M’Cheyne Bible Reading Plan
ಸೊಲೊಮೋನನಿಗೆ ದೇವದರ್ಶನ
9 ಸೊಲೊಮೋನನು ಯೆಹೋವನ ಆಲಯವನ್ನು ಮತ್ತು ತನ್ನ ಅರಮನೆಯನ್ನು ಕಟ್ಟಿ ಮುಗಿಸಿದನು. ಸೊಲೊಮೋನನು ತಾನು ಕಟ್ಟಬೇಕೆಂದು ಅಪೇಕ್ಷಿಸಿದ ಎಲ್ಲವನ್ನು ಕಟ್ಟಿ ಮುಗಿಸಿದನು. 2 ಆಗ ಯೆಹೋವನು ಸೊಲೊಮೋನನಿಗೆ, ಈ ಮುಂಚೆ ಗಿಬ್ಯೋನ್ ಪಟ್ಟಣದಲ್ಲಿ ಪ್ರತ್ಯಕ್ಷನಾದಂತೆ ಮತ್ತೆ ಪ್ರತ್ಯಕ್ಷನಾದನು. 3 ಯೆಹೋವನು ಅವನಿಗೆ ಹೀಗೆ ಹೇಳಿದನು:
“ನಿನ್ನ ಪ್ರಾರ್ಥನೆಯು ನನಗೆ ಕೇಳಿಸಿತು. ನಿನ್ನ ಬಿನ್ನಹಗಳನ್ನು ಆಲಿಸಿದೆನು. ಈ ಆಲಯವನ್ನು ನೀನು ಕಟ್ಟಿಸಿದೆ. ನಾನು ಅದನ್ನು ಪವಿತ್ರಸ್ಥಳವನ್ನಾಗಿ ಮಾಡಿದೆ. ಆದ್ದರಿಂದ ನಾನಿಲ್ಲಿ ಸದಾಕಾಲ ಸನ್ಮಾನಿಸಲ್ಪಡುವೆನು. ನನ್ನ ದೃಷ್ಟಿಯೂ ಮನಸ್ಸೂ ಸದಾ ಅದರ ಮೇಲಿರುತ್ತದೆ. 4 ನಿನ್ನ ತಂದೆಯಾದ ದಾವೀದನು ಸೇವೆಮಾಡಿದಂತೆ ನೀನೂ ನನ್ನ ಸೇವೆಮಾಡಬೇಕು, ಅವನು ನ್ಯಾಯವಂತನಾಗಿದ್ದನು ಮತ್ತು ಯಥಾರ್ಥವಂತನಾಗಿದ್ದನು; ನೀನು ನನ್ನ ನಿಯಮಗಳಿಗೆ ವಿಧೇಯನಾಗಿರಬೇಕು ಮತ್ತು ನಾನು ನಿನಗೆ ಆಜ್ಞಾಪಿಸಿದವುಗಳನ್ನೆಲ್ಲ ಮಾಡಬೇಕು. 5 ನೀನು ಅವುಗಳನ್ನೆಲ್ಲಾ ಕೈಕೊಂಡು ನಡೆದರೆ ಯಾವಾಗಲೂ ನಿನ್ನ ಕುಟುಂಬದ ಯಾವನಾದರೊಬ್ಬನು ಇಸ್ರೇಲಿನ ರಾಜನಾಗಿರುತ್ತಾನೆಂದು ನಾನು ನಿನಗೆ ವಾಗ್ದಾನ ಮಾಡುತ್ತೇನೆ. ನಿನ್ನ ತಂದೆಯಾದ ದಾವೀದನಿಗೆ ನಾನು ಈ ವಾಗ್ದಾನವನ್ನು ಮಾಡಿದ್ದೆನು. ಯಾವಾಗಲೂ ಅವನ ಸಂತತಿಯವರಲ್ಲಿ ಯಾವನಾದರೊಬ್ಬನು ಇಸ್ರೇಲನ್ನು ಆಳುತ್ತಾನೆಂದು ನಾನು ಅವನಿಗೆ ಹೇಳಿದ್ದೆನು.
6-7 “ಆದರೆ ನೀನಾಗಲಿ ನಿನ್ನ ಮಕ್ಕಳಾಗಲಿ ನನ್ನನ್ನು ಅನುಸರಿಸುವುದನ್ನು ನಿಲ್ಲಿಸಿದರೆ, ನನ್ನ ಕಟ್ಟಳೆಗಳನ್ನೂ ಆಜ್ಞೆಗಳನ್ನೂ ನೀನು ಅನುಸರಿಸದಿದ್ದರೆ, ಅನ್ಯದೇವರುಗಳ ಸೇವೆಯನ್ನಾಗಲಿ ಪೂಜೆಯನ್ನಾಗಲಿ ನೀನು ಮಾಡಿದರೆ, ನಾನು ದಯಪಾಲಿಸಿರುವ ದೇಶವನ್ನು ಬಿಟ್ಟುಹೋಗುವಂತೆ ನಾನು ಇಸ್ರೇಲರನ್ನು ಬಲಾತ್ಕರಿಸುತ್ತೇನೆ. ಅನ್ಯಜನರಿಗೆ ಇಸ್ರೇಲರು ಉದಾಹರಣೆಯಾಗುತ್ತಾರೆ. ಅನ್ಯಜನರು ಇಸ್ರೇಲರನ್ನು ಅಪಹಾಸ್ಯ ಮಾಡುತ್ತಾರೆ. ನಾನು ಈ ಆಲಯವನ್ನು ಪವಿತ್ರವನ್ನಾಗಿಸಿದೆ. ಜನರು ನನ್ನನ್ನು ಗೌರವಿಸುವ ಸ್ಥಳ ಅದಾಗಿದೆ. ಆದರೆ ನೀನು ನನ್ನನ್ನು ಅನುಸರಿಸದೆ ಇದ್ದರೆ, ಆಗ ನಾನದನ್ನು ಧೂಳೀಪಟ ಮಾಡುತ್ತೇನೆ. 8 ಈ ಆಲಯವನ್ನು ನಾಶಗೊಳಿಸುತ್ತೇನೆ. ಇದನ್ನು ನೋಡುವ ಪ್ರತಿಯೊಬ್ಬರೂ ವಿಸ್ಮಿತರಾಗುವರು. ‘ಈ ದೇಶಕ್ಕೂ ಈ ಆಲಯಕ್ಕೂ ಇಂತಹ ಭೀಕರ ಕಾರ್ಯವನ್ನು ಯೆಹೋವನು ಏಕೆ ಮಾಡಿದನು?’ ಎಂದು ಜನರು ಕೇಳುತ್ತಾರೆ. 9 ‘ಇದು ಏಕೆ ಸಂಭವಿಸಿತೆಂದರೆ, ಅವರು ತಮ್ಮ ದೇವರಾದ ಯೆಹೋವನನ್ನು ತ್ಯಜಿಸಿದರು. ಆತನು ಅವರ ಪೂರ್ವಿಕರನ್ನು ಈಜಿಪ್ಟಿನಿಂದ ಬರಮಾಡಿದನು. ಆದರೆ ಅವರು ಅನ್ಯದೇವರುಗಳನ್ನು ಅನುಸರಿಸಲು ತೀರ್ಮಾನಿಸಿದರು. ಅವರು ಆ ದೇವರುಗಳ ಪೂಜೆಯನ್ನೂ ಸೇವೆಯನ್ನೂ ಮಾಡಲಾರಂಭಿಸಿದರು. ಆದಕಾರಣವೇ ಈ ಕೆಟ್ಟಕಾರ್ಯಗಳೆಲ್ಲಾ ಅವರಿಗೆ ಸಂಭವಿಸುವಂತೆ ಯೆಹೋವನು ಮಾಡಿದನು’ ಎಂದು ಅನ್ಯಜನರು ಉತ್ತರಿಸುವರು.”
10 ಯೆಹೋವನ ಆಲಯವನ್ನು ಮತ್ತು ರಾಜನ ಅರಮನೆಯನ್ನು ಕಟ್ಟಲು ರಾಜನಾದ ಸೊಲೊಮೋನನಿಗೆ ಇಪ್ಪತ್ತು ವರ್ಷಗಳು ಹಿಡಿಯಿತು. 11 ರಾಜನಾದ ಸೊಲೊಮೋನನು ಇಪ್ಪತ್ತು ವರ್ಷಗಳ ತರುವಾಯ ಗಲಿಲಾಯದ ಇಪ್ಪತ್ತು ಪಟ್ಟಣಗಳನ್ನು ತೂರಿನ ರಾಜನಾದ ಹೀರಾಮನಿಗೆ ಬಿಟ್ಟುಕೊಟ್ಟನು. ಆಲಯವನ್ನು ಮತ್ತು ಅರಮನೆಯನ್ನು ನಿರ್ಮಿಸಲು ಹೀರಾಮನು ಸಹಾಯ ಮಾಡಿದ್ದರಿಂದ ಸೊಲೊಮೋನನು ಹೀರಾಮನಿಗೆ ಈ ಪಟ್ಟಣಗಳನ್ನು ಕೊಟ್ಟನು. ಸೊಲೊಮೋನನು ಅಪೇಕ್ಷಿಸಿದ ದೇವದಾರು ಮರಗಳನ್ನು, ತುರಾಯಿ ಮರಗಳನ್ನು ಮತ್ತು ಬಂಗಾರವನ್ನು ಹೀರಾಮನು ಕೊಟ್ಟಿದ್ದನು. 12 ಸೊಲೊಮೋನನು ಬಿಟ್ಟುಕೊಟ್ಟ ಪಟ್ಟಣಗಳನ್ನು ನೋಡುವುದಕ್ಕಾಗಿ ಹೀರಾಮನು ತೂರಿನಿಂದ ಬಂದನು. ಹೀರಾಮನು ಆ ಪಟ್ಟಣಗಳನ್ನು ನೋಡಿದಾಗ ಅವನಿಗೆ ತೃಪ್ತಿಯಾಗಲಿಲ್ಲ. 13 ರಾಜನಾದ ಹೀರಾಮನು, “ಸಹೋದರನೇ, ನೀನು ನನಗೆ ಕೊಟ್ಟಿರುವ ಪಟ್ಟಣಗಳು ಏಕೆ ಹೀಗಿವೆ?” ಎಂದು ಕೇಳಿದನು. ರಾಜನಾದ ಹೀರಾಮನು ಆ ದೇಶಕ್ಕೆ ಕಾಬೂಲ್ ದೇಶವೆಂದು ಹೆಸರಿಟ್ಟನು. ಆ ಪ್ರದೇಶವನ್ನು ಇಂದಿಗೂ ಕಾಬೂಲ್ ಎಂದೇ ಕರೆಯುತ್ತಾರೆ. 14 ಹೀರಾಮನು ರಾಜನಾದ ಸೊಲೊಮೋನನಿಗೆ ಆಲಯದ ನಿರ್ಮಾಣಕ್ಕೆ ಉಪಯೋಗಿಸಲು ಒಂಭತ್ತು ಸಾವಿರ ಪೌಂಡು ಬಂಗಾರವನ್ನು ಕಳುಹಿಸಿದ್ದನು.
15 ರಾಜನಾದ ಸೊಲೊಮೋನನು ತಾನು ನಿರ್ಮಿಸಿದ್ದ ಆಲಯದ ಮತ್ತು ಅರಮನೆಯ ಕೆಲಸಗಳನ್ನು ಮಾಡಲು ಗುಲಾಮರನ್ನು ಬಲಾತ್ಕರಿಸಿದನು. ರಾಜನಾದ ಸೊಲೊಮೋನನು ಇತರ ಅನೇಕ ಕಟ್ಟಡಗಳ ನಿರ್ಮಾಣಕ್ಕೆ ಬಿಟ್ಟಿಕೆಲಸದವರನ್ನು ಉಪಯೋಗಿಸಿಕೊಂಡನು. ಅವನು ಮಿಲ್ಲೋ ಕೋಟೆಯನ್ನು ನಿರ್ಮಿಸಿದನು; ಜೆರುಸಲೇಮಿನ ಸುತ್ತಲೂ ನಗರದ ಗೋಡೆಯನ್ನು ಕಟ್ಟಿಸಿದನು; ಅಲ್ಲದೆ ಅವನು ಹಾಚೋರ್, ಮೆಗಿದ್ದೋ ಮತ್ತು ಗೆಜೆರ್ ನಗರಗಳನ್ನು ಕಟ್ಟಿಸಿದನು.
16 ಹಿಂದೊಮ್ಮೆ, ಈಜಿಪ್ಟಿನ ರಾಜನು ಗೆಜೆರ್ ನಗರದ ವಿರುದ್ದ ಹೋರಾಟಮಾಡಿ, ಅದನ್ನು ಸುಟ್ಟುಹಾಕಿದ್ದನು. ಅವನು ಅಲ್ಲಿ ನೆಲೆಸಿದ್ದ ಕಾನಾನ್ಯ ಜನರನ್ನು ಕೊಂದು ಹಾಕಿದ್ದನು. ಸೊಲೊಮೋನನು ಫರೋಹನ ಮಗಳನ್ನು ಮದುವೆಯಾದನು. ಆದ್ದರಿಂದ ಫರೋಹನು ಆ ನಗರವನ್ನು ಸೊಲೊಮೋನನಿಗೆ ಮದುವೆಯ ಕೊಡುಗೆಯಾಗಿ ಕೊಟ್ಟನು. 17 ರಾಜನಾದ ಸೊಲೊಮೋನನು ಆ ನಗರವನ್ನು ಮತ್ತೆ ನಿರ್ಮಿಸಿದನು. ಸೊಲೊಮೋನನು ಕೆಳಗಿನ ಬೇತ್‌ಹೋರೋನ್ ನಗರವನ್ನು ಸಹ ಕಟ್ಟಿಸಿದನು; 18 ಮರಳುಗಾಡಿನಲ್ಲಿರುವ ಬಾಲಾತ್ ಮತ್ತು ತಾಮಾರ್ ನಗರಗಳನ್ನೂ ಕಟ್ಟಿಸಿದನು; 19 ಧಾನ್ಯಗಳನ್ನು ಮತ್ತು ಇತರ ವಸ್ತುಗಳನ್ನು ಸಂಗ್ರಹಿಸುವ ಉಗ್ರಾಣನಗರಗಳನ್ನು ಸಹ ಕಟ್ಟಿಸಿದನು; ತನ್ನ ರಥಗಳಿಗೆ ಮತ್ತು ಕುದುರೆಗಳಿಗೆ ತಾಣವಾದ ಸ್ಥಳಗಳನ್ನೂ ಕಟ್ಟಿಸಿದನು; ತಾನು ಆಳುತ್ತಿದ್ದ ಜೆರುಸಲೇಮಿನಲ್ಲಿ, ಲೆಬನೋನಿನಲ್ಲಿ, ಮತ್ತಿತರ ಎಲ್ಲಾ ಸ್ಥಳಗಳಲ್ಲಿ ತಾನು ಅಪೇಕ್ಷಿಸಿದ ಕಟ್ಟಡಗಳನ್ನೆಲ್ಲ ಕಟ್ಟಿಸಿದನು.
20 ಆ ದೇಶದಲ್ಲಿ ಇಸ್ರೇಲರಲ್ಲದ ಅನ್ಯಜನರೂ ಇದ್ದರು. ಆ ಜನರೆಂದರೆ: ಅಮೋರಿಯರು, ಹಿತ್ತಿಯರು, ಪೆರಿಜ್ಜೀಯರು, ಹಿವ್ವೀಯರು ಮತ್ತು ಯೆಬೂಸಿಯರು. 21 ಇಸ್ರೇಲರು ಈ ಜನರನ್ನು ನಾಶಪಡಿಸಲು ಸಮರ್ಥರಾಗಿರಲಿಲ್ಲ. ಆದರೆ ಸೊಲೊಮೋನನು ಅವರನ್ನು ತನ್ನ ಕೆಲಸ ಮಾಡಲು ಗುಲಾಮರನ್ನಾಗಿ ಇಟ್ಟುಕೊಂಡನು; ಅವರು ಇಂದಿಗೂ ಗುಲಾಮರಾಗಿದ್ದಾರೆ. 22 ಸೊಲೊಮೋನನು ಇಸ್ರೇಲರಾದ ಯಾರನ್ನೂ ತನ್ನ ಗುಲಾಮರಾಗಲು ಬಲಾತ್ಕರಿಸಲಿಲ್ಲ. ಇಸ್ರೇಲಿನ ಜನರು ಸೈನಿಕರಾಗಿದ್ದರು; ಸರ್ಕಾರದ ನೌಕರರಾಗಿದ್ದರು; ಅಧಿಕಾರಿಗಳಾಗಿದ್ದರು; ಸೇನಾಪತಿಗಳಾಗಿದ್ದರು; ರಥಾಶ್ವಗಳಿಗೂ ಅಶ್ವಪೇದೆಗೂ ಮಹಾ ಸೇನಾಧಿಪತಿಗಳಾಗಿದ್ದರು. 23 ಸೊಲೊಮೋನನ ಯೋಜನೆಗಳ ಉಸ್ತುವಾರಿಗೆ ಐನೂರ ಐವತ್ತು ಮಂದಿ ಮೇಲ್ವಿಚಾರಕರಿದ್ದರು. ಅವರು ಕೆಲಸ ಮಾಡುವ ಜನರ ಮೇಲಿನ ಅಧಿಕಾರಿಗಳಾಗಿದ್ದರು.
24 ಫರೋಹನ ಮಗಳು ದಾವೀದ ನಗರವನ್ನು ಬಿಟ್ಟು ಸೊಲೊಮೋನನು ಅವಳಿಗಾಗಿ ಕಟ್ಟಿಸಿದ ದೊಡ್ಡ ಮನೆಗೆ ಹೋದಳು. ಆಗ ಸೊಲೊಮೋನನು ಮಿಲ್ಲೋ ಕೋಟೆಯನ್ನು ಕಟ್ಟಿಸಿದನು.
25 ಸೊಲೊಮೋನನು ಪ್ರತಿವರ್ಷದಲ್ಲೂ ಮೂರು ಸಲ ಸರ್ವಾಂಗಹೋಮಗಳನ್ನು, ಸಮಾಧಾನಯಜ್ಞಗಳನ್ನು ಯಜ್ಞವೇದಿಕೆಯ ಮೇಲೆ ಅರ್ಪಿಸುತ್ತಿದ್ದನು. ಈ ಯಜ್ಞವೇದಿಕೆಯನ್ನು ಸೊಲೊಮೋನನು ಯೆಹೋವನಿಗಾಗಿ ನಿರ್ಮಿಸಿದನು. ರಾಜನಾದ ಸೊಲೊಮೋನನು ಯೆಹೋವನ ಮುಂದೆ ಸುಗಂಧ ಧೂಪವನ್ನು ಸುಡುತ್ತಿದ್ದನು. ಅವನು ಆಲಯಕ್ಕೆ ಬೇಕಾದ ವಸ್ತುಗಳನ್ನು ಕೊಡುತ್ತಿದ್ದನು.
26 ರಾಜನಾದ ಸೊಲೊಮೋನನು ಏಚ್ಯೋನ್ಗೆಬೆರಿನಲ್ಲಿ ಹಡಗುಗಳನ್ನು ಸಹ ನಿರ್ಮಿಸಿದನು. ಈ ಪಟ್ಟಣವು ಎದೋಮ್ ದೇಶದಲ್ಲಿ ಕೆಂಪು ಸಮುದ್ರತೀರದ ಏಲೋತಿನ ಹತ್ತಿರದಲ್ಲಿದೆ. 27 ಸಮುದ್ರದ ಬಗ್ಗೆ ಹೆಚ್ಚಿಗೆ ತಿಳಿದಿರುವ ಕೆಲವು ಜನರು ರಾಜನಾದ ಹೀರಾಮನ ಹತ್ತಿರ ಇದ್ದರು. ಅವರು ಅನುಭವಸ್ಥ ನಾವಿಕರಾಗಿದ್ದರು. ಸೊಲೊಮೋನನ ಹಡಗುಗಳಲ್ಲಿ ಅವನ ಜನರೊಡನೆ ಕೆಲಸಮಾಡಲು, ರಾಜನಾದ ಹೀರಾಮನು ತನ್ನ ನಿಪುಣರಾದ ಜನರನ್ನು ಕಳುಹಿಸಿದನು. 28 ಸೊಲೊಮೋನನ ಹಡಗುಗಳು ಓಫೀರಿಗೆ ಹೋದವು. ಆ ಹಡಗುಗಳು ರಾಜನಾದ ಸೊಲೊಮೋನನಿಗೆ ಹದಿನಾಲ್ಕು ಸಾವಿರದ ಇನ್ನೂರ ಎಂಭತ್ತು ಕಿಲೋಗ್ರಾಂ ಬಂಗಾರವನ್ನು ಓಫೀರಿನಿಂದ ತೆಗೆದುಕೊಂಡು ಬಂದವು.
ಮಕ್ಕಳು ಮತ್ತು ತಂದೆತಾಯಿಗಳು
6 ಮಕ್ಕಳೇ, ಪ್ರಭುವಿನ ಚಿತ್ತಕ್ಕನುಸಾರವಾಗಿ ನಿಮ್ಮ ತಂದೆತಾಯಿಗಳಿಗೆ ವಿಧೇಯರಾಗಿರಿ. ಅದು ನ್ಯಾಯಬದ್ಧವಾದದ್ದಾಗಿದೆ. 2 ದೇವಾಜ್ಞೆಯು ಹೇಳುವಂತೆ, “ನೀವು ನಿಮ್ಮ ತಂದೆತಾಯಿಗಳನ್ನು ಗೌರವಿಸಬೇಕು.”(A) ಈ ಮೊದಲನೆಯ ಆಜ್ಞೆಯು ವಾಗ್ದಾನವನ್ನು ಒಳಗೊಂಡಿದೆ. 3 ಆ ವಾಗ್ದಾನವು ಇಂತಿದೆ: “ಆಗ ನಿಮಗೆ ಒಳ್ಳೆಯದಾಗುವುದು ಮತ್ತು ನೀವು ಭೂಮಿಯ ಮೇಲೆ ಬಹುಕಾಲ ಬದುಕುವಿರಿ.”(B)
4 ತಂದೆಗಳೇ, ನಿಮ್ಮ ಮಕ್ಕಳನ್ನು ಸಿಟ್ಟಿಗೆಬ್ಬಿಸದೆ ಪ್ರಭುವಿನ ಉಪದೇಶದಿಂದಲೂ ಬಾಲಶಿಕ್ಷೆಯಿಂದಲೂ ಬೆಳೆಸಿರಿ.
ಸೇವಕರು ಮತ್ತು ಯಜಮಾನರು
5 ಸೇವಕರೇ, ನಿಮ್ಮ ಇಹಲೋಕದ ಯಜಮಾನರಿಗೆ ಭಯದಿಂದಲೂ ಗೌರವದಿಂದಲೂ ವಿಧೇಯರಾಗಿರಿ. ನೀವು ಕ್ರಿಸ್ತನಿಗೆ ವಿಧೇಯರಾಗುವಂತೆ ಯಥಾರ್ಥವಾದ ಹೃದಯದಿಂದ ವಿಧೇಯರಾಗಿರಿ. 6 ಅವರ ಮೆಚ್ಚಿಕೆಯನ್ನು ಗಳಿಸಿಕೊಳ್ಳಬೇಕೆಂದು ಅವರು ಗಮನಿಸುತ್ತಿರುವಾಗ ಮಾತ್ರ ಸೇವೆ ಮಾಡದೆ ನೀವು ಕ್ರಿಸ್ತನಿಗೆ ವಿಧೇಯರಾಗಿರುವಂತೆ ಅವರಿಗೆ ವಿಧೇಯರಾಗಿರಬೇಕು. ದೇವರಿಗೆ ಇಷ್ಟವಾದದ್ದನ್ನು ನೀವು ಪೂರ್ಣಹೃದಯದಿಂದ ಮಾಡಬೇಕು. 7 ನೀವು ಮಾಡತಕ್ಕ ಕೆಲಸವನ್ನು ಸಂತೋಷದಿಂದ ಮಾಡಿರಿ. ಕೇವಲ ಮನುಷ್ಯರ ಸೇವೆಯನ್ನು ಮಾಡುವವರಂತೆ ಮಾಡದೆ ಪ್ರಭುವಿನ ಸೇವೆಯನ್ನು ಮಾಡುವವರಂತೆ ಮಾಡಿರಿ. 8 ಒಳ್ಳೆಯದನ್ನು ಮಾಡುವ ಪ್ರತಿಯೊಬ್ಬನಿಗೂ ದೇವರು ಪ್ರತಿಫಲವನ್ನು ಕೊಡುತ್ತಾನೆಂಬುದನ್ನು ಜ್ಞಾಪಕದಲ್ಲಿಟ್ಟುಕೊಳ್ಳಿರಿ. ಪ್ರತಿಯೊಬ್ಬ ವ್ಯಕ್ತಿಯು ಅವನು ಸೇವಕನಾಗಿರಲಿ ಅಥವಾ ಸ್ವತಂತ್ರನಾಗಿರಲಿ ತಾನು ಮಾಡುವ ಒಳ್ಳೆಯ ಕಾರ್ಯಗಳಿಗೆ ಪ್ರತಿಫಲವನ್ನು ಹೊಂದುವನು.
9 ಯಜಮಾನರೇ, ಅದೇರೀತಿಯಲ್ಲಿ ನಿಮ್ಮ ಸೇವಕರಿಗೆ ಒಳ್ಳೆಯವರಾಗಿರಿ. ಅವರಿಗೆ ಹೆದರಿಕೆಯಾಗುವಂಥ ಮಾತುಗಳನ್ನಾಡಬೇಡಿ. ನಿಮಗೂ ಅವರಿಗೂ ಒಡೆಯನಾಗಿರುವಾತನು ಪರಲೋಕದಲ್ಲಿದ್ದಾನೆ ಎಂಬುದು ನಿಮಗೆ ತಿಳಿದಿದೆ. ಆತನು ಪ್ರತಿಯೊಬ್ಬನಿಗೂ ಪಕ್ಷಪಾತವಿಲ್ಲದೆ ನ್ಯಾಯತೀರಿಸುವನು.
ದೇವರ ಸರ್ವಾಯುಧಗಳನ್ನು ಧರಿಸಿಕೊಳ್ಳಿರಿ
10 ಕಡೇ ಮಾತೇನೆಂದರೆ, ಪ್ರಭುವಿನಲ್ಲಿಯೂ ಆತನ ಮಹಾಶಕ್ತಿಯಲ್ಲಿಯೂ ಬಲವಾಗಿರಿ. 11 ದೇವರ ಸರ್ವಾಯುಧಗಳನ್ನು ಧರಿಸಿಕೊಳ್ಳಿರಿ. ಆಗ ಸೈತಾನನ ಕುತಂತ್ರಗಳಿಗೆ ವಿರುದ್ಧವಾಗಿ ಹೋರಾಡಲು ನಿಮಗೆ ಸಾಧ್ಯವಾಗುವುದು. 12 ನಮ್ಮ ಹೋರಾಟವು ಜನರ ವಿರುದ್ಧವಲ್ಲ. ನಾವು ಅಂಧಕಾರದ ಅಧಿಪತಿಗಳಿಗೂ ಅಧಿಕಾರಿಗಳಿಗೂ ಮತ್ತು ಈ ಲೋಕದ ಕತ್ತಲೆಯ ಶಕ್ತಿಗಳಿಗೂ ಆಕಾಶಮಂಡಲದ ದುಷ್ಟಶಕ್ತಿಗಳಿಗೂ ವಿರುದ್ಧವಾಗಿ ಹೋರಾಡುತ್ತಿದ್ದೇವೆ. 13 ಆದಕಾರಣವೇ ನೀವು ದೇವರ ಸರ್ವಾಯುಧಗಳನ್ನು ಧರಿಸಿಕೊಳ್ಳಬೇಕು. ಆಗ ಯುದ್ಧದ ದಿನದಲ್ಲಿಯೂ ಹೋರಾಟವು ಸಂಪೂರ್ಣವಾಗಿ ಮುಗಿದಾದ ಮೇಲೆಯೂ ದೃಢವಾಗಿನಿಂತುಕೊಳ್ಳಲು ನಿಮಗೆ ಸಾಧ್ಯವಾಗುವುದು.
14 ಆದ್ದರಿಂದ ಸತ್ಯವೆಂಬ ನಡುಕಟ್ಟನ್ನು ಕಟ್ಟಿಕೊಂಡು ನೀತಿಯೆಂಬ ವಜ್ರಕವಚವನ್ನು ಎದೆಗೆ ಬಿಗಿದುಕೊಂಡು 15 ಸಮಾಧಾನದ ಸುವಾರ್ತೆಯೆಂಬ ಪಾದರಕ್ಷೆಯನ್ನು ಹಾಕಿಕೊಂಡು ದೃಢವಾಗಿ ನಿಂತುಕೊಳ್ಳಿರಿ. 16 ಅಲ್ಲದೆ ನಂಬಿಕೆಯೆಂಬ ಗುರಾಣಿಯನ್ನೂ ಹಿಡಿದುಕೊಳ್ಳಿರಿ. ಕೆಡುಕನ ಅಗ್ನಿಬಾಣಗಳನ್ನೆಲ್ಲಾ ತಡೆಯಲು ನಿಮಗೆ ಇದರಿಂದ ಸಾಧ್ಯವಾಗುವುದು. 17 ದೇವರ ರಕ್ಷಣೆಯನ್ನು ಶಿರಸ್ತ್ರಾಣವನ್ನಾಗಿ ಧರಿಸಿಕೊಳ್ಳಿರಿ. ಪವಿತ್ರಾತ್ಮನ ಖಡ್ಗವನ್ನು ಅಂದರೆ ದೇವರ ವಾಕ್ಯವನ್ನು ತೆಗೆದುಕೊಳ್ಳಿರಿ. 18 ನೀವು ಪವಿತ್ರಾತ್ಮನ ಸಹಾಯದಿಂದ ಯಾವಾಗಲೂ ದೇವರಲ್ಲಿ ಪ್ರಾರ್ಥಿಸುತ್ತಾ ಸಕಲವಿಧವಾದ ವಿಜ್ಞಾಪನೆಗಳನ್ನು ಮಾಡಿರಿ ಮತ್ತು ನಿಮಗೆ ಅಗತ್ಯವಾದವುಗಳಿಗಾಗಿ ಬೇಡಿಕೊಳ್ಳಿರಿ. ಇದಕ್ಕಾಗಿ ಯಾವಾಗಲೂ ಸಿದ್ಧರಾಗಿರಿ. ಪ್ರಾರ್ಥನೆಯನ್ನು ಬಿಟ್ಟುಕೊಡಬೇಡಿರಿ. ದೇವಜನರೆಲ್ಲರಿಗೋಸ್ಕರ ಯಾವಾಗಲೂ ಪ್ರಾರ್ಥಿಸಿರಿ.
19 ಅಲ್ಲದೆ ನನಗಾಗಿಯೂ ಪ್ರಾರ್ಥಿಸಿರಿ. ನಾನು ಮಾತಾಡುವಾಗ ಸುವಾರ್ತೆಯ ರಹಸ್ಯಸತ್ಯವನ್ನು ನಿರ್ಭಯದಿಂದ ತಿಳಿಸಲು ಬೇಕಾದ ಮಾತನ್ನು ದೇವರು ನನಗೆ ಅನುಗ್ರಹಿಸುವಂತೆ ಪ್ರಾರ್ಥಿಸಿರಿ. 20 ಸುವಾರ್ತೆಯನ್ನು ತಿಳಿಸುವುದೇ ನನ್ನ ಕೆಲಸ. ಈಗ ಸೆರೆಮನೆಯಲ್ಲಿಯೂ ನಾನು ಆ ಕೆಲಸವನ್ನು ಮಾಡುತ್ತಿದ್ದೇನೆ. ನಾನು ಯಾವ ರೀತಿ ಮಾತಾಡಬೇಕೋ ಅದೇ ರೀತಿ ನಿರ್ಭಯದಿಂದ ಮಾತಾಡಲು ಸಾಧ್ಯವಾಗುವಂತೆ ಪ್ರಾರ್ಥಿಸಿರಿ.
ವಂದನೆಗಳು
21 ನಮ್ಮ ಪ್ರಿಯ ಸಹೋದರನಾದ ತುಖಿಕನನ್ನು ನಿಮ್ಮ ಬಳಿಗೆ ಕಳುಹಿಸುತ್ತಿದ್ದೇನೆ. ಅವನು ಪ್ರಭುವಿನ ಸೇವೆಯಲ್ಲಿ ನಂಬಿಗಸ್ತನಾದ ಸೇವಕನಾಗಿದ್ದಾನೆ. ಇಲ್ಲಿಯ ಸಂಗತಿಗಳನ್ನೆಲ್ಲಾ ಅವನು ನಿಮಗೆ ತಿಳಿಸುವನು. ನಾನು ಇಲ್ಲಿ ಹೇಗಿದ್ದೇನೆ ಮತ್ತು ಏನು ಮಾಡುತ್ತಿದ್ದೇನೆ ಎಂಬುದು ಆಗ ನಿಮಗೆ ಗೊತ್ತಾಗುವುದು. 22 ನಮ್ಮ ಸ್ಥಿತಿಗತಿಗಳು ನಿಮಗೆ ತಿಳಿದಿರಬೇಕೆಂಬುದು ನನ್ನ ಇಷ್ಟ. ಅಲ್ಲದೆ ಅವನು ನಿಮ್ಮನ್ನು ಪ್ರೋತ್ಸಾಹಿಸುವನು.
23 ತಂದೆಯಾದ ದೇವರಿಂದಲೂ ಪ್ರಭುವಾದ ಯೇಸು ಕ್ರಿಸ್ತನಿಂದಲೂ ನಿಮಗೆ ಶಾಂತಿಯೂ ನಂಬಿಕೆಯಿಂದ ಕೂಡಿದ ಪ್ರೀತಿಯೂ ಉಂಟಾಗಲಿ. 24 ನಮ್ಮ ಪ್ರಭುವಾದ ಯೇಸು ಕ್ರಿಸ್ತನನ್ನು ನಿರಂತರವಾದ ಪ್ರೀತಿಯಿಂದ ಪ್ರೀತಿಸುವ ನಿಮ್ಮೆಲ್ಲರ ಮೇಲೆ ದೇವರ ಕೃಪೆಯಿರಲಿ.
ಗೋಗ್ ಮತ್ತು ಅವನ ಸೈನ್ಯದ ಅಂತ್ಯ
39 “ನರಪುತ್ರನೇ, ನನ್ನ ಪರವಾಗಿ ಗೋಗನಿಗೆ ವಿರುದ್ಧವಾಗಿ ಹೇಳು. ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆಂದು ಅವನಿಗೆ ಹೇಳು: ‘ಗೋಗನೇ, ನೀನು ಮೆಷೆಕ್ ಮತ್ತು ತೂಬಲ್ ದೇಶಗಳ ಪ್ರಮುಖ ನಾಯಕನು. ಆದರೆ ನಾನು ನಿನಗೆ ವಿರುದ್ಧವಾಗಿದ್ದೇನೆ. 2 ನಾನು ನಿನ್ನನ್ನು ಸೆರೆಹಿಡಿದು ಅತ್ಯಂತ ಉತ್ತರ ದಿಕ್ಕಿನಿಂದ ನಿನ್ನನ್ನು ಬರಮಾಡಿ ಇಸ್ರೇಲಿನ ಪರ್ವತಗಳ ವಿರುದ್ಧವಾಗಿ ಯುದ್ಧ ಮಾಡಿಸುವೆನು. 3 ಆದರೆ ನಾನು ನಿನ್ನ ಎಡಗೈಯಲ್ಲಿರುವ ಬಿಲ್ಲಿಗೆ ಹೊಡೆಯುವೆನು, ಆಗ ನಿನ್ನ ಬಲಗೈಯಲ್ಲಿರುವ ಬಾಣವು ಬಿದ್ದುಹೋಗುವುದು! 4 ನೀನು ಇಸ್ರೇಲಿನ ಪರ್ವತದಲ್ಲಿ ಸಾಯುವೆ, ನೀನೂ, ನಿನ್ನ ಎಲ್ಲಾ ಸೈನ್ಯ, ನಿನ್ನೊಂದಿಗೆ ಬಂದಿದ್ದ ಇತರ ದೇಶದವರೆಲ್ಲಾ ರಣರಂಗದಲ್ಲಿ ಸಾಯುವರು. ನಿಮ್ಮ ಹೆಣಗಳನ್ನು ಆಕಾಶದ ಸಕಲ ಮಾಂಸಹಾರಿ ಪಕ್ಷಿಗಳಿಗೂ, ಕಾಡುಪ್ರಾಣಿಗಳಿಗೂ ಆಹಾರವಾಗಿ ಕೊಡುವೆನು. 5 ನೀನು ನಗರವನ್ನು ಪ್ರವೇಶಿಸುವದಿಲ್ಲ. ನಗರದ ಹೊರಗೆ ಹೊಲದಲ್ಲಿ ನೀನು ಕೊಲ್ಲಲ್ಪಡುವೆ. ಇದನ್ನು ನಾನು ನುಡಿದಿದ್ದೇನೆ.’” ಈ ಸಂಗತಿಗಳನ್ನು ನನ್ನ ಒಡೆಯನಾದ ಯೆಹೋವನು ನುಡಿದನು.
6 ದೇವರು ಹೇಳಿದ್ದೇನೆಂದರೆ, “ನಾನು ಮಾಗೋಗ್ ಮತ್ತು ಕಡಲ ತೀರದಲ್ಲಿ ವಾಸಿಸುವ ಜನರ ಮೇಲೆ ಬೆಂಕಿಯನ್ನು ಕಳುಹಿಸುತ್ತೇನೆ. ತಾವು ಸುರಕ್ಷಿತವಾಗಿದ್ದೇವೆ ಎಂದು ಅವರು ನೆನಸುತ್ತಾರೆ. ಆದರೆ ನಾನು ಯೆಹೋವನು ಎಂದು ಅವರಿಗೆ ತಿಳಿಯುವದು. 7 ನನ್ನ ಜನರಾದ ಇಸ್ರೇಲರಲ್ಲಿ ನನ್ನ ಪವಿತ್ರನಾಮವನ್ನು ಪ್ರಸಿದ್ಧಿಪಡಿಸುವೆನು. ಅವರು ನನ್ನ ಪವಿತ್ರ ನಾಮವನ್ನು ಇನ್ನು ಮುಂದೆ ಅವಮಾನಕ್ಕೆ ಗುರಿಪಡಿಸುವದಿಲ್ಲ. ರಾಜ್ಯಗಳೆಲ್ಲಾ ನಾನು ಯೆಹೋವನೆಂದು ಅರಿತುಕೊಳ್ಳುವರು. ನಾನೇ ಇಸ್ರೇಲಿನ ಪವಿತ್ರನಾದ ದೇವರು ಎಂದು ತಿಳಿಯುವರು. 8 ಅದು ಸಂಭವಿಸುವ ಸಮಯವು ಹತ್ತಿರ ಬಂದಿತು.” ಇದು ಯೆಹೋವನ ನುಡಿ. “ಆ ದಿವಸದ ವಿಷಯವಾಗಿ ನಾನು ಮಾತನಾಡುತ್ತಿದ್ದೇನೆ.
9 “ಆ ಸಮಯದಲ್ಲಿ ಇಸ್ರೇಲಿನ ನಗರಗಳಲ್ಲಿ ವಾಸಿಸುವ ಜನರು ಹೊರಗೆ ಬಯಲಿಗೆ ಹೋಗುವರು. ಅಲ್ಲಿ ಅವರು ವೈರಿಗಳ ಆಯುಧಗಳನ್ನು ಕೂಡಿಸಿ ಸುಟ್ಟುಬಿಡುವರು. ಎಲ್ಲಾ ಬಿಲ್ಲುಬಾಣಗಳನ್ನು, ಗುರಾಣಿ, ಬರ್ಜಿ, ಗದೆಗಳನ್ನೆಲ್ಲಾ ಬೆಂಕಿಯಲ್ಲಿ ಹಾಕುವರು. ಏಳು ವರ್ಷಗಳ ತನಕ ಈ ಆಯುಧಗಳನ್ನು ಸೌದೆಯಾಗಿ ಉಪಯೋಗಿಸುವರು. 10 ಆದ್ದರಿಂದ ಅವರಿಗೆ ಅಡವಿಯಿಂದ ಮತ್ತು ಬಯಲಿನಿಂದ ಸೌದೆಯನ್ನು ತೆಗೆಯುವ ಅವಶ್ಯಕತೆ ಇರುವದಿಲ್ಲ. ಅವರು ಸತ್ತ ಸೈನಿಕರಿಂದ ಬೆಲೆಬಾಳುವ ವಸ್ತುಗಳನ್ನು ದೋಚುವರು. ತಮ್ಮಿಂದ ದೋಚಿದ ಸೈನಿಕರಿಂದ ಅವರು ದೋಚುವರು.” ಇದು ಒಡೆಯನಾದ ಯೆಹೋವನ ನುಡಿ.
11 ದೇವರು ಹೇಳಿದ್ದೇನೆಂದರೆ, “ಆ ಸಮಯದಲ್ಲಿ ಗೋಗನನ್ನು ಹೂಣಿಡಲು ನಾನು ಇಸ್ರೇಲಿನಲ್ಲಿ ಸ್ಥಳವನ್ನು ಆರಿಸುತ್ತೇನೆ. ಇವನನ್ನು ಮೃತ್ಯುಸಮುದ್ರದ ಪೂರ್ವದಲ್ಲಿರುವ ‘ಪ್ರಯಾಣಿಕರ ಕಣಿವೆ’[a] ಯಲ್ಲಿ ಸಮಾಧಿ ಮಾಡಲಾಗುವುದು. ಅದು ಪ್ರವಾಸಿಗಳಿಗೆ ಅಡ್ಡಿಯಾಗುವದು. ಯಾಕೆಂದರೆ ಗೋಗನೂ ಅವನ ಸೈನ್ಯವೂ ಅಲ್ಲಿ ಹೂಣಿಡಲ್ಪಡುವವು. ಆ ಸ್ಥಳ ‘ಗೋಗ್ ಸೈನ್ಯದ ತಗ್ಗು’ ಎಂಬ ಹೊಸ ಹೆಸರಿನಿಂದ ಕರೆಯಲ್ಪಡುವದು. 12 ಇವರನ್ನೆಲ್ಲಾ ಸಮಾಧಿ ಮಾಡಲು ಇಸ್ರೇಲರಿಗೆ ಏಳು ತಿಂಗಳು ಬೇಕಾಗುವದು. ತಮ್ಮ ರಾಜ್ಯವನ್ನು ಶುದ್ಧಪಡಿಸಲು ಅವರು ಹಾಗೆ ಮಾಡಲೇಬೇಕು. 13 ಸಾಮಾನ್ಯ ಜನರು ಶತ್ರು ಸೈನಿಕರನ್ನು ಹೂಣಿಡುವರು. ನಾನು ನನ್ನ ಹೆಸರನ್ನು ಪ್ರಸಿದ್ಧಿಗೆ ತರುವ ದಿವಸ ಆ ಜನರು ಪ್ರಸಿದ್ಧರಾಗುವರು.” ಇದು ನನ್ನ ಒಡೆಯನಾದ ಯೆಹೋವನ ನುಡಿ.
14 “ಹೆಣಗಳನ್ನು ಹೂಳಿಟ್ಟು ದೇಶವನ್ನು ಶುದ್ಧಗೊಳಿಸುವ ಕೆಲಸಗಾರರಿಗೆ ಖಾಯಂ ಕೆಲಸ ಕೊಡಲಾಗುವದು. ಅವರು ದೇಶದಲ್ಲೆಲ್ಲಾ ಹೆಣಗಳನ್ನು ಹುಡುಕಿ ತೆಗೆಯುವರು. ಅವರಿಗೆ ಏಳು ತಿಂಗಳು ಬೇಕಾಗುವುದು. 15 ಅವರಲ್ಲೊಬ್ಬನಿಗೆ ಒಂದು ಎಲುಬು ನೋಡಸಿಕ್ಕಿದರೆ ಅವನು ಅಲ್ಲಿ ಒಂದು ಗುರುತನ್ನಿಡುವನು. ಹೂಣಿಡುವವರು ಬಂದು ಆ ಎಲುಬನ್ನು ತೆಗೆದು ಗೋಗನ ಸೈನ್ಯದ ತಗ್ಗಿನಲ್ಲಿ ಹೂಣಿಡುವ ತನಕ ಆ ಗುರುತು ಅಲ್ಲಿಯೇ ಇರುವದು. 16 ಸತ್ತವರ ಆ ನಗರವನ್ನು (ಸಮಾಧಿ) ಹಮೋನ ಎಂದು ಕರೆಯಲಾಗುವದು. ಈ ರೀತಿಯಾಗಿ ಅವರು ದೇಶವನ್ನು ಶುದ್ಧ ಮಾಡುವರು.”
17 ನನ್ನ ಒಡೆಯನಾದ ಯೆಹೋವನು ಹೇಳಿದ್ದೇನೆಂದರೆ, “ನರಪುತ್ರನೇ, ಎಲ್ಲಾ ಪಕ್ಷಿಗಳಿಗೂ ಕಾಡುಪ್ರಾಣಿಗಳಿಗೂ ಹೀಗೆ ಹೇಳು: ‘ನೀವೆಲ್ಲಾ ಕೂಡಿ ಬನ್ನಿರಿ. ನಾನು ನಿಮಗಾಗಿ ಇಸ್ರೇಲಿನ ಪರ್ವತಗಳಲ್ಲಿ ಮಾಡುವ ಮಹಾಯಜ್ಞಕ್ಕೆ ಎಲ್ಲಾ ಕಡೆಯಿಂದಲೂ ನೆರೆದುಬಂದು ಮಾಂಸವನ್ನು ತಿಂದು ರಕ್ತವನ್ನು ಕುಡಿಯಿರಿ. 18 ನೀವು ರಣವೀರರ ಮಾಂಸವನ್ನು ತಿನ್ನುವಿರಿ, ಪ್ರಪಂಚದ ನಾಯಕರ ರಕ್ತವನ್ನು ಕುಡಿಯುವಿರಿ. ಅವರೆಲ್ಲಾ ಬಾಷಾನಿನ ಕುರಿ, ಹೋತ, ಹೋರಿಗಳಂತೆ ಕೊಬ್ಬಿಕೊಂಡಿದ್ದಾರೆ. 19 ನಿಮಗಾಗಿ ವಧಿಸಿರುವ ಯಜ್ಞಪಶುಗಳ ಮಾಂಸವನ್ನು ಹೊಟ್ಟೆತುಂಬ ತಿನ್ನಿರಿ; ಅಮಲೇರುವ ತನಕ ರಕ್ತವನ್ನು ಕುಡಿಯಿರಿ. 20 ನನ್ನ ಈ ಔತಣದಲ್ಲಿ ಕುದುರೆಗಳ, ರಾಹುತರ, ಶೂರರ ಮತ್ತು ಸೈನಿಕರ ಮಾಂಸವನ್ನು ಬೇಕಾದಷ್ಟು ತಿನ್ನುವಿರಿ.’” ನನ್ನ ಒಡೆಯನಾದ ಯೆಹೋವನ ನುಡಿಗಳಿವು.
21 ದೇವರು ಹೇಳಿದ್ದೇನೆಂದರೆ, “ನಾನು ಮಾಡಿದ್ದನ್ನು ಇತರ ದೇಶಗಳವರು ನೋಡುವಂತೆ ಮಾಡುವೆನು. ಆಗ ಆ ದೇಶದವರು ನನ್ನನ್ನು ಗೌರವಿಸಲು ಪ್ರಾರಂಭಿಸುವರು. ಆ ಶತ್ರುವಿಗೆದುರಾಗಿ ನನ್ನ ಸಾಮರ್ಥ್ಯ ತೋರಿಸಿದುದನ್ನು ಅವರು ನೋಡುವರು. 22 ಆ ದಿವಸದಿಂದ ಇಸ್ರೇಲಿನ ಜನಾಂಗ ನಾನು ಅವರ ಒಡೆಯನಾದ ಯೆಹೋವನೆಂದು ಅರಿಯುವರು. 23 ಎಲ್ಲಾ ಜನಾಂಗಗಳವರಿಗೆ ನಾನು ಯಾಕೆ ಇಸ್ರೇಲರು ಸೆರೆಹಿಡಿಯಲ್ಪಟ್ಟು ಚದರಿಹೋಗುವಂತೆ ಮಾಡಿದೆನು ಎಂದು ತಿಳಿಯುವರು. ನನ್ನ ಜನರು ನನಗೆ ವಿರುದ್ಧವಾಗಿ ತಿರುಗಿ ಬಿದ್ದರು. ಆಗ ನಾನು ಅವರಿಂದ ದೂರ ಹೋದೆನು. ಅವರ ವೈರಿಗಳು ಅವರನ್ನು ಸೋಲಿಸುವಂತೆ ಮಾಡಿದೆನು. ಆದ್ದರಿಂದ ಅವರು ರಣರಂಗದಲ್ಲಿ ಮಡಿದರು. 24 ಅವರು ಪಾಪ ಮಾಡಿ ತಮ್ಮನ್ನು ಅಶುದ್ಧರನ್ನಾಗಿ ಮಾಡಿಕೊಂಡರು. ಅದಕ್ಕಾಗಿ ನಾನು ಅವರನ್ನು ಶಿಕ್ಷಿಸಿದೆನು. ಅವರಿಂದ ನಾನು ದೂರವಾಗಿ ಅವರಿಗೆ ಸಹಾಯ ಮಾಡಲು ನಿರಾಕರಿಸಿದೆನು.”
25 ಆದ್ದರಿಂದ ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ, “ಈಗ ನಾನು ಯಾಕೋಬನ ವಂಶದವರನ್ನು ಸೆರೆಯಿಂದ ಬಿಡಿಸಿ ಹಿಂದಕ್ಕೆ ತರುವೆನು. ಇಸ್ರೇಲಿನ ಜನಾಂಗದವರ ಮೇಲೆಲ್ಲಾ ನನ್ನ ದಯೆ ಇರುವದು. ನನ್ನ ಪವಿತ್ರನಾಮದ ಸಲುವಾಗಿ ಅವರನ್ನು ಉದ್ಧರಿಸುವೆನು. 26 ಆ ಜನರು ತಮಗೊದಗಿದ ಅವಮಾನವನ್ನೂ ನನಗೆ ವಿರುದ್ಧವಾಗಿ ವರ್ತಿಸಿದ್ದನ್ನೂ ಮರೆತುಬಿಡುವರು. ತಮ್ಮ ಸ್ವದೇಶದಲ್ಲಿ ಸುರಕ್ಷಿತವಾಗಿ ವಾಸಿಸುವರು. ಅವರು ಯಾರಿಗೂ ಹೆದರಬೇಕಾಗಿಲ್ಲ. 27 ಬೇರೆಬೇರೆ ದೇಶಗಳಿಂದ ನಾನು ನನ್ನ ಜನರನ್ನು ಹಿಂದಕ್ಕೆ ತರಿಸುವೆನು. ಅವರ ಶತ್ರುಗಳ ದೇಶದಿಂದ ನಾನು ಅವರನ್ನು ಒಟ್ಟುಗೂಡಿಸುವೆನು. ಆಗ ಅನೇಕ ಜನಾಂಗಗಳು ನಾನು ಎಷ್ಟು ಪವಿತ್ರನೆಂದು ಅರಿತುಕೊಳ್ಳುವರು. 28 ನಾನು ಅವರ ಒಡೆಯನಾದ ಯೆಹೋವನೆಂದು ತಿಳಿಯುವರು. ಯಾಕೆಂದರೆ ನಾನು, ಅವರನ್ನು ಅವರ ಸ್ವದೇಶವನ್ನು ಬಿಟ್ಟು ಸೆರೆಹಿಡಿಯಲ್ಪಟ್ಟವರಾಗಿ ಬೇರೆ ದೇಶಗಳಿಗೆ ಹೋಗುವಂತೆ ಮಾಡಿದೆನು. ಆಮೇಲೆ ತಿರುಗಿ ಅವರನ್ನು ಒಟ್ಟುಗೂಡಿಸಿ ಅವರ ದೇಶಕ್ಕೆ ಹಿಂದಕ್ಕೆ ಕರೆಸಿದೆನು. 29 ನಾನು ಇಸ್ರೇಲ್ ಜನಾಂಗದವರ ಮೇಲೆ ನನ್ನ ಆತ್ಮವನ್ನು ಸುರಿಸುವೆನು. ಅನಂತರ ನಾನು ಎಂದಿಗೂ ಅವರಿಗೆ ವಿಮುಖನಾಗಿರುವದಿಲ್ಲ.” ಇದು ನನ್ನ ಒಡೆಯನಾದ ಯೆಹೋವನ ನುಡಿ.
ನಾಲ್ಕನೆ ಭಾಗ
(ಕೀರ್ತನೆಗಳು 90–106)
ಪ್ರಾರ್ಥನೆ. ರಚನೆಗಾರ: ದೇವಮನುಷ್ಯನಾದ ಮೋಶೆ.
90 ಯೆಹೋವನೇ, ತಲತಲಾಂತರಗಳಿಂದಲೂ ನೀನೇ ನಮ್ಮ ವಾಸಸ್ಥಾನ.
2 ಬೆಟ್ಟಗಳು ಹುಟ್ಟುವುದಕ್ಕಿಂತ ಮೊದಲಿಂದಲೂ
ಭೂಮಿಯೂ ಅದರ ದೇಶಗಳೂ ನಿರ್ಮಾಣವಾಗುವುದಕ್ಕಿಂತ ಮೊದಲಿನಿಂದಲೂ ನೀನೇ ದೇವರು.
ಯಾವಾಗಲೂ ದೇವರಾಗಿದ್ದಾತನು ನೀನೇ! ಯಾವಾಗಲೂ ದೇವರಾಗಿರುವಾತನೂ ನೀನೇ!
3 ಜನರಿಗೆ ಜನ್ಮನೀಡುವಾತನೂ ನೀನೇ;
ಅವರನ್ನು ಮತ್ತೆ ಧೂಳನ್ನಾಗಿ ಮಾಡುವಾತನೂ ನೀನೇ.
4 ಸಾವಿರ ವರ್ಷಗಳು ನಿನಗೆ ಗತಿಸಿಹೋದ
ನಿನ್ನೆಯಂತೆಯೂ ರಾತ್ರಿಯ ಜಾವದಂತೆಯೂ ಇವೆ.
5 ನೀನು ನಮ್ಮನ್ನು ಗುಡಿಸಿಹಾಕುವೆ.
ನಮ್ಮ ಜೀವನವು ಕನಸಿನಂತಿದೆ; ಹೊತ್ತಾರೆಯಲ್ಲಿ ನಾವು ಇಲ್ಲವಾಗುತ್ತೇವೆ.
ನಾವು ಹುಲ್ಲಿನಂತಿದ್ದೇವೆ.
6 ಹೊತ್ತಾರೆಯಲ್ಲಿ ಹುಲ್ಲು ಚಿಗುರತೊಡಗಿದರೂ
ಸಾಯಂಕಾಲದೊಳಗೆ ಒಣಗಿಹೋಗುತ್ತದೆ.
7 ದೇವರೇ, ನಿನ್ನ ಕೋಪದಿಂದ ನಾವು ನಾಶವಾದೆವು.
ನಿನ್ನ ರೌದ್ರವು ನಮ್ಮನ್ನು ತಲ್ಲಣಗೊಳಿಸಿದೆ.
8 ನಮ್ಮ ಪಾಪಗಳೆಲ್ಲಾ ನಿನಗೆ ತಿಳಿದಿವೆ.
ದೇವರೇ, ನಮ್ಮ ರಹಸ್ಯಪಾಪಗಳೆಲ್ಲಾ ನಿನ್ನ ಮುಂದೆ ಬಟ್ಟಬಯಲಾಗಿವೆ.
9 ನಿನ್ನ ಕೋಪವು ನಮ್ಮ ಜೀವನವನ್ನು ಕೊನೆಗೊಳಿಸಬಲ್ಲದು.
ನಮ್ಮ ಜೀವಿತಗಳು ನಿಟ್ಟುಸಿರಿನಂತೆ ತೀರಿಹೋದವು.
10 ನಮ್ಮ ಆಯುಷ್ಕಾಲವು ಎಪ್ಪತ್ತು ವರ್ಷ; ಬಲಹೆಚ್ಚಿದರೆ ಎಂಭತ್ತು ವರ್ಷ.
ಕಷ್ಟಸಂಕಟಗಳೇ ಅದರ ಆಡಂಬರ.
ಬಹುಬೇಗನೆ ನಮ್ಮ ಜೀವಿತಗಳು ಕೊನೆಗೊಳ್ಳುತ್ತವೆ!
ನಾವು ಹಾರಿ ಹೋಗುತ್ತೇವೆ.
11 ದೇವರೇ, ನಿನ್ನ ಕೋಪದ ಪೂರ್ಣ ಬಲವನ್ನು ಯಾರೂ ತಿಳಿಯರು.
ನಿನ್ನಲ್ಲಿ ನಮಗಿರುವ ಭಯಭಕ್ತಿಯು ನಿನ್ನ ಕೋಪದಷ್ಟೇ ದೊಡ್ಡದಾಗಿವೆ.
12 ನಮ್ಮ ಜೀವಿತಗಳು ಕೊಂಚವೇ ಎಂಬುದನ್ನು ನಮಗೆ ಕಲಿಸು.
ಆಗ ನಾವು ವಿವೇಕಿಗಳಾಗುವೆವು.
13 ಯೆಹೋವನೇ, ನಮ್ಮ ಬಳಿಗೆ ಹಿಂತಿರುಗಿ ಬಾ.
ನಿನ್ನ ಸೇವಕರ ಮೇಲೆ ಅಂತಃಕರಣವಿರಲಿ.
14 ಪ್ರತಿ ಮುಂಜಾನೆ ನಿನ್ನ ಪ್ರೀತಿಯಿಂದ ನಮ್ಮನ್ನು ತುಂಬಿಸು.
ಆಗ ಜೀವಮಾನವೆಲ್ಲಾ ಉಲ್ಲಾಸಿಸಿ ಹರ್ಷಿಸುವೆವು.
15 ನೀನು ನಮಗೆ ಬಹು ದುಃಖವನ್ನೂ ಕಷ್ಟಗಳನ್ನೂ ಬರಮಾಡಿದೆ.
ಈಗ ನಮ್ಮನ್ನು ಸಂತೋಷಗೊಳಿಸು.
16 ನೀನು ನಿನ್ನ ಸೇವಕರುಗಳಿಗಾಗಿ ಮಾಡಬಲ್ಲ ಅದ್ಭುತಕಾರ್ಯಗಳನ್ನು ನಾವು ನೋಡುವಂತಾಗಲಿ.
17 ನಮ್ಮ ದೇವರಾದ ಯೆಹೋವನೇ, ನಮಗೆ ಕರುಣೆತೋರು.
ನಮ್ಮ ಕೆಲಸಕಾರ್ಯಗಳು ನಮಗೆ ಫಲ ನೀಡಲಿ;
ನಮ್ಮ ಕಾರ್ಯಗಳನ್ನು ಆತನು ಸಫಲಪಡಿಸಲಿ.
Kannada Holy Bible: Easy-to-Read Version. All rights reserved. © 1997 Bible League International