M’Cheyne Bible Reading Plan
ಅಹಾಬನಿಗೆ ಮೀಕಾಯೆಹುವಿನ ಎಚ್ಚರಿಕೆ
22 ಮುಂದಿನ ಎರಡು ವರ್ಷಗಳಲ್ಲಿ, ಇಸ್ರೇಲ್ ಮತ್ತು ಅರಾಮ್ಯರ ಮಧ್ಯೆ ಶಾಂತಿಯಿತ್ತು. 2 ಮೂರನೆಯ ವರ್ಷದಲ್ಲಿ ಯೆಹೂದದ ರಾಜನಾದ ಯೆಹೋಷಾಫಾಟನು ಇಸ್ರೇಲಿನ ರಾಜನಾದ ಅಹಾಬನನ್ನು ಭೇಟಿಮಾಡಲು ಹೋದನು.
3 ಆ ಸಮಯದಲ್ಲಿ, ಅಹಾಬನು ತನ್ನ ಅಧಿಕಾರಿಗಳಿಗೆ, “ಅರಾಮ್ಯರ ರಾಜನು ಗಿಲ್ಯಾದಿನ ರಾಮೋತ್ ಪಟ್ಟಣವನ್ನು ನಮ್ಮಿಂದ ತೆಗೆದುಕೊಂಡದ್ದನ್ನು ಜ್ಞಾಪಿಸಿಕೊಳ್ಳಿರಿ? ರಾಮೋತನ್ನು ಹಿಂದಕ್ಕೆ ಪಡೆಯಲು ನಾವು ಏನನ್ನೂ ಮಾಡಲಿಲ್ಲವೇಕೆ? ಅದು ನಮ್ಮ ಪಟ್ಟಣ” ಎಂದು ಹೇಳಿದನು. 4 ಆದ್ದರಿಂದ ಅಹಾಬನು ರಾಜನಾದ ಯೆಹೋಷಾಫಾಟನನ್ನು, “ಅರಾಮ್ಯರ ವಿರುದ್ಧವಾಗಿ ರಾಮೋತಿನಲ್ಲಿ ಹೋರಾಟ ಮಾಡುವುದಕ್ಕೆ ನೀನು ನಮ್ಮೊಂದಿಗೆ ಸೇರಿಕೊಳ್ಳುವೆಯಾ?” ಎಂದು ಕೇಳಿದನು.
ಯೆಹೋಷಾಫಾಟನು, “ಆಗಲಿ, ನಾನು ನಿನ್ನ ಜೊತೆ ಸೇರಿಕೊಳ್ಳುತ್ತೇನೆ. ನನ್ನ ಸೈನ್ಯಗಳು ಮತ್ತು ನನ್ನ ಕುದುರೆಗಳು ನಿನ್ನ ಸೈನ್ಯದ ಜೊತೆ ಸೇರಲು ಸಿದ್ಧವಾಗಿವೆ. 5 ಆದರೆ ಯೆಹೋವನ ಸಲಹೆಯನ್ನು ನಾವು ಮೊದಲು ಕೇಳಬೇಕಾಗಿದೆ” ಎಂದನು.
6 ಅಹಾಬನು ಪ್ರವಾದಿಗಳ ಸಭೆಯೊಂದನ್ನು ಕರೆದನು. ಆ ಸಮಯದಲ್ಲಿ ನಾನೂರುಮಂದಿ ಪ್ರವಾದಿಗಳಿದ್ದರು. ಅಹಾಬನು ಪ್ರವಾದಿಗಳನ್ನು, “ಅರಾಮ್ಯರ ಸೇನೆಯ ವಿರುದ್ಧ ಹೋರಾಡಲು ನಾನು ರಾಮೋತಿಗೆ ಹೋಗಬೇಕೇ? ಅಥವಾ ನಾನು ಬೇರೊಂದು ಸಮಯಕ್ಕಾಗಿ ಕಾಯಬೇಕೇ?” ಎಂದು ಕೇಳಿದನು.
ಪ್ರವಾದಿಗಳು, “ನೀನು ಹೋಗಿ ಯುದ್ಧಮಾಡು. ನೀನು ಗೆಲ್ಲುವಂತೆ ಯೆಹೋವನು ಮಾಡುವನು” ಎಂದು ಹೇಳಿದರು.
7 ಆದರೆ ಯೆಹೋಷಾಫಾಟನು, “ಯೆಹೋವನ ಪ್ರವಾದಿಗಳು ಇಲ್ಲಿ ಬೇರೆ ಯಾರಾದರೂ ಇದ್ದಾರೆಯೇ? ಯಾರಾದರೂ ಇದ್ದರೆ, ದೇವರು ಏನು ಹೇಳುತ್ತಾನೆಂಬುದನ್ನು ನಾವು ಅವರನ್ನು ಕೇಳೋಣ” ಎಂದು ಹೇಳಿದನು.
8 ರಾಜನಾದ ಅಹಾಬನು, “ಬೇರೊಬ್ಬ ಪ್ರವಾದಿಯು ಇಲ್ಲಿದ್ದಾನೆ. ಅವನು ಇಮ್ಲನ ಮಗನಾದ ಮೀಕಾಯೆಹು ಎಂಬ ಹೆಸರಿನವನು. ಆದರೆ ನಾನು ಅವನನ್ನು ದ್ವೇಷಿಸುತ್ತೇನೆ. ಯೆಹೋವನ ಪ್ರತಿನಿಧಿಯಾಗಿ ಅವನು ಮಾತನಾಡುವಾಗ ಅವನೆಂದೂ ನನಗೆ ಒಳ್ಳೆಯವುಗಳನ್ನು ಪ್ರವಾದಿಸುವುದಿಲ್ಲ. ಅವನು ಯಾವಾಗಲೂ ನನಗೆ ಕೆಟ್ಟವುಗಳನ್ನೇ ಪ್ರವಾದಿಸುತ್ತಾನೆ” ಎಂದು ಉತ್ತರಿಸಿದನು.
ಯೆಹೋಷಾಫಾಟನು, “ರಾಜನಾದ ಅಹಾಬನೇ, ನೀನು ಆ ಸಂಗತಿಗಳನ್ನು ಹೇಳಲೇಬಾರದು!” ಎಂದು ಹೇಳಿದನು.
9 ರಾಜನಾದ ಅಹಾಬನು ತನ್ನ ಅಧಿಕಾರಿಗಳಲ್ಲಿ ಒಬ್ಬನಿಗೆ, “ಹೋಗಿ, ಮೀಕಾಯೆಹುವನ್ನು ಕಂಡುಹಿಡಿ” ಎಂದು ತಿಳಿಸಿದನು.
10 ಆ ಸಮಯದಲ್ಲಿ ಈ ಇಬ್ಬರು ರಾಜರು ತಮ್ಮ ರಾಜವಸ್ತ್ರಗಳನ್ನು ಧರಿಸಿದ್ದರು. ಸಮಾರ್ಯ ಪಟ್ಟಣದ ಹೆಬ್ಬಾಗಿಲಿನ ಬಳಿಯಲ್ಲಿದ್ದ ಸಿಂಹಾಸನಗಳ ಮೇಲೆ ಅವರು ಕುಳಿತಿದ್ದರು. ಅವರ ಎದುರಿನಲ್ಲಿ ಪ್ರವಾದಿಗಳೆಲ್ಲರೂ ನಿಂತಿದ್ದರು. ಪ್ರವಾದಿಗಳು ಪ್ರವಾದಿಸುತ್ತಿದ್ದರು. 11 ಪ್ರವಾದಿಗಳಲ್ಲಿ ಚಿದ್ಕೀಯ ಎಂಬ ಹೆಸರಿನವನೊಬ್ಬನಿದ್ದನು. ಅವನು ಕೆನಾನನ ಮಗ. ಚಿದ್ಕೀಯನು ಕೆಲವು ಕಬ್ಬಿಣದ ಕೊಂಬುಗಳನ್ನು[a] ಮಾಡಿಸಿದ್ದನು. ಆಗ ಅವನು ಅಹಾಬನಿಗೆ, “ಯೆಹೋವನು ಹೀಗೆನ್ನುವನು: ‘ಅರಾಮ್ಯರ ಸೈನ್ಯದ ವಿರುದ್ಧ ಹೋರಾಡಲು ನೀನು ಈ ಕೊಂಬುಗಳನ್ನು ಬಳಸುವೆ. ನೀನು ಅವರನ್ನು ಸೋಲಿಸುವೆ ಮತ್ತು ನಾಶಗೊಳಿಸುವೆ’” ಎಂದು ಹೇಳಿದನು. 12 ಇತರ ಪ್ರವಾದಿಗಳೆಲ್ಲರೂ ಚಿದ್ಕೀಯನ ಮಾತನ್ನು ಬೆಂಬಲಿಸಿದರು. ಪ್ರವಾದಿಯು, “ನಿನ್ನ ಸೈನ್ಯವು ಈಗ ಹೊರಡಲಿ. ಅವರು ರಾಮೋತಿನಲ್ಲಿ ಅರಾಮ್ಯರ ಸೈನ್ಯದ ವಿರುದ್ಧ ಹೋರಾಡಲೇಬೇಕು. ನೀನು ಹೋರಾಟದಲ್ಲಿ ಜಯಗಳಿಸುವೆ. ನೀನು ಗೆಲ್ಲುವಂತೆ ಯೆಹೋವನು ಮಾಡುತ್ತಾನೆ” ಎಂದನು.
13 ಈ ಕಾರ್ಯಗಳು ನಡೆಯುತ್ತಿರುವಾಗ, ಮೀಕಾಯೆಹುವನ್ನು ಕಂಡುಹಿಡಿಯಲು ಅಧಿಕಾರಿಯೊಬ್ಬನು ಹೋದನು. ಅಧಿಕಾರಿಯು ಮೀಕಾಯೆಹುವನ್ನು ಕಂಡುಹಿಡಿದು, ಅವನಿಗೆ, “ರಾಜನಿಗೆ ಶುಭವಾಗುವುದೆಂದು ಪ್ರವಾದಿಗಳೆಲ್ಲರೂ ಹೇಳಿದ್ದಾರೆ. ಆದ್ದರಿಂದ ಅವರು ಹೇಳಿದಂತೆಯೇ ನೀನೂ ಹೇಳುವುದು ನಿನಗೇ ಒಳ್ಳೆಯದು” ಎಂದು ಹೇಳಿದನು.
14 ಆದರೆ ಮೀಕಾಯೆಹುವು, “ಇಲ್ಲ! ಯೆಹೋವನಾಣೆ, ಆತನು ತಿಳಿಸುವುದನ್ನೇ ನಾನು ಹೇಳುತ್ತೇನೆ” ಎಂದು ಉತ್ತರಿಸಿದನು.
15 ನಂತರ ರಾಜನಾದ ಅಹಾಬನ ಎದುರಿನಲ್ಲಿ ಮೀಕಾಯೆಹು ನಿಂತುಕೊಂಡನು. ರಾಜನು ಅವನನ್ನು, “ಮೀಕಾಯೆಹುವೇ, ರಾಜನಾದ ಯೆಹೋಷಾಫಾಟನು ಮತ್ತು ನಾನು ನಮ್ಮ ಸೈನ್ಯಗಳನ್ನು ಒಟ್ಟುಗೂಡಿಸಬಹುದೇ? ಅರಾಮ್ಯರ ಸೇನೆಯ ವಿರುದ್ಧ ಹೋರಾಡಲು ರಾಮೋತಿಗೆ ನಾವೀಗ ಹೋಗಬೇಕೇ?” ಎಂದು ಕೇಳಿದನು.
ಮೀಕಾಯೆಹು, “ಆಗಲಿ, ಈಗ ನೀವು ಹೋಗಿ, ಅವರ ವಿರುದ್ಧ ಯುದ್ಧಮಾಡಿ. ಯೆಹೋವನು ನಿಮಗೆ ಜಯವನ್ನು ಕೊಡುತ್ತಾನೆ” ಎಂದನು.
16 ಆದರೆ ಅಹಾಬನು, “ಯೆಹೋವನ ಶಕ್ತಿಯಿಂದ ನೀನು ಮಾತನಾಡುತ್ತಿಲ್ಲ. ನೀನು ನಿನ್ನ ಸ್ವಂತ ಮಾತುಗಳನ್ನು ಹೇಳುತ್ತಿರುವೆ. ನನಗೆ ನೀನು ನಿಜವನ್ನು ಹೇಳು! ನಾನು ನಿನಗೆ ಎಷ್ಟು ಸಲ ಹೇಳಬೇಕು? ಯೆಹೋವನು ತಿಳಿಸುವುದನ್ನೇ ನನಗೆ ಹೇಳು!” ಎಂದು ಕೇಳಿದನು.
17 ಮೀಕಾಯೆಹು, “ಮುಂದೆ ಸಂಭವಿಸುವುದು ನನಗೆ ಕಾಣುತ್ತಿದೆ. ಇಸ್ರೇಲಿನ ಸೈನ್ಯವು ಬೆಟ್ಟಗಳ ಮೇಲೆ ಚೆಲ್ಲಾಪಿಲ್ಲಿಯಾಗಿ ಕುರುಬನಿಲ್ಲದ ಕುರಿಗಳಂತಾಗಿದೆ. ಯೆಹೋವನು ಹೇಳುವುದು ಇದನ್ನೇ, ‘ಈ ಜನರಿಗೆ ನಾಯಕನಿಲ್ಲ. ಅವರು ಯುದ್ಧಮಾಡದೆ, ಮನೆಗೆ ಹೋಗಬೇಕು’” ಎಂದು ಹೇಳಿದನು.
18 ಆಗ ಅಹಾಬನು ಯೆಹೋಷಾಫಾಟನಿಗೆ, “ನೋಡಿದೆಯಾ! ನಾನು ನಿನಗೆ ಹೇಳಿದೆನಲ್ಲಾ! ಈ ಪ್ರವಾದಿಯು ಎಂದೂ ನನ್ನ ಬಗ್ಗೆ ಒಳ್ಳೆಯದೇನನ್ನೂ ಹೇಳುವುದಿಲ್ಲ. ನಾನು ಕೇಳಬಾರದ ಸಂಗತಿಗಳನ್ನು ಅವನು ಯಾವಾಗಲೂ ನನಗೆ ಹೇಳುತ್ತಾನೆ” ಎಂದು ಹೇಳಿದನು.
19 ಆದರೆ ಮೀಕಾಯೆಹು ಯೆಹೋವನಿಗಾಗಿ ಮಾತನಾಡುತ್ತಲೇ ಇದ್ದನು. ಮೀಕಾಯೆಹು, “ಕೇಳಿರಿ! ಈ ಮಾತುಗಳನ್ನು ಯೆಹೋವನು ತಿಳಿಸುತ್ತಾನೆ! ಯೆಹೋವನು ಪರಲೋಕದಲ್ಲಿ ತನ್ನ ಸಿಂಹಾಸನದ ಮೇಲೆ ಕುಳಿತಿರುವುದನ್ನು ನಾನು ನೋಡಿದೆನು. ಆತನ ಎಲ್ಲಾ ದೂತರು ಆತನ ಎಡಬಲಗಳಲ್ಲಿ ನಿಂತಿದ್ದರು. 20 ಯೆಹೋವನು ಅವರಿಗೆ, ‘ನಿಮ್ಮಲ್ಲಿ ಯಾರಾದರೂ ರಾಜನಾದ ಅಹಾಬನನ್ನು ಪ್ರೇರೇಪಿಸುವಿರಾ? ಅವನು ಅರಾಮ್ಯರ ಸೇನೆಯ ವಿರುದ್ಧ ಹೋರಾಡಲು ರಾಮೋತಿಗೆ ಹೋಗಬೇಕೆಂದು ನಾನು ಅಪೇಕ್ಷೆಪಟ್ಟಿದ್ದೇನೆ. ಅಲ್ಲಿ ಅವನು ಕೊಲ್ಲಲ್ಪಡುವನು’ ಎಂದು ಹೇಳಿದನು. ತಾವು ಏನು ಮಾಡಬೇಕೆಂಬುದರ ಬಗ್ಗೆ ದೂತರಲ್ಲಿ ಒಮ್ಮತದ ಅಭಿಪ್ರಾಯವುಂಟಾಗಲಿಲ್ಲ. 21 ಆಗ ಒಬ್ಬ ದೂತನು ಯೆಹೋವನ ಬಳಿಗೆ ಹೋಗಿ, ‘ನಾನು ಅವನನ್ನು ಪ್ರೇರೇಪಿಸುತ್ತೇನೆ’ ಎಂದನು. 22 ಯೆಹೋವನು, ‘ರಾಜನಾದ ಅಹಾಬನನ್ನು ನೀನು ಹೇಗೆ ಪ್ರೇರೇಪಿಸುವೆ?’ ಎಂದು ಉತ್ತರಿಸಿದಾಗ, ದೂತನು, ‘ಅಹಾಬನ ಎಲ್ಲಾ ಪ್ರವಾದಿಗಳು ಗಲಿಬಿಲಿಗೊಳ್ಳುವಂತೆ ಮಾಡುತ್ತೇನೆ. ರಾಜನಾದ ಅಹಾಬನಿಗೆ ಪ್ರವಾದಿಗಳು ಸುಳ್ಳುಹೇಳುವಂತೆ ನಾನು ಮಾಡುತ್ತೇನೆ. ಪ್ರವಾದಿಗಳ ಸಂದೇಶವೆಲ್ಲವೂ ಸುಳ್ಳಾಗಿರುವುದು’ ಎಂದನು. ಆದ್ದರಿಂದ ಯೆಹೋವನು, ‘ಸರಿ, ಹೋಗಿ ರಾಜನಾದ ಅಹಾಬನನ್ನು ಪ್ರೇರೇಪಿಸು. ನೀನು ಸಫಲನಾಗುವೆ’” ಎಂದು ಹೇಳಿದನು.
23 ಮೀಕಾಯೆಹು ಹೀಗೆ ಹೇಳಿದ ಮೇಲೆ, “ಇಲ್ಲಿ ನಡೆದದ್ದೂ ಇದೇ. ನಿನ್ನ ಪ್ರವಾದಿಗಳೇ ನಿನಗೆ ಸುಳ್ಳುಹೇಳುವಂತೆ ಯೆಹೋವನು ಮಾಡಿದ್ದಾನೆ. ನಿನಗೆ ಮಹಾಕೇಡು ಬರಲೆಂದು ಯೆಹೋವನು ತಾನೇ ತೀರ್ಮಾನಿಸಿದ್ದಾನೆ” ಎಂದು ಹೇಳಿದನು.
24 ಆಗ ಪ್ರವಾದಿಯಾದ ಚಿದ್ಕೀಯನು ಮೀಕಾಯೆಹುವಿನ ಹತ್ತಿರಕ್ಕೆ ಹೋಗಿ ಅವನ ಮುಖದ ಮೇಲೆ ಹೊಡೆದು, “ಯೆಹೋವನ ಆತ್ಮವು ನನ್ನನ್ನು ಬಿಟ್ಟುಹೋಗಿದೆ ಎಂಬುದನ್ನೂ ಈಗ ನಿನ್ನ ಮೂಲಕ ಮಾತನಾಡುತ್ತಿದ್ದಾನೆ ಎಂಬುದನ್ನೂ ನೀನು ನಿಜವಾಗಿಯೂ ನಂಬುವೆಯಾ?” ಎಂದು ಕೇಳಿದನು.
25 ಮೀಕಾಯೆಹು, “ಕೇಡು ಬೇಗನೆ ಬರಲಿದೆ. ಆಗ ನೀನು ಹೋಗಿ ಒಂದು ಚಿಕ್ಕ ಕೊಠಡಿಯಲ್ಲಿ ಅಡಗಿಕೊಳ್ಳುವೆ. ನಾನು ಸತ್ಯವನ್ನೇ ನುಡಿದೆನೆಂದು ಆಗ ನಿನಗೆ ತಿಳಿಯುತ್ತದೆ!” ಎಂದನು.
26 ಆಗ ರಾಜನಾದ ಅಹಾಬನು ಮೀಕಾಯೆಹುವನ್ನು ಬಂಧಿಸುವಂತೆ ತನ್ನ ಅಧಿಕಾರಿಯೊಬ್ಬನಿಗೆ ಆಜ್ಞೆ ಮಾಡಿದನು. ರಾಜನಾದ ಅಹಾಬನು, “ಅವನನ್ನು ಬಂಧಿಸಿ, ನಗರಾಧಿಕಾರಿಯಾದ ಆಮೋನ ಮತ್ತು ರಾಜಪುತ್ರನಾದ ಯೋವಾಷನ ಬಳಿಗೆ ತೆಗೆದುಕೊಂಡು ಹೋಗಿ. 27 ಮೀಕಾಯೆಹುವನ್ನು ಸೆರೆಮನೆಯಲ್ಲಿಡಬೇಕೆಂದು ಅವರಿಗೆ ತಿಳಿಸಿ. ಅವನಿಗೆ ತಿನ್ನಲು ಸ್ವಲ್ಪ ರೊಟ್ಟಿ ಮತ್ತು ಕುಡಿಯಲು ಸ್ವಲ್ಪ ನೀರನ್ನು ಮಾತ್ರ ಕೊಡಿ. ನಾನು ಯುದ್ಧದಿಂದ ಮನೆಗೆ ಹಿಂದಿರುಗುವವರೆಗೆ ಅವನನ್ನು ಅಲ್ಲಿಯೇ ಇಡಿ” ಎಂದು ಹೇಳಿದನು.
28 ಮೀಕಾಯೆಹು ಗಟ್ಟಿಯಾದ ಧ್ವನಿಯಲ್ಲಿ, “ನಾನು ಏನು ಹೇಳುತ್ತೇನೆಂಬುದನ್ನು ಜನರೆಲ್ಲರೂ ಕೇಳಿರಿ! ರಾಜನಾದ ಅಹಾಬನೇ, ನೀನು ಈ ಹೋರಾಟದಿಂದ ಜೀವಸಹಿತ ಮನೆಗೆ ಬಂದರೆ, ಯೆಹೋವನು ನನ್ನ ಮೂಲಕ ಮಾತನಾಡಿಲ್ಲ” ಎಂದು ಹೇಳಿದನು.
29 ನಂತರ ರಾಜನಾದ ಅಹಾಬನು ಮತ್ತು ರಾಜನಾದ ಯೆಹೋಷಾಫಾಟನು ಅರಾಮ್ಯರ ಸೇನೆಯ ವಿರುದ್ಧ ಹೋರಾಡಲು ರಾಮೋತಿಗೆ ಹೋದರು. ಅದು ಗಿಲ್ಯಾದಿನ ಪ್ರದೇಶವೆಂಬಲ್ಲಿ ನಡೆಯಿತು. 30 ಅಹಾಬನು ಯೆಹೋಷಾಫಾಟನಿಗೆ, “ನಾವು ಹೋರಾಟಕ್ಕೆ ಸಿದ್ಧತೆಗಳನ್ನು ಮಾಡೋಣ. ನೋಡುವುದಕ್ಕೆ ರಾಜನಲ್ಲವೆಂದು ತೋರುವಂತಹ ವಸ್ತ್ರಗಳನ್ನು ನಾನು ಧರಿಸಿಕೊಳ್ಳುತ್ತೇನೆ. ಆದರೆ ನೀನು ರಾಜನಂತೆ ತೋರುವ ನಿನ್ನ ವಿಶೇಷ ವಸ್ತ್ರಗಳನ್ನು ಧರಿಸಿಕೊ” ಎಂದನು. ಇಸ್ರೇಲಿನ ರಾಜನು, ತಾನು ರಾಜನಲ್ಲವೆಂದು ತೋರುವಂತಹ ವಸ್ತ್ರಗಳನ್ನು ಧರಿಸಿಕೊಂಡು ಹೋರಾಟವನ್ನು ಆರಂಭಿಸಿದನು.
31 ಅರಾಮ್ಯರ ರಾಜನ ಬಳಿ ಮೂವತ್ತೆರಡು ರಥಬಲದ ಅಧಿಪತಿಗಳಿದ್ದರು. ಆ ರಾಜನು ಇಸ್ರೇಲಿನ ರಾಜನನ್ನು ಕಂಡು ಹಿಡಿಯುವಂತೆ ಈ ಮೂವತ್ತೆರಡು ರಥಬಲದ ಅಧಿಪತಿಗಳಿಗೆ ಆಜ್ಞಾಪಿಸಿದ್ದನು. ಅರಾಮ್ಯರ ರಾಜನು, ಇಸ್ರೇಲಿನ ರಾಜನನ್ನು ಕೊಂದುಹಾಕುವಂತೆ ಈ ಅಧಿಕಾರಿಗಳಿಗೆ ಆಜ್ಞಾಪಿಸಿದ್ದನು; 32 ಹೋರಾಟದ ಸಂದರ್ಭದಲ್ಲಿ ರಾಜನಾದ ಯೆಹೋಷಾಫಾಟನನ್ನು ಈ ಅಧಿಪತಿಗಳು ನೋಡಿದರು. ಆ ಅಧಿಕಾರಿಗಳು ಅವನನ್ನು ಇಸ್ರೇಲಿನ ರಾಜನೆಂದು ತಿಳಿದು ಅವನನ್ನು ಕೊಲ್ಲುವುದಕ್ಕೆ ಅವರು ಹೋದರು. ಯೆಹೋಷಾಫಾಟನು ಕೂಗಿಕೊಳ್ಳಲಾರಂಭಿಸಿದನು. 33 ಅವನು ರಾಜನಾದ ಅಹಾಬನಲ್ಲವೆಂಬುದನ್ನು ಆ ಅಧಿಕಾರಿಗಳು ತಿಳಿದು ಅವನನ್ನು ಕೊಲ್ಲಲಿಲ್ಲ.
34 ಆದರೆ ಒಬ್ಬ ಸೈನಿಕನು ಯಾರಿಗೂ ಗುರಿಯಿಡದೆ ಒಂದು ಬಾಣವನ್ನು ಗಾಳಿಯಲ್ಲಿ ಹೊಡೆದನು. ಆದರೆ ಅವನ ಬಾಣವು ಇಸ್ರೇಲಿನ ರಾಜನಾದ ಅಹಾಬನಿಗೆ ಬಡಿಯಿತು. ಆ ಬಾಣವು ರಾಜನ ದೇಹದ ಕವಚದ ಸಣ್ಣ ಸಂಧಿಯಲ್ಲಿ ತಾಕಿತು. ರಾಜನಾದ ಅಹಾಬನು ತನ್ನ ರಥದ ಸಾರಥಿಗೆ, “ಒಂದು ಬಾಣವು ನನಗೆ ತಾಕಿತು! ರಥವನ್ನು ಈ ಪ್ರದೇಶದಿಂದ ಹೊರಗೆ ಓಡಿಸು. ನಾವು ಯುದ್ಧದಿಂದ ಹೊರಟುಹೋಗಬೇಕಾಗಿದೆ” ಎಂದು ಹೇಳಿದನು.
35 ಸೈನಿಕರು ಹೋರಾಡುತ್ತಲೇ ಇದ್ದರು. ರಾಜನಾದ ಅಹಾಬನು ರಥದಲ್ಲಿಯೇ ಇದ್ದನು. ಅವನು ರಥದ ಒಂದು ಪಕ್ಕಕ್ಕೆ ಒರಗಿಕೊಂಡು ನಿಂತಿದ್ದನು. ಅವನು ಅರಾಮ್ಯರ ಸೇನೆಯ ಕಡೆಗೆ ನೋಡುತ್ತಲೇ ಇದ್ದನು. ಅವನ ದೇಹದಿಂದ ಹರಿದ ರಕ್ತವು, ರಥದ ತಳದಲ್ಲಿ ಮಡುಗಟ್ಟಿತು. ಸಾಯಂಕಾಲವಾದ ಮೇಲೆ ರಾಜನು ಸತ್ತುಹೋದನು. 36 ಸೂರ್ಯನು ಮುಳುಗುತ್ತಿರಲು, ಇಸ್ರೇಲಿನ ಸೈನ್ಯದ ಪ್ರತಿಯೊಬ್ಬನು ತನ್ನ ಊರಿಗೂ ತನ್ನ ನಾಡಿಗೂ ಹೋಗಬೇಕು! ಎಂಬ ಕೂಗು ಸೈನ್ಯದಲ್ಲೆಲ್ಲಾ (ಪಾಳೆಯದಲ್ಲಿ) ಹಬ್ಬಿತು.
37 ರಾಜನಾದ ಅಹಾಬನು ಈ ರೀತಿಯಲ್ಲಿ ಸತ್ತುಹೋದನು. ಅವನ ದೇಹವನ್ನು ಕೆಲವು ಜನರು ಸಮಾರ್ಯಕ್ಕೆ ತೆಗೆದುಕೊಂಡು ಹೋದರು. ಅವರು ಅವನನ್ನು ಅಲ್ಲಿ ಸಮಾಧಿಮಾಡಿದರು. 38 ಆ ಜನರು ಅಹಾಬನ ರಥವನ್ನು ಸಮಾರ್ಯದ ಕೊಳದ ನೀರಿನಲ್ಲಿ ತೊಳೆದರು. ರಥದಲ್ಲಿದ್ದ ರಾಜನಾದ ಅಹಾಬನ ರಕ್ತವನ್ನು ನಾಯಿಗಳು ನೆಕ್ಕಿದವು. ದೇವದಾಸಿಯರು ಆ ಕೊಳದ ನೀರನ್ನು ಸ್ನಾನಕ್ಕೆ ಉಪಯೋಗಿಸುತ್ತಿದ್ದರು. ಯೆಹೋವನು ಹೇಳಿದ್ದ ರೀತಿಯಲ್ಲಿಯೇ ಈ ಸಂಗತಿಗಳು ಸಂಭವಿಸಿದವು.
39 ರಾಜನಾದ ಅಹಾಬನು ತನ್ನ ಆಳ್ವಿಕೆಯ ಕಾಲದಲ್ಲಿ ಮಾಡಿದ ಸಂಗತಿಗಳನ್ನೆಲ್ಲಾ “ಇಸ್ರೇಲಿನ ರಾಜರುಗಳ ಇತಿಹಾಸ” ಪುಸ್ತಕದಲ್ಲಿ ಬರೆದಿದ್ದಾರೆ. ರಾಜನು ತನ್ನ ಅರಮನೆಯನ್ನು ಮತ್ತಷ್ಟು ಸುಂದರವಾಗಿ ಕಾಣುವಂತೆ ಮಾಡಲು ಬಳಸಿದ ದಂತದ ಕುರಿತಾಗಿಯೂ ಆ ಪುಸ್ತಕವು ತಿಳಿಸುತ್ತದೆ. ರಾಜನು ನಿರ್ಮಿಸಿದ ನಗರಗಳ ಬಗ್ಗೆಯೂ ಆ ಪುಸ್ತಕವು ತಿಳಿಸುತ್ತದೆ. 40 ಅಹಾಬನು ಸತ್ತಾಗ ಅವನನ್ನು ಅವನ ಪೂರ್ವಿಕರೊಡನೆ ಸಮಾಧಿಮಾಡಿದರು. ಅವನ ನಂತರ ಅವನ ಮಗನಾದ ಅಹಜ್ಯನು ರಾಜನಾದನು.
ಯೆಹೂದದ ರಾಜನಾದ ಯೆಹೋಷಾಫಾಟ
41 ಅಹಾಬನು ಇಸ್ರೇಲಿನ ರಾಜನಾಗಿದ್ದ ನಾಲ್ಕನೆಯ ವರ್ಷದಲ್ಲಿ ಯೆಹೋಷಾಫಾಟನು ಯೆಹೂದದ ರಾಜನಾದನು. ಯೆಹೋಷಾಫಾಟನು ಆಸನ ಮಗ. 42 ಯೆಹೋಷಾಫಾಟನು ರಾಜನಾದಾಗ ಅವನಿಗೆ ಮೂವತ್ತೈದು ವರ್ಷ ವಯಸ್ಸಾಗಿತ್ತು. ಯೆಹೋಷಾಫಾಟನು ಜೆರುಸಲೇಮಿನಲ್ಲಿ ಇಪ್ಪತ್ತೈದು ವರ್ಷ ಆಳಿದನು. ಯೆಹೋಷಾಫಾಟನ ತಾಯಿಯು ಆಜೂಬಳೆಂಬ ಹೆಸರಿನವಳು. ಆಜೂಬಳು ಶಿಲ್ಹಿಯ ಮಗಳು. 43 ಯೆಹೋಷಾಫಾಟನು ಒಳ್ಳೆಯವನಾಗಿದ್ದನು. ಅವನು ತನ್ನ ತಂದೆಯ ಮಾರ್ಗವನ್ನು ಅನುಸರಿಸಿದನು. ಯೆಹೋವನು ಅಪೇಕ್ಷಿಸಿದವುಗಳಿಗೆಲ್ಲ ಅವನು ವಿಧೇಯನಾಗಿದ್ದನು. ಆದರೆ ಯೆಹೋಷಾಫಾಟನು ಉನ್ನತಸ್ಥಳಗಳನ್ನು ನಾಶಗೊಳಿಸಲಿಲ್ಲ. ಜನರು ಆ ಸ್ಥಳಗಳಲ್ಲಿ ಯಜ್ಞಗಳನ್ನು ಅರ್ಪಿಸುತ್ತಾ ಧೂಪಹಾಕುತ್ತಾ ಇದ್ದರು.
44 ಯೆಹೋಷಾಫಾಟನು ಇಸ್ರೇಲಿನ ರಾಜನೊಂದಿಗೆ ಒಂದು ಶಾಂತಿಒಪ್ಪಂದವನ್ನು ಮಾಡಿಕೊಂಡನು. 45 ಯೆಹೋಷಾಫಾಟನು ಬಹಳ ಧೈರ್ಯಶಾಲಿ. ಅವನು ಅನೇಕ ಯುದ್ಧಗಳಲ್ಲಿ ಹೋರಾಡಿದ್ದನು. ಅವನು ಮಾಡಿದ ಕಾರ್ಯಗಳನ್ನೆಲ್ಲಾ “ಯೆಹೂದದ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಬರೆಯಲಾಗಿದೆ.
46 ಲೈಂಗಿಕ ಸಂಬಂಧಕ್ಕಾಗಿ ತಮ್ಮ ದೇಹಗಳನ್ನು ಮಾರಾಟ ಮಾಡುತ್ತಿದ್ದ ಗಂಡಸರನ್ನು ಮತ್ತು ಹೆಂಗಸರನ್ನು, ಯೆಹೋಷಾಫಾಟನು ದೇಶದಿಂದ ಹೊರಗಟ್ಟಿದನು. ಅವನ ತಂದೆಯಾದ ಆಸನು ರಾಜನಾಗಿದ್ದ ಕಾಲದಲ್ಲಿ ಆ ಜನರು ಪೂಜಾಸ್ಥಳಗಳಲ್ಲಿ ಸೇವೆಯನ್ನು ಮಾಡುತ್ತಿದ್ದರು.
47 ಈ ಸಮಯದಲ್ಲಿ ಎದೋಮ್ ದೇಶದಲ್ಲಿ ರಾಜನಿರಲಿಲ್ಲ. ಆ ದೇಶವನ್ನು ಒಬ್ಬ ರಾಜ್ಯಪಾಲನು ಆಳುತ್ತಿದ್ದನು. ಈ ರಾಜ್ಯಪಾಲನನ್ನು ಯೆಹೂದದ ರಾಜನು ಆರಿಸಿದ್ದನು.
48 ರಾಜನಾದ ಯೆಹೋಷಾಫಾಟನು ಸರಕು ಸಾಗಿಸುವ ಹಡಗುಗಳನ್ನು ತಯಾರಿಸಿದನು. ಯೆಹೋಷಾಫಾಟನು ಓಫೀರ್ ದೇಶದಿಂದ ಬಂಗಾರವನ್ನು ತರುವುದಕ್ಕಾಗಿ ಈ ಹಡಗುಗಳನ್ನು ಕಳುಹಿಸಿದನು. ಆದರೆ ಆ ಹಡಗುಗಳು ತಮ್ಮ ಸ್ವಂತ ಬಂದರಾದ ಎಚ್ಯೋನ್ಗೆಬೆರಿನಲ್ಲಿ ನಾಶವಾದವು. ಅವು ಓಫೀರ್ ದೇಶವನ್ನು ಮುಟ್ಟಲೇ ಇಲ್ಲ. 49 ಇಸ್ರೇಲಿನ ರಾಜನಾದ ಅಹಜ್ಯನು ಯೆಹೋಷಾಫಾಟನಿಗೆ ಸಹಾಯಮಾಡಲು ಹೋದನು. ಅಹಜ್ಯನು ಆ ಹಡಗುಗಳಲ್ಲಿ ತನ್ನ ಸ್ವಂತ ನಾವಿಕರಲ್ಲಿ ಕೆಲವರನ್ನು ಯೆಹೋಷಾಫಾಟನ ಜನರೊಂದಿಗೆ ಕಳುಹಿಸುತ್ತೇನೆಂದು ಯೆಹೋಷಾಫಾಟನಿಗೆ ತಿಳಿಸಿದನು. ಆದರೆ ಯೆಹೋಷಾಫಾಟನು ಅಹಜ್ಯನ ಜನರನ್ನು ಸ್ವೀಕರಿಸಲಿಲ್ಲ.
50 ಯೆಹೋಷಾಫಾಟನು ಸತ್ತುಹೋದನು. ಅವನನ್ನು ಅವನ ಪೂರ್ವಿಕರ ಬಳಿ ದಾವೀದನಗರದಲ್ಲಿ ಸಮಾಧಿಮಾಡಿದರು. ನಂತರ ಅವನ ಮಗನಾದ ಯೆಹೋರಾಮನು ರಾಜನಾದನು.
ಇಸ್ರೇಲಿನ ರಾಜನಾದ ಅಹಜ್ಯ
51 ಅಹಜ್ಯನು ಅಹಾಬನ ಮಗ. ಯೆಹೋಷಾಫಾಟನು ಯೆಹೂದದ ರಾಜನಾಗಿದ್ದ ಹದಿನೇಳನೆಯ ವರ್ಷದಲ್ಲಿ ಅವನು ಇಸ್ರೇಲಿನ ರಾಜನಾದನು. ಅಹಜ್ಯನು ಸಮಾರ್ಯದಲ್ಲಿ ಎರಡು ವರ್ಷ ರಾಜ್ಯವಾಳಿದನು. 52 ಅಹಜ್ಯನು ಯೆಹೋವನ ವಿರುದ್ಧ ಪಾಪವನ್ನು ಮಾಡಿದನು. ಅವನು ತನ್ನ ತಂದೆಯಾದ ಅಹಾಬ, ತಾಯಿಯಾದ ಈಜೆಬೆಲ ಮತ್ತು ನೆಬಾಟನ ಮಗನಾದ ಯಾರೊಬ್ಬಾಮ ಮಾಡಿದಂತಹ ಕಾರ್ಯಗಳನ್ನೇ ಮಾಡಿದನು. ಈ ಆಡಳಿತಗಾರರೆಲ್ಲ ಇಸ್ರೇಲಿನ ಜನರನ್ನು ಮತ್ತಷ್ಟು ಪಾಪಕ್ಕೆ ನಡೆಸಿದರು. 53 ಅಹಜ್ಯನು ತನ್ನ ತಂದೆಯಂತೆಯೇ ಸುಳ್ಳುದೇವರಾದ ಬಾಳನನ್ನು ಪೂಜಿಸಿ ಅವನ ಸೇವೆ ಮಾಡಿದನು; ಇಸ್ರೇಲಿನ ದೇವರಾದ ಯೆಹೋವನನ್ನು ರೇಗಿಸಿದನು. ಯೆಹೋವನು ಮೊದಲು ಅಹಜ್ಯನ ತಂದೆಯ ಮೇಲೆ ಕೋಪಗೊಂಡಿದ್ದಂತೆ, ಅಹಜ್ಯನ ಮೇಲೂ ಕೋಪಗೊಂಡನು.
ಪ್ರಭುವು ಪ್ರತ್ಯಕ್ಷನಾಗುವಾಗ ಸಿದ್ಧರಾಗಿರಿ
5 ಸಹೋದರ ಸಹೋದರಿಯರೇ, ಈಗ ನಾವು ಕಾಲ ಮತ್ತು ದಿನಗಳ ಬಗ್ಗೆ ನಿಮಗೆ ಬರೆಯುವ ಅವಶ್ಯವಿಲ್ಲ. 2 ಪ್ರಭುವು ಪ್ರತ್ಯಕ್ಷನಾಗುವ ದಿನವು ರಾತ್ರಿಕಾಲದಲ್ಲಿ ಕಳ್ಳನು ಬರುವಂತೆ ಇದ್ದಕ್ಕಿದ್ದಂತೆ ಬರುತ್ತದೆ ಎಂಬುದು ನಿಮಗೆಲ್ಲ ಚೆನ್ನಾಗಿ ತಿಳಿದಿದೆ. 3 “ನಮಗೆ ಶಾಂತಿಯಿದೆ. ನಾವು ಸುರಕ್ಷಿತರಾಗಿದ್ದೇವೆ” ಎಂದು ಜನರು ಹೇಳುವಾಗಲೇ ಅವರಿಗೆ ವಿನಾಶವು ಗರ್ಭಿಣಿಗೆ ಪ್ರಸವವೇದನೆ ಉಂಟಾಗುವಂತೆ ಬರುತ್ತದೆ. ಆ ಜನರು ತಪ್ಪಿಸಿಕೊಳ್ಳಲಾಗುವುದಿಲ್ಲ.
4 ಆದರೆ ಸಹೋದರ ಸಹೋದರಿಯರೇ, ನೀವು ಕತ್ತಲಿನಲ್ಲಿ (ಪಾಪದಲ್ಲಿ) ವಾಸಿಸುತ್ತಿಲ್ಲ. ಆ ದಿನವು ನಿಮಗೆ ಕಳ್ಳನಂತೆ ಇದ್ದಕ್ಕಿದ್ದಂತೆ ಬರುವುದಿಲ್ಲ. 5 ನೀವೆಲ್ಲರೂ ಬೆಳಕಿಗೆ ಸೇರಿದವರು ಮತ್ತು ಹಗಲಿಗೆ ಸೇರಿದವರು. ನಾವು ರಾತ್ರಿಗಾಗಲಿ ಅಥವಾ ಕತ್ತಲೆಗಾಗಲಿ ಸೇರಿದವರಲ್ಲ. 6 ಆದುದರಿಂದ ನಾವು ಇತರ ಜನರಂತಿರಬಾರದು. ನಾವು ನಿದ್ರೆ ಮಾಡುವುದೇ ಬೇಡ. ನಾವು ಎಚ್ಚರದಿಂದ ಇದ್ದು, ನಮ್ಮನ್ನು ಹತೋಟಿಯಲ್ಲಿ ಇಟ್ಟುಕೊಂಡಿರಬೇಕು. 7 ನಿದ್ದೆ ಮಾಡುವ ಜನರು ರಾತ್ರಿಯಲ್ಲಿ ನಿದ್ರಿಸುತ್ತಾರೆ. ಕುಡಿದು ಅಮಲೇರುವವರು ರಾತ್ರಿಯಲ್ಲಿ ಕುಡಿದು ಅಮಲೇರುತ್ತಾರೆ. 8 ಆದರೆ ನಾವು ಹಗಲಿಗೆ ಸೇರಿದವರಾದ್ದರಿಂದ ನಮ್ಮನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕು. ನಾವು ನಮ್ಮನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಪ್ರೀತಿಯನ್ನೂ ನಂಬಿಕೆಯನ್ನೂ ಧರಿಸಿಕೊಳ್ಳಬೇಕು. ರಕ್ಷಣೆಯ ನಿರೀಕ್ಷೆಯು ನಮಗೆ ಶಿರಸ್ತ್ರಾಣವಾಗಿರಬೇಕು.
9 ದೇವರು ನಮ್ಮನ್ನು ಆರಿಸಿಕೊಂಡದ್ದು ತನ್ನ ಕೋಪಕ್ಕೆ ಗುರಿಯಾಗಲಿ ಎಂದಲ್ಲ. ಪ್ರಭುವಾದ ಯೇಸು ಕ್ರಿಸ್ತನ ಮೂಲಕ ನಮಗೆ ರಕ್ಷಣೆಯಾಗಲೆಂದೇ ದೇವರು ನಮ್ಮನ್ನು ಆರಿಸಿಕೊಂಡನು. 10 ನಾವು ತನ್ನೊಂದಿಗೆ ಜೀವಿಸಲೆಂದು ಯೇಸು ನಮಗಾಗಿ ಸತ್ತನು. ಯೇಸು ಪ್ರತ್ಯಕ್ಷನಾದಾಗ, ನಾವು ಜೀವಿಸುತ್ತಿರುತ್ತೇವೋ ಇಲ್ಲವೆ ಸತ್ತಿರುತ್ತೇವೋ ಎಂಬುದು ಮುಖ್ಯವಲ್ಲ. 11 ಆದ್ದರಿಂದ ಒಬ್ಬರನ್ನೊಬ್ಬರು ಸಂತೈಸಿ ಬಲಪಡಿಸಿರಿ. ಈಗ ನೀವು ಮಾಡುತ್ತಿರುವುದು ಅದನ್ನೇ.
ಕೊನೆಯ ಮಾತುಗಳು ಮತ್ತು ವಂದನೆಗಳು
12 ಸಹೋದರ ಸಹೋದರಿಯರೇ, ಈಗ ನಿಮ್ಮಲ್ಲಿ ಪ್ರಯಾಸದಿಂದ ಕೆಲಸ ಮಾಡುತ್ತಾ ನಿಮ್ಮನ್ನು ಪ್ರಭುವಿನ ಮಾರ್ಗದಲ್ಲಿ ನಡೆಸುವವರನ್ನು ಮತ್ತು ಉಪದೇಶಿಸುವವರನ್ನು ಗೌರವಿಸಬೇಕೆಂದು ನಿಮ್ಮನ್ನು ಕೇಳಿಕೊಳ್ಳುತ್ತೇವೆ. 13 ಅವರು ನಿಮ್ಮಲ್ಲಿ ಮಾಡುವ ಸೇವೆಗಾಗಿ ಅವರನ್ನು ವಿಶೇಷವಾದ ಪ್ರೀತಿಯಿಂದ ಗೌರವಿಸಿರಿ.
ನೀವೆಲ್ಲರೂ ಸಮಾಧಾನದಿಂದ ಜೀವಿಸಿರಿ. 14 ಸಹೋದರ ಸಹೋದರಿಯರೇ, ಕೆಲಸ ಮಾಡದೆ ಇರುವ ಜನರಿಗೆ ಎಚ್ಚರಿಕೆ ನೀಡಬೇಕೆಂದು ನಾವು ನಿಮ್ಮನ್ನು ಕೇಳಿಕೊಳ್ಳುತ್ತೇವೆ. ಹೆದರಿಕೊಂಡಿರುವವರನ್ನು ಪ್ರೋತ್ಸಾಹಿಸಿರಿ; ಬಲಹೀನರಿಗೆ ಸಹಾಯ ಮಾಡಿ; ಎಲ್ಲರ ಜೊತೆಯಲ್ಲಿ ತಾಳ್ಮೆಯಿಂದಿರಿ; 15 ಯಾರೂ ಅಪಕಾರಕ್ಕೆ ಅಪಕಾರ ಮಾಡದಂತೆ ನೋಡಿಕೊಳ್ಳಿರಿ; ಒಬ್ಬರಿಗೊಬ್ಬರಿಗೆ ಮತ್ತು ಎಲ್ಲರಿಗೆ ಯಾವಾಗಲೂ ಒಳ್ಳೆಯದನ್ನು ಮಾಡಲು ಪ್ರಯತ್ನಿಸಿರಿ.
16 ಯಾವಾಗಲೂ ಸಂತೋಷದಿಂದಿರಿ. 17 ಎಡೆಬಿಡದೆ ಪ್ರಾರ್ಥಿಸಿರಿ. 18 ದೇವರಿಗೆ ಎಲ್ಲಾ ಕಾಲದಲ್ಲಿಯೂ ಕೃತಜ್ಞತೆಗಳನ್ನು ಸಲ್ಲಿಸಿರಿ. ಇದುವೇ ನಿಮ್ಮ ವಿಷಯವಾಗಿ ಯೇಸು ಕ್ರಿಸ್ತನಲ್ಲಿ ತೋರಿಬಂದ ದೇವರ ಚಿತ್ತ.
19 ಪವಿತ್ರಾತ್ಮನ ಕಾರ್ಯವನ್ನು ನಂದಿಸಬೇಡಿ. 20 ಪ್ರವಾದನೆಯನ್ನು ಹೀನೈಸಬೇಡಿ. 21 ಎಲ್ಲವನ್ನೂ ಪರಿಶೋಧಿಸಿ, ಒಳ್ಳೆಯದನ್ನು ಭದ್ರವಾಗಿ ಹಿಡಿದುಕೊಳ್ಳಿರಿ. 22 ಎಲ್ಲಾ ವಿಧವಾದ ಕೆಟ್ಟತನದಿಂದ ದೂರವಾಗಿರಿ.
23 ಶಾಂತಿದಾಯಕನಾದ ದೇವರು ತಾನೇ ನಿಮ್ಮನ್ನು ಸಂಪೂರ್ಣವಾಗಿ ಪರಿಶುದ್ಧಗೊಳಿಸಲೆಂದು ಪ್ರಾರ್ಥಿಸುತ್ತೇವೆ. ಪ್ರಭುವಾದ ಯೇಸು ಕ್ರಿಸ್ತನು ಪ್ರತ್ಯಕ್ಷನಾದಾಗ ನಿಮ್ಮ ಆತ್ಮ, ಶರೀರ, ಪ್ರಾಣಗಳು ದೋಷರಹಿತವಾಗಿರಲೆಂದು ಪ್ರಾರ್ಥಿಸುತ್ತೇವೆ. 24 ನಿಮ್ಮನ್ನು ಕರೆಯುವಾತನೇ ಅದನ್ನು ನಿಮಗಾಗಿ ಮಾಡುತ್ತಾನೆ. ಆತನು ನಂಬಿಗಸ್ತನು.
25 ಸಹೋದರ ಸಹೋದರಿಯರೇ, ದಯಮಾಡಿ ನಮಗಾಗಿ ಪ್ರಾರ್ಥಿಸಿರಿ. 26 ಸಹೋದರ ಸಹೋದರಿಯರನ್ನು ಸಂಧಿಸಿದಾಗ ಪವಿತ್ರವಾದ ಮುದ್ದಿಟ್ಟು ವಂದಿಸಿರಿ. 27 ಈ ಪತ್ರವನ್ನು ಸಹೋದರ ಸಹೋದರಿಯರಿಗೆಲ್ಲಾ ಓದಿ ತಿಳಿಸಬೇಕೆಂದು ನಾನು ನಿಮಗೆ ಪ್ರಭುವಿನ ಅಧಿಕಾರದಿಂದ ಹೇಳುತ್ತಿದ್ದೇನೆ. 28 ಪ್ರಭು ಯೇಸು ಕ್ರಿಸ್ತನ ಕೃಪೆಯು ನಿಮ್ಮೊಡನೆ ಇರಲಿ.
ನೆಬೂಕದ್ನೆಚ್ಚರನಿಗೆ ಮರದ ಕನಸು
4 ಲೋಕದಲ್ಲೆಲ್ಲ ವಾಸಿಸುವ ಸಕಲ ಜನಾಂಗ, ಕುಲ, ಭಾಷೆಗಳ ಜನರಿಗೆ ಅರಸನಾದ ನೆಬೂಕದ್ನೆಚ್ಚರನು ಈ ಪತ್ರವನ್ನು ಕಳುಹಿಸಿದನು.
ಶುಭಾಶಯಗಳು,
2 ಮಹೋನ್ನತನಾದ ದೇವರು ನನಗೋಸ್ಕರ ಮಾಡಿದ ಸೂಚಕಕಾರ್ಯಗಳನ್ನು ಮತ್ತು ಅದ್ಭುತಕಾರ್ಯಗಳನ್ನು ನಿಮಗೆ ತಿಳಿಸಲು ನನಗೆ ಬಹಳ ಸಂತೋಷವಾಗುತ್ತದೆ.
3 ದೇವರು ಅಚ್ಚರಿಗೊಳಿಸುವ ಅದ್ಭುತಕಾರ್ಯಗಳನ್ನು ಮಾಡಿದ್ದಾನೆ.
ದೇವರು ಅದ್ಭುತಕಾರ್ಯಗಳನ್ನು ಮಾಡಿದ್ದಾನೆ.
ದೇವರ ಸಾಮ್ರಾಜ್ಯವು ಶಾಶ್ವತವಾದದ್ದು.
ದೇವರ ಆಳ್ವಿಕೆಯು ಎಲ್ಲಾ ತಲೆಮಾರುಗಳಲ್ಲಿಯೂ ಮುಂದುವರೆಯುವುದು.
4 ನೆಬೂಕದ್ನೆಚ್ಚರನಾದ ನಾನು ಅರಮನೆಯಲ್ಲಿದ್ದೆ; ಸುಖಸಂತೋಷದಿಂದ ಇದ್ದೆ. 5 ಆಗ ನನಗೊಂದು ಕನಸು ಬಿತ್ತು. ಅದು ನನ್ನಲ್ಲಿ ಭಯವನ್ನುಂಟುಮಾಡಿತು. ನಾನು ನನ್ನ ಹಾಸಿಗೆಯ ಮೇಲೆ ಮಲಗಿದ್ದೆ. ಅನೇಕ ಚಿತ್ರಗಳನ್ನು ಮತ್ತು ದೃಶ್ಯಗಳನ್ನು ಕಂಡೆ. ಅವುಗಳು ನನ್ನಲ್ಲಿ ಹೆಚ್ಚಿನ ಭಯವನ್ನುಂಟುಮಾಡಿದವು. 6 ಅದಕ್ಕಾಗಿ ಬಾಬಿಲೋನಿನ ಎಲ್ಲಾ ವಿದ್ವಾಂಸರನ್ನು ಕರೆತರಬೇಕೆಂದು ಆಜ್ಞೆಯನ್ನು ಕೊಟ್ಟೆ. ಅವರು ನನ್ನ ಕನಸಿನ ಅರ್ಥವನ್ನು ತಿಳಿಸಲಿ ಎಂಬುದೇ ನನ್ನ ಉದ್ದೇಶವಾಗಿತ್ತು. 7 ಮಂತ್ರವಾದಿಗಳು, ಜೋಯಿಸರು ಮತ್ತು ವಿದ್ವಾಂಸರು ಬಂದ ಮೇಲೆ ನಾನು ಅವರಿಗೆ ನನ್ನ ಕನಸಿನ ಬಗ್ಗೆ ಹೇಳಿದೆ. ಆದರೆ ಅವರಿಗೆ ಅರ್ಥವನ್ನು ತಿಳಿಸಲಾಗಲಿಲ್ಲ. 8 ಕೊನೆಗೆ ದಾನಿಯೇಲನು ಬಂದನು. (ನಾನು ದಾನಿಯೇಲನಿಗೆ ನನ್ನ ದೇವರ ಸ್ಮರಣಾರ್ಥವಾಗಿ ಬೇಲ್ತೆಶಚ್ಚರನೆಂಬ ಹೆಸರನ್ನು ಇಟ್ಟಿದ್ದೆ. ಪರಿಶುದ್ಧ ದೇವರುಗಳ ಆತ್ಮವು ಅವನಲ್ಲಿದೆ.) ನಾನು ದಾನಿಯೇಲನಿಗೆ ನನ್ನ ಕನಸಿನ ಬಗ್ಗೆ ಹೇಳಿದೆ. 9 ನಾನು, “ಬೇಲ್ತೆಶಚ್ಚರನೇ, ಎಲ್ಲಾ ಮಂತ್ರವಾದಿಗಳಿಗಿಂತಲೂ ನೀನು ಬಹಳ ಶ್ರೇಷ್ಠನು. ಪರಿಶುದ್ಧ ದೇವರುಗಳ ಆತ್ಮವು ನಿನ್ನಲ್ಲಿ ನೆಲೆಸಿದೆ ಎಂದು ನನಗೆ ಗೊತ್ತಿದೆ. ನಿನಗೆ ತಿಳಿದುಕೊಳ್ಳಲು ಕಷ್ಟವಾದ ಯಾವ ರಹಸ್ಯವೂ ಇಲ್ಲವೆಂದು ನಾನು ಬಲ್ಲೆನು. ನಾನು ಕನಸಿನಲ್ಲಿ ಕಂಡದ್ದು ಇಂತಿದೆ. ಅದರ ಅರ್ಥವನ್ನು ನನಗೆ ಹೇಳು. 10 ನಾನು ನನ್ನ ಹಾಸಿಗೆಯಲ್ಲಿ ಮಲಗಿಕೊಂಡಾಗ ಕಂಡ ದೃಶ್ಯಗಳು ಇವು: ನನ್ನ ಎದುರಿಗೆ ಭೂಮಿಯ ಮಧ್ಯದಲ್ಲಿ ಬಹು ಎತ್ತರವಾದ ಒಂದು ಮರವು ಇದ್ದುದನ್ನು ನಾನು ಕಂಡೆ. 11 ಆ ಮರವು ಬಹಳ ದೊಡ್ಡದಾಗಿ ಮತ್ತು ಬಲಯುತವಾಗಿ ಬೆಳೆಯಿತು. ಆ ಮರದ ತುದಿಯು ಆಕಾಶಕ್ಕೆ ಮುಟ್ಟಿತ್ತು. ಅದನ್ನು ಭೂಲೋಕದ ಯಾವ ಸ್ಥಳದಿಂದಲಾದರೂ ನೋಡಬಹುದಾಗಿತ್ತು. 12 ಆ ಮರದ ಎಲೆಗಳು ಸುಂದರವಾಗಿದ್ದವು. ಅದು ತುಂಬ ಒಳ್ಳೆಯ ಹಣ್ಣುಗಳನ್ನು ಫಲಿಸಿತ್ತು. ಆ ಮರದಲ್ಲಿ ಪ್ರತಿಯೊಬ್ಬರಿಗೂ ಸಾಕಾಗುವಷ್ಟು ಆಹಾರವಿತ್ತು. ಕಾಡುಪ್ರಾಣಿಗಳೂ ಆ ಮರದ ಕೆಳಗೆ ಆಶ್ರಯವನ್ನು ಪಡೆದಿದ್ದವು. ಅದರ ಕೊಂಬೆಗಳಲ್ಲಿ ಪಕ್ಷಿಗಳು ವಾಸಮಾಡಿಕೊಂಡಿದ್ದವು. ಪ್ರತಿಯೊಂದು ಪ್ರಾಣಿಗೂ ಆ ಮರದಿಂದ ಆಹಾರ ಸಿಕ್ಕುತ್ತಿತ್ತು.
13 “ನಾನು ನನ್ನ ಹಾಸಿಗೆಯಲ್ಲಿ ಮಲಗಿಕೊಂಡು ನನ್ನ ದರ್ಶನದಲ್ಲಿ ಅದೆಲ್ಲವನ್ನು ನೋಡುತ್ತಿದ್ದೆ. ಆಗ ಪವಿತ್ರ ದೇವದೂತನೊಬ್ಬನು ಆಕಾಶದಿಂದ ಕೆಳಗಿಳಿದು ಬರುವುದನ್ನು ಕಂಡೆ. 14 ಅವನು ಮಹಾ ಧ್ವನಿಯಿಂದ, ‘ಮರವನ್ನು ಕಡಿದುಹಾಕಿರಿ; ಅದರ ಕೊಂಬೆಗಳನ್ನು ಕಡಿದುಹಾಕಿರಿ; ಅದರ ಎಲೆಗಳನ್ನು ಕಿತ್ತುಹಾಕಿರಿ; ಹಣ್ಣುಗಳನ್ನು ಸುತ್ತಲೂ ಉದುರಿಸಿಬಿಡಿ. ಮರದ ಕೆಳಗೆ ಇದ್ದ ಪ್ರಾಣಿಗಳು ಓಡಿಹೋಗುವವು. ಅದರ ಕೊಂಬೆಗಳಲ್ಲಿ ವಾಸವಾಗಿದ್ದ ಪಕ್ಷಿಗಳು ಹಾರಿಹೋಗುವವು. 15 ಆದರೆ ಅದರ ಬೇರುಗಳು ಮತ್ತು ಬುಡದ ಮೋಟು ಭೂಮಿಯಲ್ಲಿ ಉಳಿಯಲಿ. ಅದರ ಸುತ್ತಲೂ ಕಬ್ಬಿಣದ ಮತ್ತು ಕಂಚಿನ ಒಂದು ಪಟ್ಟಿಯನ್ನು ಹಾಕಿರಿ. ಆ ಮೋಟು ಮತ್ತು ಬೇರುಗಳು ಹೊಲದಲ್ಲಿ ಉಳಿಯಲಿ. ಅದರ ಸುತ್ತ ಹುಲ್ಲು ಬೆಳೆದಿರಲಿ. ಅದು ಅಡವಿಯಲ್ಲಿ ಕಾಡುಪ್ರಾಣಿಗಳ ಮತ್ತು ಸಸಿಗಳ ಜೊತೆಯಲ್ಲಿ ಇರಲಿ; ಅದು ಇಬ್ಬನಿಯಿಂದ ನೆನೆಯಲಿ. 16 ಅದು ಮನುಷ್ಯನಂತೆ ವಿಚಾರ ಮಾಡುವುದನ್ನು ಬಿಟ್ಟು ಪ್ರಾಣಿಯಂತೆ ವಿಚಾರ ಮಾಡತೊಡಗಲಿ. ಅದು ಈ ಸ್ಥಿತಿಯಲ್ಲಿ ಏಳು ವರ್ಷವಿರಲಿ’ ಎಂದು ಹೇಳಿದನು.
17 “ಈ ಶಿಕ್ಷೆಯನ್ನು ದೇವದೂತನು ಸಾರಿದನು. ಮಾನವ ಸಾಮ್ರಾಜ್ಯಗಳ ಮೇಲೆ ಮಹೋನ್ನತನಾದ ದೇವರು ಆಳುವನು. ಅವನು ಆ ಸಾಮ್ರಾಜ್ಯಗಳನ್ನು ತನಗೆ ಬೇಕಾದವರಿಗೆ ಒಪ್ಪಿಸುವನು, ಕನಿಷ್ಠರನ್ನು ನೇಮಿಸುವನು ಎಂಬುದು ಲೋಕದ ಜನರಿಗೆಲ್ಲ ತಿಳಿದುಬರಲಿ ಎಂದೇ ಅವನು ಸಾರಿದನು.
18 “ಅರಸನಾದ ನೆಬೂಕದ್ನೆಚ್ಚರನೆಂಬ ನಾನು ಈ ಕನಸನ್ನು ಕಂಡೆನು. ಈಗ ನೀನು, ಬೇಲ್ತೆಶಚ್ಚರನೇ (ದಾನಿಯೇಲನೇ), ಇದರ ಅರ್ಥವನ್ನು ನನಗೆ ತಿಳಿಸು. ನನ್ನ ರಾಜ್ಯದಲ್ಲಿರುವ ವಿದ್ವಾಂಸರಲ್ಲಿ ಯಾರೂ ಇದರ ಅರ್ಥವನ್ನು ನನಗೆ ಹೇಳಲಾರರು. ಆದರೆ ನೀನು ಈ ಕನಸಿನ ಅರ್ಥವನ್ನು ತಿಳಿಸಬಲ್ಲೆ. ಏಕೆಂದರೆ ಪರಿಶುದ್ಧ ದೇವರುಗಳ ಆತ್ಮವು ನಿನ್ನಲ್ಲಿ ನೆಲೆಸಿರುವದು ನನಗೆ ತಿಳಿದದೆ” ಎಂದೆನು.
19 ಆಗ ದಾನಿಯೇಲನು (ಬೇಲ್ತೆಶಚ್ಚರನು) ಸುಮಾರು ಒಂದು ಗಂಟೆಯವರೆಗೆ ಮೌನವಾಗಿದ್ದನು. ಅವನ ಬುದ್ಧಿಗೆ ತೋರಿದ ವಿಷಯಗಳು ಅವನನ್ನು ಗಾಬರಿಪಡಿಸಿದವು. ಆಗ ರಾಜನು, “ಬೇಲ್ತೆಶಚ್ಚರನೇ, ಕನಸು ಅಥವಾ ಕನಸಿನ ಅರ್ಥವು ನಿನ್ನನ್ನು ಭಯಗೊಳಿಸದಿರಲಿ” ಎಂದು ಧೈರ್ಯ ಹೇಳಿದನು.
ಆಗ ಬೇಲ್ತೆಶಚ್ಚರನು ಅರಸನಿಗೆ, “ನನ್ನ ಒಡೆಯನೇ, ಈ ಕನಸು ನಿನ್ನ ವಿರೋಧಿಗಳಿಗೆ ಫಲಿಸಲಿ. ಇದರ ಅರ್ಥವು ನಿನ್ನ ವಿರೋಧಿಗಳ ಅನುಭವಕ್ಕೆ ಬರಲಿ ಎಂದು ನಾನು ಹಾರೈಸುತ್ತೇನೆ. 20-21 ನೀನು ನಿನ್ನ ಕನಸಿನಲ್ಲಿ ಒಂದು ಮರವನ್ನು ಕಂಡೆ. ಆ ಮರವು ದೊಡ್ಡದಾಗಿ ಮತ್ತು ಬಲಯುತವಾಗಿ ಬೆಳೆಯಿತು. ಅದರ ತುದಿ ಆಕಾಶವನ್ನು ಮುಟ್ಟಿತ್ತು. ಅದು ಭೂಲೋಕದ ಎಲ್ಲೆಡೆಯಿಂದಲೂ ಕಾಣಿಸುತ್ತಿತ್ತು. ಅದರ ಎಲೆಗಳು ಸುಂದರವಾಗಿದ್ದವು: ಅದು ಸಾಕಷ್ಟು ಹಣ್ಣುಗಳನ್ನು ಫಲಿಸಿತ್ತು. ಆ ಹಣ್ಣುಗಳು ಎಲ್ಲರಿಗೂ ಸಾಕಾಗುವಷ್ಟು ಆಹಾರವನ್ನು ಕೊಟ್ಟವು. ಅದು ಕಾಡುಪ್ರಾಣಿಗಳಿಗೆ ವಾಸಸ್ಥಾನವಾಗಿತ್ತು; ಅದರ ಕೊಂಬೆಗಳು ಪಕ್ಷಿಗಳಿಗೆ ಗೂಡುಕಟ್ಟುವ ಸ್ಥಳಗಳಾಗಿದ್ದವು. ಆ ಮರವನ್ನು ನೀನು ನೋಡಿದೆ. 22 ಅರಸನೇ, ನೀನೇ ಆ ಮರ. ನೀನು ಪ್ರಖ್ಯಾತನೂ ಮತ್ತು ಪ್ರಬಲನೂ ಆಗಿರುವೆ. ನೀನು ಗಗನಚುಂಬಿಯಾದ ಆ ಮರದಂತೆ ಬೆಳೆದಿರುವೆ. ನಿನ್ನ ಪ್ರಾಬಲ್ಯವು ಈ ಭೂಮಿಯಲ್ಲಿ ದೂರದೂರದವರೆಗೆ ಹಬ್ಬಿದೆ.
23 “ಅರಸನೇ, ನೀನು ಆಕಾಶದಿಂದ ಇಳಿದುಬರುತ್ತಿದ್ದ ಒಬ್ಬ ಪರಿಶುದ್ಧ ದೇವದೂತನನ್ನು ಕಂಡೆ. ಅವನು, ‘ಮರವನ್ನು ಕಡಿದು ನಾಶಮಾಡಿರಿ. ಅದರ ಬುಡದ ಮೋಟಿನ ಸುತ್ತಲೂ ಕಬ್ಬಿಣದ ಮತ್ತು ಕಂಚಿನ ಒಂದು ಪಟ್ಟಿಯನ್ನು ಹಾಕಿರಿ. ಆ ಬುಡದ ಮೋಟನ್ನು ಮತ್ತು ಬೇರುಗಳನ್ನು ಭೂಮಿಯಲ್ಲಿ ಬಿಟ್ಟುಬಿಡಿ. ಅದರ ಸುತ್ತಲೂ ಕಾಡಿನ ಹುಲ್ಲು ಬೆಳೆಯಲಿ. ಅದು ಇಬ್ಬನಿಯಿಂದ ತೋಯ್ದು ಹೋಗಲಿ. ಅದು ಕಾಡುಪ್ರಾಣಿಯಂತೆ ಇರುವುದು. ಅದು ಏಳು ವರ್ಷ ಕಳೆಯುವವರೆಗೆ ಹಾಗೆಯೇ ಇರುವುದು’ ಎಂದು ಹೇಳಿದನು.
24 “ಕನಸಿನ ಅರ್ಥವು ಹೀಗಿದೆ: ಅರಸನೇ, ಮಹೋನ್ನತನಾದ ದೇವರು ನನ್ನ ಒಡೆಯನಾದ ಅರಸನಿಗೆ ಹೀಗಾಗಬೇಕೆಂದು ಆಜ್ಞಾಪಿಸಿದ್ದಾನೆ. 25 ರಾಜನಾದ ನೆಬೂಕದ್ನೆಚ್ಚರನೇ, ನಿನ್ನನ್ನು ಬಲವಂತದಿಂದ ಜನರಿಂದ ದೂರಮಾಡುವರು. ನೀನು ಕಾಡುಪ್ರಾಣಿಗಳೊಂದಿಗೆ ವಾಸಮಾಡುವೆ; ಹಸುಗಳಂತೆ ಹುಲ್ಲು ತಿನ್ನುವೆ; ಇಬ್ಬನಿಯಿಂದ ತೋಯಿಸಿಕೊಳ್ಳುವೆ. ಏಳು ವರ್ಷಗಳು ಕಳೆಯುವವು. ಆಗ ನೀನು ಮಹೋನ್ನತನಾದ ದೇವರು ಮಾನವರ ಸಾಮ್ರಾಜ್ಯದ ಮೇಲೆ ಆಳ್ವಿಕೆ ಮಾಡುತ್ತಾನೆ ಮತ್ತು ತನಗೆ ಬೇಕಾದವರಿಗೆ ರಾಜ್ಯವನ್ನು ಕೊಡುತ್ತಾನೆ ಎಂಬ ಪಾಠವನ್ನು ಕಲಿಯುವೆ.
26 “ಮರದ ಬುಡದ ಮೋಟನ್ನು ಮತ್ತು ಅದರ ಬೇರುಗಳನ್ನು ಭೂಮಿಯಲ್ಲಿಯೇ ಬಿಟ್ಟುಬಿಡಿ ಎಂಬುದರ ಅರ್ಥವೇನೆಂದರೆ, ನಿನ್ನ ರಾಜ್ಯವನ್ನು ನಿನಗೆ ಹಿಂತಿರುಗಿಸಲಾಗುವುದು. ಮಹೋನ್ನತನಾದ ದೇವರು ನಿನ್ನ ಸಾಮ್ರಾಜ್ಯದ ಮೇಲೆ ಆಳ್ವಿಕೆ ಮಾಡುತ್ತಾನೆ ಎಂಬುದನ್ನು ನೀನು ತಿಳಿದುಕೊಂಡ ಬಳಿಕ ಹೀಗಾಗುವುದು. 27 ಆದ್ದರಿಂದ ರಾಜನೇ, ನನ್ನ ಬುದ್ಧಿವಾದವನ್ನು ದಯವಿಟ್ಟು ಒಪ್ಪಿಕೊ. ನೀನು ಪಾಪಕೃತ್ಯಗಳನ್ನು ಮಾಡಬೇಡ. ನೀತಿಯನ್ನು ಅನುಸರಿಸು; ಕೆಟ್ಟದ್ದನ್ನು ಮಾಡಬೇಡ. ಬಡಜನರಿಗೆ ಕರುಣೆಯನ್ನು ತೋರು. ಇದರಿಂದ ನಿನ್ನ ನೆಮ್ಮದಿಯ ಕಾಲವು ಹೆಚ್ಚಾಗುವುದು. ಇದೇ ನನ್ನ ಬುದ್ಧಿವಾದ” ಎಂದು ಅರಿಕೆ ಮಾಡಿದನು.
28 ಇದೆಲ್ಲವೂ ಅರಸನಾದ ನೆಬೂಕದ್ನೆಚ್ಚರನ ಅನುಭವಕ್ಕೆ ಬಂತು. 29-30 ಕನಸು ಕಂಡ ಹನ್ನೆರಡು ತಿಂಗಳುಗಳಾದ ಮೇಲೆ ಅರಸನಾದ ನೆಬೂಕದ್ನೆಚ್ಚರನು ಬಾಬಿಲೋನಿನಲ್ಲಿದ್ದ ಅರಮನೆಯ ಮಾಳಿಗೆಯ ಮೇಲೆ ತಿರುಗಾಡುತ್ತಿದ್ದನು. ಮಾಳಿಗೆಯ ಮೇಲಿದ್ದಾಗ ಅರಸನು, “ಈ ಬಾಬಿಲೋನ್ ನಗರವನ್ನು ನೋಡಿ, ನಾನು ಈ ಮಹಾನಗರವನ್ನು ಕಟ್ಟಿದೆ. ಇದು ನನ್ನ ಅರಮನೆ. ನಾನು ನನ್ನ ಸಾಮರ್ಥ್ಯದಿಂದ ಈ ಅರಮನೆಯನ್ನು ಕಟ್ಟಿದೆ. ನಾನು ಎಂಥಾ ದೊಡ್ಡವನು ಎಂದು ಲೋಕಕ್ಕೆ ತೋರಿಸಲು ನಾನು ಈ ಅರಮನೆಯನ್ನು ಕಟ್ಟಿದೆ” ಎಂದು ತನ್ನಷ್ಟಕ್ಕೆ ತಾನೇ ಹೇಳಿಕೊಳ್ಳುತ್ತಿದ್ದನು.
31 ಆ ಶಬ್ದಗಳು ಇನ್ನೂ ಬಾಯಿಯಲ್ಲಿಯೇ ಇದ್ದಾಗ, ಆಕಾಶವಾಣಿಯಾಯಿತು. ಆ ಧ್ವನಿಯು, “ಅರಸನಾದ ನೆಬೂಕದ್ನೆಚ್ಚರನೇ, ನಿನ್ನಿಂದ ನಿನ್ನ ರಾಜಪದವಿಯನ್ನು ಕಿತ್ತುಕೊಳ್ಳಲಾಗಿದೆ. 32 ಜನರನ್ನು ಬಿಟ್ಟುಹೋಗುವಂತೆ ನಿನ್ನನ್ನು ಒತ್ತಾಯಿಸಲಾಗುವುದು. ನೀನು ಕಾಡುಪ್ರಾಣಿಗಳೊಂದಿಗೆ ವಾಸಿಸುವೆ. ಹಸುಗಳಂತೆ ಹುಲ್ಲು ತಿನ್ನುವೆ; ನೀನು ಪಾಠ ಕಲಿಯುವದಕ್ಕೆ ಏಳು ವರ್ಷ ಬೇಕಾಗುವುದು. ಆಗ ಮಹೋನ್ನತನಾದ ದೇವರು ಮಾನವನ ಸಾಮ್ರಾಜ್ಯಗಳ ಮೇಲೆ ಆಳ್ವಿಕೆ ಮಾಡುತ್ತಾನೆ ಮತ್ತು ತನಗೆ ಬೇಕಾದವರಿಗೆ ಸಾಮ್ರಾಜ್ಯವನ್ನು ಕೊಡುತ್ತಾನೆ ಎಂಬ ಸತ್ಯವನ್ನು ನೀನು ತಿಳಿದುಕೊಳ್ಳುವೆ” ಎಂದು ನುಡಿಯಿತು.
33 ಆ ಮಾತುಗಳು ತಕ್ಷಣ ನೆರವೇರಿದವು. ನೆಬೂಕದ್ನೆಚ್ಚರನು ಜನರನ್ನು ಬಿಟ್ಟುಹೋಗಬೇಕಾಯಿತು. ಅವನು ಹಸುಗಳಂತೆ ಹುಲ್ಲು ತಿನ್ನತೊಡಗಿದನು. ಅವನು ಇಬ್ಬನಿಯಿಂದ ನೆನೆದನು. ಅವನ ಕೂದಲುಗಳು ಹದ್ದಿನ ಗರಿಗಳಂತೆ ಬೆಳೆದವು. ಅವನ ಉಗುರುಗಳು ಪಕ್ಷಿಗಳ ಉಗುರುಗಳಂತೆ ಬೆಳೆದವು.
34 ಆ ಕಾಲವು ಕಳೆದ ಮೇಲೆ ನೆಬೂಕದ್ನೆಚ್ಚರನಾದ ನಾನು ಆಕಾಶದ ಕಡೆಗೆ ನೋಡಿದೆ. ಆಗ ನಾನು ಸ್ವಸ್ಥ ಬುದ್ಧಿಯುಳ್ಳವನಾಗಿದ್ದೆ. ಬಳಿಕ ನಾನು ಮಹೋನ್ನತನಾದ ದೇವರನ್ನು ಸ್ತುತಿಸಿದೆ. ನಿತ್ಯನಾದ ಆ ದೇವರನ್ನು ಕೊಂಡಾಡಿದೆ. ಸ್ತೋತ್ರಮಾಡಿದೆ.
ದೇವರ ಆಳ್ವಿಕೆಯು ಶಾಶ್ವತವಾದದ್ದು!
ಆತನ ಸಾಮ್ರಾಜ್ಯವು ಎಲ್ಲಾ ತಲೆಮಾರುಗಳಲ್ಲಿಯೂ ಇರುವುದು.
35 ಭೂಮಿಯ ಜನರು ಬಹು ಮುಖ್ಯರಲ್ಲ.
ದೇವರು ಪರಲೋಕ ಸಮೂಹದವರಿಗೂ ಭೂಲೋಕದ ನಿವಾಸಿಗಳಿಗೂ ತನ್ನ ಚಿತ್ತಾನುಸಾರ ಮಾಡುತ್ತಾನೆ.
ಯಾರೂ ಆತನನ್ನು ತಡೆಯಲಾರರು!
ಯಾರೂ ಆತನನ್ನು ಪ್ರಶ್ನಿಸಲಾರರು!
36 ಆಗ ದೇವರು ನನಗೆ ಸರಿಯಾದ ಬುದ್ಧಿಯನ್ನು ಕೊಟ್ಟನು. ನನಗೆ ರಾಜನ ಗೌರವ, ಪ್ರಭಾವ, ವೈಭವಗಳು ಮತ್ತೆ ಲಭಿಸಿದವು. ನನ್ನ ಮಂತ್ರಿಗಳೂ ಅಧಿಪತಿಗಳೂ ನನ್ನನ್ನು ಸ್ವೀಕರಿಸಿದರು. ನಾನು ಮತ್ತೆ ಅರಸನಾದೆನು. ನಾನು ಮೊದಲಿಗಿಂತಲೂ ಅಧಿಕ ಶಕ್ತಿಶಾಲಿಯಾದ ಮತ್ತು ಪ್ರಭಾವಶಾಲಿಯಾದ ಅರಸನಾದೆನು. 37 ಅರಸ ನೆಬೂಕದ್ನೆಚ್ಚರನಾದ ನಾನು ಈಗ ಪರಲೋಕದ ರಾಜನನ್ನು ಘನಪಡಿಸುತ್ತೇನೆ, ಮಹಿಮೆಪಡಿಸುತ್ತೇನೆ. ಆತನು ಮಾಡುವದೆಲ್ಲ ಸರಿ. ಆತನು ಯಾವಾಗಲೂ ನ್ಯಾಯವಂತನಾಗಿದ್ದಾನೆ. ಆತನು ಗರ್ವಿಷ್ಠರನ್ನು ದೀನರನ್ನಾಗಿ ಮಾಡಬಲ್ಲನು.
ದಾವೀದನ ಕೀರ್ತನೆ.
108 ದೇವರೇ, ನನ್ನ ಹೃದಯವು ಸ್ಥಿರವಾಗಿದೆ;
ನಾನು ಹೃದಯಪೂರ್ವಕವಾಗಿ ವಾದ್ಯ ನುಡಿಸುತ್ತಾ ಹಾಡುವೆನು.
2 ಹಾರ್ಪ್‌ವಾದ್ಯಗಳೇ, ಲೈರ್‌ವಾದ್ಯಗಳೇ,
ನಾವು ಸೂರ್ಯನನ್ನು ಎಚ್ಚರಗೊಳಿಸೋಣ!
3 ಯೆಹೋವನೇ, ಜನಾಂಗಗಳಲ್ಲಿಯೂ
ವಿದೇಶಿಯರಲ್ಲಿಯೂ ನಿನ್ನನ್ನು ಕೊಂಡಾಡುವೆನು.
4 ಯಾಕೆಂದರೆ ನಿನ್ನ ಪ್ರೀತಿಯು ಆಕಾಶಕ್ಕಿಂತಲೂ ಉನ್ನತವಾಗಿದೆ;
ನಿನ್ನ ನಂಬಿಗಸ್ತಿಕೆಯು ಮೋಡಗಳಿಗಿಂತಲೂ ಎತ್ತರವಾಗಿದೆ.
5 ದೇವರೇ, ಪರಲೋಕದಲ್ಲಿ ನಿನ್ನ ಪ್ರಭಾವವು ಮೆರೆಯಲಿ.
ನಿನ್ನ ಮಹಿಮೆಯು ಭೂಮಂಡಲವನ್ನೆಲ್ಲಾ ಆವರಿಸಿಕೊಳ್ಳಲಿ.
6 ನಿನ್ನ ಸ್ನೇಹಿತರಾದ ನಮ್ಮ ಪ್ರಾರ್ಥನೆಗೆ ಕಿವಿಗೊಟ್ಟು ನಮ್ಮನ್ನು ರಕ್ಷಿಸು.
ನಿನ್ನ ಬಲಗೈಯಿಂದ ನಮ್ಮನ್ನು ಕಾಪಾಡು.
7 ದೇವರು ತನ್ನ ಆಲಯದೊಳಗಿಂದ ಹೀಗೆಂದನು:
“ನಾನು ಯುದ್ಧದಲ್ಲಿ ಗೆದ್ದು ಜಯಘೋಷ ಮಾಡುವೆನು;
ಶೆಕೆಮ್ ಪ್ರದೇಶವನ್ನೂ ಸುಕ್ಕೋತ್ ಬಯಲನ್ನೂ ನನ್ನ ಜನರಿಗೆ ಕೊಡುವೆನು.
8 ಗಿಲ್ಯಾದ್ ಪ್ರಾಂತವೂ ಮನಸ್ಸೆ ಪ್ರಾಂತವೂ ನನ್ನದಾಗಿರುತ್ತವೆ.
ಎಫ್ರಾಯೀಮ್ ನನ್ನ ಶಿರಸ್ತ್ರಾಣವಾಗಿರುತ್ತದೆ.
ಯೆಹೂದವು ನನ್ನ ರಾಜದಂಡವಾಗಿರುತ್ತದೆ.
9 ಮೋವಾಬ್ ನನ್ನ ಪಾದತೊಳೆಯುವ ಬೋಗುಣಿಯಂತಿರುತ್ತದೆ.
ಎದೋಮ್ ನನ್ನ ಪಾದರಕ್ಷೆಗಳನ್ನು ಹೊತ್ತುಕೊಂಡು ಹೋಗುವ ಗುಲಾಮನಾಗಿರುತ್ತದೆ.
ಫಿಲಿಷ್ಟಿಯರನ್ನು ಸೋಲಿಸಿದ ಮೇಲೆ ನಾನು ಜಯಘೋಷ ಮಾಡುವೆನು.”
10 ವೈರಿಗಳ ಆಶ್ರಯದುರ್ಗಕ್ಕೆ ನನ್ನನ್ನು ನಡೆಸುವವರು ಯಾರು?
ಎದೋಮನ್ನು ಸೋಲಿಸಲು ನನಗೆ ಸಹಾಯ ಮಾಡುವವರು ಯಾರು?
11 ದೇವರೇ, ನೀನು ನಮ್ಮನ್ನು ತ್ಯಜಿಸಿ,
ನಮ್ಮ ಸೈನ್ಯದೊಡನೆ ಹೋಗದಿರುವುದು ನಿಜವೇ?
12 ನಮ್ಮ ಶತ್ರುವನ್ನು ಸೋಲಿಸಲು ದಯವಿಟ್ಟು ನಮಗೆ ಸಹಾಯಮಾಡು.
ಜನರು ನಮಗೆ ಸಹಾಯಮಾಡಲಾರರು!
13 ದೇವರು ಮಾತ್ರ ನಮ್ಮನ್ನು ಬಲಪಡಿಸಬಲ್ಲನು.
ಆತನು ಮಾತ್ರ ನಮ್ಮ ಶತ್ರುಗಳನ್ನು ಸೋಲಿಸಬಲ್ಲನು.
ಸ್ತುತಿಗೀತೆ. ರಚನೆಗಾರ: ದಾವೀದ.
109 ನಾನು ಸ್ತುತಿಸುವ ದೇವರೇ,
ನನ್ನ ಪ್ರಾರ್ಥನೆಗೆ ಕಿವಿಗೊಡದಿರಬೇಡ.
2 ದುಷ್ಟರು ನನ್ನ ವಿಷಯವಾಗಿ ಸುಳ್ಳಾಡುತ್ತಿದ್ದಾರೆ.
ಅವರು ಅಸತ್ಯವಾದವುಗಳನ್ನು ಹೇಳುತ್ತಿದ್ದಾರೆ.
3 ಅವರು ನನ್ನನ್ನು ದ್ವೇಷಿಸುತ್ತಾರೆ;
ನಿಷ್ಕಾರಣವಾಗಿ ನನಗೆ ಎದುರಾಗಿದ್ದಾರೆ.
4 ನಾನು ಅವರನ್ನು ಪ್ರೀತಿಸಿದರೂ ಅವರು ನನ್ನನ್ನು ದ್ವೇಷಿಸುವರು.
ನಾನಾದರೋ ನಿನಗೆ ಪ್ರಾರ್ಥಿಸುತ್ತಿದ್ದೇನೆ.
5 ನಾನು ಉಪಕಾರವನ್ನು ಮಾಡಿದ್ದರೂ
ಅವರು ನನಗೆ ಅಪಕಾರವನ್ನು ಮಾಡುತ್ತಿದ್ದಾರೆ.
ನಾನು ಅವರನ್ನು ಪ್ರೀತಿಸಿದರೂ
ಅವರು ನನ್ನನ್ನು ದ್ವೇಷಿಸುವರು.
6 ನನ್ನ ವೈರಿಯನ್ನು ಅವನ ದುಷ್ಕೃತ್ಯಗಳಿಗೆ ತಕ್ಕಂತೆ ದಂಡಿಸು.
ಅವನ ಮೇಲೆ ತಪ್ಪು ಹೊರಿಸಲು ದೂಷಕನನ್ನು ಅವನ ಬಲಗಡೆಯಲ್ಲಿ ನಿಲ್ಲಿಸು.
7 ನ್ಯಾಯವಿಚಾರಣೆಯಲ್ಲಿ ನ್ಯಾಯಾಧೀಶನು ಅವನನ್ನು ಅಪರಾಧಿಯೆಂದು ನಿರ್ಣಯಿಸಲಿ.
ನನ್ನ ಶತ್ರುವಿನ ಪ್ರತಿವಾದವು ಅವನಿಗೆ ಮತ್ತಷ್ಟು ಕೇಡು ಮಾಡಲಿ.
8 ನನ್ನ ಶತ್ರುವು ಬೇಗನೆ ಸಾಯಲಿ.
ಅವನ ಉದ್ಯೋಗವು ಮತ್ತೊಬ್ಬನಿಗೆ ದೊರೆಯಲಿ.
9 ಅವನ ಮಕ್ಕಳನ್ನು ಅನಾಥರನ್ನಾಗಿಯೂ ಅವನ ಹೆಂಡತಿಯನ್ನು ವಿಧವೆಯನ್ನಾಗಿಯೂ ಮಾಡು.
10 ಅವನ ಮಕ್ಕಳು ತಮ್ಮ ಮನೆಯನ್ನು ಕಳೆದುಕೊಂಡು
ತಿರುಕರಂತೆ ಅಲೆಯುತ್ತಾ ಭಿಕ್ಷುಕರಾಗಲಿ.
11 ಅವನಿಗೆ ಸಾಲಕೊಟ್ಟವರು ಅವನ ಆಸ್ತಿಯನ್ನೆಲ್ಲಾ ಕಸಿದುಕೊಳ್ಳಲಿ.
ಅವನು ದುಡಿದು ಸಂಪಾದಿಸಿದ್ದೆಲ್ಲವನ್ನು ಪರರು ಸುಲಿದುಕೊಳ್ಳಲಿ.
12 ಅವನಿಗೆ ಯಾರೂ ಕೃಪೆತೋರದಿರಲಿ;
ಅವನ ಮಕ್ಕಳಿಗೂ ಯಾರೂ ಕರುಣೆತೋರದಿರಲಿ.
13 ಅವನನ್ನು ಸಂಪೂರ್ಣವಾಗಿ ನಾಶಮಾಡು.
ಮುಂದಿನ ತಲೆಮಾರಿನಲ್ಲಿಯೇ ಅವನ ಹೆಸರು ಇಲ್ಲವಾಗಲಿ.
14 ಯೆಹೋವನು ನನ್ನ ಶತ್ರುವಿನ ತಂದೆಯ ಪಾಪವನ್ನು ಮರೆಯದಿರಲಿ;
ಅವನ ತಾಯಿಯ ಪಾಪವು ಅಳಿದುಹೋಗದಿರಲಿ.
15 ಆ ಪಾಪಗಳನ್ನು ಯೆಹೋವನು ಯಾವಾಗಲೂ ಜ್ಞಾಪಕಮಾಡಿಕೊಳ್ಳಲಿ;
ಭೂಮಿಯ ಮೇಲೆ ಅವರ ನೆನಪೇ ಉಳಿಯದಂತೆ ಯೆಹೋವನು ಮಾಡಲಿ.
16 ಯಾಕೆಂದರೆ, ಆ ದುಷ್ಟನು ಯಾವ ಒಳ್ಳೆಯದನ್ನೂ ಮಾಡಲಿಲ್ಲ;
ಯಾರನ್ನೂ ಪ್ರೀತಿಸಲಿಲ್ಲ.
ಅವನು ಬಡಜನರಿಗೂ ಮತ್ತು ಅಸಹಾಯಕರಿಗೂ ಜೀವನವನ್ನು ಕಷ್ಟಕರವನ್ನಾಗಿ ಮಾಡಿದನು.
17 ಜನರನ್ನು ಶಪಿಸುವುದೇ ಅವನಿಗೆ ಇಷ್ಟವಾಗಿತ್ತು.
ಆದ್ದರಿಂದ ಆ ಶಾಪಗಳು ಅವನಿಗೇ ಸಂಭವಿಸಲಿ.
ಅವನು ಜನರನ್ನು ಆಶೀರ್ವದಿಸಲೇ ಇಲ್ಲ.
ಆದ್ದರಿಂದ ಅವನಿಗೆ ಒಳ್ಳೆಯದಾಗದಂತೆ ಮಾಡು.
18 ಅವನು ಉಡುಪುಗಳನ್ನು ಧರಿಸುವಂತೆ
ಶಪಿಸುವುದೇ ಅವನ ದಿನನಿತ್ಯ ಜೀವಿತದ ಕೆಲಸವಾಗಿತ್ತು.
19 ಆದ್ದರಿಂದ ಅವನು ಧರಿಸಿಕೊಳ್ಳುವ ನಿಲುವಂಗಿಯಂತೆ
ಶಾಪಗಳು ಅವನನ್ನು ಆವರಿಸಿಕೊಳ್ಳಲಿ;
ನಡುಪಟ್ಟಿಯಂತೆ ಯಾವಾಗಲೂ ಸುತ್ತಿಕೊಳ್ಳಲಿ.
20 ನನ್ನ ಶತ್ರುವಿಗೂ ನನ್ನನ್ನು ಕೊಲ್ಲಬೇಕೆಂದಿರುವವರಿಗೂ
ಯೆಹೋವನು ಅವುಗಳನ್ನು ಮಾಡಲಿ.
21 ಯೆಹೋವನೇ, ನೀನೇ ನನ್ನ ಒಡೆಯನು.
ಆದ್ದರಿಂದ ನಿನ್ನ ಹೆಸರಿನ ಘನತೆಗಾಗಿ ನನಗೆ ಸಹಾಯಮಾಡು.
ನಿನ್ನ ಶಾಶ್ವತವಾದ ಪ್ರೀತಿಯಿಂದ ನನ್ನನ್ನು ರಕ್ಷಿಸು.
22 ನಾನು ಕೇವಲ ಬಡವನೂ ಅಸಹಾಯಕನೂ ಆಗಿರುವೆ.
ನನ್ನ ಹೃದಯವು ನೊಂದು ದುಃಖಗೊಂಡಿದೆ.
23 ಸಂಜೆಯ ನೆರಳಿನಂತೆ ನನ್ನ ಜೀವಮಾನವು ಕೊನೆಗೊಳ್ಳುತ್ತಿದೆ;
ಗಾಳಿಯು ಬಡಿದುಕೊಂಡು ಹೋಗುವ ಮಿಡತೆಯಂತಾಗಿದ್ದೇನೆ.
24 ಹಸಿವೆಯಿಂದ ನನ್ನ ಮೊಣಕಾಲುಗಳು ಬಲಹೀನವಾಗಿವೆ.
ನನ್ನ ತೂಕ ಕಡಿಮೆಯಾಗುತ್ತಿದೆ; ನಾನು ತೆಳ್ಳಗಾಗುತ್ತಿದ್ದೇನೆ.
25 ಕೆಡುಕರು ನನ್ನನ್ನು ಗೇಲಿ ಮಾಡುವರು.
ಅವರು ನನ್ನನ್ನು ನೋಡಿ ತಲೆಯಾಡಿಸುವರು.
26 ನನ್ನ ದೇವರಾದ ಯೆಹೋವನೇ, ನನಗೆ ಸಹಾಯಮಾಡು!
ನಿನ್ನ ಶಾಶ್ವತವಾದ ಪ್ರೀತಿಯಿಂದ ನನ್ನನ್ನು ರಕ್ಷಿಸು.
27 ಯೆಹೋವನೇ, ಆಗ ಅವರು ಅದು ನಿನ್ನ ಕೈಕೆಲಸವೆಂದೂ
ಅದನ್ನು ಮಾಡಿದ್ದು ನೀನೇ ಎಂದೂ ತಿಳಿದುಕೊಳ್ಳುವರು.
28 ಆ ದುಷ್ಟರು ನನ್ನನ್ನು ಶಪಿಸುತ್ತಾರೆ; ಯೆಹೋವನೇ, ನೀನಾದರೋ ನನ್ನನ್ನು ಆಶೀರ್ವದಿಸುವೆ.
ನನಗೆ ವಿರೋಧವಾಗಿ ಎದ್ದಿರುವ ಅವರನ್ನು ಸೋಲಿಸು.
ಆಗ, ನಿನ್ನ ಸೇವಕನಾದ ನಾನು ಸಂತೋಷವಾಗಿರುವೆನು.
29 ನನ್ನ ಶತ್ರುಗಳಿಗೆ ಅವಮಾನವೇ ವಸ್ತ್ರವಾಗಲಿ!
ನಾಚಿಕೆಯೇ ಅವರ ಮೇಲಂಗಿಯಾಗಲಿ.
30 ನಾನು ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡುವೆನು.
ಜನಸಮೂಹದಲ್ಲಿ ಆತನನ್ನು ಕೊಂಡಾಡುವೆನು.
31 ಯಾಕೆಂದರೆ, ಆತನು ಅಸಹಾಯಕರ ಬಲಗಡೆಯಲ್ಲಿ ನಿಂತುಕೊಳ್ಳುವನು;
ಮರಣದಂಡನೆ ವಿಧಿಸಬೇಕೆಂದಿರುವ ಜನರಿಂದ ಅವರನ್ನು ರಕ್ಷಿಸುವನು.
Kannada Holy Bible: Easy-to-Read Version. All rights reserved. © 1997 Bible League International