Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
2 ರಾಜರುಗಳು 6

ಎಲೀಷ ಮತ್ತು ಕೊಡಲಿ

ಪ್ರವಾದಿಗಳ ಗುಂಪು ಎಲೀಷನಿಗೆ, “ನಾವು ಈ ಸ್ಥಳದಲ್ಲಿಯೇ ವಾಸಮಾಡುತ್ತಿದ್ದೇವೆ. ಆದರೆ ಇದು ನಮಗೆ ತುಂಬಾ ಚಿಕ್ಕದಾಗಿದೆ. ನಾವೆಲ್ಲಾ ಜೋರ್ಡನ್ ನದಿಗೆ ಹೋಗಿ ಸ್ವಲ್ಪ ಮರವನ್ನು ಕಡಿದುಕೊಂಡು ಬರೋಣ. ಪ್ರತಿಯೊಬ್ಬರೂ ಒಂದೊಂದು ದಿಮ್ಮಿಯನ್ನು ತಂದು ನಾವು ವಾಸಿಸಲು ಒಂದು ಮನೆಯನ್ನು ಕಟ್ಟೋಣ” ಎಂದು ಹೇಳಿದರು.

ಎಲೀಷನು, “ಸರಿ, ಹಾಗೆಯೇ ಮಾಡಿ” ಎಂದು ಉತ್ತರಿಸಿದನು.

ಒಬ್ಬ ವ್ಯಕ್ತಿಯು, “ದಯವಿಟ್ಟು ನಮ್ಮ ಜೊತೆಯಲ್ಲಿ ನೀನೂ ಬಾ” ಎಂದನು.

ಎಲೀಷನು, “ಸರಿ, ನಾನೂ ನಿಮ್ಮ ಜೊತೆಯಲ್ಲಿ ಬರುತ್ತೇನೆ” ಎಂದು ಹೇಳಿದನು.

ಎಲೀಷನು ಪ್ರವಾದಿಗಳ ಗುಂಪಿನೊಂದಿಗೆ ಹೋದನು. ಅವರು ಜೋರ್ಡನ್ ನದಿಯ ಬಳಿಗೆ ಬಂದು ಕೆಲವು ಮರಗಳನ್ನು ಕಡಿಯಲಾರಂಭಿಸಿದರು. ಆದರೆ ಒಬ್ಬನು ಮರವೊಂದನ್ನು ಕಡಿದುರುಳಿಸಿದಾಗ, ಕಬ್ಬಿಣದ ಕೊಡಲಿಯು ಕಾವಿನಿಂದ ಕಳಚಿಕೊಂಡು ನೀರಿನೊಳಕ್ಕೆ ಬಿದ್ದುಬಿಟ್ಟಿತು. ಆ ಮನುಷ್ಯನು, “ಅಯ್ಯೋ, ಒಡೆಯನೇ! ನಾನು ಆ ಕೊಡಲಿಯನ್ನು ಎರವಲಾಗಿ ತಂದಿದ್ದೇನಲ್ಲಾ” ಎಂದು ಕೂಗಿಕೊಂಡನು.

ದೇವಮನುಷ್ಯನು, “ಅದು ಎಲ್ಲಿ ಬಿದ್ದಿತು?” ಎಂದು ಕೇಳಿದನು.

ಆ ಮನುಷ್ಯನು ಕೊಡಲಿಯು ಬಿದ್ದ ಸ್ಥಳವನ್ನು ಎಲೀಷನಿಗೆ ತೋರಿಸಿದನು. ಆಗ ಎಲೀಷನು ಒಂದು ಕಡ್ಡಿಯನ್ನು ಮುರಿದು ಅದನ್ನು ನೀರಿನೊಳಕ್ಕೆ ಎಸೆದನು. ಆ ಕಡ್ಡಿಯು ಕಬ್ಬಿಣದ ಕೊಡಲಿಯನ್ನು ತೇಲುವಂತೆ ಮಾಡಿತು. ಎಲೀಷನು, “ಕೊಡಲಿಯನ್ನು ಎತ್ತಿಕೊ” ಎಂದು ಹೇಳಿದನು. ಆ ಮನುಷ್ಯನು ಅಲ್ಲಿಗೆ ಹೋಗಿ, ಕೊಡಲಿಯನ್ನು ತೆಗೆದುಕೊಂಡನು.

ಅರಾಮ್ಯರ ರಾಜನು ಇಸ್ರೇಲಿನ ರಾಜನನ್ನು ಸಿಕ್ಕಿಹಾಕಿಸಲು ಪ್ರಯತ್ನಿಸಿದನು

ಅರಾಮ್ಯರ ರಾಜನು ಇಸ್ರೇಲಿನ ವಿರುದ್ಧ ಯುದ್ಧಮಾಡಲು ಬಂದನು. ಅವನು ತನ್ನ ಸೇನಾಧಿಕಾರಿಗಳ ಸಭೆಸೇರಿಸಿ, “ನೀವು ಈ ಜಾಗದಲ್ಲಿ ಅಡಗಿಕೊಂಡಿದ್ದು, ಇಸ್ರೇಲರು ಇಲ್ಲಿಗೆ ಬಂದಾಗ ಅವರ ಮೇಲೆ ಆಕ್ರಮಣ ಮಾಡಿ” ಎಂದು ಹೇಳಿದನು.

ಆದರೆ ದೇವಮನುಷ್ಯನು (ಎಲೀಷನು) ಇಸ್ರೇಲಿನ ರಾಜನಿಗೆ ಒಂದು ಸಂದೇಶವನ್ನು ಕಳುಹಿಸಿ, “ನೀವು ಜಾಗರೂಕರಾಗಿರಿ! ನೀವು ಆ ಜಾಗದಲ್ಲಿ ತಿರುಗಾಡದಿರಿ! ಅರಾಮ್ಯರ ಸೈನಿಕರು ಅಲ್ಲಿ ಅಡಗಿದ್ದಾರೆ!” ಎಂದು ಹೇಳಿದನು.

10 ಇಸ್ರೇಲಿನ ರಾಜನು ತನ್ನ ಜನರಿಗೆ ಸಂದೇಶವೊಂದನ್ನು ಕಳುಹಿಸಿ, ದೇವಮನುಷ್ಯನು ಎಚ್ಚರವಾಗಿರಲು ತಿಳಿಸಿದ ಸ್ಥಳದಲ್ಲಿ ತಿರುಗಾಡದಿರುವಂತೆ ಸೂಚಿಸಿ ಕೆಲವು ಜನರನ್ನು[a] ರಕ್ಷಿಸಿದನು.

11 ಅರಾಮ್ಯರ ರಾಜನು ಇದರಿಂದ ಬಹಳ ತಳಮಳಗೊಂಡನು. ಅರಾಮ್ಯರ ರಾಜನು ತನ್ನ ಸೇನಾಧಿಕಾರಿಗಳನ್ನು ಕರೆದು ಅವರಿಗೆ, “ಇಸ್ರೇಲಿನ ರಾಜನಿಗಾಗಿ ಗೂಢಚರ್ಯ ನಡೆಸುತ್ತಿರುವವರು ಯಾರೆಂಬುದನ್ನು ಹೇಳಿ?” ಎಂದು ಕೇಳಿದನು.

12 ಅರಾಮ್ಯರ ರಾಜನ ಅಧಿಕಾರಿಗಳಲ್ಲೊಬ್ಬನು, “ನನ್ನ ಒಡೆಯನೇ, ರಾಜನೇ, ನಮ್ಮಲ್ಲಿ ಯಾರೊಬ್ಬರೂ ಗೂಢಚಾರರಲ್ಲ. ಇಸ್ರೇಲಿನ ಪ್ರವಾದಿಯಾದ ಎಲೀಷನು ಅನೇಕ ರಹಸ್ಯ ಸಂಗತಿಗಳನ್ನು ಅಂದರೆ ನೀವು ನಿಮ್ಮ ಮಲಗುವ ಕೊಠಡಿಯಲ್ಲಿ ಮಾತನಾಡುವುದನ್ನೂ ಸಹ ಇಸ್ರೇಲಿನ ರಾಜನಿಗೆ ತಿಳಿಸಬಲ್ಲವನಾಗಿದ್ದಾನೆ!” ಎಂದು ಹೇಳಿದನು.

13 ಅರಾಮ್ಯರ ರಾಜನು, “ಎಲೀಷನನ್ನು ಕಂಡುಹಿಡಿಯಿರಿ. ಅವನನ್ನು ಸೆರೆಹಿಡಿಯಲು ನಾನು ಸೈನಿಕರನ್ನು ಕಳುಹಿಸುತ್ತೇನೆ” ಎಂದನು.

ಸೇವಕರು ಅರಾಮ್ಯರ ರಾಜನಿಗೆ, “ಎಲೀಷನು ದೋತಾನಿನಲ್ಲಿದ್ದಾನೆ” ಎಂದು ಹೇಳಿದರು.

14 ಆಗ ಅರಾಮ್ಯರ ರಾಜನು ಕುದುರೆಗಳನ್ನು, ರಥಗಳನ್ನು ಮತ್ತು ದೊಡ್ಡ ಸೇನೆಯನ್ನು ದೋತಾನಿಗೆ ಕಳುಹಿಸಿದನು. ಅವರು ರಾತ್ರಿಯಲ್ಲಿ ಬಂದು ನಗರವನ್ನು ಸುತ್ತುವರಿದರು. 15 ಎಲೀಷನ ಸೇವಕನು ಹೊತ್ತಾರೆ ನಸುಕಿನಲ್ಲಿಯೇ ಮೇಲಕ್ಕೆದ್ದನು. ಸೇವಕನು ಹೊರಕ್ಕೆ ಹೋದಾಗ ರಥಗಳಿಂದ ಮತ್ತು ಕುದುರೆಗಳಿಂದ ಕೂಡಿದ ಸೈನ್ಯವು ನಗರವನ್ನು ಸುತ್ತುವರಿದಿರುವುದನ್ನು ನೋಡಿದನು!

ಆ ಸೇವಕನು ಎಲೀಷನಿಗೆ, “ಅಯ್ಯೋ, ನನ್ನ ಒಡೆಯನೇ, ನಾವು ಈಗ ಏನು ಮಾಡೋಣ?” ಎಂದು ಕೇಳಿದನು.

16 ಎಲೀಷನು, “ನೀನು ಹೆದರದಿರು! ನಮಗಾಗಿ ಯುದ್ಧಮಾಡುವ ಸೇನೆಯು ಅರಾಮ್ಯರಿಗಾಗಿ ಯುದ್ಧಮಾಡುವ ಸೇನೆಗಿಂತ ಬಹಳ ಹೆಚ್ಚಿನದಾಗಿದೆ!” ಎಂದು ಹೇಳಿದನು.

17 ನಂತರ ಎಲೀಷನು ಪ್ರಾರ್ಥಿಸುತ್ತಾ, “ಯೆಹೋವನೇ, ನನ್ನ ಸೇವಕನ ಕಣ್ಣುಗಳನ್ನು ತೆರೆದು ಅವನು ನೋಡುವಂತೆ ಮಾಡೆಂದು ನಾನು ನಿನ್ನನ್ನು ಬೇಡಿಕೊಳ್ಳುತ್ತೇನೆ” ಎಂದು ಹೇಳಿದನು.

ಯೆಹೋವನು ಸೇವಕನ ಕಣ್ಣುಗಳನ್ನು ತೆರೆದನು. ಆ ಸೇವಕನು ಪರ್ವತವನ್ನು ತುಂಬಿರುವ ಬೆಂಕಿಯಂತಿರುವ ಕುದುರೆಗಳನ್ನು ಮತ್ತು ರಥಗಳನ್ನು ನೋಡಿದನು. ಅವರೆಲ್ಲ ಎಲೀಷನ ಸುತ್ತಲೂ ಇದ್ದರು!

18 ಆ ಬೆಂಕಿಯಂತಿರುವ ಕುದುರೆಗಳು ಮತ್ತು ರಥಗಳು ಎಲೀಷನ ಬಳಿಗೆ ಇಳಿದುಬಂದವು. ಎಲೀಷನು ಯೆಹೋವನನ್ನು ಪ್ರಾರ್ಥಿಸಿ, “ಈ ಜನರನ್ನು ಕುರುಡರನ್ನಾಗಿ ಮಾಡಬೇಕೆಂದು ನಾನು ನಿನ್ನಲ್ಲಿ ಪ್ರಾರ್ಥಿಸುತ್ತೇನೆ” ಎಂದು ಹೇಳಿದನು.

ಆಗ ಯೆಹೋವನು ಎಲೀಷನ ಪ್ರಾರ್ಥನೆಯಂತೆ ಅರಾಮ್ಯರ ಸೇನೆಯು ಕುರುಡರಾಗುವಂತೆ ಮಾಡಿದನು. 19 ಎಲೀಷನು ಅರಾಮ್ಯರ ಸೇನೆಗೆ, “ಇದು ಸರಿಯಾದ ಮಾರ್ಗವಲ್ಲ, ಇದು ಸರಿಯಾದ ನಗರವೂ ಅಲ್ಲ. ನನ್ನನ್ನು ಹಿಂಬಾಲಿಸಿ. ನೀವು ಹುಡುಕುತ್ತಿರುವ ಮನುಷ್ಯನ ಬಳಿಗೆ ನಾನು ನಿಮ್ಮನ್ನು ಕರೆದೊಯ್ಯುತ್ತೇನೆ” ಎಂದು ಹೇಳಿದನು. ನಂತರ ಎಲೀಷನು ಅರಾಮ್ಯರ ಸೇನೆಯನ್ನು ಸಮಾರ್ಯಕ್ಕೆ ನಡೆಸಿಕೊಂಡು ಬಂದನು.

20 ಅವರು ಸಮಾರ್ಯಕ್ಕೆ ಬಂದು ಸೇರಿದಾಗ ಎಲೀಷನು, “ಯೆಹೋವನೇ, ಈ ಜನರ ಕಣ್ಣುಗಳನ್ನು ತೆರೆದುಬಿಡು, ಅವರು ನೋಡಲಿ” ಎಂದು ಹೇಳಿದನು.

ಆಗ ಯೆಹೋವನು ಅವರ ಕಣ್ಣುಗಳನ್ನು ತೆರೆದನು. ಅರಾಮ್ಯರ ಸೇನೆಗೆ ತಾವು ಸಮಾರ್ಯ ನಗರದಲ್ಲಿರುವುದು ತಿಳಿದುಬಂತು! 21 ಅರಾಮ್ಯರ ಸೇನೆಯನ್ನು ಇಸ್ರೇಲಿನ ರಾಜನು ನೋಡಿ ಎಲೀಷನಿಗೆ, “ನನ್ನ ತಂದೆಯೇ, ನಾನು ಅವರನ್ನು ಕೊಲ್ಲಲೇ? ಅವರನ್ನು ಕೊಂದುಹಾಕಿಬಿಡಲೇ?” ಎಂದು ಕೇಳಿದನು.

22 ಎಲೀಷನು, “ಬೇಡ, ಅವರನ್ನು ಕೊಲ್ಲಬೇಡ. ನೀನು ಯುದ್ಧದಲ್ಲಿ, ನಿನ್ನ ಖಡ್ಗದಿಂದ, ನಿನ್ನ ಬಿಲ್ಲುಬಾಣಗಳಿಂದ ಸೆರೆಹಿಡಿದ ಜನರನ್ನು ಕೊಲ್ಲಬಾರದು, ಅರಾಮ್ಯರ ಸೇನೆಗೆ ಸ್ವಲ್ಪ ನೀರನ್ನು ಮತ್ತು ರೊಟ್ಟಿಗಳನ್ನು ಕೊಡು. ಅವರು ತಿಂದು, ನೀರು ಕುಡಿಯಲಿ. ನಂತರ ಅವರು ತಮ್ಮ ಮನೆಗೆ, ಅವರ ಒಡೆಯನ ಬಳಿಗೆ ಹೋಗಲಿ” ಎಂದು ಉತ್ತರಿಸಿದನು.

23 ಇಸ್ರೇಲಿನ ರಾಜನು ಅರಾಮ್ಯರ ಸೇನೆಗೆ ಆಹಾರವನ್ನು ಹೇರಳವಾಗಿ ಸಿದ್ಧಪಡಿಸಿದನು. ಅರಾಮ್ಯರ ಸೇನೆಯು ಊಟಮಾಡಿ, ನೀರನ್ನು ಕುಡಿದರು. ನಂತರ ಇಸ್ರೇಲಿನ ರಾಜನು ಅರಾಮ್ಯರ ಸೇನೆಗೆ ತಮ್ಮ ಒಡೆಯನ ಬಳಿಗೆ ಹೋಗಲು ಆಜ್ಞಾಪಿಸಿದನು. ಅಂದಿನಿಂದ ಇಸ್ರೇಲ್ ದೇಶದ ಮೇಲೆ ಧಾಳಿಮಾಡಲು ಯಾವ ಸೈನಿಕರನ್ನೂ ಅರಾಮ್ಯರು ಕಳುಹಿಸಲಿಲ್ಲ.

ಸಮಾರ್ಯದಲ್ಲಿ ಭೀಕರ ಬರಗಾಲ

24 ಇದಾದನಂತರ, ಅರಾಮ್ಯರ ರಾಜನಾದ ಬೆನ್ಹದದನು ತನ್ನ ಸೇನೆಯನ್ನೆಲ್ಲ ಒಟ್ಟಾಗಿ ಸೇರಿಸಿಕೊಂಡು, ಸಮಾರ್ಯವನ್ನು ಸುತ್ತುವರಿದು ಆಕ್ರಮಣಮಾಡಲು ಹೋದನು. 25 ಜನರು ನಗರದೊಳಕ್ಕೆ ಆಹಾರವನ್ನು ತರಲು ಸೈನಿಕರು ಅವಕಾಶ ಕೊಡಲಿಲ್ಲ. ಆದ್ದರಿಂದ ಸಮಾರ್ಯದಲ್ಲಿ ಭೀಕರ ಬರಗಾಲವು ಆ ಕಾಲದಲ್ಲಾಯಿತು. ಸಮಾರ್ಯದಲ್ಲಿ ಒಂದು ಹೇಸರಕತ್ತೆಯ ತಲೆಯು ಎಂಭತ್ತು ಬೆಳ್ಳಿಯ ನಾಣ್ಯಗಳಿಗೆ ಮಾರಾಟವಾಗುವಷ್ಟು ಕೆಟ್ಟ ಪರಿಸ್ಥಿತಿಯಿತ್ತು. ಅರ್ಧಸೇರು ಪಾರಿವಾಳದ ಮಲದ ಲದ್ದಿಯು ಐದು ಬೆಳ್ಳಿನಾಣ್ಯಗಳಿಗೆ ಮಾರಾಟವಾಗುತ್ತಿತ್ತು.

26 ಇಸ್ರೇಲಿನ ರಾಜನು ನಗರದ ಸುತ್ತಲಿನ ಗೋಡೆಯ ಮೇಲೆ ನಡೆಯುತ್ತಿರಲು ಸ್ತ್ರೀಯೊಬ್ಬಳು ಅವನನ್ನು, “ನನ್ನ ಪ್ರಭುವೇ, ರಾಜನೇ, ದಯವಿಟ್ಟು ನನಗೆ ಸಹಾಯಮಾಡು” ಎಂದು ಕೂಗಿಕೊಂಡಳು.

27 ಇಸ್ರೇಲಿನ ರಾಜನು, “ಯೆಹೋವನು ನಿನಗೆ ಸಹಾಯ ಮಾಡದಿದ್ದರೆ, ನಾನು ನಿನಗೆ ಹೇಗೆ ಸಹಾಯ ಮಾಡಲಿ? ನಿನಗೆ ಕೊಡಲು ನನ್ನ ಬಳಿ ಏನೂ ಇಲ್ಲ; ಕಣದಲ್ಲಿ ಕಾಳುಗಳಿಲ್ಲ, ದ್ರಾಕ್ಷಿಯ ಆಲೆಯಲ್ಲಿ ದ್ರಾಕ್ಷಾರಸವಿಲ್ಲ” ಎಂದನು. 28 ನಂತರ ಇಸ್ರೇಲಿನ ರಾಜನು ಆ ಸ್ತ್ರೀಗೆ, “ನಿನ್ನ ತೊಂದರೆಯೇನು?” ಎಂದು ಕೇಳಿದನು.

ಆ ಸ್ತ್ರೀಯು, “ಇವಳು ನನಗೆ, ‘ನಿನ್ನ ಮಗನನ್ನು ನನಗೆ ಕೊಡು. ನಾವು ಅವನನ್ನು ಕೊಂದು, ಈ ಹೊತ್ತು ತಿನ್ನೋಣ. ನಾಳೆ ನನ್ನ ಮಗನನ್ನು ತಿನ್ನೋಣ’ ಎಂದಳು. 29 ನಾವು ನನ್ನ ಮಗನನ್ನು ಬೇಯಿಸಿ, ನಾವು ತಿಂದು ಬಿಟ್ಟೆವು. ಮಾರನೆಯ ದಿನ ನಾನು ಈ ಸ್ತ್ರೀಗೆ, ‘ನಿನ್ನ ಮಗನನ್ನು ನಾವು ಕೊಂದು ತಿನ್ನೋಣ’ ಎಂದು ಹೇಳಿದೆನು. ಆದರೆ ಅವಳು ತನ್ನ ಮಗನನ್ನು ಅಡಗಿಸಿಟ್ಟಿದ್ದಾಳೆ!” ಎಂದು ಹೇಳಿದಳು.

30 ಆ ಸ್ತ್ರೀಯ ಮಾತುಗಳನ್ನು ರಾಜನು ಕೇಳಿದಾಗ, ದುಃಖದಿಂದ ತನ್ನ ಬಟ್ಟೆಗಳನ್ನೆಲ್ಲಾ ಹರಿದುಕೊಂಡನು. ಅವನ ಮೈಮೇಲೆ ಗೋಣಿತಟ್ಟಿರುವುದು ಜನರಿಗೆಲ್ಲಾ ಕಾಣಿಸಿತು.

31 ಇದಲ್ಲದೆ ರಾಜನು, “ಈ ದಿನದ ಅಂತ್ಯದೊಳಗೆ ನಾನು ಶಾಫಾಟನ ಮಗನಾದ ಎಲೀಷನ ತಲೆಯನ್ನು ಅವನ ದೇಹದ ಮೇಲೆ ಉಳಿಯುವಂತೆ ಮಾಡಿದರೆ ದೇವರು ನನ್ನನ್ನು ದಂಡಿಸಲಿ!” ಎಂದು ಹೇಳಿದನು.

32 ರಾಜನು ಎಲೀಷನ ಬಳಿಗೆ ಒಬ್ಬ ಸಂದೇಶಕನನ್ನು ಕಳುಹಿಸಿದನು. ಎಲೀಷನು ತನ್ನ ಮನೆಯಲ್ಲಿ ಕುಳಿತಿದ್ದನು; ಹಿರಿಯರು ಅವನೊಂದಿಗೆ ಕುಳಿತಿದ್ದರು. ಸಂದೇಶಕನು ಬರುವುದಕ್ಕೆ ಮುಂಚೆಯೇ ಎಲೀಷನು ಹಿರಿಯರಿಗೆ, “ನೋಡಿ, ನನ್ನ ತಲೆಯನ್ನು ಕತ್ತರಿಸಿಹಾಕಲು ಕೊಲೆಗಾರನ (ಇಸ್ರೇಲಿನ ರಾಜ) ಮಗ ಜನರನ್ನು ಕಳುಹಿಸಿದ್ದಾನೆ! ಆ ಸಂದೇಶಕನು ಬಂದಾಗ ಬಾಗಿಲನ್ನು ಮುಚ್ಚಿಬಿಡಿ! ಅವನು ಒಳಗೆ ಪ್ರವೇಶಿಸದಂತೆ ಬಾಗಿಲನ್ನು ಹಿಡಿದುಕೊಳ್ಳಿ! ಅವನ ಹಿಂದೆ ಬರುತ್ತಿರುವ ಅವನ ಒಡೆಯನ ಕಾಲ ಸಪ್ಪಳವು ನನಗೆ ಕೇಳಿಸುತ್ತಿದೆ!” ಎಂದು ಹೇಳಿದನು.

33 ಎಲೀಷನು ಹಿರಿಯರೊಂದಿಗೆ ಇನ್ನೂ ಮಾತನಾಡುತ್ತಿರುವಾಗ ಸಂದೇಶಕನು ಅವನ ಬಳಿಗೆ ಬಂದನು. ಅವನ ಸಂದೇಶವು ಹೀಗಿತ್ತು: “ಈ ಆಪತ್ತು ಯೆಹೋವನಿಂದಲೇ ಬಂದಿದೆ! ನಾನೇಕೆ ಆತನನ್ನು ನಿರೀಕ್ಷಿಸಿಕೊಂಡಿರಬೇಕು?”

1 ತಿಮೊಥೆಯನಿಗೆ 3

ಸಭಾನಾಯಕರು

ನಾನು ಹೇಳುವ ಈ ಸಂಗತಿ ಸತ್ಯವಾದದ್ದು. ಅದೇನೆಂದರೆ, ಸಭಾಧ್ಯಕ್ಷನಾಗಲು ಬಹಳವಾಗಿ ಪ್ರಯತ್ನಿಸುವವನು ಒಳ್ಳೆಯ ಕೆಲಸವನ್ನೇ ಅಪೇಕ್ಷಿಸುವವನಾಗಿದ್ದಾನೆ. ಅವನು ಜನರ ಟೀಕೆಗೆ ಒಳಗಾಗದಷ್ಟು ಉತ್ತಮನಾಗಿರಬೇಕು. ಅವನಿಗೆ ಒಬ್ಬಳೇ ಪತ್ನಿಯಿರಬೇಕು. ಅವನು ಜಿತೇಂದ್ರಿಯನೂ ಜ್ಞಾನಿಯೂ ಆಗಿರಬೇಕು; ಜನರ ಗೌರವಕ್ಕೆ ಪಾತ್ರನಾಗಿರಬೇಕು; ಜನರನ್ನು ತನ್ನ ಮನೆಗೆ ಸ್ವಾಗತಿಸಿ ಅವರಿಗೆ ಸಹಾಯ ಮಾಡಲು ಸಿದ್ಧನಾಗಿರಬೇಕು; ಒಳ್ಳೆಯ ಉಪದೇಶಕನಾಗಿರಬೇಕು; ಮದ್ಯಪಾನದಲ್ಲಿ ಆಸ್ತಕನಾಗಿರಬಾರದು ಮತ್ತು ಹಿಂಸಾತ್ಮಕನಾಗಿರಬಾರದು. ಅವನು ಸಾತ್ವಿಕನೂ ಶಾಂತನೂ ಆಗಿರಬೇಕು; ಹಣದಾಸೆ ಉಳ್ಳವನಾಗಿರಬಾರದು. ಅವನು ತನ್ನ ಸ್ವಂತ ಕುಟುಂಬಕ್ಕೆ ಒಳ್ಳೆಯ ನಾಯಕನಾಗಿರಬೇಕು. ಅವನ ಮಕ್ಕಳು ಅವನಿಗೆ ವಿಧೇಯರಾಗಿದ್ದು ಪೂರ್ಣ ಗೌರವವನ್ನು ನೀಡುವಂತಿರಬೇಕೆಂಬುದು ಇದರ ಅರ್ಥ. (ತನ್ನ ಸ್ವಂತ ಕುಟುಂಬವನ್ನು ಆಳಲು ತಿಳಿಯದವನು ದೇವರ ಸಭೆಯನ್ನು ಪರಾಮರಿಸಲು ಸಮರ್ಥನಲ್ಲ.)

ಅವನು ಹೊಸ ವಿಶ್ವಾಸಿಯಾಗಿರಬಾರದು. ಹೊಸ ವಿಶ್ವಾಸಿಯನ್ನು ಸಭಾಧ್ಯಕ್ಷನನ್ನಾಗಿ ಮಾಡಿದರೆ, ಅವನು ಗರ್ವಿಷ್ಠನಾಗುವನು. ಸೈತಾನನು ತನ್ನ ಗರ್ವದ ನಿಮಿತ್ತ ಶಿಕ್ಷೆಗೆ ಒಳಗಾದಂತೆ ಇವನೂ ಶಿಕ್ಷೆಗೆ ಗುರಿಯಾಗುವನು. ಸಭಾಧ್ಯಕ್ಷನು ಸಭೆಯಲ್ಲಿಲ್ಲದ ಜನರ ಗೌರವಕ್ಕೆ ಸಹ ಪಾತ್ರನಾಗಿರಬೇಕು. ಆಗ ಅವನು ಇತರರ ಟೀಕೆಗೆ ಗುರಿಯಾಗುವುದೂ ಇಲ್ಲ, ಸೈತಾನನ ವಂಚನೆಗೆ ಸಿಕ್ಕಿಬೀಳುವುದೂ ಇಲ್ಲ.

ವಿಶೇಷ ಸೇವಕರು

ಅದೇ ರೀತಿಯಲ್ಲಿ ಸಭೆಯಲ್ಲಿ ವಿಶೇಷ ಸೇವಕರಾದವರು ತಮ್ಮ ನಡತೆಯ ನಿಮಿತ್ತ ಇತರರಿಂದ ಗೌರವ ಹೊಂದಿದವರಾಗಿರಬೇಕು. ಯಥಾರ್ಥವಾಗಿ ಮಾತಾಡುವಂಥವರಾಗಿರಬೇಕು. ಅವರು ಮದ್ಯಪಾನದಲ್ಲಿ ಆಸ್ತಕರಾಗಿದ್ದು ತಮ್ಮ ಕಾಲವನ್ನು ಕಳೆಯುವವರಾಗಿರಬಾರದು; ಯಾವಾಗಲೂ ಇತರರನ್ನು ಮೋಸಗೊಳಿಸಿ ಶ್ರೀಮಂತರಾಗಲು ಪ್ರಯತ್ನಿಸುವವರಾಗಿರಬಾರದು; ದೇವರು ನಮಗೆ ತಿಳಿಸಿಕೊಟ್ಟ ಸತ್ಯವನ್ನು ಶುದ್ಧ ಮನಸ್ಸಾಕ್ಷಿಯಿಂದ ಮಾಡುವವರಾಗಿರಬೇಕು. 10 ಅವರನ್ನು ನೀನು ಮೊದಲು ಪರೀಕ್ಷಿಸು. ಅವರು ಕಳಂಕರಹಿತರಾಗಿದ್ದರೆ, ಸೇವಕರಾಗಿ ಸೇವೆ ಮಾಡಬಹುದು.

11 ಇದೇ ರೀತಿಯಲ್ಲಿ ಸಭಾಸೇವಕಿಯರಾದ ಸ್ತ್ರೀಯರು ಜನರ ಗೌರವಕ್ಕೆ ಪಾತ್ರರಾಗಿರಬೇಕು. ಅವರು ಇತರ ಜನರ ಬಗ್ಗೆ ಕೆಟ್ಟದ್ದನ್ನು ಹೇಳುವಂಥವರಾಗಿರಬಾರದು. ಅವರು ತಮ್ಮನ್ನು ಹತೋಟಿಯಲ್ಲಿ ಇಟ್ಟುಕೊಂಡಿರಬೇಕು; ಎಲ್ಲಾ ವಿಷಯಗಳಲ್ಲಿಯೂ ನಂಬಿಗಸ್ತರಾಗಿರಬೇಕು.

12 ಸಭಾಸೇವಕರು ಏಕ ಪತ್ನಿ ಉಳ್ಳವರಾಗಿರಬೇಕು. ಅವರು ತಮ್ಮ ಮಕ್ಕಳಿಗೆ ಮತ್ತು ಕುಟುಂಬಕ್ಕೆ ಒಳ್ಳೆಯ ನಾಯಕರಾಗಿರಬೇಕು. 13 ಯೋಗ್ಯ ಮಾರ್ಗದಲ್ಲಿ ಸೇವೆ ಮಾಡುವ ಜನರು ತಮಗೆ ಗೌರವಯುತವಾದ ಸ್ಥಾನವನ್ನು ಪಡೆಯುವರು. ಕ್ರಿಸ್ತ ಯೇಸುವಿನಲ್ಲಿ ತಮಗಿರುವ ನಂಬಿಕೆಯ ವಿಷಯದಲ್ಲಿ ಅವರು ಭರವಸೆ ಉಳ್ಳವರಾಗಿರುತ್ತಾರೆ.

ನಮ್ಮ ಜೀವನದ ರಹಸ್ಯ

14 ನಾನು ನಿನ್ನ ಬಳಿಗೆ ಬಹುಬೇಗ ಬರುವೆನೆಂಬ ಭರವಸೆ ನನಗಿದೆ. ಆದರೆ ಈಗ ನಾನು ಈ ಸಂಗತಿಗಳನ್ನು ಬರೆಯುತ್ತಿದ್ದೇನೆ. 15 ನಂತರ ನಾನು ನಿನ್ನ ಬಳಿಗೆ ಬೇಗ ಬಾರದೆ ಇದ್ದರೂ, ದೇವರ ಮನೆಯಲ್ಲಿ ಜನರು ಮಾಡಲೇಬೇಕಾದ ಕಾರ್ಯಗಳ ಬಗ್ಗೆ ನಿನಗೆ ತಿಳಿದಿದೆ. ಆ ಮನೆಯು ಜೀವಂತ ದೇವರ ಸಭೆ. ಅದು ಸತ್ಯದ ಅಡಿಪಾಯವೂ ಆಧಾರವೂ ಆಗಿದೆ. 16 ನಿಸ್ಸಂದೇಹವಾಗಿಯೂ ನಮ್ಮ ಆರಾಧನಾ ಜೀವಿತದ ರಹಸ್ಯವು ಮಹೋನ್ನತವಾದದ್ದು:

ಕ್ರಿಸ್ತನು ಮಾನವ ದೇಹದಲ್ಲಿ ನಮಗೆ ಪ್ರತ್ಯಕ್ಷನಾದನು.
ಆತನೇ ಕ್ರಿಸ್ತನೆಂದು ಪವಿತ್ರಾತ್ಮನು ನಿರೂಪಿಸಿದನು.
ದೇವದೂತರಿಗೆ ಆತನು ಕಾಣಿಸಿಕೊಂಡನು.
ಆತನನ್ನು ಕುರಿತ ಸುವಾರ್ತೆಯನ್ನು ಜನಾಂಗಗಳವರಿಗೆಲ್ಲ (ಯೆಹೂದ್ಯರಲ್ಲದವರಿಗೆ) ಪ್ರಸಿದ್ಧಿಪಡಿಸಲಾಯಿತು.
ಲೋಕದಲ್ಲಿರುವ ಜನರು ಆತನಲ್ಲಿ ನಂಬಿಕೆಯಿಟ್ಟರು.
ಆತನು ಮಹಿಮೆಯೊಂದಿಗೆ ಪರಲೋಕಕ್ಕೆ ಎತ್ತಲ್ಪಟ್ಟನು.

ದಾನಿಯೇಲ 10

ಟೈಗ್ರಿಸ್ ನದಿಯ ದಡದಲ್ಲಿ ದಾನಿಯೇಲನ ದರ್ಶನ

10 ಕೋರೆಷನು ಪಾರಸಿಯ ರಾಜನಾಗಿದ್ದನು. ಕೋರೆಷನ ಆಳ್ವಿಕೆಯ ಮೂರನೆಯ ವರ್ಷದಲ್ಲಿ ದಾನಿಯೇಲನಿಗೆ ಒಂದು ಸಂಗತಿಯು ಪ್ರಕಟವಾಯಿತು. (ದಾನಿಯೇಲನ ಇನ್ನೊಂದು ಹೆಸರು ಬೇಲ್ತೆಶಚ್ಚರ.) ಈ ಸಂಗತಿ ಸತ್ಯವಾದುದು; ಆದರೆ ತಿಳಿದುಕೊಳ್ಳಲು ಬಹಳ ಕಷ್ಟಕರವಾಗಿತ್ತು. ದಾನಿಯೇಲನು ಈ ಸಂಗತಿಯನ್ನು ತಿಳಿದುಕೊಂಡನು. ಒಂದು ದರ್ಶನದಲ್ಲಿ ಅದರ ಬಗ್ಗೆ ಅವನಿಗೆ ವಿವರಿಸಲಾಯಿತು.

ದಾನಿಯೇಲನು ಹೇಳುವುದೇನೆಂದರೆ: ಆ ಸಮಯದಲ್ಲಿ ದಾನಿಯೇಲನೆಂಬ ನಾನು ಮೂರು ವಾರ ಶೋಕದಲ್ಲಿದ್ದೆನು. ಆ ಮೂರು ವಾರಗಳಲ್ಲಿ ನಾನು ಇಷ್ಟಪಡುತ್ತಿದ್ದ ಆಹಾರವನ್ನು ತಿನ್ನಲಿಲ್ಲ; ಮಾಂಸಾಹಾರವನ್ನು ಸೇವಿಸಲಿಲ್ಲ; ದ್ರಾಕ್ಷಾರಸವನ್ನು ಕುಡಿಯಲಿಲ್ಲ; ತಲೆಗೆ ಎಣ್ಣೆಯನ್ನು ಹಾಕಿಕೊಳ್ಳಲಿಲ್ಲ. ಮೂರು ವಾರಗಳವರೆಗೆ ಇದೆಲ್ಲವನ್ನು ನಾನು ನಿಲ್ಲಿಸಿಬಿಟ್ಟೆ.

ವರ್ಷದ ಮೊದಲನೆ ತಿಂಗಳ ಇಪ್ಪತ್ನಾಲ್ಕನೆಯ ದಿನದಲ್ಲಿ ನಾನು ಟೈಗ್ರಿಸ್ ಮಹಾನದಿಯ, ದಡದಲ್ಲಿ ನಿಂತುಕೊಂಡಿದ್ದೆ. ಅಲ್ಲಿ ನಿಂತುಕೊಂಡಿದ್ದಾಗ ನಾನು ಮುಖವೆತ್ತಿ ನೋಡಿದೆ. ನನ್ನ ಎದುರಿಗೆ ಒಬ್ಬ ವ್ಯಕ್ತಿಯು ನಿಂತಿದ್ದನ್ನು ಕಂಡೆ. ಅವನು ನಾರುಬಟ್ಟೆಯನ್ನು ಧರಿಸಿಕೊಂಡಿದ್ದನು. ಅವನು ಊಫಜಿನ ಅಪರಂಜಿಯ ಪಟ್ಟಿಯನ್ನು ಸೊಂಟಕ್ಕೆ ಬಿಗಿದುಕೊಂಡಿದ್ದನು. ಅವನ ಶರೀರವು ಪ್ರಕಾಶಮಾನವಾದ ವಜ್ರದಂತೆ ಇತ್ತು. ಅವನ ಮುಖವು ಕೋಲ್ಮಿಂಚಿನಂತೆ ಹೊಳೆಯುತ್ತಿತ್ತು. ಅವನ ಕಣ್ಣುಗಳು ಬೆಂಕಿಯ ಪಂಜುಗಳಂತಿದ್ದವು. ಅವನ ಕೈಕಾಲುಗಳು ಉಜ್ಜಿದ ಹಿತ್ತಾಳೆಯಂತೆ ಝಗಝಗಿಸುತ್ತಿದ್ದವು. ಅವನ ಧ್ವನಿಯು ಜನಜಂಗುಳಿಯ ಧ್ವನಿಯಂತೆ ದೊಡ್ಡದಾಗಿತ್ತು.

ದಾನಿಯೇಲನೆಂಬ ನನಗೆ ಮಾತ್ರ ಆ ದರ್ಶನವಾಯಿತು. ನನ್ನ ಜೊತೆಯಲ್ಲಿದ್ದವರಿಗೆ ಆ ದರ್ಶನ ಕಾಣಿಸಲಿಲ್ಲವಾದರೂ ಅವರು ಭಯಪಟ್ಟರು. ಅವರು ಭಯದಿಂದ ಓಡಿಹೋಗಿ ಅಡಗಿಕೊಂಡರು. ನಾನೊಬ್ಬನೇ ಅಲ್ಲಿದ್ದೆ. ನಾನು ಆ ದರ್ಶನವನ್ನು ನೋಡುತ್ತಲೇ ಇದ್ದೆ. ಅದರಿಂದ ನನಗೆ ಭಯವಾಯಿತು. ನಾನು ದುರ್ಬಲನಾದೆ. ನನ್ನ ಮುಖವು ಸತ್ತವರ ಮುಖದಂತೆ ಬಿಳುಪೇರಿತು; ನಾನು ನಿಸ್ಸಹಾಯಕನಾದೆ. ದರ್ಶನದಲ್ಲಿ ಕಾಣಿಸಿಕೊಂಡ ಮನುಷ್ಯನು ಮಾತನಾಡುವದನ್ನು ನಾನು ಕೇಳಿದೆ. ಅವನ ಧ್ವನಿಯನ್ನು ಕೇಳಿದ ಕೂಡಲೇ ನಾನು ಬೋರಲುಬಿದ್ದು ಗಾಢವಾದ ನಿದ್ರೆಯಲ್ಲಿ ಮುಳುಗಿದೆ.

10 ಆಗ ಒಂದು ಕೈ ನನ್ನನ್ನು ಮುಟ್ಟಿತು. ನಾನು ಮೊಣಕಾಲುಗಳನ್ನು ಮತ್ತು ಅಂಗೈಗಳನ್ನು ನೆಲಕ್ಕೆ ಊರಿ ಬಾಗಿ ನಿಂತುಕೊಂಡೆ. ನಾನು ಭಯದಿಂದ ನಡುಗುತ್ತಿದ್ದೆ. 11 ದರ್ಶನದಲ್ಲಿ ಕಾಣಿಸಿಕೊಂಡ ಮನುಷ್ಯನು ನನಗೆ, “ದಾನಿಯೇಲನೇ, ದೇವರು ನಿನ್ನನ್ನು ತುಂಬ ಪ್ರೀತಿಸುತ್ತಾನೆ. ನಾನು ನಿನಗೆ ಈ ಮುಂದೆ ಹೇಳುವ ಮಾತುಗಳ ಬಗ್ಗೆ ಚೆನ್ನಾಗಿ ವಿಚಾರಮಾಡು. ಎದ್ದುನಿಲ್ಲು, ನನ್ನನ್ನು ನಿನ್ನ ಬಳಿಗೆ ಕಳುಹಿಸಲಾಗಿದೆ” ಎಂದು ಹೇಳಿದನು. ಆಗ ನಾನು ಎದ್ದುನಿಂತೆ. ನಾನು ಭಯದಿಂದ ಇನ್ನೂ ನಡುಗುತ್ತಿದ್ದೆ. 12 ಆಮೇಲೆ ದರ್ಶನದಲ್ಲಿನ ಆ ಮನುಷ್ಯನು ಪುನಃ ಮಾತನಾಡಲು ಪ್ರಾರಂಭಿಸಿದನು. ಅವನು, “ದಾನಿಯೇಲನೇ, ಭಯಪಡಬೇಡ. ನೀನು ಜ್ಞಾನಸಂಪಾದನೆ ಮಾಡಬೇಕೆಂದೂ ದೇವರೆದುರಿಗೆ ಭಕ್ತಿವಿನಯಗಳಿಂದ ವರ್ತಿಸಬೇಕೆಂದೂ ತೀರ್ಮಾನಿಸಿದ ಮೊದಲ ದಿನದಿಂದಲೇ ಆತನು ನಿನ್ನ ಪ್ರಾರ್ಥನೆಗಳನ್ನು ಆಲಿಸುತ್ತಿದ್ದಾನೆ. ನೀನು ಪ್ರಾರ್ಥನೆ ಮಾಡಿದ್ದರಿಂದಲೇ ನಾನು ಇಲ್ಲಿಗೆ ಬಂದೆನು. 13 ಆದರೆ ಪಾರಸಿಯ ರಾಜ್ಯದ ದಿವ್ಯಪಾಲಕನು ನನ್ನೊಂದಿಗೆ ಕಳೆದ ಇಪ್ಪತ್ತೊಂದು ದಿನಗಳಿಂದ ಹೋರಾಡುತ್ತಿದ್ದನು; ನನಗೆ ತೊಂದರೆ ಕೊಡುತ್ತಿದ್ದನು. ಆಗ ಪ್ರಧಾನ ದಿವ್ಯಪಾಲಕರಲ್ಲೊಬ್ಬನಾದ ಮಿಕಾಯೇಲನು ನನ್ನ ಸಹಾಯಕ್ಕೆ ಬಂದನು. ನಾನು ಅಲ್ಲಿ ಪಾರಸಿಯ ರಾಜನ ಹತ್ತಿರ ಸಿಕ್ಕಿಹಾಕಿಕೊಂಡಿದ್ದೆ. 14 ದಾನಿಯೇಲನೇ, ಭವಿಷ್ಯದಲ್ಲಿ ನಿನ್ನ ಜನರಿಗೆ ಏನಾಗುವದೆಂಬುದನ್ನು ನಿನಗೆ ವಿವರಿಸಲು ನಾನು ಈಗ ಇಲ್ಲಿಗೆ ಬಂದೆನು. ಈ ಕನಸು ಭವಿಷ್ಯದ ಒಂದು ಕಾಲದ ಕುರಿತಾಗಿದೆ” ಎಂದು ಹೇಳಿದನು.

15 ಆ ಪುರುಷನು ನನ್ನೊಂದಿಗೆ ಮಾತನಾಡುತ್ತಿದ್ದಾಗ ನಾನು ನೆಲವನ್ನು ನೋಡುತ್ತಾ ಬಾಗಿಕೊಂಡಿದ್ದೆ. ಮಾತನಾಡಲು ನನ್ನಿಂದ ಸಾಧ್ಯವಾಗಲಿಲ್ಲ. 16 ಆಗ ಮನುಷ್ಯಕುಮಾರನಂತಿರುವವನು ನನ್ನ ತುಟಿಗಳನ್ನು ಸ್ಪರ್ಶಿಸಿದನು. ನಾನು ಬಾಯಿ ತೆರೆದು ಮಾತನಾಡಲು ಪ್ರಾರಂಭಿಸಿದೆ. ನನ್ನ ಎದುರಿಗೆ ನಿಂತುಕೊಂಡಿದ್ದವನಿಗೆ, “ಸ್ವಾಮಿ, ದರ್ಶನದಲ್ಲಿ ನೋಡಿದ ಸಂಗತಿಗಳಿಂದ ನಾನು ಚಿಂತಾಕ್ರಾಂತನಾಗಿದ್ದೇನೆ; ಅಂಜಿಕೊಂಡಿದ್ದೇನೆ; ನಿಸ್ಸಹಾಯಕನಾಗಿದ್ದೇನೆ. 17 ಸ್ವಾಮೀ, ನಾನು ನಿಮ್ಮ ಸೇವಕನಾದ ದಾನಿಯೇಲ. ನಾನು ನಿಮ್ಮ ಸಂಗಡ ಹೇಗೆ ಮಾತನಾಡಲಿ. ನನಗೆ ಶಕ್ತಿಯೇ ಇಲ್ಲದಂತಾಗಿದೆ. ಉಸಿರಾಡುವುದೂ ಕಷ್ಟವಾಗಿದೆ” ಎಂದೆ.

18 ಆ ಮನುಷ್ಯಕುಮಾರನಂತಿರುವವನು ಪುನಃ ನನ್ನನ್ನು ಸ್ಪರ್ಶಿಸಿದನು. ಆತನು ನನ್ನನ್ನು ಸ್ಪರ್ಶಿಸಿದಾಗ ನನಗೆ ಉಪಶಮನವಾಯಿತು. 19 ಆಗ ಆತನು “ದಾನಿಯೇಲನೇ, ಭಯಪಡಬೇಡ. ದೇವರು ನಿನ್ನನ್ನು ತುಂಬ ಪ್ರೀತಿಸುತ್ತಾನೆ. ಸಮಾಧಾನ ತಂದುಕೊ. ಈಗ ನೀನು ಬಲಗೊಳ್ಳು, ಬಲಗೊಳ್ಳು” ಎಂದು ಹೇಳಿದನು.

ಆತನು ನನ್ನೊಂದಿಗೆ ಮಾತನಾಡಿದ ಮೇಲೆ ನನಗೆ ಬಲಬಂದಿತು. ಆಗ ನಾನು, “ಸ್ವಾಮೀ, ನೀವು ನನಗೆ ಬಲವನ್ನು ನೀಡಿದಿರಿ. ಈಗ ನೀವು ಮಾತನಾಡಬಹುದು” ಎಂದು ಹೇಳಿದೆ.

20 ಆಗ ಅವನು, “ದಾನಿಯೇಲನೇ, ನಾನು ಏಕೆ ಬಂದಿದ್ದೇನೆಂಬುದು ನಿನಗೆ ಗೊತ್ತಿಲ್ಲವೇ? ತಕ್ಷಣ ನಾನು ಪಾರಸಿಯ ರಾಜ್ಯದ ದಿವ್ಯಪಾಲಕನೊಂದಿಗೆ ಹೋರಾಡಲು ಹಿಂದಿರುಗಬೇಕು. ನಾನು ಹೋದಮೇಲೆ ಗ್ರೀಕ್ ರಾಜ್ಯದ ದಿವ್ಯಪಾಲಕನು ಬರುವನು. 21 ದಾನಿಯೇಲನೇ, ನಾನು ಹೋಗುವ ಮುಂಚೆ ‘ಸತ್ಯಶಾಸನ’ದಲ್ಲಿ ಏನು ಬರೆದಿದೆ ಎಂಬುದನ್ನು ನಿನಗೆ ಹೇಳುವೆನು. ಆ ದುಷ್ಟದೂತರೊಂದಿಗೆ ಹೋರಾಡುವಲ್ಲಿ ಮಿಕಾಯೇಲನ ಹೊರತು ನನಗೆ ಬೆಂಬಲವಾಗತಕ್ಕವರು ಇನ್ಯಾರೂ ಇಲ್ಲ. ಮಿಕಾಯೇಲನು ನಿಮ್ಮ ಜನರ ಪಾಲಕನಾಗಿದ್ದಾನೆ.

ಕೀರ್ತನೆಗಳು 119:1-24

119 ಯೆಹೋವನ ಧರ್ಮಶಾಸ್ತ್ರವನ್ನು ಅನುಸರಿಸುತ್ತಾ
    ಪವಿತ್ರರಾಗಿ ಜೀವಿಸುವವರು ಧನ್ಯರಾಗಿದ್ದಾರೆ.
ಆತನ ಒಡಂಬಡಿಕೆಗೆ ಸಂಪೂರ್ಣಹೃದಯದಿಂದ
    ವಿಧೇಯರಾಗುವವರು ಧನ್ಯರು.
ಅವರು ಕೆಟ್ಟದ್ದನ್ನು ಮಾಡದೆ
    ಆತನಿಗೆ ವಿಧೇಯರಾಗಿರುವರು.
ಯೆಹೋವನೇ, ನಮಗೆ ಆಜ್ಞೆಗಳನ್ನು ಕೊಟ್ಟವನೂ ನೀನೇ.
    ಅವುಗಳಿಗೆ ಸಂಪೂರ್ಣವಾಗಿ ವಿಧೇಯರಾಗಬೇಕೆಂದು ನಮಗೆ ಹೇಳಿದವನೂ ನೀನೇ.
ನಿನ್ನ ಕಟ್ಟಳೆಗಳಿಗೆ
    ನಾನು ಯಾವಾಗಲೂ ವಿಧೇಯನಾಗಿದ್ದರೆ,
ನಿನ್ನ ಆಜ್ಞೆಗಳನ್ನು ಕಲಿಯುವಾಗ
    ನನಗೆ ನಾಚಿಕೆಯಾಗದು.
ನಾನು ನಿನ್ನ ನ್ಯಾಯವನ್ನೂ
    ನೀತಿಯನ್ನೂ ಕಲಿತಂತೆಲ್ಲಾ ನಿನ್ನನ್ನು ಕೊಂಡಾಡುವೆನು.
ನಾನು ನಿನ್ನ ಕಟ್ಟಳೆಗಳಿಗೆ ವಿಧೇಯನಾಗಿದ್ದೇನೆ.
    ದಯವಿಟ್ಟು ನನ್ನನ್ನು ಕೈಬಿಡಬೇಡ!
ಯೌವನಸ್ಥನು ಪವಿತ್ರನಾಗಿ ಜೀವಿಸುವುದು ಯಾವುದರಿಂದ?
    ನಿನ್ನ ಆಜ್ಞೆಗಳಿಗೆ ವಿಧೇಯನಾಗುವುದರಿಂದಲೇ.
10 ನಾನು ಪೂರ್ಣಹೃದಯದಿಂದ ದೇವರ ಸೇವೆಮಾಡುವೆ;
    ದೇವರೇ, ನಿನ್ನ ಆಜ್ಞೆಗಳಿಗೆ ವಿಧೇಯನಾಗಲು ನನಗೆ ಸಹಾಯಮಾಡು.
11 ನಾನು ನಿನಗೆ ವಿರೋಧವಾಗಿ ಪಾಪಮಾಡದಂತೆ
    ನಿನ್ನ ಉಪದೇಶಗಳನ್ನು ಹೃದಯದಲ್ಲಿ ಇಟ್ಟುಕೊಂಡಿದ್ದೇನೆ.
12 ಯೆಹೋವನೇ, ನಿನಗೆ ಸ್ತೋತ್ರವಾಗಲಿ.
    ನಿನ್ನ ಕಟ್ಟಳೆಗಳನ್ನು ನನಗೆ ಉಪದೇಶಿಸು.
13 ನನ್ನ ತುಟಿಗಳು
    ನಿನ್ನ ಜ್ಞಾನದ ನಿರ್ಧಾರಗಳ ಕುರಿತು ವರ್ಣಿಸುತ್ತವೆ.
14 ಸಕಲ ಸಂಪತ್ತಿನಲ್ಲಿ ಹೇಗೋ
    ಹಾಗೆಯೇ ನಿನ್ನ ಒಡಂಬಡಿಕೆಯನ್ನು ಅಭ್ಯಾಸ ಮಾಡುವುದರಲ್ಲಿ ಆನಂದಿಸುವೆನು.
15 ನಾನು ನಿನ್ನ ನಿಯಮಗಳನ್ನು ಚರ್ಚಿಸುವೆನು
    ನಿನ್ನ ಜೀವಮಾರ್ಗವನ್ನು ಅನುಸರಿಸುವೆನು.
16 ನಾನು ನಿನ್ನ ಕಟ್ಟಳೆಗಳಲ್ಲಿ ಆನಂದಿಸುವೆನು,
    ನಿನ್ನ ಮಾತುಗಳನ್ನು ಮರೆಯುವುದಿಲ್ಲ.

17 ನಿನ್ನ ಸೇವಕನಾದ ನನಗೆ ದಯೆತೋರು.
    ಆಗ ನಾನು ಜೀವದಿಂದಿದ್ದು ನಿನ್ನ ಆಜ್ಞೆಗಳಿಗೆ ವಿಧೇಯನಾಗುವೆನು.
18 ನನ್ನ ಕಣ್ಣುಗಳನ್ನು ತೆರೆ, ಆಗ ನಾನು ನಿನ್ನ ಉಪದೇಶಗಳನ್ನು ಕಾಣುವೆ;
    ನೀನು ಮಾಡಿದ ಅದ್ಭುತಕಾರ್ಯಗಳ ಕುರಿತು ಓದುವೆ.
19 ನಾನು ಈ ದೇಶದಲ್ಲಿ ಅಪರಿಚಿತನಾಗಿದ್ದೇನೆ.
    ನಿನ್ನ ಆಜ್ಞೆಗಳನ್ನು ನನಗೆ ಮರೆಮಾಡಬೇಡ.
20 ನಿನ್ನ ನಿರ್ಧಾರಗಳನ್ನು ತಿಳಿದುಕೊಳ್ಳಲು
    ಯಾವಾಗಲೂ ನಾನು ಹಂಬಲಿಸುತ್ತಿದ್ದೇನೆ.
21 ನೀನು ಗರ್ವಿಷ್ಠರನ್ನು ಖಂಡಿಸುವೆ.
    ನಿನ್ನ ಆಜ್ಞೆಗಳಿಗೆ ವಿಧೇಯರಾಗದ ಅವರು ಶಾಪಗ್ರಸ್ತರಾಗಿದ್ದಾರೆ.
22 ನನ್ನನ್ನು ಅವಮಾನಕ್ಕೂ ನಾಚಿಕೆಗೂ ಗುರಿಮಾಡಬೇಡ.
    ನಾನು ನಿನ್ನ ಒಡಂಬಡಿಕೆಗೆ ವಿಧೇಯನಾಗಿದ್ದೇನೆ.
23 ನಾಯಕರುಗಳು ಸಹ ನನ್ನನ್ನು ದೂಷಿಸಿದರು.
    ನಾನು ನಿನ್ನ ಸೇವಕ, ನಾನು ನಿನ್ನ ಕಟ್ಟಳೆಗಳನ್ನು ಧ್ಯಾನಿಸುವೆ.
24 ನಿನ್ನ ಒಡಂಬಡಿಕೆಯು ನನಗೆ ಉತ್ತಮ ಸ್ನೇಹಿತನಂತಿದೆ.
    ಅದು ನನಗೆ ಬುದ್ಧಿಮಾತನ್ನು ಹೇಳಿಕೊಡುವುದು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International