M’Cheyne Bible Reading Plan
ಎಲೀಯ ಮತ್ತು ಬರಗಾಲ
17 ಎಲೀಯನು ಗಿಲ್ಯಾದಿನ ತಿಷ್ಬೀ ಪಟ್ಟಣದ ಒಬ್ಬ ಪ್ರವಾದಿ. ಎಲೀಯನು ರಾಜನಾದ ಅಹಾಬನಿಗೆ, “ನಾನು ಇಸ್ರೇಲರ ದೇವರಾದ ಯೆಹೋವನ ಸೇವಕನಾಗಿದ್ದೇನೆ. ಮುಂದಿನ ಕೆಲವು ವರ್ಷಗಳವರೆಗೆ ಹಿಮವಾಗಲಿ ಮಳೆಯಾಗಲಿ ಬೀಳುವುದಿಲ್ಲವೆಂದು ನಾನು ಆತನ ಹೆಸರಿನ ಮೇಲೆ ಪ್ರಮಾಣ ಮಾಡುತ್ತೇನೆ. ನಾನು ಬೀಳುವಂತೆ ಮಳೆಗೆ ಆಜ್ಞಾಪಿಸಿದರೆ ಮಾತ್ರ ಅದು ಬೀಳುತ್ತದೆ” ಎಂದು ಹೇಳಿದನು.
2 ನಂತರ ಯೆಹೋವನು ಎಲೀಯನಿಗೆ, 3 “ಈ ಸ್ಥಳವನ್ನು ತ್ಯಜಿಸಿ, ಪೂರ್ವದಿಕ್ಕಿಗೆ ಹೋಗು. ಕೆರೀತ್ ಹಳ್ಳದ ಹತ್ತಿರ ಅಡಗಿಕೊ. ಆ ಹಳ್ಳವು ಜೋರ್ಡನ್ ನದಿಯ ಪೂರ್ವದಲ್ಲಿದೆ. 4 ನೀನು ಆ ಹಳ್ಳದ ನೀರನ್ನು ಕುಡಿಯಬಹುದು. ಆ ಸ್ಥಳದಲ್ಲಿರುವ ನಿನಗೆ ಆಹಾರವನ್ನು ತಂದುಕೊಡಬೇಕೆಂದು ನಾನು ಕಾಗೆಗಳಿಗೆ ಆಜ್ಞಾಪಿಸಿದ್ದೇನೆ” ಎಂದು ಹೇಳಿದನು. 5 ಆದ್ದರಿಂದ ಯೆಹೋವನು ಹೇಳಿದಂತೆ ಅವನು ಮಾಡಿದನು. ಅವನು ಜೋರ್ಡನ್ ನದಿಯ ಪೂರ್ವಕ್ಕಿರುವ ಕೆರೀತ್ ಹಳ್ಳದ ಹತ್ತಿರ ವಾಸಿಸಲು ಹೋದನು. 6 ಕಾಗೆಗಳು ಪ್ರತಿ ಮುಂಜಾನೆ ಮತ್ತು ಸಂಜೆ ಎಲೀಯನಿಗೆ ರೊಟ್ಟಿ ಮತ್ತು ಮಾಂಸವನ್ನು ತಂದುಕೊಡುತ್ತಿದ್ದವು. ಎಲೀಯನು ಹಳ್ಳದ ನೀರನ್ನು ಕುಡಿಯುತ್ತಿದ್ದನು.
7 ಅಲ್ಲಿಯೂ ಮಳೆಯಿಲ್ಲದ್ದರಿಂದ, ಸ್ವಲ್ಪಕಾಲದ ಬಳಿಕ ಹಳ್ಳವೂ ಬತ್ತಿಹೋಯಿತು. 8 ನಂತರ ಯೆಹೋವನು ಎಲೀಯನಿಗೆ, 9 “ಚೀದೋನ್ಯರ ಚಾರೆಪ್ತಗೆ ಹೋಗಿ ಅಲ್ಲಿ ವಾಸಮಾಡು. ಆ ಸ್ಥಳದಲ್ಲಿ ಒಬ್ಬ ವಿಧವೆಯು ವಾಸಿಸುತ್ತಾಳೆ. ನಿನಗೆ ಆಹಾರವನ್ನು ಕೊಡುವಂತೆ ಅವಳಿಗೆ ನಾನು ಆಜ್ಞಾಪಿಸಿದ್ದೇನೆ” ಎಂದು ಹೇಳಿದನು.
10 ಎಲೀಯನು ಚಾರೆಪ್ತಗೆ ಹೋದನು. ಅವನು ಊರು ಬಾಗಿಲಿಗೆ ಹೋದಾಗ, ಅಲ್ಲಿ ಒಬ್ಬ ವಿಧವೆಯನ್ನು ನೋಡಿದನು. ಆ ಸ್ತ್ರೀಯು ಬೆಂಕಿಗಾಗಿ ಸೌದೆಯನ್ನು ಒಟ್ಟುಗೂಡಿಸುತ್ತಿದ್ದಳು. ಎಲೀಯನು ಅವಳಿಗೆ, “ನನಗೆ ಕುಡಿಯುವುದಕ್ಕೆ ಚಂಬಿನಲ್ಲಿ ಸ್ವಲ್ಪ ನೀರನ್ನು ನೀನು ತರುವೆಯಾ?” ಎಂದು ಕೇಳಿದನು. 11 ಆ ಸ್ತ್ರೀಯು ಅವನಿಗೆ ನೀರನ್ನು ತರಲು ಹೋಗುತ್ತಿರುವಾಗ, ಎಲೀಯನು, “ದಯವಿಟ್ಟು ಒಂದು ತುಂಡು ರೊಟ್ಟಿಯನ್ನು ತೆಗೆದುಕೊಂಡು ಬಾ” ಎಂದು ಹೇಳಿದನು.
12 ಆ ಸ್ತ್ರೀಯು, “ನನ್ನಲ್ಲಿ ರೊಟ್ಟಿಯಿಲ್ಲವೆಂದು ನಿನ್ನ ದೇವರಾದ ಯೆಹೋವನ ಸನ್ನಿಧಿಯಲ್ಲಿ ನಾನು ಪ್ರಮಾಣ ಮಾಡುತ್ತೇನೆ. ನನ್ನ ಮಡಕೆಯಲ್ಲಿ ಸ್ವಲ್ಪ ಹಿಟ್ಟು ಮಾತ್ರ ಇದೆ; ಪಾತ್ರೆಯಲ್ಲಿ ಸ್ವಲ್ಪ ಆಲೀವ್ ಎಣ್ಣೆಯಿದೆ. ಬೆಂಕಿ ಹೊತ್ತಿಸಲು ಸೌದೆ ಚೂರುಗಳನ್ನು ಆಯ್ದುಕೊಳ್ಳವುದಕ್ಕಾಗಿ ನಾನು ಈ ಸ್ಥಳಕ್ಕೆ ಬಂದೆ. ಸೌಧೆಯನ್ನು ನಾನು ಮನೆಗೆ ತೆಗೆದುಕೊಂಡು ಹೋಗಿ, ನಮ್ಮ ಕೊನೆಯ ಊಟವನ್ನು ಸಿದ್ಧಪಡಿಸುತ್ತೇನೆ. ನನ್ನ ಮಗ ಮತ್ತು ನಾನು ಅದನ್ನು ತಿಂದು, ನಂತರ ಹಸಿವಿನಿಂದ ಸಾಯುತ್ತೇವೆ” ಎಂದು ಹೇಳಿದಳು.
13 ಎಲೀಯನು ಆ ಸ್ತ್ರೀಗೆ, “ಚಿಂತಿಸದಿರು, ಮನೆಗೆ ಹೋಗಿ ನೀನು ಹೇಳಿದಂತೆ ಆಹಾರವನ್ನು ಸಿದ್ಧಪಡಿಸು. ಆದರೆ ನಿನ್ನಲ್ಲಿರುವ ಹಿಟ್ಟಿನಿಂದ ಮೊದಲು ಒಂದು ಚಿಕ್ಕ ರೊಟ್ಟಿಯನ್ನು ಮಾಡು. ಆ ರೊಟ್ಟಿಯನ್ನು ನನಗೆ ತಂದುಕೊಡು; ನಂತರ ನಿನಗೆ ಮತ್ತು ನಿನ್ನ ಮಗನಿಗೆ ಅಡಿಗೆ ಮಾಡಿಕೋ. 14 ಇಸ್ರೇಲಿನ ದೇವರಾದ ಯೆಹೋವನು ಹೇಳುವುದೇನೆಂದರೆ, ‘ಆ ಮಡಕೆಯಲ್ಲಿರುವ ಹಿಟ್ಟು ಎಂದೆಂದಿಗೂ ಖಾಲಿಯಾಗುವುದಿಲ್ಲ. ಆ ಪಾತ್ರೆಯಲ್ಲಿ ಯಾವಾಗಲೂ ಎಣ್ಣೆಯಿರುತ್ತದೆ. ಯೆಹೋವನು ಭೂಮಿಯ ಮೇಲೆ ಮಳೆಯನ್ನು ಸುರಿಸುವ ತನಕ ಇದು ಹೀಗೆಯೇ ಮುಂದುವರಿಯುತ್ತದೆ’” ಎಂದು ಹೇಳಿದನು.
15 ಆ ಸ್ತ್ರೀಯು ತನ್ನ ಮನೆಗೆ ಹೋದಳು. ಎಲೀಯನು ಹೇಳಿದಂತೆ ಆಕೆಯು ಮಾಡಿದಳು. ಎಲೀಯನು, ಆ ಸ್ತ್ರೀಯು ಮತ್ತು ಅವಳ ಮಗನು ಅನೇಕ ದಿನಗಳಿಗಾಗುವಷ್ಟು ಆಹಾರವನ್ನು ಹೊಂದಿದ್ದರು. 16 ಮಡಕೆಯಲ್ಲಿದ್ದ ಹಿಟ್ಟು ಮತ್ತು ಪಾತ್ರೆಯಲ್ಲಿದ್ದ ಎಣ್ಣೆ ಎಂದೆಂದಿಗೂ ಖಾಲಿಯಾಗಲಿಲ್ಲ. ಯೆಹೋವನು ಎಲೀಯನ ಮೂಲಕ ಹೇಳಿದ್ದಂತೆಯೇ ಇದು ಸಂಭವಿಸಿತು.
17 ಸ್ವಲ್ಪಕಾಲದ ತರುವಾಯ ಆ ಸ್ತ್ರೀಯ ಮಗನು ಅಸ್ವಸ್ಥನಾದನು. ಅವನಿಗೆ ರೋಗವು ಹೆಚ್ಚಾಗುತ್ತಲೇ ಇತ್ತು. ಕೊನೆಗೆ ಆ ಬಾಲಕನು ಉಸಿರಾಡುವುದನ್ನೇ ನಿಲ್ಲಿಸಿದನು. 18 ಆ ಸ್ತ್ರೀಯು ಎಲೀಯನಿಗೆ, “ನೀನು ದೇವಮನುಷ್ಯ. ನೀನು ನನಗೆ ಸಹಾಯಮಾಡಲು ಬಂದಿರುವೆಯಾ? ಅಥವಾ ನನ್ನ ಪಾಪಗಳನ್ನೆಲ್ಲ ನನ್ನ ನೆನಪಿಗೆ ತಂದುಕೊಳ್ಳುವಂತೆ ಮಾಡಲು, ನನ್ನ ಮಗನಿಗೆ ಸಾವನ್ನು ಉಂಟುಮಾಡುವುದಕ್ಕಾಗಿಯೇ ಬಂದಿರುವೆಯಾ?” ಎಂದು ಕೇಳಿದಳು.
19 ಎಲೀಯನು ಅವಳಿಗೆ, “ನಿನ್ನ ಮಗನನ್ನು ನನಗೆ ಕೊಡು” ಎಂದು ಹೇಳಿದನು. ಎಲೀಯನು ಬಾಲಕನನ್ನು ಅವಳಿಂದ ತೆಗೆದುಕೊಂಡು, ಮೇಲಂತಸ್ತಿಗೆ ಹೋದನು. ಅವನು ನೆಲೆಸಿದ್ದ ಕೊಠಡಿಯ ಹಾಸಿಗೆಯ ಮೇಲೆ ಆ ಬಾಲಕನನ್ನು ಮಲಗಿಸಿದನು. 20 ನಂತರ ಎಲೀಯನು, “ನನ್ನ ದೇವರಾದ ಯೆಹೋವನೇ, ಈ ವಿಧವೆಯು ತನ್ನ ಮನೆಯಲ್ಲಿ ನನಗೆ ಸ್ಥಳವನ್ನು ಕೊಟ್ಟಿದ್ದಾಳೆ. ನೀನು ಅವಳಿಗೆ ಈ ಕೇಡನ್ನು ಮಾಡುವೆಯಾ? ನೀನು ಅವಳ ಮಗುವನ್ನು ಸಾಯಿಸುವೆಯಾ?” ಎಂದು ಪ್ರಾರ್ಥಿಸಿದನು. 21 ಬಳಿಕ ಆ ಬಾಲಕನ ಮೇಲೆ ಎಲೀಯನು ಮೂರು ಬಾರಿ ಬೋರಲಬಿದ್ದು, “ನನ್ನ ದೇವರಾದ ಯೆಹೋವನೇ, ಈ ಬಾಲಕನಿಗೆ ಮತ್ತೆ ಜೀವವನ್ನು ಕೊಡು” ಎಂದು ಪ್ರಾರ್ಥಿಸಿದನು.
22 ಯೆಹೋವನು ಎಲೀಯನ ಪ್ರಾರ್ಥನೆಗೆ ಕಿವಿಗೊಟ್ಟನು. ಆ ಬಾಲಕನು ಮತ್ತೆ ಉಸಿರಾಡಲಾರಂಭಿಸಿದನು. ಅವನು ಜೀವಂತನಾದನು! 23 ಎಲೀಯನು ಆ ಬಾಲಕನನ್ನು ಕೆಳ ಅಂತಸ್ತಿಗೆ ಕರೆದೊಯ್ದನು. ಎಲೀಯನು ಬಾಲಕನನ್ನು ಅವನ ತಾಯಿಗೆ ಒಪ್ಪಿಸಿ, “ನಿನ್ನ ಮಗ ಬದುಕಿದ್ದಾನೆ, ನೋಡು” ಎಂದು ಹೇಳಿದನು.
24 ಆ ಸ್ತ್ರೀಯು, “ಈಗ ನಿಜವಾಗಿಯೂ ನೀನು ದೇವಮನುಷ್ಯನೆಂಬುದು ನನಗೆ ತಿಳಿಯಿತು. ಯೆಹೋವನು ನಿನ್ನ ಮೂಲಕ ನಿಜವಾಗಿಯೂ ಮಾತಾಡುತ್ತಾನೆಂಬುದು ನನಗೆ ತಿಳಿದಿದೆ” ಎಂದು ಹೇಳಿದಳು.
4 ಯಜಮಾನರೇ, ನಿಮ್ಮ ಸೇವಕರಿಗೆ ನ್ಯಾಯವಾದದ್ದನ್ನೂ ಸರಿಯಾದದ್ದನ್ನೂ ಮಾಡಿರಿ. ಪರಲೋಕದಲ್ಲಿ ನಿಮಗೂ ಒಬ್ಬ ಯಜಮಾನನಿದ್ದಾನೆ ಎಂಬುದು ನಿಮ್ಮ ಜ್ಞಾಪಕದಲ್ಲಿರಲಿ.
ಕ್ರೈಸ್ತರು ಮಾಡತಕ್ಕ ಕಾರ್ಯಗಳು
2 ಪ್ರಾರ್ಥನೆಯನ್ನು ತಪ್ಪದೆ ಮಾಡಿರಿ, ನೀವು ಪ್ರಾರ್ಥಿಸುವಾಗ, ಯಾವಾಗಲೂ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಿರಿ. 3 ನಮಗಾಗಿಯೂ ನೀವು ಪ್ರಾರ್ಥಿಸಿ. ಜನರಿಗೆ ದೇವರ ಸಂದೇಶವನ್ನು ತಿಳಿಸಲು ಅನುಕೂಲವಾದ ಸಂದರ್ಭವನ್ನು ಆತನು ನಿಮಗೆ ದಯಪಾಲಿಸುವಂತೆ ಪ್ರಾರ್ಥಿಸಿರಿ. ದೇವರು ಕ್ರಿಸ್ತನ ಬಗ್ಗೆ ತಿಳಿಸಿರುವ ರಹಸ್ಯಸತ್ಯವನ್ನು ನಾವು ಬೋಧಿಸಲಾಗುವಂತೆ ಪ್ರಾರ್ಥಿಸಿರಿ. ನಾನು ಈ ಸತ್ಯವನ್ನು ಬೋಧಿಸಿದರಿಂದಲೇ ಈಗ ಸೆರೆಮನೆಯಲ್ಲಿದ್ದೇನೆ. 4 ಈ ಸತ್ಯವನ್ನು ನಾನು ಜನರಿಗೆ ಸ್ಪಷ್ಟವಾಗಿಯೂ ಸರಳವಾಗಿಯೂ ತಿಳಿಸಲು ಸಾಧ್ಯವಾಗುವಂತೆ ಪ್ರಾರ್ಥಿಸಿರಿ.
5 ಅವಿಶ್ವಾಸಿಗಳೊಂದಿಗೆ ವ್ಯವಹರಿಸುವಾಗ ಜ್ಞಾನವುಳ್ಳವರಾಗಿರಿ. ನಿಮ್ಮ ಸಮಯವನ್ನು ಅತ್ಯುತ್ತಮವಾದ ರೀತಿಯಲ್ಲಿ ಬಳಸಿರಿ. 6 ನೀವು ಮಾತನಾಡುವಾಗಲೆಲ್ಲಾ ದಯೆಯುಳ್ಳವರಾಗಿಯೂ ಜ್ಞಾನವುಳ್ಳವರಾಗಿಯೂ ಮಾತನಾಡಿರಿ. ಆಗ ಪ್ರತಿಯೊಬ್ಬರಿಗೂ ಯೋಗ್ಯವಾದ ರೀತಿಯಲ್ಲಿ ಉತ್ತರಿಸಲು ಶಕ್ತರಾಗುವಿರಿ.
ಪೌಲನೊಂದಿಗಿರುವ ಜನರನ್ನು ಕುರಿತ ಸುದ್ಧಿ
7 ತುಖಿಕನು ಕ್ರಿಸ್ತನಲ್ಲಿ ನನ್ನ ಪ್ರೀತಿಯ ಸಹೋದರನಾಗಿದ್ದಾನೆ. ನನ್ನೊಡನೆ ಅವನೂ ಪ್ರಭುವಿನಲ್ಲಿ ನಂಬಿಗಸ್ತನಾದ ಸೇವಕನೂ ದಾಸನೂ ಆಗಿದ್ದಾನೆ. ನನಗೆ ಸಂಭವಿಸುತ್ತಿರುವುದನ್ನೆಲ್ಲ ಅವನು ನಿಮಗೆ ತಿಳಿಸುತ್ತಾನೆ. 8 ಆದಕಾರಣವೇ ನಾನು ಅವನನ್ನು ಕಳುಹಿಸುತ್ತಿದ್ದೇನೆ. ನಾವು ಹೇಗಿರುವೆವು ಎಂಬುದನ್ನು ನೀವು ತಿಳಿದುಕೊಳ್ಳಬೇಕೆಂಬುದು ನನ್ನ ಅಪೇಕ್ಷೆ. ನಿಮ್ಮನ್ನು ಪ್ರೋತ್ಸಾಹಿಸಲು ನಾನು ಅವನನ್ನು ಒನೇಸಿಮನ ಜೊತೆಯಲ್ಲಿ ಕಳುಹಿಸುತ್ತಿದ್ದೇನೆ. 9 ಒನೇಸಿಮನು ಕ್ರಿಸ್ತನಲ್ಲಿ ನಂಬಿಗಸ್ತನಾದ ಪ್ರೀತಿಯ ಸಹೋದರನಾಗಿದ್ದಾನೆ. ಅವನು ನಿಮ್ಮ ಊರಿನವನೇ. ಇಲ್ಲಿ ಸಂಭವಿಸಿದ್ದೆಲ್ಲವನ್ನು ಅವರು ನಿಮಗೆ ತಿಳಿಸುತ್ತಾರೆ.
10 ಅರಿಸ್ತಾರ್ಕನು ವಂದನೆ ತಿಳಿಸಿದ್ದಾನೆ. ಅವನೂ ನನ್ನೊಡನೆ ಸೆರೆಯಲ್ಲಿದ್ದಾನೆ. ಬಾರ್ನಬನಿಗೆ ಸೋದರ ಬಾಂಧ್ಯವ್ಯವುಳ್ಳ ಮಾರ್ಕನೂ ವಂದನೆಯನ್ನು ಹೇಳುತ್ತಾನೆ. (ಮಾರ್ಕನ ಬಗ್ಗೆ ನೀವು ಏನು ಮಾಡಬೇಕೆಂಬುದನ್ನು ನಾನು ಈಗಾಗಲೇ ಹೇಳಿದ್ದೇನೆ. ಅವನು ಬಂದರೆ ಅವನನ್ನು ಸ್ವಾಗತಿಸಿರಿ.) 11 ಯೇಸುವು (ಯುಸ್ತನೆಂದೂ ಅವನನ್ನು ಕರೆಯುತ್ತಾರೆ.) ಸಹ ವಂದನೆಯನ್ನು ಹೇಳುತ್ತಾನೆ. ಯೆಹೂದ್ಯರಲ್ಲಿ ವಿಶ್ವಾಸಿಗಳಾಗಿರುವ ಇವರು ಮಾತ್ರವೇ ದೇವರ ರಾಜ್ಯಕ್ಕಾಗಿ ನನ್ನ ಜೊತೆ ಕೆಲಸ ಮಾಡುತ್ತಿದ್ದಾರೆ. ಇವರೇ ನನಗೆ ಆದರಣೆಯಾಗಿದ್ದಾರೆ.
12 ಎಪಫ್ರನು ಸಹ ವಂದನೆ ತಿಳಿಸಿದ್ದಾನೆ. ಅವನು ಯೇಸು ಕ್ರಿಸ್ತನ ಸೇವಕನು. ಅವನು ನಿಮ್ಮವರಲ್ಲಿ ಒಬ್ಬನಾಗಿದ್ದಾನೆ. ಅವನು ಯಾವಾಗಲೂ ನಿಮಗಾಗಿ ಪ್ರಾರ್ಥಿಸುತ್ತಾನೆ. ನೀವು ಆತ್ಮಿಕತೆಯಲ್ಲಿ ಬೆಳೆಯುತ್ತಾ ಸಂಪೂರ್ಣತೆಯನ್ನು ಮುಟ್ಟಬೇಕೆಂತಲೂ ದೇವರ ಚಿತ್ತವನ್ನು ಪೂರ್ಣವಾಗಿ ತಿಳಿದುಕೊಂಡು ದೃಢವಾಗಿರಬೇಕೆಂತಲೂ ಪ್ರಾರ್ಥಿಸುತ್ತಾನೆ. 13 ಅವನು ನಿಮಗೋಸ್ಕರ, ಲವೊದಿಕೀಯ ಮತ್ತು ಹಿರೆಯಾ ಪೊಲಿಯದ ಜನರಿಗೋಸ್ಕರ ಬಹಳ ಪ್ರಯಾಸಪಟ್ಟು ಕೆಲಸ ಮಾಡಿದನೆಂಬುದು ನನಗೆ ತಿಳಿದಿದೆ. 14 ದೇಮನು ಮತ್ತು ಪ್ರೀತಿಯ ಸ್ನೇಹಿತನಾದ ವೈದ್ಯ ಲೂಕನು ವಂದನೆಗಳನ್ನು ಹೇಳುತ್ತಾರೆ.
15 ಲವೊದಿಕೀಯದಲ್ಲಿರುವ ಸಹೋದರ ಸಹೋದರಿಯರಿಗೆ ವಂದನೆಗಳನ್ನು ತಿಳಿಸಿರಿ. ನುಂಫಳಿಗೂ ಅವಳ ಮನೆಯಲ್ಲಿ ಸೇರುವ ಸಭೆಯವರಿಗೂ ವಂದನೆಗಳನ್ನು ತಿಳಿಸಿರಿ. 16 ಈ ಪತ್ರವನ್ನು ಓದಿದ ನಂತರ ಲವೊದಿಕೀಯದ ಸಭೆಯವರಿಗೂ ಓದಲು ಕೊಡಿರಿ. ನಾನು ಲವೊದಿಕೀಯದವರಿಗೆ ಬರೆದಿರುವ ಪತ್ರವನ್ನು ನೀವೂ ಓದಿರಿ. 17 ಅರ್ಖಿಪ್ಪನಿಗೆ, “ಪ್ರಭುವು ನಿನಗೆ ವಹಿಸಿರುವ ಸೇವೆಯನ್ನು ಖಂಡಿತವಾಗಿ ನೆರವೇರಿಸಬೇಕು” ಎಂದು ತಿಳಿಸಿರಿ.
18 ನಿಮಗೆ ನನ್ನ ವಂದನೆಗಳು. ಪೌಲನೆಂಬ ನಾನು ನನ್ನ ಸ್ವಂತ ಕೈಯಿಂದ ಇದನ್ನು ಬರೆದಿದ್ದೇನೆ. ಸೆರೆಮನೆಯಲ್ಲಿರುವ ನನ್ನನ್ನು ಜ್ಞಾಪಿಸಿಕೊಳ್ಳಿರಿ. ದೇವರ ಕೃಪೆಯು ನಿಮ್ಮೊಂದಿಗಿರಲಿ.
ಆಲಯದಿಂದ ನೀರಿನ ಹರಿಯುವಿಕೆ
47 ಅವನು ಆಲಯದ ಪ್ರವೇಶ ದ್ವಾರಕ್ಕೆ ನನ್ನನ್ನು ಕರೆದುಕೊಂಡು ಹೋದನು. ನಾನು ಅಲ್ಲಿ ಆಲಯದ ಪೂರ್ವ ದ್ವಾರದ ಕೆಳಗಡೆಯಿಂದ ಹರಿಯುವ ನೀರನ್ನು ಕಂಡೆನು. ಆಲಯದ ಮುಂಭಾಗ ಪೂರ್ವ ದಿಕ್ಕಿನಲ್ಲಿದೆ. ಆ ನೀರು ಆಲಯದ ದಕ್ಷಿಣದ ಭಾಗದ ಕೆಳಗಿನಿಂದ ಹರಿಯುತ್ತಾ ಯಜ್ಞವೇದಿಯ ದಕ್ಷಿಣದ ಕಡೆಗೆ ಹರಿಯುತ್ತಿತ್ತು. 2 ಅವನು ನನ್ನನ್ನು ಉತ್ತರದ ದ್ವಾರದಿಂದ ಹೊರಕ್ಕೆ ತಂದು, ದೇವಾಲಯದ ಹೊರ ಅಂಚಿನಲ್ಲಿಯೇ ಪೂರ್ವ ದ್ವಾರಕ್ಕೆ ತಂದನು. ಆ ದ್ವಾರದ ದಕ್ಷಿಣದ ಕಡೆಯಿಂದ ನೀರು ಹರಿದು ಬರುತ್ತಿತ್ತು.
3 ಅವನು ಕೈಯಲ್ಲಿ ಅಳತೆಯ ನೂಲನ್ನು ಹಿಡಿದುಕೊಂಡು ಪೂರ್ವದ ಕಡೆಗೆ ನಡೆದನು. ಅವನು ಸಾವಿರ ಮೊಳ ಅಳೆದನು. ನನ್ನನ್ನು ಆ ಸ್ಥಳದಲ್ಲಿ ನೀರಿನಲ್ಲಿ ನಡೆದುಕೊಂಡು ಬರುವಂತೆ ಹೇಳಿದನು. ನೀರು ನನ್ನ ಪಾದ ಮುಳುಗುವಷ್ಟು ಆಳವಿತ್ತು. 4 ಅವನು ತಿರುಗಿ ಸಾವಿರ ಮೊಳ ಅಳೆದನು. ಆ ಜಾಗದಲ್ಲಿದ್ದ ನೀರಿನಲ್ಲಿ ನನಗೆ ನಡೆಯಲು ಹೇಳಿದನು. ಅಲ್ಲಿ ನೀರು ನನ್ನ ಮೊಣಕಾಲಿನಷ್ಟು ಆಳವಿತ್ತು. ತಿರುಗಿ ಅವನು ಸಾವಿರ ಮೊಳದಷ್ಟು ದೂರ ಅಳತೆ ಮಾಡಿದನು. ಆ ಸ್ಥಳದಲ್ಲಿ ನೀರಿನಲ್ಲಿ ನಡೆಯಲು ಹೇಳಿದನು. ಅಲ್ಲಿ ನೀರು ನನ್ನ ಸೊಂಟದಷ್ಟು ಆಳವಾಗಿತ್ತು. 5 ಅವನು ಇನ್ನೂ ಒಂದು ಸಾವಿರ ಮೊಳ ದೂರ ಅಳೆದನು. ಅಲ್ಲಿ ನೀರು ಹೆಚ್ಚಿದ್ದು ನನ್ನಿಂದ ದಾಟಲು ಆಗದಷ್ಟು ಆಳವಿತ್ತು. ಅದು ನದಿಯಾಗಿತ್ತು. ಆ ನೀರಿನಲ್ಲಿ ಈಜಾಡಬಹುದಾಗಿತ್ತು. ದಾಟಲಾಗದ ಆಳವಾದ ಹೊಳೆಯಾಗಿತ್ತು. 6 ಆಗ ಅವನು ನನಗೆ, “ನರಪುತ್ರನೇ, ನೀನು ನೋಡಿರುವ ವಿಷಯಗಳ ಬಗ್ಗೆ ಗಮನವಿಟ್ಟಿಯಾ?” ಎಂದು ಕೇಳಿದನು.
ಆಗ ಅವನು ನನ್ನನ್ನು ಹೊಳೆಯ ಪಕ್ಕದಲ್ಲೇ ಕರೆದುಕೊಂಡು ಹೋದನು. 7 ನಾನು ನದಿಯ ತೀರದಲ್ಲಿ ನಡೆಯುತ್ತಿರುವಾಗ ಅದರ ಎರಡೂ ಕಡೆಗಳಲ್ಲಿ ಲೆಕ್ಕವಿಲ್ಲದಷ್ಟು ಮರಗಳನ್ನು ನೋಡಿದೆನು. 8 ಅವನು ನನ್ನೊಡನೆ, “ಈ ನದಿಯು ಪೂರ್ವಕ್ಕೆ ಹೊರಟು ಅರಾಬಾ ತಗ್ಗಿನ ಕಡೆ ಹರಿಯುತ್ತಿದೆ. 9 ಇದು ಮೃತ್ಯುಸಮುದ್ರವನ್ನು ಸೇರಿದಾಗ ಅದರ ನೀರು ಹೊಸದಾಗಿ ಶುದ್ಧವಾಗುವದು. ನೀರಿನಲ್ಲಿ ನಾನಾ ತರದ ಮೀನುಗಳು ಜೀವಿಸುವವು, ಮತ್ತು ಆ ಹೊಳೆಯು ಹರಿಯುವಲ್ಲೆಲ್ಲಾ ವಿವಿಧ ಜಾತಿಯ ಪ್ರಾಣಿಗಳು ವಾಸಿಸುವವು. 10 ಎಂಗೇದಿಯಿಂದ ಪ್ರಾರಂಭವಾಗಿ ಏನ್‌ಎಗ್ಲಯಿಮ್ ತನಕ ಬೆಸ್ತರು ಹೊಳೆಯ ದಡದಲ್ಲಿ ನಿಂತಿರುವದನ್ನು ನೀನು ನೋಡಬಹುದು. ಅವರು ತಮ್ಮ ಬಲೆಗಳನ್ನು ಬೀಸಿ ನಾನಾ ತರದ ಮೀನುಗಳನ್ನು ಹಿಡಿಯುವದನ್ನು ನೀನು ನೋಡಬಹುದು. ಭೂಮಧ್ಯ ಸಮುದ್ರದೊಳಗೆ ಎಷ್ಟು ವಿಧವಾದ ಮೀನುಗಳಿವೆಯೋ ಅಷ್ಟೇ ವಿಧವಾದ ಮೀನುಗಳು ಈ ಹೊಳೆಯಲ್ಲಿಯೂ ಇವೆ. 11 ಆದರೆ ಜವುಗು ನೆಲಗಳೂ ಸವುಳು ನೆಲಗಳೂ ಸಿಹಿಯಾಗುವದಿಲ್ಲ. ಅವು ಉಪ್ಪು ತಯಾರಿಸುವದಕ್ಕಾಗಿ ಉಪಯೋಗಿಸಲ್ಪಡುವವು. 12 ಎಲ್ಲಾ ತರಹದ ಹಣ್ಣಿನ ಮರಗಳು ನದಿಯ ಇಕ್ಕೆಡೆಗಳಲ್ಲಿಯೂ ಬೆಳೆಯುವವು. ಅವುಗಳ ಎಲೆಗಳು ಎಂದಿಗೂ ಒಣಗಿ ನೆಲಕ್ಕೆ ಉದುರವು. ಆ ಮರಗಳಲ್ಲಿ ಸದಾಕಾಲ ಹಣ್ಣುಗಳು ಇರುವವು. ಪ್ರತೀ ತಿಂಗಳಿಗೆ ಹಣ್ಣುಗಳನ್ನು ಕೊಡುವವು. ಯಾಕೆಂದರೆ ಆ ಮರಗಳಿಗೆ ನೀರು ಆಲಯದಿಂದ ಬರುತ್ತದೆ. ಅದರ ಹಣ್ಣುಗಳನ್ನು ಆಹಾರಕ್ಕಾಗಿಯೂ ಅದರ ಎಲೆಗಳಿಂದ ಔಷಧಿಯನ್ನೂ ತಯಾರಿಸಬಹುದು.”
ಕುಲಗಳಿಗನುಸಾರವಾಗಿ ದೇಶದ ವಿಭಜನೆ
13 ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ, “ಇಸ್ರೇಲರ ಹನ್ನೆರಡು ಕುಲಗಳಿಗೆ ದೇಶವನ್ನು ವಿಂಗಡಿಸುವಾಗ ಅವುಗಳ ಮೇರೆ ಯಾವುವೆಂದರೆ, ಯೋಸೇಫನಿಗೆ ಎರಡು ಪಾಲು ಇರುವದು. 14 ನೀವು ದೇಶವನ್ನು ಸಮಾನವಾಗಿ ಪಾಲು ಮಾಡಬೇಕು. ನಾನು ನಿಮ್ಮ ಪೂರ್ವಿಕರಿಗೆ ಈ ದೇಶವನ್ನು ಕೊಡುತ್ತೇನೆಂದು ವಾಗ್ದಾನ ಮಾಡಿದ್ದೆನು. ಈಗ ನಾನು ಇದನ್ನು ನಿಮಗೆ ಕೊಡುತ್ತಿದ್ದೇನೆ.
15 “ದೇಶದ ಮೇರೆ ಯಾವದೆಂದರೆ, ಉತ್ತರದ ಮೇರೆಯು ಭೂಮಧ್ಯ ಸಮುದ್ರದಲ್ಲಿ ಪ್ರಾರಂಭವಾಗಿ ಹೆತ್ಲೋನ್ ಕಡೆಗೂ ಅಲ್ಲಿಂದ ಚೆದಾದ್ ಕಡೆಗೂ 16 ಅಲ್ಲಿಂದ ಬೇರೋತ್ ಕಡೆಗೂ ಅಲ್ಲಿಂದ ಸಿಬ್ರಯಿಮ್ (ಇದು ದಮಸ್ಕ ಮತ್ತು ಹಾಮತ್‌ಗಳ ಮೇರೆಯಲ್ಲಿದೆ) ಕಡೆಗೂ ಅಲ್ಲಿಂದ ಹಾಚೇರ್ ಕಡೆಗೂ ಅಲ್ಲಿಂದ ಹತ್ತೀಕೋನ್ (ಇದು ಹವಾನದ ಮೇರೆಯಲ್ಲಿದೆ) ಕಡೆಗೂ ಹೋಗುತ್ತದೆ. 17 ಹೀಗೆ ಉತ್ತರದ ಮೇರೆಯು ಸಮುದ್ರದಿಂದ ದಮಸ್ಕದ ಉತ್ತರದ ಗಡಿಯಾದ ಹಚರ್ ಐನೋನ್ ಮತ್ತು ಹಮಾತಿಗೆ ಸೇರ್ಪಡೆಯಾಗುವದು. ಇದು ಉತ್ತರ ಭಾಗದ ಮೇರೆ.
18 “ಪೂರ್ವ ಭಾಗದಲ್ಲಿ, ಮೇರೆಯು ಹವ್ರಾನ್ ಮತ್ತು ದಮಸ್ಕದ ಮಧ್ಯದಲ್ಲಿರುವ ಹಚರ್ ಐನೋನ್ ಇಲ್ಲಿಂದ ಹೊರಟು ಜೋರ್ಡನ್ ಹೊಳೆಯ ತೀರದಲ್ಲಿ ಮುಂದುವರಿದು ಗಿಲ್ಯಾದಿಗೂ ಇಸ್ರೇಲ್ ರಾಜ್ಯಕ್ಕೂ ಮಧ್ಯದಲ್ಲಿ ಹರಿದು ಪೂರ್ವದ ಸಮುದ್ರದ ಕಡೆಗೆ ಹೋಗುತ್ತದೆ. ಅಲ್ಲಿಂದ ತಾಮಾರಿಗೆ ಸೇರುತ್ತದೆ. ಇದು ಪೂರ್ವ ಕಡೆಯ ಮೇರೆ.
19 “ದಕ್ಷಿಣ ಮೇರೆಯು ತಾಮಾರಿನಿಂದ ಹೊರಟು ಮೆರೀಬೋತ್-ಕಾದೇಶ್ ನಲ್ಲಿರುವ ನೀರಿನ ಬುಗ್ಗೆಯವರೆಗೂ ಹೋಗುವರು. ಬಳಿಕ ಅಲ್ಲಿಂದ ಹೊರಟು ಈಜಿಪ್ಟಿನ ನೀರಿನ ತೊರೆಯ ಮಾರ್ಗದಿಂದ ಭೂಮಧ್ಯ ಸಮುದ್ರವನ್ನು ಸೇರುವದು. ಇದು ದಕ್ಷಿಣದ ಮೇರೆ.
20 “ಪಶ್ಚಿಮದಲ್ಲಿ ಲೆಬೊಹಮಾತ್ ಎಂಬ ಸ್ಥಳದ ಮುಂಭಾಗದಲ್ಲಿರುವ ಸಮುದ್ರ ತೀರವೇ ಪಶ್ಚಿಮ ದಿಕ್ಕಿನ ಮೇರೆಯಾಗಿರುತ್ತದೆ.
21 “ಈ ದೇಶವನ್ನು ನಿಮ್ಮ ಕುಲಗಳಿಗನುಸಾರವಾಗಿ ನೀವು ವಿಂಗಡಿಸಬೇಕು. 22 ನೀವು ಇದನ್ನು ಸ್ವಂತ ಸ್ವಾಸ್ತ್ಯಕ್ಕಾಗಿ ವಿಂಗಡಿಸಬೇಕು. ನಿಮ್ಮ ಮಧ್ಯೆ ಪರದೇಶದವರೂ ಅವರ ಮಕ್ಕಳೂ ವಾಸವಾಗಿದ್ದಾರೆ. ಈ ಪರದೇಶಸ್ಥರು ಈ ದೇಶದ ನಿವಾಸಿಗಳಾಗಿರುವರು. ಅವರು ಇಲ್ಲಿಯೇ ಹುಟ್ಟಿ ಇಲ್ಲಿಯೇ ಬೆಳೆದ ಇಸ್ರೇಲಿನವರಂತಿರುತ್ತಾರೆ. ನೀವು ಅವರಿಗೂ ನಿಮ್ಮ ವಂಶದವರೊಂದಿಗೆ ಭೂಮಿಯನ್ನು ಕೊಡಬೇಕು. 23 ಯಾವ ಕುಲದವರೊಂದಿಗೆ ಆ ಪರದೇಶಸ್ಥನು ವಾಸವಾಗಿರುತ್ತಾನೋ ಅದೇ ಕುಲದವರು ಅವನಿಗೆ ನೆಲವನ್ನು ಕೊಡಬೇಕು.” ಇದು ನನ್ನ ಒಡೆಯನಾದ ಯೆಹೋವನ ನುಡಿ.
ರಚನೆಗಾರ: ದಾವೀದ.
103 ನನ್ನ ಆತ್ಮವೇ, ಯೆಹೋವನನ್ನು ಕೊಂಡಾಡು!
ನನ್ನ ಸರ್ವಾಂಗಗಳೇ, ಆತನ ಪವಿತ್ರ ಹೆಸರನ್ನು ಕೊಂಡಾಡಿರಿ!
2 ನನ್ನ ಆತ್ಮವೇ, ಯೆಹೋವನನ್ನು ಕೊಂಡಾಡು!
ಆತನ ಉಪಕಾರಗಳಲ್ಲಿ ಒಂದನ್ನೂ ಮರೆಯಬೇಡ.
3 ಆತನು ನಮ್ಮ ಪಾಪಗಳನ್ನೆಲ್ಲಾ ಕ್ಷಮಿಸುವನು;
ನಮ್ಮ ಕಾಯಿಲೆಗಳನ್ನೆಲ್ಲಾ ವಾಸಿಮಾಡುವನು.
4 ಆತನು ನಮ್ಮ ಜೀವವನ್ನು ನಾಶನದಿಂದ ರಕ್ಷಿಸಿ
ನಮಗೆ ಪ್ರೀತಿಯನ್ನೂ ಕನಿಕರವನ್ನೂ ತೋರುವನು.
5 ಆತನು ನಮಗೆ ಸುವರಗಳನ್ನು ಹೇರಳವಾಗಿ ದಯಪಾಲಿಸುವನು.
ಹದ್ದಿಗೆ ಬರುವಂತೆಯೇ ನಮಗೆ ಯೌವನವನ್ನು ಬರಮಾಡುತ್ತಾನೆ.
6 ಯೆಹೋವನು ನೀತಿವಂತನಾಗಿದ್ದಾನೆ.
ಕುಗ್ಗಿಹೋದವರಿಗೆ ಆತನು ನ್ಯಾಯ ದೊರಕಿಸುವನು.
7 ಆತನು ತನ್ನ ಕಟ್ಟಳೆಗಳನ್ನು ಮೋಶೆಗೆ ಉಪದೇಶಿಸಿದನು;
ತನ್ನ ಮಹತ್ಕಾರ್ಯಗಳನ್ನು ಇಸ್ರೇಲರಿಗೆ ತೋರಿಸಿದನು.
8 ಯೆಹೋವನು ಕನಿಕರವುಳ್ಳವನೂ ಕೃಪಾಪೂರ್ಣನೂ
ತಾಳ್ಮೆಯುಳ್ಳವನೂ ಪ್ರೀತಿಪೂರ್ಣನೂ ಆಗಿದ್ದಾನೆ.
9 ಆತನು ಯಾವಾಗಲೂ ಟೀಕಿಸುವವನಲ್ಲ.
ಆತನು ನಮ್ಮ ಮೇಲೆ ನಿತ್ಯವೂ ಕೋಪವಾಗಿರುವವನಲ್ಲ.
10 ನಾವು ದೇವರಿಗೆ ವಿರೋಧವಾಗಿ ಪಾಪಮಾಡಿದೆವು.
ಆದರೂ ತಕ್ಕ ದಂಡನೆಯನ್ನು ಆತನು ನಮಗೆ ಕೊಡಲಿಲ್ಲ.
11 ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವಾಗಿದೆಯೋ
ಆತನ ಮಹಾಪ್ರೀತಿಯು ಆತನ ಭಕ್ತರ ಮೇಲೆ ಅಷ್ಟೇ ಅಪಾರವಾಗಿದೆ.
12 ಪೂರ್ವಕ್ಕೂ ಪಶ್ಚಿಮಕ್ಕೂ ಎಷ್ಟೋ ದೂರವಿರುವಂತೆ
ನಮ್ಮ ಪಾಪಗಳನ್ನು ನಮ್ಮಿಂದ ತೆಗೆದು ದೂರ ಮಾಡಿದ್ದಾನೆ.
13 ತಂದೆಯು ಮಕ್ಕಳನ್ನು ಕನಿಕರಿಸುವಂತೆ
ಯೆಹೋವನು ತನ್ನ ಭಕ್ತರನ್ನು ಕನಿಕರಿಸುವನು.
14 ಆತನು ನಮ್ಮನ್ನು ಸಂಪೂರ್ಣವಾಗಿ ಬಲ್ಲನು.
ನಾವು ಮಣ್ಣಿನಿಂದ ನಿರ್ಮಾಣಗೊಂಡದ್ದೂ ಆತನಿಗೆ ತಿಳಿದಿದೆ.
15 ನಮ್ಮ ಜೀವಮಾನಗಳು ಕೊಂಚವೆಂಬುದು ಆತನಿಗೆ ಗೊತ್ತಿದೆ.
ನಮ್ಮ ಜೀವಮಾನಗಳು ಹುಲ್ಲಿನಂತಿವೆ ಎಂಬುದೂ ಆತನಿಗೆ ತಿಳಿದಿದೆ.
16 ನಾವು ಅಡವಿಯ ಚಿಕ್ಕ ಹೂವಿನಂತಿದ್ದೇವೆ ಎಂಬುದು ಆತನಿಗೆ ಗೊತ್ತಿದೆ.
ನಮ್ಮ ಹೂವು ಬೇಗನೆ ಬೆಳೆದರೂ ಬಿಸಿಗಾಳಿ ಬೀಸಿದಾಗ ಒಣಗಿಹೋಗುವುದು.
ಬಳಿಕ, ಅದು ಬೆಳೆದ ಸ್ಥಳವನ್ನೂ ಗುರುತಿಸಲಾಗದು.
17 ಆದರೆ ಯೆಹೋವನು ತನ್ನ ಭಕ್ತರನ್ನು ಪ್ರೀತಿಸುತ್ತಲೇ ಬಂದನು.
ಇನ್ನು ಮುಂದೆಯೂ ಪ್ರೀತಿಸುತ್ತಲೇ ಇರುವನು.
ಆತನು ಅವರ ಮಕ್ಕಳಿಗೂ ಮೊಮ್ಮಕ್ಕಳಿಗೂ ಒಳ್ಳೆಯವನಾಗಿರುವನು.
18 ಆತನ ಒಡಂಬಡಿಕೆಗೆ ವಿಧೇಯರಾಗುವ ಜನರಿಗೆ ಆತನು ಒಳ್ಳೆಯವನಾಗಿದ್ದಾನೆ.
ಆತನ ಆಜ್ಞೆಗಳಿಗೆ ವಿಧೇಯರಾಗುವ ಜನರಿಗೆ ಆತನು ಒಳ್ಳೆಯವನಾಗಿದ್ದಾನೆ.
19 ಯೆಹೋವನ ಸಿಂಹಾಸನವು ಪರಲೋಕದಲ್ಲಿದೆ.
ಆತನು ಸಮಸ್ತವನ್ನು ಆಳುವನು.
20 ದೇವದೂತರೇ, ಆತನ ಮಾತಿಗೆ ಕಿವಿಗೊಡುವವರೇ,
ಆತನ ಆಜ್ಞೆಗಳಿಗೆ ವಿಧೇಯರಾಗುವ ಬಲಿಷ್ಠ ಸೈನಿಕರೇ, ಯೆಹೋವನನ್ನು ಕೊಂಡಾಡಿರಿ.
21 ಆತನ ಸೈನ್ಯಗಳೇ,[a] ಚಿತ್ತವನ್ನು ನೇರವೇರಿಸುವ ಸೇವಕರೇ,
ಯೆಹೋವನನ್ನು ಕೊಂಡಾಡಿರಿ.
22 ಸರ್ವಸ್ಥಳಗಲ್ಲಿರುವ ಸಮಸ್ತವನ್ನು ಸೃಷ್ಟಿಸಿದಾತನು ಯೆಹೋವನೇ ಸರ್ವಸ್ಥಳಗಳಲ್ಲಿರುವ ಸಮಸ್ತಕ್ಕೂ ದೇವರೇ ಅಧಿಪತಿ.
ಅವುಗಳೆಲ್ಲಾ ಆತನನ್ನು ಕೊಂಡಾಡಲಿ!
ನನ್ನ ಆತ್ಮವೇ, ಯೆಹೋವನನ್ನು ಕೊಂಡಾಡು!
Kannada Holy Bible: Easy-to-Read Version. All rights reserved. © 1997 Bible League International