M’Cheyne Bible Reading Plan
ಅಹಜ್ಯನಿಗೆ ಒಂದು ಸಂದೇಶ
1 ಅಹಾಬನು ಸತ್ತನಂತರ, ಮೋವಾಬ್ಯರು ಇಸ್ರೇಲಿನ ಆಳ್ವಿಕೆಗೆ ವಿರೋಧವಾಗಿ ದಂಗೆ ಎದ್ದರು.
2 ಒಂದು ದಿನ, ಅಹಜ್ಯನು ಸಮಾರ್ಯದ ತನ್ನ ಮನೆಯ ಮಾಳಿಗೆಯ ಮೇಲಿದ್ದನು. ಅಹಜ್ಯನು ಮನೆಯ ಮೇಲಿನ ಮರದ ಕಂಬಗಳ ಮೂಲಕ ಕೆಳಕ್ಕೆ ಬಿದ್ದನು. ಅವನಿಗೆ ಬಹಳ ಗಾಯಗಳಾದವು. ಅಹಜ್ಯನು ಸಂದೇಶಕರನ್ನು ಕರೆದು ಅವರಿಗೆ, “ಎಕ್ರೋನಿನ ದೇವರಾದ ಬಾಳ್ಜೆಬೂಬನ ಅರ್ಚಕರ ಬಳಿಗೆ ಹೋಗಿ, ನನ್ನ ಗಾಯಗಳು ಗುಣವಾಗುತ್ತವೆಯೇ ಎಂಬುದನ್ನು ಅವರಿಂದ ತಿಳಿದುಕೊಳ್ಳಿ” ಎಂದು ಹೇಳಿದನು.
3 ಆದರೆ ಯೆಹೋವನ ದೂತನೊಬ್ಬನು ತಿಷ್ಬೀಯನಾದ ಎಲೀಯನಿಗೆ, “ರಾಜನಾದ ಅಹಜ್ಯನು ಸಮಾರ್ಯದಿಂದ ಕೆಲವು ಸಂದೇಶಕರನ್ನು ಕಳುಹಿಸಿದ್ದಾನೆ. ನೀನು ಹೋಗಿ ಅವರನ್ನು ಭೇಟಿಯಾಗಿ ಅವರಿಗೆ, ‘ಇಸ್ರೇಲಿನಲ್ಲಿಯೂ ಒಬ್ಬ ದೇವರಿದ್ದಾನೆ! ಹೀಗಿರುವಾಗ ನೀವು ಎಕ್ರೋನಿನ ದೇವರಾದ ಬಾಳ್ಜೆಬೂಬನ ಬಳಿಗೆ ಹೋಗಿ ಪ್ರಶ್ನೆಗಳನ್ನು ಕೇಳುವುದೇಕೆ? 4 ರಾಜನಾದ ಅಹಜ್ಯನಿಗೆ ಈ ಸಂಗತಿಗಳನ್ನು ತಿಳಿಸಿ: ಬಾಳ್ಜೆಬೂಬನಿಂದ ಪ್ರಶ್ನೆಗಳನ್ನು ಕೇಳುವುದಕ್ಕೆ ನೀನು ಸಂದೇಶಕರನ್ನು ಕಳುಹಿಸಿದೆ. ನೀನು ಈ ಕಾರ್ಯವನ್ನು ಮಾಡಿದುದರಿಂದ, ಯೆಹೋವನು ಹೀಗೆನ್ನುವನು: ನೀನು ನಿನ್ನ ಹಾಸಿಗೆಯಿಂದ ಮೇಲಕ್ಕೇಳುವುದಿಲ್ಲ. ನೀನು ಅಲ್ಲೇ ಸಾಯುವೆ’ ಎಂದು ತಿಳಿಸು” ಎಂಬುದಾಗಿ ಹೇಳಿದನು. ಎಲೀಯನು ಅಹಜ್ಯನ ಸೇವಕರಿಗೆ ಈ ಮಾತುಗಳನ್ನು ಹೇಳಿ ಅಲ್ಲಿಂದ ಹೊರಟುಹೋದನು.
5 ಸಂದೇಶಕರು ಅಹಜ್ಯನ ಬಳಿಗೆ ಹಿಂದಿರುಗಿ ಬಂದರು. ಅಹಜ್ಯನು ಸಂದೇಶಕರನ್ನು, “ನೀವು ಇಷ್ಟು ಬೇಗ ಹಿಂದಕ್ಕೆ ಬಂದುದೇಕೆ?” ಎಂದು ಕೇಳಿದನು.
6 ಸಂದೇಶಕರು ಅಹಜ್ಯನಿಗೆ, “ಒಬ್ಬನು ನಮ್ಮನ್ನು ಭೇಟಿಯಾಗಿ ನಿಮ್ಮನ್ನು ಕಳುಹಿಸಿದ ರಾಜನ ಬಳಿಗೆ ಹಿಂದಿರುಗಿ ಹೋಗಿ ಯೆಹೋವನು ಹೇಳುವುದನ್ನು ಅವನಿಗೆ ತಿಳಿಸಿ. ಯೆಹೋವನು ಹೇಳುವುದೇನೆಂದರೆ: ‘ಇಸ್ರೇಲಿನಲ್ಲಿ ಒಬ್ಬ ದೇವರಿದ್ದಾನೆ! ಹೀಗಿರುವಾಗ ನೀನು ಎಕ್ರೋನಿನ ದೇವರಾದ ಬಾಳ್ಜೆಬೂಬನನ್ನು ವಿಚಾರಿಸುವುದಕ್ಕೆ ಸಂದೇಶಕರನ್ನು ಕಳುಹಿಸಿದುದೇಕೆ? ನೀನು ಈ ಕಾರ್ಯವನ್ನು ಮಾಡಿದ್ದರಿಂದ ನಿನ್ನ ಹಾಸಿಗೆಯಿಂದ ಮೇಲಕ್ಕೇಳುವುದಿಲ್ಲ. ನೀನು ಅಲ್ಲೇ ಸಾಯುವೆ!’” ಎಂಬುದಾಗಿ ಹೇಳಿದರು.
7 ಅಹಜ್ಯನು ಸಂದೇಶಕರನ್ನು, “ನಿಮ್ಮನ್ನು ಭೇಟಿಮಾಡಿ ಈ ಮಾತುಗಳನ್ನು ತಿಳಿಸಿದ ಮನುಷ್ಯನು ಹೇಗಿದ್ದನು?” ಎಂದು ಕೇಳಿದನು.
8 ಸಂದೇಶಕರು ಅಹಜ್ಯನಿಗೆ, “ಅವನು ಉಣ್ಣೆಯ ಮೇಲಂಗಿಯನ್ನು ಧರಿಸಿದ್ದನು ಮತ್ತು ಸೊಂಟಕ್ಕೆ ಚರ್ಮದ ಪಟ್ಟಿಯನ್ನು ಕಟ್ಟಿಕೊಂಡಿದ್ದನು” ಎಂದರು.
ಆಗ ಅಹಜ್ಯನು, “ಅವನು ತಿಷ್ಬೀಯನಾದ ಎಲೀಯನು” ಎಂದು ಹೇಳಿದನು.
ಅಹಜ್ಯನು ಕಳುಹಿಸಿದ ಸೇನಾಧಿಪತಿಗಳ ನಾಶನ
9 ಅಹಜ್ಯನು ಎಲೀಯನ ಬಳಿಗೆ ಒಬ್ಬ ಸೇನಾಧಿಪತಿಯನ್ನು ಮತ್ತು ಐವತ್ತು ಮಂದಿ ಜನರನ್ನು ಕಳುಹಿಸಿದನು. ಸೇನಾಧಿಪತಿಯು ಎಲೀಯನ ಬಳಿಗೆ ಹೋದನು. ಆ ಸಮಯದಲ್ಲಿ ಎಲೀಯನು ಬೆಟ್ಟದ ತುದಿಯಲ್ಲಿ ಕುಳಿತಿದ್ದನು. ಆ ಸೇನಾಧಿಪತಿಯು ಎಲೀಯನಿಗೆ, “ದೇವಮನುಷ್ಯನೇ, ರಾಜನು ಹೇಳುತ್ತಾನೆ, ‘ಕೆಳಗಿಳಿದು ಬಾ’” ಎಂದು ಹೇಳಿದನು.
10 ಎಲೀಯನು ಐವತ್ತು ಮಂದಿಯ ಸೇನಾಧಿಪತಿಗೆ, “ನಾನು ಒಬ್ಬ ದೇವಮನುಷ್ಯನಾಗಿರುವದಾದರೆ ಪರಲೋಕದಿಂದ ಬೆಂಕಿಯು ಕೆಳಗಿಳಿದು ಬಂದು ನಿನ್ನನ್ನೂ ನಿನ್ನ ಐವತ್ತು ಸೈನಿಕರನ್ನೂ ನಾಶಗೊಳಿಸಲಿ!” ಎಂದು ಉತ್ತರಿಸಿದನು.
ಆಗ ಬೆಂಕಿಯು ಪರಲೋಕದಿಂದ ಬಂದು ಆ ಸೇನಾಧಿಪತಿಯನ್ನು ಮತ್ತು ಅವನ ಐವತ್ತು ಮಂದಿ ಸೈನಿಕರನ್ನು ನಾಶಗೊಳಿಸಿತು.
11 ಅಹಜ್ಯನು ಬೇರೊಬ್ಬ ಸೇನಾಧಿಪತಿಯನ್ನು ಮತ್ತು ಐವತ್ತು ಜನರನ್ನು ಎಲೀಯನ ಬಳಿಗೆ ಕಳುಹಿಸಿದನು. ಸೇನಾಧಿಪತಿಯು ಎಲೀಯನಿಗೆ, “ದೇವಮನುಷ್ಯನೇ, ರಾಜನು ಹೇಳುತ್ತಾನೆ, ‘ತ್ವರಿತವಾಗಿ ಕೆಳಗಿಳಿದು ಬಾ!’” ಎಂದು ಹೇಳಿದನು.
12 ಎಲೀಯನು ಸೇನಾಧಿಪತಿಗೆ ಮತ್ತು ಅವನ ಐವತ್ತು ಮಂದಿ ಜನರಿಗೆ, “ನಾನು ದೇವಮನುಷ್ಯನಾಗಿದ್ದರೆ ಪರಲೋಕದಿಂದ ಬೆಂಕಿಯು ಕೆಳಗಿಳಿದು ಬಂದು ನಿನ್ನನ್ನೂ ನಿನ್ನ ಐವತ್ತು ಜನರನ್ನೂ ನಾಶಗೊಳಿಸಲಿ!” ಎಂದು ಹೇಳಿದನು.
ಆಗ ಪರಲೋಕದಿಂದ ದೇವರ ಬೆಂಕಿಯು ಇಳಿದು ಬಂದು ಸೇನಾಧಿಪತಿಯನ್ನೂ ಅವನ ಐವತ್ತು ಜನರನ್ನೂ ನಾಶಗೊಳಿಸಿತು.
13 ಅಹಜ್ಯನು ಮೂರನೆಯ ಸೇನಾಧಿಪತಿಯನ್ನು ಐವತ್ತು ಜನರೊಂದಿಗೆ ಕಳುಹಿಸಿದನು. ಐವತ್ತು ಮಂದಿಯ ಮೂರನೆಯ ಸೇನಾಧಿಪತಿಯು ಎಲೀಯನ ಬಳಿಗೆ ಬಂದನು. ಸೇನಾಧಿಪತಿಯು ತನ್ನ ಮೊಣಕಾಲುಗಳ ಮೇಲೆ ಬಿದ್ದು ನಮಸ್ಕರಿಸಿದನು. ಸೇನಾಧಿಪತಿಯು ಎಲೀಯನನ್ನು ಬೇಡಿಕೊಳ್ಳುತ್ತಾ ಅವನಿಗೆ, “ದೇವ ಮನುಷ್ಯನೇ, ನನ್ನ ಮತ್ತು ಈ ಐವತ್ತು ಜನರ ಪ್ರಾಣವು ನಿನ್ನ ದೃಷ್ಟಿಯಲ್ಲಿ ಬೆಲೆಯುಳ್ಳದ್ದಾಗಿರಲಿ! 14 ಪರಲೋಕದಿಂದ ಕೆಳಗಿಳಿದು ಬಂದ ಬೆಂಕಿಯು ಮೊದಲ ಇಬ್ಬರು ಸೇನಾಧಿಪತಿಗಳನ್ನೂ ಅವರ ಐವತ್ತು ಜನರನ್ನೂ ನಾಶಗೊಳಿಸಿತು. ಆದರೆ ಈಗ ನಮ್ಮ ಮೇಲೆ ಕನಿಕರ ತೋರಿ ಜೀವಿಸಲು ಅವಕಾಶ ಮಾಡಿಕೊಡು” ಎಂದು ಹೇಳಿದನು.
15 ಯೆಹೋವನ ದೂತನು ಎಲೀಯನಿಗೆ, “ಸೇನಾಧಿಪತಿಯೊಡನೆ ಹೋಗು, ಅವನಿಗೆ ಹೆದರಬೇಡ” ಎಂದು ಹೇಳಿದನು.
ಎಲೀಯನು ರಾಜನಾದ ಅಹಜ್ಯನನ್ನು ನೋಡಲು ಆ ಸೇನಾಧಿಪತಿಯೊಡನೆ ಹೋದನು.
16 ಎಲೀಯನು ಅಹಜ್ಯನಿಗೆ, “ಇಸ್ರೇಲಿನಲ್ಲಿ ದೇವರಿದ್ದಾನೆ. ಹೀಗಿರುವಾಗ ನೀನು ಎಕ್ರೋನಿನ ದೇವರಾದ ಬಾಳ್ಜೆಬೂಬನನ್ನು ಪ್ರಶ್ನೆಗಳನ್ನು ಕೇಳಲು ಸಂದೇಶಕರನ್ನು ಏಕೆ ಕಳುಹಿಸಿದೆ? ನೀನು ಈ ಕಾರ್ಯವನ್ನು ಮಾಡಿದ್ದರಿಂದ ನಿನ್ನ ಹಾಸಿಗೆಯಿಂದ ನೀನು ಮೇಲಕ್ಕೇಳುವುದಿಲ್ಲ. ನೀನು ಅಲ್ಲೇ ಸಾಯುವೆ! ಎಂಬುದಾಗಿ ಯೆಹೋವನು ಅನ್ನುತ್ತಾನೆ.” ಎಂದು ಹೇಳಿದನು.
17 ಎಲೀಯನ ಮೂಲಕ ಯೆಹೋವನು ಹೇಳಿದಂತೆಯೇ ಅಹಜ್ಯನು ಸತ್ತುಹೋದನು. ಅಹಜ್ಯನಿಗೆ ಮಕ್ಕಳಿರಲಿಲ್ಲ. ಆದ್ದರಿಂದ ಅಹಜ್ಯನ ನಂತರ ಯೆಹೋರಾಮನು ಹೊಸ ರಾಜನಾದನು. ಯೆಹೋಷಾಫಾಟನ ಮಗನಾದ ಯೆಹೋರಾಮನು ಯೆಹೂದದ ರಾಜನಾಗಿದ್ದ ಎರಡನೆಯ ವರ್ಷದಲ್ಲಿ ಯೊಹೋರಾಮನು ಆಳುವುದಕ್ಕೆ ಆರಂಭಿಸಿದನು.
18 ಅಹಜ್ಯನು ಮಾಡಿದ ಇತರ ಕಾರ್ಯಗಳ ಬಗ್ಗೆ “ಇಸ್ರೇಲಿನ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಬರೆಯಲಾಗಿದೆ.
1 ತಂದೆಯಾದ ದೇವರಲ್ಲಿಯೂ ಮತ್ತು ಪ್ರಭುವಾದ ಯೇಸು ಕ್ರಿಸ್ತನಲ್ಲಿಯೂ ಇರುವ ಥೆಸಲೋನಿಕದವರ ಸಭೆಗೆ ಪೌಲನು, ಸಿಲ್ವಾನನು ಮತ್ತು ತಿಮೊಥೆಯನು ಬರೆಯುವ ಪತ್ರ.
2 ತಂದೆಯಾದ ದೇವರ ಮತ್ತು ಪ್ರಭುವಾದ ಯೇಸು ಕ್ರಿಸ್ತನ ಕೃಪೆಯೂ ಶಾಂತಿಯೂ ನಿಮಗಿರಲಿ.
3 ನಿಮ್ಮ ವಿಷಯದಲ್ಲಿ ಯಾವಾಗಲೂ ದೇವರಿಗೆ ಸ್ತೋತ್ರ ಸಲ್ಲಿಸುತ್ತೇವೆ. ನಿಮ್ಮ ನಂಬಿಕೆಯು ಮತ್ತು ಇತರರ ಮೇಲೆ ನಿಮಗಿರುವ ಪ್ರೀತಿಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ನಿಮ್ಮ ವಿಷಯದಲ್ಲಿ ಸ್ತೋತ್ರ ಸಲ್ಲಿಸುವುದು ಯೋಗ್ಯವಾದ ಕಾರ್ಯವಾಗಿದೆ. 4 ದೇವರ ಇತರ ಸಭೆಗಳಲ್ಲಿ ನಿಮ್ಮನ್ನು ಕುರಿತು ಹೆಚ್ಚಳಪಡುತ್ತೇವೆ. ನಿಮ್ಮಲ್ಲಿರುವ ನಂಬಿಕೆ ಮತ್ತು ಸಹನೆಗಳನ್ನು ಕುರಿತು ಇತರ ಸಭೆಗಳಿಗೆ ಹೇಳುತ್ತೇವೆ. ನೀವು ಹಿಂಸೆಗೆ ಒಳಗಾಗಿದ್ದರೂ ಅನೇಕ ಸಂಕಟಗಳನ್ನು ಅನುಭವಿಸುತ್ತಿದ್ದರೂ ನಂಬಿಕೆಯಿಂದಲೂ ಸಹನೆಯಿಂದಲೂ ಜೀವಿಸುತ್ತಿದ್ದೀರಿ.
ದೇವರ ತೀರ್ಪನ್ನು ಕುರಿತು ಪೌಲನ ವಿವರಣೆ
5 ದೇವರು ನ್ಯಾಯವಾದ ತೀರ್ಪನ್ನು ನೀಡುತ್ತಾನೆಂಬುದಕ್ಕೆ ಅದೇ ಪ್ರಮಾಣವಾಗಿದೆ. ದೇವರ ರಾಜ್ಯಕ್ಕೆ ನೀವು ಯೋಗ್ಯರಾಗಿರಬೇಕೆಂಬುದು ಆತನ ಅಪೇಕ್ಷೆ. ನೀವು ಹಿಂಸೆಪಡುತ್ತಿರುವುದು ಆ ರಾಜ್ಯಕ್ಕೋಸ್ಕರವೇ. 6 ದೇವರು ಯೋಗ್ಯವಾದುದ್ದನ್ನೇ ಮಾಡುತ್ತಾನೆ. ನಿಮಗೆ ತೊಂದರೆ ಕೊಡುವ ಜನರಿಗೆ ದೇವರು ತೊಂದರೆ ಕೊಡುತ್ತಾನೆ. 7 ತೊಂದರೆಗೆ ಒಳಗಾಗಿರುವ ನಿಮಗೆ ದೇವರು ಶಾಂತಿಯನ್ನು ನೀಡುತ್ತಾನೆ. ಆತನು ನಮಗೂ ಶಾಂತಿಯನ್ನು ನೀಡುವನು. ಪ್ರಭುವಾದ ಯೇಸು ತನ್ನ ಶಕ್ತಿಶಾಲಿಗಳಾದ ದೂತರೊಂದಿಗೆ ಪರಲೋಕದಿಂದ ಪ್ರತ್ಯಕ್ಷನಾದಾಗ ಈ ಶಾಂತಿಯನ್ನು ದಯಪಾಲಿಸುತ್ತಾನೆ. 8 ಪ್ರಭು ಯೇಸು ಪರಲೋಕದಿಂದ ಬೆಂಕಿಯ ಜ್ವಾಲೆಗಳೊಡನೆ ಪ್ರತ್ಯಕ್ಷನಾದಾಗ ದೇವರನ್ನು ತಿಳಿದಿಲ್ಲದವರಿಗೂ ಸುವಾರ್ತೆಗೆ ವಿಧೇಯರಾಗಿಲ್ಲದವರಿಗೂ ದಂಡನೆಯನ್ನು ಬರಮಾಡುತ್ತಾನೆ. 9 ಅವರಿಗೆ ನಿತ್ಯವಾದ ದಂಡನೆಯಾಗುವುದು. ಪ್ರಭುವಿನೊಂದಿಗಿರಲು ಅವರಿಗೆ ಅವಕಾಶ ದೊರೆಯುವುದಿಲ್ಲ. ಆತನು ತನ್ನ ಮಹಾಶಕ್ತಿಯಿಂದ ಅವರನ್ನು ದೂರವಿರಿಸುತ್ತಾನೆ. 10 ಪ್ರಭುವಾದ ಯೇಸು ಪ್ರತ್ಯಕ್ಷನಾದಾಗ ಇದು ಸಂಭವಿಸುತ್ತದೆ. ಆತನು ತನಗೆ ದೊರೆಯ ಬೇಕಾದ ವೈಭವವನ್ನು ಸ್ವೀಕರಿಸಲು ತನ್ನ ಪರಿಶುದ್ಧ ಜನರೊಂದಿಗೆ ಪ್ರತ್ಯಕ್ಷನಾಗುತ್ತಾನೆ. ಆತನನ್ನು ನಂಬಿದ ಜನರೆಲ್ಲರೂ ಆತನನ್ನು ಕಂಡು ಆಶ್ಚರ್ಯಚಕಿತರಾಗುವರು. ನಾವು ಹೇಳಿದ್ದನ್ನು ನಂಬಿದ ನೀವೆಲ್ಲರೂ ವಿಶ್ವಾಸಿಗಳ ಆ ಸಮೂಹದಲ್ಲಿರುವಿರಿ.
11 ಆದಕಾರಣವೇ ಯಾವಾಗಲೂ ನಿಮಗಾಗಿ ಪ್ರಾರ್ಥಿಸುತ್ತೇವೆ. ಯಾವ ಒಳ್ಳೆಯ ಮಾರ್ಗದಲ್ಲಿ ನೀವು ಜೀವಿಸಬೇಕೆಂದು ದೇವರು ನಿಮ್ಮನ್ನು ಕರೆದನೋ, ಆ ಮಾರ್ಗದಲ್ಲೇ ನೀವು ಜೀವಿಸಲಿಕ್ಕಾಗುವಂತೆ ಪ್ರಾರ್ಥಿಸುತ್ತೇವೆ. ನಿಮ್ಮಲ್ಲಿರುವ ಒಳ್ಳೆಯ ತನವು ಒಳ್ಳೆಯದನ್ನು ಮಾಡುವಂತೆ ನಿಮ್ಮನ್ನು ಪ್ರೇರೇಪಿಸುತ್ತದೆ. ನಿಮ್ಮಲ್ಲಿರುವ ನಂಬಿಕೆಯು ನಿಮ್ಮಿಂದ ಕಾರ್ಯ ಸಾಧಿಸುತ್ತದೆ. ಈ ಕಾರ್ಯಗಳನ್ನು ನೀವು ಹೆಚ್ಚುಹೆಚ್ಚಾಗಿ ಮಾಡಲು ದೇವರು ತನ್ನ ಶಕ್ತಿಯಿಂದ ನಿಮಗೆ ಸಹಾಯ ಮಾಡಲೆಂದು ಬೇಡಿಕೊಳ್ಳುತ್ತೇವೆ. 12 ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಹೆಸರು ನಿಮ್ಮಲ್ಲಿ ಮಹಿಮೆ ಹೊಂದಲೆಂದು ಮತ್ತು ನೀವೂ ಆತನಲ್ಲಿ ಮಹಿಮೆ ಹೊಂದಲೆಂದು ನಾವು ಪ್ರಾರ್ಥಿಸುತ್ತೇವೆ. ಆ ಮಹಿಮೆಯು ನಮ್ಮ ದೇವರ ಮತ್ತು ಪ್ರಭು ಯೇಸು ಕ್ರಿಸ್ತನ ಕೃಪೆಯಿಂದ ಬರುತ್ತದೆ.
ಗೋಡೆಯ ಮೇಲೆ ಅದ್ಭುತ ಲೇಖನ
5 ರಾಜನಾದ ಬೇಲ್ಶಚ್ಚರನು ತನ್ನ ಒಂದು ಸಾವಿರ ಜನ ಅಧಿಕಾರಿಗಳಿಗೆ ಒಂದು ಔತಣವನ್ನು ಕೊಟ್ಟನು. ರಾಜನು ಅವರ ಜೊತೆ ದ್ರಾಕ್ಷಾರಸವನ್ನು ಪಾನ ಮಾಡುತ್ತಿದ್ದನು. 2 ಬೇಲ್ಶಚ್ಚರನು ದ್ರಾಕ್ಷಾರಸ ಪಾನ ಮಾಡುವಾಗ, ತನ್ನ ತಂದೆಯಾದ ನೆಬೂಕದ್ನೆಚ್ಚರನು ಜೆರುಸಲೇಮಿನ ಆಲಯದಿಂದ ಎತ್ತಿಕೊಂಡು ಬಂದಿದ್ದ ಬೆಳ್ಳಿಬಂಗಾರಗಳ ಲೋಟಗಳನ್ನು ತೆಗೆದುಕೊಂಡು ಬರಬೇಕೆಂದು ತನ್ನ ಸೇವಕರಿಗೆ ಆಜ್ಞಾಪಿಸಿದನು. ತನ್ನ ಮುಖಂಡರು, ಪತ್ನಿಯರು ಮತ್ತು ಉಪಪತ್ನಿಯರು ಆ ಪಾತ್ರೆಗಳಲ್ಲಿ ದ್ರಾಕ್ಷಾರಸ ಪಾನ ಮಾಡಬೇಕೆಂದು ರಾಜನಾದ ಬೇಲ್ಶಚ್ಚರನ ಅಪೇಕ್ಷೆಯಾಗಿತ್ತು. 3 ಆದ್ದರಿಂದ ಅವರು ಜೆರುಸಲೇಮಿನ ಆಲಯದಿಂದ ತಂದಿದ್ದ ಆ ಪಾತ್ರೆಗಳನ್ನು ತಂದರು. ರಾಜನು, ಅವನ ಅಧಿಕಾರಿಗಳು, ಅವನ ಪತ್ನಿಯರು, ಅವನ ಉಪಪತ್ನಿಯರು ಅವುಗಳಲ್ಲಿ ದ್ರಾಕ್ಷಾರಸವನ್ನು ಕುಡಿದರು. 4 ಅವರು ಕುಡಿಯುವಾಗ ತಮ್ಮ ಬಂಗಾರ, ಬೆಳ್ಳಿ, ಕಂಚು, ಕಬ್ಬಿಣ, ಮರ ಮತ್ತು ಕಲ್ಲಿನ ದೇವರುಗಳನ್ನು ಸ್ತುತಿಸುತ್ತಿದ್ದರು.
5 ಆಗ ಫಕ್ಕನೆ ಮನುಷ್ಯನ ಕೈಯೊಂದು ಕಾಣಿಸಿಕೊಂಡು ಗೋಡೆಯ ಮೇಲೆ ಬರೆಯುವದಕ್ಕೆ ಪ್ರಾರಂಭಿಸಿತು. ಬೆರಳುಗಳು ಗೋಡೆಯ ಸುಣ್ಣದ ಮೇಲೆ ಅಕ್ಷರಗಳನ್ನು ಕೊರೆದವು. ಆ ಕೈಯು ದೀಪಸ್ತಂಭದ ಹತ್ತಿರ ಅರಮನೆಯ ಗೋಡೆಯ ಮೇಲೆ ಅರಸನ ಕಣ್ಣೆದುರಿನಲ್ಲಿಯೇ ಬರೆಯಿತು.
6 ರಾಜನಾದ ಬೇಲ್ಶಚ್ಚರನು ಬಹಳ ಹೆದರಿದನು. ಭಯದಿಂದ ಅವನ ಮುಖವು ಕಳೆಗುಂದಿತು; ಮತ್ತು ಅವನ ಮೊಣಕಾಲುಗಳು ನಡುಗಿ ಒಂದಕ್ಕೊಂದು ಬಡಿಯುತ್ತಿದ್ದವು. ಅವನ ಕಾಲುಗಳು ತುಂಬ ಬಲಹೀನವಾಗಿ ಅವನಿಗೆ ನಿಲ್ಲಲಾಗಲಿಲ್ಲ. 7 ಆಗ ರಾಜನು ಗಟ್ಟಿಯಾಗಿ ಕೂಗಿಕೊಂಡು ಮಂತ್ರವಾದಿ, ಪಂಡಿತ, ಶಾಕುನಿಕರನ್ನು ತನ್ನಲ್ಲಿಗೆ ಕರೆಸಿದನು. ಅವನು ಆ ವಿದ್ವಾಂಸರಿಗೆ, “ಈ ಬರವಣಿಗೆಯನ್ನು ಓದಿ ನನಗೆ ಅದರ ಅರ್ಥವನ್ನು ಹೇಳಬಲ್ಲ ಮನುಷ್ಯನಿಗೆ ನಾನು ಬಹುಮಾನವನ್ನು ಕೊಡುತ್ತೇನೆ. ಆ ಮನುಷ್ಯನಿಗೆ ನಾನು ಕಂದು ಬಣ್ಣದ ವಸ್ತ್ರಗಳನ್ನು ಕೊಡುತ್ತೇನೆ. ಅವನ ಕೊರಳಿಗೆ ಚಿನ್ನದ ಹಾರವನ್ನು ಹಾಕಿಸಿ ಅವನನ್ನು ರಾಜ್ಯದ ಮೂವರು ಮುಖ್ಯಾಧಿಕಾರಿಗಳಲ್ಲಿ ಒಬ್ಬನನ್ನಾಗಿ ನೇಮಿಸುವೆನು” ಎಂದು ಹೇಳಿದನು.
8 ಆಸ್ಥಾನದ ವಿದ್ವಾಂಸರೆಲ್ಲರೂ ಬಂದು ನೋಡಿದರು. ಆದರೆ ಆ ಬರಹವನ್ನು ಓದುವುದಕ್ಕಾಗಲಿ ಅದರ ಅರ್ಥವನ್ನು ತಿಳಿದುಕೊಳ್ಳುವುದಕ್ಕಾಗಲಿ ಅವರಿಗೆ ಆಗಲಿಲ್ಲ. 9 ಆಗ ಅರಸನಾದ ಬೇಲ್ಶಚ್ಚರನ ಅಧಿಕಾರಿಗಳಿಗೆ ಏನೂ ತೋಚದಂತಾಯಿತು. ಅರಸನು ಮತ್ತಷ್ಟು ಅಂಜಿದನು ಮತ್ತು ಕಳವಳಪಟ್ಟನು. ಅವನ ಮುಖವು ಭಯದಿಂದ ಕಳೆಗುಂದಿತು.
10 ಆಗ ರಾಜನ ತಾಯಿಯು ಆ ಔತಣ ಶಾಲೆಗೆ ಬಂದಳು. ರಾಜನು ಮತ್ತು ಅವನ ಅಧಿಕಾರಿಗಳು ಆಡುತ್ತಿದ್ದ ಮಾತುಗಳನ್ನು ಕೇಳಿ ಅವಳು, “ರಾಜನೇ, ಚಿರಂಜೀವಿಯಾಗಿರು, ಭಯಪಡಬೇಡ. ಭಯದಿಂದ ನಿನ್ನ ಮುಖ ಅಷ್ಟೊಂದು ಬಿಳುಚಿಕೊಳ್ಳಲು ಬಿಡಬೇಡ. 11 ಪರಿಶುದ್ಧ ದೇವರುಗಳ ಆತ್ಮವು ನೆಲೆಸಿರುವ ಒಬ್ಬನು ನಿನ್ನ ರಾಜ್ಯದಲ್ಲಿ ಇದ್ದಾನೆ. ದೇವರ ಜ್ಞಾನಕ್ಕೆ ಸಮಾನವಾದ ಜ್ಞಾನವೂ ಬುದ್ಧಿಯೂ ರಹಸ್ಯವನ್ನು ತಿಳಿದುಕೊಳ್ಳುವ ಶಕ್ತಿಯೂ ತನಗಿರುವುದಾಗಿ ಅವನು ನಿನ್ನ ತಂದೆಯ ಕಾಲದಲ್ಲಿಯೇ ತೋರಿಸಿಕೊಟ್ಟಿದ್ದಾನೆ. ನಿನ್ನ ತಂದೆಯಾದ ನೆಬೂಕದ್ನೆಚ್ಚರನು ಈ ಮನುಷ್ಯನನ್ನು ಎಲ್ಲ ವಿದ್ವಾಂಸರ ಅಧ್ಯಕ್ಷನನ್ನಾಗಿ ನೇಮಿಸಿದ್ದನು. ಎಲ್ಲ ಜೋಯಿಸರಿಗೆ, ಮಂತ್ರವಾದಿಗಳಿಗೆ, ಶಾಕುನಿಕರಿಗೆ ಮತ್ತು ಪಂಡಿತರಿಗೆ ಇವನು ಮುಖ್ಯಸ್ಥನಾಗಿದ್ದನು. 12 ನಾನು ಹೇಳುತ್ತಿರುವ ಮನುಷ್ಯನ ಹೆಸರು ದಾನಿಯೇಲ. ರಾಜನು ಅವನಿಗೆ ಬೇಲ್ತೆಶಚ್ಚರನೆಂದು ಹೆಸರಿಟ್ಟಿದ್ದನು. ಬೇಲ್ತೆಶಚ್ಚರನು ಬಹಳ ಚಾಣಾಕ್ಷ ಮತ್ತು ಅನೇಕ ವಿಷಯಗಳನ್ನು ಬಲ್ಲವನು, ಅವನು ಕನಸುಗಳ ಅರ್ಥವನ್ನು ಹೇಳಬಲ್ಲನು, ರಹಸ್ಯಗಳನ್ನು ವಿವರಿಸಬಲ್ಲನು; ಕಠಿಣವಾದ ಎಲ್ಲ ಸಮಸ್ಯೆಗಳನ್ನು ಪರಿಹರಿಸಬಲ್ಲನು. ದಾನಿಯೇಲನನ್ನು ಕರೆಯಿಸು. ಅವನು ಗೋಡೆಯ ಮೇಲಿನ ಬರಹದ ಅರ್ಥವನ್ನು ನಿನಗೆ ಹೇಳುತ್ತಾನೆ” ಎಂದು ಹೇಳಿದಳು.
13 ದಾನಿಯೇಲನನ್ನು ಅರಸನಲ್ಲಿಗೆ ಕರೆದು ತರಲಾಯಿತು. ಆಗ ರಾಜನು, “ರಾಜನಾಗಿದ್ದ ನನ್ನ ತಂದೆಯು ಯೆಹೂದದಿಂದ ಸೆರೆಹಿಡಿದು ತಂದವರಲ್ಲಿ ಒಬ್ಬನಾದ ದಾನಿಯೇಲನು ನೀನೋ? 14 ಪರಿಶುದ್ಧ ದೇವರುಗಳ ಆತ್ಮವು ನಿನ್ನಲ್ಲಿದೆ ಎಂದು ನಾನು ಕೇಳಿದ್ದೇನೆ. ನೀನು ರಹಸ್ಯವನ್ನು ತಿಳಿದುಕೊಳ್ಳಬಲ್ಲವನು, ಬಹಳ ಚಾಣಾಕ್ಷನು ಮತ್ತು ಬುದ್ಧಿವಂತನೆಂದು ನಾನು ಕೇಳಿದ್ದೇನೆ. 15 ಗೋಡೆಯ ಮೇಲಿನ ಈ ಬರಹವನ್ನು ಓದಲು ಮಂತ್ರವಾದಿಗಳನ್ನು, ವಿದ್ವಾಂಸರನ್ನು ಕರೆಸಲಾಯಿತು. ಅವರು ಆ ಬರಹದ ಅರ್ಥವನ್ನು ನನಗೆ ವಿವರಿಸಬೇಕೆಂದು ನನ್ನ ಉದ್ದೇಶವಾಗಿತ್ತು. ಆದರೆ ಗೋಡೆಯ ಮೇಲಿನ ಈ ಬರಹದ ಅರ್ಥವನ್ನು ಅವರು ನನಗೆ ಹೇಳಲು ಸಾಧ್ಯವಾಗಲಿಲ್ಲ. 16 ನಾನು ನಿನ್ನ ಬಗ್ಗೆ ಕೇಳಿದ್ದೇನೆ. ನೀನು ಗೂಢಾರ್ಥವನ್ನು ತಿಳಿದುಕೊಳ್ಳಬಲ್ಲೆ ಮತ್ತು ಕಠಿಣವಾದ ಸಮಸ್ಯೆಗಳಿಗೆ ಪರಿಹಾರ ಹೇಳಬಲ್ಲೆ ಎಂದು ನಾನು ಕೇಳಿದ್ದೇನೆ. ನೀನು ಗೋಡೆಯ ಮೇಲಿನ ಈ ಬರಹವನ್ನು ಓದಿ ಅದರ ಅರ್ಥವನ್ನು ನನಗೆ ವಿವರಿಸಿದರೆ, ನಾನು ನಿನಗೆ ಕಂದುಬಣ್ಣದ ಬಟ್ಟೆಗಳನ್ನು ಕೊಡುತ್ತೇನೆ. ನಿನ್ನ ಕತ್ತಿಗೆ ಚಿನ್ನದ ಹಾರವನ್ನು ಹಾಕುತ್ತೇನೆ; ನಿನ್ನನ್ನು ನನ್ನ ರಾಜ್ಯದ ಮೂವರು ಮುಖ್ಯಾಧಿಕಾರಿಗಳಲ್ಲಿ ಒಬ್ಬನನ್ನಾಗಿ ನೇಮಿಸುತ್ತೇನೆ” ಎಂದು ಹೇಳಿದನು.
17 ಆಗ ದಾನಿಯೇಲನು ರಾಜನಿಗೆ, “ರಾಜನಾದ ಬೇಲ್ಶಚ್ಚರನೇ, ನಿನ್ನ ಕಾಣಿಕೆಗಳು ನಿನ್ನಲ್ಲಿಯೇ ಇರಲಿ ಅಥವಾ ಆ ಬಹುಮಾನಗಳನ್ನು ಬೇರೆ ಯಾರಿಗಾದರೂ ಕೊಡು. ಆದರೂ ಗೋಡೆಯ ಮೇಲಿನ ಬರಹವನ್ನು ಓದಿ ಅದರ ಅರ್ಥವನ್ನು ನಿನಗೆ ವಿವರಿಸುತ್ತೇನೆ” ಎಂದು ಉತ್ತರಿಸಿದನು.
18 “ರಾಜನೇ, ಮಹೋನ್ನತನಾದ ದೇವರು ನಿನ್ನ ತಂದೆಯಾದ ನೆಬೂಕದ್ನೆಚ್ಚರನನ್ನು ಮಹಾ ದೊಡ್ಡ ರಾಜನನ್ನಾಗಿಯೂ ಬಲಿಷ್ಠನಾದ ರಾಜನನ್ನಾಗಿಯೂ ಪ್ರಮುಖನಾದ ರಾಜನನ್ನಾಗಿಯೂ ಮಾಡಿದ್ದನು. 19 ಹಲವಾರು ಜನಾಂಗದ ಮತ್ತು ಭಾಷೆಯ ಜನರು ಅವನಿಗೆ ತುಂಬ ಹೆದರುತ್ತಿದ್ದರು. ಏಕೆಂದರೆ ಮಹೋನ್ನತನಾದ ದೇವರು ಅವನನ್ನು ಬಹುದೊಡ್ಡ ರಾಜನನ್ನಾಗಿ ಮಾಡಿದ್ದನು. ನೆಬೂಕದ್ನೆಚ್ಚರನು ಯಾರನ್ನಾದರೂ ಕೊಲ್ಲಬೇಕೆಂದು ಇಚ್ಛಿಸಿದರೆ ಅವನನ್ನು ಕೊಲ್ಲಿಸಿಬಿಡುತ್ತಿದ್ದನು; ತನಗೆ ಬೇಕಾದವರನ್ನು ಉಳಿಸುತ್ತಿದ್ದನು; ತನ್ನ ಮನಸ್ಸಿಗೆ ಬಂದವರನ್ನು ಏರಿಸುತ್ತಿದ್ದನು; ತನ್ನ ಮನಸ್ಸಿಗೆ ಬಂದವರನ್ನು ಇಳಿಸುತ್ತಿದ್ದನು.
20 “ಆದರೆ ನೆಬೂಕದ್ನೆಚ್ಚರನು ಬಹಳ ಅಹಂಕಾರಿಯಾಗಿದ್ದನು ಮತ್ತು ಹಟಮಾರಿಯಾಗಿದ್ದನು. ಆದ್ದರಿಂದ ಅವನ ಅಧಿಕಾರವನ್ನು ಕಸಿದುಕೊಳ್ಳಲಾಯಿತು. ರಾಜಸಿಂಹಾಸನದಿಂದ ಇಳಿಸಿ ಅವನ ಎಲ್ಲ ಘನತೆಗೌರವಗಳನ್ನು ಕಿತ್ತುಕೊಳ್ಳಲಾಯಿತು. 21 ಅನಂತರ ನೆಬೂಕದ್ನೆಚ್ಚರನನ್ನು ಜನರ ಮಧ್ಯದಿಂದ ಓಡಿಸಲಾಯಿತು. ಅವನ ಬುದ್ಧಿಯು ಮೃಗಬುದ್ಧಿಯಂತಾಯಿತು. ಅವನು ಕಾಡುಕತ್ತೆಗಳ ಜೊತೆ ವಾಸಿಸಿದನು; ಹಸುಗಳಂತೆ ಹುಲ್ಲು ತಿಂದನು; ಮಂಜಿನಲ್ಲಿ ನೆನೆದನು. ಅವನಿಗೆ ಸರಿಯಾದ ಬುದ್ಧಿ ಬರುವತನಕ ಅವನು ಆ ಸ್ಥಿತಿಯಲ್ಲಿದ್ದನು. ಆಗ ಅವನು ಮಹೋನ್ನತನಾದ ದೇವರೇ ಮಾನವರ ಸಾಮ್ರಾಜ್ಯವನ್ನು ಆಳುತ್ತಾನೆ ಮತ್ತು ಆ ಸಾಮ್ರಾಜ್ಯಕ್ಕೆ ತನಗೆ ಬೇಕಾದವರನ್ನು ಅರಸರನ್ನಾಗಿ ನೇಮಿಸುತ್ತಾನೆ ಎಂಬುದನ್ನು ತಿಳಿದುಕೊಂಡನು.
22 “ಬೇಲ್ಶಚ್ಚರನೇ, ಇವುಗಳೆಲ್ಲ ನಿನಗೆ ತಿಳಿದೇ ಇವೆ. ನೀನು ನೆಬೂಕದ್ನೆಚ್ಚರನ ಮಗ. ಆದರೂ ನೀನು ನಮ್ರತೆಯಿಂದ ವರ್ತಿಸಲಿಲ್ಲ. 23 ಇಲ್ಲ, ನೀನು ನಮ್ರನಾಗಿರಲಿಲ್ಲ. ಅದಕ್ಕೆ ಪ್ರತಿಯಾಗಿ ನೀನು ಪರಲೋಕದೊಡೆಯನಿಗೆ ವಿರುದ್ಧವಾಗಿ ನಡೆದುಕೊಂಡೆ. ಯೆಹೋವನ ಆಲಯದಿಂದ ಕುಡಿಯುವ ಪಾತ್ರೆಗಳನ್ನು ತರಬೇಕೆಂದು ಆಜ್ಞಾಪಿಸಿದೆ. ನೀನು ಮತ್ತು ನಿನ್ನ ಅಧಿಕಾರಿಗಳು, ನಿನ್ನ ಪತ್ನಿಯರು ಮತ್ತು ನಿನ್ನ ಉಪಪತ್ನಿಯರು ಆ ಪಾತ್ರೆಗಳಲ್ಲಿ ದ್ರಾಕ್ಷಾರಸವನ್ನು ಕುಡಿದಿರಿ. ನೀನು ಬೆಳ್ಳಿ, ಬಂಗಾರ, ಕಂಚು, ಕಬ್ಬಿಣ, ಮರ ಮತ್ತು ಕಲ್ಲಿನ ದೇವರುಗಳನ್ನು ಸ್ತುತಿಸಿದೆ. ಅವುಗಳಿಗೆ ನೋಡುವ, ಕೇಳಿಸಿಕೊಳ್ಳುವ ಅಥವಾ ಸ್ತೋತ್ರವನ್ನು ತಿಳಿದುಕೊಳ್ಳುವ ಸಾಮರ್ಥ್ಯವಿಲ್ಲ. ಆದರೆ ನಿನ್ನ ಜೀವದ ಮೇಲೆಯೂ ನಿನ್ನ ಆಗುಹೋಗುಗಳ ಮೇಲೆಯೂ ಅಧಿಕಾರವುಳ್ಳ ದೇವರನ್ನು ನೀನು ಸ್ತುತಿಸಲಿಲ್ಲ. 24 ಆದ್ದರಿಂದ ದೇವರು ಗೋಡೆಯ ಮೇಲೆ ಬರೆಯಲು ಆ ಕೈಯನ್ನು ಕಳುಹಿಸಿಕೊಟ್ಟನು. 25 ಆ ಗೋಡೆಯ ಮೇಲೆ ಬರೆದ ಶಬ್ದಗಳು ಹೀಗಿವೆ:
ಮೆನೇ, ಮೆನೇ, ತೆಕೇಲ್, ಉಪರ್ಸಿನ್.
26 “ಈ ಶಬ್ದಗಳ ಅರ್ಥ ಹೀಗಿದೆ:
ಮೆನೇ ಎಂದರೆ: ದೇವರು ನಿನ್ನ ಆಳ್ವಿಕೆಯ ಕಾಲವನ್ನು ಲೆಕ್ಕಿಸಿ ಕೊನೆಗಾಣಿಸಿದ್ದಾನೆ.
27 ತೆಕೇಲ್ ಎಂದರೆ: ನೀನು ತಕ್ಕಡಿಯಲ್ಲಿ ತೂಗಲ್ಪಟ್ಟು ಕಡಿಮೆಯಾಗಿ ಕಂಡುಬಂದಿರುವೆ.
28 ಉಪರ್ಸಿನ್ ಎಂದರೆ: ನಿನ್ನ ರಾಜ್ಯವನ್ನು ನಿನ್ನಿಂದ ತೆಗೆದುಕೊಂಡು ವಿಭಜಿಸಲಾಗಿದೆ. ಅದನ್ನು ಮೇದ್ಯಯರಿಗೂ ಪಾರಸಿಯರಿಗೂ ಕೊಡಲಾಗುವುದು” ಎಂದು ವಿವರಿಸಿದನು.
29 ದಾನಿಯೇಲನಿಗೆ ಬೇಲ್ಶಚ್ಚರನ ಆಜ್ಞೆಯಂತೆ ಕಂದು ಬಣ್ಣದ ವಸ್ತ್ರಗಳನ್ನು ಕೊಡಲಾಯಿತು. ಚಿನ್ನದ ಸರವನ್ನು ಅವನ ಕೊರಳಿಗೆ ಹಾಕಲಾಯಿತು; ಅವನು ರಾಜ್ಯದ ಮೂವರು ಮುಖ್ಯಾಧಿಕಾರಿಗಳಲ್ಲಿ ಒಬ್ಬನಾದನು. 30 ಅದೇ ರಾತ್ರಿ ಕಸ್ದೀಯರ ರಾಜನಾದ ಬೇಲ್ಶಚ್ಚರನ ಕೊಲೆಯಾಯಿತು. 31 ಮೇದ್ಯನಾದ ದಾರ್ಯಾವೆಷನು ಹೊಸ ಅರಸನಾದನು. ಅವನು ಸುಮಾರು ಅರವತ್ತೆರಡು ವರ್ಷದವನಾಗಿದ್ದನು.
ಸ್ತುತಿಗೀತೆ. ರಚನೆಗಾರ: ದಾವೀದ.
110 ಯೆಹೋವನು ನನ್ನ ಒಡೆಯನಿಗೆ,
“ನಾನು ನಿನ್ನ ಶತ್ರುಗಳನ್ನು ನಿನಗೆ ಪಾದಪೀಠವನ್ನಾಗಿ ಮಾಡುವ ತನಕ
ನೀನು ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು” ಎಂದು ಹೇಳಿದನು.
2 ಯೆಹೋವನು ನಿನ್ನ ರಾಜ್ಯವನ್ನು ಅಭಿವೃದ್ಧಿಪಡಿಸುವನು.
ನಿನ್ನ ರಾಜ್ಯವು ಚೀಯೋನಿನಲ್ಲಿ ಆರಂಭಗೊಂಡು ನಿನ್ನ ಶತ್ರುಗಳ ದೇಶಗಳನ್ನು ಆವರಿಸಿಕೊಳ್ಳುವುದು.
3 ನೀನು ಸೈನ್ಯವನ್ನು ಕೂಡಿಸುವ ದಿನದಲ್ಲಿ
ಜನರು ತಾವಾಗಿಯೇ ನಿನ್ನ ಸೈನ್ಯವನ್ನು ಸೇರಿಕೊಳ್ಳುವರು.
ಅವರು ಸಮವಸ್ತ್ರಗಳನ್ನು ಧರಿಸಿಕೊಂಡು ಪ್ರತಿ ಮುಂಜಾನೆ ಸೇರಿಬರುವರು.
ಆ ಯುವಕರು ನಿನಗೆ ಉದಯಕಾಲದ ಇಬ್ಬನಿಯಂತಿರುವರು.
4 ಯೆಹೋವನು ನನಗೆ, “ನೀನು ಸದಾಕಾಲ ಮೆಲ್ಕಿಜೆದೇಕನಂತಹ ಯಾಜಕನಾಗಿರುವೆ”
ಎಂದು ವಾಗ್ದಾನ ಮಾಡಿದ್ದಾನೆ.
ಆತನು ತನ್ನ ಮನಸ್ಸನ್ನು ಬದಲಾಯಿಸುವುದಿಲ್ಲ.
5 ನನ್ನ ಯೆಹೋವನು ನಿನ್ನ ಬಲಗಡೆಯಲ್ಲಿದ್ದಾನೆ.
ಆತನು ಕೋಪಗೊಂಡಾಗ ಇತರ ರಾಜರುಗಳನ್ನು ಸೋಲಿಸಿಬಿಡುವನು.
6 ಆತನು ಜನಾಂಗಗಳಿಗೆ ತೀರ್ಪು ಮಾಡುವನು.
ರಣರಂಗವು ಅವರ ಹೆಣಗಳಿಂದ ತುಂಬಿಹೋಗುವುದು.
ಬಲಿಷ್ಠ ರಾಷ್ಟ್ರಗಳ ನಾಯಕರನ್ನು ಆತನು ದಂಡಿಸುವನು.
7 ರಾಜನು ಮಾರ್ಗದಲ್ಲಿ
ತೊರೆಯ ನೀರನ್ನು ಕುಡಿದು ಬಲ ಹೊಂದುವನು.
111 ಯೆಹೋವನಿಗೆ ಸ್ತೋತ್ರವಾಗಲಿ!
ನೀತಿವಂತರ ಸಭೆಯಲ್ಲಿ ನಾನು ಪೂರ್ಣಹೃದಯದಿಂದ
ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡುವೆನು.
2 ಯೆಹೋವನು ಮಹತ್ಕಾರ್ಯಗಳನ್ನು ಮಾಡುವನು.
ಜನರು ಅವುಗಳಲ್ಲಿ ಸಂತೋಷಿಸುತ್ತಾ ಅವುಗಳನ್ನೇ ಧ್ಯಾನಿಸುವರು.
3 ಆತನು ಮಹತ್ವವಾದ ಮತ್ತು ಅದ್ಭುತವಾದ ಕಾರ್ಯಗಳನ್ನು ಮಾಡುವನು.
ಆತನ ನೀತಿಯು ಶಾಶ್ವತವಾದದ್ದು.
4 ದೇವರು ಅಮೋಘವಾದ ಕಾರ್ಯಗಳನ್ನು ಮಾಡುವುದರಿಂದ
ಆತನ ದಯೆಯನ್ನೂ ಕೃಪೆಯನ್ನೂ ಜ್ಞಾಪಿಸಿಕೊಳ್ಳುತ್ತೇವೆ.
5 ಆತನು ತನ್ನ ಭಕ್ತರಿಗೆ ಆಹಾರವನ್ನು ಒದಗಿಸುವನು;
ಆತನು ತನ್ನ ಒಡಂಬಡಿಕೆಯನ್ನು ಯಾವಾಗಲೂ ಜ್ಞಾಪಿಸಿಕೊಳ್ಳುವನು.
6 ಆತನು ಅನ್ಯಜನಾಂಗಗಳ ದೇಶವನ್ನು
ತನ್ನ ಜನರಿಗೆ ಕೊಡುವುದರ ಮೂಲಕ ಪ್ರಬಲವಾದ ಕಾರ್ಯಗಳನ್ನು ಮಾಡಿದ್ದಾನೆ.
7 ಆತನ ಪ್ರತಿಯೊಂದು ಕಾರ್ಯವು ಒಳ್ಳೆಯದೂ ನ್ಯಾಯವಾದದ್ದೂ ಆಗಿದೆ.
ಆತನ ಆಜ್ಞೆಗಳೆಲ್ಲಾ ನಂಬಿಕೆಗೆ ಯೋಗ್ಯವಾಗಿವೆ.
8 ದೇವರ ಆಜ್ಞೆಗಳು ಶಾಶ್ವತವಾಗಿವೆ.
ಅವು ಯಥಾರ್ಥವಾಗಿಯೂ ಮತ್ತು ಶುದ್ಧವಾಗಿಯೂ ಇವೆ.
9 ಆತನು ತನ್ನ ಜನರನ್ನು ರಕ್ಷಿಸಿ ಅವರೊಂದಿಗೆ ಶಾಶ್ವತವಾದ ಒಡಂಬಡಿಕೆಯನ್ನು ಮಾಡಿಕೊಂಡಿದ್ದಾನೆ.
ಆತನ ಹೆಸರು ಅದ್ಭುತವಾಗಿಯೂ ಪರಿಶುದ್ಧವಾಗಿಯೂ ಇದೆ.
10 ಯೆಹೋವನ ಮೇಲಿರುವ ಭಯಭಕ್ತಿಗಳಿಂದಲೇ ಜ್ಞಾನವು ಆರಂಭವಾಗುತ್ತದೆ.
ಆತನಲ್ಲಿ ಭಯಭಕ್ತಿಯುಳ್ಳವರು ಜ್ಞಾನಪೂರ್ಣರಾಗಿದ್ದಾರೆ.
ಆತನಿಗೆ ಸದಾಕಾಲ ಸ್ತೋತ್ರವಾಗಲಿ.
Kannada Holy Bible: Easy-to-Read Version. All rights reserved. © 1997 Bible League International