M’Cheyne Bible Reading Plan
ದಾವೀದನ ಬಗ್ಗೆ ಅಹೀತೋಫೆಲನ ಸಲಹೆ
17 ಅಹೀತೋಫೆಲನು, “ಈಗ ನಾನು ಹನ್ನೆರಡು ಸಾವಿರ ಜನರನ್ನು ಆರಿಸಿಕೊಂಡು ಈ ರಾತ್ರಿಯೇ ದಾವೀದನನ್ನು ಅಟ್ಟಿಸಿಕೊಂಡು ಹೋಗುತ್ತೇನೆ. 2 ಅವನು ಆಯಾಸದಿಂದ ಬಲಹೀನನಾದಾಗ ಅವನ ಮೇಲೆ ದಾಳಿಮಾಡಿ ಹೆದರಿಸುವೆನು; ಆಗ ಅವನ ಜನರೆಲ್ಲರೂ ಓಡಿಹೋಗುತ್ತಾರೆ. ಆದರೆ ನಾನು ರಾಜನಾದ ದಾವೀದನನ್ನು ಮಾತ್ರ ಕೊಲ್ಲುತ್ತೇನೆ. 3 ಅನಂತರ ನಾನು ಜನರೆಲ್ಲರನ್ನೂ ಹಿಂದಕ್ಕೆ ನಿನ್ನ ಬಳಿಗೆ ಕರೆತರುತ್ತೇನೆ. ದಾವೀದನು ಸತ್ತರೆ, ಜನರೆಲ್ಲರೂ ಸಮಾಧಾನದಿಂದ ಹಿಂದಕ್ಕೆ ಬರುತ್ತಾರೆ” ಎಂದು ಅಬ್ಷಾಲೋಮನಿಗೆ ಹೇಳಿದನು.
4 ಈ ಉಪಾಯವು ಅಬ್ಷಾಲೋಮನಿಗೆ ಮತ್ತು ಇಸ್ರೇಲಿನ ನಾಯಕರಿಗೆಲ್ಲ ಸರಿಯೆಂದು ಕಂಡಿತು. 5 ಆದರೆ ಅಬ್ಷಾಲೋಮನು, “ಈಗ ಅರ್ಕೀಯನಾದ ಹೂಷೈಯನನ್ನು ಕರೆಯಿರಿ. ಅವನು ಏನು ಹೇಳುತ್ತಾನೆಂಬುದನ್ನು ನಾನು ಕೇಳಬೇಕಾಗಿದೆ” ಎಂದು ಹೇಳಿದನು.
ಅಹೀತೋಫೆಲನ ಸಲಹೆಯನ್ನು ಹೂಷೈ ನಿರರ್ಥಕಗೊಳಿಸಿದ್ದು
6 ಹೂಷೈಯು ಅಬ್ಷಾಲೋಮನ ಬಳಿಗೆ ಬಂದನು. ಅಬ್ಷಾಲೋಮನು ಹೂಷೈಗೆ, “ಇದು ಅಹೀತೋಫೆಲನು ನೀಡಿದ ಉಪಾಯ. ಇದನ್ನು ನಾವು ಅನುಸರಿಸಬೇಕೇ? ಅಥವಾ ಅನುಸರಿಸಬಾರದೆ? ನಮಗೆ ತಿಳಿಸು.” ಎಂದನು.
7 ಹೂಷೈಯು ಅಬ್ಷಾಲೋಮನಿಗೆ, “ಈ ಸಮಯದಲ್ಲಿ ಅಹೀತೋಫೆಲನ ಸಲಹೆಯು ಸರಿಯಲ್ಲ” ಎಂದು ಹೇಳಿದನು. 8 ಅವನು ಮಾತನ್ನು ಮುಂದುವರಿಸಿ, “ನಿನ್ನ ತಂದೆಯು ಮತ್ತು ಅವನ ಜನರು ಶೂರರೆಂಬುದು ನಿನಗೆ ತಿಳಿದಿದೆ. ಕಾಡಿನಲ್ಲಿ ತನ್ನ ಮರಿಗಳನ್ನು ಕಳೆದುಕೊಂಡ ಕರಡಿಯಂತೆ ಅವರು ರೋಷವುಳ್ಳವರಾಗಿದ್ದಾರೆ. ನಿನ್ನ ತಂದೆಯು ಒಬ್ಬ ನುರಿತ ಹೋರಾಟಗಾರ. ಅವನು ಜನರೊಂದಿಗೆ ರಾತ್ರಿಯಲ್ಲಿ ಇರುವುದಿಲ್ಲ. 9 ಈಗಾಗಲೇ ಅವನು ಒಂದು ಗವಿಯಲ್ಲಾಗಲಿ ಇಲ್ಲವೆ ಬೇರೆ ಯಾವ ಸ್ಥಳದಲ್ಲಾಗಲಿ ಅಡಗಿಕೊಂಡಿರಬಹುದು. ನಿನ್ನ ತಂದೆಯು ನಿನ್ನ ಜನರ ಮೇಲೆ ಆಕ್ರಮಣ ಮಾಡಿದರೆ, ಆಗ ಜನರಿಗೆ ಸುದ್ದಿಯು ತಿಳಿಯುತ್ತದೆ. ‘ಅಬ್ಷಾಲೋಮನ ಹಿಂಬಾಲಕರು ಸೋಲುತ್ತಿದ್ದಾರೆ’ ಎಂದು ಅವರು ಯೋಚಿಸುತ್ತಾರೆ. 10 ಆಗ ಸಿಂಹದಂತೆ ಶೂರರಾದ ಜನರು ಸಹ ಹೆದರಿಕೊಳ್ಳುತ್ತಾರೆ. ಏಕೆಂದರೆ ನಿನ್ನ ತಂದೆಯು ರಣವೀರನೆಂದು ಮತ್ತು ಅವನ ಜನರು ಧೈರ್ಯಶಾಲಿಗಳೆಂದು ತಿಳಿದಿದೆ.
11 “ನನ್ನ ಸಲಹೆ ಹೀಗಿದೆ: ನೀನು ದಾನ್‌ನಿಂದ ಬೇರ್ಷೆಬದವರೆಗಿನ ಇಸ್ರೇಲರನ್ನೆಲ್ಲ ಒಟ್ಟುಗೂಡಿಸು. ಆಗ ಸಮುದ್ರ ತೀರದ ಮರಳಿನ ಕಣಗಳಂತೆ ಅಲ್ಲಿ ಅನೇಕ ಜನರಿರುತ್ತಾರೆ. ನೀನೇ ಸ್ವತಃ ಯುದ್ಧರಂಗಕ್ಕೆ ಹೋಗಬೇಕು. 12 ದಾವೀದನನ್ನು ಅವನು ಅಡಗಿಕೊಂಡಿರುವ ಸ್ಥಳದಲ್ಲಿಯೇ ನಾವು ಹಿಡಿದುಕೊಳ್ಳುತ್ತೇವೆ. ಮಂಜಿನ ಹನಿಗಳು ಭೂಮಿಯ ಮೇಲೆ ಬೀಳುವಂತೆ ನಾವು ದಾವೀದನ ಮೇಲೆ ಬೀಳುವೆವು. ದಾವೀದನನ್ನು ಮತ್ತು ಅವನ ಜನರೆಲ್ಲರನ್ನು ನಾವು ಕೊಲ್ಲುವೆವು. ಯಾರನ್ನೂ ಜೀವಸಹಿತ ಬಿಡುವುದಿಲ್ಲ. 13 ಆದರೆ ದಾವೀದನು ತಪ್ಪಿಸಿಕೊಂಡು ಬಂದು ನಗರಕ್ಕೆ ನುಗ್ಗಿದರೆ, ಇಸ್ರೇಲರೆಲ್ಲ ಆ ನಗರದ ಹತ್ತಿರಕ್ಕೆ ಹಗ್ಗಗಳನ್ನು ತರುತ್ತಾರೆ. ನಾವು ಆ ನಗರದ ಗೋಡೆಗಳನ್ನು ಕಣಿವೆಯ ಆಳಕ್ಕೆ ಎಳೆದು ಬಿಡುತ್ತೇವೆ. ಆ ನಗರದಲ್ಲಿ ಒಂದು ಸಣ್ಣ ಕಲ್ಲು ಸಹ ಉಳಿಯಲು ಬಿಡುವುದಿಲ್ಲ” ಎಂದು ಹೇಳಿದನು.
14 ಅಬ್ಷಾಲೋಮನು ಮತ್ತು ಇಸ್ರೇಲರೆಲ್ಲ, “ಅರ್ಕೀಯನಾದ ಹೂಷೈಯನ ಸಲಹೆಯು ಅಹೀತೋಫೆಲನ ಸಲಹೆಗಿಂತ ಉತ್ತಮವಾಗಿದೆ” ಎಂದು ಹೇಳಿದರು. ಇದು ಯೆಹೋವನ ಯೋಜನೆಯಾಗಿದ್ದ ಕಾರಣ ಅವರು ಹಾಗೆ ಹೇಳಿದರು. ಅಹೀತೋಫೆಲನ ಒಳ್ಳೆಯ ಸಲಹೆಯನ್ನು ನಾಶಗೊಳಿಸಲು ಯೆಹೋವನು ಈ ಯೋಜನೆಯನ್ನು ಮಾಡಿದ್ದನು. ಹೀಗೆ ಯೆಹೋವನು ಅಬ್ಷಾಲೋಮನನ್ನು ದಂಡಿಸಲಿದ್ದನು.
ದಾವೀದನಿಗೆ ಹೂಷೈನ ಎಚ್ಚರಿಕೆ
15 ಹೂಷೈಯು ಯಾಜಕರಾದ ಚಾದೋಕನಿಗೆ ಮತ್ತು ಎಬ್ಯಾತಾರನಿಗೆ ಆ ವಿಚಾರಗಳನ್ನು ಹೇಳಿದನು. ಅಬ್ಷಾಲೋಮನಿಗೆ ಮತ್ತು ಇಸ್ರೇಲಿನ ನಾಯಕರಿಗೆ ಅಹೀತೋಫೆಲನು ಮಾಡಿದ ಸಲಹೆಗಳ ವಿಚಾರವನ್ನು ಮತ್ತು ತಾನು ನೀಡಿದ ಸಲಹೆಗಳ ವರದಿಯನ್ನು, ಚಾದೋಕ ಮತ್ತು ಎಬ್ಯಾತಾರನಿಗೆ ತಿಳಿಸಿದನು. 16 ಹೂಷೈಯು ಅವರಿಗೆ, ನೀವು ದಾವೀದನಿಗೆ ಹೀಗೆ ಹೇಳಿರಿ: “ಈ ರಾತ್ರಿ ನದಿಯನ್ನು ದಾಟುವ ಅಡವಿಯಲ್ಲಿ ತಂಗಬೇಡ, ಆದಷ್ಟು ಬೇಗನೆ ನದಿಯನ್ನು ದಾಟಿ ಆಚೆ ಹೋದರೆ ಒಳ್ಳೆಯದು. ಇಲ್ಲವಾದರೆ ನೀನು ನಿನ್ನ ಜನರೊಂದಿಗೆ ನಾಶವಾಗುವೆ” ಎಂದು ಹೇಳಿದನು.
17 ಯಾಜಕರ ಮಕ್ಕಳಾದ ಯೋನಾತಾನನು ಮತ್ತು ಅಹೀಮಾಚನು ಎನ್-ರೋಗೆಲಿನ ಬುಗ್ಗೆಯ ಹತ್ತಿರ ಕಾದಿದ್ದರು. ತಾವು ನಗರದೊಳಕ್ಕೆ ಹೋಗುವುದನ್ನು ಯಾರೂ ನೋಡಬಾರದೆಂದು ಅವರು ಅಲ್ಲಿ ಅಡಗಿಕೊಂಡಿದ್ದರು. ಆದ್ದರಿಂದ ಕೆಲಸದ ಹುಡುಗಿಯೊಬ್ಬಳು ಹೊರಗೆ ಬಂದು ಅವರಿಗೆ ಆ ಸಂದೇಶವನ್ನು ತಿಳಿಸಿದಳು. ಬಳಿಕ ಯೋನಾತಾನನು ಮತ್ತು ಅಹೀಮಾಚನು ದಾವೀದ ರಾಜನ ಬಳಿಗೆ ಹೋಗಿ ಅದನ್ನು ತಿಳಿಸಿದರು.
18 ಆದರೆ ಯೋನಾತಾನ್ ಮತ್ತು ಅಹೀಮಾಚರನ್ನು ಒಬ್ಬ ಬಾಲಕನು ನೋಡಿದನು. ಆ ಬಾಲಕನು ಅಬ್ಷಾಲೋಮನಿಗೆ ತಿಳಿಸಲು ಓಡಿದನು. ಯೋನಾತಾನನು ಮತ್ತು ಅಹೀಮಾಚನು ಬೇಗನೆ ಓಡಿಹೋಗಿ ಬಹುರೀಮಿನಲ್ಲಿ ಒಬ್ಬನ ಮನೆಯೊಳಗೆ ಹೋದರು. ಅವನ ಮನೆಯ ಅಂಗಳದಲ್ಲಿ ಒಂದು ಬಾವಿಯಿತ್ತು. ಯೋನಾತಾನನು ಮತ್ತು ಅಹೀಮಾಚನು ಈ ಬಾವಿಯೊಳಗೆ ಇಳಿದರು. 19 ಆ ಮನುಷ್ಯನ ಹೆಂಡತಿಯು ಒಂದು ಹಲಗೆಯನ್ನು ಬಾವಿಯ ಮೇಲೆ ಹಾಕಿದಳು. ನಂತರ ಅವಳು ಅದರ ಮೇಲೆ ಗೋಧಿಯನ್ನು ಹರಡಿದಳು. ಅದು ಗೋಧಿಯ ರಾಶಿಯಂತೆ ಕಂಡಿತು. ಆದ್ದರಿಂದ ಯೋನಾತಾನನು ಮತ್ತು ಅಹೀಮಾಚರು ಅಲ್ಲಿ ಅಡಗಿಕೊಂಡಿದ್ದಾರೆಂಬುದು ಯಾರಿಗೂ ಗೊತ್ತಾಗಲಿಲ್ಲ. 20 ಅಬ್ಷಾಲೋಮನ ಸೇವಕರು ಆ ಮನೆಯಲ್ಲಿದ್ದ ಹೆಂಗಸಿನ ಬಳಿಗೆ ಬಂದು, “ಅಹೀಮಾಚ್ ಮತ್ತು ಯೋನಾತಾನರು ಎಲ್ಲಿ?” ಎಂದು ಕೇಳಿದರು.
ಆ ಸ್ತ್ರೀಯು ಅಬ್ಷಾಲೋಮನ ಸೇವಕರಿಗೆ, “ಅವರು ಈಗಾಗಲೇ ಹಳ್ಳವನ್ನು ದಾಟಿಹೋಗಿರಬೇಕು” ಎಂದಳು.
ಆಗ ಅಬ್ಷಾಲೋಮನ ಸೇವಕರು ಯೋನಾತಾನ್ ಮತ್ತು ಅಹೀಮಾಚರನ್ನು ಹುಡುಕಲು ಹೋದರು. ಆದರೆ ಅವರು ಸೇವಕರಿಗೆ ಸಿಗಲಿಲ್ಲ. ಆದ್ದರಿಂದ ಅಬ್ಷಾಲೋಮನ ಸೇವಕರು ಜೆರುಸಲೇಮಿಗೆ ಹಿಂದಿರುಗಿದರು.
21 ಅಬ್ಷಾಲೋಮನ ಸೈನಿಕರು ಹೋದ ಮೇಲೆ ಯೋನಾತಾನ್ ಮತ್ತು ಅಹೀಮಾಚರು ಬಾವಿಯಿಂದ ಮೇಲಕ್ಕೆ ಬಂದರು. ಅವರು ಅರಸನಾದ ದಾವೀದನ ಬಳಿಗೆ ಹೋಗಿ, “ಬೇಗ, ನದಿಯನ್ನು ದಾಟಿಹೋಗು. ಅಹೀತೋಫೆಲನು ನಿನ್ನ ವಿರುದ್ಧವಾಗಿ ಈ ಸಂಗತಿಗಳನ್ನು ಹೇಳಿದ್ದಾನೆ” ಎಂದರು.
22 ದಾವೀದನು ಮತ್ತು ಅವನ ಜನರೆಲ್ಲರೂ ಜೋರ್ಡನ್ ನದಿಯನ್ನು ದಾಟಿಹೋದರು. ಸೂರ್ಯನು ಮೇಲೇರುವುದಕ್ಕೆ ಮುಂಚೆಯೇ, ದಾವೀದನ ಜನರೆಲ್ಲರೂ ಜೋರ್ಡನ್ ನದಿಯನ್ನು ದಾಟಿಹೋಗಿದ್ದರು.
ಅಹೀತೋಫೆಲನು ಆತ್ಮಹತ್ಯೆ ಮಾಡಿಕೊಂಡಿದ್ದು
23 ಅಹೀತೋಫೆಲನು ತನ್ನ ಸಲಹೆಯನ್ನು ಇಸ್ರೇಲರು ಸ್ವೀಕರಿಸಲಿಲ್ಲವೆಂಬುದನ್ನು ತಿಳಿದು ತನ್ನ ಹೇಸರಕತ್ತೆಯ ಮೇಲೆ ತಡಿಯನ್ನು ಹಾಕಿ ತನ್ನ ಸ್ವಂತ ಊರಿನಲ್ಲಿದ್ದ ಮನೆಗೆ ಹೋದನು. ಅವನು ತನ್ನ ಕುಟುಂಬಕ್ಕೆ ಯೋಜನೆಗಳನ್ನು ಮಾಡಿದನು. ನಂತರ ಅವನೇ ನೇಣು ಹಾಕಿಕೊಂಡು ಸತ್ತನು. ಅಹೀತೋಫೆಲನನ್ನು ಜನರು ಅವನ ತಂದೆಯ ಸಮಾಧಿಯ ಬಳಿ ಸಮಾಧಿ ಮಾಡಿದರು.
ಅಬ್ಷಾಲೋಮನು ಜೋರ್ಡನ್ ನದಿಯನ್ನು ದಾಟಿದ್ದು
24 ದಾವೀದನು ಮಹನಯಿಮಿಗೆ ಬಂದನು. ಅಬ್ಷಾಲೋಮನು ಮತ್ತು ಇಸ್ರೇಲರೆಲ್ಲರೂ ಜೋರ್ಡನ್ ನದಿಯನ್ನು ದಾಟಿದರು. 25 ಅಬ್ಷಾಲೋಮನು ಅಮಾಸನನ್ನು ಸೈನ್ಯದ ಅಧಿಪತಿಯನ್ನಾಗಿ ಮಾಡಿದನು. ಅಮಾಸನು ಯೋವಾಬನ ಸ್ಥಾನಕ್ಕೆ ಬಂದನು.[a] ಅಮಾಸನು ಇಸ್ರೇಲನಾದ ಇತ್ರನ ಮಗ. ಅಮಾಸನ ತಾಯಿಯಾದ ಅಬೀಗಲಳು, ನಾಹಾಷನ ಮಗಳು ಮತ್ತು ಚೆರೂಯಳ ಸೋದರಿ. 26 ಅಬ್ಷಾಲೋಮನು ಮತ್ತು ಇಸ್ರೇಲರು ಗಿಲ್ಯಾದ್ ದೇಶದಲ್ಲಿ ಪಾಳೆಯವನ್ನು ಮಾಡಿದರು.
ಶೋಬಿ, ಮಾಕೀರ್ ಮತ್ತು ಬರ್ಜಿಲ್ಲೈಯರು
27 ದಾವೀದನು ಮಹನಯಿಮಿಗೆ ಬಂದನು. ಶೋಬಿ, ಮಾಕೀರ್ ಮತ್ತು ಬರ್ಜಿಲ್ಲೈಯರು ಆ ಸ್ಥಳದಲ್ಲಿದ್ದರು. (ಶೋಬಿಯು ಅಮ್ಮೋನಿಯರ ಪಟ್ಟಣವಾದ ರಬ್ಬಾದ ಊರಿನ ನಾಹಾಷನ ಮಗ. ಮಾಕೀರನು ಲೋದೆಬಾರಿನ ಅಮ್ಮೀಯೇಲನ ಮಗ. ಬರ್ಜಿಲ್ಲೈಯು ಗಿಲ್ಯಾದ್ ನಾಡಿನ ರೋಗೆಲೀಮ್ ನಗರದವನು.) 28-29 ಅವರು, “ಅರಣ್ಯದಲ್ಲಿ ಪ್ರಯಾಣಮಾಡಿ ಜನರು ದಣಿದಿದ್ದಾರೆ, ಹಸಿದಿದ್ದಾರೆ ಮತ್ತು ದಾಹಗೊಂಡಿದ್ದಾರೆ” ಎಂದು ಹೇಳಿ, ದಾವೀದನಿಗೂ ಅವನ ಜನರಿಗೂ ತಿನ್ನಲು ಅನೇಕ ಆಹಾರಪದಾರ್ಥಗಳನ್ನು ತಂದರು. ಅವರು ಹಾಸಿಗೆಗಳನ್ನು, ಬಟ್ಟಲುಗಳನ್ನು ಮತ್ತು ಮಡಕೆಕುಡಿಕೆಗಳನ್ನು, ಗೋಧಿ, ಬಾರ್ಲಿ, ಹಿಟ್ಟು, ಹುರಿದಕಾಳುಗಳು, ಅವರೆ, ಅಲಸಂದಿ, ಒಣಗಿಸಿದ ಬೇಳೆ, ಜೇನುತುಪ್ಪ, ಬೆಣ್ಣೆ, ಕುರಿ ಮತ್ತು ಹಸುವಿನ ಹಾಲಿನಿಂದ ಮಾಡಿದ ಗಿಣ್ಣು ಇವುಗಳನ್ನು ತಂದುಕೊಟ್ಟರು.
ತನ್ನ ಸೇವೆಯ ಕುರಿತು ಪೌಲನ ಪ್ರತಿವಾದ
10 ಪೌಲನಾದ ನಾನು ಕ್ರಿಸ್ತನ ಮೃದುಸ್ವಭಾವದಿಂದಲೂ ಕನಿಕರದಿಂದಲೂ ನಿಮ್ಮನ್ನು ಬೇಡಿಕೊಳ್ಳುತ್ತಿದ್ದೇನೆ. ನಾನು ನಿಮ್ಮೊಂದಿಗಿರುವಾಗ ದೀನನಾಗಿರುತ್ತೇನೆಂದೂ, ನಿಮ್ಮಿಂದ ದೂರದಲ್ಲಿರುವಾಗ ಧೀರನಾಗಿರುತ್ತೇನೆಂದೂ ಕೆಲವರು ಹೇಳುತ್ತಾರೆ. 2 ನಾವು ಲೌಕಿಕರಂತೆ ಜೀವಿಸುತ್ತೇವೆಂದು ಕೆಲವರು ಯೋಚಿಸುತ್ತಾರೆ. ನಾನು ಬಂದಾಗ ಅವರ ವಿರೋಧವಾಗಿ ಬಹು ದಿಟ್ಟತನದಿಂದಿರಬೇಕೆಂದು ಯೋಚಿಸಿಕೊಂಡಿದ್ದೇನೆ. ಆದರೆ ನಿಮಗೂ ಅದೇ ದಿಟ್ಟತನವನ್ನು ಉಪಯೋಗಿಸುವ ಅಗತ್ಯತೆ ಇಲ್ಲದಿರಲಿ ಎಂದು ನಿಮ್ಮನ್ನು ಬೇಡಿಕೊಳ್ಳುತ್ತಿದ್ದೇನೆ. 3 ನಾವು ಪ್ರಪಂಚದಲ್ಲಿ ಜೀವಿಸುತ್ತಿದ್ದೇವೆ. ಆದರೆ ಪ್ರಪಂಚದವರು ಹೊಡೆದಾಡುವ ರೀತಿಯಲ್ಲಿ ನಾವು ಹೊಡೆದಾಡುವುದಿಲ್ಲ. 4 ಪ್ರಪಂಚದವರು ಉಪಯೋಗಿಸುವ ಆಯುಧಗಳಿಗೆ ತದ್ವಿರುದ್ಧವಾದ ಆಯುಧಗಳೊಂದಿಗೆ ನಾವು ಹೋರಾಡುತ್ತೇವೆ. ನಮ್ಮ ಆಯುಧಗಳು ದೇವರ ಶಕ್ತಿಯನ್ನು ಹೊಂದಿವೆ. ಅವು ಶತ್ರುವಿನ ಬಲವಾದ ಕೋಟೆಗಳನ್ನು ನಾಶ ಮಾಡಬಲ್ಲವು. ನಾವು ಜನರ ವಾದಗಳನ್ನು ನಾಶಮಾಡುತ್ತೇವೆ. 5 ದೇವರ ಜ್ಞಾನಕ್ಕೆ ವಿರೋಧವಾಗಿ ಎದ್ದೇಳುವ ಪ್ರತಿಯೊಂದು ಗರ್ವದ ಸಂಗತಿಯನ್ನು ನಾಶಮಾಡುತ್ತೇವೆ; ಪ್ರತಿಯೊಂದು ಯೋಚನೆಯನ್ನು ಸ್ವಾಧೀನಪಡಿಸಿಕೊಂಡು ಅವುಗಳನ್ನು ಪರಿವರ್ತಿಸಿ ಕ್ರಿಸ್ತನಿಗೆ ವಿಧೇಯರಾಗುವಂತೆ ಮಾಡುತ್ತೇವೆ. 6 ನಿಮ್ಮಲ್ಲಿ ಕ್ರಿಸ್ತನಿಗೆ ವಿಧೇಯರಾಗದಿರುವ ಯಾರನ್ನೇ ಆಗಲಿ ಶಿಕ್ಷಿಸಲು ಸಿದ್ಧರಾಗಿದ್ದೇವೆ. ಆದರೆ ಮೊಟ್ಟಮೊದಲನೆಯದಾಗಿ, ನೀವು ಪೂರ್ಣ ವಿಧೇಯರಾಗಬೇಕೆಂದು ಅಪೇಕ್ಷಿಸುತ್ತೇವೆ.
7 ನಿಮ್ಮ ಮುಂದಿರುವ ನಿಜಾಂಶಗಳನ್ನು ನೀವು ಗಮನಿಸಬೇಕು. ಒಬ್ಬ ವ್ಯಕ್ತಿಯು ತಾನು ನಿಜವಾಗಿಯೂ ಕ್ರಿಸ್ತನವನೆಂದು ತಿಳಿದುಕೊಂಡಿದ್ದರೆ ಅವನಂತೆಯೇ ನಾವೂ ಕ್ರಿಸ್ತನವರೆಂಬುದನ್ನು ಅವನು ತಿಳಿದುಕೊಳ್ಳಬೇಕು. 8 ಪ್ರಭುವು ನಮಗೆ ಕೊಟ್ಟಿರುವ ಅಧಿಕಾರದ ಬಗ್ಗೆ ನಾವು ಹೆಚ್ಚು ಹೆಮ್ಮೆಪಡುತ್ತೇವೆ ಎಂಬುದೇನೋ ಸತ್ಯ. ಆದರೆ ಆತನು ನಮಗೆ ಈ ಅಧಿಕಾರವನ್ನು ಕೊಟ್ಟಿರುವುದು ನಿಮ್ಮನ್ನು ಬಲಪಡಿಸುವುದಕ್ಕಾಗಿಯೇ ಹೊರತು ನಿಮಗೆ ನೋವನ್ನು ಉಂಟುಮಾಡುವುದಕ್ಕಾಗಿಯಲ್ಲ. ಆದ್ದರಿಂದ ಅದರ ಬಗ್ಗೆ ಹೆಮ್ಮೆಪಡುವುದರಲ್ಲಿ ನಾನು ನಾಚಿಕೊಳ್ಳುವುದಿಲ್ಲ. 9 ನನ್ನ ಪತ್ರಗಳ ಮೂಲಕ ನಿಮ್ಮನ್ನು ಭಯಪಡಿಸಲು ಪ್ರಯತ್ನಿಸುತ್ತಿದ್ದೇನೆಂದು ನೀವು ಯೋಚಿಸಬೇಕೆಂಬುದು ನನ್ನ ಅಪೇಕ್ಷೆಯಲ್ಲ. 10 “ಪೌಲನ ಪತ್ರಗಳು ಬಲಯುತವಾಗಿವೆ ಮತ್ತು ಪ್ರಾಮುಖ್ಯವಾಗಿವೆ, ಆದರೆ ಅವನು ನಮ್ಮೊಂದಿಗಿರುವಾಗ ಬಲಹೀನನಾಗಿರುತ್ತಾನೆ, ಅವನ ಮಾತುಗಳು ನಿಸ್ಸಾರವಾಗಿರುತ್ತವೆ” ಎಂದು ಕೆಲವರು ಹೇಳುತ್ತಾರೆ. 11 ಆ ಜನರಿಗೆ ಈ ವಿಷಯ ತಿಳಿದಿರಬೇಕು. ಅದೇನೆಂದರೆ, ಈಗ ನಾವು ನಿಮ್ಮೊಂದಿಗಿಲ್ಲ. ಆದ್ದರಿಂದ ಈ ಸಂಗತಿಗಳನ್ನು ಪತ್ರಗಳ ಮೂಲಕ ಹೇಳುತ್ತಿದ್ದೇವೆ. ಆದರೆ ನಾವು ನಿಮ್ಮೊಂದಿಗಿರುವಾಗ ನಮ್ಮ ಪತ್ರಗಳಲ್ಲಿ ತೋರಿದ ಅಧಿಕಾರವನ್ನೇ ತೋರಿಸುತ್ತೇವೆ.
12 ತಾವು ಬಹಳ ಪ್ರಾಮುಖ್ಯವಾದವರೆಂದು ಯೋಚಿಸುವ ಆ ಜನರ ಗುಂಪಿನೊಡನೆ ಸೇರಿಕೊಳ್ಳಲು ನಮಗೆ ಧೈರ್ಯಸಾಲದು. ನಾವು ನಮ್ಮನ್ನು ಅವರೊಂದಿಗೆ ಹೋಲಿಸಿಕೊಳ್ಳುವುದಿಲ್ಲ. ಅವರು ತಮ್ಮನ್ನು ಇತರರೊಂದಿಗೆ ಹೋಲಿಸಿಕೊಳ್ಳುತ್ತಾರೆ; ತಮ್ಮನ್ನು ತಾವೇ ಮೌಲ್ಯಮಾಪನ ಮಾಡಿಕೊಳ್ಳುತ್ತಾರೆ. ಅವರಿಗೆ ಏನೂ ಗೊತ್ತಿಲ್ಲವೆಂದು ಇದೇ ತೋರಿಸುತ್ತದೆ.
13 ಆದರೆ ನಾವು ನಮಗೆ ಕೊಡಲ್ಪಟ್ಟಿರುವ ಕೆಲಸದ ಮೇರೆಯನ್ನು ಮೀರಿ ನಮ್ಮನ್ನು ಹೊಗಳಿಕೊಳ್ಳದೆ ದೇವರು ನಮಗೆ ಕೊಟ್ಟಿರುವ ಕೆಲಸದ ಮೇರೆಯೊಳಗೆ ಹೆಮ್ಮೆಪಡುತ್ತೇವೆ. ಆದರೆ ನಮ್ಮ ಈ ಕೆಲಸವು ನಿಮ್ಮ ಮಧ್ಯ ನಾವು ಮಾಡುವ ಈ ಸೇವೆಯನ್ನು ಒಳಗೊಂಡಿದೆ. 14 ನಾವು ಬಹಳವಾಗಿ ಹೊಗಳಿಕೊಳ್ಳುವುದಿಲ್ಲ. ನಾವು ನಿಮ್ಮಲ್ಲಿಗೆ ಈಗಾಗಲೇ ಬಂದಿಲ್ಲದಿದ್ದರೆ ಬಹಳವಾಗಿ ಹೊಗಳಿಕೊಳ್ಳುತ್ತಿದ್ದೆವು. ಆದರೆ ನಾವು ನಿಮ್ಮಲ್ಲಿಗೆ ಬಂದಿದ್ದೇವೆ. ಕ್ರಿಸ್ತನ ಸುವಾರ್ತೆಯೊಂದಿಗೆ ನಾವು ಬಂದೆವು. 15 ನಾವು ಹೊಗಳಿಕೊಳ್ಳುವುದನ್ನು ನಮ್ಮ ಕೆಲಸದ ಮೇರೆಗೆ ಸೀಮಿತಗೊಳಿಸುತ್ತೇವೆ. ಇತರರು ಮಾಡಿದ ಕೆಲಸದ ಬಗ್ಗೆ ನಾವು ನಮ್ಮನ್ನು ಹೊಗಳಿಕೊಳ್ಳುವುದಿಲ್ಲ. ನಿಮ್ಮ ನಂಬಿಕೆಯು ವೃದ್ಧಿಯಾಗುತ್ತಾ ಬಂದಂತೆ ನಮ್ಮ ಕೆಲಸವು ಮತ್ತಷ್ಟು ವಿಶಾಲವಾಗಿ ಬೆಳೆಯಲು ನೀವು ಸಹಾಯ ಮಾಡುತ್ತೀರೆಂಬ ನಿರೀಕ್ಷೆ ನಮಗಿದೆ. 16 ನಿಮ್ಮ ಪಟ್ಟಣಕ್ಕೆ ದೂರವಾಗಿರುವ ಸ್ಥಳಗಳಲ್ಲಿಯೂ ಸುವಾರ್ತೆಯನ್ನು ತಿಳಿಸಬೇಕೆಂಬ ಅಪೇಕ್ಷೆ ನಮಗುಂಟು. ಮತ್ತೊಬ್ಬ ವ್ಯಕ್ತಿಯ ಪ್ರದೇಶದಲ್ಲಿ ಈಗಾಗಲೇ ಮಾಡಲ್ಪಟ್ಟಿರುವ ಕೆಲಸದ ಬಗ್ಗೆ ಹೊಗಳಿಕೊಳ್ಳಬೇಕೆಂಬ ಅಪೇಕ್ಷೆ ನಮಗಿಲ್ಲ. 17 ಆದರೆ “ಹೊಗಳಿಕೊಳ್ಳುವವನು ಪ್ರಭುವಿನಲ್ಲಿಯೇ ಹೊಗಳಿಕೊಳ್ಳಬೇಕು”(A) 18 ಒಬ್ಬನು ತನ್ನನ್ನು ಒಳ್ಳೆಯವನೆಂದು ಹೇಳಿಕೊಂಡ ಮಾತ್ರಕ್ಕೆ ಅವನು ಸ್ವೀಕೃತನೆಂದಲ್ಲ. ಪ್ರಭುವು ಯಾರನ್ನು ಒಳ್ಳೆಯವನೆಂದು ಯೋಚಿಸುತ್ತಾನೊ ಅವನೇ ಸ್ವೀಕೃತನಾಗಿದ್ದಾನೆ.
ಮಡಕೆ ಮತ್ತು ಮಾಂಸ
24 ನನ್ನ ಒಡೆಯನಾದ ಯೆಹೋವನ ಸಂದೇಶ ನನಗೆ ಬಂತು. ಇದು ಸೆರೆಹೋದ (ಯೆಹೋಯಾಖೀನನು ಸೆರೆಯಾದ) ಒಂಭತ್ತನೇ ವರ್ಷದ ಹತ್ತನೇ ತಿಂಗಳಿನ ಹತ್ತನೇ ದಿವಸದಲ್ಲಿ ಆಯಿತು. ಆತನು ಹೇಳಿದ್ದೇನೆಂದರೆ, 2 “ನರಪುತ್ರನೇ, ಈವತ್ತಿನ ದಿವಸವನ್ನೂ ಸಂದೇಶವನ್ನೂ ಬರೆ: ‘ಈ ದಿವಸ ಬಾಬಿಲೋನ್ ರಾಜನ ಸೈನ್ಯವು ಜೆರುಸಲೇಮಿಗೆ ಮುತ್ತಿಗೆ ಹಾಕಿತು.’ 3 ಈ ವಿಷಯವನ್ನು ವಿಧೇಯರಾಗದ ಆ ಸಂತಾನಕ್ಕೆ ತಿಳಿಸು. ಅವರಿಗೆ ಹೀಗೆ ಹೇಳು, ‘ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ:
“‘ಹಂಡೆಯನ್ನು ಬೆಂಕಿಯ ಮೇಲಿಟ್ಟು
ಅದರಲ್ಲಿ ನೀರು ಹೊಯ್ಯಿ.
4 ಅದರೊಳಗೆ ಮಾಂಸದ ತುಂಡುಗಳನ್ನು ಹಾಕು.
ತೊಡೆ, ಭುಜ, ಮಾಂಸದ ಒಳ್ಳೆಯ ಭಾಗಗಳನ್ನು ಹಾಕು.
ಒಳ್ಳೆಯ ಎಲುಬುಗಳನ್ನೂ ಹಾಕು.
5 ಹಿಂಡಿನಿಂದ ಉತ್ತಮವಾದ ಪಶುವನ್ನು ತೆಗೆದುಕೊ.
ಹಂಡೆಯ ಕೆಳಗೆ ಸೌದೆಗಳನ್ನು ಜೋಡಿಸು.
ಮಾಂಸ ತುಂಡುಗಳನ್ನು ಬೇಯಿಸು.
ಮೂಳೆಗಳನ್ನು ಸಹ ಹಂಡೆಯಲ್ಲಿ ಬೇಯಿಸು.’
6 “‘ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ:
ಕೊಲೆಗಾರರ ಪಟ್ಟಣವಾದ ಜೆರುಸಲೇಮಿಗೆ ಆಪತ್ತು ಬರುವುದು.
ಕೊಲೆಗಾರರ ನಗರಕ್ಕೆ ಕೇಡಾಗುವದು.
ಜೆರುಸಲೇಮು ಕಿಲುಬು ಹಿಡಿದ ಹಂಡೆಯಂತಿದೆ.
ಆ ಕಿಲುಬಿನ ಕಲೆಯನ್ನು ತೆಗೆಯಲಾಗುವುದೇ ಇಲ್ಲ.
ಆ ಹಂಡೆಯು ಅಶುದ್ಧವಾಗಿರುವುದರಿಂದ ಅದರೊಳಗಿರುವ ಮಾಂಸವನ್ನೆಲ್ಲಾ ಹೊರಗೆ ತೆಗೆದುಬಿಡು.
ಆ ಮಾಂಸವನ್ನು ನೀನಾಗಲಿ ಯಾಜಕರಾಗಲಿ ತಿನ್ನಕೂಡದು.
7 ಜೆರುಸಲೇಮು ಕಿಲುಬು ಹಿಡಿದ ಹಂಡೆಯಂತಿದೆ.
ಯಾಕೆಂದರೆ ಆಕೆ ಸುರಿಸಿದ ರಕ್ತದ ಕಲೆಗಳು ಇನ್ನೂ ಇವೆ.
ಆಕೆಯು ಆ ರಕ್ತವನ್ನು ನೆಲದ ಮೇಲೆ ಸುರಿಯದೆ
ಬಂಡೆಯ ಮೇಲೆ ಸುರಿದು ಅದಕ್ಕೆ ಮಣ್ಣನ್ನೂ ಮುಚ್ಚಲಿಲ್ಲ.
8 ಆಕೆಯು ಸುರಿಸಿದ ರಕ್ತವು ಬರಿದಾದ
ಬಂಡೆಯ ಮೇಲೆ ಮುಚ್ಚಲ್ಪಡದಂತೆ ನಾನೇ ಮಾಡಿದೆನು.
ನಿರಪರಾಧಿಗಳನ್ನು ಆಕೆ ಕೊಂದದ್ದಕ್ಕೆ ಜನರು ಕೋಪಗೊಂಡು
ಆಕೆಯನ್ನು ದಂಡಿಸಲೆಂದು ನಾನು ಹೀಗೆ ಮಾಡಿದೆನು.
9 “‘ಆದ್ದರಿಂದ ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ:
ಕೊಲೆಗಾರರಿಂದ ತುಂಬಿದ್ದ ನಗರಕ್ಕೆ ಕೇಡು ಉಂಟಾಗುವದು.
ನಾನು ಸೌದೆಯ ಗುಡ್ಡೆಯನ್ನು ದೊಡ್ಡದು ಮಾಡುವೆನು.
10 ಹಂಡೆಯಡಿಯಲ್ಲಿ ತುಂಬಾ ಸೌದೆಯನ್ನು ಇಡು.
ಬೆಂಕಿಯನ್ನು ಹಚ್ಚು.
ಮಾಂಸವು ಬೇಯುವತನಕ ಬೇಯಿಸು.
ಮೂಳೆಗಳು ಸುಟ್ಟುಹೋಗಲಿ.
11 ಬರಿದಾದ ಹಂಡೆಯು ಉರಿಯುವ ಕೆಂಡಗಳ ಮೇಲಿದ್ದು,
ಕಾದು ಅದರ ತಾಮ್ರವು ಕೆಂಪಾಗಲಿ.
ಮತ್ತು ಅದರೊಳಗಿರುವ ಕಲೆಗಳು ಕರಗಿಹೋಗಲಿ.
ಮತ್ತು ಅದರ ಕಿಲುಬು ಸುಟ್ಟುಹೋಗಲಿ.
12 “‘ತನ್ನ ಕಿಲುಬುಗಳ ಕಲೆಯನ್ನು ತೆಗೆಯಲು
ಜೆರುಸಲೇಮ್ ತುಂಬಾ ಕಷ್ಟಪಡಬಹುದು.
ಆದರೆ ಆ ಕಿಲುಬು ಹೋಗುವದಿಲ್ಲ.
ಬೆಂಕಿಯು ಮಾತ್ರ ಕಿಲುಬನ್ನು ತೆಗೆದುಹಾಕುವುದು.
13 “‘ನಿನ್ನ ವಿರುದ್ಧ ನನಗಿರುವ ಕೋಪ ತೃಪ್ತಿಗೊಳ್ಳುವ ತನಕ
ನೀನು ಮತ್ತೆಂದಿಗೂ ಶುದ್ಧಳಾಗುವುದಿಲ್ಲ.
ನಿನ್ನನ್ನು ತೊಳೆದು ಕಲೆಗಳನ್ನು ತೆಗೆಯಲು ನನಗೆ ಮನಸ್ಸಿತ್ತು.
ಆದರೆ ಕಲೆಗಳು ಹೋಗಲಿಲ್ಲ.
ಆದ್ದರಿಂದ ನಿನ್ನ ಮೇಲಿನ ನನ್ನ ಕೋಪವು ತಣ್ಣಗಾಗುವ ತನಕ
ನಾನು ನಿನ್ನನ್ನು ತೊಳೆಯುವುದೇ ಇಲ್ಲ.
14 “‘ನಾನೇ ಯೆಹೋವನು. ನಿನಗೆ ಶಿಕ್ಷೆಯು ಬರುವದು ಎಂದು ನಾನು ಹೇಳಿದರೆ ಅದು ಬರುವಂತೆ ನಾನು ಮಾಡುವೆನು. ನಾನು ದಂಡನೆಯನ್ನು ತಡೆಹಿಡಿಯುವುದಿಲ್ಲ. ನಾನು ನಿನ್ನನ್ನು ಬಿಟ್ಟುಬಿಡುವುದಿಲ್ಲ. ಅದರ ಬಗ್ಗೆ ನನ್ನ ಮನಸ್ಸನ್ನು ನಾನು ಮಾರ್ಪಡಿಸುವುದಿಲ್ಲ. ನಿನ್ನ ಕೆಟ್ಟಕಾರ್ಯಗಳಿಗಾಗಿ ನಾನು ನಿನ್ನನ್ನು ಶಿಕ್ಷಿಸುವೆನು.’ ನನ್ನ ಒಡೆಯನಾದ ಯೆಹೋವನು ಇದನ್ನು ನುಡಿದಿದ್ದಾನೆ.”
ಯೆಹೆಜ್ಕೇಲನ ಹೆಂಡತಿಯ ಮರಣ
15 ಯೆಹೋವನ ಸಂದೇಶ ನನಗೆ ಬಂತು. ಆತನು ಹೇಳಿದ್ದೇನೆಂದರೆ, 16 “ನರಪುತ್ರನೇ, ನೀನು ನಿನ್ನ ಹೆಂಡತಿಯನ್ನು ಬಹಳವಾಗಿ ಪ್ರೀತಿಸುತ್ತಿ. ಆದರೆ ನಾನು ಆಕೆಯನ್ನು ನಿನ್ನಿಂದ ತೆಗೆದು ಬಿಡುವೆನು. ನಿನ್ನ ಹೆಂಡತಿಯು ಫಕ್ಕನೆ ತೀರಿಹೋಗುವಳು. ಆದರೆ ನೀನು ನಿನ್ನ ದುಃಖವನ್ನು ಪ್ರದರ್ಶಿಸಬಾರದು. ನೀನು ಗಟ್ಟಿಯಾಗಿ ರೋಧಿಸಬಾರದು. ಅಳಬೇಡ ಅಥವಾ ಕಣ್ಣೀರು ಸುರಿಸಬೇಡ. 17 ಮೌನವಾಗಿ ನರಳಾಡು. ನಿನ್ನ ಸತ್ತ ಹೆಂಡತಿಗಾಗಿ ಗಟ್ಟಿಯಾಗಿ ರೋಧಿಸಬೇಡ. ನೀನು ಯಾವಾಗಲೂ ತೊಡುವ ಬಟ್ಟೆಯನ್ನು ತೊಟ್ಟುಕೋ. ಮುಂಡಾಸವನ್ನು ಕಟ್ಟಿಕೋ. ಕಾಲಿಗೆ ಕೆರವನ್ನು ಮೆಟ್ಟಿಕೋ, ನಿನ್ನ ದುಃಖವನ್ನು ತೋರಿಸಲು ಮೀಸೆಯನ್ನು ಮುಚ್ಚಿಕೊಳ್ಳಬೇಡ. ಮರಣದ ಊಟವನ್ನು ಮಾಡದಿರು.”
18 ದೇವರು ಹೇಳಿದ್ದನ್ನು ನಾನು ಮರುದಿವಸ ಮುಂಜಾನೆ ತಿಳಿಸಿದೆ. ಆ ಸಾಯಂಕಾಲ ನನ್ನ ಪತ್ನಿಯು ಸತ್ತುಹೋದಳು. ಮರುದಿವಸ ಬೆಳಿಗ್ಗೆ ದೇವರು ಆಜ್ಞಾಪಿಸಿದ್ದನ್ನೆಲ್ಲ ಮಾಡಿದೆನು. 19 ಆಗ ಜನರು ನನ್ನನ್ನು, “ಇದನ್ನೆಲ್ಲಾ ಯಾಕೆ ಮಾಡುತ್ತೀ? ಇದರರ್ಥವೇನು?” ಎಂದು ಕೇಳಿದರು.
20 ಆಗ ನಾನು ಅವರಿಗೆ ಹೀಗೆಂದೆನು: “ಯೆಹೋವನ ಸಂದೇಶ ನನಗೆ ಬಂತು. 21 ಆತನು ಹೇಳಿದ್ದೇನೆಂದರೆ: ಇಸ್ರೇಲ್ ಜನರಿಗೆ ಹೇಳು: ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: ‘ಇಗೋ, ನನ್ನ ಪವಿತ್ರಾಲಯವನ್ನು ಹಾಳುಮಾಡುವೆನು. ನೀವು ಆ ಸ್ಥಳದ ಬಗ್ಗೆ ಹೆಮ್ಮೆಯುಳ್ಳವರಾಗಿದ್ದು ಸ್ತುತಿಗೀತೆಗಳನ್ನು ಹಾಡುತ್ತೀರಿ. ಅದು ಶಕ್ತಿ ದೊರಕುವ ಸ್ಥಳ. ನೀವು ಆ ಆಲಯವನ್ನು ನೋಡುತ್ತಾ ಆನಂದಿಸುತ್ತೀರಿ; ಅದನ್ನು ಬಹಳವಾಗಿ ಪ್ರೀತಿಸುತ್ತೀರಿ. ಆದರೆ ನಾನು ಅದನ್ನು ಕೆಡವಿಬಿಡುವೆನು. ನೀವು ಬಿಟ್ಟುಹೋಗುವ ನಿಮ್ಮ ಮಕ್ಕಳು ಯುದ್ಧದಲ್ಲಿ ಸಾಯುವರು. 22 ನಾನು ನನ್ನ ಸತ್ತ ಹೆಂಡತಿಗೆ ಮಾಡಿದಂತೆಯೇ ನೀವೂ ಮಾಡುವಿರಿ. ನಿಮ್ಮ ದುಃಖವನ್ನು ತೋರಿಸಲು ನೀವು ನಿಮ್ಮ ಮೀಸೆಯನ್ನು ಮುಚ್ಚಿಕೊಳ್ಳುವುದಿಲ್ಲ. ಯಾರಾದರೂ ಸತ್ತಾಗ, ಗೋಳಾಡುವವರು ತಿನ್ನುವ ಆಹಾರವನ್ನು ನೀವು ತಿನ್ನುವುದಿಲ್ಲ. 23 ನೀವು ನಿಮ್ಮ ಮುಂಡಾಸವನ್ನು ಧರಿಸಿಕೊಂಡು ಕಾಲಿಗೆ ಕೆರವನ್ನು ಹಾಕಿಕೊಳ್ಳುವಿರಿ. ನೀವು ನಿಮ್ಮ ದುಃಖವನ್ನು ತೋರಿಸಿಕೊಳ್ಳುವುದಿಲ್ಲ. ನೀವು ಅಳುವದೂ ಇಲ್ಲ. ಆದರೆ ನೀವು ನಿಮ್ಮ ಪಾಪಗಳ ದೆಸೆಯಿಂದ ಕೃಶರಾಗುವಿರಿ. ನೀವು ಒಬ್ಬರಿಗೊಬ್ಬರು ದುಃಖದ ಶಬ್ದಗಳನ್ನು ಮಾಡುವಿರಿ. 24 ಯೆಹೆಜ್ಕೇಲನು ನಿಮಗೆ ಒಬ್ಬ ಮಾದರಿಯಾಗಿದ್ದಾನೆ. ಆತನು ಮಾಡಿದ ಹಾಗೆ ನೀವೂ ಮಾಡುವಿರಿ. ನಿಮ್ಮ ಶಿಕ್ಷಾ ಸಮಯವು ಹತ್ತಿರ ಬಂದಿದೆ. ನಾನು ಒಡೆಯನಾದ ಯೆಹೋವನೆಂದು ಆಗ ನೀವು ತಿಳಿಯುವಿರಿ.’”
25-26 ಆತನು ಹೇಳಿದ್ದೇನೆಂದರೆ: “ನರಪುತ್ರನೇ, ನಾನು ಬಲಿಷ್ಠವಾದ ಆಲಯವನ್ನು ಜನರಿಂದ ತೆಗೆದುಬಿಡುವೆನು. ಆ ಸುಂದರ ಸ್ಥಳವು ಅವರಿಗೆ ಆನಂದವನ್ನು ಕೊಡುತ್ತಿದೆ. ಆ ಸ್ಥಳವನ್ನು ನೋಡಲು ಅವರು ಆತುರಪಡುವರು. ಆದರೆ ನಾನು ಆಲಯವನ್ನೂ ಮತ್ತು ಅವರ ಮಕ್ಕಳನ್ನೂ ಆ ಜನರಿಂದ ತೆಗೆದುಬಿಡುವೆನು. ಆ ದಿನದಂದು, ಪಾರಾದವನು ನಿನ್ನ ಬಳಿಗೆ ಬಂದು ನಾಶನದ ಕುರಿತಾದ ಕೆಟ್ಟ ಸುದ್ದಿಯನ್ನು ನಿನಗೆ ತಿಳಿಸುವನು. 27 ಆ ಸಮಯದಲ್ಲಿ ನಿನಗೆ ಆ ಮನುಷ್ಯನೊಂದಿಗೆ ಮಾತನಾಡಲಾಗುವುದು. ನೀನು ಆಮೇಲೆ ಎಂದಿಗೂ ಮೌನವಾಗಿರುವುದಿಲ್ಲ. ಈ ರೀತಿಯಾಗಿ ನೀನು ಅವರಿಗೆ ಒಂದು ಮಾದರಿಯಾಗುವೆ. ನಾನು ಯೆಹೋವನೆಂದು ಆಗ ಅವರು ತಿಳಿಯುವರು.”
ರಚನೆಗಾರ: ಸೊಲೊಮೋನ.
72 ದೇವರೇ, ನಿನ್ನಂತೆ ನ್ಯಾಯವಾಗಿ ತೀರ್ಪುನೀಡಲು ರಾಜನಿಗೆ ಕಲಿಸಿಕೊಡು.
ನಿನ್ನ ನೀತಿಯನ್ನು ಕಲಿತುಕೊಳ್ಳಲು ರಾಜಕುಮಾರನಿಗೆ ಸಹಾಯಮಾಡು.
2 ನಿನ್ನ ಜನರಿಗೆ ನೀತಿಯಿಂದಲೂ ನಿನ್ನ ಬಡಜನರಿಗೆ ನ್ಯಾಯವಾಗಿಯೂ
ತೀರ್ಪುಮಾಡಲು ಅವನಿಗೆ ಸಹಾಯಮಾಡು.
3 ಪ್ರಖ್ಯಾತವಾದ ಬೆಟ್ಟಗುಡ್ಡಗಳಲ್ಲೆಲ್ಲಾ,
ದೇಶದಲ್ಲೆಲ್ಲಾ ಶಾಂತಿಯೂ ನ್ಯಾಯವೂ ನೆಲೆಸಿರಲಿ.
4 ರಾಜನು ಬಡವರಿಗೆ ನ್ಯಾಯ ದೊರಕಿಸಿಕೊಡಲಿ; ನಿಸ್ಸಹಾಯಕರಿಗೆ ಸಹಾಯಮಾಡಲಿ.
ಅವರಿಗೆ ಕೇಡುಮಾಡುವವರನ್ನು ರಾಜನು ದಂಡಿಸಲಿ.
5 ಸೂರ್ಯಚಂದ್ರರು ಆಕಾಶದಲ್ಲಿ ಇರುವವರೆಗೂ
ಜನರು ರಾಜನಿಗೆ ಭಯಪಡಲಿ; ಅವನನ್ನು ಗೌರವಿಸಲಿ.
6 ಹುಲ್ಲುಗಾವಲಿನ ಮೇಲೆ ಸುರಿಯುವ ಮಳೆಯಂತೆಯೂ
ಭೂಮಿಯನ್ನು ಹದಗೊಳಿಸುವ ಹಿತವಾದ ಮಳೆಯಂತೆಯೂ ನೀನು ಅವನಿಗೆ ಸಹಾಯಕನಾಗಿರು.
7 ಅವನ ಆಡಳಿತದ ದಿನಗಳಲ್ಲಿ ನೀತಿಯು ವೃದ್ಧಿಯಾಗಲಿ.
ಚಂದ್ರನಿರುವವರೆಗೂ ಶಾಂತಿ ನೆಲಸಿರಲಿ.
8 ಅವನ ರಾಜ್ಯವು ಸಮುದ್ರದಿಂದ ಸಮುದ್ರದವರೆಗೂ
ಯೂಫ್ರೇಟೀಸ್ ನದಿಯಿಂದ ಭೂಮಿಯ ಬಹುದೂರದ ಸ್ಥಳದವರೆಗೂ ಬೆಳೆಯಲಿ.
9 ಅರಣ್ಯದಲ್ಲಿ ವಾಸಿಸುತ್ತಿರುವ ಜನರು ಅವನಿಗೆ ಅಡ್ಡಬೀಳಲಿ.
ಅವನ ವೈರಿಗಳೆಲ್ಲ ಅವನ ಮುಂದೆ ಬಿದ್ದು ಮಣ್ಣುಮುಕ್ಕಲಿ.
10 ತಾರ್ಷೀಷಿನ ರಾಜರುಗಳೂ ಬಹುದೂರದ ದೇಶಗಳವರೂ ಅವನಿಗೆ ಉಡುಗೊರೆಗಳನ್ನು ಕೊಡಲಿ.
ಶೆಬಾ ಮತ್ತು ಸೆಬಾ ಪ್ರಾಂತ್ಯಗಳ ರಾಜರುಗಳು ಅವನಿಗೆ ಕಪ್ಪಕಾಣಿಕೆಗಳನ್ನು ತಂದು ಕೊಡಲಿ.
11 ಅರಸರುಗಳೆಲ್ಲಾ ನಮ್ಮ ರಾಜನಿಗೆ ಅಡ್ಡಬೀಳಲಿ.
ಜನಾಂಗಗಳೆಲ್ಲಾ ಅವನ ಸೇವೆಮಾಡಲಿ.
12 ನಮ್ಮ ರಾಜನು ನಿಸ್ಸಹಾಯಕರಿಗೆ ಸಹಾಯ ಮಾಡುವನು.
ನಮ್ಮ ರಾಜನು ಬಡವರಿಗೂ ಅಸಹಾಯಕರಿಗೂ ಸಹಾಯ ಮಾಡುವನು.
13 ಬಡವರೂ ಅಸಹಾಯಕರೂ ಅವನನ್ನೇ ಅವಲಂಬಿಸಿಕೊಳ್ಳುವರು.
ರಾಜನು ಅವರ ಪ್ರಾಣಗಳನ್ನು ಕಾಪಾಡುವನು.
14 ಕ್ರೂರಿಗಳಿಂದ ಅವರನ್ನು ತಪ್ಪಿಸಿ ರಕ್ಷಿಸುವನು.
ಆ ಬಡವರ ಜೀವಗಳು ರಾಜನಿಗೆ ಅಮೂಲ್ಯವಾಗಿವೆ.
15 ರಾಜನು ಬಹುಕಾಲ ಬಾಳಲಿ!
ಅವನಿಗೆ ಶೆಬಾ ಪ್ರಾಂತ್ಯದಿಂದ ಬಂಗಾರವು ಬರಲಿ.
ರಾಜನಿಗೋಸ್ಕರ ಯಾವಾಗಲೂ ಪ್ರಾರ್ಥಿಸಿರಿ.
ಪ್ರತಿದಿನವೂ ಅವನನ್ನು ಆಶೀರ್ವದಿಸಿರಿ.
16 ಹೊಲಗಳು ಯಥೇಚ್ಚವಾಗಿ ಧಾನ್ಯಬೆಳೆಯಲಿ.
ಬೆಟ್ಟಗಳು ಬೆಳೆಗಳಿಂದ ತುಂಬಿಹೋಗಲಿ.
ಹೊಲಗಳು ಲೆಬನೋನಿನಲ್ಲಿರುವ ಹೊಲಗಳಂತೆ ಫಲವತ್ತಾಗಿರಲಿ.
ಬಯಲುಗಳು ಹುಲ್ಲಿನಿಂದ ಆವೃತಿಯಾಗಿರುವಂತೆ ಪಟ್ಟಣಗಳು ಜನರಿಂದ ತುಂಬಿಹೋಗಲಿ.
17 ರಾಜನು ಎಂದೆಂದಿಗೂ ಪ್ರಸಿದ್ಧನಾಗಿರಲಿ.
ಸೂರ್ಯನು ಇರುವವರೆಗೂ ಜನರು ಅವನ ಹೆಸರನ್ನು ಜ್ಞಾಪಿಸಿಕೊಳ್ಳಲಿ.
ಅವನಿಂದ ಜನರಿಗೆ ಆಶೀರ್ವಾದವಾಗಲಿ.
ಜನರೆಲ್ಲರೂ ಅವನನ್ನು ಆಶೀರ್ವದಿಸಲಿ.
18 ಇಸ್ರೇಲರ ದೇವರಾದ ಯೆಹೋವನನ್ನು ಕೊಂಡಾಡಿರಿ.
ಅಂಥ ಅದ್ಭುತಕಾರ್ಯಗಳನ್ನು ದೇವರೊಬ್ಬನೇ ಮಾಡಬಲ್ಲನು!
19 ಆತನ ಪ್ರಭಾವಪೂರ್ಣವಾದ ಹೆಸರನ್ನು ಎಂದೆಂದಿಗೂ ಕೊಂಡಾಡಿರಿ!
ಆತನ ಮಹಿಮೆ ಭೂಲೋಕವನ್ನೆಲ್ಲಾ ತುಂಬಿಕೊಳ್ಳಲಿ!
ಆಮೆನ್, ಆಮೆನ್!
20 (ಇಷಯನ ಮಗನಾದ ದಾವೀದನ ಪ್ರಾರ್ಥನೆಗಳು ಇಲ್ಲಿಗೆ ಮುಕ್ತಾಯಗೊಂಡವು.)
Kannada Holy Bible: Easy-to-Read Version. All rights reserved. © 1997 Bible League International