Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
2 ಸಮುವೇಲನು 20

ಶೆಬನು ದಾವೀದನ ವಿರುದ್ಧವಾಗಿ ದಂಗೆ ಎದ್ದದ್ದು

20 ಬಿಕ್ರೀಯ ಮಗನಾದ ಶೆಬ ಅಲ್ಲಿದ್ದನು. ಇವನು ದುಷ್ಟನಾಗಿದ್ದನು; ಬೆನ್ಯಾಮೀನ್ ಕುಲದವನಾಗಿದ್ದ ಇವನು, ತುತ್ತೂರಿಯನ್ನು ಊದುತ್ತಾ,

“ದಾವೀದನಲ್ಲಿ ನಮ್ಮ ಪಾಲು ಏನೂ ಇಲ್ಲ.
    ಇಷಯನ ಮಗನಲ್ಲಿ ನಮಗೇನೂ ಇಲ್ಲ.
ನಾವೆಲ್ಲ, ಅಂದರೆ ಇಸ್ರೇಲರೆಲ್ಲ ನಮ್ಮನಮ್ಮ ಗುಡಾರಗಳಿಗೆ ಹೋಗೋಣ”

ಎಂದು ಹೇಳಿದನು.

ಆಗ ಇಸ್ರೇಲರೆಲ್ಲರೂ ದಾವೀದನನ್ನು ತೊರೆದು, ಬಿಕ್ರೀಯ ಮಗನಾದ ಶೆಬನನ್ನು ಹಿಂಬಾಲಿಸಿದರು. ಆದರೆ ಯೆಹೂದದ ಜನರೆಲ್ಲರೂ ಜೋರ್ಡನ್ ನದಿಯಿಂದ ಜೆರುಸಲೇಮಿನ ತನಕ ತಮ್ಮ ರಾಜನ ಜೊತೆಯಲ್ಲಿಯೇ ಇದ್ದರು.

ದಾವೀದನು ಜೆರುಸಲೇಮಿನ ತನ್ನ ಅರಮನೆಗೆ ಬಂದನು. ದಾವೀದನು ಮನೆಕಾಯಲು ಬಿಟ್ಟುಹೋದ ತನ್ನ ಹತ್ತುಮಂದಿ ಉಪಪತ್ನಿಯರನ್ನು[a] ಒಂದು ಮನೆಯಲ್ಲಿ ಇಟ್ಟಿದ್ದನು. ಈ ಮನೆಯನ್ನು ಕಾವಲುಗಾರರು ಕಾಯುತ್ತಿದ್ದರು. ಈ ಹೆಂಗಸರು ತಾವು ಸಾಯುವವರೆಗೆ ಈ ಮನೆಯಲ್ಲಿಯೇ ನೆಲೆಸಿದ್ದರು. ದಾವೀದನು ಅವರಿಗೆ ಆಹಾರ ವಸ್ತ್ರಗಳನ್ನು ಕೊಟ್ಟನು. ಆದರೆ ಅವನು ಅವರೊಂದಿಗೆ ಮಲಗಿಕೊಳ್ಳಲಿಲ್ಲ. ಅವರು ಸಾಯುವವರೆಗೆ ವಿಧವೆಯರಂತಿದ್ದರು.

ರಾಜನು ಅಮಾಸನಿಗೆ, “ಯೆಹೂದದ ಜನರು ನನ್ನನ್ನು ಮೂರು ದಿನಗಳಲ್ಲಿ ನೋಡುವಂತೆ ಅವರಿಗೆ ತಿಳಿಸು. ನೀನು ಸಹ ಇಲ್ಲಿಯೇ ಇರು” ಎಂದು ಹೇಳಿದನು.

ಆಗ ಅಮಾಸನು ಯೆಹೂದದ ಜನರನ್ನು ಒಟ್ಟಾಗಿ ಕರೆಯಲು ಹೋದನು; ಆದರೆ ನೇಮಕವಾದ ಸಮಯಕ್ಕೆ ಬರದೆ ತಡಮಾಡಿದನು.

ಶೆಬನನ್ನು ಕೊಲ್ಲುವಂತೆ ಅಬೀಷೈಯನಿಗೆ ದಾವೀದನು ಹೇಳಿದ್ದು

ದಾವೀದನು ಅಬೀಷೈಯನಿಗೆ, “ಬಿಕ್ರೀಯ ಮಗನಾದ ಶೆಬನು ಅಬ್ಷಾಲೋಮನಿಗಿಂತ ನಮಗೆ ಹೆಚ್ಚು ಅಪಾಯಕಾರಿಯಾಗಿದ್ದಾನೆ. ಆದ್ದರಿಂದ ನನ್ನ ಸೇವಕರನ್ನು ಕರೆದುಕೊಂಡು, ಶೆಬನನ್ನು ಅಟ್ಟಿಸಿಕೊಂಡು ಹೋಗು. ಶೆಬನು ಕೋಟೆಗಳಿರುವ ನಗರಗಳಲ್ಲಿ ಸೇರಿಕೊಳ್ಳುವುದಕ್ಕಿಂತ ಮುಂಚೆಯೇ ತ್ವರಿತವಾಗಿ ಹೋಗು. ಶೆಬನು ಕೋಟೆಗಳಿರುವ ನಗರಗಳಲ್ಲಿ ಸೇರಿಕೊಂಡರೆ, ಅವನು ನಮ್ಮಿಂದ ತಪ್ಪಿಸಿಕೊಂಡು ಬಿಡುತ್ತಾನೆ” ಎಂದು ಹೇಳಿದನು.

ಆದ್ದರಿಂದ ಯೋವಾಬನು ಕೆರೇತ್ಯರ ಪೆಲೇತ್ಯರ ಮತ್ತು ಸೈನಿಕರೆಲ್ಲರ ಸಮೇತವಾಗಿ ಜೆರುಸಲೇಮಿನಿಂದ ಹೊರಟು ಬಿಕ್ರೀಯ ಮಗನಾದ ಶೆಬನನ್ನು ಅಟ್ಟಿಸಿಕೊಂಡು ಹೋದರು.

ಯೋವಾಬನು ಅಮಾಸನನ್ನು ಕೊಂದದ್ದು

ಯೋವಾಬನು ತನ್ನ ಸೈನ್ಯದೊಂದಿಗೆ ಗಿಬ್ಯೋನಿನಲ್ಲಿದ್ದ “ದೊಡ್ಡ ಕಲ್ಲಿನ” ಬಳಿಗೆ ಬಂದಾಗ, ಅಮಾಸನು ಅವರನ್ನು ಸಂಧಿಸಲು ಬಂದನು. ಯೋವಾಬನು ತನ್ನ ಸಮವಸ್ತ್ರಗಳನ್ನು ಧರಿಸಿದ್ದನು. ಸೊಂಟಪಟ್ಟಿಯನ್ನು ಕಟ್ಟಿಕೊಂಡಿದ್ದನು. ಅವನ ಖಡ್ಗವು ಒರೆಯಲ್ಲಿತ್ತು. ಅವನು ಅಮಾಸನನ್ನು ಸಂಧಿಸಲು ಮುಂದೆ ಸಾಗಿದಾಗ, ಅವನ ಖಡ್ಗವು ಒರೆಯಿಂದ ಹೊರಗೆ ಬಿದ್ದಿತು. ಯೋವಾಬನು ಖಡ್ಗವನ್ನು ಎತ್ತಿಕೊಂಡು ಅದನ್ನು ತನ್ನ ಕೈಗಳಲ್ಲಿ ಹಿಡಿದುಕೊಂಡನು. ಅವನು ಅಮಾಸನನ್ನು, “ಸೋದರನೇ, ನೀವೆಲ್ಲ ಕ್ಷೇಮವೇ?” ಎಂದು ಕೇಳಿದನು. ಯೋವಾಬನು ಅಮಾಸನಿಗೆ ಮುದ್ದಿಡಲು ಅವನ ಗಡ್ಡವನ್ನು ಬಲಗೈಯಲ್ಲಿ ಹಿಡಿದನು. 10 ಅವನ ಕೈಯಲ್ಲಿದ್ದ ಖಡ್ಗವನ್ನು ಅಮಾಸನು ಗಮನಿಸಲಿಲ್ಲ. ಅಮಾಸನ ಹೊಟ್ಟೆಯಲ್ಲಿದ್ದದ್ದೆಲ್ಲ ಹೊರಚೆಲ್ಲಿ ನೆಲದ ಮೇಲೆ ಬೀಳುವಂತೆ ಯೋವಾಬನು ಅವನ ಹೊಟ್ಟೆಗೆ ಖಡ್ಗದಿಂದ ತಿವಿದನು. ಅಮಾಸನು ಆಗಲೇ ಸತ್ತದ್ದರಿಂದ ಯೋವಾಬನು ಮತ್ತೆ ತಿವಿಯಲಿಲ್ಲ.

ದಾವೀದನ ಜನರು ಶೆಬನನ್ನು ಹುಡುಕತೊಡಗಿದ್ದು

ನಂತರ ಯೋವಾಬನು ತನ್ನ ಸೋದರನಾದ ಅಬೀಷೈಯನೊಂದಿಗೆ ಬಿಕ್ರೀಯ ಮಗನಾದ ಶೆಬನನ್ನು ಅಟ್ಟಿಸಿಕೊಂಡು ಹೋದನು. 11 ಯೋವಾಬನ ಯುವಸೈನಿಕರಲ್ಲಿ ಒಬ್ಬನು ಅಮಾಸನ ದೇಹದ ಹತ್ತಿರ ನಿಂತುಕೊಂಡು, “ಯೋವಾಬನನ್ನು ಮತ್ತು ದಾವೀದನನ್ನು ಬೆಂಬಲಿಸುವ ಪ್ರತಿಯೊಬ್ಬರೂ ಯೋವಾಬನನ್ನು ಹಿಂಬಾಲಿಸಲೇಬೇಕು. ಶೆಬನನ್ನು ಅಟ್ಟಿಸಿಕೊಂಡು ಹೋಗಲು ಅವನಿಗೆ ಸಹಾಯಮಾಡಿ” ಎಂದು ಹೇಳಿದನು.

12 ಅಮಾಸನು ರಸ್ತೆಯ ಮಧ್ಯದಲ್ಲಿ ತನ್ನ ರಕ್ತದಲ್ಲಿಯೇ ಬಿದ್ದಿದ್ದನು. ಅವನ ದೇಹವನ್ನು ನೋಡಲು ಜನರೆಲ್ಲರೂ ನಿಲ್ಲುತ್ತಿದ್ದರು. ಆದ್ದರಿಂದ ಆ ಯುವಕನು ಅಮಾಸನ ದೇಹವನ್ನು ರಸ್ತೆಯಿಂದ ಎತ್ತಿ ಹೊಲದಲ್ಲಿಟ್ಟನು. ನಂತರ ಅವನು ಅಮಾಸನ ದೇಹದ ಮೇಲೆ ಒಂದು ವಸ್ತ್ರವನ್ನು ಹೊದಿಸಿದನು. 13 ಅಮಾಸನ ದೇಹವನ್ನು ರಸ್ತೆಯಿಂದ ಎತ್ತಿಕೊಂಡು ಹೋದ ಮೇಲೆ ಜನರೆಲ್ಲರೂ ಯೋವಾಬನನ್ನು ಹಿಂಬಾಲಿಸಿದರು. ಬಿಕ್ರೀಯ ಮಗನಾದ ಶೆಬನನ್ನು ಅಟ್ಟಿಸಿಕೊಂಡು ಹೋಗಲು ಅವರು ಯೋವಾಬನೊಂದಿಗೆ ಹೋದರು.

ಶೆಬನು ತಪ್ಪಿಸಿಕೊಂಡು ಆಬೇಲ್ಬೇತ್ಮಾಕಾಗೆ ಹೋದದ್ದು

14 ಬಿಕ್ರೀಯ ಮಗನಾದ ಶೆಬನು ಇಸ್ರೇಲಿನ ಎಲ್ಲಾ ಕುಲಗಳ ಮೂಲಕ ಸಂಚರಿಸುತ್ತಾ ಆಬೇಲ್ಬೇತ್ಮಾಕಾ ಎಂಬಲ್ಲಿಗೆ ಹೋದನು. ಬೇರಿಯ ಕುಲದವರೆಲ್ಲರೂ ಒಟ್ಟಿಗೆ ಸೇರಿಕೊಂಡು ಶೆಬನನ್ನು ಹಿಂಬಾಲಿಸಿದರು.

15 ಯೋವಾಬನು ತನ್ನ ಜನರೊಂದಿಗೆ ಆಬೇಲ್ಬೇತ್ಮಾಕಾ ಊರಿಗೆ ಬಂದನು. ಯೋವಾಬನ ಸೈನ್ಯವು ಪಟ್ಟಣವನ್ನು ಸುತ್ತುಗಟ್ಟಿತು. ಅವರು ನಗರದ ಗೋಡೆಯ ಹತ್ತಿರ ಮಣ್ಣಿನ ದಿಬ್ಬವನ್ನು ಮಾಡಿ ಗೋಡೆಯನ್ನು ಸಮೀಪಿಸಿದರು; ನಂತರ ಆ ಗೋಡೆಯನ್ನು ಬೀಳಿಸುವುದಕ್ಕಾಗಿ ಅದನ್ನು ಹೊಡೆಯಲಾಂಭಿಸಿದರು.

16 ಆ ನಗರದ ಬುದ್ಧಿವಂತೆ ಸ್ತ್ರೀಯೊಬ್ಬಳು ಪಟ್ಟಣದೊಳಗಿಂದ ಜೋರಾಗಿ ಕೂಗುತ್ತಾ, “ನನ್ನ ಮಾತನ್ನು ಕೇಳಿ. ಯೋವಾಬನನ್ನು ಇಲ್ಲಿಗೆ ಬರಲು ಹೇಳಿ. ನಾನು ಅವನ ಜೊತೆಯಲ್ಲಿ ಮಾತಾಡಬೇಕಾಗಿದೆ” ಎಂದು ಹೇಳಿದಳು.

17 ಯೋವಾಬನು ಆ ಸ್ತ್ರೀಯೊಂದಿಗೆ ಮಾತಾಡಲು ಹತ್ತಿರಕ್ಕೆ ಬಂದನು. ಅವಳು, “ನೀನು ಯೋವಾಬನೇ?” ಎಂದು ಕೇಳಿದಳು.

“ಹೌದು, ನಾನೇ ಯೋವಾಬನು” ಎಂದು ಅವನು ಉತ್ತರಿಸಿದನು.

ಆಗ ಅವಳು ಯೋವಾಬಿಗೆ, “ನಾನು ಹೇಳುವುದನ್ನು ಕೇಳು” ಎಂದಳು.

“ಆಗಲಿ, ಕೇಳುತ್ತೇನೆ” ಎಂದು ಯೋವಾಬನು ಉತ್ತರಿಸಿದನು.

18 ಆಗ ಅವಳು, “ಪೂರ್ವಕಾಲದಲ್ಲಿ ಜನರು, ‘ಅಗತ್ಯವಿದ್ದಾಗ ಆಬೇಲಿನವರ ಸಲಹೆಯನ್ನು ಕೇಳಿ, ಆಗ ನಿಮಗೆ ಸೂಕ್ತ ಸಲಹೆ ದೊರಕುತ್ತದೆ’ ಎಂದು ಹೇಳುತ್ತಿದ್ದರು. 19 ನಮ್ಮ ಪಟ್ಟಣವು ಇಸ್ರೇಲರಲ್ಲಿ ಶಾಂತಿಯಿಂದಲೂ ರಾಜನಿಷ್ಠೆಯಿಂದಲೂ ಇದೆ. ಈ ಕಾರಣದಿಂದ ಈ ಪಟ್ಟಣವು ಇಸ್ರೇಲ್ ಪಟ್ಟಣಗಳಲ್ಲಿ ತಾಯಿ ಎನಿಸಿಕೊಂಡಿದೆ. ಇಂಥ ಪಟ್ಟಣವನ್ನು ನೀನು ನಾಶಮಾಡುವುದು ಸರಿಯೋ?” ಎಂದು ಕೇಳಿದಳು.

20 ಅದಕ್ಕೆ ಯೋವಾಬನು, “ಇಲ್ಲ, ಇಲ್ಲ! ನಾನು ಏನನ್ನೂ ನಾಶಪಡಿಸಲು ಇಚ್ಛಿಸಿಲ್ಲ. ನಿಮ್ಮ ಪಟ್ಟಣವನ್ನು ನಾಶಪಡಿಸಲು ನಾನು ಬಂದಿಲ್ಲ. 21 ಆದರೆ ಎಫ್ರಾಯೀಮ್ ಬೆಟ್ಟಪ್ರದೇಶದ ಒಬ್ಬ ಮನುಷ್ಯನಿದ್ದಾನೆ ಅವನನ್ನು ಶೆಬ ಎನ್ನುತ್ತಾರೆ. ಅವನು ಬಿಕ್ರೀಯನ ಮಗನು. ಅವನು ರಾಜನಾದ ದಾವೀದನ ವಿರುದ್ಧ ದಂಗೆ ಎದ್ದಿದ್ದಾನೆ. ನೀನು ಅವನನ್ನು ನನ್ನ ಬಳಿಗೆ ತಂದು ಒಪ್ಪಿಸಿದರೆ, ನಾನು ಈ ನಗರವನ್ನು ಬಿಟ್ಟುಹೋಗುತ್ತೇನೆ” ಎಂದು ಉತ್ತರಿಸಿದನು.

ಅವಳು ಯೋವಾಬನಿಗೆ, “ಸರಿ, ಅವನ ತಲೆಯನ್ನು ಗೋಡೆಯ ಮೇಲಿನಿಂದ ನಿನ್ನ ಕಡೆಗೆ ಎಸೆಯಲಾಗುವುದು” ಎಂದು ಹೇಳಿದಳು.

22 ನಂತರ ಅವಳು ನಗರದ ಎಲ್ಲ ಜನರೊಂದಿಗೆ ಬಹಳ ಜಾಣತನದಿಂದ ಮಾತನಾಡಿದಳು. ಆಗ ಜನರು ಬಿಕ್ರೀಯ ಮಗನಾದ ಶೆಬನ ತಲೆಯನ್ನು ಕತ್ತರಿಸಿಹಾಕಿ ಅದನ್ನು ನಗರದ ಗೋಡೆಯಿಂದಾಚೆಗೆ ಯೋವಾಬನ ಕಡೆಗೆ ಎಸೆದರು.

ಆ ಕೂಡಲೇ ಯೋವಾಬನು ತುತ್ತೂರಿಯನ್ನು ಊದಿಸಿದನು. ಸೈನ್ಯವು ನಗರವನ್ನು ಬಿಟ್ಟುಹೋಯಿತು. ಪ್ರತಿಯೊಬ್ಬರೂ ತಮ್ಮತಮ್ಮ ಮನೆಗಳಿಗೆ ಹಿಂತಿರುಗಿದರು. ಯೋವಾಬನು ಜೆರುಸಲೇಮಿನಲ್ಲಿದ್ದ ರಾಜನ ಬಳಿಗೆ ಹಿಂದಿರುಗಿ ಹೋದನು.

ದಾವೀದನ ಆಸ್ಥಾನದಲ್ಲಿದ್ದ ಜನರು

23 ಯೋವಾಬನು ಇಸ್ರೇಲಿನ ಸೈನ್ಯಕ್ಕೆಲ್ಲ ಮುಖ್ಯ ಸೇನಾಪತಿಯಾಗಿದ್ದನು. ಕೆರೇತ್ಯರಿಗೆ ಮತ್ತು ಪೆಲೇತ್ಯರಿಗೆ ಯೆಹೋಯಾದಾವನ ಮಗನಾದ ಬೆನಾಯನು ಅಧಿಪತಿಯಾಗಿದ್ದನು. 24 ಅದೋರಾಮನು ಬಿಟ್ಟೀಕೆಲಸ ಮಾಡುವವರ ಮೇಲಾಧಿಕಾರಿಯಾಗಿದ್ದನು. ಅಹೀಲೂದನ ಮಗನಾದ ಯೆಹೋಷಾಫಾಟನು ಇತಿಹಾಸಕಾರನಾಗಿದ್ದನು. 25 ಶೆವನು ಕಾರ್ಯದರ್ಶಿಯಾಗಿದ್ದನು. ಚಾದೋಕ್ ಮತ್ತು ಎಬ್ಯಾತಾರರು ಯಾಜಕರಾಗಿದ್ದರು. 26 ಯಾಯೀರಿನವನಾದ ಈರನು ದಾವೀದನ ಮುಖ್ಯ ಸೇವಕನಾಗಿದ್ದನು.[b]

2 ಕೊರಿಂಥದವರಿಗೆ 13

ಕಡೆಯ ಎಚ್ಚರಿಕೆಗಳು ಮತ್ತು ವಂದನೆಗಳು

13 ನಾನು ಮತ್ತೆ ನಿಮ್ಮ ಬಳಿಗೆ ಮೂರನೆ ಸಾರಿ ಬರುತ್ತೇನೆ. ನೆನಪಿಟ್ಟುಕೊಳ್ಳಿರಿ, “ಪ್ರತಿಯೊಂದು ದೂರಿಗೂ ಇಬ್ಬರಾಗಲಿ ಮೂವರಾಗಲಿ ಸಾಕ್ಷಿಗಳಿದ್ದು ತಮಗೆ ಗೊತ್ತಿರುವುದಾಗಿ ಮತ್ತು ಅದು ಸತ್ಯವೆಂದು”(A) ಹೇಳಬೇಕು. ನಾನು ನಿಮ್ಮ ಬಳಿಗೆ ಎರಡನೆ ಸಲ ಬಂದಿದ್ದಾಗ ಪಾಪಕ್ಕೆ ಒಳಗಾಗಿದ್ದವರನ್ನು ಮತ್ತು ಉಳಿದವರೆಲ್ಲರನ್ನು ಎಚ್ಚರಿಸಿದೆನು. ಈಗ ನಾನು ದೂರದಲ್ಲಿದ್ದೇನೆ. ಈ ಪಾಪಕ್ಕೆ ಒಳಗಾಗಿರುವ ಎಲ್ಲರಿಗೂ ನಾನು ಕೊಡುವ ಎಚ್ಚರಿಕೆ ಏನೆಂದರೆ, ನಾನು ನಿಮ್ಮ ಬಳಿಗೆ ಬಂದಾಗ, ನಿಮ್ಮ ಪಾಪಕ್ಕೆ ತಕ್ಕ ದಂಡನೆಯನ್ನು ವಿಧಿಸುವೆನು. ಕ್ರಿಸ್ತನು ನನ್ನ ಮೂಲಕ ಮಾತಾಡುತ್ತಿದ್ದಾನೆ ಎಂಬುದಕ್ಕೆ ನಿಮಗೆ ಸಾಕ್ಷಿಬೇಕು. ನನಗಿರುವ ಸಾಕ್ಷಿ ಏನೆಂದರೆ, ಕ್ರಿಸ್ತನು ನಿಮ್ಮನ್ನು ದಂಡಿಸುವುದರಲ್ಲಿ ಬಲಹೀನನಲ್ಲ. ಕ್ರಿಸ್ತನು ನಿಮ್ಮ ಮಧ್ಯದಲ್ಲಿ ಬಲಿಷ್ಠನಾಗಿದ್ದಾನೆ. ಕ್ರಿಸ್ತನು ಶಿಲುಬೆಯ ಮೇಲೆ ಕೊಲ್ಲಲ್ಪಟ್ಟಾಗ ಬಲಹೀನನಾಗಿದ್ದನು ಎಂಬುದೇನೊ ನಿಜ. ಆದರೆ ಈಗ ಆತನು ದೇವರ ಶಕ್ತಿಯಿಂದ ಜೀವಿಸುತ್ತಿದ್ದಾನೆ. ಅಲ್ಲದೆ ನಾವು ಕ್ರಿಸ್ತನಲ್ಲಿ ಬಲಹೀನರೆಂಬುದೂ ನಿಜ. ಆದರೆ ನಾವು ನಿಮಗೋಸ್ಕರವಾಗಿ ಕ್ರಿಸ್ತನಲ್ಲಿ ದೇವರ ಶಕ್ತಿಯಿಂದ ಜೀವಿಸುತ್ತೇವೆ.

ನೀವು ನಂಬಿಕೆಯಲ್ಲಿ ಜೀವಿಸುತ್ತಿದ್ದೀರೋ ಎಂಬುದನ್ನು ತಿಳಿದುಕೊಳ್ಳಲು ನಿಮ್ಮನ್ನು ನೀವೇ ಪರೀಕ್ಷಿಸಿಕೊಳ್ಳಿರಿ. ಕ್ರಿಸ್ತಯೇಸುವು ನಿಮ್ಮೊಳಗೆ ಇದ್ದಾನೆಂಬುದು ನಿಮಗೆ ಗೊತ್ತಿದೆ. ಆತನು ನಿಮ್ಮಲ್ಲಿಲ್ಲದಿದ್ದರೆ ನೀವು ಅಯೋಗ್ಯರಾಗಿದ್ದೀರಿ. ಆದರೆ ನಾವು ಅಯೋಗ್ಯರಲ್ಲವೆಂದು ನಿಮಗೆ ಖಚಿತವಾಗುವುದರಲ್ಲಿ ನಮಗೆ ಸಂದೇಹವಿಲ್ಲ. ನೀವು ಯಾವ ತಪ್ಪನ್ನೂ ಮಾಡದಿರಲಿ ಎಂಬುದಾಗಿ ನಾವು ದೇವರಲ್ಲಿ ಪ್ರಾರ್ಥಿಸುತ್ತೇವೆ. ನಮ್ಮನ್ನು ಅಯೋಗ್ಯರೆಂದು ಜನರು ಭಾವಿಸಿಕೊಂಡರೂ ನೀವು ಒಳ್ಳೆಯದನ್ನು ಮಾಡುವುದೇ ಮುಖ್ಯ. ಸತ್ಯಕ್ಕೆ ವಿರೋಧವಾದ ಸಂಗತಿಗಳನ್ನು ಮಾಡಲು ನಮಗೆ ಸಾಧ್ಯವಿಲ್ಲ. ಸತ್ಯದ ಪರವಾದ ಕಾರ್ಯಗಳನ್ನು ಮಾತ್ರ ಮಾಡಲು ನಮಗೆ ಸಾಧ್ಯ. ನೀವು ಶಕ್ತರಾಗಿರುವುದಾದರೆ, ನಾವು ಬಲಹೀನರಾಗಿರಲು ಸಂತೋಷಿಸುತ್ತೇವೆ. ನೀವು ನಂಬಿಕೆಯಲ್ಲಿ ಪರಿಪೂರ್ಣರಾಗಬೇಕೆಂಬುದೇ ನಮ್ಮ ಉದ್ದೇಶ. 10 ನಾನು ನಿಮ್ಮೊಂದಿಗೆ ಇಲ್ಲದಿರುವಾಗ ಈ ಸಂಗತಿಗಳನ್ನು ಬರೆಯುತ್ತಿದ್ದೇನೆ. ಏಕೆಂದರೆ ನಾನು ಬಂದಾಗ ನಿಮ್ಮನ್ನು ದಂಡಿಸುವುದಕ್ಕಾಗಿ ನನ್ನ ಅಧಿಕಾರವನ್ನು ಉಪಯೋಗಿಸುವ ಅಗತ್ಯವಿರುವುದಿಲ್ಲ. ಪ್ರಭುವು ನನಗೆ ಅಧಿಕಾರವನ್ನು ಕೊಟ್ಟಿರುವುದು ನಿಮ್ಮನ್ನು ಬಲಗೊಳಿಸುವುದಕ್ಕಾಗಿಯೇ ಹೊರತು ನಾಶಮಾಡುವುದಕ್ಕಾಗಿಯಲ್ಲ.

11 ಸಹೋದರ ಸಹೋದರಿಯರೇ, ನಿಮಗೆ ವಂದನೆಗಳು. ಪರಿಪೂರ್ಣರಾಗಿರಲು ಪ್ರಯತ್ನಿಸಿ. ನಾನು ಕೇಳಿಕೊಂಡ ಕಾರ್ಯಗಳನ್ನು ಮಾಡಿರಿ. ಒಂದೇ ಮನಸ್ಸು ಉಳ್ಳವರಾಗಿದ್ದು ಸಮಾಧಾನದಿಂದ ಜೀವಿಸಿರಿ. ಆಗ ಪ್ರೀತಿಸ್ವರೂಪನೂ ಶಾಂತಿದಾಯಕನೂ ಆದ ದೇವರು ನಿಮ್ಮೊಂದಿಗೆ ಇರುವನು.

12 ನೀವು ಒಬ್ಬರನ್ನೊಬ್ಬರು ವಂದಿಸುವಾಗ ಪವಿತ್ರವಾದ ಮುದ್ದಿಟ್ಟು ವಂದಿಸಿರಿ. ದೇವರ ಪವಿತ್ರ ಜನರೆಲ್ಲರೂ ನಿಮಗೆ ವಂದನೆ ತಿಳಿಸಿದ್ದಾರೆ.

13 ನಮ್ಮ ಪ್ರಭುವಾದ ಯೇಸುಕ್ರಿಸ್ತನ ಕೃಪೆಯೂ ದೇವರ ಪ್ರೀತಿಯೂ ಪವಿತ್ರಾತ್ಮನ ಅನ್ಯೋನ್ಯತೆಯೂ ನಿಮ್ಮೆಲ್ಲರೊಂದಿಗಿರಲಿ.

ಯೆಹೆಜ್ಕೇಲ 27

ತೂರ್ ಒಂದು ದೊಡ್ಡ ವಾಣಿಜ್ಯ ಕೇಂದ್ರ

27 ಯೆಹೋವನ ವಾಕ್ಯವು ನನಗೆ ತಿರುಗಿ ಬಂತು. ಆತನು ಹೇಳಿದ್ದೇನೆಂದರೆ, “ನರಪುತ್ರನೇ, ತೂರಿನ ವಿಷಯವಾದ ಶೋಕಗೀತೆಯನ್ನು ಹಾಡು. ಅದರ ಬಗ್ಗೆ ಈ ರೀತಿಯಾಗಿ ಹೇಳು:

“‘ತೂರೇ, ನೀನು ಸಮುದ್ರಕ್ಕೆ ಬಾಗಿಲು.
    ಅನೇಕ ದೇಶಗಳಿಗೆ ನೀನು ವ್ಯಾಪಾರಿ.
    ಕರಾವಳಿಯ ಅನೇಕ ದೇಶಗಳಿಗೆ ನೀನು ಪ್ರಯಾಣಿಸುವೆ.’
ನನ್ನ ಒಡೆಯನಾದ ಯೆಹೋವನು ಇದನ್ನು ಹೇಳಿದ್ದಾನೆ.
ತೂರೇ, ನೀನು ಅತಿ ಸುಂದರಳೆಂದು ಭಾವಿಸಿರುವೆ.
    ನೀನು ಪರಿಪೂರ್ಣ ಸುಂದರಳೆಂದು ತಿಳಿದಿರುವೆ.
ಭೂಮಧ್ಯ ಸಮುದ್ರವು ನಿನ್ನ ಸುತ್ತಲೂ ಮೇರೆಯಂತಿದೆ.
ನಿನ್ನನ್ನು ಕಟ್ಟಿದವರು ಅಂದವಾಗಿಯೇ ಕಟ್ಟಿದರು.
    ನಿನ್ನಿಂದ ಹೊರಡುವ ಹಡಗುಗಳಂತೆ ನೀನು ಸುಂದರವಾಗಿರುವೆ.
ನಿನ್ನನ್ನು ಕಟ್ಟಿದವರು ಸೆನೀರ್ ಬೆಟ್ಟದ
    ತುರಾಯಿ ಮರಗಳನ್ನು ಹಲಗೆಗಳಿಗಾಗಿ ಉಪಯೋಗಿಸಿದರು.
ಲೆಬನೋನಿನ ದೇವದಾರು ಮರವನ್ನು
    ಹಾಯಿ ಮರವನ್ನಾಗಿ ಉಪಯೋಗಿಸಿದರು.
ಬಾಷಾನಿನ ಅಲ್ಲೋನ್ ಮರಗಳಿಂದ
    ಹುಟ್ಟುಗಳನ್ನು ತಯಾರಿಸಿದರು.
ನಿನ್ನ ಮೇಲ್ಮಾಳಿಗೆಯನ್ನು ಕಿತ್ತೀಮ್ ದ್ವೀಪದ ತಿಲಕದ ಮರಗಳಿಂದ ಮಾಡಿದರು.
    ಅದನ್ನು ದಂತಗಳಿಂದ ಶೃಂಗರಿಸಿದರು.
ಈಜಿಪ್ಟಿನಲ್ಲಿ ತಯಾರಿಸಿದ ಬಣ್ಣದ ನಾರುಮಡಿಯನ್ನು
    ನಿನ್ನ ಹಾಯಿಗಳಿಗಾಗಿ ಉಪಯೋಗಿಸಿದರು.
    ಆ ಹಾಯಿಯು ನಿನ್ನ ಧ್ವಜವಾಯಿತು.
ನಿನ್ನ ಮೇಲ್ಮಾಳಿಗೆಯ ಹೊದಿಕೆಯು ನೀಲ ಮತ್ತು ಧೂಮ್ರ ವರ್ಣದವುಗಳಾಗಿದ್ದವು.
    ಅವು ಸೈಪ್ರಸ್ ದ್ವೀಪದಿಂದ ಬಂದವುಗಳಾಗಿದ್ದವು.
ಚೀದೋನ್ ಮತ್ತು ಅರ್ವಾದಿನ ಜನರು ನಿನ್ನ ಹಡಗುಗಳಿಗೆ ಹುಟ್ಟುಹಾಕುವವರಾಗಿದ್ದರು.
    ತೂರೇ, ನಿನ್ನ ಜ್ಞಾನಿಗಳು ಹಡಗುಗಳನ್ನು ನಡಿಸುವವರಾಗಿದ್ದರು.
ಗೆಬಲಿನ ಹಿರಿಯರೂ ಜ್ಞಾನಿಗಳೂ
    ನಿನ್ನ ಹಡಗುಗಳ ಬಿರುಕುಗಳನ್ನು ಸರಿಪಡಿಸುವವರಾಗಿದ್ದರು.
ಸಾಗರದ ಹಡಗುಗಳೂ ಅದರ ನಾವಿಕರೂ
    ನಿನ್ನೊಂದಿಗೆ ವ್ಯಾಪಾರ ಮಾಡಲು ಬಂದರು.

10 “‘ಪರ್ಶಿಯ, ಲೂದ್ ಮತ್ತು ಪೂಟ್‌ನ ಜನರು ನಿನ್ನ ಸೈನ್ಯದಲ್ಲಿರುವರು. ಅವರು ಯುದ್ಧವೀರರು. ಅವರು ನಿನ್ನ ಗೋಡೆಗಳಲ್ಲಿ ತಮ್ಮ ಗುರಾಣಿ ಮತ್ತು ಶಿರಸ್ತ್ರಾಣಗಳನ್ನು ತೂಗು ಹಾಕಿದರು. ನಿನ್ನ ನಗರಕ್ಕೆ ಘನತೆಯನ್ನು ಅವರು ತಂದರು. 11 ಅರ್ವಾದ್ ಮತ್ತು ಸಿಲಿಸಿಯಾದ ಜನರು ನಿನ್ನ ಕೋಟೆಗೋಡೆಗಳಲ್ಲಿ ಕಾವಲಿಗಿರುವರು. ಗಮ್ಮಾದಿನಿಂದ ಬಂದ ಜನರು ನಿನ್ನ ಬುರುಜುಗಳಲ್ಲಿರುವರು. ನಿನ್ನ ಸೌಂದರ್ಯವನ್ನು ಅವರು ಪರಿಪೂರ್ಣ ಮಾಡಿದರು.

12 “‘ತಾರ್ಷೀಷ್ ನಿನ್ನ ಉತ್ತಮ ವ್ಯಾಪಾರ ಕೇಂದ್ರವಾಗಿತ್ತು. ಅವರು ತಮ್ಮ ಬೆಳ್ಳಿ, ಕಬ್ಬಿಣ, ತವರ ಮತ್ತು ಸೀಸ ಲೋಹಗಳನ್ನು ಕೊಟ್ಟು ನಿನ್ನಿಂದ ವಸ್ತುಗಳನ್ನು ಕೊಂಡುಕೊಂಡರು. 13 ಗ್ರೀಸ್, ತುರ್ಕಿ ಮತ್ತು ಕಪ್ಪು ಸಮುದ್ರದ ಸುತ್ತಲಿರುವ ದೇಶಗಳವರು ನಿನ್ನಲ್ಲಿಗೆ ವ್ಯಾಪಾರಕ್ಕಾಗಿ ಬಂದರು. ಅವರು ನಿನ್ನ ವಸ್ತುಗಳಿಗೆ ಬದಲಾಗಿ ಗುಲಾಮರನ್ನೂ ತಾಮ್ರವನ್ನೂ ಕೊಟ್ಟರು. 14 ತೋಗರ್ಮ ದೇಶದ ಜನರು ನೀನು ಮಾರುವ ವಸ್ತುಗಳಿಗೆ ಕುದುರೆ, ಯುದ್ಧದ ಕುದುರೆಗಳು, ಹೇಸರಕತ್ತೆಗಳನ್ನು ಬದಲಿಕೊಟ್ಟರು. 15 ರೋಧೆ ದ್ವೀಪದ ಜನರು ನಿನ್ನೊಂದಿಗೆ ವ್ಯಾಪಾರ ಮಾಡಿದರು. ನೀನು ಅನೇಕ ಕಡೆಗಳಲ್ಲಿ ವ್ಯಾಪಾರ ಮಾಡಿದಿ. ಜನರು ದಂತವನ್ನೂ ಬೀಟೆ ಮರಗಳನ್ನೂ ತಂದು ನಿನ್ನೊಂದಿಗೆ ವ್ಯಾಪಾರ ಮಾಡಿದರು. 16 ನಿನ್ನಲ್ಲಿ ಅನೇಕ ಬೆಲೆಬಾಳುವ ವಸ್ತುಗಳಿದ್ದುದರಿಂದ ಅರಾಮ್ ನಿನ್ನೊಂದಿಗೆ ವ್ಯಾಪಾರ ಮಾಡಿತು. ಅವರು ಇಂದ್ರನೀಲ, ಧೂಮ್ರ ಬಣ್ಣದ ಬಟ್ಟೆ, ಕಸೂತಿ ಕೆಲಸ, ನಯವಾದ ಬಟ್ಟೆ, ಹವಳ, ಕೆಂಪು ಹರಳು ಇತ್ಯಾದಿಗಳನ್ನು ಕೊಟ್ಟು ವಸ್ತುಗಳನ್ನು ನಿನ್ನಿಂದ ಕೊಂಡುಕೊಂಡರು.

17 “‘ಇಸ್ರೇಲ್ ಮತ್ತು ಯೆಹೂದ ದೇಶದವರು ನಿನ್ನೊಂದಿಗೆ ವ್ಯಾಪಾರ ಮಾಡಿದರು. ಅವರು ನಿನ್ನ ವಸ್ತುಗಳಿಗೆ ಗೋಧಿ, ಆಲೀವ್, ಅಂಜೂರ, ಜೇನು, ಎಣ್ಣೆ ಮತ್ತು ಮುಲಾಮುಗಳನ್ನು ಕೊಟ್ಟರು. 18 ದಮಸ್ಕವೂ ನಿನ್ನ ಒಳ್ಳೆಯ ಗಿರಾಕಿಯಾಗಿತ್ತು. ನೀನು ಸಂಪಾದಿಸಿಕೊಂಡಿದ್ದ ಅನೇಕ ಒಳ್ಳೆಯ ವಸ್ತುಗಳಿಗಾಗಿ ಅವರು ನಿನ್ನೊಂದಿಗೆ ವ್ಯಾಪಾರ ಮಾಡಿದರು. ಅವರು ಹೆಲ್ಬೋನಿನ ದ್ರಾಕ್ಷಾರಸವನ್ನು ಮತ್ತು ಉಣ್ಣೆಯನ್ನು ಆ ವಸ್ತುಗಳಿಗಾಗಿ ಮಾರಿದರು. 19 ಅಲ್ಲದೆ ಊಜಾಲಿನ ದ್ರಾಕ್ಷಾರಸವನ್ನು, ಉಕ್ಕನ್ನು, ದಾಲ್ಚಿನ್ನಿ ಮತ್ತು ಕಬ್ಬನ್ನು ಆ ವಸ್ತುಗಳಿಗಾಗಿ ವ್ಯಾಪಾರ ಮಾಡಿದರು. 20 ದೆದಾನಿನ ನಿನ್ನ ಜನರು ಒಳ್ಳೆಯ ವ್ಯಾಪಾರಸ್ಥರು. ಅವರು ಸವಾರಿ ಕುದುರೆಗಳನ್ನೂ ಜೇನನ್ನೂ ಬಟ್ಟೆಗಳನ್ನೂ ಕೊಟ್ಟು ಕೊಂಡುಕೊಂಡರು. 21 ಅರಾಬ್ಯರು ಮತ್ತು ಕೇದಾರಿನವರು ಕುರಿಮರಿಗಳನ್ನು, ಟಗರು ಮತ್ತು ಆಡುಗಳನ್ನು ಕೊಟ್ಟು ವ್ಯಾಪಾರ ಮಾಡಿದರು. 22 ಶೆಬ ಮತ್ತು ರಗ್ಮದ ವ್ಯಾಪಾರಿಗಳು ನಿನ್ನೊಂದಿಗೆ ವ್ಯಾಪಾರ ಮಾಡಿದರು. ಅವರು ನಿನಗೆ ಸಂಬಾರ ಜೀನಸು, ರತ್ನಗಳು ಮತ್ತು ಚಿನ್ನವನ್ನು ಬದಲಿಕೊಟ್ಟರು. 23 ಮತ್ತು ಹಾರಾನ್‌ಕನ್ನೆ, ಎದೆನ್, ಶೆಬದ ವ್ಯಾಪಾರಿಗಳು, ಅಶ್ಶೂರ್ ಮತ್ತು ಕಿಲ್ಮದ್ ಊರಿನವರು ನಿನ್ನೊಂದಿಗೆ ವ್ಯಾಪಾರ ಮಾಡಿದರು. 24 ಅವರು ನಿನ್ನೊಂದಿಗೆ ಉತ್ತಮ ಬಟ್ಟೆಗಳು, ಕಸೂತಿ ಕೆಲಸಗಳು, ಬಣ್ಣಬಣ್ಣದ ಜಮಖಾನೆಗಳು, ಹುರಿದ ಹಗ್ಗಗಳು, ದೇವದಾರು ಮರಗಳಿಂದ ಮಾಡಿದ ವಸ್ತುಗಳು ಇವುಗಳೊಂದಿಗೆ ವ್ಯಾಪಾರ ನಡಿಸಿದರು. 25 ತಾರ್ಷೀಷಿನ ಹಡಗುಗಳು ನೀನು ಮಾರಿದ ವಸ್ತುಗಳನ್ನು ಕೊಂಡೊಯ್ದವು.

“‘ತೂರೇ, ನೀನು ಆ ಸರಕು ಸಾಗಾಣಿಕೆಯ ಹಡಗುಗಳಂತಿರುವೆ.
ಸಮುದ್ರಮಧ್ಯದಲ್ಲಿ ಅನೇಕ ಐಶ್ವರ್ಯಗಳಿಂದ ತುಂಬಿದವಳಾಗಿದ್ದೀ.
26 ನಿನ್ನನ್ನು ಹುಟ್ಟುಹಾಕುವವರು ಸಮುದ್ರದ ಬಹುದೂರ ನಿನ್ನನ್ನು ನಡಿಸಿದರು.
    ಆದರೆ ಪೂರ್ವದಿಂದ ಬಂದ ಬಲವುಳ್ಳ ಗಾಳಿಯು ನಿನ್ನನ್ನು ಮುರಿಯುವದು.
27 ನಿನ್ನ ಎಲ್ಲಾ ಐಶ್ವರ್ಯವು, ನಿನ್ನ ದಿನಸುಗಳು,
    ನಿನ್ನ ಸರಕುಗಳು, ನಿನ್ನ ನಾವಿಕರು, ನಿನ್ನ ಅಂಬಿಗರು, ನಿನ್ನ ಕಿಂಡಿಗಳನ್ನು ಭದ್ರಪಡಿಸುವವರು,
ನಿನ್ನ ವ್ಯಾಪಾರಿಗಳು, ನಿನ್ನ ಎಲ್ಲಾ ಸೈನಿಕರು, ನಿನ್ನ ಎಲ್ಲಾ ಸಿಬ್ಬಂದಿ ವರ್ಗದವರು
    ನಾಶನದ ದಿನದಲ್ಲಿ ಸಮುದ್ರದೊಳಗೆ ಮುಳುಗಿಹೋಗುವರು.

28 “‘ನಿನ್ನ ವ್ಯಾಪಾರಿಗಳನ್ನು ನೀನು ಬಹುದೂರ ಕಳುಹಿಸುವೆ.
    ಆ ಸ್ಥಳಗಳು ನಿನ್ನ ಹಡಗಿನ ನಾವಿಕನ ಕೂಗಾಟವನ್ನು ಕೇಳಿ ಭಯದಿಂದ ತತ್ತರಿಸುವವು.
29 ಹಡಗಿನ ಎಲ್ಲಾ ನಾವಿಕರು ನೀರಿಗೆ
    ಧುಮುಕಿ ಈಜುತ್ತಾ ದಡ ಸೇರುವರು.
30 ನಿನಗೋಸ್ಕರ ಅವರು ದುಃಖಿಸುತ್ತಾ ಅಳುವರು;
    ತಲೆಯ ಮೇಲೆ ಧೂಳನ್ನು ತೂರಿಕೊಂಡು ಬೂದಿರಾಶಿಯ ಮೇಲೆ ಹೊರಳಾಡುವರು.
31 ನಿನಗಾಗಿ ಶೋಕದಿಂದ ತಮ್ಮ ತಲೆಗಳನ್ನು ಬೋಳಿಸುವರು.
    ಶೋಕದ ಬಟ್ಟೆಗಳನ್ನು ಧರಿಸುವರು.
ತಮ್ಮ ಪ್ರಿಯರು ಸತ್ತಾಗ ಅಳುವಂತೆ ನಿನಗಾಗಿ ಅಳುವರು.

32 “‘ಅಳುತ್ತಾ ನಿನಗೆ ಈ ಶೋಕಗೀತೆಯನ್ನು ಹಾಡುವರು:

“‘ತೂರಿನಂತೆ ಯಾರಿಲ್ಲ.
    ಆದರೆ ತೂರ್ ಹಾಳಾಗಿಹೋಯಿತು, ಸಮುದ್ರ ಮಧ್ಯದಲ್ಲಿ ನಾಶವಾಯಿತು.
33 ನಿನ್ನ ವ್ಯಾಪಾರಿಗಳು ಸಮುದ್ರದಾಚೆ ಹೋದರು;
ನೀನು ಅನೇಕರನ್ನು ತೃಪ್ತಿಗೊಳಿಸಿದಿ.
ನಿನ್ನ ಐಶ್ವರ್ಯದಿಂದಲೂ ನೀನು ಮಾರಿದ ಸರಕುಗಳಿಂದಲೂ
    ನೀನು ಲೋಕದ ರಾಜರನ್ನು ಐಶ್ವರ್ಯವಂತರನ್ನಾಗಿ ಮಾಡಿದಿ.
34 ನೀನು ಈಗ ಸಮುದ್ರದ ನೀರಿನಿಂದ ಮುರಿದುಬಿದ್ದಿರುವೆ.
    ಆಳವಾದ ನೀರಿನಲ್ಲಿ ಮುಳುಗಿಸಲ್ಪಟ್ಟಿರುವೆ.
ನೀನು ಮಾರುವ ಸರಕುಗಳೂ
    ನಿನ್ನ ಜನರೂ ಬಿದ್ದುಹೋದರು.
35 ಕರಾವಳಿಯಲ್ಲಿ ವಾಸಿಸುವ ಜನರೆಲ್ಲರೂ
    ನಿನ್ನ ವಾರ್ತೆಯನ್ನು ಕೇಳಿ ಚಕಿತರಾದರು.
ಅವರ ರಾಜರು ದಂಗುಬಡಿದವರಾಗಿ ಭಯಭೀತರಾಗುವರು.
36 ಬೇರೆ ದೇಶಗಳಲ್ಲಿರುವ ವ್ಯಾಪಾರಿಗಳು
    ಆಶ್ಚರ್ಯದಿಂದ ಸಿಳ್ಳು ಹಾಕಿದರು.
ನಿನಗೆ ಸಂಭವಿಸಿದ ವಿಷಯಗಳು ಜನರಿಗೆ ಭೀತಿಯನ್ನುಂಟುಮಾಡಿತು.
    ಯಾಕೆಂದರೆ ನಿನ್ನ ಕಥೆ ಮುಗಿಯಿತು.
    ನಿನಗೆ ಅಂತ್ಯವಾಯಿತು. ಇನ್ನು ನೀನು ಕಾಣುವದಿಲ್ಲ.’”

ಕೀರ್ತನೆಗಳು 75-76

ಸ್ತುತಿಗೀತೆ. ರಚನೆಗಾರ: ಆಸಾಫ.

75 ದೇವರೇ, ನಿನ್ನನ್ನು ಕೊಂಡಾಡುವೆವು!
    ನಿನ್ನ ಹೆಸರನ್ನು ಸ್ತುತಿಸುವೆವು; ಯಾಕೆಂದರೆ ನೀನು ನನ್ನ ಸಾಮಿಪ್ಯದಲ್ಲಿರುವೆ;
    ನಿನ್ನ ಮಹತ್ಕಾರ್ಯಗಳ ಬಗ್ಗೆ ಜನರು ಹೇಳುತ್ತಲೇ ಇದ್ದಾರೆ.

ದೇವರು ಹೀಗೆನ್ನುತ್ತಾನೆ: “ನಾನು ನ್ಯಾಯತೀರ್ಪಿಗಾಗಿ ತಕ್ಕ ಸಮಯವನ್ನು ಗೊತ್ತುಪಡಿಸುವೆ;
    ನಾನು ನೀತಿಯಿಂದಲೇ ತೀರ್ಪುಕೊಡುವೆ.
ಭೂಮಿಯು ಅದರ ಮೇಲಿರುವ ಸಮಸ್ತದೊಡನೆ ನಡುಗುತ್ತಿದ್ದರೂ
    ಭೂಸ್ತಂಭಗಳನ್ನು ಸ್ಥಿರಗೊಳಿಸುವಾತನು ನಾನೇ.

4-5 “ಗರ್ವಿಷ್ಠರೇ, ‘ಕೊಚ್ಚಿಕೊಳ್ಳಬೇಡಿ’ ದುಷ್ಟರೇ, ‘ಅಹಂಕಾರ ಪಡಬೇಡಿ!
    ಸೊಕ್ಕಿನ ಕುತ್ತಿಗೆಯಿಂದ ಮಾತಾಡಬೇಡಿ’” ಎಂದು ಹೇಳುವೆನು.

ಭೂಲೋಕದ ಯಾವ ಶಕ್ತಿಯೂ
    ಮನುಷ್ಯನನ್ನು ಉದ್ಧಾರ ಮಾಡಲಾರದು.
ನ್ಯಾಯಾಧಿಪತಿಯು ದೇವರೇ.
    ಯಾರನ್ನು ಉದ್ಧಾರಮಾಡಬೇಕು ಎಂಬ ನಿರ್ಣಯವನ್ನು ತೆಗೆದುಕೊಳ್ಳುವಾತನು ದೇವರೇ.
    ದೇವರು ಒಬ್ಬನನ್ನು ಉನ್ನತಿಗೇರಿಸುವನು; ಮತ್ತೊಬ್ಬನನ್ನು ಅವನತಿಗಿಳಿಸುವನು.
ಯೆಹೋವನ ಕೈಯಲ್ಲಿ ಪಾತ್ರೆಯಿದೆ.
    ಆ ಪಾತ್ರೆಯು ವಿಷ ದ್ರಾಕ್ಷಾರಸದಿಂದ ತುಂಬಿದೆ.
ಆತನು ದಂಡನೆಯೆಂಬ ಆ ವಿಷ ದ್ರಾಕ್ಷಾರಸವನ್ನು ಸುರಿಯುವನು;
    ದುಷ್ಟರು ಕೊನೆಯ ತೊಟ್ಟಿನವರೆಗೂ ಅದನ್ನು ಕುಡಿಯುವರು!
ನಾನು ಇವುಗಳ ಬಗ್ಗೆ ಜನರಿಗೆ ಹೇಳುತ್ತಲೇ ಇರುವೆನು;
    ಇಸ್ರೇಲರ ದೇವರನ್ನು ಸಂಕೀರ್ತಿಸುವೆನು.
10 ದುಷ್ಟರಿಂದ ಅಧಿಕಾರವನ್ನು ಕಿತ್ತುಕೊಂಡು
    ಒಳ್ಳೆಯವರಿಗೆ ಅದನ್ನು ಒಪ್ಪಿಸಿಕೊಡುವೆನು.

ಸ್ತುತಿಗೀತೆ. ರಚನೆಗಾರ: ಆಸಾಪ.

76 ಯೆಹೂದದ ಜನರು ದೇವರನ್ನು ಬಲ್ಲವರೇ ಸರಿ!
    ಇಸ್ರೇಲಿನ ಜನರು ಆತನ ನಾಮವನ್ನು ಗೌರವಿಸುವರು.
ಆತನ ಗುಡಾರವು ಸಾಲೇಮಿನಲ್ಲಿದೆ.
    ಆತನ ಆಲಯವು ಸಿಯೋನ್ ಬೆಟ್ಟದ ಮೇಲಿದೆ.
ಆ ಸ್ಥಳದಲ್ಲಿ ದೇವರು ಬಿಲ್ಲುಬಾಣಗಳನ್ನೂ ಗುರಾಣಿಗಳನ್ನೂ
    ಖಡ್ಗಗಳನ್ನೂ ಇತರ ಯುದ್ಧಾಯುಧಗಳನ್ನೂ ನುಚ್ಚುನೂರು ಮಾಡಿದ್ದಾನೆ.

ದೇವರೇ, ಶತ್ರುಗಳನ್ನು ಸೋಲಿಸಿ
    ಬೆಟ್ಟಗಳಿಂದ ಇಳಿದುಬರುವಾಗ ನೀನು ತೇಜೋಮಯನಾಗಿರುವೆ.
ಆ ಸೈನಿಕರು ತಾವೇ ಶಕ್ತಿವಂತರೆಂದುಕೊಂಡಿದ್ದರು.
    ಆದರೆ ಈಗ ಅವರು ಬಯಲುಗಳಲ್ಲಿ ಸತ್ತುಬಿದ್ದಿದ್ದಾರೆ.
ಅವರು ಧರಿಸಿಕೊಂಡಿದ್ದವುಗಳನ್ನೆಲ್ಲ ಸುಲಿಗೆ ಮಾಡಲಾಗಿದೆ.
    ಆ ಸೈನಿಕರಲ್ಲಿ ಯಾರೂ ತಮ್ಮನ್ನು ಸಂರಕ್ಷಿಸಿಕೊಳ್ಳಲಾಗಲಿಲ್ಲ.
ಯಾಕೋಬನ ದೇವರು ಆ ಸೈನಿಕರನ್ನು ಗದರಿಸಲು
    ರಥಾಶ್ವಗಳ ಸೇನೆಯು ಮೂರ್ಛೆಗೊಂಡಿತು.
ದೇವರೇ, ನೀನು ಭಯಂಕರನೇ ಸರಿ!
    ನೀನು ಕೋಪಗೊಂಡಿರುವಾಗ ನಿನಗೆ ವಿರೋಧವಾಗಿ ಯಾರು ನಿಂತುಕೊಳ್ಳಬಲ್ಲರು?
ಯೆಹೋವನು ಎದ್ದುನಿಂತು
    ತನ್ನ ನ್ಯಾಯತೀರ್ಪನ್ನು ಪ್ರಕಟಿಸಿದನು.
ದೇವರು ಲೋಕದ ದೀನರನ್ನು ರಕ್ಷಿಸಿದನು.
    ಆತನು ಪರಲೋಕದಿಂದ ತೀರ್ಮಾನ ನೀಡುತ್ತಿರಲು ಭೂಲೋಕವೆಲ್ಲಾ ಭಯದಿಂದ ಸ್ತಬ್ಧವಾಯಿತು.
10 ದೇವರೇ, ನೀನು ದುಷ್ಟರನ್ನು ದಂಡಿಸುವಾಗ ಜನರು ನಿನ್ನನ್ನು ಕೊಂಡಾಡುವರು;
    ನಿನ್ನ ಕೋಪವನ್ನು ತೋರಿಸುವಾಗ ಅಳಿದುಳಿದವರು ಬಲಿಷ್ಠರಾಗುವರು.

11 ದೇವರಾದ ಯೆಹೋವನಿಗೆ ಹರಕೆಗಳನ್ನು ಮಾಡಿದವರೇ,
    ನಿಮ್ಮ ಹರಕೆಗಳನ್ನು ಸಲ್ಲಿಸಿರಿ.
ಸರ್ವಭೂನಿವಾಸಿಗಳೇ, ದೇವರಲ್ಲಿ ಭಯಭಕ್ತಿಯುಳ್ಳವರಾಗಿರಿ.
12 ಆತನು ಮಹಾನಾಯಕರುಗಳನ್ನು ಸೋಲಿಸುವನು.
    ಭೂರಾಜರುಗಳೆಲ್ಲಾ ಆತನಿಗೆ ಭಯಪಡುವರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International