Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
1 ರಾಜರುಗಳು 10

ಶೆಬದ ರಾಣಿಯು ಸೊಲೊಮೋನನನ್ನು ಸಂದರ್ಶಿಸಿದಳು

10 ಶೆಬದ ರಾಣಿ ಸೊಲೊಮೋನನ ಬಗ್ಗೆ ಕೇಳಿದಳು. ಅವಳು ಒಗಟುಗಳಿಂದ ಅವನನ್ನು ಪರೀಕ್ಷಿಸಲು ತನ್ನ ಸೇವಕರ ದೊಡ್ಡ ಗುಂಪಿನೊಡನೆ ಜೆರುಸಲೇಮಿಗೆ ಬಂದಳು. ಅನೇಕ ಒಂಟೆಗಳ ಮೇಲೆ ಸಾಂಬಾರ ಪದಾರ್ಥಗಳನ್ನು, ಮುತ್ತುಗಳನ್ನು ಮತ್ತು ಬಹಳ ಬಂಗಾರವನ್ನು ಹೇರಿಸಿಕೊಂಡು ಬಂದಳು. ಅವಳು ಸೊಲೊಮೋನನನ್ನು ಸಂಧಿಸಿ, ತನ್ನ ಮನಸ್ಸಿನಲ್ಲಿದ್ದ ಎಲ್ಲ ಪ್ರಶ್ನೆಗಳನ್ನು ಅವನಿಗೆ ಕೇಳಿದಳು. ಸೊಲೊಮೋನನು ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದನು. ಅವಳ ಯಾವ ಪ್ರಶ್ನೆಗಳೂ ಅವನಿಗೆ ಹೆಚ್ಚು ಕಠಿಣವೆನಿಸಲಿಲ್ಲ. ಸೊಲೊಮೋನನು ಬಹು ಜ್ಞಾನಿಯೆಂಬುದು ಶೆಬದ ರಾಣಿಗೆ ತಿಳಿಯಿತು. ಅವನು ನಿರ್ಮಿಸಿದ್ದ ಸುಂದರವಾದ ಅರಮನೆಯನ್ನೂ ರಾಜನ ಮೇಜಿನ ಮೇಲಿದ್ದ ಆಹಾರವನ್ನೂ ಒಟ್ಟಾಗಿ ಸೇರಿಬರುತ್ತಿದ್ದ ಅವನ ಅಧಿಕಾರಿಗಳನ್ನೂ ಅರಮನೆಯಲ್ಲಿದ್ದ ಸೇವಕರನ್ನೂ ಮತ್ತು ಅವರು ಧರಿಸಿದ್ದ ಉತ್ತಮ ಬಟ್ಟೆಗಳನ್ನೂ ಅವಳು ನೋಡಿದಳು. ಅವನ ಔತಣಕೂಟಗಳನ್ನೂ ಅವನು ಆಲಯದಲ್ಲಿ ಅರ್ಪಿಸುತ್ತಿದ್ದ ಯಜ್ಞಗಳನ್ನೂ ಅವಳು ನೋಡಿದಳು. ಇವುಗಳಿಂದ ಅವಳಿಗೆ ನಿಜವಾಗಿಯೂ “ಉಸಿರುಕಟ್ಟಿಸುವಂತಹ” ವಿಸ್ಮಯವಾಯಿತು.

ಆದ್ದರಿಂದ ರಾಣಿಯು ರಾಜನಿಗೆ, “ನಿನ್ನ ಜ್ಞಾನದ ಬಗ್ಗೆ ಮತ್ತು ನೀನು ಮಾಡುವ ಕಾರ್ಯಗಳ ಬಗ್ಗೆ ಅನೇಕ ಸಂಗತಿಗಳನ್ನು ನಾನು ನನ್ನ ದೇಶದಲ್ಲಿ ಕೇಳಿದ್ದೇನೆ. ಆ ಸಂಗತಿಗಳೆಲ್ಲ ನಿಜ! ನಾನೇ ಬಂದು, ನನ್ನ ಸ್ವಂತ ಕಣ್ಣುಗಳಿಂದ ಆ ಸಂಗತಿಗಳನ್ನು ನೋಡುವವರೆಗೆ ನಾನು ನಂಬಲೇ ಇಲ್ಲ. ಆದರೆ ನಾನು ಕೇಳಿದುದಕ್ಕಿಂತಲೂ ಮಹತ್ವವಾದ ಸಂಗತಿಗಳನ್ನು ಈಗ ನೋಡುತ್ತಿದ್ದೇನೆ. ಜನರು ಹೇಳಿದುದಕ್ಕಿಂತ ಅತ್ಯಂತ ಹೆಚ್ಚಿನ ಜ್ಞಾನವೂ ಐಶ್ವರ್ಯವೂ ನಿನ್ನಲ್ಲಿದೆ. ನಿನ್ನ ಪತ್ನಿಯರೂ[a] ಅಧಿಕಾರಿಗಳೂ ಧನ್ಯರೇ ಸರಿ! ಯಾಕೆಂದರೆ ಅವರು ನಿನ್ನ ಸೇವೆ ಮಾಡುತ್ತಾ ನಿನ್ನ ಜ್ಞಾನವಾಕ್ಯಗಳನ್ನು ಕೇಳಬಹುದು! ನಿನ್ನ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ! ನಿನ್ನನ್ನು ಇಸ್ರೇಲಿನ ರಾಜನಾಗಿ ಮಾಡಲು ಆತನು ಸಂತೋಷಪಟ್ಟಿರಬೇಕು. ದೇವರಾದ ಯೆಹೋವನು ಇಸ್ರೇಲನ್ನು ಸದಾ ಪ್ರೀತಿಸುತ್ತಾನೆ. ಆದ್ದರಿಂದಲೇ ಆತನು ನಿನ್ನನ್ನು ರಾಜನನ್ನಾಗಿ ನೇಮಿಸಿದನು. ನೀನು ಕಟ್ಟಳೆಗಳನ್ನು ಅನುಸರಿಸುತ್ತಿರುವೆ ಮತ್ತು ಜನರಿಗೆ ನ್ಯಾಯ ದೊರಕಿಸುತ್ತಿರುವೆ” ಎಂದು ಹೇಳಿದಳು.

10 ನಂತರ ಶೆಬದ ರಾಣಿಯು ರಾಜನಿಗೆ ನಾಲ್ಕು ಸಾವಿರದ ಎಂಭತ್ತು ಕಿಲೋಗ್ರಾಂ ಬಂಗಾರವನ್ನು ಕೊಟ್ಟಳು. ಅವಳು ಅವನಿಗೆ ಅನೇಕ ಸಾಂಬಾರ ಪದಾರ್ಥಗಳನ್ನು ಮತ್ತು ರತ್ನಗಳನ್ನು ಕೊಟ್ಟಳು. ಹಿಂದೆಂದೂ ಯಾರೂ ಇಸ್ರೇಲಿಗೆ ತೆಗೆದುಕೊಂಡು ಬಂದಿಲ್ಲದಷ್ಟು ಸಾಂಬಾರ ಪದಾರ್ಥಗಳನ್ನು ಶೆಬದ ರಾಣಿಯು ಸೊಲೊಮೋನನಿಗೆ ಕೊಟ್ಟಳು.

11 ಹೀರಾಮನ ಹಡಗುಗಳು ಓಫೀರಿನಿಂದ ಬಂಗಾರವನ್ನು ತೆಗೆದುಕೊಂಡು ಬಂದವು. ಆ ಹಡಗುಗಳು ಮರಗಳನ್ನು ಮತ್ತು ರತ್ನಗಳನ್ನು ರಾಶಿರಾಶಿಯಾಗಿ ತಂದವು. 12 ಸೊಲೊಮೋನನು ಮರವನ್ನು ಆಲಯದ ಮತ್ತು ಅರಮನೆಯ ಆಧಾರಕಂಬಗಳಿಗಾಗಿ ಬಳಸಿದನು. ಅವನು ಹಾಡುಗಾರರಿಗೆ ಬೇಕಾದ ಹಾರ್ಪ್ ವಾದ್ಯಗಳನ್ನು ಮತ್ತು ಲೈರ್ ವಾದ್ಯಗಳನ್ನು ತಯಾರಿಸಲು ಆ ಮರವನ್ನು ಉಪಯೋಗಿಸಿದನು. ಹಿಂದೆಂದೂ ಯಾವ ವ್ಯಕ್ತಿಯೂ ಅಂತಹ ಮರವನ್ನು ಇಸ್ರೇಲಿಗೆ ತಂದಿರಲಿಲ್ಲ ಮತ್ತು ಅಲ್ಲಿಯವರೆಗೆ ಇಸ್ರೇಲಿನ ಯಾವ ವ್ಯಕ್ತಿಯೂ ಅಂತಹ ಮರವನ್ನು ನೋಡಿರಲಿಲ್ಲ.

13 ಆಗ ರಾಜನಾದ ಸೊಲೊಮೋನನು ಇತರ ದೇಶದ ರಾಜರಿಗೆ ಮರ್ಯಾದೆಗಾಗಿ ನೀಡುವ ಕಾಣಿಕೆಗಳನ್ನು ಶೆಬದ ರಾಣಿಗೂ ಕೊಟ್ಟನು. ಆಕೆಯು ಕೇಳಿದ್ದೆಲ್ಲವನ್ನೂ ಅವನು ನೀಡಿದನು. ಅನಂತರ ರಾಣಿಯು ಸೇವಕರೊಡನೆ ತನ್ನ ದೇಶಕ್ಕೆ ಹಿಂದಿರುಗಿದಳು.

14 ರಾಜನಾದ ಸೊಲೊಮೋನನು ಪ್ರತಿವರ್ಷವೂ ಇಪ್ಪತ್ತೆರಡು ಸಾವಿರದ ಆರುನೂರ ನಲವತ್ನಾಲ್ಕು ಕಿಲೋಗ್ರಾಂ ಬಂಗಾರವನ್ನು ಪಡೆಯುತ್ತಿದ್ದನು. 15 ಹಡಗುಗಳಿಂದ ಸಿಗುತ್ತಿದ್ದ ಬಂಗಾರವಲ್ಲದೆ ವ್ಯಾಪಾರಿಗಳಿಂದಲೂ ಅರೇಬಿಯಾದ ರಾಜರಿಂದಲೂ ರಾಜ್ಯಪಾಲರುಗಳಿಂದಲೂ ಬಂಗಾರವನ್ನು ಅವನು ಪಡೆಯುತ್ತಿದ್ದನು.

16 ರಾಜನಾದ ಸೊಲೊಮೋನನು ಬಂಗಾರದ ತಗಡಿನಿಂದ ಇನ್ನೂರು ದೊಡ್ಡ ಗುರಾಣಿಗಳನ್ನು ಮಾಡಿಸಿದನು. ಪ್ರತಿಯೊಂದು ಗುರಾಣಿಯಲ್ಲಿ ಏಳು ಕಿಲೋಗ್ರಾಂ ಬಂಗಾರವಿತ್ತು. 17 ಅವನು ಬಂಗಾರದ ತಗಡಿನಿಂದ ಮುನ್ನೂರು ಚಿಕ್ಕ ಗುರಾಣಿಗಳನ್ನು ಮಾಡಿಸಿದನು. ಪ್ರತಿಯೊಂದು ಗುರಾಣಿಯಲ್ಲಿ ನಾಲ್ಕು ಪೌಂಡುಗಳಷ್ಟು ಬಂಗಾರವಿತ್ತು. ರಾಜನು ಅವುಗಳನ್ನು “ಲೆಬನೋನಿನ ಅರಣ್ಯ” ಎಂದು ಕರೆಯುವ ಕಟ್ಟಡದಲ್ಲಿಟ್ಟನು.

18 ರಾಜನಾದ ಸೊಲೊಮೋನನು ವಿಶಾಲವಾದ ದಂತದ ಸಿಂಹಾಸನವನ್ನು ಸಹ ಮಾಡಿಸಿದನು. ಅವನು ಅಪ್ಪಟ ಚಿನ್ನದ ತಗಡನ್ನು ಅದಕ್ಕೆ ಹೊದಿಸಿದನು. 19 ಸಿಂಹಾಸನದ ಮೇಲಕ್ಕೆ ಹತ್ತಲು ಅದರಲ್ಲಿ ಆರು ಮೆಟ್ಟಿಲುಗಳಿದ್ದವು. ಸಿಂಹಾಸನದ ಮೇಲ್ಭಾಗವು ವೃತ್ತಾಕಾರವಾಗಿತ್ತು. ಆ ಸಿಂಹಾಸನದ ಎರಡು ಕಡೆಗಳಲ್ಲಿ ಎರಡು ತೋಳುಗಳಿದ್ದವು. ಆ ಸಿಂಹಾಸನದ ತೋಳುಗಳ ಕೆಳಭಾಗದಲ್ಲಿ ಸಿಂಹದ ಚಿತ್ರಗಳಿದ್ದವು. 20 ಆರು ಮೆಟ್ಟಿಲುಗಳ ಪ್ರತಿಯೊಂದು ಮೆಟ್ಟಿಲಿನಲ್ಲಿ ಎರಡು ಸಿಂಹಗಳಿದ್ದವು. ಪ್ರತಿಯೊಂದು ಕೊನೆಯಲ್ಲಿ ಒಂದು ಸಿಂಹವಿತ್ತು. ಬೇರೆ ಯಾವ ರಾಜ್ಯದಲ್ಲೂ ಇಂತಹ ಸಿಂಹಾಸನ ಇರಲಿಲ್ಲ.

21 ಸೊಲೊಮೋನನ ಬಟ್ಟಲುಗಳು ಮತ್ತು ಲೋಟಗಳು ಬಂಗಾರದಿಂದ ತಯಾರಿಸಲಾಗಿದ್ದವು. “ಲೆಬನೋನಿನ ಅರಣ್ಯ” ಎಂದು ಕರೆಯುವ ಕಟ್ಟಡದಲ್ಲಿದ್ದ ಎಲ್ಲಾ ಆಯುಧಗಳನ್ನು ಅಪ್ಪಟ ಚಿನ್ನದಿಂದ ಮಾಡಿದ್ದರು. ಅರಮನೆಯ ಯಾವ ವಸ್ತುವನ್ನೂ ಬೆಳ್ಳಿಯಿಂದ ಮಾಡಿರಲಿಲ್ಲ. ಜನರು ಬೆಳ್ಳಿಯನ್ನು ಅಮೂಲ್ಯವೆಂದು ಯೋಚಿಸದಷ್ಟು ಬಂಗಾರವು ಸೊಲೊಮೋನನ ಕಾಲದಲ್ಲಿತ್ತು!

22 ರಾಜನಾದ ಸೊಲೊಮೋನನ ಹತ್ತಿರ ಅನೇಕ ಸರಕು ಸಾಗಣಿಕೆಯ ಹಡಗುಗಳಿದ್ದವು. ಅವನು ಅವುಗಳನ್ನು ಇತರ ದೇಶಗಳಲ್ಲಿನ ವ್ಯಾಪಾರಕ್ಕಾಗಿ ಕಳುಹಿಸುತ್ತಿದ್ದನು. ಇವು ಹೀರಾಮನ ಹಡಗುಗಳು. ಈ ಹಡಗುಗಳು ಬಂಗಾರ, ಬೆಳ್ಳಿ, ದಂತ ಮತ್ತು ಪ್ರಾಣಿಗಳನ್ನು ಹೊಸದಾಗಿ ತುಂಬಿಕೊಂಡು ಮೂರು ವರ್ಷಕ್ಕೊಮ್ಮೆ ಹಿಂದಿರುಗುತ್ತಿದ್ದವು.

23 ಸೊಲೊಮೋನನು ಭೂಲೋಕದ ರಾಜರುಗಳಲ್ಲೆಲ್ಲಾ ಅತ್ಯಂತ ಬಲಿಷ್ಠನಾಗಿದ್ದನು. ಅವನು ರಾಜರುಗಳಲ್ಲೆಲ್ಲಾ ಹೆಚ್ಚು ಶ್ರೀಮಂತನೂ ಜ್ಞಾನಿಯೂ ಆಗಿದ್ದನು. 24 ಭೂಲೋಕದವರೆಲ್ಲರೂ ರಾಜನಾದ ಸೊಲೊಮೋನನನ್ನು ನೋಡುವುದಕ್ಕೂ ದೇವರು ಸೊಲೊಮೋನನಿಗೆ ದಯಪಾಲಿಸಿರುವ ಜ್ಞಾನವಾಕ್ಯಗಳನ್ನು ಕೇಳುವುದಕ್ಕೂ ಅಪೇಕ್ಷಿಸುತ್ತಿದ್ದರು. 25 ಪ್ರತಿವರ್ಷವೂ ರಾಜನನ್ನು ನೋಡಲು ಜನರು ಬರುತ್ತಿದ್ದರು. ಪ್ರತಿಯೊಬ್ಬನೂ ಕಾಣಿಕೆಯನ್ನು ತರುತ್ತಿದ್ದನು. ಅವರು ಬೆಳ್ಳಿಬಂಗಾರದಿಂದ ಮಾಡಿದ ವಸ್ತುಗಳನ್ನು, ಆಯುಧಗಳನ್ನು, ಉಡುಪುಗಳನ್ನು, ಸಾಂಬಾರ ಪದಾರ್ಥಗಳನ್ನು, ಕುದುರೆಗಳನ್ನು ಮತ್ತು ಹೇಸರಕತ್ತೆಗಳನ್ನು ತರುತ್ತಿದ್ದರು.

26 ಆದ್ದರಿಂದ ಅಸಂಖ್ಯವಾದ ರಥಗಳೂ ಕುದುರೆಗಳೂ ಸೊಲೊಮೋನನಲ್ಲಿದ್ದವು. ಅವನಲ್ಲಿ ಒಂದು ಸಾವಿರದ ನಾನೂರು ರಥಗಳು ಮತ್ತು ಹನ್ನೆರಡು ಸಾವಿರ ಕುದುರೆಗಳಿದ್ದವು. ಸೊಲೊಮೋನನು ಈ ರಥಗಳಿಗಾಗಿ ವಿಶೇಷವಾದ ನಗರಗಳನ್ನು ಕಟ್ಟಿಸಿದನು. ಆ ನಗರಗಳಲ್ಲಿ ರಥಗಳನ್ನು ಇರಿಸಿದನು. ರಾಜನಾದ ಸೊಲೊಮೋನನು ಕೆಲವು ರಥಗಳನ್ನು ಜೆರುಸಲೇಮಿನಲ್ಲಿ ತನ್ನ ಹತ್ತಿರ ಇಟ್ಟುಕೊಂಡನು. 27 ರಾಜನು ಇಸ್ರೇಲನ್ನು ಬಹಳ ಶ್ರೀಮಂತವಾಗಿರಿಸಿದನು. ಜೆರುಸಲೇಮಿನಲ್ಲಿ ಬೆಳ್ಳಿಯು ಕಲ್ಲುಗಳಂತೆಯೂ ದೇವದಾರುಮರಗಳು ಬೆಟ್ಟದ ಮೇಲೆ ಬೆಳೆಯುವ ಅನೇಕ ಅಂಜೂರದ ಗಿಡಗಳಂತೆಯೂ ಹೇರಳವಾಗಿದ್ದವು. 28 ಸೊಲೊಮೋನನು ಈಜಿಪ್ಟ್ ಮತ್ತು ಕ್ಯೂ ಪ್ರದೇಶಗಳಿಂದ ಕುದುರೆಗಳನ್ನು ಖರೀದಿಸಿ ಆಮದು ಮಾಡಿಕೊಂಡನು. ಅವನ ವ್ಯಾಪಾರಿಗಳು ಅವುಗಳನ್ನು ಕ್ಯೂ ಪ್ರಾಂತ್ಯದಿಂದ ಇಸ್ರೇಲಿಗೆ ತರುತ್ತಿದ್ದರು. 29 ಈಜಿಪ್ಟಿನ ಒಂದು ರಥದ ಬೆಲೆಯು ಏಳು ಕಿಲೋಗ್ರಾಂ ಆದರೆ ಒಂದು ಕುದುರೆಯ ಬೆಲೆಯು ಎರಡು ಕಿಲೋಗ್ರಾಂ ಬೆಳ್ಳಿಯಾಗಿತ್ತು. ಸೊಲೊಮೋನನು ಹಿತ್ತಿಯ ಮತ್ತು ಅರಾಮ್ಯ ರಾಜರುಗಳಿಗೆ ಕುದುರೆಗಳನ್ನೂ ರಥಗಳನ್ನೂ ಮಾರಿದನು.

ಫಿಲಿಪ್ಪಿಯವರಿಗೆ 1

ಯೇಸು ಕ್ರಿಸ್ತನ ದಾಸರಾದ ಪೌಲನು ತಿಮೊಥೆಯನು ಫಿಲಿಪ್ಪಿಯವರಿಗೆ ಬರೆಯುವ ಪತ್ರ. ಯೇಸು ಕ್ರಿಸ್ತನ ಮೂಲಕ ದೇವರ ಪರಿಶುದ್ಧ ಜನರಾಗಿರುವವರಿಗೂ ಎಲ್ಲಾ ಹಿರಿಯರಿಗೂ ಸಭಾಸೇವಕರಿಗೂ ನಾವು ಈ ಪತ್ರವನ್ನು ಬರೆಯತ್ತಿದ್ದೇವೆ.

ನಮ್ಮ ತಂದೆಯಾದ ದೇವರಿಂದಲೂ ಪ್ರಭುವಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯೂ ಶಾಂತಿಯೂ ಉಂಟಾಗಲಿ.

ಪೌಲನ ಪ್ರಾರ್ಥನೆ

ನಾನು ನಿಮ್ಮನ್ನು ಜ್ಞಾಪಿಸಿಕೊಂಡಾಗಲೆಲ್ಲಾ ದೇವರಿಗೆ ಸ್ತೋತ್ರ ಸಲ್ಲಿಸುತ್ತೇನೆ. ನಾನು ನಿಮ್ಮೆಲ್ಲರಿಗಾಗಿ ಯಾವಾಗಲೂ ಆನಂದದಿಂದ ಪ್ರಾರ್ಥಿಸುತ್ತೇನೆ. ನನ್ನ ಸುವಾರ್ತಾಸೇವೆಯಲ್ಲಿ ನೀವು ಪಾಲುಗಾರರಾದ ಕಾರಣ ದೇವರಿಗೆ ಸ್ತೋತ್ರ ಸಲ್ಲಿಸುತ್ತೇನೆ. ನೀವು ನಂಬಿಕೊಂಡಂದಿನಿಂದ ಇಲ್ಲಿಯವರೆಗೂ ನನಗೆ ಸಹಾಯ ಮಾಡಿದಿರಿ. ದೇವರು ನಿಮ್ಮಲ್ಲಿ ಒಳ್ಳೆಯ ಕಾರ್ಯವನ್ನು ಆರಂಭಿಸಿ ನಡೆಸಿಕೊಂಡು ಬರುತ್ತಿದ್ದಾನೆ. ಯೇಸು ಕ್ರಿಸ್ತನು ಮತ್ತೆ ಬಂದಾಗ ದೇವರು ಆ ಕಾರ್ಯವನ್ನು ಸಂಪೂರ್ಣಗೊಳಿಸುವನೆಂದು ನನಗೆ ಭರವಸೆ ಇದೆ.

ನಿಮ್ಮೆಲ್ಲರ ವಿಷಯದಲ್ಲಿ ಈ ರೀತಿ ಆಲೋಚಿಸುವುದು ನ್ಯಾಯಬದ್ಧವಾದದ್ದೆಂದು ನನಗೆ ಗೊತ್ತಿದೆ. ನೀವು ನನ್ನ ಹೃದಯದಲ್ಲಿರುವುದರಿಂದ, ನಾನು ನಿಮಗೆ ತುಂಬ ಸಮೀಪಸ್ಥನಾಗಿದ್ದೇನೆಂದು ಭಾವಿಸುತ್ತೇನೆ. ನೀವೆಲ್ಲರೂ ನನ್ನೊಂದಿಗೆ ದೇವರ ಕೃಪೆಯಲ್ಲಿ ಪಾಲುಗಾರರಾದ ಕಾರಣ ನೀವು ನನಗೆ ಸಮೀಪರಾಗಿದ್ದೀರಿ. ನಾನು ಸೆರೆಯಲ್ಲಿರುವಾಗಲೂ ಸುವಾರ್ತೆಯನ್ನು ಪ್ರತಿಪಾದಿಸುವಾಗಲೂ ನಿರೂಪಿಸುವಾಗಲೂ ನೀವು ನನ್ನೊಂದಿಗೆ ದೇವರ ಕೃಪೆಯಲ್ಲಿ ಪಾಲುಗಾರರಾಗಿದ್ದೀರಿ. ನಾನು ನಿಮ್ಮನ್ನು ನೋಡಲು ಬಹು ತವಕಪಡುತ್ತಿದ್ದೇನೆಂಬುದು ದೇವರಿಗೆ ಗೊತ್ತಿದೆ. ಯೇಸು ಕ್ರಿಸ್ತನಿಂದ ತೋರಿಬಂದ ಪ್ರೀತಿಯಿಂದ ನಾನು ನಿಮ್ಮೆಲ್ಲರನ್ನು ಪ್ರೀತಿಸುತ್ತೇನೆ.

ನಿಮಗಾಗಿ ನಾನು ಪ್ರಾರ್ಥಿಸುವುದೇನೆಂದರೆ:

ನೀವು ಪ್ರೀತಿಯಲ್ಲಿ ವೃದ್ಧಿಯಾಗುತ್ತಾ ಜ್ಞಾನವಂತರೂ ತಿಳುವಳಿಕೆಯುಳ್ಳವರೂ ಆಗಬೇಕು. 10 ಒಳಿತುಕೆಡಕುಗಳಿಗಿರುವ ವ್ಯತ್ಯಾಸವನ್ನು ಅರಿತುಕೊಂಡು ಒಳ್ಳೆಯದನ್ನೇ ಆರಿಸಿಕೊಳ್ಳುವಂಥವರಾಗಬೇಕು; ಕ್ರಿಸ್ತನ ಬರುವಿಕೆಯಲ್ಲಿ ನೀವು ಪರಿಶುದ್ಧರಾಗಿಯೂ ನಿರ್ದೋಷಿಗಳಾಗಿಯೂ ಇರಬೇಕು. 11 ಕ್ರಿಸ್ತನ ಸಹಾಯದಿಂದ ದೇವರಿಗೆ ಘನತೆಯನ್ನೂ ಸ್ತೋತ್ರವನ್ನೂ ಉಂಟುಮಾಡುವುದಕ್ಕಾಗಿ ನೀವು ಅನೇಕ ಕಾರ್ಯಗಳನ್ನು ಮಾಡುವಂಥವರಾಗಬೇಕು.

ಪೌಲನ ಕಷ್ಟಗಳು ಸುವಾರ್ತಾ ಸೇವೆಗೆ ಸಹಾಯಕವಾಗಿವೆ

12 ಸಹೋದರ ಸಹೋದರಿಯರೇ, ನನಗೆ ಸಂಭವಿಸಿದ ಕಷ್ಟಗಳು ಸುವಾರ್ತೆಯನ್ನು ಹಬ್ಬಿಸಲು ಸಹಾಯಕವಾದವೆಂದು ನಿಮಗೆ ತಿಳಿದಿರಬೇಕೆಂಬುದಾಗಿ ಅಪೇಕ್ಷಿಸುತ್ತೇನೆ. 13 ನಾನು ಏಕೆ ಸೆರೆಮನೆಯಲ್ಲಿದ್ದೇನೆಂಬುದು ಸ್ಪಷ್ಟವಾಗಿಯೇ ಇದೆ. ನಾನು ಕ್ರಿಸ್ತ ವಿಶ್ವಾಸಿಯಾಗಿರುವುದರಿಂದ ಸೆರೆಮನೆಯಲ್ಲಿದ್ದೇನೆ. ಇಲ್ಲಿಯ ಕಾವಲುಗಾರರಿಗೂ ಅರಮನೆಯ ಇತರ ಜನರೆಲ್ಲರಿಗೂ ಇದು ಗೊತ್ತಿದೆ. 14 ನಾನಿನ್ನೂ ಸೆರೆಮನೆಯಲ್ಲಿದ್ದೇನೆ. ಆದರೆ ನನ್ನ ಈ ಸ್ಥಿತಿಯಿಂದ ಅನೇಕ ವಿಶ್ವಾಸಿಗಳು ಪ್ರೋತ್ಸಾಹಿತರಾಗಿ ಕ್ರಿಸ್ತನ ವಿಷಯವಾದ ಸಂದೇಶವನ್ನು ಮತ್ತಷ್ಟು ಧೈರ್ಯದಿಂದ ಜನರಿಗೆ ಹೇಳುತ್ತಿದ್ದಾರೆ.

15 ಕೆಲವರು ತಮ್ಮಲ್ಲಿರುವ ಅಸೂಯೆಯಿಂದಲೂ ವೈಮನಸ್ಸಿನಿಂದಲೂ ಇನ್ನು ಕೆಲವರು ಸಹಾಯ ಮಾಡಬೇಕೆಂಬ ಉದ್ದೇಶದಿಂದಲೂ ಕ್ರಿಸ್ತನ ವಿಷಯವಾಗಿ ಬೋಧಿಸುತ್ತಾರೆ. 16 ಇವರು ತಮ್ಮಲ್ಲಿ ಪ್ರೀತಿಯಿರುವುದರಿಂದಲೇ ಜನರಿಗೆ ಬೋಧಿಸುತ್ತಾರೆ. ಸುವಾರ್ತೆಯನ್ನು ಪ್ರತಿಪಾದಿಸುವ ಕೆಲಸವನ್ನು ದೇವರು ನನಗೆ ಕೊಟ್ಟನೆಂಬುದು ಇವರಿಗೆ ಗೊತ್ತಿದೆ. 17 ಬೇರೆ ಕೆಲವರು ತಮ್ಮ ಸ್ವಾರ್ಥದ ದೆಸೆಯಿಂದ ಕ್ರಿಸ್ತನ ವಿಷಯವಾಗಿ ಬೋಧಿಸುತ್ತಾರೆ. ಅವರ ಸುವಾರ್ತಾಸೇವೆಯ ಉದ್ದೇಶವೇ ತಪ್ಪಾಗಿದೆ. ಸೆರೆಯಲ್ಲಿರುವ ನನಗೆ ತೊಂದರೆ ಮಾಡಬೇಕೆಂಬುದೇ ಅವರ ಅಪೇಕ್ಷೆ. 18 ಅವರು ನನಗೆ ತೊಂದರೆ ಮಾಡಿದರೂ ನಾನು ಚಿಂತಿಸುವುದಿಲ್ಲ. ಅವರ ಉದ್ದೇಶವು ಯಥಾರ್ಥವಾಗಿದ್ದರೂ ಯಥಾರ್ಥವಾಗಿಲ್ಲದಿದ್ದರೂ ನನಗದು ಮುಖ್ಯವಲ್ಲ.

ಅವರು ಕ್ರಿಸ್ತನ ವಿಷಯವಾಗಿ ಜನರಿಗೆ ಬೋಧಿಸುತ್ತಿರುವುದರಿಂದ ನಾನು ಉಲ್ಲಾಸಿಸುತ್ತೇನೆ, ಇನ್ನು ಮುಂದೆಯೂ ಉಲ್ಲಾಸಿಸುತ್ತೇನೆ. 19 ನೀವು ನನಗೋಸ್ಕರ ಪ್ರಾರ್ಥಿಸುತ್ತಿದ್ದೀರಿ ಮತ್ತು ಯೇಸು ಕ್ರಿಸ್ತನ ಆತ್ಮನು ನನಗೆ ಸಹಾಯ ಮಾಡುತ್ತಿದ್ದಾನೆ. ಆದ್ದರಿಂದ ನನ್ನ ಈ ಕಷ್ಟವು ನನಗೆ ರಕ್ಷಣೆಯನ್ನು ಉಂಟು ಮಾಡುವುದೆಂದು ನನಗೆ ಗೊತ್ತಿದೆ. 20 ನಾನು ಯಾವ ವಿಷಯದಲ್ಲಿಯೂ ನಾಚಿಕೆಪಡದೆ ಎಂದಿನಂತೆ ಈಗಲೂ ಸಹ ಧೈರ್ಯದಿಂದ ಇದ್ದೇನೆ. ನಾನು ಬದುಕಿದರೂ ಸರಿ, ಸತ್ತರೂ ಸರಿ ನನ್ನ ದೇಹದ ಮೂಲಕ ಕ್ರಿಸ್ತನಿಗೆ ಮಹಿಮೆ ಉಂಟಾಗಬೇಕೆಂಬುದೇ ನನ್ನ ಅಭಿಲಾಷೆ ಮತ್ತು ನಿರೀಕ್ಷೆ. 21 ನನಗಂತೂ ಬದುಕುವುದೆಂದರೆ ಕ್ರಿಸ್ತನೇ, ಸಾಯುವುದೆಂದರೆ ಲಾಭವೇ. 22 ನಾನು ಜೀವದಿಂದಿದ್ದರೆ ಫಲಫಲಿಸುವ ಕೆಲಸ ನನಗಿರುತ್ತದೆ. ಆದರೆ ನಾನು ಸಾಯಬೇಕೇ? ಅಥವಾ ಬದುಕಬೇಕೇ? ಏನನ್ನು ಆರಿಸಿಕೊಳ್ಳಬೇಕೋ ನನಗೆ ಗೊತ್ತಿಲ್ಲ. 23 ಇವೆರಡರಲ್ಲಿ ಯಾವುದನ್ನು ಆರಿಸಿಕೊಳ್ಳಬೇಕೆಂಬುದೇ ಕಷ್ಟ. ನಾನು ಈ ಜೀವಿತವನ್ನು ಬಿಟ್ಟು ಆತನೊಂದಿಗಿರಲು ಅಪೇಕ್ಷಿಸುತ್ತೇನೆ. ಅದೇ ಉತ್ತಮವಾದದ್ದು. 24 ಆದರೆ ನಾನಿಲ್ಲಿ ಇಹಲೋಕದ ಶರೀರದಲ್ಲಿರುವುದು ನಿಮಗೆ ಅಗತ್ಯವಾಗಿದೆ. 25 ಆದ್ದರಿಂದ ನಾನು ಜೀವದಿಂದುಳಿದು ನಿಮ್ಮೊಂದಿಗೆ ಇರುತ್ತೇನೆಂದು ನನಗೆ ಗೊತ್ತಿದೆ. ನೀವು ನಂಬಿಕೆಯಲ್ಲಿ ವೃದ್ಧಿಯಾಗಿರಲು ಆನಂದವಾಗಿರಲು ನಿಮಗೆ ನೆರವಾಗಬೇಕೆಂತಲೂ 26 ನಾನು ಮತ್ತೆ ನಿಮ್ಮೊಂದಿಗಿರುವಾಗ ನೀವು ಕ್ರಿಸ್ತಯೇಸುವಿನಲ್ಲಿ ನನ್ನ ವಿಷಯವಾಗಿ ಹೆಮ್ಮೆಪಡಲು ಮತ್ತಷ್ಟು ಕಾರಣಗಳಿರುತ್ತವೆ.

27 ಅದೇನೇ ಇರಲಿ, ಕ್ರಿಸ್ತನ ಸುವಾರ್ತೆಗೆ ಯೋಗ್ಯರಾಗಿ ಬಾಳಿರಿ. ಆಗ ನಾನು ನಿಮ್ಮ ಬಳಿಗೆ ಬಂದರೂ ಸರಿ, ನಿಮ್ಮಿಂದ ದೂರದಲ್ಲಿದ್ದರೂ ಸರಿ, ನಿಮ್ಮ ವಿಷಯದಲ್ಲಿ ಒಳ್ಳೆಯ ಸಂಗತಿಗಳನ್ನು ಕೇಳುತ್ತೇನೆ. ನೀವು ಒಂದೇ ಉದ್ದೇಶದಿಂದ ದೃಢವಾಗಿದ್ದೀರೆಂದೂ ಸುವಾರ್ತೆಯಿಂದ ಉಂಟಾದ ನಂಬಿಕೆಗೋಸ್ಕರ ಏಕಮನಸ್ಸಿನಿಂದ ಕೆಲಸ ಮಾಡುತ್ತಿದ್ದೀರೆಂದೂ ಕೇಳುತ್ತಲೇ ಇರುತ್ತೇನೆ. 28 ಅಲ್ಲದೆ ನಿಮ್ಮನ್ನು ವಿರೋಧಿಸುವ ಜನರಿಗೆ ನೀವು ಹೆದರಿಕೊಳ್ಳುವುದಿಲ್ಲ. ನಿಮ್ಮ ರಕ್ಷಣೆಗೂ ನಿಮ್ಮ ವೈರಿಗಳ ನಾಶಕ್ಕೂ ಇವುಗಳು ದೇವರಿಂದಾದ ಪ್ರಮಾಣಗಳಾಗಿವೆ. 29 ನೀವು ಕ್ರಿಸ್ತನಲ್ಲಿ ನಂಬಿಕೆಯಿಟ್ಟದ್ದು ದೇವರ ಅನುಗ್ರಹದಿಂದಲೇ. ಅಷ್ಟು ಮಾತ್ರವೇ ಅಲ್ಲ, ಕ್ರಿಸ್ತನಿಗೋಸ್ಕರ ಕಷ್ಟಪಡುವುದೂ ಸಹ ನಿಮಗೆ ಅನುಗ್ರಹವಾಗಿ ದೊರೆಯಿತು. ಇವೆರಡೂ ಕ್ರಿಸ್ತನಿಗೆ ಮಹಿಮೆಯನ್ನು ಉಂಟುಮಾಡುತ್ತವೆ. 30 ನಾನು ನಿಮ್ಮ ಮಧ್ಯದಲ್ಲಿದ್ದಾಗ ಸುವಾರ್ತೆಗೆ ವಿರುದ್ಧವಾಗಿದ್ದ ಜನರೊಂದಿಗೆ ಮಾಡಿದ ಹೋರಾಟವನ್ನು ನೋಡಿದ್ದೀರಿ. ಈಗಲೂ ನನಗಿರುವ ಹೋರಾಟದ ಬಗ್ಗೆ ಕೇಳುತ್ತಿದ್ದೀರಿ. ಸ್ವತಃ ನೀವೇ ಈ ರೀತಿಯ ಹೋರಾಟವನ್ನು ಹೊಂದಿದ್ದೀರಿ.

ಯೆಹೆಜ್ಕೇಲ 40

ಹೊಸ ಆಲಯ

40 ನಾವು ಸೆರೆಹಿಡಿಯಲ್ಪಟ್ಟ ಇಪ್ಪತ್ತೈದನೆ ವರ್ಷದ ಪ್ರಾರಂಭದ ತಿಂಗಳಿನ (ಅಕ್ಟೋಬರ್) ಹತ್ತನೇ ದಿವಸದಲ್ಲಿ ಯೆಹೋವನ ಆತ್ಮನಿಂದ ಪರವಶನಾದೆನು. ಬಾಬಿಲೋನಿಯರು ಜೆರುಸಲೇಮನ್ನು ವಶಪಡಿಸಿಕೊಂಡ ಹದಿನಾಲ್ಕನೇ ವರ್ಷದಲ್ಲಿ ಇದು ಸಂಭವಿಸಿತು. ಆ ದಿವಸದಲ್ಲಿ ಯೆಹೋವನ ಆತ್ಮನಿಂದ ನಾನು ಪರವಶನಾದೆನು. ಆತನು ನನ್ನನ್ನು ಅಲ್ಲಿಗೆ ದರ್ಶನದಲ್ಲಿ ಕೊಂಡೊಯ್ದನು.

ದರ್ಶನವೊಂದರಲ್ಲಿ ಯೆಹೋವನು ನನ್ನನ್ನು ಇಸ್ರೇಲ್ ದೇಶಕ್ಕೆ ಒಯ್ದನು. ಆತನು ನನ್ನನ್ನು ಬಹಳ ಉನ್ನತ ಪರ್ವತದ ಬಳಿ ಇರಿಸಿದನು. ನನ್ನೆದುರಿಗಿದ್ದ ಆ ಪರ್ವತ ಒಂದು ನಗರದಂತೆ ಕಂಡಿತು. ಯೆಹೋವನು ನನ್ನನ್ನು ಅಲ್ಲಿಗೆ ಕರೆತಂದನು. ಅಲ್ಲಿ ಒಬ್ಬನು ತಾಮ್ರದಂತೆ ಹೊಳೆಯುತ್ತಿದ್ದನು. ಅವನ ಕೈಯಲ್ಲಿ ಅಳತೆಯ ನೂಲೂ, ಅಳತೆಯ ಕೋಲೂ ಇದ್ದವು. ಅವನು ದ್ವಾರದ ಬಳಿಯಲ್ಲಿ ನಿಂತಿದ್ದನು. ಆಗ ಅವನು ಹೀಗೆ ಹೇಳಿದನು, “ನರಪುತ್ರನೇ, ನೀನು ನಿನ್ನ ಕಣ್ಣು, ಕಿವಿಗಳನ್ನು ಉಪಯೋಗಿಸು, ಇವೆಲ್ಲವನ್ನೂ ಗಮನಿಸಿ ನನ್ನ ಮಾತುಗಳನ್ನು ಕೇಳು. ನಾನು ತೋರಿಸುವ ಪ್ರತಿಯೊಂದು ವಸ್ತುಗಳ ಮೇಲೆ ಚೆನ್ನಾಗಿ ಲಕ್ಷ್ಯವಿಡು. ಯಾಕೆಂದರೆ ಈ ವಿಷಯಗಳನ್ನು ನಿನಗೆ ತೋರಿಸಬೇಕೆಂದೇ ನಿನ್ನನ್ನು ಇಲ್ಲಿಗೆ ತಂದಿರುವೆ. ನೀನು ನೋಡಿದ್ದೆಲ್ಲವನ್ನೂ ಇಸ್ರೇಲ್ ವಂಶದವರಿಗೆ ತಿಳಿಸಬೇಕು.”

ಆಲಯದ ಹೊರಗಿನಿಂದ ಸುತ್ತಲೂ ಗೋಡೆ ಇರುವದನ್ನು ನಾನು ಕಂಡೆನು. ಅವನ ಕೈಯಲ್ಲಿ ಅಳತೆಯ ಕೋಲಿತ್ತು. ಅದು ಉದ್ದ ಅಳತೆಯಲ್ಲಿ[a] ಆರು ಮೊಳ[b] ಉದ್ದವಾಗಿತ್ತು. ಅವನು ಗೋಡೆಯ ಅಗಲವನ್ನು ಅಳತೆ ಮಾಡಿದಾಗ, ಅದು ಒಂದು ಕೋಲು ಅಗಲವಾಗಿತ್ತು. ಅವನು ಗೋಡೆಯ ಎತ್ತರವನ್ನು ಅಳತೆ ಮಾಡಿದಾಗ ಅದು ಒಂದು ಕೋಲು ಎತ್ತರವಾಗಿತ್ತು.

ಅವನು ಪೂರ್ವದ ದ್ವಾರಕ್ಕೆ ಹೋದನು. ಅವನು ಅದರ ಮೆಟ್ಟಿಲುಗಳ ಬಳಿಗೆ ಹೋಗಿ ದ್ವಾರದ ಅಗಲವನ್ನು ಅಳತೆಮಾಡಿದನು. ಅದು ಒಂದು ಅಳತೆಕೋಲು ಅಗಲವಾಗಿತ್ತು. ದ್ವಾರಪಾಲಕರ ಕೋಣೆಗಳ ಉದ್ದಗಲವು ಒಂದು ಅಳತೆಕೋಲಿನಷ್ಟಿತ್ತು. ಆ ಕೋಣೆಗಳ ನಡುವೆ ಇದ್ದ ಗೋಡೆಯ ಅಗಲ ಐದು ಮೊಳ ಆಲಯಕ್ಕೆ ಎದುರಾಗಿದ್ದ ಹೆಬ್ಬಾಗಿಲ ಕೈಸಾಲೆಯ ಹೊಸ್ತಿಲಿನ ಅಗಲವು ಕೂಡಾ ಒಂದು ಅಳತೆ ಕೋಲಿನಷ್ಟಿತ್ತು. ಅವನು ಕೈಸಾಲೆಯನ್ನು ಅಳತೆ ಮಾಡಿದನು. ಅದು ಎಂಟು ಮೊಳ ಉದ್ದವಾಗಿತ್ತು. ದ್ವಾರದ ಎರಡು ಬದಿಗಳ ಗೋಡೆಯನ್ನು ಅವನು ಅಳತೆ ಮಾಡಿದನು. ಅವು ಎರಡು ಮೊಳ ಅಗಲವಿದ್ದವು. ಆಲಯಕ್ಕೆ ಎದುರಾಗಿದ್ದ ದ್ವಾರದ ಕೊನೆಯಲ್ಲಿ ಕೈಸಾಲೆಯಿತ್ತು. 10 ದ್ವಾರದ ಎರಡು ಬದಿಗಳಲ್ಲಿಯೂ ಮೂರು ಸಣ್ಣ ಕೋಣೆಗಳಿದ್ದವು. ಈ ಕೋಣೆಗಳೆಲ್ಲವೂ ಒಂದೇ ಅಳತೆಯುಳ್ಳವುಗಳಾಗಿದ್ದವು. ಅವುಗಳ ಗೋಡೆಗಳೂ ಸಮಾನ ಅಳತೆಯುಳ್ಳವುಗಳಾಗಿದ್ದವು. 11 ಅವನು ದ್ವಾರದ ಪ್ರವೇಶ ಸ್ಥಳವನ್ನು ಅಳತೆಮಾಡಿದಾಗ ಅದು ಹತ್ತು ಮೊಳ ಅಗಲ ಮತ್ತು ಹದಿಮೂರು ಮೊಳ ಉದ್ದವಾಗಿತ್ತು. 12 ಪ್ರತಿ ಕೋಣೆಯೆದುರು ತಗ್ಗಾದ ಗೋಡೆಯಿತ್ತು. ಅದು ಒಂದು ಮೊಳ ಎತ್ತರ, ಒಂದು ಮೊಳ ದಪ್ಪವಾಗಿತ್ತು. ಆ ಕೋಣೆಗಳು ಚೌಕವಾಗಿದ್ದು ಅದರ ಗೋಡೆಯು ಆರು ಮೊಳ ಉದ್ದವಾಗಿತ್ತು.

13 ಅವನು ಆ ಕೋಣೆಯ ಹೊರಭಾಗದ ತುದಿಯಿಂದ ಇನ್ನೊಂದು ಎದುರಿಗಿದ್ದ ಕೋಣೆಯ ಹೊರಭಾಗದ ತುದಿಯ ತನಕ ಅಳತೆ ಮಾಡಿದಾಗ ಅದು ಇಪ್ಪತ್ತೈದು ಮೊಳವಿತ್ತು. ಅದರ ಬಾಗಿಲುಗಳು ಎದುರುಬದುರಾಗಿದ್ದವು. 14 ಅವನು ಕೈಸಾಲೆಯ ಎರಡು ಬದಿಗಳ ಗೋಡೆಯನ್ನು ಅಳತೆ ಮಾಡಿದಾಗ ಅದರ ಒಟ್ಟು ಅಳತೆ ಅರವತ್ತು ಮೊಳದಷ್ಟಿತ್ತು. 15 ಹೊರಗಿನ ಬಾಗಿಲಿನ ಒಳಭಾಗದ ತುದಿಯಿಂದ ಹಿಡಿದು ಕೈಸಾಲೆಯ ಕೊನೆಯ ತುದಿಯ ತನಕ ಐವತ್ತು ಮೊಳವಿತ್ತು. 16 ಪ್ರತೀ ಕಾವಲು ಮನೆಯ ಮೇಲ್ಗಡೆ ಸಣ್ಣ ಕಿಟಕಿಗಳು, ಗೋಡೆ ಮತ್ತು ಜಗಲಿಗಳು ಇದ್ದವು. ಕಿಟಕಿಯ ಅಗಲದ ಭಾಗವು ಪ್ರವೇಶದ್ವಾರಕ್ಕೆ ಮುಖ ಮಾಡಿದ್ದವು. ಪ್ರವೇಶದ್ವಾರದ ಎರಡೂ ಪಕ್ಕದಲ್ಲಿದ್ದ ಗೋಡೆಗಳ ಮೇಲೆ ಖರ್ಜೂರ ವೃಕ್ಷದ ಚಿತ್ರವನ್ನು ಕೆತ್ತಲಾಗಿತ್ತು.

ಹೊರಗಿನ ಪ್ರಾಕಾರ

17 ಆಮೇಲೆ ಅವನು ನನ್ನನ್ನು ಹೊರಗಿನ ಪ್ರಾಕಾರಕ್ಕೆ ಕರೆದುಕೊಂಡು ಹೋದನು. ಆ ಪ್ರಾಕಾರದ ಸುತ್ತಲೂ ಮೂವತ್ತು ಕೋಣೆಗಳೂ ನೆಲಗಟ್ಟೂ ಇದ್ದವು. ಆ ಕೋಣೆಗಳು ಗೋಡೆಗೆ ತಾಗಿ ನೆಲಗಟ್ಟಿಗೆ ಮುಖ ಮಾಡಿದ್ದವು. 18 ದ್ವಾರದ ಉದ್ದ ಅಳತೆಯಷ್ಟು ನೆಲಗಟ್ಟಿನ ಅಗಲದ ಅಳತೆಯಾಗಿತ್ತು. ನೆಲಗಟ್ಟು ಪ್ರವೇಶ ದ್ವಾರದ ಒಳಗಿನ ತುದಿಯ ತನಕವಿತ್ತು. ಇದು ಕೆಳಗಣ ನೆಲಗಟ್ಟಾಗಿತ್ತು. 19 ಅವನು ಕೆಳಗಣ ಪ್ರವೇಶ ದ್ವಾರದ ಒಳಭಾಗದಿಂದ ಹಿಡಿದು ಒಳಗಿನ ಪ್ರಾಕಾರದ ಹೊರಭಾಗದ ತನಕ ಅಳತೆ ಮಾಡಿದಾಗ ಅದು ನೂರು ಮೊಳ ಉದ್ದ ಪೂರ್ವದಿಕ್ಕಿನಲ್ಲಿಯೂ, ಉತ್ತರದಿಕ್ಕಿನಲ್ಲಿಯೂ ಇತ್ತು.

20 ಆಮೇಲೆ ಹೊರಗಿನ ಪ್ರಾಕಾರದ ಗೋಡೆಯಲ್ಲಿದ್ದ ಉತ್ತರ ಪ್ರವೇಶದ್ವಾರದ ಉದ್ದಗಲವನ್ನು ಅವನು ಅಳತೆ ಮಾಡಿದನು. 21 ಈ ಪ್ರವೇಶದ್ವಾರ, ಅಕ್ಕಪಕ್ಕದಲ್ಲಿದ್ದ ಮೂರು ಕೋಣೆಗಳು ಮತ್ತು ಅದರ ಕೈಸಾಲೆಗಳೆಲ್ಲವೂ ಮೊದಲಿನ ಪ್ರವೇಶದ್ವಾರದಂತೆಯೇ ಅಳತೆಯುಳ್ಳವುಗಳಾಗಿತ್ತು. ಪ್ರವೇಶ ದ್ವಾರವು ಐವತ್ತು ಮೊಳ ಉದ್ದ, ಇಪ್ಪತ್ತೈದು ಮೊಳ ಅಗಲವಿತ್ತು. 22 ಅದರ ಕಿಟಕಿಗಳು, ಕೈಸಾಲೆ, ಖರ್ಜೂರ ವೃಕ್ಷದ ಕೆತ್ತನೆ ಕೆಲಸಗಳೆಲ್ಲವೂ ಪೂರ್ವದ ಪ್ರವೇಶದ್ವಾರದಂತೆಯೇ ಇದ್ದವು. ಹೊರಗಿನಿಂದ ಪ್ರವೇಶ ದ್ವಾರಕ್ಕೆ ಬರಲು ಏಳು ಮೆಟ್ಟಿಲುಗಳಿದ್ದವು. ಅದರ ಕೈಸಾಲೆಯು ಪ್ರವೇಶದ್ವಾರದ ಒಳಭಾಗದ ಕೊನೆಯಲ್ಲಿತ್ತು. 23 ಪ್ರಾಕಾರದ ಹೊರಗೆ ಉತ್ತರದ ಪ್ರವೇಶ ದ್ವಾರದಿಂದ ಒಳಗಿನ ಪ್ರಾಕಾರಕ್ಕೆ ಹೋಗಲು ದ್ವಾರವಿತ್ತು. ಇದು ಪೂರ್ವದಲ್ಲಿದ್ದ ದ್ವಾರದಂತಿತ್ತು. ಅವನು ಒಳಗೋಡೆಯ ದ್ವಾರದಿಂದ ಹೊರಗೋಡೆಯ ದ್ವಾರದ ತನಕ ಅಳೆದಾಗ, ದ್ವಾರದಿಂದ ದ್ವಾರಕ್ಕೆ ನೂರು ಮೊಳವಿತ್ತು.

24 ಆಮೇಲೆ ಅವನು ದಕ್ಷಿಣದ ಗೋಡೆಗೆ ಕರೆದುಕೊಂಡು ಹೋದನು. ಅಲ್ಲಿ ಒಂದು ದ್ವಾರವಿರುವದನ್ನು ಕಂಡೆನು. ಅವನು ಒಳಗಿನ ಗೋಡೆಗಳನ್ನೂ ಕೈಸಾಲೆಯನ್ನೂ ಅಳತೆಮಾಡಿದನು. ಅದರ ಅಳತೆ ಬೇರೆ ಪ್ರವೇಶ ದ್ವಾರಗಳಂತೆ ಇದ್ದವು. 25 ಅದರಲ್ಲಿಯೂ ಅದರ ಕೈಸಾಲೆಯಲ್ಲಿಯೂ ಎಲ್ಲಾ ಕಡೆ ಅಂಥ ಕಿಟಕಿಗಳೇ ಇದ್ದವು. ಆ ಪ್ರವೇಶದ್ವಾರವು ಐವತ್ತು ಮೊಳ ಉದ್ದ ಮತ್ತು ಇಪ್ಪತ್ತೈದು ಮೊಳ ಅಗಲವಿತ್ತು. 26 ಅದರ ಮೇಲೆ ಏರಲು ಏಳು ಮೆಟ್ಟಲುಗಳಿದ್ದವು. ಅದರ ಕೈಸಾಲೆಯು ದ್ವಾರದ ಒಳಗಿನ ಭಾಗದಲ್ಲಿತ್ತು. ಅದರ ಅಕ್ಕಪಕ್ಕದ ಗೋಡೆಗಳಲ್ಲಿ ಖರ್ಜೂರ ವೃಕ್ಷದ ಕೆತ್ತನೆ ಕೆಲಸವಿತ್ತು. 27 ಒಳಗಿನ ಪ್ರಾಕಾರದ ದಕ್ಷಿಣದಲ್ಲಿ ಒಂದು ದ್ವಾರವಿತ್ತು. ಅವನು ಒಳಗಿನ ಪ್ರಾಕಾರದ ದ್ವಾರದಿಂದ ಹೊರಗಿನ ಪ್ರಾಕಾರದ ದ್ವಾರದ ತನಕ ಅಳತೆ ಮಾಡಿದನು. ದ್ವಾರದಿಂದ ದ್ವಾರಕ್ಕೆ ನೂರು ಮೊಳವಿತ್ತು.

ಒಳಗಿನ ಪ್ರಾಕಾರ

28 ಆಮೇಲೆ ಅವನು ದಕ್ಷಿಣದ ದ್ವಾರದಿಂದ ಒಳಗಿನ ಪ್ರಾಕಾರಕ್ಕೆ ಕರೆದುಕೊಂಡು ಹೋದನು. ಈ ಪ್ರವೇಶದ್ವಾರವನ್ನು ಅಳತೆ ಮಾಡಿದನು. ಇದು ಕೂಡಾ ಒಳಗಿನ ಪ್ರಾಕಾರದ ಬೇರೆ ದ್ವಾರಗಳಂತೆಯೇ ಉದ್ದಗಲವಿತ್ತು. 29 ಅದರ ಕೋಣೆಗಳು, ಅಕ್ಕಪಕ್ಕದ ಗೋಡೆಗಳು, ಕೈಸಾಲೆ ಎಲ್ಲವೂ ಬೇರೆ ಪ್ರವೇಶದ್ವಾರಗಳ ಪ್ರಕಾರವೇ ಅಳತೆಯಲ್ಲಿದ್ದವು. ದ್ವಾರದ ಸುತ್ತಲೂ ಕಿಟಕಿಗಳಿದ್ದವು. ಆ ದ್ವಾರವು ಐವತ್ತು ಮೊಳ ಉದ್ದ ಇಪ್ಪತ್ತೈದು ಮೊಳ ಅಗಲವಿತ್ತು. 30 ಕೈಸಾಲೆಯು ಇಪ್ಪತ್ತೈದು ಮೊಳ ಅಗಲ ಐವತ್ತು ಮೊಳ ಉದ್ದವಿತ್ತು. 31 ಹೊರಗಿನ ಪ್ರಾಕಾರದ ಪಕ್ಕದಲ್ಲಿರುವ ಪ್ರವೇಶ ದ್ವಾರದ ಕೊನೆಯಲ್ಲಿ ಕೈಸಾಲೆಯಿತ್ತು. ಖರ್ಜೂರ ವೃಕ್ಷದ ಕೆತ್ತನೆ ಕೆಲಸವು ಅದರ ಗೋಡೆಯ ಮೇಲಿತ್ತು. ಆ ಪ್ರವೇಶ ದ್ವಾರವನ್ನು ಹತ್ತಲು ಎಂಟು ಮೆಟ್ಟಿಲುಗಳಿದ್ದವು.

32 ಅನಂತರ ಅವನು ಪೂರ್ವದಲ್ಲಿದ್ದ ಒಳಗಿನ ಪ್ರಾಕಾರಕ್ಕೆ ಕರೆದುಕೊಂಡು ಹೋದನು. ಅಲ್ಲಿದ್ದ ಪ್ರವೇಶದ್ವಾರವನ್ನು ಅಳತೆ ಮಾಡಿದನು. ಬೇರೆ ದ್ವಾರಗಳ ರೀತಿಯಲ್ಲಿ ಅದರ ಉದ್ದಳತೆಯಿತ್ತು. 33 ಅದರ ಕೋಣೆಗಳು, ಗೋಡೆ, ಕೈಸಾಲೆ ಎಲ್ಲವೂ ಬೇರೆ ಪ್ರವೇಶದ್ವಾರದ ಅಳತೆಯಂತೆ ಇದ್ದವು. ದ್ವಾರದ ಸುತ್ತಲೂ ಕೈಸಾಲೆಯ ಮೇಲೂ ಕಿಟಕಿಗಳಿದ್ದವು. ಆ ಪ್ರವೇಶ ದ್ವಾರವು ಐವತ್ತು ಮೊಳ ಉದ್ದ ಇಪ್ಪತ್ತೈದು ಮೊಳ ಅಗಲವಿತ್ತು. 34 ಅದರ ಕೈಸಾಲೆ ಹೊರ ಪ್ರಾಕಾರದ ಪಕ್ಕದಲ್ಲಿ ಪ್ರವೇಶ ದ್ವಾರದ ಕೊನೆಯಲ್ಲಿತ್ತು. ದ್ವಾರದ ಎರಡು ಪಕ್ಕಗಳ ಗೋಡೆಗಳಲ್ಲಿ ಖರ್ಜೂರ ವೃಕ್ಷದ ಕೆತ್ತನೆ ಕೆಲಸವಿತ್ತು. ಆ ದ್ವಾರಕ್ಕೇರಲು ಎಂಟು ಮೆಟ್ಟಿಲುಗಳಿದ್ದವು.

35 ಆಮೇಲೆ ಅವನು ನನ್ನನ್ನು ಉತ್ತರದ ಪ್ರವೇಶ ದ್ವಾರಕ್ಕೆ ಕರೆದುಕೊಂಡು ಹೋದನು. ಅವನು ಅದನ್ನು ಅಳತೆ ಮಾಡಿದನು. ಬೇರೆ ದ್ವಾರಗಳಂತೆಯೇ ಅದರ ಅಳತೆಯಿತ್ತು. 36 ಅದರ ಕೋಣೆಗಳು, ಗೋಡೆಗಳು ಮತ್ತು ಕೈಸಾಲೆ ಇವೆಲ್ಲವೂ ಬೇರೆ ದ್ವಾರದ ಅಳತೆಯಂತಿತ್ತು. ದ್ವಾರದ ಸುತ್ತಲೂ ಕಿಟಕಿಗಳಿದ್ದವು. ದ್ವಾರವು ಐವತ್ತು ಮೊಳ ಉದ್ದ, ಇಪ್ಪತ್ತೈದು ಮೊಳ ಅಗಲವಿತ್ತು. 37 ಕೈಸಾಲೆಯು ಹೊರ ಪ್ರಾಕಾರದಲ್ಲಿಯ ದ್ವಾರದ ಕೊನೆಯಲ್ಲಿತ್ತು. ಖರ್ಜೂರ ವೃಕ್ಷದ ಚಿತ್ರವು ಗೋಡೆಗಳ ಎರಡೂ ಕಡೆಯ ಮೇಲೆ ಕೆತ್ತಲ್ಪಟ್ಟಿತ್ತು. ದ್ವಾರವನ್ನು ಮುಟ್ಟಲು ಎಂಟು ಮೆಟ್ಟಿಲುಗಳಿದ್ದವು.

ಯಜ್ಞವನ್ನು ತಯಾರು ಮಾಡುವ ಕೋಣೆಗಳು

38 ಈ ದ್ವಾರದ ಕೈಸಾಲೆಗೆ ಮುಖಮಾಡಿ ಬಾಗಿಲಿದ್ದ ಒಂದು ಕೋಣೆಯಿತ್ತು. ಇದು ಯಾಜಕರು ಸರ್ವಾಂಗಹೋಮದ ಪ್ರಾಣಿಗಳನ್ನು ತೊಳೆಯುವ ಸ್ಥಳವಾಗಿತ್ತು. 39 ಬಾಗಿಲಿನ ಅಕ್ಕಪಕ್ಕದಲ್ಲಿ ಎರಡು ಮೇಜುಗಳಿದ್ದವು. ಸರ್ವಾಂಗಹೋಮ, ದೋಷಪರಿಹಾರಕಯಜ್ಞ, ಪಾಪಪರಿಹಾರಕಯಜ್ಞಗಳಿಗೆ ಅರ್ಪಿಸುವ ಪ್ರಾಣಿಗಳನ್ನು ಈ ಮೇಜುಗಳ ಮೇಲೆ ಕೊಲ್ಲುತ್ತಿದ್ದರು. 40 ಈ ಕೈಸಾಲೆಯ ಬಾಗಿಲಿನ ಹೊರಗಿನ ಗೋಡೆಯ ಬದಿಯಲ್ಲಿಯೂ ಎರಡು ಮೇಜುಗಳಿದ್ದವು. 41 ಹೀಗೆ ಒಳಭಾಗದ ಗೋಡೆಯಲ್ಲಿ ನಾಲ್ಕು ಮೇಜುಗಳೂ ಹೊರಭಾಗದ ಗೋಡೆಯ ಬದಿಯಲ್ಲಿ ನಾಲ್ಕು ಮೇಜುಗಳೂ ಇದ್ದವು. ಹೀಗೆ ಯಾಜಕರು ಎಂಟು ಮೇಜುಗಳಲ್ಲಿ ಯಜ್ಞದ ಪಶುಗಳನ್ನು ಸಿದ್ಧಪಡಿಸುತ್ತಿದ್ದರು. 42 ಸರ್ವಾಂಗಹೋಮಕ್ಕಾಗಿ ಕಲ್ಲಿನಿಂದ ಮಾಡಿದ ನಾಲ್ಕು ಮೇಜುಗಳಿದ್ದವು. ಈ ಮೇಜುಗಳು ಒಂದೂವರೆ ಮೊಳ ಉದ್ದ, ಒಂದೂವರೆ ಮೊಳ ಅಗಲ, ಒಂದು ಮೊಳ ಎತ್ತರ. ಈ ಮೇಜುಗಳ ಮೇಲೆ ಪಶುಗಳನ್ನು ವಧಿಸಲು ಉಪಯೋಗಿಸುವ ಉಪಕರಣಗಳನ್ನು ಯಾಜಕರು ಇಡುತ್ತಿದ್ದರು. 43 ಈ ಸ್ಥಳದ ಗೋಡೆಯಲ್ಲಿ ಸುತ್ತಲೂ ಮೂರು ಇಂಚು ಉದ್ದದ ಮಾಂಸವನ್ನು ಸಿಕ್ಕಿಸುವ ಕೊಂಡಿಗಳಿದ್ದವು. ಯಜ್ಞದ ಮಾಂಸವು ಈ ಮೇಜುಗಳ ಮೇಲಿತ್ತು.

ಯಾಜಕರ ಕೋಣೆಗಳು

44 ಒಳಗಿನ ಪ್ರಾಕಾರದಲ್ಲಿ ಎರಡು ಕೋಣೆಗಳಿದ್ದವು. ಒಂದು ಉತ್ತರದ ದ್ವಾರದ ಬಳಿಯಲ್ಲಿ ದಕ್ಷಿಣಕ್ಕೆ ಅಭಿಮುಖವಾಗಿತ್ತು. ಇನ್ನೊಂದು ದಕ್ಷಿಣದ ದ್ವಾರದ ಬಳಿಯಲ್ಲಿದ್ದು ಉತ್ತರಕ್ಕೆ ಅಭಿಮುಖವಾಗಿತ್ತು. 45 ಅವನು, “ದಕ್ಷಿಣಕ್ಕೆ ಅಭಿಮುಖವಾಗಿದ್ದ ಕೋಣೆಯು, ಆಲಯದಲ್ಲಿ ಯಾಜಕ ಉದ್ಯೋಗ ಮಾಡುತ್ತಿರುವ ಯಾಜಕರಿಗಾಗಿ. 46 ಆದರೆ ಉತ್ತರಕ್ಕೆ ಅಭಿಮುಖವಾಗಿರುವ ಕೋಣೆಯು ಯಜ್ಞವೇದಿಯಲ್ಲಿ ಕಾರ್ಯವಹಿಸುತ್ತಿರುವ ಯಾಜಕರಿಗಾಗಿ, ಯಾಜಕರೆಲ್ಲರೂ ಲೇವಿ ಕುಲದವರಾಗಿದ್ದಾರೆ. ಎರಡನೇ ಗುಂಪಿನ ಯಾಜಕರು ಚಾದೋಕನ ಸಂತತಿಯವರಾಗಿದ್ದರು. ಅವರು ಮಾತ್ರವೇ ಯಜ್ಞವೇದಿಯಲ್ಲಿ ಯಜ್ಞಾರ್ಪಣೆ ಮಾಡಬಹುದು” ಎಂದು ಹೇಳಿದನು.

47 ಅವನು ಒಳಗಿನ ಪ್ರಾಕಾರವನ್ನು ಅಳತೆ ಮಾಡಿದನು. ಅದು ಚೌಕವಾಗಿದ್ದು ನೂರು ಮೊಳ ಉದ್ದ, ನೂರು ಮೊಳ ಅಗಲವಿತ್ತು. ಈ ಯಜ್ಞವೇದಿಕೆಯು ಆಲಯದ ಮುಂಭಾಗದಲ್ಲಿತ್ತು.

ಆಲಯದ ಕೈಸಾಲೆ

48 ಆಮೇಲೆ ಅವನು ಆಲಯದ ಕೈಸಾಲೆಗೆ ನನ್ನನ್ನು ಕರೆದುಕೊಂಡು ಹೋದನು. ಅದರ ಇಕ್ಕೆಡೆಗಳಲ್ಲಿಯೂ ಇರುವ ಗೋಡೆಗಳನ್ನು ಅವನು ಅಳತೆ ಮಾಡಲಾಗಿ ಗೋಡೆಯು ಐದು ಮೊಳ ದಪ್ಪ, ಮೂರು ಮೊಳ ಅಗಲವಾಗಿತ್ತು. ಅದರ ಮಧ್ಯದ ಸ್ಥಳ ಹದಿನಾಲ್ಕು ಮೊಳವಿತ್ತು. 49 ಕೈಸಾಲೆಯು ಇಪ್ಪತ್ತು ಮೊಳ ಅಗಲ ಮತ್ತು ಹನ್ನೆರಡು ಮೊಳ ಉದ್ದವಾಗಿತ್ತು. ಆ ಕೈಸಾಲೆಯನ್ನು ಹತ್ತಲು ಹತ್ತು ಮೆಟ್ಟಿಲುಗಳಿದ್ದವು. ಕೈಸಾಲೆಯ ಇಕ್ಕೆಡೆಗಳಲ್ಲಿಯೂ ಗೋಡೆಗಳಿಗೆ ಸ್ತಂಭಗಳಿದ್ದವು.

ಕೀರ್ತನೆಗಳು 91

91 ಮಹೋನ್ನತನ ಮೊರೆಹೊಕ್ಕಿರುವವನು
    ಸರ್ವಶಕ್ತನ ಆಶ್ರಯದಲ್ಲಿ ಸುರಕ್ಷಿತನಾಗಿರುವನು.
ನಾನು ಯೆಹೋವನಿಗೆ, “ನೀನೇ ನನ್ನ ಆಶ್ರಯಸ್ಥಾನವೂ
    ನನ್ನ ಕೋಟೆಯೂ ನಾನು ಭರವಸವಿಟ್ಟಿರುವ ನನ್ನ ದೇವರೂ” ಎಂದು ಹೇಳುವೆನು.
ನಿನ್ನನ್ನು ಬೇಟೆಗಾರನ ಬಲೆಯಿಂದಲೂ
    ಮರಣಕರವಾದ ವ್ಯಾಧಿಯಿಂದಲೂ ತಪ್ಪಿಸುವವನು ಆತನೇ.
ಆತನು ನಿನ್ನನ್ನು ತನ್ನ ರೆಕ್ಕೆಗಳಿಂದ ಹೊದಗಿಸಿಕೊಳ್ಳುವನು.
    ಆತನ ರೆಕ್ಕೆಗಳನ್ನು ನೀನು ಆಶ್ರಯಿಸಿಕೊಳ್ಳುವೆ.
    ಆತನ ನಂಬಿಗಸ್ತಿಕೆಯು ನಿನಗೆ ಗುರಾಣಿಯೂ ಕೋಟೆಯೂ ಆಗಿದೆ.
ಇರುಳಲ್ಲಿ ನೀನು ಯಾವುದಕ್ಕೂ ಭಯಪಡಬೇಕಿಲ್ಲ;
    ಹಗಲಲ್ಲಿ ಶತ್ರುಗಳ ಬಾಣಗಳಿಗೂ ನೀನು ಹೆದರಬೇಕಿಲ್ಲ.
ಕತ್ತಲೆಯಲ್ಲಿ ಬರುವ ರೋಗಗಳಿಗಾಗಲಿ
    ಮಧ್ಯಾಹ್ನದಲ್ಲಿ ಬರುವ ಭಯಂಕರ ಕಾಯಿಲೆಗಳಿಗಾಗಲಿ ನೀನು ಹೆದರಬೇಕಿಲ್ಲ.
ನೀನು ಸಾವಿರ ವೈರಿಗಳನ್ನು ಸೋಲಿಸುವೆ.
    ನಿನ್ನ ಬಲಗೈ ಹತ್ತುಸಾವಿರ ಶತ್ರು ಸೈನಿಕರನ್ನು ಸೋಲಿಸುವುದು.
    ನಿನ್ನ ಶತ್ರುಗಳಿಗೆ ನಿನ್ನನ್ನು ಮುಟ್ಟಲೂ ಸಾಧ್ಯವಾಗದು.
ನೀನು ಅದನ್ನು ಕಣ್ಣಾರೆ ಕಂಡು
    ದುಷ್ಟರಿಗೆ ದಂಡನೆಯಾಯಿತೆಂದು ತಿಳಿದುಕೊಳ್ಳುವೆ.
ಯಾಕೆಂದರೆ ನಿನ್ನ ಭರವಸವು ಯೆಹೋವನಲ್ಲಿಯೇ.
    ನಿನ್ನ ಆಶ್ರಯಸ್ಥಾನವು ಮಹೋನ್ನತನಾದ ದೇವರೇ.
10 ಯಾವ ಕೇಡೂ ನಿನಗೆ ಸಂಭವಿಸದು.
    ನಿನ್ನ ಮನೆಯಲ್ಲಿ ಯಾವ ರೋಗಗಳೂ ಇರದು.
11 ನೀನು ಹೋದಲ್ಲೆಲ್ಲಾ ನಿನ್ನನ್ನು ಕಾಯಲು ಆತನು ತನ್ನ ದೂತರಿಗೆ ಆಜ್ಞಾಪಿಸುವನು.
12 ನಿನ್ನ ಪಾದಗಳು ಕಲ್ಲಿಗೆ ತಗಲದಂತೆ ದೇವದೂತರುಗಳು
    ನಿನ್ನನ್ನು ಕೈಗಳಲ್ಲಿ ಎತ್ತಿಕೊಳ್ಳುವರು.
13 ಸಿಂಹಗಳ ಮೇಲೆಯೂ ಮತ್ತು
    ವಿಷಸರ್ಪಗಳ ಮೇಲೆಯೂ ನಡೆಯಲು ನೀನು ಶಕ್ತನಾಗಿರುವೆ.
14 ಯೆಹೋವನು ಹೇಳುವುದೇನೆಂದರೆ: “ನನ್ನಲ್ಲಿ ಭರವಸವಿಡುವವನನ್ನು ರಕ್ಷಿಸುವೆನು;
    ನನ್ನ ಹೆಸರನ್ನು ಆರಾಧಿಸುವ ಭಕ್ತರನ್ನು ಸಂರಕ್ಷಿಸುವೆನು.
15 ನನ್ನ ಭಕ್ತರು ಸಹಾಯಕ್ಕಾಗಿ ಮೊರೆಯಿಡುವಾಗ, ಸದುತ್ತರವನ್ನು ದಯಪಾಲಿಸುವೆನು.
    ಆಪತ್ತಿನಲ್ಲಿಯೂ ನಾನು ಅವರೊಂದಿಗಿರುವೆನು;
    ಅವರನ್ನು ತಪ್ಪಿಸಿ ಘನಪಡಿಸುವೆನು.
16 ನನ್ನ ಭಕ್ತರಿಗೆ ದೀರ್ಘಾಯುಷ್ಯವನ್ನು ನೀಡಿ ತೃಪ್ತಿಪಡಿಸುವೆನು;
    ನನ್ನ ವಿಶೇಷವಾದ ರಕ್ಷಣೆಯನ್ನು ತೋರಿಸಿ ಕಾಪಾಡುವೆನು.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International