Read the Gospels in 40 Days
ಯೇಸುವಿನ ವಂಶಾವಳಿ
(ಲೂಕ 3:23-38)
1 ಯೇಸು ಕ್ರಿಸ್ತನ ವಂಶಾವಳಿಯಿದು. ಆತನು ದಾವೀದನ ವಂಶದವನು. ದಾವೀದನು ಅಬ್ರಹಾಮನ ವಂಶದವನು.
2 ಅಬ್ರಹಾಮನು ಇಸಾಕನ ತಂದೆ.
ಇಸಾಕನು ಯಾಕೋಬನ ತಂದೆ.
ಯಾಕೋಬನು ಯೆಹೂದ ಮತ್ತು ಅವನ ಸಹೋದರರ ತಂದೆ.
3 ಯೆಹೂದನು ಪೆರೆಚನ ಮತ್ತು ಜೆರಹನ ತಂದೆ. (ಅವರ ತಾಯಿ ತಾಮರಳು.)
ಪೆರೆಚನು ಹೆಚ್ರೋನನ ತಂದೆ.
ಹೆಚ್ರೋನನು ಅರಾಮನ ತಂದೆ.
4 ಅರಾಮನು ಅಮ್ಮಿನಾದಾಬನ ತಂದೆ.
ಅಮ್ಮಿನಾದಾಬನು ನಹಶೋನನ ತಂದೆ.
ನಹಶೋನನು ಸಲ್ಮೋನನ ತಂದೆ.
5 ಸಲ್ಮೋನನು ಬೋವಜನ ತಂದೆ. (ಬೋವಜನ ತಾಯಿ ರಹಾಬಳು.)
ಬೋವಜನು ಓಬೇದನ ತಂದೆ. (ಓಬೇದನ ತಾಯಿ ರೂತಳು.)
ಓಬೇದನು ಇಷಯನ ತಂದೆ.
6 ಇಷಯನು ಅರಸನಾದ ದಾವೀದನ ತಂದೆ.
ದಾವೀದನು ಸೊಲೊಮೋನನ ತಂದೆ. (ಸೊಲೊಮೋನನ ತಾಯಿ ಊರೀಯನ ಹೆಂಡತಿಯಾಗಿದ್ದಳು.)
7 ಸೊಲೊಮೋನನು ರೆಹಬ್ಬಾಮನ ತಂದೆ.
ರೆಹಬ್ಬಾಮನು ಅಬೀಯನ ತಂದೆ.
ಅಬೀಯನು ಆಸನ ತಂದೆ.
8 ಆಸನು ಯೆಹೋಷಾಫಾಟನ ತಂದೆ.
ಯೆಹೋಷಾಫಾಟನು ಯೆಹೋರಾಮನ ತಂದೆ.
ಯೆಹೋರಾಮನು ಉಜ್ಜೀಯನ ತಂದೆ.
9 ಉಜ್ಜೀಯನು ಯೋತಾಮನ ತಂದೆ.
ಯೋತಾಮನು ಆಹಾಜನ ತಂದೆ.
ಆಹಾಜನು ಹಿಜ್ಕೀಯನ ತಂದೆ.
10 ಹಿಜ್ಕೀಯನು ಮನಸ್ಸೆಯ ತಂದೆ.
ಮನಸ್ಸೆಯು ಆಮೋನನ ತಂದೆ.
ಆಮೋನನು ಯೋಷೀಯನ ತಂದೆ.
11 ಯೋಷೀಯನು ಯೆಕೊನ್ಯ ಮತ್ತು ಅವನ ಸಹೋದರರ ತಂದೆ. (ಈ ಸಮಯದಲ್ಲಿಯೇ ಯೆಹೂದ್ಯ ಜನರನ್ನು ಗುಲಾಮಗಿರಿಗಾಗಿ ಬಾಬಿಲೋನಿಗೆ ಕೊಂಡೊಯ್ದದ್ದು.)
12 ಯೆಹೂದ್ಯರನ್ನು ಬಾಬಿಲೋನಿಗೆ ಕೊಂಡೊಯ್ದ ನಂತರದ ಕುಟುಂಬದ ಚರಿತ್ರೆ:
ಯೆಕೊನ್ಯನು ಶೆಯಲ್ತಿಯೇಲನ ತಂದೆ.
ಶೆಯಲ್ತಿಯೇಲನು ಜೆರುಬ್ಬಾಬೆಲನ ತಂದೆ.
13 ಜೆರುಬ್ಬಾಬೆಲನು ಅಬಿಹೂದನ ತಂದೆ.
ಅಬಿಹೂದನು ಎಲ್ಯಕೀಮನ ತಂದೆ.
ಎಲ್ಯಕೀಮನು ಅಜೋರನ ತಂದೆ.
14 ಅಜೋರನು ಸದೋಕನ ತಂದೆ.
ಸದೋಕನು ಅಖೀಮನ ತಂದೆ.
ಅಖೀಮನು ಎಲಿಹೂದನ ತಂದೆ.
15 ಎಲಿಹೂದನು ಎಲಿಯಾಜರನ ತಂದೆ.
ಎಲಿಯಾಜರನು ಮತ್ತಾನನ ತಂದೆ.
ಮತ್ತಾನನು ಯಾಕೋಬನ ತಂದೆ.
16 ಯಾಕೋಬನು ಯೋಸೇಫನ ತಂದೆ.
ಯೋಸೇಫನು ಮರಿಯಳ ಗಂಡ.
ಮರಿಯಳು ಯೇಸುವಿನ ತಾಯಿ.
ಯೇಸುವನ್ನು ಕ್ರಿಸ್ತ[a] ನೆಂದು ಕರೆಯುತ್ತಿದ್ದರು.
17 ಅಬ್ರಹಾಮನಿಂದಿಡಿದು ದಾವೀದನವರೆಗೆ ಹದಿನಾಲ್ಕು ತಲೆಮಾರುಗಳು. ದಾವೀದನಿಂದಿಡಿದು ಬಾಬಿಲೋನಿಗೆ ಸೆರೆಯೊಯ್ದ ಸಮಯದವರೆಗೆ ಹದಿನಾಲ್ಕು ತಲೆಮಾರುಗಳು. ಬಾಬಿಲೋನಿಗೆ ಸೆರೆಹಿಡಿದುಕೊಂಡು ಹೋದಂದಿನಿಂದ ಕ್ರಿಸ್ತನು ಹುಟ್ಟುವವರೆಗೆ ಹದಿನಾಲ್ಕು ತಲೆಮಾರುಗಳು.
ಯೇಸು ಕ್ರಿಸ್ತನ ಜನನ
(ಲೂಕ 2:1-7)
18 ಯೇಸು ಕ್ರಿಸ್ತನ ತಾಯಿ ಮರಿಯಳು. ಯೇಸುವಿನ ಜನನ ಈ ರೀತಿ ಸಂಭವಿಸಿತು: ಮದುವೆಮಾಡಿಕೊಳ್ಳಲು ಯೋಸೇಫನಿಗೂ ಮರಿಯಳಿಗೂ ನಿಶ್ಚಿತಾರ್ಥವಾಗಿತ್ತು. ಆದರೆ ಮದುವೆಗೆ ಮೊದಲೇ ತಾನು ಗರ್ಭಿಣಿಯಾಗಿರುವುದು ಮರಿಯಳಿಗೆ ತಿಳಿದುಬಂತು. ಮರಿಯಳು ಪವಿತ್ರಾತ್ಮನ ಪ್ರಭಾವದಿಂದ ಗರ್ಭಿಣಿಯಾಗಿದ್ದಳು. 19 ಮರಿಯಳನ್ನು ಮದುವೆಯಾಗಲಿದ್ದ ಯೋಸೇಫನು ನೀತಿವಂತನಾಗಿದ್ದನು. ಮರಿಯಳನ್ನು ಜನರ ಮುಂದೆ ನಾಚಿಕೆಪಡಿಸಲು ಅವನು ಇಷ್ಟಪಡಲಿಲ್ಲ. ಆದ್ದರಿಂದ ಅವನು ಗುಟ್ಟಾಗಿ ನಿಶ್ಚಿತಾರ್ಥವನ್ನು ರದ್ದುಗೊಳಿಸಬೇಕೆಂದಿದ್ದನು.
20 ಯೋಸೇಫನು ಹೀಗೆ ಆಲೋಚಿಸಿಕೊಂಡನಂತರ, ಪ್ರಭುವಿನ ದೂತನು ಯೋಸೇಫನಿಗೆ ಕನಸಿನಲ್ಲಿ ಕಾಣಿಸಿಕೊಂಡನು. ಆ ದೂತನು, “ದಾವೀದನ ಮಗನಾದ ಯೋಸೇಫನೇ, ಮರಿಯಳನ್ನು ನಿನ್ನ ಹೆಂಡತಿಯಾಗಿ ಸ್ವೀಕರಿಸಲು ಭಯಪಡಬೇಡ. ಆಕೆ ಪವಿತ್ರಾತ್ಮನ ಪ್ರಭಾವದಿಂದ ಗರ್ಭಿಣಿಯಾಗಿದ್ದಾಳೆ. 21 ಆಕೆ ಒಬ್ಬ ಮಗನನ್ನು ಹೆರುವಳು. ನೀನು ಆ ಮಗುವಿಗೆ ಯೇಸು ಎಂದು ಹೆಸರಿಡುವೆ. ನೀನು ಆತನಿಗೆ ಆ ಹೆಸರನ್ನೇ ಇಡು; ಏಕೆಂದರೆ ಆತನು ತನ್ನ ಜನರನ್ನು ಅವರ ಪಾಪಗಳಿಂದ ರಕ್ಷಿಸುವನು” ಎಂದು ಹೇಳಿದನು.
22 ಪ್ರವಾದಿಯ ಮೂಲಕ ಪ್ರಭು ತಿಳಿಸಿದ್ದೆಲ್ಲ ನೆರವೇರುವಂತೆ ಇದೆಲ್ಲಾ ನಡೆಯಿತು. 23 ಅದೇನೆಂದರೆ: “ಕನ್ನಿಕೆಯೊಬ್ಬಳು ಗರ್ಭಿಣಿಯಾಗಿ ಒಬ್ಬ ಮಗನಿಗೆ ಜನ್ಮ ಕೊಡುತ್ತಾಳೆ. ಆತನಿಗೆ ಇಮ್ಮಾನುವೇಲ್ ಎಂಬ ಹೆಸರನ್ನು ಇಡುವರು.”(A) (ಇಮ್ಮಾನುವೇಲ್ ಎಂದರೆ “ದೇವರು ನಮ್ಮ ಸಂಗಡ ಇದ್ದಾನೆ” ಎಂದರ್ಥ.)
24 ಯೋಸೇಫನು ಎಚ್ಚರಗೊಂಡ ಮೇಲೆ ಪ್ರಭುವಿನ ದೂತನು ಕನಸಿನಲ್ಲಿ ಹೇಳಿದ್ದಂತೆಯೇ ಮರಿಯಳನ್ನು ಪತ್ನಿಯನ್ನಾಗಿ ಸ್ವೀಕರಿಸಿಕೊಂಡನು. 25 ಆದರೆ ಮರಿಯಳು ಮಗನನ್ನು ಹೆರುವ ತನಕ ಯೋಸೇಫನು ಅವಳೊಂದಿಗೆ ಶರೀರ ಸಂಬಂಧವಿಲ್ಲದೆ ಇದ್ದನು. ಯೋಸೇಫನು ಆ ಮಗುವಿಗೆ “ಯೇಸು” ಎಂದು ಹೆಸರಿಟ್ಟನು.
ಯೇಸುವನ್ನು ಸಂಧಿಸಲು ಜ್ಞಾನಿಗಳ ಆಗಮನ
2 ಹೆರೋದನು ರಾಜನಾಗಿದ್ದ ಕಾಲದಲ್ಲಿ ಯೇಸು ಜುದೇಯದ ಬೆತ್ಲೆಹೇಮ್ ಎಂಬ ಊರಲ್ಲಿ ಹುಟ್ಟಿದನು. ಯೇಸು ಹುಟ್ಟಿದ ಮೇಲೆ, ಪೂರ್ವದೇಶದ ಕೆಲವು ಜ್ಞಾನಿಗಳು ಜೆರುಸಲೇಮಿಗೆ ಬಂದರು. 2 ಆ ಜ್ಞಾನಿಗಳು ಜನರಿಗೆ, “ಯೆಹೂದ್ಯರ ರಾಜನು ಹುಟ್ಟಿದ್ದಾನಲ್ಲವೇ? ಆತನೆಲ್ಲಿ? ಆತನು ಹುಟ್ಟಿದನೆಂದು ಸೂಚಿಸುವ ನಕ್ಷತ್ರ ಪೂರ್ವದಲ್ಲಿ ಉದಯಿಸಿದ್ದನ್ನು ಕಂಡು ಆತನನ್ನು ಆರಾಧಿಸಲು ಬಂದೆವು” ಅಂದರು.
3 ಯೆಹೂದ್ಯರ ಈ ಹೊಸ ರಾಜನ ವಿಷಯ ತಿಳಿದಾಗ ಹೆರೋದನು ಮತ್ತು ಜೆರುಸಲೇಮಿನ ಜನರೆಲ್ಲರೂ ಗಲಿಬಿಲಿಗೊಂಡರು. 4 ಕೂಡಲೇ, ಹೆರೋದನು ಎಲ್ಲಾ ಮಹಾಯಾಜಕರನ್ನೂ ಧರ್ಮೋಪದೇಶಕರನ್ನೂ ಸಭೆ ಸೇರಿಸಿ, “ಕ್ರಿಸ್ತನು ಹುಟ್ಟಬೇಕಾಗಿದ್ದ ಸ್ಥಳ ಯಾವುದು?” ಎಂದು ಕೇಳಿದನು. 5 ಅವರು, “ಜುದೇಯದ ಬೆತ್ಲೆಹೇಮ್ ಎಂಬ ಊರಲ್ಲಿ ಹುಟ್ಟುವನು. ಏಕೆಂದರೆ ಪ್ರವಾದಿಯು ಪವಿತ್ರ ಗ್ರಂಥದಲ್ಲಿ ಹೀಗೆಂದು ಬರೆದಿದ್ದಾನೆ:
6 ‘ಯೆಹೂದ ಪ್ರಾಂತ್ಯದಲ್ಲಿರುವ ಬೆತ್ಲೆಹೇಮೇ,
ಯೆಹೂದವನ್ನು ಆಳುವವರಲ್ಲಿ ನೀನು ಪ್ರಾಮುಖ್ಯವಾಗಿರುವೆ.
ಹೌದು, ಅಧಿಪತಿಯೊಬ್ಬನು ನಿನ್ನೊಳಗಿಂದ ಬರುವನು.
ನನ್ನ ಜನರಾದ ಇಸ್ರೇಲರನ್ನು ಆತನೇ ಮುನ್ನಡೆಸುವನು’” ಎಂದು ಉತ್ತರಕೊಟ್ಟರು.’(B)”
7 ಆಗ ಹೆರೋದನು ಪೂರ್ವ ದೇಶದ ಜ್ಞಾನಿಗಳನ್ನು ರಹಸ್ಯವಾಗಿ ಕರೆಯಿಸಿ, ಅವರು ಆ ನಕ್ಷತ್ರವನ್ನು ಕಂಡ ಸರಿಯಾದ ಸಮಯವನ್ನು ಅವರಿಂದ ತಿಳಿದುಕೊಂಡನು. 8 ಹೆರೋದನು ಆ ಜ್ಞಾನಿಗಳಿಗೆ, “ನೀವು ಹೋಗಿ ಚೆನ್ನಾಗಿ ವಿಚಾರಣೆ ಮಾಡಿ ಆ ಮಗು ಎಲ್ಲಿದೆ ಎಂಬುದನ್ನು ತಿಳಿದುಕೊಂಡು ನಂತರ ಬಂದು ನನಗೆ ತಿಳಿಸಿರಿ. ಆಗ ನಾನೂ ಹೋಗಿ ಆತನನ್ನು ಆರಾಧಿಸುವೆನು” ಎಂದು ಹೇಳಿ ಅವರನ್ನು ಬೆತ್ಲೆಹೇಮಿಗೆ ಕಳುಹಿಸಿಕೊಟ್ಟನು.
9 ಆ ಜ್ಞಾನಿಗಳು ಅರಸನ ಮಾತನ್ನು ಕೇಳಿ ಅಲ್ಲಿಂದ ಹೊರಟಾಗ, ಪೂರ್ವ ದಿಕ್ಕಿನಲ್ಲಿ ಉದಯಿಸಿದ ನಕ್ಷತ್ರವನ್ನು ಮತ್ತೆ ಕಂಡರು. ಅವರು ಆ ನಕ್ಷತ್ರವನ್ನೇ ಹಿಂಬಾಲಿಸಿದರು. ಆ ನಕ್ಷತ್ರ ಅವರ ಮುಂದೆ ಚಲಿಸುತ್ತಾ ಹೋಗಿ ಮಗುವಿದ್ದ ಸ್ಥಳದ ಮೇಲೆ ನಿಂತುಕೊಂಡಿತು. 10 ಅವರು ಆ ನಕ್ಷತ್ರವನ್ನು ನೋಡಿ ಅತ್ಯಂತ ಸಂತೋಷಪಟ್ಟರು.
11 ಅವರು ಆ ಮನೆಗೆ ಬಂದಾಗ, ಮಗುವನ್ನು ತಾಯಿ ಮರಿಯಳ ಬಳಿ ಕಂಡು, ಅದಕ್ಕೆ ಸಾಷ್ಟಾಂಗವೆರಗಿ ಆರಾಧಿಸಿದರು. ಅಲ್ಲದೆ ತಾವು ಮಗುವಿಗಾಗಿ ತಂದಿದ್ದ ಕಾಣಿಕೆಗಳನ್ನು ತೆರೆದು ಚಿನ್ನ, ಧೂಪ ಮತ್ತು ಸುಗಂಧ ದ್ರವ್ಯಗಳನ್ನು ನೀಡಿದರು. 12 ಆದರೆ ದೇವರು ಜ್ಞಾನಿಗಳಿಗೆ ಕನಸಿನಲ್ಲಿ, “ನೀವು ಹೆರೋದನ ಬಳಿಗೆ ಹಿಂತಿರುಗಿ ಹೋಗಕೂಡದು” ಎಂದು ಎಚ್ಚರಿಸಿದನು. ಆದ್ದರಿಂದ ಅವರು ಬೇರೊಂದು ಮಾರ್ಗದ ಮೂಲಕ ತಮ್ಮ ದೇಶಕ್ಕೆ ಹೊರಟುಹೋದರು.
ಯೇಸುವಿನೊಡನೆ ಈಜಿಪ್ಟಿಗೆ ಪಲಾಯನ
13 ಜ್ಞಾನಿಗಳು ಹೊರಟುಹೋದ ನಂತರ ಪ್ರಭುವಿನ ದೂತನು ಯೋಸೇಫನಿಗೆ ಕನಸಿನಲ್ಲಿ ಕಾಣಿಸಿಕೊಂಡು, “ಎದ್ದೇಳು! ಮಗುವನ್ನು ಮತ್ತು ಅದರ ತಾಯಿಯನ್ನು ಕರೆದುಕೊಂಡು ಈಜಿಪ್ಟಿಗೆ ಓಡಿಹೋಗು. ಹೆರೋದನು ಮಗುವನ್ನು ಹುಡುಕಲು ಪ್ರಾರಂಭಿಸುವನು. ಅವನು ಮಗುವನ್ನು ಕೊಲ್ಲಬೇಕೆಂದಿದ್ದಾನೆ. ‘ಅಪಾಯವಿಲ್ಲ’ ಎಂದು ನಾನು ನಿನಗೆ ಹೇಳುವ ತನಕ ನೀನು ಈಜಿಪ್ಟಿನಲ್ಲೇ ಇರು” ಎಂದು ಹೇಳಿದನು.
14 ಕೂಡಲೇ, ಯೋಸೇಫನು ಎದ್ದು ಮಗು ಮತ್ತು ಅದರ ತಾಯಿಯೊಂದಿಗೆ ಈಜಿಪ್ಟಿಗೆ ರಾತ್ರಿ ಸಮಯದಲ್ಲಿ ಹೊರಟುಹೋದನು. 15 ಹೆರೋದನು ಸಾಯುವ ತನಕ ಯೋಸೇಫನು ಈಜಿಪ್ಟಿನಲ್ಲೇ ಇದ್ದನು. “ನಾನು ನನ್ನ ಮಗನನ್ನು ಈಜಿಪ್ಟಿನೊಳಗಿಂದ ಕರೆದೆ”(C) ಎಂದು ಪ್ರವಾದಿಯ ಮೂಲಕ ಪ್ರಭು ಹೇಳಿದ್ದ ಮಾತು ಇದರಿಂದ ನೆರವೇರಿತು.
ಬೆತ್ಲೆಹೇಮಿನಲ್ಲಿ ಗಂಡುಮಕ್ಕಳ ಸಂಹಾರ
16 ಜ್ಞಾನಿಗಳು ತನಗೆ ಮೋಸಮಾಡಿದರೆಂಬುದು ತಿಳಿದಾಗ ಹೆರೋದನು ಬಹಳ ಕೋಪಗೊಂಡನು. ಆ ಮಗು ಹುಟ್ಟಿದ ಸಮಯವನ್ನು ಹೆರೋದನು ಜ್ಞಾನಿಗಳಿಂದ ತಿಳಿದುಕೊಂಡಿದ್ದನು. ಆ ಮಗು ಹುಟ್ಟಿ ಎರಡು ವರ್ಷಗಳಾಗಿದ್ದವು. ಆದ್ದರಿಂದ ಹೆರೋದನು ಬೆತ್ಲೆಹೇಮಿನಲ್ಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿದ್ದ ಎರಡು ವರ್ಷದ ಮತ್ತು ಅವರಿಗಿಂತ ಚಿಕ್ಕವರಾದ ಗಂಡುಮಕ್ಕಳನ್ನೆಲ್ಲಾ ಕೊಲ್ಲಬೇಕೆಂದು ಆಜ್ಞಾಪಿಸಿದನು. 17 ಹೀಗೆ ದೇವರು ತನ್ನ ಪ್ರವಾದಿಯಾದ ಯೆರೆಮೀಯನ ಮೂಲಕ ಹೇಳಿದ ಈ ಮಾತು ನೆರವೇರಿತು:
18 “ರಾಮದಲ್ಲಿ ಬೊಬ್ಬೆಯು ಕೇಳಿಸಿತು.
ಅದು ಬಹು ಗೋಳಾಟದ ಮತ್ತು ದುಃಖದ ಬೊಬ್ಬೆಯಾಗಿತ್ತು.
ರಾಹೇಲಳು ತನ್ನ ಮಕ್ಕಳಿಗಾಗಿ ಅಳುವಳು;
ಅವರು ಸತ್ತುಹೋದದ್ದಕ್ಕಾಗಿ ಸಮಾಧಾನ ಹೊಂದಲೊಲ್ಲಳು.”(D)
ಯೋಸೇಫ ಮರಿಯಳ ಮರುಪ್ರಯಾಣ
19 ಹೆರೋದನು ಸತ್ತನಂತರ, ಪ್ರಭುವಿನ ದೂತನು ಯೋಸೇಫನಿಗೆ ಕನಸಿನಲ್ಲಿ ಕಾಣಿಸಿಕೊಂಡನು. ಯೋಸೇಫನು ಈಜಿಪ್ಟಿನಲ್ಲಿ ಇರುವಾಗಲೇ ಇದು ಸಂಭವಿಸಿತು. 20 ದೇವದೂತನು ಅವನಿಗೆ, “ಎದ್ದೇಳು! ಮಗುವನ್ನು ಮತ್ತು ಅದರ ತಾಯಿಯನ್ನು ಕರೆದುಕೊಂಡು ಇಸ್ರೇಲಿಗೆ ಹೋಗು. ಮಗುವನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದವರು ಸತ್ತುಹೋದರು” ಎಂದು ಹೇಳಿದನು.
21 ಆದ್ದರಿಂದ ಯೋಸೇಫನು ಮಗುವನ್ನು ಮತ್ತು ಮಗುವಿನ ತಾಯಿಯನ್ನು ಕರೆದುಕೊಂಡು ಇಸ್ರೇಲಿಗೆ ಹೋದನು. 22 ಆದರೆ ಹೆರೋದನು ಸತ್ತನಂತರ ಅವನ ಮಗನಾದ ಅರ್ಖೆಲಾಯನು ಜುದೇಯದ ರಾಜನಾಗಿದ್ದಾನೆ ಎಂಬುದನ್ನು ಕೇಳಿ ಅಲ್ಲಿಗೆ ಹೋಗಲು ಭಯಪಟ್ಟನು. ಕನಸಿನಲ್ಲಿ ತನಗೆ ಕೊಟ್ಟ ಎಚ್ಚರಿಕೆಯಂತೆ ಅವನು ಆ ಸ್ಥಳವನ್ನು ಬಿಟ್ಟು ಗಲಿಲಾಯ ಪ್ರದೇಶಕ್ಕೆ ಹೋಗಿ, 23 ನಜರೇತ್ ಎಂಬ ಊರಲ್ಲಿ ವಾಸಿಸಿದನು. “ಕ್ರಿಸ್ತನನ್ನು ‘ನಜರೇತಿನವನು’ ಎಂದು ಕರೆಯುತ್ತಾರೆ” ಎಂದು ದೇವರು ಪ್ರವಾದಿಗಳ ಮೂಲಕ ಹೇಳಿದ್ದು ಹೀಗೆ ನೆರವೇರಿತು.
ಸ್ನಾನಿಕ ಯೋಹಾನನ ಉಪದೇಶ
(ಮಾರ್ಕ 1:1-8; ಲೂಕ 3:1-9,15-17; ಯೋಹಾನ 1:19-28)
3 ಆ ಕಾಲದಲ್ಲಿ ಸ್ನಾನಿಕ ಯೋಹಾನನು ಜುದೇಯದ ಅಡವಿಯಲ್ಲಿ ಬೋಧಿಸುವುದಕ್ಕೆ ಪ್ರಾರಂಭಿಸಿದನು. 2 “ಪರಲೋಕರಾಜ್ಯವು ಸಮೀಪಿಸಿತು. ನೀವು ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳಿರಿ” ಎಂದು ಅವನು ಬೋಧಿಸಿದನು.
3 “‘ಪ್ರಭುವಿಗಾಗಿ ಮಾರ್ಗವನ್ನು ಸಿದ್ಧಮಾಡಿರಿ;
ಆತನ ಹಾದಿಗಳನ್ನು ನೆಟ್ಟಗೆಮಾಡಿರಿ’
ಎಂದು ಅಡವಿಯಲ್ಲಿ ಒಬ್ಬನು ಕೂಗುತ್ತಿದ್ದಾನೆ”(E)
ಎಂದು ಸ್ನಾನಿಕ ಯೋಹಾನನನ್ನೇ ಕುರಿತು ಪ್ರವಾದಿಯಾದ ಯೆಶಾಯ ಹೇಳಿದ್ದನು.
4 ಯೋಹಾನನ ಉಡುಪುಗಳು ಒಂಟೆಯ ಕೂದಲಿನಿಂದ ಮಾಡಲ್ಪಟ್ಟಿದ್ದವು. ಅವನಿಗೆ ಸೊಂಟದಲ್ಲಿ ತೊಗಲಿನ ನಡುಪಟ್ಟಿ ಇತ್ತು. ಅವನು ಮಿಡತೆ ಮತ್ತು ಕಾಡುಜೇನನ್ನು ಆಹಾರವಾಗಿ ತಿನ್ನುತ್ತಿದ್ದನು. 5 ಜನರು ಯೋಹಾನನ ಉಪದೇಶವನ್ನು ಕೇಳಲು ಜೆರುಸಲೇಮಿನಿಂದಲೂ, ಜುದೇಯ ಮತ್ತು ಜೋರ್ಡನ್ ನದಿಯ ಸುತ್ತಲಿದ್ದ ಎಲ್ಲಾ ಸ್ಥಳಗಳಿಂದಲೂ ಬರುತ್ತಿದ್ದರು. 6 ಜನರು ತಾವು ಮಾಡಿದ ಪಾಪಗಳನ್ನು ಒಪ್ಪಿಕೊಂಡ ಮೇಲೆ ಯೋಹಾನನು ಅವರಿಗೆ ಜೋರ್ಡನ್ ನದಿಯಲ್ಲಿ ದೀಕ್ಷಾಸ್ನಾನ ಕೊಡುತ್ತಿದ್ದನು.
7 ಅನೇಕ ಫರಿಸಾಯರು ಮತ್ತು ಸದ್ದುಕಾಯರು ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳಲು ಬಂದರು. ಯೋಹಾನನು ಅವರನ್ನು ನೋಡಿ, “ನೀವೆಲ್ಲರು ಸರ್ಪಗಳು! ಬರಲಿರುವ ದೇವರ ಕೋಪದಿಂದ ತಪ್ಪಿಸಿಕೊಳ್ಳಲು ನಿಮಗೆ ಎಚ್ಚರಿಸಿದವರು ಯಾರು? 8 ನಿಮ್ಮ ಮನಸ್ಸು ನಿಜವಾಗಿಯೂ ದೇವರ ಕಡೆಗೆ ತಿರುಗಿಕೊಂಡಿದೆ ಎಂಬುದನ್ನು ನೀವು ತಕ್ಕ ಕಾರ್ಯಗಳ ಮೂಲಕ ತೋರಿಸಿ. 9 ‘ಅಬ್ರಹಾಮನು ನಮ್ಮ ತಂದೆ’ ಎಂದು ನೀವು ಜಂಬಪಡುವುದೇಕೆ? ದೇವರು ಅಬ್ರಹಾಮನಿಗಾಗಿ ಇಲ್ಲಿರುವ ಬಂಡೆಗಳಿಂದಲೂ ಮಕ್ಕಳನ್ನು ಸೃಷ್ಟಿಸಬಲ್ಲನು ಎಂದು ನಾನು ನಿಮಗೆ ಹೇಳುತ್ತೇನೆ. 10 ಮರಗಳನ್ನು ಕಡಿದುಹಾಕಲು ಕೊಡಲಿ ಈಗಲೇ ಸಿದ್ಧವಾಗಿದೆ. ಒಳ್ಳೆಯ ಫಲಬಿಡದ ಪ್ರತಿಯೊಂದು ಮರವನ್ನು ಕಡಿದು ಬೆಂಕಿಗೆ ಹಾಕಲಾಗುವುದು.
11 “ನಿಮ್ಮ ಮನಸ್ಸು ದೇವರ ಕಡೆಗೆ ತಿರುಗಿಕೊಂಡಿದೆ ಎಂಬುದಕ್ಕೆ ಗುರುತಾಗಿ ನಾನು ನಿಮಗೆ ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸುವೆನು. ಆದರೆ ನನ್ನ ಹಿಂದೆ ಬರುವವನು ನನಗಿಂತ ಹೆಚ್ಚಿನವನು. ಆತನ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ. ಆತನು ನಿಮಗೆ ಪವಿತ್ರಾತ್ಮನಲ್ಲಿಯೂ ಬೆಂಕಿಯಲ್ಲಿಯೂ ದೀಕ್ಷಾಸ್ನಾನ ಮಾಡಿಸುವನು. 12 ಆತನು ಕಾಳನ್ನು ಸ್ವಚ್ಛಗೊಳಿಸಲು ಸಿದ್ಧನಾಗಿದ್ದಾನೆ. ಆತನು ಕಾಳನ್ನು ಹೊಟ್ಟಿನಿಂದ ಬೇರ್ಪಡಿಸಿ ಒಳ್ಳೆಯ ಕಾಳುಗಳನ್ನು ಕಣಜದಲ್ಲಿ ತುಂಬಿಸಿ ಹೊಟ್ಟನ್ನು ನಂದಿಸಲಾಗದ ಬೆಂಕಿಯಲ್ಲಿ ಸುಟ್ಟುಹಾಕುವನು” ಎಂದು ಹೇಳಿದನು.
ಯೋಹಾನನಿಂದ ಯೇಸುವಿಗೆ ದೀಕ್ಷಾಸ್ನಾನ
(ಮಾರ್ಕ 1:9-11; ಲೂಕ 3:21-22)
13 ಆ ಸಮಯದಲ್ಲಿ ಯೋಹಾನನಿಂದ ಯೇಸು ದೀಕ್ಷಾಸ್ನಾನ ಮಾಡಿಸಿಕೊಳ್ಳಲು ಗಲಿಲಾಯದಿಂದ ಜೋರ್ಡನ್ ನದಿಗೆ ಬಂದನು. 14 ಆದರೆ ಯೋಹಾನನು, “ನಾನೇ ನಿನ್ನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕಾಗಿದೆ. ಹೀಗಿರಲು ನನ್ನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳಲು ನೀನು ಬರುವುದೇಕೆ?” ಎಂದು ಹೇಳಿ ಆತನನ್ನು ತಡೆಯಲೆತ್ನಿಸಿದನು.
15 ಯೇಸು, “ಸದ್ಯಕ್ಕೆ ಒಪ್ಪಿಕೊ. ನಾವು ಯೋಗ್ಯವಾದ ಕಾರ್ಯಗಳನ್ನೆಲ್ಲ ಮಾಡಬೇಕು” ಎಂದು ಉತ್ತರಕೊಟ್ಟನು. ಆಗ ಯೋಹಾನನು ಯೇಸುವಿಗೆ ದೀಕ್ಷಾಸ್ನಾನ ಮಾಡಿಸಲು ಒಪ್ಪಿಕೊಂಡನು.
16 ಯೇಸು ದೀಕ್ಷಾಸ್ನಾನ ಮಾಡಿಸಿಕೊಂಡು ನೀರಿನಿಂದ ಮೇಲಕ್ಕೆ ಬಂದನು. ಕೂಡಲೇ ಆಕಾಶವು ತೆರೆಯಿತು. ದೇವರಾತ್ಮನು ಪಾರಿವಾಳದ ರೂಪದಲ್ಲಿ ಕೆಳಗಿಳಿದು ತನ್ನ ಮೇಲೆ ಬರುತ್ತಿರುವುದನ್ನು ಯೇಸು ಕಂಡನು. 17 ಆಗ ಪರಲೋಕದಿಂದ ಧ್ವನಿಯೊಂದು ಹೊರಟು, “ಈತನೇ (ಯೇಸು) ನನ್ನ ಪ್ರಿಯ ಮಗನು. ಈತನನ್ನು ನಾನು ಬಹಳ ಮೆಚ್ಚಿದ್ದೇನೆ” ಎಂದು ಹೇಳಿತು.
Kannada Holy Bible: Easy-to-Read Version. All rights reserved. © 1997 Bible League International