M’Cheyne Bible Reading Plan
ಶೂನೇಮಿನ ಸ್ತ್ರೀಯ ವಿದೇಶ ಪ್ರಯಾಣ
8 ಎಲೀಷನು ತಾನು ಮರಳಿ ಜೀವಿಸುವಂತೆ ಮಾಡಿದ ಬಾಲಕನ ತಾಯಿಯೊಂದಿಗೆ ಮಾತನಾಡಿದನು. ಎಲೀಷನು, “ನೀನು ಮತ್ತು ನಿನ್ನ ಕುಟುಂಬವು ಬೇರೆ ದೇಶಕ್ಕೆ ಹೋಗಬೇಕು. ಏಕೆಂದರೆ ಈ ದೇಶದಲ್ಲಿ ಬರಗಾಲವು ಏಳು ವರ್ಷಗಳವರೆಗೆ ಇರಬೇಕೆಂದು ಯೆಹೋವನು ತೀರ್ಮಾನಿಸಿದ್ದಾನೆ” ಎಂದು ಹೇಳಿದನು.
2 ದೇವಮನುಷ್ಯನು ಹೇಳಿದಂತೆಯೇ ಆ ಸ್ತ್ರೀಯು ಫಿಲಿಷ್ಟಿಯರ ದೇಶದಲ್ಲಿ ಏಳು ವರ್ಷಗಳ ಕಾಲ ನೆಲೆಸಲು ತನ್ನ ಕುಟುಂಬದೊಂದಿಗೆ ಹೋದಳು. 3 ಏಳು ವರ್ಷಗಳು ಮುಗಿದ ನಂತರ ಆ ಸ್ತ್ರೀಯು ಫಿಲಿಷ್ಟಿಯರ ದೇಶದಿಂದ ಹಿಂದಿರುಗಿ ಬಂದಳು.
ಆ ಸ್ತ್ರೀಯು ತನ್ನ ಮನೆಯನ್ನು ಮತ್ತು ಭೂಮಿಯನ್ನು ತನಗೆ ಮತ್ತೆ ಕೊಡಿಸುವಂತೆ ಕೇಳಲು ರಾಜನ ಬಳಿಗೆ ಹೋದಳು.
4 ಆ ಸಮಯದಲ್ಲಿ ರಾಜನು ದೇವಮನುಷ್ಯನ ಸೇವಕನಾದ ಗೇಹಜಿಯ ಸಂಗಡ ಮಾತನಾಡುತ್ತಿದ್ದನು. ರಾಜನು ಗೇಹಜಿಗೆ, “ಎಲೀಷನು ಮಾಡಿರುವ ಮಹತ್ಕಾರ್ಯಗಳೆಲ್ಲವುಗಳನ್ನು ನನಗೆ ದಯವಿಟ್ಟು ತಿಳಿಸು” ಎಂದು ಕೇಳಿದನು.
5 ಎಲೀಷನು ಸತ್ತಬಾಲಕನಿಗೆ ಮತ್ತೆ ಜೀವವನ್ನು ಬರುವಂತೆ ಮಾಡಿದ್ದರ ಬಗ್ಗೆ ಗೇಹಜಿಯು ರಾಜನಿಗೆ ಹೇಳುತ್ತಿದ್ದನು. ಎಲೀಷನು ಮರಳಿ ಜೀವಬರಿಸಿದ ಬಾಲಕನ ತಾಯಿಯು ಆ ಸಮಯದಲ್ಲಿ ರಾಜನ ಬಳಿಗೆ ಹೋದಳು. ತನ್ನ ಮನೆಯನ್ನು ಮತ್ತು ಭೂಮಿಯನ್ನು ತನಗೆ ಕೊಡಿಸಬೇಕೆಂದು ಕೇಳಿಕೊಳ್ಳಲು ಆಕೆ ಬಂದಿದ್ದಳು. ಗೇಹಜಿಯು, “ನನ್ನ ಒಡೆಯನೇ, ರಾಜನೇ, ಇವಳೇ ಆ ಸ್ತ್ರೀಯು! ಎಲೀಷನು ಮರಳಿ ಜೀವಬರಿಸಿದ ಬಾಲಕನು ಇವನೇ!” ಎಂದು ಹೇಳಿದನು.
6 ರಾಜನು ಆ ಸ್ತ್ರೀಯನ್ನು ಕೇಳಿದಾಗ, ಅವಳು ತನಗೆ ಸಂಭವಿಸಿದ್ದನ್ನು ಮತ್ತು ತನಗಿದ್ದ ಇಚ್ಛೆಯನ್ನು ತಿಳಿಸಿದಳು.
ಆಗ ರಾಜನು ಅವಳಿಗೆ ಸಹಾಯಮಾಡಲು ಒಬ್ಬ ಅಧಿಕಾರಿಯನ್ನು ಕರೆದು, “ಅವಳಿಗೆ ಸೇರಬೇಕಾದ ಆಸ್ತಿಯೆಲ್ಲವನ್ನೂ ಆಕೆಗೆ ಕೊಡಿಸು. ಅವಳು ದೇಶವನ್ನು ಬಿಟ್ಟಂದಿನಿಂದ ಈವರೆಗಿನ ಆಕೆಯ ಭೂಮಿಯ ಉತ್ಪಾದನೆಯನ್ನೂ ಅವಳಿಗೆ ಕೊಡಿಸು” ಎಂದು ಹೇಳಿದನು.
ಬೆನ್ಹದದನು ಹಜಾಯೇಲನನ್ನು ಎಲೀಷನ ಬಳಿಗೆ ಕಳುಹಿಸುವನು
7 ಎಲೀಷನು ದಮಸ್ಕಕ್ಕೆ ಹೋದನು. ಅರಾಮ್ಯರ ರಾಜನಾದ ಬೆನ್ಹದದನಿಗೆ ಕಾಯಿಲೆಯಾಗಿತ್ತು. ಬೆನ್ಹದದನಿಗೆ ಒಬ್ಬನು, “ದೇವಮನುಷ್ಯನು ಇಲ್ಲಿಗೆ ಬಂದಿದ್ದಾನೆ” ಎಂದು ಹೇಳಿದನು.
8 ಆಗ ರಾಜನಾದ ಬೆನ್ಹದದನು ಹಜಾಯೇಲನಿಗೆ, “ದೇವಮನುಷ್ಯನನ್ನು ಕಾಣಲು ಒಂದು ಕಾಣಿಕೆಯನ್ನು ತೆಗೆದುಕೊಂಡು ಹೋಗು. ನಾನು ನನ್ನ ಕಾಯಿಲೆಯಿಂದ ಗುಣವಾಗುತ್ತೇನೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲು ಅವನು ಯೆಹೋವನಲ್ಲಿ ಪ್ರಾರ್ಥಿಸಲಿ” ಎಂದು ಹೇಳಿದನು.
9 ಹಜಾಯೇಲನು ತನ್ನೊಡನೆ ಕಾಣಿಕೆಯನ್ನು ತೆಗೆದುಕೊಂಡು ಎಲೀಷನನ್ನು ಭೇಟಿಮಾಡಲು ಹೋದನು. ಅವನು ದಮಸ್ಕದಿಂದ ಎಲ್ಲಾ ವಿಧವಾದ ಉತ್ತಮ ವಸ್ತುಗಳನ್ನು ನಲವತ್ತು ಒಂಟೆಗಳ ಮೇಲೆ ಹೇರಿಸಿಕೊಂಡು ಹೋದನು. ಹಜಾಯೇಲನು ಎಲೀಷನ ಬಳಿಗೆ ಹೋಗಿ, “ನಿನ್ನ ಹಿಂಬಾಲಕನೂ ಅರಾಮ್ಯರ ರಾಜನೂ ಆದ ಬೆನ್ಹದದನು ನನ್ನನ್ನು ನಿನ್ನ ಬಳಿಗೆ ಕಳುಹಿಸಿದನು. ತನ್ನ ಕಾಯಿಲೆಯು ವಾಸಿಯಾಗುತ್ತದೆಯೇ ಇಲ್ಲವೇ ಎಂಬುದನ್ನು ಅವನು ನಿನ್ನಿಂದ ತಿಳಿದುಕೊಳ್ಳಬೇಕೆಂದಿದ್ದಾನೆ” ಎಂದು ಹೇಳಿದನು.
10 ಆಗ ಎಲೀಷನು ಹಜಾಯೇಲನಿಗೆ, “‘ವಾಸಿಯಾಗುವುದು’ ಎಂದು ಬೆನ್ಹದದನಿಗೆ ಹೇಳು. ಆದರೆ, ‘ಅವನು ಸಾಯುವುದು ಖಂಡಿತ’ ಎಂದು ಯೆಹೋವನು ನನಗೆ ತಿಳಿಸಿದ್ದಾನೆ” ಎಂದು ಹೇಳಿದನು.
ಹಜಾಯೇಲನ ಬಗ್ಗೆ ಎಲೀಷನ ಪ್ರವಾದನೆ
11 ಹಜಾಯೇಲನು ನಾಚಿಕೊಳ್ಳುವ ತನಕ ಎಲೀಷನು ಅವನನ್ನು ಒಂದೇ ಸಮನೆ ನೋಡಿದನು. ನಂತರ ದೇವಮನುಷ್ಯನು ಅಳತೊಡಗಿದನು. 12 ಹಜಾಯೇಲನು, “ಸ್ವಾಮೀ, ನೀವು ಅಳುವುದೇಕೇ?” ಎಂದು ಕೇಳಿದನು.
ಎಲೀಷನು, “ನಾನು ಅಳುತ್ತಿರುವುದೇಕೆಂದರೆ ನೀನು ಇಸ್ರೇಲರಿಗೆ ಮಾಡುವ ಕೆಟ್ಟಕಾರ್ಯಗಳು ನನಗೆ ತಿಳಿದಿವೆ. ನೀನು ಅವರ ನಗರಗಳ ಕೋಟೆಗಳನ್ನು ಸುಟ್ಟುಹಾಕುವೆ. ನೀನು ಅವರ ತರುಣರನ್ನು ಖಡ್ಗಗಳಿಂದ ಇರಿದುಕೊಲ್ಲುವೆ. ನೀನು ಅವರ ಮಕ್ಕಳನ್ನು ಕೊಂದುಹಾಕುವೆ. ನೀನು ಅವರ ಗರ್ಭಿಣಿ ಸ್ತ್ರೀಯರನ್ನು ಸೀಳಿಹಾಕುವೆ” ಎಂದು ಹೇಳಿದನು.
13 ಹಜಾಯೇಲನು, “ನಾನು ಬಲಾಢ್ಯನಾದ ಮನುಷ್ಯನಲ್ಲ! ನಾನು ಈ ಮಹತ್ಕಾರ್ಯಗಳನ್ನು ಮಾಡಲಾಗುವುದಿಲ್ಲ!” ಎಂದು ಹೇಳಿದನು.
ಎಲೀಷನು, “ನೀನು ಅರಾಮ್ಯರ ರಾಜನಾಗುವೆಯೆಂದು ಯೆಹೋವನು ನನಗೆ ತಿಳಿಸಿದ್ದಾನೆ” ಎಂದು ಹೇಳಿದನು.
14 ಹಜಾಯೇಲನು ಎಲೀಷನ ಬಳಿಯಿಂದ ಹೊರಟು ತನ್ನ ರಾಜನ ಬಳಿಗೆ ಹೋದನು. ಬೆನ್ಹದದನು ಹಜಾಯೇಲನಿಗೆ, “ಎಲೀಷನು ನಿನಗೆ ಏನು ಹೇಳಿದನು?” ಎಂದು ಕೇಳಿದನು. ಹಜಾಯೇಲನು, “ನಿನ್ನ ಕಾಯಿಲೆಯು ವಾಸಿಯಾಗುತ್ತದೆಯೆಂದು ಎಲೀಷನು ನನಗೆ ಹೇಳಿದನು” ಎಂದನು.
ಬೆನ್ಹದದನನ್ನು ಹಜಾಯೇಲನು ಕೊಂದುಹಾಕುವನು
15 ಆದರೆ ಮಾರನೆಯ ದಿನ ಹಜಾಯೇಲನು ಒಂದು ಹೊದಿಕೆಯನ್ನು ತೆಗೆದುಕೊಂಡು ನೀರಿನಲ್ಲಿ ನೆನೆಸಿದನು. ನಂತರ ಅವನು ಆ ಹೊದಿಕೆಯನ್ನು ಬೆನ್ಹದದನ ಮುಖದ ಮೇಲೆ ಹಾಕಿ, ಅವನನ್ನು ಉಸಿರುಕಟ್ಟಿಸಿ ಸಾಯಿಸಿದನು. ಹಜಾಯೇಲನು ನೂತನ ರಾಜನಾದನು.
ಯೆಹೋರಾಮನು ತನ್ನ ಆಳ್ವಿಕೆಯನ್ನು ಆರಂಭಿಸುವನು
16 ಯೆಹೋಷಾಫಾಟನ ಮಗನಾದ ಯೆಹೋರಾಮನು ಯೆಹೂದದ ರಾಜನಾಗಿದ್ದನು. ಅಹಾಬನ ಮಗನಾದ ಯೋರಾಮನು ಇಸ್ರೇಲಿನ ರಾಜನಾಗಿದ್ದ ಐದನೆಯ ವರ್ಷದಲ್ಲಿ ಯೆಹೋರಾಮನು ಆಳಲಾರಂಭಿಸಿದನು. 17 ಯೆಹೋರಾಮನು ಆಳುವುದಕ್ಕೆ ಆರಂಭಿಸಿದಾಗ ಅವನಿಗೆ ಮೂವತ್ತೆರಡು ವರ್ಷ ವಯಸ್ಸಾಗಿತ್ತು. ಅವನು ಜೆರುಸಲೇಮಿನಲ್ಲಿ ಎಂಟು ವರ್ಷ ಆಳಿದನು. 18 ಆದರೆ ಯೆಹೋರಾಮನು ಇಸ್ರೇಲಿನ ರಾಜರುಗಳಂತೆ ಜೀವಿಸಿದನು ಮತ್ತು ಯೆಹೋವನು ಕೆಟ್ಟಕಾರ್ಯಗಳೆಂದು ಹೇಳಿದ್ದನ್ನೇ ಮಾಡಿದನು. ಯೆಹೋರಾಮನು ಅಹಾಬನ ಕುಟುಂಬದ ಜನರಂತೆ ಜೀವಿಸಿದನು. ಅವನ ಪತ್ನಿಯು ಅಹಾಬನ ಮಗಳಾದ್ದರಿಂದ ಯೆಹೋರಾಮನು ಹೀಗೆ ಜೀವಿಸಿದನು. 19 ಆದರೆ ಯೆಹೋವನು ತನ್ನ ಸೇವಕನಾದ ದಾವೀದನಿಗೆ ವಾಗ್ದಾನ ಮಾಡಿದ್ದುದರಿಂದ ಯೆಹೂದವನ್ನು ನಾಶಗೊಳಿಸಲಿಲ್ಲ. ಯಾವಾಗಲೂ ದಾವೀದನ ಕುಟುಂಬದ ಒಬ್ಬನು ರಾಜನಾಗಿರುತ್ತಾನೆಂದು ಯೆಹೋವನು ವಾಗ್ದಾನ ಮಾಡಿದ್ದನು.
20 ಯೆಹೋರಾಮನ ಕಾಲದಲ್ಲಿ ಎದೋಮ್ಯರು ಯೆಹೂದದ ಆಳ್ವಿಕೆಗೆ ವಿರುದ್ಧವಾಗಿ ದಂಗೆ ಎದ್ದರು. ಎದೋಮ್ಯರು ತಮ್ಮಲ್ಲೇ ಒಬ್ಬ ರಾಜನನ್ನು ಆರಿಸಿಕೊಂಡಿದ್ದರು.
21 ಆಗ ಯೆಹೋರಾಮನು ಮತ್ತು ಅವನ ರಥಗಳೆಲ್ಲ ಚಾಯೀರಿಗೆ ಹೋದವು. ಎದೋಮಿನ ಸೇನೆಯು ಅವರನ್ನು ಸುತ್ತುವರಿಯಿತು. ಯೆಹೋರಾಮನು ತನ್ನ ಅಧಿಕಾರಿಗಳೊಂದಿಗೆ ಅವರನ್ನು ರಾತ್ರಿಯಲ್ಲಿ ಮುತ್ತಿಗೆ ಹಾಕಿ ತಪ್ಪಿಸಿಕೊಂಡರು. ಆದರೆ ಅವನ ಸೈನಿಕರು ತಮ್ಮ ಗುಡಾರಗಳಿಗೆ ಓಡಿಹೋದರು. 22 ಹೀಗೆ ಎದೋಮ್ಯರು ಯೆಹೂದದ ಆಳ್ವಿಕೆಯಿಂದ ಬೇರ್ಪಟ್ಟರು. ಅವರು ಇಂದಿನ ತನಕ ಯೆಹೂದದ ಆಳ್ವಿಕೆಯಿಂದ ಬೇರ್ಪಟ್ಟು ಸ್ವತಂತ್ರರಾಗಿದ್ದಾರೆ. ಅದೇ ಸಮಯದಲ್ಲಿ ಲಿಬ್ನದವರು ಯೆಹೂದದ ಆಳ್ವಿಕೆಯಿಂದ ಬೇರೆಯಾದರು.
23 ಯೆಹೂದದ ರಾಜರುಗಳು ಎಂಬ ಇತಿಹಾಸ ಪುಸ್ತಕದಲ್ಲಿ ಯೆಹೋರಾಮನು ಮಾಡಿದ ಇತರ ಎಲ್ಲಾ ಕಾರ್ಯಗಳನ್ನು ಬರೆಯಲಾಗಿದೆ.
24 ಯೆಹೋರಾಮನು ಸತ್ತುಹೋದನು. ಅವನನ್ನು ದಾವೀದನಗರದಲ್ಲಿ ಅವನ ಪೂರ್ವಿಕರ ಬಳಿ ಸಮಾಧಿ ಮಾಡಿದರು. ಯೆಹೋರಾಮನ ಮಗನಾದ ಅಹಜ್ಯನು ನೂತನ ರಾಜನಾದನು.
ಅಹಜ್ಯನು ತನ್ನ ಆಳ್ವಿಕೆಯನ್ನು ಆರಂಭಿಸಿದನು
25 ಅಹಾಬನ ಮಗನಾದ ಯೋರಾಮನು ಇಸ್ರೇಲಿನ ರಾಜನಾಗಿದ್ದ ಹನ್ನೆರಡನೆಯ ವರ್ಷದಲ್ಲಿ ಯೆಹೋರಾಮನ ಮಗನಾದ ಅಹಜ್ಯನು ಯೆಹೂದದ ರಾಜನಾದನು. 26 ಅಹಜ್ಯನು ಆಳಲಾರಂಭಿಸಿದಾಗ ಅವನಿಗೆ ಇಪ್ಪತ್ತೆರಡು ವರ್ಷ ವಯಸ್ಸಾಗಿತ್ತು. ಅವನು ಜೆರುಸಲೇಮಿನಲ್ಲಿ ಒಂದು ವರ್ಷ ಆಳಿದನು. ಅವನ ತಾಯಿಯ ಹೆಸರು ಅತಲ್ಯ. ಅವಳು ಇಸ್ರೇಲಿನ ರಾಜನಾದ ಒಮ್ರಿಯ ಮಗಳು. 27 ಯೆಹೋವನು ಕೆಟ್ಟದ್ದೆಂದು ಹೇಳಿದ ಕಾರ್ಯಗಳನ್ನು ಅಹಜ್ಯನು ಮಾಡಿದನು. ಅಹಜ್ಯನು ಅಹಾಬನ ಕುಟುಂಬದ ಜನರಂತೆ ಜೀವಿಸಿದ್ದನು. ಅಹಜ್ಯನು ಅಹಾಬನ ಅಳಿಯನಾದ್ದರಿಂದ ಅವನು ಹೀಗೆ ಜೀವಿಸಿದನು.
ಹಜಾಯೇಲನ ವಿರುದ್ಧದ ಯುದ್ಧದಲ್ಲಿ ಯೋರಾಮನು ಗಾಯಗೊಂಡನು
28 ಅಹಜ್ಯನು ಅಹಾಬನ ಮಗನಾದ ಯೋರಾಮನ ಜೊತೆಯಲ್ಲಿ ಅರಾಮ್ಯರ ರಾಜನಾದ ಹಜಾಯೇಲನ ವಿರುದ್ಧ ಯುದ್ಧಮಾಡಲು ರಾಮೋತ್‌ಗಿಲ್ಯಾದಿಗೆ ಹೋದನು. ಅರಾಮ್ಯರು ಯೋರಾಮನನ್ನು ಗಾಯಗೊಳಿಸಿದರು. 29 ರಾಜ ಯೋರಾಮನು ಹಜಾಯೇಲನ ವಿರುದ್ಧವಾಗಿ ಹೋರಾಡಿದಾಗ ರಾಮಾದಲ್ಲಿ ಅರಾಮ್ಯದಿಂದ ತನಗಾದ ಗಾಯಗಳನ್ನು ಗುಣಪಡಿಸಿಕೊಳ್ಳಲು ಇಸ್ರೇಲಿನ ರಾಜನು ಇಜ್ರೇಲ್ ಎಂಬ ಪಟ್ಟಣಕ್ಕೆ ಹಿಂತಿರುಗಿದನು. ಯೆಹೂದದ ರಾಜನೂ ಯೆಹೋರಾಮನ ಮಗನೂ ಆದ ಅಹಜ್ಯನು, ಅಹಾಬನ ಮಗನಾದ ಯೋರಾಮನನ್ನು ನೋಡಲು ಇಜ್ರೇಲಿಗೆ ಹೋದನು. ಯಾಕೆಂದರೆ ಅವನಿಗೆ ಕಾಯಿಲೆಯಾಗಿತ್ತು.
5 ವೃದ್ಧ ಪುರುಷರೊಂದಿಗೆ ಕೋಪದಿಂದ ಮಾತಾಡದೆ ಅವರನ್ನು ನಿನ್ನ ತಂದೆಯೆಂದು ಭಾವಿಸಿ ಅವರೊಂದಿಗೆ ಮಾತನಾಡು. ಯೌವನಸ್ಥರನ್ನು ಸಹೋದರರಂತೆಯೂ 2 ವೃದ್ಧ ಸ್ತ್ರೀಯರನ್ನು ತಾಯಿಗಳಂತೆಯೂ ಯೌವನಸ್ಥೆಯರನ್ನು ಸಹೋದರಿಯರಂತೆಯೂ ಪರಿಗಣಿಸು. ಯಾವಾಗಲೂ ಅವರೊಡನೆ ಒಳ್ಳೆಯ ರೀತಿಯಲ್ಲಿ ನಡೆದುಕೊ.
ವಿಧವೆಯರನ್ನು ಹೇಗೆ ಪೋಷಿಸಬೇಕೆಂಬ ನಿಯಮಗಳು
3 ದಿಕ್ಕಿಲ್ಲದ ವಿಧವೆಯರನ್ನು ಪರಿಪಾಲಿಸು. 4 ಆದರೆ ಒಬ್ಬ ವಿಧವೆಗೆ ಮಕ್ಕಳಾಗಲಿ, ಮೊಮ್ಮಕ್ಕಳಾಗಲಿ ಇದ್ದರೆ, ಅವರು ತಂದೆತಾಯಿಗಳಿಗೆ ಸಹಾಯ ಮಾಡುವುದರ ಮೂಲಕ ಸ್ವಂತ ಕುಟುಂಬಕ್ಕೆ ಗೌರವವನ್ನು ತೋರಬೇಕು. ಅವರು ಹೀಗೆ ಮಾಡಿದರೆ, ತಂದೆತಾಯಿಗಳಿಗೆ ಮತ್ತು ಅಜ್ಜಅಜ್ಜಿಯರಿಗೆ ಪ್ರತ್ಯುಪಕಾರ ಮಾಡಿದಂತಾಗುವುದು. ಅದು ದೇವರಿಗೆ ಮೆಚ್ಚಿಕೆಯಾದದ್ದು. 5 ಒಬ್ಬ ವಿಧವೆಯು ನಿಜವಾಗಿಯೂ ಸಹಾಯಕರಿಲ್ಲದೆ ಒಬ್ಬಂಟಿಗಳಾಗಿದ್ದರೆ, ಆಗ ಆಕೆಯು ತನ್ನ ರಕ್ಷಣೆಗಾಗಿ ದೇವರ ಮೇಲೆ ಭರವಸೆ ಇಡುವಳು. ಆ ಸ್ತ್ರೀಯು ಹಗಲು ರಾತ್ರಿಯೆಲ್ಲ ಪ್ರಾರ್ಥಿಸುವಳು. ಅವಳು ದೇವರ ಸಹಾಯವನ್ನು ಬೇಡುವಳು. 6 ಆದರೆ ವಿಧವೆಯಾದವಳು ತನ್ನ ಇಚ್ಛೆಪೂರೈಕೆಗಾಗಿ ತನ್ನ ಜೀವಿತವನ್ನು ಬಳಸಿಕೊಳ್ಳುವುದಾದರೆ ಅವಳು ಬದುಕಿದ್ದರೂ ಸತ್ತಂತೆಯೇ. 7 ಜನರು ನಿಂದೆನೆಗೆ ಗುರಿಯಾಗದಂತೆ ಅನುಸರಿಸಬೇಕಾದ ಕ್ರಮಗಳನ್ನು ತಿಳಿಸು. ಆಗ ಯಾರೂ ಅವರನ್ನು ನಿಂದಿಸಲು ಸಾಧ್ಯವಿಲ್ಲ. 8 ಯಾವನಾದರೂ ಸ್ವಂತ ಜನರನ್ನು ವಿಶೇಷವಾಗಿ ಸ್ವಂತ ಕುಟುಂಬದವರನ್ನು ಪರಿಪಾಲಿಸದೆ ಹೋದರೆ ಅವನು ಸತ್ಯಬೋಧನೆಯನ್ನು ತಿರಸ್ಕರಿಸುವವನಾಗಿದ್ದಾನೆ. ಅವನು ನಂಬದವನಿಗಿಂತ ತುಂಬಾ ಕೀಳಾದವನು.
9 ವಿಧವೆಯರ ಪಟ್ಟಿಗೆ ಸೇರಿಸಲ್ಪಟ್ಟ ವಿಧವೆಯರು ವಯಸ್ಸಿನಲ್ಲಿ ಅರವತ್ತು ವರ್ಷಕ್ಕಿಂತ ಮೇಲ್ಪಟ್ಟಿರಬೇಕು. ಅವಳು ತನ್ನ ಗಂಡನಿಗೆ ನಂಬಿಗಸ್ತಳಾಗಿದ್ದವಳೆಂದೂ 10 ಒಳ್ಳೆಯ ಕಾರ್ಯಗಳನ್ನು ಮಾಡುತ್ತಿದ್ದವಳೆಂದೂ ಹೆಸರನ್ನು ಪಡೆದಿರಬೇಕು. ಅಂದರೆ, ಅವಳು ತನ್ನ ಮಕ್ಕಳನ್ನು ಸಾಕಿಸಲಹಿದವಳೂ, ಅತಿಥಿಗಳನ್ನು ಸತ್ಕರಿಸಿದವಳೂ, ದೇವಜನರ ಪಾದಗಳನ್ನು ತೊಳೆದವಳೂ, ತೊಂದರೆಯಲ್ಲಿರುವ ಜನರಿಗೆ ಸಹಾಯ ಮಾಡಿದವಳೂ ಮತ್ತು ತನ್ನಿಂದಾದಷ್ಟು ಒಳ್ಳೆಯ ಕಾರ್ಯಗಳನ್ನು ಮಾಡಿದವಳೂ ಆಗಿರಬೇಕು.
11 ಆದರೆ ಪ್ರಾಯದ ವಿಧವೆಯರನ್ನು ಆ ಪಟ್ಟಿಯಲ್ಲಿ ಸೇರಿಸಬಾರದು. ಅವರು ಕ್ರಿಸ್ತನಿಗೆ ತಮ್ಮನ್ನು ಒಪ್ಪಿಸಿಕೊಂಡಿದ್ದರೂ ದೈಹಿಕ ಬಯಕೆಗಳ ಒತ್ತಡದಿಂದ ಪದೇಪದೇ ಆತನಿಗೆ ವಿಮುಖರಾಗುತ್ತಾರೆ. ನಂತರ ಅವರು ಮತ್ತೆ ಮದುವೆಯಾಗಲು ಆಸಕ್ತರಾಗುತ್ತಾರೆ. 12 ತಾವು ಕೊಟ್ಟ ವಾಗ್ದಾನವನ್ನು ಮೀರಿದವರೆಂಬ ತೀರ್ಪು ಅವರಿಗಾಗುತ್ತದೆ. 13 ಇದಲ್ಲದೆ, ಅವರು ಮನೆಮನೆಗೆ ಅಲೆಯುತ್ತಾ ತಮ್ಮ ಕಾಲವನ್ನು ಕಳೆಯಲಾರಂಭಿಸುತ್ತಾರೆ; ಹರಟೆ ಮಾತುಗಳನ್ನಾಡುತ್ತಾ ಇತರರ ಜೀವನದಲ್ಲಿ ತಲೆಹಾಕಿ ಕಾಲಹರಣ ಮಾಡುತ್ತಾರೆ; ಹೇಳಬಾರದ ಸಂಗತಿಗಳನ್ನೆಲ್ಲ ಹೇಳುತ್ತಾರೆ. 14 ಆದ್ದರಿಂದ ಅವರು ಮದುವೆ ಮಾಡಿಕೊಂಡು ಮಕ್ಕಳನ್ನು ಪಡೆಯಲಿ ಮತ್ತು ತಮ್ಮ ಮನೆಗಳನ್ನು ನೋಡಿಕೊಳ್ಳಲಿ. ಆಗ ಅವರನ್ನು ಟೀಕಿಸಲು ನಮ್ಮ ಶತ್ರುವಿಗೆ ಯಾವ ಕಾರಣವೂ ಇರುವುದಿಲ್ಲ. 15 ಆದರೆ ಈಗಾಗಲೇ ಕೆಲವರು ತಮ್ಮ ದಾರಿಯನ್ನು ಬದಲಾಯಿಸಿ ಸೈತಾನನನ್ನು ಹಿಂಬಾಲಿಸಿದ್ದಾರೆ.
16 ವಿಶ್ವಾಸಿಯಾದ ಸ್ತ್ರೀಯ ಕುಟುಂಬದಲ್ಲಿ ವಿಧವೆಯರಿದ್ದರೆ, ಆಕೆಯೇ ಅವರನ್ನು ಪರಿಪಾಲಿಸಲಿ. ಅವರನ್ನು ನೋಡಿಕೊಳ್ಳುವಂಥ ಜವಾಬ್ದಾರಿಯನ್ನು ಸಭೆಗೆ ಕೊಡಕೂಡದು. ಆಗ ದಿಕ್ಕಿಲ್ಲದ ವಿಧವೆಯರನ್ನು ನೋಡಿಕೊಳ್ಳಲು ಸಭೆಗೆ ಸಾಧ್ಯವಾಗುವುದು.
ಹಿರಿಯರ ಮತ್ತು ಇನ್ನಿತರ ವಿಷಯಗಳ ಕುರಿತು ಹೆಚ್ಚಿನ ಬೋಧನೆ
17 ಸಭೆಯನ್ನು ಉತ್ತಮ ಮಾರ್ಗದಲ್ಲಿ ನಡೆಸುವ ಹಿರಿಯರು ಗೌರವಕ್ಕೂ ಸಂಬಳಕ್ಕೂ ಯೋಗ್ಯರಾಗಿದ್ದಾರೆ. ಪ್ರಸಂಗ ಮಾಡುವುದರಲ್ಲಿಯೂ ಉಪದೇಶಮಾಡುವುದರಲ್ಲಿಯೂ ನಿರತರಾಗಿರುವ ಹಿರಿಯರು ಉನ್ನತವಾದ ಗೌರವವನ್ನು ಪಡೆಯುತ್ತಾರೆ. 18 ಏಕೆಂದರೆ “ಕಣ ತುಳಿಯುವ ಎತ್ತಿನ ಬಾಯನ್ನು ಕಟ್ಟಬಾರದು”(A) ಎಂಬುದಾಗಿಯೂ “ದುಡಿಯುವ ಆಳಿಗೆ ತಕ್ಕ ಕೂಲಿ ದೊರೆಯಬೇಕು”(B) ಎಂಬುದಾಗಿಯೂ ಪವಿತ್ರ ಗ್ರಂಥವು ಹೇಳುತ್ತದೆ.
19 ಸಭೆಯ ಹಿರಿಯರನ್ನು ಕುರಿತು ಯಾವನಾದರೂ ದೂರು ಹೇಳಿದರೆ ಇಬ್ಬರು ಅಥವಾ ಮೂವರು ಸಾಕ್ಷಿಗಳಿಲ್ಲದ ಹೊರತು ಅವನ ಮಾತುಗಳಿಗೆ ಕಿವಿಗೊಡಬೇಡ. 20 ಪಾಪ ಮಾಡುವ ಜನರನ್ನು ಸಭೆಯಲ್ಲಿ ಎಲ್ಲರ ಎದುರಿನಲ್ಲಿಯೇ ಗದರಿಸು. ಆಗ ಇತರರಿಗೂ ಎಚ್ಚರಿಕೆ ನೀಡಿದಂತಾಗುವುದು.
21 ನೀನು ಈ ಕಾರ್ಯಗಳನ್ನು ಮಾಡಬೇಕೆಂದು ದೇವರ, ಯೇಸು ಕ್ರಿಸ್ತನ ಮತ್ತು ಆರಿಸಲ್ಪಟ್ಟ ದೇವದೂತರ ಸನ್ನಿಧಿಯಲ್ಲಿ ನಾನು ಆಜ್ಞಾಪಿಸುತ್ತೇನೆ. ಆದರೆ ಸತ್ಯವನ್ನು ತಿಳಿಯುವುದಕ್ಕಿಂತ ಮೊದಲೇ ಜನರಿಗೆ ತೀರ್ಪು ನೀಡಬೇಡ. ಯಾರಿಗೂ ಪಕ್ಷಪಾತ ತೋರಬೇಡ.
22 ನೀನು ನಿನ್ನ ಹಸ್ತಗಳನ್ನು ಯಾರ ಮೇಲಾದರೂ ಇಟ್ಟು ಅವನನ್ನು ಸಭಾಹಿರಿಯನನ್ನಾಗಿ ನೇಮಿಸುವುದಕ್ಕಿಂತ ಮೊದಲೇ ಗಮನವಿಟ್ಟು ಆಲೋಚನೆಮಾಡು. ಇತರ ಜನರ ಪಾಪಗಳಲ್ಲಿ ಪಾಲುಗಾರನಾಗದೆ ಶುದ್ಧನಾಗಿರು.
23 ತಿಮೊಥೆಯನೇ, ನೀನು ನೀರನ್ನು ಮಾತ್ರ ಕುಡಿಯದೆ ಸ್ವಲ್ಪ ದ್ರಾಕ್ಷಾರಸವನ್ನು ಸಹ ಕುಡಿಯಬೇಕು. ಇದರಿಂದ ನಿನ್ನ ಜೀರ್ಣಶಕ್ತಿಯು ಹೆಚ್ಚುವುದರಿಂದ ಪದೇಪದೇ ಅಸ್ವಸ್ಥನಾಗುವುದಿಲ್ಲ.
24 ಕೆಲವು ಜನರ ಪಾಪಗಳು ಎದ್ದುಕಾಣುತ್ತವೆ. ಅವರಿಗೆ ನ್ಯಾಯತೀರ್ಪಾಗುವುದೆಂಬುದನ್ನು ಅವರ ಪಾಪಗಳೇ ತೋರ್ಪಡಿಸುತ್ತವೆ. ಆದರೆ ಇತರ ಕೆಲವು ಜನರ ಪಾಪಗಳು ಸ್ವಲ್ಪಕಾಲದ ನಂತರ ತಿಳಿದುಬರುತ್ತವೆ. 25 ಹಾಗೆಯೇ, ಕೆಲವರ ಒಳ್ಳೆಯ ಕಾರ್ಯಗಳು ಪ್ರಸಿದ್ಧವಾಗಿವೆ. ಇನ್ನು ಕೆಲವರ ಒಳ್ಳೆಯ ಕಾರ್ಯಗಳು ಪ್ರಸಿದ್ಧವಾಗಿಲ್ಲದಿದ್ದರೂ ಅವು ಮರೆಯಾಗಿರಲು ಸಾಧ್ಯವಿಲ್ಲ.
12 “ದರ್ಶನದಲ್ಲಿ ಕಾಣಿಸಿಕೊಂಡ ಮನುಷ್ಯನು, ದಾನಿಯೇಲನೇ, ಆಗ ದೇವದೂತನಾದ ಮಿಕಾಯೇಲನು ಏಳುವನು. ಮಿಕಾಯೇಲನು ಯೆಹೂದ್ಯರಾದ ನಿಮ್ಮ ಹಿತಾಸಕ್ತಿಗಳನ್ನು ನೋಡಿಕೊಳ್ಳುವನು. ಮಹಾಸಂಕಟದ ಕಾಲ ಬರುವದು. ಭೂಮಿಯ ಮೇಲೆ ರಾಷ್ಟ್ರಗಳು ಹುಟ್ಟಿದಂದಿನಿಂದ ಸಂಭವಿಸದಂತಹ ಸಂಕಟಗಳು ಸಂಭವಿಸುವವು. ಆದರೆ ದಾನಿಯೇಲನೇ, ನಿಮ್ಮ ಜನಗಳಲ್ಲಿ ಯಾರ ಹೆಸರುಗಳು ‘ಜೀವಬಾಧ್ಯರ ಗ್ರಂಥದಲ್ಲಿ’ ಬರೆಯಲ್ಪಟ್ಟಿದೆಯೋ ಅವರೆಲ್ಲರನ್ನು ರಕ್ಷಿಸಲಾಗುವುದು. 2 ಮರಣಹೊಂದಿದ, ಸಮಾಧಿಗಳಲ್ಲಿ ದೀರ್ಘನಿದ್ರೆ ಮಾಡುತ್ತಿದ್ದವರಲ್ಲಿ ಅನೇಕರು ಎಚ್ಚೆತ್ತುಕೊಳ್ಳುವರು. ಕೆಲವರು ಎಚ್ಚೆತ್ತು ನಿತ್ಯಜೀವವನ್ನು ಅನುಭವಿಸುವರು. ಕೆಲವರು ಎಚ್ಚೆತ್ತು ನಿತ್ಯನಿಂದನೆಗಳನ್ನೂ ತಿರಸ್ಕಾರಗಳನ್ನೂ ಅನುಭವಿಸುವರು. 3 ಜ್ಞಾನಿಗಳು ತೇಜೋಮಯವಾದ ಆಕಾಶಮಂಡಲದಂತೆ ಪ್ರಕಾಶಿಸುವರು. ನೀತಿವಂತರಾಗಿ ಜೀವಿಸಲು ಅವರು ಅನೇಕರಿಗೆ ಉಪದೇಶಿಸುವರು. ಯುಗಯುಗಾಂತರಗಳಲ್ಲಿಯೂ ನಕ್ಷತ್ರಗಳ ಹಾಗೆ ಹೊಳೆಯುವರು.
4 “ದಾನಿಯೇಲನೇ, ನೀನು ಈ ಸಂದೇಶವನ್ನು ರಹಸ್ಯವಾಗಿಡು. ಇದನ್ನು ಬರೆದ ಪುಸ್ತಕಕ್ಕೆ ಮುದ್ರೆಹಾಕು. ಅಂತ್ಯಕಾಲದವರೆಗೆ ನೀನು ಇದನ್ನು ರಹಸ್ಯವಾಗಿ ಇಡಬೇಕು. ನಿಜವಾದ ಜ್ಞಾನಕ್ಕಾಗಿ ಬಹುಜನರು ಅತ್ತಿತ್ತ ಸಂಚರಿಸುವರು. ನಿಜವಾದ ಜ್ಞಾನ ಬೆಳೆಯುವದು.”
5 ಆಗ, ದಾನಿಯೇಲನೆಂಬ ನಾನು, ಮತ್ತಿಬ್ಬರನ್ನು ಕಂಡೆನು. ಅವರೊಳಗೆ ಒಬ್ಬನು ನದಿಯ ಈಚೆ ದಡದಲ್ಲಿಯೂ ಇನ್ನೊಬ್ಬನು ಆಚೆದಡದಲ್ಲಿಯೂ ನಿಂತಿದ್ದರು. 6 ನಾರುಮಡಿಯನ್ನು ಧರಿಸಿದ್ದವನೊಬ್ಬನು ನದಿಯಲ್ಲಿ ನೀರಿನ ಮೇಲೆ ನಿಂತಿದ್ದನು. ಅವರಿಬ್ಬರಲ್ಲಿ ಒಬ್ಬನು, “ಆ ಅದ್ಭುತ ಘಟನೆಗಳು ಸಂಭವಿಸುವದಕ್ಕೆ ಇನ್ನು ಎಷ್ಟು ಕಾಲ ಬೇಕು?” ಎಂದು ಅವನನ್ನು ಕೇಳಿದನು.
7 ನಾರುಮಡಿಯನ್ನು ಧರಿಸಿ ನೀರಿನ ಮೇಲೆ ನಿಂತುಕೊಂಡಿದ್ದ ಮನುಷ್ಯನು ತನ್ನ ಎರಡೂ ಕೈಗಳನ್ನು ಆಕಾಶದ ಕಡೆಗೆ ಎತ್ತಿದನು. ಅವನು ಶಾಶ್ವತವಾದ ದೇವರ ಮೇಲೆ ಆಣೆಮಾಡಿ, “ಮೂರುವರೆ ವರ್ಷ ಕಳೆಯಬೇಕು. ದೇವರ ಭಕ್ತರ ಬಲವು ಸಂಪೂರ್ಣವಾಗಿ ಮುರಿದುಹೋಗುವದು. ಆಮೇಲೆ ಎಲ್ಲಾ ಸಂಗತಿಗಳು ಜರುಗುವವು” ಎಂದು ಹೇಳಿದನು.
8 ನಾನು ಉತ್ತರವನ್ನು ಕೇಳಿದೆ, ಆದರೆ ನನಗೆ ಅದು ಅರ್ಥವಾಗಲಿಲ್ಲ. ಆದ್ದರಿಂದ ನಾನು, “ಸ್ವಾಮೀ, ಈ ಎಲ್ಲಾ ಸಂಗತಿಗಳು ಜರುಗಿದ ಮೇಲೆ ಏನು ಸಂಭವಿಸುವದು?” ಎಂದು ಕೇಳಿದೆ.
9 ಅದಕ್ಕೆ ಆತನು, “ದಾನಿಯೇಲನೇ, ನಿನ್ನ ಜೀವನ ಸಾಗಲಿ. ಈ ಸಂದೇಶವು ರಹಸ್ಯವಾದದ್ದು. ಅಂತ್ಯಕಾಲ ಬರುವವರೆಗೆ ಇದು ರಹಸ್ಯವಾಗಿ ಉಳಿಯುವದು. 10 ಅನೇಕ ಜನರು ಶುದ್ಧೀಕರಿಸಲ್ಪಡುವರು; ಅವರು ತಮ್ಮನ್ನು ತಾವು ಶುಭ್ರಗೊಳಿಸಿಕೊಳ್ಳುವರು. ಆದರೆ ದುಷ್ಟರು ದುಷ್ಟರಾಗಿಯೇ ಉಳಿಯುವರು. ಆ ದುಷ್ಟರು ಈ ಸಂಗತಿಗಳನ್ನು ಅರಿತುಕೊಳ್ಳುವದಿಲ್ಲ. ಜ್ಞಾನಿಗಳು ಇವೆಲ್ಲವನ್ನು ಅರಿತುಕೊಳ್ಳುತ್ತಾರೆ.
11 “ನಿತ್ಯಹೋಮವು ನಿಲ್ಲಿಸಲ್ಪಟ್ಟು ಹಾಳುಮಾಡುವ ಅಸಹ್ಯ ವಸ್ತುವು ಪ್ರತಿಷ್ಠಿತವಾದ ಮೇಲೆ ಒಂದು ಸಾವಿರದ ಇನ್ನೂರ ತೊಂಭತ್ತು ದಿನಗಳು ಕಳೆಯಬೇಕು. 12 ಕಾದುಕೊಂಡು ಒಂದು ಸಾವಿರದ ಮುನ್ನೂರ ಮೂವತ್ತೈದು ದಿನಗಳ ಕೊನೆಯವರೆಗೆ ತಾಳಿರುವವನು ಧನ್ಯನು.
13 “ದಾನಿಯೇಲನೇ, ನೀನು ಹೋಗಿ ಕೊನೆಯವರೆಗೆ ನಿನ್ನ ಜೀವನವನ್ನು ಸಾಗಿಸು. ನೀನು ದೀರ್ಘನಿದ್ರೆಯನ್ನು ಪಡೆಯುವೆ. ಅಂತ್ಯಕಾಲದಲ್ಲಿ, ನೀನು ದೀರ್ಘನಿದ್ರೆಯಿಂದ ಎಚ್ಚೆತ್ತು ನಿನ್ನ ಸ್ವಾಸ್ತ್ಯವನ್ನು ಪಡೆಯುವೆ” ಎಂದು ಉತ್ತರಿಸಿದನು.
49 ನಿನ್ನ ವಾಗ್ದಾನವನ್ನು ನನಗೋಸ್ಕರ ನೆನಪು ಮಾಡಿಕೋ.
ಆ ವಾಗ್ದಾನವೇ ನನ್ನ ನಿರೀಕ್ಷೆಯಾಗಿದೆ.
50 ಸಂಕಟಪಡುತ್ತಿರುವಾಗ ನೀನು ನನ್ನನ್ನು ಸಂತೈಸಿದೆ.
ನಿನ್ನ ನುಡಿಗಳು ನನ್ನನ್ನು ಉಜ್ಜೀವನಗೊಳಿಸಲಿ.
51 ಗರ್ವಿಷ್ಠರು ನನ್ನನ್ನು ಗೇಲಿಮಾಡುತ್ತಲೇ ಇದ್ದರು.
ನಾನಾದರೋ ನಿನ್ನ ಉಪದೇಶಗಳನ್ನು ಅನುಸರಿಸುತ್ತಲೇ ಇದ್ದೆನು.
52 ನಿನ್ನ ಜ್ಞಾನದ ನಿರ್ಧಾರಗಳನ್ನು ಯಾವಾಗಲೂ ಜ್ಞಾಪಿಸಿಕೊಳ್ಳುವೆ.
ಅವು ನನ್ನನ್ನು ಸಂತೈಸುತ್ತವೆ.
53 ನಿನ್ನ ಉಪದೇಶಗಳನ್ನು ಅನುಸರಿಸದ ದುಷ್ಟರನ್ನು
ನಾನು ಕಾಣುವಾಗ ಬಹುಕೋಪಗೊಳ್ಳುವೆ.
54 ನನಗಂತೂ, ನಿನ್ನ ಕಟ್ಟಳೆಗಳು
ನನ್ನ ಮನೆಯಲ್ಲಿ[a] ಹಾಡುಗಳಾಗಿವೆ.
55 ರಾತ್ರಿಯಲ್ಲಿ ನಾನು ನಿನ್ನ ಹೆಸರನ್ನೂ
ನಿನ್ನ ಉಪದೇಶಗಳನ್ನೂ ಜ್ಞಾಪಿಸಿಕೊಳ್ಳುವೆ.
56 ಯಾಕೆಂದರೆ, ನಾನು ನಿನ್ನ ನಿಯಮಗಳಿಗೆ ಎಚ್ಚರಿಕೆಯಿಂದ ವಿಧೇಯನಾಗುವೆನು.
57 ಯೆಹೋವನೇ, ನನ್ನ ಪಾಲು ನೀನೇ;
ನಿನ್ನ ಆಜ್ಞೆಗಳಿಗೆ ವಿಧೇಯನಾಗುವುದೇ ನನ್ನ ಕರ್ತವ್ಯವೆಂದು ನಿರ್ಧರಿಸಿರುವೆ.
58 ನಿನ್ನನ್ನೇ ಸಂಪೂರ್ಣವಾಗಿ ಆಶ್ರಯಿಸಿಕೊಂಡಿದ್ದೇನೆ.
ನಿನ್ನ ವಾಗ್ದಾನದಂತೆ ನನಗೆ ಕರುಣೆತೋರು.
59 ನನ್ನ ಜೀವಿತದ ಕುರಿತು ಎಚ್ಚರಿಕೆಯಿಂದ ಆಲೋಚಿಸಿ
ನಿನ್ನ ಕಟ್ಟಳೆಗಳನ್ನು ಅನುಸರಿಸಲು ನಿರ್ಧರಿಸಿದ್ದೇನೆ.
60 ನಿನ್ನ ಆಜ್ಞೆಗಳಿಗೆ ವಿಧೇಯನಾಗಲು
ತಡಮಾಡದೆ ಬೇಗನೆ ಹಿಂತಿರುಗಿದೆನು.
61 ಗುಂಪಾಗಿ ಸೇರಿದ್ದ ದುಷ್ಟರು ನನ್ನನ್ನು ದೂಷಿಸಿದರೂ
ನಿನ್ನ ಉಪದೇಶಗಳನ್ನು ನಾನು ಮರೆಯಲಿಲ್ಲ.
62 ನಿನ್ನ ಒಳ್ಳೆಯ ನಿರ್ಧಾರಗಳಿಗಾಗಿ ಕೃತಜ್ಞತೆ ಸಲ್ಲಿಸಲು
ನಾನು ಮಧ್ಯರಾತ್ರಿಯಲ್ಲಿ ಎದ್ದೇಳುವೆನು.
63 ನಿನ್ನಲ್ಲಿ ಭಯಭಕ್ತಿಯುಳ್ಳವರಿಗೆ ನಾನು ಸ್ನೇಹಿತನಾಗಿದ್ದೇನೆ.
ನಿನ್ನ ನಿಯಮಗಳಿಗೆ ವಿಧೇಯರಾಗುವ ಪ್ರತಿಯೊಬ್ಬರಿಗೂ ನಾನು ಸ್ನೇಹಿತನಾಗಿದ್ದೇನೆ.
64 ನಿನ್ನ ಶಾಶ್ವತ ಪ್ರೀತಿಯು ಭೂಮಿಯನ್ನು ತುಂಬಿಕೊಂಡಿದೆ.
ನಿನ್ನ ಕಟ್ಟಳೆಗಳನ್ನು ನನಗೆ ಉಪದೇಶಿಸು.
65 ಯೆಹೋವನೇ, ನಿನ್ನ ವಾಗ್ದಾನಕ್ಕೆ ತಕ್ಕಂತೆ
ನಿನ್ನ ಸೇವಕನಿಗೆ ಒಳ್ಳೆಯದನ್ನೇ ಮಾಡಿರುವೆ.
66 ಜ್ಞಾನದ ನಿರ್ಧಾರಗಳನ್ನು ಮಾಡಲು ನನಗೆ ಜ್ಞಾನವನ್ನು ಕೊಡು.
ನಾನು ನಿನ್ನ ಆಜ್ಞೆಗಳಲ್ಲಿ ಭರವಸವಿಟ್ಟಿರುವೆ.
67 ನಾನು ಸಂಕಟಪಡುವುದಕ್ಕಿಂತ ಮೊದಲು ಅನೇಕ ಕೆಟ್ಟಕಾರ್ಯಗಳನ್ನು ಮಾಡಿದೆ;
ಈಗಲಾದರೋ ನಾನು ನಿನ್ನ ಆಜ್ಞೆಗಳಿಗೆ ಎಚ್ಚರಿಕೆಯಿಂದ ವಿಧೇಯನಾಗುವೆನು.
68 ನೀನು ಒಳ್ಳೆಯವನೂ ಒಳ್ಳೆಯ ಕಾರ್ಯಗಳನ್ನು ಮಾಡುವವನೂ ಆಗಿರುವೆ.
ನಿನ್ನ ಕಟ್ಟಳೆಗಳನ್ನು ನನಗೆ ಉಪದೇಶಿಸು.
69 ಗರ್ವಿಷ್ಠರು ನನಗೆ ವಿರೋಧವಾಗಿ ಸುಳ್ಳು ಹೇಳಿದರು.
ನಾನಾದರೋ ನಿನ್ನ ಆಜ್ಞೆಗಳಿಗೆ ಪೂರ್ಣಹೃದಯದಿಂದ ವಿಧೇಯನಾಗಿರುವೆ.
70 ಅವರು ಬಹು ಮೂಢರು.
ನಾನಾದರೋ ನಿನ್ನ ಉಪದೇಶಗಳನ್ನು ಕಲಿಯುವುದರಲ್ಲಿ ಆನಂದಿಸುವೆ.
71 ನಿನ್ನ ಕಟ್ಟಳೆಗಳನ್ನು ಕಲಿಯಲು
ನಾನು ಪಟ್ಟ ಪ್ರಯಾಸವು ಒಳ್ಳೆಯದಾಯಿತು.
72 ನಿನ್ನ ಉಪದೇಶಗಳು ನನಗೆ ಒಳ್ಳೆಯದಾಗಿವೆ.
ಅವು ಹತ್ತುಸಾವಿರ ಬೆಳ್ಳಿಬಂಗಾರಗಳ ನಾಣ್ಯಗಳಿಗಿಂತಲೂ ಅಮೂಲ್ಯವಾಗಿವೆ.
Kannada Holy Bible: Easy-to-Read Version. All rights reserved. © 1997 Bible League International