Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ಧರ್ಮೋಪದೇಶಕಾಂಡ 7

ಇಸ್ರೇಲ್, ದೇವಜನಾಂಗ

“ನಿಮಗೆ ಸ್ವಾಸ್ತ್ಯವಾಗಿ ಕೊಡುವ ದೇಶಕ್ಕೆ ಯೆಹೋವನು ನಿಮ್ಮನ್ನು ನಡೆಸುವನು. ನಿಮಗಿಂತ ಬಲಿಷ್ಠವಾಗಿದ್ದು ಅಲ್ಲಿ ವಾಸಿಸುತ್ತಿರುವ ಹಿತ್ತಿಯರು, ಗಿರ್ಗಾಷಿಯರು, ಅಮೋರಿಯರು, ಕಾನಾನ್ಯರು, ಪೆರಿಜ್ಜೀಯರು, ಹಿವ್ವಿಯರು ಮತ್ತು ಯೆಬೂಸಿಯರು ಎಂಬ ಏಳು ಜನಾಂಗಗಳನ್ನು ಆ ದೇಶದಿಂದ ನಿಮಗಾಗಿ ಹೊರಗಟ್ಟುವನು. ನಿಮ್ಮ ದೇವರಾದ ಯೆಹೋವನು ಆ ಜನಾಂಗಗಳನ್ನು ನಿಮಗೆ ಅಧೀನಪಡಿಸುವನು. ನೀವು ಅವರನ್ನು ಸೋಲಿಸಿಬಿಡುವಿರಿ. ನೀವು ಅವರನ್ನು ಸಂಪೂರ್ಣವಾಗಿ ನಾಶಮಾಡಬೇಕು. ಅವರೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳಬೇಡಿ ಮತ್ತು ಅವರಿಗೆ ಕರುಣೆಯನ್ನು ತೋರಬೇಡಿ. ಅವರೊಳಗಿಂದ ಹೆಣ್ಣನ್ನು ತರಬೇಡಿ. ನಿಮ್ಮ ಗಂಡುಮಕ್ಕಳಾಗಲಿ ಹೆಣ್ಣುಮಕ್ಕಳಾಗಲಿ ಅವರನ್ನು ಮದುವೆಯಾಗಬಾರದು. ಯಾಕೆಂದರೆ, ನನ್ನನ್ನು ಹಿಂಬಾಲಿಸದಂತೆ ಅವರು ನಿಮ್ಮ ಮಕ್ಕಳನ್ನು ಮಾರ್ಪಡಿಸುವರು. ಆಗ ನಿಮ್ಮ ಮಕ್ಕಳು ಅನ್ಯದೇವರುಗಳ ಸೇವೆಮಾಡುವರು. ಆಗ ಯೆಹೋವನು ನಿಮ್ಮ ಮೇಲೆ ಬಹಳ ಕೋಪಗೊಂಡು ನಿಮ್ಮನ್ನು ಬೇಗನೆ ನಾಶಮಾಡುವನು.

ಸುಳ್ಳುದೇವರುಗಳನ್ನು ನಾಶಮಾಡಿರಿ

“ಆ ಜನಾಂಗಗಳ ಯಜ್ಞವೇದಿಕೆಗಳನ್ನೆಲ್ಲಾ ನೀವು ಕೆಡವಿಹಾಕಿ ನೆಲಸಮಮಾಡಬೇಕು. ಅವರ ಸ್ಮಾರಕ ಕಲ್ಲುಗಳನ್ನು ಒಡೆದು ಚೂರುಚೂರು ಮಾಡಬೇಕು. ಅವರ ಅಶೇರಸ್ತಂಭಗಳನ್ನು ಕತ್ತರಿಸಿಹಾಕಬೇಕು; ಅವುಗಳ ಪ್ರತಿಮೆಗಳನ್ನು ಸುಟ್ಟುಹಾಕಬೇಕು. ಯಾಕೆಂದರೆ ನೀವು ಯೆಹೋವನ ಪ್ರಜೆಗಳಾಗಿದ್ದೀರಿ. ಭೂಲೋಕದಲ್ಲಿರುವ ಎಲ್ಲಾ ಜನಾಂಗಗಳಿಂದ ಆತನು ನಿಮ್ಮನ್ನು ಆರಿಸಿಕೊಂಡಿದ್ದಾನೆ. ನೀವು ಆತನ ಸ್ವಕೀಯ ಪ್ರಜೆಯಾಗಿದ್ದೀರಿ. ದೇವರು ನಿಮ್ಮನ್ನೇ ಯಾಕೆ ಪ್ರೀತಿಸಿ ಆರಿಸಿಕೊಂಡನು? ನೀವು ದೊಡ್ಡ ಜನಾಂಗವಾಗಿರುವ ಕಾರಣದಿಂದಲ್ಲ, ನಿಜವಾಗಿಯೂ ನೀವು ಚಿಕ್ಕ ಜನಾಂಗವೇ. ಆದರೆ ಯೆಹೋವನು ತನ್ನ ಪರಾಕ್ರಮವನ್ನು ತೋರಿಸಿ ನಿಮ್ಮನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದನು. ನಿಮ್ಮನ್ನು ದಾಸತ್ವದಿಂದ ಬಿಡುಗಡೆ ಮಾಡಿದನು; ಫರೋಹನ ಹಿಡಿತದಿಂದ ನಿಮ್ಮನ್ನು ಬಿಡಿಸಿದನು; ಯಾಕೆಂದರೆ ಆತನು ನಿಮ್ಮನ್ನು ಪ್ರೀತಿಸುತ್ತಾನೆ; ನಿಮ್ಮ ಪೂರ್ವಿಕರಿಗೆ ತಾನು ಮಾಡಿದ ವಾಗ್ದಾನವನ್ನು ನೆರವೇರಿಸಬೇಕೆಂದಿದ್ದಾನೆ.

“ಆದ್ದರಿಂದ ನಿಮ್ಮ ದೇವರಾದ ಯೆಹೋವನೊಬ್ಬನೇ ನಿಜವಾದ ದೇವರೆಂಬುದು ನಿಮಗೆ ತಿಳಿದಿರಲಿ. ನೀವು ಆತನ ಮೇಲೆ ಭರವಸವಿಡಬಹುದು. ಆತನು ತಾನು ಮಾಡಿದ ಒಡಂಬಡಿಕೆಯನ್ನು ನೆರವೇರಿಸುವಾತನಾಗಿದ್ದಾನೆ. ಆತನನ್ನು ಪ್ರೀತಿಸಿ ಆತನ ಕಟ್ಟಳೆಗಳಿಗೆ ವಿಧೇಯರಾಗುವವರನ್ನೆಲ್ಲಾ ಆತನು ಪ್ರೀತಿಸುತ್ತಾನೆ; ಅವರಿಗೆ ಕರುಣೆ ತೋರುತ್ತಾನೆ. ಈ ಪ್ರೀತಿ, ಕರುಣೆಗಳು ಸಾವಿರ ತಲೆಮಾರುಗಳವರೆಗೂ ಮುಂದುವರಿಯುವವು. 10 ಆದರೆ ಆತನು ತನ್ನನ್ನು ದ್ವೇಷಿಸುವವರನ್ನು ಶಿಕ್ಷಿಸುತ್ತಾನೆ. ತನ್ನನ್ನು ದ್ವೇಷಿಸುವ ಜನರನ್ನು ಶಿಕ್ಷಿಸಲು ಆತನು ನಿಧಾನ ಮಾಡುವುದಿಲ್ಲ. 11 ಆದ್ದರಿಂದ ನಾನು ಈ ದಿನ ನಿಮಗೆ ಕೊಡುವ ಆಜ್ಞಾವಿಧಿನಿಯಮಗಳನ್ನು ನೀವು ಚೆನ್ನಾಗಿ ಮನದಟ್ಟು ಮಾಡಿಕೊಳ್ಳಬೇಕು.

12 “ನೀವು ಈ ಕಟ್ಟಳೆಗಳಿಗೆ ಕಿವಿಗೊಡುವುದಾದರೆ ಮತ್ತು ಅವುಗಳಿಗೆ ಎಚ್ಚರಿಕೆಯಿಂದ ವಿಧೇಯರಾದರೆ, ನಿಮ್ಮ ದೇವರಾದ ಯೆಹೋವನು ನಿಮ್ಮ ಪೂರ್ವಿಕರೊಡನೆ ಮಾಡಿಕೊಂಡ ಪ್ರೀತಿಯ ಒಡಂಬಡಿಕೆಯನ್ನು ನೆರವೇರಿಸುವನು; 13 ಮತ್ತು ಆತನು ಆಶೀರ್ವದಿಸುವನು. ನಿಮ್ಮ ಜನಾಂಗವು ವೃದ್ಧಿಯಾಗುವಂತೆ ಮಾಡುವನು. ನಿಮ್ಮನ್ನೂ ನಿಮ್ಮ ಮಕ್ಕಳನ್ನೂ ಆಶೀರ್ವದಿಸುವನು. ನಿಮ್ಮ ಹೊಲಗಳಲ್ಲಿ ಸಮೃದ್ಧಿಯಾದ ಬೆಳೆಯು ಉಂಟಾಗುವಂತೆ ಆಶೀರ್ವದಿಸುವನು. ಆತನು ನಿಮಗೆ ಧಾನ್ಯ, ಹೊಸ ದ್ರಾಕ್ಷಾರಸ ಮತ್ತು ಎಣ್ಣೆಗಳನ್ನು ಕೊಡುವನು. ನಿಮ್ಮ ದನಕುರಿಗಳು ಮರಿಗಳನ್ನು ಈಯುವಂತೆ ಆಶೀರ್ವದಿಸುವನು. ನಿಮ್ಮ ಪೂರ್ವಿಕರಿಗೆ ವಾಗ್ದಾನ ಮಾಡಿದ ದೇಶದಲ್ಲಿ ನೀವು ನೆಲೆಸಿರುವಾಗ ನಿಮಗೆ ಈ ಆಶೀರ್ವಾದಗಳೆಲ್ಲಾ ಪ್ರಾಪ್ತವಾಗುವವು.

14 “ಎಲ್ಲಾ ಜನರಿಗಿಂತ ನೀವು ಹೆಚ್ಚಾಗಿ ಆಶೀರ್ವದಿಸಲ್ಪಡುವಿರಿ. ಪ್ರತಿಯೊಂದು ಕುಟುಂಬದಲ್ಲಿ ಹೆಚ್ಚು ಮಕ್ಕಳಿರುವರು. ನಿಮ್ಮ ಹಸುಗಳು ಮರಿಗಳನ್ನು ಈಯುವವು. 15 ನಿಮ್ಮಿಂದ ಎಲ್ಲಾ ತರದ ಕಾಯಿಲೆಗಳನ್ನು ಯೆಹೋವನು ತೆಗೆದುಹಾಕುವನು. ಈಜಿಪ್ಟಿನಲ್ಲಿ ನಿಮ್ಮನ್ನು ಬಾಧಿಸುತ್ತಿದ್ದ ಭಯಂಕರ ಕಾಯಿಲೆಗಳು ನಿಮ್ಮನ್ನು ಬಾಧಿಸುವುದಿಲ್ಲ. ಆ ಕಾಯಿಲೆಗಳು ನಿಮ್ಮ ವೈರಿಗಳಿಗೆ ಉಂಟಾಗುವವು. 16 ಆ ದೇಶದಲ್ಲಿ ನೀವು ಯೆಹೋವನ ಸಹಾಯದಿಂದ ಸೋಲಿಸುವ ಜನರನ್ನೆಲ್ಲಾ ಕೊಂದುಬಿಡಬೇಕು. ಅವರಿಗೆ ಕನಿಕರ ತೋರಬಾರದು. ಅವರ ದೇವರುಗಳನ್ನು ಪೂಜಿಸಕೂಡದು! ಯಾಕೆಂದರೆ ಅವು ನಿಮಗೆ ಉರುಲಾಗಿ ನಿಮ್ಮ ಜೀವಿತವನ್ನು ಹಾಳುಮಾಡುತ್ತವೆ.

ತನ್ನ ಜನರಿಗೆ ಸಹಾಯ ಮಾಡುವುದಾಗಿ ಯೆಹೋವನ ವಾಗ್ದಾನ

17 “ನಿಮ್ಮ ಮನಸ್ಸಿನಲ್ಲಿ, ‘ಈ ಜನಾಂಗಗಳು ನಮ್ಮ ಜನಾಂಗಗಳಿಗಿಂತ ದೊಡ್ಡದಾಗಿವೆ. ಇವರನ್ನು ಹೀಗೆ ಹೊರಡಿಸಲು ಸಾಧ್ಯವೇ ಎಂದು ಯಾಕೆ ಅಂದುಕೊಳ್ಳುತ್ತೀರಿ.’ 18 ನೀವು ಅವರಿಗೆ ಭಯಪಡಬಾರದು. ನಿಮ್ಮ ದೇವರಾದ ಯೆಹೋವನು ಫರೋಹನಿಗೂ ಈಜಿಪ್ಟಿನ ಎಲ್ಲಾ ಜನರಿಗೂ ಮಾಡಿದ್ದನ್ನು ನೆನಪು ಮಾಡಿಕೊಳ್ಳಿರಿ. 19 ಆತನು ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ನಡೆಸಿದ್ದನ್ನು ನೀವು ನೋಡಿದಿರಿ. ಆತನು ನಿಮ್ಮನ್ನು ಈಜಿಪ್ಟಿನಿಂದ ಕರೆದುಕೊಂಡು ಬರಲು ತನ್ನ ಮಹಾಶಕ್ತಿಯನ್ನೂ ಬಲವನ್ನೂ ಬಳಸಿದ್ದನ್ನು ನೀವು ನೋಡಿದಿರಿ. ನೀವು ಭಯಪಡುವ ಎಲ್ಲಾ ಜನರ ಮೇಲೆ ದೇವರಾದ ಯೆಹೋವನು ಅದೇ ಶಕ್ತಿಯನ್ನು ಬಳಸುವನು.

20 “ನಿಮ್ಮಿಂದ ತಪ್ಪಿಸಿಕೊಂಡು ಅಡಗಿಕೊಳ್ಳುವ ಜನರನ್ನು ಶಿಕ್ಷಿಸಲು ದೇವರು ಕಡಜದ ಹುಳಗಳನ್ನು ಅವರ ಮಧ್ಯಕ್ಕೆ ಕಳುಹಿಸುವನು ಮತ್ತು ಅವರನ್ನೆಲ್ಲಾ ನಾಶಮಾಡುವನು. 21 ಅವರಿಗೆ ನೀವು ಭಯಪಡಬೇಡಿರಿ; ಯಾಕೆಂದರೆ ನಿಮ್ಮ ದೇವರಾದ ಯೆಹೋವನು ನಿಮ್ಮೊಂದಿಗಿದ್ದಾನೆ. ಆತನು ಭಯಂಕರನೂ ಮಹಾ ದೇವರೂ ಆಗಿದ್ದಾನೆ. 22 ನಿಮ್ಮ ದೇವರಾದ ಯೆಹೋವನು ಆ ಜನಾಂಗಗಳವರನ್ನು ಸ್ವಲ್ಪ ಸ್ವಲ್ಪವಾಗಿಯೇ ಅಲ್ಲಿಂದ ತೆಗೆದುಬಿಡುವನು. ನೀವು ಒಂದೇ ಸಮಯಕ್ಕೆ ಎಲ್ಲರನ್ನು ನಾಶಮಾಡಬಾರದು. ಹಾಗೆ ಮಾಡಿದ್ದಲ್ಲಿ ದೇಶದಲ್ಲೆಲ್ಲಾ ಕಾಡುಪ್ರಾಣಿಗಳು ತುಂಬಿಹೋಗುತ್ತವೆ. 23 ನಿಮ್ಮ ದೇವರಾದ ಯೆಹೋವನು ಆ ಜನಾಂಗಗಳವರನ್ನು ಸೋಲಿಸಲು ನಿಮಗೆ ಅವಕಾಶ ಮಾಡಿಕೊಡುವನು. ಯುದ್ಧಮಾಡುವಾಗ ಅವರ ಮಧ್ಯದಲ್ಲಿ ಗಲಿಬಿಲಿ ಹುಟ್ಟಿಸಿ ಅವರು ನಾಶವಾಗುವಂತೆ ಮಾಡುವನು. 24 ಅವರ ರಾಜರನ್ನು ನೀವು ಸೋಲಿಸುವಂತೆ ಮಾಡುವನು. ನೀವು ಅವರನ್ನು ಕೊಂದು ಅವರ ಹೆಸರು ಉಳಿಯದಂತೆ ಮಾಡುವಿರಿ. ನಿಮ್ಮನ್ನು ಯಾರೂ ತಡೆಯಲಾರರು. ನೀವು ಪ್ರತಿಯೊಬ್ಬರನ್ನು ನಾಶಮಾಡಿಬಿಡುವಿರಿ.

25 “ಅವರ ದೇವರುಗಳ ಪ್ರತಿಮೆಗಳನ್ನು ಬೆಂಕಿಯಲ್ಲಿ ಸುಟ್ಟುಬಿಡಬೇಕು. ಅವರ ವಿಗ್ರಹಗಳಲ್ಲಿರುವ ಬೆಳ್ಳಿಬಂಗಾರಗಳನ್ನು ನೀವು ತೆಗೆದುಕೊಳ್ಳಬೇಡಿ. ನೀವು ತೆಗೆದುಕೊಂಡರೆ ಅವು ನಿಮಗೆ ಉರುಲಾಗಿ ನಿಮ್ಮನ್ನೇ ನಾಶಮಾಡುತ್ತವೆ. ಯಾಕೆಂದರೆ ನಿಮ್ಮ ದೇವರಾದ ಯೆಹೋವನು ವಿಗ್ರಹಗಳನ್ನು ದ್ವೇಷಿಸುತ್ತಾನೆ. 26 ಅಂಥ ಅಸಹ್ಯ ವಿಗ್ರಹಗಳನ್ನು ನಿಮ್ಮ ಮನೆಯೊಳಗೆ ತರಲೂಬಾರದು, ಅವುಗಳನ್ನು ಬಯಸಲೂಬಾರದು; ನೀವು ಅವುಗಳನ್ನು ದ್ವೇಷಿಸಬೇಕು ಮತ್ತು ನಾಶಮಾಡಬೇಕು. ಇಲ್ಲವಾದರೆ ನೀವೂ ಅವುಗಳಂತೆಯೇ ನಾಶನಕ್ಕೆ ಗುರಿಯಾಗುವಿರಿ.

ಕೀರ್ತನೆಗಳು 90

ನಾಲ್ಕನೆ ಭಾಗ

(ಕೀರ್ತನೆಗಳು 90–106)

ಪ್ರಾರ್ಥನೆ. ರಚನೆಗಾರ: ದೇವಮನುಷ್ಯನಾದ ಮೋಶೆ.

90 ಯೆಹೋವನೇ, ತಲತಲಾಂತರಗಳಿಂದಲೂ ನೀನೇ ನಮ್ಮ ವಾಸಸ್ಥಾನ.
ಬೆಟ್ಟಗಳು ಹುಟ್ಟುವುದಕ್ಕಿಂತ ಮೊದಲಿಂದಲೂ
    ಭೂಮಿಯೂ ಅದರ ದೇಶಗಳೂ ನಿರ್ಮಾಣವಾಗುವುದಕ್ಕಿಂತ ಮೊದಲಿನಿಂದಲೂ ನೀನೇ ದೇವರು.
    ಯಾವಾಗಲೂ ದೇವರಾಗಿದ್ದಾತನು ನೀನೇ! ಯಾವಾಗಲೂ ದೇವರಾಗಿರುವಾತನೂ ನೀನೇ!

ಜನರಿಗೆ ಜನ್ಮನೀಡುವಾತನೂ ನೀನೇ;
    ಅವರನ್ನು ಮತ್ತೆ ಧೂಳನ್ನಾಗಿ ಮಾಡುವಾತನೂ ನೀನೇ.
ಸಾವಿರ ವರ್ಷಗಳು ನಿನಗೆ ಗತಿಸಿಹೋದ
    ನಿನ್ನೆಯಂತೆಯೂ ರಾತ್ರಿಯ ಜಾವದಂತೆಯೂ ಇವೆ.
ನೀನು ನಮ್ಮನ್ನು ಗುಡಿಸಿಹಾಕುವೆ.
    ನಮ್ಮ ಜೀವನವು ಕನಸಿನಂತಿದೆ; ಹೊತ್ತಾರೆಯಲ್ಲಿ ನಾವು ಇಲ್ಲವಾಗುತ್ತೇವೆ.
ನಾವು ಹುಲ್ಲಿನಂತಿದ್ದೇವೆ.
    ಹೊತ್ತಾರೆಯಲ್ಲಿ ಹುಲ್ಲು ಚಿಗುರತೊಡಗಿದರೂ
    ಸಾಯಂಕಾಲದೊಳಗೆ ಒಣಗಿಹೋಗುತ್ತದೆ.
ದೇವರೇ, ನಿನ್ನ ಕೋಪದಿಂದ ನಾವು ನಾಶವಾದೆವು.
    ನಿನ್ನ ರೌದ್ರವು ನಮ್ಮನ್ನು ತಲ್ಲಣಗೊಳಿಸಿದೆ.
ನಮ್ಮ ಪಾಪಗಳೆಲ್ಲಾ ನಿನಗೆ ತಿಳಿದಿವೆ.
    ದೇವರೇ, ನಮ್ಮ ರಹಸ್ಯಪಾಪಗಳೆಲ್ಲಾ ನಿನ್ನ ಮುಂದೆ ಬಟ್ಟಬಯಲಾಗಿವೆ.
ನಿನ್ನ ಕೋಪವು ನಮ್ಮ ಜೀವನವನ್ನು ಕೊನೆಗೊಳಿಸಬಲ್ಲದು.
    ನಮ್ಮ ಜೀವಿತಗಳು ನಿಟ್ಟುಸಿರಿನಂತೆ ತೀರಿಹೋದವು.
10 ನಮ್ಮ ಆಯುಷ್ಕಾಲವು ಎಪ್ಪತ್ತು ವರ್ಷ; ಬಲಹೆಚ್ಚಿದರೆ ಎಂಭತ್ತು ವರ್ಷ.
    ಕಷ್ಟಸಂಕಟಗಳೇ ಅದರ ಆಡಂಬರ.
ಬಹುಬೇಗನೆ ನಮ್ಮ ಜೀವಿತಗಳು ಕೊನೆಗೊಳ್ಳುತ್ತವೆ!
    ನಾವು ಹಾರಿ ಹೋಗುತ್ತೇವೆ.
11 ದೇವರೇ, ನಿನ್ನ ಕೋಪದ ಪೂರ್ಣ ಬಲವನ್ನು ಯಾರೂ ತಿಳಿಯರು.
    ನಿನ್ನಲ್ಲಿ ನಮಗಿರುವ ಭಯಭಕ್ತಿಯು ನಿನ್ನ ಕೋಪದಷ್ಟೇ ದೊಡ್ಡದಾಗಿವೆ.
12 ನಮ್ಮ ಜೀವಿತಗಳು ಕೊಂಚವೇ ಎಂಬುದನ್ನು ನಮಗೆ ಕಲಿಸು.
    ಆಗ ನಾವು ವಿವೇಕಿಗಳಾಗುವೆವು.
13 ಯೆಹೋವನೇ, ನಮ್ಮ ಬಳಿಗೆ ಹಿಂತಿರುಗಿ ಬಾ.
    ನಿನ್ನ ಸೇವಕರ ಮೇಲೆ ಅಂತಃಕರಣವಿರಲಿ.
14 ಪ್ರತಿ ಮುಂಜಾನೆ ನಿನ್ನ ಪ್ರೀತಿಯಿಂದ ನಮ್ಮನ್ನು ತುಂಬಿಸು.
    ಆಗ ಜೀವಮಾನವೆಲ್ಲಾ ಉಲ್ಲಾಸಿಸಿ ಹರ್ಷಿಸುವೆವು.
15 ನೀನು ನಮಗೆ ಬಹು ದುಃಖವನ್ನೂ ಕಷ್ಟಗಳನ್ನೂ ಬರಮಾಡಿದೆ.
    ಈಗ ನಮ್ಮನ್ನು ಸಂತೋಷಗೊಳಿಸು.
16 ನೀನು ನಿನ್ನ ಸೇವಕರುಗಳಿಗಾಗಿ ಮಾಡಬಲ್ಲ ಅದ್ಭುತಕಾರ್ಯಗಳನ್ನು ನಾವು ನೋಡುವಂತಾಗಲಿ.
17 ನಮ್ಮ ದೇವರಾದ ಯೆಹೋವನೇ, ನಮಗೆ ಕರುಣೆತೋರು.
    ನಮ್ಮ ಕೆಲಸಕಾರ್ಯಗಳು ನಮಗೆ ಫಲ ನೀಡಲಿ;
    ನಮ್ಮ ಕಾರ್ಯಗಳನ್ನು ಆತನು ಸಫಲಪಡಿಸಲಿ.

ಯೆಶಾಯ 35

ದೇವರು ತನ್ನ ಜನರನ್ನು ಸಂತೈಸುವನು

35 ಮರಭೂಮಿಯೂ ಒಣನೆಲವೂ ಬಹಳವಾಗಿ ಸಂತೋಷಿಸುವದು. ಅದು ಹರ್ಷಿಸುತ್ತಾ ಪುಷ್ಪದಂತೆ ಫಲಿಸುವುದು. ಮರುಭೂಮಿಯು ಹರ್ಷದಿಂದ ಅರಳಿದ ಹೂಗಳಿಂದ ತುಂಬಿಹೋಗುವುದು. ಸಂತೋಷದಿಂದ, ಕುಣಿದಾಡುವದೋ ಎಂಬಂತೆ ತೋರುವದು. ಲೆಬನೋನಿನ ಅರಣ್ಯದಂತೆಯೂ ಕರ್ಮೆಲ್ ಬೆಟ್ಟದಂತೆಯೂ ಶಾರೋನಿನ ಕಣಿವೆಯಂತೆಯೂ ಮನೋಹರವಾಗಿರುವದು. ಇವೆಲ್ಲಾ ನೆರವೇರುವದು ಯಾಕೆಂದರೆ ಎಲ್ಲಾ ಜನರು ಯೆಹೋವನ ಮಹಿಮೆಯನ್ನು ನಮ್ಮ ದೇವರ ಪ್ರಭಾವವನ್ನೂ ಕಾಣುವರು.

ಬಲಹೀನವಾದ ಕೈಗಳನ್ನು ಬಲಗೊಳಿಸಿರಿ, ನಡುಗುವ ಮೊಣಕಾಲುಗಳನ್ನು ಬಲಗೊಳಿಸಿರಿ. ಜನರು ಭಯದಿಂದ ಗಲಿಬಿಲಿಗೊಂಡಿದ್ದಾರೆ. ಅವರಿಗೆ ಹೀಗೆ ಹೇಳು, “ಧೈರ್ಯಗೊಳ್ಳಿರಿ, ಭಯಪಡಬೇಡಿ.” ಇಗೋ, ನಿಮ್ಮ ದೇವರು ಬಂದು ನಿಮ್ಮ ವೈರಿಗಳನ್ನು ಶಿಕ್ಷಿಸುವನು. ಆತನು ಬಂದು ನಿಮಗೆ ಪ್ರತಿಫಲವನ್ನು ಕೊಡುವನು. ಯೆಹೋವನು ನಿಮ್ಮನ್ನು ಕಾಪಾಡುತ್ತಾನೆ. ಆಗ ಕುರುಡರಿಗೆ ದೃಷ್ಟಿ ಬರುವದು. ಅವರ ಕಣ್ಣುಗಳು ತೆರೆಯಲ್ಪಡುವವು. ಆಗ ಕಿವುಡರು ಕೇಳಿಸಿಕೊಳ್ಳುವರು. ಅವರ ಕಿವಿಗಳು ತೆರೆಯಲ್ಪಡುವವು. ಕುಂಟರು ಜಿಂಕೆಯಂತೆ ಜಿಗಿದಾಡುವರು. ಮಾತನಾಡಲು ಸಾಧ್ಯವಾಗದ ಜನರು ಆಗ ಹರ್ಷಗಾನವನ್ನು ಹಾಡುವರು. ಯಾವಾಗ ಮರುಭೂಮಿಯಲ್ಲಿ ತೊರೆಯ ನೀರು ಹರಿಯುವದೋ ಆಗ ಇವೆಲ್ಲಾ ಜರಗುವವು. ಒಣಭೂಮಿಯಲ್ಲಿ ಒರತೆಯ ನೀರು ಹರಿಯುವದು. ಆಗ ಜನರು ಬಿಸುಲ್ಗುದುರೆಯನ್ನು ನೋಡಿ ನೀರು ಎಂದು ಭಾವಿಸುವರು. ಆದರೆ ಆಗ ನೀರಿನ ಕೊಳಗಳೇ ಇರುವವು. ಬೆಂಗಾಡಿನಲ್ಲಿ ಬಾವಿಗಳಿರುವವು. ನೆಲದೊಳಗಿಂದ ನೀರು ಉಕ್ಕುವುದು. ಒಂದು ಕಾಲದಲ್ಲಿ ಕಾಡುಪ್ರಾಣಿಗಳು ವಾಸವಾಗಿದ್ದ ಸ್ಥಳದಲ್ಲಿ ಎತ್ತರವಾದ ನೀರವಂಜಿಗಳು ಬೆಳೆಯುವವು.

ಆ ಸಮಯದಲ್ಲಿ ಅಲ್ಲಿ ಮಾರ್ಗವಿರುವದು. ಆ ಹೆದ್ದಾರಿಯು “ಪರಿಶುದ್ಧ” ಮಾರ್ಗವೆಂದು ಕರೆಯಲ್ಪಡುವದು. ದುಷ್ಟಜನರಿಗೆ ಆ ಮಾರ್ಗದಲ್ಲಿ ನಡೆಯಲು ಅನುಮತಿ ಇರುವದಿಲ್ಲ. ಮೂರ್ಖರು ಆ ಮಾರ್ಗದಲ್ಲಿ ನಡೆಯರು. ಆ ಮಾರ್ಗದಲ್ಲಿ ಒಳ್ಳೆಯ ಜನರು ಮಾತ್ರ ನಡೆಯುವರು. ಆ ಮಾರ್ಗದಲ್ಲಿ ಅಪಾಯವಿರುವದಿಲ್ಲ. ಜನರಿಗೆ ಹಾನಿಮಾಡಲು ಸಿಂಹಗಳಾಗಲಿ ಕ್ರೂರಜಂತುಗಳಾಗಲಿ ಆ ಮಾರ್ಗದಲ್ಲಿರುವದಿಲ್ಲ. ದೇವರು ರಕ್ಷಿಸುವ ಜನರಿಗೆ ಮಾತ್ರವೇ ಆ ಮಾರ್ಗವಿರುವುದು.

10 ಯೆಹೋವನು ತನ್ನ ಜನರನ್ನು ಸ್ವತಂತ್ರರನ್ನಾಗಿ ಮಾಡುತ್ತಾನೆ. ಆ ಜನರು ಆತನ ಬಳಿಗೆ ಹಿಂದಿರುಗಿ ಬರುವರು. ಚೀಯೋನಿಗೆ ಜನರು ಬರುವಾಗ ಅವರು ಸಂತೋಷಭರಿತರಾಗುವರು. ಅವರು ನಿತ್ಯವೂ ಸಂತೋಷವಾಗಿರುವರು. ತಲೆಯ ಮೇಲಿನ ಕಿರೀಟದಂತೆ ಅವರ ಸಂತೋಷವಿರುವದು. ಅವರಲ್ಲಿ ಹರ್ಷವೂ ಸಂತಸವೂ ಸಂಪೂರ್ಣವಾಗಿ ತುಂಬಿರುವವು. ದುಃಖವೂ ಚಿಂತೆಯೂ ಬಹು ದೂರವಾಗಿರುವವು.

ಪ್ರಕಟನೆ 5

ಯಾರು ಸುರುಳಿಯನ್ನು ಬಿಚ್ಚಬಲ್ಲರು?

ಸಿಂಹಾಸನದ ಮೇಲೆ ಕುಳಿತಿರುವಾತನ ಬಲಗೈಯಲ್ಲಿ ಒಂದು ಸುರುಳಿಯನ್ನು ನೋಡಿದೆನು. ಅದರ ಎರಡು ಕಡೆಗಳಲ್ಲಿಯೂ ಬರಹವಿತ್ತು. ಅದು ಏಳು ಮುದ್ರೆಗಳಿಂದ ಮುದ್ರಿತವಾಗಿತ್ತು. ಬಲಿಷ್ಠನಾದ ದೇವದೂತನು ಗಟ್ಟಿಯಾದ ಧ್ವನಿಯಲ್ಲಿ, “ಈ ಸುರುಳಿಯ ಮುದ್ರೆಗಳನ್ನು ತೆಗೆಯುವುದಕ್ಕೆ ಯೋಗ್ಯನಾದವನು ಯಾರು?” ಎಂದು ಪ್ರಕಟಿಸಿದನು. ಆದರೆ ಪರಲೋಕದಲ್ಲಾಗಲಿ ಭೂಮಂಡಲದಲ್ಲಾಗಲಿ ಪಾತಾಳದಲ್ಲಾಗಲಿ ಈ ಸುರುಳಿಯನ್ನು ಬಿಚ್ಚಿ ನೋಡುವವರು ಯಾರೂ ಇರಲಿಲ್ಲವಾದ್ದರಿಂದ ನಾನು ಮತ್ತೆಮತ್ತೆ ಗೋಳಾಡಿದೆನು. ಆದರೆ ಹಿರಿಯರಲ್ಲಿ ಒಬ್ಬನು ನನಗೆ, “ಅಳಬೇಡ! ಯೂದ ಕುಲದ ಸಿಂಹವಾಗಿರುವಾತನು (ಕ್ರಿಸ್ತ) ಜಯಗಳಿಸಿದನು. ಆತನು ದಾವೀದನ ಸಂತತಿಯವನು. ಆತನು ಸುರುಳಿಯನ್ನು ಮತ್ತು ಅದರ ಏಳು ಮುದ್ರೆಗಳನ್ನು ತೆರೆಯಲು ಸಮರ್ಥನಾಗಿದ್ದಾನೆ” ಎಂದು ಹೇಳಿದನು.

ನಂತರ ಸಿಂಹಾಸನದ ಮತ್ತು ನಾಲ್ಕು ಜೀವಿಗಳ ಮಧ್ಯೆ ಒಂದು ಕುರಿಮರಿಯನ್ನು ನಾನು ನೋಡಿದೆನು. ಹಿರಿಯರು ಸಹ ಆ ಕುರಿಮರಿಯ ಸುತ್ತಲೂ ಇದ್ದರು. ಆ ಕುರಿಮರಿಯು ಕೊಲ್ಲಲ್ಪಟ್ಟಂತಿತ್ತು. ಅದಕ್ಕೆ ಏಳು ಕೊಂಬುಗಳೂ ಏಳು ಕಣ್ಣುಗಳೂ ಇದ್ದವು. ಇವು ಈ ಲೋಕಕ್ಕೆಲ್ಲಾ ಕಳುಹಿಸಲ್ಪಟ್ಟ ದೇವರ ಏಳು ಆತ್ಮಗಳಾಗಿದ್ದವು. ಆ ಕುರಿಮರಿಯು ಬಂದು ಸಿಂಹಾಸನದ ಮೇಲೆ ಕುಳಿತಿರುವಾತನ ಬಲಗೈಯಿಂದ ಸುರುಳಿಯನ್ನು ತೆಗೆದುಕೊಂಡಿತು. ಆಗ ನಾಲ್ಕು ಜೀವಿಗಳು ಮತ್ತು ಇಪ್ಪತ್ನಾಲ್ಕು ಮಂದಿ ಹಿರಿಯರು ಆ ಕುರಿಮರಿಯ ಮುಂದೆ ಮೊಣಕಾಲೂರಿ ನಮಸ್ಕರಿಸಿದರು. ಪ್ರತಿಯೊಬ್ಬರ ಕೈಯಲ್ಲೂ ಒಂದೊಂದು ತಂತಿವಾದ್ಯವಿತ್ತು. ಧೂಪವು ತುಂಬಿದ್ದ ಚಿನ್ನದ ಪಾತ್ರೆಗಳನ್ನು ಅವರು ಹಿಡಿದುಕೊಂಡಿದ್ದರು. ಪಾತ್ರೆಗಳು ದೇವರ ಪರಿಶುದ್ಧ ಜನರ ಪ್ರಾರ್ಥನೆಗಳಾಗಿದ್ದವು. ಅವರೆಲ್ಲರೂ ಕುರಿಮರಿಗೋಸ್ಕರ ಒಂದು ಹೊಸ ಹಾಡನ್ನು ಹಾಡಿದರು:

“ನೀನು ಕೊಲ್ಲಲ್ಪಟ್ಟವನಾದ್ದರಿಂದ,
    ಸುರುಳಿಯನ್ನು ತೆಗೆದುಕೊಂಡು,
ಅದರ ಮುದ್ರೆಗಳನ್ನು ಒಡೆಯುವುದಕ್ಕೆ ಯೋಗ್ಯನಾಗಿರುವೆ.
    ನೀನು ನಿನ್ನ ರಕ್ತದಿಂದ (ಮರಣದಿಂದ) ಸಕಲ ಕುಲ, ಭಾಷೆ,
    ಜನಾಂಗಗಳಿಂದ ಜನರನ್ನು ದೇವರಿಗಾಗಿ ಕೊಂಡುಕೊಂಡಿರುವೆ.
10 ಅವರನ್ನು ಒಂದು ರಾಜ್ಯವನ್ನಾಗಿ ಮಾಡಿದೆ; ನಮ್ಮ ದೇವರಿಗೋಸ್ಕರ ಯಾಜಕರನ್ನಾಗಿ ಮಾಡಿದೆ;
    ಅವರು ಲೋಕದಲ್ಲಿ ಆಳುವರು.”

11 ನಂತರ ನಾನು ನೋಡಿದಾಗ, ಅನೇಕ ದೇವದೂತರ ಧ್ವನಿಗಳನ್ನು ಕೇಳಿದೆನು. ಈ ದೇವದೂತರು ಸಿಂಹಾಸನದ, ನಾಲ್ಕು ಜೀವಿಗಳ ಮತ್ತು ಹಿರಿಯರ ಸುತ್ತಲೂ ಇದ್ದರು. ಅವರ ಸಂಖ್ಯೆಯು ಲಕ್ಷೋಪಲಕ್ಷವಾಗಿಯೂ ಕೋಟ್ಯಾನು ಕೋಟಿಯಾಗಿಯೂ ಇತ್ತು. 12 ಈ ದೇವದೂತರು ಗಟ್ಟಿಯಾದ ಧ್ವನಿಯಿಂದ ಇಂತೆಂದರು:

“ವಧಿತನಾದ ಕುರಿಮರಿಯು ಅಧಿಕಾರವನ್ನು, ಸಂಪತ್ತನ್ನು, ಜ್ಞಾನವನ್ನು, ಬಲವನ್ನು,
    ಗೌರವವನ್ನು, ಪ್ರಭಾವವನ್ನು, ಸ್ತೋತ್ರವನ್ನು ಪಡೆಯಲು ಯೋಗ್ಯನಾಗಿದ್ದಾನೆ!”

13 ಇದಲ್ಲದೆ ಆಕಾಶದಲ್ಲಿಯೂ ಭೂಮಿಯಲ್ಲಿಯೂ ಭೂಮಿಯ ಕೆಳಭಾಗದಲ್ಲೂ ಸಮುದ್ರದಲ್ಲೂ ಇರುವ ಪ್ರತಿಯೊಂದು ಜೀವಿಗಳು ಹೀಗೆ ಹೇಳುವುದನ್ನು ಕೇಳಿದೆನು:

“ಸಿಂಹಾಸನದ ಮೇಲೆ ಕುಳಿತಿರುವಾತನಿಗೂ ಕುರಿಮರಿಯಾದಾತನಿಗೂ
    ಸ್ತೋತ್ರ, ಗೌರವ, ಪ್ರಭಾವ, ಅಧಿಕಾರಗಳು ಯುಗಯುಗಾಂತರಗಳಲ್ಲಿಯೂ ಇರಲಿ!”

14 ಆ ನಾಲ್ಕು ಜೀವಿಗಳು “ಆಮೆನ್!” ಎಂದು ಹೇಳಿದವು. ಹಿರಿಯರು ಮೊಣಕಾಲೂರಿ ಆರಾಧಿಸಿದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International