Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ಧರ್ಮೋಪದೇಶಕಾಂಡ 25

25 “ನಿಮ್ಮಲ್ಲಿ ಯಾರಿಗಾದರೂ ಇಬ್ಬರಿಗೆ ವಾಗ್ವಾದವಿದ್ದಲ್ಲಿ ಅವರು ಅದನ್ನು ನ್ಯಾಯಸ್ಥಾನಕ್ಕೆ ತೆಗೆದುಕೊಂಡು ಹೋಗಲಿ. ಅಲ್ಲಿ ನ್ಯಾಯಾಧೀಶರು ಯಾರು ಸರಿ ಯಾರು ತಪ್ಪು ಎಂದು ತೀರ್ಮಾನಿಸುವರು. ನ್ಯಾಯಾಧೀಶರು ಒಬ್ಬನಿಗೆ ಕೊರಡೆ ಏಟು ಕೊಡಬೇಕೆಂದು ತೀರ್ಮಾನಿಸಿದರೆ ಅವನು ಆ ಶಿಕ್ಷೆ ಹೊಂದುವವನನ್ನು ಬೋರಲು ಮಲಗಿಸಿ ನ್ಯಾಯಾಧೀಶನ ಕಣ್ಣು ಮುಂದೆ ಅವನಿಗೆ ಕೊರಡೆ ಏಟು ಹೊಡಿಸಬೇಕು. ಅವನ ಅಪರಾಧಕ್ಕನುಸಾರವಾಗಿ ಕೊರಡೆ ಏಟುಗಳ ಸಂಖ್ಯೆಯು ಏರುವದು. ಒಬ್ಬನಿಗೆ ನಲವತ್ತು ಕೊರಡೆ ಏಟುಗಳಿಗಿಂತ ಹೆಚ್ಚಾಗಿ ಹೊಡೆಯಬಾರದು. ಅದಕ್ಕಿಂತ ಹೆಚ್ಚು ಹೊಡೆದರೆ ಅವನ ಪ್ರಾಣವು ನಿಮ್ಮ ದೃಷ್ಟಿಗೆ ಅಮೂಲ್ಯವಾಗಿಲ್ಲವೆಂದು ತಿಳಿದುಬರುತ್ತದೆ.

“ಕಣವನ್ನು ತುಳಿಯಲು ಎತ್ತುಗಳನ್ನು ಉಪಯೋಗಿಸುವಾಗ ಅವುಗಳು ಧಾನ್ಯ ತಿನ್ನುತ್ತವೆ ಎಂದು ಅವುಗಳ ಬಾಯಿಗಳನ್ನು ಕಟ್ಟಬಾರದು.

“ಇಬ್ಬರು ಅಣ್ಣತಮ್ಮಂದಿರು ಜೀವಿಸುತ್ತಿರುವಾಗ ಒಬ್ಬನು ಮಕ್ಕಳಿಲ್ಲದೆ ಸತ್ತುಹೋದರೆ ಅವನ ಹೆಂಡತಿಯು ಕುಟುಂಬದಿಂದ ಹೊರಗೆ ಮದುವೆಯಾಗಬಾರದು. ಅವಳ ಮೈದುನ ಆಕೆಯನ್ನು ಮದುವೆಯಾಗಿ, ತನ್ನ ಮೈದುನ ಧರ್ಮವನ್ನು ನೆರವೇರಿಸಬೇಕು. ಅವಳಿಗೆ ಅವನಿಂದ ಹುಟ್ಟುವ ಮೊದಲನೆಯ ಮಗು ಅವಳ ಮೊದಲನೆಯ ಗಂಡನಿಗೆ ಸೇರಿದ್ದೆಂದು ಪರಿಗಣಿಸಲ್ಪಡಬೇಕು. ಹೀಗೆ ಸತ್ತುಹೋದ ಅಣ್ಣನ ವಂಶವು ಮುಂದುವರಿಯುವುದು. ಆದರೆ ಮೈದುನನು, ಸತ್ತುಹೋದ ತನ್ನ ಅಣ್ಣನ ಸ್ಥಾನವನ್ನು ತೆಗೆದುಕೊಳ್ಳಲು ಇಷ್ಟಪಡದೆಹೋದಲ್ಲಿ, ಆಕೆಯು ಊರಿನ ಹಿರಿಯರ ಬಳಿಗೆ ಹೋಗಿ ಹಿರಿಯರಿಗೆ ಹೀಗೆ ಹೇಳಬೇಕು: ‘ನನ್ನ ಮೈದುನನು ತನ್ನ ಅಣ್ಣನ ಹೆಸರನ್ನು ಇಸ್ರೇಲಿನಲ್ಲಿ ಉಳಿಸಲು ಇಷ್ಟಪಡುವುದಿಲ್ಲ.’ ಆಗ ಊರಿನ ಹಿರಿಯರು ಆ ಮೈದುನನನ್ನು ಕರಿಸಿ ಅವನೊಂದಿಗೆ ಮಾತನಾಡಬೇಕು. ಅವನು ತನ್ನ ನಿರ್ಧಾರವನ್ನು ಬದಲಾಯಿಸದೆ, ‘ನನಗೆ ಅವಳನ್ನು ಹೆಂಡತಿಯಾಗಿ ತೆಗೆದುಕೊಳ್ಳಲು ಇಷ್ಟವಿಲ್ಲ’ ಎಂದು ಹೇಳಿದರೆ, ಅವನ ಅಣ್ಣನ ಹೆಂಡತಿಯು ಮುಂದೆ ಬಂದು ಹಿರಿಯರ ಸಮ್ಮುಖದಲ್ಲಿ ಅವನ ಕಾಲಿನಿಂದ ಚಪ್ಪಲಿಗಳನ್ನು ತೆಗೆದು ಅವನ ಮುಖಕ್ಕೆ ಉಗಿಯಬೇಕು. ‘ತನ್ನ ಮೈದುನ ಧರ್ಮವನ್ನು ನೆರವೇರಿಸದೆ ತನ್ನ ಅಣ್ಣನಿಗೆ ವಂಶವನ್ನು ಕೊಡದವನಿಗೆ ಇದೇ ಗತಿ’ ಎಂದು ಹೇಳಬೇಕು. 10 ಆಗ ಅವನ ಸಂತಾನವು, ‘ಚಪ್ಪಲಿ ತೆಗೆಯಲ್ಪಟ್ಟ ಸಂತಾನ’ ಎಂದು ಕರೆಯಲ್ಪಡುವುದು.

11 “ಇಬ್ಬರು ಗಂಡಸರು ಜಗಳವಾಡುತ್ತಿರುವಾಗ ಒಬ್ಬನ ಹೆಂಡತಿಯು ಗಂಡನಿಗೆ ಸಹಾಯಮಾಡಲಿಕ್ಕೆ ಬಂದು ಜಗಳವಾಡುವ ಇನ್ನೊಬ್ಬ ಗಂಡಸಿನ ಗುಪ್ತಾಂಗವನ್ನು ಹಿಡಿಯಬಾರದು. 12 ಅಂಥವಳ ಕೈಯನ್ನು ಕಡಿದುಹಾಕಿರಿ; ದಯೆ ತೋರಿಸಬೇಡಿ.

13 “ಮೋಸದ ತೂಕದ ಕಲ್ಲುಗಳನ್ನು ಉಪಯೋಗಿಸಬೇಡಿ. 14 ನಿಮ್ಮ ಮನೆಯೊಳಗೆ ಮೋಸದ ತೂಕದ ಕಲ್ಲುಗಳನ್ನಿಡಬೇಡಿ. 15 ನೀವು ಸರಿಯಾದ ತೂಕದ ಕಲ್ಲುಗಳನ್ನು ಉಪಯೋಗಿಸಬೇಕು. ಆಗ ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡಲಿರುವ ದೇಶದಲ್ಲಿ ಬಹುಕಾಲ ಬಾಳುವಿರಿ. 16 ಮೋಸವುಳ್ಳ ತೂಕದ ಕಲ್ಲುಗಳನ್ನು ಉಪಯೋಗಿಸುವವರನ್ನು ದೇವರಾದ ಯೆಹೋವನು ದ್ವೇಷಿಸುತ್ತಾನೆ. ಹೌದು, ಆತನು ಮೋಸ ಮಾಡುವವರನ್ನು ದ್ವೇಷಿಸುತ್ತಾನೆ.

ಅಮಾಲೇಕ್ಯರನ್ನು ನಾಶಮಾಡಬೇಕು

17 “ನೀವು ಈಜಿಪ್ಟಿನಿಂದ ಹೊರಬರುವಾಗ ಅಮಾಲೇಕ್ಯರು ನಿಮಗೆ ಏನು ಮಾಡಿದರೆಂಬುದನ್ನು ನೆನಪಿನಲ್ಲಿಡಿರಿ. 18 ಅಮಾಲೇಕ್ಯರು ದೇವರನ್ನು ಗೌರವಿಸಲಿಲ್ಲ. ನೀವು ಆಯಾಸಗೊಂಡು ಬಲಹೀನರಾಗಿದ್ದಾಗ ಅವರು ನಿಮ್ಮ ಮೇಲೆ ಬಿದ್ದರು. ನಿಮ್ಮ ಗುಂಪಿನಲ್ಲಿ ಹಿಂದೆ ಉಳಿದವರನ್ನೆಲ್ಲಾ ಕೊಂದರು. 19 ಆದ್ದರಿಂದಲೇ ಅಮಾಲೇಕ್ಯರನ್ನು ಈ ಭೂಮುಖದಲ್ಲಿರದಂತೆ ಮಾಡಬೇಕು. ನೀವು ನಿಮ್ಮ ದೇಶವನ್ನು ಪ್ರವೇಶಿಸುವಾಗ ನೀವು ಹಾಗೆ ಮಾಡಬೇಕು. ನಿಮ್ಮ ಸುತ್ತಮುತ್ತಲಿರುವ ವೈರಿಗಳಿಂದ ದೇವರು ನಿಮಗೆ ಶಾಂತಿಯನ್ನು ಅನುಗ್ರಹಿಸುವನು. ಆದರೆ ಅಮಾಲೇಕ್ಯರನ್ನು ನಾಶಮಾಡುವ ಕಾರ್ಯವನ್ನು ಮರೆಯಬೇಡಿರಿ.

ಕೀರ್ತನೆಗಳು 116

116 ಯೆಹೋವನು ನನ್ನ ಮೊರೆಯನ್ನು ಕೇಳಿದ್ದರಿಂದ
    ನಾನು ಆತನನ್ನು ಪ್ರೀತಿಸುತ್ತೇನೆ.
ನಾನು ಆತನಿಗೆ ಮೊರೆಯಿಡುವಾಗಲೆಲ್ಲಾ
    ಆತನು ನನಗೆ ಕಿವಿಗೊಡುತ್ತಾನೆ.
ಮರಣಕರವಾದ ಹಗ್ಗಗಳು ನನ್ನನ್ನು ಸುತ್ತಿಕೊಂಡಿದ್ದವು.
    ಸಮಾಧಿಯು ನನ್ನನ್ನು ಮುಚ್ಚಿಕೊಳ್ಳುತ್ತಿತ್ತು.
    ನಾನು ಭಯಗೊಂಡಿದ್ದೆನು; ಚಿಂತೆಗೊಳಗಾಗಿದ್ದೆನು.
ಆಗ ನಾನು ಯೆಹೋವನ ಹೆಸರು ಹೇಳಿ,
    “ಯೆಹೋವನೇ, ನನ್ನನ್ನು ರಕ್ಷಿಸು!” ಎಂದು ಮೊರೆಯಿಟ್ಟೆನು.
ಯೆಹೋವನು ಒಳ್ಳೆಯವನೂ ಕೃಪಾಪೂರ್ಣನೂ ಆಗಿದ್ದಾನೆ.
    ನಮ್ಮ ದೇವರು ಕರುಣಾಮಯನಾಗಿದ್ದಾನೆ.
ಯೆಹೋವನು ಅಸಹಾಯಕರನ್ನು ಕಾಪಾಡುವನು.
    ನಾನು ಅಸಹಾಯಕನಾಗಿದ್ದಾಗ ಯೆಹೋವನು ನನ್ನನ್ನು ರಕ್ಷಿಸಿದನು.
ನನ್ನ ಆತ್ಮವೇ, ವಿಶ್ರಮಿಸಿಕೊ!
    ಯೆಹೋವನು ನಿನ್ನನ್ನು ಕಾಪಾಡುವನು.
ಯೆಹೋವನೇ, ನೀನು ನನ್ನ ಆತ್ಮವನ್ನು ಮರಣದಿಂದ ರಕ್ಷಿಸಿದೆ.
    ನೀನು ನನ್ನ ಕಣ್ಣೀರನ್ನು ನಿಲ್ಲಿಸಿದೆ;
    ಬೀಳದಂತೆ ನನ್ನನ್ನು ಕಾಪಾಡಿದೆ.
ಜೀವಿಸುವವರ ನಾಡಿನಲ್ಲಿ ನಾನು ಯೆಹೋವನ ಸೇವೆಯನ್ನು ಮುಂದುವರಿಸುವೆನು.

10 “ನಾಶವಾದೆನು!” ಎಂದು
    ನಾನು ಹೇಳಿದಾಗಲೂ ನಂಬಿಕೊಂಡೇ ಇದ್ದೆನು.
11 ನಾನು ಭಯಗೊಂಡು, “ಎಲ್ಲಾ ಮನುಷ್ಯರು ಸುಳ್ಳುಗಾರರಾಗಿದ್ದಾರೆ!”
    ಎಂದು ಹೇಳಿದಾಗಲೂ ನಂಬಿಕೊಂಡೇ ಇದ್ದೆನು.

12 ಯೆಹೋವನ ಮಹೋಪಕಾರಗಳಿಗೆ ಬದಲೇನು ಕೊಡಲಿ?
    ನನ್ನಲ್ಲಿರುವುದೆಲ್ಲ ಯೆಹೋವನದೇ.
13 ನನ್ನನ್ನು ರಕ್ಷಿಸಿದ್ದರಿಂದ ಆತನಿಗೆ ಪಾನದ್ರವ್ಯವನ್ನು ಅರ್ಪಿಸುವೆನು.
    ಆತನ ಹೆಸರಿನಲ್ಲಿ ಪ್ರಾರ್ಥಿಸುವೆನು.
14 ನಾನು ಯೆಹೋವನಿಗೆ ಮಾಡಿದ ಹರಕೆಗಳನ್ನು
    ಜನರ ಮುಂದೆ ಆತನಿಗೆ ಸಲ್ಲಿಸುವೆನು.

15 ಯೆಹೋವನು ತನ್ನ ಭಕ್ತರ ಮರಣವನ್ನು
    ಅಲ್ಪವೆಂದು ಎಣಿಸುವುದಿಲ್ಲ.
16 ಯೆಹೋವನೇ, ನಾನು ನಿನ್ನ ಸೇವಕ.
    ನಿನ್ನ ದಾಸಿಯರಲ್ಲೊಬ್ಬಳ ಮಗ.
    ನೀನೇ ನನ್ನ ಪ್ರಥಮ ಉಪಾಧ್ಯಾಯ!
17 ನಾನು ನಿನಗೆ ಕೃತಜ್ಞತಾ ಕಾಣಿಕೆಯನ್ನು ಅರ್ಪಿಸುವೆನು.
    ಆತನ ಹೆಸರಿನಲ್ಲಿ ಪ್ರಾರ್ಥಿಸುವೆನು.
18 ನನ್ನ ಹರಕೆಗಳನ್ನು
    ಯೆಹೋವನಿಗೆ ಜನರ ಮುಂದೆ ಸಲ್ಲಿಸುವೆನು.
19 ಜೆರುಸಲೇಮಿನ ದೇವಾಲಯದ ಅಂಗಳಗಳಲ್ಲಿ
    ಈ ಯಜ್ಞಗಳನ್ನು ಅರ್ಪಿಸುವೆನು.

ಯೆಹೋವನಿಗೆ ಸ್ತೋತ್ರವಾಗಲಿ!

ಯೆಶಾಯ 52

ಇಸ್ರೇಲ್ ರಕ್ಷಿಸಲ್ಪಡುವದು

52 ಚೀಯೋನೇ, ಎಚ್ಚರಗೊಳ್ಳು, ಎದ್ದೇಳು!
    ನಿನ್ನ ಉಡುಪನ್ನು ಹಾಕಿಕೊ; ನಿನ್ನ ಪ್ರತಾಪವನ್ನು ಧರಿಸಿಕೊ.
ಪರಿಶುದ್ಧ ಜೆರುಸಲೇಮೇ, ಎದ್ದುನಿಲ್ಲು.
    ಸುನ್ನತಿಯಿಲ್ಲದವರೂ ಅಶುದ್ಧರೂ ನಿನ್ನಲ್ಲಿಗೆ ಮತ್ತೇ ಪ್ರವೇಶಿಸರು.
ನಿನ್ನ ಧೂಳನ್ನು ಝಾಡಿಸು.
ನಿನ್ನ ಮನೋಹರವಾದ ವಸ್ತ್ರಗಳನ್ನು ಧರಿಸಿಕೊ.
    ಚೀಯೋನಿನ ಕುಮಾರ್ತೆಯಾದ ಜೆರುಸಲೇಮೇ, ನೀನು ಒಮ್ಮೆ ಸೆರೆಯಾಳಾಗಿದ್ದೆ.
    ಈಗ ನೀನು ನಿನ್ನ ಕುತ್ತಿಗೆಗೆ ಬಂಧಿಸಲ್ಪಟ್ಟ ಸಂಕೋಲೆಗಳಿಂದ ಬಿಡಿಸಿಕೊ.
ಯೆಹೋವನು ಹೇಳುವುದೇನೆಂದರೆ:
    “ನಾನು ನಿನ್ನನ್ನು ಮಾರಿದ್ದು ಹಣಕ್ಕಾಗಿಯಲ್ಲ;
    ಆದ್ದರಿಂದ ನಾನು ನಿನ್ನನ್ನು ಹಣ ಕೊಡದೆ ಬಿಡುಗಡೆ ಮಾಡುವೆನು.”

ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ: “ನನ್ನ ಜನರು ಮೊದಲು ಈಜಿಪ್ಟಿನಲ್ಲಿ ನೆಲೆಸಲು ಹೋಗಿ, ನಂತರ ಅಲ್ಲಿ ಅವರು ದಾಸರಾದರು. ಆ ಬಳಿಕ ಅಶ್ಶೂರವು ಅವರನ್ನು ಗುಲಾಮರನ್ನಾಗಿ ಮಾಡಿತು. ಈಗ ನೋಡು, ಸಂಭವಿಸಿದ್ದನ್ನು ಗಮನಿಸು. ಇನ್ನೊಂದು ಜನಾಂಗವು ಅವರನ್ನು ಗುಲಾಮರನ್ನಾಗಿ ಮಾಡಿತು. ಈ ದೇಶವು ನನ್ನ ಜನರನ್ನು ತೆಗೆದುಕೊಂಡು ಹೋಗಲು ಹಣ ಕೊಡಲಿಲ್ಲ. ಈ ದೇಶವು ನನ್ನ ಜನರ ಮೇಲೆ ದಬ್ಬಾಳಿಕೆ ನಡಿಸಿ ನಕ್ಕಿತ್ತು. ಈಗ ಜನರು ನನ್ನನ್ನೂ ನನ್ನ ಹೆಸರನ್ನೂ ಯಾವಾಗಲೂ ಗೇಲಿ ಮಾಡುತ್ತಾರೆ.”

ಯೆಹೋವನು ಹೇಳುವುದೇನೆಂದರೆ, “ಜನರು ನನ್ನನ್ನು ತಿಳಿದುಕೊಳ್ಳಲೆಂದು ಹೀಗಾಯಿತು. ನಾನು ಯಾರೆಂದು ನನ್ನ ಜನರಿಗೆ ಗೊತ್ತಾಗುವದು. ನನ್ನ ಜನರಿಗೆ ನನ್ನ ಹೆಸರಿನ ಪರಿಚಯವಾಗುವದು. ‘ನಾನೇ’ ಎಂಬಾತನಾದ ನಾನೇ ಅವರ ಸಂಗಡ ಮಾತನಾಡುತ್ತಿದ್ದೇನೆ ಎಂದು ಅವರಿಗೆ ಗೊತ್ತಾಗುವದು.”

ಒಬ್ಬ ಸಂದೇಶವಾಹಕನು ಬೆಟ್ಟದ ಮೇಲಿನಿಂದ ಒಳ್ಳೆಯ ಸಮಾಚಾರವನ್ನು ತರುವದು ಎಷ್ಟೋ ಅಂದವಾಗಿದೆ. ಸಂದೇಶಕಾರನು, “ನಮಗೆ ಸಮಾಧಾನವಿದೆ, ನಾವು ರಕ್ಷಿಸಲ್ಪಟ್ಟಿದ್ದೇವೆ. ಚೀಯೋನೇ, ನಿನ್ನ ದೇವರು ಅರಸನಾಗಿದ್ದಾನೆ!” ಎಂಬ ಸಂದೇಶವನ್ನು ಕೇಳುವದು ಎಷ್ಟೋ ಸಂತೋಷ ಕೊಡುವದಾಗಿದೆ.

ಪಟ್ಟಣವನ್ನು ಕಾಯುವವರು ಸಂತೋಷದಿಂದ ಹರ್ಷಧ್ವನಿ ಮಾಡುತ್ತಾರೆ.
    ಒಟ್ಟಾಗಿ ಸಂತಸಪಡುತ್ತಿದ್ದಾರೆ.
ಯಾಕೆಂದರೆ ಯೆಹೋವನು ಚೀಯೋನಿಗೆ ಹಿಂದಿರುಗುವದನ್ನು ಪ್ರತಿಯೊಬ್ಬನು ನೋಡುವನು.

ಜೆರುಸಲೇಮೇ, ನಿನ್ನ ಕೆಡವಲ್ಪಟ್ಟ ಕಟ್ಟಡಗಳು ಮತ್ತೆ ಸಂತೋಷಿಸುವವು.
ನೀವೆಲ್ಲರೂ ಒಟ್ಟಾಗಿ ಹರ್ಷಿಸುವಿರಿ.
    ಯಾಕೆಂದರೆ ಯೆಹೋವನು ಜೆರುಸಲೇಮನ್ನು ಬಿಡಿಸಿ ತನ್ನ ಜನರನ್ನು ಸಂತೈಸುವನು.
10 ಯೆಹೋವನು ತನ್ನ ಪರಿಶುದ್ಧ ಸಾಮರ್ಥ್ಯವನ್ನು ಎಲ್ಲಾ ಜನಾಂಗಗಳಿಗೆ ಪ್ರದರ್ಶಿಸುವನು.
    ಯೆಹೋವನು ತನ್ನ ಜನರನ್ನು ರಕ್ಷಿಸುವದನ್ನು ದೂರದೇಶದವರು ನೋಡುವರು.

11 ನೀವು ಬಾಬಿಲೋನಿನಿಂದ ಹೊರಟುಹೋಗಬೇಕು;
    ನೀವು ಆ ಸ್ಥಳವನ್ನು ಬಿಟ್ಟುಹೋಗಬೇಕು.
ಯಾಜಕರೇ, ಆರಾಧನೆಗೆ ಬೇಕಾದ ಸಾಮಗ್ರಿಗಳನ್ನು ಹೊತ್ತುಕೊಳ್ಳಿರಿ.
    ನಿಮ್ಮನ್ನು ಶುದ್ಧಿ ಮಾಡಿಕೊಳ್ಳಿರಿ;
    ಅಶುದ್ಧವಾದ ಯಾವುದನ್ನೂ ಮುಟ್ಟದಿರಿ.
12 ನೀವು ಬಾಬಿಲೋನಿನಿಂದ ಹೊರಗೆ ಬರುವಿರಿ.
    ತ್ವರೆಪಟ್ಟು ಬರುವಂತೆ ಅವರು ಬಲವಂತ ಮಾಡುವದಿಲ್ಲ.
    ನೀವು ಓಡಿ ಹೋಗುವಂತೆ ಅವರು ಒತ್ತಾಯಪಡಿಸುವದಿಲ್ಲ.
    ನೀವು ಹೊರಗೆ ನಡೆಯುವಿರಿ.
ಯೆಹೋವನು ನಿಮ್ಮೊಂದಿಗೆ ನಡೆಯುವನು.
    ಯೆಹೋವನು ನಿಮ್ಮ ಮುಂದೆ ಇರುವನು.
    ಇಸ್ರೇಲರ ದೇವರು ನಿಮ್ಮ ಹಿಂದೆಯೂ ಇರುವನು.

ದೇವಸೇವಕನ ಸಂಕಟ

13 ಯೆಹೋವನು ಹೇಳುವುದೇನೆಂದರೆ, “ನನ್ನ ಸೇವಕನನ್ನು ದೃಷ್ಟಿಸಿರಿ. ಆತನು ಯಶಸ್ವಿಯಾಗುವನು. ಅವನು ಬಹಳ ಮುಖ್ಯವಾದವನಾಗಿರುವನು. ಮುಂದಿನ ದಿವಸಗಳಲ್ಲಿ ಜನರು ಆತನನ್ನು ಸನ್ಮಾನಿಸಿ ಗೌರವಿಸುವರು. 14 ಆದರೆ ನನ್ನ ಜನರು ನನ್ನ ಸೇವಕನನ್ನು ನೋಡಿದಾಗ ಆಶ್ಚರ್ಯಗೊಂಡರು. ಆತನು ಮನುಷ್ಯನೆಂಬ ಗುರುತೇ ಅವರಿಗೆ ಸಿಕ್ಕಲಿಲ್ಲ. ಆತನ ರೂಪವು ವಿಕಾರವಾಗುವಷ್ಟರ ಮಟ್ಟಿಗೆ ಆತನು ಗಾಯಗೊಂಡಿದ್ದನು. 15 ಅನೇಕ ಜನಾಂಗಗಳವರು ಆತನನ್ನು ಕಂಡು ಆಶ್ಚರ್ಯಪಡುವರು. ಅರಸರು ದಿಗ್ಭ್ರಮೆಯಿಂದ ಆತನನ್ನು ದೃಷ್ಟಿಸಿ ನೋಡುವರು. ಅವರು ನನ್ನ ಸೇವಕನ ಬಗ್ಗೆ ಕೇಳಲಿಲ್ಲ. ಆತನಿಗೆ ಸಂಭವಿಸಿದ್ದನ್ನೇ ನೋಡಿದರು. ಅವರು ಆತನ ವಿಚಾರ ಕೇಳದಿದ್ದರೂ ಅವರಿಗೆ ತಿಳಿದುಬಂತು.”

ಪ್ರಕಟನೆ 22

22 ಆಗ ದೇವದೂತನು ನನಗೆ ಜೀವಜಲದ ನದಿಯನ್ನು ತೋರಿಸಿದನು. ಆ ನದಿಯು ಸ್ಫಟಿಕದಂತೆ ಪ್ರಕಾಶಮಾನವಾಗಿತ್ತು. ಆ ನದಿಯು ದೇವರ ಮತ್ತು ಕುರಿಮರಿಯಾದಾತನ ಸಿಂಹಾಸನದಿಂದ ಆಗಮಿಸಿ, ನಗರದ ಬೀದಿಯ ಮಧ್ಯಭಾಗದಲ್ಲಿ ಹರಿಯುತ್ತಿತ್ತು. ಆ ನದಿಯ ಎರಡು ದಡಗಳಲ್ಲಿಯೂ ಜೀವವೃಕ್ಷಗಳಿದ್ದ್ದವು. ಆ ಜೀವವೃಕ್ಷವು ಪ್ರತಿತಿಂಗಳು ಫಲವನ್ನು ಫಲಿಸುತ್ತಾ ವರ್ಷದಲ್ಲಿ ಹನ್ನೆರಡು ತರದ ಫಲಗಳನ್ನು ನೀಡುತ್ತದೆ. ಆ ವೃಕ್ಷದ ಎಲೆಗಳು ಜನಾಂಗದವರನ್ನು ಗುಣಪಡಿಸುತ್ತವೆ.

ದೇವರಿಂದ ಶಾಪ ಹೊಂದಿದ ಯಾವುದೂ ಆ ಪಟ್ಟಣದಲ್ಲಿರುವುದಿಲ್ಲ. ದೇವರ ಮತ್ತು ಕುರಿಮರಿಯಾದಾತನ (ಯೇಸು) ಸಿಂಹಾಸನವು ಆ ನಗರದಲ್ಲಿರುತ್ತದೆ. ದೇವರ ಸೇವಕರು ಆತನನ್ನು ಆರಾಧಿಸುತ್ತಾರೆ. ಅವರು ಆತನ ಮುಖವನ್ನು ನೋಡುತ್ತಾರೆ. ದೇವರ ಹೆಸರನ್ನು ಅವರ ಹಣೆಗಳ ಮೇಲೆ ಬರೆಯಲಾಗುತ್ತದೆ. ಅಲ್ಲಿ ರಾತ್ರಿಯೆಂಬುದೇ ಇರುವುದಿಲ್ಲ. ಜನರಿಗೆ ದೀಪದ ಬೆಳಕಾಗಲಿ ಸೂರ್ಯನ ಬೆಳಕಾಗಲಿ ಬೇಕಾಗುವುದಿಲ್ಲ. ಪ್ರಭುವಾದ ದೇವರೇ ಅವರಿಗೆ ಬೆಳಕನ್ನು ನೀಡುತ್ತಾನೆ. ಅವರು ಯುಗಯುಗಾಂತರಗಳಲ್ಲಿ ರಾಜರುಗಳಂತೆ ಆಳುತ್ತಾರೆ.

ಆ ದೇವದೂತನು ನನಗೆ, “ಈ ವಾಕ್ಯಗಳು ಸತ್ಯವಾದವುಗಳೂ ನಂಬತಕ್ಕವುಗಳೂ ಆಗಿವೆ. ಪ್ರವಾದಿಗಳ ಆತ್ಮಗಳಿಗೆ ಪ್ರಭುವೇ ದೇವರಾಗಿದ್ದಾನೆ. ಬೇಗನೆ ಸಂಭವಿಸಲಿರುವ ಸಂಗತಿಗಳನ್ನು ತನ್ನ ಸೇವಕರಿಗೆ ತೋರಿಸಲು ದೇವರು ತನ್ನ ದೂತನನ್ನು ಕಳುಹಿಸಿದ್ದಾನೆ: ‘ಕೇಳಿರಿ, ನಾನು ಬೇಗನೆ ಬರುತ್ತೇನೆ! ಈ ಪುಸ್ತಕದಲ್ಲಿರುವ ಪ್ರವಾದನೆಯ ವಾಕ್ಯಗಳಿಗೆ ವಿಧೇಯತೆಯಿಂದಿರುವವನು ಧನ್ಯನಾಗುತ್ತಾನೆ’” ಎಂದು ಹೇಳಿದನು.

ನಾನೇ ಯೋಹಾನನು. ನಾನು ಇವುಗಳನ್ನೆಲ್ಲ ಕೇಳಿದೆನು ಮತ್ತು ನೋಡಿದೆನು. ನಾನು ಇವುಗಳನ್ನು ಕೇಳಿ, ಕಂಡಾಗ, ನನಗೆ ಇವುಗಳನ್ನೆಲ್ಲ ತೋರಿಸಿದ ದೇವದೂತನನ್ನು ಆರಾಧಿಸುವುದಕ್ಕಾಗಿ ಅವನ ಪಾದಗಳಿಗೆ ಅಡ್ಡಬಿದ್ದೆನು. ಆದರೆ ಆ ದೇವದೂತನು ನನಗೆ, “ನನ್ನನ್ನು ಆರಾಧಿಸಬೇಡ! ನಾನು ನಿನ್ನಂತೆ, ಈ ಪುಸ್ತಕದಲ್ಲಿರುವ ವಾಕ್ಯಗಳಿಗೆ ವಿಧೇಯರಾಗಿರುವ ಎಲ್ಲ ಜನರಂತೆ ಮತ್ತು ನಿನ್ನ ಸಹೋದರರಾದ ಪ್ರವಾದಿಗಳಂತೆ ಒಬ್ಬ ಸೇವಕನು. ನೀನು ದೇವರನ್ನು ಆರಾಧಿಸಬೇಕು!” ಎಂದು ಹೇಳಿದನು.

10 ಬಳಿಕ ದೇವದೂತನು ನನಗೆ, “ಈ ಪುಸ್ತಕದಲ್ಲಿರುವ ಪ್ರವಾದನೆಯ ವಾಕ್ಯಗಳನ್ನು ರಹಸ್ಯವಾಗಿಡಬೇಡ. ಇವುಗಳೆಲ್ಲವೂ ಸಂಭವಿಸುವ ಕಾಲ ಸಮೀಪಿಸಿದೆ. 11 ತಪ್ಪು ಮಾಡುತ್ತಿರುವವನು ತಪ್ಪುಮಾಡುತ್ತಲೇ ಮುಂದುವರಿಯಲು ಬಿಡು. ಅಶುದ್ಧನಾದವನು ಅಶುದ್ಧತೆಯಲ್ಲೇ ಮುಂದುವರಿಯಲು ಬಿಡು. ಯೋಗ್ಯವಾದುದನ್ನು ಮಾಡುವವನು ಯೋಗ್ಯವಾದುದನ್ನೇ ಮಾಡಲಿ. ಪರಿಶುದ್ಧನಾಗಿರುವವನು ಪರಿಶುದ್ಧನಾಗಿಯೇ ಇರಲಿ” ಎಂದು ಹೇಳಿದನು.

12 “ಕೇಳು! ನಾನು ಬೇಗನೆ ಬರುತ್ತೇನೆ! ನನ್ನೊಂದಿಗೆ ಪ್ರತಿಫಲವನ್ನು ತರುತ್ತೇನೆ. ಪ್ರತಿಯೊಬ್ಬ ವ್ಯಕ್ತಿಗೂ ಅವನು ಮಾಡಿದುದಕ್ಕೆ ತಕ್ಕ ಪ್ರತಿಫಲವನ್ನು ಕೊಡುತ್ತೇನೆ. 13 ನಾನೇ ಆದಿಯೂ ಅಂತ್ಯವೂ ಮೊದಲನೆಯವನೂ ಕಡೆಯವನೂ ಪ್ರಾರಂಭವೂ ಸಮಾಪ್ತಿಯೂ ಆಗಿದ್ದೇನೆ.

14 “ತಮ್ಮ ನಿಲುವಂಗಿಗಳನ್ನು ತೊಳೆದುಕೊಂಡ ಜನರೇ ಧನ್ಯರು. ಅವರು ಜೀವವೃಕ್ಷದ ಹಣ್ಣನ್ನು ತಿನ್ನಲು ಹಕ್ಕುಳ್ಳವರಾಗಿದ್ದಾರೆ. ಅವರು ಬಾಗಿಲುಗಳ ಮೂಲಕ ನಗರದೊಳಕ್ಕೆ ಹೋಗಬಲ್ಲರು. 15 ನಗರದ ಹೊರಭಾಗದಲ್ಲಿ ನಾಯಿಗಳಿವೆ (ಕೆಟ್ಟಜನರು), ಕೆಟ್ಟ ಮಾಟವನ್ನು ಮಾಡುವ ಜನರಿದ್ದಾರೆ, ಲೈಂಗಿಕ ಪಾಪಗಳನ್ನು ಮಾಡುವ ಜನರಿದ್ದಾರೆ, ಕೊಲೆಗಾರರಿದ್ದಾರೆ, ವಿಗ್ರಹಗಳನ್ನು ಆರಾಧಿಸುವ ಜನರಿದ್ದಾರೆ ಮತ್ತು ಸುಳ್ಳನ್ನು ಪ್ರೀತಿಸುವ ಮತ್ತು ಹೇಳುವ ಜನರಿದ್ದಾರೆ.

16 “ಯೇಸುವೆಂಬ ನಾನೇ, ನನ್ನ ಸಭೆಗಳ ಪ್ರಯೋಜನಾರ್ಥವಾಗಿ ಈ ಸಂಗತಿಗಳ ಬಗ್ಗೆ ಸಾಕ್ಷಿ ನೀಡಲೆಂದು ನನ್ನ ದೂತನನ್ನು ಕಳುಹಿಸಿದೆನು. ದಾವೀದನ ವಂಶದಲ್ಲಿ ಹುಟ್ಟಿದವನೂ ಪ್ರಕಾಶಮಾನವಾದ ಉದಯನಕ್ಷತ್ರವೂ ಆಗಿದ್ದಾನೆ.”

17 ಆತ್ಮನೂ ಮದುಮಗಳೂ, “ಬಾ!” ಎನ್ನುತ್ತಾರೆ. ಇದನ್ನು ಕೇಳುವ ಪ್ರತಿಯೊಬ್ಬ ವ್ಯಕ್ತಿಯೂ, “ಬಾ!” ಎಂದು ಹೇಳಬೇಕು. ಬಾಯಾರಿದವನು ನನ್ನ ಬಳಿಗೆ ಬರಲಿ; ಅವನಿಗೆ ಇಷ್ಟವಿದ್ದರೆ ಜೀವಜಲವನ್ನು ಉಚಿತವಾಗಿ ಪಡೆದುಕೊಳ್ಳಲಿ.

18 ಈ ಪುಸ್ತಕದಲ್ಲಿರುವ ಪ್ರವಾದನೆಯ ವಾಕ್ಯಗಳನ್ನು ಕೇಳಿದ ಪ್ರತಿಯೊಬ್ಬರಿಗೂ ನಾನು ಎಚ್ಚರಿಕೆ ನೀಡುತ್ತೇನೆ: ಈ ವಾಕ್ಯಗಳಿಗೆ ಯಾರಾದರೂ ಏನನ್ನಾದರೂ ಸೇರಿಸಿದರೆ, ದೇವರು ಈ ಪುಸ್ತಕದಲ್ಲಿ ಬರೆದಿರುವ ಉಪದ್ರವಗಳನ್ನು ಅವನಿಗೆ ಕೊಡುತ್ತಾನೆ. 19 ಈ ಪ್ರವಾದನೆಯ ಪುಸ್ತಕದಿಂದ ಯಾರಾದರೂ ಏನನ್ನಾದರೂ ತೆಗೆದುಹಾಕಿದರೆ, ದೇವರು ಈ ಪುಸ್ತಕದಲ್ಲಿ ಬರೆದಿರುವ ಪವಿತ್ರಪಟ್ಟಣದಲ್ಲಿಯೂ ಜೀವವೃಕ್ಷದಲ್ಲಿಯೂ ಅವನಿಗಿರುವ ಪಾಲನ್ನು ತೆಗೆದುಹಾಕುತ್ತಾನೆ.

20 ಇವುಗಳೆಲ್ಲಾ ನಿಜವೆಂದು ಹೇಳುವಾತನು ಯೇಸುವೇ. ಈಗ ಆತನು, “ಹೌದು, ನಾನು ಬೇಗನೆ ಬರುತ್ತೇನೆ” ಎಂದು ಹೇಳುತ್ತಾನೆ.

ಆಮೆನ್! ಪ್ರಭು ಯೇಸುವೇ, ಬಾ!

21 ಪ್ರಭು ಯೇಸುವಿನ ಕೃಪೆಯು ಎಲ್ಲಾ ಜನರೊಂದಿಗಿರಲಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International