Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
2 ಸಮುವೇಲನು 16

ಚೀಬನು ದಾವೀದನನ್ನು ಭೇಟಿ ಮಾಡುವನು

16 ದಾವೀದನು ಆಲೀವ್ ಬೆಟ್ಟದ ಮೇಲೆ ಸ್ವಲ್ಪ ದೂರ ಬಂದನು. ಅಲ್ಲಿ ಮೆಫೀಬೋಶೆತನ ಸೇವಕನಾದ ಚೀಬನು ದಾವೀದನನ್ನು ಸಂಧಿಸಿದನು. ಚೀಬನ ಹತ್ತಿರ ತಡಿಹಾಕಲ್ಪಟ್ಟ ಎರಡು ಹೇಸರಕತ್ತೆಗಳಿದ್ದವು. ಆ ಹೇಸರಕತ್ತೆಗಳ ಮೇಲೆ ಇನ್ನೂರು ರೊಟ್ಟಿಗಳು, ಒಂದುನೂರು ಗೊಂಚಲು ಒಣದ್ರಾಕ್ಷಿ, ಒಂದುನೂರು ಹಣ್ಣುಗಳು ಮತ್ತು ದ್ರಾಕ್ಷಾರಸದ ಒಂದು ಚೀಲ ಇದ್ದವು. ರಾಜನಾದ ದಾವೀದನು ಚೀಬನಿಗೆ, “ಈ ವಸ್ತುಗಳೆಲ್ಲ ಏತಕ್ಕಾಗಿ?” ಎಂದು ಕೇಳಿದನು.

ಚೀಬನು, “ಹೇಸರಕತ್ತೆಗಳನ್ನು ರಾಜನ ಕುಟುಂಬದವರು ಸವಾರಿ ಮಾಡುವುದಕ್ಕಾಗಿಯೂ ರೊಟ್ಟಿಗಳನ್ನು ಮತ್ತು ಹಣ್ಣುಗಳನ್ನು ಸೇವಕರು ತಿನ್ನುವುದಕ್ಕಾಗಿಯೂ ತಂದಿದ್ದೇನೆ. ಅರಣ್ಯದಲ್ಲಿ ಶಕ್ತಿಗುಂದಿಹೋದವನು ದ್ರಾಕ್ಷಾರಸವನ್ನು ಕುಡಿಯಲಿ” ಎಂದು ಉತ್ತರಿಸಿದನು.

ರಾಜನು, “ಮೆಫೀಬೋಶೆತನು ಎಲ್ಲಿ?” ಎಂದು ಕೇಳಿದನು.

ಚೀಬನು ರಾಜನಿಗೆ, “ಮೆಫೀಬೋಶೆತನು ಜೆರುಸಲೇಮಿನಲ್ಲಿಯೇ ಇದ್ದಾನೆ. ಯಾಕೆಂದರೆ ‘ಇಸ್ರೇಲರು ನನ್ನ ತಾತನ ರಾಜ್ಯಾಧಿಕಾರವನ್ನು ಈ ದಿನ ನನಗೆ ಹಿಂದಕ್ಕೆ ಕೊಡುತ್ತಾರೆ’ ಎಂಬುದು ಅವನ ಆಲೋಚನೆಯಾಗಿದೆ” ಎಂದನು.

ಆಗ ರಾಜನು, “ಆದ್ದರಿಂದ ಮೆಫೀಬೋಶೆತನಿಗೆ ಸೇರಿರುವುದೆಲ್ಲವನ್ನೂ ಈಗ ನಾನು ನಿನಗೆ ಕೊಡುತ್ತೇನೆ” ಎಂದು ಹೇಳಿದನು.

ಚೀಬನು, “ನಾನು ನಿನಗೆ ಸಾಷ್ಟಾಂಗನಮಸ್ಕಾರ ಮಾಡುತ್ತೇನೆ; ಒಡೆಯನೇ, ನಿನ್ನ ದೃಷ್ಟಿಯಲ್ಲಿ ನನಗೆ ದಯೆ ದೊರಕಲಿ” ಎಂದನು.

ಶಿಮ್ಮಿಯು ದಾವೀದನನ್ನು ಶಪಿಸುವನು

ದಾವೀದನು ಬಹುರೀಮಿಗೆ ಬಂದನು. ಸೌಲನ ಕುಟುಂಬಕ್ಕೆ ಸೇರಿದ ಗೇರನ ಮಗನಾದ ಶಿಮ್ಮಿಯು ದಾವೀದನನ್ನು ಶಪಿಸುತ್ತಾ ಬಹುರೀಮಿನಿಂದ ಹೊರಗೆ ಬಂದನು.

ದಾವೀದನ ಮತ್ತು ಅವನ ಸೇವಕರ ಮೇಲೆ ಶಿಮ್ಮಿಯು ಕಲ್ಲುಗಳನ್ನು ಎಸೆಯಲಾರಂಭಿಸಿದನು. ಆದರೆ ದಾವೀದನ ಸುತ್ತಲೂ ಜನರು ಮತ್ತು ಸೇವಕರು ಒಟ್ಟುಗೂಡಿದರು. ಶಿಮ್ಮಿಯು ದಾವೀದನನ್ನು ಶಪಿಸುತ್ತಾ “ತೊಲಗಿಹೋಗು! ನೀನು ಕೊಲೆಗಾರ! ನೀನು ದುಷ್ಟ! ಯೆಹೋವನು ನಿನ್ನನ್ನು ದಂಡಿಸುತ್ತಿದ್ದಾನೆ. ಏಕೆಂದರೆ ನೀನು ಸೌಲನ ಕುಟುಂಬದವರನ್ನು ಕೊಂದು ಸೌಲನ ರಾಜಪದವಿಯನ್ನು ಕದ್ದಿರುವೆ. ಈಗ ನಿನಗೂ ಅದೇ ಸಂಭವಿಸುತ್ತಿದೆ. ಯೆಹೋವನು ರಾಜ್ಯಾಧಿಕಾರವನ್ನು ನಿನ್ನ ಮಗನಿಗೆ ಕೊಟ್ಟಿದ್ದಾನೆ. ಏಕೆಂದರೆ ನೀನೊಬ್ಬ ಕೊಲೆಗಾರ” ಎಂದನು.

ಚೆರೂಯಳ ಮಗನಾದ ಅಬೀಷೈಯು ರಾಜನಿಗೆ “ನನ್ನ ರಾಜನಾದ ಪ್ರಭುವೇ, ಈ ಸತ್ತನಾಯಿಯು ನಿನ್ನನ್ನು ಶಪಿಸುವುದೇಕೆ? ಶಿಮ್ಮಿಯ ತಲೆಯನ್ನು ಕತ್ತರಿಸಿಹಾಕುತ್ತೇನೆ, ನನಗೆ ಅಪ್ಪಣೆಕೊಡು” ಎಂದನು.

10 ಆದರೆ ರಾಜನು, “ಚೆರೂಯಳ ಗಂಡುಮಕ್ಕಳೇ, ಈಗ ನಾನೇನು ಮಾಡಲಿ? ಶಿಮ್ಮಿಯು ನನ್ನನ್ನು ಶಪಿಸುತ್ತಿರುವುದು ನಿಜ. ಆದರೆ ನನ್ನನ್ನು ಶಪಿಸಲು ಯೆಹೋವನೇ ಅವನಿಗೆ ಹೇಳಿದ್ದಾನೆ” ಎಂದನು. 11 ದಾವೀದನು ಅಬೀಷೈಗೆ ಮತ್ತು ತನ್ನ ಎಲ್ಲಾ ಸೇವಕರಿಗೆ, “ನೋಡಿ, ನನ್ನ ಸ್ವಂತ ಮಗನೇ ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾನೆ. ಬೆನ್ಯಾಮೀನ್ ಕುಲದ ಇವನು ನನ್ನನ್ನು ಶಪಿಸುವುದು ಯಾವ ದೊಡ್ಡ ಮಾತು; ಅವನು ನನ್ನನ್ನು ಶಪಿಸುತ್ತಲೇ ಇರಲಿ. ಹೀಗೆ ಮಾಡುವಂತೆ ಯೆಹೋವನೇ ಅವನಿಗೆ ತಿಳಿಸಿದ್ದಾನೆ. 12 ಯೆಹೋವನು ನನಗುಂಟಾಗುತ್ತಿರುವ ಕೇಡುಗಳನ್ನು ನೋಡಿ ಶಿಮ್ಮಿಯ ಶಾಪಕ್ಕೆ ಬದಲಾಗಿ ಶುಭವನ್ನು ಅನುಗ್ರಹಿಸಬಹುದೇನೋ” ಎಂದನು.

13 ಆದ್ದರಿಂದ ದಾವೀದನು ತನ್ನ ಜನರೊಂದಿಗೆ ಮುಂದೆ ಸಾಗಿದನು. ಆದರೆ ಶಿಮ್ಮಿಯು ದಾವೀದನನ್ನು ಹಿಂಬಾಲಿಸುತ್ತಲೇ ಇದ್ದನು. ಬೆಟ್ಟದ ಪಕ್ಕದ ರಸ್ತೆಯ ಅಂಚಿನಲ್ಲಿ ಶಿಮ್ಮಿಯು ನಡೆಯುತ್ತಾ ದಾವೀದನನ್ನು ಶಪಿಸುತ್ತಲೇ ಇದ್ದನು. ಶಿಮ್ಮಿಯು ಕಲ್ಲುಗಳನ್ನು ಮತ್ತು ಧೂಳನ್ನು ಸಹ ದಾವೀದನತ್ತ ಎಸೆದನು.

14 ರಾಜನಾದ ದಾವೀದನು ಮತ್ತು ಅವನ ಜನರೆಲ್ಲರೂ ಬಹುರೀಮಿಗೆ ಬಂದರು. ರಾಜನು ಮತ್ತು ಅವನ ಜನರು ಆಯಾಸಗೊಂಡಿದ್ದರಿಂದ ಅವರು ಬಹುರೀಮಿನಲ್ಲಿ ವಿಶ್ರಾಂತಿ ಪಡೆದರು.

15 ಅಬ್ಷಾಲೋಮನು, ಅಹೀತೋಫೆಲನು ಮತ್ತು ಇಸ್ರೇಲಿನ ಜನರೆಲ್ಲ ಜೆರುಸಲೇಮಿಗೆ ಬಂದರು. 16 ದಾವೀದನ ಸ್ನೇಹಿತನೂ ಅರ್ಕೀಯನೂ ಆದ ಹೂಷೈಯು ಅಬ್ಷಾಲೋಮನ ಬಳಿಗೆ ಬಂದನು. ಹೂಷೈಯು, “ರಾಜನು ಚಿರಾಯುವಾಗಿರಲಿ, ರಾಜನು ಚಿರಾಯುವಾಗಿರಲಿ” ಎಂದು ಅಬ್ಷಾಲೋಮನಿಗೆ ಹೇಳಿದನು.

17 ಅಬ್ಷಾಲೋಮನು, “ನಿನ್ನ ಸ್ನೇಹಿತನಾದ ದಾವೀದನಿಗೆ ನೀನೇಕೆ ನಂಬಿಗಸ್ತನಾಗಿಲ್ಲ? ನಿನ್ನ ಸ್ನೇಹಿತನೊಡನೆ ನೀನು ಜೆರುಸಲೇಮಿನಿಂದ ಯಾಕೆ ಹೋಗಲಿಲ್ಲ” ಎಂದು ಕೇಳಿದನು.

18 ಹೂಷೈಯು, “ಯೆಹೋವನು ಆರಿಸಿಕೊಂಡ ವ್ಯಕ್ತಿಗೆ ನಾನು ಸೇರಿದವನು. ಈ ಜನರು ಮತ್ತು ಇಸ್ರೇಲಿನ ಜನರು ನಿನ್ನನ್ನು ಆರಿಸಿದ್ದಾರೆ. ನಾನು ನಿನ್ನೊಡನೆ ನೆಲೆಸುತ್ತೇನೆ. 19 ಮುಂಚೆ ನಾನು ನಿನ್ನ ತಂದೆಯ ಸೇವೆ ಮಾಡಿದೆನು. ಈಗ ದಾವೀದನ ಮಗನ ಸೇವೆ ಮಾಡಬೇಕು. ನಾನು ನಿನ್ನ ಸೇವೆ ಮಾಡುತ್ತೇನೆ” ಎಂದು ಉತ್ತರಕೊಟ್ಟನು.

ಅಹೀತೋಫೆಲನ ಸಲಹೆಯನ್ನು ಅಬ್ಷಾಲೋಮನು ಕೇಳುವನು

20 ಅಬ್ಷಾಲೋಮನು, “ನಾವೇನು ಮಾಡಬೇಕೆಂಬುದನ್ನು ದಯವಿಟ್ಟು ನಮಗೆ ತಿಳಿಸು” ಎಂದು ಅಹೀತೋಫೆಲನನ್ನು ಕೇಳಿದನು.

21 ಅಹೀತೋಫೆಲನು ಅಬ್ಷಾಲೋಮನಿಗೆ, “ನಿಮ್ಮ ತಂದೆಯು, ಮನೆಯನ್ನು ಕಾಯುವುದಕ್ಕೆ ತನ್ನ ಕೆಲವು ಪತ್ನಿಯರನ್ನು[a] ಇಲ್ಲಿ ಬಿಟ್ಟುಹೋಗಿದ್ದಾನೆ. ನೀನು ಅವರೊಂದಿಗೆ ಮಲಗಿಕೋ. ನಿನ್ನ ತಂದೆಯು ನಿನ್ನನ್ನು ದ್ವೇಷಿಸುವನೆಂಬುದು ಇಸ್ರೇಲರಿಗೆಲ್ಲ ಆಗ ತಿಳಿಯುವುದು; ನಿನಗೆ ಮತ್ತಷ್ಟು ಬೆಂಬಲವನ್ನು ಕೊಡಲು ನಿನ್ನ ಜನರೆಲ್ಲರನ್ನು ಪ್ರೋತ್ಸಾಹಿಸಿದಂತಾಗುತ್ತದೆ” ಎಂದನು.

22 ಆಗ ಅವರು ಅಬ್ಷಾಲೋಮನಿಗಾಗಿ ಮನೆಯ ಮಾಳಿಗೆಯ ಮೇಲೆ ಒಂದು ಗುಡಾರವನ್ನು ಹಾಕಿದರು. ಅಬ್ಷಾಲೋಮನು ತನ್ನ ತಂದೆಯ ಪತ್ನಿಯರೊಡನೆ ಮಲಗಿಕೊಂಡನು. ಇಸ್ರೇಲರೆಲ್ಲ ಇದನ್ನು ನೋಡಿದರು. 23 ಆ ಸಮಯದಲ್ಲಿ ದಾವೀದನಿಗೆ ಮತ್ತು ಅಬ್ಷಾಲೋಮನಿಗೆ ಅಹೀತೋಫೆಲನ ಸಲಹೆಯು ಬಹಳ ಮುಖ್ಯವಾಗಿತ್ತು. ದೇವರ ವಾಕ್ಯವು ಮನುಷ್ಯನಿಗೆಷ್ಟು ಮುಖ್ಯವೋ ಅಷ್ಟೇ ಮುಖ್ಯವಾಗಿತ್ತು.

2 ಕೊರಿಂಥದವರಿಗೆ 9

ಕ್ರೈಸ್ತರಿಗೆ ಸಹಾಯ ಮಾಡಿರಿ

ದೇವಜನರಿಗೋಸ್ಕರವಾದ ಈ ಸಹಾಯದ ಬಗ್ಗೆ ನಾನು ನಿಮಗೆ ಬರೆಯುವುದು ನಿಜವಾಗಿಯೂ ಅಗತ್ಯವಿಲ್ಲ. ಸಹಾಯ ಮಾಡಬೇಕೆಂಬ ಬಯಕೆಯು ನಿಮಗಿದೆಯೆಂದು ನನಗೆ ಗೊತ್ತಿದೆ. ಮಕೆದೋನಿಯದಲ್ಲಿ ಜನರಿಗೆ ನಿಮ್ಮ ಈ ವಿಷಯದಲ್ಲಿ ಹೆಮ್ಮೆಯಿಂದ ಹೇಳುತ್ತಲೇ ಇದ್ದೇನೆ. ಅಖಾಯದಲ್ಲಿರುವ ನೀವು ಕಳೆದ ವರ್ಷದಿಂದಲೂ ಕೊಡಲು ಸಿದ್ಧರಾಗಿದ್ದೀರೆಂದು ಅವರಿಗೆ ಹೇಳಿದೆನು. ನಿಮ್ಮಲ್ಲಿರುವ ಕೊಡಬೇಕೆಂಬ ಬಯಕೆಯು ಇಲ್ಲಿರುವ ಅನೇಕ ಜನರಲ್ಲಿ ಕೊಡಬೇಕೆಂಬ ಬಯಕೆಯನ್ನು ಉಂಟುಮಾಡಿದೆ. ನಾನು ಸಹೋದರರನ್ನು ನಿಮ್ಮಲ್ಲಿಗೆ ಕಳುಹಿಸಿಕೊಡುತ್ತಿದ್ದೇನೆ. ನಿಮ್ಮ ಬಗ್ಗೆ ಈ ವಿಷಯದಲ್ಲಿ ಹೊಗಳಿದ್ದು ವ್ಯರ್ಥವಾಗುವುದು ನನಗೆ ಇಷ್ಟವಿಲ್ಲ. ನಾನು ಹೇಳಿಕೊಂಡಂತೆ ನೀವು ಸಿದ್ಧರಾಗಿರಬೇಕೆಂದು ಆಶಿಸುತ್ತೇನೆ. ಒಂದುವೇಳೆ ಮಕೆದೋನಿಯದ ಜನರಲ್ಲಿ ಯಾರಾದರೂ ನನ್ನೊಂದಿಗೆ ಬಂದಾಗ ನೀವು ಸಿದ್ಧರಾಗಿಲ್ಲದಿದ್ದರೆ ನಾವು ನಾಚಿಕೆಗೆ ಗುರಿಯಾಗುತ್ತೇವೆ. ನಿಮ್ಮ ವಿಷಯದಲ್ಲಿ ನಾವು ಬಹಳ ಭರವಸೆ ಇಟ್ಟಿದ್ದರಿಂದ ನಾವು ನಾಚಿಕೆಗೆ ಗುರಿಯಾಗುವೆವು (ಮತ್ತು ನೀವೂ ಸಹ ನಾಚಿಕೆಗೆ ಗುರಿಯಾಗುವಿರಿ.) ಆದ್ದರಿಂದ ನಾನು ಬರುವುದಕ್ಕಿಂತ ಮೊದಲು ನಿಮ್ಮ ಬಳಿಗೆ ಹೋಗುವಂತೆ ಈ ಸಹೋದರರನ್ನು ಕೇಳಿಕೊಳ್ಳಬೇಕೆಂದು ನಾನು ಆಲೋಚಿಸಿದೆನು. ನೀವು ವಾಗ್ದಾನ ಮಾಡಿದ ಸಹಾಯಧನವನ್ನು ಇವರು ಸಂಗ್ರಹಿಸುವರು. ಆಗ, ನಾವು ಬರುವಷ್ಟರಲ್ಲಿ ನಿಮ್ಮ ಸಹಾಯಧನವು ಸಿದ್ಧವಾಗಿರುವುದು. ಈ ಸಹಾಯಧನವು ನಿಮ್ಮ ಹೃತ್ಪೂರ್ವಕವಾದ ದಾನವೇ ಹೊರತು ಸಂಕಟದಿಂದ ಕೊಟ್ಟ ದಾನವಲ್ಲ.

ಇದನ್ನು ಜ್ಞಾಪಕದಲ್ಲಿಟ್ಟುಕೊಂಡಿರಿ: ಸ್ವಲ್ಪ ಬಿತ್ತುವವನು ಕೇವಲ ಸ್ವಲ್ಪವನ್ನೇ ಕೊಯ್ಯುವನು, ಆದರೆ ಹೆಚ್ಚಾಗಿ ಬಿತ್ತುವವನು ಹೆಚ್ಚಾಗಿ ಕೊಯ್ಯುವನು. ಪ್ರತಿಯೊಬ್ಬ ವ್ಯಕ್ತಿಯು ತನ್ನ ಹೃದಯದಲ್ಲಿ ಎಷ್ಟನ್ನು ನಿರ್ಧರಿಸಿಕೊಂಡಿದ್ದಾನೋ ಅಷ್ಟನ್ನೇ ಕೊಡಬೇಕು. ಯಾವನೂ ದುಃಖದಿಂದ ಕೊಡಬಾರದು. ಅಲ್ಲದೆ ಯಾವನೂ ಒತ್ತಾಯದ ದೆಸೆಯಿಂದ ಕೊಡಬಾರದು. ಸಂತೋಷವಾಗಿ ಕೊಡುವವನನ್ನು ದೇವರು ಪ್ರೀತಿಸುತ್ತಾನೆ. ಮತ್ತು ನಿಮಗೆ ಅಗತ್ಯವಾದದ್ದಕ್ಕಿಂತಲೂ ಹೆಚ್ಚು ಆಶೀರ್ವಾದಗಳನ್ನು ದೇವರು ಕೊಡಬಲ್ಲನು. ಆಗ ನಿಮ್ಮಲ್ಲಿ ನಿಮಗೆ ಅಗತ್ಯವಾದ ಪ್ರತಿಯೊಂದೂ ಯಾವಾಗಲೂ ಇರುವುದು. ಪ್ರತಿಯೊಂದು ಒಳ್ಳೆಯ ಕಾರ್ಯಕ್ಕೆ ಕೊಡಲು ನಿಮ್ಮಲ್ಲಿ ಸಾಕಷ್ಟು ಇರುವುದು. ಪವಿತ್ರ ಗ್ರಂಥದಲ್ಲಿ ಹೀಗೆ ಬರೆದಿದೆ:

“ಆತನು ಬಡವರಿಗೆ ಉದಾರವಾಗಿ ಕೊಡುವನು;
    ಆತನ ಕರುಣೆಯು ಶಾಶ್ವತವಾಗಿರುವುದು.”(A)

10 ಬಿತ್ತುವವನಿಗೆ ಬೀಜವನ್ನು ಕೊಡುವವನು ದೇವರೇ. ಆತನು ಆಹಾರಕ್ಕಾಗಿ ರೊಟ್ಟಿಯನ್ನು ಕೊಡುವನು. ಅಂತೆಯೇ, ದೇವರು ಆತ್ಮಿಕ ಬೀಜವನ್ನು ಕೊಡುವನು ಮತ್ತು ನಿಮ್ಮ ಬೀಜವನ್ನು ಬೆಳೆಯಮಾಡುವನು. ನಿಮ್ಮ ಒಳ್ಳೆಯ ಕ್ರಿಯೆಯಿಂದ ಆತನು ಮಹಾ ಸುಗ್ಗಿಯನ್ನು ಉಂಟುಮಾಡುವನು. 11 ಯಾವಾಗಲೂ ಉದಾರವಾಗಿ ಕೊಡಬೇಕೆಂದು ದೇವರು ನಿಮ್ಮನ್ನು ಪ್ರತಿಯೊಂದು ವಿಷಯದಲ್ಲಿಯೂ ಶ್ರೀಮಂತರನ್ನಾಗಿ ಮಾಡುವನು. ನಮ್ಮ ಮೂಲಕವಾಗಿ ನೀವು ಕೊಡುವ ಸಹಾಯಧನದ ನಿಮಿತ್ತ ಜನರು ದೇವರಿಗೆ ಕೃತಜ್ಞತಾಸ್ತುತಿ ಮಾಡುವರು.

12 ನೀವು ಮಾಡುವ ಈ ಸೇವಾಕಾರ್ಯದಿಂದ ಕೊರತೆಯಲ್ಲಿರುವ ದೇವಜನರಿಗೆ ಸಹಾಯವಾಗುವುದು. ಅಷ್ಟು ಮಾತ್ರವೇ ಅಲ್ಲ, ಇದರಿಂದಾಗಿ ದೇವರಿಗೆ ಹೆಚ್ಚುಹೆಚ್ಚಾಗಿ ಕೃತಜ್ಞತಾಸ್ತುತಿ ಉಂಟಾಗುವುದು. 13 ನೀವು ಮಾಡುವ ಈ ಸೇವಾಕಾರ್ಯವು ನಿಮ್ಮ ನಂಬಿಕೆಗೆ ಸಾಕ್ಷಿಯಾಗಿದೆ. ಇದರ ನಿಮಿತ್ತವಾಗಿ ಜನರು ದೇವರಿಗೆ ಕೃತಜ್ಞತಾಸ್ತುತಿ ಮಾಡುವರು. ನೀವು ಕ್ರಿಸ್ತನ ಸುವಾರ್ತೆಯನ್ನು ಅನುಸರಿಸುವುದರಿಂದ ಅವರು ದೇವರಿಗೆ ಕೃತಜ್ಞತಾಸ್ತುತಿ ಮಾಡುವರು. ನೀವು ಹೇಳುವ ಸುವಾರ್ತೆಯನ್ನು ನೀವು ನಂಬಿದ್ದೀರಿ. ತಮ್ಮೊಂದಿಗೆ ಮತ್ತು ಎಲ್ಲರೊಂದಿಗೆ ನೀವು ಉದಾರವಾಗಿ ಹಂಚಿಕೊಂಡಿದ್ದರಿಂದ ಜನರು ದೇವರಿಗೆ ಕೃತಜ್ಞತಾಸ್ತುತಿ ಮಾಡುವರು. 14 ಇದಲ್ಲದೆ ಆ ಜನರು ಪ್ರಾರ್ಥಿಸುವಾಗ ತಾವು ನಿಮ್ಮೊಂದಿಗೆ ಇರಬೇಕಾಗಿತ್ತೆಂದು ಆಶಿಸುವರು. ದೇವರ ಅತಿಶಯವಾದ ಕೃಪೆಯು ನಿಮ್ಮಲ್ಲಿರುವುದೇ ಅದಕ್ಕೆ ಕಾರಣ. 15 ವರ್ಣಿಸಲಸಾಧ್ಯವಾದ ದೇವರ ವರಕ್ಕಾಗಿ ಆತನಿಗೆ ಸ್ತೋತ್ರವಾಗಲಿ.

ಯೆಹೆಜ್ಕೇಲ 23

23 ಯೆಹೋವನ ಮಾತುಗಳು ನನಗೆ ಬಂದವು. ಆತನು ಹೇಳಿದ್ದೇನೆಂದರೆ, “ನರಪುತ್ರನೇ, ಸಮಾರ್ಯ ಮತ್ತು ಜೆರುಸಲೇಮಿನ ಈ ಕಥೆಯನ್ನು ಕೇಳು. ಇಬ್ಬರು ಅಕ್ಕತಂಗಿಯರು ಇದ್ದರು. ಅವರು ಒಂದೇ ತಾಯಿಯ ಮಕ್ಕಳಾಗಿದ್ದರು. ಅವರು ಈಜಿಪ್ಟಿನಲ್ಲಿ ಇನ್ನೂ ಎಳೆ ಪ್ರಾಯದಲ್ಲಿರುವಾಗಲೇ ಸೂಳೆಯರಾದರು. ಈಜಿಪ್ಟಿನಲ್ಲಿ ಅವರು ಮೊದಲ ಬಾರಿ ಸಂಭೋಗಿಸಿದರು. ಪುರುಷರು ತಮ್ಮ ಮೊಲೆತೊಟ್ಟುಗಳನ್ನು ಮುಟ್ಟಿ ಅವರ ಎಳೆಸ್ತನಗಳನ್ನು ಹಿಡಿಯಲು ಬಿಟ್ಟರು. ಹಿರಿಯ ಅಕ್ಕನ ಹೆಸರು ಒಹೊಲ. ತಂಗಿಯ ಹೆಸರು ಒಹೊಲೀಬ. ಅವರಿಬ್ಬರೂ ನನ್ನ ಹೆಂಡತಿಯರಾದರು. ಅವರು ಗಂಡುಮಕ್ಕಳನ್ನು ಮತ್ತು ಹೆಣ್ಣುಮಕ್ಕಳನ್ನು ಹೆತ್ತರು. ಒಹೊಲ ಎಂದರೆ ಸಮಾರ್ಯ; ಮತ್ತು ಒಹೊಲೀಬ ಎಂದರೆ ಜೆರುಸಲೇಮ್.

“ಒಹೊಲಳು ನನಗೆ ಅಪನಂಬಿಗಸ್ತಳಾದಳು. ಆಕೆ ಸೂಳೆಯಂತೆ ಜೀವಿಸತೊಡಗಿದಳು. ಆಕೆ ಪುರುಷರಿಗಾಗಿ ಆಸೆಪಟ್ಟಳು. ನೀಲಿ ಸಮವಸ್ತ್ರ ಧರಿಸಿದ್ಧ ಅಶ್ಶೂರದ ಸೈನಿಕರನ್ನು ನೋಡಿದಳು. ಅವರೆಲ್ಲಾ ಕುದುರೆ ಸವಾರಿ ಮಾಡುವ ಸುಂದರವಾದ ಯುವಕರು. ಅವರೆಲ್ಲಾ ನಾಯಕರೂ ಅಧಿಕಾರಿಗಳೂ ಆಗಿದ್ದರು. ಒಹೊಲಳು ಅವರೊಂದಿಗೆ ರಮಿಸತೊಡಗಿದಳು. ಅವರೆಲ್ಲರೂ ಅಶ್ಶೂರರ ಸೈನ್ಯದಿಂದ ಆರಿಸಿ ತೆಗೆದವರಾಗಿದ್ದರು. ಆಕೆಗೆ ಅವರೆಲ್ಲರ ಜೊತೆಯಲ್ಲೂ ಮಲಗಬೇಕಿತ್ತು. ಅವರ ಹೊಲಸು ವಿಗ್ರಹಗಳಿಂದ ಹೊಲಸಾದಳು. ಇದರ ಜೊತೆಯಲ್ಲಿಯೇ ಈಜಿಪ್ಟಿನೊಂದಿಗೆ ತನ್ನ ಪ್ರಣಯ ಸಂಬಂಧವನ್ನು ಮುಂದುವರಿಸುತ್ತಿದ್ದಳು. ಆಕೆಯು ಇನ್ನೂ ಎಳೆಯ ಹುಡುಗಿಯಾಗಿದ್ದಾಗಲೇ ಈಜಿಪ್ಟ್ ಆಕೆಯೊಂದಿಗೆ ಸಂಭೋಗ ಮಾಡಿತ್ತು. ಅವಳ ಎಳೆ ಸ್ತನಗಳನ್ನು ಹಿಸುಕಿದವರಲ್ಲಿ ಮೊದಲನೆಯವರು ಈಜಿಪ್ಟಿನವರೇ. ಈಜಿಪ್ಟ್ ತನ್ನ ಅನೈತಿಕ ಪ್ರೀತಿಯನ್ನು ಆಕೆಯ ಮೇಲೆ ಸುರಿಯಿತು. ಆಕೆಯ ಪ್ರಿಯತಮರಿಗೆ ನಾನು ಆಕೆಯನ್ನು ಬಿಟ್ಟುಕೊಟ್ಟೆನು. ಆಕೆಗೆ ಅಶ್ಶೂರದವರು ಬೇಕಾಯಿತು. ನಾನು ಆಕೆಯನ್ನು ಅವರಿಗೆ ಬಿಟ್ಟುಕೊಟ್ಟೆನು. 10 ಅವರು ಬಲವಂತದಿಂದ ಆಕೆಯನ್ನು ಸಂಭೋಗಿಸಿದರು. ಆಕೆಯ ಮಕ್ಕಳನ್ನು ತೆಗೆದುಕೊಂಡರು. ಖಡ್ಗವನ್ನು ತೆಗೆದುಕೊಂಡು ಆಕೆಯನ್ನು ಕೊಂದುಹಾಕಿದರು. ಆಕೆಯನ್ನು ಶಿಕ್ಷಿಸಿದರು. ಸ್ತ್ರೀಯರು ಈಗಲೂ ಆಕೆಯ ವಿಷಯ ಮಾತನಾಡುತ್ತಿದ್ದಾರೆ.

11 “ಆಕೆಯ ತಂಗಿಯಾದ ಒಹೊಲೀಬಳು ಆಕೆಗಾದದ್ದನ್ನೆಲ್ಲಾ ನೋಡಿದ್ದಳು. ಆದರೆ ಒಹೊಲೀಬಳು ಅಕ್ಕನಿಗಿಂತ ಹೆಚ್ಚು ಪಾಪ ಮಾಡಿದಳು. ಆಕೆ ಒಹೊಲಳಿಗಿಂತ ಹೆಚ್ಚು ಅಪನಂಬಿಗಸ್ತಿಕೆಯುಳ್ಳವಳಾಗಿದ್ದಳು. 12 ಆಕೆಗೆ ಅಶ್ಶೂರದ ಅಧಿಕಾರಿಗಳೂ ನಾಯಕರುಗಳೂ ಬೇಕಾಗಿದ್ದರು. ಆಕೆಗೆ ನೀಲ ಸಮವಸ್ತ್ರ ಧರಿಸಿ ಕುದುರೆಸವಾರಿ ಮಾಡುವ ಸೈನಿಕರು ಬೇಕಾಗಿದ್ದರು. ಅವರೆಲ್ಲಾ ಮನೋಹರವಾದ ಯುವಕರು. 13 ಆಕೆಯು ತನ್ನನ್ನು ಹೊಲಸು ಮಾಡಿಕೊಂಡಿರುವುದನ್ನು ನಾನು ನೋಡಿದೆನು. ಆ ಸ್ತ್ರೀಯರಿಬ್ಬರೂ (ನಾಶನದ) ಒಂದೇ ಮಾರ್ಗವನ್ನು ಅನುಸರಿಸುತ್ತಿದ್ದರು.

14 “ಒಹೊಲೀಬಳು ನನಗೆ ಅಪನಂಬಿಗಸ್ತಳಾಗಿ ಮುಂದುವರಿದಳು. ಗೋಡೆಯ ಮೇಲೆ ಕೆತ್ತಲ್ಪಟ್ಟಿದ್ದ ಗಂಡಸರ ಚಿತ್ರಗಳನ್ನು ಆಕೆ ನೋಡಿದಳು. ಅವು ಕೆಂಪು ಸಮವಸ್ತ್ರ ಧರಿಸಿದ್ದ ಕಸ್ದೀಯ ಸೈನಿಕರ ಚಿತ್ರಗಳು. 15 ಅವರು ಸೊಂಟಕ್ಕೆ ಪಟ್ಟಿಯನ್ನು ಬಿಗಿದು, ಉದ್ದ ಮುಂಡಾಸವನ್ನು ಧರಿಸಿದ್ದರು. ಅವರೆಲ್ಲರೂ ಅಧಿಕಾರಿಗಳಂತೆ ಕಾಣುತ್ತಿದ್ದರು. ಅವರೆಲ್ಲರೂ ಬಾಬಿಲೋನಿನಲ್ಲಿಯೇ ಹುಟ್ಟಿ ಬೆಳೆದವರಾಗಿದ್ದರು. 16 ಒಹೊಲೀಬಳು ಅವರನ್ನು ಕಂಡಕೂಡಲೇ ಅವರಿಗಾಗಿ ಆಸೆಪಟ್ಟು ಬಾಬಿಲೋನಿನಲ್ಲಿದ್ದ ಅವರ ಬಳಿಗೆ ಸಂದೇಶಕರನ್ನು ಕಳುಹಿಸಿದಳು. 17 ಆಗ ಆ ಬಾಬಿಲೋನಿನವರು ಬಂದು ಆಕೆಯ ರತಿಮಂಚವನ್ನೆರೀ ಆಕೆಯನ್ನು ಸಂಗಮಿಸಿದರು. ಆಕೆಯನ್ನು ಚೆನ್ನಾಗಿ ಅನುಭೋಗಿಸಿ ಮಲಿನವನ್ನಾಗಿ ಮಾಡಿದರು. ಆದ್ದರಿಂದ ಆಕೆಗೆ ಅವರು ಅಸಹ್ಯವೆನಿಸಿತು.

18 “ತಾನು ಅಪನಂಬಿಗಸ್ತಳೆಂದು ಎಲ್ಲರೂ ತನ್ನನ್ನು ಗುರುತಿಸುವಂತೆ ಒಹೊಲೀಬಳು ಮಾಡಿದಳು. ಆಕೆಯು ತನ್ನ ನಗ್ನ ಶರೀರವನ್ನು ತೋರಿಸಿದಳು. ಆದ್ದರಿಂದ ಅವಳ ಅಕ್ಕ ನನಗೆ ಹೇಗೆ ಅಸಹ್ಯವಾದಳೋ ಅದೇ ರೀತಿ ಈಕೆಯೂ ನನಗೆ ಅಸಹ್ಯವಾದಳು. ನನಗೆ ಆಕೆಯ ಅಕ್ಕನ ಮೇಲಿದ್ದ ಅನುರಾಗ ಹೇಗೆ ತೊಲಗಿಹೋಯಿತೋ ಹಾಗೆಯೇ ಈಕೆಯ ಮೇಲಿನ ಅನುರಾಗವೂ ತೊಲಗಿಹೋಯಿತು. 19 ಮತ್ತೆಮತ್ತೆ ಒಹೊಲೀಬಳು ನನಗೆ ಅಪನಂಬಿಗಸ್ತಳಾದಳು. ಆಕೆಯು ಯುವತಿಯಾಗಿದ್ದಾಗ ಈಜಿಪ್ಟಿನಲ್ಲಿ ತಾನು ಮಾಡಿಕೊಂಡಿದ್ದ ಅನೈತಿಕ ಸಂಬಂಧಗಳನ್ನು ನೆನಪುಮಾಡಿಕೊಂಡಳು. 20 ಕತ್ತೆಗಳ ಲಿಂಗಗಳಂತಿದ್ದ ಲೈಂಗಿಕ ಲಿಂಗಗಳನ್ನು ಹೊಂದಿದ್ದ ಈಜಿಪ್ಟಿನ ಪ್ರಿಯರನ್ನು ಮತ್ತು ಕುದುರೆಯ ವೀರ್ಯದಂತೆ ಹರಿಯುವ ಅವರ ವೀರ್ಯವನ್ನು ಆಕೆ ನೆನಪುಮಾಡಿಕೊಂಡಳು.

21 “ಒಹೊಲೀಬಳೇ, ನಿನ್ನ ಯೌವನ ಕಾಲದಲ್ಲಿ ನೀನು ಅನುಭೋಗಿಸಿದ್ದನ್ನು ಕನಸು ಕಾಣುತ್ತಿ, ನಿನ್ನ ಈಜಿಪ್ಟಿನ ಪ್ರಿಯತಮರು ನಿನ್ನ ಸ್ತನದ ತೊಟ್ಟುಗಳನ್ನು ಮುಟ್ಟಿ ನಿನ್ನ ಎಳೆ ಸ್ತನಗಳನ್ನು ಹಿಸುಕಿದ್ದನ್ನು ನೀನು ಜ್ಞಾಪಕಕ್ಕೆ ತಂದುಕೊಳ್ಳುತ್ತಿರುವೆ. 22 ಆದ್ದರಿಂದ ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ, ‘ಓಹೊಲೀಬಳೇ, ನಿನ್ನ ಪ್ರಿಯತಮರಲ್ಲಿ ಕೆಲವರು ನಿನಗೆ ಅಸಹ್ಯವಾಗಿದ್ದಾರೆ. ಆದರೆ ನಾನು ಆ ಪ್ರಿಯತಮರನ್ನು ಇಲ್ಲಿಗೆ ಕರೆದುಕೊಂಡು ಬರುವೆ. ಅವರು ನಿನ್ನನ್ನು ಸುತ್ತುವರಿಯುವರು. 23 ನಾನು ಬಾಬಿಲೋನಿನ ಕಸ್ದೀಯ ಪುರುಷರನ್ನು ಬರಮಾಡುವೆನು. ನಾನು ಪೆಕೋದ್, ಷೋಯ ಮತ್ತು ಕೋಯ ಇಲ್ಲಿಂದಲೂ, ಅಶ್ಶೂರದ ಯೌವನಸ್ಥರನ್ನು ಬರಮಾಡುವೆನು. ಅಲ್ಲಿಯ ಎಲ್ಲಾ ಅಧಿಕಾರಿಗಳನ್ನೂ ನಾಯಕರನ್ನೂ ಬರಮಾಡುವೆನು. ಅವರೆಲ್ಲರೂ ಸುಂದರವಾದ ಯುವಕರು, ಅಧಿಕಾರಿಗಳು, ಆರಿಸಲ್ಪಟ್ಟ ಯೋಧರು ಮತ್ತು ಅಶ್ವರೂಢರು ಆಗಿರುವರು. 24 ಅವರು ನಿನ್ನ ವಿರುದ್ಧವಾಗಿ ರಥಗಳಲ್ಲಿಯೂ ಅರಸರೂಢರಾಗಿಯೂ ಅಂತರಾಷ್ಟ್ರೀಯ ಸೈನ್ಯವಾಗಿ ಬರುವರು. ಅವರ ಕೈಯಲ್ಲಿ ಬರ್ಜಿ, ಗುರಾಣಿ, ಶಿರಸ್ತ್ರಾಣಗಳಿರುವವು. ಅವರು ನಿನ್ನನ್ನು ಸುತ್ತುವರಿಯುವರು. ನೀನು ನನಗೆ ಏನು ಮಾಡಿದ್ದೀ ಎಂದು ನಾನು ಹೇಳಿದಾಗ ಅವರು ತಮ್ಮ ಇಷ್ಟಪ್ರಕಾರ ನಿನ್ನನ್ನು ಶಿಕ್ಷಿಸುವರು. 25 ನಾನು ನಿನ್ನ ವಿರುದ್ಧವಾಗಿ ನನ್ನ ಈರ್ಷೆಯ ಕೋಪವನ್ನು ನಿನ್ನ ಮೇಲೆ ಸುರಿಸುವೆನು. ಅವರಿಗೆ ಸಿಟ್ಟು ಬಂದು ನಿನ್ನನ್ನು ಹಿಂಸಿಸುವರು. ನಿನ್ನ ಕಿವಿ ಮೂಗುಗಳನ್ನು ಕತ್ತರಿಸಿಹಾಕುವರು. ತಮ್ಮ ಖಡ್ಗದಿಂದ ನಿನ್ನನ್ನು ಸಂಹರಿಸುವರು. ಆಮೇಲೆ ನಿನ್ನ ಮಕ್ಕಳನ್ನು ತೆಗೆದುಕೊಳ್ಳುವರು ಮತ್ತು ನಿನ್ನಲ್ಲಿ ಉಳಿದಿರುವುದನ್ನೆಲ್ಲ ಸುಟ್ಟುಹಾಕುವರು. 26 ನಿನ್ನಲ್ಲಿರುವ ಉತ್ಕೃಷ್ಟವಾದ ಬಟ್ಟೆ, ಆಭರಣಗಳನ್ನೆಲ್ಲಾ ಸುಲುಕೊಳ್ಳುವರು. 27 ಬಳಿಕ, ಈಜಿಪ್ಟ್ ದೇಶದಲ್ಲಿ ಆರಂಭವಾದ ನಿನ್ನ ನೀಚತನಕ್ಕೆ ಮತ್ತು ಅನೈತಿಕ ಜೀವಿತಕ್ಕೆ ತಡೆಹಾಕುವೆನು. ನೀನು ನಿನ್ನ ಕಣ್ಣುಗಳನ್ನು ಅವರ ಕಡೆಗೆ ಇನ್ನೆಂದಿಗೂ ತಿರುಗಿಸುವದಿಲ್ಲ. ನೀನು ಅವರನ್ನು ಜ್ಞಾಪಿಸಿಕೊಳ್ಳುವುದಿಲ್ಲ.’”

28 ನನ್ನ ಒಡೆಯನಾದ ಯೆಹೋವನು ಇದನ್ನು ಹೇಳುತ್ತಾನೆ. “ನೀನು ದ್ವೇಷಿಸುವ ಜನರ ಕೈಗೆ ನಿನ್ನನ್ನು ಒಪ್ಪಿಸುವೆನು. ನೀನು ಜಿಗುಪ್ಸೆಗೊಂಡ ಜನರಿಗೆ ನಿನ್ನನ್ನು ಒಪ್ಪಿಸುವೆನು. 29 ಆಗ ಅವರು ನಿನ್ನನ್ನು ಎಷ್ಟು ದ್ವೇಷಿಸುವರೆಂದು ನಿನಗೆ ತೋರಿಸುವರು. ನೀನು ದುಡಿದವುಗಳನ್ನೆಲ್ಲ ಅವರು ಕಿತ್ತುಕೊಳ್ಳುವರು. ನಿನ್ನನ್ನು ಬೆತ್ತಲೆಮಾಡಿ ಬಿಟ್ಟುಬಿಡುವರು. ಜನರು ನಿನ್ನ ಪಾಪಗಳನ್ನು ಪರಿಪೂರ್ಣವಾಗಿ ನೋಡುವರು. ನೀನು ಸೂಳೆಯಂತೆ ವರ್ತಿಸಿದ್ದನ್ನು ಅವರು ನೋಡುವರು. ನಿನ್ನ ನೀಚತನವೂ ನಿನ್ನ ಸೂಳೆತನವೂ 30 ನಿನ್ನ ಮೇಲೆ ಇವುಗಳನ್ನು ಬರಮಾಡಿದವು; ಯಾಕೆಂದರೆ ನೀನು ನನ್ನನ್ನು ತೊರೆದು ಜನಾಂಗಗಳನ್ನು ಹಿಂಬಾಲಿಸಿದೆ ಮತ್ತು ಅವರ ಕೊಳಕು ವಿಗ್ರಹಗಳಿಂದ ನಿನ್ನನ್ನು ಕೆಡಿಸಿಕೊಂಡೆ. 31 ನೀನು ನಿನ್ನ ಅಕ್ಕನನ್ನು ಅನುಸರಿಸಿ ಆಕೆಯಂತೆ ಜೀವಿಸಿದೆ. ಆದ್ದರಿಂದ ಆಕೆಯ ದಂಡನೆಯ ಲೋಟವನ್ನು ನಾನು ನಿನ್ನ ಕೈಯಲ್ಲಿ ಇಡುತ್ತೇನೆ. 32 ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ:

“ನೀನು ನಿನ್ನ ಅಕ್ಕನ ಲೋಟದಿಂದ ಕುಡಿಯುವೆ.
    ಆ ಲೋಟವು ಆಳವಾಗಿಯೂ ಅಗಲವಾಗಿಯೂ ಇದ್ದು ಪೂರ್ತಿ ತುಂಬಿದೆ (ಶಿಕ್ಷೆ).
ಜನರು ನಿನ್ನನ್ನು ನೋಡಿ ನಗಾಡುವರು.
    ನಿನ್ನನ್ನು ಕಂಡು ಹಾಸ್ಯ ಮಾಡುವರು.
33 ನೀನು ಅಮಲೇರಿದವಳ ಹಾಗೆ ತೂರಾಡುವೆ.
    ನೀನು ಕುಗ್ಗಿಹೋಗುವೆ.
ಆ ಲೋಟವು ನಾಶನದ ಮತ್ತು ಹಾಳುಮಾಡುವ ಲೋಟ.
    ನಿನ್ನ ಅಕ್ಕ ಕುಡಿದ ಪಾತ್ರೆಯಂತಿರುವದು.
34 ನೀನು ಆ ಲೋಟದಿಂದ ಕುಡಿಯುವೆ.
    ಕಡೆಯ ತೊಟ್ಟಿನವರೆಗೂ ನೀನು ಕುಡಿಯುವೆ.
ನೀನು ಆ ಲೋಟವನ್ನು ಒಡೆದುಹಾಕುವೆ.
    ನಿನ್ನ ಸ್ತನಗಳನ್ನು ಬಗಿದುಕೊಳ್ಳುವೆ.
ಒಡೆಯನೂ ಯೆಹೋವನೂ ಆದ ನಾನು
    ಇದನ್ನು ಹೇಳುವದರಿಂದ ಇದು ನಡೆಯುವುದು.

35 “ನನ್ನ ಒಡೆಯನಾದ ಯೆಹೋವನು ಹೀಗೆ ಹೇಳಿದನು: ‘ಜೆರುಸಲೇಮೇ, ನೀನು ನನ್ನನ್ನು ಮರೆತುಬಿಟ್ಟೆ. ನೀನು ನನ್ನನ್ನು ತೊರೆದುಬಿಟ್ಟೆ; ಆದ್ದರಿಂದ ನೀನು ನನ್ನನ್ನು ತೊರೆದ ಸೂಳೆಯಂತೆ ಜೀವಿಸಿದ್ದಕ್ಕೆ ಶಿಕ್ಷೆ ಅನುಭವಿಸಬೇಕು. ನಿನ್ನ ನೀಚ ನಡತೆಗಾಗಿ ನೀನು ಕಷ್ಟ ಅನುಭವಿಸಬೇಕು.’”

ಒಹೊಲ ಮತ್ತು ಒಹೊಲೀಬಳ ವಿರುದ್ಧ ನ್ಯಾಯತೀರ್ಪು

36 ನನ್ನ ಒಡೆಯನಾದ ಯೆಹೋವನು ನನಗೆ ಹೀಗೆ ಹೇಳಿದನು, “ನರಪುತ್ರನೇ, ನೀನು ಒಹೊಲ ಮತ್ತು ಒಹೊಲೀಬಳನ್ನು ನ್ಯಾಯವಿಚಾರಣೆ ಮಾಡುವಿಯೋ? ಆಗ ನೀನು, ಗಾಬರಿಗೊಳಿಸುವ ಅವರ ದುಷ್ಟತನವನ್ನು ಅವರಿಗೆ ತಿಳಿಸು. 37 ಅವರು ವ್ಯಭಿಚಾರ ಮಾಡಿದ್ದಾರೆ. ಅವರು ಕೊಲೆ ಮಾಡಿರುತ್ತಾರೆ. ಅವರು ಸೂಳೆಯಂತೆ ವರ್ತಿಸಿದ್ದಾರೆ. ಅವರು ತಮ್ಮ ಹೊಲಸು ವಿಗ್ರಹಗಳೊಂದಿಗೆ ಇರಲು ನನ್ನನ್ನು ತೊರೆದುಬಿಟ್ಟಿದ್ದಾರೆ. ಅವರಲ್ಲಿ ನನ್ನ ಮಕ್ಕಳು ಇದ್ದಾರೆ. ಆದರೆ ಅವರನ್ನು ಬಲವಂತದಿಂದ ಬೆಂಕಿಯ ಮೇಲೆ ದಾಟಿಸಿದರು. ತಮ್ಮ ಹೊಲಸು ವಿಗ್ರಹಗಳಿಗೆ ಆಹಾರ ಕೊಡುವಂತೆ ಅವರು ಹಾಗೆ ಮಾಡಿದರು. 38 ಅಲ್ಲದೆ ನನ್ನ ಪವಿತ್ರ ಆಲಯವನ್ನೂ ನನ್ನ ಪವಿತ್ರವಾದ ವಿಶೇಷ ವಿಶ್ರಾಂತಿ ದಿವಸಗಳನ್ನೂ ಆಲಕ್ಷ್ಯ ಮಾಡಿ ಅದಕ್ಕೆ ಮಹತ್ವವನ್ನು ಕೊಡದೆ ಹೋದರು. 39 ಅವರ ವಿಗ್ರಹಗಳಿಗೋಸ್ಕರ ತಮ್ಮ ಮಕ್ಕಳನ್ನು ಕೊಂದರು. ಅನಂತರ ಅದೇ ದಿನದಲ್ಲೇ ನನ್ನ ಪವಿತ್ರ ಆಲಯದೊಳಕ್ಕೆ ಹೋಗಿ ಅದನ್ನು ಹೊಲೆ ಮಾಡಿದರು. ನನ್ನ ಆಲಯದೊಳಗೆ ಅವರು ಹಾಗೆ ಮಾಡಿದರು.

40 “ಅವರು ದೂರ ಪ್ರಾಂತ್ಯಗಳಿಂದ ಪುರುಷರನ್ನು ಕರಿಸಿದರು. ಅವರಿಗೆ ನೀನು ಸಂದೇಶ ಕಳುಹಿಸಿದೆ. ಅವರು ನಿನ್ನನ್ನು ನೋಡಲು ಬಂದರು. ಅವರಿಗಾಗಿ ನೀನು ಸ್ನಾನ ಮಾಡಿ, ನಿನ್ನ ಕಣ್ಣುಗಳಿಗೆ ಕಾಡಿಗೆ ಹಚ್ಚಿ, ನಿನ್ನ ಆಭರಣಗಳನ್ನು ಧರಿಸಿಕೊಂಡೆ. 41 ನೀನು ಅಮೋಘವಾದ ಮಂಚದಲ್ಲಿ ಕುಳಿತುಕೊಂಡೆ. ಅದರ ಮುಂದೆ ಸಿದ್ಧಪಡಿಸಲ್ಪಟ್ಟಿದ್ದ ಮೇಜಿತ್ತು. ಆ ಮೇಜಿನ ಮೇಲೆ ನನ್ನ ಧೂಪ ಮತ್ತು ಎಣ್ಣೆಯನ್ನು ಇಟ್ಟಿರುವೆ.

42 “ನಿಶ್ಚಿಂತೆಯುಳ್ಳ ಗುಂಪಿನ ಆನಂದಪೂರ್ಣವಾದ ಗದ್ದಲವು ಆಕೆಯ ಸುತ್ತಲೂ ಇತ್ತು. ಔತಣಕ್ಕೆ ಅನೇಕರು ಬಂದರು. ಮರುಭೂಮಿಯ ಕಡೆಯಿಂದ ಜನರು ಬರುತ್ತಿರುವಾಗಲೇ ಅಮಲೇರಿಕೊಂಡು ಬಂದರು. ಅವರು ಬಳೆಗಳನ್ನು, ಸುಂದರವಾದ ಕಿರೀಟಗಳನ್ನು ಹೆಂಗಸರಿಗೆ ಕೊಟ್ಟರು. 43 ಆಗ ನಾನು ಅನೈತಿಕ ಜೀವಿತದಲ್ಲಿ ಬತ್ತಿಹೋದ ಒಬ್ಬ ಹೆಂಗಸಿನ ಬಗ್ಗೆ, (ನನ್ನೊಳಗೆ) ‘ಈಗಲೂ ಸಹ ಅವರು ಆಕೆಯೊಂದಿಗೆ ಲೈಂಗಿಕ ಪಾಪ ಮಾಡುವರೇ?’ ಎಂದುಕೊಂಡೆನು. 44 ಆದರೆ ಅವರು ಒಬ್ಬ ವೇಶ್ಯೆಯ ಬಳಿಗೆ ಹೋಗುವಂತೆಯೇ ಅವರ ಬಳಿಗೆ ಹೋದರು. ಹೌದು ಒಹೊಲ ಮತ್ತು ಒಹೊಲೀಬ ಎಂಬ ಕಾಮುಕ ಸ್ತ್ರೀಯರ ಬಳಿಗೆ ಅವರು ತಿರುಗಿ ಮತ್ತೆಮತ್ತೆ ಹೋದರು.

45 “ನೀತಿವಂತರು ಅವರನ್ನು ವ್ಯಭಿಚಾರ ಮಾಡಿದ ಮತ್ತು ಕೊಲೆ ಮಾಡಿದ ಅಪರಾಧಿಗಳೆಂದು ತೀರ್ಪು ನೀಡುವರು. ಯಾಕೆಂದರೆ, ಒಹೊಲ ಮತ್ತು ಒಹೊಲೀಬಳ ವ್ಯಭಿಚಾರವನ್ನು ಆಚರಣೆ ಮಾಡುತ್ತಾರೆ ಮತ್ತು ರಕ್ತವು ಅವರ ಕೈಗಳ ಮೇಲಿದೆ.”

46 ನನ್ನ ಒಡೆಯನಾದ ಯೆಹೋವನು ನನಗೆ ಹೀಗೆ ಹೇಳಿದನು, “ಜನರನ್ನು ಒಟ್ಟುಗೂಡಿಸು. ಅವರು ಒಟ್ಟಾಗಿ ಸೇರಿ ಒಹೊಲ ಮತ್ತು ಒಹೊಲೀಬರನ್ನು ಶಿಕ್ಷಿಸಲಿ. ಆ ಜನರು ಈ ಸ್ತ್ರೀಯರನ್ನು ಶಿಕ್ಷಿಸಿ ಗೇಲಿ ಮಾಡುವರು. 47 ಆ ಬಳಿಕ ಜನರ ಗುಂಪು ಅವರ ಮೇಲೆ ಕಲ್ಲೆಸೆದು ಅವರನ್ನು ಕೊಲ್ಲುವುದು. ಆಮೇಲೆ ತಮ್ಮ ಖಡ್ಗಗಳಿಂದ ಅವರನ್ನು ತುಂಡುತುಂಡು ಮಾಡುವರು. ಅವರ ಮಕ್ಕಳನ್ನು ಕೊಂದು ಅವರ ಮನೆಗಳನ್ನು ಸುಟ್ಟುಹಾಕುವರು. 48 ಈ ರೀತಿ, ನಾನು ಅವರ ಅವಮಾನಕರವಾದ ನಡತೆಯನ್ನು ದೇಶದಿಂದ ತೆಗೆದುಹಾಕುವೆನು. ಬೇರೆ ಸ್ತ್ರೀಯರು ಇಂಥಾ ನಾಚಿಕೆಗೆಟ್ಟ ಕೆಲಸ ಮಾಡಬಾರದೆಂದು ಎಚ್ಚರಿಸುವರು. 49 ನಿನ್ನ ನಾಚಿಕೆಕರವಾದ ಕಾರ್ಯಗಳಿಗಾಗಿ ಅವರು ನಿನ್ನನ್ನು ಶಿಕ್ಷಿಸುವರು. ನೀನು ಅಸಹ್ಯವಾದ ವಿಗ್ರಹಗಳನ್ನು ಪೂಜೆಮಾಡಿದ್ದಕ್ಕೆ ಶಿಕ್ಷಿಸಲ್ಪಡುವಿ. ಆಗ ನಾನೇ ಒಡೆಯನೂ ಯೆಹೋವನೂ ಎಂದು ನೀನು ತಿಳಿಯುವಿ.”

ಕೀರ್ತನೆಗಳು 70-71

ಜ್ಞಾಪಕಾರ್ಥ ನೈವೇದ್ಯ. ಸಮರ್ಪಣೆಯ ಹಾಡು. ರಚನೆಗಾರ: ದಾವೀದ.

70 ದೇವರೇ, ನನ್ನನ್ನು ರಕ್ಷಿಸು!
    ದೇವರೇ, ಬೇಗನೆ ನನಗೆ ಸಹಾಯಮಾಡು!
ನನ್ನನ್ನು ಕೊಲ್ಲಲು ಪ್ರಯತ್ನಿಸುವವರು
    ನಿರಾಶೆಗೊಂಡು ಅಪಮಾನ ಹೊಂದಲಿ.
ನನಗೆ ಕೇಡುಮಾಡಬೇಕೆಂದಿರುವವರು
    ಅವಮಾನಗೊಂಡು ಓಡಿಹೋಗಲಿ.
ನನ್ನನ್ನು ಗೇಲಿಮಾಡುವವರು
    ಸೋಲಿನಿಂದ ಅವಮಾನಕ್ಕೀಡಾಗಿ ಓಡಿಹೋಗಲಿ.
ನನ್ನ ಆರಾಧಕರೆಲ್ಲರೂ ನಿನ್ನಲ್ಲಿ ಉಲ್ಲಾಸದಿಂದ ಸಂತೋಷಿಸಲಿ.
ನಿನ್ನ ರಕ್ಷಣೆಯಲ್ಲಿ ಆನಂದಿಸುವವರು ನಿನ್ನನ್ನು ಯಾವಾಗಲೂ ಕೊಂಡಾಡಲಿ.

ನಾನಾದರೋ ಬಡವನೂ ನಿಸ್ಸಹಾಯಕನೂ ಆಗಿರುವೆ!
    ದೇವರೇ, ಬೇಗನೆ ಬಂದು ನನ್ನನ್ನು ರಕ್ಷಿಸು!
ಯೆಹೋವನೇ, ನನ್ನನ್ನು ಬಿಡುಗಡೆ ಮಾಡಬಲ್ಲವನು ನೀನೊಬ್ಬನೇ.
    ಯೆಹೋವನೇ ತಡಮಾಡಬೇಡ!

71 ಯೆಹೋವನೇ, ನಿನ್ನನ್ನೇ ಆಶ್ರಯಿಸಿಕೊಂಡಿದ್ದೇನೆ;
    ಎಂದಿಗೂ ಆಶಾಭಂಗಪಡಿಸಬೇಡ.
ನೀನು ನೀತಿವಂತನಾಗಿರುವುದರಿಂದ ನನ್ನನ್ನು ರಕ್ಷಿಸುವೆ; ಬಿಡುಗಡೆಮಾಡುವೆ.
    ನನಗೆ ಕಿವಿಗೊಟ್ಟು ನನ್ನನ್ನು ರಕ್ಷಿಸು.
ನೀನೇ ನನ್ನ ಸಂರಕ್ಷಣೆಯ ಆಶ್ರಯಗಿರಿಯಾಗಿರು.
    ನನ್ನನ್ನು ರಕ್ಷಿಸಲು ಆಜ್ಞಾಪಿಸು.
ನೀನೇ ನನ್ನ ಬಂಡೆಯೂ ಕೋಟೆಯೂ ಆಗಿರುವೆ.
ನನ್ನ ದೇವರೇ, ದುಷ್ಟರಿಂದಲೂ
    ಕ್ರೂರವಾದ ಕೆಟ್ಟವರಿಂದಲೂ ನನ್ನನ್ನು ರಕ್ಷಿಸು.
ನನ್ನ ಒಡೆಯನೇ, ನನ್ನ ಬಾಲ್ಯದಿಂದಲೂ
    ನೀನೇ ನನ್ನ ನಿರೀಕ್ಷೆಯೂ ಭರವಸವೂ ಆಗಿರುವೆ.
ನಾನು ಹುಟ್ಟಿದಂದಿನಿಂದಲೂ ನಿನ್ನನ್ನೇ ಆಶ್ರಯಿಸಿಕೊಂಡಿದ್ದೇನೆ.
    ನಾನು ಜನಿಸಿದಂದಿನಿಂದಲೂ ನೀನೇ ನನಗೆ ಆಧಾರವಾಗಿರುವೆ.
    ನಾನು ನಿನ್ನನ್ನು ಕೊಂಡಾಡುತ್ತಲೇ ಇರುವೆನು.
ನಾನು ಅನೇಕರಿಗೆ ಮಾದರಿಯಾಗಿದ್ದೇನೆ.
    ಯಾಕೆಂದರೆ ನೀನೇ ನನ್ನ ಶಕ್ತಿಗೆ ಆಧಾರ.
ದಿನವೆಲ್ಲಾ ನಿನ್ನ ಅದ್ಭುತಕಾರ್ಯಗಳ ಬಗ್ಗೆ ನಿನ್ನನ್ನು ಸ್ತುತಿಸಿ ಕೊಂಡಾಡುವೆನು.
ವೃದ್ಧಾಪ್ಯದಲ್ಲಿ ನನ್ನನ್ನು ತಳ್ಳಿಬಿಡಬೇಡ.
    ಬಲವು ಕುಂದಿ ಹೋಗುತ್ತಿರುವಾಗ ಕೈಬಿಡಬೇಡ.
10 ನನ್ನ ಶತ್ರುಗಳು ಒಟ್ಟುಗೂಡಿ
    ನನ್ನನ್ನು ಕೊಲ್ಲಲು ಆಲೋಚಿಸಿಕೊಂಡಿದ್ದಾರೆ.
11 “ದೇವರು ಅವನನ್ನು ಕೈಬಿಟ್ಟಿದ್ದಾನೆ; ಬೆನ್ನಟ್ಟಿ ಅವನನ್ನು ಹಿಡಿಯಿರಿ;
    ಅವನಿಗೆ ಸಹಾಯಕರೇ ಇಲ್ಲ” ಎಂದು ಅವರು ಹೇಳಿಕೊಳ್ಳುತ್ತಿದ್ದಾರೆ.
12 ದೇವರೇ, ನನಗೆ ದೂರವಾಗಿರಬೇಡ.
    ನನ್ನ ದೇವರೇ, ಬೇಗನೇ ನನ್ನನ್ನು ರಕ್ಷಿಸು!
13 ನನ್ನ ಶತ್ರುಗಳನ್ನು ಸೋಲಿಸಿ
    ಅವರನ್ನು ಸಂಪೂರ್ಣವಾಗಿ ನಾಶಮಾಡು!
ನನಗೆ ಕೇಡುಮಾಡಬೇಕೆಂದಿರುವ ಅವರಿಗೆ
    ನಾಚಿಕೆಯೂ ಅವಮಾನವೂ ಆವರಿಸಿಕೊಳ್ಳಲಿ.
14 ನಾನಂತೂ ನಿನ್ನಲ್ಲೇ ಭರವಸವಿಟ್ಟಿರುವೆ.
    ನಿನ್ನನ್ನು ಹೆಚ್ಚೆಚ್ಚಾಗಿ ಕೊಂಡಾಡುತ್ತಿರುವೆ.
15 ನಿನ್ನ ಒಳ್ಳೆಯತನವನ್ನೂ ರಕ್ಷಣೆಯನ್ನೂ
    ನಾನು ಹಗಲೆಲ್ಲಾ ಹೇಳುತ್ತಲೇ ಇರುವೆನು.
    ಅವು ವರ್ಣಿಸಲಸಾಧ್ಯವಾಗಿವೆ.
16 ನನ್ನ ಒಡೆಯನಾದ ಯೆಹೋವನೇ, ನಿನ್ನ ಘನತೆಯ ಕುರಿತು ಹೇಳುತ್ತಲೇ ಇರುವೆನು.
    ನಿನ್ನೊಬ್ಬನ ಒಳ್ಳೆಯತನವನ್ನು ಕುರಿತು ಮಾತಾಡುತ್ತಲೇ ಇರುವೆನು.
17 ದೇವರೇ, ಬಾಲ್ಯದಿಂದಲೂ ನೀನೇ ನನಗೆ ಉಪದೇಶಕನಾಗಿರುವೆ.
    ನಿನ್ನ ಅದ್ಭುತಕಾರ್ಯಗಳ ಕುರಿತು ಇಂದಿನವರೆಗೂ ಪ್ರಚುರಪಡಿಸುತ್ತಿದ್ದೇನೆ.
18 ನಾನು ವೃದ್ಧನಾಗಿರುವೆ; ನನ್ನ ಕೂದಲೂ ನರೆತುಹೋಗಿದೆ.
ನನ್ನ ದೇವರೇ, ನನ್ನನ್ನು ಕೈಬಿಡಬೇಡ.
    ನಿನ್ನ ಬಲವನ್ನೂ ಪ್ರತಾಪವನ್ನೂ ಮುಂದಿನ ತಲೆಮಾರುಗಳವರಿಗೆಲ್ಲಾ ಪ್ರಕಟಿಸುವೆನು.
19 ದೇವರೇ, ನಿನ್ನ ನೀತಿಯು ಆಕಾಶಕ್ಕಿಂತಲೂ ಉನ್ನತವಾಗಿದೆ.
    ನೀನು ಅದ್ಭುತಕಾರ್ಯಗಳನ್ನು ಮಾಡಿರುವೆ.
    ದೇವರೇ, ನಿನ್ನಂಥ ದೇವರು ಬೇರೆಲ್ಲೂ ಇಲ್ಲ.
20 ನನ್ನನ್ನು ಅನೇಕ ಕಷ್ಟಹಿಂಸೆಗಳಿಗೆ ಗುರಿಮಾಡಿದಾತನು ನೀನೇ.
    ಆದರೆ ಅವೆಲ್ಲವುಗಳಿಂದ ನೀನು ನನ್ನನ್ನು ರಕ್ಷಿಸಿ ಜೀವಂತವಾಗಿ ಉಳಿಸಿದೆ.
    ಆಪತ್ತುಗಳಿಂದ ನಾನೆಷ್ಟೇ ಮುಳುಗಿಹೋಗಿದ್ದರೂ ಮೇಲೆತ್ತಿದಾತನು ನೀನೇ.
21 ನೀನು ನನ್ನ ಘನತೆಯನ್ನು ಮೊದಲಿಗಿಂತಲೂ ಹೆಚ್ಚಿಸುವೆ.
    ನೀನೇ ನನ್ನನ್ನು ಸಂತೈಸುವೆ.
22     ನಾನು ಹಾರ್ಪ್‌ವಾದ್ಯವನ್ನು ನುಡಿಸುತ್ತಾ ನಿನ್ನನ್ನು ಕೊಂಡಾಡುವೆನು.
    ನನ್ನ ದೇವರೇ, ನಿನ್ನ ನಂಬಿಕೆಗಸ್ತಿಕೆಯನ್ನು ಕೊಂಡಾಡುವೆನು.
    ಇಸ್ರೇಲಿನ ಪರಿಶುದ್ಧನೇ, ಲೈರ್‌ವಾದ್ಯವನ್ನು ನುಡಿಸುತ್ತಾ ನಿನ್ನನ್ನು ಭಜಿಸುವೆನು.
23 ನೀನು ನನ್ನನ್ನು ರಕ್ಷಿಸಿದ್ದರಿಂದ ನನ್ನ ಪ್ರಾಣವು ಉಲ್ಲಾಸಗೊಂಡಿದೆ.
    ನನ್ನ ತುಟಿಗಳಿಂದ ನಿನ್ನನ್ನು ಹಾಡಿ ಕೊಂಡಾಡುವೆನು.
24 ನನ್ನ ನಾಲಿಗೆಯು ನಿನ್ನ ಒಳ್ಳೆಯತನದ ಬಗ್ಗೆ ಹಾಡುತ್ತಲೇ ಇರುವುದು.
    ನನ್ನನ್ನು ಕೊಲ್ಲಬೇಕೆಂದಿರುವವರು ಸೋತುಹೋಗಿ ಅವಮಾನಕ್ಕೀಡಾಗುವರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International