M’Cheyne Bible Reading Plan
ಸೊಲೊಮೋನನ ರಾಜ್ಯ
4 ರಾಜನಾದ ಸೊಲೊಮೋನನು ಇಸ್ರೇಲಿನ ಜನತೆಯನ್ನೆಲ್ಲ ಆಳಿದನು. 2 ಅವನಿಗೆ ಆಳಲು ನೆರವಾದ ಅವನ ಮುಖ್ಯಾಧಿಕಾರಿಗಳ ಹೆಸರುಗಳು ಹೀಗಿವೆ:
ಚಾದೋಕನ ಮಗನಾದ ಅಜರ್ಯನು ಯಾಜಕನಾಗಿದ್ದನು.
3 ಶೀಷನ ಮಕ್ಕಳಾದ ಎಲೀಹೋರೆಫ್ ಮತ್ತು ಅಹೀಯಾಹು; ಇವರಿಬ್ಬರೂ ನ್ಯಾಯಾಲಯದಲ್ಲಿ ನಡೆದ ಸಂಗತಿಗಳ ಕುರಿತಾಗಿ ಟಿಪ್ಪಣಿ ಬರೆಯುವ ಉದ್ಯೋಗವನ್ನು ಹೊಂದಿದ್ದರು.
ಅಹೀಲೂದನ ಮಗನಾದ ಯೆಹೋಷಾಫಾಟನು ಜನರ ಇತಿಹಾಸದ ಕುರಿತು ಟಿಪ್ಪಣಿ ಬರೆದನು.
4 ಯೆಹೋಯಾದಾವನ ಮಗನಾದ ಬೆನಾಯ; ಬೆನಾಯನು ಸೇನಾಧಿಪತಿಯಾಗಿದ್ದನು.
ಚಾದೋಕ ಮತ್ತು ಎಬ್ಯಾತಾರರು; ಚಾದೋಕ ಮತ್ತು ಎಬ್ಯಾತಾರರು ಯಾಜಕರಾಗಿದ್ದರು.
5 ನಾತಾನನ ಮಗನಾದ ಅಜರ್ಯ; ಅಜರ್ಯನು ಜಿಲ್ಲಾ ಅಧಿಕಾರಿಗಳ ಮೇಲ್ವಿಚಾರಕನಾಗಿದ್ದನು.
ನಾತಾನನ ಮಗನಾದ ಚಾಬೂದ; ಚಾಬೂದನು ರಾಜನಾದ ಸೊಲೊಮೋನನಿಗೆ ಯಾಜಕನೂ ಸಲಹೆಗಾರನೂ ಆಗಿದ್ದನು.
6 ಅಹೀಷಾರ್; ಅಹೀಷಾರನು ರಾಜನ ಅರಮನೆಯ ಪ್ರತಿಯೊಂದರಲ್ಲೂ ಜವಾಬ್ದಾರನಾಗಿದ್ದನು.
ಅಬ್ದನ ಮಗನಾದ ಅದೋನೀರಾಮ; ಅದೋನೀರಾಮನು ಗುಲಾಮರ ಮೇಲ್ವಿಚಾರಕನಾಗಿದ್ದನು.
7 ಇಸ್ರೇಲರನ್ನು ಹನ್ನೆರಡು ವಿಭಾಗ ಮಾಡಿ ಅವುಗಳನ್ನು ಜಿಲ್ಲೆಗಳೆಂದು ಕರೆದರು. ಪ್ರತಿಯೊಂದು ಜಿಲ್ಲೆಯನ್ನು ಆಳಲು ಸೊಲೊಮೋನನು ರಾಜ್ಯಪಾಲರನ್ನು ನೇಮಿಸಿದನು. ಈ ರಾಜ್ಯಪಾಲರು ತಮ್ಮ ಜಿಲ್ಲೆಗಳಿಂದ ಆಹಾರಪದಾರ್ಥಗಳನ್ನು ಸಂಗ್ರಹಿಸಿ ರಾಜನಿಗೂ ಅವನ ಕುಟುಂಬಕ್ಕೂ ಕೊಡಬೇಕೆಂದು ಆಜ್ಞಾಪಿಸಿದನು. ಪ್ರತಿಯೊಬ್ಬ ರಾಜ್ಯಪಾಲನು ವರ್ಷಕ್ಕೆ ಒಂದು ತಿಂಗಳು ರಾಜನಿಗೆ ಆಹಾರಪದಾರ್ಥಗಳನ್ನು ಕೊಡುವ ಜವಾಬ್ದಾರಿಯನ್ನು ಹೊಂದಿದ್ದನು. 8 ಹನ್ನೆರಡು ರಾಜ್ಯಪಾಲರುಗಳ ಹೆಸರುಗಳು ಹೀಗಿವೆ:
ಎಫ್ರಾಯೀಮ್ ಬೆಟ್ಟಪ್ರದೇಶಕ್ಕೆ ಬೆನ್-ಹೂರನು ರಾಜ್ಯಪಾಲನಾಗಿದ್ದನು.
9 ಮಾಕಚ್, ಶಾಲ್ಬೀಮ್, ಬೇತ್‌ಷೆಮೆಷ್, ಏಲೋನ್, ಬೇತ್‌ಹಾನಾನ್‌ಗಳಿಗೆ ಬೆನ್‌ದೆಕರನು ರಾಜ್ಯಪಾಲನಾಗಿದ್ದನು.
10 ಅರುಬ್ಬೋತ್, ಸೋಕೋ, ಹೇಫರ್‌ಗಳಿಗೆ ಬೆನ್‌ಹೆಸೆದನು ರಾಜ್ಯಪಾಲನಾಗಿದ್ದನು.
11 ನಾಫೋತ್ ದೋರ್‌ಗೆ ಬೆನ್‌ಅಬೀನಾದಾಬನು ರಾಜ್ಯಪಾಲನಾಗಿದ್ದನು. ಅವನು ಸೊಲೊಮೋನನ ಮಗಳಾದ ಟಾಫತಳನ್ನು ಮದುವೆಯಾಗಿದ್ದನು.
12 ತಾಣಕ್, ಮೆಗಿದ್ದೋ ಮತ್ತು ಚಾರೆತಾನಿನ ಅಂಚಿನಲ್ಲಿದ್ದ ಬೇತ್‌ಷೆಯಾನಿನ ಎಲ್ಲ ಪ್ರದೇಶಕ್ಕೆ ಅಹೀಲೂದನ ಮಗನಾದ ಬಾಣಾ ರಾಜ್ಯಪಾಲನಾಗಿದ್ದನು. ಇದು ಇಜ್ರೇಲಿನ ತಳದಲ್ಲಿ ಬೇತ್‌ಷೆಯಾನಿನಿಂದ ಅಬೇಲ್ ಮೆಹೋಲವರೆಗಿರುವ, ಯೊಕ್ಮೆಯಾನಿನ ಆಚೆಗಿರುವ ಪ್ರದೇಶ.
13 ರಾಮೋತ್ ಗಿಲ್ಯಾದಿಗೆ ಬೆನ್‌ಗೆಬೆರನು ರಾಜ್ಯಪಾಲನಾಗಿದ್ದನು. ಗಿಲ್ಯಾದಿನ ಮನಸ್ಸೆಯ ಮಗನಾದ ಯಾಯೀರನ ಗ್ರಾಮಗಳಿಗೂ ಮತ್ತು ಪಟ್ಟಣಗಳೆಲ್ಲಕ್ಕೂ ಅವನು ರಾಜ್ಯಪಾಲನಾಗಿದ್ದನು. ಅವನು ಬಾಷಾನಿನ ಅರ್ಗೋಬ್ ಜಿಲ್ಲೆಗೂ ರಾಜ್ಯಪಾಲನಾಗಿದ್ದನು. ಈ ಪ್ರದೇಶದಲ್ಲಿ ಗೋಡೆಗಳಿಂದ ಸುತ್ತುವರಿದ ಅರವತ್ತು ನಗರಗಳಿದ್ದವು. ಈ ನಗರಗಳ ದ್ವಾರದಲ್ಲಿ ಹಿತ್ತಾಳೆಯ ಸಲಾಕೆಗಳುಳ್ಳ ಬಾಗಿಲುಗಳಿದ್ದವು.
14 ಮಹನಯಿಮಿಗೆ ಇದ್ದೋವಿನ ಮಗನಾದ ಅಹೀನಾದಾಬನು ರಾಜ್ಯಪಾಲನಾಗಿದ್ದನು.
15 ನಫ್ತಾಲಿಗೆ ಅಹೀಮಾಚನು ರಾಜ್ಯಪಾಲನಾಗಿದ್ದನು. ಸೊಲೊಮೋನನ ಮಗಳಾದ ಬಾಸೆಮತಳನ್ನು ಇವನು ಮದುವೆಯಾಗಿದ್ದನು.
16 ಆಶೇರಿಗೂ ಅಲೋತಿಗೂ ಹೂಷೈಯನ ಮಗ ಬಾಣನು ರಾಜ್ಯಪಾಲನಾಗಿದ್ದನು.
17 ಇಸ್ಸಾಕಾರಿಗೆ ಫಾರೂಹನ ಮಗನಾದ ಯೆಹೋಷಾಫಾಟನು ರಾಜ್ಯಪಾಲನಾಗಿದ್ದನು.
18 ಬೆನ್ಯಾಮೀನಿಗೆ ಏಲನ ಮಗನಾದ ಶಿಮ್ಮಿಯು ರಾಜ್ಯಪಾಲನಾಗಿದ್ದನು.
19 ಊರಿಯ ಮಗನಾದ ಗೆಬೆರನು ಗಿಲ್ಯಾದಿನ ರಾಜ್ಯಪಾಲನಾಗಿದ್ದನು. ಅಮೋರಿಯರ ರಾಜನಾದ ಸೀಹೋನನು ಮತ್ತು ಬಾಷಾನಿನ ರಾಜನಾದ ಓಗನು ವಾಸವಾಗಿದ್ದ ರಾಜ್ಯವೇ ಗಿಲ್ಯಾದ್. ಆದರೆ ಆ ಜಿಲ್ಲೆಗೆ ಗೆಬೆರ್ ಒಬ್ಬನೇ ರಾಜ್ಯಪಾಲನಾಗಿದ್ದನು.
20 ಯೆಹೂದದಲ್ಲಿ ಮತ್ತು ಇಸ್ರೇಲಿನಲ್ಲಿ ಅನೇಕ ಜನರಿದ್ದರು. ಅಲ್ಲಿನ ಜನಸಂಖ್ಯೆಯು ಸಮುದ್ರತೀರದ ಮರಳಿನ ಕಣಗಳಷ್ಟಿತ್ತು. ಜನರು ಸಂತುಷ್ಟರಾಗಿ ಜೀವಿಸುತ್ತಿದ್ದರು. ಅವರು ತಿಂದು ಕುಡಿದು ಸಂತೋಷಿಸುತ್ತಿದ್ದರು.
21 ಸೊಲೊಮೋನನು ಯೂಫ್ರೇಟೀಸ್ ನದಿಯಿಂದ ಮೊದಲುಗೊಂಡು ಫಿಲಿಷ್ಟಿಯರ ದೇಶದವರೆಗಿನ ರಾಜ್ಯಗಳನ್ನೆಲ್ಲ ಆಳುತ್ತಿದ್ದನು. ಅವನ ರಾಜ್ಯಾಧಿಕಾರವು ಈಜಿಪ್ಟಿನ ಗಡಿಯವರೆಗೆ ವಿಸ್ತರಿಸಿತ್ತು. ಈ ದೇಶಗಳು ಸೊಲೊಮೋನನಿಗೆ ಕಪ್ಪಕಾಣಿಕೆಯನ್ನು ಕೊಡುತ್ತ ಅವನ ಜೀವಮಾನ ಪೂರ್ತಿ ಅವರು ಅವನಿಗೆ ಆಧೀನರಾಗಿದ್ದರು.
22-23 ಪ್ರತಿದಿನವೂ ಸೊಲೊಮೋನನಿಗೆ ಮತ್ತು ಅವನ ಪಂಕ್ತಿಯಲ್ಲಿ ಊಟಮಾಡುವವರಿಗೆ ಬೇಕಾದ ಆಹಾರಪದಾರ್ಥಗಳು ಹೀಗಿವೆ: ನೂರೈವತ್ತು ಬುಷೆಲ್ಸ್[a] ಉತ್ತಮವಾದ ಗೋಧಿಯ ಹಿಟ್ಟು; ಮುನ್ನೂರು ಬುಷೆಲ್ಸ್[b] ಹಿಟ್ಟು; ಚೆನ್ನಾಗಿ ಮೇಯಿಸಿದ ಹತ್ತು ಹಸುಗಳು; ಹೊಲಗಳಲ್ಲಿ ಮೇಯಿಸಿದ ಇಪ್ಪತ್ತು ಹಸುಗಳು; ನೂರು ಕುರಿಗಳು; ಇವುಗಳಲ್ಲದೆ ದುಪ್ಪಿ, ಜಿಂಕೆ, ಸಾರಂಗ ಮತ್ತು ಕೊಬ್ಬಿದ ಕೋಳಿಗಳು.
24 ಸೊಲೊಮೋನನು ಯೂಫ್ರೇಟೀಸ್ ನದಿಯ ಪಶ್ಚಿಮದ ಪ್ರದೇಶವನ್ನೆಲ್ಲ ಆಳಿದನು. ಈ ದೇಶವು ತಿಫ್ಸಹುದಿಂದ ಗಾಜದವರೆಗಿತ್ತು. ಸೊಲೊಮೋನನ ರಾಜ್ಯದಲ್ಲೆಲ್ಲಾ ಶಾಂತಿ ನೆಲೆಸಿತ್ತು. 25 ಸೊಲೊಮೋನನ ಆಳ್ವಿಕೆಯಲ್ಲಿ ಯೆಹೂದದ ಮತ್ತು ಇಸ್ರೇಲಿನ ಜನರೆಲ್ಲರೂ ದಾನ್‌ನಿಂದ ಬೇರ್ಷೆಬದವರೆಗೆ ಸುರಕ್ಷಿತವಾಗಿದ್ದರು; ಶಾಂತಿಯಿಂದ ಜೀವಿಸುತ್ತಿದ್ದರು. ಜನರು ತಮ್ಮ ಅಂಜೂರ ಗಿಡಗಳ ಮತ್ತು ದ್ರಾಕ್ಷಾಲತೆಗಳ ನೆರಳಿನಲ್ಲಿ ಸಮಾಧಾನದಿಂದ ಕುಳಿತಿರುತ್ತಿದ್ದರು.
26 ಸೊಲೊಮೋನನು ತನ್ನ ರಥಗಳಿಗೆ ಬೇಕಾಗಿದ್ದ ನಾಲ್ಕು ಸಾವಿರ ಕುದುರೆಗಳಿಗೆ ಬೇಕಾಗುವಷ್ಟು ಸ್ಥಳ ಪಡೆದಿದ್ದನು. ಅವನಲ್ಲಿ ಹನ್ನೆರಡು ಸಾವಿರ ರಾಹುತರಿದ್ದರು. 27 ರಾಜನಾದ ಸೊಲೊಮೋನನಿಗೆ ಪ್ರತಿ ತಿಂಗಳಿಗೆ ಬೇಕಾದ ವಸ್ತುಗಳನ್ನು ಅವನ ಹನ್ನೆರಡು ಮಂದಿ ರಾಜ್ಯಪಾಲರಲ್ಲಿ ಒಬ್ಬರು ಸರದಿಯ ಪ್ರಕಾರ ಕೊಡುತ್ತಿದ್ದರು. ರಾಜನಿಗೂ ಅವನ ಪಂಕ್ತಿಯಲ್ಲಿ ಊಟಮಾಡುವ ಪ್ರತಿಯೊಬ್ಬರಿಗೂ ಆಹಾರಪದಾರ್ಥಗಳು ಯಥೇಚ್ಛವಾಗಿರುತ್ತಿದ್ದವು. 28 ರಾಜನ ರಥಗಳ ಕುದುರೆಗಳಿಗೆ ಮತ್ತು ಸವಾರಿಯ ಕುದುರೆಗಳಿಗೆ ಬೇಕಾದ ಹುಲ್ಲನ್ನು ಮತ್ತು ಬಾರ್ಲಿಯನ್ನು ಈ ರಾಜ್ಯಪಾಲರುಗಳು ಆಯಾಸ್ಥಳಗಳಿಂದ ತಂದುಕೊಡುತ್ತಿದ್ದರು.
ಸೊಲೊಮೋನನ ಜ್ಞಾನ
29 ದೇವರು ಸೊಲೊಮೋನನಿಗೆ ಜ್ಞಾನವಿವೇಕಗಳನ್ನು ಅನುಗ್ರಹಿಸಿದನು. ಸೊಲೊಮೋನನು ಅನೇಕಾನೇಕ ಸಂಗತಿಗಳನ್ನು ಅರ್ಥಮಾಡಿಕೊಳ್ಳುತ್ತಿದ್ದನು. ಯಾರೂ ಊಹಿಸಿಕೊಳ್ಳಲಾರದಷ್ಟು ಜ್ಞಾನವನ್ನು ಅವನು ಹೊಂದಿದ್ದನು. 30 ಅವನ ಜ್ಞಾನವು ಈಜಿಪ್ಟಿನ ಗಂಡಸರೆಲ್ಲರ ಜ್ಞಾನಕ್ಕಿಂತಲೂ ಹೆಚ್ಚಿನದಾಗಿತ್ತು. ಸೊಲೊಮೋನನ ಜ್ಞಾನವು ಪೂರ್ವದಿಕ್ಕಿನ ಜನರೆಲ್ಲರ ಜ್ಞಾನಕ್ಕಿಂತ ವಿಶಾಲವಾಗಿತ್ತು. 31 ಪ್ರಪಂಚದಲ್ಲಿನ ಯಾವುದೇ ವ್ಯಕ್ತಿಯ ಜ್ಞಾನಕ್ಕಿಂತಲೂ ಹೆಚ್ಚಿನ ಜ್ಞಾನವು ಅವನಲ್ಲಿತ್ತು. ಅವನು ಜೆರಹನ ಮಗನಾದ ಏತಾನನಿಗಿಂತಲೂ ಜ್ಞಾನಿಯಾಗಿದ್ದನು. ಮಾಹೋಲನ ಮಕ್ಕಳಾದ ಹೇಮಾನ್, ಕಲ್ಕೋಲ್, ದರ್ದರಿಗಿಂತ ಅವನು ಜ್ಞಾನಿಯಾಗಿದ್ದನು. ರಾಜನಾದ ಸೊಲೊಮೋನನು ಇಸ್ರೇಲ್ ಮತ್ತು ಯೆಹೂದಗಳ ಸುತ್ತಮುತ್ತಲಿನ ಪ್ರದೇಶಗಳಲ್ಲೆಲ್ಲಾ ಪ್ರಸಿದ್ಧನಾಗಿದ್ದನು. 32 ರಾಜನಾದ ಸೊಲೊಮೋನನು ತನ್ನ ಜೀವಿತದ ಅವಧಿಯಲ್ಲಿ ಮೂರುಸಾವಿರ ಜ್ಞಾನೋಪದೇಶಗಳನ್ನೂ ಒಂದು ಸಾವಿರದ ಐದು ಹಾಡುಗಳನ್ನೂ ಬರೆದನು.
33 ಸೊಲೊಮೋನನು ಪ್ರಕೃತಿಯ ಬಗ್ಗೆಯೂ ಹೆಚ್ಚಾಗಿ ತಿಳಿದುಕೊಂಡನು. ಸೊಲೊಮೋನನು ಲೆಬನೋನಿನ ದೇವದಾರು ವೃಕ್ಷಗಳಿಂದ ಮೊದಲುಗೊಂಡು ಗೋಡೆಗಳಲ್ಲಿ ಬೆಳೆಯುವ ಗಿಡಗಳವರೆಗೆ, ವಿವಿಧ ರೀತಿಯ ಸಸ್ಯಗಳ ಬಗ್ಗೆ ಪ್ರಸ್ತಾಪಿಸಿದನು. ರಾಜನಾದ ಸೊಲೊಮೋನನು ಪ್ರಾಣಿಗಳ, ಪಕ್ಷಿಗಳ ಮತ್ತು ಹರಿದಾಡುವ ಜಂತುಗಳ ಬಗ್ಗೆಯೂ ಪ್ರಸ್ತಾಪಿಸಿದನು. 34 ರಾಜನಾದ ಸೊಲೊಮೋನನ ಜ್ಞಾನೋಕ್ತಿಗಳನ್ನು ಕೇಳಲು ಎಲ್ಲಾ ದೇಶಗಳ ಜನರೂ ಬರುತ್ತಿದ್ದರು. ಎಲ್ಲಾ ದೇಶದ ರಾಜರುಗಳು ತಮ್ಮ ದೇಶದ ಜ್ಞಾನಿಗಳನ್ನು ರಾಜನಾದ ಸೊಲೊಮೋನನ ಬಳಿಗೆ ಕಳುಹಿಸುತ್ತಿದ್ದರು.
ಸೊಲೊಮೋನನು ದೇವಾಲಯವನ್ನು ನಿರ್ಮಿಸಿದನು
5 ಹೀರಾಮನು ತೂರಿನ ರಾಜನಾಗಿದ್ದನು. ಹೀರಾಮನು ಯಾವಾಗಲೂ ದಾವೀದನ ಸ್ನೇಹಿತನಾಗಿದ್ದನು. ದಾವೀದನ ನಂತರ ಸೊಲೊಮೋನನು ನೂತನ ರಾಜನಾದನೆಂದು ಹೀರಾಮನು ಕೇಳಿ, ತನ್ನ ಸೇವಕರನ್ನು ಸೊಲೊಮೋನನ ಬಳಿಗೆ ಕಳುಹಿಸಿದನು. 2 ಸೊಲೊಮೋನನು ರಾಜನಾದ ಹೀರಾಮನಿಗೆ,
3 “ನನ್ನ ತಂದೆಯಾದ ದಾವೀದನು ತನ್ನ ಸುತ್ತಮುತ್ತಲಿನವರೊಂದಿಗೆ ಅನೇಕ ಯುದ್ಧಗಳನ್ನು ಮಾಡಬೇಕಾಯಿತು, ಆದ್ದರಿಂದ ಅವನು ತನ್ನ ದೇವರಾದ ಯೆಹೋವನ ಗೌರವಕ್ಕಾಗಿ ಒಂದು ದೇವಾಲಯವನ್ನು ನಿರ್ಮಿಸಲು ಸಾಧ್ಯವಾಗಲಿಲ್ಲ. ತನ್ನ ಎಲ್ಲಾ ಶತ್ರುಗಳನ್ನು ಸೋಲಿಸಲು ಯೆಹೋವನು ಅವಕಾಶ ಕೊಡುವ ತನಕ ರಾಜನಾದ ದಾವೀದನು ಕಾಯುತ್ತಿದ್ದನು. 4 ಆದರೆ ಈಗ ನನ್ನ ದೇವರಾದ ಯೆಹೋವನು ನನ್ನ ದೇಶದಲ್ಲೆಲ್ಲಾ ಶಾಂತಿ ನೆಲೆಸುವಂತೆ ಮಾಡಿದ್ದಾನೆ. ಈಗ ನನಗೆ ಶತ್ರುಗಳೇ ಇಲ್ಲ. ನನ್ನ ಜನರಿಗೆ ಯಾವ ಅಪಾಯವೂ ಇಲ್ಲ.
5 “ನನ್ನ ತಂದೆಯಾದ ದಾವೀದನಿಗೆ ಯೆಹೋವನು, ‘ನಿನ್ನ ನಂತರ ನಿನ್ನ ಮಗನನ್ನು ನಾನು ರಾಜನನ್ನಾಗಿ ಮಾಡುತ್ತೇನೆ. ನನ್ನನ್ನು ಸನ್ಮಾನಿಸಲು ನಿನ್ನ ಮಗನು ನನಗೆ ಒಂದು ದೇವಾಲಯವನ್ನು ಕಟ್ಟುತ್ತಾನೆ’ ಎಂದು ವಾಗ್ದಾನ ಮಾಡಿದ್ದನು. ಈಗ, ನನ್ನ ದೇವರಾದ ಯೆಹೋವನ ಗೌರವಾರ್ಥವಾಗಿ ದೇವಾಲಯವನ್ನು ನಿರ್ಮಿಸಬೇಕೆಂದಿದ್ದೇನೆ. 6 ಆದ್ದರಿಂದ ನಿನ್ನ ಸಹಾಯವು ನನಗೆ ಬೇಕಾಗಿದೆ. ನಿನ್ನ ಜನರನ್ನು ಲೆಬನೋನಿಗೆ ಕಳುಹಿಸು. ಅಲ್ಲಿ ಅವರು ನನಗಾಗಿ ದೇವದಾರುಮರಗಳನ್ನು ಕಡಿದು ಬೀಳಿಸಲಿ. ನನ್ನ ಸೇವಕರೂ ನಿನ್ನವರೊಂದಿಗೆ ಕೆಲಸಮಾಡುತ್ತಾರೆ. ನಿನ್ನ ಸೇವಕರಿಗೆ ಗೊತ್ತುಪಡಿಸಿದ ವೇತನವನ್ನು ನಾನು ಕೊಡುತ್ತೇನೆ. ಆದರೆ ನಿನ್ನ ಸಹಾಯ ನನಗೆ ಬೇಕು. ನಮ್ಮ ಬಡಗಿಗಳು ಚೀದೋನ್ಯರ ಬಡಗಿಗಳಂತೆ ಕುಶಲಕರ್ಮಿಗಳಲ್ಲ” ಎಂದು ಹೇಳಿ ಕಳುಹಿಸಿದನು.
7 ಸೊಲೊಮೋನನು ಹೇಳಿದುದನ್ನು ಹೀರಾಮನು ಕೇಳಿದಾಗ ಬಹಳ ಸಂತೋಷಗೊಂಡು, “ಈ ಮಹಾ ಜನಾಂಗಕ್ಕೋಸ್ಕರ ದಾವೀದನಿಗೆ ವಿವೇಕಿಯಾದ ಮಗನನ್ನು ಕರುಣಿಸಿದ್ದಕ್ಕಾಗಿ ನಾನು ಯೆಹೋವನಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ” ಎಂದು ಹೇಳಿದನು. 8 ನಂತರ ಹೀರಾಮನು ಸೊಲೊಮೋನನಿಗೆ ಈ ಸಂದೇಶವನ್ನು ಕಳುಹಿಸಿದನು:
“ನಿನ್ನ ಕೋರಿಕೆಯು ನನಗೆ ತಿಳಿಯಿತು. ನಾನು ನಿನಗೆ ಬೇಕಾದ ಎಲ್ಲ ದೇವದಾರು ಮರಗಳನ್ನು ಮತ್ತು ತುರಾಯಿ ಮರಗಳನ್ನು ಕೊಡುತ್ತೇನೆ. 9 ನನ್ನ ಸೇವಕರು ಅವುಗಳನ್ನು ಲೆಬನೋನಿನಿಂದ ಸಮುದ್ರತೀರಕ್ಕೆ ತರುತ್ತಾರೆ. ನಂತರ ನಾನು ಅವುಗಳನ್ನು ಒಟ್ಟಾಗಿ ಕಟ್ಟಿ, ನೀನು ತಿಳಿಸಿದ ಸ್ಥಳಕ್ಕೆ ತೇಲಿಬಿಡುತ್ತೇನೆ. ಗೊತ್ತುಪಡಿಸಿದ ಸ್ಥಳದಲ್ಲಿ ದಿಮ್ಮಿಗಳನ್ನು ಬೇರ್ಪಡಿಸುತ್ತೇನೆ; ನೀನು ಅವುಗಳನ್ನು ತೆಗೆದುಕೊಳ್ಳಬಹುದು. ಅವುಗಳಿಗೆ ಬದಲಾಗಿ ನೀನು ನನ್ನ ಮನೆಯವರಿಗೆ ಆಹಾರಸಾಮಾಗ್ರಿಗಳನ್ನು ಕೊಡಬೇಕೆಂಬುದೇ ನನ್ನ ಅಪೇಕ್ಷೆಯಾಗಿದೆ.”
10-11 ಹೀರಾಮನು ಸೊಲೊಮೋನನಿಗೆ ಬೇಕಾದಷ್ಟು ದೇವದಾರು ಮತ್ತು ತುರಾಯಿ ಮರಗಳನ್ನು ಕೊಡುತ್ತಿದ್ದನು.
ಅದಕ್ಕೆ ಬದಲಾಗಿ ಸೊಲೊಮೋನನು ಪ್ರತಿವರ್ಷವೂ ಹೀರಾಮನಿಗೆ ಅವನ ಮನೆಯವರಿಗೋಸ್ಕರ ಒಂದು ಲಕ್ಷದ ಇಪ್ಪತ್ತು ಸಾವಿರ ಬುಷೆಲ್ ಗೋಧಿಯನ್ನು ಮತ್ತು ಒಂದು ಲಕ್ಷದ ಇಪ್ಪತ್ತು ಸಾವಿರ ಗ್ಯಾಲನ್ ಶುದ್ಧವಾದ ಆಲೀವ್ ಎಣ್ಣೆಯನ್ನು ಕೊಟ್ಟನು.
12 ಯೆಹೋವನು ತಾನು ವಾಗ್ದಾನ ಮಾಡಿದ್ದಂತೆ ಸೊಲೊಮೋನನಿಗೆ ಜ್ಞಾನವನ್ನು ಅನುಗ್ರಹಿಸಿದನು. ಹೀರಾಮನ ಮತ್ತು ಸೊಲೊಮೋನನ ನಡುವೆ ಸಮಾಧಾನವಿತ್ತು. ಈ ಇಬ್ಬರು ರಾಜರುಗಳು ತಮ್ಮತಮ್ಮಲ್ಲಿ ಒಂದು ಒಪ್ಪಂದವನ್ನು ಮಾಡಿಕೊಂಡರು.
13 ರಾಜನಾದ ಸೊಲೊಮೋನನು ಇಸ್ರೇಲಿನ ಮೂವತ್ತು ಸಾವಿರ ಜನರನ್ನು ಬಲತ್ಕಾರದಿಂದ ಈ ಕಾರ್ಯಕ್ಕೆ ನೇಮಿಸಿದನು. 14 ರಾಜನಾದ ಸೊಲೊಮೋನನು ಅದೋನೀರಾಮ ಎಂಬವನನ್ನು ಇವರಿಗೆ ಮೇಲ್ವಿಚಾರಕನನ್ನಾಗಿ ನೇಮಿಸಿದನು. ಸೊಲೊಮೋನನು ಅವರನ್ನು ಮೂರು ಗುಂಪುಗಳಾಗಿ ವಿಂಗಡಿಸಿದನು. ಒಂದೊಂದು ಗುಂಪಿನಲ್ಲಿ ಹತ್ತು ಸಾವಿರ ಜನರಿದ್ದರು. ಪ್ರತಿಯೊಂದು ಗುಂಪಿನವರು ಲೆಬನೋನಿನಲ್ಲಿ ಒಂದು ತಿಂಗಳು ಕೆಲಸ ಮಾಡಿದ ನಂತರ ಎರಡು ತಿಂಗಳು ಮನೆಗೆ ಹಿಂತಿರುಗುತ್ತಿದ್ದರು. 15 ಸೊಲೊಮೋನನು ಎಂಭತ್ತು ಸಾವಿರ ಜನರನ್ನು ಬಲಾತ್ಕಾರದಿಂದ ಬೆಟ್ಟಪ್ರದೇಶದಲ್ಲಿ ಕೆಲಸ ಮಾಡಲು ನೇಮಿಸಿದನು. ಈ ಜನರು ಕಲ್ಲುಗಣಿಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಎಪ್ಪತ್ತು ಸಾವಿರ ಜನರು ಕಲ್ಲುಗಳನ್ನು ಹೊರುತ್ತಿದ್ದರು. 16 ಅಲ್ಲಿ ಕೆಲಸ ಮಾಡುವ ಜನರ ಮೇಲ್ವಿಚಾರಕರಾಗಿ ಮೂರು ಸಾವಿರದ ಮುನ್ನೂರು ಜನರಿದ್ದರು. 17 ರಾಜನಾದ ಸೊಲೊಮೋನನು ದೇವಾಲಯದ ಅಡಿಪಾಯಕ್ಕಾಗಿ ದೊಡ್ಡದಾದ ಹಾಗೂ ಬೆಲೆಬಾಳುವ ಕಲ್ಲುಗಳನ್ನು ಕೊರೆದು ತೆಗೆಯಲು ಆಜ್ಞಾಪಿಸಿದನು. ಈ ಕಲ್ಲುಗಳನ್ನು ಬಹು ಜಾಗರೂಕತೆಯಿಂದ ಕತ್ತರಿಸಿ ತೆಗೆದರು. 18 ನಂತರ ಸೊಲೊಮೋನನ ಮತ್ತು ಹೀರಾಮನ ಕಟ್ಟಡ ಕಟ್ಟುವವರು ಮತ್ತು ಗೆಬಾಲ್ಯ ಜನರು ಈ ಕಲ್ಲುಗಳನ್ನು ಕೆತ್ತಿದರು. ಅವರು ಕಲ್ಲುಗಳನ್ನು ಮತ್ತು ತೊಲೆಗಳನ್ನು ದೇವಾಲಯದ ನಿರ್ಮಾಣಕ್ಕಾಗಿ ಸಿದ್ಧಗೊಳಿಸಿದರು.
ಮರಣದಿಂದ ಜೀವಕ್ಕೆ
2 ಮೊದಲು ನಿಮ್ಮ ಆತ್ಮಿಕ ಜೀವಿತಗಳು, ನಿಮ್ಮ ಪಾಪಗಳ ಮತ್ತು ನೀವು ದೇವರಿಗೆ ವಿರುದ್ಧವಾಗಿ ಮಾಡಿದ ಕೆಟ್ಟಕಾರ್ಯಗಳ ದೆಸೆಯಿಂದ ಸತ್ತುಹೋಗಿದ್ದವು. 2 ಹೌದು, ಮೊದಲು ನೀವು ಆ ಪಾಪಗಳನ್ನೇ ಮಾಡುತ್ತಿದ್ದಿರಿ. ಈ ಲೋಕದ ಮಾರ್ಗಗಳಿಗನುಸಾರವಾಗಿ ನೀವು ಜೀವಿಸಿದಿರಿ. ವಾಯುಮಂಡಲದಲ್ಲಿರುವ ದುಷ್ಟಶಕ್ತಿಗಳ ಅಧಿಪತಿಯನ್ನು ನೀವು ಅನುಸರಿಸಿದಿರಿ. ದೇವರಿಗೆ ಅವಿಧೇಯರಾದ ಜನರಲ್ಲಿ ಈಗ ಕಾರ್ಯಮಾಡುತ್ತಿರುವುದು ಅದೇ ಆತ್ಮ. 3 ಮೊದಲು ನಾವೆಲ್ಲರೂ ಆ ಜನರಂತೆಯೇ ಜೀವಿಸುತ್ತಿದ್ದೆವು. ಶರೀರಭಾವದ ನಮ್ಮ ಇಚ್ಛೆಗಳನ್ನು ಪೂರೈಸಲು ನಾವು ಪ್ರಯತ್ನಿಸುತ್ತಿದ್ದೆವು. ನಮ್ಮ ದೇಹ, ಮನಸ್ಸುಗಳು ಬಯಸಿದ್ದನ್ನೆಲ್ಲಾ ನಾವು ಮಾಡಿದೆವು. ನಾವು ದುಷ್ಟಜನರಾಗಿದ್ದೆವು. ನಮ್ಮ ಆ ಜೀವಿತದ ದೆಸೆಯಿಂದ ನಾವು ಆಗಲೇ ದೇವರ ಕೋಪಕ್ಕೆ ಗುರಿಯಾಗಬೇಕಿತ್ತು. ನಮಗೂ ಇತರ ಜನರಿಗೂ ಯಾವ ವ್ಯತ್ಯಾಸವೂ ಇರಲಿಲ್ಲ.
4 ಆದರೆ ಕರುಣಾನಿಧಿಯಾಗಿರುವ ದೇವರು ನಮ್ಮನ್ನು ಬಹಳವಾಗಿ ಪ್ರೀತಿಸಿದನು. 5 ನಾವು ದೇವರಿಗೆ ವಿರುದ್ಧವಾಗಿ ಮಾಡಿದ ಕಾರ್ಯಗಳ ದೆಸೆಯಿಂದ ಸತ್ತವರಾಗಿದ್ದೆವು. ಆದರೆ ನಮ್ಮನ್ನು ಕ್ರಿಸ್ತನೊಂದಿಗೆ ಬದುಕಿಸಿದನು. ನೀವು ದೇವರ ಕೃಪೆಯಿಂದ ರಕ್ಷಣೆ ಹೊಂದಿದವರಾಗಿದ್ದೀರಿ. 6 ದೇವರು ನಮ್ಮನ್ನು ಕ್ರಿಸ್ತನೊಂದಿಗೆ ಎಬ್ಬಿಸಿ ಆತನೊಂದಿಗೆ ಪರಲೋಕದಲ್ಲಿ ಸಿಂಹಾಸನದ ಮೇಲೆ ಕುಳ್ಳಿರಿಸಿದ್ದಾನೆ. ಕ್ರಿಸ್ತ ಯೇಸುವಿನಲ್ಲಿರುವ ನಮಗಾಗಿ ದೇವರು ಇದನ್ನು ಮಾಡಿದನು. 7 ದೇವರು ತನ್ನ ಮಹಾತಿಶಯವಾದ ಕೃಪೆಯನ್ನು ಮುಂದಿನ ಕಾಲದಲ್ಲೆಲ್ಲಾ ತೋರಿಸಬೇಕೆಂದು ಹೀಗೆ ಮಾಡಿದ್ದಾನೆ. ದೇವರು ಈ ಕೃಪೆಯನ್ನು ತನ್ನ ಕರುಣೆಯ ಮೂಲಕ ನಮಗೆ ಕ್ರಿಸ್ತ ಯೇಸುವಿನಲ್ಲಿ ತೋರಿಸುತ್ತಾನೆ.
8 ಆದ್ದರಿಂದ ನೀವು ನಂಬಿಕೆಯ ಮೂಲಕ ದೇವರ ಕೃಪೆಯಿಂದಲೇ ರಕ್ಷಣೆ ಹೊಂದಿದವರಾಗಿದ್ದೀರಿ. ಆ ರಕ್ಷಣೆಯು ನಿಮ್ಮಿಂದ ಉಂಟಾದದ್ದಲ್ಲ, ಅದು ದೇವರ ವರ. 9 ನಿಮಗೆ ರಕ್ಷಣೆ ದೊರೆತದ್ದು ನಿಮ್ಮ ಒಳ್ಳೆಯ ಕಾರ್ಯಗಳಿಂದಲ್ಲ. ಆದ್ದರಿಂದ ತನ್ನನ್ನು ತಾನೇ ರಕ್ಷಿಸಿಕೊಂಡಿರುವುದಾಗಿ ಯಾರೂ ಹೊಗಳಿಕೊಳ್ಳಲು ಸಾಧ್ಯವಿಲ್ಲ. 10 ನಾವು ದೇವರ ನಿರ್ಮಾಣ. ನಾವು ಒಳ್ಳೆಯ ಕಾರ್ಯಗಳನ್ನು ಮಾಡಬೇಕೆಂದು ದೇವರು ನಮ್ಮನ್ನು ಕ್ರಿಸ್ತಯೇಸುವಿನಲ್ಲಿ ಹೊಸ ಜನರನ್ನಾಗಿ ಮಾಡಿದನು. ದೇವರು ನಮಗೋಸ್ಕರವಾಗಿ ಆ ಒಳ್ಳೆಯ ಕಾರ್ಯಗಳನ್ನು ಮೊದಲೇ ಯೋಜನೆ ಮಾಡಿದನು. ನಾವು ಆ ಒಳ್ಳೆಯ ಕಾರ್ಯಗಳನ್ನು ಮಾಡುತ್ತಾ ಜೀವಿಸಬೇಕೆಂಬುದು ದೇವರ ಯೋಜನೆಯಾಗಿತ್ತು.
ಕ್ರಿಸ್ತನ ಮೂಲಕ ಸಮಾನತ್ವ
11 ನೀವು ಹುಟ್ಟಿದಂದಿನಿಂದ ಅನ್ಯಜನರಾಗಿದ್ದೀರಿ. ನಿಮ್ಮನ್ನು “ಸುನ್ನತಿಯಿಲ್ಲದವರು” ಎಂದು ಯೆಹೂದ್ಯರು ಕರೆಯುತ್ತಾರೆ. ನಿಮ್ಮನ್ನು “ಸುನ್ನತಿಯಿಲ್ಲದವರು” ಎಂದು ಕರೆಯುವ ಯೆಹೂದ್ಯರು ತಮ್ಮ ಬಗ್ಗೆ “ಸುನ್ನತಿಯವರು” ಎಂದು ಹೇಳಿಕೊಳ್ಳುತ್ತಾರೆ. (ಅವರ ಸುನ್ನತಿಯು ಶರೀರದಲ್ಲಿ ಕೈಯಿಂದ ಮಾಡಲ್ಪಡುತ್ತದೆ.) 12 ಪೂರ್ವಕಾಲದಲ್ಲಿ ನೀವು ಕ್ರಿಸ್ತನಿಲ್ಲದವರಾಗಿದ್ದಿರಿ ಎಂಬುದನ್ನು ಜ್ಞಾಪಿಸಿಕೊಳ್ಳಿರಿ. ನೀವು ಇಸ್ರೇಲಿನ ಪ್ರಜೆಗಳಾಗಿರಲಿಲ್ಲ. ದೇವರು ತನ್ನ ಜನರೊಂದಿಗೆ ಮಾಡಿಕೊಂಡಿದ್ದ ವಾಗ್ದಾನಗಳಿಗೆ ಸಂಬಂಧಪಟ್ಟ ಒಡಂಬಡಿಕೆಗಳನ್ನು ನೀವು ಹೊಂದಿರಲಿಲ್ಲ. ನಿಮಗೆ ನಿರೀಕ್ಷೆಯಿರಲಿಲ್ಲ ಮತ್ತು ನೀವು ದೇವರನ್ನು ತಿಳಿದಿರಲಿಲ್ಲ. 13 ಹೌದು, ಒಂದು ಕಾಲದಲ್ಲಿ ನೀವು ದೇವರಿಗೆ ಬಹು ದೂರವಾಗಿದ್ದಿರಿ. ಆದರೆ ಈಗ ನೀವು ಕ್ರಿಸ್ತ ಯೇಸುವಿನ ರಕ್ತದ ಮೂಲಕ ದೇವರಿಗೆ ಸಮೀಪಸ್ಥರಾದಿರಿ.
14 ಕ್ರಿಸ್ತನಿಂದ ಈಗ ನಮಗೆ ಸಮಾಧಾನ ದೊರೆತಿದೆ. ಕ್ರಿಸ್ತನು ಯೆಹೂದ್ಯರನ್ನೂ ಯೆಹೂದ್ಯರಲ್ಲದವರನ್ನೂ ಒಂದೇ ಜನಾಂಗವನ್ನಾಗಿ ಮಾಡಿದ್ದಾನೆ. ಯೆಹೂದ್ಯರೂ ಯೆಹೂದ್ಯರಲ್ಲದವರೂ ತಮ್ಮ ಮಧ್ಯೆ ಒಂದು ಅಡ್ಡಗೋಡೆಯಿದೆಯೋ ಎಂಬಂತೆ ಬೇರ್ಪಟ್ಟಿದ್ದರು. ಅವರು ಒಬ್ಬರನ್ನೊಬ್ಬರು ದ್ವೇಷಿಸಿದರು. ಆದರೆ ಕ್ರಿಸ್ತನು ತನ್ನ ದೇಹವನ್ನೇ ಅರ್ಪಿಸುವುದರ ಮೂಲಕ ದ್ವೇಷವೆಂಬ ಆ ಗೋಡೆಯನ್ನು ಕೆಡವಿದನು. 15 ಯೆಹೂದ್ಯರ ಧರ್ಮಶಾಸ್ತ್ರವು ಅನೇಕ ಆಜ್ಞೆಗಳನ್ನೂ ನಿಯಮಗಳನ್ನೂ ಹೊಂದಿತ್ತು. ಆದರೆ ಕ್ರಿಸ್ತನು ಆ ಧರ್ಮಶಾಸ್ತ್ರವನ್ನು ಅಂತಿಮಗೊಳಿಸಿದನು. ಯೆಹೂದ್ಯರನ್ನು ಮತ್ತು ಯೆಹೂದ್ಯರಲ್ಲದವರನ್ನು ತನ್ನಲ್ಲಿ ಒಂದು ಜನಾಂಗವನ್ನಾಗಿ ಮಾಡಿ ಶಾಂತಿಯನ್ನು ಸ್ಥಾಪಿಸಬೇಕೆಂಬುದೇ ಕ್ರಿಸ್ತನ ಉದ್ದೇಶವಾಗಿತ್ತು. 16 ಈ ಎರಡು ಜನಾಂಗಗಳ ನಡುವೆ ಇದ್ದ ದ್ವೇಷವನ್ನು ಕ್ರಿಸ್ತನು ಶಿಲುಬೆಯ ಮೂಲಕ ಕೊನೆಗೊಳಿಸಿದನು. ಈ ಜನಾಂಗಗಳು ಒಂದೇ ದೇಹವಾದ ಬಳಿಕ ಅವರನ್ನು ದೇವರ ಬಳಿಗೆ ನಡೆಸಬೇಕೆಂಬುದು ಕ್ರಿಸ್ತನ ಬಯಕೆಯಾಗಿತ್ತು. ಶಿಲುಬೆಯ ಮೇಲೆ ಪ್ರಾಣಕೊಡುವುದರ ಮೂಲಕ ಕ್ರಿಸ್ತನು ತನ್ನ ಈ ಬಯಕೆಯನ್ನು ಪೂರೈಸಿದನು. 17 ದೇವರಿಗೆ ದೂರವಾಗಿದ್ದ ನಿಮ್ಮ ಬಳಿಗೂ ಸಮೀಪಸ್ಥರಾಗಿದ್ದವರ ಬಳಿಗೂ ಕ್ರಿಸ್ತನು ಬಂದು ಸಮಾಧಾನದ ಕುರಿತು ಉಪದೇಶಿಸಿದನು. 18 ಹೌದು, ಕ್ರಿಸ್ತನ ಮೂಲಕ ನಾವೆಲ್ಲರೂ ಒಬ್ಬ ಆತ್ಮನಿಂದ ನಮ್ಮ ತಂದೆಯಾದ ದೇವರ ಬಳಿಗೆ ಬರಲು ಶಕ್ತರಾಗಿದ್ದೇವೆ.
19 ಆದ್ದರಿಂದ ಯೆಹೂದ್ಯರಲ್ಲದವರಾದ ನೀವು ಈಗ ವಿದೇಶಿಯರಲ್ಲ ಮತ್ತು ಅನ್ಯಜನರಲ್ಲ. ಈಗ ನೀವು ದೇವರ ಪರಿಶುದ್ಧ ಜನರೊಂದಿಗೆ ಪ್ರಜೆಗಳಾಗಿದ್ದೀರಿ. ನೀವು ದೇವರ ಕುಟುಂಬಕ್ಕೆ ಸೇರಿದವರಾಗಿದ್ದೀರಿ. 20 ವಿಶ್ವಾಸಿಗಳಾದ ನೀವು ದೇವರ ಸ್ವಂತ ಕಟ್ಟಡವಾಗಿದ್ದೀರಿ. ಅಪೊಸ್ತಲರೂ ಪ್ರವಾದಿಗಳೂ ಎಂಬ ಅಸ್ತಿವಾರದ ಮೇಲೆ ಆ ಕಟ್ಟಡವು ಕಟ್ಟಲ್ಪಟ್ಟಿದೆ. ಕ್ರಿಸ್ತನೇ ಆ ಕಟ್ಟಡಕ್ಕೆ ಮೂಲೆಗಲ್ಲಾಗಿದ್ದಾನೆ. 21 ಇಡೀ ಕಟ್ಟಡವು ಕ್ರಿಸ್ತನಲ್ಲಿ ಒಂದಾಗಿ ಸೇರಿಕೊಂಡಿದೆ. ಕ್ರಿಸ್ತನೇ ಅದನ್ನು ಬೆಳೆಯಿಸಿ ಪ್ರಭುವಿನಲ್ಲಿ ಪರಿಶುದ್ಧವಾದ ದೇವಾಲಯವನ್ನಾಗಿ ಮಾಡುತ್ತಾನೆ. 22 ನೀವು ಕ್ರಿಸ್ತನಲ್ಲಿ ಇತರ ಜನರೊಂದಿಗೆ (ಯೆಹೂದ್ಯರೊಂದಿಗೆ) ಕಟ್ಟಲ್ಪಡುತ್ತಿದ್ದೀರಿ. ದೇವರು ತನ್ನ ಆತ್ಮನ ಮೂಲಕ ವಾಸಿಸತಕ್ಕ ನಿವಾಸಸ್ಥಾನವಾಗಿ ನಿರ್ಮಿತರಾಗುತ್ತಿದ್ದೀರಿ.
ಎದೋಮ್ ವಿರುದ್ಧ ಸಂದೇಶ
35 ಯೆಹೋವನ ಸಂದೇಶ ನನಗೆ ಬಂತು. ಆತನು ಹೇಳಿದ್ದೇನೆಂದರೆ, 2 “ನರಪುತ್ರನೇ, ಸೇಯೀರ್ ಪರ್ವತದ ಕಡೆಗೆ ನೋಡು. ನನ್ನ ಪರವಾಗಿ ಅದಕ್ಕೆ ವಿರುದ್ಧವಾಗಿ ಮಾತನಾಡು. 3 ‘ನನ್ನ ಒಡೆಯನಾದ ಯೆಹೋವನು ಹೀಗೆ ಹೇಳುತ್ತಾನೆಂದು ಅದಕ್ಕೆ ಹೇಳು:
“‘ಸೇಯೀರ್ ಪರ್ವತವೇ, ನಾನು ನಿನಗೆ ವಿರುದ್ಧವಾಗಿದ್ದೇನೆ.
ನಿನ್ನನ್ನು ಶಿಕ್ಷಿಸುತ್ತೇನೆ. ನಾನು ನಿನ್ನನ್ನು ಬಂಜರು ಭೂಮಿಯನ್ನಾಗಿ ಮಾಡುವೆನು.
4 ನಾನು ನಿನ್ನ ಪಟ್ಟಣಗಳನ್ನೆಲ್ಲಾ ನಾಶಮಾಡುವೆನು;
ನೀನು ಬರಿದಾಗುವೆ.
ನಾನು ಒಡೆಯನಾದ ಯೆಹೋವನೆಂದು ಆಗ ನೀನು ತಿಳಿಯುವೆ.
5 ಯಾಕೆಂದರೆ ನೀನು ಯಾವಾಗಲೂ
ನನ್ನ ಜನಕ್ಕೆ ವಿರೋಧವಾಗಿರುವೆ.
ನೀನು ಇಸ್ರೇಲರ ವಿರುದ್ಧವಾಗಿ ಕತ್ತಿಯನ್ನೆತ್ತಿರುವೆ.
ಅವರು ಆಗ ಸಂಕಟದಲ್ಲಿದ್ದರು
ಮತ್ತು ತಮ್ಮ ಶಿಕ್ಷೆಯ ಕಡೆಗಾಲದಲ್ಲಿದ್ದರು.’”
6 ಆದ್ದರಿಂದ ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ, “ನನ್ನ ಜೀವದಾಣೆ, ನಿಮ್ಮನ್ನು ಮರಣವು ನುಂಗಿಬಿಡುವಂತೆ ಮಾಡುವೆನು. ಮರಣವು ನಿಮ್ಮನ್ನು ಹಿಂಬಾಲಿಸುವುದು. ನೀನು ಜನರನ್ನು ಕೊಲ್ಲಲು ಹಿಂಜರಿಯಲಿಲ್ಲ. ಆದ್ದರಿಂದ ಮರಣವು ನಿನ್ನನ್ನು ಓಡಿಸುವುದು. 7 ನಾನು ಸೇಯೀರ್ ಬೆಟ್ಟವನ್ನು ಹಾಳುಮಾಡುವೆನು. ಆ ನಗರದಿಂದ ಬರುವ ಪ್ರತಿಯೊಬ್ಬನನ್ನು ಸಾಯಿಸುವೆನು. 8 ಅದರ ಬೆಟ್ಟಪ್ರಾಂತ್ಯಗಳನ್ನು ಸತ್ತ ಹೆಣಗಳಿಂದ ಮುಚ್ಚುವೆನು. ಹೆಣಗಳು ಎಲ್ಲಾ ಕಡೆಗಳಲ್ಲಿಯೂ ಬೆಟ್ಟಗುಡ್ಡಗಳಲ್ಲಿಯೂ ತಗ್ಗುಗಳಲ್ಲಿಯೂ ಇರುವವು. 9 ನೀನು ನಿತ್ಯಕಾಲಕ್ಕೂ ಬರಿದಾಗಿರು. ಯಾರೂ ನಿನ್ನ ಪಟ್ಟಣಗಳಲ್ಲಿ ವಾಸಿಸರು. ಆಗ ನೀನು, ದೇವರಾದ ಯೆಹೋವನು ನಾನೇ ಎಂದು ತಿಳಿದುಕೊಳ್ಳುತ್ತಿ.”
10 “ಈ ಎರಡು ದೇಶಗಳು (ಇಸ್ರೇಲ್ ಮತ್ತು ಯೆಹೂದ) ನನ್ನವು. ಅವುಗಳನ್ನು ಸ್ವಂತಕ್ಕಾಗಿ ತೆಗೆದುಕೊಳ್ಳೋಣ” ಎಂದು ಹೇಳಿರುತ್ತೀ.
ಆದಾಗ್ಯೂ ಯೆಹೋವನು ಅಲ್ಲಿದ್ದನು. 11 ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ನನ್ನ ಜನರ ಮೇಲೆ ನೀನು ಅಸೂಯೆಪಟ್ಟೆ ಮತ್ತು ನೀನು ಅವರ ಮೇಲೆ ಸಿಟ್ಟುಗೊಂಡಿದ್ದೆ. ನಿಜವಾಗಿ ಹೇಳಬೇಕಾದರೆ, ನೀನು ಅವರನ್ನು ದ್ವೇಷಿಸಿದೆ. ಆದ್ದರಿಂದ, ನನ್ನ ಜೀವದಾಣೆ, ನೀನು ಹೇಗೆ ಅವರನ್ನು ನೋಯಿಸಿದೆಯೋ ಹಾಗೆಯೇ ನಾನು ನಿನ್ನನ್ನು ಶಿಕ್ಷಿಸುವೆನು. ಈ ರೀತಿಯಲ್ಲಿ, ನನ್ನ ಜನರೊಂದಿಗೆ ನಾನಿದ್ದೇನೆಂದು ಅವರಿಗೆ ತಿಳಿಯಪಡಿಸುವೆ. 12 ಆಗ ನಿನ್ನ ಎಲ್ಲಾ ತುಚ್ಛಮಾತುಗಳನ್ನು ನಾನು ಕೇಳಿರುತ್ತೇನೆ ಎಂದು ನೀನು ತಿಳಿದುಕೊಳ್ಳುವೆ.
“ಇಸ್ರೇಲ್ ಪರ್ವತದ ವಿರುದ್ಧವಾಗಿ ನೀನು ಆಡಿದ ಉದ್ರೇಕಕಾರಿಯಾದ ಸಂಗತಿಗಳನ್ನೆಲ್ಲ ನಾನು ಕೇಳಿದ್ದೇನೆ. ‘ಇಸ್ರೇಲ್ ನಾಶವಾಯಿತು. ಈಗ ಅದನ್ನು ಲೂಟಿ ಮಾಡೋಣ’ ಎಂದು ನೀನು ಹೇಳಿದಿ. 13 ನಿನ್ನ ಹೆಮ್ಮೆಯಿಂದ ನನ್ನ ವಿರುದ್ಧವಾಗಿ ಮಾತನಾಡಿದ್ದೀ, ನೀನು ಅನೇಕ ಬಾರಿ ಹೇಳಿರುತ್ತೀ. ನಾನೆಲ್ಲವನ್ನು ಕೇಳಿದ್ದೇನೆ.”
14 ನನ್ನ ಒಡೆಯನಾದ ಯೆಹೋವನ ನುಡಿ ಇದು: “ಪ್ರಪಂಚದ ಎಲ್ಲಾ ದೇಶಗಳು ನಾನು ನಿನ್ನನ್ನು ನಾಶಮಾಡುವಾಗ ಸಂತೋಷಿಸುವವು. 15 ಇಸ್ರೇಲ್ ರಾಜ್ಯವು ನಾಶವಾದಾಗ ನೀನು ಸಂತೋಷಪಟ್ಟಿರುವೆ. ನಾನು ಕೂಡ ಹಾಗೆಯೇ ಮಾಡುವೆನು. ಸೇಯೀರ್ ಪರ್ವತ ಮತ್ತು ಎದೋಮ್ ರಾಜ್ಯವೆಲ್ಲಾ ನಾಶವಾಗುವದು. ಆಗ ನಾನು ಯೆಹೋವನೆಂದು ನೀನು ತಿಳಿಯುವೆ.”
ಸ್ತುತಿಗೀತೆ. ರಚನೆಗಾರರು: ಕೋರಹೀಯರು.
85 ಯೆಹೋವನೇ, ನಿನ್ನ ದೇಶಕ್ಕೆ ಕರುಣೆತೋರು.
ಯಾಕೋಬನ ಜನರು ಪರದೇಶದಲ್ಲಿ ಸೆರೆಯಾಳುಗಳಾಗಿದ್ದಾರೆ.
ಅವರನ್ನು ಸ್ವದೇಶಕ್ಕೆ ಮತ್ತೆ ಕರೆದುಕೊಂಡು ಬಾ.
2 ನಿನ್ನ ಜನರ ದ್ರೋಹವನ್ನು ಕ್ಷಮಿಸು!
ಅವರ ಪಾಪಗಳನ್ನು ಅಳಿಸಿಬಿಡು!
3 ನಿನ್ನ ರೌದ್ರವನ್ನು ತೊರೆದುಬಿಡು.
ಉಗ್ರ ಕೋಪದಿಂದಿರಬೇಡ.
4 ನಮ್ಮ ರಕ್ಷಕನಾದ ದೇವರೇ, ನಮ್ಮ ಮೇಲೆ
ನಿನಗಿರುವ ಕೋಪವನ್ನು ತೊರೆದು ನಮ್ಮನ್ನು ಮತ್ತೆ ಸ್ವೀಕರಿಸು.
5 ನಮ್ಮ ಮೇಲೆ ಸದಾಕಾಲ ಕೋಪದಿಂದಿರುವೆಯಾ?
ನಮ್ಮ ಮೇಲೆ ತಲತಲಾಂತರಗಳವರೆಗೂ ಕೋಪವನ್ನು ಬೆಳೆಸಬೇಕೆಂದಿರುವೆಯಾ?
6 ದಯವಿಟ್ಟು ನಮ್ಮನ್ನು ಮತ್ತೆ ಜೀವಿಸಮಾಡು!
ನಿನ್ನ ಜನರನ್ನು ಸಂತೋಷಗೊಳಿಸು.
7 ಯೆಹೋವನೇ, ನಮ್ಮ ಮೇಲೆ ನಿನಗಿರುವ ಪ್ರೀತಿಯನ್ನು ತೋರಿಸು.
ನಮ್ಮನ್ನು ರಕ್ಷಿಸು.
8 ದೇವರಾದ ಯೆಹೋವನು ಹೇಳಿದ್ದು ನನಗೆ ಕೇಳಿಸಿತು.
ತನ್ನ ಜನರಿಗೂ ತನ್ನ ಸದ್ಭಕ್ತರಿಗೂ ಶಾಂತಿ ಇರುವುದೆಂದು ಆತನು ಹೇಳಿದನು.
ಆದ್ದರಿಂದ ಅವರು ತಮ್ಮ ಮೂಢಜೀವನಕ್ಕೆ ಹೋಗಕೂಡದು.
9 ದೇವರು ತನ್ನ ಭಕ್ತರನ್ನು ರಕ್ಷಿಸುವ ಕಾಲ ಸಮೀಪವಾಗಿದೆ.
ನಾವು ಸ್ವದೇಶದಲ್ಲಿ ಗೌರವದೊಂದಿಗೆ ನೆಲೆಸುವ ಸಮಯ ಹತ್ತಿರವಾಗಿದೆ.
10 ದೇವರ ನಿಜಪ್ರೀತಿಯು ಆತನ ಭಕ್ತರನ್ನು ಸಂಧಿಸುತ್ತದೆ.
ನೀತಿಯೂ ಸಮಾಧಾನವೂ ಅವರಿಗೆ ಮುದ್ದಿಡುತ್ತವೆ.
11 ನಿವಾಸಿಗಳೆಲ್ಲರೂ ದೇವರಿಗೆ ನಂಬಿಗಸ್ತರಾಗಿರುವರು.
ಪರಲೋಕದ ದೇವರು ಅವರಿಗೆ ಒಳ್ಳೆಯವನಾಗಿರುವನು.[a]
12 ಯೆಹೋವನು ನಮಗೆ ಒಳ್ಳೆಯವುಗಳನ್ನು ಹೇರಳವಾಗಿ ಒದಗಿಸುವನು.
ಭೂಮಿಯು ಒಳ್ಳೆಯ ಬೆಳೆಗಳನ್ನು ಬೆಳೆಯಿಸುವುದು.
13 ನೀತಿಯು ಆತನ ಮುಂದೆ ಹೋಗುತ್ತಾ
ಆತನಿಗಾಗಿ ಹಾದಿಯನ್ನು ಸಿದ್ಧಪಡಿಸುವುದು.
Kannada Holy Bible: Easy-to-Read Version. All rights reserved. © 1997 Bible League International