Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
1 ರಾಜರುಗಳು 15

ಯೆಹೂದದ ರಾಜನಾದ ಅಬೀಯಾಮ

15 ನೆಬಾಟನ ಮಗನಾದ ಯಾರೊಬ್ಬಾಮನು ಇಸ್ರೇಲನ್ನು ಆಳುತ್ತಿದ್ದನು. ಯಾರೊಬ್ಬಾಮನು ರಾಜನಾಗಿದ್ದ ಹದಿನೆಂಟನೆಯ ವರ್ಷದಲ್ಲಿ ಅಬೀಯಾಮನು ಯೆಹೂದದ ಹೊಸ ರಾಜನಾದನು. ಅಬೀಯಾಮನು ಮೂರು ವರ್ಷ ಜೆರುಸಲೇಮಿನಲ್ಲಿ ಆಳಿದನು. ಅವನ ತಾಯಿಯ ಹೆಸರು ಮಾಕಾ. ಅವಳು ಅಬೀಷಾಲೋಮನ ಮಗಳು.

ಅವನಿಗಿಂತಲೂ ಮುಂಚೆ ಅವನ ತಂದೆಯು ಮಾಡಿದ ಪಾಪಗಳನ್ನೇ ಅವನೂ ಮಾಡಿದನು. ಅವನ ಪಿತೃವಾದ ದಾವೀದನು ತನ್ನ ದೇವರಾದ ಯೆಹೋವನಿಗೆ ನಂಬಿಗಸ್ತನಾಗಿದ್ದಂತೆ ಅಬೀಯಾಮನು ನಂಬಿಗಸ್ತನಾಗಿರಲಿಲ್ಲ. ಯೆಹೋವನು ದಾವೀದನನ್ನು ಪ್ರೀತಿಸಿದ್ದರಿಂದ ಅವನಿಗೋಸ್ಕರ ಅಬೀಯಾಮನಿಗೆ ಜೆರುಸಲೇಮಿನಲ್ಲಿ ರಾಜ್ಯವನ್ನು ದಯಪಾಲಿಸಿದನು; ಅವನಿಗೆ ಮಗನನ್ನು ಅನುಗ್ರಹಿಸಿದನು; ಜೆರುಸಲೇಮ್ ಸುರಕ್ಷಿತವಾಗಿರುವಂತೆ ಮಾಡಿದನು. ಯೆಹೋವನು ಇಚ್ಛಿಸಿದ ಕಾರ್ಯಗಳನ್ನು ದಾವೀದನು ಯಾವಾಗಲೂ ಮಾಡುತ್ತಿದ್ದನು. ಯೆಹೋವನ ಆಜ್ಞೆಗಳಿಗೆ ಅವನು ಯಾವಾಗಲೂ ವಿಧೇಯತೆಯಿಂದಿದ್ದನು. ದಾವೀದನು ಹಿತ್ತಿಯನಾದ ಊರೀಯನ ವಿಷಯದಲ್ಲಿ ಮಾತ್ರ ಯೆಹೋವನಿಗೆ ಅವಿಧೇಯನಾದನು.

ರೆಹಬ್ಬಾಮನ ಮತ್ತು ಯಾರೊಬ್ಬಾಮನ ನಡುವೆ ಯುದ್ಧವು ನಡೆಯುತ್ತಲೇ ಇರುತ್ತಿತ್ತು. ಅಬೀಯಾಮನು ಮಾಡಿದ ಇತರ ಎಲ್ಲಾ ಕಾರ್ಯಗಳ ಬಗ್ಗೆ “ಯೆಹೂದದ ರಾಜರುಗಳ ಚರಿತ್ರೆಯಲ್ಲಿ” ಬರೆದಿದೆ.

ಅಬೀಯಾಮನು ರಾಜನಾಗಿದ್ದ ಎಲ್ಲಾ ಕಾಲದಲ್ಲೂ, ಯಾರೊಬ್ಬಾಮನ ಮತ್ತು ಅಬೀಯಾಮನ ನಡುವೆ ಯುದ್ಧ ನಡೆಯುತ್ತಲೇ ಇತ್ತು. ಅಬೀಯಾಮನು ಸತ್ತಾಗ, ಅವನನ್ನು ದಾವೀದ ನಗರದಲ್ಲಿ ಸಮಾಧಿಮಾಡಿದರು. ಅಬೀಯಾಮನ ನಂತರ ಅವನ ಮಗನಾದ ಆಸನು ಹೊಸ ರಾಜನಾದನು.

ಆಸನು ಯೆಹೂದದ ರಾಜ

ಯಾರೊಬ್ಬಾಮನು ಇಸ್ರೇಲಿನ ರಾಜನಾಗಿದ್ದ ಇಪ್ಪತ್ತನೆಯ ವರ್ಷದಲ್ಲಿ ಆಸನು ಯೆಹೂದದ ರಾಜನಾದನು. 10 ಆಸನು ಜೆರುಸಲೇಮಿನಲ್ಲಿ ನಲವತ್ತೊಂದು ವರ್ಷ ಆಳಿದನು. ಅವನ ಅಜ್ಜಿಯ ಹೆಸರು ಮಾಕಾ. ಈಕೆಯು ಅಬೀಷಾಲೋಮನ ಮಗಳು.

11 ಆಸನು ತನ್ನ ಪೂರ್ವಿಕನಾದ ದಾವೀದನು ಮಾಡಿದಂತೆ, ಯೆಹೋವನು ಇಚ್ಛಿಸಿದ ಕಾರ್ಯಗಳನ್ನೇ ಮಾಡಿದನು. 12 ಆ ಕಾಲದಲ್ಲಿ, ಇತರ ದೇವರುಗಳ ಸೇವೆಗೋಸ್ಕರ ತಮ್ಮ ದೇಹಗಳನ್ನು ಲೈಂಗಿಕವಾಗಿ ಮಾರಾಟ ಮಾಡುತ್ತಿದ್ದ ಜನರು ಅಲ್ಲಿದ್ದರು. ಆ ಜನರು ದೇಶವನ್ನು ಬಿಟ್ಟುಹೋಗುವಂತೆ ಅವನು ಬಲವಂತ ಮಾಡಿದನು. ಆಸನು ತನ್ನ ಪೂರ್ವಿಕರು ನಿರ್ಮಿಸಿದ ವಿಗ್ರಹಗಳನ್ನು ನಿರ್ಮೂಲಮಾಡಿದನು. 13 ಆಸನು ತನ್ನ ಅಜ್ಜಿ ಮಾಕಳನ್ನು ರಾಣಿಯ ಪಟ್ಟದಿಂದ ಕೆಳಗಿಳಿಸಿದನು. ಮಾಕಳು ಅಶೇರ ದೇವತೆಯ ಒಂದು ಭೀಕರ ಮೂರ್ತಿಯನ್ನು ಮಾಡಿಸಿದ್ದಳು. ಅವನು ಅದನ್ನು ಕಿದ್ರೋನ್ ಕಣಿವೆಯಲ್ಲಿ ಸುಟ್ಟುಹಾಕಿದನು. 14 ಆಸನು ಎತ್ತರವಾದ ಸ್ಥಳಗಳನ್ನು ನಾಶಪಡಿಸಲಿಲ್ಲ. ಆದರೆ ಅವನು ತನ್ನ ಜೀವಮಾನವೆಲ್ಲಾ ಯೆಹೋವನಿಗೆ ನಂಬಿಗಸ್ಥನಾಗಿದ್ದನು. 15 ಇದಲ್ಲದೆ ತಾನು ಮತ್ತು ತನ್ನ ತಂದೆಯು ಮೀಸಲಾಗಿಟ್ಟಿದ್ದ ಬೆಳ್ಳಿಬಂಗಾರವನ್ನೂ ಪಾತ್ರೆಗಳನ್ನೂ ದೇವಾಲಯದಲ್ಲಿಟ್ಟನು.

16 ರಾಜನಾದ ಆಸನು ಯೆಹೂದದ ಅರಸನಾಗಿದ್ದ ಕಾಲದಲ್ಲಿ ಅವನಿಗೆ ಮತ್ತು ಇಸ್ರೇಲಿನ ರಾಜನಾದ ಬಾಷನಿಗೆ ಯಾವಾಗಲೂ ಯುದ್ಧ ನಡೆಯುತ್ತಿತ್ತು. 17 ಯೆಹೂದದ ವಿರುದ್ಧವಾಗಿ ಬಾಷನು ಹೋರಾಡಿದನು. ಆಸನ ದೇಶವಾದ ಯೆಹೂದದಿಂದ ಜನರು ಬರುವುದನ್ನೂ ಹೋಗುವುದನ್ನೂ ನಿಲ್ಲಿಸಲು ಬಾಷನು ಇಚ್ಛಿಸಿದನು. ಆದ್ದರಿಂದ ಅವನು ರಾಮ ನಗರವನ್ನು ಬಲಪಡಿಸಿದನು. 18 ಆದ್ದರಿಂದ ಆಸನು ಯೆಹೋವನ ಆಲಯದ ಮತ್ತು ರಾಜನ ಅರಮನೆಯ ಭಂಡಾರದಲ್ಲಿ ಉಳಿದಿದ್ದ ಎಲ್ಲಾ ಬೆಳ್ಳಿಬಂಗಾರಗಳನ್ನು ತೆಗೆದುಕೊಂಡನು. ಅವನು ತನ್ನ ಸೇವಕರಿಗೆ ಬೆಳ್ಳಿಬಂಗಾರಗಳನ್ನು ಕೊಟ್ಟು, ಅವರನ್ನು ಅರಾಮ್ಯರ ರಾಜನಾದ ಬೆನ್ಹದದನ ಬಳಿಗೆ ಕಳುಹಿಸಿದನು. (ಬೆನ್ಹದದನು ಟಬ್ರಿಮ್ಮೋನನ ಮಗ. ಟಬ್ರಿಮ್ಮೋನನು ಹಜ್ಯೋನನ ಮಗ.) ದಮಸ್ಕ ನಗರವು ಅವನ ರಾಜಧಾನಿಯಾಗಿತ್ತು. 19 ಆಸನು ಈ ಸಂದೇಶವನ್ನು ಕಳುಹಿಸಿದನು: “ನನ್ನ ತಂದೆಯೂ ನಿನ್ನ ತಂದೆಯೂ ಶಾಂತಿಒಪ್ಪಂದವನ್ನು ಮಾಡಿಕೊಂಡಿದ್ದರು. ಈಗ ನಾನು ನಿನ್ನೊಂದಿಗೆ ಶಾಂತಿ ಒಪ್ಪಂದವನ್ನು ಮಾಡಿಕೊಳ್ಳಲು ಅಪೇಕ್ಷಿಸಿದ್ದೇನೆ. ನಾನು ನಿನಗೆ ಬೆಳ್ಳಿಬಂಗಾರಗಳನ್ನು ಕಾಣಿಕೆಯಾಗಿ ಕಳುಹಿಸುತ್ತಿದ್ದೇನೆ. ಇಸ್ರೇಲಿನ ರಾಜನಾದ ಬಾಷನೊಂದಿಗೆ ನಿನಗಿರುವ ಒಪ್ಪಂದವನ್ನು ಮುರಿದುಬಿಡು. ಆಗ ಬಾಷನು ನನ್ನ ದೇಶವನ್ನು ಬಿಟ್ಟುಹೋಗುತ್ತಾನೆ.”

20 ರಾಜನಾದ ಬೆನ್ಹದದನು ರಾಜನಾದ ಆಸನ ಜೊತೆ ಒಪ್ಪಂದ ಮಾಡಿಕೊಂಡನು. ಆದ್ದರಿಂದ ಅವನು ತನ್ನ ಸೈನ್ಯವನ್ನು ಇಸ್ರೇಲಿನ ಪಟ್ಟಣಗಳ ವಿರುದ್ದ ಹೋರಾಡಲು ಕಳುಹಿಸಿದನು. ಬೆನ್ಹದದನು ಇಯ್ಯೋನ್, ದಾನ್, ಅಬೇಲ್ಬೇತ್ಮಾಕಾ ಪಟ್ಟಣಗಳನ್ನು ಮತ್ತು ಗಲಿಲಾಯ ಸರೋವರದ ಸುತ್ತಲಿನ ಎಲ್ಲಾ ಪಟ್ಟಣಗಳನ್ನು ಸೋಲಿಸಿದನು. ಅವನು ನಫ್ತಾಲಿ ಪ್ರದೇಶವನ್ನೆಲ್ಲ ಸೋಲಿಸಿದನು. 21 ಈ ಆಕ್ರಮಣದ ಸುದ್ದಿಯು ಬಾಷನಿಗೆ ತಿಳಿಯಿತು. ಆದ್ದರಿಂದ ಅವನು ರಾಮ ನಗರವನ್ನು ಬಲಪಡಿಸಲು ತಾನು ಕೈಗೊಂಡಿದ್ದ ಕೆಲಸವನ್ನು ನಿಲ್ಲಿಸಿದನು. ಅವನು ಆ ಪಟ್ಟಣದಿಂದ ತಿರ್ಚಕ್ಕೆ ಹಿಂದಿರುಗಿದನು. 22 ಆಗ ರಾಜನಾದ ಆಸನು ಯೆಹೂದದ ಜನರಿಗೆಲ್ಲ ಒಂದು ಆಜ್ಞೆಯನ್ನು ಮಾಡಿದನು. ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯೂ ಸಹಾಯಮಾಡಬೇಕಾಯಿತು. ಬಾಷನು ರಾಮ ನಗರವನ್ನು ಬಲಪಡಿಸಲೆಂದು ಉಪಯೋಗಿಸುತ್ತಿದ್ದ ಎಲ್ಲಾ ಕಲ್ಲುಗಳನ್ನು ಮತ್ತು ಮರಗಳನ್ನು ಅವರು ರಾಮಕ್ಕೆ ಹೋಗಿ ತೆಗೆದುಕೊಂಡು ಬಂದರು. ಅವರು ಆ ವಸ್ತುಗಳನ್ನು ಬೆನ್ಯಾಮೀನ್ ದೇಶದ ಗೆಬಕ್ಕೆ ಮತ್ತು ಮಿಚ್ಛೆಗಳಿಗೆ ತೆಗೆದುಕೊಂಡು ಹೋದರು. ನಂತರ ರಾಜನಾದ ಆಸನು ಆ ಪಟ್ಟಣಗಳನ್ನು ಮತ್ತಷ್ಟು ಬಲಪಡಿಸಿದನು.

23 ಆಸನು ಮಾಡಿದ ಮಹಾಕಾರ್ಯಗಳನ್ನೂ ಅವನು ಕಟ್ಟಿಸಿದ ನಗರಗಳನ್ನೂ ಮತ್ತು ಅವನನ್ನು ಕುರಿತ ಇತರ ಸಂಗತಿಗಳನ್ನೂ “ಯೆಹೂದದ ರಾಜರುಗಳ ಚರಿತ್ರೆ” ಎಂಬ ಪುಸ್ತಕದಲ್ಲಿ ಬರೆದಿದ್ದಾರೆ. ಆಸನಿಗೆ ವಯಸ್ಸಾದಾಗ, ಅವನ ಕಾಲುಗಳಿಗೆ ರೋಗವಾಗಿತ್ತು. 24 ಆಸನು ಸತ್ತುಹೋದನು. ಅವನನ್ನು ಅವನ ಪೂರ್ವಿಕನಾದ ದಾವೀದ ನಗರದಲ್ಲಿ ಸಮಾಧಿಮಾಡಿದರು. ಆಸನ ಮಗನಾದ ಯೆಹೋಷಾಫಾಟನು ಅವನ ನಂತರ ಹೊಸ ರಾಜನಾದನು.

ನಾದಾಬ ಇಸ್ರೇಲಿನ ರಾಜ

25 ಆಸನು ಯೆಹೂದದ ರಾಜನಾಗಿದ್ದ ಎರಡನೆಯ ವರ್ಷದಲ್ಲಿ, ಯಾರೊಬ್ಬಾಮನ ಮಗನಾದ ನಾದಾಬನು ಇಸ್ರೇಲಿನ ರಾಜನಾದನು. ನಾದಾಬನು ಇಸ್ರೇಲನ್ನು ಎರಡು ವರ್ಷ ಆಳಿದನು. 26 ನಾದಾಬನು ಯೆಹೋವನ ವಿರುದ್ಧ ಕೆಟ್ಟಕಾರ್ಯಗಳನ್ನು ಮಾಡಿದನು. ತನ್ನ ತಂದೆಯಾದ ಯಾರೊಬ್ಬಾಮನು ಮಾಡಿದ ಪಾಪಗಳನ್ನೇ ಅವನೂ ಮಾಡಿದನು. ಇಸ್ರೇಲಿನ ಜನರು ಪಾಪಮಾಡುವಂತೆ ಯಾರೊಬ್ಬಾಮನು ಪ್ರೇರೇಪಿಸಿದ್ದನು.

27 ಬಾಷನು ಅಹೀಯನ ಮಗ. ಅವನು ಇಸ್ಸಾಕಾರನ ಕುಲದವನಾಗಿದ್ದನು. ರಾಜನಾದ ನಾದಾಬನನ್ನು ಕೊಲ್ಲಲು ಬಾಷನು ಸಂಚು ಮಾಡಿದನು. ನಾದಾಬನು ಇಸ್ರೇಲರೊಡನೆ ಗಿಬ್ಬೆತೋನ್ ಪಟ್ಟಣದ ವಿರುದ್ಧ ಹೋರಾಟ ಮಾಡುತ್ತಿದ್ದ ಸಂದರ್ಭವಿದು. ಇದು ಫಿಲಿಷ್ಟಿಯ ಪಟ್ಟಣ. ಆ ಸ್ಥಳದಲ್ಲಿ ಬಾಷನು ನಾದಾಬನನ್ನು ಕೊಂದುಹಾಕಿದನು. 28 ಆಸನು ಯೆಹೂದದ ರಾಜನಾಗಿದ್ದ ಮೂರನೆಯ ವರ್ಷದಲ್ಲಿ ಇದು ಸಂಭವಿಸಿತು. ಅನಂತರ ಬಾಷನು ಇಸ್ರೇಲಿಗೆ ರಾಜನಾದನು.

ಇಸ್ರೇಲಿನ ರಾಜನಾದ ಬಾಷನು

29 ಬಾಷನು ಹೊಸರಾಜನಾದ ಸಮಯದಲ್ಲಿ ಅವನು ಯಾರೊಬ್ಬಾಮನ ವಂಶದಲ್ಲಿ ಎಲ್ಲರನ್ನೂ ಕೊಂದುಹಾಕಿದನು. ಯಾರೊಬ್ಬಾಮನ ವಂಶದಲ್ಲಿ ಯಾರೂ ಜೀವಸಹಿತ ಉಳಿಯಲು ಬಾಷನು ಬಿಡಲಿಲ್ಲ. ಯೆಹೋವನು ಹೇಳಿದ್ದಂತೆಯೇ ಇದು ಸಂಭವಿಸಿತು. ಯೆಹೋವನು ತನ್ನ ಸೇವಕನಾದ ಶೀಲೋವಿನ ಅಹೀಯನ ಮೂಲಕ ಇದನ್ನು ಹೇಳಿದ್ದನು. 30 ರಾಜನಾದ ಯಾರೊಬ್ಬಾಮನು ಅನೇಕ ಪಾಪಗಳನ್ನು ಮಾಡಿದ್ದರಿಂದ ಇದು ಸಂಭವಿಸಿತು. ಇಸ್ರೇಲಿನ ಜನರು ಅನೇಕ ಪಾಪಗಳನ್ನು ಮಾಡುವಂತೆ ಯಾರೊಬ್ಬಾಮನು ಪ್ರೇರೇಪಿಸಿದ್ದನು. ಇಸ್ರೇಲಿನ ದೇವರಾದ ಯೆಹೋವನು ಹೆಚ್ಚು ಕೋಪಗೊಳ್ಳುವಂತೆ ಯಾರೊಬ್ಬಾಮನು ಮಾಡಿದ್ದನು.

31 ನಾದಾಬನು ಮಾಡಿದ ಇತರ ಕಾರ್ಯಗಳ ಬಗ್ಗೆ, “ಇಸ್ರೇಲಿನ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಬರೆದಿದ್ದಾರೆ. 32 ಬಾಷನು ಇಸ್ರೇಲನ್ನು ಆಳುತ್ತಿದ್ದ ಕಾಲದಲ್ಲೆಲ್ಲಾ, ಯೆಹೂದದ ರಾಜನಾದ ಆಸನ ವಿರುದ್ಧವಾಗಿ ಯುದ್ಧ ಮಾಡುತ್ತಲೇ ಇದ್ದನು.

33 ಆಸನು ಯೆಹೂದದ ರಾಜನಾದ ಮೂರನೆಯ ವರ್ಷದಲ್ಲಿ, ಅಹೀಯನ ಮಗನಾದ ಬಾಷನು ಇಡೀ ಇಸ್ರೇಲಿಗೆ ರಾಜನಾದನು. ಅವನ ರಾಜಧಾನಿಯಾದ ತಿರ್ಚದಲ್ಲಿ, ಅವನು ಇಪ್ಪತ್ತನಾಲ್ಕು ವರ್ಷ ಆಳಿದನು. 34 ಯೆಹೋವನು ತಪ್ಪೆಂದು ಹೇಳಿದ ಕಾರ್ಯಗಳನ್ನು ಬಾಷನು ಮಾಡಿದನು. ತನಗಿಂತ ಮುಂಚೆ ಆಳಿದ ಇಸ್ರೇಲಿನ ರಾಜನಾದ ಯಾರೊಬ್ಬಾಮನು ಮಾಡಿದ ಪಾಪಗಳನ್ನೇ ಅವನು ಮಾಡಿದನು. ಇಸ್ರೇಲಿನ ಜನರು ಪಾಪಮಾಡುವಂತೆ ಯಾರೊಬ್ಬಾಮನು ಪ್ರೇರೇಪಿಸಿದ್ದನು.

ಕೊಲೊಸ್ಸೆಯವರಿಗೆ 2

ನಿಮಗೆ ಸಹಾಯ ಮಾಡಲು ನಾನು ಬಹಳವಾಗಿ ಮಾಡುತ್ತಿರುವ ಪ್ರಯತ್ನ ನಿಮಗೆ ತಿಳಿದಿರಬೇಕೆಂಬುದು ನನ್ನ ಅಪೇಕ್ಷೆ ಇದಲ್ಲದೆ ಲವೊದಿಕೀಯದಲ್ಲಿರುವವರಿಗೆ ಮತ್ತು ನನ್ನನ್ನು ಎಂದೂ ನೋಡಿಲ್ಲದವರಿಗೆ ಸಹ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದೇನೆ. ಅವರೆಲ್ಲರೂ ಆಂತರ್ಯದಲ್ಲಿ ಉತ್ತೇಜಿತರಾಗಿ ಪ್ರೀತಿಯಿಂದ ಒಂದಾಗಿರಬೇಕೆಂದು ಮತ್ತು ತಿಳುವಳಿಕೆಯಿಂದ ಬರುವ ದೃಢನಂಬಿಕೆಯಲ್ಲಿ ಶ್ರೀಮಂತರಾಗಿರಬೇಕೆಂದು ಆಶಿಸುತ್ತೇನೆ. ಅಂದರೆ ದೇವರ ನಿಗೂಢ ಸತ್ಯವನ್ನು ಅವರು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು. ಸ್ವತಃ ಕ್ರಿಸ್ತನೇ ಆ ಸತ್ಯ. ಕ್ರಿಸ್ತನಲ್ಲಿ ಸರ್ವಜ್ಞಾನವು ಮತ್ತು ತಿಳುವಳಿಕೆಯು ಬಚ್ಚಿಟ್ಟಿರುವ ನಿಕ್ಷೇಪಗಳಂತಿವೆ.

ಯಾವನೂ ನಿಮ್ಮನ್ನು ಸರಿಯೆನಿಸುವ ಸುಳ್ಳು ಮಾತುಗಳಿಂದ ಮೋಸಗೊಳಿಸದಂತೆ ಈ ಸಂಗತಿಗಳನ್ನು ನಿಮಗೆ ಹೇಳಿದ್ದೇನೆ. ಅಲ್ಲಿ ನಾನು ನಿಮ್ಮೊಡನೆ ಇರದಿದ್ದರೂ ನನ್ನ ಮನಸ್ಸು ನಿಮ್ಮೊಡನಿರುತ್ತದೆ. ನಿಮ್ಮ ಕ್ರಮಬದ್ಧವಾದ ನಡತೆಯನ್ನು ನೋಡಲು ಮತ್ತು ಕ್ರಿಸ್ತನಲ್ಲಿ ಇಟ್ಟಿರುವ ದೃಢನಂಬಿಕೆಯನ್ನು ಅರಿಯಲು ಬಹಳ ಸಂತೋಷಪಡುತ್ತೇನೆ.

ಕ್ರಿಸ್ತನಲ್ಲಿ ನೆಲೆಗೊಂಡಿರಿ

ಪ್ರಭುವಾದ ಕ್ರಿಸ್ತ ಯೇಸುವನ್ನು ನೀವು ಸ್ವೀಕರಿಸಿಕೊಂಡಿರುವುದರಿಂದ ಆತನಲ್ಲಿ ನೆಲೆಗೊಂಡಿದ್ದು ಜೀವಿಸಿರಿ. ಕ್ರಿಸ್ತನನ್ನು ಮಾತ್ರ ನೀವು ಅವಲಂಬಿಸಬೇಕು. ಜೀವವೂ ಶಕ್ತಿಯೂ ಆತನಿಂದಲೇ ಬರುತ್ತವೆ. ನಿಮಗೆ ಸತ್ಯವನ್ನು ಉಪದೇಶಿಸಲಾಗಿದೆ. ನೀವು ಆ ಸತ್ಯ ಬೋಧನೆಯಲ್ಲಿ ದೃಢವಾಗಿ ನೆಲೆಗೊಂಡಿರಬೇಕು ಮತ್ತು ದೇವರಿಗೆ ಸಲ್ಲತಕ್ಕ ಕೃತಜ್ಞತಾಸ್ತುತಿಯಿಂದ ತುಂಬಿದವರಾಗಿರಬೇಕು.

ಯಾರೂ ನಿಮ್ಮನ್ನು ಮೋಸಕರವಾದ ಮತ್ತು ನಿರರ್ಥಕವಾದ ತತ್ವಜ್ಞಾನ ಬೋಧನೆಯಿಂದ ತಪ್ಪು ದಾರಿಗೆ ನಡೆಸದಂತೆ ಜಾಗ್ರತೆಯಿಂದಿರಿ. ಆ ತತ್ವಜ್ಞಾನಗಳು ಜನರಿಂದ ಬಂದುವೇ ಹೊರತು ಕ್ರಿಸ್ತನಿಂದಲ್ಲ. ಅವು ಈ ಲೋಕದ ಜನರ ನಿರರ್ಥಕ ತತ್ವಗಳು. ದೇವರ ಸರ್ವಸಂಪೂರ್ಣತೆಯು ಕ್ರಿಸ್ತನಲ್ಲಿ ನೆಲೆಗೊಂಡಿದೆ. (ಕ್ರಿಸ್ತನು ಈ ಲೋಕದಲ್ಲಿದ್ದಾಗಲೂ ಸಹ ನೆಲೆಗೊಂಡಿತ್ತು.) 10 ನೀವೆಲ್ಲರೂ ಕ್ರಿಸ್ತನಲ್ಲಿ ಸಂಪೂರ್ಣರಾಗಿದ್ದೀರಿ. ನಿಮಗೆ ಬೇರೇನೂ ಬೇಕಿಲ್ಲ. ಕ್ರಿಸ್ತನು ಎಲ್ಲ ದೊರೆತನಗಳನ್ನು ಮತ್ತು ಅಧಿಕಾರಗಳನ್ನು ಆಳುತ್ತಾನೆ.

11 ಕ್ರಿಸ್ತನಲ್ಲಿ ನೀವು ಬೇರೊಂದು ಸುನ್ನತಿಯನ್ನು ಪಡೆದಿರುವಿರಿ. ಆ ಸುನ್ನತಿಯು ಕೈಯಿಂದ ಮಾಡಿದ್ದಲ್ಲ. ಅಂದರೆ ನಿಮ್ಮ ಪಾಪಾಧೀನಸ್ವಭಾವದಿಂದ ನಿಮಗೆ ಬಿಡುಗಡೆಯಾಯಿತು. ಇದುವೇ ಕ್ರಿಸ್ತನು ಮಾಡುವ ಸುನ್ನತಿ. 12 ನೀವು ದೀಕ್ಷಾಸ್ನಾನ ಮಾಡಿಸಿಕೊಂಡಾಗ ಕ್ರಿಸ್ತನೊಂದಿಗೆ ಹೂಳಲ್ಪಟ್ಟಿರಿ. ದೇವರು ಕ್ರಿಸ್ತನನ್ನು ಸತ್ತವರೊಳಗಿಂದ ಎಬ್ಬಿಸುವುದರ ಮೂಲಕ ತೋರಿದ ಶಕ್ತಿಯಲ್ಲಿ ನಂಬಿಕೆಯಿಡುವುದರ ಮೂಲಕ ನೀವು ಆ ದೀಕ್ಷಾಸ್ನಾನದಲ್ಲಿ ಕ್ರಿಸ್ತನೊಂದಿಗೆ ಮೇಲಕ್ಕೆ ಎದ್ದುಬಂದಿರಿ.

13 ನೀವು ನಿಮ್ಮ ಪಾಪಗಳ ದೆಸೆಯಿಂದ ಮತ್ತು ನಿಮ್ಮ ಪಾಪ ಸ್ವಭಾವದ ಹಿಡಿತದಿಂದ ಇನ್ನೂ ಮುಕ್ತರಾಗದೆ ಇದ್ದುದರಿಂದ ಆತ್ಮಿಕವಾಗಿ ಸತ್ತವರಾಗಿದ್ದಿರಿ. ಆದರೆ ದೇವರು ನಿಮಗೆ ಕ್ರಿಸ್ತನೊಂದಿಗೆ ಜೀವವನ್ನು ದಯಪಾಲಿಸಿದನು. ಆತನು ನಮ್ಮ ಎಲ್ಲಾ ಪಾಪಗಳನ್ನು ಕ್ಷಮಿಸಿದನು. 14 ದೇವರ ನಿಯಮಗಳನ್ನು ಉಲ್ಲಂಘಿಸಿದ್ದರಿಂದ ನಾವು ಅಪರಾಧಿಗಳಾಗಿದ್ದೆವು. ನಮ್ಮ ಮೇಲೆ ಹೊರಿಸಲಾದ ದೋಷಾರೋಪಣೆಯ ಪಟ್ಟಿಯಲ್ಲಿ ನಾವು ಉಲ್ಲಂಘಿಸಿದ ಆಜ್ಞೆಗಳನ್ನೆಲ್ಲ ಲಿಖಿತಗೊಳಿಸಲಾಗಿತ್ತು. ಆದರೆ ದೇವರು ನಮ್ಮ ಅಪರಾಧಗಳನ್ನೆಲ್ಲ ಕ್ಷಮಿಸಿ ಅವುಗಳನ್ನು ಶಿಲುಬೆಗೆ ಜಡಿದನು. 15 ದೇವರು ತನಗೆ ವಿರೋಧವಾಗಿದ್ದ ದೊರೆತನಗಳನ್ನೂ ಅಧಿಕಾರಗಳನ್ನೂ ಸೋಲಿಸಿ, ಅವುಗಳನ್ನು ನಿರಾಯುಧರನ್ನಾಗಿ ಮಾಡಿ ಶಿಲುಬೆಯ ವಿಜಯೋತ್ಸವದಲ್ಲಿ ಅವುಗಳನ್ನು ಇಡೀ ಲೋಕದ ಎದುರಿನಲ್ಲಿ ಸೆರೆಯಾಳುಗಳನ್ನಾಗಿ ಮೆರವಣಿಗೆ ಮಾಡಿದನು.

ಮಾನವ ನಿರ್ಮಿತ ನಿಯಮಗಳನ್ನು ಅನುಸರಿಸಬೇಡಿ

16 ಹೀಗಿರುವುದರಿಂದ ತಿಂದು ಕುಡಿಯುವುದರ ಬಗ್ಗೆ ಇಲ್ಲವೆ ಯೆಹೂದ್ಯರ ಪದ್ಧತಿಗಳ (ಹಬ್ಬಗಳು, ಅಮಾವಾಸ್ಯೆಯ ಆಚರಣೆಗಳು, ಸಬ್ಬತ್‌ ದಿನಗಳು) ಬಗ್ಗೆ ನಿಮಗೆ ನಿಯಮಗಳನ್ನು ರೂಪಿಸಲು ಯಾರಿಗೂ ಅವಕಾಶ ಕೊಡಬೇಡಿ. 17 ಪೂರ್ವಕಾಲದಲ್ಲಿ ಈ ಸಂಗತಿಗಳೆಲ್ಲ ಮುಂದೆ ಬರಬೇಕಾಗಿದ್ದವುಗಳ ಛಾಯೆಗಳಾಗಿದ್ದವು. ಅವುಗಳ ನಿಜರೂಪವು ಕ್ರಿಸ್ತನಲ್ಲಿ ತೋರಿಬಂದಿತು. 18 ಕೆಲವರು ದೇವದೂತರ ಪೂಜೆಯಲ್ಲಿಯೂ ಅತಿವಿನಯವಂತರಂತೆ ನಟಿಸುವುದರಲ್ಲಿಯೂ ಆಸಕ್ತರಾಗಿದ್ದಾರೆ. ಆ ಜನರು ತಾವು ಕಂಡ ದರ್ಶನಗಳ ಬಗ್ಗೆ ಯಾವಾಗಲೂ ಮಾತನಾಡುತ್ತಿರುತ್ತಾರೆ. “ನೀವು ಇಂಥಿಂಥ ಕಾರ್ಯಗಳನ್ನು ಮಾಡದಿರುವುದರಿಂದ ತಪ್ಪಿತಸ್ಥರಾಗಿದ್ದೀರಿ” ಎಂದು ಆ ಜನರು ನಿಮ್ಮ ಬಗ್ಗೆ ಹೇಳಲು ಅವಕಾಶಕೊಡಬೇಡಿ. ಅವರ ಪ್ರಾಪಂಚಿಕ ಆಲೋಚನೆಯು ಅವರನ್ನು ನಿಷ್ಕಾರಣವಾಗಿ ಗರ್ವದಿಂದ ಉಬ್ಬಿಸುತ್ತದೆ. 19 ಆ ಜನರು ತಮ್ಮನ್ನು ಕ್ರಿಸ್ತನೆಂಬ ಶಿರಸ್ಸಿನ ಅಧೀನಕ್ಕೆ ಒಳಪಡಿಸುವುದಿಲ್ಲ. ಇಡೀ ದೇಹವು ಆತನನ್ನೇ ಅವಲಂಬಿಸಿಕೊಂಡಿದೆ. ಆತನಿಂದಲೇ ದೇಹದ ಅಂಗಾಂಗಗಳು ಇತರ ಅಂಗಗಳ ಬಗ್ಗೆ ಚಿಂತಿಸುತ್ತವೆ ಮತ್ತು ಪರಸ್ಪರ ಸಹಾಯ ಮಾಡುತ್ತವೆ. ಇದರಿಂದ ದೇಹವು ಬಲಗೊಂಡು ಒಂದಾಗಿ ಕೂಡಿಸಲ್ಪಡುತ್ತದೆ. ಹೀಗೆ, ದೇವರ ಇಚ್ಛೆಯಂತೆ ದೇಹವು ಬೆಳೆಯುತ್ತದೆ.

20 ನೀವು ಕ್ರಿಸ್ತನೊಂದಿಗೆ ಸತ್ತು ಪ್ರಾಪಂಚಿಕವಾದ ನಿರರ್ಥಕ ನಿಯಮಗಳಿಂದ ಬಿಡುಗಡೆ ಹೊಂದಿದ್ದೀರಿ. ಹೀಗಿದ್ದರೂ ನೀವು ಈ ಲೋಕಕ್ಕೆ ಸೇರಿದವರಂತೆ ವರ್ತಿಸುವುದೇಕೆ? ಈ ನಿಯಮಗಳನ್ನು ಏಕೆ ಅನುಸರಿಸುತ್ತಿರುವಿರಿ ಎಂಬುದೇ ನನ್ನ ಮಾತಿನ ಅರ್ಥ: 21 “ಇದನ್ನು ತಿನ್ನಬೇಡ”, “ಅದರ ರುಚಿ ನೋಡಬೇಡ”, “ಅದನ್ನು ಮುಟ್ಟಬೇಡ” ಎಂದು ಹೇಳುವುದೇಕೆ? 22 ಪ್ರಾಪಂಚಿಕ ವಿಷಯಗಳ ಕುರಿತಾದ ಈ ನಿಯಮಗಳೆಲ್ಲ ಬಳಸಿದ ಮೇಲೆ ನಾಶವಾಗುತ್ತವೆ. ಅವುಗಳು ಜನರ ಆಜ್ಞೆ ಮತ್ತು ಜನರ ಉಪದೇಶಗಳೇ ಹೊರತು ದೇವರವಲ್ಲ. 23 ಈ ನಿಯಮಗಳು ನೋಡುವುದಕ್ಕೆ ಬದ್ಧಿಯುಳ್ಳವಾಗಿವೆ. ಆದರೆ ಅತಿವಿನಯವಂತರಂತೆ ನಟಿಸಲು ಮತ್ತು ತಮ್ಮ ದೇಹಗಳನ್ನು ದಂಡಿಸಲು ಜನರನ್ನು ಪ್ರೆರೇಪಿಸುವ ಅವುಗಳು ಕೇವಲ ಮಾನವ ನಿರ್ಮಿತವಾದ ಧರ್ಮದ ಒಂದು ಭಾಗವಾಗಿವೆ. ಆದರೆ ಪಾಪಸ್ವಭಾವವು ಇಚ್ಛಿಸುವ ದುಷ್ಕೃತ್ಯಗಳನ್ನು ಮಾಡದಂತೆ ಅವು ಜನರಿಗೆ ಯಾವ ಸಹಾಯವನ್ನೂ ಮಾಡುವುದಿಲ್ಲ.

ಯೆಹೆಜ್ಕೇಲ 45

ಪವಿತ್ರ ಕಾರ್ಯಕ್ಕಾಗಿ ದೇಶದ ವಿಭಜನೆ

45 “ನೀನು ಚೀಟುಹಾಕಿ ಇಸ್ರೇಲರ ಕುಲಗಳಿಗನುಸಾರವಾಗಿ ದೇಶವನ್ನು ವಿಂಗಡಿಸಬೇಕು. ಆ ಸಮಯದಲ್ಲಿ ಒಂದು ಭಾಗವನ್ನು ಪ್ರತ್ಯೇಕಿಸಿಡಬೇಕು. ಅದು ಯೆಹೋವನಿಗೋಸ್ಕರ ಮೀಸಲಾಗಿಡಲ್ಪಟ್ಟದ್ದು. ಆ ಪ್ರದೇಶವು ಇಪ್ಪತ್ತೈದು ಸಾವಿರ ಮೊಳ ಉದ್ದ ಮತ್ತು ಹತ್ತು ಸಾವಿರ ಮೊಳ ಅಗಲವಿರುವದು.[a] ಈ ಎಲ್ಲಾ ಜಾಗವು ಪರಿಶುದ್ಧವಾದದ್ದು. ಆ ಪ್ರದೇಶದ ಮಧ್ಯ ಭಾಗದಲ್ಲಿ ಐನೂರು ಮೊಳ ಚೌಕದ ಸ್ಥಳ ದೇವಾಲಯಕ್ಕೆ ಮೀಸಲಾಗಿದೆ. ಈ ಭಾಗದ ಪರಿಧಿಯ ಉದ್ದಕ್ಕೂ ಐವತ್ತು ಮೊಳ ಅಗಲದ ಜಾಗವಿರುವದು. 3-4 ಪವಿತ್ರವಾದ ಪ್ರದೇಶದಲ್ಲಿ ಇಪ್ಪತ್ತೈದು ಸಾವಿರ ಮೊಳ ಉದ್ದದ ಮತ್ತು ಹತ್ತು ಸಾವಿರ ಮೊಳ ಅಗಲದ ಸ್ಥಳವು ಯಾಜಕರಿಗೆ ಸೇರಬೇಕು. ಅವರು ಯೆಹೋವನ ಸನ್ನಿಧಿಗೆ ಹೋಗಿ ಆತನ ಪವಿತ್ರಾಲಯದಲ್ಲಿ ಆತನ ಸೇವೆ ಮಾಡುವುದರಿಂದ ಪವಿತ್ರ ಪ್ರದೇಶದ ಈ ಭಾಗವು ಅವರಿಗೋಸ್ಕರವಾಗಿಯೂ ಅವರ ಮನೆಗಳಿಗೋಸ್ಕರವಾಗಿಯೂ ಇರಬೇಕು. ಆಲಯಕ್ಕಾಗಿ ಮೀಸಲಾದ ಐನೂರು ಮೊಳ ಚೌಕವಾದ ಜಾಗವು ಈ ಪವಿತ್ರ ಪ್ರದೇಶದೊಳಗಿರಬೇಕು. ಆ ಸ್ಥಳವು ಮಹಾ ಪವಿತ್ರವಾದ ಸ್ಥಳ. ಯಾಕೆಂದರೆ ಅತ್ಯಂತ ಪವಿತ್ರವಾದ ಆಲಯವು ಅಲ್ಲಿರುತ್ತದೆ. ಪವಿತ್ರ ಪ್ರದೇಶದ ಉಳಿದರ್ಧ ಭಾಗವು ಅಂದರೆ ಇಪ್ಪತ್ತೈದು ಸಾವಿರ ಮೊಳ ಉದ್ದದ ಮತ್ತು ಹತ್ತು ಸಾವಿರ ಮೊಳ ಅಗಲದ ಜಾಗವು ಲೇವಿಯರಿಗೆ ಮೀಸಲಾಗಿದೆ. ಅವರು ವಾಸಿಸುವ ಪಟ್ಟಣವು ಈ ಪ್ರದೇಶದಲ್ಲಿರುತ್ತದೆ.[b]

“ಪವಿತ್ರ ಪ್ರದೇಶ ಭಾಗದ ಪಕ್ಕದಲ್ಲಿ ಇಪ್ಪತ್ತೈದು ಸಾವಿರ ಮೊಳ ಉದ್ದದ ಮತ್ತು ಐದು ಸಾವಿರ ಮೊಳ ಅಗಲದ ಪ್ರದೇಶ ಭಾಗವು ಸಹ ಇರುತ್ತದೆ. ಇಸ್ರೇಲಿನ ಉಳಿದೆಲ್ಲ ಜನರಿಗೂ ಈ ಪ್ರದೇಶ ಭಾಗವು ಪಟ್ಟಣವಾಗಿರುತ್ತದೆ. ಅಧಿಪತಿಗೆ ಪವಿತ್ರ ಪ್ರದೇಶ ಭಾಗದ ಎರಡು ಕಡೆಗಳಲ್ಲೂ ಭೂಭಾಗಗಳಿರುವುದು. ಅಂದರೆ ಪವಿತ್ರ ಪ್ರದೇಶಕ್ಕೆ ಪಶ್ಚಿಮದಲ್ಲಿರುವ ಪಶ್ಚಿಮ ಭಾಗ ಮತ್ತು ಇಸ್ರೇಲರ ಪಟ್ಟಣದ ಪೂರ್ವ ಭೂಭಾಗ. ಇದು ಪವಿತ್ರ ಪ್ರದೇಶದ ಪೂರ್ವಭಾಗದಲ್ಲಿದೆ. ಅಧಿಪತಿಯ ಪಶ್ಚಿಮ ಭಾಗವು ಪವಿತ್ರ ಪ್ರದೇಶ ಭಾಗದ ಪಶ್ಚಿಮದ ಅಂಚಿನಿಂದ ಮೆಡಿಟರೇನಿಯನ್ ಸಮುದ್ರದವರೆಗೂ ವಿಸ್ತರಿಸಿದೆ. ಅಧಿಪತಿಯ ಪೂರ್ವ ಪ್ರದೇಶ ಭಾಗವು ಪೂರ್ವದಿಕ್ಕಿನ ಪಟ್ಟಣದ ಅಂಚಿನಿಂದ ಪೂರ್ವದ ಗಡಿಯವರೆಗೂ ವಿಸ್ತರಿಸಿದೆ. ಭೂಪ್ರದೇಶದ ಈ ಭಾಗವು ಅಧಿಪತಿಗೆ ಸೇರಿದೆ. ಹೀಗೆ, ಹಿಂದಿನ ಕಾಲದ ಅಧಿಪತಿಗಳು ಮಾಡಿದಂತೆ ಈ ಅಧಿಪತಿಯು ಜನರನ್ನು ಹಿಂಸಿಸಿ ಅವರ ಭೂಮಿಯನ್ನು ಕಸಿದುಕೊಳ್ಳುವುದಿಲ್ಲ. ಉಳಿದ ಭೂಭಾಗವು ಇಸ್ರೇಲಿನ ಇತರ ಕುಲಗಳವರಿಗೆ ಯಾವಾಗಲೂ ಸೇರಿರುತ್ತದೆ.”

ಇದು ನನ್ನ ಒಡೆಯನಾದ ಯೆಹೋವನ ನುಡಿಗಳು: “ಇಸ್ರೇಲ್ ಜನರನ್ನು ಆಳುವವರೇ, ಅವರನ್ನು ಕಠಿಣವಾಗಿ ಆಳುವದನ್ನು ನಿಲ್ಲಿಸಿರಿ. ಅವರನ್ನು ಸುಲುಕೊಳ್ಳುವದನ್ನು ನಿಲ್ಲಿಸಿರಿ. ನ್ಯಾಯದಿಂದಿದ್ದು ಒಳ್ಳೆಯದನ್ನೆ ಮಾಡಿರಿ. ಅವರನ್ನು ಅವರ ಮನೆಗಳಿಂದ ಹೊರಡಿಸುವದನ್ನು ನಿಲ್ಲಿಸಿರಿ.” ಇದು ನನ್ನ ಒಡೆಯನಾದ ಯೆಹೋವನ ನುಡಿ.

10 “ಜನರನ್ನು ಮೋಸಪಡಿಸುವದನ್ನು ನಿಲ್ಲಿಸಿರಿ. ನ್ಯಾಯವಾದ ಅಳತೆಗಳನ್ನೂ ತ್ರಾಸುಗಳನ್ನೂ ಉಪಯೋಗಿಸಿರಿ. 11 ಏಫಾ ಮತ್ತು ಬತ್ ಇವೆರಡು ಒಂದೇ ಅಳತೆಯುಳ್ಳವುಗಳಾಗಿರಬೇಕು. ಬತ್ ಮತ್ತು ಏಫಾ ಇವೆರಡೂ ಹೋಮೆರಿನ ಹತ್ತನೇ ಒಂದು ಪಾಲು. ಆ ಅಳತೆಗಳು ಹೋಮೆರಿಗೆ ಹೊಂದಿಕೊಂಡಿರಬೇಕು. 12 ಒಂದು ಶೆಕೆಲ್ ಇಪ್ಪತ್ತು ಗೆರಾ ಇರಬೇಕು. ಒಂದು ಮಿನವು ಅರವತ್ತು ಶೆಕೆಲ್‌ನಷ್ಟು ಇರಬೇಕು. ಅದು ಇಪ್ಪತ್ತು ಶೆಕೆಲ್ ಮತ್ತು ಇಪ್ಪತ್ತೈದು ಶೆಕೆಲ್ ಮತ್ತು ಹದಿನೈದು ಶೆಕೆಲ್‌ಗಳಿಗೆ ಸಮಾನವಾಗಿರಬೇಕು.

13 “ನೀವು ಸಮರ್ಪಿಸಬೇಕಾದ ವಿಶೇಷ ಕಾಣಿಕೆಯಿದು:

ಒಂದು ಹೋಮೆರ್ ಗೋಧಿಗೆ 1/6 ಏಫಾ ಗೋಧಿ ಕೊಡಬೇಕು.

ಒಂದು ಹೋಮರ್ ಬಾರ್ಲಿಗೆ 1/6 ಏಫಾ ಬಾರ್ಲಿ ಕೊಡಬೇಕು;

14 ಒಂದು ಕೋರ್ ಆಲೀವ್ ಎಣ್ಣೆಗೆ 1/10 ಬತ್ ಆಲಿವ್ ಎಣ್ಣೆಯನ್ನು ಕೊಡಬೇಕು;

ಹತ್ತು ಬತ್ ಅಂದರೆ ಒಂದು ಹೋಮೆರ್, ಹತ್ತು ಬತ್ ಅಂದರೆ ಒಂದು ಕೋರ್ ಎಂಬುದನ್ನು ಜ್ಞಾಪಕದಲ್ಲಿಡಿರಿ.

15 ಇಸ್ರೇಲಿನ ನೀರಾವರಿಯ ಹುಲ್ಲುಗಾವಲಿನ ಇನ್ನೂರು ಕುರಿಗಳಲ್ಲಿ

ಒಂದು ಕುರಿಯನ್ನು ಕೊಡಬೇಕು.

“ಧಾನ್ಯನೈವೇದ್ಯಗಳಿಗೂ, ಸರ್ವಾಂಗಹೋಮಗಳಿಗೂ ಸಮಾಧಾನಯಜ್ಞಗಳಿಗೂ ಈ ಕಾಣಿಕೆಗಳನ್ನು ಕೊಡಬೇಕು. ಈ ಕಾಣಿಕೆಗಳು ಜನರನ್ನು ಶುದ್ಧಮಾಡುವವು.” ನನ್ನ ಒಡೆಯನಾದ ಯೆಹೋವನ ನುಡಿಗಳಿವು.

16 “ಇಸ್ರೇಲಿನಲ್ಲಿರುವ ಪ್ರತಿಯೊಬ್ಬನು ಈ ಕಾಣಿಕೆಯನ್ನು ಇಸ್ರೇಲಿನ ಅಧಿಪತಿಗೆ ಕೊಡಬೇಕು. 17 ಆದರೆ ವಿಶೇಷವಾದ ಹಬ್ಬದ ಆಚರಣೆಗಳಿಗಾಗಿ ಅಧಿಪತಿಯು ಕಾಣಿಕೆಗಳನ್ನು ಕೊಡಲೇಬೇಕು. ಅಧಿಪತಿಯು ಪಾಪಪರಿಹಾರಕಯಜ್ಞಗಳನ್ನೂ ಧಾನ್ಯಾರ್ಪಣೆಗಳನ್ನೂ ಪಾನದ್ರವ್ಯಾರ್ಪಣೆಗಳನ್ನೂ ಕೊಡಬೇಕು. ಈ ಕಾಣಿಕೆಗಳನ್ನು ಪ್ರತಿಯೊಂದು ಹಬ್ಬದ ದಿನದಲ್ಲಿಯೂ ಅಮಾವಾಸ್ಯೆಯಲ್ಲಿಯೂ ಸಬ್ಬತ್ ದಿನದಲ್ಲಿಯೂ ಇಸ್ರೇಲ್ ಜನಾಂಗದ ಎಲ್ಲಾ ವಿಶೇಷ ಹಬ್ಬಗಳಲ್ಲಿಯೂ ಅರ್ಪಿಸಬೇಕು. ಇಸ್ರೇಲ್ ಸಂತತಿಯ ಜನರನ್ನು ಶುದ್ಧೀಕರಿಸುವುದಕ್ಕಾಗಿ ಅಧಿಪತಿಯು ಈ ಕಾಣಿಕೆಗಳನ್ನು ಕೊಡಬೇಕು.”

18 ನನ್ನ ಒಡೆಯನಾದ ಯೆಹೋವನು ಇದನ್ನು ಹೇಳಿದ್ದಾನೆ: “ಮೊದಲನೇ ತಿಂಗಳಿನ ಮೊದಲನೇ ದಿವಸದಲ್ಲಿ ಪೂರ್ಣಾಂಗವಾದ ಒಂದು ಎಳೇ ಹೋರಿಯನ್ನು ತೆಗೆದುಕೊಂಡು ಅದನ್ನು ಆಲಯದ ಶುದ್ಧೀಕರಣಕ್ಕಾಗಿ ಉಪಯೋಗಿಸಬೇಕು. 19 ಪಾಪಪರಿಹಾರಕಯಜ್ಞಕ್ಕೆ ಬಲಿಯರ್ಪಿಸಿದ್ದ ಪ್ರಾಣಿಯ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ಅದನ್ನು ಆಲಯದ ಬಾಗಿಲಿನ ನಿಲುವು ಕಂಬಗಳಿಗೂ, ಯಜ್ಞವೇದಿಕೆಯ ಸಜ್ಜದ ನಾಲ್ಕು ಮೂಲೆಗಳಿಗೂ ಮತ್ತು ಒಳಗಿನ ಪ್ರಾಕಾರದ ಪ್ರವೇಶ ದ್ವಾರದ ಎರಡು ನಿಲುವು ಕಂಬಗಳಿಗೂ ಹಚ್ಚಬೇಕು. 20 ಯಾರಾದರೂ ಆಕಸ್ಮಿಕವಾಗಿ ಅಥವಾ ತಿಳಿಯದೆ ಪಾಪಮಾಡಿದ್ದಲ್ಲಿ, ಹೀಗೆಯೇ ತಿಂಗಳಿನ ಏಳನೇ ದಿವಸದಲ್ಲಿಯೂ ಮಾಡಬೇಕು. ಈ ರೀತಿಯಾಗಿ ಆಲಯವನ್ನು ಶುದ್ಧೀಕರಿಸುವಿರಿ.

ಪಸ್ಕಹಬ್ಬದ ಸಮಯದಲ್ಲಿ ಕಾಣಿಕೆ ಸಮರ್ಪಣೆ

21 “ಮೊದಲನೇ ತಿಂಗಳಿನ ಹದಿನಾಲ್ಕನೇ ದಿವಸದಲ್ಲಿ ನೀವು ಪಸ್ಕಹಬ್ಬ ಆಚರಿಸಬೇಕು. ಹುಳಿ ಇಲ್ಲದ ರೊಟ್ಟಿಯ ಹಬ್ಬವು ಈ ಸಮಯದಲ್ಲಿ ಪ್ರಾರಂಭವಾಗುವದು. ಆ ಹಬ್ಬವು ಏಳು ದಿವಸಗಳ ತನಕ ನಡೆಯುವದು. 22 ಆ ಸಮಯದಲ್ಲಿ ಪ್ರಜೆಯನ್ನಾಳುವ ರಾಜನು ತನಗೋಸ್ಕರವಾಗಿಯೂ ಇಸ್ರೇಲಿನ ಎಲ್ಲಾ ಜನರಿಗೋಸ್ಕರವಾಗಿಯೂ ಒಂದು ಹೋರಿಯನ್ನು ಬಲಿಯರ್ಪಿಸಬೇಕು. ಅದು ಪಾಪಪರಿಹಾರಕಯಜ್ಞಕ್ಕಾಗಿ ಸಮರ್ಪಿಸಲ್ಪಡುವದು. 23 ಹಬ್ಬದ ಏಳು ದಿವಸಗಳಲ್ಲಿಯೂ ರಾಜನು ಏಳು ಹೋರಿಗಳನ್ನೂ ಏಳು ಟಗರುಗಳನ್ನೂ ಪಾಪಪರಿಹಾರಕಯಜ್ಞಕ್ಕಾಗಿ ಸಮರ್ಪಿಸಬೇಕು. 24 ರಾಜನು ಧಾನ್ಯಸಮರ್ಪಣೆಗಾಗಿ ಒಂದು ಏಫಾ ಜವೆಗೋಧಿಯನ್ನು ಹೋರಿಯೊಂದಿಗೂ ಒಂದು ಏಫಾ ಜವೆಗೋಧಿಯನ್ನು ಟಗರಿನೊಂದಿಗೂ ಕೊಡಬೇಕು. ಅದರೊಂದಿಗೆ ರಾಜನು ಪ್ರತೀ ಒಂದು ಏಫಾ ಜವೆಗೋಧಿಯೊಂದಿಗೆ ಒಂದು ಹಿನ್ ಎಣ್ಣೆಯನ್ನೂ ಕೊಡಬೇಕು. 25 ಪರ್ಣಶಾಲೆಗಳ ಹಬ್ಬದ ಏಳು ದಿವಸಗಳಲ್ಲೂ ರಾಜನು ಹಾಗೆಯೇ ಮಾಡಬೇಕು. ಈ ಹಬ್ಬವು ಏಳನೇ ತಿಂಗಳಿನ ಹದಿನೈದನೇ ದಿವಸದಲ್ಲಿ ಪ್ರಾರಂಭವಾಗುವದು. ಈ ಕಾಣಿಕೆಯು ಸರ್ವಾಂಗಹೋಮ, ಪಾಪಪರಿಹಾರಕಯಜ್ಞ, ಧಾನ್ಯಸಮರ್ಪಣೆ ಮತ್ತು ಎಣ್ಣೆಯ ಸಮರ್ಪಣೆಗಳಿಗಾಗಿ ಅವೆ.”

ಕೀರ್ತನೆಗಳು 99-101

99 ಯೆಹೋವನೇ ರಾಜನು!
    ಜನಾಂಗಗಳು ಭಯದಿಂದ ನಡುಗಲಿ.
ಆತನು ಕೆರೂಬಿಗಳ ಮೇಲೆ ರಾಜನಂತೆ ಕುಳಿತುಕೊಂಡಿದ್ದಾನೆ.
    ಭೂಮಿಯು ಭಯದಿಂದ ನಡುಗಲಿ.
ಚೀಯೋನಿನ ಯೆಹೋವನು ದೊಡ್ಡವನು!
    ಆತನು ಜನಾಂಗಗಳಿಗೆಲ್ಲಾ ಮಹಾನಾಯಕನಾಗಿದ್ದಾನೆ.
ಅವರೆಲ್ಲರೂ ನಿನ್ನ ಭಯಂಕರವಾದ ಹೆಸರನ್ನು ಕೊಂಡಾಡಲಿ.
    ಆತನೇ ಪರಿಶುದ್ಧನು.
ಶಕ್ತಿಪೂರ್ಣನಾದ ರಾಜನು ನ್ಯಾಯವನ್ನು ಪ್ರೀತಿಸುವನು.
    ದೇವರೇ, ನೀತಿಯನ್ನು ಸೃಷ್ಟಿಸಿದಾತನು ನೀನೇ.
    ಯಾಕೋಬ್ಯರಲ್ಲಿ ನ್ಯಾಯನೀತಿಗಳನ್ನು ಸ್ಥಾಪಿಸಿದವನು ನೀನೇ.
ನಮ್ಮ ದೇವರಾದ ಯೆಹೋವನನ್ನು ಕೊಂಡಾಡಿರಿ,
    ಆತನ ಪವಿತ್ರ ಪಾದಪೀಠಕ್ಕೆ[a] ಅಡ್ಡಬೀಳಿರಿ.
ಮೋಶೆಯೂ ಆರೋನನೂ ದೇವರ ಯಾಜಕರುಗಳಾಗಿದ್ದರು.
    ಸಮುವೇಲನೂ ಆತನ ಹೆಸರಿನಲ್ಲಿ ಪ್ರಾರ್ಥಿಸಿದನು.
ಆತನು ಅವರೆಲ್ಲರ ಪ್ರಾರ್ಥನೆಗಳಿಗೆ ಉತ್ತರಿಸಿದನು.
ಆತನು ಮೇಘಸ್ತಂಭದಿಂದ ಅವರೊಂದಿಗೆ ಮಾತಾಡಿದನು.
    ಅವರು ಆಜ್ಞೆಗಳಿಗೆ ವಿಧೇಯರಾದರು.
    ಆತನು ಅವರಿಗೆ ಧರ್ಮಶಾಸ್ತ್ರವನ್ನು ಕೊಟ್ಟನು.
ನಮ್ಮ ದೇವರಾದ ಯೆಹೋವನೇ, ನೀನು ಅವರ ಪ್ರಾರ್ಥನೆಗಳಿಗೆ ಉತ್ತರಿಸಿದೆ.
    ನೀನು ಕ್ಷಮಿಸುವ ದೇವರೆಂದೂ
    ದುಷ್ಕೃತ್ಯಗಳಿಗೆ ದಂಡಿಸುವವನೆಂದೂ ಅವರಿಗೆ ತೋರ್ಪಡಿಸಿದೆ.
ನಮ್ಮ ದೇವರಾದ ಯೆಹೋವನನ್ನು ಕೊಂಡಾಡಿರಿ.
    ಆತನ ಪವಿತ್ರ ಪರ್ವತದ ಕಡೆಗೆ ಅಡ್ಡಬಿದ್ದು ಆತನನ್ನು ಆರಾಧಿಸಿರಿ.
    ನಮ್ಮ ದೇವರಾದ ಯೆಹೋವನೇ ಪರಿಶುದ್ಧನು!

ಕೃತಜ್ಞತಾ ಸ್ತುತಿಗೀತೆ.

100 ಸಮಸ್ತ ಭೂನಿವಾಸಿಗಳೇ,
    ಯೆಹೋವನಿಗೆ ಗಾಯನ ಮಾಡಿರಿ!
ಯೆಹೋವನ ಸೇವೆಯನ್ನು ಸಂತೋಷದಿಂದ ಮಾಡಿರಿ;
    ಹರ್ಷಗೀತೆಗಳೊಡನೆ ಆತನ ಸನ್ನಿಧಿಗೆ ಬನ್ನಿರಿ!
ಯೆಹೋವನೇ ದೇವರೆಂದು ತಿಳಿದುಕೊಳ್ಳಿರಿ.
    ನಮ್ಮನ್ನು ಸೃಷ್ಟಿಸಿದವನು ಆತನೇ, ನಾವು ಆತನವರು.
    ನಾವು ಆತನ ಜನರೂ ಮಂದೆಯೂ ಆಗಿದ್ದೇವೆ.
ಕೃತಜ್ಞತಾಗೀತೆಗಳೊಡನೆ ಆತನ ಪಟ್ಟಣಕ್ಕೆ ಬನ್ನಿರಿ.
    ಸ್ತುತಿಗೀತೆಗಳೊಡನೆ ಆತನ ಆಲಯಕ್ಕೆ ಬನ್ನಿರಿ.
    ಆತನನ್ನು ಸನ್ಮಾನಿಸುತ್ತಾ ಆತನ ಹೆಸರನ್ನು ಕೊಂಡಾಡಿರಿ.
ಯೆಹೋವನು ಒಳ್ಳೆಯವನು!
    ಆತನ ಪ್ರೀತಿಯು ಶಾಶ್ವತವಾದದ್ದು,
    ಆತನ ನಂಬಿಗಸ್ತಿಕೆಯು ನಿರಂತರವಾದದ್ದು.

ರಚನೆಗಾರ: ದಾವೀದ.

101 ಆತನ ಪ್ರೀತಿಯನ್ನೂ ನೀತಿಯನ್ನೂ ಹಾಡಿಹರಸುವೆನು.
    ಯೆಹೋವನೇ, ನಿನಗೆ ಗಾಯನ ಮಾಡುವೆನು.
ನಾನು ಎಚ್ಚರಿಕೆಯಿಂದ ಪರಿಶುದ್ಧನಾಗಿ ಜೀವಿಸುವೆನು;
    ನನ್ನ ಮನೆಯಲ್ಲೂ ಪರಿಶುದ್ಧನಾಗಿರುವೆನು.
    ನೀನು ನನ್ನ ಬಳಿಗೆ ಬರುವುದು ಯಾವಾಗ?
ನನ್ನ ಎದುರಿನಲ್ಲಿ ಯಾವ ವಿಗ್ರಹಗಳೂ ಇಲ್ಲ.
    ನಿನಗೆ ದ್ರೋಹಮಾಡುವವರು ನನಗೆ ಅಸಹ್ಯ.
    ನಾನು ಅವರಂತೆ ಮಾಡುವುದಿಲ್ಲ!
ನಾನು ನಿನಗೆ ಯಥಾರ್ಥನಾಗಿರುವೆನು;
    ದುಷ್ಕೃತ್ಯಗಳನ್ನು ಮಾಡುವುದಿಲ್ಲ.
ನೆರೆಯವನ ಕುರಿತು ಗುಟ್ಟಾಗಿ
    ಚಾಡಿ ಹೇಳುವವನನ್ನು ನಾನು ತಡೆಯುವೆನು.
ಗರ್ವಪಡುವುದಕ್ಕಾಗಲಿ ತಮ್ಮನ್ನೇ ಉತ್ತಮರೆಂದು ಭಾವಿಸಿಕೊಳ್ಳುವುದಕ್ಕಾಗಲಿ
    ನಾನು ಅವರಿಗೆ ಅವಕಾಶ ಕೊಡುವುದಿಲ್ಲ.

ನಂಬಿಗಸ್ತರಿಗಾಗಿ ದೇಶದಲ್ಲೆಲ್ಲಾ ಹುಡುಕಿ ನೋಡುತ್ತೇನೆ.
    ನನ್ನ ಸೇವೆಗೆ ಅವರನ್ನೇ ನೇಮಿಸಿಕೊಳ್ಳುವೆನು.
    ಪರಿಶುದ್ಧರು ಮಾತ್ರ ನನ್ನ ಸೇವಕರಾಗಿರಲು ಸಾಧ್ಯ.
ನನ್ನ ಮನೆಯಲ್ಲಿ ವಾಸಿಸುವ ಸುಳ್ಳುಗಾರರಿಗೆ ಅವಕಾಶ ಕೊಡುವುದಿಲ್ಲ.
    ನನ್ನ ಸಮೀಪದಲ್ಲಿ ಇರುವುದಕ್ಕೂ ನಾನು ಅವರಿಗೆ ಆಸ್ಪದ ಕೊಡುವುದಿಲ್ಲ.
ಈ ದೇಶದಲ್ಲಿರುವ ದುಷ್ಟರನ್ನು ನಾನು ನಾಶಮಾಡುತ್ತೇನೆ.
    ಯೆಹೋವನ ಪಟ್ಟಣದಿಂದ ಕೆಡುಕರನ್ನು ಓಡಿಸುತ್ತೇನೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International