Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
2 ಸಮುವೇಲನು 13

ಅಮ್ನೋನನು ತಾಮಾರಳನ್ನು ಮೋಹಿಸಿದ್ದು

13 ದಾವೀದನಿಗೆ ಅಬ್ಷಾಲೋಮನೆಂಬ ಮಗನಿದ್ದನು. ಅವನಿಗೆ ತಾಮಾರಳೆಂಬ ತಂಗಿಯಿದ್ದಳು. ಆಕೆ ಬಹಳ ಸುಂದರಿಯಾಗಿದ್ದಳು. ದಾವೀದನ ಮತ್ತೊಬ್ಬ ಮಗನಾದ ಅಮ್ನೋನನು, ತಾಮಾರಳನ್ನು ಮೋಹಿಸಿದನು. ತಾಮಾರಳು ಕನ್ಯೆಯಾಗಿದ್ದಳು. ಈ ಕಾರಣದಿಂದ ಅವನು ಆಕೆಗೆ ಏನು ಮಾಡಲೂ ಸಾಧ್ಯವಿರಲಿಲ್ಲ. ಅವಳ ಮೋಹದಲ್ಲಿಯೇ ಅಮ್ನೋನನು ಬಲಹೀನನಾದನು.[a]

ಅಮ್ನೋನನಿಗೆ ಶಿಮ್ಮನ ಮಗನಾದ ಯೋನಾದಾಬನೆಂಬ ಹೆಸರಿನ ಗೆಳೆಯನಿದ್ದನು. (ಶಿಮ್ಮನು ದಾವೀದನ ಸೋದರ.) ಯೋನಾದಾಬನು ಬಹಳ ಯುಕ್ತಿಯುಳ್ಳ ಮನುಷ್ಯ. ಯೋನಾದಾಬನು ಅಮ್ನೋನನಿಗೆ, “ದಿನದಿಂದ ದಿನಕ್ಕೆ ನೀನು ತೆಳ್ಳಗಾಗುತ್ತಲೇ ಇರುವೆ. ನೀನು ರಾಜನ ಮಗ, ನಿನ್ನ ಬಳಿ ತಿನ್ನಲು ಬಹಳ ಇದ್ದರೂ ನೀನು ತೆಳ್ಳಗಾಗುತ್ತಿರುವುದು ಏಕೆ? ನನಗೆ ತಿಳಿಸು” ಎಂದು ಕೇಳಿದನು.

ಅಮ್ನೋನನು ಯೋನಾದಾಬನಿಗೆ, “ನಾನು ತಾಮಾರಳನ್ನು ಮೋಹಿಸಿದ್ದೇನೆ. ಆದರೆ ಅವಳು ನನ್ನ ಸೋದರನಾದ ಅಬ್ಷಾಲೋಮನ ತಂಗಿ” ಎಂದು ಹೇಳಿದನು.

ಯೋನಾದಾಬನು ಅಮ್ನೋನನಿಗೆ, “ನೀನು ಹೋಗಿ ಹಾಸಿಗೆಯಲ್ಲಿ ಮಲಗಿಕೋ. ನೀನು ಕಾಯಿಲೆಯವನಂತೆ ನಟಿಸು. ಆಗ ನಿನ್ನನ್ನು ನೋಡಲು ನಿನ್ನ ತಂದೆಯು ಬರುತ್ತಾನೆ. ಆಗ ನೀನು ಅವನಿಗೆ, ‘ದಯವಿಟ್ಟು ನನ್ನ ಸೋದರಿಯಾದ ತಾಮಾರಳು ಇಲ್ಲಿಗೆ ಬಂದು, ನನಗೆ ಊಟವನ್ನು ಕೊಡಲಿ. ಅವಳು ನನ್ನ ಎದುರಿನಲ್ಲೇ ಅಡಿಗೆಯನ್ನು ಮಾಡಲಿ. ನಾನು ಅದನ್ನು ಕಣ್ಣಾರೆ ಕಂಡು ಅವಳ ಕೈಗಳಿಂದ ಊಟಮಾಡುತ್ತೇನೆ’ ಎಂದು ಹೇಳು” ಎಂಬುದಾಗಿ ಹೇಳಿಕೊಟ್ಟನು.

ಅಮ್ನೋನನು ಹಾಸಿಗೆಯಲ್ಲಿ ಮಲಗಿ ಕಾಯಿಲೆಯವನಂತೆ ನಟಿಸಿದನು. ಅವನನ್ನು ನೋಡಲು ರಾಜನಾದ ದಾವೀದನು ಅಲ್ಲಿಗೆ ಬಂದನು. ಅಮ್ನೋನನು ರಾಜನಾದ ದಾವೀದನಿಗೆ, “ದಯವಿಟ್ಟು ನನ್ನ ಸೋದರಿಯಾದ ತಾಮಾರಳನ್ನು ಒಳಕ್ಕೆ ಕರೆಯಿರಿ. ನಾನು ನೋಡುತ್ತಿರುವಂತೆ ಅವಳು ನನಗಾಗಿ ಎರಡು ಸಿಹಿ ರೊಟ್ಟಿಗಳನ್ನು ತಯಾರಿಸಲಿ. ಅವಳ ಕೈಗಳಿಂದ ಮಾಡಿದ ರೊಟ್ಟಿಗಳನ್ನೇ ನಾನು ತಿನ್ನುತ್ತೇನೆ” ಎಂದು ಬೇಡಿಕೊಂಡನು.

ದಾವೀದನು ತಾಮಾರಳ ಮನೆಗೆ ಸಂದೇಶಕರನ್ನು ಕಳುಹಿಸಿದನು. ಸಂದೇಶಕರು ತಾಮಾರಳಿಗೆ, “ನಿನ್ನ ಸೋದರನಾದ ಅಮ್ನೋನನ ಮನೆಗೆ ಹೋಗಿ ಅವನಿಗೋಸ್ಕರ ಸ್ವಲ್ಪ ಊಟವನ್ನು ತಯಾರಿಸು” ಎಂದರು.

ತಾಮಾರಳು ತನ್ನ ಸೋದರನಾದ ಅಮ್ನೋನನ ಮನೆಗೆ ಹೋದಳು. ಅಮ್ನೋನನು ಹಾಸಿಗೆಯಲ್ಲಿ ಮಲಗಿದ್ದನು. ತಾಮಾರಳು ಸ್ವಲ್ಪ ಹಿಟ್ಟನ್ನು ತೆಗೆದುಕೊಂಡು ಅದನ್ನು ತನ್ನ ಕೈಗಳಿಂದಲೇ ಕಲಸಿ ಅಮ್ನೋನನ ಕಣ್ಣೆದುರಿನಲ್ಲಿಯೇ ನಾದಿದಳು. ನಂತರ ಅವಳು ನಾದಿದ ಹಿಟ್ಟನ್ನು ಸುಟ್ಟು, ರೊಟ್ಟಿಗಳನ್ನು ಮಾಡಿದಳು. ತಾಮಾರಳು ರೊಟ್ಟಿಗಳನ್ನು, ರೊಟ್ಟಿಮಾಡುವ ಪಾತ್ರೆಯಿಂದ ಹೊರ ತೆಗೆದು ಅಮ್ನೋನನಿಗೋಸ್ಕರ ಅವುಗಳನ್ನು ಬಡಿಸಿದಳು. ಆದರೆ ಅಮ್ನೋನನು ತಿನ್ನಲಿಲ್ಲ. ಅಮ್ನೋನನು ತನ್ನ ಸೇವಕರೆಲ್ಲರಿಗೆ, “ನೀವೆಲ್ಲರೂ ನನ್ನನ್ನು ಒಬ್ಬಂಟಿಗನನ್ನಾಗಿ ಬಿಟ್ಟು ಹೋಗಿ!” ಎಂದನು. ಆದ್ದರಿಂದ ಸೇವಕರೆಲ್ಲರೂ ಅಮ್ನೋನನ ಕೊಠಡಿಯಿಂದ ಹೊರಗೆ ಹೋದರು.

ಅಮ್ನೋನನು ತಾಮಾರಳನ್ನು ಕೆಡಿಸಿದ್ದು

10 ಅಮ್ನೋನನು ತಾಮಾರಳಿಗೆ, “ರೊಟ್ಟಿಗಳನ್ನು ಒಳ ಕೋಣೆಗೆ ತೆಗೆದುಕೊಂಡು ಬಾ. ನಾನು ನಿನ್ನ ಕೈಗಳಿಂದಲೇ ತಿನ್ನುತ್ತೇನೆ” ಎಂದನು.

ತಾಮಾರಳು ತನ್ನ ಸೋದರನಾದ ಅಮ್ನೋನನಿದ್ದ ಒಳಕೋಣೆಗೆ ಹೋದಳು. ಅವಳು ತಾನು ಮಾಡಿದ ರೊಟ್ಟಿಗಳನ್ನು ತಂದಳು. 11 ತನ್ನ ಕೈಗಳಿಂದಲೇ ಅಮ್ನೋನನು ತಿನ್ನಲಿ ಎಂಬುದಕ್ಕಾಗಿ ಅವಳು ಅವನ ಬಳಿಗೆ ಹೋದಳು. ಆದರೆ ಅಮ್ನೋನನು ತಾಮಾರಳನ್ನು ಬಿಗಿಯಾಗಿ ಹಿಡಿದುಕೊಂಡನು. ಅವನು ಅವಳಿಗೆ, “ತಂಗಿಯೇ, ಬಂದು ನನ್ನ ಜೊತೆಯಲ್ಲಿ ಮಲಗು” ಎಂದು ಹೇಳಿದನು.

12 ತಾಮಾರಳು ಅಮ್ನೋನನಿಗೆ, “ಸೋದರನೇ ಬೇಡ! ನನ್ನನ್ನು ಬಲಾತ್ಕರಿಸದಿರು! ಇಸ್ರೇಲಿನಲ್ಲಿ ಇಂತಹ ಕಾರ್ಯ ಎಂದೆಂದಿಗೂ ನಡೆಯಬಾರದು! ಅಪಮಾನಕರವಾದ ಈ ಕಾರ್ಯವನ್ನು ಮಾಡಬೇಡ! 13 ನನಗಾದ ಈ ಕಳಂಕವನ್ನು ಎಂದೆಂದಿಗೂ ನಾನು ತೊಡೆದುಹಾಕಲಾಗುವುದಿಲ್ಲ. ಇಸ್ರೇಲಿನ ಜನರಲ್ಲಿ ತಮ್ಮ ಅಪಮಾನಕರವಾದ ಕಾರ್ಯಗಳಿಂದ ನೀಚರೆನಿಸಿಕೊಳ್ಳುವ ಜನರಂತೆ ನೀನೂ ಆಗಿಬಿಡುವೆ. ದಯವಿಟ್ಟು ರಾಜನೊಂದಿಗೆ ಮಾತನಾಡು. ಅವನು ನಿನ್ನ ಜೊತೆಯಲ್ಲಿ ನನ್ನ ಮದುವೆ ಮಾಡಲಿ” ಎಂದಳು.

14 ಆದರೆ ತಾಮಾರಳ ಮಾತುಗಳನ್ನು ಅಮ್ನೋನನು ಕೇಳಲಿಲ್ಲ. ಅವನು ತಾಮಾರಳಿಗಿಂತ ಬಲಶಾಲಿಯಾಗಿದ್ದುದರಿಂದ ಅವಳ ಮೇಲೆ ಬಲಾತ್ಕಾರ ಮಾಡಿದನು. 15 ಅನಂತರ ಅಮ್ನೋನನು ತಾಮಾರಳನ್ನು ದ್ವೇಷಿಸಿದನು. ಅಮ್ನೋನನು ತಾನು ಅವಳನ್ನು ಮೊದಲು ಮೋಹಿಸಿದುದಕ್ಕಿಂತ ಹೆಚ್ಚಾಗಿ ದ್ವೇಷಿಸಿದನು. ಅಮ್ನೋನನು ತಾಮಾರಳಿಗೆ, “ಮೇಲೇಳು, ಹೊರಟುಹೋಗು!” ಎಂದನು.

16 ತಾಮಾರಳು ಅಮ್ನೋನನಿಗೆ, “ಇಲ್ಲ! ನನ್ನನ್ನು ಹೊರಗೆ ಕಳುಹಿಸುವುದು ನೀನು ಮೊದಲು ಮಾಡಿದ್ದಕ್ಕಿಂತಲೂ ಹೆಚ್ಚಿನ ದುಷ್ಕೃತ್ಯವಾಗಿದೆ” ಎಂದು ಹೇಳಿದಳು.

ಆದರೆ ಅಮ್ನೋನನು ತಾಮಾರಳ ಮಾತುಗಳನ್ನು ಆಲಿಸಲಿಲ್ಲ. 17 ಅಮ್ನೋನನು ತನ್ನ ಕಿರಿಯ ಸೇವಕನೊಬ್ಬನನ್ನು ಕರೆದು, “ಈ ಹುಡುಗಿಯನ್ನು ಈಗಲೇ ಈ ಕೊಠಡಿಯಿಂದ ಹೊರಗೆ ನೂಕು! ಅವಳು ಹೋದ ನಂತರ ಬಾಗಿಲಿಗೆ ಬೀಗಹಾಕು” ಎಂದು ಹೇಳಿದನು.

18 ಅಮ್ನೋನನ ಸೇವಕನು ತಾಮಾರಳನ್ನು ಹೊರನೂಕಿ ಅವಳು ಹೋದ ನಂತರ ಬಾಗಿಲಿಗೆ ಬೀಗವನ್ನು ಹಾಕಿದನು.

ತಾಮಾರಳು ನಾನಾ ಬಣ್ಣದ ನಿಲುವಂಗಿಯನ್ನು ಧರಿಸಿಕೊಂಡಿದ್ದಳು. ರಾಜನ ಹೆಣ್ಣುಮಕ್ಕಳು ಕನ್ಯೆಯರಾಗಿದ್ದಾಗ ಇಂತಹ ನಿಲುವಂಗಿಗಳನ್ನು ಧರಿಸುತ್ತಿದ್ದರು. 19 ತಾಮಾರಳು ಬೂದಿಯನ್ನು ತೆಗೆದುಕೊಂಡು ತನ್ನ ತಲೆಯ ಮೇಲೆ ಸುರಿದುಕೊಂಡು ತನ್ನ ನಿಲುವಂಗಿಯನ್ನು ಹರಿದುಕೊಂಡಳು; ತನ್ನ ತಲೆಯ ಮೇಲೆ ಕೈಗಳನ್ನಿಟ್ಟುಕೊಂಡು ಗಟ್ಟಿಯಾಗಿ ಗೋಳಾಡಿದಳು.

20 ತಾಮಾರಳ ಸೋದರನಾದ ಅಬ್ಷಾಲೋಮನು ತಾಮಾರಳಿಗೆ, “ನಿನ್ನ ಸೋದರನಾದ ಅಮ್ನೋನನು ನಿನ್ನನ್ನು ಕೆಡಿಸಿ ಬಿಟ್ಟನಲ್ಲವೇ? ಅಮ್ನೋನನು ನಿನ್ನ ಸೋದರ. ತಂಗಿಯೇ, ಈಗ ಸದ್ಯಕ್ಕೆ ಸುಮ್ಮನಿರು. ಇದರಿಂದ ನೀನು ಹೆಚ್ಚು ಗಲಿಬಿಲಿಯಾಗದಿರು” ಎಂದು ಹೇಳಿದನು. ತಾಮಾರಳು ಏನನ್ನೂ ಹೇಳಲಿಲ್ಲ. ಅವಳು ಅಬ್ಷಾಲೋಮನ ಮನೆಯಲ್ಲಿ ವಾಸಿಸಲು ಹೋದಳು.

21 ರಾಜನಾದ ದಾವೀದನಿಗೆ ಈ ವರ್ತಮಾನವು ತಿಳಿದು ಬಹಳ ಕೋಪಗೊಂಡನು. 22 ಅಬ್ಷಾಲೋಮನು ಅಮ್ನೋನನನ್ನು ದ್ವೇಷಿಸಿದನು. ಅಬ್ಷಾಲೋಮನು ಒಳ್ಳೆಯದನ್ನಾಗಲಿ ಕೆಟ್ಟದ್ದನ್ನಾಗಲಿ ಏನನ್ನೂ ಅಮ್ನೋನನಿಗೆ ಹೇಳಲಿಲ್ಲ. ಅಮ್ನೋನನು ತನ್ನ ತಂಗಿಯಾದ ತಾಮಾರಳನ್ನು ಕೆಡಿಸಿದ್ದಕ್ಕಾಗಿ ಅಬ್ಷಾಲೋಮನು ಅಮ್ನೋನನನ್ನು ದ್ವೇಷಿಸಿದನು.

ಅಬ್ಷಾಲೋಮನ ಪ್ರತೀಕಾರ

23 ಎರಡು ವರ್ಷಗಳ ನಂತರ, ಅಬ್ಷಾಲೋಮನ ಕುರಿಗಳ ತುಪ್ಪಟವನ್ನು ಕತ್ತರಿಸುವುದಕ್ಕಾಗಿ ಕೆಲವು ಜನರು ಬಾಳ್‌ಹಾಚೋರಿಗೆ ಬಂದರು. ಇದನ್ನು ಬಂದು ನೋಡುವಂತೆ ರಾಜನ ಮಕ್ಕಳಿಗೆಲ್ಲ ಅಬ್ಷಾಲೋಮನು ಆಹ್ವಾನವನ್ನು ನೀಡಿದನು. 24 ಅಬ್ಷಾಲೋಮನು ರಾಜನ ಬಳಿಗೆ ಹೋಗಿ, “ನನ್ನ ಕುರಿಗಳ ತುಪ್ಪಟವನ್ನು ಕತ್ತರಿಸಲು ಕೆಲವು ಜನರು ಬರುತ್ತಾರೆ. ದಯವಿಟ್ಟು ನೀವು ನಿಮ್ಮ ಸೇವಕರೊಂದಿಗೆ ಬಂದು ಅದನ್ನು ಗಮನಿಸಿ” ಎಂದನು.

25 ರಾಜನಾದ ದಾವೀದನು ಅಬ್ಷಾಲೋಮನಿಗೆ, “ಮಗನೇ, ನಾವೆಲ್ಲ ಬರುವುದಿಲ್ಲ. ಅದು ನಿನಗೆ ಬಹಳ ತೊಂದರೆಯಾಗುತ್ತದೆ” ಎಂದು ಹೇಳಿದನು.

ಅಬ್ಷಾಲೋಮನು ಬೇಡಿಕೊಂಡರೂ ದಾವೀದನು ಹೋಗಲಿಲ್ಲ; ಆದರೆ ದಾವೀದನು ಅವನನ್ನು ಆಶೀರ್ವದಿಸಿದನು.

26 ಅಬ್ಷಾಲೋಮನು, “ನೀನು ಬರಲು ಇಚ್ಛಿಸದಿದ್ದರೆ, ದಯವಿಟ್ಟು ನನ್ನ ಸೋದರನಾದ ಅಮ್ನೋನನನ್ನು ಕಳುಹಿಸು” ಎಂದು ಕೇಳಿದನು.

ರಾಜನಾದ ದಾವೀದನು ಅಬ್ಷಾಲೋಮನಿಗೆ, “ನಿನ್ನ ಜೊತೆಯಲ್ಲಿ ಅವನೇಕೆ ಬರಬೇಕು?” ಎಂದನು.

27 ಅಬ್ಷಾಲೋಮನು ದಾವೀದನನ್ನು ಬಹಳವಾಗಿ ಬೇಡಿಕೊಂಡನು. ಕೊನೆಗೆ ದಾವೀದನು ಅಮ್ನೋನನನ್ನು ಮತ್ತು ರಾಜನ ಗಂಡುಮಕ್ಕಳೆಲ್ಲರನ್ನು ಅಬ್ಷಾಲೋಮನ ಜೊತೆಯಲ್ಲಿ ಹೋಗಲು ಹೇಳಿದನು.

ಅಮ್ನೋನನನ್ನು ಕೊಂದುಹಾಕಿದ್ದು

28 ಆಗ ಅಬ್ಷಾಲೋಮನು ತನ್ನ ಸೇವಕರಿಗೆ ಈ ರೀತಿ ಆಜ್ಞೆ ಮಾಡಿದನು: “ಅಮ್ನೋನನನ್ನು ಗಮನಿಸುತ್ತಿರಿ. ಅವನು ಮತ್ತನಾಗಿ ಆನಂದಿಸುತ್ತಿರುವಾಗ ನಾನು ಆಜ್ಞೆಯನ್ನು ಕೊಡುತ್ತೇನೆ. ಆಗ ನೀವು ಅವನ ಮೇಲೆ ಆಕ್ರಮಣಮಾಡಿ ಕೊಲ್ಲಬೇಕು. ನಿಮಗೆ ಶಿಕ್ಷೆಯಾಗುತ್ತದೆ ಎಂಬ ಭಯವಿಲ್ಲದಿರಲಿ, ಯಾಕೆಂದರೆ ನೀವು ನನ್ನ ಆಜ್ಞೆಯನ್ನು ಪಾಲಿಸಿದಿರಷ್ಟೇ, ಆದ್ದರಿಂದ ಶಕ್ತರಾಗಿಯೂ ಧೈರ್ಯವಂತರಾಗಿಯೂ ಇರಿ” ಎಂದನು.

29 ಅಬ್ಷಾಲೋಮನ ಸೇವಕರು ಅವನ ಆಜ್ಞೆಯಂತೆ ಅಮ್ನೋನನನ್ನು ಕೊಂದುಬಿಟ್ಟರು. ಆದರೆ ದಾವೀದನ ಇತರ ಗಂಡುಮಕ್ಕಳೆಲ್ಲರೂ ತಮ್ಮತಮ್ಮ ಹೇಸರಕತ್ತೆಗಳನ್ನೇರಿ ತಪ್ಪಿಸಿಕೊಂಡರು.

ಅಮ್ನೋನನ ಮರಣದ ಸುದ್ದಿಯು ದಾವೀದನಿಗೆ ಮುಟ್ಟಿತು

30 ರಾಜನ ಗಂಡುಮಕ್ಕಳು ತಮ್ಮ ಮಾರ್ಗದಲ್ಲಿ ಬರುತ್ತಿರುವಾಗಲೇ ದಾವೀದನಿಗೆ ಈ ಸುದ್ದಿಯು ತಲುಪಿತು. “ಅಬ್ಷಾಲೋಮನು ರಾಜನ ಮಕ್ಕಳೆಲ್ಲರನ್ನೂ ಕೊಂದುಹಾಕಿದನು; ಒಬ್ಬ ಮಗನನ್ನೂ ಜೀವಂತವಾಗಿ ಬಿಟ್ಟಿಲ್ಲ” ಎಂಬುದೇ ಆ ಸುದ್ದಿ.

31 ರಾಜನಾದ ದಾವೀದನು ಬಟ್ಟೆಗಳನ್ನು ಹರಿದುಕೊಂಡು ನೆಲದ ಮೇಲೆ ಬಿದ್ದನು. ದಾವೀದನ ಸುತ್ತಲೂ ನಿಂತಿದ್ದ ಅವನ ಸೇವಕರೂ ತಮ್ಮತಮ್ಮ ಬಟ್ಟೆಗಳನ್ನು ಹರಿದುಕೊಂಡರು.

32 ಆದರೆ ದಾವೀದನ ಅಣ್ಣನಾದ ಶಿಮ್ಮನ ಮಗ ಯೋನಾದಾಬನು ದಾವೀದನಿಗೆ, “ರಾಜನ ಗಂಡುಮಕ್ಕಳೆಲ್ಲರನ್ನೂ ಕೊಂದುಹಾಕಿದರೆಂದು ಯೋಚಿಸುವುದು ಸರಿಯಲ್ಲ. ಅಮ್ನೋನನು ಮಾತ್ರ ಸತ್ತಿರಬೇಕು. ಅಬ್ಷಾಲೋಮನ ತಂಗಿಯಾದ ತಾಮಾರಳನ್ನು ಅಮ್ನೋನನು ಕೆಡಿಸಿದ್ದಕ್ಕಾಗಿ ಅಬ್ಷಾಲೋಮನು ಆ ದಿನದಿಂದ ಅವನನ್ನು ಕೊಲ್ಲಲು ಸಂಚು ಮಾಡುತ್ತಿದ್ದನು. 33 ರಾಜನಾದ ನನ್ನ ಒಡೆಯನೇ, ರಾಜನ ಮಕ್ಕಳೆಲ್ಲರೂ ಸತ್ತರೆಂದು ಯೋಚಿಸಬೇಡ. ಅಮ್ನೋನನು ಮಾತ್ರ ಸತ್ತುಹೋದನು” ಎಂದನು.

34 ಅಬ್ಷಾಲೋಮನು ಓಡಿಹೋದನು.

ಆ ನಗರದ ಗೋಡೆಯ ಮೇಲೆ ಒಬ್ಬ ಕಾವಲುಗಾರನು ನಿಂತಿದ್ದನು. ಬೆಟ್ಟದ ಬೇರೊಂದು ಕಡೆಯಿಂದ ಅಂದರೆ ಹೋರೋನಿನ ಮಾರ್ಗವಾಗಿ ಅನೇಕ ಜನರು ಬರುತ್ತಿರುವುದನ್ನು ಅವನು ನೋಡಿದನು. 35 ಯೋನಾದಾಬನು ರಾಜನಾದ ದಾವೀದನಿಗೆ, “ನಾನು ಹೇಳಿದ್ದು ಸರಿ. ಅಲ್ಲಿ ನೋಡು, ರಾಜನ ಗಂಡುಮಕ್ಕಳೆಲ್ಲರೂ ಬರುತ್ತಿದ್ದಾರೆ” ಎಂದನು.

36 ಯೋನಾದಾಬನು ಈ ಮಾತುಗಳನ್ನು ಹೇಳಿ ಮುಗಿಸುವಷ್ಟರಲ್ಲಿ ರಾಜನ ಗಂಡುಮಕ್ಕಳೆಲ್ಲರೂ ಬಂದರು. ಅವರು ಗಟ್ಟಿಯಾಗಿ ಅಳುತ್ತಿದ್ದರು. ದಾವೀದನು ಮತ್ತು ಅವನ ಸೇವಕರೆಲ್ಲ ಅಳರಾಂಭಿಸಿದರು. ಅವರೆಲ್ಲರೂ ಮತ್ತಷ್ಟು ಜೋರಾಗಿ ಗೋಳಾಡಿದರು. 37 ದಾವೀದನು ತನ್ನ ಮಗನಿಗಾಗಿ ಪ್ರತಿನಿತ್ಯವೂ ಗೋಳಾಡುತ್ತಿದ್ದನು.

ಅಬ್ಷಾಲೋಮನು ಗೆಷೂರಿಗೆ ತಪ್ಪಿಸಿಕೊಂಡು ಹೋದದ್ದು

ಗೆಷೂರಿನ ರಾಜನೂ ಅಮ್ಮೀಹೂದನ ಮಗನೂ ಆದ ತಲ್ಮೈನ[b] ಹತ್ತಿರಕ್ಕೆ ಅಬ್ಷಾಲೋಮನು ಓಡಿಹೋದನು. 38 ಅಬ್ಷಾಲೋಮನು ಗೆಷೂರಿಗೆ ಓಡಿಹೋದ ನಂತರ, ಅಲ್ಲಿ ಅವನು ಮೂರು ವರ್ಷಗಳ ಕಾಲ ನೆಲೆಸಿದನು. 39 ಅಮ್ನೋನನ ಮರಣದ ವಿಷಯದಲ್ಲಿ ರಾಜನಾದ ದಾವೀದನು ಸಂತೈಸಿಕೊಂಡನು. ಆದರೆ ಅವನು ಅಬ್ಷಾಲೋಮನನ್ನು ಕಾಣಲು ಬಹಳವಾಗಿ ಹಾತೊರೆಯತೊಡಗಿದನು.

2 ಕೊರಿಂಥದವರಿಗೆ 6

ನಾವು ದೇವರ ಜೊತೆಕೆಲಸದವರಾಗಿದ್ದೇವೆ. ಆದ್ದರಿಂದ ನಿಮ್ಮನ್ನು ಬೇಡಿಕೊಳ್ಳುವುದೇನೆಂದರೆ, ನೀವು ದೇವರಿಂದ ಹೊಂದಿಕೊಂಡ ಕೃಪೆಯು ವ್ಯರ್ಥವಾಗದಂತೆ ನೋಡಿಕೊಳ್ಳಿ. ದೇವರು ಹೀಗೆನ್ನುತ್ತಾನೆ:

“ಸುಪ್ರಸನ್ನತೆಯ ಕಾಲದಲ್ಲಿ ನಾನು ನಿನಗೆ ಕಿವಿಗೊಟ್ಟೆನು,
    ರಕ್ಷಣೆಯ ದಿನದಲ್ಲಿ ನಾನು ನಿನಗೆ ಸಹಾಯ ಮಾಡಿದೆನು.”(A)

ಇದೇ ಆ “ಸುಪ್ರಸನ್ನತೆಯ ಕಾಲ.” ಇದೇ ಆ “ರಕ್ಷಣೆಯ ದಿನ.”

ನಮ್ಮ ಸೇವೆಯು ನಿಂದೆಗೆ ಒಳಗಾಗಬಾರದೆಂದು ನಾವು ಯಾರಿಗೂ ತೊಂದರೆ ಮಾಡುವುದಿಲ್ಲ. ಆದರೆ ಪ್ರತಿಯೊಂದು ವಿಷಯದಲ್ಲಿಯೂ ನಾವು ದೇವರ ಸೇವಕರೆಂಬುದನ್ನು ತೋರ್ಪಡಿಸುತ್ತೇವೆ. ನಾವು ಸಂಕಟಗಳಲ್ಲಿಯೂ ಕೊರತೆಗಳಲ್ಲಿಯೂ ಇಕ್ಕಟ್ಟುಗಳಲ್ಲಿಯೂ ಪೆಟ್ಟುಗಳಲ್ಲಿಯೂ ಸೆರೆಮನೆಗಳಲ್ಲಿಯೂ ಕಲಹಗಳಲ್ಲಿಯೂ ಕಷ್ಟವಾದ ಕೆಲಸಗಳಲ್ಲಿಯೂ ನಿದ್ದೆಗೇಡುಗಳಲ್ಲಿಯೂ ಉಪವಾಸಗಳಲ್ಲಿಯೂ ಬಹು ತಾಳ್ಮೆಯನ್ನು ತೋರುತ್ತೇವೆ. ನಾವು ದೇವರ ಸೇವಕರೆಂಬುದನ್ನು ನಮ್ಮ ತಿಳುವಳಿಕೆಯಿಂದಲೂ ತಾಳ್ಮೆಯಿಂದಲೂ ಕನಿಕರದಿಂದಲೂ ಮತ್ತು ಪರಿಶುದ್ಧ ಜೀವಿತದಿಂದಲೂ ತೋರ್ಪಡಿಸಿದ್ದೇವೆ. ನಾವು ಇದನ್ನು ಪವಿತ್ರಾತ್ಮನಿಂದಲೂ ನಿಜವಾದ ಪ್ರೀತಿಯಿಂದಲೂ ಸತ್ಯವನ್ನು ಹೇಳುವುದರಿಂದಲೂ ದೇವರ ಶಕ್ತಿಯಿಂದಲೂ ತೋರ್ಪಡಿಸುತ್ತೇವೆ. ಪ್ರತಿಯೊಂದರ ವಿರೋಧವಾಗಿ ನಮ್ಮನ್ನು ಸಂರಕ್ಷಿಸಿಕೊಳ್ಳಲು ನಮ್ಮ ಒಳ್ಳೆಯ ಜೀವಿತವನ್ನೇ ಉಪಯೋಗಿಸುತ್ತೇವೆ.

ಕೆಲವರು ನಮ್ಮನ್ನು ಸನ್ಮಾನಿಸುತ್ತಾರೆ; ಇನ್ನು ಕೆಲವರು ನಮಗೆ ಅವಮಾನ ಮಾಡುತ್ತಾರೆ. ಕೆಲವರು ನಮ್ಮ ಬಗ್ಗೆ ಒಳ್ಳೆಯ ವಿಷಯಗಳನ್ನು ಹೇಳುತ್ತಾರೆ; ಇನ್ನು ಕೆಲವರು ನಮ್ಮ ಬಗ್ಗೆ ಕೆಟ್ಟ ವಿಷಯಗಳನ್ನು ಹೇಳುತ್ತಾರೆ. ಕೆಲವರು ನಮ್ಮನ್ನು ಸುಳ್ಳುಗಾರರೆನ್ನುತ್ತಾರೆ, ಆದರೆ ನಾವು ಸತ್ಯವನ್ನೇ ಹೇಳುತ್ತೇವೆ. ನಾವು ಪ್ರಸಿದ್ಧರಾಗಿದ್ದರೂ ಕೆಲವರು ನಮ್ಮನ್ನು ಅಪ್ರಸಿದ್ಧರಂತೆ ಕಾಣುತ್ತಾರೆ. ನಾವು ಸಾಯುವಂತಿದ್ದರೂ ಬದುಕಿದ್ದೇವೆ; ಶಿಕ್ಷಿಸಲ್ಪಟ್ಟರೂ ಕೊಲ್ಲಲ್ಪಡಲಿಲ್ಲ; 10 ದುಃಖಿತರಂತೆ ಕಂಡರೂ ಯಾವಾಗಲೂ ಉಲ್ಲಾಸಿಸುವವರಾಗಿದ್ದೇವೆ; ಬಡವರಂತೆ ಕಂಡರೂ ಅನೇಕರನ್ನು ನಂಬಿಕೆಯಲ್ಲಿ ಐಶ್ವರ್ಯವಂತರನ್ನಾಗಿ ಮಾಡುತ್ತಿದ್ದೇವೆ; ಏನೂ ಇಲ್ಲದವರಂತೆ ಕಂಡರೂ ವಾಸ್ತವವಾಗಿ ಎಲ್ಲವನ್ನೂ ಹೊಂದಿದವರಾಗಿದ್ದೇವೆ.

11 ಕೊರಿಂಥದಲ್ಲಿರುವ ನಿಮ್ಮೊಂದಿಗೆ ಬಿಚ್ಚುಮನಸ್ಸಿನಿಂದ ಮಾತಾಡಿದ್ದೇವೆ. ನಮ್ಮ ಹೃದಯಗಳನ್ನು ನಿಮ್ಮ ಮುಂದೆ ತೆರೆದಿಟ್ಟಿದ್ದೇವೆ. 12 ನಿಮ್ಮ ಮೇಲೆ ನಮಗಿರುವ ಪ್ರೀತಿಯು ನಿಂತು ಹೋಗಿಲ್ಲ. ಆದರೆ ನಮ್ಮ ಮೇಲೆ ನಿಮಗಿದ್ದ ಪ್ರೀತಿಯೇ ನಿಂತು ಹೋಗಿದೆ. 13 ನೀವು ನನ್ನ ಮಕ್ಕಳೆಂಬಂತೆ ನಾನು ನಿಮ್ಮೊಂದಿಗೆ ಮಾತಾಡುತ್ತಿದ್ದೇನೆ. ನಾವು ತೆರೆದಂತೆ ನೀವು ಸಹ ನಿಮ್ಮ ಹೃದಯಗಳನ್ನು ತೆರೆಯಿರಿ.

ಅವಿಶ್ವಾಸಿಗಳ ಮಧ್ಯದಲ್ಲಿ ಜೀವಿಸುವುದರ ಬಗ್ಗೆ ಎಚ್ಚರಿಕೆ

14 ಕ್ರಿಸ್ತನಂಬಿಕೆಯಿಲ್ಲದ ಜನರಿಗೂ ನಿಮಗೂ ವ್ಯತ್ಯಾಸವಿದೆ. ಆದ್ದರಿಂದ ನೀವು ಅವರೊಂದಿಗೆ ಸೇರಬೇಡಿ. ಒಳ್ಳೆಯದು ಮತ್ತು ಕೆಟ್ಟದು ಒಟ್ಟಾಗಿ ಸೇರಲು ಸಾಧ್ಯವಿಲ್ಲ. ಬೆಳಕು ಕತ್ತಲೆಯೊಡನೆ ಅನ್ಯೋನ್ಯವಾಗಿರಲು ಸಾಧ್ಯವೇ? 15 ಕ್ರಿಸ್ತನೂ ಸೈತಾನನೂ ಅನ್ಯೋನ್ಯವಾಗಿರಲು ಸಾಧ್ಯವೇ? ವಿಶ್ವಾಸಿಗಳಿಗೂ ಅವಿಶ್ವಾಸಿಗಳಿಗೂ ಪಾಲುಗಾರಿಕೆಯೇನು? 16 ದೇವರ ಆಲಯವು ವಿಗ್ರಹಗಳೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳಲು ಸಾಧ್ಯವೇ? ನಾವು ಜೀವಸ್ವರೂಪನಾದ ದೇವರ ಆಲಯವಾಗಿದ್ದೇವೆ. ದೇವರು ಹೇಳಿದಂತೆ:

“ನಾನು ಅವರೊಂದಿಗೆ ವಾಸಿಸುವೆನು; ಅವರೊಂದಿಗೆ ನಡೆಯುವೆನು;
ಅವರ ದೇವರಾಗಿರುವೆನು; ಅವರು ನನ್ನ ಜನರಾಗಿರುವರು.”(B)

17 “ಆದ್ದರಿಂದ ಆ ಜನರನ್ನು ಬಿಟ್ಟು ಹೊರಬನ್ನಿರಿ;
    ಅವರಿಂದ ಬೇರ್ಪಡಿರಿ ಎನ್ನುತ್ತಾನೆ ಪ್ರಭುವು.
ಅಶುದ್ಧವಾದ ಯಾವುದನ್ನೂ ಮುಟ್ಟಬೇಡಿ,
    ಆಗ ನಾನು ನಿಮ್ಮನ್ನು ಸ್ವೀಕರಿಸಿಕೊಳ್ಳುವೆನು.”(C)

18 “ನಾನು ನಿಮ್ಮ ತಂದೆಯಾಗಿರುವೆನು
    ಮತ್ತು ನೀವು ನನ್ನ ಪುತ್ರಪುತ್ರಿಯರಾಗುವಿರಿ ಎನ್ನುತ್ತಾನೆ ಸರ್ವಶಕ್ತನಾದ ಪ್ರಭುವು.”(D)

ಯೆಹೆಜ್ಕೇಲ 20

ಯೆಹೋವನಿಗೆ ಇಸ್ರೇಲ್ ವಿಮುಖಗೊಂಡದ್ದು

20 ಮಾರ್ಗದರ್ಶನಕ್ಕಾಗಿ ಯೆಹೋವನನ್ನು ಕೇಳಲು ಒಂದು ದಿನ ಇಸ್ರೇಲಿನ ಹಿರಿಯರಲ್ಲಿ ಕೆಲವರು ನನ್ನ ಬಳಿಗೆ ಬಂದರು. ಅದು ಸೆರೆವಾಸದ ಏಳನೆ ವರ್ಷದ ಐದನೆ ತಿಂಗಳಿನ ಹತ್ತನೆಯ ದಿನ. ಹಿರಿಯರು ನನ್ನ ಎದುರಿನಲ್ಲಿ ಕುಳಿತುಕೊಂಡರು.

ಆಗ ಯೆಹೋವನ ಸಂದೇಶ ನನಗೆ ಬಂದಿತು. ಆತನು ಹೇಳಿದ್ದೇನೆಂದರೆ, “ನರಪುತ್ರನೇ, ಇಸ್ರೇಲಿನ ಹಿರಿಯರೊಂದಿಗೆ ಮಾತಾಡಿ ಅವರಿಗೆ, ‘ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: ನೀವು ನನ್ನ ಬುದ್ಧಿವಾದವನ್ನು ಕೇಳಲು ಬಂದಿರುವಿರಾ? ನನ್ನ ಜೀವದಾಣೆ, ನನ್ನ ಬುದ್ಧಿವಾದವನ್ನು ನಿಮಗೆ ಹೇಳುವದಿಲ್ಲವೆಂದು ನಾನು ಪ್ರಮಾಣಮಾಡುತ್ತೇನೆ. ನನ್ನ ಒಡೆಯನಾದ ಯೆಹೋವನ ವಾಕ್ಯವಿದು.’ ನರಪುತ್ರನೇ, ನೀನು ಅವರ ನ್ಯಾಯತೀರಿಸುವಿಯಾ? ಅವರ ಪೂರ್ವಿಕರು ಮಾಡಿದ ಭಯಂಕರ ಸಂಗತಿಗಳನ್ನು ನೀನು ಅವರಿಗೆ ಹೇಳಬೇಕು. ನೀನು ಅವರಿಗೆ, ‘ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: ನಾನು ಇಸ್ರೇಲನ್ನು ಆರಿಸಿಕೊಂಡ ದಿವಸ ನಾನು ನನ್ನನ್ನು ಈಜಿಪ್ಟ್ ದೇಶದಲ್ಲಿ ಅವರಿಗೆ ಪ್ರಕಟಿಸಿಕೊಂಡೆನು. ನಾನು ನನ್ನ ಕೈಯನ್ನು ಮೇಲೆತ್ತಿ ಯಾಕೋಬನ ಕುಟುಂಬಕ್ಕೆ ವಾಗ್ದಾನ ಮಾಡಿದೆನು. ನಾನು ಅವರಿಗೆ, “ನಿಮ್ಮ ಒಡೆಯನಾದ ಯೆಹೋವನು ನಾನೇ.” ಎಂದು ಹೇಳಿದೆನು. ಅವರನ್ನು ಈಜಿಪ್ಟಿನಿಂದ ಹೊರಗೆ ತಂದು, ನಾನು ಅವರಿಗಾಗಿ ಹುಡುಕಿಟ್ಟಿರುವ ದೇಶಕ್ಕೆ ಕರೆದುಕೊಂಡು ಹೋಗುವುದಾಗಿ ವಾಗ್ದಾನ ಮಾಡಿದೆನು. ಅದು ಹಾಲೂ ಜೇನೂ ಹರಿಯುವ ದೇಶವಾಗಿತ್ತು. ಅದು ಎಲ್ಲಾ ದೇಶಗಳಿಗಿಂತಲೂ ಸುಂದರವಾದ ದೇಶ.[a]

“‘ನಾನು ಇಸ್ರೇಲ್ ಜನಾಂಗದವರಿಗೆ, ಅವರಲ್ಲಿದ್ದ ಅಸಹ್ಯವಾದ ಎಲ್ಲಾ ವಿಗ್ರಹಗಳನ್ನು ಬಿಸಾಡಿಬಿಡಲು ಹೇಳಿದೆನು. ಈಜಿಪ್ಟಿನ ಹೊಲಸು ವಿಗ್ರಹಗಳಿಂದ ಹೊಲಸು ಆಗಬಾರದು ಎಂದು ಹೇಳಿದೆನು. “ನಾನು ನಿಮ್ಮ ದೇವರಾದ ಯೆಹೋವನು” ಎಂಬುದಾಗಿ ಹೇಳಿದೆನು. ಆದರೆ ಅವರು ನನ್ನ ವಿರುದ್ಧವಾಗಿ ಎದ್ದು ನನ್ನ ಮಾತುಗಳನ್ನು ಕೇಳದೆ ಹೋದರು. ತಮ್ಮ ವಿಗ್ರಹಗಳನ್ನು ಬಿಸಾಡಿಬಿಡಲಿಲ್ಲ. ಈಜಿಪ್ಟಿನ ವಿಗ್ರಹಗಳನ್ನು ತೊರೆದುಬಿಡಲಿಲ್ಲ. ಆದ್ದರಿಂದ ನಾನು ಅವರನ್ನು (ಇಸ್ರೇಲರನ್ನು) ಈಜಿಪ್ಟಿನಲ್ಲಿಯೇ ನಾಶಮಾಡಿ ನನ್ನ ರೋಷಾಗ್ನಿಯನ್ನು ತೀರಿಸಿಕೊಳ್ಳಲು ಆಲೋಚಿಸಿದೆನು. ಆದರೆ ನಾನು ಅವರನ್ನು ನಾಶಮಾಡಲಿಲ್ಲ. ಇಸ್ರೇಲರು ವಾಸವಾಗಿರುವ ಸ್ಥಳದಲ್ಲಿ ಜನರ ಮುಂದೆ ನನ್ನ ಹೆಸರನ್ನು ಅವಮಾನಕ್ಕೆ ಗುರಿಮಾಡಲು ನನಗೆ ಇಷ್ಟವಿರಲಿಲ್ಲ. ಈಜಿಪ್ಟಿನಿಂದ ಹೊರಗೆ ತರುತ್ತೇನೆಂಬ ವಾಗ್ದಾನದೊಡನೆ ನಾನು ಇಸ್ರೇಲರಿಗೆ ಪ್ರಕಟಿಸಿಕೊಂಡಿದ್ದನ್ನು ಅವರು ನೋಡಿದ್ದರು. ಆದ್ದರಿಂದ ನಾನು ಇಸ್ರೇಲರನ್ನು ಅವರ ಮುಂದೆ ನಾಶಮಾಡಲಿಲ್ಲ. 10 ನಾನು ಇಸ್ರೇಲ್ ಜನಾಂಗವನ್ನು ಈಜಿಪ್ಟಿನಿಂದ ಹೊರತಂದು ಅಡವಿ ಪ್ರದೇಶದಲ್ಲಿ ನಡೆಸಿದೆನು. 11 ಅಲ್ಲಿ ಅವರಿಗೆ ಧರ್ಮಶಾಸ್ತ್ರವನ್ನು ಕೊಟ್ಟೆನು. ನನ್ನ ವಿಧಿನಿಯಮಗಳನ್ನು ತಿಳಿಸಿದೆನು. ಅವುಗಳನ್ನು ಕೈಕೊಂಡು ನಡೆಯುವ ಎಲ್ಲರೂ ಜೀವಿಸುತ್ತಾರೆ. 12 ಅವರ ವಿಶ್ರಾಂತಿ ದಿವಸಗಳ ಬಗ್ಗೆ ತಿಳಿಸಿದೆನು. ಆ ವಿಶೇಷ ದಿವಸಗಳು ನನಗೂ ಅವರಿಗೂ ಇರುವ ಸಂಬಂಧಕ್ಕೆ ಒಂದು ಗುರುತಾಗಿತ್ತು. ನಾನೇ ಯೆಹೋವನೆಂದೂ ನಾನು ಅವರನ್ನು ನನಗೆ ವಿಶೇಷವಾದವರನ್ನಾಗಿ ಮಾಡಿಕೊಳ್ಳುತ್ತಿರುವೆನೆಂದೂ ಅವು ತೋರಿಸುತ್ತಿದ್ದವು.

13 “‘ಆದರೆ ಇಸ್ರೇಲ್ ಜನರು ಅಡವಿಯಲ್ಲಿರುವಾಗ ನನಗೆ ವಿರುದ್ಧವಾಗಿ ತಿರುಗಿಬಿದ್ದರು. ನನ್ನ ಆಜ್ಞೆಗಳನ್ನು ಅವರು ಅನುಸರಿಸಲಿಲ್ಲ. ನನ್ನ ನಿಯಮಗಳಿಗೆ ವಿಧೇಯರಾಗಲು ನಿರಾಕರಿಸಿದರು. ಆ ಆಜ್ಞೆಗಳೆಲ್ಲಾ ನ್ಯಾಯವಾದವುಗಳೇ. ಒಬ್ಬನು ಆ ಆಜ್ಞೆಗಳಿಗೆ ವಿಧೇಯನಾದರೆ ಅವನು ಬಾಳುವನು. ನಾನು ನೇಮಿಸಿದ ಸಬ್ಬತ್ ದಿವಸಗಳನ್ನು ವಿಶೇಷವಾಗಿ ಅಲಕ್ಷ್ಯ ಮಾಡಿದರು. ಆ ದಿವಸಗಳಲ್ಲಿ ಅವರು ಎಷ್ಟೋ ಸಾರಿ ಕೆಲಸ ಮಾಡಿದರು. ನನ್ನ ರೌದ್ರದ ತೀವ್ರತೆಯನ್ನು ಅವರು ಅರಿತುಕೊಳ್ಳಲೆಂದು ನಾನು ಅವರನ್ನು ಅಡವಿಯಲ್ಲಿ ದಂಡಿಸಿ ನಾಶಮಾಡಲು ಆಲೋಚಿಸಿಕೊಂಡೆನು. 14 ಆದರೆ ನಾನು ಅವರನ್ನು ನಾಶಮಾಡಲಿಲ್ಲ. ಬೇರೆ ದೇಶದವರು ನಾನು ಅವರನ್ನು ಈಜಿಪ್ಟಿನಿಂದ ಬಿಡಿಸಿ ತರುವುದನ್ನು ನೋಡಿದರು. ನನ್ನ ಒಳ್ಳೆಯ ಹೆಸರನ್ನು ಅವರೆದುರಿನಲ್ಲಿ ಅವಮಾನಪಡಿಸುವದಕ್ಕೆ ನನಗೆ ಇಷ್ಟವಿರಲಿಲ್ಲ. ಆದ್ದರಿಂದ ಅವರ ಮುಂದೆ ಇಸ್ರೇಲನ್ನು ನಾಶಮಾಡಲಿಲ್ಲ. 15 ಅವರು ಅಡವಿಯಲ್ಲಿದ್ದಾಗ ನಾನು ಮತ್ತೊಂದು ಪ್ರಮಾಣವನ್ನು ಮಾಡಿದೆನು. ನಾನು ಅವರಿಗೆ ಕೊಟ್ಟಿದ್ದ ದೇಶಕ್ಕೆ ಅವರನ್ನು ಹೋಗಗೊಡಿಸುವದಿಲ್ಲ ಎಂದು ಪ್ರಮಾಣ ಮಾಡಿದೆನು. ಆ ದೇಶವು ಅತ್ಯುತ್ತಮವಾಗಿತ್ತು. ಎಲ್ಲಾ ದೇಶಗಳಿಗಿಂತ ಬಹು ಸುಂದರವಾದ ದೇಶ.[b]

16 “‘ಇಸ್ರೇಲ್ ಜನರು ನನ್ನ ಆಜ್ಞೆಗಳಿಗೆ ವಿಧೇಯರಾಗಲು ನಿರಾಕರಿಸಿದರು. ನನ್ನ ಕಟ್ಟಳೆಗಳನ್ನು ಅವರು ಅನುಸರಿಸಲಿಲ್ಲ. ನಾನು ನೇಮಿಸಿದ ಸಬ್ಬತ್ ದಿವಸಗಳನ್ನು ಆಚರಿಸಲಿಲ್ಲ. ಅವರ ಮನಸ್ಸು ಆ ಹೊಲಸು ದೇವರುಗಳ ಮೇಲೆ ನೆಟ್ಟಿದ್ದರಿಂದ ಅವರು ಹಾಗೆಲ್ಲಾ ಮಾಡಿದರು. 17 ಆದರೆ ನಾನು ಅವರಿಗಾಗಿ ದುಃಖಗೊಂಡೆನು. ಆದ್ದರಿಂದ ಅವರನ್ನು ನಾನು ನಾಶಮಾಡಲಿಲ್ಲ. ಮರುಭೂಮಿಯಲ್ಲಿ ಅವರನ್ನು ಸಂಪೂರ್ಣವಾಗಿ ನಾಶಮಾಡಲಿಲ್ಲ. 18 ಅವರ ಮಕ್ಕಳಿಗೆ ನಾನು ಬುದ್ಧಿಹೇಳುತ್ತಾ, “ನಿಮ್ಮ ಪೂರ್ವಿಕರಂತೆ ನೀವಾಗಬೇಡಿರಿ. ಅವರ ಅಸಹ್ಯವಾದ ವಿಗ್ರಹಗಳಿಂದ ನಿಮ್ಮನ್ನು ನೀವು ಅಶುದ್ಧಮಾಡಿಕೊಳ್ಳಬೇಡಿರಿ. ಅವರ ಕಟ್ಟಳೆಗಳನ್ನು ಅನುಸರಿಸಬೇಡಿರಿ. ಅವರ ಆಜ್ಞೆಗಳಿಗೆ ವಿಧೇಯರಾಗಬೇಡಿರಿ. 19 ನಾನೇ ನಿಮ್ಮ ದೇವರಾದ ಯೆಹೋವನು. ನನ್ನ ಕಟ್ಟಳೆಗಳಿಗೆ ವಿಧೇಯರಾಗಿರಿ, ನನ್ನ ಆಜ್ಞೆಗಳನ್ನು ಅನುಸರಿಸಿರಿ. ನಾನು ಹೇಳಿದವುಗಳನ್ನು ಮಾಡಿರಿ. 20 ನಾನು ನೇಮಿಸಿದ ಸಬ್ಬತ್ ದಿವಸಗಳು ಮಹತ್ವವಾದವುಗಳೆಂದು ಎಣಿಸಿರಿ. ನನ್ನ ಮತ್ತು ನಿಮ್ಮ ಸಂಬಂಧಕ್ಕೆ ಅವು ಗುರುತುಗಳಾಗಿವೆ. ನಾನು ನಿಮ್ಮ ಕರ್ತನು. ನಾನೇ ನಿಮ್ಮ ದೇವರಾದ ಯೆಹೋವನೆಂದು ತಿಳಿದುಕೊಳ್ಳಲು ಇವುಗಳು ಸಾಕ್ಷಿಗಳಾಗಿವೆ.”

21 “‘ಆದರೆ ಅವರ ಮಕ್ಕಳು ನನಗೆ ವಿರುದ್ಧವಾಗಿ ದಂಗೆ ಎದ್ದರು. ಅವರು ನನ್ನ ಕಟ್ಟಳೆಗಳನ್ನು ಅನುಸರಿಸಲಿಲ್ಲ. ಅವರು ನನ್ನ ಆಜ್ಞೆಗಳಿಗೆ ವಿಧೇಯರಾಗಲಿಲ್ಲ. ನಾನು ಹೇಳಿದ್ದನ್ನು ಅವರು ಮಾಡಲಿಲ್ಲ. ಅವು ಒಳ್ಳೆಯ ಕಟ್ಟಳೆಗಳಾಗಿದ್ದವು. ಅವುಗಳಿಗೆ ವಿಧೇಯರಾಗುವವರು ಜೀವಿಸುವರು. ಅವರು ನನ್ನ ಸಬ್ಬತ್ ದಿವಸಗಳನ್ನು ಆಚರಿಸಲಿಲ್ಲ. ಆದ್ದರಿಂದ ಮರುಭೂಮಿಯಲ್ಲಿ ಅವರನ್ನು ಸಂಪೂರ್ಣವಾಗಿ ನಿರ್ಮೂಲ ಮಾಡಲು ನಿರ್ಧರಿಸಿದೆನು. ನನ್ನ ಕೋಪದ ತೀಕ್ಷ್ಣತೆಯನ್ನು ಅವರು ತಿಳಿದುಕೊಳ್ಳಬೇಕೆಂದು ತೀರ್ಮಾನಿಸಿದೆನು. 22 ಆದರೆ ನಾನು ನನ್ನನ್ನು ಹಾಗೆ ಮಾಡದಂತೆ ತಡೆದೆನು. ಇಸ್ರೇಲರನ್ನು ಈಜಿಪ್ಟಿನಿಂದ ಹೊರತರುವದನ್ನು ಬೇರೆ ಜನಾಂಗದವರು ನೋಡಿರುತ್ತಾರೆ. ಆದ್ದರಿಂದ ನಾನು ಅವರನ್ನು ನಾಶಮಾಡಲಿಲ್ಲ. ನನ್ನ ಹೆಸರಿನ ಘನತೆಯನ್ನು ಉಳಿಸಿಕೊಂಡೆನು. 23 ಆಗ ನಾನು ಅಡವಿಯಲ್ಲಿ ಅವರೊಂದಿಗೆ ಇನ್ನೊಂದು ಮಾತುಕೊಟ್ಟೆನು. ನಾನು ಅವರನ್ನು ನಾನಾ ದೇಶಗಳಿಗೆ ಚದರಿಸಿಬಿಡುವೆನೆಂದು ಅವರಿಗೆ ತಿಳಿಸಿದೆನು.

24 “‘ಇಸ್ರೇಲ್ ಜನರು ನನ್ನ ಆಜ್ಞೆಗಳಿಗೆ ವಿಧೇಯರಾಗಲಿಲ್ಲ. ನನ್ನ ಕಟ್ಟಳೆಗಳಿಗೆ ವಿಧೇಯರಾಗಲು ನಿರಾಕರಿಸಿದರು. ನಾನು ನೇಮಿಸಿದ ಸಬ್ಬತ್ ದಿವಸಗಳನ್ನು ಅಲಕ್ಷ್ಯಮಾಡಿದರು. ಮತ್ತು ಅವರ ಪೂರ್ವಿಕರ ಹೊಲಸು ವಿಗ್ರಹಗಳನ್ನು ಪೂಜಿಸಿದರು. 25 ಆಗ ನಾನು ಅವರಿಗೆ ಒಳ್ಳೆಯದಲ್ಲದ ಕಟ್ಟಳೆಗಳನ್ನು ಕೊಟ್ಟೆನು. ಜೀವವನ್ನು ಕೊಡಲು ಅಸಾಧ್ಯವಾದ ನಿಯಮಗಳನ್ನು ವಿಧಿಸಿದೆನು. 26 ಅವರು ತಮ್ಮ ಕಾಣಿಕೆಗಳಿಂದ ತಮ್ಮನ್ನೆ ಹೊಲಸು ಮಾಡಿಕೊಳ್ಳಲು ಅವರನ್ನು ಬಿಟ್ಟುಕೊಟ್ಟೆನು. ಅವರು ತಮ್ಮ ವಿಗ್ರಹಗಳಿಗೆ ತಮ್ಮ ಸ್ವಂತ ಚೊಚ್ಚಲು ಗಂಡುಮಕ್ಕಳನ್ನು ಆಹುತಿಕೊಡಲು ಪ್ರಾರಂಭಿಸಿದರು. ಈ ರೀತಿಯಾಗಿ ನಾನು ಆ ಜನರನ್ನು ನಾಶಮಾಡುವೆನು. ಆಗ ಅವರು ನಾನು ಒಡೆಯನಾದ ಯೆಹೋವನೆಂದು ತಿಳಿದುಕೊಳ್ಳುವರು.’ 27 ಆದ್ದರಿಂದ ನರಪುತ್ರನೇ, ಇಸ್ರೇಲ್ ಜನಾಂಗದವರೊಂದಿಗೆ ಮಾತನಾಡು. ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: ‘ನಿಮ್ಮ ಪೂರ್ವಿಕರು ನನಗೆ ಅಪಮಾನ ಮಾಡಿದರು ಮತ್ತು ದ್ರೋಹ ಮಾಡಿದರು. 28 ನಾನು ಅವರಿಗೆ ಕೊಡುವುದಾಗಿ ವಾಗ್ದಾನ ಮಾಡಿದ ದೇಶಕ್ಕೆ ಅವರನ್ನು ಕರೆದುಕೊಂಡು ಬಂದೆನು. ಆದರೆ ಎತ್ತರವಾದ ಬೆಟ್ಟವನ್ನಾಗಲಿ ಎಲೆಗಳುಳ್ಳ ಮರವನ್ನಾಗಲಿ ಅವರು ಕಂಡಾಗಲೆಲ್ಲಾ ಅವರು ಅಲ್ಲಿಗೆ ಹೋದರು ಮತ್ತು ವಿಗ್ರಹಗಳನ್ನು ಪೂಜಿಸಿದರು. ಅಲ್ಲಿ ಅವರು ಯಜ್ಞಗಳನ್ನೂ ನನ್ನನ್ನು ಕೋಪಗೊಳಿಸುವ ಕಾಣಿಕೆಗಳನ್ನೂ ಧೂಪವನ್ನೂ ಮತ್ತು ಪಾನದ್ರವ್ಯಾರ್ಪಣೆಗಳನ್ನೂ ಅರ್ಪಿಸಿದರು. 29 ನಾನು ಇಸ್ರೇಲರಿಗೆ, “ನೀವು ಎತ್ತರದಲ್ಲಿರುವ ಪೂಜಾಸ್ಥಳಗಳಿಗೆ ಯಾಕೆ ಹೋಗುತ್ತೀರಿ?” ಎಂದು ಪ್ರಶ್ನಿಸಿದೆನು. ಆ ಪೂಜಾಸ್ಥಳಗಳು ಇಂದಿಗೂ “ಎತ್ತರವಾದ ಸ್ಥಳ” ಎಂದು ಕರೆಯಲ್ಪಡುತ್ತಿವೆ. ಈಗಲೂ ಆ ಪೂಜಾಸ್ಥಳಗಳು ಅಲ್ಲಿವೆ.’”

30 ದೇವರು ಹೇಳಿದ್ದೇನೆಂದರೆ, “ಇಸ್ರೇಲ್ ಜನರು ದುಷ್ಕೃತ್ಯಗಳನ್ನು ಮಾಡಿದ್ದಾರೆ. ಆದ್ದರಿಂದ ನೀನು ಹೋಗಿ ಅವರಿಗೆ ಹೇಳು: ‘ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: ನಿಮ್ಮ ಪೂರ್ವಿಕರು ಮಾಡಿದಂತೆಯೇ ನೀವು ನಿಮ್ಮನ್ನು ಅಪವಿತ್ರರನ್ನಾಗಿ ಮಾಡಿಕೊಳ್ಳುತ್ತಿದ್ದೀರಿ. ನೀವು ಸೂಳೆಯರ ಹಾಗೆ ವರ್ತಿಸಿರುತ್ತೀರಿ. ನಿಮ್ಮ ಪೂರ್ವಿಕರು ಪೂಜಿಸಿದ ಆ ಭಯಂಕರವಾದ ವಿಗ್ರಹಗಳೊಂದಿಗೆ ಇರುವದಕ್ಕಾಗಿ ನನ್ನನ್ನು ನೀವು ತೊರೆದುಬಿಟ್ಟಿರಿ. 31 ನೀವು ಅವುಗಳಿಗೆ ಅದೇ ರೀತಿಯ ಕಾಣಿಕೆಗಳನ್ನರ್ಪಿಸುತ್ತೀರಿ. ಆ ಸುಳ್ಳು ದೇವರುಗಳಿಗೆ ನೀವು ನಿಮ್ಮ ಮಕ್ಕಳನ್ನು ಬೆಂಕಿಯ ಮೂಲಕ ಆಹುತಿ ಮಾಡುತ್ತೀರಿ. ಈ ಹೊತ್ತಿನ ದಿನದ ತನಕವೂ ಆ ಹೊಲಸು ವಿಗ್ರಹಗಳ ಮೂಲಕ ನೀವು ನಿಮ್ಮನ್ನು ಅಶುದ್ಧಪಡಿಸಿಕೊಳ್ಳುತ್ತಿದ್ದೀರಿ. ನೀವು ನನ್ನ ಬಳಿಗೆ ಬಂದು ನನ್ನ ಸಲಹೆಗಳನ್ನು ಕೇಳಲು ನಿಮ್ಮನ್ನು ನಾನು ಸ್ವಾಗತಿಸಬೇಕೋ? ನಾನು ಒಡೆಯನಾದ ಯೆಹೋವನು. ನನ್ನ ಜೀವದಾಣೆ, ನಾನು ನಿಮಗೆ ಉತ್ತರಿಸುವುದಿಲ್ಲ; ನಿಮಗೆ ಸಲಹೆಗಳನ್ನೂ ಕೊಡುವದಿಲ್ಲ. 32 ನಾವು ಮರದ ಮತ್ತು ಕಲ್ಲಿನ ವಸ್ತುಗಳನ್ನು ಪೂಜಿಸುತ್ತಾ ಇತರ ಜನಾಂಗಗಳಂತೆ ಇರೋಣ ಎಂದು ನೀವು ಯೋಚಿಸುತ್ತಲೇ ಇರುತ್ತೀರಿ. ನಿಮ್ಮ ಮನಸ್ಸುಗಳಲ್ಲಿರುವ ಈ ಆಲೋಚನೆಯು ಎಂದಿಗೂ ನೆರವೇರುವುದಿಲ್ಲ.’”

33 ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ನನ್ನ ಜೀವದಾಣೆ, ನಾನು ರಾಜನಾಗಿ ನಿಮ್ಮ ಮೇಲೆ ದೊರೆತನ ಮಾಡುವೆನೆಂದು ಪ್ರಮಾಣ ಮಾಡುತ್ತೇನೆ. ನಾನು ನನ್ನ ಬಲವಾದ ಕೈಯನ್ನು ಮತ್ತು ಶಕ್ತಿಯುತವಾದ ತೋಳನ್ನು ಮೇಲೆತ್ತಿ ನಿಮ್ಮನ್ನು ದಂಡಿಸುವೆನು. ನಿಮ್ಮ ವಿರುದ್ಧವಾಗಿ ನನ್ನ ಕೋಪವನ್ನು ತೋರ್ಪಡಿಸುವೆನು. 34 ಪರದೇಶಗಳಿಂದ ನಾನು ನಿಮ್ಮನ್ನು ಹೊರತರುವೆನು. ನಾನು ಆ ದೇಶಗಳಲ್ಲಿ ನಿಮ್ಮನ್ನು ಚದರಿಸಿದೆನು. ಆದರೆ ಆ ದೇಶಗಳಿಂದ ನಾನು ನಿಮ್ಮನ್ನು ಒಟ್ಟುಗೂಡಿಸಿ ಹಿಂದಕ್ಕೆ ಬರಮಾಡುವೆನು. ನನ್ನ ಬಲವಾದ ಕೈಯನ್ನು ಮತ್ತು ಶಕ್ತಿಯುತವಾದ ತೋಳನ್ನು ಮೇಲೆತ್ತಿ ನಿಮ್ಮನ್ನು ಶಿಕ್ಷಿಸಿ ನನ್ನ ಕೋಪವನ್ನು ಪ್ರದರ್ಶಿಸುವೆನು. 35 ನಾನು ಹಿಂದಿನ ಕಾಲದಲ್ಲಿ ಮಾಡಿದಂತೆ ಮರುಭೂಮಿಗೆ ನಿಮ್ಮನ್ನು ನಡೆಸುವೆನು. ಆದರೆ ಇದು ಅನ್ಯಜನಾಂಗಗಳು ವಾಸಿಸುವ ಸ್ಥಳದಲ್ಲಿರುವುದು ಮತ್ತು ನಾನು ಎದುರುಬದುರಾಗಿ ನಿಂತು ನಿಮಗೆ ನ್ಯಾಯತೀರಿಸುವೆನು. 36 ನಾನು ಈಜಿಪ್ಟಿನ ಮರುಭೂಮಿಯಲ್ಲಿ ನಿಮ್ಮ ಪೂರ್ವಿಕರನ್ನು ದಂಡಿಸಿದಂತೆ ನಿಮ್ಮನ್ನೂ ದಂಡಿಸುವೆನು.” ನನ್ನ ಒಡೆಯನಾದ ಯೆಹೋವನು ಇವುಗಳನ್ನು ಹೇಳಿದನು.

37 “ನಾನು ನಿಮ್ಮ ನ್ಯಾಯವಿಚಾರಣೆ ಮಾಡಿ ನೀವು ಮಾಡಿದ ತಪ್ಪುಗಳಿಗೆ ನನ್ನ ಒಡಂಬಡಿಕೆಯ ಪ್ರಕಾರ ನಿಮ್ಮನ್ನು ಶಿಕ್ಷಿಸುವೆನು. 38 ನನಗೆ ವಿರೋಧವಾಗಿ ಎದ್ದು ಪಾಪಮಾಡಿದ ಜನರನ್ನು ಅವರ ಸ್ವದೇಶದಿಂದ ತೆಗೆದುಬಿಡುವೆನು. ಅವರು ಇನ್ನೆಂದಿಗೂ ಇಸ್ರೇಲ್ ದೇಶಕ್ಕೆ ಹಿಂತಿರುಗಿ ಬರುವುದೇ ಇಲ್ಲ. ನಾನೇ ಯೆಹೋವನೆಂಬುದು ಆಗ ನಿಮಗೆ ತಿಳಿಯುವುದು.”

39 ಇಸ್ರೇಲ್ ಜನರೇ, ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ಆ ಹೊಲಸು ವಿಗ್ರಹಗಳನ್ನು ಆರಾಧಿಸಬೇಕೆನ್ನುವವನು ಹೋಗಿ ಆರಾಧಿಸಲಿ. ಮುಂದಿನ ಕಾಲದಲ್ಲಂತೂ ನೀವು ನನ್ನ ಬುದ್ಧಿಮಾತನ್ನು ಕೇಳೇ ಕೇಳುವಿರಿ. ನನ್ನ ಪರಿಶುದ್ಧ ಹೆಸರನ್ನು ನೀವು ನಿಮ್ಮ ಬಲಿಗಳಿಂದಲೂ ಬೊಂಬೆಗಳಿಂದಲೂ ಅಪಕೀರ್ತಿಗೆ ಗುರಿಮಾಡುವುದೇ ಇಲ್ಲ.”

40 ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ, “ಇಸ್ರೇಲಿನ ಎತ್ತರವಾದ ನನ್ನ ಪವಿತ್ರಪರ್ವತಕ್ಕೆ ಜನರು ಬರಲೇಬೇಕು. ಅಲ್ಲಿ ಅವರು ನನ್ನ ಸೇವೆ ಮಾಡಲೇಬೇಕು. ಇಡೀ ಇಸ್ರೇಲ್ ಜನಾಂಗವು ತಮ್ಮ ದೇಶದಲ್ಲಿರುವುದು. ಅಲ್ಲಿ ನಾನು ಅವರನ್ನು ಸ್ವೀಕರಿಸಿಕೊಳ್ಳುವೆನು. ಅಲ್ಲಿ ನೀವು ನಿಮ್ಮ ಕಾಣಿಕೆಗಳನ್ನು ಪ್ರಥಮ ಫಲಗಳನ್ನು ಮತ್ತು ಎಲ್ಲಾ ಪವಿತ್ರ ಕಾಣಿಕೆಗಳನ್ನು ನನಗೆ ತರಬೇಕೆಂದು ಅಪೇಕ್ಷಿಸುತ್ತೇನೆ. 41 ಆಗ ನಿಮ್ಮ ಕಾಣಿಕೆಯ ಸುವಾಸನೆಯಿಂದ ಸಂತೋಷಭರಿತನಾಗುವೆನು. ಇದು ನಿಮ್ಮನ್ನು ಹಿಂದಕ್ಕೆ ನಿಮ್ಮ ದೇಶಕ್ಕೆ ಕರೆತಂದಾಗ ಆಗುವದು. ನಾನು ನಿಮ್ಮನ್ನು ಅನೇಕ ದೇಶಗಳಲ್ಲಿ ಚದರಿಸಿದೆನು. ಆದರೆ ನಾನು ನಿಮ್ಮನ್ನು ಒಟ್ಟುಗೂಡಿಸಿ ನಿಮ್ಮ ಮೂಲಕ ನನ್ನ ಪವಿತ್ರತೆಯನ್ನು ಪ್ರದರ್ಶಿಸುವೆನು. ಆ ಎಲ್ಲಾ ದೇಶಗಳವರು ಇದನ್ನು ನೋಡುವರು. 42 ನಾನು ನಿಮ್ಮನ್ನು ತಿರುಗಿ ನಿಮ್ಮ ಪೂರ್ವಿಕರಿಗೆ ವಾಗ್ದಾನ ಮಾಡಿದ ಇಸ್ರೇಲ್ ದೇಶಕ್ಕೆ ಬರಮಾಡಿದಾಗ ನಾನೇ ಯೆಹೋವನೆಂದು ಅರಿತುಕೊಳ್ಳುವಿರಿ. 43 ನಿಮ್ಮನ್ನು ನಿಮ್ಮ ದುಷ್ಟತ್ವದಿಂದ ಹೊಲಸು ಮಾಡಿಕೊಂಡದ್ದನ್ನು ಅಲ್ಲಿ ಜ್ಞಾಪಕಮಾಡಿಕೊಳ್ಳುವಿರಿ. ಆಗ ನೀವು ನಾಚಿಕೆಪಡುವಿರಿ. 44 ಇಸ್ರೇಲ್ ಜನಾಂಗಗಳೇ, ನೀವು ಅನೇಕ ಕೆಟ್ಟ ವಿಷಯಗಳನ್ನು ಮಾಡಿರುತ್ತೀರಿ. ಆ ದುಷ್ಕೃತ್ಯಗಳಿಗಾಗಿ ನೀವು ನಾಶವಾಗಿ ಹೋಗಬೇಕಾಗಿತ್ತು. ಆದರೆ ನನ್ನ ಒಳ್ಳೆಯ ಹೆಸರಿನ ಸಲುವಾಗಿ ನೀವು ಹೊಂದಬೇಕಾದ ಶಿಕ್ಷೆಯನ್ನು ನಾನು ನಿಮಗೆ ವಿಧಿಸುವುದಿಲ್ಲ. ಆಗ ನಾನೇ ಒಡೆಯನಾದ ಯೆಹೋವನೆಂದು ತಿಳಿದುಕೊಳ್ಳುವಿರಿ.” ಇದು ನನ್ನ ಒಡೆಯನಾದ ಯೆಹೋವನ ನುಡಿ.

45 ಯೆಹೋವನ ವಾಕ್ಯವು ನನಗೆ ಬಂದಿತು. ಆತನು ಹೇಳಿದ್ದೇನೆಂದರೆ, 46 “ನರಪುತ್ರನೇ, ಯೆಹೂದದ ದಕ್ಷಿಣದಲ್ಲಿರುವ ನೆಗೆವ್ ಕಡೆಗೆ ನೋಡು. ನೆಗೆವ್ ಅಡವಿಗೆ ವಿರುದ್ಧವಾಗಿ ಮಾತನಾಡು. 47 ನೆಗೆವ್ ಅಡವಿಗೆ ಹೀಗೆ ಹೇಳು: ‘ಯೆಹೋವನ ಮಾತುಗಳನ್ನು ಆಲೈಸು. ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: ನಾನು ನಿನ್ನ ಅಡವಿಯಲ್ಲಿ ಬೆಂಕಿಯನ್ನು ಹಾಕುತ್ತೇನೆ. ಆ ಬೆಂಕಿಯು ಪ್ರತಿಯೊಂದು ಹಸಿರು ಮರವನ್ನೂ ಪ್ರತಿಯೊಂದು ಒಣಗಿದ ಮರವನ್ನೂ ಸುಟ್ಟುಬಿಡುವುದು. ಆ ಬೆಂಕಿಯನ್ನು ನಂದಿಸಲಾಗುವದಿಲ್ಲ. ದಕ್ಷಿಣದಿಂದ ಉತ್ತರದ ತನಕವಿರುವ ಪ್ರತಿಯೊಂದು ಮುಖವು ಅದರ ತಾಪವನ್ನು ಅನುಭವಿಸುವುದು. 48 ಆಗ ಎಲ್ಲಾ ಜನರು ಯೆಹೋವನಾದ ನಾನೇ ಬೆಂಕಿಯನ್ನಿಟ್ಟಿದ್ದು ಎಂದು ತಿಳಿದುಕೊಳ್ಳುವರು. ಆ ಬೆಂಕಿಯು ನಂದಿಸಲ್ಪಡುವುದಿಲ್ಲ.’”

49 ಆಗ ನಾನು (ಯೆಹೆಜ್ಕೇಲ್), “ಅಯ್ಯೋ, ನನ್ನ ಒಡೆಯನಾದ ಯೆಹೋವನೇ, ನಾನು ಇದನ್ನೆಲ್ಲಾ ಹೇಳಿದರೆ, ನಿಗೂಢವಾದ ಕಥೆಗಳನ್ನು ಹೇಳುತ್ತಿದ್ದೇನೆಂದು ಹೇಳುವರು. ಮತ್ತು ನನಗೆ ಇನ್ನೆಂದಿಗೂ ಕಿವಿಗೊಡುವದಿಲ್ಲ” ಎಂದು ಹೇಳಿದೆನು.

ಕೀರ್ತನೆಗಳು 66-67

ಸ್ತುತಿಗೀತೆ.

66 ಸರ್ವಭೂನಿವಾಸಿಗಳೇ, ದೇವರಿಗೆ ಜಯಘೋಷ ಮಾಡಿರಿ!
ಆತನ ಹೆಸರಿನ ಮಹಿಮೆಯನ್ನು ಕೀರ್ತಿಸಿರಿ.
    ಸ್ತುತಿಗೀತೆಗಳಿಂದ ಆತನನ್ನು ಸನ್ಮಾನಿಸಿರಿ.
ದೇವರೇ, ನಿನ್ನ ಕಾರ್ಯಗಳು ಎಷ್ಟು ಅದ್ಭುತವಾಗಿವೆ!
    ನಿನ್ನ ಮಹಾಶಕ್ತಿಯಿಂದಾಗಿ ಶತ್ರುಗಳು ನಿನಗೆ ಭಯಪಟ್ಟು ಅಡ್ಡಬೀಳುವರು.
ಸರ್ವಭೂನಿವಾಸಿಗಳು ನಿನ್ನನ್ನು ಆರಾಧಿಸಲಿ.
    ಪ್ರತಿಯೊಬ್ಬರೂ ನಿನ್ನ ಹೆಸರನ್ನು ಕೀರ್ತಿಸಲಿ.

ಬನ್ನಿರಿ, ದೇವರ ಕಾರ್ಯಗಳನ್ನು ನೋಡಿರಿ;
    ಆತನ ಕಾರ್ಯಗಳು ಅತ್ಯದ್ಭುತವಾಗಿವೆ!
ಆತನು ಸಮುದ್ರವನ್ನು ಒಣನೆಲವನ್ನಾಗಿ ಮಾಡಿದನು.
    ಆತನ ಜನರು ಕಾಲುನಡಿಗೆಯಿಂದ ನದಿಯನ್ನು ದಾಟಿದರು.
    ಅದಕ್ಕಾಗಿ ನಾವು ಆತನಲ್ಲಿ ಉಲ್ಲಾಸಪಡೋಣ.
ಆತನು ಪ್ರಪಂಚವನ್ನು ತನ್ನ ಮಹಾಶಕ್ತಿಯಿಂದ ಆಳುತ್ತಾನೆ.
    ಆತನು ಎಲ್ಲರನ್ನೂ ಗಮನಿಸುತ್ತಾನೆ.
    ಆತನ ವಿರುದ್ಧ ದಂಗೆಯೇಳಲು ಯಾರಿಗೂ ಆಗದು.

ಜನಾಂಗಗಳೇ, ನಮ್ಮ ದೇವರನ್ನು ಕೊಂಡಾಡಿರಿ.
    ಆತನಿಗೆ ಸ್ತುತಿಗೀತೆಗಳನ್ನು ಹಾಡಿರಿ.
ನಮಗೆ ಜೀವಕೊಟ್ಟವನು ಆತನೇ.
    ನಮ್ಮನ್ನು ಕಾಪಾಡುವವನೂ ಆತನೇ.
10 ಜನರು ಬೆಳ್ಳಿಯನ್ನು ಬೆಂಕಿಯಿಂದ ಶೋಧಿಸುವಂತೆ ದೇವರು ನಮ್ಮನ್ನು ಪರೀಕ್ಷಿಸಿದನು.
11 ದೇವರೇ, ನೀನು ನಮ್ಮನ್ನು ಬಲೆಯಲ್ಲಿ ಸಿಕ್ಕಿಸಿದೆ.
    ನೀನು ನಮಗೆ ಭಾರವಾದ ಹೊರೆಗಳನ್ನು ಹೊರಿಸಿದೆ;
12 ಶತ್ರುಗಳು ನಮ್ಮ ಮೇಲೆ ನಡೆಯಮಾಡಿದೆ.
    ನೀನು ನಮ್ಮನ್ನು ಬೆಂಕಿಯಲ್ಲಿಯೂ ನೀರಿನಲ್ಲಿಯೂ ಹಾಯಿಸಿದೆ.
    ಆದರೂ ಸುರಕ್ಷಿತ ಸ್ಥಳಕ್ಕೆ ನಮ್ಮನ್ನು ತಂದು ಸೇರಿಸಿದೆ.
13 ಆದ್ದರಿಂದ ನಾನು ನಿನ್ನ ಆಲಯಕ್ಕೆ ಬಂದು ಯಜ್ಞಗಳನ್ನು ನಿನಗೆ ಸಮರ್ಪಿಸುವೆನು.
14 ನಾನು ಇಕ್ಕಟ್ಟಿನಲ್ಲಿದ್ದಾಗ ಸಹಾಯಕ್ಕಾಗಿ ನಿನ್ನನ್ನು ಕೂಗಿಕೊಂಡಾಗ
    ಮಾಡಿದ ಹರಕೆಗಳನ್ನು ಸಲ್ಲಿಸುವೆನು.
15     ಪಾಪಪರಿಹಾರಕ ಯಜ್ಞಗಳನ್ನು ನಿನಗೆ ಅರ್ಪಿಸುವೆನು;
    ಟಗರುಗಳನ್ನೂ ಧೂಪವನ್ನೂ ಅರ್ಪಿಸುವೆನು;
    ಹೋರಿಗಳನ್ನೂ ಹೋತಗಳನ್ನೂ ಅರ್ಪಿಸುವೆನು.

16 ದೇವಭಕ್ತರೆಲ್ಲರೂ ಬನ್ನಿರಿ,
    ದೇವರು ನನಗೋಸ್ಕರ ಮಾಡಿರುವುದನ್ನು ನಿಮಗೆ ತಿಳಿಸುವೆನು.
17 ನಾನು ಆತನಿಗೆ ಪ್ರಾರ್ಥಿಸಿದೆನು;
    ಆತನನ್ನು ಸ್ತುತಿಸಿದೆನು.
18 ನನ್ನ ಶುದ್ಧಹೃದಯವನ್ನು ಕಂಡು
    ಯೆಹೋವನು ಕಿವಿಗೊಟ್ಟನು.
19 ದೇವರು ನನ್ನ ಮೊರೆಯನ್ನು ಕೇಳಿದನು;
    ನನ್ನ ಪ್ರಾರ್ಥನೆಯನ್ನು ಆಲಿಸಿದನು.
20 ದೇವರಿಗೆ ಸ್ತೋತ್ರವಾಗಲಿ!
    ಆತನು ನನಗೆ ವಿಮುಖನಾಗದೆ,
    ನನ್ನ ಪ್ರಾರ್ಥನೆಯನ್ನು ಆಲಿಸಿ, ತನ್ನ ಪ್ರೀತಿಯನ್ನು ತೋರಿದನು!

ಸ್ತುತಿಗೀತೆ.

67 ದೇವರೇ, ನನ್ನನ್ನು ಕರುಣಿಸಿ ಆಶೀರ್ವದಿಸು.
    ಪ್ರಸನ್ನಮುಖದಿಂದ ನಮ್ಮನ್ನು ನೋಡು.

ದೇವರೇ, ಸರ್ವಭೂನಿವಾಸಿಗಳು ನಿನ್ನನ್ನು ತಿಳಿದುಕೊಳ್ಳಲಿ.
    ಜನರಿಗೆ ನಿನ್ನಿಂದಾಗುವ ರಕ್ಷಣೆಯನ್ನು ಸರ್ವಜನಾಂಗಗಳೂ ಕಾಣಲಿ.
ದೇವರೇ, ಜನಾಂಗಗಳು ನಿನ್ನನ್ನು ಕೊಂಡಾಡಲಿ!
    ಸರ್ವಜನರೆಲ್ಲರೂ ನಿನ್ನನ್ನು ಸ್ತುತಿಸಲಿ!
ಎಲ್ಲಾ ಜನಾಂಗಗಳು ಸಂತೋಷದಿಂದ ಉಲ್ಲಾಸಿಸಲಿ.
    ಯಾಕೆಂದರೆ ಜನರಿಗೆ ನ್ಯಾಯವಾದ ತೀರ್ಪುಮಾಡುವಾತನು ನೀನೇ;
    ಪ್ರತಿಯೊಂದು ಜನಾಂಗವನ್ನು ಆಳುವಾತನು ನೀನೇ.
ದೇವರೇ, ಜನಾಂಗಗಳು ನಿನ್ನನ್ನು ಕೊಂಡಾಡಲಿ!
    ಸರ್ವಜನರೆಲ್ಲರೂ ನಿನ್ನನ್ನು ಸ್ತುತಿಸಲಿ!
ದೇವರೇ, ನಮ್ಮ ದೇವರೇ, ನಮ್ಮನ್ನು ಆಶೀರ್ವದಿಸು.
    ನಮ್ಮ ಭೂಮಿಯು ಮಹಾಸುಗ್ಗಿಯನ್ನು ಕೊಡಲಿ.
ಆತನು ನಮ್ಮನ್ನು ಆಶೀರ್ವದಿಸಲಿ.
    ಸರ್ವಭೂನಿವಾಸಿಗಳೆಲ್ಲರೂ ಆತನಲ್ಲಿ ಭಯಭಕ್ತಿವುಳ್ಳವರಾಗಲಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International