M’Cheyne Bible Reading Plan
ನಾಬೋತನ ದ್ರಾಕ್ಷಿತೋಟ
21 ಸಮಾರ್ಯದ ರಾಜನಾದ ಅಹಾಬನಿಗೆ ಇಜ್ರೇಲಿನಲ್ಲಿ ಅರಮನೆಯಿತ್ತು. ಆ ಅರಮನೆಯ ಹಿತ್ತಲಿನಲ್ಲಿ ಒಂದು ದ್ರಾಕ್ಷಿತೋಟವಿತ್ತು. ಇಜ್ರೇಲಿನವನಾದ ನಾಬೋತನೆಂಬ ಹೆಸರಿನ ಮನುಷ್ಯನು ಆ ದ್ರಾಕ್ಷಿತೋಟದ ಒಡೆಯನಾಗಿದ್ದನು. 2 ಒಂದು ದಿನ ಅಹಾಬನು ನಾಬೋತನಿಗೆ, “ನಿನ್ನ ದ್ರಾಕ್ಷಿತೋಟವನ್ನು ನನಗೆ ಕೊಡು. ನಾನು ಅದನ್ನು ತರಕಾರಿಯ ತೋಟವನ್ನಾಗಿ ಮಾಡುವೆನು. ನಿನ್ನ ದ್ರಾಕ್ಷಿತೋಟವು ನನ್ನ ಅರಮನೆಯ ಹತ್ತಿರದಲ್ಲಿದೆ. ನಾನು ಅದಕ್ಕೆ ಬದಲಾಗಿ ಒಂದು ಉತ್ತಮ ದ್ರಾಕ್ಷಿತೋಟವನ್ನು ನಿನಗೆ ಕೊಡುವೆನು. ನೀನು ಬಯಸಿದರೆ, ನಾನು ಅದರ ಬೆಲೆಯನ್ನು ಹಣದ ರೂಪದಲ್ಲಿ ಕೊಡುತ್ತೇನೆ” ಎಂದು ಹೇಳಿದನು.
3 ನಾಬೋತನು, “ನಾನು ನನ್ನ ಭೂಮಿಯನ್ನು ಎಂದಿಗೂ ನಿನಗೆ ಕೊಡುವುದಿಲ್ಲ. ಅದು ನನ್ನ ವಂಶಕ್ಕೆ ಸೇರಿದ್ದು” ಎಂದು ಉತ್ತರಿಸಿದನು.
4 ಅಹಾಬನು ಮನೆಗೆ ಹೋದನು. ಅವನು ನಾಬೋತನ ಮೇಲೆ ಕೋಪಗೊಂಡನು ಮತ್ತು ಬೇಸರಗೊಂಡನು. ಇಜ್ರೇಲಿನವನಾದ ನಾಬೋತನು ಹೇಳಿದ ಸಂಗತಿಗಳನ್ನು ಅವನು ಇಷ್ಟಪಡಲಿಲ್ಲ. “ನಾನು ನನ್ನ ವಂಶಕ್ಕೆ ಸೇರಿದ ದ್ರಾಕ್ಷಿತೋಟವನ್ನು ನಿನಗೆ ಕೊಡುವುದಿಲ್ಲ” ಎಂದು ನಾಬೋತನು ಹೇಳಿದ್ದನು. ಅಹಾಬನು ತನ್ನ ಹಾಸಿಗೆಯಲ್ಲಿ ಮಲಗಿ, ಮುಖವನ್ನು ಬೇರೆ ಕಡೆಗೆ ತಿರುಗಿಸಿಕೊಂಡನು. ಅವನು ಊಟಮಾಡಲಿಲ್ಲ.
5 ಅಹಾಬನ ಪತ್ನಿಯಾದ ಈಜೆಬೆಲಳು ಅವನ ಹತ್ತಿರ ಹೋದಳು. ಈಜೆಬೆಲಳು, “ನೀನೇಕೆ ತಳಮಳಗೊಂಡಿರುವೆ? ನೀನು ಏಕೆ ಊಟಮಾಡಲಿಲ್ಲ?” ಎಂದು ಅವನನ್ನು ಕೇಳಿದಳು.
6 ಅಹಾಬನು, “ನಾನು ಇಜ್ರೇಲಿನ ನಾಬೋತನಿಗೆ, ‘ನಿನ್ನ ತೋಟವನ್ನು ನನಗೆ ಕೊಡು. ಅದರ ಪೂರ್ಣ ಬೆಲೆಯನ್ನು ನಿನಗೆ ಕೊಡುತ್ತೇನೆ ಅಥವಾ ನೀನು ಬಯಸಿದರೆ, ನಿನಗೆ ಬೇರೊಂದು ತೋಟವನ್ನು ಕೊಡುತ್ತೇನೆ’ ಎಂದು ಹೇಳಿದೆನು. ಆದರೆ ನಾಬೋತನು ತನ್ನ ತೋಟವನ್ನು ನನಗೆ ಕೊಡಲಿಲ್ಲ” ಎಂದು ಉತ್ತರಿಸಿದನು.
7 ಈಜೆಬೆಲಳು, “ನೀನು ಇಸ್ರೇಲಿಗೆಲ್ಲ ರಾಜ! ನಿನ್ನ ಹಾಸಿಗೆಯಿಂದ ಎದ್ದು ಬಾ. ನೀನು ಸ್ವಲ್ಪ ಊಟಮಾಡಿ, ಸಂತೋಷದಿಂದಿರು. ನಾನು ನಿನಗೆ ನಾಬೋತನ ದ್ರಾಕ್ಷಿತೋಟವನ್ನು ಕೊಡಿಸುತ್ತೇನೆ” ಎಂದು ಹೇಳಿದಳು.
8 ನಂತರ ಈಜೆಬೆಲಳು ಕೆಲವು ಪತ್ರಗಳನ್ನು ಬರೆದಳು. ಅವಳು ಆ ಪತ್ರಗಳಿಗೆ ಅಹಾಬನ ಹೆಸರಿನ ಸಹಿಯನ್ನು ಮಾಡಿದಳು. ಅಹಾಬನ ಸ್ವಂತ ಮೊಹರನ್ನು ಅವಳು ಆ ಪತ್ರಗಳಿಗೆ ಹಾಕಿದಳು. ನಾಬೋತನು ಇದ್ದ ಆ ಪಟ್ಟಣದಲ್ಲಿ ವಾಸವಾಗಿದ್ದ ಮುಖ್ಯಜನರಿಗೂ ಹಿರಿಯರಿಗೂ ಅವಳು ಆ ಪತ್ರಗಳನ್ನು ಕಳುಹಿಸಿದಳು. 9 ಆ ಪತ್ರದಲ್ಲಿ ಹೀಗೆ ಬರೆದಿತ್ತು:
“ಉಪವಾಸದ ಒಂದು ದಿನವನ್ನು ಗೊತ್ತುಮಾಡಿ, ಆ ದಿನವನ್ನು ಪ್ರಕಟಿಸಿ, ನಂತರ ಪಟ್ಟಣದ ಜನರನ್ನೆಲ್ಲ ಸಭೆ ಸೇರಿಸಿರಿ. 10 ನಾಬೋತನ ಬಗ್ಗೆ ಸುಳ್ಳುಹೇಳುವ ಕೆಲವು ಜನರನ್ನು ಪತ್ತೆಹಚ್ಚಿ, ನಾಬೋತನು ರಾಜನ ವಿರುದ್ಧವಾಗಿ ಮತ್ತು ದೇವರ ವಿರುದ್ಧವಾಗಿ ಮಾತನಾಡುವುದನ್ನು ನಾವು ಕೇಳಿಸಿಕೊಂಡೆವೆಂದು ಅವರು ಹೇಳಲೇಬೇಕು. ಆಗ ನಾಬೋತನನ್ನು ನಗರದಿಂದ ಹೊರಕ್ಕೆ ಕರೆದೊಯ್ದು ಅವನನ್ನು ಕಲ್ಲೆಸೆದು ಕೊಂದುಹಾಕಿರಿ.”
11 ಇಜ್ರೇಲಿನ ಹಿರಿಯರು ಮತ್ತು ಪ್ರಮುಖರಾದ ಜನರು ಆ ಆಜ್ಞೆಗನುಸಾರವಾಗಿ ಮಾಡಿದರು. 12 ನಾಯಕರು ಒಂದು ದಿನವನ್ನು ಉಪವಾಸದ ದಿನವಾಗಿ ಪ್ರಕಟಿಸಿದರು. ಆ ದಿನ ಅವರು ಜನರನ್ನೆಲ್ಲ ಸಭೆಸೇರಿಸಿದರು. ನಾಬೋತನನ್ನು ಜನರೆದುರಿಗೆ ಪ್ರಮುಖವಾದ ಒಂದು ಸ್ಥಳದಲ್ಲಿ ಅವರು ಕುಳ್ಳಿರಿಸಿದರು. 13 ನಾಬೋತನು ದೇವರ ವಿರುದ್ಧವಾಗಿಯೂ ರಾಜನ ವಿರುದ್ಧವಾಗಿಯೂ ಮಾತನಾಡಿದ್ದನ್ನು ತಾವು ಕೇಳಿರುವುದಾಗಿ ಇಬ್ಬರು ಅಲ್ಲಿನ ಜನರಿಗೆ ಹೇಳಿದರು. ಜನರು ನಾಬೋತನನ್ನು ನಗರದ ಹೊರಕ್ಕೆ ಕರೆದೊಯ್ದು ಅವನನ್ನು ಕಲ್ಲೆಸೆದು ಕೊಂದರು. 14 ನಾಯಕರು ಈಜೆಬೆಲಳಿಗೆ ಒಂದು ಸಂದೇಶವನ್ನು ಕಳುಹಿಸಿದರು. ಆ ಸಂದೇಶವು ಹೀಗಿತ್ತು: “ನಾಬೋತನನ್ನು ಕೊಂದುಹಾಕಲಾಗಿದೆ.”
15 ಇದನ್ನು ಕೇಳಿದ ಈಜೆಬೆಲಳು ಅಹಾಬನಿಗೆ, “ನಾಬೋತನು ಸತ್ತುಹೋದನು. ಈಗ ನೀನು ಹೋಗಿ, ನಿನಗೆ ಇಷ್ಟವಾದ ಆ ದ್ರಾಕ್ಷಿತೋಟವನ್ನು ತೆಗೆದುಕೊ” ಎಂದು ಹೇಳಿದಳು. 16 ಅಹಾಬನು ದ್ರಾಕ್ಷಿತೋಟಕ್ಕೆ ಹೋಗಿ ಅದನ್ನು ತನ್ನದನ್ನಾಗಿಸಿಕೊಂಡನು.
17 ಈ ಸಮಯದಲ್ಲಿ ಯೆಹೋವನು ಪ್ರವಾದಿಯೂ ತಿಷ್ಬೇ ಊರಿನವನೂ ಆದ ಎಲೀಯನ ಜೊತೆಯಲ್ಲಿ ಮಾತನಾಡಿದನು. ಯೆಹೋವನು ಹೀಗೆಂದನು: 18 “ಸಮಾರ್ಯದಲ್ಲಿ ಆಳುತ್ತಿರುವ ಇಸ್ರೇಲಿನ ರಾಜನಾದ ಅಹಾಬನ ಬಳಿಗೆ ಹೋಗು. ಅಹಾಬನು ಈಗ ನಾಬೋತನ ದ್ರಾಕ್ಷಿತೋಟದಲ್ಲಿದ್ದಾನೆ. ಆ ತೋಟವನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳಲು ಅವನು ಅಲ್ಲಿಗೆ ಹೋಗಿದ್ದಾನೆ. 19 ಯೆಹೋವನಾದ ನಾನು ಅವನಿಗೆ ಹೀಗೆ ಹೇಳಿದೆನೆಂದು ತಿಳಿಸು: ‘ಅಹಾಬನೇ! ನೀನು ನಾಬೋತನನ್ನು ಕೊಂದುಹಾಕಿದೆ. ಈಗ ನೀನು ಅವನ ದ್ರಾಕ್ಷಿತೋಟವನ್ನು ತೆಗೆದುಕೊಳ್ಳುತ್ತಿರುವೆ. ಆದ್ದರಿಂದ ನಾನಿದನ್ನು ನಿನಗೆ ಹೇಳುತ್ತೇನೆ! ನಾಬೋತನು ಸತ್ತ ಸ್ಥಳದಲ್ಲಿಯೇ ನೀನು ಸಹ ಸಾಯುವೆ. ನಾಯಿಗಳು ನಾಬೋತನ ರಕ್ತವನ್ನು ನೆಕ್ಕಿದ ಸ್ಥಳದಲ್ಲಿಯೇ ನಿನ್ನ ರಕ್ತವನ್ನೂ ನೆಕ್ಕುತ್ತವೆ!’”
20 ಎಲೀಯನು ಅಹಾಬನ ಹತ್ತಿರಕ್ಕೆ ಹೋದನು. ಅಹಾಬನು ಎಲೀಯನನ್ನು ಕಂಡು, “ನೀನು ನನ್ನನ್ನು ಮತ್ತೆ ಕಂಡುಹಿಡಿದೆ. ನೀನು ಯಾವಾಗಲೂ ನನಗೆ ವಿರೋಧವಾಗಿರುವೆ” ಎಂದನು.
ಎಲೀಯನು, “ಹೌದು, ನಾನು ನಿನ್ನನ್ನು ಮತ್ತೆ ಕಂಡುಹಿಡಿದೆ. ಯೆಹೋವನ ವಿರುದ್ಧ ಪಾಪಮಾಡಲು ನೀನು ನಿನ್ನ ಜೀವನವನ್ನು ಯಾವಾಗಲೂ ಉಪಯೋಗಿಸುತ್ತಿರುವೆ. 21 ಆದ್ದರಿಂದ ಯೆಹೋವನು ನಿನಗೆ, ‘ನಾನು ನಿನ್ನನ್ನು ನಾಶಪಡಿಸುತ್ತೇನೆ. ನಿನ್ನನ್ನು ಮತ್ತು ನಿನ್ನ ಕುಟುಂಬದ ಪ್ರತಿಯೊಬ್ಬ ಗಂಡಸರನ್ನು ನಾನು ಕೊಂದುಹಾಕುತ್ತೇನೆ. 22 ನೆಬಾಟನ ಮಗನಾದ, ರಾಜನಾದ ಯಾರೊಬ್ಬಾಮನ ಕುಟುಂಬಕ್ಕೆ ಆದ ಗತಿಯೇ ನಿನ್ನ ಕುಟುಂಬಕ್ಕೂ ಆಗುವುದು. ರಾಜನಾದ ಬಾಷನ ಕುಟುಂಬಕ್ಕೆ ಆದ ಗತಿಯೇ ನಿನ್ನ ಕುಟುಂಬಕ್ಕೂ ಆಗುವುದು. ಈ ಎರಡು ಕುಟುಂಬಗಳೂ ಸಂಪೂರ್ಣವಾಗಿ ನಾಶಗೊಂಡವು. ನೀನು ನನ್ನನ್ನು ಕೋಪಗೊಳಿಸಿದ್ದಕ್ಕಾಗಿ ನಾನು ನಿನಗೆ ಹೀಗೆ ಮಾಡುತ್ತೇನೆ. ಇಸ್ರೇಲಿನ ಜನರು ಪಾಪಮಾಡುವುದಕ್ಕೆ ನೀನು ಕಾರಣನಾದೆ’ ಎನ್ನುತ್ತಾನೆ. 23 ಇದಲ್ಲದೆ ಯೆಹೋವನು, ‘ನಿನ್ನ ಪತ್ನಿಯಾದ ಈಜೆಬೆಲಳ ದೇಹವನ್ನು, ಇಜ್ರೇಲ್ ನಗರದಲ್ಲಿ ನಾಯಿಗಳು ತಿನ್ನುತ್ತವೆ, 24 ನಿನ್ನ ಕುಟುಂಬದಲ್ಲಿ ಯಾರಾದರೂ ನಗರದಲ್ಲಿ ಸತ್ತರೆ, ಅವರನ್ನು ನಾಯಿಗಳು ತಿನ್ನುತ್ತವೆ. ಯಾರಾದರೂ ತೋಟಗಳಲ್ಲಿ ಸತ್ತರೆ, ಅವರನ್ನು ಪಕ್ಷಿಗಳು ಕಿತ್ತುತಿನ್ನುತ್ತವೆ ಎನ್ನುತ್ತಾನೆ’” ಎಂದು ಹೇಳಿದನು.
25 ಅಹಾಬನು ಮಾಡಿದಷ್ಟು ಪಾಪಗಳನ್ನು, ಇಲ್ಲವೆ ಕೆಟ್ಟಕಾರ್ಯಗಳನ್ನು ಮಾಡಿದ ಮನುಷ್ಯರು ಬೇರೆ ಯಾರೂ ಇಲ್ಲ. ಅವನು ಆ ಕಾರ್ಯಗಳನ್ನು ಮಾಡುವುದಕ್ಕೆ ಅವನ ಪತ್ನಿಯಾದ ಈಜೆಬೆಲಳು ಅವನನ್ನು ಒತ್ತಾಯಪಡಿಸಿದಳು. 26 ಅಹಾಬನು ಬಹುಕೆಟ್ಟ ಪಾಪವನ್ನು ಮಾಡಿದನು ಮತ್ತು ವಿಗ್ರಹಗಳನ್ನು ಆರಾಧಿಸಿದನು. ಅಮೋರಿಯರು ಇಂತಹ ಕಾರ್ಯವನ್ನೇ ಮಾಡಿದ್ದರು. ಯೆಹೋವನು ಅವರನ್ನು ಅವರ ನಾಡಿನಿಂದ ಓಡಿಸಿದನು ಮತ್ತು ಅದನ್ನು ಇಸ್ರೇಲಿನ ಜನರಿಗೆ ದಯಪಾಲಿಸಿದನು.
27 ಎಲೀಯನು ಮಾತನಾಡಿದ ನಂತರ ಅಹಾಬನು ಬಹಳ ಶೋಕತಪ್ತನಾದನು. ಅವನು ದುಃಖದಿಂದ ತನ್ನ ಬಟ್ಟೆಗಳನ್ನು ಹರಿದುಕೊಂಡು ಗೋಣಿತಟ್ಟನ್ನು ಸುತ್ತಿಕೊಂಡನು. ಅವನು ಊಟಮಾಡದೆ ಹಾಗೆಯೇ ಮಲಗಿಕೊಂಡನು; ದುಃಖದಿಂದ ತಳಮಳಗೊಂಡನು.
28 ಯೆಹೋವನು ಪ್ರವಾದಿಯಾದ ಎಲೀಯನಿಗೆ, 29 “ಅಹಾಬನು ನನ್ನ ಎದುರಿನಲ್ಲಿ ತನ್ನನ್ನು ತಗ್ಗಿಸಿಕೊಂಡಿರುವುದನ್ನು ನಾನು ನೋಡುತ್ತಿದ್ದೇನೆ. ಆದ್ದರಿಂದ ಅವನ ಜೀವಮಾನಕಾಲದಲ್ಲಿ ಅವನಿಗೆ ಕೇಡಾಗದಂತೆ ಮಾಡುವೆನು. ಅವನ ಮಗ ರಾಜನಾಗುವವರೆಗೆ ನಾನು ಕಾಯುತ್ತೇನೆ. ನಂತರ ಅಹಾಬನ ಕುಟುಂಬಕ್ಕೆ ಕೇಡನ್ನು ಬರಮಾಡುತ್ತೇನೆ” ಎಂದು ಹೇಳಿದನು.
ದೇವರನ್ನು ಹರ್ಷಗೊಳಿಸುವ ಜೀವನ
4 ಸಹೋದರ ಸಹೋದರಿಯರೇ, ಈಗ ನಿಮಗೆ ಇತರ ಕೆಲವು ವಿಚಾರಗಳನ್ನು ತಿಳಿಸುತ್ತೇನೆ. ದೇವರನ್ನು ಮೆಚ್ಚಿಸಲು ಹೇಗೆ ಜೀವಿಸಬೇಕೆಂದು ನಿಮಗೆ ಕಲಿಸಿದ್ದೇವೆ. ನೀವು ಅದೇ ರೀತಿಯಲ್ಲಿ ಜೀವಿಸುತ್ತಿರುವಿರಿ. ಅದೇ ರೀತಿಯಲ್ಲಿ ಇನ್ನೂ ಹೆಚ್ಚು ಸಮರ್ಪಕವಾಗಿ ಜೀವಿಸಬೇಕೆಂದು ನಾವು ನಿಮ್ಮನ್ನು ಕ್ರಿಸ್ತನಲ್ಲಿ ಕೇಳಿಕೊಳ್ಳುತ್ತೇವೆ ಮತ್ತು ಪ್ರೋತ್ಸಾಹಿಸುತ್ತೇವೆ. 2 ನೀವು ಯಾವ ಕಾರ್ಯಗಳನ್ನು ಮಾಡಬೇಕೆಂದು ನಾವು ನಿಮಗೆ ಹೇಳಿದೆವೋ ಅವುಗಳೆಲ್ಲಾ ನಿಮಗೆ ತಿಳಿದೇ ಇವೆ. ಪ್ರಭು ಯೇಸುವಿನ ಅಧಿಕಾರದಿಂದ ನಾವು ಆ ಸಂಗತಿಗಳನ್ನು ನಿಮಗೆ ಹೇಳಿದೆವು. 3 ನೀವು ಪವಿತ್ರರಾಗಿರಬೇಕೆಂಬುದು ದೇವರ ಚಿತ್ತವಾಗಿದೆ. ಆದುದರಿಂದ ನೀವು ಲೈಂಗಿಕ ಪಾಪಗಳಿಂದ ದೂರವಿರಿ. 4 ನಿಮ್ಮಲ್ಲಿ ಪ್ರತಿಯೊಬ್ಬರೂ ನಿಮ್ಮ ಸ್ವಂತ ದೇಹಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕೆಂಬುದು ದೇವರ ಅಪೇಕ್ಷೆ. ನಿಮ್ಮ ದೇಹವನ್ನು ಪವಿತ್ರವಾದ ಮಾರ್ಗದಲ್ಲಿ ಬಳಸಿದರೆ, ದೇವರಿಗೆ ಗೌರವವನ್ನು ನೀಡಿದಂತಾಗುವುದು.[a] 5 ನಿಮ್ಮ ದೇಹವನ್ನು ಲೈಂಗಿಕ ಪಾಪಗಳಿಗಾಗಿ ಬಳಸಬೇಡಿ. ದೇವರನ್ನು ತಿಳಿಯದ ಜನರು ತಮ್ಮ ದೇಹಗಳನ್ನು ಅದಕ್ಕೆ ಬಳಸುತ್ತಾರೆ. 6 ಈ ವಿಷಯದಲ್ಲಿ ನಿಮ್ಮಲ್ಲಿ ಯಾರೂ ಕ್ರಿಸ್ತನಲ್ಲಿ ಸಹೋದರನಾದವನನ್ನು ವಂಚಿಸಿ ಕೇಡುಮಾಡಬಾರದು. ನಾವು ಈಗಾಗಲೇ ನಿಮಗೆ ಹೇಳಿದಂತೆ ಮತ್ತು ಎಚ್ಚರಿಕೆ ನೀಡಿದಂತೆ ಇವೆಲ್ಲವುಗಳ ವಿಷಯದಲ್ಲಿ ದೇವರು ದಂಡಿಸುತ್ತಾನೆ. 7 ದೇವರು ನಮ್ಮನ್ನು ಪರಿಶುದ್ಧರಾಗಿ ಜೀವಿಸುವುದಕ್ಕೆ ಕರೆದಿದ್ದಾನೆ. ನಾವು ಪಾಪದಲ್ಲಿ ಜೀವಿಸಲು ಆತನು ಇಷ್ಟಪಡುವುದಿಲ್ಲ. 8 ಆದುದರಿಂದ ಈ ಉಪದೇಶವನ್ನು ಅನುಸರಿಸದವನು ಅವಿಧೇಯನಾಗಿರುವುದು ದೇವರಿಗೇ ಹೊರತು ಮಾನವನಿಗಲ್ಲ. ನಮಗೆ ತನ್ನ ಪವಿತ್ರಾತ್ಮನನ್ನು ನೀಡಿದಾತನು ದೇವರೇ.
9 ಕ್ರಿಸ್ತನಲ್ಲಿ ಸಹೋದರ ಸಹೋದರಿಯರನ್ನು ಹೇಗೆ ಪ್ರೀತಿಸಬೇಕೆಂಬುದರ ಬಗ್ಗೆ ನಾವು ನಿಮಗೆ ಬರೆಯುವ ಅವಶ್ಯಕತೆಯಿಲ್ಲ. ಒಬ್ಬರನ್ನೊಬ್ಬರು ಹೇಗೆ ಪ್ರೀತಿಸಬೇಕೆಂಬುದನ್ನು ಈಗಾಗಲೇ ದೇವರು ನಿಮಗೆ ಕಲಿಸಿದ್ದಾನೆ. 10 ಮಕೆದೋನಿಯದಲ್ಲಿರುವ ಸಹೋದರ ಸಹೋದರಿಯರನ್ನೆಲ್ಲ ನೀವು ನಿಜವಾಗಿಯೂ ಪ್ರೀತಿಸುತ್ತಿದ್ದೀರಿ. ಅವರನ್ನು ಇನ್ನೂ ಹೆಚ್ಚೆಚ್ಚಾಗಿ ನೀವು ಪ್ರೀತಿಸಬೇಕೆಂದು ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ.
11 ಶಾಂತಿಯಿಂದ ಜೀವಿಸಲು ನಿಮ್ಮಿಂದಾದಷ್ಟು ಪ್ರಯತ್ನಿಸಿರಿ. ನಿಮ್ಮ ಸ್ವಂತ ವ್ಯವಹಾರದ ಮೇಲ್ವಿಚಾರಣೆಯನ್ನು ನೋಡಿಕೊಳ್ಳಿ. ನಿಮ್ಮ ಕೈಯಾರೆ ಕೆಲಸ ಮಾಡಬೇಕೆಂದು ನಾವು ಈಗಾಗಲೇ ನಿಮಗೆ ಹೇಳಿದ್ದೇವೆ. 12 ನೀವು ಹೀಗೆ ಮಾಡಿದರೆ, ವಿಶ್ವಾಸಿಗಳಲ್ಲದವರು ನಿಮ್ಮ ಜೀವತದ ರೀತಿಯನ್ನು ಕಂಡು ನಿಮ್ಮನ್ನು ಗೌರವಿಸುತ್ತಾರೆ. ಅಲ್ಲದೆ ನಿಮ್ಮ ಅಗತ್ಯತೆಗಳ ಪೂರೈಕೆಗಾಗಿ ನೀವು ಬೇರೆಯವರನ್ನು ಅವಲಂಬಿಸಿಕೊಳ್ಳುವ ಅವಶ್ಯಕತೆಯೂ ಇರುವುದಿಲ್ಲ.
ಪ್ರಭುವಿನ ಬರುವಿಕೆ
13 ಸಹೋದರ ಸಹೋದರಿಯರೇ, ಸತ್ತುಹೋದ ಜನರ ಬಗ್ಗೆ ನೀವು ತಿಳಿದುಕೊಳ್ಳಬೇಕೆಂಬುದು ನಮ್ಮ ಅಪೇಕ್ಷೆ. ನಿರೀಕ್ಷೆಯಿಲ್ಲದ ಜನರಂತೆ ನೀವು ದುಃಖದಿಂದಿರುವುದು ನಮಗೆ ಇಷ್ಟವಿಲ್ಲ. 14 ಯೇಸು ಸತ್ತುಹೋದನೆಂದು ನಾವು ನಂಬುತ್ತೇವೆ. ಆದರೆ ಯೇಸು ಮತ್ತೆ ಜೀವಂತವಾಗಿ ಎದ್ದುಬಂದನೆಂಬುದನ್ನೂ ನಾವು ನಂಬುತ್ತೇವೆ. ಹಾಗೆಯೇ ಯೇಸುವಿನಲ್ಲಿ ವಿಶ್ವಾಸವಿಟ್ಟು ಸತ್ತುಹೋದವರನ್ನು ದೇವರು ಆತನ ಜೊತೆಯಲ್ಲಿ ಕರೆದುಕೊಂಡು ಬರುವನು.
15 ಈಗ ನಾವು ನಿಮಗೆ ಹೇಳುತ್ತಿರುವುದು ಪ್ರಭುವಿನ ಸ್ವಂತ ಸಂದೇಶವನ್ನೇ. ಪ್ರಭುವು ಮತ್ತೆ ಬಂದಾಗ ಈಗ ಜೀವಿಸುತ್ತಿರುವ ನಾವು ಇನ್ನೂ ಜೀವದಿಂದ ಇದ್ದರೆ ನಾವು ಪ್ರಭುವಿನ ಜೊತೆಯಲ್ಲಿರುತ್ತೇವೆ. ಆದರೂ ಸತ್ತುಹೋದ ಇತರರಿಗಿಂತಲೂ ನಾವು ಮುಂದಿನವರಾಗುವುದಿಲ್ಲ. 16 ಪ್ರಭುವು ತಾನೇ ಪರಲೋಕದಿಂದ ಇಳಿದುಬರುವನು. ಆಗ ಪ್ರಧಾನ ದೇವದೂತನು ದೇವರ ತುತೂರಿ ಧ್ವನಿಯೊಡನೆ ಆಜ್ಞಾಘೋಷ ಮಾಡುವನು. ಕೂಡಲೇ ಕ್ರಿಸ್ತನಲ್ಲಿರುವ ಸತ್ತವರು ಮೊದಲು ಎದ್ದುಬರುವರು. 17 ಅನಂತರ, ಇನ್ನೂ ಜೀವದಿಂದುಳಿದಿರುವ ನಾವು ಸತ್ತವರೊಡನೆ ಒಂದುಗೂಡುವೆವು. ಪ್ರಭುವನ್ನು ಅಂತರಿಕ್ಷದಲ್ಲಿ ಎದುರುಗೊಳ್ಳಲು ನಾವು ಮೇಘಗಳ ನಡುವೆ ಎತ್ತಲ್ಪಡುವೆವು. ಹೀಗೆ ನಾವು ಯಾವಾಗಲೂ ಪ್ರಭುವಿನೊಂದಿಗೆ ಇರುವೆವು. 18 ಆದಕಾರಣ ಈ ಮಾತುಗಳಿಂದ ಒಬ್ಬರನ್ನೊಬ್ಬರು ಸಂತೈಸಿರಿ.
ಬಂಗಾರದ ವಿಗ್ರಹ ಮತ್ತು ಉರಿಯುವ ಕುಲುಮೆ
3 ಅರಸನಾದ ನೆಬೂಕದ್ನೆಚ್ಚರನು ಒಂದು ಬಂಗಾರದ ವಿಗ್ರಹವನ್ನು ಮಾಡಿಸಿದ್ದನು. ಆ ವಿಗ್ರಹವು ಅರವತ್ತು ಮೊಳ ಎತ್ತರವಾಗಿತ್ತು. ಆರು ಮೊಳ ಅಗಲವಾಗಿತ್ತು. ಆ ವಿಗ್ರಹವನ್ನು ಬಾಬಿಲೋನ್ ಪ್ರಾಂತ್ಯದ ದೂರಾ ಎಂಬ ಬಯಲಿನಲ್ಲಿ ನಿಲ್ಲಿಸಿದನು. 2 ಅರಸನು ಆ ವಿಗ್ರಹದ ಪ್ರತಿಷ್ಠಾಪನೆಯ ಮಹೋತ್ಸವಕ್ಕೆ ಉಪರಾಜರನ್ನು, ನಾಯಕರನ್ನು, ದೇಶಾಧಿಪತಿಗಳನ್ನು, ಮಂತ್ರಿಗಳನ್ನು, ಕೋಶಾಧ್ಯಕ್ಷರನ್ನು, ನ್ಯಾಯಾಧಿಪತಿಗಳನ್ನು ಮತ್ತು ಉಳಿದೆಲ್ಲ ಅಧಿಕಾರಿಗಳನ್ನು ಕರೆಸಿದನು.
3 ಅವರೆಲ್ಲರು ಬಂದು ಅರಸನಾದ ನೆಬೂಕದ್ನೆಚ್ಚರನು ನಿಲ್ಲಿಸಿದ ವಿಗ್ರಹದ ಎದುರಿಗೆ ನಿಂತುಕೊಂಡರು. 4 ಆಗ ಸಾರುವವನು ದೊಡ್ಡ ಧ್ವನಿಯಲ್ಲಿ, “ವಿವಿಧ ಜನಾಂಗ, ಕುಲ, ಭಾಷೆಗಳ ಜನರೇ, ನಾನು ಹೇಳುವುದನ್ನು ಕೇಳಿರಿ. 5 ವಾದ್ಯಗಳ ಧ್ವನಿಯನ್ನು ಕೇಳಿದ ಕೂಡಲೇ ನೀವು ಅಡ್ಡಬೀಳಬೇಕು. ಇದು ರಾಜಾಜ್ಞೆ. ತುತ್ತೂರಿ, ಕೊಳಲು, ಕಿನ್ನರಿ, ತಂಬೂರಿ, ವೀಣೆ, ವಾಲಗ ಮುಂತಾದ ಸಕಲ ವಾದ್ಯಗಳ ಧ್ವನಿಯನ್ನು ಕೇಳಿದ ಕೂಡಲೆ ನೀವು ಬಂಗಾರದ ವಿಗ್ರಹವನ್ನು ಪೂಜಿಸಬೇಕು. ಅರಸನಾದ ನೆಬೂಕದ್ನೆಚ್ಚರನು ಈ ವಿಗ್ರಹವನ್ನು ನಿಲ್ಲಿಸಿದ್ದಾನೆ. 6 ಯಾರಾದರೂ ಈ ಬಂಗಾರದ ವಿಗ್ರಹಕ್ಕೆ ಅಡ್ಡಬೀಳದಿದ್ದರೆ ಮತ್ತು ಪೂಜಿಸದಿದ್ದರೆ ತಕ್ಷಣ ಅವರನ್ನು ಬೆಂಕಿಯ ಕೊಂಡಕ್ಕೆ ಎಸೆಯಲಾಗುವುದು” ಎಂದು ಸಾರಿದನು.
7 ಆದ್ದರಿಂದ ತುತ್ತೂರಿ, ಕೊಳಲು, ಕಿನ್ನರಿ, ತಂಬೂರಿ, ವೀಣೆ ಮುಂತಾದ ಸಕಲ ವಾದ್ಯಗಳ ಧ್ವನಿಯನ್ನು ಕೇಳಿದ ಕೂಡಲೆ ಅವರು ಅಡ್ಡಬಿದ್ದು ಬಂಗಾರದ ವಿಗ್ರಹವನ್ನು ಪೂಜಿಸಿದರು. ಅರಸನಾದ ನೆಬೂಕದ್ನೆಚ್ಚರನು ನಿಲ್ಲಿಸಿದ ವಿಗ್ರಹವನ್ನು ಎಲ್ಲ ಜನಾಂಗಗಳ, ಭಾಷೆಗಳ ಜನರು ಪೂಜಿಸಿದರು.
8 ಆಗ ಕೆಲವು ಜನ ಕಲ್ದೀಯರು ಅರಸನ ಬಳಿಗೆ ಬಂದು ಅವರು ಯೆಹೂದ್ಯರ ವಿರುದ್ಧ ಮಾತನಾಡತೊಡಗಿದರು. 9 ಅರಸನಾದ ನೆಬೂಕದ್ನೆಚ್ಚರನಿಗೆ ಅವರು, “ಮಹಾರಾಜನೇ, ಚಿರಂಜೀವಿಯಾಗಿರು! 10 ಅರಸನೇ, ತುತ್ತೂರಿ, ಕೊಳಲು, ಕಿನ್ನರಿ, ತಂಬೂರಿ, ವೀಣೆ, ವಾಲಗ ಮುಂತಾದ ಸಕಲ ವಾದ್ಯಗಳ ಧ್ವನಿಯನ್ನು ಕೇಳಿದ ಪ್ರತಿಯೊಬ್ಬನೂ ಅಡ್ಡಬಿದ್ದು ಬಂಗಾರದ ವಿಗ್ರಹವನ್ನು ಪೂಜಿಸಬೇಕು ಎಂದು ತಾವು ಆಜ್ಞೆ ಕೊಟ್ಟಿದ್ದೀರಿ. 11 ಯಾರಾದರೂ ಅಡ್ಡಬಿದ್ದು ಬಂಗಾರದ ವಿಗ್ರಹವನ್ನು ಪೂಜಿಸದಿದ್ದರೆ ಅವರನ್ನು ಉರಿಯುವ ಬೆಂಕಿಯ ಕೊಂಡದಲ್ಲಿ ಎಸೆಯಲಾಗುವುದೆಂದು ಕೂಡ ತಾವು ಹೇಳಿದ್ದೀರಿ. 12 ಅರಸನೇ, ಕೆಲವು ಜನ ಯೆಹೂದ್ಯರು ತಮ್ಮ ಆಜ್ಞೆಯನ್ನು ಪಾಲಿಸಲಿಲ್ಲ. ಆ ಯೆಹೂದ್ಯರನ್ನು ತಾವು ಬಾಬಿಲೋನ್ ಪ್ರಾಂತ್ಯದಲ್ಲಿ ಪ್ರಮುಖ ಅಧಿಕಾರಿಗಳನ್ನಾಗಿ ನೇಮಿಸಿದ್ದೀರಿ. ಅವರ ಹೆಸರುಗಳು, ಶದ್ರಕ್, ಮೇಶಕ್, ಅಬೇದ್‌ನೆಗೋ ಎಂದು. ಅವರು ನಿಮ್ಮ ದೇವರುಗಳನ್ನು ಪೂಜಿಸುವುದಿಲ್ಲ. ನೀವು ನಿಲ್ಲಿಸಿದ ಬಂಗಾರದ ವಿಗ್ರಹಕ್ಕೆ ಅಡ್ಡಬಿದ್ದು ಪೂಜಿಸುವದಿಲ್ಲ” ಎಂದು ಚಾಡಿ ಹೇಳಿದರು.
13 ನೆಬೂಕದ್ನೆಚ್ಚರನಿಗೆ ಬಹಳ ಕೋಪ ಬಂತು. ಅವನು ಶದ್ರಕ್, ಮೇಶಕ್, ಅಬೇದ್‌ನೆಗೋ ಇವರುಗಳನ್ನು ಕರೆಸಿದನು. ಅವರನ್ನು ಅರಸನ ಬಳಿಗೆ ಕರೆದುತರಲಾಯಿತು. 14 ನೆಬೂಕದ್ನೆಚ್ಚರನು ಅವರಿಗೆ, “ಶದ್ರಕ್, ಮೇಶಕ್, ಅಬೆದ್‌ನೆಗೋ, ನೀವು ನನ್ನ ದೇವರುಗಳನ್ನು ಪೂಜಿಸುವುದಿಲ್ಲವಂತೆ, ಇದು ನಿಜವೇ? ನಾನು ನಿಲ್ಲಿಸಿದ ಬಂಗಾರದ ವಿಗ್ರಹವನ್ನು ನೀವು ಅಡ್ಡಬಿದ್ದು ಪೂಜಿಸಲಿಲ್ಲವಂತೆ, ಇದು ನಿಜವೇ? 15 ಈಗಲಾದರೋ ತುತ್ತೂರಿ, ಕೊಳಲು, ಕಿನ್ನರಿ, ತಂಬೂರಿ, ವೀಣೆ, ವಾಲಗ ಮುಂತಾದ ಸಕಲ ವಾದ್ಯಗಳ ಧ್ವನಿಯನ್ನು ಕೇಳಿದ ಕೂಡಲೆ ನೀವು ಅಡ್ಡಬಿದ್ದು ಚಿನ್ನದ ವಿಗ್ರಹವನ್ನು ಪೂಜಿಸಬೇಕು. ನಾನು ಮಾಡಿಸಿದ ಈ ವಿಗ್ರಹವನ್ನು ಪೂಜಿಸಲು ನೀವು ಸಿದ್ಧರಾಗಿದ್ದರೆ ಸರಿ. ನೀವು ಅದನ್ನು ಪೂಜಿಸದಿದ್ದರೆ ತಕ್ಷಣ ನಿಮ್ಮನ್ನು ಉರಿಯುವ ಕೊಂಡದಲ್ಲಿ ಎಸೆಯಲಾಗುವುದು. ಆಗ ನನ್ನ ಕೈಯಿಂದ ನಿಮ್ಮನ್ನು ಬಿಡಿಸುವುದು ಯಾವ ದೇವರಿಗೂ ಸಾಧ್ಯವಾಗಲಾರದು” ಎಂದು ಹೇಳಿದನು.
16 ಇದನ್ನು ಕೇಳಿ ಶದ್ರಕ್, ಮೇಶಕ್, ಅಬೇದ್‌ನೆಗೋ ಎಂಬುವವರು ಅರಸನಿಗೆ, “ನೆಬೂಕದ್ನೆಚ್ಚರನೇ, ಈ ವಿಷಯದಲ್ಲಿ ನಾವು ನಿನಗೆ ಏನೂ ಹೇಳಬೇಕಾಗಿಲ್ಲ. 17 ನೀನು ನಮ್ಮನ್ನು ಉರಿಯುವ ಕೊಂಡದಲ್ಲಿ ಎಸೆದರೆ ನಾವು ಆರಾಧಿಸುವ ದೇವರು ನಮ್ಮನ್ನು ರಕ್ಷಿಸಬಲ್ಲನು. ಆತನು ಇಚ್ಛಿಸಿದರೆ ನಮ್ಮನ್ನು ನಿನ್ನ ಕೈಯಿಂದ ಬಿಡಿಸಬಲ್ಲನು. 18 ಅರಸನೇ, ಒಂದುವೇಳೆ ದೇವರು ನಮ್ಮನ್ನು ರಕ್ಷಿಸದಿದ್ದರೂ ನಾವು ನಿನ್ನ ದೇವರುಗಳನ್ನು ಪೂಜಿಸುವುದಿಲ್ಲ. ನೀನು ನಿಲ್ಲಿಸಿದ ಬಂಗಾರದ ವಿಗ್ರಹವನ್ನು ಪೂಜಿಸುವುದಿಲ್ಲ. ಇದು ನಿನಗೆ ತಿಳಿದಿರಲಿ” ಎಂದು ಖಂಡಿತವಾಗಿ ಹೇಳಿದರು.
19 ಆಗ ನೆಬೂಕದ್ನೆಚ್ಚರನಿಗೆ ಬಹಳ ಕೋಪ ಬಂತು. ಶದ್ರಕ್, ಮೇಶಕ್, ಅಬೇದ್‌ನೆಗೋ ಅವರ ವಿರುದ್ಧವಾಗಿ ಅವನ ಮುಖಭಾವವು ಕೆರಳಿತು. ಕುಲುಮೆಯನ್ನು ಏಳರಷ್ಟು ಹೆಚ್ಚಾಗಿ ಉರಿಸಬೇಕೆಂದು ಆಜ್ಞಾಪಿಸಿದನು. 20 ಆಮೇಲೆ ನೆಬೂಕದ್ನೆಚ್ಚರನು, ಶದ್ರಕ್, ಮೇಶಕ್, ಅಬೇದ್‌ನೆಗೋ ಇವರುಗಳನ್ನು ಬಂಧಿಸಿ ಉರಿಯುವ ಕೊಂಡದಲ್ಲಿ ಎಸೆಯಬೇಕೆಂದು ತನ್ನ ಸೈನ್ಯದಲ್ಲಿದ್ದ ಅತಿ ಬಲಶಾಲಿಗಳಾದ ಕೆಲವರಿಗೆ ಆಜ್ಞಾಪಿಸಿದನು.
21 ಅವರು ಶದ್ರಕ್, ಮೇಶಕ್, ಅಬೇದ್‌ನೆಗೋ ಎಂಬವರನ್ನು ಚೆನ್ನಾಗಿ ಬಿಗಿದುಕಟ್ಟಿ ಉರಿಯುವ ಕೊಂಡದಲ್ಲಿ ಎಸೆದರು. ಅವರು ತಮ್ಮ ಶಲ್ಯ, ಇಜಾರು, ಟೊಪ್ಪಿಗೆ ಮೊದಲಾದ ಉಡುಪನ್ನು ಧರಿಸಿಕೊಂಡಿದ್ದರು. 22 ಆಜ್ಞೆಯನ್ನು ಕೊಟ್ಟಾಗ ಅರಸನು ತುಂಬ ಕೋಪದಲ್ಲಿದ್ದನು. ಆದ್ದರಿಂದ ತಕ್ಷಣ ಕುಲುಮೆಯಲ್ಲಿ ಅತಿ ಹೆಚ್ಚು ಬೆಂಕಿಯನ್ನು ಉರಿಸಲಾಯಿತು. ಆ ಜ್ವಾಲೆ ಎಷ್ಟು ಭಯಂಕರವಾಗಿತ್ತೆಂದರೆ ಶದ್ರಕ್, ಮೇಶಕ್, ಅಬೇದ್‌ನೆಗೋ ಇವರುಗಳನ್ನು ಕುಲುಮೆಯಲ್ಲಿ ಎಸೆಯಲು ಹೋದ ಶಕ್ತಿಶಾಲಿಗಳಾದ ಸೈನಿಕರೇ ಅದರ ತಾಪಕ್ಕೆ ಸತ್ತುಹೋದರು. 23 ಶದ್ರಕ್, ಮೇಶಕ್, ಅಬೇದ್‌ನೆಗೋ ಈ ಮೂವರು ಕಟ್ಟಲ್ಪಟ್ಟವರಾಗಿ ಧಗಧಗನೆ ಉರಿಯುವ ಬೆಂಕಿಯಲ್ಲಿ ಬಿದ್ದುಬಿಟ್ಟರು.
24 ಅರಸನಾದ ನೆಬೂಕದ್ನೆಚ್ಚರನು ಬೆಚ್ಚಿ ತಟ್ಟನೆ ಎದ್ದುನಿಂತನು. ಅವನು ಆಶ್ಚರ್ಯಚಕಿತನಾಗಿ ತನ್ನ ಮಂತ್ರಿಗಳನ್ನು, “ನಾವು ಕೇವಲ ಮೂರು ಜನರನ್ನು ಕಟ್ಟಿದೆವು, ಕೇವಲ ಮೂರು ಜನರನ್ನು ಬೆಂಕಿಯಲ್ಲಿ ಎಸೆದೆವು. ಹೌದಲ್ಲವೇ?” ಎಂದು ಕೇಳಿದನು.
ಅವನ ಮಂತ್ರಿಗಳು, “ಹೌದು, ಮಹಾರಾಜನೇ” ಎಂದು ಉತ್ತರಿಸಿದರು.
25 ಆಗ ಅರಸನು, “ನೋಡಿರಿ, ನಾಲ್ಕು ಜನರು ಬೆಂಕಿಯಲ್ಲಿ ತಿರುಗಾಡುತ್ತಿರುವುದು ನನಗೆ ಕಾಣುತ್ತಿದೆ. ಅವರು ಕಟ್ಟಲ್ಪಟ್ಟಿಲ್ಲ. ಅವರನ್ನು ಬೆಂಕಿಯು ಸುಟ್ಟಿಲ್ಲ. ನಾಲ್ಕನೆಯವನು ದೇವಕುಮಾರನಂತೆ ಕಾಣುತ್ತಾನೆ” ಎಂದು ಹೇಳಿದನು.
26 ಆಗ ನೆಬೂಕದ್ನೆಚ್ಚರನು ಉರಿಯುವ ಕೊಂಡದ ಬಾಯಿಯ ಬಳಿಗೆ ಹೋಗಿ, “ಮಹೋನ್ನತನಾದ ದೇವರ ಸೇವಕರಾದ ಶದ್ರಕ್, ಮೇಶಕ್, ಅಬೆದ್‌ನೆಗೋ ಎಂಬವರೇ ಬನ್ನಿ, ಹೊರಗೆ ಬನ್ನಿ” ಎಂದು ಕೂಗಿದನು.
ಶದ್ರಕ್, ಮೇಶಕ್, ಅಬೇದ್‌ನೆಗೋ ಈ ಮೂವರು ಬೆಂಕಿಯೊಳಗಿಂದ ಹೊರಗೆ ಬಂದರು. 27 ಅವರು ಹೊರಗೆ ಬಂದ ಮೇಲೆ ಉಪರಾಜರು, ನಾಯಕರು, ದೇಶಾಧಿಪತಿಗಳು, ಮಂತ್ರಿಗಳು ಮತ್ತು ಇತರರು ಅವರ ಸುತ್ತಲೂ ನೆರೆದರು. ಶದ್ರಕ್, ಮೇಶಕ್, ಅಬೇದ್‌ನೆಗೋ ಇವರುಗಳನ್ನು ಬೆಂಕಿಯು ಸುಟ್ಟಿಲ್ಲ. ಅವರ ದೇಹಕ್ಕೆ ಬೆಂಕಿಯು ಮುಟ್ಟಿಲ್ಲ. ಅವರ ಕೂದಲಿಗೂ ವಸ್ತ್ರಗಳಿಗೂ ಬೆಂಕಿಯು ತಾಕಿಲ್ಲ. ಬೆಂಕಿಯ ಸಮೀಪಕ್ಕೆ ಹೋದ ವಾಸನೆಯೂ ಅವರಿಗೆ ಮುಟ್ಟಿಲ್ಲ ಎಂಬುದನ್ನು ಅವರು ತಿಳಿದುಕೊಂಡರು.
28 ಆಗ ನೆಬೂಕದ್ನೆಚ್ಚರನು, “ಶದ್ರಕ್, ಮೇಶಕ್, ಅಬೇದ್‌ನೆಗೋ ಇವರುಗಳ ದೇವರಿಗೆ ಸ್ತೋತ್ರವಾಗಲಿ. ಅವರ ದೇವರು ತನ್ನ ದೂತನನ್ನು ಕಳುಹಿಸಿ ತನ್ನ ಸೇವಕರನ್ನು ಬೆಂಕಿಯಿಂದ ರಕ್ಷಿಸಿದ್ದಾನೆ. ಈ ಮೂರು ಜನರು ತಮ್ಮ ದೇವರ ಮೇಲೆ ವಿಶ್ವಾಸವಿಟ್ಟರು. ಅವರು ನನ್ನ ಆಜ್ಞೆಯನ್ನು ಪಾಲಿಸಲು ಒಪ್ಪಲಿಲ್ಲ. ಬೇರೆ ಯಾವ ದೇವರನ್ನೂ ಪೂಜಿಸುವುದಕ್ಕೆ ಅಥವಾ ಸೇವಿಸುವುದಕ್ಕೆ ಬದಲಾಗಿ ಸಾಯಲು ಅವರು ಸಿದ್ಧರಾಗಿದ್ದರು. 29 ನಾನು ಈಗ ಸಕಲ ಜನಾಂಗ, ಕುಲ, ಭಾಷೆಗಳ ಜನರಲ್ಲಿ ಯಾರಾದರೂ ಶದ್ರಕ್, ಮೇಶಕ್, ಅಬೇದ್‌ನೆಗೋ ಇವರ ದೇವರ ವಿರುದ್ಧವಾಗಿ ಮಾತನಾಡಿದರೆ ಅವರನ್ನು ತುಂಡುತುಂಡಾಗಿ ಕತ್ತರಿಸಿ ಅವರ ಮನೆಗಳನ್ನು ತಿಪ್ಪೆಯನ್ನಾಗಿ ಮಾಡಬೇಕೆಂಬ ಆಜ್ಞೆಯನ್ನು ವಿಧಿಸುತ್ತೇನೆ. ಬೇರೆ ಯಾವ ದೇವರೂ ತನ್ನ ಭಕ್ತರನ್ನು ಈ ರೀತಿ ರಕ್ಷಿಸಲಾರನು” ಎಂದು ಹೇಳಿದನು. 30 ಬಳಿಕ ರಾಜನು ಶದ್ರಕ್, ಮೇಶಕ್ ಮತ್ತು ಅಬೇದ್‌ನೆಗೋ ಈ ಮೂವರಿಗೆ ಬಾಬಿಲೋನ್ ಸಂಸ್ಥಾನದಲ್ಲಿ ಹೆಚ್ಚು ಮಹತ್ವದ ಪದವಿಗಳನ್ನು ಕೊಟ್ಟನು.
ಐದನೆಯ ಭಾಗ
(ಕೀರ್ತನೆಗಳು 107–150)
107 ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ! ಆತನು ಒಳ್ಳೆಯವನು!
ಆತನ ಪ್ರೀತಿ ಶಾಶ್ವತವಾದದ್ದು!
2 ಯೆಹೋವನಿಂದ ರಕ್ಷಿಸಲ್ಪಟ್ಟ ಪ್ರತಿಯೊಬ್ಬರೂ ಆತನಿಗೆ ಕೃತಜ್ಞತಾಸ್ತುತಿ ಮಾಡಲಿ.
ಯೆಹೋವನು ಅವರನ್ನು ವೈರಿಗಳಿಂದ ಬಿಡಿಸಿದನು.
3 ಯೆಹೋವನು ತನ್ನ ಜನರನ್ನು ಅನೇಕ ದೇಶಗಳಿಂದ ಒಟ್ಟುಗೂಡಿಸಿದನು;
ಪೂರ್ವಪಶ್ಚಿಮಗಳಿಂದಲೂ ಉತ್ತರ ದಕ್ಷಿಣಗಳಿಂದಲೂ ಬರಮಾಡಿದನು.
4 ಅವರಲ್ಲಿ ಕೆಲವರು ಮರುಭೂಮಿಯಲ್ಲಿ ಅಲೆದಾಡಿದರು.
ತಾವು ನೆಲೆಸತಕ್ಕ ಪಟ್ಟಣಕ್ಕಾಗಿ ಅವರು ಹುಡುಕಿದರೂ ಅದು ಅವರಿಗೆ ಕಾಣಲಿಲ್ಲ.
5 ಅವರು ಹಸಿವೆಯಿಂದಲೂ
ಬಾಯಾರಿಕೆಯಿಂದಲೂ ಬಲಹೀನರಾಗತೊಡಗಿದರು.
6 ಆಗ ಅವರು ಯೆಹೋವನಿಗೆ ಮೊರೆಯಿಡಲು
ಆತನು ಅವರನ್ನು ಎಲ್ಲಾ ಆಪತ್ತುಗಳಿಂದ ರಕ್ಷಿಸಿದನು.
7 ಅವರು ನೆಲಸತಕ್ಕ ಪಟ್ಟಣಕ್ಕೆ ದೇವರು ಅವರನ್ನು ನೇರವಾಗಿ ನಡೆಸಿದನು.
8 ಯೆಹೋವನ ಪ್ರೀತಿಗಾಗಿಯೂ ತನ್ನ ಜನರಿಗೋಸ್ಕರ ಆತನು ಮಾಡುವ
ಅದ್ಭುತಕಾರ್ಯಗಳಿಗಾಗಿಯೂ ಆತನಿಗೆ ಕೃತಜ್ಞತಾಸ್ತುತಿಮಾಡಿರಿ.
9 ಆತನು ಬಾಯರಿದವರನ್ನು ನೀರಿನಿಂದಲೂ
ಹಸಿದವರನ್ನು ಮೃಷ್ಟಾನ್ನದಿಂದಲೂ ತೃಪ್ತಿಗೊಳಿಸುವನು.
10 ದೇವಜನರಲ್ಲಿ ಕೆಲವರು ಸೆರೆಯಾಳುಗಳಾಗಿದ್ದರು;
ಕಾರ್ಗತ್ತಲೆಯ ಸೆರೆಮನೆಗಳಲ್ಲಿ ಬಂಧಿತರಾಗಿದ್ದರು.
11 ಯಾಕೆಂದರೆ ಅವರು ಯೆಹೋವನ ಆಜ್ಞೆಗಳಿಗೆ ವಿರೋಧವಾಗಿ ದಂಗೆ ಎದ್ದರು.
ಮಹೋನ್ನತನಾದ ದೇವರ ಉಪದೇಶವನ್ನು ತಿರಸ್ಕರಿಸಿದರು.
12 ಅವರ ಕಾರ್ಯಗಳ ನಿಮಿತ್ತವೇ
ದೇವರು ಅವರ ಜೀವನವನ್ನು ಸಂಕಷ್ಟಕ್ಕೆ ಒಳಪಡಿಸಿದನು.
ಅವರು ಎಡವಿಬಿದ್ದರು,
ಅವರಿಗೆ ಸಹಾಯಮಾಡಲು ಯಾರೂ ಇರಲಲ್ಲ.
13 ಅವರು ಆಪತ್ತಿನಲ್ಲಿದ್ದಾಗ ಯೆಹೋವನಿಗೆ ಮೊರೆಯಿಟ್ಟರು.
ಆತನು ಅವರನ್ನು ಆಪತ್ತುಗಳಿಂದ ಬಿಡಿಸಿದನು.
14 ಆತನು ಅವರನ್ನು ಕಾರ್ಗತ್ತಲೆಯ ಸೆರೆಮನೆಗಳಿಂದ ಹೊರತಂದನು;
ಕಟ್ಟಿದ ಹಗ್ಗಗಳನ್ನು ಕಿತ್ತುಹಾಕಿದನು.
15 ಯೆಹೋವನ ಪ್ರೀತಿಗಾಗಿಯೂ ತನ್ನ ಜನರಿಗೋಸ್ಕರ
ಆತನು ಮಾಡುವ ಅದ್ಭುತಕಾರ್ಯಗಳಿಗಾಗಿಯೂ ಆತನಿಗೆ ಕೃತಜ್ಞತಾಸ್ತುತಿಮಾಡಿರಿ.
16 ನಮ್ಮ ಶತ್ರುಗಳನ್ನು ಸೋಲಿಸಲು ದೇವರು ನಮಗೆ ಸಹಾಯಮಾಡುವನು.
ಅವರ ತಾಮ್ರದ ಬಾಗಿಲುಗಳನ್ನು ಆತನು ಮುರಿದುಹಾಕಬಲ್ಲನು.
ಅವರ ಬಾಗಿಲುಗಳ ಮೇಲಿರುವ ಕಬ್ಬಿಣದ ಸರಳುಗಳನ್ನು ಆತನು ನುಚ್ಚುನೂರು ಮಾಡಬಲ್ಲನು.
17 ಕೆಲವರು ತಮ್ಮ ಪಾಪಗಳಿಂದಲೂ
ದೋಷಗಳಿಂದಲೂ ಮೂಢರಾದರು.
18 ಆ ಜನರು ಊಟವನ್ನು ನಿರಾಕರಿಸಿದ್ದರಿಂದ
ಮರಣಾವಸ್ಥೆಗೆ ಬಂದರು.
19 ಅವರು ಆಪತ್ತಿನಲ್ಲಿ ಯೆಹೋವನಿಗೆ ಮೊರೆಯಿಟ್ಟರು.
ಆತನು ಅವರನ್ನು ಆಪತ್ತುಗಳಿಂದ ಬಿಡಿಸಿದನು.
20 ಆತನು ಆಜ್ಞಾಪಿಸಲು ಜನರು ಗುಣಹೊಂದಿದರು.
ಸಮಾಧಿಯಿಂದ ತಪ್ಪಿಸಿಕೊಂಡರು.
21 ಯೆಹೋವನ ಪ್ರೀತಿಗಾಗಿಯೂ ತನ್ನ ಜನರಿಗೋಸ್ಕರ
ಆತನು ಮಾಡುವ ಅದ್ಭುತಕಾರ್ಯಗಳಿಗಾಗಿಯೂ ಆತನಿಗೆ ಕೃತಜ್ಞತಾಸ್ತುತಿಮಾಡಿರಿ.
22 ಯೆಹೋವನ ಕಾರ್ಯಗಳಿಗೆ ಕೃತಜ್ಞತಾ ಯಜ್ಞಗಳನ್ನು ಅರ್ಪಿಸಿರಿ.
ಆತನ ಕಾರ್ಯಗಳ ಬಗ್ಗೆ ಹರ್ಷದಿಂದ ತಿಳಿಸಿರಿ.
23 ಕೆಲವರು ತಮ್ಮ ಉದ್ಯೋಗಗಳ ನಿಮಿತ್ತ
ಸಮುದ್ರಯಾನ ಮಾಡಿದರು.
24 ಯೆಹೋವನು ಮಾಡಬಲ್ಲ ಕಾರ್ಯಗಳನ್ನು ಅವರು ನೋಡಿದರು.
ಆತನು ಸಮುದ್ರದಲ್ಲಿ ಮಾಡಿದ ಅದ್ಭುತಕಾರ್ಯಗಳನ್ನು ಅವರು ಕಣ್ಣಾರೆ ಕಂಡರು.
25 ಆತನು ಆಜ್ಞಾಪಿಸಲು ಬಲವಾದ ಗಾಳಿ ಬೀಸತೊಡಗಿತು;
ಅಲೆಗಳು ದೊಡ್ಡದಾಗತೊಡಗಿದವು.
26 ಅಲೆಗಳು ಆಕಾಶದಷ್ಟು ಎತ್ತರವಾಗಿದ್ದವು.
ಭಯಂಕರವಾದ ಬಿರುಗಾಳಿಯಿಂದ ಅವರು ಭಯಗೊಂಡರು.
27 ಅವರು ಅಮಲೇರಿದವರಂತೆ ಎಡವಿಬೀಳತೊಡಗಿದರು;
ನಾವಿಕರಾಗಿದ್ದ ಅವರ ಕೌಶಲ್ಯವು ನಿಷ್ಪ್ರಯೋಜಕವಾಯಿತು.
28 ಆಗ ಅವರು ಯೆಹೋವನಿಗೆ ಮೊರೆಯಿಡಲು
ಆತನು ಅವರನ್ನು ಆಪತ್ತುಗಳಿಂದ ಬಿಡಿಸಿದನು.
29 ಆತನು ಬಿರುಗಾಳಿಯನ್ನು ನಿಲ್ಲಿಸಿ
ಅಲೆಗಳನ್ನು ಶಾಂತಗೊಳಿಸಿದನು.
30 ಸಮುದ್ರವು ಶಾಂತವಾದದ್ದರಿಂದ ನಾವಿಕರು ಬಹು ಸಂತೋಷಪಟ್ಟರು.
ಅವರು ತಲುಪಬೇಕಿದ್ದ ಸ್ಥಳಕ್ಕೆ ಆತನು ಅವರನ್ನು ಸುರಕ್ಷಿತವಾಗಿ ನಡೆಸಿದನು.
31 ಯೆಹೋವನ ಪ್ರೀತಿಗಾಗಿಯೂ ತನ್ನ ಜನರಿಗೋಸ್ಕರ
ಆತನು ಮಾಡುವ ಅದ್ಭುತಕಾರ್ಯಗಳಿಗಾಗಿಯೂ ಆತನಿಗೆ ಕೃತಜ್ಞತಾಸ್ತುತಿ ಮಾಡಿರಿ.
32 ಆತನನ್ನು ಮಹಾಸಭೆಯಲ್ಲಿ ಸ್ತುತಿಸಿರಿ.
ಹಿರಿಯರ ಸಭೆಯಲ್ಲಿ ಆತನನ್ನು ಕೊಂಡಾಡಿರಿ.
33 ಆತನು ನದಿಗಳನ್ನು ಮರಳುಗಾಡನ್ನಾಗಿ ಮಾರ್ಪಡಿಸಿದನು;
ಹರಿಯುವ ಒರತೆಗಳನ್ನು ತಡೆದು ನಿಲ್ಲಿಸಿದನು.
34 ಆತನು ಫಲವತ್ತಾದ ಭೂಮಿಯನ್ನು ಉಪಯೋಗವಿಲ್ಲದ ಉಪ್ಪುಭೂಮಿಯನ್ನಾಗಿ ಪರಿವರ್ತಿಸಿದನು,
ಯಾಕೆಂದರೆ ಅಲ್ಲಿ ಕೆಟ್ಟಜನರು ನೆಲೆಸಿದ್ದರು.
35 ಆತನು ಮರಳುಗಾಡನ್ನು ಸರೋವರಗಳುಳ್ಳ ನಾಡನ್ನಾಗಿ ಪರಿವರ್ತಿಸಿದನು;
ಒಣನೆಲದಿಂದ ನೀರಿನ ಒರತೆಗಳನ್ನು ಹರಿಯಮಾಡಿದನು.
36 ಆತನು ಹಸಿದವರನ್ನು ಒಳ್ಳೆಯ ನಾಡಿಗೆ ನಡೆಸಿದನು.
ಅವರು ಅಲ್ಲಿ ನೆಲೆಸಿ ಪಟ್ಟಣವನ್ನು ಕಟ್ಟಿದರು.
37 ಅವರು ಹೊಲಗಳಲ್ಲಿ ಬೀಜ ಬಿತ್ತಿ
ತೋಟಗಳಲ್ಲಿ ದ್ರಾಕ್ಷಾಲತೆಗಳನ್ನು ನೆಟ್ಟು ಒಳ್ಳೆಯ ಸುಗ್ಗಿಗಳನ್ನು ಪಡೆದರು.
38 ಆತನ ಆಶೀರ್ವಾದದಿಂದ ಅವರ ಕುಟುಂಬಗಳು ವೃದ್ಧಿಯಾದವು.
ಅವರ ಪಶುಗಳು ಅಸಂಖ್ಯಾತಗೊಂಡವು.
39 ವಿಪತ್ತುಗಳಿಂದಲೂ ತೊಂದರೆಗಳಿಂದಲೂ
ಅವರ ಕುಟುಂಬಗಳು ಚಿಕ್ಕದಾಗಿದ್ದವು; ಬಲಹೀನವಾಗಿದ್ದವು.
40 ಆತನು ಅವರ ನಾಯಕರುಗಳಿಗೆ ಅವಮಾನ ಮಾಡಿದನು;
ದಾರಿಗಳಿಲ್ಲದ ಅರಣ್ಯದಲ್ಲಿ ಅಲೆದಾಡುವಂತೆ ಅವರನ್ನು ತೊರೆದುಬಿಟ್ಟನು.
41 ಬಳಿಕ ಆತನು ದೀನರನ್ನು ಅವರ ಸಂಕಟದಿಂದ ಬಿಡಿಸಿದನು.
ಈಗ ಅವರ ಕುಟುಂಬಗಳು ಕುರಿಮಂದೆಗಳಂತೆ ದೊಡ್ಡದಾದವು.
42 ಒಳ್ಳೆಯವರು ಇದನ್ನು ಕಂಡು ಸಂತೋಷಪಡುವರು.
ದುಷ್ಟರು ಇದನ್ನು ಕಂಡು ತಮ್ಮ ಬಾಯಿಗಳನ್ನು ಮುಚ್ಚಿಕೊಳ್ಳುವರು.
43 ಜ್ಞಾನಿಯು ಇವುಗಳನ್ನು ನೆನಪು ಮಾಡಿಕೊಂಡು
ದೇವರ ನಿಜಪ್ರೀತಿಯನ್ನು ಅರ್ಥಮಾಡಿಕೊಳ್ಳುವನು.
Kannada Holy Bible: Easy-to-Read Version. All rights reserved. © 1997 Bible League International