು. 21 ಇಸ್ರೇಲರಲ್ಲಿ ಕೆಲವರು ಸತ್ತವನೊಬ್ಬನನ್ನು ಸಮಾಧಿ ಮಾಡುತ್ತಿರುವಾಗ ಸೈನಿಕರ ಆ ಗುಂಪನ್ನು ನೋಡಿ ಸತ್ತವನನ್ನು ಎಲೀಷನ ಸಮಾಧಿಯಲ್ಲಿ ಎಸೆದು ಓಡಿಹೋದರು. ಎಲೀಷನ ಮೂಳೆಗಳನ್ನು ಸತ್ತವನು ಸ್ಪರ್ಶಿಸಿದ ತಕ್ಷಣ, ಸತ್ತ ಮನುಷ್ಯನಿಗೆ ಜೀವ ಬಂದು, ಅವನು ತನ್ನ ಕಾಲುಗಳ ಮೇಲೆ ನಿಂತುಕೊಂಡನು!

ಯೋವಾಷನು ಅರಾಮ್ಯರಿಂದ ಇಸ್ರೇಲಿನ ನಗರಗಳನ್ನು ಮತ್ತೆ ಗೆದ್ದುಕೊಂಡನು

22 ಯೆಹೋವಾಹಾಜನು ಆಳುತ್ತಿದ್ದ ದಿನಗಳಲ್ಲೆಲ್ಲಾ ಅರಾಮ್ಯರ ರಾಜನಾದ ಹಜಾಯೇಲನು ಇಸ್ರೇಲಿಗೆ ತೊಂದರೆ ಕೊಡುತ್ತಿದ್ದನು. 23 ಆದರೆ ಯೆಹೋವನು ಇಸ್ರೇಲರಿಗೆ ದಯಾಪರನಾಗಿದ್ದನು. ಯೆಹೋವನು ಕರುಣೆಯಿಂದ ಇಸ್ರೇಲರಿಗೆ ಅಭಿಮುಖನಾದನು. ಏಕೆಂದರೆ ಆತನು ಅಬ್ರಹಾಮನೊಂದಿಗೆ ಇಸಾಕನೊಂದಿಗೆ ಮತ್ತು ಯಾಕೋಬನೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದನು. ಯೆಹೋವನು ಇಸ್ರೇಲರನ್ನು ನಾಶಗೊಳಿಸಲಿಲ್ಲ. ಅವರನ್ನು ಇನ್ನೂ ತಳ್ಳಿಬಿಟ್ಟಿರಲಿಲ್ಲ.

24 ಅರಾಮ್ಯರ ರಾಜನಾದ ಹಜಾಯೇಲನು ಸತ್ತಮೇಲೆ ಬೆನ್ಹದದನು ನೂತನ ರಾಜನಾದನು. 25 ಹಜಾಯೇಲನು ಸಾಯುವುದಕ್ಕೆ ಮೊದಲು, ಯೋವಾಷನ ತಂದೆಯಾದ ಯೆಹೋವಾಹಾಜನಿಂದ ಯುದ್ಧದಲ್ಲಿ ಕೆಲವು ನಗರಗಳನ್ನು ಮತ್ತೆ ವಶಪಡಿಸಿಕೊಂಡನು. ಆದರೆ ಈಗ ಯೋವಾಷನು ಹಜಾಯೇಲನ ಮಗನಾದ ಬೆನ್ಹದದನಿಂದ ಈ ನಗರಗಳನ್ನು ವಶಪಡಿಸಿಕೊಂಡನು. ಯೋವಾಷನು ಬೆನ್ಹದದನನ್ನು ಮೂರು ಸಲ ಸೋಲಿಸಿ ಇಸ್ರೇಲಿನ ನಗರಗಳನ್ನು ವಶಪಡಿಸಿಕೊಂಡನು.

2 ತಿಮೊಥೆಯನಿಗೆ 3

ಕೊನೆಯ ದಿನಗಳು

ನೆನಪಿನಲ್ಲಿಡಿರಿ! ಕಡೇ ದಿನಗಳಲ್ಲಿ ಅನೇಕ ತೊಂದರೆಗಳು ಬರುತ್ತವೆ. ಆ ಕಾಲದಲ್ಲಿ ಜನರು ಸ್ವಾರ್ಥಿಗಳಾಗಿರುತ್ತಾರೆ, ಹಣದಾಸೆ ಉಳ್ಳವರಾಗಿರುತ್ತಾರೆ; ಬಡಾಯಿಕೊಚ್ಚುವವರಾಗಿರುತ್ತಾರೆ; ಗರ್ವಿಷ್ಠರಾಗಿರುತ್ತಾರೆ; ಚಾಡಿಕೋರರಾಗಿರುತ್ತಾರೆ; ತಂದೆತಾಯಿಗಳಿಗೆ ಅವಿಧೇಯರಾಗಿರುತ್ತಾರೆ; ಕೃತಜ್ಞತೆಯಿಲ್ಲದವರಾಗಿರುತ್ತಾರೆ; ಅಪವಿತ್ರರಾಗಿರುತ್ತಾರೆ; ಇತರರನ್ನು ಪ್ರೀತಿಸದವರಾಗಿರುತ್ತಾರೆ; ಕ್ಷಮಿಸದವರಾಗಿರುತ್ತಾರೆ; ದೂಷಿಸುವವರಾಗಿರುತ್ತಾರೆ. ತಮ್ಮ ಮೇಲೆ ತಮಗೇ ಹತೋಟಿಯಿಲ್ಲದವರಾಗಿರುತ್ತಾರೆ; ಉತ್ತಮವಾದದ್ದನ್ನು ದ್ವೇಷಿಸುವವರಾಗಿರುತ್ತಾರೆ; ಕೋಪಿಷ್ಠರಾಗಿರುತ್ತಾರೆ; ಸಂಕುಚಿತ ಗುಣವುಳ್ಳವರಾಗಿರುತ್ತಾರೆ. ಕೊನೆಯ ದಿನಗಳಲ್ಲಿ ಜನರು ಮಿತ್ರದ್ರೋಹಿಗಳಾಗಿರುತ್ತಾರೆ; ದುಡುಕಿ ಮೂರ್ಖ ಕೆಲಸಗಳನ್ನು ಮಾಡುವವರಾಗಿರುತ್ತಾರೆ; ಜಂಬದಿಂದ ಉಬ್ಬಿಕೊಂಡವರಾಗಿರುತ್ತಾರೆ; ದೇವರನ್ನು ಪ್ರೀತಿಸದೆ ವಿಲಾಸಪ್ರಿಯರಾಗಿರುತ್ತಾರೆ; ಆ ಜನರು ತಾವು ದೇವರ ಸೇವೆ ಮಾಡುತ್ತಿರುವುದಾಗಿ ನಟಿಸುತ್ತಲೇ ಇರುವರು. ಆದರೆ ಅವರು ನಿಜವಾಗಿಯೂ ದೇವರ ಸೇವೆ ಮಾಡುತ್ತಿಲ್ಲವೆಂಬುದನ್ನು ಅವರ ಜೀವಿತವೇ ತೋರ್ಪಡಿಸುತ್ತದೆ. ತಿಮೊಥೆಯನೇ, ಅಂತಹ ಜನರಿಂದ ದೂರವಾಗಿರು.

ಅವರಲ್ಲಿ ಕೆಲವರು ಮನೆಗಳಿಗೆ ನುಸುಳಿಕೊಂಡು ಹೋಗಿ, ಪಾಪಿಷ್ಠರಾದ ಸ್ತ್ರೀಯರನ್ನು ವಶಪಡಿಸಿಕೊಳ್ಳುತ್ತಾರೆ. ಆ ಸ್ತ್ರೀಯರು ಅನೇಕ ಪಾಪದೋಷಗಳಿಂದ ತುಂಬಿದವರಾಗಿದ್ದಾರೆ. ಆ ಸ್ತ್ರೀಯರು ಯಾವಾಗಲೂ ಹೊಸ ಉಪದೇಶಗಳನ್ನು ಕಲಿಯಲು ಪ್ರಯತ್ನಿಸಿದರೂ ಸತ್ಯವನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳಲು ಅವರಿಗೆ ಸಾಧ್ಯವೇ ಇಲ್ಲ. ಯನ್ನ ಮತ್ತು ಯಂಬ್ರರನ್ನು ನೆನಪುಮಾಡಿಕೊ. ಅವರು ಮೋಶೆಯನ್ನು ವಿರೋಧಿಸಿದರು. ಈ ಜನರೂ ಅವರಂತೆಯೇ. ಅವರು ಸತ್ಯವನ್ನು ವಿರೋಧಿಸುತ್ತಾರೆ. ಆ ಜನರ ಆಲೋಚನೆಗಳೆಲ್ಲ ಗಲಿಬಿಲಿಗೊಂಡಿವೆ. ಅವರು ನಂಬಿಕೆಯನ್ನು ಅನುಸರಿಸುವ ತಮ್ಮ ಪ್ರಯತ್ನದಲ್ಲಿ ಸೋತುಹೋಗಿದ್ದಾರೆ. ಅವರ ಕಾರ್ಯಗಳಲ್ಲಿ ಅವರಿಗೆ ಯಶಸ್ಸಾಗುವುದಿಲ್ಲ. ಅವರು ಮೂರ್ಖರೆಂಬುದು ಜನರೆಲ್ಲರಿಗೂ ಕಾಣುತ್ತದೆ. ಯನ್ನ, ಯಂಬ್ರರಿಗೆ ಹೀಗೆಯೇ ಆಯಿತು.

ಅಂತಿಮ ಸಲಹೆಗಳು

10 ಆದರೆ ನನ್ನನ್ನು ಕುರಿತು ನಿನಗೆ ಎಲ್ಲವೂ ತಿಳಿದಿದೆ. ನನ್ನ ಬೋಧನೆ, ನಡತೆ, ಉದ್ದೇಶ, ನಂಬಿಕೆ, ತಾಳ್ಮೆ, ಪ್ರೀತಿ, ಸೈರಣೆ ನಿನಗೆ ತಿಳಿದಿವೆ. 11 ನನಗೆ ಸಂಭವಿಸಿದ ಹಿಂಸೆ ಮತ್ತು ಸಂಕಟಗಳ ಬಗ್ಗೆಯೂ ನಿನಗೆ ತಿಳಿದಿದೆ. ಅಂತಿಯೋಕ್ಯ, ಇಕೋನ್ಯ, ಲುಸ್ತ್ರಗಳಲ್ಲಿ ನನಗೆ ಸಂಭವಿಸಿದ ಸಂಗತಿಗಳೆಲ್ಲವೂ ನಿನಗೆ ತಿಳಿದಿವೆ. ನಾನು ಆ ಸ್ಥಳಗಳಲ್ಲಿ ಅನುಭವಿಸಿದ ಹಿಂಸೆಯು ನಿನಗೆ ತಿಳಿದಿದೆ. ಆದರೆ ಆ ಎಲ್ಲ ತೊಂದರೆಗಳಿಂದ ಪ್ರಭುವು ನನ್ನನ್ನು ಕಾಪಾಡಿದನು. 12 ಕ್ರಿಸ್ತ ಯೇಸುವಿನಲ್ಲಿ ದೇವರ ಚಿತ್ತಕ್ಕನುಸಾರವಾಗಿ ಜೀವಿಸುವ ಪ್ರತಿಯೊಬ್ಬರೂ ಹಿಂಸೆಗೆ ಒಳಗಾಗುವರು. 13 ದುಷ್ಟರು ಮತ್ತು ದುರ್ಬೋಧಕರು ಇತರರನ್ನು ವಂಚಿಸುತ್ತಾ ತಮ್ಮನ್ನೂ ವಂಚಿಸಿಕೊಳ್ಳುತ್ತಾ ದಿನದಿಂದ ದಿನಕ್ಕೆ ಕೀಳುಮಟ್ಟಕ್ಕೆ ಇಳಿಯುತ್ತಿದ್ದಾರೆ.

14 ಆದರೆ ನೀನು ಕಲಿತಿರುವ ಉಪದೇಶಗಳನ್ನು ಅನುಸರಿಸು. ಅವು ಸತ್ಯವೆಂಬುದು ನಿನಗೆ ತಿಳಿದಿದೆ. ಅವುಗಳನ್ನು ನಿನಗೆ ಕಲಿಸಿದ ಜನರು ನಂಬಿಕೆಗೆ ಯೋಗ್ಯರೆಂಬುದು ನಿನಗೆ ತಿಳಿದಿದೆ. 15 ಚಿಕ್ಕಂದಿನಿಂದಲೂ ನಿನಗೆ ಪವಿತ್ರ ಗ್ರಂಥದ ಪರಿಚಯವಿದೆ. ನಿನ್ನನ್ನು ಜ್ಞಾನಿಯನ್ನಾಗಿ ಮಾಡಲು ಆ ಪವಿತ್ರ ಗ್ರಂಥವು ಶಕ್ತವಾಗಿದೆ. ಕ್ರಿಸ್ತ ಯೇಸುವಿನಲ್ಲಿನ ನಂಬಿಕೆಯ ಮೂಲಕ ಆ ಜ್ಞಾನವು ರಕ್ಷಣೆಯ ಕಡೆಗೆ ನಡೆಸುತ್ತದೆ. 16 ಪವಿತ್ರ ಗ್ರಂಥವನ್ನು ದೇವರು ದಯಪಾಲಿಸಿದನು. ಉಪದೇಶವನ್ನು ಮಾಡುವುದಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಬೋಧೆಗೂ ಅದು ಉಪಯುಕ್ತವಾಗಿದೆ. 17 ಆದ್ದರಿಂದ ದೇವರ ಸೇವಕರು ಸಿದ್ಧರೂ ಸಕಲ ಸತ್ಕಾರ್ಯಗಳಿಗೆ ಸನ್ನದ್ಧರೂ ಆಗಬಲ್ಲರು.

ಹೋಶೇಯ 5-6

ಇಸ್ರೇಲ್ ಮತ್ತು ಯೆಹೂದವು ಪಾಪದಲ್ಲಿ ಬೀಳಲು ಅವರ ನಾಯಕರೇ ಕಾರಣ

“ಯಾಜಕರೇ, ಇಸ್ರೇಲ್ ಜನಾಂಗವೇ, ಅರಸನ ಪರಿವಾರದವರೇ, ನನ್ನ ಮಾತುಗಳಿಗೆ ಕಿವಿಗೊಡಿರಿ. ಯಾಕೆಂದರೆ ನಿಮಗೆ ನ್ಯಾಯತೀರ್ಪು ಬಂದಿದೆ.

“ಮಿಚ್ಪದಲ್ಲಿ ನೀವು ಉರುಲಿನಂತೆ ಇದ್ದಿರಿ. ತಾಬೋರಿನಲ್ಲಿ ನೆಲದ ಮೇಲೆ ಹರಡಿಸಿದ್ದ ಬಲೆಯಂತೆ ಇದ್ದಿರಿ. ನೀವು ಅನೇಕಾನೇಕ ಕೆಟ್ಟ ಸಂಗತಿಗಳನ್ನು ಮಾಡಿದ್ದೀರಿ. ಆದ್ದರಿಂದ ನಿಮ್ಮೆಲ್ಲರನ್ನು ನಾನು ಶಿಕ್ಷಿಸುತ್ತೇನೆ. ಎಫ್ರಾಯೀಮೇ, ನನಗೆ ಗೊತ್ತುಂಟು. ಇಸ್ರೇಲ್ ಮಾಡಿದ ವಿಷಯಗಳೆಲ್ಲವನ್ನು ನಾನು ಬಲ್ಲೆನು. ಎಫ್ರಾಯೀಮೇ, ನೀನು ಈಗಲೂ ಸೂಳೆಯಂತೆ ವರ್ತಿಸುತ್ತಿರುವೆ. ತನ್ನ ಪಾಪಗಳಿಂದ ಇಸ್ರೇಲ್ ಮಲಿನವಾಗಿದೆ. ಇಸ್ರೇಲಿನ ಜನರು ಅನೇಕ ದುಷ್ಕೃತ್ಯಗಳನ್ನು ಮಾಡಿದ್ದಾರೆ. ಆ ದುಷ್ಕೃತ್ಯಗಳು ಅವರನ್ನು ತಮ್ಮ ದೇವರ ಬಳಿಗೆ ಹಿಂತಿರುಗಿ ಬಾರದಂತೆ ಮಾಡುತ್ತಿವೆ. ಅವರು ಯಾವಾಗಲೂ ಇತರ ದೇವರುಗಳ ಹಿಂದೆ ಹೇಗೆ ಹೋಗೋಣ ಎಂದು ಮಾರ್ಗವನ್ನು ಹುಡುಕುತ್ತಿದ್ದಾರೆ. ಅವರಿಗೆ ಯೆಹೋವನ ಪರಿಚಯವಿಲ್ಲ. ಇಸ್ರೇಲಿನ ಹೆಮ್ಮೆಯು ಅವರಿಗೆ ವಿರುದ್ಧವಾಗಿ ಸಾಕ್ಷಿನೀಡುತ್ತದೆ. ಇಸ್ರೇಲ್ ಮತ್ತು ಎಫ್ರಾಯೀಮ್ ತಮ್ಮ ಪಾಪಗಳಿಂದಲೇ ಮುಗ್ಗರಿಸುವರು. ಯೆಹೂದವೂ ಅವರೊಂದಿಗೆಯೇ ಮುಗ್ಗರಿಸುವದು.

“ಜನರ ನಾಯಕರು ಯೆಹೋವನನ್ನು ಹುಡುಕಾಡುವರು. ಅವರು ತಮ್ಮ ಕುರಿದನಗಳನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗುವರು. ಆದರೆ ಅವರು ಯೆಹೋವನನ್ನು ಕಂಡುಕೊಳ್ಳುವದಿಲ್ಲ. ಯಾಕೆಂದರೆ ಆತನು ಅವರನ್ನು ಬಿಟ್ಟುಹೋಗಿರುತ್ತಾನೆ. ಅವರು ಯೆಹೋವನಿಗೆ ನಂಬಿಗಸ್ತರಾಗಿರಲಿಲ್ಲ. ಅವರ ಮಕ್ಕಳು ಅನ್ಯರಿಗೆ ಹುಟ್ಟಿದ್ದಾರೆ. ಆದ್ದರಿಂದ ಈಗ ಆತನು ಅವರನ್ನೂ ಅವರ ದೇಶವನ್ನೂ ತಿರುಗಿ ನಾಶಮಾಡುವನು.”

ಇಸ್ರೇಲಿನ ನಾಶನದ ಪ್ರವಾದನೆ

“ಗಿಬ್ಯದಲ್ಲಿ ಕೊಂಬನ್ನೂದು,
    ರಾಮದಲ್ಲಿ ತುತ್ತೂರಿಯನ್ನೂದು.
ಬೇತಾವೆನಿನಲ್ಲಿ ಎಚ್ಚರಿಕೆಯನ್ನು ನೀಡು.
    ಬೆನ್ಯಾಮೀನನೇ, ವೈರಿಯು ನಿನ್ನ ಹಿಂದೆಯೇ ಇದ್ದಾನೆ.
ಶಿಕ್ಷೆಯು ವಿಧಿಸಲ್ಪಡುವಾಗ
    ಎಫ್ರಾಯೀಮ್ ಬರಿದಾಗುವದು.
ಇದು ಖಂಡಿತವಾಗಿಯೂ ನೆರವೇರುವದೆಂದು
    ಯೆಹೋವನಾದ ನಾನು ಇಸ್ರೇಲ್ ಕುಟುಂಬಗಳಿಗೆ ತಿಳಿಸುತ್ತಿದ್ದೇನೆ.
10 ಯೆಹೂದದ ನಾಯಕರು ಪರರ ಆಸ್ತಿಯನ್ನು ದೋಚುವ ಕಳ್ಳರಂತಿದ್ದಾರೆ.
    ಯೆಹೋವನಾದ ನಾನು ಅವರ ಮೇಲೆ ನನ್ನ ಕೋಪವನ್ನು ನೀರಿನಂತೆ ಸುರಿಸುವೆನು.
11 ಎಫ್ರಾಯೀಮ್ ಶಿಕ್ಷಿಸಲ್ಪಡುವನು.
    ಅವನು ದ್ರಾಕ್ಷಿಹಣ್ಣಿನಂತೆ ನಜ್ಜುಗುಜ್ಜಾಗುವನು.
    ಕಾರಣವೇನೆಂದರೆ, ಅವನು ಹೊಲಸನ್ನು ಹಿಂಬಾಲಿಸಲು ತೀರ್ಮಾನಿಸಿದ್ದಾನೆ.
12 ನಾನು ಎಫ್ರಾಯೀಮನನ್ನು ನಾಶಮಾಡುವೆನು, ನುಸಿಯು ಬಟ್ಟೆಯನ್ನು ನಾಶಮಾಡುವ ರೀತಿಯಲ್ಲಿ,
    ಮರದ ತುಂಡನ್ನು ಗೆದ್ದಲು ನಾಶಮಾಡುವಂತೆ ಯೆಹೂದವನ್ನು ನಾಶಮಾಡುವೆನು.
13 ಎಫ್ರಾಯೀಮು ತನ್ನ ವ್ಯಾಧಿಯನ್ನು ನೋಡಿದನು.
ಯೆಹೂದವು ತನ್ನ ಗಾಯಗಳನ್ನು ನೋಡಿದನು.
    ಆಮೇಲೆ ಸಹಾಯಕ್ಕಾಗಿ ಅಶ್ಶೂರ್ಯರ ಬಳಿಗೆ ಹೋದರು.
ಆ ಮಹಾ ಅರಸನ ಮುಂದೆ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.
    ಆದರೆ ಆ ಅರಸನು ನಿಮ್ಮನ್ನು ಗುಣಮಾಡನು.
    ನಿಮ್ಮ ಗಾಯಗಳನ್ನು ಗುಣಮಾಡಲು ಸಾಧ್ಯವಿಲ್ಲ.
14 ಯಾಕೆಂದರೆ ನಾನು ಎಫ್ರಾಯೀಮನಿಗೆ ಸಿಂಹದಂತಿರುವೆನು.
    ಯೆಹೂದ ಜನಾಂಗದವರಿಗೆ ನಾನು ಪ್ರಾಯದ ಸಿಂಹದಂತಿರುವೆನು.
ಹೌದು, ಯೆಹೋವನಾದ ನಾನು ಅವರನ್ನು ಹರಿದು ಚೂರುಚೂರಾಗಿ ಮಾಡುವೆನು.
ನಾನು ಅವರನ್ನು ಎತ್ತಿಕೊಂಡು ಹೋಗುವೆನು.
    ಯಾರೂ ಅವರನ್ನು ನನ್ನಿಂದ ರಕ್ಷಿಸಲಾರರು.
15 ಜನರು ತಮ್ಮ ದೋಷವನ್ನು ಒಪ್ಪಿಕೊಳ್ಳುವ ತನಕ
    ನಾನು ನನ್ನ ಸ್ಥಳಕ್ಕೆ ಹಿಂತಿರುಗಿ ಹೋಗುವೆನು,
    ಅವರು ನನ್ನನ್ನು ಹುಡುಕುವರು.
ಹೌದು, ತಮ್ಮ ಸಂಕಟದಲ್ಲಿ ನನ್ನನ್ನು ಹುಡುಕಲು ಅತಿಯಾಗಿ ಪ್ರಯತ್ನಿಸುವರು.”

ಯೆಹೋವನ ಬಳಿಗೆ ಹಿಂತಿರುಗಿ ಬರುವಾಗ ದೊರಕುವ ಬಹುಮಾನ

“ಬನ್ನಿರಿ, ನಾವು ಯೆಹೋವನ ಬಳಿಗೆ ಹಿಂತಿರುಗೋಣ.
    ಆತನು ನಮಗೆ ಗಾಯ ಮಾಡಿದರೂ ಗುಣಮಾಡುವನು.
    ನಮ್ಮ ಗಾಯಗಳಿಗೆ ಬಟ್ಟೆಯನ್ನು ಸುತ್ತುವನು.
ಎರಡು ದಿವಸಗಳ ತರುವಾಯ ನಮ್ಮನ್ನು ತಿರುಗಿ ಜೀವಂತ ಮಾಡುವನು.
    ಮೂರನೇ ದಿವಸದಲ್ಲಿ ನಮ್ಮನ್ನು ಎಬ್ಬಿಸುವನು.
    ಆಗ ನಾವು ಆತನ ಸಮೀಪದಲ್ಲಿ ವಾಸಿಸಬಹುದು.
ಯೆಹೋವನ ವಿಷಯವಾಗಿ ನಾವು ಕಲಿಯೋಣ.
    ಆತನನ್ನು ಅರಿತುಕೊಳ್ಳಲು ಅತಿಯಾಗಿ ಪ್ರಯತ್ನಿಸೋಣ.
ಸೂರ್ಯೋದಯ ಆಗುತ್ತದೆಯೆಂಬುದು ನಮಗೆ ಗೊತ್ತಿರುವಂತೆಯೇ ಆತನು ಬರುವುದೂ ನಮಗೆ ಗೊತ್ತಿದೆ.
    ವಸಂತಕಾಲದ ಮಳೆಯಂತೆ ಯೆಹೋವನು ಬರುವನು.”

ಜನರು ನಿಷ್ಠಾವಂತರಲ್ಲ

“ಎಫ್ರಾಯೀಮೇ, ನಿನಗೆ ನಾನು ಏನು ಮಾಡಲಿ?
    ಯೆಹೂದವೇ, ನಿನಗೆ ನಾನು ಏನು ಮಾಡಬೇಕು?
ನಿನ್ನ ನಂಬಿಗಸ್ತಿಕೆಯು ಮುಂಜಾನೆಯ ಮಂಜಿನಂತಿದೆ.
    ನಿನ್ನ ನಂಬಿಗಸ್ತಿಕೆಯು ಇಬ್ಬನಿಯಂತಿದೆ.
    ಅದು ಬೇಗನೆ ಇಲ್ಲದೆಹೋಗುವದು.
ನಾನು ಪ್ರವಾದಿಗಳ ಮೂಲಕ ಜನರಿಗೆ ಕಟ್ಟಳೆಗಳನ್ನು ವಿಧಿಸಿದೆನು.
    ನನ್ನ ಅಪ್ಪಣೆಯ ಮೇರೆಗೆ ಜನರು ಕೊಲ್ಲಲ್ಪಟ್ಟರು.
ಯಾಕೆಂದರೆ ನನಗೆ ವಿಧೇಯತೆಯಿಂದ
    ಕೂಡಿದ ಪ್ರೀತಿಯು ಬೇಕೇ ಹೊರತು ಯಜ್ಞವಲ್ಲ.
ಜನರು ತರುವ ಸರ್ವಾಂಗಹೋಮಗಳಿಗಿಂತಲೂ
    ಅವರು ನನ್ನನ್ನು (ದೇವರನ್ನು) ತಿಳಿದುಕೊಳ್ಳಬೇಕೆಂಬುದೇ ನನಗೆ ಇಷ್ಟ.
ಆದರೆ ಜನರು ಆದಾಮನಂತೆ ಒಡಂಬಡಿಕೆಯನ್ನು ಮುರಿದುಹಾಕಿದರು.
    ಅವರ ದೇಶದಲ್ಲಿ ಅವರು ನನಗೆ ದ್ರೋಹಿಗಳಾದರು.
ಗಿಲ್ಯಾದು ಕೆಟ್ಟತನವನ್ನು ನಡಿಸುವ ಜನರಿಂದ ಕೂಡಿದ ನಗರವಾಗಿದೆ.
    ಜನರು ಇತರರನ್ನು ಮೋಸಗೊಳಿಸಿ ಕೊಲೆಮಾಡಿರುತ್ತಾರೆ.
ಕಳ್ಳರು ದಾರಿಯಲ್ಲಿ ಹೊಂಚುಹಾಕುತ್ತಾ
    ಜನರನ್ನು ಸೂರೆಮಾಡಲು ಕಾಯುತ್ತಿರುತ್ತಾರೆ.
ಅದೇ ರೀತಿಯಲ್ಲಿ ಶೆಕೆಮಿಗೆ ಹೋಗುವ ದಾರಿಯಲ್ಲಿ ಯಾಜಕರು ಕಾಯುತ್ತಾ ಹಾದುಹೋಗುತ್ತಿರುವ ಜನರ ಮೇಲೆ ಬೀಳುವರು.
    ಅವರು ದುಷ್ಕೃತ್ಯಗಳನ್ನು ಮಾಡಿರುತ್ತಾರೆ.
10 ಇಸ್ರೇಲ್ ಜನಾಂಗದಲ್ಲಿ ಅತೀ ಭಯಂಕರ ಸಂಗತಿಗಳನ್ನು ನಾನು ನೋಡಿರುತ್ತೇನೆ.
ಎಫ್ರಾಯೀಮು ದೇವರಿಗೆ ದ್ರೋಹಿಯಾದನು.
    ಇಸ್ರೇಲು ಪಾಪದಿಂದ ಹೊಲಸಾಗಿದೆ.
11 ಯೆಹೂದವೇ, ನಿನಗೆ ಸುಗ್ಗೀಕಾಲವು ನೇಮಕವಾಗಿದೆ,
    ಸೆರೆವಾಸದಿಂದ ನನ್ನ ಜನರನ್ನು ನಾನು ಹಿಂತಿರುಗಿ ಕರೆತಂದಾಗ ಅದು ಸಂಭವಿಸುವದು.

ಕೀರ್ತನೆಗಳು 119:145-176

145 ಯೆಹೋವನೇ, ಪೂರ್ಣಹೃದಯದಿಂದ ನಿನಗೆ ಮೊರೆಯಿಟ್ಟಿದ್ದೇನೆ;
    ಸದುತ್ತರವನ್ನು ದಯಪಾಲಿಸು.
    ನಾನು ನಿನ್ನ ಆಜ್ಞೆಗಳಿಗೆ ವಿಧೇಯನಾಗುವೆನು.
146 ನಾನು ನಿನಗೇ ಮೊರೆಯಿಟ್ಟಿದ್ದೇನೆ.
    ನನ್ನನ್ನು ರಕ್ಷಿಸು! ನಿನ್ನ ಕಟ್ಟಳೆಗಳಿಗೆ ವಿಧೇಯನಾಗುತ್ತೇನೆ.
147 ಸೂರ್ಯೋದಯದಲ್ಲಿ ಎದ್ದು ನಿನಗೆ ಮೊರೆಯಿಟ್ಟೆನು.
    ನಿನ್ನ ವಾಕ್ಯದಲ್ಲಿ ಭರವಸವಿಟ್ಟಿದ್ದೇನೆ.
148 ನಿನ್ನ ವಾಕ್ಯವನ್ನು ಧ್ಯಾನಿಸುವುದಕ್ಕಾಗಿ
    ರಾತ್ರಿಯಲ್ಲಿ ಬಹು ಹೊತ್ತಿನವರೆಗೆ ಎಚ್ಚರವಾಗಿದ್ದೆನು.
149 ಯೆಹೋವನೇ, ನಿನ್ನ ಪೂರ್ಣ ಪ್ರೀತಿಯಿಂದ ನನಗೆ ಕಿವಿಗೊಡು.
    ನಿನ್ನ ನಿಯಮಗಳಿಗನುಸಾರವಾಗಿ ನನ್ನನ್ನು ಉಜ್ಜೀವಿಸಮಾಡು.
150 ಜನರು ನನಗೆ ವಿರೋಧವಾಗಿ ಸಂಚುಗಳನ್ನು ಮಾಡುತ್ತಿದ್ದಾರೆ.
    ಅವರು ನಿನ್ನ ಉಪದೇಶಗಳನ್ನು ಅನುಸರಿಸುವುದಿಲ್ಲ.
151 ಯೆಹೋವನೇ, ನೀನು ನನಗೆ ಸಮೀಪವಾಗಿರುವೆ.
    ನಿನ್ನ ಆಜ್ಞೆಗಳೆಲ್ಲಾ ನಂಬಿಕೆಗೆ ಯೋಗ್ಯವಾಗಿವೆ.
152 ನಿನ್ನ ಉಪದೇಶಗಳು ಶಾಶ್ವತವಾಗಿವೆ.
    ಅದನ್ನು ನಾನು ಬಹುಕಾಲದ ಹಿಂದೆಯೇ ನಿನ್ನ ಒಡಂಬಡಿಕೆಯ ಮೂಲಕ ಕಲಿತುಕೊಂಡೆ.

153 ನನ್ನ ಕಷ್ಟವನ್ನು ನೋಡಿ ನನ್ನನ್ನು ಬಿಡಿಸು.
    ನಾನು ನಿನ್ನ ಉಪದೇಶಗಳನ್ನು ಮರೆತಿಲ್ಲ.
154 ವ್ಯಾಜ್ಯದಲ್ಲಿ ನನ್ನ ಪರವಾಗಿ ಹೋರಾಡಿ ನನ್ನನ್ನು ರಕ್ಷಿಸು.
    ನಿನ್ನ ವಾಗ್ದಾನಕ್ಕನುಸಾರವಾಗಿ ನನ್ನನ್ನು ಉಜ್ಜೀವಿಸಮಾಡು.
155 ದುಷ್ಟರು ನಿನ್ನ ಕಟ್ಟಳೆಗಳನ್ನು ಅನುಸರಿಸದ ಕಾರಣ
    ಅವರಿಗೆ ಜಯವಾಗುವುದಿಲ್ಲ.
156 ಯೆಹೋವನೇ, ನೀನು ಎಷ್ಟೋ ಕರುಣೆಯುಳ್ಳವನು.
    ನಿನ್ನ ಚಿತ್ತಾನುಸಾರವಾಗಿ ನನ್ನನ್ನು ಉಜ್ಜೀವನಗೊಳಿಸು.
157 ಅನೇಕ ವೈರಿಗಳು ನನಗೆ ಕೇಡುಮಾಡಬೇಕೆಂದಿದ್ದಾರೆ.
    ನಾನಾದರೋ ನಿನ್ನ ಕಟ್ಟಳೆಗಳನ್ನು ಅನುಸರಿಸುತ್ತಲೇ ಇದ್ದೇನೆ.
158 ನಿನ್ನ ವಾಕ್ಯಕ್ಕೆ ವಿಧೇಯರಾಗದ ಆ ದ್ರೋಹಿಗಳನ್ನು ನೋಡಿದರೆ
    ನನಗೆ ಅಸಹ್ಯವಾಗುತ್ತದೆ.
159 ಯೆಹೋವನೇ, ನಿನ್ನ ನಿಯಮಗಳಿಗೆ ಆಸಕ್ತಿಯಿಂದ ವಿಧೇಯನಾಗಿದ್ದೇನೆ.
    ನಿನ್ನ ಶಾಶ್ವತ ಪ್ರೀತಿಗನುಸಾರವಾಗಿ ನನ್ನನ್ನು ಉಜ್ಜೀವಿಸಮಾಡು.
160 ನಿನ್ನ ವಾಕ್ಯಗಳೆಲ್ಲಾ ಸತ್ಯವಾಗಿವೆ.
    ನಿನ್ನ ನೀತಿಯ ಕಟ್ಟಳೆಗಳು ಶಾಶ್ವತವಾಗಿವೆ.

161 ಅಧಿಪತಿಗಳು ನಿಷ್ಕಾರಣವಾಗಿ ನನ್ನ ಮೇಲೆ ಆಕ್ರಮಣ ಮಾಡಿದರು.
    ನಾನಾದರೋ ನಿನ್ನ ಧರ್ಮಶಾಸ್ತ್ರವೊಂದಕ್ಕೇ ಭಯಪಡುವೆನು, ಅದೊಂದನ್ನೇ ಗೌರವಿಸುವೆನು.
162 ಮಹಾಭಂಡಾರವನ್ನು ಕಂಡುಕೊಂಡವನಂತೆ
    ನಾನು ನಿನ್ನ ವಾಕ್ಯದಲ್ಲಿ ಸಂತೋಷಿಸುವೆನು.
163 ನಾನು ಸುಳ್ಳುಗಳನ್ನು ದ್ವೇಷಿಸುವೆನು!
    ಅವು ನನಗೆ ಅಸಹ್ಯವಾಗಿವೆ.
    ನಿನ್ನ ಉಪದೇಶಗಳು ನನಗೆ ಪ್ರಿಯವಾಗಿವೆ.
164 ನಿನ್ನ ನೀತಿಯ ವಿಧಿನಿಯಮಗಳಿಗಾಗಿ
    ನಾನು ದಿನಕ್ಕೆ ಏಳು ಸಲ ನಿನ್ನನ್ನು ಕೊಂಡಾಡುವೆನು.
165 ನಿನ್ನ ಧರ್ಮಶಾಸ್ತ್ರವನ್ನು ಪ್ರೀತಿಸುವವರಿಗೆ ಸಂಪೂರ್ಣ ಸಮಾಧಾನವಿರುವುದು.
    ಅವರನ್ನು ಯಾವುದೂ ಬೀಳಿಸಲಾರದು.
166 ಯೆಹೋವನೇ, ನಿನ್ನ ರಕ್ಷಣೆಗಾಗಿ ಕಾಯ್ದುಕೊಂಡಿದ್ದೇನೆ.
    ನಾನು ನಿನ್ನ ಆಜ್ಞೆಗಳಿಗೆ ವಿಧೇಯನಾಗಿದ್ದೇನೆ.
167 ನಾನು ನಿನ್ನ ಕಟ್ಟಳೆಗಳನ್ನು ಅನುಸರಿಸಿದೆನು.
    ಅವು ನನಗೆ ಬಹು ಪ್ರಿಯವಾಗಿವೆ.
168 ನಾನು ನಿನ್ನ ಒಡಂಬಡಿಕೆಗೂ ನಿನ್ನ ನಿಯಮಗಳಿಗೂ ವಿಧೇಯನಾಗಿದ್ದೇನೆ.
    ನನ್ನ ನಡತೆಯೆಲ್ಲಾ ನಿನಗೆ ಗೊತ್ತಿದೆ.

169 ಯೆಹೋವನೇ, ನನ್ನ ಕೂಗಿಗೆ ಕಿವಿಗೊಡು.
    ನಿನ್ನ ವಾಗ್ದಾನಕ್ಕನುಸಾರವಾಗಿ ನನ್ನನ್ನು ಜ್ಞಾನಿಯನ್ನಾಗಿ ಮಾಡು.
170 ನನ್ನ ಪ್ರಾರ್ಥನೆಗೆ ಕಿವಿಗೊಡು.
    ನಿನ್ನ ವಾಗ್ದಾನಕ್ಕನುಸಾರವಾಗಿ ನನ್ನನ್ನು ರಕ್ಷಿಸು.
171 ನೀನು ನಿನ್ನ ಕಟ್ಟಳೆಗಳನ್ನು ನನಗೆ ಕಲಿಸಿಕೊಟ್ಟದ್ದರಿಂದ
    ಸ್ತುತಿಗೀತೆಗಳು ನನ್ನಿಂದ ಹೊರಡುತ್ತವೆ.
172 ನನ್ನ ನಾಲಿಗೆಯು ನಿನ್ನ ವಾಕ್ಯವನ್ನು ಗಾಯನ ಮಾಡಲಿ.
    ನಿನ್ನ ಆಜ್ಞೆಗಳೆಲ್ಲಾ ನೀತಿಯ ಆಜ್ಞೆಗಳಾಗಿವೆ.
173 ನಾನು ನಿನ್ನ ನಿಯಮಗಳನ್ನು ಅನುಸರಿಸಲು ನಿರ್ಧರಿಸಿರುವುದರಿಂದ
    ಕೈಚಾಚಿ ಸಹಾಯಮಾಡು.
174 ನಿನ್ನಲ್ಲಿ ರಕ್ಷಣೆಗಾಗಿ ಪ್ರಾರ್ಥಿಸುವೆ.
    ನಿನ್ನ ಉಪದೇಶಗಳು ನನ್ನನ್ನು ಸಂತೋಷಗೊಳಿಸುತ್ತವೆ.
175 ನಾನು ಜೀವದಿಂದಿದ್ದು ನಿನ್ನನ್ನು ಕೊಂಡಾಡುವಂತೆ ಮಾಡು.
    ನಿನ್ನ ನಿಯಮಗಳು ನನಗೆ ಸಹಾಯಮಾಡಲಿ.
176 ನಾನು ಕಳೆದುಹೋದ ಕುರಿಯಂತೆ ಅಲೆದಾಡುತ್ತಿದ್ದೇನೆ.
    ನನಗೋಸ್ಕರ ಹುಡುಕುತ್ತಾ ಬಾ.
ನಿನ್ನ ಸೇವಕನಾದ ನಾನು
    ನಿನ್ನ ಆಜ್ಞೆಗಳನ್ನು ಮರೆತುಬಿಟ್ಟಿಲ್ಲ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International