Read the Gospels in 40 Days
ಯೇಸು ದ್ರಾಕ್ಷಿಬಳ್ಳಿಯಂತಿದ್ದಾನೆ
15 “ನಾನು ನಿಜವಾದ ದ್ರಾಕ್ಷಿಬಳ್ಳಿ. ನನ್ನ ತಂದೆ ತೋಟಗಾರನು. 2 ಫಲಕೊಡದಿರುವ ಪ್ರತಿಯೊಂದು ಕವಲನ್ನು ಆತನು ಕತ್ತರಿಸಿಹಾಕುವನು. ಫಲಕೊಡುವ ಕವಲು ಇನ್ನೂ ಹೆಚ್ಚು ಫಲಕೊಡುವಂತೆ ಅದನ್ನು ಶುದ್ಧಗೊಳಿಸುವನು. 3 ನಾನು ನಿಮಗೆ ಹೇಳಿದ ಉಪದೇಶದಿಂದ ನೀವು ಈಗಾಗಲೇ ಶುದ್ಧರಾಗಿದ್ದೀರಿ. 4 ನೀವು ನನ್ನಲ್ಲಿ ನೆಲೆಗೊಂಡಿರಿ, ಆಗ ನಾನೂ ನಿಮ್ಮಲ್ಲಿ ನೆಲೆಗೊಂಡಿರುವೆನು. ಯಾವ ಕವಲೂ ತನ್ನಷ್ಟಕ್ಕೆ ತಾನೇ ಫಲಕೊಡಲಾರದು. ಅದು ದ್ರಾಕ್ಷಿಬಳ್ಳಿಯಲ್ಲಿ ನೆಲೆಗೊಂಡಿರಬೇಕು. ಇದು ನಿಮಗೂ ಅನ್ವಯಿಸುತ್ತದೆ. ನೀವು ನಿಮ್ಮಷ್ಟಕ್ಕೇ ಫಲಕೊಡಲಾರಿರಿ. ನೀವು ನನ್ನಲ್ಲಿ ನೆಲೆಗೊಂಡಿರಬೇಕು.
5 “ನಾನೇ ದ್ರಾಕ್ಷಿಬಳ್ಳಿ; ನೀವೇ ಕವಲುಗಳು. ಒಬ್ಬನು ನನ್ನಲ್ಲಿ ನೆಲೆಗೊಂಡಿದ್ದರೆ ಮತ್ತು ನಾನು ಅವನಲ್ಲಿ ನೆಲೆಗೊಂಡಿದ್ದರೆ, ಆಗ ಅವನು ಹೆಚ್ಚು ಫಲಕೊಡುವನು. ಆದರೆ ಅವನು ನನ್ನನ್ನು ಬಿಟ್ಟು ಏನೂ ಮಾಡಲಾರನು. 6 ನನ್ನಲ್ಲಿ ನೆಲೆಗೊಂಡಿಲ್ಲದವನು ಹೊರಗೆ ಬಿಸಾಡಲ್ಪಟ್ಟ ಕವಲಿನಂತಿರುವನು. ಆ ಕವಲು ಸತ್ತುಹೋಗುವುದು. ಸತ್ತ ಕವಲುಗಳನ್ನು ಜನರು ಒಟ್ಟುಗೂಡಿಸಿ ಬೆಂಕಿಯೊಳಕ್ಕೆ ಎಸೆದು ಸುಟ್ಟುಹಾಕುವರು. 7 ನೀವು ನನ್ನಲ್ಲಿಯೂ ನನ್ನ ವಾಕ್ಯಗಳು ನಿಮ್ಮಲ್ಲಿಯೂ ನೆಲೆಗೊಂಡಿದ್ದರೆ ಏನು ಬೇಕಾದರೂ ಕೇಳಿಕೊಳ್ಳಿರಿ, ಅದು ನಿಮಗೆ ದೊರೆಯುವುದು. 8 ನೀವು ಬಹಳ ಫಲಕೊಟ್ಟು, ನೀವೇ ನನ್ನ ಶಿಷ್ಯರೆಂಬುದನ್ನು ತೋರಿಸಬೇಕು. ಇದರಿಂದ ನನ್ನ ತಂದೆಗೆ ಮಹಿಮೆ ಆಗುವುದು.
9 “ತಂದೆಯು ನನ್ನನ್ನು ಪ್ರೀತಿಸಿದಂತೆ ನಾನೂ ನಿಮ್ಮನ್ನು ಪ್ರೀತಿಸಿದೆನು. ಈಗ ನನ್ನ ಪ್ರೀತಿಯಲ್ಲಿ ನೆಲೆಗೊಂಡಿರಿ. 10 ನಾನು ನನ್ನ ತಂದೆಯ ಆಜ್ಞೆಗಳಿಗೆ ವಿಧೇಯನಾಗಿದ್ದು ಆತನ ಪ್ರೀತಿಯಲ್ಲಿ ನೆಲೆಗೊಂಡಿದ್ದೇನೆ. ಅದೇ ರೀತಿಯಲ್ಲಿ, ನೀವು ನನ್ನ ಆಜ್ಞೆಗಳಿಗೆ ವಿಧೇಯರಾದರೆ, ನೀವು ನನ್ನ ಪ್ರೀತಿಯಲ್ಲಿ ನೆಲೆಗೊಂಡಿರುವಿರಿ. 11 ನನಗಿರುವ ಆನಂದವನ್ನು ನೀವೂ ಹೊಂದಿಕೊಳ್ಳಬೇಕೆಂದು ನಾನು ನಿಮಗೆ ಈ ಸಂಗತಿಗಳನ್ನು ಹೇಳಿದ್ದೇನೆ. ನಿಮ್ಮ ಆನಂದವು ಪರಿಪೂರ್ಣವಾದ ಆನಂದವಾಗಿರಬೇಕೆಂದು ನಾನು ಬಯಸುತ್ತೇನೆ. 12 ನಾನು ನಿಮ್ಮನ್ನು ಪ್ರೀತಿಸಿದಂತೆ ನೀವೂ ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದೇ ನಾನು ನಿಮಗೆ ಕೊಡುವ ಆಜ್ಞೆಯಾಗಿದೆ. 13 ಗೆಳೆಯರಿಗಾಗಿ ಸ್ವಂತ ಪ್ರಾಣವನ್ನೇ ಕೊಡುವ ಪ್ರೀತಿಗಿಂತ ಮಿಗಿಲಾದ ಪ್ರೀತಿ ಯಾರಲ್ಲೂ ಇಲ್ಲ. 14 ನಾನು ಹೇಳುವ ಕಾರ್ಯಗಳನ್ನು ನೀವು ಮಾಡಿದರೆ, ನೀವು ನನ್ನ ಸ್ನೇಹಿತರು. 15 ಈಗ ನಾನು ನಿಮ್ಮನ್ನು ನನ್ನ ಸೇವಕರುಗಳೆಂದು ಕರೆಯುವುದಿಲ್ಲ. ಯಜಮಾನನ ಕೆಲಸಕಾರ್ಯಗಳು ಸೇವಕನಿಗೆ ತಿಳಿದಿರುವುದಿಲ್ಲ. ಆದರೆ ಈಗ ನಾನು ನಿಮ್ಮನ್ನು ನನ್ನ ಗೆಳೆಯರೆಂದು ಕರೆಯುತ್ತೇನೆ. ಏಕೆಂದರೆ ನನ್ನ ತಂದೆಯಿಂದ ಕೇಳಿದ ಪ್ರತಿಯೊಂದನ್ನೂ ನಾನು ನಿಮಗೆ ಹೇಳಿದ್ದೇನೆ.
16 “ನೀವು ನನ್ನನ್ನು ಆರಿಸಿಕೊಳ್ಳಲಿಲ್ಲ; ನಾನು ನಿಮ್ಮನ್ನು ಆರಿಸಿಕೊಂಡೆನು. ನೀವು ಹೊರಟುಹೋಗಿ ಫಲಕೊಡಬೇಕು. ಇದೇ ನಾನು ನಿಮಗೆ ಕೊಟ್ಟಿರುವ ಕೆಲಸ. ಈ ಫಲವು ನಿಮ್ಮ ಜೀವನದಲ್ಲಿ ಶಾಶ್ವತವಾಗಿರಲಿ ಎಂಬುದೇ ನನ್ನ ಬಯಕೆ. ಹೀಗಿರಲಾಗಿ, ನೀವು ನನ್ನ ಹೆಸರಿನಲ್ಲಿ ಏನು ಕೇಳಿಕೊಂಡರೂ ತಂದೆಯು ಅದನ್ನು ನಿಮಗೆ ಕೊಡುವನು. 17 ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದೇ ನನ್ನ ಆಜ್ಞೆ.
ಯೇಸು ತನ್ನ ಶಿಷ್ಯರಿಗೆ ನೀಡಿದ ಎಚ್ಚರಿಕೆ
18 “ಈ ಲೋಕವು ನಿಮ್ಮನ್ನು ದ್ವೇಷ ಮಾಡಿದರೆ, ಅದು ಮೊದಲು ನನ್ನನ್ನೇ ದ್ವೇಷ ಮಾಡಿದ್ದನ್ನು ನೆನಪಿಗೆ ತಂದುಕೊಳ್ಳಿರಿ. 19 ನೀವು ಈ ಲೋಕಕ್ಕೆ ಸೇರಿದವರಾಗಿದ್ದರೆ, ಈ ಲೋಕವು ತನ್ನ ಸ್ವಂತ ಜನರನ್ನು ಪ್ರೀತಿಸುವಂತೆ ನಿಮ್ಮನ್ನೂ ಪ್ರೀತಿಸುತ್ತಿತ್ತು. ಆದರೆ ನಾನು ನಿಮ್ಮನ್ನು ಈ ಲೋಕದೊಳಗಿಂದ ಆರಿಸಿಕೊಂಡಿದ್ದೇನೆ. ಆದ್ದರಿಂದ ನೀವು ಈ ಲೋಕಕ್ಕೆ ಸೇರಿದವರಲ್ಲ. ಆದಕಾರಣ ಈ ಲೋಕವು ನಿಮ್ಮನ್ನು ದ್ವೇಷಿಸುತ್ತದೆ.
20 “ಸೇವಕನು ತನ್ನ ಒಡೆಯನಿಗಿಂತ ದೊಡ್ಡವನಲ್ಲ ಎಂದು ನಾನು ನಿಮಗೆ ಹೇಳಿದ ಮಾತನ್ನು ಜ್ಞಾಪಿಸಿಕೊಳ್ಳಿ. ಜನರು ನನ್ನನ್ನು ಹಿಂಸಿಸಿದಂತೆ ನಿಮ್ಮನ್ನೂ ಹಿಂಸಿಸುವರು ಮತ್ತು ನನ್ನ ಉಪದೇಶಕ್ಕೆ ವಿಧೇಯರಾದರೆ ನಿಮ್ಮ ಉಪದೇಶಕ್ಕೂ ವಿಧೇಯರಾಗುವರು. 21 ಜನರು ನನ್ನ ದೆಸೆಯಿಂದ ಇದನ್ನೆಲ್ಲಾ ನಿಮಗೆ ಮಾಡುವರು. ನನ್ನನ್ನು ಕಳುಹಿಸಿದಾತನನ್ನು ಅವರು ತಿಳಿದಿಲ್ಲ. 22 ನಾನು ಬಂದು ಈ ಲೋಕದ ಜನರೊಂದಿಗೆ ಮಾತಾಡಿಲ್ಲದಿದ್ದರೆ, ಅವರನ್ನು ಪಾಪದೋಷಿಗಳೆಂದು ಹೇಳಲಾಗುತ್ತಿರಲಿಲ್ಲ. ಆದರೆ ಈಗ ನಾನು ಅವರೊಂದಿಗೆ ಮಾತಾಡಿದ್ದೇನೆ. ಆದ್ದರಿಂದ ತಮ್ಮ ಪಾಪಕ್ಕೆ ಅವರಿಗೆ ಯಾವ ನೆವವೂ ಇಲ್ಲ.
23 “ನನ್ನನ್ನು ದ್ವೇಷಿಸುವವನು ನನ್ನ ತಂದೆಯನ್ನೂ ದ್ವೇಷಿಸುವವನಾಗಿದ್ದಾನೆ. 24 ಬೇರೆ ಯಾವ ವ್ಯಕ್ತಿಯೂ ಹಿಂದೆಂದೂ ಮಾಡಿಲ್ಲದ ಕಾರ್ಯಗಳನ್ನು ಮಾಡಿಲ್ಲದಿದ್ದರೆ, ಅವರನ್ನು ಪಾಪದೋಷಿಗಳೆಂದು ಹೇಳಲಾಗುತ್ತಿರಲಿಲ್ಲ. ಆದರೆ ನಾನು ಮಾಡಿದ ಆ ಕಾರ್ಯಗಳನ್ನು ಅವರು ನೋಡಿದ್ದಾರೆ. ಹೀಗಿದ್ದರೂ ಅವರು ನನ್ನನ್ನೂ ನನ್ನ ತಂದೆಯನ್ನೂ ದ್ವೇಷಿಸುತ್ತಾರೆ. 25 ‘ಅವರು ನನ್ನನ್ನು ನಿಷ್ಕಾರಣವಾಗಿ ದ್ವೇಷಿಸಿದರು’[a] ಎಂದು ಅವರ ಧರ್ಮಶಾಸ್ತ್ರದಲ್ಲಿ ಬರೆದಿರುವ ಮಾತು ನಿಜವಾಗಲೆಂದು ಹೀಗಾಯಿತು.
26 “ನಾನು ತಂದೆಯ ಬಳಿಯಿಂದ ಸಹಾಯಕನನ್ನು ನಿಮಗೆ ಕಳುಹಿಸಿಕೊಡುವೆನು. ತಂದೆಯ ಬಳಿಯಿಂದ ಬರುವ ಆ ಸಹಾಯಕನು ಸತ್ಯದ ಆತ್ಮನಾಗಿದ್ದಾನೆ. ಆತನು ಬಂದಾಗ ನನ್ನ ಬಗ್ಗೆ ನಿಮಗೆ ತಿಳಿಸುವನು. 27 ಮತ್ತು ನೀವು ಮೊದಲಿಂದಲೂ ನನ್ನೊಂದಿಗೆ ಇದ್ದಕಾರಣ ನೀವು ಸಹ ನನ್ನ ಬಗ್ಗೆ ಜನರಿಗೆ ಹೇಳುವಿರಿ.
16 “ಜನರು ನಿಮ್ಮ ನಂಬಿಕೆಯನ್ನು ನಾಶಮಾಡಲಾಗದಂತೆ ನಾನು ಈ ಸಂಗತಿಗಳನ್ನೆಲ್ಲಾ ನಿಮಗೆ ಹೇಳಿದ್ದೇನೆ. 2 ಜನರು ನಿಮ್ಮನ್ನು ತಮ್ಮ ಸಭಾಮಂದಿರಗಳಿಂದ ಬಹಿಷ್ಕರಿಸುವರು. ಹೌದು, ನಿಮ್ಮನ್ನು ಕೊಂದರೆ ದೇವರ ಸೇವೆ ಮಾಡಿದಂತಾಗುವುದು ಎಂದು ಜನರು ಯೋಚಿಸುವ ಕಾಲ ಬರಲಿದೆ. 3 ಜನರು ತಂದೆಯನ್ನು ಮತ್ತು ನನ್ನನ್ನು ತಿಳಿದಿಲ್ಲದ ಕಾರಣ ಇವುಗಳನ್ನು ಮಾಡುವರು. 4 ಈಗ ನಾನು ನಿಮಗೆ ಈ ಸಂಗತಿಗಳನ್ನೆಲ್ಲಾ ಹೇಳಿದ್ದೇನೆ. ಹೀಗಿರಲು, ಈ ಸಂಗತಿಗಳೆಲ್ಲಾ ನೆರವೇರುವ ಕಾಲ ಬಂದಾಗ ನನ್ನ ಎಚ್ಚರಿಕೆಯ ಮಾತುಗಳನ್ನು ನೀವು ಜ್ಞಾಪಿಸಿಕೊಳ್ಳುವಿರಿ.
ಪವಿತ್ರಾತ್ಮನ ಕಾರ್ಯ
“ನಾನು ಈ ಸಂಗತಿಗಳನ್ನೆಲ್ಲಾ ನಿಮಗೆ ಆರಂಭದಲ್ಲೇ ತಿಳಿಸಲಿಲ್ಲ. ಏಕೆಂದರೆ, ಆಗ ನಾನು ನಿಮ್ಮ ಸಂಗಡವಿದ್ದೆನು. 5 ಈಗಲಾದರೋ, ನನ್ನನ್ನು ಕಳುಹಿಸಿದಾತನ ಬಳಿಗೆ ನಾನು ಹೋಗುತ್ತಿದ್ದೇನೆ. ಆದರೆ ನಿಮ್ಮಲ್ಲಿ ಒಬ್ಬರಾದರೂ, ‘ನೀನು ಎಲ್ಲಿಗೆ ಹೋಗುತ್ತಿರುವೆ?’ ಎಂದು ನನ್ನನ್ನು ಕೇಳಲಿಲ್ಲ. 6 ನಾನು ನಿಮಗೆ ಈ ಸಂಗತಿಗಳನ್ನೆಲ್ಲಾ ಹೇಳಿದ್ದರಿಂದ ನಿಮ್ಮ ಹೃದಯಗಳು ದುಃಖದಿಂದ ತುಂಬಿಹೋಗಿವೆ. 7 ಆದರೆ ನಾನು ನಿಮಗೆ ಸತ್ಯವನ್ನೇ ಹೇಳುತ್ತೇನೆ. ನಾನು ಹೋಗುವುದು ನಿಮ್ಮ ಒಳ್ಳೆಯದಕ್ಕಾಗಿಯೇ ಏಕೆಂದರೆ ನಾನು ಹೋಗಿ ಸಹಾಯಕನನ್ನು ನಿಮ್ಮ ಬಳಿಗೆ ಕಳುಹಿಸುವೆನು. ನಾನು ಹೋಗದಿದ್ದರೆ, ಸಹಾಯಕನು ನಿಮ್ಮ ಬಳಿಗೆ ಬರುವುದಿಲ್ಲ.
8 “ಸಹಾಯಕನು ಬಂದು ಪಾಪ, ನೀತಿ, ನ್ಯಾಯತೀರ್ಪು ಈ ವಿಷಯಗಳ ಬಗ್ಗೆ ಲೋಕಕ್ಕೆ ತಿಳಿಸಿಕೊಡುವನು. 9 ನನ್ನನ್ನು ನಂಬದಿರುವುದರಿಂದ ಜನರಲ್ಲಿ ಪಾಪವಿದೆಯೆಂದು ಆ ಸಹಾಯಕನು ನಿರೂಪಿಸುವನು. 10 ನಾನು ತಂದೆಯ ಬಳಿಗೆ ಹೋಗುವುದರಿಂದ ನೀತಿಯ ವಿಷಯವಾಗಿಯೂ ಆತನು ಜನರಿಗೆ ನಿರೂಪಿಸುವನು. ಇನ್ನು ಮೇಲೆ ನೀವು ನನ್ನನ್ನು ನೋಡುವುದಿಲ್ಲ. 11 ನ್ಯಾಯತೀರ್ಪಿನ ಕುರಿತಾದ ಸತ್ಯವನ್ನು ಆ ಸಹಾಯಕನು ಈ ಲೋಕಕ್ಕೆ ಸಾಧರಪಡಿಸುವನು, ಏಕೆಂದರೆ ಈ ಲೋಕದ ಅಧಿಪತಿಗೆ ಈಗಾಗಲೇ ನ್ಯಾಯತೀರ್ಪಾಗಿದೆ.
12 “ನಾನು ನಿಮಗೆ ತಿಳಿಸಬೇಕಾದ ಇನ್ನೂ ಅನೇಕ ಸಂಗತಿಗಳಿವೆ. ಆದರೆ ಈಗ ಆ ಸಂಗತಿಗಳನ್ನು ಸ್ವೀಕರಿಸಿಕೊಳ್ಳಲು ನಿಮಗೆ ಬಹು ಕಷ್ಟವಾಗಬಹುದು. 13 ಆದರೆ ಸತ್ಯದ ಆತ್ಮನು ಬಂದಾಗ, ಆತನು ನಿಮ್ಮನ್ನು ಸಕಲ ವಿಷಯದಲ್ಲಿಯೂ ಸತ್ಯಕ್ಕೆ ನಡೆಸುವನು. ಸತ್ಯದ ಆತ್ಮನು ಹೇಳುವುದು ಆತನ ಸ್ವಂತ ಮಾತುಗಳಲ್ಲ. ತಾನು ಕೇಳಿದ್ದನ್ನು ಮಾತ್ರ ಆತನು ಹೇಳುತ್ತಾನೆ. ಸಂಭವಿಸಲಿರುವ ಸಂಗತಿಗಳನ್ನು ಆತನು ನಿಮಗೆ ತಿಳಿಸುತ್ತಾನೆ. 14 ಸತ್ಯದ ಆತ್ಮನು ನನ್ನಿಂದಲೇ ವಿಷಯಗಳನ್ನು ತೆಗೆದುಕೊಂಡು ನಿಮಗೆ ತಿಳಿಸುವುದರ ಮೂಲಕ ನನ್ನನ್ನು ಮಹಿಮೆಪಡಿಸುವನು. 15 ನನ್ನ ತಂದೆಗೆ ಇರುವುದೆಲ್ಲಾ ನನ್ನದೇ. ಆದಕಾರಣ, ಪವಿತ್ರಾತ್ಮನು ನನ್ನಿಂದಲೇ ವಿಷಯಗಳನ್ನು ತೆಗೆದುಕೊಂಡು, ನಿಮಗೆ ತಿಳಿಸುತ್ತಾನೆ ಎಂದು ನಾನು ಹೇಳಿದೆನು.
ದುಃಖವು ಸಂತೋಷವಾಗುವುದು
16 “ಸ್ವಲ್ಪಕಾಲವಾದ ಬಳಿಕ ನೀವು ನನ್ನನ್ನು ಕಾಣುವುದಿಲ್ಲ. ಅನಂತರ ಸ್ವಲ್ಪಕಾಲವಾದ ಮೇಲೆ ನೀವು ನನ್ನನ್ನು ಮತ್ತೆ ನೋಡುವಿರಿ.”
17 ಶಿಷ್ಯರಲ್ಲಿ ಕೆಲವರು, “‘ಸ್ವಲ್ಪಕಾಲದ ಬಳಿಕ ನೀವು ನನ್ನನ್ನು ಕಾಣುವುದಿಲ್ಲ. ಆದರೆ ಅನಂತರ ಸ್ಪಲ್ಪಕಾಲವಾದ ಬಳಿಕ ನನ್ನನ್ನು ಮತ್ತೆ ನೋಡುವಿರಿ. ಏಕೆಂದರೆ ನಾನು ತಂದೆಯ ಬಳಿಗೆ ಹೋಗುತ್ತಿದ್ದೇನೆ’ ಎಂದು ಆತನು ಹೇಳಿದ್ದರ ಅರ್ಥವೇನು?” ಎಂದು ಒಬ್ಬರಿಗೊಬ್ಬರು ಮಾತಾಡಿಕೊಂಡರು. 18 ಶಿಷ್ಯರು, “‘ಸ್ವಲ್ಪಕಾಲ’ ಎಂದರೇನು? ಆತನ ಮಾತೇ ನಮಗೆ ಅರ್ಥವಾಗುತ್ತಿಲ್ಲ” ಎಂದು ಒಬ್ಬರನ್ನೊಬ್ಬರು ಕೇಳತೊಡಗಿದರು.
19 ಶಿಷ್ಯರು ಇದರ ಬಗ್ಗೆ ತನ್ನನ್ನು ಕೇಳಬೇಕೆಂದಿದ್ದಾರೆ ಎಂಬುದು ಯೇಸುವಿಗೆ ತಿಳಿದಿತ್ತು. ಆದ್ದರಿಂದ ಆತನು, “‘ಸ್ವಲ್ಪಕಾಲವಾದ ಬಳಿಕ ನೀವು ನನ್ನನ್ನು ಕಾಣುವುದಿಲ್ಲ. ಆದರೆ ಅನಂತರ ಸ್ವಲ್ಪಕಾಲವಾದ ಬಳಿಕ ನನ್ನನ್ನು ನೋಡುವಿರಿ’ ಎಂದು ನಾನು ಹೇಳಿದ್ದರ ಅರ್ಥವೇನೆಂದು ನೀವು ಒಬ್ಬರನ್ನೊಬ್ಬರು ಕೇಳುತ್ತಿದ್ದೀರಾ? 20 ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ಅಳುವಿರಿ, ದುಃಖಪಡುವಿರಿ. ಆದರೆ ಲೋಕವು ಸಂತೋಷಪಡುವುದು. ನೀವು ದುಃಖಪಡುವಿರಿ, ಆದರೆ ನಿಮ್ಮ ದುಃಖವು ಆನಂದವಾಗುವುದು.
21 “ಗರ್ಭಿಣಿ ಸ್ತ್ರೀಯು ಪ್ರಸವಿಸುವ ಗಳಿಗೆ ಬಂದಾಗ ವೇದನೆಪಡುತ್ತಾಳೆ. ಮಗುವು ಜನಿಸಿದಾಗ, ಲೋಕದಲ್ಲಿ ಮಗುವೊಂದು ಜನಿಸಿತೆಂಬ ಸಂತೋಷದಿಂದ ಆಕೆ ಆ ವೇದನೆಯನ್ನು ಮರೆತುಬಿಡುತ್ತಾಳೆ. 22 ಇದು ನಿಮಗೂ ಅನ್ವಯಿಸುತ್ತದೆ. ಈಗ ನೀವು ದುಃಖದಿಂದಿದ್ದೀರಿ. ಆದರೆ ನಾನು ನಿಮ್ಮನ್ನು ಮತ್ತೆ ನೋಡಿದಾಗ ಹರ್ಷಿಸುವಿರಿ. ಆ ಹರ್ಷವನ್ನು ಯಾರೂ ನಿಮ್ಮಿಂದ ಕಸಿದುಕೊಳ್ಳಲಾರರು. 23 ಆ ದಿನದಲ್ಲಿ ನೀವು ನನಗೆ ಯಾವ ಪ್ರಶ್ನೆಯನ್ನೂ ಕೇಳುವುದಿಲ್ಲ. ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ನನ್ನ ಹೆಸರಿನಲ್ಲಿ ಏನು ಕೇಳಿಕೊಂಡರೂ ತಂದೆಯು ಅದನ್ನು ನಿಮಗೆ ಕೊಡುವನು. 24 ನೀವು ನನ್ನ ಹೆಸರಿನಲ್ಲಿ ಏನೂ ಕೇಳಿಕೊಳ್ಳಲಿಲ್ಲ. ಕೇಳಿರಿ, ಆಗ ನಿಮಗೆ ದೊರೆಯುವುದು ಮತ್ತು ನಿಮ್ಮ ಆನಂದವು ಪರಿಪೂರ್ಣವಾಗುವುದು.
ಲೋಕದ ಮೇಲೆ ವಿಜಯ
25 “ನಾನು ನಿಮಗೆ ಈ ಸಂಗತಿಗಳನ್ನು ಸಾಮ್ಯಗಳ ರೂಪದಲ್ಲಿ ತಿಳಿಸಿದೆನು. ಆದರೆ ಸಮಯವು ಬರಲಿದೆ. ಆಗ ನಾನು ಸಾಮ್ಯಗಳನ್ನು ಬಳಸದೆ ನನ್ನ ತಂದೆಯ ಬಗ್ಗೆ ಸರಳವಾದ ಮಾತುಗಳಲ್ಲಿ ತಿಳಿಸುವೆನು. 26 ಆಗ ನೀವು ನನ್ನ ಹೆಸರಿನಲ್ಲಿ ತಂದೆಯನ್ನು ಬೇಡಿಕೊಳ್ಳುವಿರಿ. ನಾನು ನಿಮಗೋಸ್ಕರ ತಂದೆಯನ್ನು ಕೇಳಿಕೊಳ್ಳುವ ಅಗತ್ಯವಿರುವುದಿಲ್ಲ. 27 ಹೌದು, ತಂದೆಯು ತಾನೇ ನಿಮ್ಮನ್ನು ಪ್ರೀತಿಸುತ್ತಾನೆ. ನೀವು ನನ್ನನ್ನು ಪ್ರೀತಿಸಿದರಿಂದ ಮತ್ತು ನಾನು ದೇವರಿಂದ ಬಂದೆನೆಂದು ನೀವು ನಂಬುವುದರಿಂದ ಆತನು ನಿಮ್ಮನ್ನು ಪ್ರೀತಿಸುತ್ತಾನೆ. 28 ನಾನು ತಂದೆಯ ಬಳಿಯಿಂದ ಈ ಲೋಕಕ್ಕೆ ಬಂದೆನು. ಈಗ ನಾನು ಈ ಲೋಕವನ್ನು ಬಿಟ್ಟು ತಂದೆಯ ಬಳಿಗೆ ಹಿಂತಿರುಗಿ ಹೋಗುತ್ತಿದ್ದೇನೆ” ಎಂದು ಹೇಳಿದನು.
29 ಆಗ ಶಿಷ್ಯರು ಯೇಸುವಿಗೆ, “ಈಗ ನೀನು ನಮ್ಮೊಂದಿಗೆ ಸ್ಪಷ್ಟವಾಗಿ ಮಾತಾಡುತ್ತಿರುವೆ. ಅರ್ಥವಾಗದಂಥ ಕಠಿಣ ಮಾತುಗಳನ್ನು ನೀನು ಬಳಸುತ್ತಿಲ್ಲ. 30 ನಿನಗೆ ಎಲ್ಲಾ ಸಂಗತಿಗಳು ತಿಳಿದಿವೆಯೆಂದು ನಮಗೆ ಈಗ ತಿಳಿಯಿತು. ಒಬ್ಬನು ಪ್ರಶ್ನೆಯನ್ನು ಕೇಳುವುದಕ್ಕಿಂತ ಮೊದಲೇ ನೀನು ಅವನ ಪ್ರಶ್ನೆಗೆ ಉತ್ತರ ಕೊಡಬಲ್ಲೆ. ಇದರಿಂದಾಗಿ, ನೀನು ದೇವರಿಂದ ಬಂದವನೆಂದು ನಾವು ನಂಬುತ್ತೇವೆ” ಎಂದು ಹೇಳಿದರು.
31 ಯೇಸು, “ಹಾಗಾದರೆ ಈಗ ನೀವು ನಂಬುತ್ತೀರಾ? 32 ನನಗೆ ಕಿವಿಗೊಡಿರಿ. ನೀವು ಚದರಿಹೋಗುವ ಕಾಲ ಬರುತ್ತಿದೆ. ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ಸ್ವಂತ ಮನೆಗೆ ಚದರಿಹೋಗುವನು. ಆ ಸಮಯ ಈಗಲೇ ಬಂದಿದೆ. ನೀವು ನನ್ನನ್ನು ಬಿಟ್ಟು ಹೋಗುವಿರಿ. ನಾನು ಒಬ್ಬಂಟಿಗನಾಗಿರುವೆನು. ಆದರೆ ನಿಜವಾಗಿ ನಾನೆಂದಿಗೂ ಒಬ್ಬಂಟಿಗನಲ್ಲ. ಏಕೆಂದರೆ ತಂದೆಯು ನನ್ನೊಂದಿಗಿದ್ದಾನೆ.
33 “ನೀವು ನನ್ನಲ್ಲಿ ಶಾಂತಿಯನ್ನು ಹೊಂದಿದವರಾಗಿರಬೇಕೆಂದು ನಾನು ನಿಮಗೆ ಈ ಸಂಗತಿಗಳನ್ನೆಲ್ಲಾ ಹೇಳಿದ್ದೇನೆ. ಈ ಲೋಕದಲ್ಲಿ ನಿಮಗೆ ಸಂಕಟವಿದೆ. ಆದರೆ ಧೈರ್ಯದಿಂದಿರಿ! ನಾನು ಈ ಲೋಕವನ್ನು ಸೋಲಿಸಿದ್ದೇನೆ!” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International