M’Cheyne Bible Reading Plan
ಸೌಲನ ಮರಣ
31 ಫಿಲಿಷ್ಟಿಯರು ಇಸ್ರೇಲರ ವಿರುದ್ಧ ಹೋರಾಡಿದರು. ಇಸ್ರೇಲರು ಫಿಲಿಷ್ಟಿಯರಿಂದ ಸೋತು ಓಡಿಹೋದರು. ಬಹಳ ಜನ ಇಸ್ರೇಲರು ಗಿಲ್ಬೋವ ಶಿಖರದಲ್ಲಿ ಹತರಾದರು. 2 ಫಿಲಿಷ್ಟಿಯರು ಸೌಲ ಮತ್ತು ಅವನ ಮಕ್ಕಳೊಂದಿಗೆ ಭೀಕರವಾಗಿ ಹೋರಾಡಿದರು. ಸೌಲನ ಮಕ್ಕಳಾದ ಯೋನಾತಾನ, ಅಬೀನಾದಾಬ ಮತ್ತು ಮಲ್ಕೀಷೂವ ಎಂಬವರನ್ನು ಫಿಲಿಷ್ಟಿಯರು ಕೊಂದರು.
3 ಸೌಲನ ವಿರುದ್ಧವಾದ ಈ ಯುದ್ಧವು ಬಹಳ ಘೋರವಾಗಿತ್ತು. ಬಿಲ್ಲುಗಾರರು ಸೌಲನ ಮೇಲೆ ಬಾಣಗಳನ್ನು ಬಿಟ್ಟಿದ್ದರಿಂದ ಸೌಲನು ಬಹಳವಾಗಿ ಗಾಯಗೊಂಡನು. 4 ಸೌಲನು ತನ್ನ ಅಯುಧವಾಹಕನಿಗೆ, “ನಿನ್ನ ಖಡ್ಗದಿಂದ ಇರಿದು ನನ್ನನ್ನು ಕೊಂದುಬಿಡು. ಆಗ, ಈ ಪರದೇಶೀಯರು ನನ್ನನ್ನು ಗಾಯಗೊಳಿಸುವುದಕ್ಕಾಗಲಿ ಅಪಹಾಸ್ಯ ಮಾಡುವುದಕ್ಕಾಗಲಿ ಸಾಧ್ಯವಾಗುವುದಿಲ್ಲ” ಎಂದನು. ಆದರೆ ಸೌಲನ ಆಯುಧವಾಹಕನು ನಿರಾಕರಿಸಿದನು. ಸೌಲನ ಸಹಾಯಕನು ಬಹಳ ಭಯಗೊಂಡಿದ್ದನು. ಆದ್ದರಿಂದ ಸೌಲನು ತನ್ನ ಸ್ವಂತ ಖಡ್ಗದಿಂದಲೇ ಇರಿದು ಆತ್ಮಹತ್ಯೆ ಮಾಡಿಕೊಂಡನು.
5 ಸೌಲನು ಸತ್ತುಹೋದದ್ದನ್ನು ಕಂಡ ಆಯುಧವಾಹಕನೂ ತನ್ನ ಖಡ್ಗದಿಂದ ತಾನೂ ಆತ್ಮಹತ್ಯೆ ಮಾಡಿಕೊಂಡನು. ಅವನು ಸೌಲನೊಂದಿಗೆ ಅಲ್ಲಿಯೇ ಸತ್ತುಹೋದನು. 6 ಹೀಗೆ ಸೌಲನು ಮತ್ತು ಅವನ ಮೂವರು ಗಂಡುಮಕ್ಕಳೂ ಮತ್ತು ಸೌಲನ ಆಯುಧವಾಹಕನೂ ಅದೇ ದಿನ ಸತ್ತುಹೋದರು.
ಸೌಲನ ದೇಹವು ಫಿಲಿಷ್ಟಿಯರಿಗೆ ಸಿಕ್ಕಿತು
7 ಇಸ್ರೇಲರ ಸೈನ್ಯವು ಓಡಿಹೋಗುತ್ತಿರುವುದನ್ನು ಕಣಿವೆಯ ಮತ್ತೊಂದು ಪಕ್ಕದಲ್ಲಿ ವಾಸಮಾಡುತ್ತಿದ್ದ ಇಸ್ರೇಲರು ನೋಡಿದರು. ಸೌಲನು ಮತ್ತು ಅವನ ಮಕ್ಕಳು ಸತ್ತದ್ದನ್ನೂ ಅವರು ನೋಡಿದರು. ಆದ್ದರಿಂದ ಆ ಇಸ್ರೇಲರು ತಮ್ಮ ನಗರಗಳನ್ನು ಬಿಟ್ಟು ಓಡಿಹೋದರು. ನಂತರ ಫಿಲಿಷ್ಟಿಯರು ಬಂದು ಆ ನಗರಗಳನ್ನು ವಶಪಡಿಸಿಕೊಂಡು ನೆಲೆಸಿದರು.
8 ಮಾರನೆಯ ದಿನ, ಸತ್ತದೇಹಗಳಿಂದ ವಸ್ತುಗಳನ್ನು ದೋಚಲು ಫಿಲಿಷ್ಟಿಯರು ಬಂದರು. ಸೌಲನು ಮತ್ತು ಅವನ ಮೂರು ಜನ ಮಕ್ಕಳು ಗಿಲ್ಬೋವ ಶಿಖರದಲ್ಲಿ ಸತ್ತಿರುವುದನ್ನು ಅವರು ನೋಡಿದರು. 9 ಸೌಲನ ತಲೆಯನ್ನು ಫಿಲಿಷ್ಟಿಯರು ಕಡಿದುಹಾಕಿದರು. ಮತ್ತು ಅವನ ಆಯುಧಗಳನ್ನು ತೆಗೆದುಕೊಂಡರು. ಫಿಲಿಷ್ಟಿಯ ಜನರಿಗೆ ಮತ್ತು ಅವರ ವಿಗ್ರಹಗಳ ಗುಡಿಗೆ ಈ ವಿಜಯದ ವಾರ್ತೆಯನ್ನು ಕಳುಹಿಸಿದರು. 10 ಅಷ್ಟೋರೆತಳ ದೇವಾಲಯದಲ್ಲಿ ಅವರು ಸೌಲನ ಆಯುಧಗಳನ್ನು ಇಟ್ಟರು. ಫಿಲಿಷ್ಟಿಯರು ಸೌಲನ ದೇಹವನ್ನು ಬೇತ್‌ಷೆಯಾನಿನ ಗೋಡೆಗೆ ನೇತುಹಾಕಿದರು.
11 ಫಿಲಿಷ್ಟಿಯರು ಸೌಲನಿಗೆ ಏನೇನು ಮಾಡಿದರೆಂಬುದನ್ನು ಯಾಬೆಷ್‌ಗಿಲ್ಯಾದಿನಲ್ಲಿ ವಾಸಿಸುತ್ತಿದ್ದ ಜನರೆಲ್ಲ ತಿಳಿದುಕೊಂಡರು. 12 ಆದ್ದರಿಂದ ಯಾಬೆಷಿನ ಸೈನಿಕರೆಲ್ಲ ಬೇತ್‌ಷೆಯಾನಿಗೆ ಹೋದರು. ಅವರು ರಾತ್ರಿಯೆಲ್ಲಾ ನಡೆದರು! ನಂತರ ಅವರು ಬೇತ್‌ಷೆಯಾನಿನ ಗೋಡೆಯಲ್ಲಿದ್ದ ಸೌಲನ ದೇಹವನ್ನು ಇಳಿಸಿದರು. ನಂತರ ಅವರು ಸೌಲನ ಗಂಡುಮಕ್ಕಳ ದೇಹಗಳನ್ನೂ ಇಳಿಸಿದರು. ನಂತರ ಅವರು ಆ ದೇಹಗಳನ್ನು ಯಾಬೇಷಿಗೆ ತೆಗೆದುಕೊಂಡು ಹೋದರು. ಸೌಲ ಮತ್ತು ಅವನ ಮೂವರು ಗಂಡುಮಕ್ಕಳ ದೇಹಗಳನ್ನು ಯಾಬೇಷಿನ ಜನರು ಅಲ್ಲಿ ದಹಿಸಿಬಿಟ್ಟರು. 13 ನಂತರ ಈ ಜನರು ಸೌಲ ಮತ್ತು ಅವನ ಮೂರು ಮಕ್ಕಳ ಮೂಳೆಗಳನ್ನು ತೆಗೆದುಕೊಂಡು, ಅವುಗಳನ್ನು ಯಾಬೇಷಿನ ಪಿಚುಲ ಮರದ ಕೆಳಗೆ ಸಮಾಧಿಮಾಡಿದರು. ನಂತರ ಯಾಬೇಷಿನ ಜನರು ದುಃಖದಿಂದ ಏಳು ದಿನಗಳ ಕಾಲ ಉಪವಾಸ ಮಾಡಿದರು.[a]
11 ನಾನು ಕ್ರಿಸ್ತನ ಮಾದರಿಯನ್ನು ಅನುಸರಿಸುವಂತೆ ನೀವೂ ನನ್ನ ಮಾದರಿಯನ್ನು ಅನುಸರಿಸಿರಿ.
ಅಧಿಕಾರಕ್ಕೆ ಅಧೀನರಾಗಿರಿ
2 ನೀವು ಎಲ್ಲಾ ವಿಷಯಗಳಲ್ಲಿ ನನ್ನನ್ನು ಜ್ಞಾಪಿಸಿಕೊಳುವುದರಿಂದ ನಿಮ್ಮನ್ನು ಹೊಗಳುತ್ತೇನೆ. ನಾನು ನಿಮಗೆ ಕೊಟ್ಟ ಉಪದೇಶಗಳನ್ನು ನೀವು ಸೂಕ್ಷ್ಮವಾಗಿ ಅನುಸರಿಸುತ್ತಿದ್ದೀರಿ. 3 ಆದರೆ ನೀವು ಈ ವಿಷಯವನ್ನೂ ಅರ್ಥಮಾಡಿಕೊಳ್ಳಬೇಕೆಂಬುದು ನನ್ನ ಆಸೆ. ಪ್ರತಿಯೊಬ್ಬ ಪುರುಷನಿಗೂ ಕ್ರಿಸ್ತನು ಶಿರಸ್ಸಾಗಿದ್ದಾನೆ; ಸ್ತ್ರೀಗೆ ಪುರುಷನು ಶಿರಸ್ಸಾಗಿದ್ದಾನೆ; ಕ್ರಿಸ್ತನಿಗೆ ದೇವರು ಶಿರಸ್ಸಾಗಿದ್ದಾನೆ.
4 ಪುರುಷನು ಪ್ರವಾದಿಸುವಾಗ ಅಥವಾ ಪ್ರಾರ್ಥಿಸುವಾಗ ತನ್ನ ತಲೆಯ ಮೇಲೆ ಮುಸುಕು ಹಾಕಿಕೊಂಡರೆ ಅದು ಅವನ ಶಿರಸ್ಸಾದ ಕ್ರಿಸ್ತನಿಗೆ ಅಪಮಾನಕರವಾಗಿದೆ. 5 ಆದರೆ ಸ್ತ್ರೀಯು ಪ್ರಾರ್ಥಿಸುವಾಗ ಅಥವಾ ಪ್ರವಾದಿಸುವಾಗ ತನ್ನ ತಲೆಗೆ ಮುಸುಕನ್ನು ಹಾಕಿಕೊಂಡಿರಬೇಕು. ಆಕೆಯು ತನ್ನ ತಲೆಗೆ ಮುಸುಕು ಹಾಕಿಲ್ಲದಿದ್ದರೆ, ಅದು ಆಕೆಯ ಶಿರಸ್ಸಾದ ಪುರುಷನಿಗೆ ಅಪಮಾನಕರವಾಗಿದೆ. ಅವಳಿಗೂ ತಲೆಯನ್ನು ಬೋಳಿಸಿಕೊಂಡಿರುವ ಸ್ತ್ರೀಗೂ ಯಾವ ವ್ಯತ್ಯಾಸವಿಲ್ಲ. 6 ಸ್ತ್ರೀಯು ತನ್ನ ತಲೆಗೆ ಮುಸುಕು ಹಾಕಿಕೊಳ್ಳದಿದ್ದರೆ, ಆಕೆಯು ತನ್ನ ತಲೆಯನ್ನು ಬೋಳಿಸಿಕೊಳ್ಳಲಿ. ತಲೆಕೂದಲನ್ನು ಕತ್ತರಿಸಿಕೊಳ್ಳುವುದಾಗಲಿ ತಲೆಯನ್ನು ಬೋಳಿಸಿಕೊಳ್ಳುವುದಾಗಲಿ ಸ್ತ್ರೀಗೆ ಅಪಮಾನಕರವಾಗಿದೆ. ಆದ್ದರಿಂದ ಆಕೆ ತನ್ನ ತಲೆಗೆ ಮುಸುಕು ಹಾಕಿಕೊಳ್ಳಬೇಕು.
7 ಆದರೆ ಪುರುಷನು ತನ್ನ ತಲೆಗೆ ಮುಸುಕು ಹಾಕಿಕೊಳ್ಳಬಾರದು. ಏಕೆಂದರೆ, ಪುರುಷನು ದೇವರ ಸ್ವರೂಪವಾಗಿದ್ದಾನೆ ಮತ್ತು ದೇವರ ಪ್ರಭಾವವಾಗಿದ್ದಾನೆ. ಆದರೆ ಸ್ತ್ರೀಯು ಪುರುಷನ ಪ್ರಭಾವವಾಗಿದ್ದಾಳೆ. 8 ಪುರುಷನು ಸ್ತ್ರೀಯಿಂದ ಬಂದಿಲ್ಲ: ಸ್ತ್ರೀಯು ಪುರುಷನಿಂದ ಬಂದಳು. 9 ಪುರುಷನು ಸೃಷ್ಟಿಸಲ್ಪಟ್ಟದ್ದು ಸ್ತ್ರೀಗೋಸ್ಕರವಲ್ಲ. ಆದರೆ ಸ್ತ್ರೀಯು ಪುರುಷನಿಗೋಸ್ಕರ ಸೃಷ್ಟಿಸಲ್ಪಟ್ಟಳು. 10 ಆದಕಾರಣವೇ, ಸ್ತ್ರೀಯು ತಾನು ಅಧಿಕಾರದ ಅಧೀನದಲ್ಲಿರುವುದನ್ನು ಸೂಚಿಸಲು ತನ್ನ ತಲೆಗೆ ಮುಸುಕು ಹಾಕಿಕೊಳ್ಳಬೇಕು. ದೇವದೂತರ ನಿಮಿತ್ತವಾಗಿಯೂ ಸ್ತ್ರೀ ತನ್ನ ತಲೆಗೆ ಮುಸುಕು ಹಾಕಿಕೊಳ್ಳಬೇಕು.
11 ಆದರೆ ಪ್ರಭುವಿನ ದೃಷ್ಟಿಯಲ್ಲಿ ಸ್ತ್ರೀಯು ಪುರುಷನಿಗೆ ಎಷ್ಟು ಮುಖ್ಯವೋ ಪುರುಷನೂ ಸ್ತ್ರೀಗೆ ಅಷ್ಟೇ ಮುಖ್ಯ. 12 ಏಕೆಂದರೆ ಸ್ತ್ರೀಯು ಪುರುಷನಿಂದ ಬಂದದ್ದು ಸತ್ಯ. ಆದರೆ ಪುರುಷನು ಸಹ ಸ್ತ್ರೀಯ ಮೂಲಕವಾಗಿ ಹುಟ್ಟುತ್ತಾನೆ. ನಿಜವಾಗಿ ಸಮಸ್ತವೂ ದೇವರಿಂದಲೇ ಬರುತ್ತದೆ.
13 ಹೀಗಿರಲಾಗಿ, ಸ್ತ್ರೀಯು ತನ್ನ ತಲೆಗೆ ಮುಸುಕು ಹಾಕಿಕೊಳ್ಳದೆ ದೇವರಿಗೆ ಪ್ರಾರ್ಥಿಸುವುದು ಸರಿಯೋ? ನೀವೇ ತೀರ್ಮಾನಿಸಿರಿ. 14 ಮನುಷ್ಯನ ಸ್ವಭಾವವೇ ತಿಳಿಸುವಂತೆ ಉದ್ದನೆಯ ಕೂದಲನ್ನು ಹೊಂದಿರುವುದು ಪುರುಷನಿಗೆ ಅವಮಾನಕರವಾಗಿದೆ. 15 ಆದರೆ ಉದ್ದನೆಯ ಕೂದಲನ್ನು ಹೊಂದಿರುವುದು ಸ್ತ್ರೀಗೆ ಗೌರವಯುತವಾಗಿದೆ. ಉದ್ದನೆಯ ಕೂದಲನ್ನು ಸ್ತ್ರೀಯ ತಲೆಗೆ ಮುಸುಕನ್ನಾಗಿ ಕೊಡಲಾಗಿದೆ. 16 ಕೆಲವು ಜನರು ಇದರ ಬಗ್ಗೆ ಇನ್ನೂ ವಾದಮಾಡಬಯಸಬಹುದು. ಆದರೆ ಈ ಸಂಪ್ರದಾಯವು ನಮ್ಮಲ್ಲಾಗಲಿ ದೇವರ ಸಭೆಗಳಲ್ಲಾಗಲಿ ಇಲ್ಲ.
ಪ್ರಭುವಿನ ರಾತ್ರಿಭೋಜನ
17 ಈಗ ನಾನು ನಿಮಗೆ ಹೇಳಲಿರುವ ವಿಷಯದಲ್ಲಿ ನಿಮ್ಮನ್ನು ಹೊಗಳುವುದಿಲ್ಲ. ನಿಮ್ಮ ಸಭಾಕೂಟಗಳು ನಿಮಗೆ ಒಳ್ಳೆಯದನ್ನು ಮಾಡುವುದಕ್ಕಿಂತಲೂ ಹೆಚ್ಚು ಕೇಡುಗಳನ್ನೇ ಮಾಡುತ್ತವೆ. 18 ಮೊದಲನೆಯದಾಗಿ, ನೀವು ಸಭೆಯಾಗಿ ಸೇರಿಬರುವಾಗ ನಿಮ್ಮಲ್ಲಿ ಪಂಗಡಗಳಿರುವುದಾಗಿ ಕೇಳಿದ್ದೇನೆ. ಇದು ನಿಜವೆಂದು ಸ್ವಲ್ಪಮಟ್ಟಿಗೆ ನಂಬುತ್ತೇನೆ. 19 (ನಿಮ್ಮಲ್ಲಿ ಭಿನ್ನಾಭಿಪ್ರಾಯಗಳಿರುವುದು ಸಹಜ. ನಿಮ್ಮಲ್ಲಿ ಯಾರು ನಿಜವಾಗಿಯೂ ಒಳ್ಳೆಯದನ್ನು ಮಾಡುತ್ತಿದ್ದಾರೆ ಎಂಬುದನ್ನು ಇದು ಸ್ಪಷ್ಟಪಡಿಸುತ್ತದೆ.)
20 ನೀವೆಲ್ಲರೂ ಒಟ್ಟಾಗಿ ಸೇರಿದಾಗ ನೀವು ಮಾಡುವಂಥದ್ದು ನಿಜವಾಗಿಯೂ ಪ್ರಭುವಿನ ರಾತ್ರಿಭೋಜನವಲ್ಲ. 21 ಏಕೆಂದರೆ, ನೀವು ಊಟ ಮಾಡುವಾಗ, ಇತರರಿಗೋಸ್ಕರ ಕಾಯದೆ ಪ್ರತಿಯೊಬ್ಬರು ತಮ್ಮಷ್ಟಕ್ಕೆ ತಾವೇ ಊಟ ಮಾಡುತ್ತಾರೆ. ಕೆಲವು ಜನರಲ್ಲಿ ಊಟಮಾಡಲು ಸಾಕಷ್ಟು ಆಹಾರ ಇರುವುದಿಲ್ಲ. ಇನ್ನು ಕೆಲವರಲ್ಲಿ ತಿಂದು, ಕುಡಿದು ಮತ್ತರಾಗುವಷ್ಟು ಆಹಾರವಿರುತ್ತದೆ. 22 ನೀವು ನಿಮ್ಮ ಸ್ವಂತ ಮನೆಗಳಲ್ಲಿ ತಿನ್ನಬಹುದು, ಕುಡಿಯಬಹುದು. ದೇವರ ಸಭೆಯು ಮುಖ್ಯವಾದದ್ದಲ್ಲವೆಂದು ನೀವು ಯೋಚಿಸುವಂತೆ ತೋರುತ್ತದೆ. ನೀವು ಬಡವರನ್ನು ನಾಚಿಕೆಗೆ ಗುರಿಮಾಡುತ್ತೀರಿ. ನಾನು ನಿಮಗೆ ಏನು ಹೇಳಲಿ? ನೀವು ಮಾಡುತ್ತಿರುವ ಈ ಕಾರ್ಯಕ್ಕೋಸ್ಕರ ನಾನು ನಿಮ್ಮನ್ನು ಹೊಗಳಬೇಕೇ? ನಾನು ನಿಮ್ಮನ್ನು ಹೊಗಳುವುದಿಲ್ಲ.
23 ನಾನು ಪ್ರಭುವಿನಿಂದ ಹೊಂದಿಕೊಂಡದ್ದನ್ನೇ ನಿಮಗೆ ಉಪದೇಶಿಸಿದೆನು. ಅದೇನೆಂದರೆ: ಯೇಸುವನ್ನು ಕೊಲ್ಲುವುದಕ್ಕಾಗಿ ಒಪ್ಪಿಸಿಕೊಟ್ಟ ರಾತ್ರಿಯಲ್ಲಿ, ಆತನು ರೊಟ್ಟಿಯನ್ನು ತೆಗೆದುಕೊಂಡು, 24 ಅದಕ್ಕಾಗಿ ಸ್ತೋತ್ರ ಸಲ್ಲಿಸಿ, ಅದನ್ನು ಮುರಿದು, “ಇದು ನನ್ನ ದೇಹ; ಇದನ್ನು ನಿಮಗೋಸ್ಕರ ಕೊಡಲಾಗಿದೆ. ನನ್ನನ್ನು ನೆನಸಿಕೊಳ್ಳುವುದಕ್ಕಾಗಿ ಹೀಗೆ ಮಾಡಿರಿ” ಎಂದು ಹೇಳಿದನು. 25 ಅದೇ ರೀತಿಯಲ್ಲಿ ಅವರು ಊಟಮಾಡಿದ ಮೇಲೆ ಯೇಸು ದ್ರಾಕ್ಷಾರಸದ ಪಾತ್ರೆಯನ್ನು ತೆಗೆದುಕೊಂಡು, “ದೇವರು ತನ್ನ ಜನರೊಂದಿಗೆ ಮಾಡಿಕೊಂಡ ಹೊಸ ಒಡಂಬಡಿಕೆಯನ್ನು ಈ ದ್ರಾಕ್ಷಾರಸ ಸೂಚಿಸುತ್ತದೆ. ಈ ಹೊಸ ಒಡಂಬಡಿಕೆ ನನ್ನ ರಕ್ತದಿಂದ ಆರಂಭವಾಗುತ್ತದೆ. ನೀವು ಇದನ್ನು ಕುಡಿಯುವಾಗಲೆಲ್ಲಾ ನನ್ನನ್ನು ನೆನಸಿಕೊಳ್ಳವವರಾಗಿದ್ದೀರಿ” ಎಂದು ಹೇಳಿದನು. 26 ನೀವು ಈ ರೊಟ್ಟಿಯನ್ನು ತಿಂದು ಈ ಪಾತ್ರೆಯಲ್ಲಿ ಕುಡಿಯುವಾಗಲೆಲ್ಲಾ ಪ್ರಭುವಿನ ಮರಣವನ್ನು ಆತನು ಬರುವ ತನಕ ಪ್ರಚುರಪಡಿಸುತ್ತೀರಿ.
27 ಹೀಗಿರಲಾಗಿ ಒಬ್ಬನು ಪ್ರಭುವಿನ ರೊಟ್ಟಿಯನ್ನು ತಿನ್ನುವಾಗ, ಪಾತ್ರೆಯಲ್ಲಿ ಕುಡಿಯುವಾಗ ಇವುಗಳ ನಿಜವಾದ ಅರ್ಥವನ್ನು ಕಾರ್ಯಗಳ ಮೂಲಕ ತೋರ್ಪಡಿಸಬೇಕು, ಇಲ್ಲವಾದರೆ ಅವನು ಪ್ರಭುವಿನ ದೇಹಕ್ಕೂ ರಕ್ತಕ್ಕೂ ದೋಷಿಯಾಗುತ್ತಾನೆ. 28 ಪ್ರತಿಯೊಬ್ಬ ವ್ಯಕ್ತಿಯು ರೊಟ್ಟಿಯನ್ನು ತಿನ್ನುವುದಕ್ಕಿಂತಲೂ ಪಾತ್ರೆಯಲ್ಲಿ ಕುಡಿಯುವುದಕ್ಕಿಂತಲೂ ಮುಂಚಿತವಾಗಿ ತನ್ನ ಹೃದಯವನ್ನು ಪರಿಶೀಲಿಸಿಕೊಳ್ಳಬೇಕು. 29 ಯಾವನಾದರೂ ಪ್ರಭುವಿನ ದೇಹವೆಂದು ಗುರುತಿಸದೆ ರೊಟ್ಟಿಯನ್ನು ತಿಂದರೆ ಮತ್ತು ದ್ರಾಕ್ಷಾರಸವನ್ನು ಕುಡಿದರೆ ಅವನು ತಿಂದದ್ದಕ್ಕೂ ಕುಡಿದದ್ದಕ್ಕೂ ದೋಷಿಯೆಂಬ ತೀರ್ಪಿಗೆ ಒಳಗಾಗುತ್ತಾನೆ. 30 ಆದಕಾರಣವೇ, ನಿಮ್ಮ ಸಭೆಯಲ್ಲಿರುವ ಅನೇಕರು ರೋಗಿಗಳೂ ಬಲಹೀನರೂ ಆಗಿದ್ದಾರೆ ಮತ್ತು ಅನೇಕರು ಸತ್ತು ಹೋದರು. 31 ಆದರೆ ನಮ್ಮನ್ನು ನಾವೇ ಪರಿಶೋಧಿಸಿಕೊಂಡರೆ ನ್ಯಾಯತೀರ್ಪಿಗೆ ಒಳಗಾಗುವುದಿಲ್ಲ. 32 ಆದರೆ ಪ್ರಭುವು ನಮಗೆ ತೀರ್ಪು ಮಾಡುವಾಗ, ನಮಗೆ ಸರಿಯಾದ ಮಾರ್ಗವನ್ನು ತೋರಿಸುವುದಕ್ಕಾಗಿಯೂ ಈ ಲೋಕದ ಇತರ ಜನರೊಂದಿಗೆ ನಮಗೆ ಅಪರಾಧಿಗಳೆಂಬ ತೀರ್ಪಾಗದಂತೆಯೂ ಆತನು ನಮ್ಮನ್ನು ಶಿಕ್ಷಿಸುತ್ತಾನೆ.
33 ಆದ್ದರಿಂದ ನನ್ನ ಪ್ರಿಯ ಸಹೋದರ ಸಹೋದರಿಯರೇ, ನೀವು ಊಟ ಮಾಡುವುದಕ್ಕಾಗಿ ಒಟ್ಟಾಗಿ ಸೇರುವಾಗ ಒಬ್ಬರಿಗೊಬ್ಬರು ಕಾದುಕೊಂಡಿರಿ. 34 ಒಬ್ಬ ವ್ಯಕ್ತಿಯು ಹಸಿವೆಗೊಂಡಿದ್ದರೆ, ಅವನು ಮನೆಯಲ್ಲಿ ಊಟಮಾಡಲಿ. ನೀವು ಹೀಗೆ ಮಾಡಿದರೆ, ನಿಮ್ಮ ಸಭಾಕೂಟವು ನಿಮ್ಮ ಮೇಲೆ ನ್ಯಾಯತೀರ್ಪನ್ನು ಬರಮಾಡುವುದಿಲ್ಲ. ಉಳಿದ ವಿಷಯಗಳ ಬಗ್ಗೆ ನೀವು ಏನು ಮಾಡಬೇಕೆಂಬುದನ್ನು ನಾನು ನಿಮ್ಮಲ್ಲಿಗೆ ಬಂದಾಗ ತಿಳಿಸಿಕೊಡುತ್ತೇನೆ.
ದೇವರ ಸಂದೇಶಕನು ಜೆರುಸಲೇಮ್‌ನ್ನು ದಂಡಿಸಿದ್ದು
9 ಆಮೇಲೆ ದೇವರು ಗಟ್ಟಿಯಾದ ಧ್ವನಿಯಿಂದ ಕರೆಯುವುದು ನನಗೆ ಕೇಳಿಸಿತು: “ಪಟ್ಟಣವನ್ನು ದಂಡಿಸಲು ನೇಮಕಗೊಂಡಿರುವವರೇ, ಇಲ್ಲಿಗೆ ಬನ್ನಿ. ನಿಮ್ಮಲ್ಲಿ ಪ್ರತಿಯೊಬ್ಬರೂ ನಾಶದ ಆಯುಧವನ್ನು ನಿಮ್ಮ ಕೈಯಲ್ಲಿ ಹಿಡಿದುಕೊಂಡು ಬನ್ನಿ.” 2 ಆಗ ಆರು ಮಂದಿ ಪುರುಷರು ಉತ್ತರದಿಕ್ಕಿನಲ್ಲಿದ್ದ ಮೇಲಿನ ದ್ವಾರದ ಮಾರ್ಗದಿಂದ ಬರುತ್ತಿರುವುದನ್ನು ನಾನು ನೋಡಿದೆನು. ಪ್ರತಿಯೊಬ್ಬನ ಕೈಯಲ್ಲಿ ಮಾರಕಾಸ್ತ್ರವಿತ್ತು. ಅವರಲ್ಲೊಬ್ಬನು ನಾರುಮಡಿಯನ್ನು ಧರಿಸಿದ್ದನು. ಅವನ ಸೊಂಟದಲ್ಲಿ ಲೇಖಕನ ಸಾಮಾಗ್ರಿಯ ಚಿಕ್ಕ ಚೀಲವಿತ್ತು. ಅವರು ಆಲಯದೊಳಗಿದ್ದ ತಾಮ್ರದ ವೇದಿಕೆಯ ಬಳಿ ಹೋಗಿ ನಿಂತುಕೊಂಡರು. 3 ಆಗ ಇಸ್ರೇಲರ ದೇವರ ಮಹಿಮೆಯು ತಾನು ಆಸನಾರೂಢನಾಗಿದ್ದ ಕೆರೂಬಿದೂತರ ಮೇಲಿನಿಂದ ಏರಿ ದೇವಾಲಯದ ಪ್ರವೇಶ ಸ್ಥಳಕ್ಕೆ ಹೋಯಿತು. ಆ ಮಹಿಮೆಯು ನಾರುಮಡಿಯನ್ನು ಧರಿಸಿದ್ದ, ಲೇಖಕನ ಸಾಮಾಗ್ರಿಯ ಚಿಕ್ಕ ಚೀಲವನ್ನು ಹೊಂದಿದ್ದ ಪುರುಷನನ್ನು ಕರೆಯಿತು.
4 ಆಗ ಯೆಹೋವನು ಅವನಿಗೆ, “ಜೆರುಸಲೇಮ್ ನಗರದಲ್ಲೆಲ್ಲಾ ತಿರುಗಾಡು. ಜೆರುಸಲೇಮಿನಲ್ಲಿ ನಡೆಯುತ್ತಿರುವ ಅಸಹ್ಯವಾದ ದುಷ್ಕೃತ್ಯಗಳ ಬಗ್ಗೆ ನರಳಾಡುತ್ತಿರುವವರ ಮತ್ತು ನಿಟ್ಟುಸಿರುಬಿಡುತ್ತಿರುವವರ ಹಣೆಯ ಮೇಲ್ಗಡೆ ಒಂದು ಗುರುತನ್ನಿಡು” ಎಂದು ಹೇಳಿದನು.
5-6 ಬಳಿಕ ದೇವರು ಅಲ್ಲಿದ್ದ ಉಳಿದವರಿಗೆ, “ಮೊದಲನೆಯವನನ್ನು ಹಿಂಬಾಲಿಸಿರಿ. ಹಣೆಗಳ ಮೇಲೆ ಗುರುತಿಲ್ಲದ ಜನರನ್ನು ಕೊಂದು ನಾಶಪಡಿಸಿರಿ. ಯಾವ ಮರುಕವನ್ನಾಗಲಿ ಕನಿಕರವನ್ನಾಗಲಿ ತೋರದೆ ವೃದ್ಧರನ್ನೂ ಯೌವನಸ್ಥರನ್ನೂ ಯುವತಿಯರನ್ನೂ ಸ್ತ್ರೀಯರನ್ನೂ ಮಕ್ಕಳನ್ನೂ ಕೊಲ್ಲಿರಿ. ಆದರೆ ಹಣೆಯ ಮೇಲೆ ಗುರುತು ಹೊಂದಿರುವ ಯಾರನ್ನೂ ಮುಟ್ಟಬೇಡಿ. ಇದನ್ನು ನನ್ನ ಆಲಯದಿಂದಲೇ ಆರಂಭಿಸಿ” ಎಂದು ಹೇಳಿದನು. ಆದ್ದರಿಂದ ಅವರು ಆಲಯದ ಮುಂದೆ ಇದ್ದ ಹಿರಿಯರನ್ನು ಕೊಲ್ಲುವುದರ ಮೂಲಕ ಈ ಕೆಲಸವನ್ನು ಆರಂಭಿಸಿದರು.
7 ದೇವರು ಅವರಿಗೆ ಹೇಳಿದ್ದೇನೆಂದರೆ, “ಈ ಆಲಯವನ್ನು ಹೊಲೆ ಮಾಡಿರಿ. ಆಲಯದ ಅಂಗಳವನ್ನು ಹೆಣಗಳಿಂದ ತುಂಬಿಸಿರಿ. ಈಗ ಹೊರಡಿ.” ಅವರು ಹೊರಟುಹೋಗಿ ನಗರದ ಜನರನ್ನು ಕೊಂದರು.
8 ಅವರು ಜನರನ್ನು ಕೊಲ್ಲಲು ಹೊರಟಾಗ ನಾನೊಬ್ಬನೇ ಅಲ್ಲಿದ್ದೆನು. ನಾನು ಬಾಗಿ ನಮಸ್ಕರಿಸಿ, “ಅಯ್ಯೋ, ನನ್ನ ಒಡೆಯನಾದ ಯೆಹೋವನೇ, ನೀನು ಜೆರುಸಲೇಮಿನ ಮೇಲೆ ನಿನ್ನ ಕೋಪವನ್ನು ಪ್ರದರ್ಶಿಸುವಾಗ ಉಳಿದ ಇಸ್ರೇಲರನ್ನು ನೀನು ನಿರ್ಮೂಲ ಮಾಡುವೆ!” ಎಂದು ಹೇಳಿದೆನು.
9 ಅದಕ್ಕೆ ದೇವರು, “ಇಸ್ರೇಲ್ ಮತ್ತು ಯೆಹೂದ ಜನರ ದೋಷವು ಬಹಳ ಹೆಚ್ಚಾಗಿದೆ. ಈ ದೇಶದಲ್ಲಿ ಎಲ್ಲೆಲ್ಲಿಯೂ ಕೊಲೆಗಳು ನಡೆಯುತ್ತಿವೆ. ಈ ನಗರವು ಅಪರಾಧಗಳಿಂದ ತುಂಬಿಹೋಗಿದೆ. ಯಾಕೆಂದರೆ ಜನರು ಹೀಗೆಂದುಕೊಳ್ಳುತ್ತಿದ್ದಾರೆ, ‘ಯೆಹೋವನು ಈ ದೇಶವನ್ನು ಬಿಟ್ಟುಹೋಗಿದ್ದಾನೆ. ನಾವು ಮಾಡುತ್ತಿರುವಂಥದ್ದನ್ನು ಅವನು ನೋಡುವುದಿಲ್ಲ.’ 10 ಅವರಿಗೆ ನಾನು ಕನಿಕರ ತೋರಿಸುವುದಿಲ್ಲ. ಅವರಿಗಾಗಿ ನಾನು ದುಃಖಿಸುವುದಿಲ್ಲ. ಅವರು ತಾವೇ ಇದನ್ನು ತಮ್ಮ ಮೇಲೆ ಬರಮಾಡಿಕೊಂಡರು. ಅವರು ಹೊಂದಲು ಯೋಗ್ಯವಾದ ಶಿಕ್ಷೆಯನ್ನೇ ನಾನು ಕೊಡುತ್ತಿರುವುದು.”
11 ಆಗ ನಾರುಬಟ್ಟೆಯನ್ನು ಧರಿಸಿಕೊಂಡು ಲೇಖಕನ ಸಾಮಾಗ್ರಿಯ ಚಿಕ್ಕ ಚೀಲವನ್ನು ಸೊಂಟಕ್ಕೆ ಕಟ್ಟಿಕೊಂಡಿದ್ದವನು, “ನೀನು ಆಜ್ಞಾಪಿಸಿದ ಮೇರೆಗೆ ನಾನು ಮಾಡಿದೆ” ಅಂದನು.
ರಚನೆಗಾರರು: ಕೋರಹೀಯರು.
48 ಯೆಹೋವನೇ ಮಹೋನ್ನತನು.
ನಮ್ಮ ದೇವರನ್ನು ಆತನ ಪವಿತ್ರ ಪರ್ವತ ಪಟ್ಟಣದಲ್ಲಿ ಜನರು ಬಹಳವಾಗಿ ಕೊಂಡಾಡುವರು.
2 ದೇವರ ಪವಿತ್ರ ಪಟ್ಟಣವು ರಮ್ಯವಾಗಿದೆ.
ಭೂಲೋಕದಲ್ಲೆಲ್ಲಾ ಇರುವ ಜನರನ್ನು ಅದು ಸಂತೋಷಗೊಳಿಸುವುದು.
ಸಿಯೋನ್ ಪರ್ವತವೇ ದೇವರ ನಿಜವಾದ ಪರ್ವತ.
ಅದೇ ಆ ಮಹಾರಾಜನ ಪರ್ವತ.
3 ದೇವರು ಆ ಪಟ್ಟಣಗಳ ಅರಮನೆಗಳಲ್ಲಿ,
ತಾನೇ ಆಶ್ರಯದುರ್ಗವೆಂದು ಹೆಸರುವಾಸಿಯಾಗಿದ್ದಾನೆ.
4 ಒಮ್ಮೆ, ಕೆಲವು ರಾಜರು ಒಟ್ಟಾಗಿ ಸೇರಿಬಂದರು.
ಆ ಪಟ್ಟಣದ ಮೇಲೆ ದಾಳಿ ಮಾಡಲೆಂದು ಅವರೆಲ್ಲ ಅದರತ್ತ ನಡೆದರು.
5 ಆದರೆ ಅವರು ಅದನ್ನು ಕಂಡಾಗ ದಿಗ್ಭ್ರಮೆಗೊಂಡರು;
ಭಯದಿಂದ ಓಡಿಹೋದರು.
6 ಭಯವು ಅವರನ್ನು
ಪ್ರಸವವೇದನೆಯಂತೆ ಆವರಿಸಿಕೊಂಡಿತು.
7 ಪೂರ್ವದ ಬಿರುಗಾಳಿಯಿಂದ ಒಡೆದುಹೋದ ಹಡಗುಗಳಂತೆ
ನೀನು ಅವರನ್ನು ನಾಶಮಾಡಿದೆ.
8 ಹೌದು, ಆ ರಾಜರುಗಳಿಗೆ ಸಂಭವಿಸಿದ್ದನ್ನು ನಾವು ಕಿವಿಯಾರೆ ಕೇಳಿದಂತೆಯೇ ಕಣ್ಣಾರೆಯೂ ಕಂಡೆವು.
ನಮ್ಮ ದೇವರೂ ಸೇನಾಧೀಶ್ವರನೂ ಆಗಿರುವ ಯೆಹೋವನ ಪಟ್ಟಣದಲ್ಲಿ ನಾವು ಅದನ್ನು ನೋಡಿದ್ದೇವೆ.
ದೇವರು ಆ ಪಟ್ಟಣವನ್ನು ಶಾಶ್ವತವಾಗಿ ಭದ್ರಗೊಳಿಸುವನು.
9 ದೇವರೇ, ನಿನ್ನ ಆಲಯದಲ್ಲಿ ನಿನ್ನ ಶಾಶ್ವತ ಪ್ರೀತಿಯ ಕುರಿತು ಧ್ಯಾನಿಸುವೆವು.
10 ದೇವರೇ, ನೀನು ಪ್ರಖ್ಯಾತನಾಗಿರುವೆ.
ಭೂಮಿಯ ಮೇಲೆಲ್ಲಾ ಜನರು ನಿನ್ನನ್ನು ಕೊಂಡಾಡುವರು.
ನೀನು ಎಷ್ಟು ಒಳ್ಳೆಯವನೆಂಬುದು ಪ್ರತಿಯೊಬ್ಬರಿಗೂ ತಿಳಿದಿದೆ.
11 ನಿನ್ನ ನ್ಯಾಯನಿರ್ಣಯಗಳಿಂದ ಚೀಯೋನ್ ಪರ್ವತವು ಹರ್ಷಿಸಲಿ;
ಯೆಹೂದದ ಊರುಗಳು ಉಲ್ಲಾಸಿಸಲಿ.
12 ಚೀಯೋನಿನ ಸುತ್ತಲೂ ಸಂಚರಿಸಿ, ಆ ಪಟ್ಟಣವನ್ನು ನೋಡಿರಿ.
ಅದರ ಬುರುಜುಗಳನ್ನು ಎಣಿಸಿರಿ.
13 ಅದರ ಕೋಟೆಗಳನ್ನು ನೋಡಿರಿ.
ಚೀಯೋನಿನ ಅರಮನೆಗಳನ್ನು ಹೊಗಳಿರಿ.
ಆಗ ನೀವು ನಿಮ್ಮ ಮುಂದಿನ ಸಂತತಿಯವರಿಗೆ ಅದರ ಬಗ್ಗೆ ಹೇಳಬಲ್ಲಿರಿ.
14 ಈ ದೇವರೇ ಎಂದೆಂದಿಗೂ ನಮ್ಮ ದೇವರು!
ನಮ್ಮನ್ನು ಶಾಶ್ವತವಾಗಿ ನಡೆಸುವಾತನು ಆತನೇ!
Kannada Holy Bible: Easy-to-Read Version. All rights reserved. © 1997 Bible League International