M’Cheyne Bible Reading Plan
ಸುಳ್ಳು ಪ್ರವಾದಿಗಳು
13 “ಒಬ್ಬ ಪ್ರವಾದಿಯಾಗಲಿ ಕನಸಿನ ಅರ್ಥ ಹೇಳುವವನಾಗಲಿ ನಿಮ್ಮ ಬಳಿಗೆ ಬಂದು ನಿಮಗೊಂದು ಸೂಚಕಕಾರ್ಯವನ್ನಾಗಲಿ ಅದ್ಭುತಕಾರ್ಯವನ್ನಾಗಲಿ ಮಾಡಿತೋರಿಸುತ್ತೇನೆ ಎಂದು ಹೇಳಿದರೂ ಹೇಳಬಹುದು. 2 ಅವನು ಅದ್ಭುತಕಾರ್ಯಗಳನ್ನು ಮಾಡಿತೋರಿಸಬಹುದು. ಆಮೇಲೆ ಅವನು ನಿಮಗೆ ಗೊತ್ತಿಲ್ಲದ ದೇವರನ್ನು ಅನುಸರಿಸಲು ನಿಮಗೆ ಹೇಳಬಹುದು. 3 ಅಂಥ ಮನುಷ್ಯನಿಗೆ ಕಿವಿಗೊಡಬೇಡಿ. ದೇವರು ನಿಮ್ಮನ್ನು ಪರೀಕ್ಷೆ ಮಾಡುತ್ತಿದ್ದಾನೆ. ನಿಮ್ಮ ದೇವರಾದ ಯೆಹೋವನನ್ನು ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪ್ರೀತಿಸುತ್ತೀರೋ ಇಲ್ಲವೋ ಎಂದು ನಿಮ್ಮನ್ನು ಪರೀಕ್ಷಿಸುವನು. 4 ನೀವು ನಿಮ್ಮ ದೇವರಾದ ಯೆಹೋವನನ್ನು ಅನುಸರಿಸಬೇಕು, ಗೌರವಿಸಬೇಕು, ಆತನ ಆಜ್ಞೆಗಳಿಗೆ ವಿಧೇಯರಾಗಬೇಕು. ಆತನು ಹೇಳಿದಂತೆ ನಡೆಯಬೇಕು ಮತ್ತು ಆತನನ್ನು ತೊರೆದುಬಿಡದೆ ಸೇವಿಸಬೇಕು. 5 ಅಂಥ ಪ್ರವಾದಿ ಅಥವಾ ಕನಸಿನ ಅರ್ಥ ಹೇಳುವವನನ್ನು ಕೊಂದು ಹಾಕಬೇಕು. ಯಾಕೆಂದರೆ ಅವನು ಯೆಹೋವನನ್ನು ತೊರೆಯಲು ಪ್ರೇರೇಪಿಸಿದನಲ್ಲಾ? ದೇವರಾದ ಯೆಹೋವನೇ ನಿಮ್ಮನ್ನು ಈಜಿಪ್ಟಿನಿಂದ ಬಿಡಿಸಿದವನು. ಆತನು ನಿಮಗೆ ಹೇಳಿದ ನಿಯಮಗಳಿಗೆ ವಿರುದ್ಧವಾಗಿ ನಡೆಯಲು ಪ್ರೇರೇಪಿಸುವವನನ್ನು ಕೊಲ್ಲಬೇಕು; ನಿಮ್ಮ ಮಧ್ಯದಿಂದ ಅಂಥ ದುಷ್ಟತನವನ್ನು ತೆಗೆದುಹಾಕಬೇಕು.
6 “ನಿಮ್ಮ ಹತ್ತಿರದ ಸಂಬಂಧಿಕರಲ್ಲಿ ಯಾರಾದರೂ ಇತರ ದೇವರುಗಳನ್ನು ಅನುಸರಿಸಲು ನಿಮ್ಮನ್ನು ಗುಪ್ತವಾಗಿ ಒತ್ತಾಯ ಮಾಡಬಹುದು. ಅವರು ನಿಮ್ಮ ಸ್ವಂತ ಸಹೋದರನಾಗಿರಬಹುದು, ನಿಮ್ಮ ಮಕ್ಕಳಾಗಿರಬಹುದು, ನಿಮ್ಮ ಹೆಂಡತಿಯಾಗಿರಬಹುದು, ಅಥವಾ ಆಪ್ತಗೆಳೆಯನಾಗಿರಬಹುದು. ಅವರು ಬಂದು, ‘ಬಾ, ನಾವು ಬೇರೆ ದೇವರನ್ನು ಹಿಂಬಾಲಿಸೋಣ’ (ಈ ದೇವರನ್ನು ನೀವಾಗಲಿ ನಿಮ್ಮ ಪೂರ್ವಿಕರಾಗಲಿ ತಿಳಿದಿರಲಿಲ್ಲ. 7 ಅವು ನಿಮ್ಮ ಸುತ್ತಮುತ್ತಲಿರುವ ಬೇರೆ ದೇಶಗಳಲ್ಲಿ ವಾಸವಾಗಿರುವ ಜನರ ದೇವರುಗಳು, ಅವುಗಳಲ್ಲಿ ಕೆಲವು ಹತ್ತಿರದವುಗಳಾಗಿವೆ; ಕೆಲವು ದೂರದವುಗಳಾಗಿವೆ.) 8 ಎಂದರೆ ಆ ವ್ಯಕ್ತಿಯ ಸಲಹೆಗೆ ನೀವು ಒಪ್ಪಬಾರದು. ಅವನಿಗೆ ಕಿವಿಗೊಡಬೇಡಿ; ಅವನಿಗೆ ಕನಿಕರತೋರಬೇಡಿ; ಅವನು ಸ್ವತಂತ್ರನಾಗಿ ಹೋಗಲು ಬಿಡಬೇಡಿ; ಅವನನ್ನು ಸಂರಕ್ಷಿಸಬೇಡಿ. 9-10 ನೀವು ಅವನನ್ನು ಕೊಂದುಹಾಕಬೇಕು. ನೀವು ಕಲ್ಲೆಸೆದು ಅವನನ್ನು ಸಾಯಿಸಬೇಕು. ನೀವು ಅವನ ಮೇಲೆ ಮೊದಲನೆ ಕಲ್ಲನ್ನು ಎಸೆಯಬೇಕು. ಈಜಿಪ್ಟಿನ ದಾಸತ್ವದಿಂದ ನಿಮ್ಮನ್ನು ಬಿಡಿಸಿಕೊಂಡು ಬಂದ ನಿಮ್ಮ ದೇವರಾದ ಯೆಹೋವನಿಗೆ ವಿರುದ್ಧವಾಗಿ ನಡೆದುಕೊಳ್ಳುವಂತೆ ನಿಮ್ಮನ್ನು ಪ್ರೇರೇಪಿಸಿದವನು ಅವನೇ ಅಲ್ಲವೇ? 11 ಆಗ ಇಸ್ರೇಲಿನ ಎಲ್ಲಾ ಜನರಲ್ಲಿ ಭಯವುಂಟಾಗಿ ಅಂಥಾ ಕೆಟ್ಟ ಕೆಲಸವನ್ನು ಎಂದಿಗೂ ಮಾಡುವುದಿಲ್ಲ.
12 “ನಿಮ್ಮ ದೇವರಾದ ಯೆಹೋವನು ನಿಮ್ಮ ವಾಸಕ್ಕಾಗಿ ನಿಮಗೆ ಪಟ್ಟಣಗಳನ್ನು ಕೊಟ್ಟಿದ್ದಾನೆ. ಒಂದುವೇಳೆ, ಆ ಪಟ್ಟಣಗಳಲ್ಲಿ ಯಾವುದಾದರೊಂದರ ಬಗ್ಗೆ ನೀವು ಕೆಟ್ಟ ಸುದ್ದಿಯನ್ನು ಕೇಳಬಹುದು. 13 ನಿಮ್ಮ ಸ್ವಂತ ದೇಶದಲ್ಲಿರುವ ಕೆಲವು ಕೆಟ್ಟ ಜನರು ಕೆಟ್ಟದ್ದನ್ನು ಮಾಡಲು ತಮ್ಮ ಪಟ್ಟಣದ ಜನರನ್ನು ಒತ್ತಾಯಪಡಿಸುತ್ತಿದ್ದಾರೆಂದು ನೀವು ಕೇಳಬಹುದು. ಅವರು ತಮ್ಮ ಪಟ್ಟಣದ ಜನರಿಗೆ, ‘ನಾವು ಹೋಗಿ ಬೇರೆ ದೇವರುಗಳ ಸೇವೆಮಾಡೋಣ’ ಎಂದು ಹೇಳಬಹುದು. (ಈ ದೇವರುಗಳನ್ನು ನೀವು ಹಿಂದೆಂದೂ ತಿಳಿದಿಲ್ಲ.) 14 ನೀವು ಇಂಥ ಸುದ್ದಿಯನ್ನು ಕೇಳಿದರೆ, ಅದು ಸತ್ಯವೇ ಎಂಬುದನ್ನು ತಿಳಿದುಕೊಳ್ಳಲು ನಿಮ್ಮಿಂದಾದಷ್ಟು ಪ್ರಯತ್ನಿಸಬೇಕು. ಅದು ಸತ್ಯವೆಂಬುದು ನಿಮಗೆ ತಿಳಿದುಬಂದರೆ ಮತ್ತು ಅಂಥ ಭಯಂಕರ ಸಂಗತಿಯು ನಿಜವಾಗಿಯೂ ಸಂಭವಿಸಿತೆಂದು ನೀವು ರುಜುವಾತುಪಡಿಸಲು ಶಕ್ತರಾಗಿದ್ದರೆ, 15 ನೀವು ಆ ಪಟ್ಟಣದ ಜನರನ್ನು ದಂಡಿಸಬೇಕು; ಅವರೆಲ್ಲರನ್ನೂ ಕೊಲ್ಲಬೇಕು; ಅವರ ಎಲ್ಲಾ ಪಶುಗಳನ್ನು ಸಹ ಕೊಲ್ಲಬೇಕು. ಆ ಪಟ್ಟಣವನ್ನು ಸಂಪೂರ್ಣವಾಗಿ ನಾಶಮಾಡಬೇಕು. 16 ನೀವು ಆ ಪಟ್ಟಣದಲ್ಲಿದ್ದ ಎಲ್ಲಾ ಬೆಲೆಬಾಳುವ ವಸ್ತುಗಳನ್ನು ಪಟ್ಟಣದ ಮಧ್ಯದಲ್ಲಿ ತಂದುಹಾಕಿ ಅದಕ್ಕೆ ಬೆಂಕಿಹೊತ್ತಿಸಿ ಇಡೀ ಪಟ್ಟಣವನ್ನು ಬೆಂಕಿಯಿಂದ ಸುಡಬೇಕು. ಇದು ದೇವರಾದ ಯೆಹೋವನಿಗೆ ಸರ್ವಾಂಗಹೋಮವಾಗುವುದು. ಆ ಪಟ್ಟಣವು ಕಲ್ಲುಗಳ ರಾಶಿಯಾಗಿ ಪರಿಣಮಿಸುವುದು ಮತ್ತು ಯಾರೂ ಆ ಪಟ್ಟಣವನ್ನು ಮತ್ತೆ ಕಟ್ಟಬಾರದು. 17 ಆ ಪಟ್ಟಣದಲ್ಲಿರುವ ಪ್ರತಿಯೊಂದು ವಸ್ತು ನಾಶವಾಗಬೇಕು. ಅದರಲ್ಲಿ ಯಾವುದನ್ನಾದರೂ ನೀವು ನಿಮ್ಮ ಉಪಯೋಗಕ್ಕೆ ಇಟ್ಟುಕೊಳ್ಳಬಾರದು. ನೀವು ಹೀಗೆ ಮಾಡಿದರೆ ಯೆಹೋವನು ನಿಮ್ಮ ಮೇಲೆ ಸಿಟ್ಟುಗೊಳ್ಳುವುದಿಲ್ಲ. ಆತನು ನಿಮ್ಮ ಮೇಲೆ ದಯೆತೋರಿಸುವನು. ನಿಮ್ಮ ಪೂರ್ವಿಕರಿಗೆ ವಾಗ್ದಾನ ಮಾಡಿದ ಪ್ರಕಾರ ನಿಮ್ಮ ದೇಶವನ್ನು ವಿಸ್ತಾರ ಮಾಡುವನು. 18 ನಿಮ್ಮ ದೇವರಾದ ಯೆಹೋವನಿಗೆ ನೀವು ಕಿವಿಗೊಟ್ಟರೆ, ನಾನು ನಿಮಗೆ ಕೊಡುವ ಆತನ ಎಲ್ಲಾ ಆಜ್ಞೆಗಳಿಗೆ ವಿಧೇಯರಾದರೆ ಇದು ಸಂಭವಿಸುವುದು. ನಿಮ್ಮ ದೇವರಾದ ಯೆಹೋವನು ಸರಿಯೆಂದು ಹೇಳುವ ಕಾರ್ಯಗಳನ್ನೇ ನೀವು ಮಾಡಬೇಕು.
ಇಸ್ರೇಲರು ದೇವಜನರು
14 “ನೀವು ನಿಮ್ಮ ದೇವರಾದ ಯೆಹೋವನ ಮಕ್ಕಳು. ನಿಮ್ಮಲ್ಲಿ ಯಾರಾದರೂ ಸತ್ತರೆ ನೀವು ತಲೆಬೋಳಿಸಿಕೊಂಡಾಗಲಿ ನಿಮ್ಮನ್ನು ಕತ್ತರಿಸಿಕೊಂಡಾಗಲಿ ನಿಮ್ಮ ದುಃಖವನ್ನು ಪ್ರದರ್ಶಿಸಕೂಡದು. 2 ಯಾಕೆಂದರೆ ನೀವು ಬೇರೆಯವರಿಗಿಂತ ವಿಭಿನ್ನರು. ನೀವು ಯೆಹೋವನ ವಿಶೇಷ ಜನರಾಗಿದ್ದೀರಿ. ಲೋಕದ ಎಲ್ಲಾ ಜನರಲ್ಲಿ ಯೆಹೋವನು ನಿಮ್ಮನ್ನು ತನ್ನ ಸ್ವಕೀಯ ಜನಾಂಗವನ್ನಾಗಿ ಆರಿಸಿಕೊಂಡಿದ್ದಾನೆ.
ಇಸ್ರೇಲರು ತಿನ್ನಬಹುದಾದ ಆಹಾರ
3 “ಯೆಹೋವನು ಅಸಹ್ಯಪಡುವ ವಸ್ತುಗಳನ್ನು ನೀವು ತಿನ್ನಬಾರದು. 4 ನೀವು ಹಸು, ಕುರಿ, ಆಡು, 5 ಜಿಂಕೆ, ದುಪ್ಪಿ, ಸಾರಂಗ, ಕಾಡುಕುರಿ, ಕಾಡುಮೇಕೆ, ಕಡವೆ, ಬೆಟ್ಟದ ಆಡು ಇವುಗಳನ್ನು ತಿನ್ನಬಹುದು. 6 ಗೊರಸು ಸೀಳಿರುವ ಮತ್ತು ಮೆಲುಕು ಹಾಕುವ ಪ್ರಾಣಿಯನ್ನು ನೀವು ತಿನ್ನಬಹುದು. 7 ಆದರೆ ಒಂಟೆ, ಮೊಲ, ಬೆಟ್ಟದ ಮೊಲ ಇವುಗಳನ್ನು ತಿನ್ನಬಾರದು. ಈ ಪ್ರಾಣಿಗಳು ಮೆಲುಕು ಹಾಕುತ್ತವೆ ಆದರೆ ಅವುಗಳ ಗೊರಸು ಸೀಳಿಲ್ಲ. ಆದ್ದರಿಂದ ಅವುಗಳು ಶುದ್ಧಪ್ರಾಣಿಗಳಲ್ಲ. ನೀವು ಅವುಗಳನ್ನು ಆಹಾರವಾಗಿ ಉಪಯೋಗಿಸಕೂಡದು. 8 ನೀವು ಹಂದಿಗಳನ್ನು ತಿನ್ನಬಾರದು. ಅವುಗಳ ಗೊರಸುಗಳು ಸೀಳಿವೆ; ಆದರೆ ಅವುಗಳು ಮೆಲುಕು ಹಾಕುವುದಿಲ್ಲ. ಆದ್ದರಿಂದ ಹಂದಿಯು ನಿಮಗೆ ಶುದ್ಧ ಆಹಾರವಾಗುವುದಿಲ್ಲ; ಹಂದಿಯ ಹೆಣವನ್ನೂ ನೀವು ಮುಟ್ಟಬಾರದು.
9 “ಮೀನುಗಳಲ್ಲಿ ಪರೆ ಮತ್ತು ಈಜುರೆಕ್ಕೆಗಳಿರುವುದನ್ನು ಆಹಾರವಾಗಿ ಉಪಯೋಗಿಸಬಹುದು. 10 ಪರೆ, ಈಜುರೆಕ್ಕೆಗಳಿಲ್ಲದ ಮೀನುಗಳನ್ನು ತಿನ್ನಬಾರದು. ಅವು ಅಶುದ್ಧ.
11 “ನೀವು ಶುದ್ಧಪಕ್ಷಿಗಳನ್ನು ತಿನ್ನಬಹುದು. 12 ಆದರೆ, ಗಿಡುಗ, ರಣಹದ್ದು, ಕ್ರೌಂಚ, 13 ಸಕಲವಿಧವಾದ ಹದ್ದು, ಗಿಡುಗಗಳು, 14 ಸಕಲ ವಿಧವಾದ ಕಾಗೆಗಳು, 15 ಗೂಬೆಗಳು, ಸಣ್ಣಗೂಬೆಗಳು, ಕಡಲಕಾಗೆ, 16-17 ಸಕಲವಿಧವಾದ ಗೂಬೆಗಳು, 18 ಕೊಕ್ಕರೆಗಳು, ಬಕಪಕ್ಷಿ, ಬಾವಲಿಗಳು ಅಶುದ್ಧವಾದ ಕಾರಣ ತಿನ್ನಬಾರದು.
19 “ರೆಕ್ಕೆಯುಳ್ಳ ಹುಳಗಳೆಲ್ಲಾ ಅಶುದ್ಧ. ಆದ್ದರಿಂದ ಅವುಗಳನ್ನು ತಿನ್ನಬೇಡಿ. 20 ಆದರೆ ನೀವು ಶುದ್ಧವಾದ ಯಾವ ಪಕ್ಷಿಯನ್ನು ಬೇಕಾದರೂ ತಿನ್ನಬಹುದು.
21 “ಸತ್ತುಬಿದ್ದ ಯಾವ ಪ್ರಾಣಿಯನ್ನಾಗಲೀ ತಿನ್ನಬಾರದು. ನಿಮ್ಮ ಊರಲ್ಲಿರುವ ಪರದೇಶಿಗೆ ಕೊಡಿರಿ. ಅವನು ತಿನ್ನಬಹುದು, ಅಥವಾ ಆ ಸತ್ತ ಪ್ರಾಣಿಯನ್ನು ಪರದೇಶಿಗೆ ಮಾರಬಹುದು. ಆದರೆ ನೀವು ತಿನ್ನಬಾರದು. ಯಾಕೆಂದರೆ ನೀವು ಯೆಹೋವನ ಜನರಾಗಿದ್ದೀರಿ; ಆತನ ಸ್ವಕೀಯ ಪ್ರಜೆಗಳಾಗಿದ್ದೀರಿ. ಆಡಿನ ಮರಿಯನ್ನು ಅದರ ತಾಯಿಯ ಹಾಲಿನಲ್ಲಿ ಬೇಯಿಸಬೇಡಿರಿ.
ದಶಮಾಂಶ
22 “ಪ್ರತಿ ವರ್ಷ ನಿಮ್ಮ ಹೊಲದ ಬೆಳೆಯಲ್ಲಿ ಹತ್ತನೆಯ ಒಂದು ಅಂಶವನ್ನು ಪ್ರತ್ಯೇಕಿಸಿಡಿರಿ. 23 ನಿಮ್ಮ ದೇವರಾದ ಯೆಹೋವನು ತನ್ನ ವಿಶೇಷ ವಾಸಸ್ಥಾನವಾಗಿ ಯಾವ ಸ್ಥಳವನ್ನು ಆರಿಸಿಕೊಳ್ಳುತ್ತಾನೋ ಆ ಸ್ಥಳಕ್ಕೆ ನೀವು ಹೋಗಬೇಕು. ನಿಮ್ಮ ದೇವರಾದ ಯೆಹೋವನ ಜೊತೆಯಲ್ಲಿರುವುದಕ್ಕಾಗಿ ನೀವು ಅಲ್ಲಿಗೆ ಹೋಗಬೇಕು. ಆ ಸ್ಥಳದಲ್ಲಿ, ನೀವು ಬೆಳೆಯುವ ಬೆಳೆಗಳಲ್ಲಿ ಹತ್ತನೆ ಒಂದು ಭಾಗವನ್ನು, ನಿಮ್ಮ ಧಾನ್ಯಗಳಲ್ಲಿ ಹತ್ತನೆ ಒಂದು ಭಾಗವನ್ನು, ನಿಮ್ಮ ಹೊಸ ದ್ರಾಕ್ಷಾರಸವನ್ನು, ನಿಮ್ಮ ಎಣ್ಣೆಯನ್ನು, ನಿಮ್ಮ ಹಿಂಡುಗಳ ಮತ್ತು ಮಂದೆಗಳ ಚೊಚ್ಚಲು ಪಶುಗಳನ್ನು ಯೆಹೋವನ ಪ್ರಸನ್ನತೆಯಲ್ಲಿ ತಿನ್ನಬೇಕು. ನಿಮ್ಮ ದೇವರಾದ ಯೆಹೋವನನ್ನು ಗೌರವಿಸಬೇಕೆಂಬುದನ್ನು ನೀವು ಯಾವಾಗಲೂ ಈ ರೀತಿಯಲ್ಲಿ ಜ್ಞಾಪಕ ಮಾಡಿಕೊಳ್ಳುವಿರಿ. 24 ಒಂದುವೇಳೆ ಆ ವಿಶೇಷ ಸ್ಥಳವು ನೀವು ಪ್ರಯಾಣ ಮಾಡಲಾರದಷ್ಟು ದೂರವಾಗಿದ್ದರೆ, ಯೆಹೋವನು ಆಶೀರ್ವದಿಸಿದ ನಿಮ್ಮ ಎಲ್ಲಾ ಬೆಳೆಗಳಲ್ಲಿ ದಶಾಂಶವನ್ನು ಅಲ್ಲಿಗೆ ಕೊಂಡೊಯ್ಯಲು ಸಾಧ್ಯವಾಗದಿದ್ದಲ್ಲಿ, 25 ದಶಾಂಶದ ಆ ಬೆಳೆಗಳನ್ನು ಮಾರಿ, ಬಂದ ಹಣವನ್ನು ಯೆಹೋವನು ಆರಿಸಿಕೊಂಡಿರುವ ವಿಶೇಷ ಸ್ಥಳಕ್ಕೆ ತೆಗೆದುಕೊಂಡು ಹೋಗಿ. 26 ಅಲ್ಲಿ ನಿಮಗೆ ಬೇಕಾದ ದನಕುರಿಗಳನ್ನು ಮತ್ತು ನಿಮಗೆ ಬೇಕಾಗುವ ಆಹಾರವಸ್ತುಗಳನ್ನು ಮತ್ತು ಪಾನೀಯಗಳನ್ನು ಆ ಹಣದಿಂದ ಖರೀದಿಮಾಡಿ ನೀವೂ ನಿಮ್ಮ ಕುಟುಂಬದವರೂ ನಿಮ್ಮ ದೇವರಾದ ಯೆಹೋವನ ಆ ಸ್ಥಳದಲ್ಲಿ ತಿಂದು ಸಂತೋಷಪಡಿ. 27 ನಿಮ್ಮ ಊರಲ್ಲಿ ನೆಲೆಸಿರುವ ಲೇವಿಯರನ್ನು ಮರೆಯಬೇಡಿರಿ. ನಿಮ್ಮ ಆಹಾರದಲ್ಲಿ ಅವರಿಗೂ ಪಾಲುಕೊಡಿರಿ. ಯಾಕೆಂದರೆ ಅವರಿಗೆ ದೇಶದಲ್ಲಿ ನಿಮ್ಮ ಹಾಗೆ ಸ್ವಾಸ್ತ್ಯ ದೊರಕುವುದಿಲ್ಲ.
28 “ಮೂರು ವರ್ಷಕ್ಕೊಮ್ಮೆ ನಿಮ್ಮ ದವಸಧಾನ್ಯಗಳ ಹತ್ತನೆಯ ಒಂದು ಭಾಗವನ್ನು ನಿಮ್ಮ ಊರಿನಲ್ಲಿ ಶೇಖರಿಸಿಡಿರಿ. 29 ಇದು ಲೇವಿಯರಿಗಾಗಿ. ಯಾಕೆಂದರೆ ಅವರಿಗೆ ಸ್ವಂತ ಭೂಮಿ ಇಲ್ಲವಲ್ಲಾ. ಅಲ್ಲದೆ ಈ ಧಾನ್ಯವನ್ನು ನಿಮ್ಮ ಊರಲ್ಲಿರುವ ಬಡಜನರಿಗೋಸ್ಕರವಾಗಿಯೂ ಪರದೇಶಿಗಳಿಗಾಗಿಯೂ ವಿಧವೆಯರಿಗಾಗಿಯೂ ಅನಾಥ ಮಕ್ಕಳಿಗಾಗಿಯೂ ಉಪಯೋಗಿಸಬೇಕು. ಅವರು ಬಂದು ಊಟಮಾಡಿ ತೃಪ್ತರಾಗಲಿ. ನೀವು ಹೀಗೆ ಮಾಡಿದರೆ ನಿಮ್ಮ ದೇವರಾದ ಯೆಹೋವನು ನಿಮ್ಮ ಕಾರ್ಯಗಳನ್ನೆಲ್ಲಾ ಸಫಲಪಡಿಸಿ ಆಶೀರ್ವದಿಸುವನು.
99 ಯೆಹೋವನೇ ರಾಜನು!
ಜನಾಂಗಗಳು ಭಯದಿಂದ ನಡುಗಲಿ.
ಆತನು ಕೆರೂಬಿಗಳ ಮೇಲೆ ರಾಜನಂತೆ ಕುಳಿತುಕೊಂಡಿದ್ದಾನೆ.
ಭೂಮಿಯು ಭಯದಿಂದ ನಡುಗಲಿ.
2 ಚೀಯೋನಿನ ಯೆಹೋವನು ದೊಡ್ಡವನು!
ಆತನು ಜನಾಂಗಗಳಿಗೆಲ್ಲಾ ಮಹಾನಾಯಕನಾಗಿದ್ದಾನೆ.
3 ಅವರೆಲ್ಲರೂ ನಿನ್ನ ಭಯಂಕರವಾದ ಹೆಸರನ್ನು ಕೊಂಡಾಡಲಿ.
ಆತನೇ ಪರಿಶುದ್ಧನು.
4 ಶಕ್ತಿಪೂರ್ಣನಾದ ರಾಜನು ನ್ಯಾಯವನ್ನು ಪ್ರೀತಿಸುವನು.
ದೇವರೇ, ನೀತಿಯನ್ನು ಸೃಷ್ಟಿಸಿದಾತನು ನೀನೇ.
ಯಾಕೋಬ್ಯರಲ್ಲಿ ನ್ಯಾಯನೀತಿಗಳನ್ನು ಸ್ಥಾಪಿಸಿದವನು ನೀನೇ.
5 ನಮ್ಮ ದೇವರಾದ ಯೆಹೋವನನ್ನು ಕೊಂಡಾಡಿರಿ,
ಆತನ ಪವಿತ್ರ ಪಾದಪೀಠಕ್ಕೆ[a] ಅಡ್ಡಬೀಳಿರಿ.
6 ಮೋಶೆಯೂ ಆರೋನನೂ ದೇವರ ಯಾಜಕರುಗಳಾಗಿದ್ದರು.
ಸಮುವೇಲನೂ ಆತನ ಹೆಸರಿನಲ್ಲಿ ಪ್ರಾರ್ಥಿಸಿದನು.
ಆತನು ಅವರೆಲ್ಲರ ಪ್ರಾರ್ಥನೆಗಳಿಗೆ ಉತ್ತರಿಸಿದನು.
7 ಆತನು ಮೇಘಸ್ತಂಭದಿಂದ ಅವರೊಂದಿಗೆ ಮಾತಾಡಿದನು.
ಅವರು ಆಜ್ಞೆಗಳಿಗೆ ವಿಧೇಯರಾದರು.
ಆತನು ಅವರಿಗೆ ಧರ್ಮಶಾಸ್ತ್ರವನ್ನು ಕೊಟ್ಟನು.
8 ನಮ್ಮ ದೇವರಾದ ಯೆಹೋವನೇ, ನೀನು ಅವರ ಪ್ರಾರ್ಥನೆಗಳಿಗೆ ಉತ್ತರಿಸಿದೆ.
ನೀನು ಕ್ಷಮಿಸುವ ದೇವರೆಂದೂ
ದುಷ್ಕೃತ್ಯಗಳಿಗೆ ದಂಡಿಸುವವನೆಂದೂ ಅವರಿಗೆ ತೋರ್ಪಡಿಸಿದೆ.
9 ನಮ್ಮ ದೇವರಾದ ಯೆಹೋವನನ್ನು ಕೊಂಡಾಡಿರಿ.
ಆತನ ಪವಿತ್ರ ಪರ್ವತದ ಕಡೆಗೆ ಅಡ್ಡಬಿದ್ದು ಆತನನ್ನು ಆರಾಧಿಸಿರಿ.
ನಮ್ಮ ದೇವರಾದ ಯೆಹೋವನೇ ಪರಿಶುದ್ಧನು!
ಕೃತಜ್ಞತಾ ಸ್ತುತಿಗೀತೆ.
100 ಸಮಸ್ತ ಭೂನಿವಾಸಿಗಳೇ,
ಯೆಹೋವನಿಗೆ ಗಾಯನ ಮಾಡಿರಿ!
2 ಯೆಹೋವನ ಸೇವೆಯನ್ನು ಸಂತೋಷದಿಂದ ಮಾಡಿರಿ;
ಹರ್ಷಗೀತೆಗಳೊಡನೆ ಆತನ ಸನ್ನಿಧಿಗೆ ಬನ್ನಿರಿ!
3 ಯೆಹೋವನೇ ದೇವರೆಂದು ತಿಳಿದುಕೊಳ್ಳಿರಿ.
ನಮ್ಮನ್ನು ಸೃಷ್ಟಿಸಿದವನು ಆತನೇ, ನಾವು ಆತನವರು.
ನಾವು ಆತನ ಜನರೂ ಮಂದೆಯೂ ಆಗಿದ್ದೇವೆ.
4 ಕೃತಜ್ಞತಾಗೀತೆಗಳೊಡನೆ ಆತನ ಪಟ್ಟಣಕ್ಕೆ ಬನ್ನಿರಿ.
ಸ್ತುತಿಗೀತೆಗಳೊಡನೆ ಆತನ ಆಲಯಕ್ಕೆ ಬನ್ನಿರಿ.
ಆತನನ್ನು ಸನ್ಮಾನಿಸುತ್ತಾ ಆತನ ಹೆಸರನ್ನು ಕೊಂಡಾಡಿರಿ.
5 ಯೆಹೋವನು ಒಳ್ಳೆಯವನು!
ಆತನ ಪ್ರೀತಿಯು ಶಾಶ್ವತವಾದದ್ದು,
ಆತನ ನಂಬಿಗಸ್ತಿಕೆಯು ನಿರಂತರವಾದದ್ದು.
ರಚನೆಗಾರ: ದಾವೀದ.
101 ಆತನ ಪ್ರೀತಿಯನ್ನೂ ನೀತಿಯನ್ನೂ ಹಾಡಿಹರಸುವೆನು.
ಯೆಹೋವನೇ, ನಿನಗೆ ಗಾಯನ ಮಾಡುವೆನು.
2 ನಾನು ಎಚ್ಚರಿಕೆಯಿಂದ ಪರಿಶುದ್ಧನಾಗಿ ಜೀವಿಸುವೆನು;
ನನ್ನ ಮನೆಯಲ್ಲೂ ಪರಿಶುದ್ಧನಾಗಿರುವೆನು.
ನೀನು ನನ್ನ ಬಳಿಗೆ ಬರುವುದು ಯಾವಾಗ?
3 ನನ್ನ ಎದುರಿನಲ್ಲಿ ಯಾವ ವಿಗ್ರಹಗಳೂ ಇಲ್ಲ.
ನಿನಗೆ ದ್ರೋಹಮಾಡುವವರು ನನಗೆ ಅಸಹ್ಯ.
ನಾನು ಅವರಂತೆ ಮಾಡುವುದಿಲ್ಲ!
4 ನಾನು ನಿನಗೆ ಯಥಾರ್ಥನಾಗಿರುವೆನು;
ದುಷ್ಕೃತ್ಯಗಳನ್ನು ಮಾಡುವುದಿಲ್ಲ.
5 ನೆರೆಯವನ ಕುರಿತು ಗುಟ್ಟಾಗಿ
ಚಾಡಿ ಹೇಳುವವನನ್ನು ನಾನು ತಡೆಯುವೆನು.
ಗರ್ವಪಡುವುದಕ್ಕಾಗಲಿ ತಮ್ಮನ್ನೇ ಉತ್ತಮರೆಂದು ಭಾವಿಸಿಕೊಳ್ಳುವುದಕ್ಕಾಗಲಿ
ನಾನು ಅವರಿಗೆ ಅವಕಾಶ ಕೊಡುವುದಿಲ್ಲ.
6 ನಂಬಿಗಸ್ತರಿಗಾಗಿ ದೇಶದಲ್ಲೆಲ್ಲಾ ಹುಡುಕಿ ನೋಡುತ್ತೇನೆ.
ನನ್ನ ಸೇವೆಗೆ ಅವರನ್ನೇ ನೇಮಿಸಿಕೊಳ್ಳುವೆನು.
ಪರಿಶುದ್ಧರು ಮಾತ್ರ ನನ್ನ ಸೇವಕರಾಗಿರಲು ಸಾಧ್ಯ.
7 ನನ್ನ ಮನೆಯಲ್ಲಿ ವಾಸಿಸುವ ಸುಳ್ಳುಗಾರರಿಗೆ ಅವಕಾಶ ಕೊಡುವುದಿಲ್ಲ.
ನನ್ನ ಸಮೀಪದಲ್ಲಿ ಇರುವುದಕ್ಕೂ ನಾನು ಅವರಿಗೆ ಆಸ್ಪದ ಕೊಡುವುದಿಲ್ಲ.
8 ಈ ದೇಶದಲ್ಲಿರುವ ದುಷ್ಟರನ್ನು ನಾನು ನಾಶಮಾಡುತ್ತೇನೆ.
ಯೆಹೋವನ ಪಟ್ಟಣದಿಂದ ಕೆಡುಕರನ್ನು ಓಡಿಸುತ್ತೇನೆ.
ನಿರ್ಮಾಣಿಕನಾದ ಯೆಹೋವನು ನಿರಂತರವೂ ಜೀವಿಸುವನು
41 ಯೆಹೋವನು ಹೇಳುವುದೇನೆಂದರೆ:
“ಬಹು ದೂರದಲ್ಲಿರುವ ಜನಾಂಗಗಳವರೇ, ಮೌನವಾಗಿದ್ದು ನನ್ನ ಬಳಿಗೆ ಬನ್ನಿರಿ.
ಜನಾಂಗಗಳೇ, ಮತ್ತೆ ಬಲಿಷ್ಠರಾಗಿರಿ.
ನನ್ನ ಬಳಿಗೆ ಬಂದು ನನ್ನೊಂದಿಗೆ ಮಾತಾಡಿರಿ.
ನಾವು ಒಟ್ಟಾಗಿ ಸೇರಿಬಂದು
ಯಾರು ಸರಿ ಎಂದು ವಾದಿಸೋಣ!
2 ಈ ಪ್ರಶ್ನೆಗಳಿಗೆ ಉತ್ತರಿಸಿರಿ: ಪೂರ್ವದಿಕ್ಕಿನಿಂದ ಬರುವ ಮನುಷ್ಯನನ್ನು ಎಚ್ಚರಿಸಿದವರು ಯಾರು?
ಅವನು ಒಳ್ಳೆಯತನವನ್ನು ತನ್ನೊಂದಿಗಿರಲು ಕೇಳುತ್ತಾನೆ.
ತನ್ನ ಖಡ್ಗವನ್ನು ಉಪಯೋಗಿಸಿ ಜನಾಂಗಗಳನ್ನು ಸೋಲಿಸುವನು.
ಅವರನ್ನು ಧೂಳಿನಂತೆ ಮಾಡುವನು. ತನ್ನ ಬಿಲ್ಲನ್ನು ಉಪಯೋಗಿಸಿ ರಾಜರನ್ನು ವಶಪಡಿಸಿಕೊಳ್ಳುತ್ತಾನೆ.
ಅವರು ಗಾಳಿಯಲ್ಲಿ ತೂರಾಡುವ ಹುಲ್ಲಿನಂತೆ ಓಡಿಹೋಗುವರು.
3 ಅವನು ಸೈನ್ಯವನ್ನು ಓಡಿಸಿದರೂ ಗಾಯಗೊಳ್ಳುವದಿಲ್ಲ.
ತಾನು ಹಿಂದೆಂದೂ ಹೋಗದ ಸ್ಥಳಗಳಿಗೆ ಹೋಗುವನು.
4 ಇವೆಲ್ಲಾ ನೆರವೇರುವಂತೆ ಮಾಡಿದವರು ಯಾರು?
ಆದಿಯಿಂದ ಎಲ್ಲಾ ಜನರನ್ನು ಕರೆದವರು ಯಾರು?
ಯೆಹೋವನೆಂಬ ನಾನೇ ಇವೆಲ್ಲವನ್ನು ಮಾಡಿದೆನು.
ನಾನೇ ಮೊದಲನೆಯವನಾಗಿದ್ದೇನೆ.
ಅನಾದಿಕಾಲಕ್ಕಿಂತ ಮೊದಲು ನಾನಿದ್ದೆನು.
ಎಲ್ಲವೂ ಅಂತ್ಯವಾಗುವ ತನಕ ನಾನು ಇರುತ್ತೇನೆ.
5 ದೂರ ಸ್ಥಳಗಳವರೇ,
ನೋಡಿರಿ, ಭಯಗೊಳ್ಳಿರಿ.
ಭೂಮಿಯ ಕಟ್ಟಕಡೆಗಿರುವ ದೇಶಗಳೇ,
ಭಯದಿಂದ ನಡುಗಿರಿ.
ನನ್ನ ಬಳಿಗೆ ಬಂದು
ನನ್ನ ಮಾತನ್ನು ಕೇಳಿರಿ ಎಂದಾಗ ಅವರು ಬಂದರು.
6 “ಕೆಲಸಗಾರರು ಒಬ್ಬರಿಗೊಬ್ಬರು ಸಹಾಯ ಮಾಡುವರು. ಅವರು ಬಲಶಾಲಿಗಳಾಗಬೇಕೆಂದು ಪರಸ್ಪರ ಪ್ರೋತ್ಸಾಹಿಸುವರು. 7 ಒಬ್ಬ ಕೆಲಸಗಾರನು ಮರವನ್ನು ಕಡಿದು ಅದರಿಂದ ವಿಗ್ರಹವನ್ನು ಮಾಡುವನು. ಅವನು ಬಂಗಾರದ ಕೆಲಸದವನನ್ನು ಪ್ರೋತ್ಸಾಹಿಸುವನು. ಇನ್ನೊಬ್ಬನು ತನ್ನ ಸುತ್ತಿಗೆಯಿಂದ ತಗಡನ್ನು ಸಮತಟ್ಟು ಮಾಡುವನು. ಅವನು ಕಬ್ಬಿಣದ ಕೆಲಸದವನನ್ನು ಪ್ರೋತ್ಸಾಹಿಸುವನು. ಈ ಕೆಲಸದವನು ‘ಇದು ಒಳ್ಳೆಯ ಕೆಲಸ. ತಗಡು ಹೊರಗೆ ಬರಲಾರದು’ ಎಂದು ಹೇಳಿ ಆ ವಿಗ್ರಹವನ್ನು ಪೀಠಕ್ಕೆ ಮೊಳೆ ಹೊಡೆದು ಭದ್ರಪಡಿಸುವನು. ಈಗ ವಿಗ್ರಹವು ಅಲ್ಲಾಡುವದಿಲ್ಲ, ಕೆಳಕ್ಕೆ ಬೀಳುವದಿಲ್ಲ.”
ಯೆಹೋವನೊಬ್ಬನೇ ನಮ್ಮನ್ನು ರಕ್ಷಿಸುವನು
8 ಯೆಹೋವನು ಹೀಗೆನ್ನುತ್ತಾನೆ, “ಇಸ್ರೇಲೇ, ನೀನು ನನ್ನ ಸೇವಕನಾಗಿರುವೆ.
ಯಾಕೋಬೇ, ನಾನು ನಿನ್ನನ್ನು ಆರಿಸಿಕೊಂಡೆನು.
ನೀನು ನನ್ನ ಸ್ನೇಹಿತನಾದ ಅಬ್ರಹಾಮನ ಕುಟುಂಬದವನಾಗಿರುವೆ.
9 ನೀನು ದೂರದೇಶದಲ್ಲಿದ್ದೆ.
ಆದರೆ ಕೈಚಾಚಿ ಆ ದೇಶದಿಂದ ನಿನ್ನನ್ನು ಕರೆದೆನು.
‘ನೀನು ನನ್ನ ಸೇವಕ’ ಎಂದು ಹೇಳಿದೆನು.
ನಾನು ನಿನ್ನನ್ನು ಆರಿಸಿಕೊಂಡೆನು.
ಆದರೆ ನಿನ್ನನ್ನು ತಳ್ಳಿಬಿಡಲಿಲ್ಲ.
10 ನಾನೇ ನಿನ್ನ ಸಂಗಡವಿದ್ದೇನೆ. ಆದ್ದರಿಂದ ಚಿಂತಿಸದಿರು.
ನಾನೇ ನಿನ್ನ ದೇವರು, ಆದ್ದರಿಂದ ಭಯಪಡಬೇಡ.
ನಿನ್ನನ್ನು ಬಲಪಡಿಸುವೆನು.
ನಿನಗೆ ಸಹಾಯ ಮಾಡುವೆನು.
ನನ್ನ ನೀತಿಯ ಬಲಗೈಯಿಂದ ನಿನಗೆ ಆಧಾರ ಕೊಡುವೆನು.
11 ನೋಡು, ಕೆಲವರು ನಿನ್ನ ಮೇಲೆ ಕೋಪಗೊಂಡಿದ್ದಾರೆ.
ಆದರೆ ಅವರು ನಾಚಿಕೆಪಡುವರು.
ನಿನ್ನ ಶತ್ರುಗಳು ಕಳೆದುಹೋಗಿ ಕಾಣದೆಹೋಗುವರು.
12 ನಿನಗೆ ವಿರುದ್ಧವಾಗಿದ್ದ ಜನರನ್ನು ನೀನು ಹುಡುಕುವೆ.
ಆದರೆ ಅವರು ನಿನಗೆ ಕಾಣಿಸುವುದಿಲ್ಲ.
ನಿನ್ನ ವಿರುದ್ಧವಾಗಿ ಯುದ್ಧ ಮಾಡಿದವರು ಕಾಣದೆಹೋಗುವರು.
13 ನಿನ್ನ ದೇವರಾದ ಯೆಹೋವನು ನಾನೇ.
ನಾನು ನಿನ್ನ ಬಲಗೈಯನ್ನು ಹಿಡಿದಿದ್ದೇನೆ.
‘ನೀನು ಹೆದರಬೇಡ, ನಾನೇ ನಿನಗೆ ಸಹಾಯ ಮಾಡುತ್ತೇನೆ’
ಎಂದು ಹೇಳುತ್ತಿದ್ದೇನೆ.
14 ನನಗೆ ಅಮೂಲ್ಯವಾದ ಯಾಕೋಬೇ, ಭಯಪಡಬೇಡ.
ನನ್ನ ಪ್ರಿಯ ಇಸ್ರೇಲೇ, ಹೆದರಬೇಡ.
ನಾನು ನಿಜವಾಗಿಯೂ ನಿನಗೆ ಸಹಾಯ ಮಾಡುತ್ತೇನೆ.”
ಇದು ಯೆಹೋವನ ನುಡಿ.
“ಇಸ್ರೇಲರ ಪರಿಶುದ್ಧನೂ ನಿನ್ನನ್ನು ರಕ್ಷಿಸುವಾತನೂ
ಈ ಮಾತುಗಳನ್ನು ಹೇಳಿದ್ದಾನೆ:
15 ಇಗೋ, ನಾನು ನಿನ್ನನ್ನು ಹೊಸ ಹಂತಿಕುಂಟೆಯನ್ನಾಗಿ ಮಾಡಿದ್ದೇನೆ. ಅದಕ್ಕೆ ಅನೇಕ ಹರಿತವಾದ ಹಲ್ಲುಗಳಿವೆ.
ಬೇಸಾಯಗಾರರು ಧಾನ್ಯವನ್ನು ಹುಲ್ಲಿನಿಂದ ಪ್ರತ್ಯೇಕಿಸುವದಕ್ಕಾಗಿ ಅದನ್ನು ಉಪಯೋಗಿಸುವರು.
ನೀವು ಬೆಟ್ಟದ ಶಿಖರಗಳಲ್ಲಿ ತುಳಿದಾಡಿ ಅದನ್ನು ಪುಡಿ ಮಾಡುವಿರಿ.
ಆ ಬೆಟ್ಟಗಳನ್ನು ನೀವು ಕುಂಟೆಯಂತೆ ಮಾಡುವಿರಿ.
16 ನೀವು ಅವುಗಳನ್ನು ಗಾಳಿಗೆ ತೂರಿಬಿಡುವಿರಿ.
ಗಾಳಿಯು ಅವುಗಳನ್ನು ಹಾರಿಸಿ ಚದರಿಸಿಬಿಡುವುದು.
ಆಗ ನೀವು ಯೆಹೋವನಲ್ಲಿ ಸಂತಸಪಡುವಿರಿ.
ಇಸ್ರೇಲರ ಪರಿಶುದ್ಧನಲ್ಲಿ ಹೆಚ್ಚಳಪಡುವಿರಿ.
17 “ಬಡಜನರು ನೀರಿಗಾಗಿ ಹುಡುಕಾಡುವರು.
ಆದರೆ ನೀರು ಅವರಿಗೆ ದೊರಕುವದಿಲ್ಲ.
ಅವರು ದಾಹಗೊಂಡಿದ್ದಾರೆ, ಅವರ ನಾಲಿಗೆ ಒಣಗಿಹೋಗಿದೆ.
ನಾನು ಅವರ ಮೊರೆಯನ್ನು ಕೇಳುವೆನು.
ನಾನು ಅವರನ್ನು ತೊರೆಯುವುದಿಲ್ಲ, ಅವರನ್ನು ಸಾಯಲು ಬಿಡುವುದಿಲ್ಲ.
18 ಒಣಬೆಟ್ಟಗಳಲ್ಲಿ ನದಿಗಳು ಹರಿಯುವಂತೆ ನಾನು ಮಾಡುವೆನು.
ಕಣಿವೆಗಳ ಮೂಲಕ ಬುಗ್ಗೆಯ ನೀರು ಹರಿಯುವಂತೆ ಮಾಡುವೆನು.
ಮರುಭೂಮಿಯನ್ನು ಸರೋವರವನ್ನಾಗಿ ಮಾಡುವೆನು.
ಆ ಒಣನೆಲದಲ್ಲಿ ನೀರಿನ ಬುಗ್ಗೆಗಳು ಕಾಣುವವು.
19 ಮರುಭೂಮಿಯ ಮೇಲೆ ಮರಗಳು ಬೆಳೆಯುವವು.
ಅಲ್ಲಿ ದೇವದಾರು, ಆಲೀವ್, ಕಸ್ತೂರಿಜಾಲಿ, ತುರಾಯಿ, ತಪಸಿ ಮತ್ತು ತಿಲಕ ವೃಕ್ಷಗಳು ಇರುವವು.
20 ಜನರು ಇವುಗಳನ್ನು ನೋಡಿ,
ಇವು ಯೆಹೋವನ ಶಕ್ತಿಯಿಂದ ಆದವು ಎಂದು ತಿಳಿದುಕೊಳ್ಳುವರು.
ಜನರು ಈ ಸಂಗತಿಗಳನ್ನು ನೋಡಿ ಇಸ್ರೇಲರ ಪರಿಶುದ್ಧನಾದ ಯೆಹೋವನೇ
ಇವುಗಳನ್ನು ಮಾಡಿದನೆಂದು ತಿಳಿದುಕೊಳ್ಳುವರು.”
ಸುಳ್ಳುದೇವರಿಗೆ ಯೆಹೋವನ ಸವಾಲು
21 ಯಾಕೋಬ್ಯರ ಅರಸನಾದ ಯೆಹೋವನು ಹೇಳುವುದೇನೆಂದರೆ: “ಬನ್ನಿ ನಿಮ್ಮ ವಾದಗಳನ್ನು ಮಂಡಿಸಿರಿ, ನಿಮ್ಮ ಆಧಾರಗಳನ್ನು ತೋರಿಸಿರಿ. 22 ನಿಮ್ಮ ವಿಗ್ರಹಗಳು ನಮ್ಮ ಬಳಿಗೆ ಬಂದು ನಡೆಯುತ್ತಿರುವುದನ್ನು ತಿಳಿಸಲಿ. ಪ್ರಾರಂಭದಲ್ಲಿ ನಡೆದಿದ್ದೇನು? ಮುಂದೆ ನಡೆಯಲಿರುವುದೇನು? ನಮಗೆ ತಿಳಿಸಿರಿ. ನಾವು ಸೂಕ್ಷ್ಮವಾಗಿ ಕೇಳಿ ಭವಿಷ್ಯವನ್ನು ತಿಳಿದುಕೊಳ್ಳುವೆವು. 23 ಮುಂದೆ ಸಂಭವಿಸುವುದನ್ನು ತಿಳಿದುಕೊಳ್ಳಲು ನಾವು ಯಾವ ಸೂಚನೆಗಳಿಗಾಗಿ ಎದುರು ನೋಡಬೇಕು? ತಿಳಿಸಿರಿ. ನೀವೇ ದೇವರುಗಳೆಂದು ಆಗ ನಮಗೆ ಖಚಿತವಾಗುವುದು. ಏನನ್ನಾದರೂ ಮಾಡಿರಿ. ಯಾವದನ್ನಾದರೂ ಮಾಡಿರಿ. ಒಳ್ಳೆಯದನ್ನು, ಕೆಟ್ಟದ್ದನ್ನು ಮಾಡಿರಿ. ಆಗ ನೀವು ಜೀವವುಳ್ಳವರೆಂದು ತಿಳಿದು ನಿಮಗೆ ಗೌರವಿಸಿ, ಭಯಪಟ್ಟು ನಿಮ್ಮನ್ನು ಹಿಂಬಾಲಿಸುವೆವು.
24 “ಸುಳ್ಳುದೇವರುಗಳೇ, ಕೇಳಿ. ನೀವು ಶೂನ್ಯಕ್ಕಿಂತ ಕಡಿಮೆಯಾದವರು. ನೀವು ಏನನ್ನೂ ಮಾಡಲಾರಿರಿ. ದೇವರ ದೃಷ್ಠಿಯಲ್ಲಿ ತುಚ್ಛನಾದವನು ಮಾತ್ರ ನಿಮ್ಮನ್ನು ಪೂಜಿಸುವನು.”
ಯೆಹೋವನೊಬ್ಬನೇ ದೇವರು
25 “ಉತ್ತರದಿಕ್ಕಿನಲ್ಲಿರುವ ಒಬ್ಬ ಮನುಷ್ಯನನ್ನು ನಾನು ಎಚ್ಚರಪಡಿಸಿದೆನು.
ಅವನು ಪೂರ್ವದಿಕ್ಕಿನಿಂದ ಬರುವನು.
ನನ್ನ ನಾಮವನ್ನು ಅವನು ಆರಾಧಿಸುವನು.
ಕುಂಬಾರನು ಜೇಡಿಮಣ್ಣನ್ನು ತುಳಿದು ಹದಗೊಳಿಸುವಂತೆ ಅವನು ಅರಸರುಗಳ ಮೇಲೆ ತುಳಿದಾಡುವನು.
26 “ಇವುಗಳು ಸಂಭವಿಸುವ ಮೊದಲೇ ಇವುಗಳನ್ನು ತಿಳಿಸಿದಾತನನ್ನೇ ದೇವರೆಂದು ಕರೆಯಬೇಕು.
ನಿಮ್ಮ ವಿಗ್ರಹಗಳಲ್ಲಿ ಯಾವದಾದರೂ ನಮಗೆ ಇದನ್ನು ತಿಳಿಸಿತೋ?
ಯಾವ ವಿಗ್ರಹವೂ ನಮಗೆ ಇವುಗಳ ವಿಷಯದಲ್ಲಿ ತಿಳಿಸಲಿಲ್ಲ.
ಆ ವಿಗ್ರಹಗಳು ಒಂದು ಮಾತನ್ನಾದರೂ ಹೇಳಲಿಲ್ಲ;
ಮತ್ತು ನೀವು ಹೇಳಿದ್ದನ್ನು ಆ ಸುಳ್ಳುದೇವರುಗಳು ಕೇಳಿಸಿಕೊಳ್ಳುವದೂ ಇಲ್ಲ.
27 ಈ ವಿಷಯಗಳ ಬಗ್ಗೆ ತಿಳಿಸಿದವರಲ್ಲಿ ಯೆಹೋವನೆಂಬ ನಾನೇ ಮೊದಲನೆಯವನು.
‘ನೋಡು ನಿನ್ನ ಜನರು ಹಿಂತಿರುಗಿ ಬರುತ್ತಿದ್ದಾರೆ’
ಎಂಬ ಸಂದೇಶವನ್ನು ನಾನು ಜೆರುಸಲೇಮಿಗೆ ಕಳುಹಿಸಿದೆನು.”
28 ನಾನು ಆ ಸುಳ್ಳುದೇವರುಗಳನ್ನು ದೃಷ್ಟಿಸಿ ನೋಡಿದೆನು.
ಅವುಗಳಲ್ಲಿ ಯಾವುದೂ ಮಾತಾಡುವಷ್ಟು ಜ್ಞಾನಿಯಾಗಿರಲಿಲ್ಲ.
ನಾನು ಅವುಗಳನ್ನು ಪ್ರಶ್ನಿಸಿದೆನು.
ಆದರೆ ಅವು ಉತ್ತರಿಸಲಿಲ್ಲ.
29 ಆ ದೇವರುಗಳೆಲ್ಲಾ ಶೂನ್ಯಕ್ಕಿಂತಲೂ ಕಡಿಮೆಯೇ.
ಅವುಗಳು ಏನೂ ಮಾಡಲಾರವು.
ಆ ಪ್ರತಿಮೆಗಳು ಸಂಪೂರ್ಣವಾಗಿ ಬೆಲೆಯಿಲ್ಲದವುಗಳಾಗಿವೆ.
ಅವುಗಳು ಖಂಡಿತವಾಗಿಯೂ ನಿಷ್ಪ್ರಯೋಜಕವಾದವುಗಳಾಗಿವೆ.
ಇಬ್ಬರು ಸಾಕ್ಷಿಗಳು
11 ತರುವಾಯ ದಂಡದಂತಿರುವ ಒಂದು ಅಳತೆಯ ಕೋಲನ್ನು ನನಗೆ ಕೊಟ್ಟು ಹೀಗೆ ತಿಳಿಸಲಾಯಿತು: “ಹೋಗು, ದೇವರ ಆಲಯವನ್ನೂ ಯಜ್ಞವೇದಿಕೆಯನ್ನೂ ಅಳತೆಮಾಡು; ಮತ್ತು ಅಲ್ಲಿ ಆರಾಧಿಸುವ ಜನರನ್ನು ಲೆಕ್ಕಹಾಕು. 2 ಆದರೆ ಆಲಯದ ಹೊರಗಿರುವ ಅಂಗಳವನ್ನು ಅಳತೆ ಮಾಡದೆ ಬಿಟ್ಟುಬಿಡು. ಅದನ್ನು ಯೆಹೂದ್ಯರಲ್ಲದ ಜನರಿಗೆ ಬಿಟ್ಟಿದೆ. ಆ ಜನರು ಪವಿತ್ರ ನಗರದ ಮೇಲೆ ನಲವತ್ತೆರಡು ತಿಂಗಳ ಕಾಲ ತುಳಿದಾಡುವರು. 3 ನಾನು ನನ್ನ ಇಬ್ಬರು ಸಾಕ್ಷಿಗಳಿಗೆ ಅಧಿಕಾರವನ್ನು ಕೊಡುತ್ತೇನೆ. ಅವರು ಸಾವಿರದ ಇನ್ನೂರ ಅರವತ್ತು ದಿನಗಳ ಕಾಲ ಪ್ರವಾದನೆ ಮಾಡುತ್ತಾರೆ. ಅವರು ಗೋಣಿತಟ್ಟುಗಳನ್ನು ಧರಿಸಿಕೊಂಡಿರುತ್ತಾರೆ.”
4 ಭೂಲೋಕದ ಪ್ರಭುವಿನ ಸನ್ನಿಧಿಯಲ್ಲಿ ನಿಂತಿರುವ ಎರಡು ಆಲಿವ್ ಮರಗಳು ಮತ್ತು ಎರಡು ದೀಪಸ್ತಂಭಗಳೇ ಈ ಇಬ್ಬರು ಸಾಕ್ಷಿಗಳು. 5 ಈ ಸಾಕ್ಷಿಗಳಿಗೆ ಯಾರಾದರೂ ಕೇಡು ಮಾಡಲು ಪ್ರಯತ್ನಿಸಿದರೆ, ಸಾಕ್ಷಿಗಳ ಬಾಯಿಂದ ಬೆಂಕಿಯು ಹೊರಬಂದು ಅವರ ಶತ್ರುವನ್ನು ಅಂದರೆ ಅವರಿಗೆ ತೊಂದರೆ ಮಾಡಲು ಪ್ರಯತ್ನಿಸಿದ್ದವರನ್ನೆಲ್ಲ ಸಾಯಿಸುತ್ತದೆ. 6 ಈ ಸಾಕ್ಷಿಗಳು ತಮ್ಮ ಪ್ರವಾದನೆಯ ಕಾಲದಲ್ಲಿ ಆಕಾಶದಿಂದ ಸುರಿಯುವ ಮಳೆಯನ್ನು ನಿಲ್ಲಿಸಲೂ ನೀರನ್ನು ರಕ್ತವನ್ನಾಗಿಸಲೂ ಭೂಮಿಗೆ ಎಲ್ಲಾ ವಿಧವಾದ ವಿಪತ್ತುಗಳನ್ನು ಕಳುಹಿಸಲೂ ಅಧಿಕಾರವನ್ನು ಹೊಂದಿರುತ್ತಾರೆ. ಅವರು ತಮಗೆ ಇಷ್ಟ ಬಂದಷ್ಟು ಸಲ ಹೀಗೆ ಮಾಡಶಕ್ತರಾಗಿದ್ದಾರೆ.
7 ಈ ಇಬ್ಬರು ಸಾಕ್ಷಿಗಳು ತಮ್ಮ ಸಂದೇಶವನ್ನು ಹೇಳಿ ಮುಗಿಸಿದ ನಂತರ, ತಳವಿಲ್ಲದ ಕೂಪದಿಂದ ಮೇಲಕ್ಕೆ ಬರುವ ಮೃಗವು ಅವರ ವಿರುದ್ಧ ಹೋರಾಟ ಮಾಡುತ್ತದೆ. ಈ ಮೃಗವು ಅವರನ್ನು ಸೋಲಿಸಿ, ಕೊಂದು ಹಾಕುತ್ತದೆ. 8 ಈ ಸಾಕ್ಷಿಗಳ ಎರಡು ಶವಗಳು ಮಹಾನಗರದ ಬೀದಿಯಲ್ಲಿ ಬಿದ್ದಿರುತ್ತವೆ. ಈ ನಗರಕ್ಕೆ ಸೊದೋಮ್[a] ಮತ್ತು ಈಜಿಪ್ಟ್ ಎಂದು ಹೆಸರಾಗುತ್ತದೆ. ಆ ನಗರದ ಹೆಸರುಗಳಿಗೆ ವಿಶೇಷ ಅರ್ಥವಿದೆ. ಪ್ರಭುವು ಈ ನಗರದಲ್ಲಿಯೇ ಶಿಲುಬೆಗೇರಿಸಲ್ಪಟ್ಟನು. 9 ಸಕಲ ಪ್ರಜೆ, ಕುಲ, ಭಾಷೆ, ಜನಾಂಗದವರು ಮೂರುವರೆ ದಿನಗಳ ಕಾಲ ಈ ಸಾಕ್ಷಿಗಳ ಶವಗಳನ್ನು ನೋಡುತ್ತಾ ಇರುತ್ತಾರೆ. ಅವರನ್ನು ಸಮಾಧಿ ಮಾಡಲು ಜನರು ಒಪ್ಪುವುದಿಲ್ಲ. 10 ಈ ಇಬ್ಬರು ಸತ್ತದ್ದಕ್ಕಾಗಿ ಭೂಮಿಯ ಮೇಲಿನ ಜನರು ಸಂತೋಷಗೊಳ್ಳುವರು. ಅವರು ಸಮಾರಂಭಗಳನ್ನು ನಡೆಸಿ, ಒಬ್ಬರಿಗೊಬ್ಬರು ಉಡುಗೊರೆಗಳನ್ನು ನೀಡುತ್ತಾರೆ. ಈ ಇಬ್ಬರು ಪ್ರವಾದಿಗಳು ಭೂಮಿಯ ಮೇಲೆ ವಾಸಿಸುತ್ತಿರುವ ಜನರಿಗೆ ಹೆಚ್ಚು ಸಂಕಟವನ್ನು ಉಂಟುಮಾಡಿದ್ದರಿಂದ ಆ ಜನರು ಹೀಗೆ ಮಾಡುತ್ತಾರೆ.
11 ಆದರೆ ಮೂರುವರೆ ದಿನಗಳ ನಂತರ ದೇವರು ಆ ಇಬ್ಬರು ಪ್ರವಾದಿಗಳೊಳಗೆ ಮತ್ತೆ ಜೀವ ಪ್ರವೇಶಿಸುವಂತೆ ಮಾಡಿದನು. ಆಗ ಅವರು ತಮ್ಮ ಕಾಲೂರಿ ನಿಂತುಕೊಂಡರು. ಅವರನ್ನು ನೋಡಿದ ಜನರೆಲ್ಲರೂ ಭಯಗ್ರಸ್ತರಾದರು. 12 ಅನಂತರ “ಮೇಲೇರಿ ಬನ್ನಿ!” ಎಂದು ಪರಲೋಕದಿಂದ ಮಹಾವಾಣಿಯು ಆ ಪ್ರವಾದಿಗಳಿಗೆ ತಿಳಿಸಿತು. ಆಗ ಆ ಇಬ್ಬರು ಪ್ರವಾದಿಗಳು ಮೋಡದೊಂದಿಗೆ ಪರಲೋಕಕ್ಕೆ ಏರಿಹೋದರು. ಅವರು ಹೋಗುವುದನ್ನು ಅವರ ಶತ್ರುಗಳು ನೋಡುತ್ತಾ ಇದ್ದರು.
13 ಆ ಸಮಯದಲ್ಲಿ ಮಹಾಭೂಕಂಪವಾಯಿತು. ಆ ನಗರದ ಹತ್ತನೆಯ ಒಂದು ಭಾಗ ನಾಶವಾಯಿತು. ಭೂಕಂಪದಲ್ಲಿ ಏಳು ಸಾವಿರ ಜನರು ನಾಶವಾದರು. ಸಾಯದೆ ಉಳಿದಿದ್ದ ಜನರು ಬಹು ಭಯಗೊಂಡು ಪರಲೋಕದ ದೇವರನ್ನು ಘನಪಡಿಸಿದರು.
14 ಎರಡನೆಯ ಮಹಾವಿಪತ್ತು ಮುಗಿಯಿತು. ಮೂರನೆಯ ಮಹಾವಿಪತ್ತು ಬೇಗನೆ ಬರಲಿದೆ.
ಏಳನೆಯ ತುತೂರಿ
15 ಏಳನೆಯ ದೇವದೂತನು ತನ್ನ ತುತೂರಿಯನ್ನು ಊದಿದನು. ಆಗ ಪರಲೋಕದಲ್ಲಿ ಮಹಾಶಬ್ದಗಳು ಉಂಟಾದವು. ಆ ಶಬ್ದಗಳು ಹೀಗೆ ಹೇಳಿದವು:
“ಈ ಲೋಕದ ರಾಜ್ಯವು ಈಗ ನಮ್ಮ ಪ್ರಭುವಿನ ಮತ್ತು ಆತನವನಾಗಿರುವ ಕ್ರಿಸ್ತನ ರಾಜ್ಯವಾಗಿ ಮಾರ್ಪಾಟಾಯಿತು.
ಆತನು ಯುಗಯುಗಾಂತರಗಳಲ್ಲಿಯೂ ಆಳುವನು.”
16 ನಂತರ ಇಪ್ಪತ್ನಾಲ್ಕು ಮಂದಿ ಹಿರಿಯರು ಮೊಣಕಾಲೂರಿ ದೇವರನ್ನು ಆರಾಧಿಸಿದರು. ದೇವರ ಸನ್ನಿಧಿಯಲ್ಲಿ ತಮ್ಮ ಸಿಂಹಾಸನಗಳ ಮೇಲೆ ಕುಳಿತಿರುವ ಹಿರಿಯರೇ ಇವರು. 17 ಆ ಹಿರಿಯರು ಹೀಗೆ ಹೇಳಿದರು:
“ಪ್ರಭುವೇ, ಸರ್ವಶಕ್ತನಾದ ದೇವರೇ, ಭೂತಕಾಲದಲ್ಲಿ ಇದ್ದಾತನೇ,
ವರ್ತಮಾನ ಕಾಲದಲ್ಲಿ ಇರುವಾತನೇ, ನಿನಗೆ ಕೃತಜ್ಞತಾಸ್ತುತಿ ಸಲ್ಲಿಸುತ್ತೇವೆ.
ನೀನು ನಿನ್ನ ಮಹಾ ಅಧಿಕಾರವನ್ನು ಉಪಯೋಗಿಸಿ ನಿನ್ನ ಆಡಳಿತವನ್ನು
ಆರಂಭಿಸಿದ್ದರಿಂದ ನಿನಗೆ ಕೃತಜ್ಞತಾಸ್ತುತಿ ಸಲ್ಲಿಸುತ್ತೇವೆ.
18 ಲೋಕದ ಜನರು ಕೋಪಗೊಂಡಿದ್ದರು.
ಆದರೆ ಇದು ನಿನ್ನ ಕೋಪದ ಸಮಯ.
ಸತ್ತವರಿಗೆ ತೀರ್ಪು ನೀಡುವ ಸಮಯವಿದು.
ನಿನ್ನ ಸೇವಕರಾದ ಪ್ರವಾದಿಗಳಿಗೂ
ನಿನ್ನ ಪರಿಶುದ್ಧ ಜನರಿಗೂ ನಿನ್ನನ್ನು ಗೌರವಿಸುವ
ದೊಡ್ಡವರಿಗೂ ಚಿಕ್ಕವರಿಗೂ ಪ್ರತಿಫಲ ನೀಡುವ ಸಮಯವಿದು.
ಲೋಕನಾಶಕರನ್ನು ನಾಶಪಡಿಸುವ ಸಮಯವಿದು.”
19 ನಂತರ ಪರಲೋಕದಲ್ಲಿರುವ ದೇವರ ಆಲಯವು ತೆರೆಯಿತು. ದೇವರು ತನ್ನ ಜನರಿಗೆ ಅನುಗ್ರಹಿಸಿದ ಒಡಂಬಡಿಕೆಯನ್ನು ಇಟ್ಟಿದ್ದ ಪೆಟ್ಟಿಗೆಯು ಆತನ ಆಲಯದಲ್ಲಿ ಕಾಣಿಸಿತು. ಆಗ ಮಿಂಚುಗಳು ಹೊಳೆದವು, ಶಬ್ದಗಳಾದವು, ಗುಡುಗುಗಳಾದವು, ಭೂಕಂಪಗಳಾದವು ಮತ್ತು ಆಲಿಕಲ್ಲಿನ ಮಳೆಯೂ ಸುರಿಯಿತು.
Kannada Holy Bible: Easy-to-Read Version. All rights reserved. © 1997 Bible League International