Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
2 ಸಮುವೇಲನು 10

ದಾವೀದನ ಜನರಿಗೆ ಹಾನೂನನು ಅವಮಾನ ಮಾಡಿದ್ದು

10 ತರುವಾಯ, ಅಮ್ಮೋನಿಯರ ರಾಜನಾದ ನಾಹಾಷನು ಸತ್ತನು. ಅವನ ನಂತರ ಅವನ ಮಗನಾದ ಹಾನೂನನು ರಾಜನಾದನು. ದಾವೀದನು, “ನಾಹಾಷನು ನನಗೆ ದಯೆತೋರಿಸಿದ್ದನು. ಆದ್ದರಿಂದ ಅವನ ಮಗನಿಗೆ ನಾನು ದಯೆತೋರಿಸುವೆನು” ಎಂದು ಹೇಳಿದನು. ಆದ್ದರಿಂದ ತಂದೆಯ ಸಾವಿನಿಂದ ಶೋಕತಪ್ತನಾಗಿರುವ ಹಾನೂನನನ್ನು ಸಂತೈಸಲು ದಾವೀದನು ತನ್ನ ಅಧಿಕಾರಿಗಳನ್ನು ಕಳುಹಿಸಿದನು.

ದಾವೀದನ ಸೇವಕರು ಅಮ್ಮೋನಿಯರ ದೇಶಕ್ಕೆ ಹೋದರು. ಆದರೆ ಅಮ್ಮೋನಿಯರ ನಾಯಕರು ತಮ್ಮ ಪ್ರಭುವಾದ ಹಾನೂನನಿಗೆ, “ನಿನ್ನನ್ನು ಸಂತೈಸಲು ಕೆಲವು ಜನರನ್ನು ಕಳುಹಿಸುವುದರ ಮೂಲಕ ದಾವೀದನು ನಿನ್ನ ತಂದೆಯನ್ನು ಗೌರವಿಸಲು ಪ್ರಯತ್ನಿಸುತ್ತಿರುವನೆಂದು ನೀನು ಭಾವಿಸಿರುತ್ತಿಯಲ್ಲವೇ? ಇಲ್ಲ! ನಿನ್ನ ನಗರದ ಸಂಗತಿಗಳನ್ನು ರಹಸ್ಯವಾಗಿ ಕಂಡುಕೊಳ್ಳಲು ಮತ್ತು ತಿಳಿದುಕೊಳ್ಳಲು ದಾವೀದನು ಈ ಜನರನ್ನು ಕಳುಹಿಸಿದ್ದಾನೆ. ಅವರು ನಿನ್ನ ವಿರುದ್ಧವಾಗಿ ಯುದ್ಧಮಾಡಲು ಯೋಜನೆ ಮಾಡುತ್ತಿದ್ದಾರೆ” ಎಂದು ಹೇಳಿದರು.

ಆದ್ದರಿಂದ ಹಾನೂನನು ದಾವೀದನ ಸೇವಕರನ್ನು ಹಿಡಿಸಿ ಅವರ ಗಡ್ಡದ ಅರ್ಧಭಾಗವನ್ನು ಬೋಳಿಸಿದನು. ಅವರ ನಡುವಿನ ಕೆಳಭಾಗವು ಕಾಣುವಂತೆ ಅವರ ಬಟ್ಟೆಗಳನ್ನು ಮಧ್ಯಭಾಗದಲ್ಲಿ ಕತ್ತರಿಸಿದನು, ನಂತರ ಅವರನ್ನು ಕಳುಹಿಸಿದನು.

ಅವರು ದಾವೀದನಿಗೆ ಈ ಸುದ್ದಿಯನ್ನು ತಿಳಿಸಿದರು. ಆಗ ದಾವೀದನು ತನ್ನ ಬಳಿಗೆ ಬರಲು ಬಹಳ ನಾಚಿಕೆಯಿಂದಿದ್ದ ಅಧಿಕಾರಗಳ ಬಳಿಗೆ ಸಂದೇಶಕರನ್ನು ಕಳುಹಿಸಿ, “ನಿಮ್ಮ ಗಡ್ಡಗಳು ಮತ್ತೆ ಬೆಳೆಯುವವರೆಗೆ ಜೆರಿಕೊವಿನಲ್ಲಿ ಇರಿ. ಅನಂತರ ಜೆರುಸಲೇಮಿಗೆ ಬನ್ನಿ” ಎಂದು ತಿಳಿಸಿದನು.

ಅಮ್ಮೋನಿಯರ ವಿರುದ್ಧ ಯುದ್ಧ

ಅಮ್ಮೋನಿಯರು ತಾವು ದಾವೀದನಿಗೆ ಶತ್ರುಗಳಾಗಿರುವುದಾಗಿ ತಿಳಿದುಕೊಂಡರು. ಆದ್ದರಿಂದ ಅಮ್ಮೋನಿಯರು ಹಣಕೊಟ್ಟು ಬೇತ್‌ರೆಹೋಬ್ ಮತ್ತು ಚೋಬಾಗಳಿಂದ ಅರಾಮ್ಯರ ಇಪ್ಪತ್ತುಸಾವಿರ ಮಂದಿ ಭೂದಳವನ್ನು ಬರಮಾಡಿಕೊಂಡರು. ಅಮ್ಮೋನಿಯರು ಮಾಕಾದ ರಾಜನನ್ನು ಮತ್ತು ಅವನ ಒಂದು ಸಾವಿರ ಸೈನಿಕರನ್ನು ಹಾಗೂ ಟೋಬ್‌ನಿಂದ ಹನ್ನೆರಡು ಸಾವಿರ ಮಂದಿ ಸೈನಿಕರನ್ನು ಬರಮಾಡಿಕೊಂಡರು.

ಇದು ದಾವೀದನಿಗೆ ತಿಳಿಯಿತು. ಆದ್ದರಿಂದ ಅವನು ಯೋವಾಬನನ್ನು ಎಲ್ಲಾ ಶೂರ ಸೈನಿಕರೊಂದಿಗೆ ಕಳುಹಿಸಿದನು. ಅಮ್ಮೋನಿಯರು ಹೊರಗೆ ಬಂದು ಯುದ್ಧಕ್ಕೆ ಸಿದ್ಧರಾದರು. ಅವರು ನಗರದ ಬಾಗಿಲಿನಲ್ಲಿ ನಿಂತರು. ಚೋಬಾ ಮತ್ತು ರೆಹೋಬ್‌ಗಳ ಅರಾಮ್ಯರು, ಟೋಬ್ ಮತ್ತು ಮಾಕಾದ ಜನರು ಯುದ್ಧರಂಗದಲ್ಲಿ ಅಮ್ಮೋನಿಯರ ಜೊತೆಯಲ್ಲಿ ಒಟ್ಟಾಗಿ ನಿಲ್ಲಲಿಲ್ಲ.

ಅಮ್ಮೋನಿಯರು ತಮ್ಮ ವಿರುದ್ಧವಾಗಿ ಹಿಂದೆ ಮತ್ತು ಮುಂದೆ ನಿಂತಿರುವುದನ್ನು ನೋಡಿದ ಯೋವಾಬನು ಇಸ್ರೇಲರಲ್ಲಿ ಶ್ರೇಷ್ಠರಾದವರನ್ನು ಆರಿಸಿಕೊಂಡು ಅರಾಮ್ಯರ ವಿರುದ್ಧ ಯುದ್ಧಮಾಡಲು ಅವರನ್ನು ಸಾಲಾಗಿ ನಿಲ್ಲಿಸಿದನು. 10 ಬಳಿಕ ಯೋವಾಬನು ಉಳಿದ ಜನರನ್ನು ತನ್ನ ತಮ್ಮನಾದ ಅಬೀಷೈಯ ವಶಕ್ಕೆ ಕೊಟ್ಟು ಅಮ್ಮೋನಿಯರ ವಿರುದ್ಧ ಹೋರಾಡಲು ಕಳುಹಿಸಿದನು. 11 ಯೋವಾಬನು ಅಬೀಷೈಗೆ, “ಅರಾಮ್ಯರು ನನಗಿಂತ ಬಲಶಾಲಿಗಳೆಂದು ಕಂಡುಬಂದರೆ ನೀನು ನನಗೆ ಸಹಾಯಮಾಡು. ಅಮ್ಮೋನಿಯರು ನಿನಗೆ ಬಲಶಾಲಿಗಳೆಂದು ಕಂಡು ಬಂದರೆ ನಾನು ನಿನ್ನ ಸಹಾಯಕ್ಕೆ ಬರುತ್ತೇನೆ. 12 ನೀನು ಶಕ್ತನಾಗಿರು. ನಮ್ಮ ಜನರಿಗಾಗಿ ಮತ್ತು ನಮ್ಮ ದೇವರ ನಗರಗಳಿಗಾಗಿ ಧೈರ್ಯದಿಂದ ಹೋರಾಡೋಣ. ಯೆಹೋವನು ತನಗೆ ಸರಿಯೆನಿಸುವುದನ್ನು ಮಾಡಲಿ” ಎಂದು ಹೇಳಿದನು.

13 ನಂತರ ಯೋವಾಬನು ಮತ್ತು ಅವನ ಜನರು ಅರಾಮ್ಯರ ಮೇಲೆ ಆಕ್ರಮಣ ಮಾಡಿದರು. ಯೋವಾಬ ಮತ್ತು ಅವನ ಜನರನ್ನು ಬಿಟ್ಟು ಅರಾಮ್ಯರು ಓಡಿಹೋದರು. 14 ಅರಾಮ್ಯರು ಓಡಿಹೋಗುತ್ತಿರುವುದನ್ನು ನೋಡಿದ ಅಮ್ಮೋನಿಯರು ಅಬೀಷೈಯನ್ನು ಬಿಟ್ಟು ಓಡಿಹೋದರು. ಅವರು ತಮ್ಮ ನಗರಕ್ಕೆ ಹಿಂದಿರುಗಿದರು.

ಯೋವಾಬನು ಯುದ್ಧರಂಗದಿಂದ ಹಿಂದಿರುಗಿ ಜೆರುಸಲೇಮಿಗೆ ಬಂದನು.

ಅರಾಮ್ಯರು ಮತ್ತೆ ಯುದ್ಧ ಮಾಡಲು ತೀರ್ಮಾನಿಸಿದರು

15 ಇಸ್ರೇಲರು ತಮ್ಮನ್ನು ಸೋಲಿಸಿದರೆಂಬುದನ್ನು ಅರಾಮ್ಯರು ತಿಳಿದುಕೊಂಡರು. ಆದ್ದರಿಂದ ಅವರೆಲ್ಲರೂ ಒಟ್ಟಾಗಿ ಸೇರಿ ಒಂದು ದೊಡ್ಡ ಸೈನ್ಯವನ್ನು ಕಟ್ಟಿದರು. 16 ಯೂಫ್ರೇಟೀಸ್ ನದಿಯ ಮತ್ತೊಂದು ತೀರದಲ್ಲಿ ವಾಸಿಸುತ್ತಿದ್ದ ಅರಾಮ್ಯರನ್ನು ಕರೆತರಲು ಹದದೆಜೆರನು ಸಂದೇಶಕರನ್ನು ಕಳುಹಿಸಿದನು. ಈ ಅರಾಮ್ಯರು ಹೇಲಾಮಿಗೆ ಬಂದರು. ಹದದೆಜೆರನ ಸೇನಾಪತಿಯಾದ ಶೋಬಕನು ಅವರ ನಾಯಕನಾದನು.

17 ಈ ವಿಷಯವು ದಾವೀದನಿಗೆ ತಿಳಿಯಿತು. ಆದ್ದರಿಂದ ಅವನು ಇಸ್ರೇಲರೆಲ್ಲರನ್ನೂ ಒಟ್ಟುಗೂಡಿಸಿ ಜೋರ್ಡನ್ ನದಿಯನ್ನು ದಾಟಿ ಹೇಲಾಮಿಗೆ ಹೋದನು.

ಅಲ್ಲಿ ಅರಾಮ್ಯರು ಯುದ್ಧಕ್ಕೆ ಸಿದ್ಧರಾಗಿ ಆಕ್ರಮಣ ಮಾಡಿದರು. 18 ಆದರೆ ದಾವೀದನು ಅರಾಮ್ಯರನ್ನು ಸೋಲಿಸಿದನು. ಅರಾಮ್ಯರು ಇಸ್ರೇಲರನ್ನು ಬಿಟ್ಟು ಓಡಿಹೋದರು. ದಾವೀದನು ಅರಾಮ್ಯರ ಏಳು ನೂರು ಮಂದಿ ರಥದ ಸಾರಥಿಯರನ್ನೂ ನಲವತ್ತು ಸಾವಿರ ಮಂದಿ ರಾಹುತರನ್ನೂ ಕೊಂದುಹಾಕಿದನು. ಅರಾಮ್ಯರ ಸೇನಾಪತಿಯಾದ ಶೋಬಕನನ್ನು ಸಹ ದಾವೀದನು ಕೊಂದುಹಾಕಿದನು.

19 ಹದದೆಜೆರನ ಸೇವೆಯಲ್ಲಿದ್ದ ರಾಜರಿಗೆ ಇಸ್ರೇಲರು ತಮ್ಮನ್ನು ಸೋಲಿಸಿದುದು ತಿಳಿದುಬಂತು. ಆದುದರಿಂದ ಅವರು ಇಸ್ರೇಲರೊಂದಿಗೆ ಶಾಂತಿಸಂಧಾನ ಮಾಡಿಕೊಂಡು ಅವರ ಸೇವಕರಾದರು. ಅಂದಿನಿಂದ ಅಮ್ಮೋನಿಯರಿಗೆ ಮತ್ತೆ ಸಹಾಯಮಾಡಲು ಅರಾಮ್ಯರು ಭಯಗೊಂಡರು.

2 ಕೊರಿಂಥದವರಿಗೆ 3

ದೇವರ ಸೇವಕರ ಹೊಸ ಒಪ್ಪಂದ

ನಾವು ನಮ್ಮ ವಿಷಯವಾಗಿ ಮತ್ತೆ ಹೊಗಳಿಕೊಳ್ಳಲು ಆರಂಭಿಸಿದ್ದೇವೆಯೇ? ಇತರ ಕೆಲವು ಜನರಿಗೆ ಬೇಕಾಗುವಂತೆ ನಿಮ್ಮ ಬಳಿಗೆ ಬರಲು ನನಗೆ ಯೋಗ್ಯತಾಪತ್ರಗಳನ್ನು ತೆಗೆದು ಕೊಳ್ಳಬೇಕಾಗಿದೆಯೋ? ಅಥವಾ ಬೇರೆಡೆಗೆ ಹೋಗುವಾಗ ನಿಮ್ಮಿಂದ ಯೋಗ್ಯತಾ ಪತ್ರಗಳನ್ನು ತೆಗೆದುಕೊಳ್ಳಬೇಕಾಗಿದೆಯೋ? ಸ್ವತಃ ನೀವೇ ನಮಗೆ ಯೋಗ್ಯತಾಪತ್ರವಾಗಿದ್ದೀರಿ. ಆ ಪತ್ರಗಳು ನಮ್ಮ ಹೃದಯಗಳಲ್ಲಿ ಬರೆಯಲ್ಪಟ್ಟಿವೆ. ಆ ಪತ್ರವನ್ನು ಎಲ್ಲರೂ ಬಲ್ಲರು, ಎಲ್ಲರೂ ಓದುತ್ತಾರೆ. ಕ್ರಿಸ್ತನು ನಮ್ಮ ಮೂಲಕವಾಗಿ ಕಳುಹಿಸಿದ ಕ್ರಿಸ್ತನ ಪತ್ರ ನೀವಾಗಿದ್ದೀರಿ. ಆ ಪತ್ರವನ್ನು ಬರೆದಿರುವುದು ಶಾಯಿಯಿಂದಲ್ಲ, ಜೀವಸ್ವರೂಪನಾದ ದೇವರ ಆತ್ಮನಿಂದ. ಇದನ್ನು ಕಲ್ಲುಹಲಿಗೆಗಳ ಮೇಲೆ ಬರೆದಿಲ್ಲ. ಇದನ್ನು ಮಾನವ ಹೃದಯಗಳ ಮೇಲೆ ಬರೆಯಲಾಗಿದೆ.

ನಾವು ಈ ಸಂಗತಿಗಳನ್ನು ಹೇಳಬಲ್ಲೆವು; ಏಕೆಂದರೆ ನಾವು ಕ್ರಿಸ್ತನ ಮೂಲಕ ದೇವರ ಸನ್ನಿಧಿಯಲ್ಲಿ ಭರವಸದಿಂದಿದ್ದೇವೆ. ನಮ್ಮ ಸ್ವಂತ ಶಕ್ತಿಯಿಂದಲೇ ನಾವು ಯಾವ ಒಳ್ಳೆಯದನ್ನಾದರೂ ಮಾಡಬಲ್ಲೆವೆಂದು ನಾನು ಹೇಳುತ್ತಿಲ್ಲ. ನಾವು ಮಾಡುವ ಕಾರ್ಯಗಳನ್ನು ದೇವರು ಒದಗಿಸಿದ ಸಾಮರ್ಥ್ಯದಿಂದಲೇ ಮಾಡುತ್ತೇವೆ. ದೇವರು ತನ್ನ ಜನರೊಂದಿಗೆ ಮಾಡಿಕೊಂಡ ಹೊಸ ಒಡಂಬಡಿಕೆಗೆ ಸೇವಕರಾಗಿರುವ ಸಾಮರ್ಥ್ಯವನ್ನು ದೇವರೇ ನಮಗೆ ಕೊಟ್ಟನು. ಈ ಹೊಸ ಒಡಂಬಡಿಕೆಯು ಲಿಖಿತ ರೂಪವಾದ ಧರ್ಮಶಾಸ್ತ್ರವಲ್ಲ. ಇದು ಪವಿತ್ರಾತ್ಮನದು. ಲಿಖಿತ ರೂಪವಾದ ಧರ್ಮಶಾಸ್ತ್ರವು ಮರಣವನ್ನು ತರುತ್ತದೆ, ಆದರೆ ಪವಿತ್ರಾತ್ಮನು ಜೀವವನ್ನು ಕೊಡುತ್ತಾನೆ.

ಹೊಸ ಒಡಂಬಡಿಕೆಯು ಹೆಚ್ಚಿನ ಮಹಿಮೆಯನ್ನು ತರುತ್ತದೆ

ಮರಣವನ್ನು ವಿಧಿಸುವ ಸೇವೆಯು (ಧರ್ಮಶಾಸ್ತ್ರ) ಕಲ್ಲಿನ ಹಲಗೆಗಳ ಮೇಲೆ ಅಕ್ಷರಗಳಲ್ಲಿ ಬರೆಯಲ್ಪಟ್ಟಿತ್ತು. ಅದು ದೇವರ ಮಹಿಮೆಯೊಂದಿಗೆ ಬಂದಿತು. ಮೋಶೆಯ ಮುಖವು ಪ್ರಕಾಶಮಾನವಾಗಿ ಹೊಳೆಯುತ್ತಿದ್ದುದರಿಂದ ಇಸ್ರೇಲರು ಅವನ ಮುಖವನ್ನು ನೋಡಲಾರದೆ ಹೋದರು. ಆ ಬಳಿಕ ಆ ಮಹಿಮೆಯು ಕುಂದಿಹೋಯಿತು. ಹೀಗಿರಲಾಗಿ ಪವಿತ್ರಾತ್ಮನ ಸಂಬಂಧವಾದ ಸೇವೆಯು ಇನ್ನೂ ಹೆಚ್ಚಿನ ಮಹಿಮೆಯನ್ನು ಹೊಂದಿದೆ. ಇದರರ್ಥವೇನೆಂದರೆ: ಆ ಸೇವೆಯು (ಧರ್ಮಶಾಸ್ತ್ರ) ಜನರನ್ನು ಅಪರಾಧಿಗಳೆಂದು ತೀರ್ಪು ನೀಡಿತು, ಆದರೆ ಅದು ಮಹಿಮೆಯನ್ನು ಹೊಂದಿತ್ತು. ಹೀಗಿರಲಾಗಿ, ನೀತಿಗೆ ಸಾಧನವಾಗಿರುವ ಸೇವೆಯು ಇನ್ನೂ ಹೆಚ್ಚಿನ ಮಹಿಮೆಯನ್ನು ಉಂಟುಮಾಡುವುದು ಎಷ್ಟೋ ನಿಶ್ಚಯವಾಗಿದೆ. 10 ಆ ಹಳೆ ಸೇವೆಯು ಮಹಿಮೆಯನ್ನು ಹೊಂದಿತ್ತು. ಆದರೆ ಅದು ಹೊಸ ಸೇವೆಯ ಎದುರಿನಲ್ಲಿ ಮಹಿಮೆಯಿಲ್ಲದ್ದಾಯಿತು. 11 ಲಯಗೊಂಡ ಆ ಸೇವೆಯು ಮಹಿಮೆಯೊಂದಿಗೆ ಬಂದಿರುವುದಾಗಿದ್ದರೆ, ಎಂದೆಂದಿಗೂ ಮುಂದುವರಿಯುವ ಈ ಸೇವೆಯು ಇನ್ನೂ ಹೆಚ್ಚಿನ ಮಹಿಮೆಯನ್ನು ಹೊಂದಿದೆ.

12 ನಮಗೆ ಈ ನಿರೀಕ್ಷೆ ಇರುವುದರಿಂದ ನಾವು ಬಹಳ ಧೈರ್ಯವಾಗಿದ್ದೇವೆ. 13 ನಾವು ಮೋಶೆಯಂತಿಲ್ಲ. ಕುಂದಿ ಹೋಗುವ ಮಹಿಮೆಯು ಅಂತ್ಯಗೊಳ್ಳುವುದನ್ನು ಇಸ್ರೇಲರು ಕಾಣದಂತೆ ಮೋಶೆಯು ತನ್ನ ಮುಖಕ್ಕೆ ಮುಸುಕು ಹಾಕಿಕೊಂಡನು. 14 ಆದರೆ ಅವರ ಬುದ್ಧಿಗೆ ಮಂಕು ಕವಿದಿದ್ದರಿಂದ ಅವರು ಅರ್ಥಮಾಡಿಕೊಳ್ಳಲಾಗಲಿಲ್ಲ. ಅವರು ಹಳೆ ಒಡಂಬಡಿಕೆಯನ್ನು ಓದುವಾಗ ಇಂದಿಗೂ ಅದೇ ಮುಸುಕು ಅರ್ಥವನ್ನು ಮರೆಮಾಡುತ್ತದೆ. ಆ ಮುಸುಕನ್ನು ತೆಗೆದು ಹಾಕಲಿಲ್ಲ. ಏಕೆಂದರೆ ಕ್ರಿಸ್ತನ ಮೂಲಕವಾಗಿ ಮಾತ್ರ ಅದು ತೆಗೆದುಹಾಕಲ್ಪಡುತ್ತದೆ. 15 ಆದರೆ ಇಂದಿಗೂ ಸಹ, ಮೋಶೆಯ ಧರ್ಮಶಾಸ್ತ್ರವನ್ನು ಓದುವಾಗ, ಅವರ ಮನಸ್ಸುಗಳ ಮೇಲೆ ಮುಸುಕು ಇರುತ್ತದೆ. 16 ಆದರೆ ಒಬ್ಬ ವ್ಯಕ್ತಿಯು ಮಾರ್ಪಾಟಾಗಿ ಪ್ರಭುವನ್ನು ಅನುಸರಿಸುವಾಗ ಆ ಮುಸುಕು ತೆಗೆಯಲ್ಪಡುವುದು. 17 ಆ ಪ್ರಭುವು ಪವಿತ್ರಾತ್ಮನೇ. ಎಲ್ಲಿ ಪ್ರಭುವಿನ ಆತ್ಮನು ಇರುತ್ತಾನೋ ಅಲ್ಲಿ ಸ್ವತಂತ್ರವಿರುತ್ತದೆ. 18 ನಮ್ಮ ಮುಖಗಳು ಮುಸುಕಿನಿಂದ ಮುಚ್ಚಲ್ಪಟ್ಟಿಲ್ಲ. ನಾವೆಲ್ಲರೂ ಮುಸುಕು ತೆರೆದ ಮುಖವುಳ್ಳವರಾಗಿದ್ದು ಪ್ರಭುವಿನ ಮಹಿಮೆಯನ್ನು ಪ್ರತಿಬಿಂಬಿಸುವ ಕನ್ನಡಿಯಂತಿದ್ದೇವೆ. ಪ್ರಭುವಿನಿಂದ ಹೊರಹೊಮ್ಮುವ ಮಹಿಮೆಯು ನಮ್ಮನ್ನು ಅಧಿಕಾಧಿಕವಾಗಿ ಮಾರ್ಪಡಿಸಿ ಆತನನ್ನೇ ಹೋಲುವಂತೆ ಮಾಡುತ್ತದೆ. ಇದೆಲ್ಲಾ ದೇವರಾತ್ಮನಾಗಿರುವ ಪ್ರಭುವಿನ ಕಾರ್ಯವೇ.

ಯೆಹೆಜ್ಕೇಲ 17

ಹದ್ದುಗಳು ಮತ್ತು ದಾಕ್ಷಾಲತೆಗಳು

17 ಯೆಹೋವನ ಮಾತುಗಳು ನನಗೆ ಬಂದವು. ಆತನು ಹೇಳಿದ್ದೇನೆಂದರೆ, “ನರಪುತ್ರನೇ, ಈ ಕಥೆಯನ್ನು ಇಸ್ರೇಲ್ ಜನಾಂಗಕ್ಕೆ ಹೇಳು. ಇದರ ಅರ್ಥವೇನೆಂದು ಅವರನ್ನು ಕೇಳು. ಅವರಿಗೆ ಹೀಗೆ ಹೇಳು, ದೇವರಾದ ಯೆಹೋವನು ಹೀಗೆನ್ನುತ್ತಾನೆ:

“‘ಅಗಲವಾದ ರೆಕ್ಕೆಗಳುಳ್ಳ ದೊಡ್ಡ ಹದ್ದು (ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನು) ಲೆಬನೋನಿಗೆ ಬಂದಿತು.
    ಅದರ ರೆಕ್ಕೆಗಳು ಅನೇಕ ಚುಕ್ಕೆಗಳನ್ನು ಹೊಂದಿತ್ತು.
ಆ ಹದ್ದು ದೇವದಾರು ಮರದ (ಯೆಹೂದದ ರಾಜನಾದ ಯೆಹೋಯಾಖೀನ್) ಮೇಲ್ಭಾಗವನ್ನು ಮುರಿದುಬಿಟ್ಟಿತು.
    ಅದನ್ನು ವ್ಯಾಪಾರಿಗಳ ದೇಶಕ್ಕೆ ತಂದುಹಾಕಿತು.
ನಂತರ ಆ ಹದ್ದು ದೇಶದ ಬೀಜಗಳಲ್ಲಿ ಒಂದನ್ನು (ಹಿಜ್ಕೀಯ) ತೆಗೆದುಕೊಂಡು
    ಅದನ್ನು ಒಳ್ಳೆಯ ಮಣ್ಣಿನಲ್ಲಿ ಬಿತ್ತಿತು;
ಸಮೃದ್ಧಿಕರವಾದ ನೀರಿನ ಸಮೀಪದಲ್ಲಿ ಬೆಳೆಯುವ
    ನೀರವಂಜಿಯಂತೆ ಅದನ್ನು ಬೆಳೆಯಿಸಿತು.
ಆ ಬೀಜವು ಚಿಗುರಿ, ಚಿಕ್ಕ ಜಾತಿಯ ದ್ರಾಕ್ಷಾಲತೆಯಂತೆ ನೆಲದ ಮೇಲೆ ಹಬ್ಬಿಕೊಂಡು,
    ತನ್ನ ಕೊಂಬೆಗಳನ್ನು ಗರುಡದ ಕಡೆಗೆ ಚಾಚಿಕೊಂಡು ತನ್ನ ಬೇರುಗಳನ್ನು ಬಿಟ್ಟಿತು:
ಅಂತೆಯೇ ಅದು ಲತೆಯಾಗಿ ಕೊಂಬೆಗಳನ್ನು ಬೆಳೆಸಿ,
    ಎಲೆಗಳನ್ನು ಹೊರಡಿಸಿತು.
ಆಗ ಅಗಲ ರೆಕ್ಕೆಗಳಿದ್ದ ಇನ್ನೊಂದು ಹದ್ದು ದ್ರಾಕ್ಷಾಲತೆಯನ್ನು ನೋಡಿತು.
    ಈ ಹದ್ದಿಗೆ ತುಂಬಾ ಪುಕ್ಕಗಳಿದ್ದವು.
ದ್ರಾಕ್ಷಾಲತೆಯು ತನ್ನ ಬೇರುಗಳನ್ನು
    ಹದ್ದಿನ ಕಡೆಗೆ ತಿರುಗಿಸಿತ್ತು.
ಹದ್ದಿಗೆ ನೀರು ಹಾಯಿಸಲು ಸಾಧ್ಯವಾಗುವಂತೆ
    ಅದು ತನ್ನ ರೆಂಬೆಗಳನ್ನು ಹದ್ದಿನ ಕಡೆಗೆ ಚಾಚಿಕೊಂಡಿತ್ತು.
ಅದು ತಾನು ನೆಡಲ್ಪಟ್ಟಿದ್ದ ಸ್ಥಳದಿಂದ ಬೇರೆ ಕಡೆಗೆ ತಿರುಗಿಕೊಂಡಿತು.
ಆ ದ್ರಾಕ್ಷಾಲತೆಯು ಸಮೃದ್ಧಿಕರವಾಗಿ ನೀರಿದ್ದ ಒಳ್ಳೆಯ ಭೂಮಿಯಲ್ಲಿ ನೆಡಲ್ಪಟ್ಟಿತ್ತು.
    ಕೊಂಬೆಗಳನ್ನು ಬೆಳೆಸಿ, ಹಣ್ಣುಗಳನ್ನು ಫಲಿಸಿ
    ಅಮೋಘವಾದ ದ್ರಾಕ್ಷಾಲತೆಯಾಗಬೇಕೆಂಬುದು ಅದರ ಬಯಕೆಯಾಗಿತ್ತು.’”

ನೀನು ಹೀಗೆ ಹೇಳು: ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ:
“ಆ ದ್ರಾಕ್ಷಾಲತೆಯು ಬದುಕಿ ಬೆಳೆಯುವುದೋ?
ಇಲ್ಲ. ಮೊದಲನೆ ಹದ್ದು ದ್ರಾಕ್ಷಾಲತೆಗಳ ಬೇರುಗಳನ್ನು ಎಳೆದುಹಾಕಿ,
    ಅದರ ದ್ರಾಕ್ಷಿಹಣ್ಣುಗಳನ್ನು ಕಿತ್ತುಹಾಕುವುದು.
ಆಗ ಚಿಗುರುಗಳು ಬಾಡಿ ಒಣಗಿಹೋಗುವವು.
    ಆ ಸಸಿಯು ಬಲಹೀನವಾಗುವುದು.
ಆಗ ಅದನ್ನು ಬೇರುಸಹಿತ ಕಿತ್ತುಹಾಕಲು ಮಹಾ ಬಲವಾಗಲಿ
    ಅಥವಾ ದೊಡ್ಡಸೈನ್ಯವಾಗಲಿ ಅಗತ್ಯವಿರುವದಿಲ್ಲ.
10 ಆ ಸಸಿಯು ನೆಟ್ಟಿದ ಸ್ಥಳದಲ್ಲಿ ಬೆಳೆಯುವುದೋ?
    ಇಲ್ಲ! ಪೂರ್ವದ ಬಿಸಿಗಾಳಿಯು ಬೀಸುವದು,
    ಆಗ ಸಸಿಯು ತಾನು ನೆಡಲ್ಪಟ್ಟಿದ್ದ ಸ್ಥಳದಲ್ಲೇ ಬಾಡಿಹೋಗಿ ಸಾಯುವುದು.”

ರಾಜ ಚಿದ್ಕೀಯನನ್ನು ದಂಡಿಸಿದ್ದು

11 ಯೆಹೋವನ ನುಡಿಯು ನನಗೆ ಬಂತು. ಆತನು ಹೇಳಿದ್ದೇನೆಂದರೆ, 12 “ದಂಗೆಕೋರರಿಗೆ ಇದನ್ನು ಹೇಳು: ಈ ಸಂಗತಿಗಳ ಅರ್ಥವು ನಿಮಗೆ ಗೊತ್ತಿಲ್ಲವೇ? ಅವರಿಗೆ ಹೇಳು: ಮೊದಲಿನ ಗರುಡ ಪಕ್ಷಿ ಬಾಬಿಲೋನ್ ರಾಜನಾದ ನೆಬೂಕದ್ನೆಚ್ಚರನು. ಅವನು ಜೆರುಸಲೇಮಿಗೆ ಬಂದು ಅದರ ರಾಜನನ್ನೂ ಅದರ ಹಿರಿಯರನ್ನೂ ಬಂಧಿಸಿ, ಅವರನ್ನು ತನ್ನ ರಾಜ್ಯವಾದ ಬಾಬಿಲೋನಿಗೆ ಕೊಂಡೊಯ್ದನು. 13 ಯೆಹೂದದ ರಾಜನನ್ನಾಗಿ ಮಾಡುವುದಾಗಿ ನೆಬೂಕದ್ನೆಚ್ಚರನು ರಾಜನ ಕುಟುಂಬದವರಲ್ಲೊಬ್ಬನೊಡನೆ ಒಪ್ಪಂದಮಾಡಿಕೊಂಡು ತನಗೆ (ನೆಬೂಕದ್ನೆಚ್ಚರನಿಗೆ) ಆಧಿನವಾಗಿರುವದಾಗಿ ಅವನಿಂದ (ರಾಜನ ಕುಟುಂಬದವನಿಂದ) ಪ್ರಮಾಣ ಮಾಡಿಸಿಕೊಂಡನು. ಅವನು ಯೆಹೂದದ ಬಲಿಷ್ಠರೆಲ್ಲರನ್ನು ಸಹ ಈ ಒಪ್ಪಂದದಲ್ಲಿ ಸೇರಿಸಿದನು. 14 ಯೆಹೂದ ರಾಜ್ಯವು ದೀನತೆಯಿಂದಿದ್ದು ದಂಗೆ ಏಳದೆ ತನ್ನ ಒಪ್ಪಂದಕ್ಕೆ ಶಾಶ್ವತವಾಗಿ ಬದ್ಧವಾಗಿರಬೇಕೆಂಬುದು ನೆಬೂಕದ್ನೆಚ್ಚರನ ಬಯಕೆಯಾಗಿತ್ತು. 15 ಆದರೆ ಈ ಹೊಸ ರಾಜನು ನೆಬೂಕದ್ನೆಚ್ಚರನಿಗೆ ತಿರುಗಿ ಬೀಳಲು ಪ್ರಯತ್ನಿಸಿದನು. ಅವನು ಈಜಿಪ್ಟಿಗೆ ದೂತರನ್ನು ಕಳುಹಿಸಿ ಸಹಾಯವನ್ನು ಕೇಳಿದನು. ಬಹಳ ಕುದುರೆಗಳನ್ನೂ ಸೈನಿಕರನ್ನೂ ಕೇಳಿದನು. ಯೆಹೂದದ ಹೊಸ ರಾಜನು ತನ್ನ ಪ್ರಯತ್ನದಲ್ಲಿ ಜಯಶಾಲಿಯಾಗುವನು ಎಂದು ಭಾವಿಸುವಿರೋ? ಈ ಹೊಸ ರಾಜನು ಒಪ್ಪಂದವನ್ನು ಮುರಿದು ಶಿಕ್ಷೆಯಿಂದ ಪಾರಾಗುವನೆಂದು ನೀವು ಭಾವಿಸುವಿರೋ?”

16 ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ, “ನನ್ನ ಜೀವದಾಣೆ, ಈ ಹೊಸ ರಾಜನು ಬಾಬಿಲೋನಿನಲ್ಲಿ ಸಾಯುವನು. ಈ ಮನುಷ್ಯನನ್ನು ಯೆಹೂದದ ರಾಜನನ್ನಾಗಿ ಮಾಡಿದ ರಾಜ ನೆಬೂಕದ್ನೆಚ್ಚರನ ನಾಡಿನಲ್ಲಿ ಇವನು ಸಾಯುವನು. ಈ ಮನುಷ್ಯನು ಆ ರಾಜನೊಡನೆ ಮಾಡಿದ ಪ್ರಮಾಣವನ್ನು ತಿರಸ್ಕರಿಸಿ ಆ ರಾಜನೊಡನೆ ಮಾಡಿಕೊಂಡಿದ್ದ ಒಪ್ಪಂದವನ್ನು ಮುರಿದು ಹಾಕಿದನು. 17 ಈಜಿಪ್ಟಿನ ರಾಜನು ಯೆಹೂದದ ರಾಜನನ್ನು ರಕ್ಷಿಸಲು ಸಾಧ್ಯವಿಲ್ಲ. ಅವನು ಬಹಳ ಸೈನಿಕರನ್ನು ಕಳುಹಿಸಬಹುದು, ಆದರೆ ಈಜಿಪ್ಟಿನ ಶಕ್ತಿಯು ಯೆಹೂದವನ್ನು ರಕ್ಷಿಸಲಾರದು. ನೆಬೂಕದ್ನೆಚ್ಚರನ ಸೈನ್ಯವು ಕೆಸರಿನ ಇಳಿಜಾರುಗಳನ್ನೂ ತಡೆಗಟ್ಟುಗಳನ್ನೂ ಕಟ್ಟಿ ಪಟ್ಟಣವನ್ನು ವಶಪಡಿಸಿಕೊಳ್ಳುವುದು. ಎಷ್ಟೋ ಮಂದಿ ಸಾಯುವರು. 18 ಆದರೆ ಯೆಹೂದದ ರಾಜನಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗುವದಿಲ್ಲ. ಯಾಕೆಂದರೆ ಅವನು ತನ್ನ ಪ್ರಮಾಣವನ್ನು ತಿರಸ್ಕರಿಸಿದನು ಮತ್ತು ತಾನು ಮಾಡಿಕೊಂಡ ಒಡಂಬಡಿಕೆಯನ್ನು ಮುರಿದುಹಾಕಿದನು.” 19 ಆದ್ದರಿಂದ ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ನನ್ನ ಜೀವದಾಣೆ, ನಾನು ಯೆಹೂದದ ರಾಜನನ್ನು ಶಿಕ್ಷಿಸುವೆನು. ಯಾಕೆಂದರೆ ಅವನು ನನ್ನ ಮುಂದೆ ಮಾಡಿದ ಪ್ರಮಾಣಕ್ಕೆ ಗಮನಕೊಡಲಿಲ್ಲ ಮತ್ತು ನಾನು ಸಾಕ್ಷಿಯಾಗಿದ್ದ ಒಪ್ಪಂದವನ್ನು ಅವನು ಮುರಿದುಹಾಕಿದನು. 20 ನಾನು ಅವನಿಗೆ ಉರುಲನ್ನೊಡ್ಡುವೆನು; ಅವನು ಅದರೊಳಗೆ ಸಿಕ್ಕಿಕೊಳ್ಳುವನು. ನಾನು ಅವನನ್ನು ಬಾಬಿಲೋನಿಗೆ ತಂದು ಅಲ್ಲಿ ಶಿಕ್ಷಿಸುವೆನು. ಯಾಕೆಂದರೆ ಅವನು ನನಗೆ ಅಪನಂಬಿಗಸ್ತನಾದನು. 21 ಅವನ ಸೈನ್ಯವನ್ನು ನಾಶಮಾಡುವೆನು. ಅವನಲ್ಲಿದ್ದ ಶೂರರನ್ನು ನಾಶಮಾಡುವೆನು. ಅಳಿದುಳಿದವರನ್ನು ಗಾಳಿ ಬೀಸುವ ಪ್ರತಿಯೊಂದು ದಿಕ್ಕಿನಲ್ಲಿಯೂ ಚದರಿಸಿಬಿಡುವೆನು. ಆಗ ಯೆಹೋವನಾದ ನಾನು ನಿಮಗೆ ಇದನ್ನು ಹೇಳಿದೆನೆಂದು ತಿಳಿಯುವುದು.”

22 ನನ್ನ ಒಡೆಯನಾದ ಯೆಹೋವನು ಇದನ್ನು ಹೇಳಿದನು:

“ನಾನು ಎತ್ತರವಾದ ದೇವದಾರು ಮರದಿಂದ ಒಂದು ಕೊಂಬೆಯನ್ನು ಕೀಳುವೆನು.
    ಆ ಮರದ ಮೇಲಿರುವ ಒಂದು ಸಣ್ಣ ಕೊಂಬೆಯನ್ನು ಕೀಳುವೆನು.
    ಅದನ್ನು ನಾನು ಎತ್ತರವಾದ ಪರ್ವತದಲ್ಲಿ ನೆಡುವೆನು.
23 ಸ್ವತಃ ನಾನೇ ಅದನ್ನು ಇಸ್ರೇಲಿನ ಉನ್ನತವಾದ ಪರ್ವತದ ಮೇಲೆ ನೆಡುವೆನು.
    ಅದು ಕೊಂಬೆಗಳನ್ನು ಬೆಳೆಸಿ, ಫಲವನ್ನು ಫಲಿಸಿ,
ಅಮೋಘವಾದ ದೇವದಾರು ಮರವಾಗುವುದು;
    ಅದರ ಕೊಂಬೆಗಳ ಮೇಲೆ ಅನೇಕ ಬಗೆಯ ಪಕ್ಷಿಗಳು ವಾಸಿಸುವವು.
ಅದರ ಕೊಂಬೆಯ ನೆರಳಿನಲ್ಲಿ
    ವಿವಿಧ ಬಗೆಯ ಪಕ್ಷಿಗಳು ವಾಸಿಸುವವು.

24 “ಆಗ ಬೇರೆ ಮರಗಳಿಗೆ, ನಾನು ದೊಡ್ಡ ಮರಗಳನ್ನು ನೆಲಕ್ಕೆ ಬೀಳಿಸುವೆನೆಂತಲೂ,
    ಚಿಕ್ಕ ಮರಗಳನ್ನು ಉದ್ದವಾಗಿ ಬೆಳೆಯುವಂತೆ ಮಾಡುತ್ತೇನೆಂತಲೂ ಗೊತ್ತಾಗುವದು.
ಹಸಿರು ಮರಗಳು ಒಣಗಿಹೋಗುವಂತೆಯೂ
    ಒಣಗಿಹೋದ ಮರಗಳು ಹಸಿರಾಗಿ ಬೆಳೆಯುವಂತೆಯೂ ನಾನು ಮಾಡುತ್ತೇನೆ.
ನಾನೇ ಯೆಹೋವನು.
    ಇದನ್ನು ನಾನೇ ಹೇಳಿದ್ದೇನೆ; ಮತ್ತು ನಾನೇ ಇದನ್ನು ನೆರವೇರಿಸುವೆನು.”

ಕೀರ್ತನೆಗಳು 60-61

ದಾವೀದನು ಅರಾಮ್ ನಹಾರಾಯಿಮ್ ಮತ್ತು ಅರಾಮ್ ಜೋಬಾ ಎಂಬುವರೊಂದಿಗೆ ಹೋರಾಡಿದಾಗ ಮತ್ತು ಯೋವಾಬನು ಹಿಂತಿರುಗಿ ಬಂದು ಉಪ್ಪಿನ ಕಣಿವೆಯಲ್ಲಿ ಎದೋಮ್ಯರ 12,000 ಮಂದಿ ಸೈನಿಕರನ್ನು ಸೋಲಿಸಿದಾಗ ರಚಿಸಲ್ಪಟ್ಟಿತು. ರಚನೆಗಾರ: ದಾವೀದ.

60 ದೇವರೇ, ನೀನು ನಮ್ಮನ್ನು ಕೋಪದಿಂದ ಕೈಬಿಟ್ಟಿರುವೆ;
    ನಮ್ಮನ್ನು ನಾಶಗೊಳಿಸಿರುವೆ.
    ನಮ್ಮನ್ನು ಪುನರ್‌ಸ್ಥಾಪಿಸು.
ನೀನು ಭೂಮಿಯನ್ನು ನಡುಗಿಸಿ ಸೀಳಿಬಿಟ್ಟಿರುವೆ.
    ನಮ್ಮ ದೇಶವು ಕುಸಿದುಬೀಳುತ್ತಿದೆ;
    ಅದನ್ನು ಸರಿಪಡಿಸು.
ನೀನು ನಿನ್ನ ಜನರಿಗೆ ಅನೇಕ ಕಷ್ಟಗಳನ್ನು ಕೊಟ್ಟಿರುವೆ.
    ನಾವು ಕುಡಿದವರಂತೆ ತೂರಾಡುತ್ತಾ ಬೀಳುತ್ತಿದ್ದೇವೆ.
ನಿನ್ನ ಆರಾಧಕರನ್ನು ನೀನು ಎಚ್ಚರಿಸುವೆ.
    ಈಗ ಅವರು ಶತ್ರುಗಳಿಂದ ಪಾರಾಗಬಹುದು.

ನಿನ್ನ ಮಹಾಶಕ್ತಿಯಿಂದ ನಮ್ಮನ್ನು ರಕ್ಷಿಸು!
    ನಮ್ಮ ಪ್ರಾರ್ಥನೆಗೆ ಉತ್ತರನೀಡಿ ನಿನ್ನ ಪ್ರಿಯರನ್ನು ರಕ್ಷಿಸು!

ದೇವರು ತನ್ನ ಆಲಯದೊಳಗೆ ಹೀಗೆಂದನು:
    “ನಾನು ಅವರಿಗೆ ಶೆಕೆಮನ್ನು ಕೊಡುವೆನು;
    ಸುಕ್ಕೋತ್ ಕಣಿವೆಯನ್ನೂ ಅವರಿಗೆ ಕೊಡುವೆನು.
    ಗಿಲ್ಯಾದ್ ಮತ್ತು ಮನಸ್ಸೆ ನನ್ನವೇ.
    ಎಫ್ರಾಯೀಮ್ ನನ್ನ ಶಿರಸ್ತ್ರಾಣ.
    ಯೆಹೂದ ನನ್ನ ರಾಜದಂಡ.
    ಮೋವಾಬ್ ನನ್ನ ಸ್ನಾನಪಾತ್ರೆ.
    ಎದೋಮ್ ನನ್ನ ಪಾದರಕ್ಷೆಗಳ ಸ್ಥಳ.
    ನಾನು ಫಿಲಿಷ್ಟಿಯರನ್ನು ಸೋಲಿಸಿ ಜಯಘೋಷ ಮಾಡುವೆ.”

9-10 ದೇವರೇ, ನೀನು ನಮ್ಮನ್ನು ಕೈಬಿಟ್ಟಿರುವೆ.
    ನೀನು ನಮ್ಮ ಸೈನ್ಯಗಳ ಸಂಗಡ ಬರಲಿಲ್ಲ.
ಹೀಗಿರಲು, ಕೋಟೆಕೊತ್ತಲುಗಳುಳ್ಳ ಪಟ್ಟಣಕ್ಕೆ ನನ್ನನ್ನು ನಡೆಸುವವರು ಯಾರು?
    ಎದೋಮಿನ ವಿರುದ್ಧ ನನ್ನನ್ನು ನಡೆಸುವವರು ಯಾರು?
11 ದೇವರೇ, ವೈರಿಗಳನ್ನು ಸೋಲಿಸಲು ನಮಗೆ ಸಹಾಯಮಾಡು!
    ಜನರು ನಮಗೆ ಸಹಾಯಮಾಡಲಾರರು!
12 ದೇವರೊಬ್ಬನೇ ನಮ್ಮನ್ನು ಬಲಗೊಳಿಸಬಲ್ಲನು.
    ಆತನೊಬ್ಬನೇ ನಮ್ಮ ಶತ್ರುಗಳನ್ನು ಸೋಲಿಸಬಲ್ಲನು!

ರಚನೆಗಾರ: ದಾವೀದ.

61 ದೇವರೇ, ನನ್ನ ಮೊರೆಯನ್ನು ಕೇಳು.
    ನನ್ನ ಪ್ರಾರ್ಥನೆಗೆ ಕಿವಿಗೊಡು.
ನಾನೆಲ್ಲೇ ಇದ್ದರೂ, ಎಷ್ಟೇ ಬಲಹೀನನಾಗಿದ್ದರೂ
    ಸಹಾಯಕ್ಕಾಗಿ ನಿನಗೇ ಮೊರೆಯಿಡುವೆನು!
ಅತ್ಯುನ್ನತವಾದ ಆಶ್ರಯಗಿರಿಗೆ ನನ್ನನ್ನು ಹತ್ತಿಸು.
ನೀನೇ ನನ್ನ ಆಶ್ರಯಸ್ಥಾನ;
    ಶತ್ರುಗಳಿಂದ ಕಾಪಾಡುವ ಭದ್ರವಾದ ಬುರುಜು.
ನಿನ್ನ ಗುಡಾರದಲ್ಲಿ ಸದಾಕಾಲ ವಾಸಿಸುವುದಕ್ಕೂ,
    ನಿನ್ನ ರೆಕ್ಕೆಗಳ ಮರೆಯನ್ನು ಆಶ್ರಯಿಸಿಕೊಳ್ಳುವುದಕ್ಕೂ ತವಕಪಡುತ್ತಿರುವೆ.

ದೇವರೇ, ನನ್ನ ಹರಕೆಗಳನ್ನೆಲ್ಲಾ ನೀನು ಕೇಳಿರುವೆ.
    ನಿನ್ನಲ್ಲಿ ಭಯಭಕ್ತಿಯುಳ್ಳವರಿಗೆ ಬರುವ ಸ್ವಾಸ್ತ್ಯವನ್ನು ನೀನು ನನಗೆ ಕೊಟ್ಟಿರುವೆ.
ರಾಜನಿಗೆ ದೀರ್ಘಾಯುಷ್ಯವನ್ನು ದಯಪಾಲಿಸು.
    ಅವನು ಸದಾಕಾಲ ಜೀವಿಸಲಿ!
ಅವನು ನಿನ್ನ ಸಾನಿಧ್ಯವನ್ನು ಪಡೆದು ಸದಾಕಾಲವೂ ರಾಜನಾಗಿರಲಿ!
    ನಿನ್ನ ನಿಜಪ್ರೀತಿಯಿಂದ ಅವನನ್ನು ಸಂರಕ್ಷಿಸು.
ಆಗ ನಾನು ನಿನ್ನ ಹೆಸರನ್ನು ಸದಾಕಾಲ ಕೊಂಡಾಡುವೆನು.
    ನನ್ನ ಹರಕೆಗಳನ್ನು ಪ್ರತಿದಿನವೂ ಸಲ್ಲಿಸುವೆನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International