M’Cheyne Bible Reading Plan
ಸೌಲನ ಮರಣದ ಬಗ್ಗೆ ದಾವೀದನಿಗೆ ವಾರ್ತೆ
1 ದಾವೀದನು ಅಮಾಲೇಕ್ಯರನ್ನು ಸೋಲಿಸಿದ ಬಳಿಕ, ಚಿಕ್ಲಗಿಗೆ ಹಿಂದಿರುಗಿಬಂದು, ಅಲ್ಲಿ ಎರಡು ದಿವಸ ಇದ್ದನು. ಸೌಲನ ಮರಣಾನಂತರ ಇದು ಸಂಭವಿಸಿತು. 2 ಮೂರನೆಯ ದಿನ ಒಬ್ಬ ಯುವ ಸೈನಿಕನು ಚಿಕ್ಲಗಿಗೆ ಬಂದನು. ಈ ಮನುಷ್ಯನು ಸೌಲನಿದ್ದ ಪಾಳೆಯದಿಂದ ಬಂದವನು. ಅವನು ಬಟ್ಟೆಗಳೆಲ್ಲವನ್ನು ಹರಿದುಕೊಂಡಿದ್ದನು; ತಲೆಯ ಮೇಲೆ ಧೂಳನ್ನು ಹಾಕಿಕೊಂಡಿದ್ದನು.[a] ಅವನು ದಾವೀದನ ಬಳಿಗೆ ಬಂದು ಅವನ ಮುಂದೆ, ತನ್ನ ತಲೆಯನ್ನು ನೆಲಕ್ಕೆ ಬಾಗಿಸಿ ನಮಸ್ಕರಿಸಿದನು.
3 ದಾವೀದನು ಅವನಿಗೆ, “ನೀನು ಎಲ್ಲಿಂದ ಬಂದೆ?” ಎಂದು ಅವನನ್ನು ಕೇಳಿದನು.
ಅದಕ್ಕೆ ಅವನು, “ನಾನು ಇಸ್ರೇಲರ ಪಾಳೆಯದಿಂದ ತಪ್ಪಿಸಿಕೊಂಡು ಬಂದೆ” ಎಂದು ಹೇಳಿದನು.
4 ದಾವೀದನು ಅವನನ್ನು, “ಯುದ್ಧದಲ್ಲಿ ಯಾರು ಗೆದ್ದರು, ನನಗೆ ದಯವಿಟ್ಟು ತಿಳಿಸು?” ಎಂದು ಕೇಳಿದನು.
ಅವನು, “ಇಸ್ರೇಲ್ ಜನರು ಯುದ್ಧರಂಗದಿಂದ ಓಡಿಹೋದರು. ಯುದ್ಧದಲ್ಲಿ ಅನೇಕರು ಸತ್ತುಹೋದರು. ಸೌಲನೂ ಅವನ ಮಗನಾದ ಯೋನಾತಾನನೂ ಸತ್ತರು” ಎಂದು ಹೇಳಿದನು.
5 ದಾವೀದನು ಆ ಯುವಕನಿಗೆ, “ಸೌಲನು ಮತ್ತು ಅವನ ಮಗನಾದ ಯೋನಾತಾನನು ಸತ್ತರೆಂದು ನಿನಗೆ ಹೇಗೆ ತಿಳಿಯಿತು?” ಎಂದು ಕೇಳಿದನು.
6 ಅದಕ್ಕೆ ಆ ಯುವಕನು, “ನಾನು ಆಕಸ್ಮಿಕವಾಗಿ ಗಿಲ್ಬೋವದ ಶಿಖರದ ಮೇಲಿದ್ದೆ. ಸೌಲನು ತನ್ನ ಭರ್ಜಿಯ ಮೇಲೆ ಒರಗಿಕೊಂಡಿದ್ದನ್ನು ಅಲ್ಲಿಂದಲೇ ನಾನು ನೋಡಿದೆ. ಫಿಲಿಷ್ಟಿಯರ ರಥಗಳು ಮತ್ತು ಕುದುರೆಸವಾರರು ಸೌಲನ ಹತ್ತಿರಕ್ಕೆ ಬರುತ್ತಿದ್ದರು. 7 ಸೌಲನು ಹಿಂದಿರುಗಿ ನೋಡಿದಾಗ ಅವನಿಗೆ ನಾನು ಕಾಣಿಸಿದೆನು. ಅವನು ನನ್ನನ್ನು ಕರೆದಾಗ, ‘ಇಗೋ ಬಂದೆನು’ ಎಂದು ಉತ್ತರಿಸಿದೆನು. 8 ನಂತರ ಸೌಲನು, ‘ನೀನು ಯಾರು?’ ಎಂದು ಕೇಳಿದನು. ‘ನಾನೊಬ್ಬ ಅಮಾಲೇಕ್ಯನು’ ಎಂದು ನಾನು ಹೇಳಿದೆನು. 9 ಸೌಲನು ನನಗೆ, ‘ದಯವಿಟ್ಟು ನನ್ನನ್ನು ಕೊಂದುಬಿಡು. ನಾನು ಬಹು ಸಂಕಟದಲ್ಲಿದ್ದೇನೆ. ನಾನು ಈಗಾಗಲೇ ಸತ್ತವನಂತಿದ್ದೇನೆ’ ಎಂದನು. 10 ಆದ್ದರಿಂದ ನಾನು ಅವನನ್ನು ಕೊಂದೆನು. ಅವನು ಮತ್ತೆ ಜೀವದಿಂದ ಉಳಿಯಲಾರದಷ್ಟು ಗಾಯಗೊಂಡಿದ್ದಾನೆಂಬುದು ನನಗೆ ತಿಳಿದಿತ್ತು. ನಂತರ ನಾನು ಅವನ ತಲೆಯಿಂದ ಕಿರೀಟವನ್ನೂ ತೋಳಿನ ಕವಚವನ್ನೂ ತೆಗೆದುಕೊಂಡೆನು. ನನ್ನ ಒಡೆಯನೇ, ನಾನು ಆ ಕಿರೀಟವನ್ನು ಮತ್ತು ತೋಳಿನ ಕವಚವನ್ನು ನಿನ್ನ ಬಳಿಗೆ ತಂದಿದ್ದೇನೆ” ಎಂದು ಹೇಳಿದನು.
11 ಆಗ ದಾವೀದನು ದುಃಖದಿಂದ ತನ್ನ ಬಟ್ಟೆಗಳನ್ನೆಲ್ಲ ಹರಿದುಕೊಂಡನು. ದಾವೀದನ ಜೊತೆಯಲ್ಲಿದ್ದವರೂ ತಮ್ಮ ಬಟ್ಟೆಗಳನ್ನು ಹರಿದುಕೊಂಡರು. 12 ಅವರು ಬಹಳ ದುಃಖದಿಂದ ಅತ್ತರು. ಅವರು ಸಂಜೆಯ ತನಕ ಏನನ್ನೂ ತಿನ್ನಲಿಲ್ಲ. ಸೌಲನೂ ಅವನ ಮಗನಾದ ಯೋನಾತಾನನೂ ಯೆಹೋವನ ಜನರೂ ಸತ್ತದ್ದಕ್ಕಾಗಿ ಮತ್ತು ಇಸ್ರೇಲಿಗಾಗಿ ದಾವೀದನು ಮತ್ತು ಅವನ ಜನರು ಅತ್ತರು. ಸೌಲನನ್ನೂ ಅವನ ಮಗನಾದ ಯೋನಾತಾನನನ್ನೂ ಮತ್ತು ಅನೇಕ ಮಂದಿ ಇಸ್ರೇಲರನ್ನೂ ಖಡ್ಗಗಳಿಂದ ಇರಿದು ಕೊಂದದ್ದಕ್ಕಾಗಿ ಅವರು ಅತ್ತರು.
ಅಮಾಲೇಕ್ಯನನ್ನು ಕೊಲ್ಲಲು ದಾವೀದನ ಆಜ್ಞೆ
13 ಸೌಲನ ಮರಣದ ಬಗ್ಗೆ ತಿಳಿಸಿದ ಯುವಕನಿಗೆ ದಾವೀದನು, “ನೀನು ಎಲ್ಲಿಂದ ಬಂದಿರುವೆ?” ಎಂದು ಕೇಳಿದನು.
ಆ ಯುವಕನು, “ನಾನು ಇಸ್ರೇಲ್ ಜನರಲ್ಲಿ ವಾಸಿಸುತ್ತಿರುವ ವಿದೇಶೀಯನ ಮಗ. ನಾನೊಬ್ಬ ಅಮಾಲೇಕ್ಯನು” ಎಂದು ಉತ್ತರಿಸಿದನು.
14 ದಾವೀದನು ಆ ಯುವಕನಿಗೆ, “ಯೆಹೋವನಿಂದ ಆರಿಸಲ್ಪಟ್ಟ ರಾಜನನ್ನು ಕೊಲ್ಲಲು ನೀನು ಹೆದರಲಿಲ್ಲವೇಕೆ?” ಎಂದು ಕೇಳಿದನು.
15-16 ನಂತರ ದಾವೀದನು ತನ್ನ ಗುಂಪಿನ ಯುವಕನೊಬ್ಬನನ್ನು ಕರೆದು, “ನೀನು ಹೋಗಿ ಆ ಅಮಾಲೇಕ್ಯನನ್ನು ಕೊಲ್ಲು” ಎಂದು ಹೇಳಿದನು. ಇಸ್ರೇಲರ ಯುವಕನು ಆ ಅಮಾಲೇಕ್ಯನನ್ನು ಕೊಂದುಬಿಟ್ಟನು. ದಾವೀದನು ಆ ಅಮಾಲೇಕ್ಯನಿಗೆ, “ನಿನ್ನ ಸಾವಿಗೆ ನೀನೇ ಕಾರಣನು.[b] ನೀನು ನಿನ್ನ ವಿರುದ್ಧವೇ ಸಾಕ್ಷಿ ಹೇಳಿದೆ. ‘ಯೆಹೋವನಿಂದ ಆರಿಸಲ್ಪಟ್ಟ ರಾಜನನ್ನು ನಾನು ಕೊಂದೆ’ ಎಂದು ನೀನೇ ಹೇಳಿದೆ” ಎಂದನು.
ಸೌಲನನ್ನು ಮತ್ತು ಯೋನಾತಾನನನ್ನು ಕುರಿತು ದಾವೀದನ ಶೋಕಗೀತೆ
17 ದಾವೀದನು, ಸೌಲನನ್ನು ಮತ್ತು ಅವನ ಮಗನಾದ ಯೋನಾತಾನನನ್ನು ಕುರಿತು ಒಂದು ಶೋಕಗೀತೆಯನ್ನು ಹಾಡಿದನು. 18 ಈ ಶೋಕಗೀತೆಯನ್ನು ಯೆಹೂದದ ಜನರಿಗೆ ಕಲಿಸಬೇಕೆಂದು ಅವನು ತನ್ನ ಜನರಿಗೆ ಹೇಳಿದನು. ಈ ಗೀತೆಗೆ “ಬಿಲ್ಲು” ಎಂದು ಹೆಸರು. ಈ ಗೀತೆಯನ್ನು ಯಾಷಾರ್ ಗ್ರಂಥದಲ್ಲಿ ಬರೆಯಲಾಗಿದೆ.
19 “ಇಸ್ರೇಲೇ, ನಿನ್ನ ಸೌಂದರ್ಯವೆಲ್ಲ ಉನ್ನತಸ್ಥಳಗಳಲ್ಲಿ ನಾಶವಾಯಿತು.
ಬಲಶಾಲಿಗಳಾದ ಜನರೆಲ್ಲ ಬಿದ್ದು ಹೋದರು.
20 ಗತ್‌ನಲ್ಲಿ ಈ ಸುದ್ದಿಯನ್ನು ಹೇಳದಿರು.
ಅಷ್ಕೆಲೋನಿನ ಬೀದಿಗಳಲ್ಲಿ ಇದನ್ನು ಸಾರದಿರು.
ಫಿಲಿಷ್ಟಿಯರ ಪಟ್ಟಣಗಳೆಲ್ಲಾ ಸಂತೋಷಪಡುವವು.
ಆ ವಿದೇಶಿಯರ ಹೆಣ್ಣುಮಕ್ಕಳು ಉಲ್ಲಾಸಪಡುವರು.
21 “ಗಿಲ್ಬೋವದ ಪರ್ವತಗಳಲ್ಲಿ
ಮಂಜೂ ಮಳೆಯೂ ಸುರಿಯದಿರಲಿ.
ಆ ಹೊಲಗಳಿಂದ ಕಾಣಿಕೆಯ ವಸ್ತುಗಳೂ ಬಾರದಿರಲಿ.
ಅಲ್ಲಿನ ಶಕ್ತಿಸಂಪನ್ನರ ಗುರಾಣಿಗಳೆಲ್ಲ ತುಕ್ಕುಹಿಡಿದಿವೆ.
ಸೌಲನ ಗುರಾಣಿಯು ಎಣ್ಣೆಯಿಲ್ಲದೆ ಬಿದ್ದಿದೆ.[c]
22 ಯೋನಾತಾನನ ಬಿಲ್ಲು ತನ್ನ ಪಾಲಿನ ಶತ್ರುಗಳನ್ನು ಸಂಹರಿಸಿತು.
ಸೌಲನ ಖಡ್ಗವು ತನ್ನ ಪಾಲಿನ ಶತ್ರುಗಳನ್ನು ಸಂಹರಿಸಿತು.
ಈಗ ಸತ್ತುಬಿದ್ದಿರುವ ಸೈನಿಕರ ರಕ್ತವನ್ನು ಅವರ ಆಯುಧಗಳು ಚಿಮ್ಮಿಸಿದವು.
ಅವರ ಆಯುಧಗಳು ಬಲಿಷ್ಠರ ಕೊಬ್ಬನ್ನು ಕತ್ತರಿಸಿಹಾಕಿದವು.
23 “ಸೌಲನು ಮತ್ತು ಯೋನಾತಾನನು ಒಬ್ಬರನ್ನೊಬ್ಬರು ಪ್ರೀತಿಸಿದರು;
ತಮ್ಮ ಪರಸ್ಪರ ಜೀವಿತದಲ್ಲಿ ಆನಂದಿಸಿದರು.
ಸೌಲನು ಮತ್ತು ಯೋನಾತಾನನು ಮರಣದಲ್ಲೂ ಒಂದಾದರು.
ಅವರು ಹದ್ದುಗಳಿಗಿಂತ ವೇಗವಾಗಿ ಹೋದರು;
ಸಿಂಹಗಳಿಗಿಂತ ಶಕ್ತಿಶಾಲಿಗಳಾಗಿದ್ದರು.
24 ಇಸ್ರೇಲಿನ ಕುವರಿಯರೇ, ಸೌಲನಿಗಾಗಿ ಗೋಳಾಡಿರಿ!
ಸೌಲನು ನಿಮಗೆ ಕೆಂಪು ಬಟ್ಟೆಗಳನ್ನು ಉಡಿಸಿದನು.
ಸೌಲನು ಸುವರ್ಣಾಭರಣಗಳನ್ನು ಬಟ್ಟೆಗಳ ಮೇಲೆ ತೊಡಿಸಿದನು.
25 “ಬಲಶಾಲಿಗಳಾದ ಜನರೆಲ್ಲ ಯುದ್ಧದಲ್ಲಿ ಮಡಿದರು.
ಗಿಲ್ಬೋವ ಪರ್ವತಗಳಲ್ಲಿ ಯೋನಾತಾನನೂ ಮಡಿದನು.
26 ನನ್ನ ಸೋದರನಾದ ಯೋನಾತಾನನೇ, ನಿನಗಾಗಿ ನಾನು ದುಃಖಿಸುವೆ!
ನಿನ್ನ ಗೆಳೆತನವು ನನಗೆ ಉಲ್ಲಾಸದಾಯಕವಾಗಿತ್ತು.
ನನ್ನ ಮೇಲಿನ ನಿನ್ನ ಪ್ರೀತಿಯು
ಸ್ತ್ರೀಯರ ಪ್ರೀತಿಗಿಂತಲೂ ಅತಿಶಯವಾಗಿತ್ತು.
27 ಬಲಶಾಲಿಗಳಾದ ಜನರೆಲ್ಲ ಯುದ್ಧದಲ್ಲಿ ಮಡಿದರು.
ಅವರ ಯುದ್ಧಾಯುಧಗಳೆಲ್ಲ ಹಾಳಾಗಿಹೋದವು.”
ಪವಿತ್ರಾತ್ಮನ ವರಗಳು
12 ಸಹೋದರ ಸಹೋದರಿಯರೇ, ಆತ್ಮಿಕ ವರಗಳ ಬಗ್ಗೆ ನೀವು ಅರ್ಥಮಾಡಿಕೊಳ್ಳಬೇಕೆಂಬುದು ನನ್ನ ಅಪೇಕ್ಷೆಯಾಗಿದೆ. 2 ನೀವು ವಿಶ್ವಾಸಿಗಳಾಗುವುದಕ್ಕಿಂತ ಮುಂಚೆ ನಿಮ್ಮ ಜೀವಿತವು ಹೇಗಿತ್ತೆಂಬುದನ್ನು ಜ್ಞಾಪಿಸಿಕೊಳ್ಳಿರಿ. ನಿಮಗಿಷ್ಟ ಬಂದಂತೆ ನಿರ್ಜೀವ ವಸ್ತುಗಳಾದ ವಿಗ್ರಹಗಳನ್ನು ಆರಾಧಿಸುತ್ತಿದ್ದಿರಿ. 3 ಹೀಗಿರಲಾಗಿ, ನಾನು ನಿಮಗೆ ಹೇಳುವುದೇನೆಂದರೆ, ದೇವರಾತ್ಮನ ಸಹಾಯದಿಂದ ಮಾತಾಡುವ ಯಾವ ವ್ಯಕ್ತಿಯೇ ಆಗಲಿ, “ಯೇಸು ಶಾಪಗ್ರಸ್ತನಾಗಲಿ” ಎಂದು ಹೇಳುವುದಿಲ್ಲ. ಅಂತೆಯೇ ಪವಿತ್ರಾತ್ಮನ ಸಹಾಯವಿಲ್ಲದೆ ಯಾವ ವ್ಯಕ್ತಿಯೇ ಆಗಲಿ, “ಯೇಸುವೇ ಪ್ರಭು” ಎಂದು ಹೇಳಲಾರನು.
4 ಅನೇಕ ರೀತಿಯ ಆತ್ಮಿಕ ವರಗಳಿವೆ. ಆದರೆ ಅವುಗಳೆಲ್ಲ ಒಬ್ಬನೇ ಆತ್ಮನಿಂದ ಬಂದಂಥವುಗಳಾಗಿವೆ. 5 ಸೇವೆಮಾಡಲು ವಿವಿಧ ಮಾರ್ಗಗಳಿವೆ, ಆದರೆ ಅವುಗಳೆಲ್ಲಾ ಒಬ್ಬನೇ ಆತ್ಮನಿಂದ ಬಂದಂಥವುಗಳಾಗಿವೆ. 6 ದೇವರು ಜನರಲ್ಲಿ ಮಾಡುವ ಕಾರ್ಯಗಳಿಗೂ ವಿವಿಧ ಮಾರ್ಗಗಳಿವೆ. ಆದರೆ ಅವುಗಳೆಲ್ಲಾ ಒಬ್ಬನೇ ದೇವರಿಂದ ಬಂದಂಥವುಗಳಾಗಿವೆ.
7 ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಪವಿತ್ರಾತ್ಮನ ವರವು ಕಾಣಬಲ್ಲದು. ಇತರರಿಗೆ ಸಹಾಯ ಮಾಡಲೆಂದು ಪವಿತ್ರಾತ್ಮನು ವರವನ್ನು ಕೊಡುತ್ತಾನೆ. 8 ಆತನು ಒಬ್ಬನಿಗೆ ಜ್ಞಾನದಿಂದ ಮಾತಾಡುವ ವರವನ್ನೂ ಮತ್ತೊಬ್ಬನಿಗೆ ತಿಳುವಳಿಕೆಯಿಂದ ಮಾತಾಡುವ ವರವನ್ನೂ ಕೊಡುತ್ತಾನೆ. 9 ಒಬ್ಬನಿಗೆ ನಂಬಿಕೆಯನ್ನೂ ಮತ್ತೊಬ್ಬನಿಗೆ ಸ್ವಸ್ಥಪಡಿಸುವ ವರವನ್ನೂ ಕೊಡುತ್ತಾನೆ; 10 ಮತ್ತೊಬ್ಬನಿಗೆ ಅದ್ಭುತಕಾರ್ಯಗಳನ್ನು ಮಾಡುವ ಶಕ್ತಿಯನ್ನೂ ಇನ್ನೊಬ್ಬನಿಗೆ ಪ್ರವಾದಿಸುವ ಸಾಮರ್ಥ್ಯವನ್ನೂ ಇನ್ನೊಬ್ಬನಿಗೆ ಒಳ್ಳೆಯ ಮತ್ತು ಕೆಟ್ಟ ಆತ್ಮಗಳ ನಡುವೆ ಇರುವ ವ್ಯತ್ಯಾಸವನ್ನು ತಿಳಿದುಕೊಳ್ಳುವ ಸಾಮರ್ಥ್ಯವನ್ನೂ ಕೊಡುತ್ತಾನೆ; ಒಬ್ಬನಿಗೆ ಅನೇಕ ಭಾಷೆಗಳನ್ನು ಮಾತಾಡುವ ಸಾಮರ್ಥ್ಯವನ್ನೂ ಮತ್ತೊಬ್ಬನಿಗೆ ಆ ಭಾಷೆಗಳನ್ನು ಅನುವಾದಿಸುವ ಸಾಮರ್ಥ್ಯವನ್ನೂ ಕೊಡುತ್ತಾನೆ. 11 ಪವಿತ್ರಾತ್ಮನು ಒಬ್ಬನೇ. ಆತನೇ ಎಲ್ಲಾ ವರಗಳನ್ನು ತನ್ನ ಚಿತ್ತಕ್ಕನುಸಾರವಾಗಿ ಪ್ರತಿಯೊಬ್ಬನಿಗೂ ಹಂಚಿಕೊಟ್ಟು ನಡೆಸುತ್ತಾನೆ.
ಕ್ರಿಸ್ತನ ದೇಹ
12 ದೇಹವು ಒಂದೇ, ಆದರೆ ಅದು ಅನೇಕ ಅಂಗಗಳನ್ನು ಪಡೆದಿದೆ. ಹೌದು, ದೇಹದಲ್ಲಿ ಅನೇಕ ಅಂಗಗಳಿವೆ, ಆದರೆ ಆ ಎಲ್ಲಾ ಅಂಗಗಳಿಂದ ಒಂದೇ ಒಂದು ದೇಹವು ರೂಪಿತವಾಗುತ್ತದೆ. ಅಂತೆಯೇ ಕ್ರಿಸ್ತನು. 13 ನಮ್ಮಲ್ಲಿ ಕೆಲವರು ಯೆಹೂದ್ಯರಿದ್ದಾರೆ, ಕೆಲವರು ಗ್ರೀಕರಿದ್ದಾರೆ, ಕೆಲವರು ಗುಲಾಮರಿದ್ದಾರೆ, ಕೆಲವರು ಸ್ವತಂತ್ರರಿದ್ದಾರೆ, ಆದರೆ ನಾವೆಲ್ಲರೂ ಒಂದೇ ದೇಹವಾಗುವುದಕ್ಕಾಗಿ ಒಬ್ಬನೇ ಪವಿತ್ರಾತ್ಮನ ಮೂಲಕ ದೀಕ್ಷಾಸ್ನಾನ ಮಾಡಿಸಿಕೊಂಡೆವು. ನಮ್ಮೆಲ್ಲರಿಗೂ ಒಬ್ಬನೇ ಪವಿತ್ರಾತ್ಮನನ್ನು ಕೊಡಲಾಯಿತು.[a]
14 ದೇಹವು ಒಂದು ಅಂಗಕ್ಕಿಂತಲೂ ಹೆಚ್ಚು ಅಂಗಗಳನ್ನು ಪಡೆದಿದೆ. ಅದು ಅನೇಕ ಅಂಗಗಳನ್ನು ಪಡೆದಿದೆ. 15 ಪಾದವು, “ನಾನು ಕೈಯಲ್ಲ, ಆದ್ದರಿಂದ ನಾನು ದೇಹಕ್ಕೆ ಸೇರಿಲ್ಲ” ಎಂದು ಹೇಳಬಹುದು. ಆದರೆ ಹೀಗೆ ಹೇಳಿದ ಮಾತ್ರಕ್ಕೆ ಪಾದವು ದೇಹದಿಂದ ಹೊರತಾಗಲಿಲ್ಲ. 16 ಕಿವಿಯು, “ನಾನು ಕಣ್ಣಲ್ಲ, ಆದ್ದರಿಂದ ನಾನು ದೇಹಕ್ಕೆ ಸೇರಿಲ್ಲ” ಎಂದು ಹೇಳಬಹುದು. ಆದರೆ ಹೀಗೆ ಹೇಳಿದ ಮಾತ್ರಕ್ಕೆ ಕಿವಿಯು ದೇಹದಿಂದ ಹೊರತಾಗಲಿಲ್ಲ. 17 ಇಡೀ ದೇಹವೇ ಕಣ್ಣಾಗಿದ್ದರೆ, ಕೇಳಿಸಿಕೊಳ್ಳಲು ದೇಹಕ್ಕೆ ಸಾಧ್ಯವಿರುತ್ತಿರಲಿಲ್ಲ. ಇಡೀ ದೇಹವೇ ಕಿವಿಯಾಗಿದ್ದರೆ, ದೇಹವು ಯಾವುದರ ವಾಸನೆಯನ್ನೂ ತಿಳಿದುಕೊಳ್ಳಲಾಗುತ್ತಿರಲಿಲ್ಲ. 18-19 ದೇಹದ ಪ್ರತಿಯೊಂದು ಅಂಗವು ಒಂದೇ ರೀತಿಯ ಅಂಗವಾಗಿದ್ದರೆ, ಆಗ ದೇಹವೇ ಇರುತ್ತಿರಲಿಲ್ಲ. ಆದರೆ ದೇವರು ತನ್ನ ಇಚ್ಛೆಗನುಸಾರವಾಗಿ ದೇಹದಲ್ಲಿ ಅಂಗಾಂಗಗಳನ್ನು ಇಟ್ಟಿದ್ದಾನೆ. ಆತನು ಅವುಗಳಲ್ಲಿ ಪ್ರತಿಯೊಂದಕ್ಕೂ ಸ್ಥಳವನ್ನು ಗೊತ್ತುಪಡಿಸಿದ್ದಾನೆ. 20 ಆದ್ದರಿಂದ ಅಂಗಗಳು ಅನೇಕವಿದ್ದರೂ ದೇಹವು ಒಂದೇ.
21 ಕಣ್ಣು, “ನೀನು ನನಗೆ ಅವಶ್ಯವಿಲ್ಲ” ಎಂದು ಕೈಗೆ ಹೇಳಲಾರದು ಮತ್ತು ತಲೆಯು, “ನೀನು ನನಗೆ ಅವಶ್ಯವಿಲ್ಲ” ಎಂದು ಪಾದಕ್ಕೆ ಹೇಳಲಾರದು. 22 ಅಲ್ಲದೆ ದೇಹದಲ್ಲಿ ಬಲಹೀನವಾಗಿ ತೋರುವ ಅಂಗಗಳು ನಿಜವಾಗಿಯೂ ಬಹಳ ಅವಶ್ಯವಾಗಿವೆ. 23 ನಾವು ದೇಹದ ಯಾವ ಅಂಗಗಳನ್ನು ಅಲ್ಪವಾದುವುಗಳೆಂದು ಎಣಿಸುತ್ತೇವೋ ಆ ಅಂಗಗಳ ಬಗ್ಗೆ ಹೆಚ್ಚು ಎಚ್ಚರಿಕೆ ತೆಗೆದುಕೊಳ್ಳುತ್ತೇವೆ. ನಾವು ನಮ್ಮ ಯಾವ ಅಂಗಗಳನ್ನು ತೋರಿಸಬಯಸುವುದಿಲ್ಲವೋ ಆ ಅಂಗಗಳನ್ನು ವಿಶೇಷವಾದ ರೀತಿಯಲ್ಲಿ ಸಂರಕ್ಷಿಸುತ್ತೇವೆ. 24 ಬಹು ಸುಂದರವಾದ ಅಂಗಗಳಿಗೆ ಇಂಥ ವಿಶೇಷ ಸಂರಕ್ಷಣೆಯ ಅಗತ್ಯವಿರುವುದಿಲ್ಲ. ಆದರೆ ದೇವರು ಅಂಗಗಳನ್ನು ಒಟ್ಟಾಗಿ ಸೇರಿಸಿದ್ದಾನೆ ಮತ್ತು ಕೊರತೆಯಲ್ಲಿರುವ ಅಂಗಗಳಿಗೆ ಹೆಚ್ಚಿನ ಮಾನ್ಯತೆಯನ್ನು ಕೊಟ್ಟಿದ್ದಾನೆ. 25 ನಮ್ಮ ದೇಹವು ವಿಭಜನೆಯಾಗದಂತೆ ಅಂಗಗಳು ಒಂದಕ್ಕೊಂದರ ಹಿತವನ್ನು ಸರಿಸಮನಾಗಿ ಗಮನಿಸುವಂತೆ ದೇವರು ಮಾಡಿದ್ದಾನೆ. 26 ಒಂದು ಅಂಗಕ್ಕೆ ನೋವಾದರೆ, ಉಳಿದೆಲ್ಲ ಅಂಗಗಳು ಅದರೊಂದಿಗೆ ನೋವನ್ನು ಅನುಭವಿಸುತ್ತವೆ. ಒಂದು ಅಂಗಕ್ಕೆ ಸನ್ಮಾನ ದೊರೆತರೆ, ಉಳಿದೆಲ್ಲ ಅಂಗಗಳು ಅದರ ಸನ್ಮಾನದಲ್ಲಿ ಪಾಲುಗಾರರಾಗುತ್ತವೆ.
27 ನೀವೆಲ್ಲರೂ ಒಂದುಗೂಡಿ ಕ್ರಿಸ್ತನ ದೇಹವಾಗಿದ್ದೀರಿ. ನಿಮ್ಮಲ್ಲಿ ಪ್ರತಿಯೊಬ್ಬರೂ ಅದರ ಅಂಗವಾಗಿದ್ದೀರಿ. 28 ದೇವರು ಸಭೆಯಲ್ಲಿ ಅಪೊಸ್ತಲರಿಗೆ ಮೊದಲನೆಯ ಸ್ಥಾನವನ್ನೂ ಪ್ರವಾದಿಗಳಿಗೆ ಎರಡನೆಯ ಸ್ಥಾನವನ್ನೂ ಉಪದೇಶಕರಿಗೆ ಮೂರನೆಯ ಸ್ಥಾನವನ್ನೂ ಇಟ್ಟಿದ್ದಾನೆ. ಇದಲ್ಲದೆ ದೇವರು, ಅದ್ಭುತಕಾರ್ಯಗಳನ್ನು ಮಾಡುವ ಜನರಿಗೂ ಸ್ಪಸ್ಥಪಡಿಸುವ ಜನರಿಗೂ ಇತರರಿಗೆ ಸಹಾಯಮಾಡುವ ಜನರಿಗೂ ಮುನ್ನಡೆಸಬಲ್ಲ ಜನರಿಗೂ ವಿವಿಧ ಭಾಷೆಗಳನ್ನು ಮಾತಾಡಬಲ್ಲ ಜನರಿಗೂ ಸಭೆಯಲ್ಲಿ ಸ್ಥಾನವನ್ನು ಕೊಟ್ಟಿದ್ದಾನೆ. 29 ಎಲ್ಲಾ ಜನರು ಅಪೊಸ್ತಲರುಗಳಲ್ಲ. ಎಲ್ಲಾ ಜನರು ಪ್ರವಾದಿಗಳಲ್ಲ. ಎಲ್ಲಾ ಜನರು ಉಪದೇಶಕರುಗಳಲ್ಲ. ಎಲ್ಲಾ ಜನರು ಅದ್ಭುತಕಾರ್ಯಗಳನ್ನು ಮಾಡುವುದಿಲ್ಲ. 30 ಎಲ್ಲಾ ಜನರು ಗುಣಪಡಿಸುವ ವರವನ್ನು ಹೊಂದಿಲ್ಲ. ಎಲ್ಲಾ ಜನರು ವಿವಿಧ ಭಾಷೆಗಳನ್ನು ಮಾತಾಡುವುದಿಲ್ಲ. ಎಲ್ಲಾ ಜನರು ಆ ಭಾಷೆಗಳನ್ನು ಅನುವಾದಿಸುವುದಿಲ್ಲ. 31 ಆದರೆ ನೀವು ಪವಿತ್ರಾತ್ಮನ ಇನ್ನೂ ಶ್ರೇಷ್ಠವಾದ ವರಗಳನ್ನು ಯಥಾರ್ಥವಾಗಿ ಅಪೇಕ್ಷಿಸತಕ್ಕದ್ದು. ಈಗ ನಾನು ನಿಮಗೆ ಎಲ್ಲಕ್ಕಿಂತಲೂ ಉತ್ತಮವಾದ ಮಾರ್ಗವನ್ನು ತೋರಿಸುತ್ತೇನೆ.
ಯೆಹೋವನ ಮಹಿಮೆ ದೇವಾಲಯವನ್ನು ಬಿಟ್ಟಿದ್ದು
10 ಕೆರೂಬಿಯರ ತಲೆಗಳ ಮೇಲಿದ್ದ ಗುಮಟದ ಕಡೆಗೆ ನೋಡಿದೆನು. ಆ ಗುಮಟದ ಮೇಲೆ ಇಂದ್ರನೀಲಮಣಿಯಿಂದ ಮಾಡಿದ ಸಿಂಹಾಸನದಂತೆ ಕಾಣುತ್ತಿದ್ದ ಏನೋ ಇತ್ತು. 2 ಆಗ ಸಿಂಹಾಸನದಲ್ಲಿ ಕೂತಿದ್ದಾತನು ನಾರುಮಡಿ ಧರಿಸಿದ್ದವನಿಗೆ, “ಕೆರೂಬಿದೂತರ ಕೆಳಗಿರುವ ಚಕ್ರಗಳ ನಡುವೆ ಹೋಗು. ಕೆರೂಬಿಗಳ ನಡುವೆ ಇರುವ ಉರಿಯುವ ಕೆಂಡಗಳನ್ನು ನಿನ್ನ ಅಂಗೈಗಳಲ್ಲಿ ತುಂಬಿಕೊಂಡು ಜೆರುಸಲೇಮ್ ನಗರದ ಮೇಲೆ ಹರಡು” ಎಂದು ಹೇಳಿದನು.
ನಾನು ನೋಡುತ್ತಿರಲು ಆ ಮನುಷ್ಯನು ಒಳಗೆ ಹೋದನು. 3 ಆ ಮನುಷ್ಯನು ಚಕ್ರಗಳ ನಡುವೆ ಒಳಗೆ ಹೋದಾಗ ಕೆರೂಬಿದೂತರು ಆಲಯದ ದಕ್ಷಿಣಕ್ಕೆ ಇರುವ ಸ್ಥಳದಲ್ಲಿ ನಿಂತಿದ್ದರು. ಒಳಗಿನ ಅಂಗಳವು ಮೋಡದಿಂದ ತುಂಬಿತ್ತು. 4 ಯೆಹೋವನ ಮಹಿಮೆಯು ಕೆರೂಬಿದೂತರ ಮೇಲಿನಿಂದ ಹೊರಟು ಆಲಯದ ಹೊಸ್ತಿಲಿಗೆ ಬಂದಿತು. ಆಗ ಮೋಡವು ಆಲಯದಲ್ಲಿ ತುಂಬಿಕೊಂಡಿತು. ಯೆಹೋವನ ಮಹಿಮೆಯ ಪ್ರಕಾಶವು ಇಡೀ ಅಂಗಳವನ್ನು ತುಂಬಿಕೊಂಡಿತು. 5 ಕೆರೂಬಿದೂತರ ರೆಕ್ಕೆಗಳ ಬಡಿತದ ಶಬ್ದವು ಹೊರಗಿನ ಪ್ರಾಕಾರದ ತನಕ ಕೇಳುತ್ತಿತ್ತು. ಅದು ತುಂಬಾ ಗಟ್ಟಿಯಾದ ಶಬ್ದವಾಗಿತ್ತು. ಸರ್ವಶಕ್ತನಾದ ದೇವರು ಮಾತನಾಡುವಾಗ ಆಗುವ ಗುಡುಗಿನ ಶಬ್ದದಂತಿತ್ತು.
6 ನಾರುಮಡಿ ಧರಿಸಿಕೊಂಡಿದ್ದವನಿಗೆ ದೇವರು, “ಕೆರೂಬಿದೂತರ ಮಧ್ಯದೊಳಗಿಂದ, ಚಕ್ರಗಳ ಮಧ್ಯೆ ಪ್ರವೇಶಿಸಿ ಅಲ್ಲಿಂದ ಉರಿಯುವ ಕೆಂಡಗಳನ್ನು ತೆಗೆದುಕೊ” ಎಂದು ಆಜ್ಞಾಪಿಸಿದಾಗ, ಆ ಮನುಷ್ಯನು ಅಲ್ಲಿಗೆ ಹೋಗಿ ಚಕ್ರಗಳ ಸಮೀಪದಲ್ಲಿ ನಿಂತುಕೊಂಡನು. 7 ಕೆರೂಬಿದೂತರಲ್ಲೊಬ್ಬನು ಅವರ ಮಧ್ಯೆಯಿದ್ದ ಉರಿಯುವ ಕೆಂಡದಲ್ಲಿ ಸ್ವಲ್ಪವನ್ನು ಆ ಮನುಷ್ಯನ ಕೈಗೆ ಸುರಿದನು. ಆ ಮನುಷ್ಯನು ಅಲ್ಲಿಂದ ಹೊರಟನು. 8 ಕೆರೂಬಿದೂತರ ರೆಕ್ಕೆಯ ಕೆಳಗೆ ಮನುಷ್ಯರ ಕೈಗಳಂತೆ ಕಾಣುತ್ತಿದ್ದ ಕೈಗಳಿದ್ದವು.
9 ಆಗ ನಾನು ಅಲ್ಲಿ ನಾಲ್ಕು ಚಕ್ರಗಳಿರುವದನ್ನು ಕಂಡೆನು. ಪ್ರತಿಯೊಬ್ಬ ಕೆರೂಬಿದೂತನ ಬಳಿ ಒಂದು ಚಕ್ರವಿತ್ತು. ಆ ಚಕ್ರಗಳು ಹೊಳೆಯುವ ಹಳದಿ ರತ್ನದಂತೆ ಕಂಡವು. 10 ಅಲ್ಲಿದ್ದ ನಾಲ್ಕು ಚಕ್ರಗಳೂ ಒಂದೇ ಪ್ರಕಾರವಾಗಿದ್ದವು. ಅವು ಚಕ್ರದೊಳಗೆ ಚಕ್ರಗಳಿದ್ದಂತೆ ತೋರುತ್ತಿದ್ದವು. 11 ಅವು ಚಲಿಸುವಾಗ ನಾಲ್ಕು ದಿಕ್ಕುಗಳಲ್ಲಿ ಯಾವ ದಿಕ್ಕಿಗಾದರೂ ಅತ್ತಿತ್ತ ತಿರುಗದೆ ಚಲಿಸುತ್ತಿದ್ದವು. 12 ಅವರ ಶರೀರದ ಮೇಲೆಲ್ಲಾ ಕಣ್ಣುಗಳಿದ್ದವು. ಅವರ ಬೆನ್ನಿನ ಮೇಲೆ, ಕೈಗಳ ಮೇಲೆ, ರೆಕ್ಕೆಗಳ ಮೇಲೆ, ಅವರ ಚಕ್ರಗಳ ಮೇಲೆ ಕಣ್ಣುಗಳಿದ್ದವು. ಹೌದು, ಅವರ ನಾಲ್ಕು ಚಕ್ರಗಳ ಮೇಲೂ ಕಣ್ಣುಗಳಿದ್ದವು. 13 ಈ ಚಕ್ರಗಳಿಗೆ “ಚರಕ ಚಕ್ರ” ಎಂಬುದಾಗಿ ಕರೆಯುತ್ತಾರೆಂದು ನನಗೆ ಕೇಳಿಸಿತು.
14 ಪ್ರತೀ ಕೆರೂಬಿದೂತನಿಗೆ ನಾಲ್ಕು ಮುಖಗಳಿದ್ದವು. ಮೊದಲನೆಯ ಮುಖವು ಕೆರೂಬಿಯ ಮುಖ, ಎರಡನೆಯದು ಮನುಷ್ಯನ ಮುಖ, ಮೂರನೆಯ ಸಿಂಹದ ಮುಖ ಮತ್ತು ನಾಲ್ಕನೆಯ ಗರುಡನ ಮುಖ. 15 ಈ ಜೀವಿಗಳು ಮೊದಲು ನಾನು ಕೆಬಾರ್ ನದಿಯ ಬಳಿ ಕಂಡ ದರ್ಶನದಲ್ಲಿದ್ದ ಕೆರೂಬಿಯರೇ ಆಗಿರಬೇಕು ಎಂದು ಆಗ ನನಗೆ ಮನದಟ್ಟಾಯಿತು. ಬಳಿಕ ಕೆರೂಬಿಗಳು ಮೇಲಕ್ಕೆ ಏರಿದವು. 16 ಅವುಗಳೊಂದಿಗೆ ಚಕ್ರಗಳು ಎತ್ತಲ್ಪಟ್ಟವು. ಕೆರೂಬಿದೂತರು ರೆಕ್ಕೆಗಳನ್ನು ಚಾಚಿ ಗಾಳಿಯಲ್ಲಿ ಹಾರಿದಾಗ ಅವುಗಳ ಪಕ್ಕದಲ್ಲಿದ್ದ ಚಕ್ರಗಳು ತಮ್ಮ ಸ್ಥಳವನ್ನು ಬದಲಾಯಿಸಲಿಲ್ಲ. 17 ಕೆರೂಬಿದೂತರು ಗಾಳಿಯಲ್ಲಿ ಹಾರಾಡಿದಾಗ ಚಕ್ರಗಳೂ ಅವರೊಂದಿಗೆ ಹೋದವು. ಅವು ನಿಂತಾಗ ಚಕ್ರಗಳೂ ನಿಂತುಬಿಡುತ್ತಿದ್ದವು. ಯಾಕೆಂದರೆ ಜೀವಿಗಳನ್ನು ಹತೋಟಿಯಲ್ಲಿಡುವ ಆತ್ಮವು ಚಕ್ರಗಳಲ್ಲಿತ್ತು.
18 ಆಗ ಆಲಯದ ಹೊಸ್ತಿಲಿನ ಮೇಲಿನಿಂದ ಯೆಹೋವನ ಮಹಿಮೆಯು ಎದ್ದು ಕೆರೂಬಿದೂತರು ನಿಂತಿದ್ದ ಸ್ಥಳದ ಮೇಲೆ ನಿಂತುಕೊಂಡಿತು. 19 ಕೆರೂಬಿದೂತರು ರೆಕ್ಕೆಗಳನ್ನು ಚಾಚಿ ಹಾರಿದವು. ಅವು ಆಲಯವನ್ನು ಬಿಟ್ಟುಹೋಗುವದನ್ನು ನೋಡಿದೆನು. ಚಕ್ರಗಳು ಅವುಗಳೊಂದಿಗೆ ಹೋದವು. ಅವು ಯೆಹೋವನಾಲಯದ ಪೂರ್ವದ ಬಾಗಿಲ ಬಳಿ ನಿಂತವು. ಇಸ್ರೇಲಿನ ದೇವರ ಮಹಿಮೆಯು ಅವುಗಳ ಮೇಲೆ ಇತ್ತು.
20 ಆಗ ಕೆಬಾರ್ ನದಿಯ ಬಳಿ ನನಗಾದ ಇಸ್ರೇಲಿನ ದೇವರ ಮಹಿಮೆಯ ದರ್ಶನದಲ್ಲಿ ನಾನು ಕಂಡ ಜೀವಿಗಳು ಕೆರೂಬಿದೂತರೇ ಎಂದು ತಿಳಿಯಿತು. 21 ಪ್ರತಿಯೊಂದಕ್ಕೂ ನಾಲ್ಕು ಮುಖಗಳೂ, ನಾಲ್ಕು ರೆಕ್ಕೆಗಳೂ ಮತ್ತು ಅವುಗಳ ರೆಕ್ಕೆಗಳ ಕೆಳಗೆ ಮನುಷ್ಯನ ಕೈಗಳಂತಿದ್ದ ಕೈಗಳೂ ಇದ್ದವು. 22 ನಾನು ಕೆಬಾರ್ ಕಾಲುವೆಯ ಪಕ್ಕದಲ್ಲಿ ಕಂಡ ಜೀವಿಗಳ ಮುಖಗಳಂತೆಯೇ ಕೆರೂಬಿದೂತರ ಮುಖಗಳಿದ್ದವು. ಪ್ರತಿಯೊಂದು ನೇರವಾಗಿ ಮುಂದೆ ಸಾಗಿದವು.
ರಚನೆಗಾರರು: ಕೋರಹೀಯರು.
49 ಸರ್ವಜನಾಂಗಗಳೇ, ಕೇಳಿರಿ,
ಭೂನಿವಾಸಿಗಳೆಲ್ಲರೇ, ಆಲಿಸಿರಿ.
2 ಸಾಮಾನ್ಯ ಜನರೇ, ಅಧಿಪತಿಗಳೇ, ಬಡವರೇ, ಶ್ರೀಮಂತರೇ, ನೀವೆಲ್ಲರೂ ಒಂದಾಗಿ ಬಂದು ಕೇಳಿರಿ.
3 ನಾನು ನಿಮಗೆ ಸುಜ್ಞಾನವನ್ನೂ
ವಿವೇಕವನ್ನೂ ಬೋಧಿಸುವೆನು.
4 ನಾನು ಅವುಗಳನ್ನು ಕಿವುಗೊಟ್ಟು ಕೇಳಿದ್ದೇನೆ.
ನಾನು ಹಾರ್ಪ್‌ವಾದ್ಯವನ್ನು ನುಡಿಸುತ್ತಾ ಅವುಗಳನ್ನು ನಿಮಗಾಗಿ ಹಾಡುವೆನು.
5 ಆಪತ್ತು ಬಂದಾಗ ನಾನೇಕೆ ಭಯಪಡಬೇಕು?
ದುಷ್ಟರು ನನ್ನನ್ನು ಆವರಿಸಿ ಮೋಸದಿಂದ ಹಿಡಿಯಲು ಪ್ರಯತ್ನಿಸುವಾಗ ನಾನೇಕೆ ಭಯಪಡಬೇಕು?
6 ಅವರು ತಮ್ಮ ಸ್ವಂತ ಬಲದಲ್ಲಿಯೂ ಐಶ್ವರ್ಯದಲ್ಲಿಯೂ ಭರವಸೆಯಿಟ್ಟಿದ್ದಾರೆ;
ಅವರು ಬುದ್ಧಿಹೀನರಾಗಿದ್ದಾರೆ.
7 ಯಾವ ಮಾನವ ಸ್ನೇಹಿತನೂ ನಿನ್ನನ್ನು ರಕ್ಷಿಸಲಾರನು.
ಅಲ್ಲದೆ ದೇವರಿಗೆ ಈಡನ್ನು ಕೊಟ್ಟು ನಿನ್ನನ್ನು ಬಿಡಿಸಿಕೊಳ್ಳಲಾರನು.
8 ಸ್ವಂತ ಪ್ರಾಣವನ್ನು ಖರೀದಿಸಲು ಬೇಕಾಗುವಷ್ಟು
ಹಣ ಯಾವನಿಗೂ ದೊರೆಯುವುದಿಲ್ಲ.
9 ಸದಾಕಾಲ ಬದುಕುವ ಹಕ್ಕನ್ನು ಖರೀದಿಸಲು
ಮತ್ತು ತನ್ನ ಸಮಾಧಿಯಲ್ಲಿ ತನ್ನ ಸ್ವಂತ ದೇಹ ಕೊಳೆಯದಂತೆ ಮಾಡಲು
ಬೇಕಾಗುವಷ್ಟು ಹಣವನ್ನು ಯಾವನೂ ಪಡೆದುಕೊಳ್ಳಲಾರನು.
10 ಬುದ್ಧಿಹೀನರೂ ಮೂಢರೂ ಸಾಯುವಂತೆ ಜ್ಞಾನಿಗಳೂ ಸಾಯುವರು.
ಅವರು ಸತ್ತಾಗ ಅವರ ಆಸ್ತಿಯು ಬೇರೆಯವರ ಪಾಲಾಗುವುದು.
11 ಸಮಾಧಿಯೇ ಅವರ ಶಾಶ್ವತವಾದ ಹೊಸ ಮನೆ.
ಅವರೆಷ್ಟೇ ಭೂ ಆಸ್ತಿಯನ್ನು ಹೊಂದಿದ್ದರೂ ಅದರಿಂದೇನೂ ಪ್ರಯೋಜನವಿಲ್ಲ.
12 ಜನರು ಐಶ್ವರ್ಯವಂತರಾಗಿದ್ದರೂ ಭೂಲೋಕದಲ್ಲಿ ಶಾಶ್ವತವಾಗಿ ಇರಲಾಗದು.
ಎಲ್ಲರೂ ಪ್ರಾಣಿಗಳಂತೆಯೇ ಸಾಯುವರು.
13 ತಮ್ಮ ಐಶ್ವರ್ಯವನ್ನು ಮೆಚ್ಚಿಕೊಂಡಿರುವ
ಬುದ್ಧಿಹೀನರಿಗೆ ಇದೇ ಗತಿ.
14 ಅವರು ಕುರಿಗಳಂತಿದ್ದಾರೆ. ಸಮಾಧಿಯೇ ಅವರ ಕೊಟ್ಟಿಗೆ.
ಮರಣವೇ ಅವರ ಕುರುಬ.
ಒಂದು ಮುಂಜಾನೆ, ಅವರ ದೇಹಗಳು ಅವರ ಮನೆಗಳಿಂದ ದೂರವಾಗಿ ಸಮಾಧಿಯಲ್ಲಿ ಕೊಳೆಯುತ್ತಿರಲು,
ನೀತಿವಂತರು ಜಯಶಾಲಿಗಳಾಗಿರುವರು.
15 ಆದರೆ ದೇವರು ಈಡುಕೊಟ್ಟು ನನ್ನ ಪ್ರಾಣವನ್ನು ರಕ್ಷಿಸುವನು.
ಆತನು ನನ್ನನ್ನು ತನ್ನೊಂದಿಗಿರಲು ಕೊಂಡೊಯ್ಯುವಾಗ ನನ್ನನ್ನು ಸಮಾಧಿಯ ಬಲದಿಂದ ರಕ್ಷಿಸುವನು.
16 ಜನರು ಐಶ್ವರ್ಯವಂತರಾಗಿದ್ದ ಮಾತ್ರಕ್ಕೆ ನೀವು ಅವರಿಗೆ ಭಯಪಡಬೇಕಿಲ್ಲ.
ಜನರು ಭವ್ಯವಾದ ಮನೆಗಳಲ್ಲಿದ್ದ ಮಾತ್ರಕ್ಕೆ ನೀವು ಅವರಿಗೆ ಭಯಪಡಬೇಕಿಲ್ಲ.
17 ಅವರು ಸಾಯುವಾಗ ತಮ್ಮೊಂದಿಗೆ ಏನನ್ನೂ ತೆಗೆದುಕೊಂಡು ಹೋಗಲಾರರು.
ಅವರ ವೈಭವವು ಅವರೊಂದಿಗೆ ಹೋಗಲಾರದು.
18 ಐಶ್ವರ್ಯವಂತನು ತನ್ನ ವಿಷಯದಲ್ಲಿ ಉಬ್ಬಿಕೊಂಡಿದ್ದರೂ
ಜನರು ಅವನನ್ನು ಹೊಗಳುತ್ತಿದ್ದರೂ
19 ಸತ್ತು ತನ್ನ ಪೂರ್ವಿಕರ ಬಳಿ ಸೇರುವ ಕಾಲ ಅವನಿಗೆ ಬಂದೇ ಬರುವುದು.
ಅವನು ಹಗಲಿನ ಬೆಳಕನ್ನು ಮತ್ತೆಂದಿಗೂ ನೋಡಲಾರ.
20 ಅರ್ಥಮಾಡಿಕೊಳ್ಳಲಾರದವನು ಎಷ್ಟೇ ಐಶ್ವರ್ಯವಂತನಾಗಿದ್ದರೂ
ಪ್ರಾಣಿಗಳಂತೆಯೇ ನಾಶವಾಗುವನು.
Kannada Holy Bible: Easy-to-Read Version. All rights reserved. © 1997 Bible League International