M’Cheyne Bible Reading Plan
ಯೆಹೂದದಲ್ಲಿ ರಾಜನ ಮಕ್ಕಳನ್ನೆಲ್ಲ ಅತಲ್ಯಳು ನಾಶಗೊಳಿಸಿದಳು
11 ಅಹಜ್ಯನ ತಾಯಿಯಾದ ಅತಲ್ಯಳು ತನ್ನ ಮಗ ಸತ್ತದ್ದನ್ನು ನೋಡಿದಳು. ಅವಳು ಮೇಲೆದ್ದು ರಾಜನ ಕುಟುಂಬವನ್ನೆಲ್ಲ ಕೊಂದುಬಿಟ್ಟಳು.
2 ಯೆಹೋಷೆಬಳು ರಾಜನಾದ ಯೋರಾಮನ ಮಗಳಾಗಿದ್ದಳು ಮತ್ತು ಅಹಜ್ಯನ ಸೋದರಿಯಾಗಿದ್ದಳು. ಯೆಹೋವಾಷನು ರಾಜನ ಮಕ್ಕಳಲ್ಲಿ ಒಬ್ಬನಾಗಿದ್ದನು. ಅತಲ್ಯಳು ಇತರ ಮಕ್ಕಳನ್ನು ಕೊಲ್ಲುವಾಗ ಯೆಹೋಷೆಬಳು ಯೆಹೋವಾಷನನ್ನು ತೆಗೆದುಕೊಂಡು ಹೋದಳು. ಅವಳು ಯೆಹೋವಾಷನನ್ನು ಮತ್ತು ಅವನ ದಾದಿಯನ್ನು ತನ್ನ ಮಲಗುವ ಕೊಠಡಿಯಲ್ಲಿ ಅಡಗಿಸಿದಳು. ಯೆಹೋವಾಷನನ್ನು ಅವನ ದಾದಿಯು ಮತ್ತು ಯೆಹೋಷೆಬಳು ಅತಲ್ಯಳಿಂದ ತಪ್ಪಿಸಿ ಅಡಗಿಸಿಟ್ಟರು. ಈ ರೀತಿ ಯೆಹೋವಾಷನನ್ನು ಕೊಲ್ಲಲಾಗಲಿಲ್ಲ.
3 ನಂತರ ಯೆಹೋವಾಷ ಮತ್ತು ಯೆಹೋಷೆಬಳು ಯೆಹೋವನ ಆಲಯದಲ್ಲಿ ಅಡಗಿಕೊಂಡರು. ಯೆಹೋವಾಷನು ಆರು ವರ್ಷಗಳ ಕಾಲ ಅಡಗಿಕೊಂಡಿದ್ದನು. ಅತಲ್ಯಳು ಯೆಹೂದ ದೇಶವನ್ನು ಆಳಿದಳು.
4 ಏಳನೆ ವರ್ಷದಲ್ಲಿ, ಪ್ರಧಾನ ಯಾಜಕನಾದ ಯೆಹೋಯಾದಾವನು ಕೆರೇತ್ಯರ ಸೇನಾಧಿಪತಿಗಳನ್ನು ಮತ್ತು ಕಾವಲುಗಾರರನ್ನು ಕರೆಸಿಕೊಂಡನು. ಯೆಹೋಯಾದಾವನು ಅವರನ್ನೆಲ್ಲ ಯೆಹೋವನ ಆಲಯದಲ್ಲಿ ಒಟ್ಟಾಗಿ ಸೇರಿಸಿದನು. ನಂತರ ಯೆಹೋಯಾದಾವನು ಅವರೊಡನೆ ಒಂದು ಒಪ್ಪಂದವನ್ನು ಮಾಡಿಕೊಂಡನು. ಯೆಹೋಯಾದಾವನು ಆಲಯದಲ್ಲಿ ಅವರು ವಾಗ್ದಾನ ಮಾಡುವಂತೆ ಬಲತ್ಕಾರಗೊಳಿಸಿದನು. ನಂತರ ಅವನು ಅವರಿಗೆ ರಾಜನ ಮಗನನ್ನು (ಯೆಹೋವಾಷನನ್ನು) ತೋರಿಸಿದನು.
5 ಯೆಹೋಯಾದಾವನು ಅವರಿಗೆ, “ನೀವು ಈ ಕಾರ್ಯವನ್ನು ಮಾಡಲೇಬೇಕು. ನಿಮ್ಮಲ್ಲಿ ಸಬ್ಬತ್‌ದಿನದಂದು ಬರುವ ಮೂರನೆ ಒಂದು ಭಾಗದ ಜನರು ರಾಜನನ್ನು ಅವನ ಅರಮನೆಯಲ್ಲಿ ರಕ್ಷಿಸಬೇಕು. 6 ಇನ್ನೊಂದು ಮೂರನೆಯ ಒಂದು ಭಾಗವು ಸೂರ್ ಬಾಗಿಲಿನಲ್ಲಿರಬೇಕು. ಮತ್ತೊಂದು ಮೂರನೆಯ ಒಂದು ಭಾಗವು ಕಾವಲುಗಾರನ ಹಿಂದೆ ಬಾಗಿಲಿನಲ್ಲಿರಬೇಕು. ಈ ರೀತಿ ನೀವು ಗೋಡೆಯಂತೆ ನಿಂತು ಯೆಹೋವಾಷನನ್ನು ರಕ್ಷಿಸುತ್ತಿರಬೇಕು. 7 ಸಬ್ಬತ್‌ದಿನದಂದು ಕಾಯಲು ಬರುವ ನಿಮ್ಮೆಲ್ಲರ ಎರಡು ಪಡೆಗಳು ಯೆಹೋವನ ಆಲಯವನ್ನು ಕಾಯುತ್ತಾ ರಾಜನಾದ ಯೆಹೋವಾಷನನ್ನು ಕಾಯಬೇಕು. 8 ರಾಜನಾದ ಯೆಹೋವಾಷನು ಎಲ್ಲಿಗಾದರೂ ಯಾವಾಗಲಾದರೂ ಹೋದರೆ ಅವನೊಂದಿಗೆ ನೀವು ಇರಲೇಬೇಕು. ನೀವೆಲ್ಲರೂ ರಾಜನನ್ನು ಸುತ್ತುವರಿದಿರಬೇಕು. ಪ್ರತಿಯೊಬ್ಬ ಕಾವಲುಗಾರನೂ ಆಯುಧವನ್ನು ತನ್ನ ಕೈಯಲ್ಲಿ ಹಿಡಿದಿರಲೇಬೇಕು. ನಿಮ್ಮ ಸಮೀಪಕ್ಕೆ ಯಾರಾದರೂ ಬಂದರೆ ಅವರನ್ನು ಕೊಲ್ಲಬೇಕು” ಎಂದನು.
9 ಯಾಜಕನಾದ ಯೆಹೋಯಾದಾವನು ಆಜ್ಞಾಪಿಸಿದ ಸಂಗತಿಗಳಿಗೆಲ್ಲ ಸೇನಾಧಿಪತಿಗಳು ವಿಧೇಯರಾಗಿದ್ದರು. ಪ್ರತಿಯೊಬ್ಬ ಸೇನಾಧಿಪತಿಯೂ ತನ್ನ ಕಾವಲುಗಾರರನ್ನು ಅಂದರೆ ಸಬ್ಬತ್‌ದಿನದಂದು ಕಾಯಲು ಬರಬೇಕಾಗಿದ್ದ ಮತ್ತು ಸಬ್ಬತ್‌ದಿನದಂದು ಕೆಲಸದಿಂದ ಹೋಗಬೇಕಾಗಿದ್ದ ಸಿಪಾಯಿಗಳನ್ನು ಕರೆದೊಯ್ದನು. ಅವರೆಲ್ಲರೂ ಯಾಜಕನಾದ ಯೆಹೋಯಾದಾವನ ಹತ್ತಿರಕ್ಕೆ ಹೋದರು. 10 ಸೇನಾಧಿಪತಿಗಳಿಗೆ ಬರ್ಜಿಗಳನ್ನು ಮತ್ತು ಗುರಾಣಿಗಳನ್ನು ಯಾಜಕನು ಕೊಟ್ಟನು. ರಾಜನಾದ ದಾವೀದನು ಯೆಹೋವನ ಆಲಯದಲ್ಲಿ ಈ ಬರ್ಜಿಗಳನ್ನು ಮತ್ತು ಗುರಾಣಿಗಳನ್ನು ಇಟ್ಟಿದ್ದನು. 11 ಈ ಕಾವಲುಗಾರರು ಆಲಯದ ಬಲಗಡೆಯ ಮೂಲೆಯಿಂದ ಎಡಗಡೆಯ ಮೂಲೆಯವರೆಗೆ ತಮ್ಮ ಕೈಗಳಲ್ಲಿ ಆಯುಧಗಳನ್ನು ಹಿಡಿದುಕೊಂಡು ನಿಂತರು. ರಾಜನು ಆಲಯದೊಳಕ್ಕೆ ಹೋದಾಗ ಅವರು ಅವನ ಸುತ್ತಲೂ, ಯಜ್ಞವೇದಿಕೆಯ ಮತ್ತು ಆಲಯದ ಸುತ್ತಲೂ ನಿಂತುಕೊಂಡರು. 12 ಈ ಜನರು ಯೆಹೋವಾಷಾನನ್ನು ಹೊರಗೆ ತಂದರು. ಅವರು ಯೆಹೋವಾಷನ ಮೇಲೆ ಕಿರೀಟವನ್ನಿಟ್ಟು ಕೈಯಲ್ಲಿ ಧರ್ಮಶಾಸ್ತ್ರವನ್ನು ಕೊಟ್ಟರು. ನಂತರ ಅವರು ಅವನನ್ನು ಅಭಿಷೇಕಿಸಿ, ನೂತನ ರಾಜನನ್ನಾಗಿ ಮಾಡಿದರು. ಅವರು ಚಪ್ಪಾಳೆ ತಟ್ಟುತ್ತಾ “ರಾಜನು ಚಿರಂಜೀವಿಯಾಗಿರಲಿ!” ಎಂದು ಆರ್ಭಟಿಸಿದರು.
13 ಕಾವಲುಗಾರರ ಮತ್ತು ಜನರ ಗದ್ದಲವು ರಾಣಿಯಾದ ಅತಲ್ಯಳಿಗೆ ಕೇಳಿಸಿತು. ಅವಳು ಯೆಹೋವನ ಆಲಯದಲ್ಲಿದ್ದ ಜನರ ಬಳಿಗೆ ಹೋದಳು. 14 ರಾಜನು ಪದ್ಧತಿಯಂತೆ ಸ್ತಂಭದ ಬಳಿ ನಿಂತಿರುವುದನ್ನೂ ಜನರು ಮತ್ತು ನಾಯಕರು ರಾಜನಿಗಾಗಿ ತುತ್ತೂರಿ ಊದುತ್ತಿರುವುದನ್ನೂ ಜನರೆಲ್ಲರೂ ಬಹಳ ಸಂತೋಷದಿಂದಿರುವುದನ್ನೂ ಅವಳು ನೋಡಿ ದುಃಖದಿಂದ ತನ್ನ ಬಟ್ಟೆಗಳನ್ನು ಹರಿದುಕೊಂಡು “ದ್ರೋಹ, ದ್ರೋಹ!” ಎಂದು ಕೂಗಿಕೊಂಡಳು.
15 ಯಾಜಕನಾದ ಯೆಹೋಯಾದಾವನು ಸೈನಿಕರ ಮೇಲ್ವಿಚಾರಕರಾದ ಸೇನಾಧಿಪತಿಗಳಿಗೆ ಆಜ್ಞಾಪಿಸಿದನು. ಯೆಹೋಯಾದಾವನು ಅವರಿಗೆ, “ಅತಲ್ಯಳನ್ನು ಆಲಯದ ಆವರಣದಿಂದ ಹೊರಗೆ ತೆಗೆದುಕೊಂಡು ಹೋಗಿ. ಅವಳ ಹಿಂಬಾಲಕರು ಯಾರೇ ಆಗಿದ್ದರೂ ಕೊಂದುಬಿಡಿ. ಆದರೆ ಅವರನ್ನು ಯೆಹೋವನ ಆಲಯದಲ್ಲಿ ಕೊಲ್ಲಬೇಡಿ” ಎಂದು ಹೇಳಿದನು.
16 ಆದ್ದರಿಂದ ಸೈನಿಕರು ಅವಳನ್ನು ಹಿಡಿದುಕೊಂಡು ಹೊರಗೆ ಕರೆದೊಯ್ದರು, ಆಕೆಯು ಕುದುರೆಗಳ ಪ್ರವೇಶದ್ವಾರದ ಮೂಲಕ ಅರಮನೆಗೆ ಹೋದಳು. ಸೈನಿಕರು ಅತಲ್ಯಳನ್ನು ಅಲ್ಲಿ ಕೊಂದುಹಾಕಿದರು.
17 ಅನಂತರ ಯೆಹೋಯಾದಾವನ ಪ್ರೇರಣೆಯಿಂದ ಅರಸನೂ ಪ್ರಜೆಗಳೂ ತಾವು ಯೆಹೋವನ ಪ್ರಜೆಗಳಾಗಿರುವುದಾಗಿ ಆತನಿಗೆ ಪ್ರಮಾಣಮಾಡಿದರು.
18 ಆಗ ಜನರೆಲ್ಲರೂ ಸುಳ್ಳುದೇವರಾದ ಬಾಳನ ಗುಡಿಗೆ ಹೋಗಿ ಬಾಳನ ವಿಗ್ರಹವನ್ನೂ ಮತ್ತು ಅವನ ಯಜ್ಞವೇದಿಕೆಯನ್ನೂ ಚೂರುಚೂರು ಮಾಡಿದರು. ಬಾಳನ ಯಾಜಕನಾದ ಮತ್ತಾನನನ್ನು ಜನರು ಯಜ್ಞವೇದಿಕೆಯ ಎದುರಿನಲ್ಲಿಯೇ ಕೊಂದುಹಾಕಿದರು.
ಯಾಜಕನಾದ ಯೆಹೋಯಾದಾವನು ಯೆಹೋವನ ಆಲಯಕ್ಕೆ ಕಾವಲುಗಾರರನ್ನು ನೇಮಿಸಿದನು. 19 ಯಾಜಕನು ಜನರನ್ನೆಲ್ಲ ಕರೆದುಕೊಂಡು ಹೋದನು. ಅವರು ಸಿಪಾಯಿಗಳ ದ್ವಾರದ ಮೂಲಕ ಅರಮನೆಗೆ ಹೋದರು. ರಾಜನ ವಿಶೇಷ ಅಂಗರಕ್ಷಕರು ಮತ್ತು ಸೇನಾಧಿಪತಿಗಳು ರಾಜನ ಜೊತೆಯಲ್ಲಿ ಹೋದರು. ಅವರನ್ನು ಇತರ ಜನರೆಲ್ಲರೂ ಹಿಂಬಾಲಿಸಿದರು. ಅವರು ರಾಜನ ಅರಮನೆಯ ಬಾಗಿಲಿಗೆ ಹೋದರು. ನಂತರ ರಾಜನಾದ ಯೆಹೋವಾಷನು ಸಿಂಹಾಸನದ ಮೇಲೆ ಕುಳಿತುಕೊಂಡನು. 20 ಜನರೆಲ್ಲರೂ ಬಹಳ ಹರ್ಷಗೊಂಡರು. ನಗರದಲ್ಲಿ ಸಮಾಧಾನವಿತ್ತು. ರಾಜನ ಅರಮನೆಯ ಹತ್ತಿರ ರಾಣಿಯಾದ ಅತಲ್ಯಳನ್ನು ಖಡ್ಗದಿಂದ ಕೊಂದಿದ್ದರು.
21 ಯೆಹೋವಾಷನು ರಾಜನಾದಾಗ ಅವನಿಗೆ ಏಳು ವರ್ಷ ವಯಸ್ಸಾಗಿತ್ತು.
ಯೆಹೋವಾಷನು ತನ್ನ ಆಳ್ವಿಕೆಯನ್ನು ಆರಂಭಿಸಿದನು
12 ಯೇಹುವು ಇಸ್ರೇಲಿನ ರಾಜನಾಗಿದ್ದ ಏಳನೆಯ ವರ್ಷದಲ್ಲಿ ಯೆಹೋವಾಷನು ಆಳಲಾರಂಭಿಸಿದನು. ಯೆಹೋವಾಷನು ಜೆರುಸಲೇಮಿನಲ್ಲಿ ನಲವತ್ತು ವರ್ಷ ಆಳಿದನು. ಬೇರ್ಷೆಬದ ಚಿಬ್ಯಳು ಯೆಹೋವಾಷನ ತಾಯಿ. 2 ಯೆಹೋವಾಷನು ಯೆಹೋವನು ಸರಿಯೆಂದು ಹೇಳಿದ ಕಾರ್ಯಗಳನ್ನು ಮಾಡಿದನು. ಯೆಹೋವಾಷನು ತನ್ನ ಜೀವಮಾನವೆಲ್ಲ ಯೆಹೋವನಿಗೆ ವಿಧೇಯನಾಗಿದ್ದನು. ಯಾಜಕನಾದ ಯೆಹೋಯಾದಾವನು ಉಪದೇಶಿಸಿದ್ದ ಕಾರ್ಯಗಳನ್ನೆಲ್ಲ ಯೆಹೋವಾಷನು ಮಾಡಿದನು. 3 ಆದರೆ ಅವನು ಉನ್ನತ ಪೂಜಾಸ್ಥಳಗಳನ್ನು ನಾಶಗೊಳಿಸಲಿಲ್ಲ. ಜನರು ಇನ್ನೂ ಆ ಸ್ಥಳಗಳಲ್ಲಿ ಯಜ್ಞಗಳನ್ನು ಅರ್ಪಿಸುತ್ತಾರೆ ಮತ್ತು ಧೂಪಗಳನ್ನು ಸುಡುತ್ತಾರೆ.
ದೇವಾಲಯವನ್ನು ಸರಿಪಡಿಸಲು ಯೆಹೋವಾಷನ ಆಜ್ಞೆ
4-5 ಯೆಹೋವಾಷನು ಯಾಜಕರಿಗೆ, “ದೇವಾಲಯದಲ್ಲಿ ಬಹಳ ಹಣವಿದೆ. ಜನರು ಅನೇಕ ವಸ್ತುಗಳನ್ನು ಆಲಯಕ್ಕೆ ಕೊಟ್ಟಿದ್ದಾರೆ. ಜನಗಣತಿಯಲ್ಲಿ ಲೆಕ್ಕಿಸಲ್ಪಟ್ಟ ಜನರು ಆಲಯದ ತೆರಿಗೆಯನ್ನು ಕೊಟ್ಟಿದ್ದಾರೆ. ಜನರು ತಮ್ಮ ಸ್ವ ಇಚ್ಛೆಯಿಂದ ಹಣವನ್ನು ಕೊಟ್ಟಿದ್ದಾರೆ. ಯಾಜಕರಾದ ನೀವು ಆ ಹಣವನ್ನು ತೆಗೆದುಕೊಂಡು, ಯೆಹೋವನ ಆಲಯವನ್ನು ಸರಿಪಡಿಸಿ. ಪ್ರತಿಯೊಬ್ಬ ಯಾಜಕನೂ ತಾನು ಜನರ ಸೇವೆಯಿಂದ ಪಡೆದ ಹಣವನ್ನು ಉಪಯೋಗಿಸಲೇಬೇಕು. ಅವನು ಆ ಹಣವನ್ನು ದೇವಾಲಯದ ಶಿಥಿಲತೆಯನ್ನು ಸರಿಪಡಿಸಲು ಉಪಯೋಗಿಸಲೇಬೇಕು” ಎಂದು ಹೇಳಿದನು.
6 ಆದರೆ ಯಾಜಕರು ಸರಿಪಡಿಸಲಿಲ್ಲ. ಯೆಹೋವಾಷನು ರಾಜನಾದ ಇಪ್ಪತ್ತಮೂರನೆಯ ವರ್ಷದಲ್ಲಿ, ಯಾಜಕರಿನ್ನೂ ದೇವಾಲಯವನ್ನು ಸರಿಪಡಿಸಲಿಲ್ಲ. 7 ಆದ್ದರಿಂದ ರಾಜನಾದ ಯೆಹೋವಾಷನು ಯಾಜಕನಾದ ಯೆಹೋಯಾದಾವ ಮತ್ತು ಇತರ ಯಾಜಕರನ್ನು ಕರೆಸಿ, “ನೀವು ಆಲಯವನ್ನು ಸರಿಪಡಿಸಲಿಲ್ಲವೇಕೆ? ನಿಮ್ಮಿಂದ ಸೇವೆ ಹೊಂದುವ ಜನರು ಕೊಡುವ ಹಣವನ್ನು ಉಪಯೋಗಿಸಬೇಡಿ. ಆಲಯವನ್ನು ಸರಿಪಡಿಸುವುದಕ್ಕಾಗಿ ಆ ಹಣವನ್ನು ಉಪಯೋಗಿಸಬೇಕು” ಎಂದು ಹೇಳಿದನು.
8 ಆಗ ಯಾಜಕರು ಅವನಿಗೆ, “ನಾವು ಜನರಿಂದ ಹಣ ತೆಗೆದುಕೊಳ್ಳುವುದಿಲ್ಲ ಮತ್ತು ಆಲಯವನ್ನು ಸರಿಪಡಿಸುವುದಕ್ಕೆ ಕೈ ಹಾಕುವುದಿಲ್ಲ” ಎಂದು ಹೇಳಿದರು. 9 ಯಾಜಕನಾದ ಯೆಹೋಯಾದಾವನು ಒಂದು ಪೆಟ್ಟಿಗೆಯನ್ನು ತೆಗೆದುಕೊಂಡು, ಅದರ ಮೇಲೆ ಒಂದು ರಂಧ್ರ ಮಾಡಿದನು. ನಂತರ ಯೆಹೋಯಾದಾವನು ಆ ಪೆಟ್ಟಿಗೆಯನ್ನು ಯಜ್ಞವೇದಿಕೆಯ ಬಲಗಡೆಯಲ್ಲಿ ಇಟ್ಟನು. ದೇವಾಲಯಕ್ಕೆ ಜನರು ಬರುವ ಬಾಗಿಲಿನಲ್ಲಿ ಈ ಪೆಟ್ಟಿಗೆಯಿತ್ತು. ಕೆಲವು ಮಂದಿ ಯಾಜಕರು ಆಲಯದ ಬಾಗಿಲಿನಲ್ಲಿ ರಕ್ಷಕರಾಗಿ ನಿಂತರು. ಆ ಯಾಜಕರು ಜನರು ಯೆಹೋವನಿಗೆಂದು ಕೊಡುವ ಆ ಹಣವನ್ನು ಪೆಟ್ಟಿಗೆಯಲ್ಲಿ ಹಾಕಿದರು.
10 ಜನರು ದೇವಾಲಯಕ್ಕೆ ಹೋದಾಗ ಆ ಪೆಟ್ಟಿಗೆಯಲ್ಲಿ ಹಣವನ್ನು ಹಾಕಲಾರಂಭಿಸಿದರು. ರಾಜನ ಕಾರ್ಯದರ್ಶಿಯಾಗಲಿ ಪ್ರಧಾನಯಾಜಕನಾಗಲಿ ನೋಡಿದಾಗ ಸಾಕಷ್ಟು ಹಣವು ತುಂಬಿದ್ದರೆ ಅದನ್ನು ಲೆಕ್ಕಹಾಕಿ ಚೀಲಗಳಲ್ಲಿ ತುಂಬಿಡುತ್ತಿದ್ದರು. 11 ನಂತರ ಅವರು ಆ ಹಣದಿಂದ ದೇವಾಲಯದ ಕೆಲಸಗಾರರಿಗೂ ಬಡಗಿಗಳಿಗೂ ಮತ್ತು ದೇವಾಲಯದ ಇತರ ಕೆಲಸಗಾರರಿಗೂ 12 ಕಲ್ಲುಕುಟಿಕರಿಗೂ ಶಿಲ್ಪಿಗಳಿಗೂ ಸಂಬಳ ಕೊಡುತ್ತಿದ್ದರು. ಅವರು ಆ ಹಣದಿಂದ ಮರವನ್ನೂ ಕೆತ್ತಿದ ಕಲ್ಲುಗಳನ್ನೂ ಕೊಂಡುಕೊಂಡರು; ಯೆಹೋವನ ಆಲಯವನ್ನು ಸರಿಪಡಿಸಲು ಇತರ ಕೆಲಸಗಳಿಗೆ ಆ ಹಣವನ್ನು ಬಳಸುತ್ತಿದ್ದರು.
13-14 ಜನರು ದೇವಾಲಯಕ್ಕೆ ಹಣವನ್ನು ಕೊಟ್ಟರು. ಆದರೆ ಯಾಜಕರು ಆ ಹಣವನ್ನು ಬೆಳ್ಳಿಯ ಬಟ್ಟಲು, ಕತ್ತರಿ, ಬೋಗುಣಿ, ತುತ್ತೂರಿ ಅಥವಾ ಬೆಳ್ಳಿಬಂಗಾರಗಳ ಪಾತ್ರೆಗಳಿಗೆ ಉಪಯೋಗಿಸದೆ ಕೆಲಸಗಾರರ ವೇತನಕ್ಕೆ ಉಪಯೋಗಿಸಿದರು. ಆ ಕೆಲಸಗಾರರು ದೇವಾಲಯವನ್ನು ಸರಿಪಡಿಸಿದರು. 15 ಯಾರೂ ಆ ಹಣವನ್ನು ಲೆಕ್ಕಹಾಕಲಿಲ್ಲ. ಇಲ್ಲವೆ ಆ ಹಣವೇನಾಯಿತೆಂದು ಯಾವ ಕೆಲಸಗಾರನನ್ನೂ ಒತ್ತಾಯಿಸಿ ಕೇಳಲಿಲ್ಲ. ಏಕೆಂದರೆ ಆ ಕೆಲಸಗಾರರು ನಂಬಿಗಸ್ತರಾಗಿದ್ದರು!
16 ಜನರು ತಮ್ಮ ಅಪರಾಧ ಪ್ರಾಯಶ್ಚಿತ್ತ ಮತ್ತು ದೋಷಪರಿಹಾರದ ಸಮಯದಲ್ಲಿ ಹಣವನ್ನು ಕೊಟ್ಟರು. ಆದರೆ ಅಂತಹ ಹಣವನ್ನು ಕೆಲಸಗಾರರ ವೇತನಕ್ಕೆ ಉಪಯೋಗಿಸಲಿಲ್ಲ. ಆ ಹಣವು ಯಾಜಕರಿಗೆ ಸೇರಿದ್ದು.
ಯೆಹೋವಾಷನು ಹಜಾಯೇಲನಿಂದ ಜೆರುಸಲೇಮನ್ನು ರಕ್ಷಿಸಿದನು
17 ಹಜಾಯೇಲನು ಅರಾಮ್ಯರ ರಾಜನಾಗಿದ್ದನು. ಹಜಾಯೇಲನು ಗತ್ ಊರನ್ನೂ ಸೋಲಿಸಿದನು. ಆಗ ಅವನು ಜೆರುಸಲೇಮಿನ ವಿರುದ್ಧ ಯುದ್ಧಕ್ಕೆ ಹೋಗಲು ಯೋಚಿಸಿದನು.
18 ಯೆಹೋಷಾಫಾಟ್, ಯೆಹೋರಾಮ್ ಮತ್ತು ಅಹಜ್ಯರು ಯೆಹೂದದ ರಾಜರಾಗಿದ್ದರು. ಅವರೆಲ್ಲ ಯೆಹೋವಾಷನ ಪೂರ್ವಿಕರು. ಅವರು ಅನೇಕ ವಸ್ತುಗಳನ್ನು ಯೆಹೋವನಿಗೆ ಕೊಟ್ಟಿದ್ದರು. ಅವುಗಳನ್ನೆಲ್ಲ ಆಲಯದಲ್ಲಿ ಇಟ್ಟಿದ್ದರು. ಯೆಹೋವಾಷನೂ ಯೆಹೋವನಿಗೆ ಅನೇಕ ವಸ್ತುಗಳನ್ನು ಕೊಟ್ಟಿದ್ದನು. ಯೆಹೋವಾಷನು ಅವುಗಳ ಜೊತೆಗೆ, ಆಲಯದಲ್ಲಿದ್ದ ಮತ್ತು ತನ್ನ ಮನೆಯಲ್ಲಿದ್ದ ಬಂಗಾರವನ್ನೆಲ್ಲ ತೆಗೆದುಕೊಂಡನು. ನಂತರ ಯೆಹೋವಾಷನು ಆ ಬೆಲೆಬಾಳುವ ವಸ್ತುಗಳನ್ನೆಲ್ಲ ಅರಾಮ್ಯರ ರಾಜನಾದ ಹಜಾಯೇಲನಿಗೆ ಕಳುಹಿಸಿದನು. ಆದ್ದರಿಂದ ಹಜಾಯೇಲನು ಜೆರುಸಲೇಮಿನ ವಿರುದ್ಧ ಯುದ್ಧಮಾಡದೆ ಹೊರಟುಹೋದನು.
ಯೆಹೋವಾಷನ ಮರಣ
19 “ಯೆಹೂದದ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಯೆಹೋವಾಷನು ಮಾಡಿದ ಇತರ ಮಹಾಕಾರ್ಯಗಳ ಬಗ್ಗೆ ಬರೆಯಲಾಗಿದೆ.
20 ಯೆಹೋವಾಷನ ಅಧಿಕಾರಿಗಳು ಅವನ ವಿರುದ್ಧವಾಗಿ ಸಂಚುಮಾಡಿ ಅವನನ್ನು ಸಿಲ್ಲಾಕ್ಕೆ ಹೋಗುವ ರಸ್ತೆಯಲ್ಲಿದ್ದ ಮಿಲ್ಲೋ ಮನೆಯಲ್ಲಿ ಕೊಂದುಹಾಕಿದರು. 21 ಶಿಮೆಯಾತನ ಮಗನಾದ ಯೋಜಾಕಾರನು ಮತ್ತು ಶೋಮೇರನ ಮಗನಾದ ಯೆಹೋಜಾಬಾದನು ಯೆಹೋವಾಷನ ಅಧಿಕಾರಿಗಳಾಗಿದ್ದರು. ಅವರು ಯೆಹೋವಾಷನನ್ನು ಕೊಂದರು.
ಜನರು ಯೆಹೋವಾಷನನ್ನು ದಾವೀದನಗರದಲ್ಲಿ ಅವನ ಪೂರ್ವಿಕರ ಬಳಿ ಸಮಾಧಿಮಾಡಿದರು. ಯೆಹೋವಾಷನ ನಂತರ ಅವನ ಮಗನಾದ ಅಮಚ್ಯನು ನೂತನ ರಾಜನಾದನು.
ಕ್ರಿಸ್ತ ಯೇಸುವಿನ ನಿಷ್ಠಾವಂತ ಸೈನಿಕ
2 ಕ್ರಿಸ್ತ ಯೇಸುವಿನ ನಿಷ್ಠಾವಂತ ಸೈನಿಕನಾಗಿರುವ ತಿಮೊಥೆಯನೇ, ನೀನು ನನಗೆ ಮಗನಂತಿರುವೆ. ಕ್ರಿಸ್ತ ಯೇಸುವಿನಲ್ಲಿರುವ ಕೃಪೆಯಿಂದ ಬಲ ಹೊಂದಿದವನಾಗು. 2 ನಾನು ಉಪದೇಶಿಸಿದ ಸಂಗತಿಗಳನ್ನು ನೀನು ಕೇಳಿರುವೆ. ಅವುಗಳನ್ನು ಇತರ ಅನೇಕ ಜನರೂ ಕೇಳಿದ್ದಾರೆ. ನೀನು ಆ ಸಂಗತಿಗಳನ್ನು ಉಪದೇಶಿಸಬೇಕು. ನಿನಗೆ ನಂಬಿಗಸ್ತರಾದ ಕೆಲವರ ವಶಕ್ಕೆ ಆ ಉಪದೇಶಗಳನ್ನು ಕೊಡು. ಆಗ ಅವರು ಆ ಸಂಗತಿಗಳನ್ನು ಇತರರಿಗೆ ಉಪದೇಶಿಸಲು ಸಾಧ್ಯವಾಗುತ್ತದೆ. 3 ನಮಗಿರುವ ತೊಂದರೆಗಳಲ್ಲಿ ನೀನೂ ಪಾಲುಗಾರನಾಗು. ಕ್ರಿಸ್ತ ಯೇಸುವಿನ ನಿಜವಾದ ಸೈನಿಕನಂತೆ ಆ ತೊಂದರೆಗಳನ್ನು ಸ್ವೀಕರಿಸು. 4 ಸೈನಿಕನು ತನ್ನ ಸೈನ್ಯಾಧಿಕಾರಿಯನ್ನು ಮೆಚ್ಚಿಸಲು ಇಷ್ಟಪಡುತ್ತಾನೆ. ಆದ್ದರಿಂದ ಆ ಸೈನಿಕನು ಲೋಕವ್ಯವಹಾರದಲ್ಲಿ ಸಿಕ್ಕಿಕೊಳ್ಳದಂತೆ ಎಚ್ಚರಿಕೆಯಿಂದಿರುವನು. 5 ಓಟದ ಸ್ಪರ್ಧೆಯಲ್ಲಿ ಗೆಲ್ಲಬೇಕಾದರೆ, ಓಟಗಾರನು ಎಲ್ಲಾ ನಿಯಮಗಳನ್ನು ಪಾಲಿಸಬೇಕು. 6 ಕಷ್ಟಪಟ್ಟು ಕೆಲಸಮಾಡುವ ರೈತನಿಗೆ ಬೆಳೆಯ ಪ್ರಥಮ ಪಾಲು ದೊರೆಯಬೇಕು. 7 ನಾನು ಹೇಳುತ್ತಿರುವ ಈ ಸಂಗತಿಗಳನ್ನು ಕುರಿತು ಆಲೋಚಿಸು. ಈ ಸಂಗತಿಗಳನ್ನೆಲ್ಲ ಅರ್ಥಮಾಡಿಕೊಳ್ಳುವ ವಿವೇಕವನ್ನು ಪ್ರಭುವು ನಿನಗೆ ದಯಪಾಲಿಸುವನು.
8 ಯೇಸು ಕ್ರಿಸ್ತನನ್ನು ನೆನಪು ಮಾಡಿಕೊ. ಆತನು ದಾವೀದನ ವಂಶದವನು. ಯೇಸು ಸತ್ತನಂತರ ಜೀವಂತವಾಗಿ ಮೇಲೆದ್ದು ಬಂದನು. ಈ ಸುವಾರ್ತೆಯನ್ನೇ ನಾನು ಜನರಿಗೆ ತಿಳಿಸುತ್ತೇನೆ. 9 ಈ ಕಾರಣದಿಂದಲೇ ಸಂಕಟವನ್ನು ಅನುಭವಿಸುತ್ತಿದ್ದೇನೆ. ದುಷ್ಕರ್ಮಿಯಂತೆ ಸಂಕೋಲೆಗಳಿಂದ ಬಂಧಿಸಲ್ಪಟ್ಟಿದ್ದೇನೆ. ಆದರೆ ದೇವರ ಉಪದೇಶಕ್ಕೆ ಬಂಧನವಿಲ್ಲ. 10 ಆದ್ದರಿಂದ ನಾನು ತಾಳ್ಮೆಯಿಂದಲೇ ಈ ತೊಂದರೆಗಳನ್ನು ಅಂಗೀಕರಿಸಿದ್ದೇನೆ. ಏಕೆಂದರೆ ದೇವರು ಆರಿಸಿರುವ ಜನರೆಲ್ಲರಿಗೂ ಸಹಾಯ ಮಾಡಬೇಕೆಂಬುದು ನನ್ನ ಅಪೇಕ್ಷೆಯಾಗಿದೆ. ಆ ಜನರು ಕ್ರಿಸ್ತ ಯೇಸುವಿನಲ್ಲಿ ರಕ್ಷಣೆ ಪಡೆಯಲೆಂದು ನಾನು ಈ ತೊಂದರೆಗಳನ್ನೆಲ್ಲ ಸ್ವೀಕರಿಸಿಕೊಂಡಿದ್ದೇನೆ. ಈ ರಕ್ಷಣೆಯೊಂದಿಗೆ ನಿತ್ಯಪ್ರಭಾವವು ದೊರೆಯುತ್ತದೆ.
11 ಈ ಉಪದೇಶವು ಸತ್ಯವಾದದ್ದು:
ನಾವು ಆತನೊಂದಿಗೆ (ಯೇಸು) ಸತ್ತಿದ್ದರೆ, ಆತನೊಡನೆ ಜೀವಿಸುವೆವು.
12 ನಾವು ಸಂಕಟವನ್ನು ಸ್ವೀಕರಿಸಿಕೊಂಡರೆ, ಆತನೊಡನೆ ಆಳುವೆವು.
ನಾವು ಆತನನ್ನು ಸ್ವೀಕರಿಸಿಕೊಳ್ಳದಿದ್ದರೆ, ಆತನೂ ನಮ್ಮನ್ನು ಸ್ವೀಕರಿಸಿಕೊಳ್ಳುವುದಿಲ್ಲ.
13 ನಾವು ನಂಬಿಗಸ್ತರಾಗಿಲ್ಲದಿದ್ದರೂ, ಆತನು ಇನ್ನೂ ನಂಬಿಗಸ್ತನಾಗಿರುವನು;
ಏಕೆಂದರೆ ಆತನು ತನ್ನ ಸ್ವಭಾವಕ್ಕೆ ವಿರುದ್ಧನಾಗಲಾರನು.
ಯೋಗ್ಯನಾದ ಕೆಲಸಗಾರನು
14 ಜನರಿಗೆ ಈ ಸಂಗತಿಗಳನ್ನು ತಿಳಿಸುತ್ತಲೇ ಇರು. ಪದಗಳ ಬಗ್ಗೆ ವಾಗ್ವಾದ ಮಾಡಬಾರದೆಂದು ಅವರಿಗೆ ದೇವರ ಸನ್ನಿಧಿಯಲ್ಲಿ ಎಚ್ಚರಿಕೆ ನೀಡು. ವಾಗ್ವಾದಗಳಿಂದ ಯಾರಿಗೂ ಪ್ರಯೋಜನವಿಲ್ಲ. ವಾಗ್ವಾದವನ್ನು ಕೇಳುವ ಜನರು ಅದರಿಂದ ನಾಶವಾಗುತ್ತಾರೆ. 15 ದೇವರ ದೃಷ್ಟಿಯಲ್ಲಿ ಯೋಗ್ಯ ವ್ಯಕ್ತಿಯಾಗಲು ನಿನ್ನಿಂದಾದಷ್ಟು ಪ್ರಯಾಸಪಡು ಮತ್ತು ನಿನ್ನನ್ನೇ ಒಪ್ಪಿಸಿಕೊಡು. ತನ್ನ ಕೆಲಸದಲ್ಲಿ ನಾಚಿಕೆಪಡದಿರುವ ಕೆಲಸಗಾರನಾಗು, ಅಂದರೆ ಸತ್ಯೋಪದೇಶವನ್ನು ಯೋಗ್ಯವಾದ ರೀತಿಯಲ್ಲಿ ತಿಳಿಸುವವನಾಗು.
16 ದೇವರಿಂದ ಬಂದಿಲ್ಲದ ನಿರರ್ಥಕ ಸಂಗತಿಗಳನ್ನು ಮಾತನಾಡುವ ಜನರಿಂದ ದೂರವಾಗಿರು. ಆ ರೀತಿಯ ಮಾತುಗಳು ಜನರನ್ನು ದೇವರಿಂದ ಮತ್ತಷ್ಟು ದೂರ ಮಾಡುತ್ತವೆ. 17 ಅವರ ಕೆಟ್ಟ ಉಪದೇಶಗಳು ದೇಹದಲ್ಲಿ ಹರಡಿಕೊಳ್ಳುವ ಕಾಯಿಲೆಯಂತೆ ವ್ಯಾಪಿಸಿಕೊಳ್ಳುತ್ತವೆ. ಹುಮೆನಾಯನು ಮತ್ತು ಪಿಲೇತನು ಅಂತಹ ಜನರಾಗಿದ್ದಾರೆ. 18 ಅವರು ಸತ್ಯೋಪದೇಶವನ್ನು ತಿರಸ್ಕರಿಸಿದರು. ಎಲ್ಲಾ ಜನರಿಗೆ ಉಂಟಾಗುವ ಪುನರುತ್ಥಾನವು ಈಗಾಗಲೇ ಆಗಿ ಹೋಗಿದೆಯೆಂದು ಅವರು ಹೇಳುತ್ತಾರೆ. ಅವರಿಬ್ಬರು ಕೆಲವು ಜನರ ನಂಬಿಕೆಯನ್ನು ಹಾಳುಮಾಡುತ್ತಿದ್ದಾರೆ.
19 ಆದರೆ ದೇವರ ಭದ್ರವಾದ ಬುನಾದಿಯು ಬದಲಾಗುವುದೇ ಇಲ್ಲ. “ಪ್ರಭುವಿಗೆ ತನ್ನವರು ಯಾರೆಂಬುದು ತಿಳಿದಿದೆ”(A) ಎಂತಲೂ “ಪ್ರಭುವಿನಲ್ಲಿ ನಂಬಿಕೆಯಿಟ್ಟಿರುವವರೆಲ್ಲರೂ ದುರ್ಮಾರ್ಗತನವನ್ನು ಬಿಟ್ಟುಬಿಡಬೇಕು” ಎಂತಲೂ ಆ ಬುನಾದಿಯ ಮೇಲೆ ಕೆತ್ತಲಾಗಿದೆ.
20 ದೊಡ್ಡ ಮನೆಯಲ್ಲಿ ಚಿನ್ನಬೆಳ್ಳಿಗಳಿಂದ ಮಾಡಿದ ವಸ್ತುಗಳಿರುತ್ತವೆ. ಅಲ್ಲದೆ ಮರದಿಂದ, ಮಣ್ಣಿನಿಂದ ಮಾಡಿದ ವಸ್ತುಗಳೂ ಇರುತ್ತವೆ. ಕೆಲವನ್ನು ವಿಶೇಷ ಕಾರ್ಯಕ್ಕಾಗಿ ಬಳಸುತ್ತಾರೆ. ಇತರ ವಸ್ತುಗಳನ್ನು ಹೀನವಾದ ಕೃತ್ಯಗಳಿಗೆ ಬಳಸುತ್ತಾರೆ. 21 ಹೀಗಿರಲಾಗಿ ಒಬ್ಬನು ತನ್ನ ದುಷ್ಕೃತ್ಯಗಳನ್ನು ತೊರೆದು ತನ್ನನ್ನು ಶುದ್ಧೀಕರಿಸಿಕೊಂಡರೆ ಅವನನ್ನು ಬಳಸಲಾಗುವುದು. ಅವನು ದೇವರ ಸೇವೆಗೆ ಮೀಸಲಾಗುತ್ತಾನೆ; ಯಜಮಾನನಿಗೆ ಉಪಯುಕ್ತನಾಗುತ್ತಾನೆ; ಸತ್ಕಾರ್ಯಗಳನ್ನು ಕೈಕೊಳ್ಳಲು ಸಿದ್ಧನಾಗಿರುತ್ತಾನೆ.
22 ಯುವಕರು ಇಷ್ಟಪಡುವ ಕೆಟ್ಟಕಾರ್ಯಗಳಿಂದ ನೀನು ದೂರವಾಗಿರು. ಪ್ರೀತಿ, ನಂಬಿಕೆ ಮತ್ತು ಶಾಂತಿಯನ್ನು ಹೊಂದಿದವನಾಗಿದ್ದು ಯೋಗ್ಯವಾದ ರೀತಿಯಲ್ಲಿ ಜೀವಿಸಲು ಬಹಳವಾಗಿ ಪ್ರಯತ್ನಪಡು. ಪ್ರಭುವಿನಲ್ಲಿ ಭರವಸವಿಟ್ಟಿರುವ ಮತ್ತು ಪರಿಶುದ್ಧ ಹೃದಯ ಹೊಂದಿರುವ ಜನರೊಂದಿಗೆ ಒಟ್ಟುಗೂಡಿ ಈ ಕಾರ್ಯಗಳನ್ನು ಮಾಡು. 23 ಮೂಢತನದ ಮತ್ತು ಕ್ಷುಲ್ಲಕವಾದ ವಾದವಿವಾದಗಳಿಂದ ದೂರವಾಗಿರು. ಆ ವಾಗ್ವಾದಗಳು ಬೆಳೆದು ದೊಡ್ಡದಾಗುತ್ತವೆ ಎಂಬುದು ನಿನಗೆ ತಿಳಿದಿದೆ. 24 ಪ್ರಭುವಿನ ಸೇವಕನು ವಾಗ್ವಾದ ಮಾಡಲೇಬಾರದು. ಅವನು ಪ್ರತಿಯೊಬ್ಬರಿಗೂ ದಯೆತೋರಬೇಕು; ಒಳ್ಳೆಯ ಉಪದೇಶಕನಾಗಿರಬೇಕು; ತಾಳ್ಮೆಯಿಂದಿರಬೇಕು. 25 ಅವನು ತನ್ನೊಂದಿಗೆ ಸಮ್ಮತಿಸದಿರುವ ಜನರಿಗೆ ಸಾತ್ವಿಕ ರೀತಿಯಲ್ಲಿ ಉಪದೇಶ ಮಾಡಬೇಕು. ಅವರು ಸತ್ಯವನ್ನು ಅಂಗೀಕರಿಸಿಕೊಳ್ಳುವಂತೆ ದೇವರು ಅವರ ಹೃದಯಗಳನ್ನು ಪರಿವರ್ತಿಸಬಲ್ಲನು. 26 ಸೈತಾನನು ಆ ಜನರನ್ನು ತನ್ನ ಬಲೆಗೆ ಬೀಳಿಸಿ, ತನ್ನ ಅಪೇಕ್ಷೆಗೆ ತಕ್ಕಂತೆ ಅವರಿಂದ ಕಾರ್ಯಗಳನ್ನು ಮಾಡಿಸುತ್ತಿದ್ದಾನೆ. ಆದರೆ ಅವರು ಎಚ್ಚರಗೊಂಡು, ಸೈತಾನನು ತಮ್ಮನ್ನು ವಶಪಡಿಸಿ ಕೊಂಡಿರುವುದನ್ನು ಗುರುತಿಸಬಹುದು ಹಾಗೂ ಸೈತಾನನ ಬಲೆಯಿಂದ ತಪ್ಪಿಸಿಕೊಂಡು ಬಿಡುಗಡೆ ಹೊಂದಬಹುದು.
ಗುಲಾಮಳಾಗಿದ್ದ ಗೋಮೆರಳನ್ನು ಹೋಶೇಯನು ಕ್ರಯಕೊಟ್ಟು ಹಿಂದಕ್ಕೆ ಪಡಕೊಂಡದ್ದು
3 ತಿರುಗಿ ಯೆಹೋವನು ನನಗೆ ಮತ್ತೆ ಹೇಳಿದ್ದೇನೆಂದರೆ, “ಗೋಮೆರಳಿಗೆ ಅನೇಕ ಪ್ರಿಯತಮರಿದ್ದಾರೆ, ಆದರೆ ನೀನು ಆಕೆಯನ್ನು ಪ್ರೀತಿ ಮಾಡುತ್ತಲೇ ಇರಬೇಕು. ಯಾಕೆಂದರೆ ಅದು ಯೆಹೋವನ ರೀತಿ. ಯೆಹೋವನು ಇಸ್ರೇಲ್ ಜನರನ್ನು ಪ್ರೀತಿಸುತ್ತಲೇ ಇದ್ದಾನೆ. ಆದರೆ ಅವರು ಅನ್ಯದೇವರುಗಳನ್ನು ಆರಾಧಿಸುತ್ತಲೇ ಇದ್ದಾರೆ. ಅವರು ಒಣದ್ರಾಕ್ಷಿಯ ಉಂಡೆಗಳನ್ನು ತಿನ್ನಲು ಆಶಿಸುತ್ತಾರೆ.”
2 ನಾನು ಹದಿನೈದು ತುಂಡು ಬೆಳ್ಳಿಯನ್ನೂ ಒಂಭತ್ತು ಕ್ವಿಂಟಾಲ್ ಜವೆಗೋಧಿಯನ್ನೂ ಕೊಟ್ಟು ಆಕೆಯನ್ನು ಕೊಂಡುಕೊಂಡೆನು. 3 ಬಳಿಕ ನಾನು ಆಕೆಗೆ, “ನೀನು ನನ್ನೊಂದಿಗೆ ಅನೇಕ ದಿನಗಳವರೆಗೆ ಮನೆಯೊಳಗೆ ಇರಬೇಕು. ನೀನು ವೇಶ್ಯೆಯಂತಿರಬಾರದು. ನೀನು ಪರಪುರುಷನೊಡನೆ ಇರಬಾರದು. ನಾನೇ ನಿನ್ನ ಗಂಡನಾಗಿರುವೆನು” ಎಂದು ಹೇಳಿದೆನು.
4 ಅದೇ ರೀತಿಯಲ್ಲಿ, ಇಸ್ರೇಲಿನ ಜನರು ಬಹಳ ದಿವಸಗಳ ತನಕ ಅರಸನಾಗಲಿ ಅಧಿಪತಿಯಾಗಲಿ ಇಲ್ಲದೆ ಇರುವರು. ಅವರು ಯಜ್ಞವಿಲ್ಲದೆ ಇರುವರು, ಸ್ಮಾರಕಸ್ತಂಭಗಳೂ ಇರುವದಿಲ್ಲ. ಅವರಲ್ಲಿ ಏಫೋದ್ ಇರುವದಿಲ್ಲ; ಅಲ್ಲದೆ ಮನೆದೇವತೆಯೂ ಇರುವದಿಲ್ಲ. 5 ಹೀಗೆ ಇದ್ದ ಬಳಿಕ ಇಸ್ರೇಲರು ಹಿಂತಿರುಗಿ ಬರುವರು. ಆಗ ಅವರು ತಮ್ಮ ದೇವರಾದ ಯೆಹೋವನನ್ನೂ ಅವರ ಅರಸನಾದ ದಾವೀದನನ್ನೂ ಹುಡುಕುವರು. ಕೊನೆಯ ದಿವಸಗಳಲ್ಲಿ ತಮ್ಮ ದೇವರಾದ ಯೆಹೋವನನ್ನೂ ಆತನ ಒಳ್ಳೆಯತನವನ್ನೂ ಗೌರವಿಸಲು ಬರುವರು.
ಇಸ್ರೇಲರ ಮೇಲೆ ಯೆಹೋವನು ಕೋಪಗೊಂಡಿದ್ದಾನೆ
4 ಇಸ್ರೇಲ್ ಜನರೇ, ಯೆಹೋವನ ಮಾತಿಗೆ ಕಿವಿಗೊಡಿರಿ! ಈ ದೇಶದಲ್ಲಿ ವಾಸಿಸುವ ಜನರ ವಿರುದ್ಧವಾಗಿ ಯೆಹೋವನು ತನ್ನ ವಾದವನ್ನು ಅವರ ಮುಂದಿಡುತ್ತಾನೆ. “ಈ ದೇಶದಲ್ಲಿರುವ ಜನರು ಯೆಹೋವನನ್ನು ನಿಜವಾಗಿಯೂ ತಿಳಿದಿಲ್ಲ. ಅವರು ಯೆಹೋವನಿಗೆ ಸತ್ಯವಂತರೂ ಅಲ್ಲ. ನಿಷ್ಠಾವಂತರೂ ಅಲ್ಲ. 2 ಜನರು ಆಣೆ ಇಟ್ಟುಕೊಳ್ಳುತ್ತಾರೆ, ಸುಳ್ಳನ್ನಾಡುತ್ತಾರೆ, ಕೊಲೆ ಮಾಡುತ್ತಾರೆ ಮತ್ತು ಸೂರೆ ಮಾಡುತ್ತಾರೆ. ಅವರು ವ್ಯಭಿಚಾರವೆಂಬ ಪಾಪಗಳನ್ನು ಮಾಡುತ್ತಾರೆ. ಆದ್ದರಿಂದ ಅವರು ಮಕ್ಕಳನ್ನು ಹುಟ್ಟಿಸುತ್ತಾರೆ. ಜನರು ತಿರುಗಿತಿರುಗಿ ಕೊಲೆ ಮಾಡುತ್ತಾರೆ. 3 ಹೀಗೆ ದೇಶವು ಸತ್ತವರಿಗಾಗಿ ಗೋಳಾಡುವ ಮನುಷ್ಯನಂತಿರುವದು. ಆದ್ದರಿಂದ ಅದರ ಜನರೆಲ್ಲಾ ಬಲಹೀನರಾಗತ್ತಾರೆ. ಅಡವಿಯಲ್ಲಿರುವ ಪ್ರಾಣಿಗಳೂ ಆಕಾಶದ ಪಕ್ಷಿಗಳೂ ಸಮುದ್ರದಲ್ಲಿರುವ ಮೀನುಗಳೂ ಸಾಯುತ್ತಿವೆ. 4 ಯಾರೂ ಪರಸ್ಪರ ವಾದಿಸದೆ ತಪ್ಪು ಹೊರಿಸದೆ ಇರಬೇಕು. ಯಾಜಕರೇ, ನಿಮ್ಮೊಂದಿಗೆ ನಾನು ವಾದಿಸುತ್ತೇನೆ. 5 ನೀವು (ಯಾಜಕರು) ಹಗಲಿನಲ್ಲಿ ಬಿದ್ದುಹೋಗುವಿರಿ. ರಾತ್ರಿ ಹೊತ್ತಿನಲ್ಲಿ ಪ್ರವಾದಿಗಳೂ ನಿಮ್ಮ ಜೊತೆಗೆ ಬೀಳುವರು ಮತ್ತು ನಾನು ನಿಮ್ಮ ತಾಯಿಯನ್ನು ಸಹ ನಾಶಮಾಡುವೆನು.
6 “ನನ್ನ ಜನರು ಅಜ್ಞಾನಿಗಳಾಗಿರುವುದರಿಂದ ಅವರು ನಾಶವಾಗುವರು, ನೀವು ಕಲಿಯಲು ನಿರಾಕರಿಸುತ್ತೀರಿ. ಆದ್ದರಿಂದ ನೀವು ನನ್ನ ಯಾಜಕರಾಗಿರಲು ನಾನು ನಿರಾಕರಿಸುತ್ತೇನೆ. ನಿಮ್ಮ ದೇವರ ಕಟ್ಟಳೆಗಳನ್ನು ನೀವು ಮರೆತುಬಿಟ್ಟಿರುವಿರಿ. ಆದ್ದರಿಂದ ನಾನು ನಿಮ್ಮ ಮಕ್ಕಳನ್ನು ಮರೆತುಬಿಡುವೆನು. 7 ಅವರು ಅಹಂಕಾರಿಗಳಾದರು. ನನ್ನ ವಿರುದ್ಧವಾಗಿ ಹೆಚ್ಚೆಚ್ಚಾಗಿ ಪಾಪ ಮಾಡಿದರು. ಆದ್ದರಿಂದ ಅವರ ಗೌರವವನ್ನು ನಾನು ಲಜ್ಜಾಸ್ಪದವನ್ನಾಗಿ ಮಾಡುವೆನು.
8 “ಜನರ ಪಾಪದೊಂದಿಗೆ ಯಾಜಕರೂ ಒಂದಾದರು, ಅವರು ಹೆಚ್ಚುಹೆಚ್ಚು ಪಾಪಗಳನ್ನು ಮಾಡಲು ಆಶಿಸಿದರು. 9 ಯಾಜಕರು ಸಾಮಾನ್ಯ ಜನರಿಂದ ಬೇರೆ ಆಗಿರಲಿಲ್ಲ. ಅವರು ಮಾಡಿದ ಪಾಪಗಳಿಗಾಗಿ ಅವರನ್ನು ನಾನು ಶಿಕ್ಷಿಸುವೆನು. ಕೆಟ್ಟ ಕೆಲಸವನ್ನು ಮಾಡಿದ್ದಕ್ಕೆ ಅವರಿಗೆ ಪ್ರತಿಫಲ ಕೊಡುವೆನು. 10 ಅವರು ತಿನ್ನುವರು ಆದರೆ ಅವರು ತೃಪ್ತಿಹೊಂದುವದಿಲ್ಲ. ಅವರು ಲೈಂಗಿಕಪಾಪ ಮಾಡುವರು ಆದರೆ ಅವರಿಗೆ ಮಕ್ಕಳಾಗುವದಿಲ್ಲ. ಕಾರಣವೇನೆಂದರೆ ಅವರು ಯೆಹೋವನನ್ನು ತೊರೆದು ವೇಶ್ಯೆಯರಂತೆ ವರ್ತಿಸಿದರು.
11 “ಲೈಂಗಿಕಪಾಪ, ಗಡುಸಾದ ಮದ್ಯ ಮತ್ತು ಹೊಸ ದ್ರಾಕ್ಷಾರಸ ಇವುಗಳಿಂದ ವಿಚಾರಪ್ರಜ್ಞೆಯನ್ನು ಕಳೆದುಕೊಳ್ಳುವರು. 12 ನನ್ನ ಜನರು ಮರದ ತುಂಡುಗಳಿಂದ ಸಲಹೆಗಳನ್ನು ಕೇಳುವರು. ಆ ಮರದ ತುಂಡುಗಳು ಅವರಿಗೆ ಉತ್ತರಿಸುವವು ಎಂದು ಅವರು ನೆನಸುತ್ತಾರೆ. ಯಾಕೆಂದರೆ, ವೇಶ್ಯೆಯರಂತೆ ಅವರು ಆ ಸುಳ್ಳು ದೇವರುಗಳನ್ನು ಹಿಂದಟ್ಟಿಕೊಂಡು ಹೋಗುವರು. ಅವರು ತಮ್ಮ ದೇವರುಗಳನ್ನು ಬಿಟ್ಟು ವೇಶ್ಯೆಯರಂತೆ ವರ್ತಿಸುತ್ತಾರೆ. 13 ಅವರು ಪರ್ವತ ಶಿಖರಗಳ ಮೇಲೆ ಯಜ್ಞಗಳನ್ನರ್ಪಿಸುತ್ತಾರೆ; ಬೆಟ್ಟಗಳ ಮೇಲೆಯೂ ಓಕ್, ಪಾಪಲಾರ್ ಮತ್ತು ಏಲ್ಮ್ ಮರಗಳಡಿಗಳಲ್ಲಿಯೂ ಧೂಪ ಹಾಕುತ್ತಾರೆ. ಆ ಮರಗಳ ನೆರಳು ದಟ್ಟವಾಗಿರುವದು. ಆದ್ದರಿಂದ ನಿಮ್ಮ ಹೆಣ್ಣುಮಕ್ಕಳು ವೇಶ್ಯೆಯರಂತೆ ಅದರಡಿಯಲ್ಲಿ ಮಲಗುವರು. ನಿಮ್ಮ ಸೊಸೆಯಂದಿರು ಲೈಂಗಿಕಪಾಪದಲ್ಲಿ ಮಗ್ನರಾಗಿರುವರು.
14 “ನಿಮ್ಮ ಹೆಣ್ಣುಮಕ್ಕಳು ಸೂಳೆತನ ಮಾಡುವದಕ್ಕಾಗಲಿ ನಿಮ್ಮ ಸೊಸೆಯರು ಲೈಂಗಿಕಪಾಪ ಮಾಡುವದಕ್ಕಾಗಲಿ ನಾನು ಅವರನ್ನು ದೂರುವದಿಲ್ಲ. ಗಂಡಸರು ವೇಶ್ಯೆಯರೊಂದಿಗೆ ಮಲಗುವರು. ಅವರು ಮಂದಿರದ ವೇಶ್ಯೆಯರೊಂದಿಗೆ ಯಜ್ಞವನ್ನರ್ಪಿಸುವರು. ಹೀಗೆ ಆ ಬುದ್ಧಿಯಿಲ್ಲದ ಜನರು ತಮ್ಮನ್ನು ತಾವೇ ನಾಶಮಾಡಿಕೊಳ್ಳುತ್ತಾರೆ.
ಇಸ್ರೇಲಿನ ಲಜ್ಜಾಸ್ಪದವಾದ ಪಾಪಗಳು
15 “ಇಸ್ರೇಲೇ, ನೀನು ಸೂಳೆಯಂತೆ ವರ್ತಿಸುತ್ತೀ. ಆದರೆ ಯೆಹೂದವನ್ನು ತಪ್ಪಿತಸ್ಥಳನ್ನಾಗಿ ಮಾಡಬೇಡ. ಗಿಲ್ಗಾಲಿಗಾಗಲಿ ಬೇತಾವೆನಿಗಾಗಲಿ ಹೋಗದಿರು. ಯೆಹೋವನ ಮೇಲೆ ಆಣೆ ಇಡಬೇಡ. ‘ಯೆಹೋವನಾಣೆ’ ಎಂದು ಹೇಳಬೇಡ. 16 ಇಸ್ರೇಲಿಗೆ ಅನೇಕ ಸಂಗತಿಗಳನ್ನು ಯೆಹೋವನು ಕೊಟ್ಟಿರುತ್ತಾನೆ. ಆತನು ಕುರಿಗಳನ್ನು ವಿಶಾಲವಾದ ಮತ್ತು ಹುಲುಸಾದ ಹುಲ್ಲುಗಾವಲಿಗೆ ಒಯ್ಯುವ ಕುರುಬನಂತಿದ್ದಾನೆ. ಆದರೆ ಇಸ್ರೇಲ್ ಹಠಮಾರಿಯಾಗಿರುತ್ತದೆ. ಬಾರಿಬಾರಿಗೆ ಹೊರಗೆ ಓಡುವ ಯೌವನ ಹಸುವಿನಂತಿದೆ.
17 “ಅವನ ವಿಗ್ರಹಗಳೊಂದಿಗೆ ಎಫ್ರಾಯೀಮು ಸೇರಿರುತ್ತಾನೆ. ಆದ್ದರಿಂದ ಅವನನ್ನು ಸುಮ್ಮನೆ ಬಿಟ್ಟುಬಿಡು. 18 ಅವರು ಅಮಲೇರಿದ ಮೇಲೆ ಸೂಳೆಯರಂತೆ ವರ್ತಿಸುತ್ತಾರೆ. ಅವರು ಲಂಚವನ್ನು ಪ್ರೀತಿಸುತ್ತಾರೆ ಮತ್ತು ಲಂಚಕೊಡುವಂತೆ ಒತ್ತಾಯ ಮಾಡುತ್ತಾರೆ. ಆ ಅಧಿಪತಿಗಳು ತಮ್ಮ ಜನರ ಮೇಲೆ ಅಪಮಾನ ಬರಮಾಡುತ್ತಾರೆ. 19 ಅವರು ತಮ್ಮ ಭಧ್ರತೆಗಾಗಿ ಆ ದೇವರುಗಳ ಬಳಿಗೆ ಹೋದರು ಮತ್ತು ತಮ್ಮ ಯೋಚನೆ ಮಾಡುವ ಶಕ್ತಿಯನ್ನೇ ಕಳಕೊಂಡರು. ಅವರ ಧೂಪಹೋಮಗಳೇ ಅವರನ್ನು ನಾಚಿಕೆಗೆ ಗುರಿಪಡಿಸುವವು.”
121 ನ್ಯಾಯನೀತಿಗಳುಳ್ಳ ಕಾರ್ಯಗಳನ್ನೇ ನಾನು ಮಾಡಿರುವೆ,
ಕೆಡುಕರಿಗೆ ನನ್ನನ್ನು ಒಪ್ಪಿಸಿಕೊಡಬೇಡ.
122 ನಿನ್ನ ಸೇವಕನಾದ ನನಗೆ ಸಹಾಯಮಾಡುವುದಾಗಿ ವಾಗ್ದಾನಮಾಡು.
ನನಗೆ ಕೇಡುಮಾಡಲು ಆ ಗರ್ವಿಷ್ಠರಿಗೆ ಅವಕಾಶ ಕೊಡಬೇಡ.
123 ನಿನ್ನ ರಕ್ಷಣೆಗಾಗಿಯೂ ನಿನ್ನ ಒಳ್ಳೆಯ ಮಾತಿಗಾಗಿಯೂ
ಎದುರುನೋಡುತ್ತಾ ನನ್ನ ಕಣ್ಣುಗಳು ಆಯಾಸಗೊಂಡಿವೆ.
124 ನಿನ್ನ ಸೇವಕನಾದ ನನಗೆ ನಿನ್ನ ಶಾಶ್ವತ ಪ್ರೀತಿಯನ್ನು ತೋರಿಸು.
ನಿನ್ನ ಕಟ್ಟಳೆಗಳನ್ನು ನನಗೆ ಉಪದೇಶಿಸು.
125 ನಾನು ನಿನ್ನ ಸೇವಕ,
ನಿನ್ನ ಒಡಂಬಡಿಕೆಯನ್ನು ಗ್ರಹಿಸಿಕೊಳ್ಳಲು ನನಗೆ ಬೇಕಾದ ವಿವೇಕವನ್ನು ದಯಪಾಲಿಸು.
126 ಯೆಹೋವನೇ, ನಿನ್ನ ಕಾರ್ಯಾಚರಣೆಗೆ ಇದು ತಕ್ಕ ಸಮಯವಾಗಿದೆ.
ಜನರು ನಿನ್ನ ಧರ್ಮಶಾಸ್ತ್ರವನ್ನು ಮೀರಿದ್ದಾರೆ.
127 ನಾನು ನಿನ್ನ ಆಜ್ಞೆಗಳನ್ನು ಬಂಗಾರಕ್ಕಿಂತಲೂ
ಅಪರಂಜಿಗಿಂತಲೂ ಹೆಚ್ಚಾಗಿ ಪ್ರೀತಿಸುವೆನು.
128 ನಾನು ನಿನ್ನ ಆಜ್ಞೆಗಳಿಗೆಲ್ಲಾ ಎಚ್ಚರಿಕೆಯಿಂದ ವಿಧೇಯನಾಗುವೆನು.
ನಾನು ಸುಳ್ಳು ಉಪದೇಶಗಳನ್ನು ದ್ವೇಷಿಸುವೆನು.
129 ನಿನ್ನ ಕಟ್ಟಳೆಗಳು ಆಶ್ಚರ್ಯಕರವಾಗಿವೆ.
ಪೂರ್ಣಹೃದಯದಿಂದ ಅವುಗಳನ್ನು ಅನುಸರಿಸುವೆನು.
130 ಜನರು ನಿನ್ನ ವಾಕ್ಯವನ್ನು ಅರ್ಥಮಾಡಿಕೊಂಡಾಗ ಅದು ಅವರಿಗೆ ನೀತಿಮಾರ್ಗವನ್ನು ತೋರಿಸುವ ಬೆಳಕಿನಂತಿರುವುದು.
ನಿನ್ನ ವಾಕ್ಯವು ಸಾಮಾನ್ಯರನ್ನು ಜ್ಞಾನಿಗಳನ್ನಾಗಿ ಮಾಡುತ್ತದೆ.
131 ನಿನ್ನ ಆಜ್ಞೆಗಳನ್ನು ಕಲಿತುಕೊಳ್ಳಲು ನನಗೆ ನಿಜವಾಗಿಯೂ ಇಷ್ಟ.
ನಾನು ಏದುಸಿರುಬಿಡುತ್ತಾ ಲವಲವಿಕೆಯಿಂದ ನಿನ್ನ ಆಜ್ಞೆಗಳಿಗಾಗಿ ಕಾಯುತ್ತಿದ್ದೇನೆ.
132 ನನ್ನನ್ನು ನೋಡಿ ಕರುಣಿಸು.
ನಿನ್ನ ಹೆಸರನ್ನು ಪ್ರೀತಿಸುವವರಿಗೆ ಯೋಗ್ಯವಾದುವುಗಳನ್ನು ಮಾಡು.
133 ನಿನ್ನ ವಾಗ್ದಾನಕ್ಕನುಸಾರವಾಗಿ ನನಗೆ ಮಾರ್ಗದರ್ಶನ ನೀಡು.
ಯಾವ ಕೇಡೂ ನನಗೆ ಸಂಭವಿಸದಿರಲಿ.
134 ಕೆಡುಕರಿಂದ ನನ್ನನ್ನು ರಕ್ಷಿಸು.
ಆಗ ನಾನು ನಿನ್ನ ನಿಯಮಗಳಿಗೆ ವಿಧೇಯನಾಗುವೆನು.
135 ನಿನ್ನ ಸೇವಕನ ಮೇಲೆ ಕರುಣೆಯಿರಲಿ,
ನಿನ್ನ ಕಟ್ಟಳೆಗಳನ್ನು ನನಗೆ ಉಪದೇಶಿಸು.
136 ಜನರು ನಿನ್ನ ಉಪದೇಶಗಳಿಗೆ ವಿಧೇಯರಾಗದಿರುವುದರಿಂದ
ನನ್ನ ಕಣ್ಣೀರು ಗೋಳಾಟದಿಂದ ನದಿಯಾಗಿ ಹರಿಯುತ್ತಿದೆ.
137 ಯೆಹೋವನೇ, ನೀನು ನೀತಿಸ್ವರೂಪನಾಗಿರುವೆ.
ನಿನ್ನ ತೀರ್ಪುಗಳು ನ್ಯಾಯವಾಗಿವೆ.
138 ನೀನು ನೀತಿಯ ಕಟ್ಟಳೆಗಳನ್ನೇ ಕೊಟ್ಟಿರುವೆ.
ಅವು ನಂಬಿಕೆಗೆ ಯೋಗ್ಯವಾಗಿವೆ.
139 ನನ್ನ ಅಭಿಮಾನವು ನನ್ನನ್ನು ದಹಿಸುತ್ತಿದೆ.
ಯಾಕೆಂದರೆ ನನ್ನ ವೈರಿಗಳು ನಿನ್ನ ಆಜ್ಞೆಗಳನ್ನು ಮರೆತುಬಿಟ್ಟಿದ್ದರಿಂದ ನನಗೆ ಬೇಸರವಾಗಿದೆ.
140 ನಿನ್ನ ವಾಗ್ದಾನಗಳು ಪರೀಕ್ಷಿಸಲ್ಪಟ್ಟಿವೆ.
ಅವು ನನಗೆ ಪ್ರಿಯವಾಗಿವೆ.
141 ನಾನು ಅಲ್ಪನೂ ತಿರಸ್ಕೃತನೂ ಆಗಿದ್ದೇನೆ.
ಆದರೂ ನಾನು ನಿನ್ನ ನಿಯಮಗಳನ್ನು ಮರೆಯುವುದಿಲ್ಲ.
142 ನಿನ್ನ ನೀತಿಯು ಶಾಶ್ವತವಾದದ್ದು.
ನಿನ್ನ ಉಪದೇಶಗಳು ನಂಬಿಕೆಗೆ ಯೋಗ್ಯವಾಗಿವೆ.
143 ಕಷ್ಟಸಂಕಟಗಳು ನನಗೆ ಬಂದಿದ್ದವು.
ನಿನ್ನ ಆಜ್ಞೆಗಳು ನನಗೆ ಆನಂದಕರವಾಗಿವೆ.
144 ನಿನ್ನ ಕಟ್ಟಳೆಗಳು ಸದಾಕಾಲ ನೀತಿಯ ಕಟ್ಟಳೆಗಳಾಗಿವೆ.
ಅವುಗಳನ್ನು ಅರ್ಥಮಾಡಿಕೊಳ್ಳಲು ನನಗೆ ಸಹಾಯಮಾಡು, ಆಗ ಬದುಕಿಕೊಳ್ಳುವೆನು.
Kannada Holy Bible: Easy-to-Read Version. All rights reserved. © 1997 Bible League International