M’Cheyne Bible Reading Plan
ದಾವೀದ ಮತ್ತು ಅಬೀಷೈಸೌಲನ ಪಾಳೆಯನ್ನು ಪ್ರವೇಶಿಸುವರು
26 ಜೀಫಿನ ಜನರು ಸೌಲನನ್ನು ನೋಡುವುದಕ್ಕಾಗಿ ಗಿಬೆಯಕ್ಕೆ ಹೋದರು. ಅವರು ಸೌಲನಿಗೆ, “ದಾವೀದನು ಹಕೀಲಾ ಬೆಟ್ಟದ ಮೇಲೆ ಅಡಗಿಕೊಂಡಿದ್ದಾನೆ. ಈ ಬೆಟ್ಟವು ಜೆಸಿಮೋನ್ ಅರಣ್ಯಕ್ಕೆ ಎದುರಿನಲ್ಲಿದೆ” ಎಂದು ಹೇಳಿದರು.
2 ಸೌಲನು ಜೀಫ್ ಅರಣ್ಯಕ್ಕೆ ಹೋದನು. ಇಸ್ರೇಲಿನಲ್ಲೆಲ್ಲಾ ತಾನೇ ಆರಿಸಿದ ಮೂರು ಸಾವಿರ ಜನ ಸೈನಿಕರನ್ನು ಸೌಲನು ತನ್ನೊಡನೆ ಕರೆದುಕೊಂಡು ಹೋದನು. ಸೌಲನು ಮತ್ತು ಅವನ ಜನರು ದಾವೀದನನ್ನು ಜೀಫ್ ಅರಣ್ಯದಲ್ಲಿ ಹುಡುಕಿದರು. 3 ಸೌಲನು ಹಕೀಲಾ ಬೆಟ್ಟದ ಮೇಲೆ ತನ್ನ ಪಾಳೆಯವನ್ನು ಮಾಡಿಕೊಂಡನು. ಈ ಪಾಳೆಯವು ಜೆಸಿಮೋನ್ ಅರಣ್ಯಕ್ಕೆ ಎದುರಿನಲ್ಲಿರುವ ರಸ್ತೆಯ ಅಂಚಿನಲ್ಲಿತ್ತು.
ದಾವೀದನು ಅರಣ್ಯದಲ್ಲಿ ನೆಲೆಸಿದ್ದನು. ಸೌಲನು ತನ್ನನ್ನು ಹಿಂಬಾಲಿಸಿಕೊಂಡು ಅಲ್ಲಿಗೆ ಬಂದಿರುವುದು ದಾವೀದನಿಗೆ ತಿಳಿಯಿತು. 4 ಆಗ ದಾವೀದನು ಗೂಢಚಾರರನ್ನು ಕಳುಹಿಸಿದನು. ಸೌಲನು ಹಕೀಲಾಕ್ಕೆ ಬಂದಿರುವುದು ದಾವೀದನಿಗೆ ತಿಳಿಯಿತು. 5 ಸೌಲನು ಪಾಳೆಯ ಮಾಡಿಕೊಂಡಿದ್ದ ಸ್ಥಳಕ್ಕೆ ದಾವೀದನು ಹೋಗಿ ಸೌಲನು ಮತ್ತು ಅಬ್ನೇರನು ಮಲಗಿರುವ ಸ್ಥಳವನ್ನು ನೋಡಿಕೊಂಡನು. (ನೇರನ ಮಗನಾದ ಅಬ್ನೇರನು ಸೌಲನ ಸೈನ್ಯದಲ್ಲಿ ಸೇನಾಪತಿಯಾಗಿದ್ದನು.) ಸೌಲನು ಪಾಳೆಯದ ಮಧ್ಯದಲ್ಲಿ ಮಲಗಿದ್ದನು. ಸೌಲನ ಸುತ್ತ ಸೈನ್ಯವೆಲ್ಲವೂ ಇದ್ದಿತು.
6 ದಾವೀದನು ಹಿತ್ತಿಯನಾದ ಅಹೀಮೆಲೆಕನ ಮತ್ತು ಚೆರೂಯಳ ಮಗನೂ ಯೋವಾಬನ ಸಹೋದರನೂ ಆದ ಅಬೀಷೈರೊಡನೆ ಮಾತನಾಡಿದನು. ಅವನು ಅವರಿಗೆ, “ನನ್ನೊಡನೆ ಸೌಲನ ಪಾಳೆಯಕ್ಕೆ ಯಾರು ಬರುತ್ತೀರಿ?” ಎಂದು ಕೇಳಿದನು.
“ನಾನು ಬರುತ್ತೇನೆ” ಎಂದು ಅಬೀಷೈ ಉತ್ತರಿಸಿದನು.
7 ರಾತ್ರಿಯಾಯಿತು. ದಾವೀದ ಮತ್ತು ಅಬೀಷೈ ಸೌಲನ ಪಾಳೆಯಕ್ಕೆ ಹೋದರು. ಪಾಳೆಯದ ಮಧ್ಯದಲ್ಲಿ ಸೌಲನು ನಿದ್ರಿಸುತ್ತಿದ್ದನು. ಅವನ ಭರ್ಜಿಯು ಅವನ ತಲೆಯ ಹತ್ತಿರ ನೆಲದಲ್ಲಿ ನೆಡಲ್ಪಟ್ಟಿತ್ತು. ಸೌಲನ ಸುತ್ತಲೂ ಅಬ್ನೇರನು ಸೈನ್ಯದೊಡನೆ ನಿದ್ರಿಸುತ್ತಿದ್ದನು. 8 ಅಬೀಷೈಯು, “ಯೆಹೋವನು ಈ ದಿನ ನಿನ್ನ ಶತ್ರುವನ್ನು ಸೋಲಿಸಲು ನಿನಗೆ ಒಪ್ಪಿಸಿದ್ದಾನೆ. ಸೌಲನನ್ನು ಅವನ ಭರ್ಜಿಯಿಂದಲೇ ಅವನನ್ನು ನೆಲಕ್ಕೆ ಹತ್ತಿಕೊಳ್ಳುವಂತೆ ತಿವಿಯಲು ನನಗೆ ಅವಕಾಶಕೊಡು. ನಾನು ಒಂದೇ ಸಲಕ್ಕೆ ಆ ಕಾರ್ಯವನ್ನು ಮುಗಿಸಿಬಿಡುತ್ತೇನೆ!” ಎಂದು ದಾವೀದನನ್ನು ಕೇಳಿದನು.
9 ಆದರೆ ದಾವೀದನು ಅಬೀಷೈಗೆ, “ಸೌಲನನ್ನು ಕೊಲ್ಲಬೇಡ! ಯೆಹೋವನಿಂದ ಅಭಿಷೇಕಿಸಲ್ಪಟ್ಟ ರಾಜನಿಗೆ ಯಾರೇ ಕೇಡುಮಾಡಿದರೂ ಅವರನ್ನು ದಂಡಿಸಲೇಬೇಕು! 10 ಯೆಹೋವನಾಣೆ, ಸೌಲನನ್ನು ಸ್ವತಃ ಯೆಹೋವನೇ ದಂಡಿಸುತ್ತಾನೆ. ಸೌಲನು ಸ್ವಾಭಾವಿಕನಾದ ಮರಣಹೊಂದಬಹುದು ಅಥವಾ ಯುದ್ಧದಲ್ಲಿ ಕೊಲ್ಲಲ್ಪಡಬಹುದು. 11 ಆದರೆ ಯೆಹೋವನಿಂದ ಅಭಿಷೇಕಿಸಲ್ಪಟ್ಟ ರಾಜನನ್ನು ನಾನು ಕೊಲ್ಲುವಂತಹ ಪರಿಸ್ಥಿತಿಯನ್ನು ಎಂದಿಗೂ ನನಗೆ ಕೊಡದಂತೆ ಯೆಹೋವನಲ್ಲಿ ಪ್ರಾರ್ಥಿಸುತ್ತೇನೆ! ಈಗ ಸೌಲನ ತಲೆಯ ಹತ್ತಿರವಿರುವ ಭರ್ಜಿಯನ್ನೂ ನೀರಿನ ತಂಬಿಗೆಯನ್ನೂ ತೆಗೆದುಕೊಂಡ ನಂತರ ನಾವು ಹೋಗೋಣ” ಎಂದು ಹೇಳಿದನು.
12 ಅಂತೆಯೇ, ಸೌಲನ ತಲೆಯ ಹತ್ತಿರವಿದ್ದ ಭರ್ಜಿಯನ್ನೂ ನೀರಿನ ತಂಬಿಗೆಯನ್ನೂ ದಾವೀದನು ತೆಗೆದುಕೊಂಡನು. ನಂತರ ದಾವೀದ ಮತ್ತು ಅಬೀಷೈ ಸೌಲನ ಪಾಳೆಯನ್ನು ಬಿಟ್ಟು ಹೋದರು. ಇದನ್ನು ಯಾರೂ ನೋಡಲಿಲ್ಲ. ಇದರ ಬಗ್ಗೆ ಯಾರಿಗೂ ತಿಳಿಯಲಿಲ್ಲ. ಒಬ್ಬನಾದರೂ ನಿದ್ರೆಯಿಂದ ಎಚ್ಚರಗೊಳ್ಳಲಿಲ್ಲ! ಸೌಲನು ಮತ್ತು ಅವನ ಸೈನಿಕರೆಲ್ಲರೂ ನಿದ್ರಿಸುತ್ತಿದ್ದರು. ಏಕೆಂದರೆ ಯೆಹೋವನು ಅವರಿಗೆ ಗಾಢನಿದ್ರೆಯನ್ನು ಬರಮಾಡಿದ್ದನು.
ದಾವೀದನು ಸೌಲನಿಗೆ ಮತ್ತೆ ಅವಮಾನ ಮಾಡುವನು
13 ದಾವೀದನು ಕಣಿವೆಯ ಮತ್ತೊಂದು ಕಡೆಗೆ ಹೋಗಿ ಬೆಟ್ಟದ ತುದಿಯಲ್ಲಿ ನಿಂತುಕೊಂಡನು. ದಾವೀದನ ಮತ್ತು ಸೌಲನ ಪಾಳೆಯಗಳಿಗೆ ತುಂಬಾ ಅಂತರವಿತ್ತು. 14 ದಾವೀದನು ಸೌಲನ ಸೈನ್ಯವನ್ನೂ ನೇರನ ಮಗನಾದ ಅಬ್ನೇರನನ್ನೂ ಉದ್ದೇಶಿಸಿ, “ಅಬ್ನೇರನೇ, ನನಗೆ ಉತ್ತರಿಸು” ಎಂದು ಕೂಗಿಕೊಂಡನು.
ಅಬ್ನೇರನು, “ನೀನು ಯಾರು? ರಾಜನನ್ನು ನೀನು ಕರೆಯುತ್ತಿರುವುದೇಕೆ?” ಎಂದು ಕೇಳಿದನು.
15 ದಾವೀದನು, “ನೀನು ಶೂರನಲ್ಲವೇ? ಇಸ್ರೇಲಿನಲ್ಲಿನ ಇತರ ಶೂರರಿಗಿಂತಲೂ ನೀನು ಉತ್ತಮನಲ್ಲವೇ? ಹೀಗಿರುವಾಗ ನೀನು ನಿನ್ನ ಒಡೆಯನಾದ ರಾಜನನ್ನು ಏಕೆ ರಕ್ಷಿಸಲಿಲ್ಲ? ಒಬ್ಬ ಸಾಮಾನ್ಯ ಮನುಷ್ಯನು ನಿಮ್ಮ ಪಾಳೆಯಕ್ಕೆ ಬಂದಿದ್ದರೂ ನಿಮ್ಮ ಒಡೆಯನಾದ ರಾಜನನ್ನು ಕೊಲ್ಲುತ್ತಿದ್ದನು. 16 ನೀನು ದೊಡ್ಡ ತಪ್ಪನ್ನು ಮಾಡಿದೆ! ಯೆಹೋವನಾಣೆ, ನೀನು ಮತ್ತು ನಿನ್ನ ಜನರು ಸಾಯಲೇಬೇಕಾಗಿತ್ತು. ಏಕೆನ್ನುವಿಯೊ? ಯೆಹೋವನಿಂದ ಅಭಿಷೇಕಿಸಲ್ಪಟ್ಟ ರಾಜನಾದ ನಿನ್ನ ಒಡೆಯನನ್ನು ನೀನು ರಕ್ಷಿಸಲಾಗಲಿಲ್ಲ. ಸೌಲನ ತಲೆಯ ಹತ್ತಿರವಿದ್ದ ಭರ್ಜಿ ಮತ್ತು ನೀರಿನ ತಂಬಿಗೆಯನ್ನು ಹುಡುಕಿರಿ, ಅವು ಎಲ್ಲಿಗೆ ಹೋದವು?” ಎಂದು ಕೇಳಿದನು.
17 ದಾವೀದನ ಧ್ವನಿಯು ಸೌಲನಿಗೆ ತಿಳಿಯಿತು. ಸೌಲನು, “ನನ್ನ ಮಗನಾದ ದಾವೀದನೇ, ಇದು ನಿನ್ನ ಧ್ವನಿಯೇ?” ಎಂದು ಕೇಳಿದನು.
ದಾವೀದನು, “ಹೌದು, ನನ್ನ ಒಡೆಯನಾದ ರಾಜನೇ, ಇದು ನನ್ನ ಧ್ವನಿ” ಎಂದನು. 18 ದಾವೀದನು, “ಒಡೆಯನೇ, ನನ್ನನ್ನೇಕೆ ಅಟ್ಟಿಸಿಕೊಂಡು ಬರುತ್ತಿರುವೆ? ನಾನು ಮಾಡಿರುವ ತಪ್ಪಾದರೂ ಏನು? ನಾನು ತಪ್ಪಿತಸ್ಥನೇ? 19 ನನ್ನ ಒಡೆಯನೇ, ನನ್ನ ರಾಜನೇ, ನನ್ನ ಮಾತುಗಳನ್ನು ಆಲಿಸು! ನೀನು ನನ್ನ ಮೇಲೆ ಕೋಪಗೊಳ್ಳುವಂತೆ ಯೆಹೋವನು ಮಾಡಿರುವುದಾದರೆ ಆತನಿಗೆ ನೈವೇದ್ಯವನ್ನು ಅರ್ಪಿಸೋಣ. ಆದರೆ ನೀನು ನನ್ನ ಮೇಲೆ ಕೋಪಗೊಳ್ಳುವಂತೆ ಜನರು ಮಾಡಿದ್ದರೆ, ಅವರಿಗೆ ಯೆಹೋವನು ಕೇಡಾಗುವಂತೆ ಮಾಡಲಿ. ನನಗೆ ಯೆಹೋವನು ನೀಡಿದ ಭೂಮಿಯನ್ನು ನಾನು ಬಿಡುವಂತೆ ಜನರು ಬಲವಂತಪಡಿಸಿದರು. ‘ಹೋಗು, ಹೊರದೇಶೀಯರೊಂದಿಗೆ ನೆಲೆಸು. ಹೋಗು, ಇತರ ದೇವರುಗಳನ್ನು ಆರಾಧಿಸು’ ಎಂದು ಜನರು ನನಗೆ ಹೇಳಿದರು. 20 ಯೆಹೋವನ ಸನ್ನಿಧಿಯಿಂದ ದೂರದಲ್ಲಿರುವ ಈ ಸ್ಥಳದಲ್ಲಿ ನನ್ನನ್ನು ಸಾಯಿಸಬೇಡಿ. ಇಸ್ರೇಲರ ರಾಜನು ಒಂದು ಸಣ್ಣ ಹುಳಕ್ಕಾಗಿ ಹುಡುಕುತ್ತಾ ಹೊರ ಬಂದಿದ್ದಾನೆ. ಕೌಜುಗ ಹಕ್ಕಿಯನ್ನು ಬೆಟ್ಟಗಳಲ್ಲಿ ಬೇಟೆಯಾಡುವ ಬೇಟೆಗಾರನಂತೆ ನೀನಿರುವೆಯಲ್ಲಾ!” ಎಂದು ಹೇಳಿದನು.
21 ನಂತರ ಸೌಲನು, “ನಾನು ಪಾಪಮಾಡಿದ್ದೇನೆ. ನನ್ನ ಮಗನಾದ ದಾವೀದನೇ, ಹಿಂದಿರುಗಿ ಬಾ. ನನ್ನ ಜೀವವು ನಿನಗೆ ಮುಖ್ಯವೆಂಬುದನ್ನು ನನಗೆ ನೀನು ಈ ದಿನ ತೋರಿಸಿರುವೆ. ಆದ್ದರಿಂದ ನಾನು ನಿನ್ನನ್ನು ಹಿಂಸಿಸಲು ಪ್ರಯತ್ನಿಸುವುದಿಲ್ಲ. ನಾನು ಮೂರ್ಖನಂತೆ ವರ್ತಿಸಿದೆ. ನಾನು ದೊಡ್ಡ ತಪ್ಪನ್ನು ಮಾಡಿದ್ದೇನೆ” ಎಂದನು.
22 ದಾವೀದನು, “ರಾಜನ ಭರ್ಜಿಯು ಇಲ್ಲಿದೆ. ನಿನ್ನಲ್ಲಿರುವ ಒಬ್ಬ ಯುವಕನು ಇಲ್ಲಿಗೆ ಬಂದು ಅದನ್ನು ತೆಗೆದುಕೊಂಡು ಹೋಗಲಿ. 23 ಪ್ರತಿಯೊಬ್ಬನಿಗೂ ಅವನ ಕಾರ್ಯಗಳಿಗೆ ಮತ್ತು ನಂಬಿಗಸ್ತಿಕೆಗೆ ತಕ್ಕಂತೆ ಯೆಹೋವನು ಪ್ರತಿಫಲ ಕೊಡುವನು. ಇಂದು ಯೆಹೋವನು ನಿನ್ನನ್ನು ನನ್ನ ಕೈಗೆ ಒಪ್ಪಿಸಿಕೊಟ್ಟಿದ್ದರೂ ಯೆಹೋವನಿಂದ ಅಭಿಷೇಕಿಸಲ್ಪಟ್ಟ ರಾಜನಾಗಿರುವ ನಿನಗೆ ನಾನು ಕೇಡನ್ನು ಮಾಡುವುದಿಲ್ಲ! 24 ನಿನ್ನ ಜೀವವು ನನಗೆ ಮುಖ್ಯವೆಂಬುದನ್ನು ಈ ದಿನ ನಾನು ನಿನಗೆ ತೋರಿಸಿದೆ! ಇದೇ ರೀತಿ, ನನ್ನ ಜೀವವು ತನಗೆ ಮುಖ್ಯವೆಂಬುದನ್ನು ಯೆಹೋವನು ತೋರಿಸುತ್ತಾನೆ! ಯೆಹೋವನು ನನ್ನನ್ನು ಎಲ್ಲಾ ಕೇಡುಗಳಿಂದಲೂ ರಕ್ಷಿಸುತ್ತಾನೆ” ಎಂದು ಹೇಳಿದನು.
25 ನಂತರ ಸೌಲನು ದಾವೀದನಿಗೆ, “ದೇವರು ನಿನ್ನನ್ನು ಆಶೀರ್ವದಿಸಲಿ, ನನ್ನ ಮಗನಾದ ದಾವೀದನೇ, ನೀನು ದೊಡ್ಡ ಕಾರ್ಯಗಳನ್ನು ಮಾಡುವೆ; ನೀನು ಯಶಸ್ವಿಯಾಗುವೆ” ಎಂದನು.
ದಾವೀದನು ತನ್ನ ಮಾರ್ಗದಲ್ಲಿ ಹೊರಟುಹೋದನು. ಸೌಲನು ಮನೆಗೆ ಹಿಂದಿರುಗಿದನು.
ಮದುವೆ ಕುರಿತು ಬೋಧನೆ
7 ನೀವು ಬರೆದು ಕೇಳಿರುವ ಸಂಗತಿಗಳ ಬಗ್ಗೆ ಈಗ ನಾನು ಚರ್ಚಿಸುತ್ತೇನೆ. ಪುರುಷನು ಮದುವೆ ಮಾಡಿಕೊಳ್ಳದಿರುವುದು ಒಳ್ಳೆಯದೇ ಸರಿ. 2 ಆದರೆ ಲೈಂಗಿಕ ಪಾಪ ಅಪಾಯಕರವಾದದ್ದು. ಆದ್ದರಿಂದ ಪ್ರತಿಯೊಬ್ಬ ಪುರುಷನಿಗೂ ಸ್ವಂತ ಹೆಂಡತಿ ಇದ್ದರೆ ಮತ್ತು ಪ್ರತಿಯೊಬ್ಬ ಸ್ತ್ರೀಗೂ ಸ್ವಂತ ಗಂಡನು ಇದ್ದರೆ ಒಳ್ಳೆಯದು. 3 ಗಂಡನು ತನ್ನ ಹೆಂಡತಿಗೆ ದಾಂಪತ್ಯ ಜೀವನದಲ್ಲಿ ಸಲ್ಲತಕ್ಕದ್ದನ್ನೆಲ್ಲ ಸಲ್ಲಿಸಲಿ. ಮತ್ತು ಹೆಂಡತಿಯು ತನ್ನ ಗಂಡನಿಗೆ ದಾಂಪತ್ಯ ಜೀವನದಲ್ಲಿ ಸಲ್ಲತಕ್ಕದ್ದನ್ನೆಲ್ಲ ಸಲ್ಲಿಸಲಿ. 4 ಹೆಂಡತಿಗೆ ತನ್ನ ಸ್ವಂತ ದೇಹದ ಮೇಲೆ ಅಧಿಕಾರವಿಲ್ಲ. ಆಕೆಯ ಗಂಡನಿಗೆ ಆಕೆಯ ದೇಹದ ಮೇಲೆ ಅಧಿಕಾರವಿದೆ. ಅದೇರೀತಿ, ಗಂಡನಿಗೆ ತನ್ನ ಸ್ವಂತ ದೇಹದ ಮೇಲೆ ಅಧಿಕಾರವಿಲ್ಲ. ಅವನ ಹೆಂಡತಿಗೆ ಅವನ ದೇಹದ ಮೇಲೆ ಅಧಿಕಾರವಿದೆ. 5 ಆದ್ದರಿಂದ ಗಂಡ ಮತ್ತು ಹೆಂಡತಿ ಒಬ್ಬರಿಗೊಬ್ಬರು ದಾಂಪತ್ಯ ಕರ್ತವ್ಯಗಳನ್ನು ನೆರವೇರಿಸಲು ನಿರಾಕರಿಸಬಾರದು. ಅವರು ತಮ್ಮ ಸಮಯವನ್ನು ಪ್ರಾರ್ಥನೆಯಲ್ಲಿ ವಿನಿಯೋಗಿಸುವುದಕ್ಕಾಗಿ ಸ್ವಲ್ಪಕಾಲ ಲೈಂಗಿಕ ಸಂಬಂಧದಿಂದ ದೂರವಿರಬಹುದು. ಆದರೆ ಅದಕ್ಕೆ ಪರಸ್ಪರ ಸಮ್ಮತಿಯಿರಬೇಕು. ಬಳಿಕ ಮತ್ತೆ ಒಂದಾಗಬೇಕು, ಇಲ್ಲವಾದರೆ ನಿಮ್ಮ ಬಲಹೀನತೆಯನ್ನು ಕಂಡು ಸೈತಾನನು ಪಾಪಕ್ಕೆ ಪ್ರಚೋಧಿಸಬಹುದು. 6 ಸ್ವಲ್ಪಕಾಲ ಅಗಲಿ ದೂರವಿರುವುದಕ್ಕೆ ಅನುಮತಿ ಕೊಡಲು ನಾನು ಇದನ್ನು ಹೇಳುತ್ತಿದ್ದೇನೆ. ಇದು ಆಜ್ಞೆಯಲ್ಲ. 7 ಎಲ್ಲಾ ಜನರು ನಮ್ಮಂತೆ ಇರಬೇಕೆಂದು ನಮ್ಮ ಅಭಿಲಾಷೆ. ಆದರೆ ಪ್ರತಿಯೊಬ್ಬ ವ್ಯಕ್ತಿಯು ದೇವರಿಂದ ತನ್ನದೇ ಆದ ವರವನ್ನು ಹೊಂದಿದ್ದಾನೆ. ಒಬ್ಬ ವ್ಯಕ್ತಿಗೆ ಒಂದು ವರವಿದ್ದರೆ ಮತ್ತೊಬ್ಬನಿಗೆ ಇನ್ನೊಂದು ವರವಿದೆ.
8 ವಿವಾಹವಾಗಿಲ್ಲದ ಜನರಿಗೆ ಮತ್ತು ವಿಧವೆಯರಿಗೆ ನಾನು ಹೇಳುವುದೇನೆಂದರೆ: ಅವರು ನನ್ನಂತೆ ಒಬ್ಬಂಟಿಗರಾಗಿ ಇರುವುದೇ ಅವರಿಗೆ ಒಳ್ಳೆಯದು. 9 ಆದರೆ ಅವರು ತಮ್ಮ ದೇಹಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲಾಗದಿದ್ದರೆ, ಅವರು ಮದುವೆಯಾಗಬೇಕು. ಲೈಂಗಿಕ ಆಸೆಯಿಂದ ಬೆಂದು ಹೋಗುವುದಕ್ಕಿಂತಲೂ ಮದುವೆ ಮಾಡಿಕೊಳ್ಳುವುದೇ ಉತ್ತಮವಾಗಿದೆ.
10 ಮದುವೆಯಾಗಿರುವವರಿಗೆ ನಾನು ಈ ಆಜ್ಞೆಯನ್ನು ಕೊಡುತ್ತೇನೆ. (ಈ ಆಜ್ಞೆಯು ನನ್ನದಲ್ಲ. ಪ್ರಭುವಿನದು.) ಹೆಂಡತಿಯು ತನ್ನ ಗಂಡನನ್ನು ಬಿಟ್ಟುಬಿಡಬಾರದು. 11 ಹೆಂಡತಿಯು ತನ್ನ ಗಂಡನನ್ನು ಬಿಟ್ಟುಬಿಟ್ಟರೆ ಆಕೆಯು ಮತ್ತೆ ಮದುವೆ ಮಾಡಿಕೊಳ್ಳಕೂಡದು, ಇಲ್ಲವಾದರೆ ಆಕೆ ತನ್ನ ಗಂಡನ ಸಂಗಡ ಮತ್ತೆ ಒಂದಾಗಬೇಕು. ಇದೇ ರೀತಿ, ಗಂಡನು, ತನ್ನ ಹೆಂಡತಿಯನ್ನು ಬಿಟ್ಟುಬಿಡಬಾರದು.
12 ಉಳಿದೆಲ್ಲ ಜನರ ವಿಷಯದಲ್ಲಿ ನಾನು ಹೇಳುವುದೇನೆಂದರೆ (ಈ ಸಂಗತಿಗಳನ್ನು ಹೇಳುತ್ತಿರುವವನು ನಾನೇ ಹೊರತು ಪ್ರಭುವಲ್ಲ.) ಕ್ರಿಸ್ತನಲ್ಲಿ ಸಹೋದರನಾದ ಒಬ್ಬನಿಗೆ ಕ್ರಿಸ್ತ ವಿಶ್ವಾಸಿಯಲ್ಲದ ಹೆಂಡತಿಯಿದ್ದರೆ ಮತ್ತು ಆಕೆ ಅವನೊಂದಿಗೆ ಬಾಳ್ವೆಮಾಡಲು ಇಚ್ಛಿಸಿದರೆ ಅವನು ಆಕೆಗೆ ವಿವಾಹವಿಚ್ಛೇದನ ಕೊಡಕೂಡದು. 13 ಅದೇರೀತಿ, ಸ್ತ್ರೀಯೊಬ್ಬಳಿಗೆ ಕ್ರಿಸ್ತ ವಿಶ್ವಾಸಿಯಲ್ಲದ ಗಂಡನು ಇದ್ದರೆ ಮತ್ತು ಅವನು ಆಕೆಯೊಂದಿಗೆ ಬಾಳ್ವೆಮಾಡಲು ಇಚ್ಛಿಸಿದರೆ ಆಕೆ ಅವನಿಗೆ ವಿವಾಹವಿಚ್ಛೇದನ ಕೊಡಕೂಡದು. 14 ಕ್ರಿಸ್ತ ವಿಶ್ವಾಸಿಯಲ್ಲದ ಗಂಡನು ತನ್ನ ಕ್ರೈಸ್ತ ಹೆಂಡತಿಯ ಮೂಲಕ ಪವಿತ್ರನಾಗುತ್ತಾನೆ. ಅದೇರೀತಿ, ಕ್ರಿಸ್ತ ವಿಶ್ವಾಸಿಯಲ್ಲದ ಹೆಂಡತಿಯು ತನ್ನ ಕ್ರೈಸ್ತ ಗಂಡನ ಮೂಲಕ ಪವಿತ್ರಳಾಗುತ್ತಾಳೆ. ಇದು ಸತ್ಯವಾಗಿಲ್ಲದಿದ್ದರೆ, ನಿಮ್ಮ ಮಕ್ಕಳು ಪವಿತ್ರರಾಗುತ್ತಿರಲಿಲ್ಲ. ಆದರೆ ಈಗ ನಿಮ್ಮ ಮಕ್ಕಳು ಪವಿತ್ರರಾಗಿದ್ದಾರೆ.
15 ಆದರೆ ಕ್ರಿಸ್ತ ವಿಶ್ವಾಸಿಯಲ್ಲದ ವ್ಯಕ್ತಿಯು ಬಿಟ್ಟು ಹೋಗಲು ನಿರ್ಧರಿಸಿದರೆ, ಆ ವ್ಯಕ್ತಿಯು ಬಿಟ್ಟು ಹೋಗಲಿ. ಈ ರೀತಿ ಸಂಭವಿಸಿದರೆ, ಕ್ರೈಸ್ತ ಸಹೋದರನಾಗಲಿ ಕ್ರೈಸ್ತ ಸಹೋದರಿಯಾಗಲಿ ವಿವಾಹ ಬಂಧನದಿಂದ ಬಿಡುಗಡೆಯಾಗಿದ್ದಾರೆ. ದೇವರು ನಮ್ಮನ್ನು ಸಮಾಧಾನದ ಜೀವಿತಕ್ಕೆ ಕರೆದನು. 16 ಹೆಂಡತಿಯರೇ, ನೀವು ನಿಮ್ಮ ಗಂಡಂದಿರನ್ನು ರಕ್ಷಿಸಬಹುದು. ಗಂಡಂದಿರೇ, ನೀವು ನಿಮ್ಮ ಹೆಂಡತಿಯರನ್ನು ರಕ್ಷಿಸಬಹುದು. ಆದರೆ ಮುಂದೆ ಏನಾಗುವುದೋ ನಮಗೆ ಗೊತ್ತಿಲ್ಲ.
ದೇವರ ಕರೆಗೆ ತಕ್ಕಂತೆ ಜೀವಿಸಿರಿ
17 ಆದರೂ ದೇವರು ಪ್ರತಿಯೊಬ್ಬನಿಗೆ ಜೀವನದಲ್ಲಿ ಯಾವ ಸ್ಥಿತಿಯನ್ನು ನೇಮಿಸಿದ್ದಾನೋ ಅಂದರೆ ದೇವರು ನಿಮ್ಮನ್ನು ಕರೆದಾಗ ನೀವು ಯಾವ ಸ್ಥಿತಿಯಲ್ಲಿದ್ದಿರೋ ಅದೇ ಸ್ಥಿತಿಯಲ್ಲಿ ಮುಂದುವರಿಯಬೇಕು. ನಾನು ಎಲ್ಲಾ ಸಭೆಗಳಿಗೂ ಇದನ್ನೇ ಆಜ್ಞಾಪಿಸುತ್ತೇನೆ. 18 ದೇವರಿಂದ ಕರೆಯಲ್ಪಟ್ಟ ವ್ಯಕ್ತಿಯು ಮೊದಲೇ ಸುನ್ನತಿ ಮಾಡಿಸಿಕೊಂಡವನಾಗಿದ್ದರೆ, ಅವನು ಸುನ್ನತಿಯಿಲ್ಲದಂಥವನಾಗಬಾರದು. ದೇವರಿಂದ ಕರೆಯಲ್ಪಟ್ಟ ವ್ಯಕ್ತಿಯು ಸುನ್ನತಿಯನ್ನು ಹೊಂದಿಲ್ಲದವನಾಗಿದ್ದರೆ, ಅವನು ಸುನ್ನತಿಯನ್ನು ಮಾಡಿಸಿಕೊಳ್ಳಬಾರದು. 19 ಸುನ್ನತಿಯನ್ನು ಮಾಡಿಸಿಕೊಳ್ಳುವುದಾಗಲಿ ಮಾಡಿಸಿಕೊಳ್ಳದಿರುವುದಾಗಲಿ ಮುಖ್ಯವಲ್ಲ. ದೇವರ ಆಜ್ಞೆಗಳಿಗೆ ವಿಧೇಯರಾಗುವುದೇ ಮುಖ್ಯವಾದದ್ದು. 20 ದೇವರು ಕರೆದಾಗ ಪ್ರತಿಯೊಬ್ಬನು ಯಾವ ಸ್ಥಿತಿಯಲ್ಲಿದ್ದನೋ ಅದೇ ಸ್ಥಿತಿಯಲ್ಲಿ ಇರಬೇಕು. 21 ದೇವರು ನಿನ್ನನ್ನು ಕರೆದಾಗ ನೀನು ಗುಲಾಮನಾಗಿದ್ದರೆ, ಚಿಂತಿಸಬೇಡ. ಆದರೆ ನೀನು ಬಿಡುಗಡೆಯಾಗಲು ಸಾಧ್ಯವಿದ್ದರೆ, ಬಿಡುಗಡೆಯಾಗು. 22 ದೇವರು ಕರೆದಾಗ ಗುಲಾಮನಾಗಿದ್ದವನು ಪ್ರಭುವಿನಲ್ಲಿ ಬಿಡುಗಡೆಯಾಗಿದ್ದಾನೆ. ಅವನು ಪ್ರಭುವಿಗೆ ಸೇರಿದವನಾಗಿದ್ದಾನೆ. ಅದೇರೀತಿಯಲ್ಲಿ ದೇವರು ಕರೆದಾಗ ಸ್ವತಂತ್ರನಾಗಿದ್ದವನು ಈಗ ಕ್ರಿಸ್ತನ ಗುಲಾಮನಾಗಿದ್ದಾನೆ. 23 ನಿಮ್ಮನ್ನು ಕ್ರಯಕ್ಕೆ ಕೊಂಡುಕೊಳ್ಳಲಾಗಿದೆ. ಆದ್ದರಿಂದ ನೀವು ಮನುಷ್ಯರ ಗುಲಾಮರಾಗಬೇಡಿ. 24 ಸಹೋದರ ಸಹೋದರಿಯರೇ, ದೇವರು ನಿಮ್ಮನ್ನು ಕರೆದಾಗ ನಿಮ್ಮಲ್ಲಿ ಪ್ರತಿಯೊಬ್ಬರು ಯಾವ ಸ್ಥಿತಿಯಲ್ಲಿದ್ದಿರೋ ಅದೇ ಸ್ಥಿತಿಯಲ್ಲಿ ದೇವರೊಂದಿಗೆ ಹೊಸ ಜೀವನದಲ್ಲಿ ಮುಂದುವರಿಯಬೇಕು.
ಮದುವೆ ಮಾಡಿಕೊಳ್ಳುವುದರ ಬಗ್ಗೆ ಪ್ರಶ್ನೆಗಳು
25 ಮದುವೆಯಾಗಿಲ್ಲದ ಜನರ ಬಗ್ಗೆ ಈಗ ನಾನು ಬರೆಯುತ್ತೇನೆ. ಇದರ ಬಗ್ಗೆ ಪ್ರಭುವಿನಿಂದ ಬಂದ ಯಾವ ಆಜ್ಞೆಯೂ ನನ್ನಲ್ಲಿಲ್ಲ. ಆದರೆ ನಾನು ನನ್ನ ಅಭಿಪ್ರಾಯವನ್ನು ನಿಮಗೆ ಕೊಡುತ್ತೇನೆ. ನಾನು ಪ್ರಭುವಿನಿಂದ ಕರುಣೆಯನ್ನು ಹೊಂದಿಕೊಂಡಿರುವುದರಿಂದ ನಂಬಿಕೆಗೆ ಅರ್ಹನಾಗಿದ್ದೇನೆ. 26 ಇದು ಕಷ್ಟಕಾಲವಾಗಿದೆ. ಆದ್ದರಿಂದ, ನೀವು ಯಾವ ಸ್ಥಿತಿಯಲ್ಲಿದ್ದೀರೋ ಅದೇ ಸ್ಥಿತಿಯಲ್ಲಿರುವುದು ಒಳ್ಳೆಯದೆಂಬುದು ನನ್ನ ಆಲೋಚನೆ. 27 ನಿನಗೆ ಹೆಂಡತಿಯಿದ್ದರೆ, ಆಕೆಯಿಂದ ಬಿಡುಗಡೆ ಹೊಂದಲು ಪ್ರಯತ್ನಿಸಬೇಡ. ನಿನಗೆ ಮದುವೆಯಾಗಿಲ್ಲದಿದ್ದರೆ, ಹೆಂಡತಿಯನ್ನು ಹುಡುಕಲು ಪ್ರಯತ್ನಿಸಬೇಡ. 28 ಆದರೆ ನೀನು ಮದುವೆಯಾಗಲು ನಿರ್ಧರಿಸಿದರೆ, ಅದು ಪಾಪವೇನಲ್ಲ. ಮದುವೆಯಾಗಿಲ್ಲದ ಹುಡುಗಿಯು ಮದುವೆಯಾಗುವುದು ಪಾಪವಲ್ಲ. ಆದರೆ ಮದುವೆಯಾಗುವ ಜನರಿಗೆ ಈ ಲೋಕದಲ್ಲಿ ಕಷ್ಟವಿದೆ. ನೀವು ಈ ಕಷ್ಟದಿಂದ ವಿಮುಕ್ತರಾಗಿರಬೇಕೆಂಬುದು ನನ್ನ ಅಪೇಕ್ಷೆಯಾಗಿದೆ.
29 ಸಹೋದರ ಸಹೋದರಿಯರೇ, ನನ್ನ ಅಭಿಪ್ರಾಯ ಇದು: ನಮಗೆ ಹೆಚ್ಚು ಸಮಯ ಉಳಿದಿಲ್ಲ. ಆದ್ದರಿಂದ, ಹೆಂಡತಿಯರನ್ನು ಹೊಂದಿರುವ ಜನರು ಹೆಂಡತಿಯರಿಲ್ಲದವರಂತೆ ಪ್ರಭುವಿನ ಸೇವೆಗಾಗಿ ತಮ್ಮ ಸಮಯವನ್ನು ಉಪಯೋಗಿಸಬೇಕು. 30 ದುಃಖದಿಂದಿರುವ ಜನರು ದುಃಖವಿಲ್ಲದವರಂತೆ ಜೀವಿಸಬೇಕು. ಸಂತೋಷದಿಂದ ಇರುವ ಜನರು ಸಂತೋಷವಿಲ್ಲದ ಜನರಂತೆ ಜೀವಿಸಬೇಕು. ವಸ್ತುಗಳನ್ನು ಕೊಂಡುಕೊಳ್ಳುವ ಜನರು ಏನೂ ಇಲ್ಲದವರಂತೆ ಜೀವಿಸಬೇಕು. 31 ಈ ಲೋಕದ ವಸ್ತುಗಳನ್ನು ಉಪಯೋಗಿಸುವ ಜನರು ತಮಗೆ ಆ ವಸ್ತುಗಳು ಮುಖ್ಯವಲ್ಲವೆಂಬಂತೆ ಜೀವಿಸಬೇಕು. ಏಕೆಂದರೆ, ಈ ಲೋಕದ ಇಂದಿನ ಸ್ಥಿತಿಯು ಬಹು ಬೇಗನೆ ಗತಿಸಿಹೋಗುವುದು.
32 ನೀವು ಚಿಂತೆ ಇಲ್ಲದೆ ಇರಬೇಕೆಂಬುದೇ ನನ್ನ ಬಯಕೆಯಾಗಿದೆ. ಮದುವೆಯಾಗಿಲ್ಲದ ವ್ಯಕ್ತಿಯು ಪ್ರಭುವಿನ ಸೇವೆಯಲ್ಲಿ ನಿರತನಾಗಿರುತ್ತಾನೆ. ಅವನು ಪ್ರಭುವನ್ನು ಮೆಚ್ಚಿಸಲು ಪ್ರಯತ್ನಿಸುತ್ತಿರುತ್ತಾನೆ. 33 ಆದರೆ ಮದುವೆಯಾಗಿರುವ ವ್ಯಕ್ತಿಯು ಈ ಲೋಕದ ಕಾರ್ಯಗಳಲ್ಲಿ ನಿರತನಾಗಿರುತ್ತಾನೆ. ಅವನು ತನ್ನ ಹೆಂಡತಿಯನ್ನು ಮೆಚ್ಚಿಸಲು ಪ್ರಯತ್ನಿಸುತ್ತಿರುತ್ತಾನೆ. 34 ಅವನು ತನ್ನ ಹೆಂಡತಿಯನ್ನು ಮತ್ತು ಪ್ರಭುವನ್ನು ಮೆಚ್ಚಿಸುವುದರ ಬಗ್ಗೆ ಆಲೋಚಿಸಬೇಕಾಗುತ್ತದೆ. ಮದುವೆಯಾಗಿಲ್ಲದ ಸ್ತ್ರೀಯಾಗಲಿ ಹುಡುಗಿಯಾಗಲಿ ಪ್ರಭುವಿನ ಸೇವೆಯಲ್ಲಿ ನಿರತಳಾಗಿರುತ್ತಾಳೆ. ಆಕೆ ತನ್ನ ದೇಹ ಮತ್ತು ಆತ್ಮಗಳನ್ನು ಸಂಪೂರ್ಣವಾಗಿ ಪ್ರಭುವಿಗೆ ಕೊಡಲು ಬಯಸುತ್ತಾಳೆ. ಆದರೆ ಮದುವೆಯಾದ ಸ್ತ್ರೀಯು ಈ ಲೋಕದ ಕಾರ್ಯಗಳಲ್ಲಿ ನಿರತಳಾಗಿರುತ್ತಾಳೆ. ಆಕೆ ತನ್ನ ಗಂಡನನ್ನು ಮೆಚ್ಚಿಸಲು ಪ್ರಯತ್ನಿಸುತ್ತಿರುತ್ತಾಳೆ. 35 ನಿಮಗೆ ಸಹಾಯವಾಗಲೆಂದು ಈ ಸಂಗತಿಗಳನ್ನು ಹೇಳುತ್ತಿದ್ದೇನೆ. ನಾನು ನಿಮ್ಮನ್ನು ನಿಯಂತ್ರಿಸುವುದಕ್ಕೆ ಪ್ರಯತ್ನಿಸುತ್ತಿಲ್ಲ. ಆದರೆ ನೀವು ಸರಿಯಾದ ಮಾರ್ಗದಲ್ಲಿ ಜೀವಿಸಬೇಕೆಂಬುದೇ ನನ್ನ ಬಯಕೆಯಾಗಿದೆ. ನೀವು ನಿಮ್ಮ ಸಮಯವನ್ನು ಬೇರೆ ಕಾರ್ಯಗಳಿಗೆ ಕೊಡದೆ ನಿಮ್ಮನ್ನು ಸಂಪೂರ್ಣವಾಗಿ ಪ್ರಭುವಿಗೆ ಅರ್ಪಿಸಿಕೊಳ್ಳಬೇಕೆಂಬುದು ನನ್ನ ಅಪೇಕ್ಷೆಯಾಗಿದೆ.
36 ತನ್ನ ಮಗಳ (ಕನ್ನಿಕೆಯ) ಮದುವೆಯ ವಯಸ್ಸು ಮೀರಿ ಹೋಗುವಂತೆ ಬಿಟ್ಟುಕೊಡುವುದು ಒಳ್ಳೆಯದಲ್ಲವೆಂದೂ, ಆಕೆಗೆ ಮದುವೆ ಮಾಡಿಸುವುದು ಅವಶ್ಯಕವೆಂದೂ ಒಬ್ಬನು ಭಾವಿಸಿದರೆ, ಅವನು ತನ್ನ ಇಚ್ಛೆಗನುಸಾರವಾಗಿ ಮಾಡಲಿ. ಅವನು ಅವರಿಗೆ ಮದುವೆ ಮಾಡಿಕೊಡಲಿ. ಅದು ಪಾಪವಲ್ಲ. 37 ಆದರೆ ಮತ್ತೊಬ್ಬನು ಮದುವೆಯ ಅಗತ್ಯವಿಲ್ಲವೆಂದು ತನ್ನ ಮನಸ್ಸಿನಲ್ಲಿ ದೃಢವಾಗಿ ನಿಶ್ಚಯಿಸಿಕೊಂಡಿದ್ದರೆ ಅವನು ತನ್ನ ಇಚ್ಛೆಗನುಸಾರವಾಗಿ ಮಾಡಲು ಸ್ವತಂತ್ರನಾಗಿದ್ದಾನೆ. ಅವನು ತನ್ನ ಮಗಳಿಗೆ ಮದುವೆ ಮಾಡುವುದಿಲ್ಲವೆಂದು ತನ್ನ ಹೃದಯದಲ್ಲಿ ನಿರ್ಧರಿಸಿದ್ದರೆ ಅವನು ಒಳ್ಳೆಯದನ್ನೇ ಮಾಡುತ್ತಿದ್ದಾನೆ. 38 ಆದ್ದರಿಂದ ಒಬ್ಬನು ತನ್ನ ಮಗಳಿಗೆ ಮದುವೆ ಮಾಡಿಕೊಡುವುದು ಒಳ್ಳೆಯದಾಗಿದೆ. ಅಲ್ಲದೆ ತನ್ನ ಮಗಳಿಗೆ ಮದುವೆ ಮಾಡಿಕೊಡದಿರುವುದು ಮತ್ತಷ್ಟು ಒಳ್ಳೆಯದಾಗಿದೆ.[a]
39 ಗಂಡನು ಬದುಕಿರುವ ತನಕ ಹೆಂಡತಿಯು ಅವನೊಂದಿಗೆ ಬಾಳ್ವೆ ನಡೆಸಬೇಕು. ಆದರೆ ಗಂಡನು ಸತ್ತುಹೋದರೆ, ಆ ಸ್ತ್ರೀಯು ತಾನು ಬಯಸಿದವರನ್ನು ಮದುವೆಯಾಗಲು ಸ್ವತಂತ್ರಳಾಗಿದ್ದಾಳೆ. ಆದರೆ ಅವನು ಪ್ರಭುವನ್ನು ಅನುಸರಿಸುವವನಾಗಿರಬೇಕು. 40 ಆಕೆಯು ಮತ್ತೆ ಮದುವೆ ಮಾಡಿಕೊಳ್ಳದಿದ್ದರೆ ಹೆಚ್ಚು ಸಂತೋಷದಿಂದಿರುವಳು. ಇದು ನನ್ನ ಅಭಿಪ್ರಾಯವಾಗಿದೆ. ದೇವರಾತ್ಮನು ನನ್ನೊಳಗಿದ್ದಾನೆಂದು ನಾನು ನಂಬುತ್ತೇನೆ.
ಜೆರುಸಲೇಮಿನ ಜನರು ಚದುರಿಹೋಗುವ ಸೂಚನೆ
5 1-2 “ನರಪುತ್ರನೇ, ಈ ಕಾರ್ಯಗಳನ್ನು ಮುತ್ತಿಗೆಯ ಕಾಲ ಮುಗಿಯಿತೆಂದು ಸೂಚಿಸುವ ಅವಧಿಯ ನಂತರ ಮಾಡಬೇಕು. ನೀನು ಕ್ಷೌರಕನ ಹರಿತವಾದ ಕ್ಷೌರಕತ್ತಿಯನ್ನು ತೆಗೆದುಕೊಳ್ಳಬೇಕು. ನಿನ್ನ ತಲೆಯ ಕೂದಲನ್ನೂ ಗಡ್ಡವನ್ನೂ ಬೋಳಿಸು. ಕೂದಲನ್ನು ತ್ರಾಸಿನಲ್ಲಿ ಹಾಕಿ ಅದನ್ನು ತೂಕ ಮಾಡು. ಆ ಕೂದಲುಗಳನ್ನು ಮೂರು ಪಾಲಾಗಿ ಮಾಡು. ಅದರ ಒಂದು ಪಾಲನ್ನು ನೀನು ಚಿತ್ರಿಸಿದ್ದ ಇಟ್ಟಿಗೆಯ ಮೇಲೆ ಹಾಕು. ಆ ನಗರದ ಮೇಲೆ ಕೂದಲನ್ನು ಸುಟ್ಟುಬಿಡು. ಇದು, ಜನರಲ್ಲಿ ಕೆಲವು ಮಂದಿ ನಗರದಲ್ಲಿ ಸಾಯುವರು ಎಂಬುದಕ್ಕೆ ಗುರುತಾಗಿದೆ. ನೀನು ಕೂದಲಲ್ಲಿ ಮೂರನೆ ಒಂದು ಭಾಗವನ್ನು ತೆಗೆದುಕೊಂಡು ಅದನ್ನು ಪಟ್ಟಣದ ಹೊರಗೆ ಸುತ್ತಲೆಲ್ಲಾ ನಿನ್ನ ಕ್ಷೌರಕತ್ತಿಯಿಂದ ಕತ್ತರಿಸು. ಕೆಲವು ಜನರು ಪಟ್ಟಣದ ಹೊರಗೆ ಸಾಯುತ್ತಾರೆ ಎಂಬುದನ್ನು ಇದು ಸೂಚಿಸುತ್ತದೆ. ಬಳಿಕ ನಿನ್ನ ಕೂದಲಿನ ಉಳಿದ ಮೂರನೆಯ ಒಂದು ಭಾಗವನ್ನು ಗಾಳಿಯಲ್ಲಿ ತೂರಿಬಿಡು. ಗಾಳಿಯು ಅದನ್ನು ಬಹುದೂರದವರೆಗೆ ಬಡಿದುಕೊಂಡು ಹೋಗಲಿ. ಇದೇ ರೀತಿಯಲ್ಲಿ ನಾನು ಖಡ್ಗವನ್ನು ಇರಿದು ಅವರನ್ನು ಬಹುದೂರದ ದೇಶಗಳಿಗೆ ಅಟ್ಟಿಸಿ ಬಿಡುವೆನು. 3 ಆದರೆ ನೀನು ಅದರಿಂದ ಕೆಲವು ಕೂದಲನ್ನು ತೆಗೆದು ನಿನ್ನ ಮೇಲಂಗಿಯ ಅಂಚಿನಲ್ಲಿ ಸುತ್ತಿಡು. ನಾನು ನನ್ನ ಜನರಲ್ಲಿ ಕೆಲವರನ್ನು ರಕ್ಷಿಸುವೆನು ಎಂಬುದಕ್ಕೆ ಇದು ಗುರುತಾಗಿದೆ. 4 ಬಳಿಕ ಕೂದಲಲ್ಲಿ ಸ್ವಲ್ಪವನ್ನು ಮತ್ತೆ ತೆಗೆದುಕೊಂಡು ಬೆಂಕಿಯಲ್ಲಿ ಹಾಕಿ ಸುಟ್ಟುಬಿಡು. ಅಲ್ಲಿಂದ ಬೆಂಕಿಯು ಹಬ್ಬಿ ಇಡೀ ಇಸ್ರೇಲ್ ಜನಾಂಗವನ್ನು ನಾಶಮಾಡುವುದು.”
5 ಆಮೇಲೆ ನನ್ನ ಒಡೆಯನಾದ ಯೆಹೋವನು ಹೀಗೆಂದನು: “ಆ ಇಟ್ಟಿಗೆಯು ಜೆರುಸಲೇಮಿನ ಚಿತ್ರ. ನಾನು ಜೆರುಸಲೇಮನ್ನು ಇತರ ಜನಾಂಗಗಳ ಮಧ್ಯದಲ್ಲಿ ನೆಲೆಗೊಳಿಸಿದ್ದೇನೆ. ಆಕೆಯ ಸುತ್ತಲೂ ಬೇರೆ ದೇಶಗಳಿವೆ. 6 ಜೆರುಸಲೇಮಿನ ನಿವಾಸಿಗಳು ನನ್ನ ಆಜ್ಞೆಗಳಿಗೆ ದಂಗೆ ಎದ್ದಿದ್ದಾರೆ. ಅವರು ಇತರ ಜನಾಂಗಗಳಿಗಿಂತ ಕೆಟ್ಟವರು. ಅವರು ತಮ್ಮ ಸುತ್ತಲಿರುವ ಬೇರೆ ದೇಶಗಳಿಗಿಂತ ಹೆಚ್ಚಾಗಿ ನನ್ನ ಕಟ್ಟಳೆಗಳನ್ನು ಉಲ್ಲಂಬಿಸಿದ್ದಾರೆ. ಅವರು ನನ್ನ ಆಜ್ಞೆಗಳನ್ನು ತಿರಸ್ಕರಿಸಿದರು. ಅವರು ನನ್ನ ಕಟ್ಟಳೆಗಳನ್ನು ಅನುಸರಿಸಲಿಲ್ಲ.”
7 ಆದ್ದರಿಂದ ನನ್ನ ಒಡೆಯನಾದ ಯೆಹೋವನು ಹೇಳಿದ್ದೇನೆಂದರೆ: “ನೀವು ಸುತ್ತಲಿರುವ ಜನಾಂಗಗಳಿಗಿಂತ ಹೆಚ್ಚು ಕೆಡುಕನ್ನು ಮಾಡಿದ್ದೀರಿ. ನೀವು ನನ್ನ ಆಜ್ಞೆಗಳಿಗೆ ವಿಧೇಯರಾಗಲಿಲ್ಲ; ನನ್ನ ಕಟ್ಟಳೆಗಳನ್ನು ಅನುಸರಿಸಲಿಲ್ಲ. ನಿಮ್ಮ ಸುತ್ತಲಿರುವ ಜನಾಂಗಗಳ ನಿಯಮಗಳನ್ನೂ ಅನುಸರಿಸಲಿಲ್ಲ.” 8 ಆದ್ದರಿಂದ ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ನಾನು ನಿಮಗೆ ವಿರೋಧವಾಗಿದ್ದೇನೆ. ಬೇರೆ ಜನರ ಕಣ್ಣೆದುರಿನಲ್ಲಿಯೇ ನಿಮ್ಮನ್ನು ದಂಡಿಸುವೆನು. 9 ನಿಮ್ಮ ಎಲ್ಲಾ ಅಸಹ್ಯಕೃತ್ಯಗಳ ದೆಸೆಯಿಂದ ನಾನು ಹಿಂದೆಂದೂ ಮಾಡಿಲ್ಲದ, ಮುಂದೆಂದೂ ಮಾಡದ ಸಂಗತಿಗಳನ್ನು ನಿಮಗೆ ಬರಮಾಡುವೆನು. 10 ಜೆರುಸಲೇಮಿನ ಜನರು ಹಸಿವೆ ತಾಳಲಾರದೆ ತಮ್ಮ ಸ್ವಂತ ಮಕ್ಕಳನ್ನು ಕಬಳಿಸುವರು ಮತ್ತು ಮಕ್ಕಳು ತಮ್ಮ ತಂದೆತಾಯಿಗಳನ್ನೇ ತಿನ್ನುವರು. ಬೇರೆಬೇರೆ ರೀತಿಯಲ್ಲಿ ನಾನು ನಿಮ್ಮನ್ನು ಶಿಕ್ಷಿಸುವೆನು. ಜೀವದಿಂದುಳಿದವರನ್ನು ನಾನು ಗಾಳಿಗೆ ತೂರಿಬಿಡುವೆನು.”
11 ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ಜೆರುಸಲೇಮೇ, ನನ್ನ ಜೀವದಾಣೆ! ನಾನು ನಿನ್ನನ್ನು ಶಿಕ್ಷಿಸುವೆನು. ಯಾಕೆಂದರೆ ನೀನು ನನ್ನ ಪವಿತ್ರ ಸ್ಥಳಕ್ಕೆ ಮಹತ್ವವನ್ನು ಕೊಡಲಿಲ್ಲ. ಅಸಹ್ಯವಾದ ಮತ್ತು ಗಾಬರಿಗೊಳಿಸುವ ನಿನ್ನ ಎಲ್ಲಾ ಕಾರ್ಯಗಳಿಂದ ನೀನು ಅದನ್ನು ಅಶುದ್ಧಗೊಳಿಸಿರುವೆ. ನಾನು ನಿನಗೆ ಕನಿಕರತೋರಿಸದೆ ಶಿಕ್ಷಿಸುವೆನು. ನಿನ್ನ ಮೇಲೆ ನನಗೆ ದಯೆಯಿರದು. 12 ನಿನ್ನ ಜನರಲ್ಲಿ ಮೂರನೆ ಒಂದು ಭಾಗ ಪಟ್ಟಣದೊಳಗೆ ರೋಗದಿಂದಲೂ ಹಸಿವಿನಿಂದಲೂ ಸಾಯುವರು. ಮೂರರಲ್ಲಿ ಇನ್ನೊಂದು ಭಾಗ ಪಟ್ಟಣದ ಹೊರಗೆ ರಣರಂಗದಲ್ಲಿ ಸಾಯುವರು. ಅನಂತರ ನಾನು ನನ್ನ ಖಡ್ಗವನ್ನು ಇರಿದು ಉಳಿದವರನ್ನು ಬಹುದೂರದ ದೇಶಕ್ಕೆ ಅಟ್ಟಿಬಿಡುವೆನು. 13 ಆಗಲೇ ನನ್ನ ಕೋಪವು ಶಮನವಾಗುವುದು. ನಾನು ಅವರ ವಿರುದ್ಧವಾಗಿ ನನ್ನ ಕೋಪವನ್ನು ಬಳಸಿ ತೃಪ್ತನಾಗುವೆನು. ನನ್ನ ಕೋಪವನ್ನು ಸುರಿದಾಗ ಯೆಹೋವನಾದ ನಾನೇ ಅವರೊಂದಿಗೆ ಕೋಪದಿಂದ ಮಾತಾಡಿದೆನೆಂದು ಅವರಿಗೆ ಗೊತ್ತಾಗುವುದು.”
14 ದೇವರು ಹೇಳಿದ್ದೇನೆಂದರೆ, “ಜೆರುಸಲೇಮೇ, ನಾನು ನಿನ್ನನ್ನು ನಾಶಮಾಡುವೆನು. ನೀನು ಕಲ್ಲುಗಳ ರಾಶಿಯಾಗಿ ಹೋಗುವಿ. ನಿನ್ನ ಸುತ್ತಲೂ ಇರುವ ಜನಾಂಗಗಳು ನಿನ್ನನ್ನು ಗೇಲಿ ಮಾಡುತ್ತವೆ. ನಿನ್ನನ್ನು ದಾಟಿಹೋಗುವ ಪ್ರತಿಯೊಬ್ಬನೂ ನಿನ್ನನ್ನು ಕಂಡು ಹಾಸ್ಯಮಾಡುವನು. 15 ನಿನ್ನ ಸುತ್ತಲೂ ಇರುವ ಜನಾಂಗಗಳು ನಿನಗೆ ಅವಮಾನ ಮಾಡಿ ಗೇಲಿ ಮಾಡುತ್ತವೆ. ನೀನು ಅವರಿಗೆ ಎಚ್ಚರಿಕೆಯಾಗಿಯೂ ಭಯೋತ್ಪಾದಕಕಾರಿಯಾಗಿಯೂ ಇರುವಿ. ನಾನು ನನ್ನ ಮಹಾಕೋಪದಿಂದ ನಿನ್ನನ್ನು ದಂಡಿಸಿದಾಗ ಇದು ಸಂಭವಿಸುವುದು. ಯೆಹೋವನಾದ ನಾನೇ ಇದನ್ನು ಹೇಳಿದ್ದೇನೆ. 16 ಬರಗಾಲವೆಂಬ ಮರಣಕರವಾದ ಮತ್ತು ನಾಶಕರವಾದ ಬಾಣಗಳಿಂದ ನಾನು ನಿನ್ನನ್ನು ನಾಶಗೊಳಿಸುವದಕ್ಕಾಗಿಯೇ ಹೊಡೆಯುತ್ತೇನೆ. ನಾನು ನಿನ್ನ ದೇಶಕ್ಕೆ ಕ್ಷಾಮದ ಮೇಲೆ ಕ್ಷಾಮವನ್ನು ಬರಮಾಡುವೆನು ಮತ್ತು ನಿನ್ನ ಆಹಾರ ಸರಬರಾಜನ್ನು ನಿಲ್ಲಿಸುವೆನು. 17 ನಾನು ನಿನಗೆ ವಿರುದ್ಧವಾಗಿ ಬರಗಾಲಗಳನ್ನು ಮತ್ತು ಕ್ರೂರಪ್ರಾಣಿಗಳನ್ನು ಕಳುಹಿಸುವೆನು. ಅವು ನಿನ್ನ ಮಕ್ಕಳನ್ನು ಕೊಲ್ಲುತ್ತವೆ. ನಿನ್ನನ್ನು ಕೊಲ್ಲುವುದಕ್ಕಾಗಿ ರೋಗಗಳನ್ನು, ಹಿಂಸೆಯನ್ನು ಮತ್ತು ಯುದ್ಧಗಳನ್ನು ಕಳುಹಿಸುವೆನು. ಯೆಹೋವನಾದ ನಾನೇ ಇದನ್ನು ಹೇಳಿದ್ದೇನೆ. ಮತ್ತು ಇದು ನೆರವೇರುತ್ತದೆ.”
ಎರಡನೆ ಭಾಗ
(ಕೀರ್ತನೆಗಳು 42–72)
ರಚನೆಗಾರರು: ಕೋರಹೀಯರು.
42 ದೇವರೇ, ಬಾಯಾರಿದ ಜಿಂಕೆಯು ನೀರಿನ ತೊರೆಗಳನ್ನು ಬಯಸುವಂತೆಯೇ
ನನ್ನ ಆತ್ಮವು ನಿನ್ನನ್ನು ಬಯಸುತ್ತದೆ.
2 ನನ್ನ ಆತ್ಮವು ಜೀವಸ್ವರೂಪನಾದ ದೇವರಿಗಾಗಿ ಬಾಯಾರಿದೆ.
ನಾನು ಯಾವಾಗ ಆತನನ್ನು ಸಂಧಿಸುವೆನು?
3 “ನಿನ್ನ ದೇವರು ಎಲ್ಲಿ?” ಎಂದು ನನ್ನ ವೈರಿಗಳು ಯಾವಾಗಲೂ ಗೇಲಿಮಾಡುವುದರಿಂದ
ಹಗಲಿರುಳು ಕಣ್ಣೀರೇ ನನಗೆ ಆಹಾರವಾಯಿತು.
4 ಆಗ ನಾನು, ಹಬ್ಬದ ಉತ್ಸಾಹದಲ್ಲಿ ಜನಸಮೂಹದೊಡನೆ ಹರ್ಷಿಸುತ್ತಾ
ಸ್ತುತಿಗೀತೆಗಳನ್ನು ಹಾಡುತ್ತಾ ಅವರನ್ನು ದೇವಾಲಯಕ್ಕೆ ಮುನ್ನಡೆಸುತ್ತಿದ್ದದ್ದನ್ನು
ನೆನಪಿಗೆ ತಂದುಕೊಂಡು ಹೃದಯದಲ್ಲಿ ಕೊರಗುವೆ.
5 ನನ್ನ ಆತ್ಮವೇ, ನೀನು ವ್ಯಸನದಿಂದಿರುವುದೇಕೆ?
ಗಲಿಬಿಲಿಗೊಂಡಿರುವುದೇಕೆ?
ದೇವರನ್ನು ನಿರೀಕ್ಷಿಸು;
ನನ್ನ ರಕ್ಷಕನೂ ದೇವರೂ ಆಗಿರುವ ಆತನನ್ನು ಸ್ತುತಿಸುತ್ತಲೇ ಇರುವೆನು.
6 ನನ್ನ ದೇವರೇ, ನಾನು ಕುಗ್ಗಿಹೋಗಿದ್ದೇನೆ.
ಆದ್ದರಿಂದ ಹೆರ್ಮೊನ್ ಪರ್ವತದಲ್ಲಿಯೂ ಜೋರ್ಡನ್ ನದಿಯ ಪ್ರದೇಶದಲ್ಲಿಯೂ
ಮಿಸ್ಸಾರ್ ಬೆಟ್ಟದಲ್ಲಿಯೂ ನಾನು ನಿನ್ನನ್ನು ಜ್ಞಾಪಿಸಿಕೊಳ್ಳುವೆನು.
7 ಜಲಪಾತದ ಘೋಷದಂತೆಯೂ
ಪ್ರವಾಹದ ಘರ್ಜನೆಯಂತೆಯೂ ಇಕ್ಕಟ್ಟುಗಳು ನನಗೆ ಬಂದಿವೆ.
ಸಮುದ್ರದ ಅಲೆಗಳಂತೆ
ದುಃಖವು ನನ್ನನ್ನು ಆವರಿಸಿಕೊಂಡಿದೆ.
8 ಹಗಲಲ್ಲಿ ಯೆಹೋವನು ನನಗೆ ನಿಜಪ್ರೀತಿಯನ್ನು ತೋರುವುದರಿಂದ
ಜೀವಸ್ವರೂಪನಾದ ಆತನಿಗೆ ಪ್ರತಿ ರಾತ್ರಿಯಲ್ಲಿಯೂ ನೂತನ ಕೀರ್ತನೆಯನ್ನು ಹಾಡುವೆ; ಆತನಲ್ಲಿ ಪ್ರಾರ್ಥಿಸುವೆ.
9 ನನ್ನ ಬಂಡೆಯಾದ ದೇವರಿಗೆ,
“ನೀನು ನನ್ನನ್ನು ಯಾಕೆ ಮರೆತುಬಿಟ್ಟೆ?
ನನ್ನ ಶತ್ರುಗಳ ಕ್ರೂರತೆಯಿಂದ ನಾನೇಕೆ ಸಂಕಟಪಡಬೇಕು?” ಎಂದು ಕೇಳುವೆ.
10 ನನ್ನ ವಿರೋಧಿಗಳು ಸತತವಾಗಿ,
“ನಿನ್ನ ದೇವರು ಎಲ್ಲಿ?” ಎಂದು ಕೇಳುವುದರಿಂದ ನನ್ನ ಮೂಳೆಗಳು ಮುರಿದಂತಾಗಿವೆ.
11 ನನ್ನ ಆತ್ಮವೇ, ನೀನು ವ್ಯಸನದಿಂದಿರುವುದೇಕೆ?
ಗಲಿಬಿಲಿಗೊಂಡಿರುವುದೇಕೆ?
ದೇವರನ್ನು ನಿರೀಕ್ಷಿಸು;
ನನ್ನ ರಕ್ಷಕನೂ ದೇವರೂ ಆಗಿರುವ ಆತನನ್ನು ಸ್ತುತಿಸುತ್ತಲೇ ಇರುವೆನು.
43 ದೇವರೇ, ನನ್ನನ್ನು ನಿರಪರಾಧಿಯೆಂದು ತೀರ್ಪು ನೀಡು.
ವ್ಯಾಜ್ಯದಲ್ಲಿ ನನ್ನ ಪರವಾಗಿಯೂ ಅನ್ಯ ಜನಾಂಗಗಳಿಗೆ ವಿರೋಧವಾಗಿಯೂ ವಾದಿಸು.
ಸುಳ್ಳುಗಾರರಿಂದಲೂ ಕೆಡುಕರಿಂದಲೂ ನನ್ನನ್ನು ರಕ್ಷಿಸು.
2 ದೇವರೇ, ನೀನೇ ನನಗೆ ಆಶ್ರಯಸ್ಥಾನವಾಗಿರುವೆ!
ನೀನು ನನ್ನನ್ನು ಯಾಕೆ ಕೈಬಿಟ್ಟಿರುವೆ?
ಶತ್ರು ಬಾಧೆಯಿಂದ ನಾನೇಕೆ
ದುಃಖಿಸುತ್ತಾ ಸಂಕಟಪಡಬೇಕು?
3 ನಿನ್ನ ಬೆಳಕೂ ಸತ್ಯವೂ ನನ್ನ ಮೇಲೆ ಪ್ರಕಾಶಿಸಲಿ.
ನಿನ್ನ ಬೆಳಕೂ ಸತ್ಯವೂ ನನಗೆ ಮಾರ್ಗದರ್ಶನ ನೀಡಲಿ.
ಅವು ನನ್ನನ್ನು ನಿನ್ನ ಪವಿತ್ರ ಪರ್ವತಕ್ಕೂ ನಿನ್ನ ನಿವಾಸಕ್ಕೂ ನಡೆಸುತ್ತವೆ.
4 ನನ್ನ ದೇವರೇ, ನಿನ್ನ ಯಜ್ಞವೇದಿಕೆಯ ಬಳಿಗೆ ಬರುವೆನು.
ನನ್ನ ಸಂತೋಷಕ್ಕೆ ನೀನೇ ಆಧಾರನಾಗಿರುವೆ.
ದೇವರೇ, ನನ್ನ ದೇವರೇ,
ಹಾರ್ಪ್‌ವಾದ್ಯವನ್ನು ಬಾರಿಸುತ್ತಾ ನಿನ್ನನ್ನು ಕೊಂಡಾಡುವೆನು.
5 ನನ್ನ ಆತ್ಮವೇ, ನೀನು ವ್ಯಸನದಿಂದಿರುವುದೇಕೆ?
ಗಲಿಬಿಲಿಗೊಂಡಿರುವುದೇಕೆ?
ದೇವರನ್ನು ನಿರೀಕ್ಷಿಸು;
ನನ್ನ ರಕ್ಷಕನೂ ದೇವರೂ ಆಗಿರುವ ಆತನನ್ನು ಸ್ತುತಿಸುತ್ತಲೇ ಇರುವೆನು.
Kannada Holy Bible: Easy-to-Read Version. All rights reserved. © 1997 Bible League International