Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
2 ರಾಜರುಗಳು 2

ಎಲೀಯನ ಪರಲೋಕಾರೋಹಣ

ಯೆಹೋವನು ಎಲೀಯನನ್ನು ಸುಂಟರಗಾಳಿಯ ಮೂಲಕ ಪರಲೋಕಕ್ಕೆ ಕರೆದುಕೊಳ್ಳುವ ಕಾಲ ಹತ್ತಿರ ಬಂದಿತು. ಎಲೀಯನು ಎಲೀಷನೊಡನೆ ಗಿಲ್ಗಾಲಿನಿಂದ ಹೋದನು.

ಎಲೀಯನು ಎಲೀಷನಿಗೆ, “ದಯವಿಟ್ಟು ಇಲ್ಲಿಯೇ ಇರು; ಏಕೆಂದರೆ ಬೇತೇಲಿಗೆ ಹೋಗುವಂತೆ ಯೆಹೋವನು ನನಗೆ ಆಜ್ಞಾಪಿಸಿದ್ದಾನೆ” ಎಂದು ಹೇಳಿದನು.

ಆದರೆ ಎಲೀಷನು, “ಯೆಹೋವನಾಣೆ, ನಿನ್ನಾಣೆ, ನಾನು ನಿನ್ನನ್ನು ಬಿಟ್ಟಿರುವುದಿಲ್ಲವೆಂದು ಪ್ರಮಾಣ ಮಾಡುತ್ತೇನೆ” ಎಂದು ಹೇಳಿದನು. ಇಬ್ಬರೂ ಬೇತೇಲಿಗೆ ಹೋದರು.

ಬೇತೇಲಿನಲ್ಲಿ ಪ್ರವಾದಿಗಳ ಗುಂಪೊಂದು ಎಲೀಷನ ಬಳಿಗೆ ಬಂದು, ಅವನಿಗೆ, “ಯೆಹೋವನು ಈ ದಿನ ನಿನ್ನ ಒಡೆಯನನ್ನು ನಿನ್ನಿಂದ ತೆಗೆದುಕೊಳ್ಳುತ್ತಾನೆಂಬುದು ನಿನಗೆ ತಿಳಿದಿದೆಯೇ?” ಎಂದು ಕೇಳಿದರು.

ಎಲೀಷನು, “ಹೌದು, ನನಗೆ ಅದು ತಿಳಿದಿದೆ. ಅದರ ಬಗ್ಗೆ ಮಾತನಾಡಬೇಡಿ” ಎಂದನು.

ಎಲೀಯನು ಎಲೀಷನಿಗೆ, “ದಯವಿಟ್ಟು ಇಲ್ಲಿಯೇ ಇರು, ಏಕೆಂದರೆ ಯೆಹೋವನು ಜೆರಿಕೊವಿಗೆ ಹೋಗುವಂತೆ ನನಗೆ ಆಜ್ಞಾಪಿಸಿದ್ದಾನೆ” ಎಂದು ಹೇಳಿದನು.

ಆದರೆ ಎಲೀಷನು, “ಯೆಹೋವನಾಣೆ, ನಿನ್ನಾಣೆ, ನಾನು ನಿನ್ನನ್ನು ಬಿಟ್ಟಿರುವುದಿಲ್ಲವೆಂದು ಪ್ರಮಾಣ ಮಾಡುತ್ತೇನೆ!” ಎಂದು ಹೇಳಿದನು. ಇಬ್ಬರೂ ಜೆರಿಕೊವಿಗೆ ಹೋದರು.

ಜೆರಿಕೊದಲ್ಲಿ ಪ್ರವಾದಿಗಳ ಗುಂಪೊಂದು ಎಲೀಷನ ಬಳಿಗೆ ಬಂದು ಅವನಿಗೆ, “ಯೆಹೋವನು ಈ ದಿನ ನಿನ್ನ ಒಡೆಯನನ್ನು ನಿನ್ನಿಂದ ತೆಗೆದುಕೊಳ್ಳುತ್ತಾನೆಂಬುದು ನಿನಗೆ ತಿಳಿದಿದೆಯೇ?” ಎಂದು ಕೇಳಿದರು.

ಎಲೀಷನು, “ಹೌದು, ನನಗೆ ಅದು ತಿಳಿದಿದೆ. ಅದರ ಬಗ್ಗೆ ಮಾತನಾಡಬೇಡಿ” ಎಂದನು.

ಎಲೀಯನು ಎಲೀಷನಿಗೆ, “ದಯವಿಟ್ಟು ಇಲ್ಲಿಯೇ ಇರು, ಏಕೆಂದರೆ ಯೆಹೋವನು ಜೋರ್ಡನ್ ನದಿಗೆ ಹೋಗುವಂತೆ ನನಗೆ ಆಜ್ಞಾಪಿಸಿದ್ದಾನೆ” ಎಂದು ಹೇಳಿದನು.

ಎಲೀಷನು, “ಯೆಹೋವನಾಣೆ, ನಿನ್ನಾಣೆ, ನಾನು ನಿನ್ನನ್ನು ಬಿಟ್ಟಿರುವುದಿಲ್ಲವೆಂದು ಪ್ರಮಾಣ ಮಾಡುತ್ತೇನೆ” ಎಂದು ಹೇಳಿದನು. ಅವರಿಬ್ಬರೂ ಮುಂದೆ ಸಾಗಿದರು.

ಅವರನ್ನು ಹಿಂಬಾಲಿಸಿಕೊಂಡು ಬಂದ ಪ್ರವಾದಿಗಳ ಗುಂಪಿನಲ್ಲಿ ಐವತ್ತು ಮಂದಿ ಅಲ್ಲಿದ್ದರು. ಎಲೀಯ ಮತ್ತು ಎಲೀಷರು ಜೋರ್ಡನ್ ನದಿಯ ಹತ್ತಿರ ನಿಂತುಕೊಂಡರು. ಆ ಐವತ್ತು ಮಂದಿ ಜನರು ಎಲೀಯ ಮತ್ತು ಎಲೀಷರಿಗಿಂತ ಬಹುದೂರದಲ್ಲಿ ನಿಂತುಕೊಂಡರು. ಎಲೀಯನು ತನ್ನ ಮೇಲಂಗಿಯನ್ನು ತೆಗೆದು ಅದರಿಂದ ನೀರನ್ನು ಹೊಡೆದನು. ಆಗ ನೀರು ಎರಡು ಭಾಗವಾಗಿ ಬಲಗಡೆಯಲ್ಲಿಯೂ ಎಡಗಡೆಯಲ್ಲಿಯೂ ನಿಂತುಕೊಂಡಿತು. ನಂತರ ಎಲೀಯ ಮತ್ತು ಎಲೀಷರು ಒಣನೆಲದ ಮೇಲೆ ನದಿಯನ್ನು ದಾಟಿದರು.

ಅವರು ನದಿಯನ್ನು ದಾಟಿದ ಮೇಲೆ ಎಲೀಯನು ಎಲೀಷನಿಗೆ, “ದೇವರು ನನ್ನನ್ನು ನಿನ್ನಿಂದ ತೆಗೆದುಕೊಳ್ಳುವುದಕ್ಕೆ ಮುಂಚೆ, ನಾನು ನಿನಗೆ ಏನು ಮಾಡಬೇಕೆಂದು ನೀನು ಅಪೇಕ್ಷಿಸುವೆ?” ಎಂದು ಕೇಳಿದನು.

ಎಲೀಷನು, “ನಿನ್ನ ಆತ್ಮವು ನನ್ನ ಮೇಲೆ ಎರಡರಷ್ಟಿರಬೇಕೆಂದು ನಾನು ನಿನ್ನಲ್ಲಿ ಬೇಡುತ್ತೇನೆ” ಎಂದು ಹೇಳಿದನು.

10 ಎಲೀಯನು, “ನೀನು ಕಷ್ಟಕರವಾದುದನ್ನು ಬೇಡಿಕೊಂಡೆ. ನಿನ್ನಿಂದ ನನ್ನನ್ನು ತೆಗೆದುಕೊಳ್ಳುವಾಗ ನೀನು ನನ್ನನ್ನು ಕಂಡರೆ, ಅದು ನಿನಗೆ ದೊರೆಯುವುದು. ಆದರೆ ನಿನ್ನಿಂದ ನನ್ನನ್ನು ತೆಗೆದುಕೊಳ್ಳುವಾಗ ನೀನು ನನ್ನನ್ನು ಕಾಣದಿದ್ದರೆ, ಅದು ನಿನಗೆ ದೊರೆಯುವುದಿಲ್ಲ” ಎಂದು ಹೇಳಿದನು.

11 ಎಲೀಯ ಮತ್ತು ಎಲೀಷ ಒಟ್ಟಿಗೆ ನಡೆಯುತ್ತಾ ಮಾತನಾಡುತ್ತಿದ್ದರು. ಇದ್ದಕ್ಕಿದ್ದಂತೆ, ಕೆಲವು ಕುದುರೆಗಳು ಮತ್ತು ರಥಗಳು ಬಂದು ಎಲೀಯನನ್ನು ಎಲೀಷನಿಂದ ಬೇರ್ಪಡಿಸಿದವು. ಆ ಕುದುರೆಗಳು ಮತ್ತು ರಥಗಳು ಬೆಂಕಿಯಂತಿದ್ದವು! ನಂತರ ಎಲೀಯನು ಸುಂಟರ ಗಾಳಿಯಲ್ಲಿ ಪರಲೋಕಕ್ಕೆ ಏರಿಹೋದನು.

12 ಎಲೀಷನು ಅದನ್ನು ನೋಡಿ, “ನನ್ನ ತಂದೆಯೇ! ನನ್ನ ತಂದೆಯೇ! ಇಸ್ರೇಲಿಗೆ ರಥರಥಾಶ್ವಗಳೂ ಮತ್ತು ಅಶ್ವದಳವೂ ಆಗಿದ್ದವನೇ!” ಎಂದು ಕೂಗಿಕೊಂಡನು.

ಎಲೀಷನು ಎಲೀಯನನ್ನು ಮತ್ತೆ ನೋಡಲಿಲ್ಲ. ಎಲೀಷನು ತನ್ನ ಬಟ್ಟೆಗಳನ್ನು ಹಿಡಿದುಕೊಂಡು, ತನ್ನ ದುಃಖವನ್ನು ತೋರ್ಪಡಿಸಲು ಅವುಗಳನ್ನು ಹರಿದು ತುಂಡುತುಂಡು ಮಾಡಿದನು. 13 ಎಲೀಯನ ಮೇಲಂಗಿಯು ನೆಲದ ಮೇಲೆ ಬಿತ್ತು. ಎಲೀಷನು ಅದನ್ನು ಎತ್ತಿಕೊಂಡು ಜೋರ್ಡನ್ ನದಿ ತೀರಕ್ಕೆ ಬಂದನು. ಆ ಕಂಬಳಿಯಿಂದ ನೀರನ್ನು ಹೊಡೆದು, “ಎಲೀಯನ ದೇವರಾದ ಯೆಹೋವನು ಎಲ್ಲಿದ್ದಾನೆ?” ಎಂದು ಕೇಳಿದನು. 14 ಎಲೀಷನು ನೀರನ್ನು ಹೊಡೆದಾಗ, ನೀರು ಎರಡು ಭಾಗವಾಗಿ ಬಲಗಡೆಯಲ್ಲೂ ಎಡಗಡೆಯಲ್ಲೂ ನಿಂತುಕೊಂಡಿತು! ಎಲೀಷನು ನದಿಯನ್ನು ದಾಟಿದನು.

ಎಲೀಯನ ಬಗ್ಗೆ ಪ್ರವಾದಿಗಳ ವಿಚಾರ

15 ಜೆರಿಕೊದಲ್ಲಿ ಪ್ರವಾದಿಗಳ ಗುಂಪೊಂದು ಎಲೀಷನನ್ನು ಕಂಡು, “ಎಲೀಯನ ಆತ್ಮವು ಈಗ ಎಲೀಷನ ಮೇಲಿದೆ!” ಎಂದು ಹೇಳಿ ಎಲೀಷನನ್ನು ಭೇಟಿಮಾಡಲು ಬಂದರು. ಅವರು ಎಲೀಷನಿಗೆ ಸಾಷ್ಟಾಂಗನಮಸ್ಕಾರ ಮಾಡಿದರು. 16 ಅವರು ಅವನಿಗೆ, “ನೋಡು, ನಮ್ಮಲ್ಲಿ ಐವತ್ತು ಮಂದಿ ಬಲಿಷ್ಠ ಜನರಿದ್ದಾರೆ. ನಿನ್ನ ಒಡೆಯನನ್ನು ಹುಡುಕಲು ದಯವಿಟ್ಟು ಅವರಿಗೆ ಅವಕಾಶಕೊಡು. ಯೆಹೋವನ ಆತ್ಮವು ಎಲೀಯನನ್ನು ಮೇಲಕ್ಕೆ ಎತ್ತಿಕೊಂಡು ಹೋಗಿ ಯಾವುದಾದರೂ ಬೆಟ್ಟದ ಮೇಲಾಗಲಿ ಅಥವಾ ಕಣಿವೆಯಲ್ಲಾಗಲಿ ಬೀಳಿಸಿರಬೇಕು” ಎಂದು ಹೇಳಿದರು.

ಆದರೆ ಎಲೀಷನು, “ಇಲ್ಲ, ಎಲೀಯನನ್ನು ಹುಡುಕಲು ಜನರನ್ನು ಕಳುಹಿಸಬೇಡಿ!” ಎಂದು ಉತ್ತರಿಸಿದನು.

17 ಎಲೀಷನು ಕಿರಿಕಿರಿಗೊಂಡು ಒಪ್ಪಿಕೊಳ್ಳುವವರೆಗೆ ಆ ಪ್ರವಾದಿಗಳ ಗುಂಪು ಅವನನ್ನು ಬೇಡಿಕೊಂಡರು. ನಂತರ ಎಲೀಷನು, “ಸರಿ, ಎಲೀಯನನ್ನು ಹುಡುಕಲು ಜನರನ್ನು ಕಳುಹಿಸಿ” ಎಂದು ಹೇಳಿದನು.

ಪ್ರವಾದಿಗಳ ಗುಂಪು ಎಲೀಯನನ್ನು ಹುಡುಕಲು ಐವತ್ತು ಮಂದಿ ಜನರನ್ನು ಕಳುಹಿಸಿದರು. ಅವರು ಮೂರು ದಿನ ಹುಡುಕಿದರೂ ಎಲೀಯನನ್ನು ಕಂಡು ಹಿಡಿಯಲಾಗಲಿಲ್ಲ. 18 ಅವರು ಎಲೀಷನು ನೆಲೆಸಿದ್ದ ಜೆರಿಕೊವಿಗೆ ಹೋದರು. ಅವರು ಎಲೀಯನನ್ನು ಕಂಡುಹಿಡಿಯಲಾಗಲಿಲ್ಲವೆಂದು ಎಲೀಷನಿಗೆ ಹೇಳಿದರು. ಎಲೀಷನು ಅವರಿಗೆ, “ನಾನು ನಿಮಗೆ ಹೋಗಬೇಡವೆಂದು ಹೇಳಿದೆನಲ್ಲ” ಎಂದನು.

ಎಲೀಷನು ನೀರನ್ನು ಶುಚಿಗೊಳಿಸಿದನು

19 ನಗರದ ಜನರು ಎಲೀಷನಿಗೆ, “ಸ್ವಾಮೀ, ಈ ನಗರವು ಒಳ್ಳೆಯ ಸ್ಥಳದಲ್ಲಿದೆಯೆಂಬುದನ್ನು ನೀನು ನೋಡುತ್ತಿರುವೆ. ಆದರೆ ನೀರು ತುಂಬಾ ಕೆಟ್ಟಿದೆ. ಆ ಕಾರಣದಿಂದಲೇ ಈ ಭೂಮಿಯಲ್ಲಿ ಬೆಳೆಗಳನ್ನು ಬೆಳೆಯಲಾಗುತ್ತಿಲ್ಲ” ಎಂದು ಹೇಳಿದರು.

20 ಎಲೀಷನು, “ಒಂದು ಹೊಸ ಬೋಗುಣಿಯನ್ನು ತಂದು ಅದರಲ್ಲಿ ಉಪ್ಪನ್ನು ಹಾಕಿ” ಎಂದನು.

ಜನರು ಎಲೀಷನ ಬಳಿಗೆ ಒಂದು ಬೋಗುಣಿಯನ್ನು ತಂದರು. 21 ನಂತರ ಎಲೀಷನು ನೆಲದಿಂದ ನೀರು ಹರಿಯುತ್ತಿದ್ದ ಸ್ಥಳಕ್ಕೆ ಹೋದನು. ಎಲೀಷನು ಉಪ್ಪನ್ನು ನೀರಿನಲ್ಲಿ ಎಸೆದು, “‘ನಾನು ಈ ನೀರನ್ನು ಶುಚಿಗೊಳಿಸಿದ್ದೇನೆ! ಇಲ್ಲಿಂದಾಚೆಗೆ ಈ ನೀರು ಯಾರಿಗೂ ಸಾವನ್ನು ಮತ್ತು ಬಂಜೆತನವನ್ನು ಉಂಟುಮಾಡುವುದಿಲ್ಲ ಮತ್ತು ಈ ಭೂಮಿಯಲ್ಲಿ ಬೆಳೆಗಳು ಬೆಳೆಯುತ್ತವೆ’ ಎಂದು ಯೆಹೋವನು ಹೇಳುತ್ತಾನೆ” ಎಂದನು.

22 ಆ ನೀರು ಶುದ್ಧವಾಯಿತು. ಇಂದು ಆ ನೀರು ಇನ್ನೂ ಶುದ್ಧವಾಗಿದೆ. ಎಲೀಷನು ಹೇಳಿದಂತೆಯೇ ಅದು ಸಂಭವಿಸಿತು.

ಕೆಲವು ಬಾಲಕರು ಎಲೀಷನನ್ನು ಅಪಹಾಸ್ಯ ಮಾಡಿದರು

23 ಎಲೀಷನು ಆ ನಗರದಿಂದ ಬೇತೇಲಿಗೆ ಹೋದನು. ಎಲೀಷನು ನಗರದಿಂದ ಬೆಟ್ಟದ ಮೇಲಕ್ಕೆ ಹೋಗುತ್ತಿದ್ದಾಗ, ಕೆಲವು ಬಾಲಕರು ನಗರದ ಕಡೆಯಿಂದ ಇಳಿಯುತ್ತಿದ್ದರು. ಅವರು ಎಲೀಷನನ್ನು ಹಾಸ್ಯಮಾಡಿ, “ಮೇಲಕ್ಕೆ ಹೋಗು, ಬೋಳುತಲೆಯವನೇ, ಮೇಲಕ್ಕೆ ಹೋಗು, ಬೋಳುತಲೆಯವನೇ” ಎಂದರು.

24 ಎಲೀಷನು ಹಿಂದಕ್ಕೆ ತಿರುಗಿ ಅವರನ್ನು ನೋಡಿ ಅವರಿಗೆ ಕೇಡಾಗುವಂತೆ ಯೆಹೋವನನ್ನು ಕೇಳಿಕೊಂಡನು. ಆಗ ಕಾಡಿನಿಂದ ಎರಡು ಕರಡಿಗಳು ಹೊರಗೆ ಬಂದು ಅವರ ಮೇಲೆರಗಿ ನಲವತ್ತೆರಡು ಮಂದಿ ಬಾಲಕರನ್ನು ಸೀಳಿಹಾಕಿದವು.

25 ಎಲೀಷನು ಬೇತೇಲನ್ನು ಬಿಟ್ಟು ಕಾರ್ಮೆಲ್ ಬೆಟ್ಟಕ್ಕೆ ಹೋದನು. ಅಲ್ಲಿಂದ ಎಲೀಷನು ಸಮಾರ್ಯಕ್ಕೆ ಹಿಂದಿರುಗಿ ಹೋದನು.

2 ಥೆಸಲೋನಿಕದವರಿಗೆ 2

ಕೆಟ್ಟಕಾರ್ಯಗಳು ಸಂಭವಿಸುವವು

ಸಹೋದರ ಸಹೋದರಿಯರೇ, ನಮ್ಮ ಪ್ರಭುವಾದ ಯೇಸು ಕ್ರಿಸ್ತನು ಪ್ರತ್ಯಕ್ಷನಾಗುವುದನ್ನು ಕುರಿತು ಕೆಲವು ಮಾತುಗಳನ್ನು ಹೇಳಬೇಕಾಗಿದೆ. ನಾವೆಲ್ಲರೂ ಒಟ್ಟಾಗಿ ಸೇರಿ ಆತನನ್ನು ಸಂಧಿಸುವ ಕಾಲವನ್ನು ಕುರಿತು ನಿಮ್ಮೊಡನೆ ಮಾತನಾಡಲು ಇಚ್ಛಿಸುತ್ತೇವೆ. ಪ್ರಭುವಿನ ದಿನವು ಈಗಾಗಲೇ ಬಂದುಬಿಟ್ಟಿತು ಎಂದು ಯಾರಾದರು ನಿಮಗೆ ಹೇಳಿದರೆ ಆ ಕೂಡಲೇ ಕಳವಳಗೊಳ್ಳಬೇಡಿ ಅಥವಾ ಭಯಪಡಬೇಡಿ. ಯಾವನಾದರೂ ತನ್ನ ಪ್ರವಾದನೆಯಲ್ಲಾಗಲಿ ಉಪದೇಶದಲ್ಲಾಗಲಿ ಹಾಗೆ ಹೇಳುವ ಸಾಧ್ಯತೆ ಇದೆ. ಯಾವನಾದರೂ ಸುಳ್ಳುಪತ್ರವನ್ನೇ ನಮ್ಮ ಹೆಸರಿನಲ್ಲಿ ತಾನೇ ಬರೆದು ನಿಮ್ಮ ಮುಂದೆ ಓದಿ ತಿಳಿಸುವ ಸಾಧ್ಯತೆಯೂ ಇದೆ. ಯಾರೂ ಯಾವ ವಿಧದಲ್ಲಿಯೂ ನಿಮ್ಮನ್ನು ಮೋಸಗೊಳಿಸಲು ಅವಕಾಶ ನೀಡದಿರಿ. ಜನರು ದೇವರಿಗೆ ವಿಮುಖರಾಗದ ಹೊರತು, ಅಧರ್ಮಸ್ವರೂಪನು ಕಾಣಿಸಿಕೊಳ್ಳದ ಹೊರತು ಆ ದಿನವು ಬರುವುದಿಲ್ಲ. ದೇವರೆಂದು ಕರೆಸಿಕೊಳ್ಳುವ ಏನನ್ನೇ ಆಗಲಿ, ಜನರು ಪೂಜಿಸುವ ಯಾವುದನ್ನೇ ಆಗಲಿ ಅಧರ್ಮಸ್ವರೂಪನು ವಿರೋಧಿಸಿ, ಅವುಗಳಿಗಿಂತ ತನ್ನನ್ನು ತಾನೇ ಹೆಚ್ಚಿಸಿಕೊಂಡು ದೇವರ ಆಲಯದೊಳಕ್ಕೆ ಹೋಗಿ ಕುಳಿತುಕೊಂಡು ತಾನೇ ದೇವರೆಂದು ಹೇಳಿಕೊಳ್ಳುತ್ತಾನೆ.

ಈ ಸಂಗತಿಗಳೆಲ್ಲವೂ ಸಂಭವಿಸುತ್ತವೆಯೆಂದು ನಾನು ನಿಮಗೆ ಮೊದಲೇ ತಿಳಿಸಿದ್ದೇನೆ. ಜ್ಞಾಪಕವಿಲ್ಲವೇ? ಈಗ ಅಧರ್ಮಸ್ವರೂಪನನ್ನು ತಡೆಹಿಡಿದಿರುವುದು ಯಾವುದೆಂಬುದು ನಿಮಗೆ ತಿಳಿದಿದೆ. ಅವನು ತಕ್ಕಕಾಲದಲ್ಲಿ ಬರಲೆಂದೇ ಅವನನ್ನು ಈಗ ತಡೆಹಿಡಿಯಲಾಗಿದೆ. ರಹಸ್ಯವಾದ ದುಷ್ಟಶಕ್ತಿಯು ಈಗಾಗಲೇ ಪ್ರಪಂಚದಲ್ಲಿ ತನ್ನ ಕಾರ್ಯವನ್ನು ಸಾಧಿಸುತ್ತಾ ಇದೆ. ಆದರೆ ಆ ರಹಸ್ಯವಾದ ದುಷ್ಟಶಕ್ತಿಯನ್ನು ತಡೆಹಿಡಿಯುವ ಒಬ್ಬಾತನಿದ್ದಾನೆ. ಆತನು ತೆಗೆದುಬಿಡಲ್ಪಟ್ಟ ಕೂಡಲೇ ಅಧರ್ಮಸ್ವರೂಪನು ಕಾಣಿಸಿಕೊಳ್ಳುತ್ತಾನೆ. ಪ್ರಭುವಾದ ಯೇಸು ಅವನನ್ನು ತನ್ನ ಬಾಯಿಯ ಉಸಿರಿನಿಂದಲೇ ಕೊಲ್ಲುವನು; ತನ್ನ ಪ್ರತ್ಯಕ್ಷತೆಯ ಮಹಿಮೆಯಿಂದ ನಾಶಪಡಿಸುವನು.

ಆ ಅಧರ್ಮಸ್ವರೂಪನು ಸೈತಾನನ ಮಹಾಶಕ್ತಿಯಿಂದ ಕೂಡಿದವನಾಗಿರುತ್ತಾನೆ. ಅವನು ಅನೇಕ ಮೋಸದ ಪವಾಡಗಳನ್ನು, ಸೂಚಕಕಾರ್ಯಗಳನ್ನು, ಅದ್ಭುತಕಾರ್ಯಗಳನ್ನು ಮಾಡುತ್ತಾನೆ. 10 ಸತ್ಯವನ್ನು ಪ್ರೀತಿಸದೆ ತಪ್ಪಿಹೋಗಿರುವ ಜನರನ್ನು ಮೋಸಗೊಳಿಸಲು, ಅವನು ಎಲ್ಲಾ ವಿಧವಾದ ತಂತ್ರಗಳನ್ನು ಮಾಡುವನು. (ಅವರು ಸತ್ಯವನ್ನು ಪ್ರೀತಿಸಿದ್ದರೆ, ರಕ್ಷಣೆ ಹೊಂದುತ್ತಿದ್ದರು.) 11 ಆದರೆ ಆ ಜನರು ಸತ್ಯವನ್ನು ಪ್ರೀತಿಸಲಿಲ್ಲ. ಆದಕಾರಣ, ಸತ್ಯವನ್ನು ತೊರೆದು, ಸತ್ಯವಲ್ಲದ್ದನ್ನು ನಂಬುವಂತೆ ಮಾಡುವ ಶಕ್ತಿಯೊಂದನ್ನು ದೇವರು ಅವರ ಬಳಿಗೆ ಕಳುಹಿಸುತ್ತಾನೆ. 12 ಸತ್ಯವನ್ನು ನಂಬದೆ, ಕೆಟ್ಟಕಾರ್ಯಗಳನ್ನು ಮಾಡುವುದರಲ್ಲಿ ಸಂತೋಷಪಡುವ ಜನರೆಲ್ಲರೂ ದಂಡನೆಗೆ ಒಳಗಾಗುವರು.

ರಕ್ಷಣೆಗಾಗಿ ನೀವು ಆರಿಸಲ್ಪಟ್ಟಿರುವಿರಿ

13 ಸಹೋದರ ಸಹೋದರಿಯರೇ, ಪ್ರಭುವು ನಿಮ್ಮನ್ನು ಪ್ರೀತಿಸುತ್ತಾನೆ. ನಿಮ್ಮನ್ನು ರಕ್ಷಿಸಬೇಕೆಂದು ದೇವರು ನಿಮ್ಮನ್ನು ಆದಿಯಲ್ಲಿಯೇ ಆರಿಸಿಕೊಂಡನು. ಆದ್ದರಿಂದ ನಿಮ್ಮ ವಿಷಯದಲ್ಲಿ ದೇವರಿಗೆ ಯಾವಾಗಲೂ ಕೃತಜ್ಞತೆ ಸಲ್ಲಿಸಬೇಕು. ನಿಮ್ಮನ್ನು ಪರಿಶುದ್ಧರನ್ನಾಗಿ ಮಾಡುವ ಪವಿತ್ರಾತ್ಮನಿಂದ ಮತ್ತು ಸತ್ಯದ ಮೇಲೆ ನಿಮಗಿರುವ ನಂಬಿಕೆಯಿಂದ ನೀವು ರಕ್ಷಣೆ ಹೊಂದಿದ್ದೀರಿ. 14 ನೀವು ರಕ್ಷಣೆಯನ್ನು ಹೊಂದಿಕೊಂಡು ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಮಹಿಮೆಯಲ್ಲಿ ಪಾಲುಗಾರರಾಗಬೇಕೆಂದು, ನಾವು ಸಾರಿದ ಸುವಾರ್ತೆಯ ಮೂಲಕ ದೇವರು ನಿಮ್ಮನ್ನು ಕರೆದನು. 15 ಸಹೋದರ ಸಹೋದರಿಯರೇ, ದೃಢವಾಗಿರಿ. ನಾವು ಮಾತಿನ ಮೂಲಕ ಮತ್ತು ಪತ್ರಗಳ ಮೂಲಕ ನಿಮಗೆ ತಿಳಿಸಿದ ಬೋಧನೆಗಳನ್ನು ನಂಬಿಕೊಂಡೇ ಇರಿ.

16-17 ನೀವು ಹೇಳುವ ಒಳ್ಳೆಯ ಸಂಗತಿಗಳಲ್ಲಿ ಮತ್ತು ಮಾಡುವ ಒಳ್ಳೆಯ ಕಾರ್ಯಗಳಲ್ಲಿ ನಿಮಗೆ ಬಲವನ್ನೂ ಆದರಣೆಯನ್ನೂ ಪ್ರಭುವಾದ ಯೇಸು ಕ್ರಿಸ್ತನು ಮತ್ತು ತಂದೆಯಾದ ದೇವರು ನಿಮಗೆ ದಯಪಾಲಿಸಲಿ ಎಂದು ನಾವು ಪ್ರಾರ್ಥಿಸುತ್ತೇವೆ. ದೇವರು ನಮ್ಮನ್ನು ಪ್ರೀತಿಸಿದನು. ಆತನು ತನ್ನ ಕೃಪೆಯಿಂದಲೇ ನಮಗೆ ಒಳ್ಳೆಯ ನಿರೀಕ್ಷೆಯನ್ನೂ ಶಾಶ್ವತವಾದ ಆದರಣೆಯನ್ನೂ ದಯಪಾಲಿಸಿದನು.

ದಾನಿಯೇಲ 6

ದಾನಿಯೇಲನು ಮತ್ತು ಸಿಂಹಗಳು

ದಾರ್ಯಾವೆಷನು ತನ್ನ ರಾಜ್ಯಭಾರವನ್ನು ನಿರ್ವಹಿಸುವದಕ್ಕೋಸ್ಕರ ರಾಜ್ಯದ ಆಯಾ ಭಾಗಗಳ ಮೇಲೆ ನೂರಿಪ್ಪತ್ತು ಜನ ದೇಶಾಧಿಪತಿಗಳನ್ನು ನೇಮಿಸಿದನು. ಆ ನೂರಿಪ್ಪತ್ತು ಜನರ ಮೇಲೆ ಮೂರು ಜನ ಮುಖ್ಯಾಧಿಕಾರಿಗಳನ್ನು ನೇಮಿಸಿದನು. ದಾನಿಯೇಲನು ಈ ಮೂರು ಜನ ಮುಖ್ಯಾಧಿಕಾರಿಗಳಲ್ಲೊಬ್ಬನಾಗಿದ್ದನು. ಯಾರೊಬ್ಬರೂ ತನಗೆ ಮೋಸ ಮಾಡದಂತೆ ಮತ್ತು ತನ್ನ ರಾಜ್ಯಕ್ಕೆ ನಷ್ಟವಾಗದಂತೆ ನೋಡಿಕೊಳ್ಳಲು ರಾಜನು ಈ ಮೂವರನ್ನು ನೇಮಿಸಿದ್ದನು. ದಾನಿಯೇಲನು ಬೇರೆ ಮುಖ್ಯಾಧಿಕಾರಿಗಳಿಗಿಂತ ಸಮರ್ಥನೆಂದು ತೋರಿಸಿಕೊಟ್ಟನು. ದಾನಿಯೇಲನು ತನ್ನ ಒಳ್ಳೆಯ ಗುಣ ಮತ್ತು ಮಹಾ ಸಾಮರ್ಥ್ಯಗಳ ಮೂಲಕ ಈ ಒಳ್ಳೆಯ ಹೆಸರನ್ನು ಪಡೆದನು. ದಾನಿಯೇಲನಿಂದ ಅರಸನು ತುಂಬ ಪ್ರಭಾವಿತನಾಗಿ ಅವನನ್ನು ಇಡೀ ರಾಜ್ಯದ ಅಧಿಕಾರಿಯನ್ನಾಗಿ ನೇಮಿಸಲು ಯೋಜನೆ ಮಾಡಿದನು. ಆದರೆ ಬೇರೆ ಮುಖ್ಯಾಧಿಕಾರಿಗಳು ಮತ್ತು ದೇಶಾಧಿಪತಿಗಳು ಈ ಸಮಾಚಾರವನ್ನು ತಿಳಿದು ಹೊಟ್ಟೆಕಿಚ್ಚುಪಟ್ಟರು. ಅವರು ದಾನಿಯೇಲನ ಮೇಲೆ ದೋಷಾರೋಪಣೆ ಮಾಡಲು ಕಾರಣಗಳನ್ನು ಹುಡುಕಲಾರಂಭಿಸಿದರು. ದಾನಿಯೇಲನು ಮಾಡುವ ರಾಜ್ಯದ ಎಲ್ಲ ಕೆಲಸಗಳ ಮೇಲೆ ಅವರು ಕಣ್ಣಿಟ್ಟರು. ಆದರೆ ದಾನಿಯೇಲನಲ್ಲಿ ಯಾವ ತಪ್ಪೂ ಅವರಿಗೆ ಸಿಕ್ಕಲಿಲ್ಲ. ಆದ್ದರಿಂದ ಅವರು ಅವನ ಮೇಲೆ ಯಾವ ದೋಷಾರೋಪಣೆಯನ್ನೂ ಮಾಡಲಾಗಲಿಲ್ಲ. ದಾನಿಯೇಲನು ಪ್ರಾಮಾಣಿಕನೂ ವಿಶ್ವಾಸಪಾತ್ರನೂ ಆಗಿದ್ದನು. ಅವನು ಬಹಳ ಕಷ್ಟಪಟ್ಟು ಕೆಲಸ ಮಾಡುತ್ತಿದ್ದನು; ಅರಸನಿಗೆ ಯಾವ ರೀತಿಯಲ್ಲೂ ವಂಚನೆ ಮಾಡುತ್ತಿರಲಿಲ್ಲ.

ಕೊನೆಗೆ ಅವರು, “ದಾನಿಯೇಲನ ಮೇಲೆ ದೋಷಾರೋಪಣೆ ಮಾಡುವದಕ್ಕೆ ನಮಗೆ ಕಾರಣ ಸಿಕ್ಕುವುದೇ ಇಲ್ಲ. ಅವನ ದೇವರ ಧರ್ಮಕ್ಕೆ ಸಂಬಂಧಪಟ್ಟ ವಿಷಯಗಳಲ್ಲಿಯೇ ಏನಾದರೂ ತಪ್ಪು ಹುಡುಕಬೇಕು” ಎಂದು ಮಾತನಾಡಿಕೊಂಡರು.

ಆ ಇಬ್ಬರು ಮುಖ್ಯಾಧಿಕಾರಿಗಳು ಮತ್ತು ದೇಶಾಧಿಪತಿಗಳು ಒಟ್ಟಿಗೆ ಸೇರಿ ಅರಸನ ಬಳಿಗೆ ಹೋದರು. ಅವರು, “ಅರಸನಾದ ದಾರ್ಯಾವೆಷನೇ, ಚಿರಂಜೀವಿಯಾಗಿರು. ರಾಜ್ಯದ ಸಕಲ ಮುಖ್ಯಾಧಿಕಾರಿಗಳು, ನಾಯಕರು, ದೇಶಾಧಿಪತಿಗಳು, ಮಂತ್ರಿಗಳು ಮತ್ತು ಸಂಸ್ಥಾನಾಧ್ಯಕ್ಷರು ಸೇರಿ ಒಂದು ಆಲೋಚನೆಯನ್ನು ಮಾಡಿದ್ದಾರೆ. ಈ ಸಂಬಂಧವಾಗಿ ಅರಸನು ಒಂದು ನಿಬಂಧನೆಯನ್ನು ಮಾಡಿ ರಾಜಾಜ್ಞೆಯನ್ನು ಹೊರಡಿಸಬೇಕೆಂದು ನಮ್ಮೆಲ್ಲರ ಅನಿಸಿಕೆ. ಎಲ್ಲರೂ ಆ ರಾಜಾಜ್ಞೆಯನ್ನು ಪಾಲಿಸಬೇಕು. ಆ ನಿಬಂಧನೆ ಹೀಗಿದೆ: ಬರಲಿರುವ ಮೂವತ್ತು ದಿನ ಯಾರೂ ಅರಸನಾದ ನಿನ್ನನ್ನು ಬಿಟ್ಟು ಬೇರೆ ಯಾವ ದೇವರನ್ನಾಗಲಿ ಮನುಷ್ಯನನ್ನಾಗಲಿ ಪ್ರಾರ್ಥಿಸಕೂಡದು. ಯಾರಾದರೂ ಹಾಗೆ ಮಾಡಿದರೆ ಅವರನ್ನು ಸಿಂಹಗಳ ಗುಹೆಯಲ್ಲಿ ಎಸೆಯಲಾಗುವುದು. ಅರಸನೇ, ಈ ನಿಬಂಧನೆಯನ್ನು ಬರೆದ ಕಾಗದಕ್ಕೆ ನಿನ್ನ ಹಸ್ತಾಕ್ಷರ ಹಾಕಿ ಅದನ್ನು ಶಾಸನವನ್ನಾಗಿ ಮಾಡು. ಹೀಗೆ ಮಾಡಿದರೆ ಶಾಸನವನ್ನು ಬದಲಾಯಿಸಲಾಗುವುದಿಲ್ಲ. ಏಕೆಂದರೆ ಮೇದ್ಯಯರ ಮತ್ತು ಪಾರಸಿಯರ ಶಾಸನಗಳು ಎಂದಿಗೂ ರದ್ದಾಗುವದಿಲ್ಲ ಮತ್ತು ಅವುಗಳನ್ನು ಬದಲಾಯಿಸಲಾಗುವುದಿಲ್ಲ.” ರಾಜನಾದ ದಾರ್ಯಾವೆಷನು ಆ ನಿಬಂಧನೆಯನ್ನು ಶಾಸನವನ್ನಾಗಿ ಮಾಡಿ ರುಜು ಹಾಕಿದನು.

10 ದಾನಿಯೇಲನು ಯಾವಾಗಲೂ ಪ್ರತಿದಿನ ಮೂರು ಸಲ ದೇವರಲ್ಲಿ ಪ್ರಾರ್ಥನೆಯನ್ನು ಮಾಡುತ್ತಿದ್ದನು. ದಾನಿಯೇಲನು ಮೊಣಕಾಲೂರಿ ದೇವರಲ್ಲಿ ಪ್ರಾರ್ಥಿಸುತ್ತಿದ್ದನು ಮತ್ತು ದೇವರನ್ನು ಸ್ತುತಿಸುತ್ತಿದ್ದನು. ಈ ಹೊಸ ಶಾಸನದ ಬಗ್ಗೆ ಕೇಳಿದ ಮೇಲೆ ದಾನಿಯೇಲನು ತನ್ನ ಮನೆಯ ಮಹಡಿಯ ಮೇಲಿದ್ದ ತನ್ನ ಕೋಣೆಗೆ ಹೋಗಿ ಜೆರುಸಲೇಮಿನ ಕಡೆಗೆ ತೆರೆದ ಕಿಟಕಿಯ ಬಳಿ ಮೊಣಕಾಲೂರಿ ಎಂದಿನಂತೆ ಪ್ರಾರ್ಥನೆಮಾಡಿದನು.

11 ಆಗ ಆ ಜನರು ಗುಂಪಾಗಿ ಹೋಗಿ ದಾನಿಯೇಲನನ್ನು ನೋಡಿದರು. ದಾನಿಯೇಲನು ದೇವರಲ್ಲಿ ಪ್ರಾರ್ಥಿಸಿ ಸಹಾಯ ಕೋರುತ್ತಿರುವದನ್ನು ಅವರು ನೋಡಿದರು. 12 ಅವರು ಅರಸನ ಬಳಿಗೆ ಹೋಗಿ ತಮ್ಮ ಶಾಸನದ ಬಗ್ಗೆ ಅರಸನೊಂದಿಗೆ ಮಾತನಾಡಿದರು. ಅವರು, “ರಾಜನಾದ ದಾರ್ಯಾವೆಷನೇ. ಮುಂಬರುವ ಮೂವತ್ತು ದಿನಗಳಲ್ಲಿ ಯಾರಾದರೂ ನಿನ್ನ ಹೊರತು ಯಾವ ದೇವರಿಗಾಗಲಿ ಮನುಷ್ಯನಿಗಾಗಲಿ ಪ್ರಾರ್ಥನೆ ಸಲ್ಲಿಸಿದರೆ ಅವರನ್ನು ಸಿಂಹದ ಗುಹೆಯಲ್ಲಿ ಎಸೆಯಲಾಗುವುದೆಂಬ ಶಾಸನಕ್ಕೆ ನೀನು ರುಜು ಹಾಕಿರುವಿಯಲ್ಲವೆ?” ಎಂದು ಕೇಳಿದರು.

ರಾಜನು, “ಹೌದು, ನಾನು ಆ ಶಾಸನಕ್ಕೆ ರುಜು ಹಾಕಿದ್ದೇನೆ. ಮೇದ್ಯಯರ ಮತ್ತು ಪಾರಸಿಯರ ಶಾಸನಗಳು ರದ್ದಾಗುವದಿಲ್ಲ ಮತ್ತು ಬದಲಾವಣೆ ಹೊಂದುವದಿಲ್ಲ” ಎಂದು ಉತ್ತರಕೊಟ್ಟನು.

13 ಆಗ ಅವರು ರಾಜನಿಗೆ, “ದಾನಿಯೇಲನೆಂಬ ಆ ಮನುಷ್ಯ ನಿನ್ನ ಕಡೆಗೆ ಎಳ್ಳಷ್ಟೂ ಗಮನ ಕೊಡುತ್ತಿಲ್ಲ. ಅವನು ಯೆಹೂದದ ಸೆರೆಯಾಳುಗಳಲ್ಲೊಬ್ಬನು. ನೀನು ರುಜುಹಾಕಿದ ಶಾಸನಕ್ಕೆ ಅವನು ಸ್ವಲ್ಪವಾದರೂ ಬೆಲೆಕೊಡುತ್ತಿಲ್ಲ. ದಾನಿಯೇಲನು ಈಗಲೂ ದಿನಕ್ಕೆ ಮೂರು ಸಲ ತನ್ನ ದೇವರಲ್ಲಿ ಪ್ರಾರ್ಥಿಸುತ್ತಾನೆ” ಎಂದು ಹೇಳಿದರು.

14 ಇದನ್ನು ಕೇಳಿ ಅರಸನಿಗೆ ದುಃಖವೂ ವ್ಯಸನವೂ ಆಯಿತು. ದಾನಿಯೇಲನನ್ನು ರಕ್ಷಿಸಲು ಉಪಾಯವೊಂದನ್ನು ಕಂಡುಹಿಡಿಯಲು ಸಾಯಂಕಾಲದವರೆಗೆ ಯೋಚಿಸಿದನು. 15 ಆಗ ಅವರು ಗುಂಪಾಗಿ ಅರಸನ ಬಳಿಗೆ ಹೋಗಿ, “ಅರಸನೇ, ನೆನಪಿಡು, ಮೇದ್ಯಯರ ಮತ್ತು ಪಾರಸಿಯರ ಶಾಸನದ ಪ್ರಕಾರ ಅರಸನ ಹಸ್ತಾಕ್ಷರದೊಂದಿಗೆ ಹೊರಡಿಸಿದ ರಾಜಾಜ್ಞೆಯನ್ನು ಎಂದಿಗೂ ರದ್ದುಗೊಳಿಸಲಾಗುವುದಿಲ್ಲ; ಅದರಲ್ಲಿ ಬದಲಾವಣೆ ಮಾಡಲಾಗುವುದಿಲ್ಲ” ಎಂದರು.

16 ರಾಜನಾದ ದಾರ್ಯಾವೆಷನು ಆಜ್ಞೆಯನ್ನು ಕೊಟ್ಟನು. ಅವರು ದಾನಿಯೇಲನನ್ನು ಸಿಂಹಗಳ ಗುಹೆಯಲ್ಲಿ ಎಸೆದರು. ಅರಸನು ದಾನಿಯೇಲನಿಗೆ, “ನೀನು ಸೇವೆ ಮಾಡುತ್ತಲೇ ಇರುವ ದೇವರು ನಿನ್ನನ್ನು ರಕ್ಷಿಸುವನೆಂದು ನನಗೆ ಗೊತ್ತಿದೆ” ಎಂದನು. 17 ಕೂಡಲೆ ಒಂದು ದೊಡ್ಡ ಕಲ್ಲುಬಂಡೆಯನ್ನು ತಂದು ಆ ಸಿಂಹದ ಗುಹೆಯ ಬಾಯಿಯನ್ನು ಮುಚ್ಚಿದರು. ಅರಸನು ತನ್ನ ಮುದ್ರೆಯುಂಗುರದಿಂದ ಆ ಬಂಡೆಗೆ ಮುದ್ರೆ ಹಾಕಿದನು. ಅರಸನ ಅಧಿಕಾರಗಳ ಮುದ್ರೆಯುಂಗುರಗಳಿಂದಲೂ ಸಹ ಆ ಕಲ್ಲುಬಂಡೆಗೆ ಮುದ್ರೆ ಹಾಕಲಾಯಿತು. ಇದರಿಂದಾಗಿ ಯಾರೂ ಆ ಕಲ್ಲುಬಂಡೆಯನ್ನು ಸರಿಸಿ ದಾನಿಯೇಲನನ್ನು ಆ ಸಿಂಹದ ಗುಹೆಯಿಂದ ಹೊರಗೆ ತೆಗೆಯದಂತಾಯಿತು. 18 ರಾಜನಾದ ದಾರ್ಯಾವೆಷನು ಅರಮನೆಗೆ ಹಿಂತಿರುಗಿದನು. ಆ ರಾತ್ರಿ ಅರಸನು ಊಟಮಾಡಲಿಲ್ಲ. ಮನೋರಂಜನೆಗಾಗಿ ಯಾರನ್ನೂ ತನ್ನ ಹತ್ತಿರ ಬರಗೊಡಿಸಲಿಲ್ಲ. ಇಡೀ ರಾತ್ರಿ ಅವನಿಗೆ ನಿದ್ರೆಯೇ ಬರಲಿಲ್ಲ.

19 ಮರುದಿನ ಬೆಳಿಗ್ಗೆ ಸೂರ್ಯೋದಯದ ಹೊತ್ತಿಗೆ ರಾಜನಾದ ದಾರ್ಯಾವೆಷನು ಎದ್ದನು. ಅವನು ಸಿಂಹಗಳ ಗುಹೆಗೆ ಬೇಗಬೇಗನೆ ಹೋದನು. 20 ರಾಜನಿಗೆ ಬಹಳ ಚಿಂತೆಯಾಗಿತ್ತು. ರಾಜನು ಸಿಂಹಗಳ ಗುಹೆಗೆ ಹೋಗಿ, “ದಾನಿಯೇಲನೇ, ಜೀವಸ್ವರೂಪನಾದ ದೇವರ ಸೇವಕನೇ, ನೀನು ನಿತ್ಯವೂ ಸೇವೆ ಮಾಡುವ ನಿನ್ನ ದೇವರು ನಿನ್ನನ್ನು ಸಿಂಹಗಳಿಂದ ಉಳಿಸಲು ಶಕ್ತನಾದನೇ?” ಎಂದು ಕೂಗಿ ಕೇಳಿದನು.

21 ದಾನಿಯೇಲನು, “ಅರಸನೇ, ಚಿರಂಜೀವಿಯಾಗಿರು. 22 ನನ್ನ ದೇವರು ನನ್ನನ್ನು ರಕ್ಷಿಸುವುದಕ್ಕಾಗಿ ತನ್ನ ದೂತನನ್ನು ಕಳುಹಿಸಿದನು. ಆ ದೇವದೂತನು ಸಿಂಹಗಳ ಬಾಯಿಯನ್ನು ಮುಚ್ಚಿದನು. ಸಿಂಹಗಳು ನನ್ನನ್ನು ಗಾಯಗೊಳಿಸಲಿಲ್ಲ. ಏಕೆಂದರೆ ನಾನು ತಪ್ಪಿತಸ್ಥನಲ್ಲವೆಂದು ನನ್ನ ದೇವರಿಗೆ ಗೊತ್ತುಂಟು. ರಾಜನೇ, ನಾನೆಂದೂ ನಿನಗೆ ತಪ್ಪು ಮಾಡಲಿಲ್ಲ” ಎಂದು ಉತ್ತರಿಸಿದನು.

23 ಅರಸನಾದ ದಾರ್ಯಾವೆಷನಿಗೆ ಬಹಳ ಸಂತೋಷವಾಯಿತು. ದಾನಿಯೇಲನನ್ನು ಸಿಂಹಗಳ ಗುಹೆಯಿಂದ ಮೇಲಕ್ಕೆ ಎತ್ತಿಸಬೇಕೆಂದು ತನ್ನ ಸೇವಕರಿಗೆ ಆಜ್ಞಾಪಿಸಿದನು. ದಾನಿಯೇಲನನ್ನು ಸಿಂಹಗಳ ಗುಹೆಯಿಂದ ಹೊರತೆಗೆದು ನೋಡಲಾಗಿ ಸಿಂಹಗಳಿಂದ ಅವನಿಗೆ ಯಾವ ಗಾಯಗಳೂ ಆಗಿರಲಿಲ್ಲ. ದಾನಿಯೇಲನು ತನ್ನ ದೇವರಲ್ಲಿ ನಂಬಿಕೆಯಿಟ್ಟಿದ್ದರಿಂದ ಅವನಿಗೆ ಸಿಂಹಗಳಿಂದ ಯಾವ ನೋವೂ ಆಗಿರಲಿಲ್ಲ.

24 ಆಗ ರಾಜನು ದಾನಿಯೇಲನ ಮೇಲೆ ದೋಷಾರೋಪಣೆಯನ್ನು ಮಾಡಿದ ಜನರನ್ನು ಸಿಂಹಗಳ ಗುಹೆಗೆ ಕರೆತರಬೇಕೆಂದು ಆಜ್ಞಾಪಿಸಿದನು. ಆ ಜನರನ್ನೂ ಅವರ ಹೆಂಡತಿಮಕ್ಕಳನ್ನೂ ಸಹಿತವಾಗಿ ಸಿಂಹಗಳ ಗುಹೆಯಲ್ಲಿ ಎಸೆಯಲಾಯಿತು. ಅವರು ಗುಹೆಯ ನೆಲಕ್ಕೆ ಮುಟ್ಟುವ ಮೊದಲೇ ಸಿಂಹಗಳು ಅವರನ್ನು ಎಳೆದುಕೊಂಡವು. ಸಿಂಹಗಳು ಅವರ ದೇಹಗಳನ್ನು ತಿಂದು ಎಲುಬುಗಳನ್ನು ಅಗಿದುಹಾಕಿದವು.

25 ಆಗ ಅರಸನಾದ ದಾರ್ಯಾವೆಷನು ಲೋಕದಲ್ಲೆಲ್ಲಾ ವಾಸಿಸುವ ಸಕಲ ಜನಾಂಗ ಕುಲಭಾಷೆಗಳವರಿಗೆ ಈ ಪತ್ರವನ್ನು ಬರೆದನು:

ಶುಭಾಶಯಗಳು.

26 ನಾನೊಂದು ಹೊಸ ಶಾಸನವನ್ನು ಮಾಡುತ್ತಿದ್ದೇನೆ. ಈ ಶಾಸನವು ನನ್ನ ರಾಜ್ಯದ ಎಲ್ಲ ಭಾಗಗಳ ಜನರಿಗೆ ಅನ್ವಯಿಸುವುದು. ನೀವೆಲ್ಲರೂ ದಾನಿಯೇಲನ ದೇವರಲ್ಲಿ ಭಯಭಕ್ತಿಯುಳ್ಳವರಾಗಿರಬೇಕು.

ದಾನಿಯೇಲನ ದೇವರೇ ಜೀವಸ್ವರೂಪನಾದ ದೇವರು.
    ಆತನು ನಿರಂತರವೂ ಇರುವಾತನಾಗಿದ್ದಾನೆ.
ಆತನ ಸಾಮ್ರಾಜ್ಯವು ಎಂದಿಗೂ ಹಾಳಾಗುವದಿಲ್ಲ.
    ಆತನ ಆಧಿಪತ್ಯವು ಎಂದಿಗೂ ಮುಗಿಯುವದಿಲ್ಲ.
27 ದೇವರು ಜನರಿಗೆ ಸಹಾಯ ಮಾಡುತ್ತಾನೆ ಮತ್ತು ರಕ್ಷಿಸುತ್ತಾನೆ.
    ದೇವರು ಭೂಮ್ಯಾಕಾಶಗಳಲ್ಲಿ ಅದ್ಭುತಕಾರ್ಯಗಳನ್ನು ಮಾಡುತ್ತಾನೆ.
    ದೇವರು ದಾನಿಯೇಲನನ್ನು ಸಿಂಹಗಳಿಂದ ರಕ್ಷಿಸಿದನು.

28 ದಾನಿಯೇಲನು ದಾರ್ಯಾವೆಷನ ಆಳ್ವಿಕೆಯಲ್ಲಿಯೂ ಪಾರಸಿಯನಾದ ಕೋರೆಷನ ಆಳ್ವಿಕೆಯಲ್ಲಿಯೂ ಘನತೆಯನ್ನು ಪಡೆದನು.

ಕೀರ್ತನೆಗಳು 112-113

112 ಯೆಹೋವನಿಗೆ ಸ್ತೋತ್ರವಾಗಲಿ!
    ಯಾವನು ಆತನಲ್ಲಿ ಭಯಭಕ್ತಿಯುಳ್ಳವನಾಗಿ
    ಆತನ ಆಜ್ಞೆಗಳನ್ನು ಪ್ರೀತಿಸುವನೋ ಅವನೇ ಧನ್ಯನು.
ಅವನ ಸಂತತಿಗಳವರು ಭೂಮಿಯ ಮೇಲೆ ಪ್ರಬಲರಾಗುವರು;
    ನೀತಿವಂತನ ಸಂತತಿಗಳವರು ಆಶೀರ್ವಾದವನ್ನು ಹೊಂದಿಕೊಳ್ಳುವರು.
ಅವನ ಕುಟುಂಬದವರು ಐಶ್ವರ್ಯವಂತರಾಗುವರು.
    ಅವನ ನೀತಿಯು ಶಾಶ್ವತವಾಗಿರುವುದು.
ಆತನು ನೀತಿವಂತರಿಗೆ ಕತ್ತಲೆಯಲ್ಲಿ ಪ್ರಕಾಶಿಸುವ ಬೆಳಕಿನಂತಿರುವನು.
    ಆತನು ಒಳ್ಳೆಯವನೂ ದಯಾಮಯನೂ ಕೃಪಾಮಯನೂ ಆಗಿದ್ದಾನೆ.
ದಯಾವಂತನಿಗೂ ಉದಾರಿಗೂ ಒಳ್ಳೆಯದಾಗುವುದು.
    ನ್ಯಾಯವಾದ ವ್ಯಾಪಾರಸ್ಥನಿಗೆ ಒಳ್ಳೆಯದಾಗುವುದು.
ಅವನೆಂದಿಗೂ ಬೀಳುವುದಿಲ್ಲ.
    ನೀತಿವಂತನನ್ನು ಜನರು ಸದಾಕಾಲ ಜ್ಞಾಪಿಸಿಕೊಳ್ಳುವರು.
ಒಳ್ಳೆಯವನು ಕೆಟ್ಟಸುದ್ದಿಗೆ ಭಯಪಡಬೇಕಿಲ್ಲ.
    ಅವನು ಯೆಹೋವನಲ್ಲಿ ಭರವಸವಿಟ್ಟಿರುವುದರಿಂದ ಅವನ ಮನಸ್ಸು ಸ್ಥಿರವಾಗಿರುವುದು.
ಅವನ ಮನಸ್ಸು ದೃಢವಾಗಿರುವುದರಿಂದ
    ಅವನು ಭಯಪಡದೆ, ತನ್ನ ಶತ್ರುಗಳನ್ನು ಸೋಲಿಸುವನು.
ಅವನು ಬಡವರಿಗೆ ಉದಾರವಾಗಿ ಕೊಡುವನು.
    ಅವನ ಸತ್ಕಾರ್ಯಗಳು ಶಾಶ್ವತವಾಗಿವೆ.
    ಅವನು ಗೌರವವನ್ನು ಪಡೆದುಕೊಳ್ಳುವನು.
10 ದುಷ್ಟರು ಇದನ್ನು ಕಂಡು ಕೋಪಗೊಳ್ಳುವರು;
    ಕೋಪದಿಂದ ಹಲ್ಲು ಕಡಿಯುತ್ತಾ ಅಳಿದುಹೋಗುವರು.
    ಅವರ ದುರಾಶೆಯು ಈಡೇರದು.

113 ಯೆಹೋವನಿಗೆ ಸ್ತೋತ್ರವಾಗಲಿ!
ಯೆಹೋವನ ಸೇವಕರೇ, ಆತನಿಗೆ ಸ್ತೋತ್ರಮಾಡಿರಿ!
    ಆತನ ಹೆಸರನ್ನು ಕೊಂಡಾಡಿರಿ.
ಯೆಹೋವನ ಹೆಸರು ಇಂದಿಗೂ ಎಂದೆಂದಿಗೂ ಸ್ತುತಿಸಲ್ಪಡಲಿ.
ಪೂರ್ವದಿಂದಿಡಿದು ಪಶ್ಚಿಮದವರೆಗೂ
    ಯೆಹೋವನ ಹೆಸರು ಸ್ತುತಿಸಲ್ಪಡಲಿ.
ಯೆಹೋವನು ಎಲ್ಲಾ ಜನಾಂಗಗಳಲ್ಲಿ ಮಹೋನ್ನತನಾಗಿದ್ದಾನೆ;
    ಆತನ ಮಹಿಮೆಯು ಮೇಲೋಕದಲ್ಲಿ ಮೆರೆಯುತ್ತಿದೆ.
ನಮ್ಮ ದೇವರಾದ ಯೆಹೋವನಿಗೆ ಸಮಾನರು ಇಲ್ಲವೇ ಇಲ್ಲ.
    ಆತನು ಉನ್ನತ ಲೋಕದಲ್ಲಿ ಸಿಂಹಾಸನಾರೂಢನಾಗಿದ್ದಾನೆ.
ಆತನು ಆಕಾಶವನ್ನೂ
    ಭೂಮಿಯನ್ನೂ ಬಾಗಿ ನೋಡುವನು.
ಆತನು ಬಡವರನ್ನು ಧೂಳಿನಿಂದ ಎಬ್ಬಿಸುವನು;
    ಭಿಕ್ಷುಕರನ್ನು ತಿಪ್ಪೆಯಿಂದ ಎತ್ತುವನು.
ಆತನು ಅವರನ್ನು ಪ್ರಮುಖರನ್ನಾಗಿಯೂ
    ನಾಯಕರುಗಳನ್ನಾಗಿಯೂ ಮಾಡುವನು.
ಆತನು ಬಂಜೆಗೆ ಮಕ್ಕಳನ್ನು ಅನುಗ್ರಹಿಸಿ
    ಸಂತೋಷಪಡಿಸುವನು.

ಯೆಹೋವನಿಗೆ ಸ್ತೋತ್ರವಾಗಲಿ!

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International