Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
2 ರಾಜರುಗಳು 5

ನಾಮಾನನ ಸಮಸ್ಯೆ

ಅರಾಮ್ಯರ ರಾಜನ ಸೇನೆಯಲ್ಲಿ ನಾಮಾನನೆಂಬ ಸೇನಾಪತಿಯಿದ್ದನು. ನಾಮಾನನು ಅವನ ರಾಜನಿಗೆ ಬಹಳ ಪ್ರಾಮುಖ್ಯ ವ್ಯಕ್ತಿಯಾಗಿದ್ದನು. ಯೆಹೋವನು ನಾಮಾನನ ಮುಖಾಂತರ ಅರಾಮ್ಯರಿಗೆ ವಿಜಯವನ್ನು ತಂದುಕೊಟ್ಟಿದ್ದರಿಂದ ಅವನು ಪ್ರಮುಖನಾಗಿದ್ದನು. ನಾಮಾನನು ಮಹಾಪುರುಷನೂ ಶಕ್ತಿಶಾಲಿಯೂ ಆದ ಮನುಷ್ಯನಾಗಿದ್ದನು. ಆದರೆ ಅವನು ಕುಷ್ಠರೋಗ ಪೀಡಿತನಾಗಿದ್ದನು.

ಅರಾಮ್ಯರು ಇಸ್ರೇಲಿನಲ್ಲಿ ಹೋರಾಡಲು ಸೈನಿಕರ ಅನೇಕ ಗುಂಪುಗಳನ್ನು ಕಳುಹಿಸಿದರು. ಸೈನಿಕರು ಜನರನ್ನು ತಮ್ಮ ಗುಲಾಮರಂತೆ ಹಿಡಿದುತಂದರು. ಒಂದು ಸಲ ಚಿಕ್ಕ ಹುಡುಗಿಯೊಬ್ಬಳನ್ನು ಇಸ್ರೇಲ್ ದೇಶದಿಂದ ಹಿಡಿದುತಂದರು. ಈ ಚಿಕ್ಕ ಹುಡುಗಿಯು ನಾಮಾನನ ಪತ್ನಿಗೆ ಸೇವಕಿಯಾದಳು. ಈ ಹುಡುಗಿಯು ನಾಮಾನನ ಪತ್ನಿಗೆ, “ನನ್ನ ಒಡೆಯನಾದ ನಾಮಾನನು ಸಮಾರ್ಯದಲ್ಲಿ ವಾಸಿಸುವ ಪ್ರವಾದಿಯಾದ ಎಲೀಷನನ್ನು ಭೇಟಿಮಾಡಬೇಕೆಂದು ನಾನು ಆಶಿಸುತ್ತೇನೆ. ಆ ಪ್ರವಾದಿಯು ನಾಮಾನನ ಕುಷ್ಠರೋಗವನ್ನು ಗುಣಪಡಿಸಬಲ್ಲನು” ಎಂದು ಹೇಳಿದಳು.

ನಾಮಾನನು ತನ್ನ ಒಡೆಯನಾದ ಅರಾಮ್ಯರ ರಾಜನ ಬಳಿಗೆ ಹೋದನು. ಇಸ್ರೇಲಿನ ಹುಡುಗಿಯು ಹೇಳಿದ ಸಂಗತಿಗಳನ್ನು, ನಾಮಾನನು ಅರಾಮ್ಯರ ರಾಜನಿಗೆ ಹೇಳಿದನು.

ಆಗ ಅರಾಮ್ಯರ ರಾಜನು, “ಈಗಲೇ ಹೋಗು, ನಾನು ಇಸ್ರೇಲಿನ ರಾಜನಿಗೆ ಪತ್ರವೊಂದನ್ನು ಕಳುಹಿಸುತ್ತೇನೆ” ಎಂದು ಹೇಳಿದನು.

ನಾಮಾನನು ಇಸ್ರೇಲಿಗೆ ಹೋದನು. ನಾಮಾನನು ಮುನ್ನೂರ ನಲವತ್ತು ಕಿಲೋಗ್ರಾಂ ಬೆಳ್ಳಿ, ಆರುಸಾವಿರ ಚಿನ್ನದ ನಾಣ್ಯಗಳನ್ನು ಮತ್ತು ಹತ್ತು ಥಾನು ಬಟ್ಟೆಗಳನ್ನು ಕಾಣಿಕೆಯಾಗಿ ತೆಗೆದುಕೊಂಡು ಹೋದನು. ನಾಮಾನನು ಅರಾಮ್ಯರ ರಾಜನಿಂದ ಇಸ್ರೇಲ್ ರಾಜನಿಗೆ ಪತ್ರವೊಂದನ್ನು ತೆಗೆದುಕೊಂಡು ಹೋದನು. ಆ ಪತ್ರದಲ್ಲಿ, “…ನನ್ನ ಸೇವಕನಾದ ನಾಮಾನನನ್ನು ನಿಮ್ಮ ಬಳಿಗೆ ನಾನು ಕಳುಹಿಸುತ್ತಿದ್ದೇನೆ. ಅವನ ಕುಷ್ಠರೋಗವನ್ನು ಗುಣಪಡಿಸಿ” ಎಂದು ಬರೆದಿತ್ತು.

ಇಸ್ರೇಲಿನ ರಾಜನು ಪತ್ರವನ್ನು ಓದಿದಾಗ, ದುಃಖದಿಂದ ತನ್ನ ಬಟ್ಟೆಗಳನ್ನು ಹರಿದುಕೊಂಡು, “ನಾನು ದೇವರೇನು? ಇಲ್ಲ! ಹುಟ್ಟು ಮತ್ತು ಸಾವುಗಳ ಮೇಲೆ ನನಗೆ ಯಾವ ಶಕ್ತಿಯೂ ಇಲ್ಲ. ಹೀಗಿರುವಾಗ ಅರಾಮ್ಯರ ರಾಜನು ಕುಷ್ಠರೋಗಪೀಡಿತನಾದ ಮನುಷ್ಯನನ್ನು ನನ್ನ ಬಳಿಗೆ ಗುಣಪಡಿಸಲು ಏಕೆ ಕಳುಹಿಸಿದನು? ಇದರ ಬಗ್ಗೆ ನೀವೇ ಯೋಚಿಸಿರಿ. ಇದು ಒಂದು ಕುತಂತ್ರವೆಂಬುದು ನಿಮಗೇ ತಿಳಿಯುತ್ತದೆ. ಅರಾಮ್ಯರ ರಾಜನು ಯುದ್ಧವನ್ನು ಆರಂಭಿಸಲು ಪ್ರಯತ್ನಿಸುತ್ತಿದ್ದಾನೆ!” ಎಂದು ಹೇಳಿದನು.

ಇಸ್ರೇಲಿನ ರಾಜನು ದುಃಖದಿಂದ ತನ್ನ ಬಟ್ಟೆಗಳನ್ನು ಹರಿದುಕೊಂಡನೆಂಬುದು ದೇವಮನುಷ್ಯನಾದ ಎಲೀಷನಿಗೆ ತಿಳಿಯಿತು. ಎಲೀಷನು ರಾಜನಿಗೆ ಈ ಸಂದೇಶವನ್ನು ಕಳುಹಿಸಿದನು: “ನೀನು ನಿನ್ನ ಬಟ್ಟೆಗಳನ್ನು ಹರಿದುಕೊಂಡಿದ್ದು ಏಕೆ? ನಾಮಾನನು ನನ್ನ ಬಳಿಗೆ ಬರಲಿ. ಇಸ್ರೇಲಿನಲ್ಲಿ ಒಬ್ಬ ಪ್ರವಾದಿ ಇದ್ದಾನೆಂಬುದು ಅವನಿಗೆ ತಿಳಿಯುತ್ತದೆ!”

ನಾಮಾನನು ತನ್ನ ಕುದುರೆಗಳೊಂದಿಗೆ ಮತ್ತು ರಥಗಳೊಂದಿಗೆ ಎಲೀಷನ ಮನೆಗೆ ಬಂದು, ಬಾಗಿಲಿನ ಹೊರಗಡೆ ನಿಂತುಕೊಂಡನು. 10 ಎಲೀಷನು ತನ್ನ ಸಂದೇಶಕನ ಮೂಲಕ ನಾಮಾನನಿಗೆ, “ಹೋಗಿ, ಜೋರ್ಡನ್ ನದಿಯಲ್ಲಿ ಏಳು ಸಲ ಸ್ನಾನಮಾಡು. ಆಗ ನಿನ್ನ ಚರ್ಮರೋಗವು ಗುಣವಾಗುವುದು. ನೀನು ಸಂಪೂರ್ಣ ಶುದ್ಧನಾಗುವೆ” ಎಂದು ತಿಳಿಸಿದನು.

11 ನಾಮಾನನು ಕೋಪಗೊಂಡು, “ಎಲೀಷನು ಕೊನೆಯ ಪಕ್ಷ ಬಂದು, ನನ್ನೆದುರು ನಿಂತು, ತನ್ನ ದೇವರಾದ ಯೆಹೋವನ ಹೆಸರಿನಲ್ಲಿ ನನ್ನನ್ನು ಕರೆಯುತ್ತಿದ್ದನೆಂದು ನಾನು ಭಾವಿಸಿದ್ದೆನು. ಅವನು ತನ್ನ ಕೈಗಳನ್ನು ನನ್ನ ದೇಹದ ಮೇಲೆ ಸವರಿ, ನನ್ನ ಕುಷ್ಠರೋಗವನ್ನು ಗುಣಪಡಿಸುವನೆಂದು ನಾನು ಭಾವಿಸಿದ್ದೆನು. 12 ದಮಸ್ಕದ ಅಬಾನಾ ಮತ್ತು ಪರ್ಪರ್ ನದಿಗಳು ಇಸ್ರೇಲಿನ ಎಲ್ಲಾ ನದಿಗಳಿಗಿಂತಲೂ ಉತ್ತಮ! ನಾನು ದಮಸ್ಕದ ಆ ನದಿಗಳಲ್ಲಿ ಸ್ನಾನಮಾಡಿ, ಶುದ್ಧನಾಗಬಾರದೇಕೆ?” ಎಂದುಕೊಂಡು ಕೋಪದಿಂದ ಹಿಂದಿರುಗಿ ಹೋದನು!

13 ಆಗ ನಾಮಾನನ ಸೇವಕರು ಅವನ ಬಳಿಗೆ ಬಂದು ಅವನಿಗೆ, “ತಂದೆಯೇ, ಪ್ರವಾದಿಯು ಒಂದು ಕಠಿಣವಾದ ಕಾರ್ಯವನ್ನು ಹೇಳಿದ್ದರೆ, ನೀವು ಅದನ್ನು ಮಾಡುತ್ತಿದ್ದಿರಿ! ಅಲ್ಲವೇ? ಹೀಗಿರಲು ಸುಲಭವಾದ ಒಂದು ಕಾರ್ಯವನ್ನು ಅವನು ನಿಮಗೆ ಹೇಳಿರುವಾಗ ನೀವು ಅವನಿಗೆ ವಿಧೇಯರಾಗಬಾರದೇಕೆ? ನೀವು ಸ್ನಾನಮಾಡಿದರೆ, ಶುಚಿಗೊಂಡು ಶುದ್ಧರಾಗುವಿರಿ” ಎಂದು ಹೇಳಿದರು.

14 ದೇವಮನುಷ್ಯನು (ಎಲೀಷನು) ಹೇಳಿದಂತೆಯೇ ನಾಮಾನನು ಜೋರ್ಡನ್ ನದಿಯಲ್ಲಿ ಇಳಿದು ಏಳುಸಾರಿ ಮುಳುಗಿ ಮೇಲೆದ್ದನು. ಆಗ ನಾಮಾನನು ಸಂಪೂರ್ಣ ಶುದ್ಧನಾದನು; ಅವನ ಚರ್ಮವು ಮಗುವಿನ ಚರ್ಮದಂತೆ ಕೋಮಲವಾಯಿತು.

15 ನಾಮಾನನು ತನ್ನ ಗುಂಪಿನೊಂದಿಗೆ ದೇವಮನುಷ್ಯನ ಹತ್ತಿರಕ್ಕೆ ಹಿಂದಿರುಗಿ ಬಂದನು. ಅವನು ಎಲೀಷನ ಮುಂದೆ ನಿಂತು, “ನೋಡಿ, ಇಸ್ರೇಲಿನಲ್ಲಿಯೇ ಹೊರತು ಭೂಮಂಡಲದ ಬೇರೆಲ್ಲಿಯೂ ದೇವರು ಇಲ್ಲವೇ ಇಲ್ಲ ಎಂಬುದು ಈಗ ತಾನೇ ನನಗೆ ತಿಳಿಯಿತು! ಈಗ ದಯಮಾಡಿ ನನ್ನ ಕಾಣಿಕೆಯನ್ನು ಸ್ವೀಕರಿಸಿ!” ಎಂದು ಹೇಳಿದನು.

16 ಆದರೆ ಎಲೀಷನು, “ನಾನು ಯೆಹೋವನ ಸೇವೆ ಮಾಡುತ್ತೇನೆ. ಯೆಹೋವನಾಣೆಯಾಗಿ ಪ್ರಮಾಣ ಮಾಡುತ್ತೇನೆ, ನಾನು ಯಾವ ಕಾಣಿಕೆಯನ್ನು ಸ್ವೀಕರಿಸುವುದಿಲ್ಲ” ಎಂದು ಹೇಳಿದನು.

ಎಲೀಷನು ಕಾಣಿಕೆಯನ್ನು ಸ್ವೀಕರಿಸುವಂತೆ ನಾಮಾನನು ಬಹಳ ಪ್ರಯತ್ನಿಸಿದನು. ಆದರೆ ಎಲೀಷನು ನಿರಾಕರಿಸಿದನು. 17 ಆಗ ನಾಮಾನನು, “ನೀನು ಈ ಕಾಣಿಕೆಯನ್ನು ಸ್ವೀಕರಿಸದಿದ್ದರೆ, ಕೊನೆಯಪಕ್ಷ ನನಗಾಗಿ ಈ ಕಾರ್ಯವನ್ನು ಮಾಡು. ನನ್ನ ಎರಡು ಹೇಸರಕತ್ತೆಗಳ ಮೇಲಿನ ಬುಟ್ಟಿಗಳು ತುಂಬುವಷ್ಟು ಇಸ್ರೇಲಿನ ಮಣ್ಣನ್ನು ನನಗೆ ಕೊಡಿಸಬೇಕೆಂದು ಬೇಡುತ್ತೇನೆ. ಏಕೆಂದರೆ ಇತರ ದೇವರುಗಳಿಗೆ ನಾನು ಮತ್ತೆ ಎಂದೆಂದಿಗೂ ಸರ್ವಾಂಗಹೋಮವನ್ನಾಗಲಿ ಯಜ್ಞಗಳನ್ನಾಗಲಿ ಅರ್ಪಿಸುವುದಿಲ್ಲ. ನಾನು ಯೆಹೋವನಿಗೆ ಮಾತ್ರ ಯಜ್ಞಗಳನ್ನು ಅರ್ಪಿಸುತ್ತೇನೆ! 18 ಆದರೆ ಈ ವಿಷಯದಲ್ಲಿ ಯೆಹೋವನು ನನ್ನನ್ನು ಕ್ಷಮಿಸಲಿ. ನನ್ನ ಒಡೆಯನಾದ ಅರಾಮ್ಯರ ರಾಜನು ಸುಳ್ಳುದೇವರಾದ ರಿಮ್ಮೋನನನ್ನು ಪೂಜಿಸಲು ಅವನ ಆಲಯಕ್ಕೆ ಹೋಗಿ ನನ್ನ ಕೈಹಿಡಿದು ಆ ದೇವರಿಗೆ ನಮಸ್ಕಾರ ಮಾಡುವಾಗ ನಾನೂ ನಮಸ್ಕಾರ ಮಾಡಬೇಕಾಗುವುದು. ಈ ಒಂದು ವಿಷಯದಲ್ಲಿ ಯೆಹೋವನು ನನಗೆ ಕ್ಷಮೆಯನ್ನು ಅನುಗ್ರಹಿಸಬೇಕು” ಎಂದು ಹೇಳಿದನು.

19 ಆಗ ಎಲೀಷನು, “ಸಮಾಧಾನದಿಂದ ಹೋಗು” ಎಂದನು.

ನಾಮಾನನು ಎಲೀಷನ ಬಳಿಯಿಂದ ಸ್ವಲ್ಪದೂರ ಹೋದನು. 20 ಆದರೆ ದೇವಮನುಷ್ಯನಾದ ಎಲೀಷನ ಸೇವಕನಾದ ಗೇಹಜಿಯು, “ನೋಡು, ಅರಾಮ್ಯನಾದ ನಾಮಾನನು ತಂದಿದ್ದ ಕಾಣಿಕೆಯನ್ನು ಸ್ವೀಕರಿಸದೆ ನನ್ನ ಒಡೆಯನಾದ ಎಲೀಷನು ಅವನನ್ನು ಕಳುಹಿಸಿಬಿಟ್ಟನು! ಯೆಹೋವನಾಣೆಯಾಗಿ, ನಾನು ನಾಮಾನನ ಹಿಂದೆ ಓಡಿಹೋಗಿ ಅವನಿಂದ ಏನನ್ನಾದರೂ ಪಡೆಯುತ್ತೇನೆ!” ಎಂದು ತನ್ನೊಳಗೆ ಅಂದುಕೊಂಡು,

21 ನಾಮಾನನ ಬಳಿಗೆ ಓಡಿದನು. ನಾಮಾನನು ತನ್ನ ಹಿಂದೆ ಓಡಿಬರುತ್ತಿರುವ ಒಬ್ಬನನ್ನು ನೋಡಿ ಗೇಹಜಿಯನ್ನು ಸಂಧಿಸಲು ರಥದಿಂದ ಇಳಿದನು. ನಾಮಾನನು, “ಎಲ್ಲವೂ ಕ್ಷೇಮವೇ?” ಎಂದು ಕೇಳಿದನು.

22 ಗೇಹಜಿಯು, “ಹೌದು, ಎಲ್ಲವೂ ಕ್ಷೇಮವಾಗಿದೆ. ನನ್ನ ಒಡೆಯನಾದ ಎಲೀಷನು ನನಗೆ, ‘ನೋಡು, ಎಫ್ರಾಯೀಮ್ ಬೆಟ್ಟಪ್ರಾಂತ್ಯದ ಪ್ರವಾದಿಗಳ ಗುಂಪಿನಿಂದ ನನ್ನ ಬಳಿಗೆ ಇಬ್ಬರು ತರುಣರು ಬಂದಿದ್ದಾರೆ. ದಯವಿಟ್ಟು ಅವರಿಗೆ ಮೂವತ್ತೈದು ಕಿಲೋ.ಗ್ರಾಂ. ಬೆಳ್ಳಿಯನ್ನು ಮತ್ತು ಎರಡು ಥಾನು ಬಟ್ಟೆಯನ್ನು ತೆಗೆದುಕೊಂಡು ಬಾ’ ಎಂದು ನನ್ನನ್ನು ಕಳುಹಿಸಿದನು” ಎಂದು ಹೇಳಿದನು.

23 ನಾಮಾನನು, “ದಯಮಾಡಿ ಎಪ್ಪತ್ತು ಕಿಲೋಗ್ರಾಂ ತೆಗೆದುಕೊ!” ಎಂದು ಗೇಹಜಿಗೆ ಒತ್ತಾಯಪಡಿಸಿ ಎಪ್ಪತ್ತು ಕಿಲೋಗ್ರಾಂ ಬೆಳ್ಳಿಯನ್ನು ಎರಡು ಚೀಲಗಳಲ್ಲಿ ಹಾಕಿದನು ಮತ್ತು ಎರಡು ಥಾನು ಬಟ್ಟೆಯನ್ನು ತೆಗೆದುಕೊಂಡು ತನ್ನ ಸೇವಕರಿಗೆ ಕೊಟ್ಟನು. ಆ ಸೇವಕರು ಈ ವಸ್ತುಗಳನ್ನು ತೆಗೆದುಕೊಂಡು ಗೇಹಜಿಯೊಡನೆ ಹೋದರು. 24 ಗೇಹಜಿಯು ಬೆಟ್ಟಕ್ಕೆ ಬಂದಾಗ, ಅವುಗಳನ್ನು ಸೇವಕರಿಂದ ತೆಗೆದುಕೊಂಡು ಅವರನ್ನು ಕಳುಹಿಸಿಬಿಟ್ಟನು. ನಂತರ ಗೇಹಜಿಯು ಅವುಗಳನ್ನು ಮನೆಯಲ್ಲಿ ಅಡಗಿಸಿಟ್ಟನು.

25 ಗೇಹಜಿಯು ಒಳಗೆ ಬಂದು ತನ್ನ ಒಡೆಯನಾದ ಎಲೀಷನ ಮುಂದೆ ನಿಂತುಕೊಂಡನು. ಎಲೀಷನು ಗೇಹಜಿಗೆ, “ನೀನು ಎಲ್ಲಿಗೆ ಹೋಗಿದ್ದೆ?” ಎಂದು ಕೇಳಿದನು.

ಗೇಹಜಿಯು, “ನಾನು ಎಲ್ಲಿಗೂ ಹೋಗಿರಲಿಲ್ಲ” ಎಂದನು.

26 ಎಲೀಷನು ಗೇಹಜಿಗೆ, “ಅದು ನಿಜವಲ್ಲ! ನಾಮಾನನು ನಿನ್ನನ್ನು ಸಂಧಿಸಲು ತನ್ನ ರಥದಿಂದ ಹಿಂದಕ್ಕೆ ತಿರುಗಿದಾಗ ನನ್ನ ಹೃದಯವು ನಿನ್ನ ಹತ್ತಿರದಲ್ಲಿಯೇ ಇತ್ತು. ಹಣವನ್ನು, ಬಟ್ಟೆಗಳನ್ನು, ಆಲೀವನ್ನು, ದ್ರಾಕ್ಷಿಯನ್ನು, ಕುರಿಗಳನ್ನು, ಹಸುಗಳನ್ನು ಅಥವಾ ಸೇವಕಸೇವಕಿಯರನ್ನು ತೆಗೆದುಕೊಳ್ಳುವ ಕಾಲ ಇದಲ್ಲ. 27 ಈಗ, ನಿನ್ನನ್ನೂ ನಿನ್ನ ಸಂತಾನದವರನ್ನೂ ಸದಾಕಾಲ ನಾಮಾನನ ರೋಗವು ಹಿಡಿದುಕೊಳ್ಳುವುದು. ನಿನಗೆ ಎಂದೆಂದಿಗೂ ಕುಷ್ಠರೋಗವಿರುವುದು!” ಎಂದು ಹೇಳಿದನು.

ಗೇಹಜಿಯು ಎಲೀಷನನ್ನು ಬಿಟ್ಟುಹೋದಾಗ, ಗೇಹಜಿಯ ಚರ್ಮವು ಮಂಜುಗಡ್ಡೆಯಂತೆ ಬಿಳುಪಾಯಿತು! ಗೇಹಜಿಯು ಕುಷ್ಠರೋಗ ಪೀಡಿತನಾದನು.

1 ತಿಮೊಥೆಯನಿಗೆ 2

ಪ್ರಾರ್ಥನೆ ಮತ್ತು ಸಭಾಕೂಟಗಳ ಬಗ್ಗೆ ಕೆಲವು ಸಲಹೆಗಳು

ಮೊಟ್ಟ ಮೊದಲನೆಯದಾಗಿ ನಾನು ನಿಮಗೆ ಹೇಳುವುದೇನೆಂದರೆ, ಎಲ್ಲಾ ಜನರಿಗಾಗಿ ದೇವರಲ್ಲಿ ಪ್ರಾರ್ಥಿಸಿರಿ, ವಿಜ್ಞಾಪಿಸಿರಿ, ಅವರ ಅಗತ್ಯಕ್ಕೆ ತಕ್ಕಂತೆ ಬಿನ್ನಹ ಮಾಡಿರಿ ಮತ್ತು ಆತನಿಗೆ ಕೃತಜ್ಞತಾಸ್ತುತಿ ಮಾಡಿರಿ. ನಮ್ಮಲ್ಲಿ ಶಾಂತಿ ಸಮಾಧಾನಗಳು ನೆಲಸಿ ನಾವು ದೇವರನ್ನು ಪೂರ್ಣಭಕ್ತಿಯಿಂದಲೂ ಗೌರವದಿಂದಲೂ ಆರಾಧಿಸಲು ಸಾಧ್ಯವಾಗುವಂತೆ ಅರಸರಿಗಾಗಿಯೂ ಅಧಿಕಾರಿಗಳಿಗಾಗಿಯೂ ಪ್ರಾರ್ಥಿಸಿರಿ. ಇದು ಒಳ್ಳೆಯದೂ ಮತ್ತು ನಮ್ಮ ರಕ್ಷಕನಾದ ದೇವರಿಗೆ ಮೆಚ್ಚಿಕೆಕರವೂ ಆಗಿದೆ.

ಎಲ್ಲಾ ಜನರು ರಕ್ಷಿಸಲ್ಪಡಬೇಕೆಂದು, ಸತ್ಯವನ್ನು ತಿಳಿದು ಕೊಳ್ಳಬೇಕೆಂದು ದೇವರು ಬಯಸುತ್ತಾನೆ. ದೇವರು ಒಬ್ಬನೇ. ದೇವರಿಗೂ ಮನುಷ್ಯರಿಗೂ ಮಧ್ಯಸ್ತನು ಒಬ್ಬನೇ. ಮನುಷ್ಯನಾಗಿರುವ ಯೇಸುಕ್ರಿಸ್ತನೇ ಆತನು. ಯೇಸುವು ಜನರೆಲ್ಲರ ಪಾಪಗಳಿಗೆ ತನ್ನನ್ನೇ ಉಚಿತವಾಗಿ ಒಪ್ಪಿಸಿಕೊಟ್ಟನು. ಜನರೆಲ್ಲರೂ ರಕ್ಷಣೆ ಹೊಂದಬೇಕೆಂಬ ದೇವರ ಅಪೇಕ್ಷೆಗೆ ಯೇಸುವು ತಕ್ಕಕಾಲದಲ್ಲಿ ಸಾಕ್ಷಿನೀಡಿದನು. ಆದ ಕಾರಣವೇ ಸುವಾರ್ತೆಯನ್ನು ಸಾರುವುದಕ್ಕಾಗಿಯೂ ಅಪೊಸ್ತಲನಾಗುವುದಕ್ಕಾಗಿಯೂ ಯೆಹೂದ್ಯರಲ್ಲದ ಜನರಿಗೆ ಬೋಧಿಸುವುದಕ್ಕಾಗಿಯೂ ನನ್ನನ್ನು ಆರಿಸಿಕೊಳ್ಳಲಾಯಿತು. (ಇದು ಸತ್ಯ, ಖಂಡಿತವಾಗಿಯೂ ಸುಳ್ಳಲ್ಲ.) ಸತ್ಯವನ್ನು ತಿಳಿದುಕೊಳ್ಳಬೇಕೆಂತಲೂ ನಂಬಬೇಕೆಂತಲೂ ನಾನು ಅವರಿಗೆ ಬೋಧಿಸುತ್ತೇನೆ.

ಪುರುಷರಿಗೆ ಮತ್ತು ಸ್ತ್ರೀಯರಿಗೆ ವಿಶೇಷ ಸೂಚನೆಗಳು

ಎಲ್ಲಾ ಸ್ಥಳಗಳಲ್ಲಿ ಪುರುಷರು ಪ್ರಾರ್ಥನೆ ಮಾಡಬೇಕೆಂಬುದು ನನ್ನ ಅಪೇಕ್ಷೆ. ತಮ್ಮ ಕೈಗಳನ್ನು ಮೇಲೆತ್ತಿ ಪ್ರಾರ್ಥಿಸುವ ಅವರು ಪರಿಶುದ್ಧರಾಗಿರಬೇಕು. ಅವರು ವಾಗ್ವಾದ ಮಾಡುವವರೂ ಕೋಪಗೊಳ್ಳುವವರೂ ಆಗಿರಬಾರದು.

ಸ್ತ್ರೀಯರು ತಮಗೆ ಯೋಗ್ಯವಾದ ಉಡುಪುಗಳನ್ನು ಧರಿಸಬೇಕೆಂದು ನಾನು ಅಪೇಕ್ಷಿಸುತ್ತೇನೆ. ಅವರ ಉಡುಪುಗಳು ಅವರು ಮಾನಸ್ಥೆಯರು ಎಂಬುದನ್ನು ತೋರಿಸುವಂಥವುಗಳಾಗಿರಬೇಕು. ಅವರು ತಮ್ಮ ಸೌಂದರ್ಯವನ್ನು ಹೆಚ್ಚಿಸಲು ತಲೆಕೂದಲನ್ನು ಅಲಂಕಾರಿಕವಾಗಿ ಕಟ್ಟಿಕೊಳ್ಳಕೂಡದು; ಬಂಗಾರವನ್ನು ಮತ್ತು ಮುತ್ತುಗಳನ್ನು ತೊಟ್ಟುಕೊಳ್ಳಕೂಡದು ಮತ್ತು ಬೆಲೆಬಾಳುವ ಬಟ್ಟೆಗಳನ್ನು ಧರಿಸಿಕೊಳ್ಳಕೂಡದು. 10 ಆದರೆ ಅವರು ಯೋಗ್ಯಕಾರ್ಯಗಳನ್ನು ಮಾಡುವುದರ ಮೂಲಕ ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬೇಕು. ದೇವರನ್ನು ಆರಾಧಿಸುತ್ತೇವೆ ಎಂದು ಹೇಳುವ ಸ್ತ್ರೀಯರು ತಮ್ಮನ್ನು ಈ ರೀತಿಯಲ್ಲಿಯೇ ಅಲಂಕರಿಸಿಕೊಳ್ಳಬೇಕು.

11 ಸ್ತ್ರೀಯರು ಉಪದೇಶವನ್ನು ಕೇಳಬೇಕು ಮತ್ತು ವಿಧೇಯರಾಗಲು ಪೂರ್ಣಸಿದ್ಧರಾಗಿರಬೇಕು. 12 ಅವರು ಪುರುಷರಿಗೆ ಉಪದೇಶಿಸುವುದಕ್ಕಾಗಲಿ ಅವರ ಮೇಲೆ ಅಧಿಕಾರ ಚಲಾಯಿಸುವುದಕ್ಕಾಗಲಿ ನಾನು ಸಮ್ಮತಿಸುವುದಿಲ್ಲ. ಅವರು ಮೌನವಾಗಿರಬೇಕು. 13 ಏಕೆಂದರೆ ಮೊದಲು ನಿರ್ಮಿತನಾದವನು ಆದಾಮ. ಅನಂತರ ನಿರ್ಮಿತಳಾದದ್ದು ಹವ್ವಳು. 14 ಅಲ್ಲದೆ ಸೈತಾನನಿಂದ ವಂಚಿಸಲ್ಪಟ್ಟದ್ದು ಆದಾಮನಲ್ಲ. ಸ್ತ್ರೀಯು ವಂಚನೆಗೆ ಬಲಿಯಾಗಿ ಪಾಪಿಯಾದಳು.[a] 15 ಆದರೆ ಸ್ತ್ರೀಯರು ನಂಬಿಕೆಯಲ್ಲಿ, ಪ್ರೀತಿಯಲ್ಲಿ, ಪರಿಶುದ್ಧತೆಯಲ್ಲಿ ಮತ್ತು ಸರಿಯಾದ ನಡವಳಿಕೆಯಲ್ಲಿ ದೃಢವಾಗಿದ್ದರೆ ಮಕ್ಕಳನ್ನು ಹೆರುವಾಗ ರಕ್ಷಿಸಲ್ಪಡುವರು.

ದಾನಿಯೇಲ 9

ದಾನಿಯೇಲನ ಪ್ರಾರ್ಥನೆ

ದಾರ್ಯಾವೆಷನ ಆಳ್ವಿಕೆಯ ಮೊದಲನೆಯ ವರ್ಷದಂದು ನಡೆದ ಸಂಗತಿಗಳಿವು: ದಾರ್ಯಾವೆಷನು ಅಹಷ್ವೇರೋಷನೆಂಬವನ ಮಗನು. ದಾರ್ಯವೆಷನು ಮೇದ್ಯಯ ವಂಶದವನು. ಅವನು ಕಸ್ದೀಯ ರಾಜ್ಯದ ದೊರೆಯಾದನು. ದಾರ್ಯಾವೆಷನ ಆಳ್ವಿಕೆಯ ಮೊದಲನೆಯ ವರ್ಷ ದಾನಿಯೇಲನೆಂಬ ನಾನು ಕೆಲವು ಧರ್ಮಗ್ರಂಥಗಳನ್ನು ಓದುತ್ತಿದ್ದೆ. ಎಪ್ಪತ್ತು ವರ್ಷಗಳ ತರುವಾಯ ಜೆರುಸಲೇಮಿನ ಪುನರ್ನಿರ್ಮಾಣವಾಗುವದೆಂದು ಯೆಹೋವನು ಯೆರೆಮೀಯನಿಗೆ ಹೇಳಿದ್ದು ನನಗೆ ಈ ಧರ್ಮಗ್ರಂಥಗಳಿಂದ ತಿಳಿಯಿತು.

ಆಗ ನಾನು ದೇವರಾದ ನನ್ನ ಯೆಹೋವನನ್ನು ಪ್ರಾರ್ಥಿಸಿದೆ ಮತ್ತು ಆತನ ಸಹಾಯವನ್ನು ಕೋರಿದೆ. ನಾನು ಯಾವ ಆಹಾರವನ್ನೂ ಸ್ವೀಕರಿಸಲಿಲ್ಲ ಮತ್ತು ದುಃಖಸೂಚಕವಾದ ವಸ್ತ್ರಗಳನ್ನು ಧರಿಸಿಕೊಂಡೆ. ನನ್ನ ತಲೆಯ ಮೇಲೆ ಬೂದಿಯನ್ನು ಸುರಿದುಕೊಂಡೆ. ನಾನು ಯೆಹೋವನಾದ ನನ್ನ ದೇವರನ್ನು ಪ್ರಾರ್ಥಿಸಿದೆ. ನಾನು ನನ್ನ ಎಲ್ಲ ಪಾಪಗಳ ಬಗ್ಗೆ ಆತನಿಗೆ ಹೇಳಿದೆ. ನಾನು,

“ಯೆಹೋವನೇ, ನೀನು ಭಯಂಕರನಾಗಿರುವೆ. ನಿನ್ನನ್ನು ಪ್ರೀತಿಸಿ ನಿನ್ನ ಆಜ್ಞೆಗಳನ್ನು ಅನುಸರಿಸುವವರಿಗೆ, ಮಾಡಿದ ಪ್ರೀತಿಯ ಮತ್ತು ಕರುಣೆಯ ವಾಗ್ದಾನಗಳನ್ನು ನೀನು ನೆರವೇರಿಸುವೆ.

“ಆದರೆ ಯೆಹೋವನೇ, ನಾವು ಪಾಪ ಮಾಡಿದ್ದೇವೆ. ನಾವು ತಪ್ಪುಗಳನ್ನು ಮಾಡಿದ್ದೇವೆ. ನಾವು ನಿನಗೆ ವಿರೋಧವಾಗಿ ದಂಗೆ ಎದ್ದಿದ್ದೇವೆ. ನಾವು ನಿನ್ನ ಆಜ್ಞೆಗಳನ್ನು ಮತ್ತು ಸರಿಯಾದ ನಿರ್ಣಯಗಳನ್ನು ತೊರೆದಿದ್ದೇವೆ. ಪ್ರವಾದಿಗಳು ಹೇಳಿದ್ದನ್ನು ನಾವು ಕೇಳಲಿಲ್ಲ. ಅವರು ನಿನ್ನ ಸೇವಕರಾಗಿದ್ದರು. ಆ ಪ್ರವಾದಿಗಳು ನಿನ್ನ ಪರವಾಗಿ ಹೇಳಿದರು. ಅವರು ನಮ್ಮ ರಾಜರುಗಳಿಗೆ, ನಮ್ಮ ನಾಯಕರುಗಳಿಗೆ ಮತ್ತು ನಮ್ಮ ಹಿರಿಯರಿಗೆ ಹೇಳಿದರು. ಅವರು ಇಸ್ರೇಲಿನ ಎಲ್ಲ ಜನರಿಗೆ ಹೇಳಿದರು. ಆದರೆ ನಾವು ಆ ಪ್ರವಾದಿಗಳ ಮಾತಿಗೆ ಕಿವಿಗೊಡಲಿಲ್ಲ.

“ಯೆಹೋವನೇ, ನೀನು ಒಳ್ಳೆಯವನು, ಒಳ್ಳೆಯತನ ನಿನ್ನ ಪಾಲಾಗಿದೆ. ಆದರೆ ಈಗ ನಮ್ಮದು ನಾಚಿಕೆಪಡುವ ಸ್ಥಿತಿಯಾಗಿದೆ. ಯೆಹೂದ ಮತ್ತು ಜೆರುಸಲೇಮಿನ ಜನರು ನಾಚಿಕೆಪಡುವಂತಾಗಿದೆ. ಹತ್ತಿರದಲ್ಲಿದ್ದವರು ಹಾಗೂ ದೂರದಲ್ಲಿದ್ದವರು, ಒಟ್ಟಿನಲ್ಲಿ ಇಸ್ರೇಲಿನ ಎಲ್ಲ ಜನರು ನಾಚಿಕೆಪಡುವಂತಾಗಿದೆ. ಯೆಹೋವನೇ, ನೀನು ಆ ಜನರನ್ನು ಎಲ್ಲಾ ದೇಶಗಳಲ್ಲಿ ಚದರಿಸಿಬಿಟ್ಟಿರುವೆ. ಆ ಎಲ್ಲಾ ದೇಶಗಳಲ್ಲಿರುವ ಇಸ್ರೇಲರು ನಾಚಿಕೆಪಡಬೇಕಾಗಿದೆ. ಯೆಹೋವನೇ, ನಿನ್ನ ವಿರುದ್ಧ ಮಾಡಿದ ಎಲ್ಲಾ ಹೀನಕೃತ್ಯಗಳಿಗಾಗಿ ಅವರು ನಾಚಿಕೆಪಡಬೇಕಾಗಿದೆ.

“ಯೆಹೋವನೇ, ನಾವೆಲ್ಲರೂ ನಾಚಿಕೆಪಡಬೇಕು. ನಮ್ಮ ಎಲ್ಲ ರಾಜರು, ನಾಯಕರು ನಾಚಿಕೆಪಟ್ಟುಕೊಳ್ಳಬೇಕು. ನಮ್ಮ ಹಿರಿಯರು ನಾಚಿಕೆಪಡಬೇಕು. ಏಕೆಂದರೆ ನಾವು ನಿನ್ನ ವಿಷಯದಲ್ಲಿ ಪಾಪ ಮಾಡಿದ್ದೇವೆ.

“ಆದರೆ ನಮ್ಮ ದೇವರಾದ ಯೆಹೋವನೇ, ನೀನು ಕರುಣಾಳು, ದುಷ್ಕೃತ್ಯಗಳನ್ನು ಮಾಡಿದ ಜನರನ್ನು ನೀನು ಕ್ಷಮಿಸುವೆ. ನಾವು ನಿಜವಾಗಿಯೂ ನಿನಗೆ ತಿರುಗಿಬಿದ್ದೆವು. 10 ನಾವು ನಮ್ಮ ದೇವರಾದ ಯೆಹೋವನ ಆಜ್ಞಾಪಾಲನೆ ಮಾಡಿಲ್ಲ. ಯೆಹೋವನು ತನ್ನ ಸೇವಕರಾದ ಪ್ರವಾದಿಗಳ ಮುಖಾಂತರ ನಮಗೆ ಕಟ್ಟಳೆಗಳನ್ನು ತಿಳಿಸಿದನು. ಆದರೆ ನಾವು ಆ ಕಟ್ಟಳೆಗಳನ್ನು ಪಾಲಿಸಲಿಲ್ಲ. 11 ಇಸ್ರೇಲಿನ ಜನರಲ್ಲಿ ಒಬ್ಬರೂ ಸಹ ನಿನ್ನ ಉಪದೇಶವನ್ನು ಪಾಲಿಸಲಿಲ್ಲ. ಅವರೆಲ್ಲರೂ ಅದರಿಂದ ದೂರಾದರು. ಅವರು ನಿನ್ನ ಆಜ್ಞೆಯನ್ನು ಪಾಲಿಸಲಿಲ್ಲ. ಮೋಶೆಯ ಧರ್ಮಶಾಸ್ತ್ರದಲ್ಲಿ ಶಾಪಗಳ ಮತ್ತು ವಾಗ್ದಾನಗಳ ಬಗ್ಗೆ ಹೇಳಲಾಗಿದೆ. (ಮೋಶೆಯು ದೇವರ ಸೇವಕನಾಗಿದ್ದನು) ಆ ಶಾಪಗಳು ಧರ್ಮಶಾಸ್ತ್ರವನ್ನು ಪಾಲಿಸದಿದ್ದವರಿಗೆ ಆಗುವ ಶಿಕ್ಷೆಯಾಗಿದೆ. ಆ ಎಲ್ಲಾ ಶಿಕ್ಷೆಗಳು ನಮಗೆ ಆಗಿವೆ. ನಾವು ಯೆಹೋವನಾದ ನಿನ್ನ ವಿರುದ್ಧ ಪಾಪ ಮಾಡಿದ್ದರಿಂದ ನಮಗೆ ಹೀಗಾಯಿತು.

12 “ನಮಗೂ ನಮ್ಮ ನಾಯಕರುಗಳಿಗೂ ನೀನು ಹೇಳಿದಂತೆಯೇ ಮಾಡಿರುವೆ. ನೀನು ನಮ್ಮ ಮೇಲೆ ದೊಡ್ಡ ಕೇಡನ್ನು ಬರಮಾಡಿರುವೆ. ಜೆರುಸಲೇಮ್ ನಗರಕ್ಕೆ ಉಂಟಾದಷ್ಟು ಕೇಡು ಭೂಮಂಡಲದಲ್ಲಿ ಯಾವ ನಗರಕ್ಕೂ ಆಗಿಲ್ಲ. 13 ಆ ಕೇಡುಗಳೆಲ್ಲಾ ನಮಗೆ ಉಂಟಾದವು. ಇದೆಲ್ಲಾ ಮೋಶೆಯ ಧರ್ಮಶಾಸ್ತ್ರದಲ್ಲಿ ಹೇಳಿದಂತೆಯೇ ನಡೆದುಹೋಯಿತು. ಆದರೆ ಈವರೆಗೂ ನಾವು ನಿನ್ನ ಸಹಾಯವನ್ನು ಕೇಳಲಿಲ್ಲ. ಇಂದಿಗೂ ನಾವು ಪಾಪ ಮಾಡುವದನ್ನು ನಿಲ್ಲಿಸಲಿಲ್ಲ. ಯೆಹೋವನೇ, ಇನ್ನೂ ನಾವು ನಿನ್ನ ಸತ್ಯೋಪದೇಶದ ಕಡೆಗೆ ಗಮನ ಕೊಡುತ್ತಿಲ್ಲ. 14 ಯೆಹೋವನಾದ ನೀನು ನಮಗೆ ಆಪತ್ತುಗಳನ್ನು ಸಿದ್ಧಪಡಿಸಿಟ್ಟಿದ್ದೆ. ಆ ಆಪತ್ತುಗಳು ನಮ್ಮ ಮೇಲೆ ಬರುವಂತೆ ನೀನು ಮಾಡಿದೆ. ಯೆಹೋವನಾದ ನೀನು ಎಲ್ಲವನ್ನು ನಿಷ್ಪಕ್ಷಪಾತವಾಗಿ ಮಾಡುವೆ. ಆದ್ದರಿಂದಲೇ ಇದೆಲ್ಲವನ್ನು ಮಾಡಿದೆ. ಆದರೆ ಇಂದಿಗೂ ನಾವು ನಿನ್ನ ಉಪದೇಶಕ್ಕೆ ಕಿವಿಗೊಟ್ಟಿಲ್ಲ.

15 “ನಮ್ಮ ದೇವರಾದ ಯೆಹೋವನೇ, ನೀನು ನಿನ್ನ ಶಕ್ತಿಯಿಂದ ನಮ್ಮನ್ನು ಈಜಿಪ್ಟಿನಿಂದ ಹೊರಗೆ ತೆಗೆದುಕೊಂಡು ಬಂದೆ. ನಾವು ನಿನ್ನ ಜನರಾಗಿದ್ದೇವೆ. ನೀನು ಕರುಣೆ ತೋರುವುದರಲ್ಲಿ ಇಂದಿಗೂ ಸುಪ್ರಸಿದ್ಧನಾಗಿರುವೆ. ಯೆಹೋವನೇ, ನಾವು ಪಾಪ ಮಾಡಿದ್ದೇವೆ. ನಾವು ಬಹಳ ಹೀನಕೃತ್ಯಗಳನ್ನು ಮಾಡಿದ್ದೇವೆ. 16 ಯೆಹೋವನೇ, ನಾವು ಮತ್ತು ನಮ್ಮ ಪೂರ್ವಿಕರು ನಿನಗೆ ಪಾಪಮಾಡಿದ್ದರಿಂದ ಇದೆಲ್ಲಾ ಆಗುತ್ತಿದೆ. ಜೆರುಸಲೇಮಿನ ಮೇಲೆ ಕೋಪ ಮಾಡುವದನ್ನು ದಯವಿಟ್ಟು ನಿಲ್ಲಿಸು. ಜೆರುಸಲೇಮ್ ನಗರವು ನಿನ್ನ ಪವಿತ್ರವಾದ ಬೆಟ್ಟದ ಮೇಲೆ ಇದೆ. ನೀನು ಸರಿಯಾದದ್ದನ್ನು ಮಾಡುವೆ. ಆದ್ದರಿಂದ ಜೆರುಸಲೇಮಿನ ಮೇಲೆ ಕೋಪಗೊಳ್ಳುವದನ್ನು ದಯವಿಟ್ಟು ನಿಲ್ಲಿಸಿಬಿಡು. ನಮ್ಮ ಸುತ್ತಮುತ್ತಲಿನ ಜನರೆಲ್ಲ ನಮ್ಮನ್ನು ನಿಂದಿಸುವರು ಮತ್ತು ನಮ್ಮ ಜನರನ್ನು ಗೇಲಿ ಮಾಡುವರು.

17 “ಯೆಹೋವನೇ, ನಿನ್ನ ಸೇವಕನಾದ ನನ್ನ ಪ್ರಾರ್ಥನೆಯನ್ನು ಕೇಳು. ಸಹಾಯಕೋರಿ ಮಾಡುವ ನನ್ನ ಪ್ರಾರ್ಥನೆಯನ್ನು ಲಾಲಿಸು. ನಿನ್ನ ಪವಿತ್ರ ಸ್ಥಳಕ್ಕಾಗಿ ಒಳ್ಳೆಯದನ್ನು ಮಾಡು. ಆ ಕಟ್ಟಡವನ್ನು ನಾಶಮಾಡಲಾಗಿದೆ. ಯೆಹೋವನೇ, ಈ ಒಳ್ಳೆಯ ಕಾರ್ಯಗಳನ್ನು ನಿನ್ನ ಹಿತಕ್ಕಾಗಿ ಮಾಡು. 18 ನನ್ನ ದೇವರೆ, ನನ್ನ ಪ್ರಾರ್ಥನೆಯನ್ನು ಕೇಳು. ನಿನ್ನ ಕಣ್ಣುಗಳನ್ನು ತೆರೆದು ನಮಗಾದ ಎಲ್ಲ ಕೇಡನ್ನು ನೋಡು. ನಿನ್ನ ಹೆಸರುಳ್ಳ ಪಟ್ಟಣದ ಗತಿ ಏನಾಗಿದೆ ನೋಡು. ನಾವು ಒಳ್ಳೆಯ ಜನರೆಂದು ನಾನು ಹೇಳುತ್ತಿಲ್ಲ. ನಾವು ಒಳ್ಳೆಯ ಜನರೆಂದು ಇದೆಲ್ಲವನ್ನು ಕೇಳುತ್ತಿಲ್ಲ. ನೀನು ಕರುಣಾಮಯನಾಗಿರುವುದರಿಂದಲೇ ಇದನ್ನೆಲ್ಲ ಕೇಳುತ್ತಿದ್ದೇನೆ. 19 ಯೆಹೋವನೇ, ನನ್ನ ಮೊರೆಯನ್ನು ಕೇಳು. ಯೆಹೋವನೇ, ನಮ್ಮನ್ನು ಕ್ಷಮಿಸು. ಯೆಹೋವನೇ, ನಮ್ಮ ಕಡೆಗೆ ಗಮನ ನೀಡಿ ಸಹಾಯಮಾಡು. ತಡಮಾಡಬೇಡ. ಈಗಲೇ ಸಹಾಯಮಾಡು. ನಿನ್ನ ಮಹಿಮೆಗಾಗಿಯೇ ಸಹಾಯಮಾಡು. ನನ್ನ ದೇವರೇ, ನಿನ್ನ ಹೆಸರಿನಿಂದ ಕರೆಯಲ್ಪಡುವ ನಿನ್ನ ನಗರಕ್ಕಾಗಿಯೂ ನಿನ್ನ ಜನರಿಗಾಗಿಯೂ ಈಗಲೇ ಸಹಾಯಮಾಡು” ಎಂದು ಪ್ರಾರ್ಥಿಸಿದೆನು.

ಎಪ್ಪತ್ತು ವಾರಗಳ ಬಗ್ಗೆ ದರ್ಶನ

20 ನಾನು ಪ್ರಾರ್ಥನೆಯಲ್ಲಿ ನನ್ನ ಪಾಪಗಳ ಬಗ್ಗೆ ಮತ್ತು ಇಸ್ರೇಲರ ಪಾಪಗಳ ಬಗ್ಗೆ ಹೇಳಿಕೊಂಡೆ. ನಾನು ನನ್ನ ದೇವರಾದ ಯೆಹೋವನ ಪವಿತ್ರ ಪರ್ವತಕ್ಕಾಗಿ ಪ್ರಾರ್ಥನೆ ಮಾಡುತ್ತಿದ್ದೆ. 21 ನಾನು ಪ್ರಾರ್ಥಿಸುತ್ತಿದ್ದಾಗ ಗಬ್ರಿಯೇಲನೆಂಬ ಪುರುಷನು ನನ್ನಲ್ಲಿಗೆ ಬಂದನು. ಗಬ್ರಿಯೇಲನನ್ನೇ ನಾನು ದರ್ಶನದಲ್ಲಿ ಕಂಡಿದ್ದೆನು. ಗಬ್ರಿಯೇಲನು ವೇಗವಾಗಿ ಹಾರುತ್ತಾ ಸಾಯಂಕಾಲದ ನೈವೇದ್ಯದ ಸಮಯದಲ್ಲಿ ನನ್ನ ಬಳಿಗೆ ಬಂದನು. 22 ನಾನು ತಿಳಿದುಕೊಳ್ಳಬಯಸಿದ ವಿಷಯಗಳನ್ನು ತಿಳಿದುಕೊಳ್ಳಲು ಗಬ್ರಿಯೇಲನು ನನಗೆ ಸಹಾಯ ಮಾಡಿದನು. ಗಬ್ರಿಯೇಲನು, “ದಾನಿಯೇಲನೇ, ನಾನು ನಿನಗೆ ಜ್ಞಾನವನ್ನು ಕೊಡಲು ಮತ್ತು ಅರ್ಥಮಾಡಿಕೊಳ್ಳಲು ನಿನಗೆ ಸಹಾಯ ಮಾಡಲು ಬಂದಿದ್ದೇನೆ. 23 ನೀನು ಪ್ರಾರ್ಥಿಸಲು ಪ್ರಾರಂಭಿಸಿದಾಗಲೇ ನನಗೆ ದೇವರ ಆಜ್ಞೆಯಾಯಿತು. ನಾನು ಅದನ್ನು ನಿನಗೆ ತಿಳಿಸಲು ಬಂದಿರುವೆನು. ದೇವರು ನಿನ್ನನ್ನು ತುಂಬ ಪ್ರೀತಿಸುತ್ತಾನೆ. ನೀನು ದೈವಾಜ್ಞೆಯನ್ನು ಅರಿತುಕೊಳ್ಳುವೆ ಮತ್ತು ದರ್ಶನದ ಅರ್ಥವನ್ನು ತಿಳಿದುಕೊಳ್ಳುವೆ.

24 “ದಾನಿಯೇಲನೇ, ನಿಮ್ಮ ಜನರಿಗೆ ಮತ್ತು ನಿಮ್ಮ ಪವಿತ್ರ ನಗರಕ್ಕೆ ದೇವರು ಎಪ್ಪತ್ತು ವಾರಗಳ ಅವಧಿಯನ್ನು ಗೊತ್ತುಮಾಡಿದ್ದಾನೆ. ಅಧರ್ಮವನ್ನು ಕೊನೆಗಾಣಿಸುವದು, ಪಾಪಗಳನ್ನು ತಡೆಯುವುದು, ಅಪರಾಧಗಳನ್ನು ನಿವಾರಿಸುವುದು, ಜನರನ್ನು ಪರಿಶುದ್ಧಗೊಳಿಸುವುದು, ಎಂದೆಂದಿಗೂ ಉಳಿಯುವ ಧರ್ಮವನ್ನು ಸ್ಥಾಪಿಸುವುದು, ದರ್ಶನಗಳಿಗೆ ಮತ್ತು ಪ್ರವಾದಿಯ ನುಡಿಗಳಿಗೆ ಮುದ್ರೆಹಾಕಿ ಕಾರ್ಯರೂಪಕ್ಕೆ ತರುವುದು, ಪವಿತ್ರ ಸ್ಥಳವನ್ನು ಪ್ರತಿಷ್ಠಿಸುವುದು, ಇವೆಲ್ಲವುಗಳಿಗಾಗಿ ಈ ಎಪ್ಪತ್ತು ವಾರಗಳ ಅವಧಿಯನ್ನು ಗೊತ್ತು ಮಾಡಲಾಗಿದೆ.

25 “ದಾನಿಯೇಲನೇ, ಇದನ್ನು ತಿಳಿದುಕೊ. ಇದನ್ನು ಚೆನ್ನಾಗಿ ಅರ್ಥಮಾಡಿಕೊ. ‘ಹೋಗಿ ಜೆರುಸಲೇಮನ್ನು ಸರಿಪಡಿಸಿರಿ’ ಎಂಬ ದೈವೋಕ್ತಿಯು ಹೊರಡುವಂದಿನಿಂದ ಅಭಿಷಿಕ್ತನಾದ ರಾಜನು ಬರುವದರೊಳಗೆ ಏಳು ವಾರಗಳು ಕಳೆಯಬೇಕು. ಆಗ ಜೆರುಸಲೇಮು ಮತ್ತೆ ನಿರ್ಮಾಣವಾಗುವುದು. ಜನರು ಒಂದಾಗಿ ಸೇರುವದಕ್ಕೆ ಜೆರುಸಲೇಮಿನಲ್ಲಿ ಮತ್ತೆ ಸ್ಥಳಾವಕಾಶವಾಗುವುದು. ನಗರದ ಸುತ್ತಲೂ ಅದನ್ನು ರಕ್ಷಿಸುವುದಕ್ಕಾಗಿ ಒಂದು ಕಂದಕವನ್ನು ಕೊರೆಯಲಾಗುವುದು. ಅರವತ್ತೆರಡು ವಾರಗಳವರೆಗೆ ಜೆರುಸಲೇಮ್ ನಗರವನ್ನು ಕಟ್ಟಲಾಗುವುದು. ಆದರೆ ಆ ಅವಧಿಯಲ್ಲಿ ಹಲವಾರು ಕಷ್ಟನಷ್ಟಗಳು ಸಂಭವಿಸುವವು. 26 ಅರವತ್ತೆರಡು ವಾರಗಳ ತರುವಾಯ ಅಭಿಷಿಕ್ತನ ಕೊಲೆಯಾಗುವುದು. ಅವನು ಇಲ್ಲವಾಗುವನು. ಭವಿಷ್ಯತ್ತಿನ ನಾಯಕನ ಜನರು ನಗರವನ್ನೂ ಪವಿತ್ರಾಲಯವನ್ನೂ ಹಾಳುಮಾಡುವರು. ಆ ಅಂತ್ಯವು ಒಂದು ಪ್ರವಾಹದಂತೆ ಬರುವುದು. ಕೊನೆಯವರೆಗೂ ಯುದ್ಧ ನಡೆಯುವುದು. ಆ ಸ್ಥಳವನ್ನು ಸಂಪೂರ್ಣವಾಗಿ ನಾಶಮಾಡಬೇಕೆಂದು ದೇವರು ಆಜ್ಞಾಪಿಸಿದ್ದಾನೆ.

27 “ಆಗ ಭವಿಷ್ಯತ್ತಿನ ನಾಯಕನು ಬಹುಜನರೊಂದಿಗೆ ಒಂದು ಒಪ್ಪಂದವನ್ನು ಮಾಡಿಕೊಳ್ಳುವನು. ಆ ಒಪ್ಪಂದ ಒಂದು ವಾರದವರೆಗೆ ಮುಂದುವರೆಯುವದು. ಅರ್ಧವಾರದವರೆಗೆ ಯಜ್ಞ ಮತ್ತು ನೈವೇದ್ಯಗಳನ್ನು ನಿಲ್ಲಿಸಲಾಗುವುದು. ಒಬ್ಬ ಘಾತುಕನು ಬರುವನು. ಅವನು ಬಹುವಿನಾಶಕಾರಿ ಕೆಲಸಗಳನ್ನು ಮಾಡುವನು. ಆದರೆ ಆ ಘಾತುಕನನ್ನು ಮುಗಿಸಿಬಿಡಬೇಕೆಂದು ದೇವರ ಆಜ್ಞೆಯಾಗಿದೆ” ಎಂದು ಹೇಳಿದನು.

ಕೀರ್ತನೆಗಳು 117-118

117 ಸರ್ವಜನಾಂಗಗಳೇ, ಯೆಹೋವನನ್ನು ಕೊಂಡಾಡಿರಿ.
    ಸರ್ವಜನರೇ, ಆತನನ್ನು ಸ್ತುತಿಸಿರಿ.
ಆತನ ಪ್ರೀತಿಯು ನಮ್ಮ ಮೇಲೆ ಅಪಾರವಾಗಿದೆ.
    ಆತನ ನಂಬಿಗಸ್ತಿಕೆಯು ಶಾಶ್ವತವಾದದ್ದು.

ಯೆಹೋವನಿಗೆ ಸ್ತೋತ್ರವಾಗಲಿ.

118 ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ.
    ಆತನು ಒಳ್ಳೆಯವನು.
    ಆತನ ಪ್ರೀತಿಯು ಶಾಶ್ವತವಾದದ್ದು!
ಇಸ್ರೇಲರೇ,
    “ಆತನ ಪ್ರೀತಿ ಶಾಶ್ವತವಾದದ್ದು” ಎಂದು ಹೇಳಿರಿ.
ಯಾಜಕರೇ,
    “ಆತನ ಪ್ರೀತಿ ಶಾಶ್ವತವಾದದ್ದು!” ಎಂದು ಹೇಳಿರಿ.
ಯೆಹೋವನ ಭಕ್ತರೇ,
    “ಆತನ ಪ್ರೀತಿ ಶಾಶ್ವತವಾದದ್ದು” ಎಂದು ಹೇಳಿರಿ.

ನಾನು ಆಪತ್ತಿನಲ್ಲಿ ಯೆಹೋವನಿಗೆ ಮೊರೆಯಿಟ್ಟೆನು.
    ಆತನು ನನಗೆ ಸದುತ್ತರವನ್ನು ದಯಪಾಲಿಸಿ ನನ್ನನ್ನು ಬಿಡಿಸಿದನು.
ಯೆಹೋವನು ನನ್ನೊಂದಿಗಿದ್ದಾನೆ, ಆದ್ದರಿಂದ ನಾನು ಭಯಪಡುವುದಿಲ್ಲ.
    ಮನುಷ್ಯರು ನನಗೇನು ಮಾಡಬಲ್ಲರು?
ಯೆಹೋವನು ನನಗೆ ಸಹಾಯಕನಾಗಿದ್ದಾನೆ.
    ನನ್ನ ಶತ್ರುಗಳಿಗಾಗುವ ಸೋಲನ್ನು ಕಣ್ಣಾರೆ ಕಾಣುವೆನು.
ಜನರಲ್ಲಿ ಭರವಸೆ ಇಡುವುದಕ್ಕಿಂತಲೂ
    ಯೆಹೋವನಲ್ಲಿ ಭರವಸೆ ಇಡುವುದೇ ಉತ್ತಮ.
ನಿಮ್ಮ ನಾಯಕರುಗಳಲ್ಲಿ ಭರವಸೆ ಇಡುವುದಕ್ಕಿಂತಲೂ
    ಯೆಹೋವನಲ್ಲಿ ಭರವಸೆ ಇಡುವುದೇ ಉತ್ತಮ.

10 ಅನೇಕ ಶತ್ರುಗಳು ನನ್ನನ್ನು ಸುತ್ತುಗಟ್ಟಿದರು.
    ನಾನು ಅವರನ್ನು ಯೆಹೋವನ ಶಕ್ತಿಯಿಂದ ಸೋಲಿಸಿದೆನು.
11 ಶತ್ರುಗಳು ನನ್ನನ್ನು ಮತ್ತೆಮತ್ತೆ ಸುತ್ತುಗಟ್ಟಿದರು.
    ನಾನು ಅವರನ್ನು ಯೆಹೋವನ ಶಕ್ತಿಯಿಂದ ಸೋಲಿಸಿದೆನು.
12 ಶತ್ರುಗಳು ಜೇನುನೊಣಗಳ ಹಿಂಡಿನಂತೆ ನನ್ನನ್ನು ಸುತ್ತುಗಟ್ಟಿದರು.
    ಆದರೆ, ಧಗಧಗನೆ ಉರಿಯುವ ಪೊದೆಯಂತೆ ಅವರು ಕೊನೆಗೊಂಡರು.
ನಾನು ಅವರನ್ನು ಯೆಹೋವನ ಶಕ್ತಿಯಿಂದ ಸೋಲಿಸಿದೆನು.

13 ಶತ್ರುಗಳು ನನ್ನ ಮೇಲೆ ಆಕ್ರಮಣ ಮಾಡಿ ಸಂಪೂರ್ಣವಾಗಿ ನಾಶಮಾಡಲಿದ್ದರು.
    ಆದರೆ ಯೆಹೋವನು ನನಗೆ ಸಹಾಯ ಮಾಡಿದನು.
14 ನನ್ನ ಬಲವೂ ಜಯಗೀತೆಯೂ ಯೆಹೋವನೇ.
    ಆತನೇ ನನ್ನನ್ನು ರಕ್ಷಿಸುವನು!
15 ಜಯೋತ್ಸವವು ನೀತಿವಂತರ ಮನೆಗಳಲ್ಲಿ ಕೇಳಿಬರುತ್ತಿದೆ.
    ಯೆಹೋವನು ತನ್ನ ಮಹಾಶಕ್ತಿಯನ್ನು ಮತ್ತೆ ತೋರಿಸಿದ್ದಾನೆ.
16 ಯೆಹೋವನ ಬಲಗೈ ಜಯಗಳಿಸಿದೆ.
    ಯೆಹೋವನು ತನ್ನ ಮಹಾಶಕ್ತಿಯನ್ನು ಮತ್ತೆ ತೋರಿದ್ದಾನೆ.

17 ನಾನು ಸಾಯುವುದಿಲ್ಲ;
    ನಾನು ಜೀವದಿಂದಿದ್ದು ಯೆಹೋವನ ಕಾರ್ಯಗಳ ಕುರಿತು ಹೇಳುತ್ತೇನೆ.
18 ಯೆಹೋವನು ನನ್ನನ್ನು ಶಿಕ್ಷಿಸಿದರೂ
    ಸಾವಿಗೀಡುಮಾಡಲಿಲ್ಲ.
19 ನೀತಿಯ ಬಾಗಿಲುಗಳೇ, ನನಗೋಸ್ಕರ ತೆರೆಯಿರಿ,
    ನಾನು ಒಳಗೆ ಬಂದು ಯೆಹೋವನನ್ನು ಆರಾಧಿಸುತ್ತೇನೆ.
20 ಅವು ಯೆಹೋವನ ಬಾಗಿಲುಗಳು.
    ನೀತಿವಂತರು ಮಾತ್ರ ಆ ಬಾಗಿಲುಗಳ ಮೂಲಕ ಹೋಗಬಲ್ಲರು.
21 ಯೆಹೋವನೇ, ನನ್ನ ಪ್ರಾರ್ಥನೆಗೆ ನೀನು ಉತ್ತರಿಸಿ
    ನನ್ನನ್ನು ರಕ್ಷಿಸಿದ್ದಕ್ಕೋಸ್ಕರ ನಿನಗೆ ಕೃತಜ್ಞತಾಸ್ತುತಿ ಮಾಡುವೆನು.

22 ಮನೆ ಕಟ್ಟುವವರು ಬೇಡವೆಂದು ಬಿಟ್ಟ ಕಲ್ಲೇ ಮೂಲೆಗಲ್ಲಾಯಿತು.
23 ಇದು ಯೆಹೋವನಿಂದಲೇ ಆಯಿತು.
    ನಮಗಂತೂ ಇದು ಆಶ್ಚರ್ಯಕರವಾಗಿದೆ!
24 ಈ ದಿನವನ್ನು ಮಾಡಿದಾತನು ಯೆಹೋವನೇ.
    ಇಂದೇ ನಾವು ಉಲ್ಲಾಸದಿಂದ ಆನಂದಿಸೋಣ.

25 “ಯೆಹೋವನಿಗೆ ಸ್ತೋತ್ರವಾಗಲಿ!
    ಆತನು ನಮ್ಮನ್ನು ರಕ್ಷಿಸಿದ್ದಾನೆ.
26     ಯೆಹೋವನ ಹೆಸರಿನಲ್ಲಿ ಒಳಗೆ ಬರುವವನಿಗೆ ಸುಸ್ವಾಗತ!”

“ಯೆಹೋವನ ಆಲಯದಿಂದ ನಾವು ನಿನ್ನನ್ನು ಆಶೀರ್ವದಿಸುತ್ತೇವೆ!
27 ಯೆಹೋವನೇ ದೇವರು.
    ಆತನು ನಮ್ಮನ್ನು ಸ್ವೀಕರಿಸಿಕೊಳ್ಳುವನು.
    ಯಜ್ಞಕ್ಕೋಸ್ಕರ ಕುರಿಮರಿಯನ್ನು ಕಟ್ಟಿ ಯಜ್ಞವೇದಿಕೆಯ ಕೊಂಬುಗಳ ಸಮೀಪಕ್ಕೆ ಹೊತ್ತುಕೊಂಡು ಬನ್ನಿರಿ” ಎಂದು ಯಾಜಕರು ಉತ್ತರಿಸಿದರು.

28 ಯೆಹೋವನೇ, ನೀನೇ ನನ್ನ ದೇವರು; ನಾನು ನಿನಗೆ ಕೃತಜ್ಞತೆ ಸಲ್ಲಿಸುವೆನು.
    ನಾನು ನಿನ್ನನ್ನು ಘನಪಡಿಸುವೆನು!
29 ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ; ಆತನು ಒಳ್ಳೆಯವನು.
    ಆತನ ಪ್ರೀತಿಯು ಶಾಶ್ವತವಾದದ್ದು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International