M’Cheyne Bible Reading Plan
ಸಮುವೇಲನು ಬೆತ್ಲೆಹೇಮಿಗೆ ಹೋಗುವನು
16 ಯೆಹೋವನು ಸಮುವೇಲನಿಗೆ, “ನೀನು ಸೌಲನಿಗಾಗಿ ಎಷ್ಟುಕಾಲ ಶೋಕಿಸುವೆ? ನಾನು ಸೌಲನನ್ನು ಇಸ್ರೇಲರ ರಾಜತ್ವದಿಂದ ತಿರಸ್ಕರಿಸಿರುತ್ತೇನೆ. ನೀನು ಕೊಂಬಿನಲ್ಲಿ ಎಣ್ಣೆಯನ್ನು ತುಂಬಿಕೊಂಡು ಬಾ. ನಾನು ನಿನ್ನನ್ನು ಇಷಯನೆಂಬ ಮನುಷ್ಯನ ಬಳಿಗೆ ಕಳುಹಿಸುತ್ತೇನೆ. ಇಷಯನು ಬೆತ್ಲೆಹೇಮಿನಲ್ಲಿ ವಾಸಿಸುತ್ತಿದ್ದನು. ನಾನು ಅವನ ಮಕ್ಕಳಲ್ಲಿ ಒಬ್ಬನನ್ನು ಹೊಸ ರಾಜನನ್ನಾಗಿ ಆರಿಸಿದ್ದೇನೆ” ಎಂದು ಹೇಳಿದನು.
2 ಅದಕ್ಕೆ ಸಮುವೇಲನು, “ನಾನು ಹೊರಟರೆ ಸೌಲನಿಗೆ ಈ ಸುದ್ದಿಯು ತಿಳಿಯುತ್ತದೆ. ಆಗ ಅವನು ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತಾನೆ” ಎಂದನು.
ಯೆಹೋವನು, “ಬೆತ್ಲೆಹೇಮಿಗೆ ಹೋಗು. ನಿನ್ನೊಡನೆ ಒಂದು ಎಳೆಕರುವನ್ನು ತೆಗೆದುಕೊಂಡು ಹೋಗು. ‘ನಾನು ಯೆಹೋವನಿಗೆ ಯಜ್ಞವನ್ನರ್ಪಿಸಲು ಬಂದಿದ್ದೇನೆ’ ಎಂದು ಹೇಳು. 3 ಯಜ್ಞಕಾರ್ಯಕ್ಕೆ ಇಷಯನನ್ನು ಆಹ್ವಾನಿಸು. ಆ ಮೇಲೆ ನೀನು ಮಾಡಬೇಕಾದದ್ದನ್ನು ನಾನು ತೋರಿಸುತ್ತೇನೆ. ನಾನು ತೋರಿಸಿದ ಮನುಷ್ಯನಿಗೆ ನೀನು ಅಭಿಷೇಕವನ್ನು ಮಾಡಬೇಕು” ಎಂದು ಹೇಳಿದನು.
4 ಸಮುವೇಲನು ತನಗೆ ಯೆಹೋವನು ಹೇಳಿದಂತೆ ಮಾಡಿದನು. ಸಮುವೇಲನು ಬೆತ್ಲೆಹೇಮಿಗೆ ಹೋದನು. ಬೆತ್ಲೆಹೇಮಿನ ಹಿರಿಯರು ಭಯದಿಂದ ನಡುಗಿದರು. ಅವರು ಸಮುವೇಲನನ್ನು ಕಂಡು, “ನಿನ್ನ ಆಗಮನವು ಶುಭಕರವಾಗಿದೆಯೇ?” ಎಂದು ಕೇಳಿದರು.
5 ಸಮುವೇಲನು, “ಹೌದು, ಶುಭಕರವಾಗಿದೆ. ನಾನು ಯೆಹೋವನಿಗೆ ಯಜ್ಞವನ್ನು ಅರ್ಪಿಸಲು ಬಂದಿದ್ದೇನೆ. ನೀವೆಲ್ಲ ಸಿದ್ಧರಾಗಿ ಯಜ್ಞಕಾರ್ಯಕ್ಕಾಗಿ ನನ್ನೊಂದಿಗೆ ಬನ್ನಿ” ಎಂದು ಹೇಳಿದನು. ಸಮುವೇಲನು ಇಷಯನನ್ನೂ ಅವನ ಮಕ್ಕಳನ್ನೂ ಸಿದ್ಧಗೊಳಿಸಿದನು. ನಂತರ ಸಮುವೇಲನು ಅವರನ್ನು ಯಜ್ಞದಲ್ಲಿ ಭಾಗಿಗಳಾಗಲು ಆಹ್ವಾನಿಸಿದನು.
6 ಇಷಯನು ಮತ್ತು ಅವನ ಮಕ್ಕಳು ಬಂದಾಗ, ಸಮುವೇಲನು ಎಲೀಯಾಬನನ್ನು ನೋಡಿದನು. ಸಮುವೇಲನು ತನ್ನಲ್ಲೇ ಯೋಚಿಸುತ್ತಾ, “ಯೆಹೋವನು ಆಯ್ಕೆ ಮಾಡಿರುವವನು ನಿಜವಾಗಿಯೂ ಅವನೇ ಇರಬೇಕು” ಎಂದುಕೊಂಡನು.
7 ಆದರೆ ಯೆಹೋವನು ಸಮುವೇಲನಿಗೆ, “ಎಲೀಯಾಬನ ಎತ್ತರವನ್ನಾಗಲಿ ರೂಪವನ್ನಾಗಲಿ ಪರಿಗಣಿಸಬೇಡ. ಯಾಕೆಂದರೆ ನಾನು ಅವನನ್ನು ತಿರಸ್ಕರಿಸಿದ್ದೇನೆ. ಮನುಷ್ಯರಾದರೋ ಹೊರತೋರಿಕೆಯನ್ನು ಪರಿಗಣಿಸುತ್ತಾರೆ; ಯೆಹೋವನಾದರೋ ಹೊರತೋರಿಕೆಯನ್ನು ನೋಡದೆ ಹೃದಯವನ್ನೇ ನೋಡುವವನಾಗಿದ್ದಾನೆ” ಎಂದು ಹೇಳಿದನು.
8 ನಂತರ ಇಷಯನು ಎರಡನೆಯ ಮಗನಾದ ಅಬೀನಾದಾಬನನ್ನು ಕರೆದನು. ಅಬೀನಾದಾಬನು ಸಮುವೇಲನ ಹತ್ತಿರಕ್ಕೆ ಬಂದನು. ಸಮುವೇಲನು, “ಯೆಹೋವನು ಆರಿಸಿಕೊಂಡಿರುವ ವ್ಯಕ್ತಿ ಇವನಲ್ಲ” ಎಂದು ಹೇಳಿದನು.
9 ಅನಂತರ ಇಷಯನು ಶಮ್ಮನನ್ನು ಸಮುವೇಲನ ಬಳಿಗೆ ಕಳುಹಿಸಿದನು. ಆದರೆ ಸಮುವೇಲನು, “ಯೆಹೋವನು ಇವನನ್ನೂ ಆರಿಸಲಿಲ್ಲ” ಎಂದನು.
10 ಇಷಯನು ತನ್ನ ಏಳು ಜನ ಮಕ್ಕಳನ್ನು ಸಮುವೇಲನಿಗೆ ತೋರಿಸಿದನು. ಆದರೆ ಸಮುವೇಲನು, “ಯೆಹೋವನು ಇವರಲ್ಲಿ ಯಾರೊಬ್ಬನನ್ನೂ ಆರಿಸಿಕೊಳ್ಳಲಿಲ್ಲ” ಎಂದನು.
11 ನಂತರ ಸಮುವೇಲನು ಇಷಯನನ್ನು, “ನಿನಗೆ ಇರುವ ಮಕ್ಕಳು ಇಷ್ಟೆಯೋ?” ಎಂದು ಕೇಳಿದನು.
ಇಷಯನು, “ಇಲ್ಲ, ನನಗೆ ಇನ್ನೊಬ್ಬ ಕಿರಿಯ ಮಗನಿದ್ದಾನೆ. ಅವನು ಕುರಿಮೇಯಿಸುವದಕ್ಕೆ ಹೋಗಿದ್ದಾನೆ” ಎಂದು ಉತ್ತರಕೊಟ್ಟನು.
ಆಗ ಸಮುವೇಲನು, “ಅವನನ್ನು ಕರೆಕಳುಹಿಸು. ಅವನನ್ನು ಇಲ್ಲಿಗೆ ಬರಹೇಳು. ಅವನು ಬರುವತನಕ ನಾವು ಊಟಕ್ಕೆ ಕುಳಿತುಕೊಳ್ಳುವುದು ಬೇಡ” ಎಂದು ಹೇಳಿದನು.
12 ಇಷಯನು ಕಿರಿಯ ಮಗನನ್ನು ಕರೆತರಲು ಒಬ್ಬನನ್ನು ಕಳುಹಿಸಿದನು. ಇವನಾದರೋ ಕೆಂಬಣ್ಣದವನೂ ಸುಂದರನೇತ್ರನೂ ನೋಟಕ್ಕೆ ರಮಣೀಯನೂ ಆಗಿದ್ದನು.
ಯೆಹೋವನು ಸಮುವೇಲನಿಗೆ, “ಮೇಲೆದ್ದು ನಿಲ್ಲು, ಅವನನ್ನು ಅಭಿಷೇಕಿಸು. ಇವನನ್ನೇ ನಾನು ಆರಿಸಿದ್ದು” ಎಂದು ಆಜ್ಞಾಪಿಸಿದನು.
13 ಸಮುವೇಲನು ಎಣ್ಣೆಯಿದ್ದ ಕೊಂಬನ್ನು ತೆಗೆದುಕೊಂಡು, ಅದರಲ್ಲಿದ್ದ ವಿಶೇಷವಾದ ಎಣ್ಣೆಯನ್ನು ಇಷಯನ ಕಿರಿಮಗನ ಮೇಲೆ, ಅವನ ಸೋದರರ ಎದುರಿನಲ್ಲೇ ಸುರಿದನು. ಆ ದಿನದಿಂದ ಯೆಹೋವನ ಆತ್ಮವು ಮಹಾಶಕ್ತಿಯೊಡನೆ ದಾವೀದನಲ್ಲಿ ನೆಲೆಸಿತು. ಅನಂತರ ಸಮುವೇಲನು ರಾಮಕ್ಕೆ ಹಿಂದಿರುಗಿದನು.
ದುರಾತ್ಮವು ಸೌಲನನ್ನು ಪೀಡಿಸುವುದು
14 ಯೆಹೋವನ ಆತ್ಮವು ಸೌಲನನ್ನು ಬಿಟ್ಟುಹೋಯಿತು. ನಂತರ ಯೆಹೋವನು ದುರಾತ್ಮವೊಂದನ್ನು ಸೌಲನ ಬಳಿಗೆ ಕಳುಹಿಸಿದನು. ಅದು ಅವನಿಗೆ ಬಹಳ ತೊಂದರೆ ಮಾಡಿತು. 15 ಸೌಲನ ಸೇವಕರು ಅವನಿಗೆ, “ದೇವರು ಕಳುಹಿಸಿರುವ ದುರಾತ್ಮವು ನಿನ್ನನ್ನು ಪೀಡಿಸುತ್ತಿದೆ. 16 ನಮಗೆ ಆಜ್ಞಾಪಿಸುವುದಾದರೆ, ಕಿನ್ನರಿ ಬಾರಿಸುವವನನ್ನು ಹುಡುಕಿ ಕರೆದುಕೊಂಡು ಬರುತ್ತೇವೆ. ಯೆಹೋವನಿಂದ ಬಂದ ದುರಾತ್ಮವು ನಿನ್ನ ಮೈಮೇಲೆ ಬಂದಾಗ ಅವನು ಕಿನ್ನರಿ ಬಾರಿಸಿದರೆ, ದುರಾತ್ಮವು ನಿನ್ನನ್ನು ಬಿಟ್ಟುಹೋಗಿ ನಿನಗೆ ಉಪಶಮನವಾಗುತ್ತದೆ” ಎಂದು ಹೇಳಿದರು.
17 ಸೌಲನು ಅವನ ಸೇವಕರಿಗೆ, “ಚೆನ್ನಾಗಿ ಕಿನ್ನರಿ ಬಾರಿಸುವವನನ್ನು ಹುಡುಕಿಕೊಂಡು ನನ್ನ ಬಳಿಗೆ ಕರೆತನ್ನಿ” ಎಂದು ಹೇಳಿದನು.
18 ಅವನ ಸೇವಕರಲ್ಲಿ ಒಬ್ಬನು, “ಇಷಯ ಎಂಬ ಹೆಸರಿನ ಒಬ್ಬ ಮನುಷ್ಯನು ಬೆತ್ಲೆಹೇಮಿನಲ್ಲಿ ವಾಸಿಸುತ್ತಿದ್ದಾನೆ. ನಾನು ಇಷಯನ ಮಗನನ್ನು ನೋಡಿದ್ದೇನೆ. ಅವನು ಕಿನ್ನರಿ ಬಾರಿಸುತ್ತಾನೆ. ಅವನು ಧೈರ್ಯಶಾಲಿ ಮತ್ತು ಒಳ್ಳೆಯ ಹೋರಾಟಗಾರ; ಅವನು ಬುದ್ಧಿವಂತನೂ ರಣಶೂರನೂ ರೂಪವಂತನೂ ಆಗಿದ್ದಾನೆ. ಅದಲ್ಲದೆ ಯೆಹೋವನು ಅವನೊಂದಿಗಿದ್ದಾನೆ” ಎಂದು ಹೇಳಿದನು.
19 ಸೌಲನು ಸಂದೇಶಕರ ಮೂಲಕ ಇಷಯನಿಗೆ, “ನಿನಗೆ ದಾವೀದನೆಂಬ ಮಗನಿದ್ದಾನೆ. ಅವನು ನಿನ್ನ ಕುರಿಗಳನ್ನು ಕಾಯುತ್ತಾನೆ. ಅವನನ್ನು ನನ್ನ ಬಳಿಗೆ ಕಳುಹಿಸು” ಎಂದು ತಿಳಿಸಿದನು.
20 ಇಷಯನು ಕೆಲವು ರೊಟ್ಟಿಗಳನ್ನೂ ಒಂದು ಸೀಸೆ ದ್ರಾಕ್ಷಾರಸವನ್ನೂ ಒಂದು ಹೋತಮರಿಯನ್ನೂ ಕತ್ತೆಯ ಮೇಲೆ ಹೇರಿಸಿ ತನ್ನ ಮಗನಾದ ದಾವೀದನ ಮೂಲಕ ಸೌಲನಿಗೆ ಕೊಡುಗೆಗಳಾಗಿ ಕಳುಹಿಸಿದನು. 21 ದಾವೀದನು ಸೌಲನ ಹತ್ತಿರಕ್ಕೆ ಹೋಗಿ, ಅವನ ಮುಂದೆ ನಿಂತನು. ಸೌಲನು ದಾವೀದನನ್ನು ಬಹಳ ಪ್ರೀತಿಸಿದನು. ದಾವೀದನು ಸೌಲನ ಆಯುಧಗಳನ್ನು ಹೊರುವ ಸಹಾಯಕನಾದನು. 22 ತರುವಾಯ ಸೌಲನು ಇಷಯನಿಗೆ, “ದಾವೀದನು ಇಲ್ಲಿಯೇ ನನ್ನ ಸೇವೆಯಲ್ಲಿ ಇರಲಿ. ನಾನು ಅವನನ್ನು ಬಹಳ ಪ್ರೀತಿಸುತ್ತೇನೆ” ಎಂಬ ಸುದ್ದಿಯನ್ನು ಹೇಳಿ ಕಳುಹಿಸಿದನು.
23 ದೇವರು ಕಳುಹಿಸಿದ ದುರಾತ್ಮವು ಸೌಲನ ಮೈಮೇಲೆ ಬಂದಾಗಲೆಲ್ಲಾ, ದಾವೀದನು ಕಿನ್ನರಿಯನ್ನು ಬಾರಿಸುತ್ತಿದ್ದನು. ಆಗ ದುರಾತ್ಮವು ಸೌಲನನ್ನು ಬಿಟ್ಟುಹೋಗಿ ಅವನಿಗೆ ಉಪಶಮನವಾಗುತ್ತಿತ್ತು.
ಬೇರೆಯವರನ್ನು ಟೀಕಿಸಬೇಡಿ
14 ನಂಬಿಕೆಯಲ್ಲಿ ಬಲಹೀನನಾಗಿರುವ ವ್ಯಕ್ತಿಯನ್ನು ನಿಮ್ಮ ಸಮುದಾಯಕ್ಕೆ ಸೇರಿಸಿಕೊಳ್ಳಿರಿ. ಅವನ ವೈಯಕ್ತಿಕ ಅಭಿಪ್ರಾಯಗಳ ಬಗ್ಗೆ ಅವನೊಂದಿಗೆ ವಾಗ್ವಾದ ಮಾಡಬೇಡಿ. 2 ಒಬ್ಬನು ಯಾವ ಬಗೆಯ ಆಹಾರವನ್ನಾದರೂ ತಿನ್ನಬಹುದೆಂದು ಭಾವಿಸುತ್ತಾನೆ. ಆದರೆ ನಂಬಿಕೆಯಲ್ಲಿ ಬಲಹೀನನಾಗಿರುವ ವ್ಯಕ್ತಿಯು ತಾನು ತರಕಾರಿಗಳನ್ನು ಮಾತ್ರ ತಿನ್ನಬಹುದೆಂದು ಭಾವಿಸುತ್ತಾನೆ. 3 ಯಾವ ಬಗೆಯ ಆಹಾರವನ್ನಾದರೂ ತಿನ್ನಬಹುದೆಂದು ನಂಬುವ ವ್ಯಕ್ತಿಯು ತರಕಾರಿಯನ್ನು ಮಾತ್ರ ತಿನ್ನುವ ವ್ಯಕ್ತಿಗಿಂತ ತನ್ನನ್ನು ಉತ್ತಮನೆಂದು ಭಾವಿಸಿಕೊಳ್ಳಕೂಡದು. ಅಂತೆಯೇ, ತರಕಾರಿಗಳನ್ನು ಮಾತ್ರ ತಿನ್ನುವ ವ್ಯಕ್ತಿಯು ಎಲ್ಲಾ ಆಹಾರಪದಾರ್ಥಗಳನ್ನು ತಿನ್ನುವ ವ್ಯಕ್ತಿಯನ್ನು ತಪ್ಪಿತಸ್ಥನೆಂದು ನಿರ್ಣಯಿಸಕೂಡದು. ದೇವರು ಆ ವ್ಯಕ್ತಿಯನ್ನೂ ಸ್ವೀಕರಿಸಿಕೊಂಡಿದ್ದಾನೆ. 4 ನೀನು ಮತ್ತೊಬ್ಬ ವ್ಯಕ್ತಿಯ ಸೇವಕನಿಗೆ ತೀರ್ಪು ಮಾಡಕೂಡದು. ಅವನು ಮಾಡುತ್ತಿರುವುದು ಸರಿಯೋ ತಪ್ಪೋ ಎಂಬುದನ್ನು ಅವನ ಸ್ವಂತ ಯಜಮಾನನೇ ನಿರ್ಣಯಿಸುವನು. ಪ್ರಭುವಿನ ಸೇವಕನು ನಿರ್ದೋಷಿಯಾಗಿರುತ್ತಾನೆ, ಏಕೆಂದರೆ ಪ್ರಭುವು ಅವನನ್ನು ನಿರ್ದೋಷಿಯನ್ನಾಗಿ ಮಾಡಲು ಶಕ್ತನಾಗಿದ್ದಾನೆ.
5 ಒಬ್ಬನು ಒಂದು ದಿನಕ್ಕಿಂತ ಮತ್ತೊಂದು ದಿನವನ್ನು ಹೆಚ್ಚು ಮುಖ್ಯವೆಂದು ನಂಬಬಹುದು. ಆದರೆ ಇನ್ನೊಬ್ಬನು ಎಲ್ಲಾ ದಿನಗಳು ಒಂದೇ ಎಂದು ನಂಬಬಹುದು. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಸ್ವಂತ ಮನಸ್ಸಿನಲ್ಲಿರುವ ತನ್ನ ಸ್ವಂತ ನಂಬಿಕೆಯ ಬಗ್ಗೆ ನಿಶ್ಚಯದಿಂದಿರಬೇಕು. 6 ಒಂದು ದಿನಕ್ಕಿಂತ ಮತ್ತೊಂದು ದಿನವನ್ನು ಮುಖ್ಯವೆಂದು ಯೋಚಿಸುವ ವ್ಯಕ್ತಿಯು ಪ್ರಭುವಿಗೋಸ್ಕರವಾಗಿಯೇ ಹಾಗೆ ಯೋಚಿಸುವವನಾಗಿದ್ದಾನೆ. ಅಂತೆಯೇ ಎಲ್ಲಾ ಬಗೆಯ ಆಹಾರಪದಾರ್ಥಗಳನ್ನು ತಿನ್ನುವ ವ್ಯಕ್ತಿಯು ಪ್ರಭುವಿಗೋಸ್ಕರವೇ ಅವುಗಳನ್ನು ತಿನ್ನುತ್ತಾನೆ. ಹೌದು, ಅವನು ಆ ಆಹಾರಕ್ಕಾಗಿ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಾನೆ.
7 ಹೌದು, ನಾವೆಲ್ಲರೂ ಪ್ರಭುವಿಗೋಸ್ಕರವೇ ಜೀವಿಸುವವರಾಗಿದ್ದೇವೆ. ನಾವು ಜೀವಿಸುವುದಾಗಲಿ ಸಾಯುವುದಾಗಲಿ ನಮಗೋಸ್ಕರವಲ್ಲ. 8 ನಾವು ಬದುಕುವುದಾಗಿದ್ದರೆ, ಪ್ರಭುವಿಗೋಸ್ಕರ ಬದುಕುತ್ತೇವೆ; ಸಾಯುವುದಾಗಿದ್ದರೆ, ಪ್ರಭುವಿಗೋಸ್ಕರ ಸಾಯುತ್ತೇವೆ. ಆದ್ದರಿಂದ ಬದುಕಿದರೂ ಸತ್ತರೂ ನಾವು ಪ್ರಭುವಿಗೆ ಸೇರಿದವರಾಗಿದ್ದೇವೆ. 9 ಆದಕಾರಣ, ಮತ್ತೆ ಜೀವಿಸುವುದಕ್ಕಾಗಿಯೇ ಕ್ರಿಸ್ತನು ಸತ್ತು ಸಮಾಧಿಯೊಳಗಿಂದ ಜೀವಂತನಾಗಿ ಎದ್ದುಬಂದನು. ಸತ್ತುಹೋದ ಜನರಿಗೂ ಬದುಕಿರುವ ಜನರಿಗೂ ತಾನು ಪ್ರಭುವಾಗಿರಬೇಕೆಂದು ಆತನು ಹೀಗೆ ಮಾಡಿದನು.
10 ಹೀಗಿರಲು, ಕ್ರಿಸ್ತನಲ್ಲಿ ನಿನ್ನ ಸಹೋದರನಾಗಿರುವವನನ್ನು ನೀನು ಟೀಕಿಸುವುದೇಕೆ? ನೀನು ನಿನ್ನ ಸಹೋದರಿನಿಗಿಂತಲೂ ಉತ್ತಮನೆಂದು ಯೋಚಿಸುವುದೇಕೆ? ನಾವೆಲ್ಲರೂ ದೇವರ ಮುಂದೆ ನಿಂತುಕೊಳ್ಳುವೆವು, ಆಗ ಆತನು ನಮ್ಮೆಲ್ಲರಿಗೂ ತೀರ್ಪು ಕೊಡುವನು. 11 ಹೌದು, ಪವಿತ್ರ ಗ್ರಂಥದಲ್ಲಿ ಹೀಗೆ ಬರೆಯಲ್ಪಟ್ಟಿದೆ:
“‘ಪ್ರತಿಯೊಬ್ಬನೂ ನನಗೆ ಅಡ್ಡಬೀಳುವನು.
ಪ್ರತಿಯೊಬ್ಬನೂ ನನ್ನನ್ನು ದೇವರೆಂದು ಹೇಳುವನು.
ನನ್ನ ಜೀವದಾಣೆಯಾಗಿಯೂ ಈ ಸಂಗತಿಗಳು ನೆರವೇರುತ್ತವೆ’ ಎನ್ನುತ್ತಾನೆ ಪ್ರಭುವು.”(A)
12 ಆದ್ದರಿಂದ ನಮ್ಮಲ್ಲಿ ಪ್ರತಿಯೊಬ್ಬರೂ ನಮ್ಮನಮ್ಮ ಜೀವಿತದ ಬಗ್ಗೆ ದೇವರಿಗೆ ಲೆಕ್ಕ ಒಪ್ಪಿಸಬೇಕು.
ಬೇರೆಯವರ ಪಾಪಕ್ಕೆ ನೀವು ಕಾರಣರಾಗಬೇಡಿ
13 ಆದ್ದರಿಂದ, ನಾವು ಒಬ್ಬರಿಗೊಬ್ಬರು ತೀರ್ಪುಕೊಡುವುದನ್ನು ಬಿಟ್ಟುಬಿಡಬೇಕು. ನಮ್ಮ ಸಹೋದರನನ್ನಾಗಲಿ ಸಹೋದರಿಯನ್ನಾಗಲಿ ಬಲಹೀನಗೊಳಿಸುವಂಥ ಅಥವಾ ಪಾಪಕ್ಕೆ ಬೀಳಿಸುವಂಥ ಯಾವುದನ್ನೇ ಆಗಲಿ ಮಾಡದಂತೆ ನಾವು ನಿರ್ಧರಿಸಬೇಕು. 14 ನಾನು ಪ್ರಭುವಾದ ಯೇಸುವಿನಲ್ಲಿದ್ದೇನೆ. ಯಾವ ಆಹಾರಪದಾರ್ಥವನ್ನೇ ಆಗಲಿ ತಿನ್ನುವುದು ತಪ್ಪಲ್ಲವೆಂದು ನನಗೆ ಗೊತ್ತಿದೆ. ಒಬ್ಬನು ಯಾವುದಾದರೂ ಆಹಾರಪದಾರ್ಥವನ್ನು ತಿನ್ನುವುದು ತಪ್ಪೆಂದು ನಂಬಿದರೆ, ಆ ಆಹಾರಪದಾರ್ಥವು ಅವನಿಗೆ ಅಶುದ್ಧವಾಗುತ್ತದೆ.
15 ನೀನು ತಿನ್ನುವ ಒಂದು ಆಹಾರಪದಾರ್ಥದಿಂದ ನಿನ್ನ ಸಹೋದರನ ನಂಬಿಕೆಗೆ ನೀನು ತೊಂದರೆಯನ್ನು ಮಾಡಿದರೆ, ನೀನು ಪ್ರೀತಿಯ ಮಾರ್ಗವನ್ನು ನಿಜವಾಗಿಯೂ ಅನುಸರಿಸುತ್ತಿಲ್ಲ. ಒಬ್ಬನು ಯಾವುದಾದರೂ ಆಹಾರಪದಾರ್ಥವನ್ನು ತಿನ್ನುವುದು ತಪ್ಪೆಂದು ಭಾವಿಸಿಕೊಂಡಿರುವಾಗ, ನೀನು ಆ ಪದಾರ್ಥವನ್ನು ತಿಂದರೆ ಅವನ ನಂಬಿಕೆ ಹಾಳಾಗುವುದು. ಆದ್ದರಿಂದ ನೀನು ಹಾಗೆ ಮಾಡಕೂಡದು. ಕ್ರಿಸ್ತನು ಆ ವ್ಯಕ್ತಿಗಾಗಿಯೂ ಸತ್ತನು. 16 ನೀನು ಯಾವುದನ್ನು ಒಳ್ಳೆಯದೆಂದು ಆಲೋಚಿಸುವಿಯೋ ಅದು ಬೇರೆಯವರಿಂದ ಕೆಟ್ಟದ್ದು ಎಂಬ ಟೀಕೆಗೆ ಒಳಗಾಗದಂತೆ ಎಚ್ಚರವಹಿಸು. 17 ದೇವರ ರಾಜ್ಯದಲ್ಲಿ ತಿನ್ನುವುದಾಗಲಿ ಕುಡಿಯುವುದಾಗಲಿ ಮುಖ್ಯವಲ್ಲ. ನೀತಿಯೂ ಸಮಾಧಾನವೂ ಪವಿತ್ರಾತ್ಮನಿಂದಾಗುವ ಆನಂದವೂ ಅಲ್ಲಿ ಮುಖ್ಯವಾಗಿವೆ. 18 ಈ ರೀತಿಯಲ್ಲಿ ಕ್ರಿಸ್ತನ ಸೇವೆಮಾಡುವವನು ದೇವರನ್ನು ಮೆಚ್ಚಿಸುವವನಾಗಿದ್ದಾನೆ. ಜನರೂ ಅವನನ್ನು ಸ್ವೀಕರಿಸಿಕೊಳ್ಳುವರು.
19 ಆದ್ದರಿಂದ ಸಮಾಧಾನವನ್ನು ಉಂಟುಮಾಡುವ ಕಾರ್ಯಗಳನ್ನು ನಮ್ಮಿಂದ ಸಾಧ್ಯವಾದಷ್ಟರ ಮಟ್ಟಿಗೆ ಮಾಡಲು ನಾವು ಪ್ರಯತ್ನಿಸೋಣ. ಪರಸ್ಪರ ಸಹಾಯಕವಾದ ಕಾರ್ಯಗಳನ್ನೇ ಮಾಡಲು ನಾವು ಪ್ರಯತ್ನಿಸೋಣ. ದೇವರ ಕಾರ್ಯವನ್ನು ನಾಶಪಡಿಸಲು ಆಹಾರಕ್ಕೆ ಅವಕಾಶ ಕೊಡಬೇಡಿ. 20 ಎಲ್ಲಾ ಆಹಾರಪದಾರ್ಥಗಳು ಶುದ್ಧವಾಗಿವೆ ಮತ್ತು ತಿನ್ನಲು ಯೋಗ್ಯವಾಗಿವೆ. ಆದರೆ ಒಬ್ಬನು ತಾನು ತಿನ್ನುವ ಆಹಾರಪದಾರ್ಥದ ಮೂಲಕ ಮತ್ತೊಬ್ಬ ವ್ಯಕ್ತಿಯನ್ನು ಪಾಪಕ್ಕೆ ಬೀಳಿಸುವುದಾಗಿದ್ದರೆ, ಅವನು ಆ ಪದಾರ್ಥವನ್ನು ತಿನ್ನುವುದೇ ತಪ್ಪು. 21 ನೀನು ಮಾಂಸ ತಿನ್ನುವುದು ಅಥವಾ ದ್ರಾಕ್ಷಾರಸ ಕುಡಿಯುವುದು, ನಿನ್ನ ಸಹೋದರನನ್ನಾಗಲಿ ಸಹೋದರಿಯನ್ನಾಗಲಿ ಪಾಪಕ್ಕೆ ಬೀಳಿಸುವುದಾಗಿದ್ದರೆ ಮಾಂಸವನ್ನು ತಿನ್ನದೆ, ದ್ರಾಕ್ಷಾರಸವನ್ನು ಕುಡಿಯದೇ ಇರುವುದು ಉತ್ತಮ. ನಿನ್ನ ಸಹೋದರನನ್ನಾಗಲಿ ಸಹೋದರಿಯನ್ನಾಗಲಿ ಪಾಪಕ್ಕೆ ಬೀಳಿಸುವಂಥದ್ದನ್ನು ಮಾಡದಿರುವುದೇ ಉತ್ತಮ.
22 ಈ ಸಂಗತಿಗಳ ಬಗ್ಗೆ ನಿನಗಿರುವ ವಿಶ್ವಾಸವು ನಿನಗೂ ದೇವರಿಗೂ ಮಾತ್ರ ತಿಳಿದಿರಲಿ. ತನಗೆ ಸರಿಯೆನಿಸಿದ ಕಾರ್ಯಗಳನ್ನು ತಾನು ದೋಷಿಯಾಗುತ್ತೇನೆಂಬ ಸಂಶಯವಿಲ್ಲದೆ ಮಾಡುವವನೇ ಭಾಗ್ಯವಂತನು. 23 ಆದರೆ ಒಬ್ಬನು ತಾನು ತಿನ್ನುವ ಪದಾರ್ಥದಲ್ಲಿ ದೋಷವಿಲ್ಲ ಎಂಬ ದೃಢನಂಭಿಕೆಯಿಲ್ಲದೆ ತಿಂದರೆ, ಅವನು ತನ್ನನ್ನೇ ತಪ್ಪಿತಸ್ಥನನಾಗಿ ಮಾಡಿಕೊಳ್ಳುತ್ತಾನೆ. ಏಕೆಂದರೆ ಅದು ದೋಷರಹಿತವಾದದ್ದು ಎಂಬ ನಂಬಿಕೆ ಅವನಲ್ಲಿಲ್ಲ. ನಂಬಿಕೆಯ ಆಧಾರವಿಲ್ಲದೆ ಮಾಡುವುದೆಲ್ಲವೂ ಪಾಪವೇ.
ಜೆರುಸಲೇಮ್ ತನ್ನ ನಾಶನದ ಬಗ್ಗೆ ಅಳುತ್ತಾಳೆ
1 ಒಂದು ಕಾಲದಲ್ಲಿ ಜೆರುಸಲೇಮ್ ಜನಭರಿತವಾದ ನಗರವಾಗಿತ್ತು.
ಆದರೆ ಈಗ ಆ ನಗರವು ಹಾಳುಬಿದ್ದಿದೆ.
ಒಂದು ಕಾಲದಲ್ಲಿ ಜೆರುಸಲೇಮ್ ಅತ್ಯಂತ ದೊಡ್ಡನಗರಗಳಲ್ಲಿ ಒಂದಾಗಿತ್ತು.
ಆದರೆ ಈಗ ಅದು ವಿಧವೆಯಂತೆ ಆಗಿದೆ.
ಒಂದು ಕಾಲದಲ್ಲಿ ಅವಳು ಎಲ್ಲ ನಗರಗಳ ನಡುವೆ ರಾಜಕುಮಾರಿಯಂತೆ ಇದ್ದಳು.
ಆದರೆ ಈಗ ಅವಳನ್ನು ದಾಸಿಯನ್ನಾಗಿ ಮಾಡಲಾಗಿದೆ.
2 ರಾತ್ರಿಯಲ್ಲಿ ಅವಳು ಬಿಕ್ಕಿಬಿಕ್ಕಿ ಅಳುತ್ತಾಳೆ.
ಅವಳ ಕೆನ್ನೆಗಳ ಮೇಲೆ ಕಣ್ಣೀರು ಹರಿಯುತ್ತಿದೆ.
ಅವಳನ್ನು ಸಂತೈಸುವವರು ಯಾರೂ ಇಲ್ಲ.
ಅವಳ ಮಿತ್ರ ರಾಷ್ಟ್ರಗಳಲ್ಲಿ ಒಂದೂ ಕೂಡ ಅವಳನ್ನು ಸಂತೈಸುವುದಿಲ್ಲ.
ಅವಳ ಸ್ನೇಹಿತರೆಲ್ಲಾ ಅವಳಿಗೆ ದ್ರೋಹ ಮಾಡಿದರು.
ಅವಳ ಸ್ನೇಹಿತರೆಲ್ಲಾ ಅವಳಿಗೆ ದ್ರೋಹ ಮಾಡಿದರು.
ಅವಳ ಸ್ನೇಹಿತರೆಲ್ಲಾ ಅವಳಿಗೆ ಶತ್ರುಗಳಾದರು.
3 ಅತಿ ಕಷ್ಟಗಳನ್ನು ಅನುಭವಿಸಿದ ಮೇಲೆ ಯೆಹೂದ ಬಂಧನಕ್ಕೊಳಗಾಗಿದ್ದಾಳೆ.
ಅತಿ ಶ್ರಮಪಟ್ಟ ಮೇಲೆಯೂ ಅವಳು ಸೆರೆ ಒಯ್ಯಲ್ಪಟ್ಟಿದ್ದಾಳೆ.
ಯೆಹೂದ ಬೇರೆ ಜನಾಂಗಗಳ ಜೊತೆಯಲ್ಲಿ ವಾಸಿಸುತ್ತಾಳೆ.
ಆದರೆ ಅವಳಿಗೆ ವಿಶ್ರಾಂತಿ ಸಿಕ್ಕಿಲ್ಲ.
ಅವಳನ್ನು ಬೆನ್ನಟ್ಟಿದ ಜನರು
ಆಕೆಯು ಬಳಲಿ ಹೋಗಿದ್ದಾಗಲೇ ಅವಳನ್ನು ಹಿಡಿದುಕೊಂಡರು.
4 ಚೀಯೋನಿಗೆ ಹೋಗುವ ದಾರಿಗಳು ದುಃಖಿಸುತ್ತಿವೆ.
ಅವುಗಳು ದುಃಖಿಸುತ್ತಿವೆ; ಏಕೆಂದರೆ ಯಾರೂ ಈಗ ಉತ್ಸವಗಳಿಗಾಗಿ ಚೀಯೋನಿಗೆ ಬರುವದಿಲ್ಲ.
ಚೀಯೋನಿನ ಎಲ್ಲ ಹೆಬ್ಬಾಗಿಲುಗಳು ನಿರ್ಜನವಾಗಿವೆ.
ಚೀಯೋನಿನ ಎಲ್ಲ ಯಾಜಕರು ನರಳಾಡುತ್ತಿದ್ದಾರೆ.
ಚೀಯೋನಿನ ತರುಣಿಯರನ್ನು ತೆಗೆದುಕೊಂಡು ಹೋಗಲಾಗಿದೆ.[a]
ಇದೆಲ್ಲ ಚೀಯೋನಿಗೆ ಅತಿ ದುಃಖವನ್ನುಂಟುಮಾಡಿದೆ.
5 ಜೆರುಸಲೇಮಿನ ಶತ್ರುಗಳು ಗೆದ್ದಿದ್ದಾರೆ.
ಅವಳ ಶತ್ರುಗಳು ಜಯಶೀಲರಾಗಿದ್ದಾರೆ.
ಯೆಹೋವನು ಅವಳನ್ನು ದಂಡಿಸಿದ ಕಾರಣ ಹೀಗಾಯಿತು.
ಅವಳ ಅನೇಕ ಪಾಪಗಳಿಗಾಗಿ ಆತನು ಜೆರುಸಲೇಮನ್ನು ದಂಡಿಸಿದನು.
ಅವಳ ಮಕ್ಕಳು ದೂರಹೋಗಿದ್ದಾರೆ.
ಅವರು ವೈರಿಗಳ ಸೆರೆಯಾಳುಗಳಾಗಿ ದೂರ ಹೋಗಿದ್ದಾರೆ.
6 ಚೀಯೋನಿನ ಮಗಳ ಸೌಂದರ್ಯವು ಹೊರಟುಹೋಗಿದೆ.
ಅವಳ ರಾಜಕುಮಾರರು ಹುಲ್ಲುಗಾವಲನ್ನು ಕಂಡುಕೊಂಡಿಲ್ಲದ ಜಿಂಕೆಯಂತಾಗಿದ್ದಾರೆ.
ಅವರು ಬಲಹೀನರಾಗಿ ಓಡಿಹೋದರು.
ಬೆನ್ನಟ್ಟಿ ಬಂದ ಜನರಿಗೆ ಬೆಂಗೊಟ್ಟು ಓಡಿಹೋಗಿದ್ದಾರೆ.
7 ಜೆರುಸಲೇಮ್ ಹಿಂದಿನ ದಿನಗಳ ಬಗ್ಗೆ ಯೋಚಿಸುತ್ತಾಳೆ;
ತಾನು ಮನೆಯನ್ನು ಕಳೆದುಕೊಂಡ
ಮತ್ತು ಹಿಂಸೆಗೊಳಗಾದ ಕಾಲವನ್ನು ಜ್ಞಾಪಿಸಿಕೊಳ್ಳುತ್ತಾಳೆ.
ಹಿಂದೆ ಅವಳಿಗಿದ್ದ ಎಲ್ಲ ಭೋಗ್ಯ ವಸ್ತುಗಳನ್ನು
ಅವಳು ಜ್ಞಾಪಿಸಿಕೊಳ್ಳುತ್ತಾಳೆ.
ಹಳೆಯ ಕಾಲದಲ್ಲಿ ಲಭ್ಯವಿದ್ದ
ಎಲ್ಲ ಉತ್ತಮ ವಸ್ತುಗಳನ್ನು ಅವಳು ಸ್ಮರಿಸಿಕೊಳ್ಳುತ್ತಾಳೆ.
ತನ್ನ ಜನರನ್ನು ವೈರಿಗಳು
ವಶಪಡಿಸಿಕೊಂಡ ಸಂಗತಿಯನ್ನು ಅವಳು ಸ್ಮರಿಸುತ್ತಾಳೆ.
ಆಗ ತನಗೆ ಸಹಾಯ ಮಾಡಲು
ಯಾರೂ ಇರಲಿಲ್ಲವೆಂಬುದನ್ನು ಅವಳು ಜ್ಞಾಪಿಸಿಕೊಳ್ಳುತ್ತಾಳೆ.
ಅವಳ ಶತ್ರುಗಳು ಅವಳನ್ನು ನೋಡಿ ನಕ್ಕರು.
ಅವಳು ಹಾಳಾದುದನ್ನು ನೋಡಿ ಅವರು ನಕ್ಕರು.
8 ಜೆರುಸಲೇಮ್ ಮಹಾಪಾಪ ಮಾಡಿತು.
ಜೆರುಸಲೇಮ್ ಭಯಂಕರ ಪಾಪ ಮಾಡಿದ್ದಕ್ಕಾಗಿ
ಅವಳು ಹಾಳುಬಿದ್ದ ನಗರವಾದಳು. ಜನರು ಅವಳನ್ನು ಹೀನೈಸುವಂತಾಗಿದೆ.
ಮೊದಲು ಅವಳನ್ನು ಗೌರವಿಸುತ್ತಿದ್ದ ಎಲ್ಲ ಜನ ಈಗ ಅವಳನ್ನು ತಿರಸ್ಕರಿಸುತ್ತಾರೆ.
ಏಕೆಂದರೆ ಅವರು ಅವಳ ಬೆತ್ತಲೆ ದೇಹವನ್ನು ನೋಡಿದರು.
ಜೆರುಸಲೇಮ್ ನರಳಾಡುತ್ತಿದ್ದಾಳೆ.
ಅವಳು ನಾಚಿಕೆಯಿಂದ ತನ್ನ ಮುಖವನ್ನು ತಗ್ಗಿಸಿಕೊಂಡಿದ್ದಾಳೆ.
9 ಜೆರುಸಲೇಮಿನ ಲಂಗಗಳು ಮಲಿನವಾಗಿದ್ದವು.
ಅವಳಿಗೆ ಮುಂದೆ ಏನಾಗುವದೆಂಬುದರ ಬಗ್ಗೆ ಅವಳು ಯೋಚಿಸಲಿಲ್ಲ.
ಅವಳ ಪತನ ವಿಸ್ಮಯಕಾರಿಯಾಗಿತ್ತು.
ಅವಳನ್ನು ಸಂತೈಸಲು ಯಾರೂ ಇರಲಿಲ್ಲ.
“ಅಯ್ಯೋ, ಯೆಹೋವನೇ, ನನಗೆಷ್ಟು ನೋವಾಗಿದೆ. ನೋಡು!
ನನ್ನ ಶತ್ರು ತನ್ನನ್ನು ಎಷ್ಟು ದೊಡ್ಡವನೆಂದು ಭಾವಿಸಿಕೊಂಡಿದ್ದಾನೆ.” ಎಂದು ಆಕೆ ಹೇಳುತ್ತಾಳೆ.
10 ಶತ್ರು ತನ್ನ ಕೈಗಳನ್ನು ಚಾಚಿದನು.
ಅವಳ ಎಲ್ಲ ಅಮೂಲ್ಯ ವಸ್ತುಗಳನ್ನು ತೆಗೆದುಕೊಂಡನು.
ಯೆಹೋವನೇ, ಆ ಜನರು ನಿನ್ನ ಸಭೆಯನ್ನು ಪ್ರವೇಶಿಸಬಾರದೆಂದು
ನೀನು ಆಜ್ಞಾಪಿಸಿದ್ದರೂ ಪರಕೀಯರು ತನ್ನ ಪವಿತ್ರಾಲಯವನ್ನು ಪ್ರವೇಶಿಸುವದನ್ನು ಅವಳು ನೋಡಬೇಕಾಯಿತು.
11 ಜೆರುಸಲೇಮಿನ ಎಲ್ಲ ಜನರು ನರಳಾಡುತ್ತಿದ್ದಾರೆ.
ಅವಳ ಎಲ್ಲ ಜನರು ಆಹಾರಕ್ಕಾಗಿ ಹುಡುಕುತ್ತಿದ್ದಾರೆ.
ಅವರು ತಮ್ಮ ಎಲ್ಲ ಒಳ್ಳೆಯ ವಸ್ತುಗಳನ್ನು ಆಹಾರಕ್ಕಾಗಿ ಕೊಟ್ಟುಬಿಡುತ್ತಿದ್ದಾರೆ.
ಬದುಕಿರುವ ಸಲುವಾಗಿ ಅವರು ಹೀಗೆ ಮಾಡುತ್ತಿದ್ದಾರೆ. “ಯೆಹೋವನೇ, ನನ್ನ ಕಡೆಗೆ ನೋಡು!
ಜನರು ನನ್ನನ್ನು ಹೇಗೆ ದ್ವೇಷಿಸುತ್ತಾರೆ ನೋಡು” ಎಂದು ಜೆರುಸಲೇಮ್ ಬೇಡಿಕೊಂಡಳು.
12 ರಸ್ತೆಯಲ್ಲಿ ಹಾದುಹೋಗುವ ಜನರೇ,
ನೀವು ನನ್ನ ಬಗ್ಗೆ ಯೋಚಿಸುವುದಿಲ್ಲವೆಂದು ತೋರುತ್ತದೆ.
ನನ್ನ ಕಡೆಗೆ ಗಮನ ಕೊಡಿ.
ನನ್ನ ನೋವಿನಂಥ ನೋವು ಮತ್ತೊಂದು ಇದೆಯೇ?
ನನಗೆ ಬಂದಂಥ ನೋವು ಇನ್ನಾವುದಾದರೂ ಇದೆಯೇ?
ದಂಡನೆಯಾಗಿ ಯೆಹೋವನು ನನಗೆ ಕೊಟ್ಟ ನೋವಿನಂಥ ನೋವು ಮತ್ತೊಂದು ಇದೆಯೇ?
ಆತನು ತನ್ನ ಮಹಾಕೋಪದ ದಿನದಂದು
ನನ್ನನ್ನು ದಂಡಿಸಿರುವನು.
13 ಯೆಹೋವನು ಮೇಲಿನಿಂದ ಬೆಂಕಿಯನ್ನು ಕಳಿಸಿದ್ದಾನೆ.
ಆ ಬೆಂಕಿ ನನ್ನ ಎಲುಬುಗಳ ಆಳಕ್ಕೆ ಇಳಿದುಹೋಗಿದೆ.
ಆತನು ನನ್ನ ಪಾದಗಳಿಗೆ ಬಲೆಯನ್ನು ಒಡ್ಡಿದ್ದಾನೆ.
ಆತನು ನನ್ನನ್ನು ಸುತ್ತಲು ತಿರುಗಿಸಿದ್ದಾನೆ.
ಆತನು ನನ್ನನ್ನು ಹಾಳುಭೂಮಿಯನ್ನಾಗಿ ಮಾಡಿದ್ದಾನೆ.
ನಾನು ಸದಾ ಬಳಲುತ್ತಿದ್ದೇನೆ.
14 “ನನ್ನ ಪಾಪಗಳನ್ನೆಲ್ಲ ಒಟ್ಟುಗೂಡಿಸಿ ನೊಗದಂತೆ ಕಟ್ಟಲಾಗಿದೆ.[b]
ಯೆಹೋವನು ತನ್ನ ಕೈಗಳಿಂದ ನನ್ನ ಪಾಪಗಳನ್ನು ಒಟ್ಟಿಗೆ ಕಟ್ಟಿದ್ದಾನೆ.
ಯೆಹೋವನ ಆ ನೊಗವು ನನ್ನ ಕತ್ತಿನ ಮೇಲೆ ಇದೆ.
ಯೆಹೋವನು ನನ್ನನ್ನು ದುರ್ಬಲಗೊಳಿಸಿದ್ದಾನೆ.
ನಾನು ಎದುರಿಸಲಾಗದ ಜನರ ಕೈಗೆ
ಯೆಹೋವನು ನನ್ನನ್ನು ಒಪ್ಪಿಸಿಕೊಟ್ಟಿದ್ದಾನೆ.
15 ನನ್ನ ಶೂರ ಸೈನಿಕರನ್ನೆಲ್ಲಾ ಯೆಹೋವನು ತಿರಸ್ಕರಿಸಿದ್ದಾನೆ.
ಆ ಸೈನಿಕರು ನಗರದ ಒಳಭಾಗದಲ್ಲಿದ್ದರು.
ಆಗ ಯೆಹೋವನು ನನ್ನ ವಿರುದ್ಧ ಒಂದು ಜನರ ಗುಂಪನ್ನು ತಂದನು.
ಆತನು ನನ್ನ ತರುಣ ಸೈನಿಕರನ್ನು ಕೊಲ್ಲುವ ಸಲುವಾಗಿ ಆ ಜನರನ್ನು ತಂದನು.
ಯೆಹೋವನು ದ್ರಾಕ್ಷಿಯನ್ನು ಆಲೆಯಲ್ಲಿ ತುಳಿದಿದ್ದಾನೆ.
ಆ ದ್ರಾಕ್ಷಿಆಲೆಯು ಜೆರುಸಲೇಮ್ ಕನ್ನಿಕೆಗೆ ಸೇರಿದ್ದು.
16 “ನಾನು ಈ ಎಲ್ಲ ವಿಪತ್ತುಗಳಿಗಾಗಿ ಅಳುತ್ತೇನೆ.
ನನ್ನ ಕಣ್ಣುಗಳಿಂದ ಧಾರಾಕಾರವಾಗಿ ನೀರು ಸುರಿಯುತ್ತಿದೆ.
ನನ್ನನ್ನು ಸಂತೈಸುವವರು ಯಾರೂ ಸಮೀಪದಲ್ಲಿ ಇಲ್ಲ;
ನನ್ನನ್ನು ಪ್ರೋತ್ಸಾಹಿಸುವವರು ಯಾರೂ ಇಲ್ಲ.
ನನ್ನ ಮಕ್ಕಳು ಹಾಳುಬಿದ್ದ ಭೂಮಿಯಂತಿದ್ದಾರೆ.
ಶತ್ರುವು ಜಯಶಾಲಿಯಾದ ಕಾರಣ ಅವರು ಹಾಗಾಗಿದ್ದಾರೆ.”
17 ಚೀಯೋನು ತನ್ನ ಕೈಗಳನ್ನು ಚಾಚಿದಳು.
ಅವಳನ್ನು ಸಂತೈಸುವವರೇ ಇರಲಿಲ್ಲ.
ಯಾಕೋಬನಿಗೆ ವೈರಿಗಳಾಗಬೇಕೆಂದು
ಅವನ ನೆರೆಹೊರೆಯವರಿಗೆ ಯೆಹೋವನು ಆಜ್ಞಾಪಿಸಿದ್ದನು.
ಜೆರುಸಲೇಮ್ ಒಂದು ಹೊಲಸು ವಸ್ತುವಾಗಿದ್ದಾಳೆ.
ಆ ವೈರಿಗಳ ಮಧ್ಯದಲ್ಲಿ ಅವಳು ಒಂದು ಹೊಲಸು ವಸ್ತುವಾಗಿದ್ದಾಳೆ.
18 ಅವಳು ಹೇಳಿದಳು, “ಯೆಹೋವನು ಮಾಡಿದ್ದು ನ್ಯಾಯವಾಗಿಯೇ ಇದೆ.
ಏಕೆಂದರೆ ನಾನು ಆತನ ಮಾತನ್ನು ಕಿವಿಗೆ ಹಾಕಿಕೊಳ್ಳಲಿಲ್ಲ.
ಎಲ್ಲಾ ಜನಗಳೇ, ನನ್ನ ಮಾತುಗಳನ್ನು ಕೇಳಿರಿ.
ನನ್ನ ವ್ಯಥೆಯನ್ನು ನೋಡಿರಿ.
ನನ್ನ ತರುಣತರುಣಿಯರು ಸೆರೆ ಒಯ್ಯಲ್ಪಟ್ಟಿದ್ದಾರೆ.
19 ನಾನು ನನ್ನ ಪ್ರಿಯತಮರನ್ನು ಕೂಗಿ ಕರೆದೆ.
ಆದರೆ ಅವರು ನನಗೆ ಮೋಸ ಮಾಡಿದರು.
ನನ್ನ ಯಾಜಕರು ಮತ್ತು ಹಿರಿಯರು
ನಗರದಲ್ಲಿ ಸತ್ತುಹೋದರು.
ಅವರು ತಮಗಾಗಿ ಆಹಾರವನ್ನು ಹುಡುಕುತ್ತಿದ್ದರು.
ಅವರು ತಮ್ಮ ಪ್ರಾಣಗಳನ್ನು ಉಳಿಸಿಕೊಳ್ಳ ಬಯಸಿದರು.
20 “ಯೆಹೋವನೇ, ನನ್ನ ಕಡೆ ನೋಡು, ನಾನು ತೊಂದರೆಯಲ್ಲಿದ್ದೇನೆ.
ನನ್ನ ಮನಸ್ಸು ಕ್ಷೋಭೆಗೊಂಡಿದೆ.
ನನ್ನ ಮನಸ್ಸಿಗೆ ತಲೆ ಕೆಳಗಾದಂತೆ ಭಾಸವಾಗುತ್ತಿದೆ.
ನಾನು ದುರಹಂಕಾರಿಯಾಗಿದ್ದುದರಿಂದ
ನನ್ನ ಮನಸ್ಸಿಗೆ ಹಾಗೆ ಭಾಸವಾಗುತ್ತಿದೆ.
ಕಾರಣವೇನೆಂದರೆ, ನಾನು ದಂಗೆಕೋರಳಾಗಿದ್ದೆ.
ಬೀದಿಗಳಲ್ಲಿ ನನ್ನ ಮಕ್ಕಳು ಖಡ್ಗಕ್ಕೆ ಆಹುತಿಯಾದರು.
ಮನೆಯಲ್ಲಿಯೂ ಸಹ ಸಾವಿತ್ತು.
21 “ನಾನು ನರಳಾಡುತ್ತಿದ್ದೇನೆ.
ಅದಕ್ಕಾಗಿ ನನ್ನ ಮಾತುಗಳಿಗೆ ಕಿವಿಗೊಡು;
ನನ್ನನ್ನು ಸಂತೈಸುವವರು ಯಾರೂ ಇಲ್ಲ.
ನನ್ನ ಎಲ್ಲ ವೈರಿಗಳು ನನ್ನ ಕಷ್ಟಗಳ ಬಗ್ಗೆ ಕೇಳಿದ್ದಾರೆ.
ಅವರು ಸಂತೋಷಪಡುತ್ತಿದ್ದಾರೆ.
ನೀನು ನನಗೆ ಈ ಸ್ಥಿತಿಯನ್ನು ತಂದದ್ದಕ್ಕಾಗಿ ಅವರು ಸಂತೋಷಪಡುತ್ತಲಿದ್ದಾರೆ.
ನೀನು ಪ್ರಕಟಿಸಿದ ಆ ದಿನವನ್ನು ಬರಮಾಡು.
ಆ ದಿನ ನನ್ನ ಶತ್ರುಗಳ ಸ್ಥಿತಿ
ನನ್ನ ಇಂದಿನ ಸ್ಥಿತಿಯಂತೆ ಆಗಲಿ.
22 “ನನ್ನ ಶತ್ರುಗಳು ಎಷ್ಟು ದುಷ್ಟರಾಗಿದ್ದಾರೆ ನೋಡು.
ನನ್ನ ಎಲ್ಲ ಪಾಪಗಳ ನಿಮಿತ್ತ ನೀನು ನನಗೆ ಮಾಡಿದಂತೆ
ಅವರಿಗೂ ಮಾಡಲು ನಿನಗೆ ಸಾಧ್ಯವಾಗುವುದು.
ನಾನು ಪದೇಪದೇ ನರಳಾಡುತ್ತಿರುವುದರಿಂದ ನೀನು ಇದನ್ನು ಮಾಡಬೇಕು.
ನನ್ನ ಹೃದಯವು ಅಸ್ವಸ್ಥಗೊಂಡಿರುವುದರಿಂದ ನೀನು ಇದನ್ನು ಮಾಡಬೇಕು.”
ರಚನೆಗಾರ: ದಾವೀದ.
32 ಯಾವನ ಪಾಪಗಳು ಕ್ಷಮಿಸಲ್ಪಟ್ಟಿವೆಯೋ
ಯಾವನ ದ್ರೋಹಗಳು ಅಳಿಸಲ್ಪಟ್ಟಿವೆಯೋ
ಅವನೇ ಧನ್ಯನು.
2 ಯೆಹೋವನು ಯಾವನನ್ನು ದೋಷಿಯೆಂದು ಹೇಳುವುದಿಲ್ಲವೋ
ಯಾವನು ತನ್ನ ಗುಪ್ತಪಾಪಗಳನ್ನು ಅಡಗಿಸಿಟ್ಟುಕೊಳ್ಳುವುದಿಲ್ಲವೋ
ಅವನೇ ಧನ್ಯನು.
3 ನಾನು ನನ್ನ ಪಾಪವನ್ನು ಅರಿಕೆಮಾಡದೆ ಇದ್ದಾಗ
ದಿನವೆಲ್ಲ್ಲಾ ಪಾಪದಿಂದ ನರಳಬೇಕಾಯಿತು;
ವೇದನೆಯಿಂದ ನನ್ನ ಎಲುಬುಗಳೇ ಸವೆದು ಹೋಗುವಂತಾಯಿತು.
4 ಹಗಲಿರುಳು ನಿನ್ನ ಶಿಕ್ಷಾಹಸ್ತವು ನನ್ನ ಮೇಲೆ ಭಾರವಾಗಿತ್ತು.
ನಾನು ಬೇಸಿಗೆಯಲ್ಲಿ ಒಣಗಿಹೋದ ಭೂಮಿಯಂತಾದೆನು.
5 ಆಗ ನಾನು ನನ್ನ ಪಾಪಗಳನ್ನೆಲ್ಲ ಯೆಹೋವನಿಗೆ ಅರಿಕೆಮಾಡಲು ನಿರ್ಧರಿಸಿದೆನು.
ಯೆಹೋವನೇ, ನಾನು ನನ್ನ ಪಾಪಗಳನ್ನು ಅರಿಕೆಮಾಡಿಕೊಂಡಾಗ, ನನ್ನ ಯಾವ ದೋಷವನ್ನೂ ನಿನಗೆ ಮರೆಮಾಡಲಿಲ್ಲ.
ನೀನು ನನ್ನ ಪಾಪಗಳನ್ನು ಕ್ಷಮಿಸಿದೆ.
6 ದೇವರೇ, ಈ ಕಾರಣದಿಂದಲೇ ನಿನ್ನ ಭಕ್ತರು ನಿನ್ನಲ್ಲಿ ಪ್ರಾರ್ಥಿಸಲಿ.
ಆಪತ್ತುಗಳು ಮಹಾಪ್ರವಾಹದಂತೆ ಬಂದರೂ ಅವರನ್ನು ಮುಟ್ಟಲಾರವು.
7 ನೀನು ನನಗೆ ಆಶ್ರಯದುರ್ಗವಾಗಿರುವೆ.
ಇಕ್ಕಟ್ಟುಗಳಲ್ಲಿ ನೀನು ನನ್ನನ್ನು ಸುತ್ತುವರಿದು ಕಾಪಾಡುವೆ.
ಆದ್ದರಿಂದ ನಿನ್ನ ರಕ್ಷಣೆಯ ಕುರಿತು ಹಾಡಿಕೊಂಡಾಡುವೆ.
8 ಯೆಹೋವನು ಹೀಗೆನ್ನುತ್ತಾನೆ: “ನಿನಗೆ ಜೀವಮಾರ್ಗವನ್ನು ಉಪದೇಶಿಸಿ
ಮಾರ್ಗದರ್ಶನ ನೀಡುವೆನು;
ನಿನ್ನನ್ನು ಕಾಪಾಡಿ ನಿನಗೆ ಮಾರ್ಗದರ್ಶಿಯಾಗಿರುವೆನು.
9 ಆದ್ದರಿಂದ ಕುದುರೆಯಂತಾಗಲಿ ಹೇಸರಕತ್ತೆಯಂತಾಗಲಿ ಮೂಢರಾಗಿರಬೇಡಿ.
ಬಾರು, ಕಡಿವಾಣಗಳಿಲ್ಲದಿದ್ದರೆ ಅವು ನಿಮ್ಮ ಅಧೀನಕ್ಕೆ ಬರುವುದಿಲ್ಲ.”
10 ಕೆಡುಕರಿಗೆ ಅನೇಕ ಕೇಡುಗಳಾಗುತ್ತವೆ.
ಆದರೆ ಯೆಹೋವನಲ್ಲಿ ಭರವಸವಿಟ್ಟಿರುವವರನ್ನು ಆತನ ಶಾಶ್ವತವಾದ ಪ್ರೀತಿಯು ಆವರಿಸಿಕೊಳ್ಳುವುದು.
11 ನೀತಿವಂತರೇ, ಹರ್ಷಿಸಿರಿ; ಯೆಹೋವನಲ್ಲಿ ಆನಂದಿಸಿರಿ.
ಶುದ್ಧಹೃದಯವುಳ್ಳವರೇ, ಉಲ್ಲಾಸಿಸಿರಿ.
Kannada Holy Bible: Easy-to-Read Version. All rights reserved. © 1997 Bible League International