Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
2 ರಾಜರುಗಳು 9

ಯೇಹುವನ್ನು ಅಭಿಷೇಕಿಸುವಂತೆ ಒಬ್ಬ ಯುವಪ್ರವಾದಿಗೆ ಎಲೀಷನು ತಿಳಿಸಿದನು

ಪ್ರವಾದಿಯಾದ ಎಲೀಷನು ಪ್ರವಾದಿಗಳ ಗುಂಪಿನಿಂದ ಒಬ್ಬನನ್ನು ಕರೆದು ಅವನಿಗೆ, “ಎಣ್ಣೆಯಿರುವ ಈ ಸಣ್ಣ ಸೀಸೆಯನ್ನು ನಿನ್ನ ಕೈಗಳಲ್ಲಿ ತೆಗೆದುಕೊಂಡು ರಾಮೋತ್‌ಗಿಲ್ಯಾದಿಗೆ ಹೋಗು. ನೀನು ಅಲ್ಲಿಗೆ ಹೋದಾಗ ಯೆಹೋಷಾಫಾಟನ ಮಗನಾದ ಯೇಹುವನ್ನು ಕಂಡುಹಿಡಿ. ಯೆಹೋಷಾಫಾಟನು ನಿಂಷಿಯ ಮಗ. ಅಲ್ಲಿಗೆ ಹೋಗಿ ಅವನನ್ನು ಅವನ ಸೋದರರ ಮಧ್ಯದಿಂದ ಮೇಲಕ್ಕೆಬ್ಬಿಸಿ ಒಂದು ಒಳಕೋಣೆಗೆ ಕರೆದುಕೊಂಡು ಹೋಗು. ಯೇಹುವಿನ ತಲೆಯ ಮೇಲೆ ಈ ಸಣ್ಣ ಸೀಸೆಯಲ್ಲಿರುವ ಎಣ್ಣೆಯನ್ನು ಸುರಿದುಬಿಡು. ನಂತರ ಅವನಿಗೆ, ‘ಯೆಹೋವನು ಹೀಗೆನ್ನುತ್ತಾನೆ: ನಾನು ನಿನ್ನನ್ನು ಇಸ್ರೇಲಿನ ನೂತನ ರಾಜನನ್ನಾಗಿ ಅಭಿಷೇಕಿಸಿದ್ದೇನೆ!’ ಎಂದು ಹೇಳು. ಆ ಬಳಿಕ ಬಾಗಿಲನ್ನು ತೆಗೆದು ಓಡಿಬಿಡು. ಅಲ್ಲಿ ಇರಬೇಡ!” ಎಂದು ಹೇಳಿದನು.

ತರುಣ ಪ್ರವಾದಿಯು ರಾಮೋತ್‌ಗಿಲ್ಯಾದಿಗೆ ಹೋದನು. ಆ ತರುಣನು ಅಲ್ಲಿಗೆ ಬಂದಾಗ ಸೇನಾಧಿಪತಿಗಳು ಕುಳಿತಿರುವುದನ್ನು ನೋಡಿ, “ಸೇನಾಧಿಪತಿಯೇ, ನಿನಗೆ ಒಂದು ಸಂದೇಶವಿದೆ” ಎಂದು ಹೇಳಿದನು.

ಯೇಹುವು, “ನಾವೆಲ್ಲರೂ ಇಲ್ಲಿದ್ದೇವೆ. ನಮ್ಮಲ್ಲಿ ಸಂದೇಶವಿರುವುದು ಯಾರಿಗೆ?” ಎಂದು ಕೇಳಿದನು.

ಆ ತರುಣನು, “ಸಂದೇಶವು ಸೇನಾಧಿಪತಿಯಾದ ನಿನಗೆ” ಎಂದು ಹೇಳಿದನು.

ಯೇಹು ಮೇಲೆದ್ದು ಮನೆಯೊಳಕ್ಕೆ ಹೋದನು. ಆಗ ಆ ತರುಣ ಪ್ರವಾದಿಯು ಯೇಹುವಿನ ತಲೆಯ ಮೇಲೆ ಎಣ್ಣೆಯನ್ನು ಸುರಿದು ಯೇಹುವಿಗೆ, “ಇಸ್ರೇಲಿನ ದೇವರಾದ ಯೆಹೋವನು ಹೀಗೆನ್ನುವನು: ‘ಯೆಹೋವನ ಜನರಾದ ಇಸ್ರೇಲರಿಗೆ ನೂತನ ರಾಜನನ್ನಾಗಿ ನಾನು ನಿನ್ನನ್ನು ಅಭಿಷೇಕಿಸುತ್ತಿದ್ದೇನೆ. ನೀನು ನಿನ್ನ ರಾಜನಾದ ಅಹಾಬನ ಕುಟುಂಬವನ್ನು ನಾಶಗೊಳಿಸಲೇಬೇಕು. ನನ್ನ ಸೇವಕರಾದ ಪ್ರವಾದಿಗಳ ಸಾವಿಗೆ ಮತ್ತು ಯೆಹೋವನ ಸೇವಕರನ್ನು ಕೊಲ್ಲಿಸಿದುದಕ್ಕೆ ಈಜೆಬೆಲಳನ್ನು ನಾನು ಈ ರೀತಿ ಶಿಕ್ಷಿಸುತ್ತೇನೆ. ಅಹಾಬನ ಕುಟುಂಬವೆಲ್ಲ ಸಾಯುತ್ತದೆ. ಅಹಾಬನ ಕುಟುಂಬದಲ್ಲಿ ಒಬ್ಬ ಗಂಡಸಾದರೂ ಜೀವಿಸಿರಲು ನಾನು ಬಿಡುವುದಿಲ್ಲ. ಆ ಗಂಡಸು ಇಸ್ರೇಲಿನಲ್ಲಿ ಸ್ವತಂತ್ರವಾಗಿರಲಿ ಇಲ್ಲವೆ ಗುಲಾಮನಾಗಿರಲಿ ಅದು ನನಗೆ ಮುಖ್ಯವಲ್ಲ. ನೆಬಾಟನ ಮಗನಾದ ಯಾರೊಬ್ಬಾಮನ ಕುಟುಂಬದಂತೆ ಮತ್ತು ಅಹೀಯನ ಮಗನಾದ ಬಾಷನ ಕುಟುಂಬದಂತೆ ಅಹಾಬನ ಕುಟುಂಬವನ್ನು ನಾಶಮಾಡುತ್ತೇನೆ. 10 ಇಜ್ರೇಲಿನ ಪ್ರದೇಶದಲ್ಲಿ ಈಜೆಬೆಲಳನ್ನು ನಾಯಿಗಳು ಕಿತ್ತುತಿನ್ನುತ್ತವೆ. ಈಜೆಬೆಲಳನ್ನು ಸಮಾಧಿಮಾಡುವುದಿಲ್ಲ’” ಎಂದು ಹೇಳಿದನು.

ಬಳಿಕ ಯುವ ಪ್ರವಾದಿಯು ಬಾಗಿಲನ್ನು ತೆರೆದು ಓಡಿಹೋದನು.

ಯೇಹುವು ರಾಜನೆಂದು ಸೇವಕರು ಘೋಷಿಸುವರು

11 ಯೇಹುವು ತನ್ನ ರಾಜನ ಅಧಿಕಾರಿಗಳ ಬಳಿಗೆ ಹಿಂದಿರುಗಿದನು. ಒಬ್ಬ ಅಧಿಕಾರಿಯು ಯೇಹುವಿಗೆ, “ಶುಭವಾರ್ತೆಯೇ? ಆ ಹುಚ್ಚನು ನಿನ್ನ ಬಳಿಗೆ ಬಂದದ್ದೇಕೆ?” ಎಂದು ಕೇಳಿದರು.

ಯೇಹುವು ಸೇವಕರಿಗೆ, “ನೀವು ಆ ಮನುಷ್ಯನನ್ನು ಬಲ್ಲವರಾಗಿದ್ದೀರಿ; ಅವನ ಹುಚ್ಚಾಟದ ಮಾತುಗಳೂ ನಿಮಗೆ ತಿಳಿದಿವೆ” ಎಂದು ಉತ್ತರಿಸಿದನು.

12 ಆ ಅಧಿಕಾರಿಗಳು, “ಇಲ್ಲ! ನಮಗೆ ನಿಜವನ್ನು ಹೇಳು. ಅವನು ಹೇಳಿದುದೇನು?” ಎಂದು ಕೇಳಿದರು. ಆ ತರುಣ ಪ್ರವಾದಿಯು ತಿಳಿಸಿದ್ದ ಸಂಗತಿಗಳನ್ನು ಯೇಹುವು ಆ ಅಧಿಕಾರಿಗಳಿಗೆ ಹೇಳಿದನು. ಯೇಹುವು ಅವರಿಗೆ, “ಅವನು ಹೇಳಿದ್ದೇನೆಂದರೆ, ಯೆಹೋವನು ಹೀಗೆನ್ನುವನು: ಇಸ್ರೇಲಿನ ನೂತನ ರಾಜನನ್ನಾಗಿ ನಿನ್ನನ್ನು ನಾನು ಅಭಿಷೇಕಿಸಿದ್ದೇನೆ” ಎಂದು ಹೇಳಿದನು.

13 ಆಗ ಪ್ರತಿಯೊಬ್ಬ ಅಧಿಕಾರಿಯೂ ತಮ್ಮತಮ್ಮ ನಿಲುವಂಗಿಗಳನ್ನು ತೆಗೆದು, ಅವುಗಳನ್ನು ಮೆಟ್ಟಿಲುಗಳ ಮೇಲೆ, ಯೇಹುವಿನ ಮುಂದೆ ಇಟ್ಟರು. ಅನಂತರ ಅವರು ತುತ್ತೂರಿಯನ್ನೂದಿ, “ಯೇಹು ರಾಜನು!” ಎಂದು ಘೋಷಿಸಿದರು.

ಯೇಹು ಇಜ್ರೇಲಿಗೆ ಹೋಗುವನು

14 ಯೆಹೋಷಾಫಾಟನ ಮಗನೂ ನಿಂಷಿಯ ಮೊಮ್ಮಗನೂ ಆದ ಯೇಹುವು ಯೋರಾಮನ ವಿರುದ್ಧ ಒಳಸಂಚುಮಾಡಿದನು.

ಆ ಸಮಯದಲ್ಲಿ ರಾಮೋತ್‌ಗಿಲ್ಯಾದನ್ನು ಅರಾಮ್ಯರ ರಾಜನಾದ ಹಜಾಯೇಲನಿಂದ ರಕ್ಷಿಸಲು, ಯೋರಾಮನೂ ಇಸ್ರೇಲರೂ ಪ್ರಯತ್ನಿಸಿದ್ದರು. 15 ಆದರೆ ರಾಜನಾದ ಯೋರಾಮನಿಗೆ ಅರಾಮ್ಯರು ಗಾಯಗೊಳಿಸಿದ್ದರಿಂದ ಅವನು ವಾಸಿಮಾಡಿಕೊಳ್ಳಲು ಇಜ್ರೇಲಿಗೆ ಹಿಂದಿರುಗಿ ಬಂದಿದ್ದನು. (ಅರಾಮ್ಯರ ರಾಜನಾದ ಹಜಾಯೇಲನ ವಿರುದ್ಧ ಯೋರಾಮನು ಹೋರಾಟ ಮಾಡಿದಾಗ ಅರಾಮ್ಯರು ಅವನನ್ನು ಗಾಯಗೊಳಿಸಿದ್ದರು.)

ಯೇಹು ಅಧಿಕಾರಿಗಳಿಗೆ, “ನಾನು ನೂತನ ರಾಜನೆಂದು ನೀವು ಒಪ್ಪಿಕೊಂಡರೆ, ಈ ಸುದ್ದಿಯನ್ನು ಇಜ್ರೇಲಿನಲ್ಲಿ ಹೇಳಲು ಯಾರೂ ನಗರದಿಂದ ತಪ್ಪಿಸಿಕೊಂಡು ಹೋಗಲು ಅವಕಾಶ ಕೊಡದಿರಿ” ಎಂದು ಹೇಳಿದನು.

16 ಯೋರಾಮನು ಇಜ್ರೇಲಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದನು. ಯೇಹು ರಥದಲ್ಲಿ ಇಜ್ರೇಲಿಗೆ ಹೋದನು. ಯೆಹೂದದ ಅರಸನಾದ ಅಹಜ್ಯನೂ ಯೋರಾಮನನ್ನು ನೋಡಲು ಇಜ್ರೇಲಿಗೆ ಬಂದಿದ್ದನು.

17 ಇಜ್ರೇಲಿನ ಬುರುಜಿನಲ್ಲಿ ಒಬ್ಬ ಕಾವಲುಗಾರನು ನಿಂತಿದ್ದನು. ಅವನು ಯೇಹುವಿನ ದೊಡ್ಡಗುಂಪು ಬರುತ್ತಿರುವುದನ್ನು ನೋಡಿದನು. ಅವನು, “ನಾನು ಜನರ ದೊಡ್ಡ ಗುಂಪನ್ನು ನೋಡುತ್ತಿರುವೆನು” ಎಂದು ಹೇಳಿದನು.

ಯೋರಾಮನು, “ಅವರನ್ನು ಸಂಧಿಸಲು ಯಾರನ್ನಾದರೂ ಕುದುರೆಯ ಮೇಲೆ ಕಳುಹಿಸಿ, ‘ಶುಭವಾರ್ತೆಯುಂಟೋ?’ ಎಂದು ಅವನು ಅವರನ್ನು ಕೇಳಲಿ” ಎಂದು ಹೇಳಿದನು.

18 ಯೇಹುವನ್ನು ಸಂಧಿಸಲು ಒಬ್ಬನು ಕುದುರೆಯ ಮೇಲೆ ಹೋಗಿ, “ರಾಜನಾದ ಯೋರಾಮನು ‘ಶುಭವಾರ್ತೆಯುಂಟೋ?’ ಎಂದು ಕೇಳುತ್ತಾನೆ” ಅಂದನು.

ಯೇಹುವು, “ನಮ್ಮ ಶುಭವಾರ್ತೆಯಿಂದ ನೀನು ಮಾಡುವುದೇನಿದೆ! ಬಾ, ನನ್ನನ್ನು ಹಿಂಬಾಲಿಸು” ಎಂದು ಹೇಳಿದನು.

ಕಾವಲುಗಾರನು ಯೋರಾಮನಿಗೆ, “ಆ ಗುಂಪಿನ ಬಳಿಗೆ ಹೋದ ಸಂದೇಶಕನು, ಈವರೆವಿಗೂ ಹಿಂದಿರುಗಿ ಬರಲೇ ಇಲ್ಲ” ಎಂದು ಹೇಳಿದನು.

19 ಆಗ ಯೋರಾಮನು ಎರಡನೆಯವನನ್ನು ಕುದುರೆಯ ಮೇಲೆ ಕಳುಹಿಸಿದನು. ಅವನು ಯೇಹುವಿನ ಗುಂಪಿನ ಬಳಿಗೆ ಬಂದು, “ರಾಜನಾದ ಯೋರಾಮನು, ‘ಶುಭವಾರ್ತೆಯುಂಟೋ?’ ಎಂದು ಕೇಳುತ್ತಿರುವನು” ಎಂದು ಹೇಳಿದನು.

ಯೇಹುವು, “ನಮ್ಮ ಶುಭವಾರ್ತೆಯಿಂದ ನೀನು ಮಾಡುವುದೇನಿದೆ! ಬಾ, ನನ್ನನ್ನು ಹಿಂಬಾಲಿಸು” ಎಂದು ಹೇಳಿದನು.

20 ಕಾವಲುಗಾರನು ಯೋರಾಮನಿಗೆ, “ಆ ಗುಂಪಿನ ಬಳಿಗೆ ಹೋದ ಎರಡನೆಯವನೂ ಈವರೆವಿಗೂ ಹಿಂದುರುಗಿ ಬರಲೇ ಇಲ್ಲ. ರಥವನ್ನು ಓಡಿಸುತ್ತಿರುವವನು ಹುಚ್ಚನಂತೆ ರಥವನ್ನು ಓಡಿಸುತ್ತಿರುವುದನ್ನು ನೋಡಿದರೆ ಅವನು ನಿಂಷಿಯ ಮೊಮ್ಮಗನಾದ ಯೇಹುವಿರಬೇಕು!” ಎಂದು ಹೇಳಿದನು.

21 ಯೋರಾಮನು, “ನನ್ನ ರಥವನ್ನು ಸಿದ್ಧಗೊಳಿಸು!” ಎಂದು ಹೇಳಿದನು.

ಯೋರಾಮನ ಸೇವಕನು ರಥವನ್ನು ಸಿದ್ಧಗೊಳಿಸಿದನು. ಇಸ್ರೇಲಿನ ರಾಜನಾದ ಯೋರಾಮನು ಮತ್ತು ಯೆಹೂದದ ರಾಜನಾದ ಅಹಜ್ಯನು ಯೇಹುವನ್ನು ಭೇಟಿಮಾಡಲು ತಮ್ಮ ರಥಗಳಲ್ಲಿ ಹೋದರು. ಅವರು ಇಜ್ರೇಲಿನವನಾದ ನಾಬೋತನ ಹೊಲದಲ್ಲಿ ಯೇಹುವನ್ನು ಸಂಧಿಸಿದರು.

22 ಯೋರಾಮನು ಯೇಹುವನ್ನು, “ಶುಭವಾರ್ತೆಯುಂಟೋ?” ಎಂದು ಕೇಳಿದನು.

ಯೇಹುವು, “ನಿನ್ನ ತಾಯಿಯಾದ ಈಜೆಬೆಲಳು ಅನೇಕ ಅನೈತಿಕ ಮತ್ತು ಮಾಂತ್ರಿಕ ಕಾರ್ಯಗಳನ್ನು ಮಾಡುತ್ತಿರುವ ತನಕ ಶುಭವಿರುವುದಿಲ್ಲ” ಎಂದು ಉತ್ತರಿಸಿದನು.

23 ಯೋರಾಮನು ಓಡಿಹೋಗಲು ತನ್ನ ಕುದುರೆಗಳನ್ನು ತಿರುಗಿಸಿಕೊಂಡನು. ಯೋರಾಮನು ಅಹಜ್ಯನಿಗೆ, “ಅಹಜ್ಯನೇ, ಇದು ಒಂದು ತಂತ್ರ!” ಎಂದು ಹೇಳಿದನು.

24 ಆದರೆ ಯೇಹು ತನ್ನ ಬಿಲ್ಲನ್ನು ಸೆಳೆದು, ಶಕ್ತಿಯನ್ನೆಲ್ಲ ಒಗ್ಗೂಡಿಸಿ ಯೋರಾಮನ ಬೆನ್ನಿಗೆ ಬಾಣದಿಂದ ಹೊಡೆದನು. ಬಾಣವು ಯೋರಾಮನ ಹೃದಯವನ್ನು ಛೇದಿಸಿತು. ಯೋರಾಮನು ತನ್ನ ರಥದಲ್ಲಿಯೇ ಸತ್ತುಬಿದ್ದನು.

25 ಯೇಹು ತನ್ನ ರಥದ ಸಾರಥಿಯಾದ ಬಿದ್ಕರನಿಗೆ, “ಯೋರಾಮನ ದೇಹವನ್ನು ಎತ್ತಿ ಇಜ್ರೇಲಿಯನಾದ ನಾಬೋತನ ಹೊಲದಲ್ಲಿ ಎಸೆದುಬಿಡು. ನಾನು ಮತ್ತು ನೀನು ಯೋರಾಮನ ತಂದೆಯಾದ ಅಹಾಬನ ಸಂಗಡ ಹೋಗುತ್ತಿರುವಾಗ 26 ಯೆಹೋವನು, ‘ನೀನು ನಿನ್ನೆ ನಾಬೋತನ ಮತ್ತು ಅವನ ಮಕ್ಕಳ ರಕ್ತವನ್ನು ಯಾವ ಹೊಲದಲ್ಲಿ ಸುರಿಸಿದೆಯೋ ಅದೇ ಹೊಲದಲ್ಲಿ ನಿನಗೆ ಮುಯ್ಯಿ ತೀರಿಸುವೆನು’ ಎಂದು ಪ್ರವಾದಿಯಿಂದ ಹೇಳಿಸಿದ್ದು ನಿನಗೆ ನೆನಪಿರುವುದಲ್ಲವೇ? ಯೆಹೋವನ ಮಾತು ನೆರವೇರುವಂತೆ ಯೋರಾಮನ ದೇಹವನ್ನು ತೆಗೆದು ಅದೇ ಹೊಲದಲ್ಲಿ ಎಸೆದುಬಿಡು!” ಎಂದು ಹೇಳಿದನು.

27 ಯೆಹೂದದ ರಾಜನಾದ ಅಹಜ್ಯನು ಇದನ್ನು ಕಂಡು ತೋಟದ ಮನೆಯ ಮೂಲಕ ಓಡಿಹೋದನು. ಯೇಹು ಅವನನ್ನು ಹಿಂಬಾಲಿಸಿಕೊಂಡು ಹೋಗಿ, “ಅಹಜ್ಯನನ್ನೂ ಅವನ ರಥದಲ್ಲಿಯೇ ಹೊಡೆಯಿರಿ!” ಎಂದು ಹೇಳಿದನು.

ಯೇಹುವಿನ ಜನರು ಅಹಜ್ಯನನ್ನು ಇಬ್ಲೆಯಾಮಿನ ಬಳಿಯಿರುವ ಗೂರ್‌ನಲ್ಲಿ ಹೊಡೆದುಹಾಕಿದರು. ಅಹಜ್ಯನು ಮೆಗಿದ್ದೋವಿಗೆ ಓಡಿಹೋದರೂ ಅಲ್ಲಿ ಸತ್ತುಹೋದನು. 28 ಅಹಜ್ಯನ ಸೇವಕರು ಅವನ ದೇಹವನ್ನು ಜೆರುಸಲೇಮಿಗೆ ತಂದರು. ಅವನನ್ನು ದಾವೀದ ನಗರದಲ್ಲಿ ಅವನ ಪೂರ್ವಿಕರ ಬಳಿಯಲ್ಲಿ ಸಮಾಧಿ ಮಾಡಿದರು.

29 ಯೋರಾಮನು ಇಸ್ರೇಲಿನ ರಾಜನಾಗಿದ್ದ ಹನ್ನೊಂದನೆಯ ವರ್ಷದಲ್ಲಿ ಅಹಜ್ಯನು ಯೆಹೂದದ ರಾಜನಾದನು.

ಈಜೆಬೆಲಳ ಭೀಕರ ಸಾವು

30 ಯೇಹುವು ಇಜ್ರೇಲಿಗೆ ಹೋದನು. ಈಜೆಬೆಲಳಿಗೆ ಈ ಸುದ್ದಿಯು ತಿಳಿಯಿತು. ಅವಳು ತಲೆಕೂದಲನ್ನು ಸುಂದರವಾಗಿ ಕಟ್ಟಿಕೊಂಡು, ಅಲಂಕರಿಸಿಕೊಂಡಳು. ನಂತರ ಅವಳು ಹೊರಗೆ ನೋಡುತ್ತಾ ಕಿಟಕಿಯ ಹತ್ತಿರ ನಿಂತುಕೊಂಡಳು. 31 ಯೇಹು ನಗರದೊಳಕ್ಕೆ ಪ್ರವೇಶಿಸಿದನು. ಈಜೆಬೆಲಳು, “ಜಿಮ್ರಿ, ಕ್ಷೇಮವೇ! ಅವನಂತೆಯೇ ನೀನೂ ನಿನ್ನ ಒಡೆಯನನ್ನು ಕೊಂದುಹಾಕಿದೆ!” ಎಂದಳು.

32 ಯೇಹು ಕಿಟಕಿಯ ಕಡೆ ಮೇಲೆ ನೋಡಿದನು. ಅವನು, “ನನ್ನ ಪಕ್ಷದಲ್ಲಿರುವವರು ಯಾರು? ಯಾರಿದ್ದೀರಿ?” ಎಂದನು.

ಆ ಕಿಟಕಿಯಿಂದ ಇಬ್ಬರು ಮೂವರು ಕಂಚುಕಿಗಳು ಯೇಹುವಿನತ್ತ ನೋಡಿದರು. 33 ಯೇಹುವು “ಈಜೆಬೆಲಳನ್ನು ಹೊರಕ್ಕೆ ಎಸೆಯಿರಿ!” ಎಂದು ಅವರಿಗೆ ಹೇಳಿದನು.

ಆಗ ಕಂಚುಕಿಗಳು ಈಜೆಬೆಲಳನ್ನು ಕೆಳಕ್ಕೆ ಎಸೆದರು. ಈಜೆಬೆಲಳ ರಕ್ತವು ಗೋಡೆಗಳ ಮೇಲೆ ಮತ್ತು ಕುದುರೆಗಳ ಮೇಲೆ ಚಿಮ್ಮಿತು. ಕುದುರೆಗಳು ಈಜೆಬೆಲಳ ದೇಹದ ಮೇಲೆ ತುಳಿದಾಡಿದವು. 34 ಯೇಹುವು ಮನೆಯೊಳಕ್ಕೆ ಹೋಗಿ ಅನ್ನಪಾನಗಳನ್ನು ತೆಗೆದುಕೊಂಡನು. ನಂತರ ಅವನು, “ಈಗ ಶಾಪಗ್ರಸ್ತಳಾದ ಆ ಸ್ತ್ರೀಯನ್ನು ನೋಡಿ. ಅವಳು ರಾಜನ ಮಗಳಾದ್ದರಿಂದ ಸಮಾಧಿ ಮಾಡಿ” ಎಂದು ಹೇಳಿದನು.

35 ಈಜೆಬೆಲಳನ್ನು ಸಮಾಧಿಮಾಡಲು ಜನರು ಹೋದರು. ಆದರೆ ಅವರಿಗೆ ಅವಳ ದೇಹವು ಸಿಗಲಿಲ್ಲ. ಅವರಿಗೆ ಅವಳ ತಲೆಬುರುಡೆ, ಕೈಕಾಲುಗಳು ಮಾತ್ರ ಸಿಕ್ಕಿದವು. 36 ಜನರು ಹಿಂದಿರುಗಿ ಬಂದು ಯೇಹುವಿಗೆ ಅದನ್ನು ಹೇಳಿದರು. ಯೇಹುವು, “ಯೆಹೋವನು ತನ್ನ ಸೇವಕನೂ ತಿಷ್ಬೀಯನೂ ಆದ ಎಲೀಯನಿಗೆ ಈ ರೀತಿ ಸಂದೇಶ ನೀಡಲು ಹೇಳಿದ್ದನು. ಎಲೀಯನು ಹೇಳಿದ್ದೇನೆಂದರೆ: ಇಜ್ರೇಲ್ ಪ್ರದೇಶದಲ್ಲಿ ಈಜೆಬೆಲಳ ದೇಹವನ್ನು ನಾಯಿಗಳು ತಿನ್ನುತ್ತವೆ. 37 ಇಜ್ರೇಲ್ ಪ್ರದೇಶದ ಹೊಲದಲ್ಲಿ ಈಜೆಬೆಲಳ ದೇಹವು ಸಗಣಿಯಂತಿರುತ್ತದೆ. ಈಜೆಬೆಲಳ ದೇಹವನ್ನು ಜನರು ಗುರುತಿಸಲಾಗುವುದಿಲ್ಲ!” ಎಂದು ಹೇಳಿದ್ದನು.

1 ತಿಮೊಥೆಯನಿಗೆ 6

ಗುಲಾಮರಿಗೆ ವಿಶೇಷವಾದ ಉಪದೇಶ

ಗುಲಾಮರು ತಮ್ಮ ಯಜಮಾನರಿಗೆ ಸಂಪೂರ್ಣ ಗೌರವ ಕೊಡಬೇಕು. ಆಗ ದೇವರ ಹೆಸರಾಗಲಿ ನಮ್ಮ ಉಪದೇಶವಾಗಲಿ ಟೀಕೆಗೆ ಗುರಿಯಾಗುವುದಿಲ್ಲ. ಕೆಲವರಿಗೆ ವಿಶ್ವಾಸಿಗಳಾದ ಯಜಮಾನರಿದ್ದಾರೆ. ಆದ್ದರಿಂದ ಆ ಗುಲಾಮರು ಮತ್ತು ಯಜಮಾನರು ಸಹೋದರರಾಗಿದ್ದಾರೆ. ಆದರೆ ಅವರು ತಮ್ಮ ಯಜಮಾನರಿಗೆ ಕಡಿಮೆ ಗೌರವ ಕೊಡದೆ ತಮ್ಮ ಯಜಮಾನರ ಸೇವೆಯನ್ನು ಇನ್ನೂ ಉತ್ತಮವಾಗಿ ಮಾಡಬೇಕು. ಏಕೆಂದರೆ ಅವರು ಒಳ್ಳೆಯ ಕೆಲಸಗಳಿಗಾಗಿ ತಮ್ಮನ್ನು ಪ್ರತಿಷ್ಠಿಸಿಕೊಳ್ಳುವ ವಿಶ್ವಾಸಿಗಳಾಗಿದ್ದಾರೆ ಮತ್ತು ಸ್ನೇಹಿತರಾಗಿದ್ದಾರೆ.[a]

ಈ ಕಾರ್ಯಗಳನ್ನು ಮಾಡುವಂತೆ ನೀನು ಜನರಿಗೆ ಉಪದೇಶಿಸಬೇಕು ಮತ್ತು ತಿಳಿಸಬೇಕು.

ದುರ್ಬೋಧನೆ ಮತ್ತು ನಿಜವಾದ ಶ್ರೀಮಂತಿಕೆ

ಕೆಲವು ಜನರು ಸುಳ್ಳುಸಂಗತಿಗಳನ್ನು ಬೋಧಿಸುತ್ತಾರೆ. ಆ ಜನರು ನಮ್ಮ ಪ್ರಭುವಾದ ಯೇಸುವಿನ ಸತ್ಯ ಬೋಧನೆಯನ್ನು ಒಪ್ಪುವುದಿಲ್ಲ. ದೇವರ ಸೇವೆಯನ್ನು ಸತ್ಯಕ್ಕನುಸಾರವಾಗಿ ಮಾಡಬೇಕೆಂಬ ಉಪದೇಶವನ್ನು ಅವರು ಸ್ವೀಕರಿಸಿಕೊಳ್ಳುವುದಿಲ್ಲ. ದುರ್ಬೋಧಕನು ಗರ್ವದಿಂದ ತುಂಬಿದವನಾಗಿರುತ್ತಾನೆ ಮತ್ತು ಅವನಿಗೆ ಏನೂ ಅರ್ಥವಾಗುವುದಿಲ್ಲ. ಅವನು ಕುತರ್ಕ ವಾಗ್ವಾದ ಮಾಡುವುದರಲ್ಲಿ ಆಸಕ್ತನಾಗಿದ್ದಾನೆ. ಇದರಿಂದ ಹೊಟ್ಟೆಕಿಚ್ಚು, ಜಗಳ, ನಿಂದನೆ ಮತ್ತು ದುಸ್ಸಂಶಯಗಳು ಉಂಟಾಗುತ್ತವೆ. ಇದಲ್ಲದೆ ಕೆಡುಕರಲ್ಲಿ ವಾದವಿವಾದಗಳು ಹುಟ್ಟುತ್ತವೆ. ಆ ಜನರು ಸತ್ಯವನ್ನು ತೊರೆದವರಾಗಿದ್ದಾರೆ. ದೇವರ ಸೇವೆಯು ಐಶ್ವರ್ಯವನ್ನು ಗಳಿಸುವ ಮಾರ್ಗವೆಂಬುದು ಅವರ ಆಲೋಚನೆ.

ದೇವರ ಸೇವೆ ಮಾಡುವವನು ತನ್ನಲ್ಲಿರುವುದರಲ್ಲಿ ಸಂತುಷ್ಟನಾಗಿದ್ದರೆ, ಅವನು ದೊಡ್ಡ ಶ್ರೀಮಂತನೇ ಸರಿ. ನಾವು ಲೋಕಕ್ಕೆ ಬಂದಾಗ ಏನನ್ನೂ ತೆಗೆದುಕೊಂಡು ಬರಲಿಲ್ಲ. ನಾವು ಸಾಯುವಾಗ ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ. ಆದ್ದರಿಂದ ಊಟ ಬಟ್ಟೆಗಳಿದ್ದರೆ ಸಾಕು, ನಾವು ಸಂತುಷ್ಟರಾಗುತ್ತೇವೆ. ಶ್ರೀಮಂತರಾಗಬೇಕೆನ್ನುವವರು ತಮ್ಮನ್ನು ತಾವೇ ಶೋಧನೆಗೆ ಗುರಿಪಡಿಸಿಕೊಳ್ಳುವರು. ಅವರು ಉರ್ಲಿನಲ್ಲಿ ಸಿಕ್ಕಿಹಾಕಿಕೊಂಡವರಾಗಿದ್ದಾರೆ. ಅವರು ಹಾನಿಕರವಾದ ಅನೇಕ ಮೂರ್ಖ ಆಸೆಗಳಲ್ಲಿ ಸಿಕ್ಕಿಬೀಳುವರು. ಅವು ಜನರನ್ನು ಹಾಳುಮಾಡಿ, ನಾಶಗೊಳಿಸುತ್ತವೆ. 10 ಹಣದಾಸೆಯು ಎಲ್ಲಾ ವಿಧವಾದ ಕೆಟ್ಟತನಕ್ಕೆ ಮೂಲವಾಗುತ್ತದೆ. ಕೆಲವು ಜನರು ಹೆಚ್ಚುಹೆಚ್ಚು ಹಣವನ್ನು ಗಳಿಸಿಕೊಳ್ಳುವುದಕ್ಕಾಗಿ ಸತ್ಯೋಪದೇಶವನ್ನು ತೊರೆದುಬಿಟ್ಟಿದ್ದಾರೆ. ಆದರೆ ಅವರು ತಮ್ಮನ್ನು ತಾವೇ ಹೆಚ್ಚು ವೇದನೆಗೆ ಗುರಿಪಡಿಸಿಕೊಂಡಿದ್ದಾರೆ.

ನೀವು ನೆನಪಿನಲ್ಲಿಡಬೇಕಾದ ಕೆಲವು ಸಂಗತಿಗಳು

11 ಆದರೆ ನೀನು ದೇವರ ಮನುಷ್ಯ. ಆದ್ದರಿಂದ ಈ ಎಲ್ಲಾ ಸಂಗತಿಗಳಿಂದ ದೂರವಾಗಿರು. ದೇವರ ಸೇವೆಯನ್ನು ಮಾಡುತ್ತಾ ಉತ್ತಮಮಾರ್ಗದಲ್ಲಿ ಜೀವಿಸಲು ಪ್ರಯತ್ನಿಸು; ನಂಬಿಕೆ, ಪ್ರೀತಿ, ತಾಳ್ಮೆ, ಸಾತ್ವಿಕತೆಗಳನ್ನು ಹೊಂದಿದವನಾಗಿರು. 12 ನಂಬಿಕೆಯಲ್ಲಿ ದೃಢವಾಗಿರುವುದು ಓಟದ ಸ್ಪರ್ಧೆಗೆ ಹೋಲಿಕೆಯಾಗಿದೆ. ಓಟದ ಸ್ಪರ್ಧೆಯಲ್ಲಿ ಗೆಲ್ಲಲು ನಿನ್ನಿಂದ ಸಾಧ್ಯವಾದಷ್ಟು ಪ್ರಯತ್ನಿಸು. ನಿತ್ಯಜೀವವನ್ನು ಪಡೆದುಕೊಳ್ಳಲು ಪ್ರಯಾಸಪಡು. ಅದನ್ನು ಹೊಂದಿಕೊಳ್ಳುವುದಕ್ಕಾಗಿ ನೀನು ಕರೆಯಲ್ಪಟ್ಟಿರುವೆ. ಕ್ರಿಸ್ತನಂಬಿಕೆಯ ಕುರಿತಾದ ಸತ್ಯವನ್ನು ನೀನು ಅನೇಕ ಜನರ ಎದುರಿನಲ್ಲಿ ಒಪ್ಪಿಕೊಂಡೆಯಲ್ಲಾ. 13 ಪೊಂತ್ಯ ಪಿಲಾತನ ಮುಂದೆ ಸಾಕ್ಷಿ ನೀಡಿದ ಕ್ರಿಸ್ತ ಯೇಸುವಿನ ಸನ್ನಿಧಿಯಲ್ಲಿಯೂ ಸರ್ವಸೃಷ್ಟಿಗೆ ಜೀವದಾಯಕನಾದ ದೇವರ ಸನ್ನಿಧಿಯಲ್ಲಿಯೂ ನಾನು ನಿನಗೆ ಆಜ್ಞಾಪಿಸುವುದೇನೆಂದರೆ, 14 ನಮ್ಮ ಪ್ರಭುವಾದ ಯೇಸುಕ್ರಿಸ್ತನು ಮತ್ತೆ ಪ್ರತ್ಯಕ್ಷನಾಗುವ ಕಾಲದವರೆಗೆ ನೀನು ಆ ಕಾರ್ಯಗಳನ್ನು ತಪ್ಪಿಲ್ಲದೆ, ನಿಂದಾರಹಿತನಾಗಿ ಮಾಡುತ್ತಿರು. 15 ದೇವರು ತಕ್ಕ ಸಮಯದಲ್ಲಿ ಅದನ್ನು ನೆರವೇರಿಸುವನು. ಆತನು ಭಾಗ್ಯವಂತನಾದ ಏಕಾಧಿಪತಿಯೂ ರಾಜಾಧಿರಾಜನೂ ಪ್ರಭುಗಳಿಗೆ ಪ್ರಭುವೂ ಆಗಿದ್ದಾನೆ. 16 ಸಾವಿಲ್ಲದವನು ಆತನೊಬ್ಬನೇ. ಆತನು ಉಜ್ವಲ ಬೆಳಕಿನಲ್ಲಿ ವಾಸವಾಗಿರುವುದರಿಂದ ಆತನ ಹತ್ತಿರಕ್ಕೆ ಜನರು ಹೋಗಲು ಸಾಧ್ಯವಿಲ್ಲ. ಆತನನ್ನು ಇದುವರೆಗೆ ಯಾರು ನೋಡಿಲ್ಲ; ನೋಡಲು ಸಾಧ್ಯವೂ ಇಲ್ಲ. ಆತನಿಗೆ ಗೌರವವೂ ಅಧಿಪತ್ಯವೂ ಸದಾಕಾಲವಿರಲಿ. ಆಮೆನ್.

17 ಇಹಲೋಕದ ವಿಷಯಗಳಲ್ಲಿ ಶ್ರೀಮಂತರಾಗಿರುವ ಜನರಿಗೆ ಈ ಆಜ್ಞೆಗಳನ್ನು ತಿಳಿಸು. ಗರ್ವಪಡದಂತೆಯೂ ಹಣವನ್ನು ಅವಲಂಬಿಸಿಕೊಳ್ಳದೆ ದೇವರಲ್ಲೇ ನಿರೀಕ್ಷೆಯಿಡುವಂತೆಯೂ ಅವರಿಗೆ ತಿಳಿಸು. ಹಣವು ಭರವಸೆಗೆ ಯೋಗ್ಯವಲ್ಲ. ದೇವರಾದರೋ ನಮ್ಮ ಸಂತೋಷಕ್ಕಾಗಿ ಸಮಸ್ತವನ್ನು ನಮಗೆ ಧಾರಾಳವಾಗಿ ದಯಪಾಲಿಸುತ್ತಾನೆ. 18 ಒಳ್ಳೆಯ ಕಾರ್ಯಗಳನ್ನು ಮಾಡಬೇಕೆಂದು ಶ್ರೀಮಂತರಿಗೆ ತಿಳಿಸು. ಸತ್ಕಾರ್ಯಗಳನ್ನು ಮಾಡುವುದರಲ್ಲೇ ಶ್ರೀಮಂತರಾಗಿರಬೇಕೆಂದು ಅವರಿಗೆ ತಿಳಿಸು. ಪರೋಪಕಾರದಲ್ಲೂ ಹಂಚಿಕೊಳ್ಳುವುದರಲ್ಲೂ ಸಂತಸಪಡಲು ಅವರಿಗೆ ತಿಳಿಸು. 19 ಆಗ ಪರಲೋಕದಲ್ಲಿ ಒಂದು ನಿಧಿಯನ್ನು ಅವರು ಕೂಡಿಟ್ಟು ಕೊಂಡಂತಾಗುತ್ತದೆ. ಆ ನಿಧಿಯೇ ಅವರ ಮುಂದಿನ ಜೀವಿತಕ್ಕೆ ಭದ್ರವಾದ ಅಸ್ತಿವಾರವಾಗಿದೆ. ಹೀಗೆ ಅವರು ನಿಜವಾದ ಜೀವಿತವನ್ನು ಹೊಂದಿಕೊಳ್ಳುವರು.

20 ತಿಮೊಥೆಯನೇ, ನಿನ್ನ ವಶಕ್ಕೆ ಕೊಡಲಾಗಿರುವ ಸದ್ಬೋಧನೆಯನ್ನು ಸುರಕ್ಷಿತವಾಗಿ ಕಾಪಾಡು. ಪ್ರಾಪಂಚಿಕವಾದ ಮೂರ್ಖ ಸಂಗತಿಗಳನ್ನು ಹೇಳುವ ಜನರಿಂದಲೂ ಸತ್ಯದ ವಿರುದ್ಧವಾಗಿ ವಾದ ಮಾಡುವ ಜನರಿಂದಲೂ ದೂರವಾಗಿರು. ಅವರು ಅದನ್ನು ಜ್ಞಾನವೆಂದು ಕರೆದರೂ ಅದು ನಿಜವಾದ ಜ್ಞಾನವಲ್ಲ. 21 ಕೆಲವರು ತಮಗೆ ಜ್ಞಾನ ಇದೆಯೆಂದು ಹೇಳಿ ಕೊಂಡರೂ ಸತ್ಯೋಪದೇಶವನ್ನು ತೊರೆದುಬಿಟ್ಟವರಾಗಿದ್ದಾರೆ.

ದೇವರ ಕೃಪೆಯು ನಿಮ್ಮೆಲ್ಲರೊಂದಿಗಿರಲಿ.

ಹೋಶೇಯ 1

ಹೋಶೇಯನ ಮುಖಾಂತರ ದೇವರಾದ ಯೆಹೋವನ ಸಂದೇಶ

ಬೆಯೇರಿಯ ಮಗನಾದ ಹೋಶೇಯನಿಗೆ ಯೋಹೋವನಿಂದ ಬಂದ ಸಂದೇಶ: ಈ ಸಂದೇಶವು ಯೆಹೂದ ಪ್ರಾಂತ್ಯದ ಅರಸರಾದ ಉಜ್ಜೀಯ, ಯೋಥಾಮ, ಅಹಾಜ ಮತ್ತು ಹಿಜ್ಕೀಯ ಇವರ ಆಳ್ವಿಕೆಯ ಸಮಯದಲ್ಲಿ ಬಂದಿತು. ಇದು ಇಸ್ರೇಲಿನ ಅರಸನಾದ ಯೋವಾಷನ ಮಗನಾದ ಯಾರೊಬ್ಬಾಮನ ಆಳ್ವಿಕೆಯ ಕಾಲ.

ಹೋಶೇಯನಿಗೆ ಯೆಹೋವನಿಂದ ಬಂದ ಸಂದೇಶದಲ್ಲಿ ಇದು ಮೊದಲನೆಯದು. ಯೆಹೋವನು ಹೇಳಿದ್ದೇನೆಂದರೆ, “ನೀನು ಹೋಗಿ ಒಬ್ಬ ವೇಶ್ಯೆಯನ್ನು ಮದುವೆಯಾಗು. ಆ ವೇಶ್ಯೆಯಿಂದ[a] ಮಕ್ಕಳನ್ನು ಪಡೆದುಕೊ. ಯಾಕೆಂದರೆ ಈ ದೇಶದ ಜನರು ಸೂಳೆಯಂತೆ ವರ್ತಿಸಿರುತ್ತಾರೆ. ಅವರು ಯೆಹೋವನಿಗೆ ಅಪನಂಬಿಗಸ್ತಿಕೆಯುಳ್ಳವರಾಗಿರುತ್ತಾರೆ.”

ಇಜ್ರೇಲನ ಜನನ

ಹಾಗೆ ಹೋಶೇಯನು ದಿಬ್ಲಯೀಮನ ಮಗಳಾದ ಗೋಮೆರ್ ಎಂಬಾಕೆಯನ್ನು ಮದುವೆಯಾದನು. ಗೋಮೆರಳು ಗರ್ಭಿಣಿಯಾಗಿ ಹೋಶೇಯನಿಗೆ ಗಂಡುಮಗುವನ್ನು ಹೆತ್ತಳು. ಹೋಶೇಯನಿಗೆ ಯೆಹೋವನು ಹೇಳಿದ್ದೇನೆಂದರೆ, “ಅವನಿಗೆ ಇಜ್ರೇಲ್ ಎಂದು ಹೆಸರನ್ನಿಡು. ಯಾಕೆಂದರೆ, ಇನ್ನು ಸ್ವಲ್ಪ ಸಮಯದಲ್ಲಿ ನಾನು ಯೇಹುವಿನ ಸಂತತಿಯವರನ್ನು ಶಿಕ್ಷಿಸುವೆನು. ಅವನು ಇಜ್ರೇಲ್ ತಗ್ಗಿನಲ್ಲಿ ರಕ್ತವನ್ನು ಸುರಿಸಿರುತ್ತಾನಲ್ಲಾ? ಆ ಮೇಲೆ ನಾನು ಇಸ್ರೇಲ್ ರಾಜ್ಯಕ್ಕೆ ಅಂತ್ಯವನ್ನು ತರುವೆನು. ಆಗ ಇಜ್ರೇಲ್ ತಗ್ಗಿನಲ್ಲಿ ಇಸ್ರೇಲಿನ ಬಿಲ್ಲನ್ನು ತುಂಡು ಮಾಡುವೆನು.”

ಲೋರುಹಾಮಳ ಜನನ

ಗೋಮೆರಳು ತಿರುಗಿ ಗರ್ಭಿಣಿಯಾಗಿ ಹೆಣ್ಣುಮಗುವನ್ನು ಹೆತ್ತಳು. ಯೆಹೋವನು ಹೋಶೇಯನಿಗೆ, ಆಕೆಗೆ, “ಲೋರುಹಾಮ” ಎಂಬ ಹೆಸರನ್ನಿಡಲು ಹೇಳಿದನು. “ಯಾಕೆಂದರೆ, ನಾನು ಇನ್ನು ಮುಂದೆ ಇಸ್ರೇಲ್ ಜನಾಂಗವನ್ನು ಕ್ಷಮಿಸುವುದಿಲ್ಲ. ಆದರೆ ನಾನು ಯೆಹೂದ ದೇಶಕ್ಕೆ ಕರುಣೆಯನ್ನು ತೋರಿಸುವೆನು. ನಾನು ಅವರನ್ನು ರಕ್ಷಿಸುವೆನು. ಅವರನ್ನು ರಕ್ಷಿಸಲು ನಾನು ಬಿಲ್ಲುಬಾಣಗಳನ್ನು ಉಪಯೋಗಿಸುವದಿಲ್ಲ. ಅಥವಾ ಯುದ್ಧಾಶ್ವಗಳನ್ನಾಗಲಿ ಸೈನ್ಯವನ್ನಾಗಲಿ ಉಪಯೋಗಿಸುವದಿಲ್ಲ. ನನ್ನ ಸ್ವಂತ ಸಾಮರ್ಥ್ಯದಿಂದಲೇ ನಾನು ಅವರನ್ನು ರಕ್ಷಿಸುವೆನು.”

ಲೋಅಮ್ಮಿಯ ಜನನ

ಗೋಮೆರಳು ಲೋರುಹಾಮಳಿಗೆ ಮೊಲೆಯುಣಿಸುವದನ್ನು ನಿಲ್ಲಿಸಿದ ಬಳಿಕ ಆಕೆಯು ತಿರುಗಿ ಗರ್ಭಿಣಿಯಾಗಿ ಗಂಡುಮಗುವನ್ನು ಹೆತ್ತಳು. ಆಗ ಯೆಹೋವನು, “ಅವನಿಗೆ ಲೋಅಮ್ಮಿ ಎಂದು ಹೆಸರಿಡು. ಯಾಕೆಂದರೆ ನೀವು ನನ್ನ ಜನರಲ್ಲ; ನಾನು ನಿಮ್ಮ ದೇವರಲ್ಲ” ಎಂದು ಹೇಳಿದನು.

ಇಸ್ರೇಲ್ ಜನಾಂಗದವರೊಂದಿಗೆ ಯೆಹೋವನು ಮಾತಾಡುತ್ತಾನೆ

10 “ಇನ್ನು ಮುಂದೆ ಇಸ್ರೇಲರ ಜನಸಂಖ್ಯೆಯು ಸಮುದ್ರದ ಮರಳಿನಂತಿರುವದು. ನೀವು ಮರಳನ್ನು ಅಳತೆಮಾಡಲೂ ಅದನ್ನು ಲೆಕ್ಕಿಸಲೂ ಸಾಧ್ಯವಿಲ್ಲ. ಆಗ, ‘ನೀವು ನನ್ನ ಜನರಲ್ಲ’ ಎಂಬ ಹೇಳಿಕೆಯ ಬದಲಾಗಿ, ‘ನೀವು ಜೀವಸ್ವರೂಪನಾದ ದೇವರ ಮಕ್ಕಳು’ ಎಂಬುದಾಗಿ ಕರೆಯಲ್ಪಡುವಿರಿ.

11 “ಆಗ ಇಸ್ರೇಲಿನ ಪ್ರಜೆಗಳು ಮತ್ತು ಯೆಹೂದ ಪ್ರಾಂತ್ಯದ ಪ್ರಜೆಗಳು ಒಂದಾಗಿ ಸೇರಲ್ಪಡುವರು. ತಮಗೆ ಒಬ್ಬ ಅರಸನನ್ನು ಅವರು ಆರಿಸಿಕೊಳ್ಳುವರು. ಅವರ ಜನಾಂಗಕ್ಕೆ ಆ ದೇಶವು ಸಾಲದೆ ಹೋಗುವದು. ಇಜ್ರೇಲನ ದಿನವು ನಿಜವಾಗಿಯೂ ಮಹತ್ವವುಳ್ಳದ್ದಾಗಿರುವದು.”

ಕೀರ್ತನೆಗಳು 119:73-96

73 ನಿನ್ನ ಕೈಗಳು ನನ್ನನ್ನು ರೂಪಿಸಿದವು.
    ನಿನ್ನ ಆಜ್ಞೆಗಳನ್ನು ಕಲಿತುಕೊಳ್ಳಲು ನನಗೆ ಸಹಾಯಿಸು.
74 ನಾನು ನಿನ್ನ ವಾಕ್ಯದಲ್ಲಿ ಭರವಸವಿಟ್ಟಿರುವುದರಿಂದ
    ನಿನ್ನ ಭಕ್ತರು ನನ್ನನ್ನು ಕಂಡಾಗ ಸಂತೋಷಿಸಲಿ.
75 ಯೆಹೋವನೇ, ನಿನ್ನ ತೀರ್ಪುಗಳು ನ್ಯಾಯವಾದವುಗಳೆಂದು ನನಗೆ ತಿಳಿದಿದೆ.
    ನೀನು ನನ್ನನ್ನು ಶಿಕ್ಷಿಸಿದ್ದು ನನ್ನ ದೃಷ್ಟಿಯಲ್ಲಿ ನ್ಯಾಯವಾಗಿತ್ತು.
76 ಈಗ, ನಿನ್ನ ಶಾಶ್ವತ ಪ್ರೀತಿಯಿಂದ ನನ್ನನ್ನು ಸಂತೈಸು.
    ನಿನ್ನ ವಾಗ್ದಾನದಂತೆ ನನ್ನನ್ನು ಸಂತೈಸು.
77 ನನ್ನನ್ನು ಸಂತೈಸಿ ಉಜ್ಜೀವನಗೊಳಿಸು;
    ನಾನು ನಿನ್ನ ಉಪದೇಶಗಳಲ್ಲಿಯೇ ಆನಂದಿಸುತ್ತಿರುವೆ.
78 ಗರ್ವಿಷ್ಠರಿಗೆ ಅವಮಾನವಾಗಲಿ; ಅವರು ನನ್ನ ಬಗ್ಗೆ ಸುಳ್ಳು ಹೇಳಿದ್ದಾರೆ.
    ನಾನಾದರೋ ನಿನ್ನ ನಿಯಮಗಳನ್ನು ಧ್ಯಾನಿಸುವೆನು.
79 ನಿನ್ನ ಭಕ್ತರು ನನ್ನ ಬಳಿಗೆ ಹಿಂತಿರುಗಿಬರಲಿ.
    ನಿನ್ನ ಒಡಂಬಡಿಕೆಯನ್ನು ಅವರು ಕಲಿತುಕೊಳ್ಳಲಿ.
80 ನಾನು ನಿನ್ನ ಕಟ್ಟಳೆಗಳಿಗೆ ಪೂರ್ಣವಾಗಿ ವಿಧೇಯನಾಗಿರುವಂತೆ ಮಾಡು.
    ಆಗ ನನಗೆ ಅವಮಾನವಾಗುವುದಿಲ್ಲ.

81 ನಿನ್ನ ರಕ್ಷಣೆಗಾಗಿ ಕಾಯುತ್ತಾ ಸಾಯುವಂತಾಗಿದ್ದೇನೆ.
    ನಿನ್ನ ವಾಕ್ಯಗಳಲ್ಲಿಯೇ ಭರವಸವಿಟ್ಟಿದ್ದೇನೆ.
82 ನಿನ್ನ ವಾಗ್ದಾನಗಳಿಗಾಗಿ ಎದುರುನೋಡುತ್ತಾ ನನ್ನ ಕಣ್ಣುಗಳು ಆಯಾಸಗೊಳ್ಳುತ್ತಿವೆ.
    ನೀನು ಯಾವಾಗ ನನ್ನನ್ನು ಸಂತೈಸುವೆ?
83 ಬಿಸಾಕಲ್ಪಟ್ಟ ದ್ರಾಕ್ಷಾರಸದ ಬುದ್ದಲಿಯಂತಿದ್ದೇನೆ,
    ಆದರೂ ನಾನು ನಿನ್ನ ಕಟ್ಟಳೆಗಳನ್ನು ಮರೆಯುವುದಿಲ್ಲ.
84 ನಾನು ಇನ್ನೆಷ್ಟುಕಾಲ ಬದುಕಲಿ?
    ನನ್ನನ್ನು ಹಿಂಸಿಸುವವರನ್ನು ಯಾವಾಗ ದಂಡಿಸುವೆ?
85 ನಿನ್ನ ಕಟ್ಟಳೆಗಳಿಗೆ ವಿರೋಧವಾಗಿ
    ಗರ್ವಿಷ್ಠರು ನನಗೆ ಗುಂಡಿಗಳನ್ನು ಅಗೆದಿದ್ದಾರೆ.
86 ನಿನ್ನ ಆಜ್ಞೆಗಳೆಲ್ಲಾ ನಂಬಿಕೆಗೆ ಯೋಗ್ಯವಾಗಿವೆ.
    ಅವರಾದರೋ ನನ್ನನ್ನು ನಿಷ್ಕಾರಣವಾಗಿ ಹಿಂಸಿಸುತ್ತಾರೆ;
    ನನಗೆ ಸಹಾಯಮಾಡು!
87 ಅವರು ನನ್ನನ್ನು ನಾಶಮಾಡಿಯೇ ಬಿಟ್ಟಿದ್ದರು.
    ನಾನಾದರೋ ನಿನ್ನ ನಿಯಮಗಳನ್ನು ಮರೆತುಬಿಡಲೇ ಇಲ್ಲ.
88 ನಿನ್ನ ಶಾಶ್ವತ ಪ್ರೀತಿಯನ್ನು ತೋರಿ ನನ್ನನ್ನು ಉಜ್ಜೀವಿಸಮಾಡು.
    ಆಗ, ನಾನು ನಿನ್ನ ಕಟ್ಟಳೆಗಳಿಗೆ ವಿಧೇಯನಾಗುವೆನು.

89 ಯೆಹೋವನೇ, ನಿನ್ನ ವಾಕ್ಯವು ಪರಲೋಕದಲ್ಲಿ ಶಾಶ್ವತವಾಗಿ ಸ್ಥಾಪಿಸಲ್ಪಟ್ಟಿದೆ.
90 ನಿನ್ನ ನಂಬಿಗಸ್ತಿಕೆಯು ತಲತಲಾಂತರಕ್ಕೂ ಇರುವುದು.
    ನೀನು ಭೂಮಿಯನ್ನು ಸೃಷ್ಟಿಸಿದೆ; ಅದು ಇಂದಿಗೂ ಸ್ಥಿರವಾಗಿ ನಿಂತಿದೆ.
91 ನಿನ್ನ ಆಜ್ಞೆಗಳಿಗನುಸಾರವಾಗಿ ಅದು ಸ್ಥಿರವಾಗಿಯೇ ಇದೆ.
    ಅವುಗಳೆಲ್ಲಾ ಸೇವಕರಂತೆ ನಿನ್ನ ಆಜ್ಞೆಗಳಿಗೆ ವಿಧೇಯವಾಗಿವೆ.
92 ನಿನ್ನ ಉಪದೇಶಗಳು ನನಗೆ ಆನಂದಕರವಾಗಿವೆ;
    ಇಲ್ಲವಾಗಿದ್ದರೆ ಸಂಕಟವು ನನ್ನನ್ನು ನಾಶಮಾಡಿಬಿಡುತ್ತಿತ್ತು.
93 ನಾನು ನಿನ್ನ ಆಜ್ಞೆಗಳನ್ನು ಮರೆಯುವುದೇ ಇಲ್ಲ.
    ಯಾಕೆಂದರೆ ನಾನು ಬದುಕಿರುವುದು ಅವುಗಳಿಂದಲೇ.
94 ನಾನು ನಿನ್ನವನು, ನನ್ನನ್ನು ರಕ್ಷಿಸು!
    ನಿನ್ನ ಆಜ್ಞೆಗಳಿಗೆ ಆಸಕ್ತಿಯಿಂದ ವಿಧೇಯನಾಗಿದ್ದೇನೆ.
95 ದುಷ್ಟರು ನನ್ನನ್ನು ನಾಶಮಾಡಲು ಪ್ರಯತ್ನಿಸಿದರು,
    ಆದರೆ ನಿನ್ನ ಒಡಂಬಡಿಕೆಯು ನನ್ನನ್ನು ಜ್ಞಾನಿಯನ್ನಾಗಿ ಮಾಡಿತು.
96 ನಿನ್ನ ಧರ್ಮಶಾಸ್ತ್ರದ ಹೊರತು
    ಬೇರೆಲ್ಲವುಗಳಿಗೂ ಮೇರೆಯಿದೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International