M’Cheyne Bible Reading Plan
ದಾವೀದ ರಾಜನ ಮರಣ
2 ದಾವೀದನು ಸಾಯುವ ಕಾಲವು ಹತ್ತಿರವಾಯಿತು. ಆದ್ದರಿಂದ ದಾವೀದನು ಸೊಲೊಮೋನನೊಂದಿಗೆ ಮಾತನಾಡುತ್ತಾ, ಅವನಿಗೆ, 2 “ಎಲ್ಲರಂತೆ ನನಗೂ ಸಾಯುವ ಕಾಲ ಸಮೀಪಿಸಿತು. ನೀನಾದರೋ ಬಲಿಷ್ಠನಾಗಿರು; ಧೈರ್ಯವಂತನಾಗಿರು. 3 ನಿನ್ನ ದೇವರಾದ ಯೆಹೋವನ ಆಜ್ಞೆಗಳನ್ನೆಲ್ಲಾ ಎಚ್ಚರಿಕೆಯಿಂದ ಅನುಸರಿಸು. ಮೋಶೆಯ ಧರ್ಮಶಾಸ್ತ್ರದಲ್ಲಿ ಬರೆದಿರುವ ಆಜ್ಞೆಗಳಿಗೂ ಕಟ್ಟಳೆಗಳಿಗೂ ನಿರ್ಣಯಗಳಿಗೂ ಒಡಂಬಡಿಕೆಗಳಿಗೂ ವಿಧೇಯನಾಗಿರು. ಆಗ ನೀನು ನಿನ್ನ ಎಲ್ಲ ಕೆಲಸಕಾರ್ಯಗಳಲ್ಲೂ ನೀನು ಹೋಗುವ ಎಲ್ಲಾ ಕಡೆಗಳಲ್ಲೂ ಯಶಸ್ಸನ್ನು ಗಳಿಸುವೆ. 4 ನೀನು ಯೆಹೋವನಿಗೆ ವಿಧೇಯನಾದರೆ, ಆಗ ಯೆಹೋವನು ನನಗೆ ಮಾಡಿದ ವಾಗ್ದಾನವನ್ನು ಈಡೇರಿಸುವನು. ಯೆಹೋವನು ನನಗೆ ಈ ರೀತಿ ವಾಗ್ದಾನ ಮಾಡಿರುವನು: ‘ನಿನ್ನ ಮಕ್ಕಳು ನಂಬಿಗಸ್ತರಾಗಿ ಪೂರ್ಣಮನಸ್ಸಿನಿಂದಲೂ ಪೂರ್ಣಪ್ರಾಣದಿಂದಲೂ ನನ್ನ ಆಜ್ಞೆಗಳಿಗೆ ವಿಧೇಯರಾಗಿ ಜೀವಿಸುವುದಾಗಿದ್ದರೆ, ನಿನ್ನ ವಂಶದವರಲ್ಲಿ ಒಬ್ಬನು ಯಾವಾಗಲೂ ಇಸ್ರೇಲಿನ ಜನರನ್ನು ಆಳುವವನಾಗಿರುತ್ತಾನೆ.’”
5 “ಚೆರೂಯಳ ಮಗನಾದ ಯೋವಾಬನು ನನಗೆ ಮಾಡಿದ್ದನ್ನು ಸಹ ನೀನು ಜ್ಞಾಪಿಸಿಕೊ. ಇಸ್ರೇಲಿನ ಇಬ್ಬರು ಸೇನಾಧಿಪತಿಗಳನ್ನು ಅವನು ಕೊಂದುಹಾಕಿದನು. ಅವರು ಯಾರೆಂದರೆ: ನೇರನ ಮಗನಾದ ಅಬ್ನೇರನು ಮತ್ತು ಯೆತೆರನ ಮಗನಾದ ಅಮಾಸನು. ಈ ಜನರ ರಕ್ತವು ಅವನ ಸೊಂಟಪಟ್ಟಿಯ ಕತ್ತಿ ಹಾಗೂ ಯುದ್ಧಕಾಲದಲ್ಲಿ ತೊಡುವ ಪಾದರಕ್ಷೆಗಳ ಮೇಲೆ ಚಿಮ್ಮಿತು. ಶಾಂತಿಯ ಕಾಲದಲ್ಲಿ ಅವನು ಅವರನ್ನು ಕೊಂದುಹಾಕಿದನು. ಆದ್ದರಿಂದ ನಾನು ಅವನನ್ನು ದಂಡಿಸಬೇಕಾಗಿತ್ತು. 6 ಆದರೆ ಈಗ ನೀನು ರಾಜನಾಗಿರುವೆ. ಆದ್ದರಿಂದ ನಿನ್ನ ಜ್ಞಾನಕ್ಕೆ ಸರಿತೋಚಿದ ರೀತಿಯಲ್ಲಿ ನೀನು ಅವನನ್ನು ದಂಡಿಸು. ಆದರೆ ನೀನು ಅವನನ್ನು ಖಂಡಿತವಾಗಿ ಕೊಲ್ಲಲೇಬೇಕು. ಅವನು ಮುದಿತನದಲ್ಲಿ ಸಮಾಧಾನದಿಂದ ಸಾಯಲು ಬಿಡಬೇಡ!”
7 “ಗಿಲ್ಯಾದಿನವನಾದ ಬರ್ಜಿಲ್ಲ್ಯೆಯನ ಮಕ್ಕಳಿಗೆ ದಯೆಯನ್ನು ತೋರು. ಅವರು ನಿನಗೆ ಸ್ನೇಹಿತರಾಗಿರಲು ಮತ್ತು ನಿನ್ನ ಪಂಕ್ತಿಯಲ್ಲಿ ಊಟಮಾಡಲು ಅವಕಾಶ ಮಾಡು. ನಾನು ನಿನ್ನ ಸೋದರನಾದ ಅಬ್ಷಾಲೋಮನಿಂದ ಓಡಿಹೋದಾಗ ಅವರು ನನಗೆ ಸಹಾಯ ಮಾಡಿದರು.
8 “ಗೇರನ ಮಗನಾದ ಶಿಮ್ಮಿಯು ನಿನ್ನೊಡನೆ ಇಲ್ಲಿದ್ದಾನೆಂಬುದನ್ನು ಜ್ಞಾಪಿಸಿಕೊ. ಅವನು ಬಹುರೀಮಿನ ಬೆನ್ಯಾಮೀನ್ ಕುಲದವನು. ನಾನು ಮಹನಯಿಮಿಗೆ ಓಡಿಹೋದ ಆ ದಿನದಂದು ಅವನು ನನ್ನ ವಿರುದ್ಧವಾಗಿ ಬಹಳವಾಗಿ ಶಪಿಸಿದ್ದನ್ನು ಜ್ಞಾಪಿಸಿಕೊ. ನಂತರ ಅವನು ನನ್ನನ್ನು ಜೋರ್ಡನ್ ನದಿಯ ಹತ್ತಿರ ಭೇಟಿಮಾಡಲು ಬಂದನು. ಆದರೆ ನಾನು ಯೆಹೋವನ ಸನ್ನಿಧಿಯಲ್ಲಿ, ‘ಶಿಮ್ಮಿ ನಾನು ನಿನ್ನನ್ನು ಕೊಲ್ಲುವುದಿಲ್ಲ’ ಎಂದು ವಾಗ್ದಾನ ಮಾಡಿದೆನು. 9 ಅವನನ್ನು ದಂಡಿಸದೆ ಬಿಡಬೇಡ. ನೀನು ಬುದ್ಧಿವಂತ! ಅವನಿಗೆ ಏನು ಮಾಡಬೇಕೆಂಬುದು ನಿನಗೆ ತಿಳಿದಿದೆ. ಆದರೆ ಅವನು ಮುದಿತನದಲ್ಲಿ ಸಮಾಧಾನದಿಂದ ಸಾಯಲು ಬಿಡಬೇಡ” ಎಂದು ಹೇಳಿದನು.
10 ನಂತರ ದಾವೀದನು ತೀರಿಕೊಂಡನು. ಅವನನ್ನು ದಾವೀದ ನಗರದಲ್ಲಿ ಸಮಾಧಿಮಾಡಿದರು. 11 ದಾವೀದನು ಇಸ್ರೇಲನ್ನು ನಲವತ್ತು ವರ್ಷಗಳ ಕಾಲ ಆಳಿದನು. ಅವನು ಏಳು ವರ್ಷ ಹೆಬ್ರೋನಿನಲ್ಲೂ ಮೂವತ್ತಮೂರು ವರ್ಷ ಜೆರುಸಲೇಮಿನಲ್ಲೂ ಆಡಳಿತ ನಡೆಸಿದನು.
ಸೊಲೊಮೋನ ಮತ್ತು ಅದೋನೀಯ
12 ಈಗ ಸೊಲೊಮೋನನು ತನ್ನ ತಂದೆಯ ಸಿಂಹಾಸನದ ಮೇಲೆ ಕುಳಿತು ಆಡಳಿತ ನಡೆಸತೊಡಗಿದನು. ರಾಜ್ಯವು ಅವನ ಪೂರ್ಣ ಹತೋಟಿಯಲ್ಲಿ ಇತ್ತು.
13 ಆ ಸಮಯದಲ್ಲಿ ಹಗ್ಗೀತಳ ಮಗನಾದ ಅದೋನೀಯನು ಸೊಲೊಮೋನನ ತಾಯಿಯಾದ ಬತ್ಷೆಬೆಳ ಹತ್ತಿರಕ್ಕೆ ಹೋದನು. ಬತ್ಷೆಬೆಳು, “ನೀನು ಸಮಾಧಾನದಿಂದ ಬಂದೆಯಾ?” ಎಂದು ಅವನನ್ನು ಕೇಳಿದಳು.
ಅದೋನೀಯನು, “ಹೌದು, ಇದು ಸಮಾಧಾನದ ಭೇಟಿಯಾಗಿದೆ. 14 ನಾನು ನಿನಗೆ ಒಂದು ವಿಷಯವನ್ನು ಹೇಳಬೇಕಾಗಿದೆ” ಎಂದು ಉತ್ತರಿಸಿದನು.
“ಹಾಗಾದರೆ ಹೇಳು” ಎಂದು ಬತ್ಷೆಬೆಳು ಹೇಳಿದಳು.
15 ಅದೋನೀಯನು, “ಒಂದು ಕಾಲದಲ್ಲಿ ರಾಜ್ಯಾಧಿಕಾರವು ನನ್ನದಾಗಿತ್ತೆಂಬುದು ನಿನ್ನ ನೆನಪಿನಲ್ಲಿದೆ. ಇಸ್ರೇಲಿನ ಜನರೆಲ್ಲರೂ ನಾನೇ ಅವರ ರಾಜನೆಂದು ತಿಳಿದಿದ್ದರು. ಆದರೆ ಸಂಗತಿಗಳು ಬದಲಾದವು. ಈಗ ನನ್ನ ಸೋದರನೇ ರಾಜನು. ಯೆಹೋವನು ಅವನನ್ನು ರಾಜನನ್ನಾಗಿ ಆರಿಸಿದನು. 16 ಆದ್ದರಿಂದ ಈಗ ನನ್ನಲ್ಲಿ ಒಂದು ಕೋರಿಕೆಯಿದೆ, ಅದನ್ನು ನೀನು ನಿರಾಕರಿಸಬೇಡ” ಎಂದನು.
ಬತ್ಷೆಬೆಳು, “ನಿನಗೇನು ಬೇಕಾಗಿದೆ?” ಎಂದು ಕೇಳಿದಳು.
17 ಅದೋನೀಯನು, “ರಾಜನಾದ ಸೊಲೊಮೋನನು ನೀನು ಏನನ್ನು ಕೇಳಿದರೂ ಮಾಡುತ್ತಾನೆಂಬುದು ನನಗೆ ತಿಳಿದಿದೆ. ಆದ್ದರಿಂದ, ಶೂನೇಮಿನ ಅಬೀಷಗ್ ಎಂಬ ಸ್ತ್ರೀಯನ್ನು ನನಗೆ ಕೊಡುವಂತೆ ದಯಮಾಡಿ ನೀನು ಅವನನ್ನು ಕೇಳು. ನಾನು ಅವಳನ್ನು ಮದುವೆಯಾಗುತ್ತೇನೆ” ಎಂದು ಹೇಳಿದನು.
18 ಆಗ ಬತ್ಷೆಬೆಳು, “ಒಳ್ಳೆಯದು, ನಾನು ನಿನಗಾಗಿ ರಾಜನೊಂದಿಗೆ ಮಾತನಾಡುತ್ತೇನೆ” ಎಂದು ಹೇಳಿದಳು.
19 ಬತ್ಷೆಬೆಳು ರಾಜನಾದ ಸೊಲೊಮೋನನೊಂದಿಗೆ ಮಾತನಾಡಲು ಹೋದಳು. ಸೊಲೊಮೋನನು ಆಕೆಯನ್ನು ಕಂಡು ಎದ್ದುನಿಂತು ಅವಳಿಗೆ ಬಾಗಿ ನಮಸ್ಕರಿಸಿ, ಸಿಂಹಾಸನದ ಮೇಲೆ ಕುಳಿತನು. ಅವನು ತನ್ನ ತಾಯಿಗಾಗಿ ಮತ್ತೊಂದು ಸಿಂಹಾಸನವನ್ನು ತರಲು ಕೆಲವು ಸೇವಕರಿಗೆ ಹೇಳಿದನು. ನಂತರ ಅವಳು ಅವನ ಬಲಗಡೆಯಲ್ಲಿ ಕುಳಿತಳು.
20 ಬತ್ಷೆಬೆಳು ಅವನಿಗೆ, “ನಿನ್ನಲ್ಲಿ ಒಂದು ಸಣ್ಣ ಕೋರಿಕೆಯಿದೆ, ಅದನ್ನು ದಯವಿಟ್ಟು ನಿರಾಕರಿಸದಿರು” ಎಂದು ಕೇಳಿದಳು.
ರಾಜನು, “ನನ್ನ ತಾಯಿಯೇ, ನಿನ್ನ ಕೋರಿಕೆಯೇನು? ನಾನು ನಿನ್ನ ಕೋರಿಕೆಯನ್ನು ನಿರಾಕರಿಸುವುದಿಲ್ಲ” ಎಂದು ಉತ್ತರಿಸಿದನು.
21 ಆದ್ದರಿಂದ ಬತ್ಷೆಬೆಳು, “ಶೂನೇಮಿನ ಸ್ತ್ರೀಯಾದ ಅಬೀಷಗಳು ನಿನ್ನ ಸೋದರನಾದ ಅದೋನೀಯನನ್ನು ಮದುವೆಯಾಗಲಿ” ಎಂದಳು.
22 ರಾಜನಾದ ಸೊಲೊಮೋನನು ತನ್ನ ತಾಯಿಗೆ, “ಅಬೀಷಗಳನ್ನು ಅವನಿಗೆ ಕೊಡು ಎಂಬುದಾಗಿ ನೀನೇಕೆ ನನ್ನನ್ನು ಕೇಳುತ್ತಿರುವೆ? ಅವನು ನನ್ನ ಹಿರಿಯಣ್ಣನಾಗಿರುವುದರಿಂದ ಅವನನ್ನೇ ರಾಜನನ್ನಾಗಿ ಮಾಡೆಂದು ನೀನು ಕೇಳದಿರುವುದೇಕೆ? ಯಾಜಕನಾದ ಎಬ್ಯಾತಾರನೂ ಯೋವಾಬನೂ ಅವನಿಗೆ ಬೆಂಬಲವನ್ನು ನೀಡಿದರು!” ಎಂದು ಉತ್ತರಿಸಿದನು.
23 ಆಗ ಸೊಲೊಮೋನನು, “ಯೆಹೋವನಾಣೆ, ಅದೋನೀಯನು ಈ ರೀತಿ ನನ್ನನ್ನು ಕೇಳಿದ್ದಕ್ಕಾಗಿ ಅವನು ತನ್ನ ಜೀವವನ್ನೇ ಬೆಲೆಯಾಗಿ ತೆರಬೇಕಾಗುವುದು! 24 ಯೆಹೋವನು ನನ್ನನ್ನು ಇಸ್ರೇಲಿನ ರಾಜನನ್ನಾಗಿ ಮಾಡಿದನು. ನನ್ನ ತಂದೆಯಾದ ದಾವೀದನ ಸಿಂಹಾಸನವನ್ನು ಆತನು ನನಗೆ ದಯಪಾಲಿಸಿದನು. ಯೆಹೋವನು ತನ್ನ ವಾಗ್ದಾನದಂತೆ, ನನಗೆ ಮತ್ತು ನನ್ನ ವಂಶಿಕರಿಗೆ ರಾಜ್ಯಾಧಿಕಾರವನ್ನು ನೀಡಿದನು. ಅದೋನೀಯನು ಈ ದಿನವೇ ಸಾಯಬೇಕು ಎಂದು ನಾನು ಈ ಎಲ್ಲಾ ಕಾರ್ಯಗಳನ್ನು ನೆರವೇರಿಸಿದ ದೇವರ ಸನ್ನಿಧಿಯಲ್ಲಿ ಪ್ರಮಾಣ ಮಾಡುತ್ತೇನೆ” ಎಂದು ಹೇಳಿದನು.
25 ರಾಜನಾದ ಸೊಲೊಮೋನನು ಬೆನಾಯನಿಗೆ ಆಜ್ಞಾಪಿಸಿದನು. ಬೆನಾಯನು ಹೋಗಿ ಅದೋನೀಯನನ್ನು ಕೊಂದುಹಾಕಿದನು.
26 ಆಗ ರಾಜನಾದ ಸೊಲೊಮೋನನು ಯಾಜಕನಾದ ಎಬ್ಯಾತಾರನಿಗೆ, “ನಾನು ನಿನ್ನನ್ನು ಕೊಲ್ಲಲೇಬೇಕು. ಆದರೆ ಅಣತೋತಿನಲ್ಲಿರುವ ನಿನ್ನ ಮನೆಗೆ ಹಿಂತಿರುಗಿ ಹೋಗಲು ನಿನಗೆ ಅವಕಾಶ ಕೊಡುತ್ತೇನೆ. ನಾನು ನಿನ್ನನ್ನು ಕೊಲ್ಲುವುದಿಲ್ಲ ಏಕೆಂದರೆ ನನ್ನ ತಂದೆಯಾದ ದಾವೀದನೊಂದಿಗೆ ನಡೆಯುವಾಗ ಯೆಹೋವನ ಪವಿತ್ರಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗಲು ನೀನು ಸಹಾಯ ಮಾಡಿದೆ. ನನ್ನ ತಂದೆಯ ಕಷ್ಟದ ದಿನಗಳಲ್ಲೆಲ್ಲಾ ನೀನೂ ಅವನ ಕಷ್ಟಗಳಲ್ಲಿ ಪಾಲುಗಾರನಾಗಿದ್ದದ್ದು ನನಗೆ ತಿಳಿದಿದೆ” ಎಂದು ಹೇಳಿದನು. 27 ಸೊಲೊಮೋನನು ಎಬ್ಯಾತಾರನಿಗೆ, “ನಾನು ನಿನ್ನನ್ನು ಯೆಹೋವನ ಯಾಜಕನಾಗಿ ಸೇವೆಯಲ್ಲಿ ಮುಂದುವರಿಸುವುದಿಲ್ಲ” ಎಂದು ಹೇಳಿದನು. ಯೆಹೋವನು ಹೇಳಿದ್ದಂತೆಯೇ ಇದು ಸಂಭವಿಸಿತು. ಇದು ಶೀಲೋವಿನಲ್ಲಿ ದೇವರು ಯಾಜಕನಾದ ಏಲಿಗೂ ಅವನ ಕುಟುಂಬದವರಿಗೂ ಹೇಳಿದಂತೆಯೇ ಆಯಿತು. ಎಬ್ಯಾತಾರನು ಏಲಿಯ ಗೋತ್ರದವನು.[a]
28 ಯೋವಾಬನು ಈ ಸಂಗತಿಯನ್ನು ಕೇಳಿ ಹೆದರಿದನು. (ಅವನು ಅಬ್ಷಾಲೋಮನಿಗೆ ಬೆಂಬಲ ನೀಡಿಲ್ಲದಿದ್ದರೂ ಅದೋನೀಯನಿಗೆ ಬೆಂಬಲ ನೀಡಿದ್ದನು.) ಯೋವಾಬನು ಯೆಹೋವನ ಗುಡಾರಕ್ಕೆ ಓಡಿಹೋಗಿ ಯಜ್ಞವೇದಿಕೆಯ ಕೊಂಬುಗಳನ್ನು ಹಿಡಿದುಕೊಂಡನು. 29 ಯೋವಾಬನು ಯೆಹೋವನ ಗುಡಾರದಲ್ಲಿ ಯಜ್ಞವೇದಿಕೆಯ ಹತ್ತಿರ ಇದ್ದಾನೆಂದು ಯಾರೋ ಒಬ್ಬನು ರಾಜನಾದ ಸೊಲೊಮೋನನಿಗೆ ತಿಳಿಸಿದನು. ಆದ್ದರಿಂದ ಸೊಲೊಮೋನನು ಬೆನಾಯನಿಗೆ, ಹೋಗಿ ಅವನನ್ನು ಕೊಂದುಬಿಡುವಂತೆ ಆಜ್ಞಾಪಿಸಿದನು.
30 ಬೆನಾಯನು ಯೆಹೋವನ ಗುಡಾರದೊಳಕ್ಕೆ ಹೋಗಿ ಯೋವಾಬನಿಗೆ, “ರಾಜನ ಆಜ್ಞೆಯಂತೆ ‘ಹೊರಗೆ ಬಾ!’” ಎಂದು ಹೇಳಿದನು.
ಆದರೆ ಯೋವಾಬನು, “ಇಲ್ಲ, ನಾನಿಲ್ಲೇ ಸಾಯುತ್ತೇನೆ” ಎಂದನು.
ಆದ್ದರಿಂದ ಬೆನಾಯನು ರಾಜನ ಬಳಿಗೆ ಹಿಂದಿರುಗಿ ಯೋವಾಬನು ಹೇಳಿದ್ದನ್ನು ತಿಳಿಸಿದನು. 31 ಆಗ ರಾಜನು ಬೆನಾಯನಿಗೆ, “ಅವನು ಹೇಳಿದಂತೆ ಮಾಡು! ಅವನನ್ನು ಅಲ್ಲಿಯೇ ಕೊಂದುಬಿಡು. ನಂತರ ಅವನನ್ನು ಸಮಾಧಿ ಮಾಡು. ಆಗ ನನ್ನ ಕುಟುಂಬದವರು ಮತ್ತು ನಾನು ಯೋವಾಬನ ದೋಷದಿಂದ ಮುಕ್ತರಾಗುವೆವು. ಮುಗ್ಧ ಜನರು ಯೋವಾಬನಿಂದ ಕೊಲ್ಲಲ್ಪಟ್ಟ ಕಾರಣ ಈ ದೋಷವುಂಟಾಯಿತು. 32 ಯೋವಾಬನು ತನಗಿಂತಲೂ ಬಹಳಷ್ಟು ಉತ್ತಮರಾದ ಇಬ್ಬರನ್ನು ಕೊಂದುಹಾಕಿದನು. ಅವರು ಯಾರೆಂದರೆ, ನೇರನ ಮಗನಾದ ಅಬ್ನೇರ ಮತ್ತು ಯೆತೆರನ ಮಗನಾದ ಅಮಾಸ. ಅಬ್ನೇರನು ಇಸ್ರೇಲಿನ ಸೇನಾಧಿಪತಿಯಾಗಿದ್ದನು; ಅಮಾಸನು ಯೆಹೂದದ ಸೇನಾಧಿಪತಿಯಾಗಿದ್ದನು. ಯೋವಾಬನು ಅವರನ್ನು ಕೊಂದನೆಂಬುದು ಆ ಸಮಯದಲ್ಲಿ ನನ್ನ ತಂದೆಯಾದ ದಾವೀದನಿಗೆ ತಿಳಿಯಲಿಲ್ಲ. ಯೋವಾಬನು ಅವರನ್ನು ಕೊಂದದ್ದರಿಂದ ಯೆಹೋವನು ಅವನನ್ನು ದಂಡಿಸುತ್ತಾನೆ. 33 ಅವರನ್ನು ಕೊಂದ ಅಪರಾಧವು ಯೋವಾಬನ ಮೇಲೆಯೂ ಅವನ ಕುಟುಂಬದ ಮೇಲೆಯೂ ಶಾಶ್ವತವಾಗಿರಲಿ. ಆದರೆ ದಾವೀದನನ್ನೂ ಅವನ ಸಂತತಿಯವರನ್ನೂ ಅವನ ಸಿಂಹಾಸನವನ್ನೂ ಯೆಹೋವನು ಶಾಶ್ವತವಾಗಿ ಆಶೀರ್ವದಿಸಲಿ” ಎಂದು ಹೇಳಿದನು.
34 ಆದ್ದರಿಂದ ಯೆಹೋಯಾದಾವನ ಮಗನಾದ ಬೆನಾಯನು ಯೋವಾಬನನ್ನು ಕೊಂದನು. ಯೋವಾಬನನ್ನು ಅರಣ್ಯದಲ್ಲಿನ ಅವನ ಮನೆಯ ಸಮೀಪದಲ್ಲೇ ಸಮಾಧಿ ಮಾಡಿದರು. 35 ಆಗ ಯೆಹೋಯಾದಾವನ ಮಗನಾದ ಬೆನಾಯನನ್ನು ಯೋವಾಬನ ಸ್ಥಾನದಲ್ಲಿ ಸೇನಾಧಿಪತಿಯನ್ನಾಗಿ ಸೊಲೊಮೋನನು ನೇಮಿಸಿದನು. ಎಬ್ಯಾತಾರನ ಸ್ಥಾನದಲ್ಲಿ ಚಾದೋಕನನ್ನು ನೂತನ ಪ್ರಧಾನಯಾಜಕನನ್ನಾಗಿ ನೇಮಿಸಿದನು. 36 ನಂತರ ರಾಜನು ಶಿಮ್ಮಿಯನ್ನು ಕರೆತರಲು ಕಳುಹಿಸಿದನು. ರಾಜನು ಅವನಿಗೆ, “ಜೆರುಸಲೇಮಿನಲ್ಲಿ ನಿನಗಾಗಿ ಒಂದು ಮನೆಯನ್ನು ನಿರ್ಮಿಸು. ಆ ಮನೆಯಲ್ಲಿ ವಾಸಮಾಡು, ನಗರವನ್ನು ಬಿಟ್ಟುಹೋಗದಿರು. 37 ನೀನು ನಗರವನ್ನು ಬಿಟ್ಟು ಕಿದ್ರೋನ್ ಹೊಳೆಯ ಹಿಂದಕ್ಕೆ ಹೋದರೆ, ನಿನ್ನನ್ನು ಕೊಲ್ಲಲಾಗುವುದು. ಅದು ನಿನ್ನ ಸ್ವಂತ ತಪ್ಪಾಗುವುದು” ಎಂದು ಹೇಳಿದನು.
38 ಅದಕ್ಕೆ ಶಿಮ್ಮಿಯು, “ನನ್ನ ರಾಜನೇ, ನೀನು ಹೇಳಿದಂತೆಯೇ ಆಗಲಿ. ನಾನು ನಿನಗೆ ವಿಧೇಯನಾಗಿರುವೆನು” ಎಂದು ಉತ್ತರಿಸಿದನು. ಹೀಗೆ ಶಿಮ್ಮಿಯು ಬಹು ದಿನಗಳವರೆಗೆ ಜೆರುಸಲೇಮಿನಲ್ಲಿ ವಾಸವಾಗಿದ್ದನು. 39 ಆದರೆ ಮೂರು ವರ್ಷಗಳ ತರುವಾಯ, ಶಿಮ್ಮಿಯ ಇಬ್ಬರು ಗುಲಾಮರು ಗತ್ ನಗರದ ರಾಜನ ಬಳಿಗೆ ಓಡಿಹೋದರು. ಆ ರಾಜನ ಹೆಸರು: ಮಾಕನ ಮಗನಾದ ಆಕೀಷ. ತನ್ನ ಗುಲಾಮರು ಗತ್ ನಗರದಲ್ಲಿರುವುದು ಶಿಮ್ಮಿಗೆ ತಿಳಿಯಿತು. 40 ಆದ್ದರಿಂದ ಶಿಮ್ಮಿಯು ತಡಿಯನ್ನು ತನ್ನ ಕತ್ತೆಯ ಮೇಲೆ ಹಾಕಿಕೊಂಡು, ಗತ್‌ನ ರಾಜನಾದ ಆಕೀಷನ ಬಳಿಗೆ ಹೋದನು. ಅವನು ತನ್ನ ಗುಲಾಮರನ್ನು ಅಲ್ಲಿ ಕಂಡುಹಿಡಿದು ತನ್ನ ಮನೆಗೆ ಮತ್ತೆ ಕರೆದುಕೊಂಡು ಬಂದನು.
41 ಆದರೆ ಶಿಮ್ಮಿಯು ಜೆರುಸಲೇಮಿನಿಂದ ಗತ್‌ಗೆ ಹೋಗಿ ಹಿಂದಿರುಗಿ ಬಂದುದ್ದನ್ನು ಯಾರೋ ಒಬ್ಬರು ಸೊಲೊಮೋನನಿಗೆ ತಿಳಿಸಿದರು. 42 ಸೊಲೊಮೋನನು ಶಿಮ್ಮಿಯನ್ನು ಕರೆಯಿಸಿ, “ನೀನು ಜೆರುಸಲೇಮನ್ನು ಬಿಟ್ಟುಹೋದರೆ ಮರಣಶಿಕ್ಷೆಯಾಗುವುದೆಂದು ನಾನು ಯೆಹೋವನ ಹೆಸರಿನಲ್ಲಿ ಪ್ರಮಾಣ ಮಾಡಿದ್ದೆನು. ನೀನು ಬೇರೆಲ್ಲಾದರೂ ಹೋದರೆ ಅದು ನಿನ್ನ ಸ್ವಂತ ತಪ್ಪಾಗುವುದೆಂದೂ ನಿನ್ನನ್ನು ಕೊಲ್ಲಲಾಗುವುದೆಂದೂ ನಾನು ನಿನ್ನನ್ನು ಎಚ್ಚರಿಸಿದ್ದೆನು. ಅದಕ್ಕೆ ನೀನೂ ಒಪ್ಪಿಗೆ ನೀಡಿ ನನಗೆ ವಿಧೇಯನಾಗಿರುವುದಾಗಿ ತಿಳಿಸಿದ್ದೆ. 43 ನೀನು ದೇವರಿಗೆ ಮಾಡಿದ ಪ್ರಮಾಣವನ್ನು ಯಾಕೆ ಕೈಕೊಳ್ಳಲಿಲ್ಲ? ನೀನು ನನ್ನ ಆಜ್ಞೆಗೆ ಯಾಕೆ ವಿಧೇಯನಾಗಲಿಲ್ಲ? 44 ನೀನು ನನ್ನ ತಂದೆಯಾದ ದಾವೀದನಿಗೆ ವಿರುದ್ಧವಾಗಿ ಅನೇಕ ಕೆಟ್ಟಕಾರ್ಯಗಳನ್ನು ಮಾಡಿರುವೆ ಎಂಬುದು ನಿನಗೆ ತಿಳಿದಿದೆ. ಈಗ ನಿನ್ನ ಆ ಕೆಟ್ಟಕಾರ್ಯಗಳಿಗಾಗಿ ಯೆಹೋವನು ನಿನ್ನನ್ನು ದಂಡಿಸುತ್ತಾನೆ. 45 ಆದರೆ ಯೆಹೋವನು ನನ್ನನ್ನು ಆಶೀರ್ವದಿಸುತ್ತಾನೆ. ಆತನು ದಾವೀದನ ಸಿಂಹಾಸನವನ್ನು ಎಂದೆಂದಿಗೂ ಸಂರಕ್ಷಿಸುವನು” ಎಂದು ಹೇಳಿದನು.
46 ನಂತರ ರಾಜನು ಶಿಮ್ಮಿಯನ್ನು ಕೊಲ್ಲಲು ಬೆನಾಯನಿಗೆ ಆಜ್ಞಾಪಿಸಿದನು. ಅಂತೆಯೇ, ಬೆನಾಯನು ಅವನನ್ನು ಸಂಹರಿಸಿದನು. ಹೀಗೆ ಸೊಲೊಮೋನನ ರಾಜ್ಯಾಧಿಕಾರವು ಸ್ಥಿರವಾಯಿತು.
ಒಬ್ಬರಿಗೊಬ್ಬರು ಸಹಾಯ ಮಾಡಿರಿ
6 ಸಹೋದರ ಸಹೋದರಿಯರೇ, ನಿಮ್ಮ ಸಭೆಯಲ್ಲಿ ಯಾವನಾದರೂ ತಪ್ಪು ಮಾಡಿದರೆ, ಆತ್ಮಿಕರಾದ ನೀವು ಅವನ ಬಳಿಗೆ ಹೋಗಿ ಸೌಮ್ಯತೆಯಿಂದ ಅವನನ್ನು ತಿದ್ದಿ ಸರಿಪಡಿಸಬೇಕು. ಆದರೆ ಎಚ್ಚರಿಕೆಯಿಂದಿರಿ! ನೀವು ಸಹ ಶೋಧನೆಗೊಳಗಾಗಿ ಪಾಪಕ್ಕೆ ಬೀಳುವ ಸಾಧ್ಯವಿದೆ. 2 ನಿಮ್ಮ ಭಾರವಾದ ಹೊರೆಗಳನ್ನು ಹೊರಲು ಒಬ್ಬರಿಗೊಬ್ಬರು ಸಹಾಯಮಾಡಿರಿ. ಹೀಗೆ ನೀವು ಕ್ರಿಸ್ತನ ಆಜ್ಞೆಯನ್ನು ನಿಜವಾಗಿಯೂ ಅನುಸರಿಸಿರಿ. 3 ಯಾವನಾದರೂ ತಾನು ಪ್ರಾಮುಖ್ಯನಲ್ಲದಿದ್ದರೂ ತನ್ನನ್ನು ಪ್ರಾಮುಖ್ಯನೆಂದು ಭಾವಿಸಿಕೊಂಡರೆ ಅವನು ತನ್ನನ್ನೇ ಮೋಸಪಡಿಸಿಕೊಳ್ಳುತ್ತಾನೆ. ಒಬ್ಬನು ತನ್ನನ್ನು ಮತ್ತೊಬ್ಬನೊಡನೆ ಹೋಲಿಸಿಕೊಳ್ಳಕೂಡದು. 4 ಪ್ರತಿಯೊಬ್ಬನು ತನ್ನ ನಡತೆಯನ್ನು ತಾನೇ ವಿಮರ್ಶಿಸಿಕೊಳ್ಳಲಿ. ಆಗ ತಾನೇನಾದರೂ ಹೆಚ್ಚಳಪಡುವಂತ ಕಾರ್ಯಗಳನ್ನು ಮಾಡಿದ್ದರೆ ಅವನಿಗೆ ತಿಳಿಯುವುದು. 5 ಪ್ರತಿಯೊಬ್ಬನು ತನ್ನ ಜವಾಬ್ದಾರಿಕೆಯನ್ನು ತಾನೇ ಹೊತ್ತುಕೊಳ್ಳಬೇಕು.
ಜೀವನವು ಜಮೀನಿನಲ್ಲಿ ಬಿತ್ತುವಂತಿದೆ
6 ದೇವರ ವಾಕ್ಯವನ್ನು ಕಲಿತುಕೊಳ್ಳುವವನು, (ತನಗೆ) ಕಲಿಸುವವನಿಗೆ ತನ್ನಲ್ಲಿರುವ ಎಲ್ಲಾ ಒಳ್ಳೆತನಗಳಲ್ಲಿ ಪಾಲು ಕೊಡತಕ್ಕದ್ದು.
7 ಮೋಸಹೋಗಬೇಡಿರಿ! ನೀವು ದೇವರನ್ನು ವಂಚಿಸಲು ಸಾಧ್ಯವಿಲ್ಲ. ಒಬ್ಬನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯುತ್ತಾನೆ. 8 ಒಬ್ಬನು ತನ್ನ ಶರೀರಭಾವವನ್ನು ತೃಪ್ತಿಪಡಿಸುವುದಕ್ಕಾಗಿ ಪಾಪ ಕಾರ್ಯಗಳನ್ನು ಮಾಡಿದರೆ ಆ ಶರೀರಭಾವವು ಅವನಿಗೆ ನಿತ್ಯನಾಶವನ್ನು ಬರಮಾಡುತ್ತದೆ. ಆದರೆ ಒಬ್ಬನು ಪವಿತ್ರಾತ್ಮನನ್ನು ಮೆಚ್ಚಿಸುವುದಕ್ಕಾಗಿ ಒಳ್ಳೆಯ ಕಾರ್ಯಗಳನ್ನು ಮಾಡುವುದಾಗಿದ್ದರೆ, ಅವನು ಪವಿತ್ರಾತ್ಮನಿಂದ ನಿತ್ಯಜೀವವನ್ನು ಹೊಂದಿಕೊಳ್ಳುವನು. 9 ನಾವು ಒಳ್ಳೆಯ ಕಾರ್ಯ ಮಾಡುವುದರಲ್ಲಿ ಬೇಸರಗೊಳ್ಳಬಾರದು. ತಕ್ಕ ಸಮಯದಲ್ಲಿ ನಾವು ನಿತ್ಯಜೀವವೆಂಬ ಸುಗ್ಗಿಯನ್ನು ಪಡೆಯುವೆವು. ಆದ್ದರಿಂದ ಒಳ್ಳೆಯ ಕಾರ್ಯ ಮಾಡುವುದನ್ನು ನಾವು ಬಿಟ್ಟುಬಿಡಬಾರದು. 10 ಯಾರಿಗಾದರೂ ಒಳ್ಳೆಯದನ್ನು ಮಾಡಲು ಅವಕಾಶವಿರುವಾಗ ನಾವು ಮಾಡಲೇಬೇಕು. ಅದರಲ್ಲೂ ಒಂದೇ ಕುಟುಂಬದವರಂತಿರುವ ವಿಶ್ವಾಸಿಗಳ ಬಗ್ಗೆ ನಾವು ವಿಶೇಷವಾದ ಗಮನ ಕೊಡಬೇಕು.
ಪೌಲನ ಕಡೇ ಮಾತುಗಳು
11 ಇದನ್ನು ನಾನೇ ಕೈಯಾರೆ ಬರೆಯುತ್ತಿದ್ದೇನೆ. ನಾನು ಎಷ್ಟು ದೊಡ್ಡ ಅಕ್ಷರಗಳಲ್ಲಿ ಬರೆಯುತ್ತಿದ್ದೇನೆಂಬುದನ್ನು ನೋಡಿರಿ. 12 ನೀವು ಸುನ್ನತಿ ಮಾಡಿಸಿಕೊಳ್ಳಬೇಕೆಂದು ಕೆಲವರು ನಿಮ್ಮನ್ನು ಒತ್ತಾಯಿಸುತ್ತಿದ್ದಾರೆ. ತಮ್ಮನ್ನು (ಯೆಹೂದ್ಯರು) ಸ್ವೀಕರಿಸಿಕೊಳ್ಳಲಿ ಎಂಬುದೇ ಅವರ ಉದ್ದೇಶ. ಕ್ರಿಸ್ತನ ಶಿಲುಬೆಯ ದೆಸೆಯಿಂದ ತಾವು ಹಿಂಸೆಗೆ ಒಳಗಾಗಬಹುದೆಂಬ ಭಯದಿಂದ ಅವರು ಹೀಗೆ ಮಾಡುತ್ತಾರೆ. 13 ಸುನ್ನತಿ ಮಾಡಿಸಿಕೊಂಡಿರುವ ಅವರೇ ಧರ್ಮಶಾಸ್ತ್ರಕ್ಕೆ ವಿಧೇಯರಾಗುತ್ತಿಲ್ಲ. ಆದರೆ ನಿಮಗೂ ಸುನ್ನತಿ ಮಾಡಿಸಿ ಅದರ ಬಗ್ಗೆ ಹೆಚ್ಚಳಪಡಬೇಕೆಂಬುದೇ ಅವರ ಆಸೆ.
14 ಅಂಥ ವಿಷಯಗಳ ಬಗ್ಗೆ ನಾನು ಹೆಚ್ಚಳಪಡುವುದೇ ಇಲ್ಲ. ನಾನು ಹೆಮ್ಮೆಪಡಲು ನನಗಿರುವ ಒಂದೇ ಕಾರಣವೇನೆಂದರೆ ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಶಿಲುಬೆಯೊಂದೇ. ಶಿಲುಬೆಯ ಮೇಲೆ ಯೇಸುವಿಗಾದ ಮರಣದ ಮೂಲಕ ಲೋಕವು ನನ್ನ ಪಾಲಿಗೆ ಸತ್ತುಹೋಯಿತು. ನಾನು ಸಹ ಲೋಕದ ಪಾಲಿಗೆ ಸತ್ತುಹೋದೆನು. 15 ಒಬ್ಬನಿಗೆ ಸುನ್ನತಿಯಾಗಿದೆಯೋ ಸುನ್ನತಿಯಾಗಿಲ್ಲವೋ ಎಂಬುದು ಮುಖ್ಯವಲ್ಲ. ಆದರೆ ದೇವರಿಂದ ಹೊಸ ಸೃಷ್ಟಿಯಾಗಿರುವುದೇ ಮುಖ್ಯವಾದದ್ದು.[a] 16 ಈ ನಿಯಮವನ್ನು ಅನುಸರಿಸುವವರಿಗೆಲ್ಲ, ಅಂದರೆ ನಿಜ ಇಸ್ರೇಲರಾದ ದೇವ ಜನರಿಗೆಲ್ಲ ಶಾಂತಿಯೂ ಕರುಣೆಯೂ ಆಗಲಿ.
17 ಆದ್ದರಿಂದ ಇನ್ನು ಮೇಲೆ ನನಗೆ ತೊಂದರೆ ಕೊಡಬೇಡಿ. ನನ್ನ ದೇಹದ ಮೇಲೆ ಬಾಸುಂಡೆಯ ಗುರುತುಗಳಿವೆ. ನಾನು ಕ್ರಿಸ್ತನವನೆಂಬುದಕ್ಕೆ ಈ ಗುರುತುಗಳೇ ಸಾಕ್ಷಿ.
18 ನನ್ನ ಸಹೋದರ ಸಹೋದರಿಯರೇ, ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮ ಆತ್ಮದೊಂದಿಗಿರಲೆಂದು ಪ್ರಾರ್ಥಿಸುತ್ತೇನೆ. ಆಮೆನ್.
ಇಸ್ರೇಲಿನ ಕಾವಲುಗಾರನಾಗಿ ದೇವರು ಯೆಹೆಜ್ಕೇಲನನ್ನು ಆರಿಸಿದ್ದು
33 ಯೆಹೋವನ ಸಂದೇಶವು ನನಗೆ ಬಂದಿತು. ಆತನು ಹೇಳಿದ್ದೇನೆಂದರೆ, 2 “ನರಪುತ್ರನೇ, ನಿನ್ನ ಜನರೊಂದಿಗೆ ಮಾತನಾಡು. ಅವರಿಗೆ ಹೀಗೆ ಹೇಳು, ‘ನಾನು ಈ ದೇಶದೊಂದಿಗೆ ಯುದ್ಧ ಮಾಡಲು ಶತ್ರು ಸೈನಿಕರನ್ನು ಬರಮಾಡುತ್ತೇನೆ. ಈ ಸಮಯದಲ್ಲಿ ಜನರು ಒಬ್ಬ ಕಾವಲುಗಾರನನ್ನು ಆರಿಸುವರು. 3 ಈತನು ಶತ್ರು ಸೈನ್ಯವನ್ನು ನೋಡಿದಾಕ್ಷಣ ತನ್ನ ತುತ್ತೂರಿಯನ್ನೂದಿ ಜನರನ್ನು ಎಚ್ಚರಿಸುವನು. 4 ಜನರು ಅದನ್ನು ಕೇಳಿದರೂ ಅಲಕ್ಷ್ಯ ಮಾಡಿದಾಗ ಶತ್ರುವು ಬಂದು ಅವರನ್ನು ಸೆರೆಹಿಡಿದು ಕೈದಿಗಳನ್ನಾಗಿ ಮಾಡಿ ಕೊಂಡೊಯ್ಯುವನು. ಆಗ ಅವರ ಮರಣಕ್ಕೆ ಅವರೇ ಕಾರಣರಾಗುವರು. 5 ಅವನು ತುತ್ತೂರಿಯ ಶಬ್ದ ಕೇಳಿದನು. ಆದರೆ ಅದನ್ನು ಅಲಕ್ಷಿಸಿದನು. ಆದ್ದರಿಂದ ಅವನ ಮರಣಕ್ಕೆ ಅವನೇ ಕಾರಣನು. ಅವನು ಆ ಎಚ್ಚರಿಕೆಯ ಶಬ್ದಕ್ಕೆ ಗಮನವನ್ನು ಕೊಟ್ಟಿದ್ದರೆ ಅವನು ಬದುಕುತ್ತಿದ್ದನು.
6 “‘ಆದರೆ ವೈರಿಯು ಬರುವಂತದ್ದನ್ನು ಆ ಕಾವಲುಗಾರನು ಕಂಡರೂ, ಜನರನ್ನು ಎಚ್ಚರಿಸಲು ತುತ್ತೂರಿಯನ್ನು ಊದದಿದ್ದರೆ ವೈರಿಯು ಅವರನ್ನು ಸೆರೆಹಿಡಿದು ಕೈದಿಗಳನ್ನಾಗಿ ಮಾಡಿ ಕೊಂಡೊಯ್ಯುವನು. ಆ ಮನುಷ್ಯನು ಪಾಪಮಾಡಿದ್ದರಿಂದ ಆ ಶಿಕ್ಷೆಯು ಅವನಿಗೆ ದೊರಕಿತು. ಆದರೆ, ಕಾವಲುಗಾರನು ಕೂಡಾ ಅವನ ಮರಣಕ್ಕೆ ಕಾರಣನಾಗುವನು.’
7 “ಈಗ, ನರಪುತ್ರನೇ, ನಾನು ನಿನ್ನನ್ನು ಇಸ್ರೇಲಿನ ಕಾವಲುಗಾರನನ್ನಾಗಿ ಆರಿಸಿದ್ದೇನೆ. ನನ್ನ ಬಾಯಿಂದ ನೀನು ಸಂದೇಶವನ್ನು ಕೇಳಿದಾಗ, ನನ್ನ ಪರವಾಗಿ ನೀನು ಜನರನ್ನು ಎಚ್ಚರಿಸಬೇಕು. 8 ‘ಈ ಕೆಟ್ಟ ಮನುಷ್ಯನು ಸಾಯುವನು’ ಎಂದು ನಾನು ಹೇಳಿದರೆ, ನೀನು ಹೋಗಿ ಆ ಮನುಷ್ಯನನ್ನು ಎಚ್ಚರಿಸಬೇಕು. ಆದರೆ ನೀನು ಅವನನ್ನು ಎಚ್ಚರಿಸದೆ ಹೋದರೆ, ಅವನ ಜೀವಿತವನ್ನು ಬದಲಾಯಿಸಿಕೊಳ್ಳಲು ಹೇಳದೆ ಹೋದರೆ, ಪಾಪಮಾಡಬೇಡ ಎಂದು ಹೇಳದೆ ಹೋದರೆ, ಆ ದುಷ್ಟನು ಸಾಯುವನು. ಯಾಕೆಂದರೆ, ಅವನು ಪಾಪಮಾಡಿದನು. ಆದರೆ ಅವನ ಮರಣಕ್ಕೆ ನಿನ್ನನ್ನು ಕಾರಣನನ್ನಾಗಿ ಮಾಡುತ್ತೇನೆ. 9 ಆದರೆ ನೀನು ಅವನನ್ನು ಎಚ್ಚರಿಸಿ, ಅವನ ಜೀವಿತವನ್ನು ಬದಲಾಯಿಸಲು ಹೇಳಿ, ಪಾಪವನ್ನು ಮಾಡಬೇಡ ಎಂದು ಹೇಳಿದರೂ ಅವನು ಕೇಳದೆ ಹೋದರೆ ಪಾಪ ಮಾಡುವದನ್ನು ಬಿಡದೆ ಹೋದರೆ ಅವನು ಪಾಪ ಮಾಡಿದುದರಿಂದ ಸಾಯುವನು. ಆದರೆ ನೀನು ಅವನ ಮರಣಕ್ಕೆ ಕಾರಣನಾಗುವದಿಲ್ಲ.
ದೇವರು ಮನುಷ್ಯರನ್ನು ನಾಶಮಾಡಲು ಇಷ್ಟಪಡುವುದಿಲ್ಲ
10 “ಆದ್ದರಿಂದ ನರಪುತ್ರನೇ, ನನ್ನ ಪರವಾಗಿ ಇಸ್ರೇಲ್ ಜನರೊಂದಿಗೆ ಮಾತನಾಡು. ‘ನಾವು ಪಾಪಮಾಡಿದ್ದೇವೆ. ಕಟ್ಟಳೆಗಳನ್ನು ಮೀರಿದ್ದೇವೆ. ನಮ್ಮ ಪಾಪಗಳು ಹೊರಲಾರದಷ್ಟು ಭಾರವಾಗಿವೆ. ನಾವು ಆ ಪಾಪಗಳಿಂದಾಗಿ ಕ್ಷೀಣಿಸುತ್ತಿದ್ದೇವೆ. ನಾವು ಜೀವಿಸಬೇಕಾದರೆ ಏನು ಮಾಡಬೇಕು?’ ಎಂದು ಅವರು ಕೇಳಿಯಾರು.
11 “ಆಗ ನೀನು ಅವರಿಗೆ ಹೀಗೆ ಹೇಳಬೇಕು, ‘ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: ನನ್ನ ಜೀವದಾಣೆ, ನಾನು ಜನರು ಸಾಯುವುದನ್ನು ನೋಡಲು ಇಷ್ಟಪಡುವದಿಲ್ಲ; ದುಷ್ಟರು ಸಾಯುವದರಲ್ಲಿಯೂ ನನಗೆ ಇಷ್ಟವಿಲ್ಲ. ಆ ದುಷ್ಟರು ನನ್ನ ಕಡೆಗೆ ತಿರುಗಬೇಕೆಂದು ನಾನು ಇಷ್ಟಪಡುತ್ತೇನೆ. ಅವರು ತಮ್ಮ ದುರ್ನಡತೆಯನ್ನು ಬಿಟ್ಟು ನಿಜವಾದ ಜೀವನವನ್ನು ನಡೆಸಬೇಕು. ಆದ್ದರಿಂದ ನನ್ನ ಬಳಿಗೆ ಹಿಂದಿರುಗಿ ಬನ್ನಿರಿ. ದುಷ್ಟತನವನ್ನು ಬಿಟ್ಟುಬಿಡಿರಿ. ಇಸ್ರೇಲ್ ಜನರೇ, ನೀವು ಯಾಕೆ ಸಾಯುತ್ತೀರಿ?’
12 “ನರಪುತ್ರನೇ, ನಿನ್ನ ಜನರಿಗೆ ಹೀಗೆ ಹೇಳು: ‘ಒಬ್ಬನು ಒಳ್ಳೆಯವನಾಗಿದ್ದುಕೊಂಡು ನಂತರ ದುಷ್ಟತನವನ್ನು ನಡಿಸಿದರೆ ಅವನ ಸತ್ಕಾರ್ಯಗಳು ಅವನನ್ನು ರಕ್ಷಿಸಲಾರವು. ಒಬ್ಬನು ದುಷ್ಕೃತ್ಯಗಳನ್ನು ಮಾಡಿ ತನ್ನ ದುಷ್ಟತ್ವದಿಂದ ತಿರುಗಿದರೆ ಅವನು ನಾಶವಾಗುವದಿಲ್ಲ. ಆದ್ದರಿಂದ ಹಿಂದೆ ಮಾಡಿದ್ದ ಪುಣ್ಯಕಾರ್ಯಗಳು ಒಬ್ಬ ಪಾಪಿಯನ್ನು ರಕ್ಷಿಸಲಾರದೆಂಬುದನ್ನು ಜ್ಞಾಪಕದಲ್ಲಿಟ್ಟುಕೊ.’
13 “ಒಂದುವೇಳೆ ‘ನೀನು ಜೀವಿಸುವಿ’ ಎಂದು ಒಬ್ಬ ಒಳ್ಳೆಯ ಮನುಷ್ಯನಿಗೆ ನಾನು ಹೇಳಬಹುದು. ಅವನು ತಾನು ಮಾಡಿದ ಒಳ್ಳೆಯ ಕಾರ್ಯಗಳ ನಿಮಿತ್ತ ತಾನು ರಕ್ಷಿಸಲ್ಪಟ್ಟಿದ್ದೇನೆ ಎಂದು ನೆನಸಬಹುದು. ಆ ಬಳಿಕ ಅವನು ದುಷ್ಕೃತ್ಯಗಳನ್ನು ಮಾಡಲು, ನಾನು ಅವನ ಪುಣ್ಯಕಾರ್ಯಗಳನ್ನು ನೋಡದೆ ಅವನ ದುಷ್ಕೃತ್ಯಗಳ ನಿಮಿತ್ತ ಅವನನ್ನು ಸಾಯಿಸುವೆನು.
14 “ಒಂದುವೇಳೆ ನಾನು ಒಬ್ಬ ದುಷ್ಟನಿಗೆ ನೀನು ಸಾಯುವಿ ಎಂದು ಹೇಳಿದರೆ ಅವನು ತನ್ನ ಜೀವಿತವನ್ನು ಬದಲಾಯಿಸಿ, ದುಷ್ಟತ್ವವನ್ನು ನಿಲ್ಲಿಸಿ, ಅವನು ನೀತಿವಂತನಾಗಿ ಬಾಳಿ 15 ಒತ್ತೆ ತೆಗೆದುಕೊಂಡಿದ್ದ ವಸ್ತುಗಳನ್ನು ಹಿಂದಕ್ಕೆ ಕೊಟ್ಟು, ತಾನು ಕದ್ದುಕೊಂಡದ್ದನ್ನು ಹಿಂದಕ್ಕೆ ಕೊಟ್ಟು, ಜೀವಕರವಾದ ಕಟ್ಟಳೆಗಳನ್ನು ಅನುಸರಿಸಿದರೆ ಆ ಮನುಷ್ಯನು ಖಂಡಿತವಾಗಿ ಬದುಕುವನು. ಅವನನ್ನು ಸಾಯಿಸುವುದಿಲ್ಲ. 16 ಅವನು ಹಿಂದೆ ಮಾಡಿದ ದುಷ್ಕೃತ್ಯಗಳನ್ನು ನಾನು ನನ್ನ ನೆನಪಿಗೆ ತರುವದಿಲ್ಲ. ಯಾಕೆಂದರೆ ಈಗ ಅವನು ಶಿಷ್ಟನಾಗಿ ಬಾಳುತ್ತಿದ್ದಾನೆ. ಆದುದರಿಂದ ಅವನು ಜೀವಿಸುವನು.
17 “ಆದರೆ ನಿನ್ನ ಜನರು, ‘ಅದು ನ್ಯಾಯವಲ್ಲ. ನನ್ನ ಒಡೆಯನಾದ ಯೆಹೋವನು ಹಾಗೆ ಮಾಡಲಾರನು’ ಎಂದು ಹೇಳುವರು.
“ಅಂಥ ಜನರೇ ನ್ಯಾಯವಂತರಲ್ಲ. ಅವರೇ ಬದಲಾಗಬೇಕು. 18 ಒಬ್ಬ ಒಳ್ಳೆಯ ಮನುಷ್ಯನು ತನ್ನ ಶಿಷ್ಟತ್ವವನ್ನು ಬಿಟ್ಟು ಪಾಪದ ಮಾರ್ಗದಲ್ಲಿ ನಡೆದರೆ ಅವನು ಅವನ ಪಾಪಗಳ ನಿಮಿತ್ತ ಸಾಯುವನು. 19 ಆದರೆ ಒಬ್ಬ ಪಾಪಿ ತನ್ನ ದುಷ್ಟತನವನ್ನು ಬಿಟ್ಟು ನೀತಿವಂತನಾಗಿ ಬಾಳಿದರೆ ಅವನು ಜೀವಿಸುವನು. 20 ಆದರೆ ನಾನು ನ್ಯಾಯವಂತನಲ್ಲ, ಎಂದು ನೀವು ಹೇಳುತ್ತೀರಿ. ಆದರೆ ನಾನು ಖಂಡಿತವಾಗಿ ಹೇಳುತ್ತೇನೆ, ಇಸ್ರೇಲ್ ಮನೆತನದವರೇ, ಪ್ರತಿಯೊಬ್ಬನೂ ತಾನು ಮಾಡಿದ ಕಾರ್ಯಗಳಿಗಾಗಿ ನ್ಯಾಯ ಹೊಂದುವನು.”
ಜೆರುಸಲೇಮ್ ವಶಮಾಡಲ್ಪಟ್ಟಿತು
21 ಸೆರೆಯ ಹನ್ನೆರಡನೆಯ ವರ್ಷದ ಹತ್ತನೆಯ ತಿಂಗಳಿನ ಐದನೇ ದಿವಸದಲ್ಲಿ ಜೆರುಸಲೇಮಿನಿಂದ ಒಬ್ಬನು ನನ್ನ ಬಳಿಗೆ ಬಂದನು. ಅವನು ರಣರಂಗದಿಂದ ತಪ್ಪಿಸಿಕೊಂಡು ಬಂದಾತನು. ಅವನು, “ನಗರವು ಪರಾಧೀನವಾಯಿತು” ಎಂದು ಹೇಳಿದನು.
22 ಅವನು ಬರುವ ಹಿಂದಿನ ದಿವಸದ ಸಾಯಂಕಾಲ ನನ್ನ ಒಡೆಯನಾದ ಯೆಹೋವನ ಆತ್ಮನಿಂದ ಪರವಶನಾದೆನು. ದೇವರು ನನ್ನನ್ನು ಮಾತನಾಡದಂತೆ ಮಾಡಿದ್ದನು. ಆ ಸಮಯದಲ್ಲಿ ಆ ಮನುಷ್ಯನು ನನ್ನ ಬಳಿಗೆ ಬಂದನು. ಆಗ ದೇವರು ನನ್ನ ಬಾಯನ್ನು ತೆರೆದು ನಾನು ಮಾತನಾಡುವಂತೆ ಮಾಡಿದನು. 23 ಆಗ ಯೆಹೋವನ ಸಂದೇಶವು ನನಗೆ ಬಂತು. ಆತನು ಹೇಳಿದ್ದೇನೆಂದರೆ, 24 “ನರಪುತ್ರನೇ, ಕೆಡವಲ್ಪಟ್ಟು ಹಾಳುಬಿದ್ದ ಪಟ್ಟಣಗಳಲ್ಲಿ ಇಸ್ರೇಲ್ ಜನರು ವಾಸಿಸುತ್ತಿದ್ದಾರೆ. ಅವರು ಹೇಳುವುದೇನೆಂದರೆ, ‘ಅಬ್ರಹಾಮನು ಒಬ್ಬನೇ. ಈ ದೇಶವನ್ನೆಲ್ಲಾ ದೇವರು ಅವನಿಗೆ ಕೊಟ್ಟನು. ನಾವು ಈಗ ಬಹಳ ಮಂದಿ ಇದ್ದೇವೆ. ಆದ್ದರಿಂದ ಖಂಡಿತವಾಗಿ ಈ ದೇಶ ನಮಗೇ ಸೇರಿದ್ದಾಗಿದೆ.’
25 “ನೀನು ಅವರಿಗೆ ಹೀಗೆ ಹೇಳಬೇಕು. ನಿಮ್ಮ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: ‘ನೀವು ರಕ್ತವಿರುವ ಮಾಂಸವನ್ನು ತಿನ್ನುತ್ತೀರಿ. ನಿಮ್ಮ ಸಹಾಯಕ್ಕಾಗಿ ನೀವು ವಿಗ್ರಹಗಳಿಗೆ ಮೊರೆಯಿಡುತ್ತೀರಿ. ನೀವು ನರಹತ್ಯೆ ಮಾಡುತ್ತೀರಿ. ಹೀಗೆ ಇರುವದರಿಂದ ನಾನು ಈ ದೇಶವನ್ನು ನಿಮಗೆ ಹೇಗೆ ಕೊಡಲಿ? 26 ನೀವು ನಿಮ್ಮ ಕತ್ತಿಯ ಮೇಲೆ ಭರವಸೆಯಿಡುತ್ತೀರಿ. ಪ್ರತಿಯೊಬ್ಬನು ಭಯಂಕರವಾದ ಕೃತ್ಯಗಳನ್ನು ನಡಿಸುತ್ತಾನೆ. ನಿಮ್ಮ ನೆರೆಯವನ ಹೆಂಡತಿಯೊಂದಿಗೆ ಸಂಭೋಗಿಸುವಿರಿ. ಆದ್ದರಿಂದ ನೀವು ಈ ದೇಶವನ್ನು ಹೊಂದಲಾರಿರಿ.’
27 “‘ನೀನು ಅವರಿಗೆ ನಿಮ್ಮ ಒಡೆಯನಾದ ಯೆಹೋವನು ಹೀಗೆ ಹೇಳಿದನೆಂದು ತಿಳಿಸಬೇಕು, “ನನ್ನ ಜೀವದಾಣೆ, ಕೆಡವಲ್ಪಟ್ಟ ಪಟ್ಟಣಗಳಲ್ಲಿ ವಾಸಿಸುವ ಜನರು ಕೊಲ್ಲಲ್ಪಡುವರು. ಯಾರಾದರೂ ಪಟ್ಟಣದ ಹೊರಗೆ ಹೋಗಿದ್ದಲ್ಲಿ ಅವರನ್ನು ಕಾಡುಪ್ರಾಣಿಗಳು ತಿನ್ನುವಂತೆ ಮಾಡುವೆನು. ಯಾರಾದರೂ ಕೋಟೆಯೊಳಗಾಗಲಿ ಗುಹೆಯೊಳಗಾಗಲಿ ಸೇರಿಕೊಂಡರೆ ಅವರು ರೋಗದಿಂದ ಸಾಯುವರು. 28 ನಾನು ಈ ದೇಶವನ್ನು ಬರಿದಾಗಿಯೂ ಬಂಜರು ಭೂಮಿಯನ್ನಾಗಿಯೂ ಮಾಡುವೆನು. ಈ ದೇಶವು ಹೆಮ್ಮೆಪಟ್ಟುಕೊಳ್ಳುತ್ತಿದ್ದ ವಿಷಯಗಳನ್ನೆಲ್ಲಾ ಅವರು ಕಳೆದುಕೊಳ್ಳುವರು. ಇಸ್ರೇಲಿನ ಪರ್ವತಗಳು ಬೋಳುಗುಡ್ಡಗಳಾಗುವವು. ಯಾರೂ ಅದನ್ನು ದಾಟಿ ಹೋಗಲಾರರು. 29 ಅವರು ಅನೇಕ ಭಯಂಕರ ಕೃತ್ಯಗಳನ್ನು ಮಾಡಿದ್ದಾರೆ. ಆದ್ದರಿಂದ ಅವರ ರಾಜ್ಯವನ್ನು ಬಂಜರು ಭೂಮಿಯನ್ನಾಗಿ ಮಾಡುವೆನು. ಆಗ ಈ ಜನರು ನಾನು ಯೆಹೋವನೆಂದು ತಿಳಿದುಕೊಳ್ಳುವರು.”
30 “‘ನರಪುತ್ರನೇ, ನಿನ್ನ ವಿಷಯದಲ್ಲಿ ನಿನ್ನ ಜನರು ಗೋಡೆಗೆ ಒರಗಿಕೊಂಡೂ ಬಾಗಿಲಿನ ನಡುವೆ ನಿಂತುಕೊಂಡೂ ಮಾತನಾಡಿಕೊಳ್ಳುತ್ತಿದ್ದಾರೆ. ಅವರು ಒಬ್ಬರಿಗೊಬ್ಬರು, “ಬನ್ನಿ, ಯೆಹೋವನು ಹೇಳುವುದನ್ನು ನಾವು ಹೋಗಿ ಕೇಳೋಣ” 31 ಎಂದು ಹೇಳುತ್ತಾ ನಿನ್ನ ಬಳಿಗೆ ನನ್ನ ಜನರಂತೆ ಬರುವರು. ನನ್ನ ಜನರಂತೆ ನಿನ್ನ ಎದುರಿನಲ್ಲಿ ಬಂದು ಕುಳಿತುಕೊಳ್ಳುವರು. ನಿನ್ನ ಮಾತುಗಳನ್ನು ಅವರು ಕೇಳಿದರೂ ಅವುಗಳಿಗೆ ವಿಧೇಯರಾಗದೆ ಇಷ್ಟಪಡುವದನ್ನೆ ಮಾಡುವರು. ಇತರರಿಗೆ ಮೋಸ ಮಾಡಿ ಹಣಗಳಿಸುವದೇ ಅವರ ಕೆಲಸ.
32 “‘ನೀನು ಅವರಿಗೆ ಏನೂ ಅಲ್ಲ. ಒಬ್ಬ ಪ್ರೇಮಗೀತೆಯನ್ನು ಹಾಡುವ ಹಾಡುಗಾರ. ನಿನಗೆ ಮಧುರವಾದ ಕಂಠವಿದೆ. ನೀನು ವಾದ್ಯವನ್ನು ಚೆನ್ನಾಗಿ ಬಾರಿಸುವಿ. ಅವರು ನಿನ್ನ ಮಾತುಗಳನ್ನು ಕೇಳಿದರೂ ನೀನು ಹೇಳಿದಂತೆ ಮಾಡುವದಿಲ್ಲ. 33 ಆದರೆ ನೀನು ಹಾಡುವ ವಿಷಯಗಳು ಸಂಭವಿಸುವವು. ಆಗ ಜನರೂ, “ನಿಜವಾಗಿಯೂ ನಮ್ಮ ಮಧ್ಯೆ ಒಬ್ಬ ಪ್ರವಾದಿಯು ವಾಸಿಸಿದನಲ್ಲಾ?” ಎಂದು ಅನ್ನುವರು.’”
ರಚನೆಗಾರ: ಆಸಾಫ.
81 ನಮಗೆ ಬಲಪ್ರದನಾಗಿರುವ ದೇವರಿಗೆ ಸಂತಸದಿಂದ ಹಾಡಿರಿ.
ಇಸ್ರೇಲಿನ ದೇವರಿಗೆ ಆನಂದಘೋಷ ಮಾಡಿರಿ.
2 ವಾದ್ಯವನ್ನು ನುಡಿಸಲಾರಂಭಿಸಿರಿ;
ದಮ್ಮಡಿಯನ್ನು ಬಡಿಯಿರಿ.
ಇಂಪಾದ ಹಾರ್ಪ್ ಮತ್ತು ಲೈರ್ ವಾದ್ಯಗಳನ್ನು ಬಾರಿಸಿರಿ.
3 ಅಮಾವಾಸ್ಯೆಯಲ್ಲಿಯೂ ನಮ್ಮ ರಜಾಕಾಲವಾದ
ಪೂರ್ಣಿಮೆಯಲ್ಲಿಯೂ ತುತ್ತೂರಿಯನ್ನು ಊದಿರಿ.
4 ಇದು ಇಸ್ರೇಲರಿಗೆ ಕಟ್ಟಳೆಯಾಗಿದೆ.
ಯಾಕೋಬ್ಯರ ದೇವರು ಈ ಆಜ್ಞೆಯನ್ನು ಕೊಟ್ಟನು.
5 ಆತನು ಯೋಸೇಫನನ್ನು[a] ಈಜಿಪ್ಟಿನಿಂದ ಬಿಡಿಸಿಕೊಂಡು ಬಂದಾಗ
ಅವನೊಂದಿಗೆ ಈ ಒಡಂಬಡಿಕೆಯನ್ನು ಮಾಡಿಕೊಂಡನು.
ಈಜಿಪ್ಟಿನಲ್ಲಿ ನಾವು ಕೇಳಿದ್ದು ನಮಗೆ ಅರ್ಥವಾಗದ ಭಾಷೆಯನ್ನೇ!
6 ಆತನು ಹೀಗೆನ್ನುತ್ತಾನೆ: “ನಿಮ್ಮ ಹೆಗಲಿನಿಂದ ಹೊರೆಯನ್ನು ತೆಗೆದುಹಾಕಿದೆನು.
ಕೆಲಸಗಾರರ ಬುಟ್ಟಿಯನ್ನು ನೀವು ಬಿಸಾಕುವಂತೆ ಮಾಡಿದೆನು.
7 ನೀವು ಆಪತ್ತಿನಲ್ಲಿದ್ದಾಗ ಸಹಾಯಕ್ಕಾಗಿ ಮೊರೆಯಿಟ್ಟಿರಿ.
ಆಗ ನಾನು ನಿಮ್ಮನ್ನು ಬಿಡಿಸಿದೆನು.
ನಾನು ಕಾರ್ಮೋಡದಲ್ಲಿ ಮರೆಯಾಗಿದ್ದರೂ ನಿಮಗೆ ಉತ್ತರಿಸಿದೆನು.
ನಾನು ನಿಮ್ಮನ್ನು ಮೆರೀಬಾದ ನೀರಿನಿಂದ ಪರೀಕ್ಷಿಸಿದೆನು.”
8 “ನನ್ನ ಜನರೇ, ನನಗೆ ಕಿವಿಗೊಡಿರಿ, ನಾನು ನಿಮಗೆ ಒಡಂಬಡಿಕೆಯನ್ನು ಕೊಡುತ್ತಿರುವೆ.
ಇಸ್ರೇಲೇ, ದಯವಿಟ್ಟು ಕಿವಿಗೊಡು!
9 ಪರದೇಶದವರು ಆರಾಧಿಸುವ
ಯಾವ ಸುಳ್ಳು ದೇವರುಗಳನ್ನೂ ಪೂಜಿಸಬೇಡ.
10 ಯೆಹೋವನಾದ ನಾನೇ ನಿನ್ನ ದೇವರು.
ನಿನ್ನನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದ ದೇವರು ನಾನೇ.
ಇಸ್ರೇಲೇ, ನಿನ್ನ ಬಾಯನ್ನು ತೆರೆ,
ಆಗ ನಾನು ನಿನಗೆ ತಿನ್ನಿಸುವೆನು.
11 “ಆದರೆ ನನ್ನ ಜನರು ನನಗೆ ಕಿವಿಗೊಡಲಿಲ್ಲ.
ಇಸ್ರೇಲರು ನನಗೆ ವಿಧೇಯರಾಗಲಿಲ್ಲ.
12 ಆದ್ದರಿಂದ ತಮ್ಮ ಇಷ್ಟಾನುಸಾರ ಮಾಡಲೆಂದು ಅವರನ್ನು ಬಿಟ್ಟುಕೊಟ್ಟೆ.
ಇಸ್ರೇಲ್ ತನ್ನ ಇಷ್ಟಾನುಸಾರ ಮಾಡಿತು.
13 ನನ್ನ ಜನರು ನನಗೆ ಕಿವಿಗೊಟ್ಟು ನನ್ನ ಚಿತ್ತಾನುಸಾರವಾಗಿ ಜೀವಿಸಿದರೆ,
14 ಅವರ ಶತ್ರುಗಳನ್ನು ಸೋಲಿಸುವೆನು;
ಇಸ್ರೇಲಿಗೆ ಕೇಡುಮಾಡುವವರನ್ನು ದಂಡಿಸುವೆನು.
15 ಯೆಹೋವನ ಶತ್ರುಗಳು ಭಯದಿಂದ ನಡುಗುವರು.
ಅವರು ಶಾಶ್ವತವಾಗಿ ದಂಡಿಸಲ್ಪಡುವರು.
16 ದೇವರು ತನ್ನ ಜನರಿಗೆ ಉತ್ತಮವಾದ ಗೋಧಿಯನ್ನು ಒದಗಿಸುವನು.
ಬಂಡೆಯಾಗಿರುವ ಆತನು ತನ್ನ ಜನರಿಗೆ ಜೇನುತುಪ್ಪವನ್ನು ಸಂತೃಪ್ತಿಯಾಗುವ ತನಕ ಕೊಡುವನು.”
ಸ್ತುತಿಗೀತೆ. ರಚನೆಗಾರ: ಆಸಾಫ.
82 ದೇವಾದಿದೇವನು ತನ್ನ ಸಭೆಯಲ್ಲಿ[b] ನಿಂತುಕೊಂಡು
ದೇವರುಗಳಿಗೆ ನ್ಯಾಯತೀರ್ಪು ನೀಡುವನು.
2 ದೇವರು ಹೀಗೆನ್ನುತ್ತಾನೆ: “ಇನ್ನೆಷ್ಟರವರೆಗೆ ಅನ್ಯಾಯವಾಗಿ ತೀರ್ಪು ಕೊಡುತ್ತೀರಿ?
ಇನ್ನೆಷ್ಟರವರೆಗೆ ದುಷ್ಟರನ್ನು ದಂಡಿಸದೆ ಬಿಡುಗಡೆ ಮಾಡುತ್ತೀರಿ?”
3 “ಅನಾಥರ ಮತ್ತು ಬಡಜನರ ಪರವಾಗಿ ವಾದಿಸಿರಿ.
ಅನ್ಯಾಯಕ್ಕೆ ಒಳಗಾಗಿರುವ ಬಡವರ ಹಕ್ಕುಗಳನ್ನು ಸಂರಕ್ಷಿಸಿರಿ.
4 ಬಡವರಿಗೆ ಮತ್ತು ಅಸಹಾಯಕರಿಗೆ ಸಹಾಯ ಮಾಡಿರಿ.
ಅವರನ್ನು ದುಷ್ಟರಿಂದ ರಕ್ಷಿಸಿರಿ.
5 “ಅವರಿಗೆ ಏನೂ ಗೊತ್ತಿಲ್ಲ.
ಅವರಿಗೆ ಏನೂ ಅರ್ಥವಾಗುವುದಿಲ್ಲ!
ತಾವು ಮಾಡುತ್ತಿರುವುದೂ ಅವರಿಗೆ ತಿಳಿಯದು.
ಅವರ ಪ್ರಪಂಚವು ಅವರ ಸುತ್ತಲೂ ಕುಸಿದುಬೀಳುತ್ತಿದೆ!”
6 ನಾಯಕರಾದ ನಿಮಗೆ ನಾನು ಹೇಳುವುದೇನೆಂದರೆ:
“ನೀವು ದೇವರುಗಳು. ನೀವು ಮಹೋನ್ನತನಾದ ದೇವರ ಪುತ್ರರು.
7 ಆದರೆ ಎಲ್ಲಾ ಜನರಂತೆ ನೀವೂ ಸಾಯುವಿರಿ.
ಬೇರೆಲ್ಲಾ ನಾಯಕರುಗಳಂತೆಯೇ ನೀವು ಸಾಯುವಿರಿ.”
8 ದೇವರೇ ಎದ್ದೇಳು! ನೀನೇ ನ್ಯಾಯಾಧೀಶನಾಗಿರು!
ಎಲ್ಲಾ ಜನಾಂಗಗಳಿಗೆ ನೀನೇ ನಾಯಕನಾಗಿರು!
Kannada Holy Bible: Easy-to-Read Version. All rights reserved. © 1997 Bible League International