Read the Gospels in 40 Days
ಯೇಸು ಮತ್ತು ನಿಕೊದೇಮ
3 ನಿಕೊದೇಮ ಎಂಬ ಒಬ್ಬ ಮನುಷ್ಯನಿದ್ದನು. ನಿಕೊದೇಮನು ಫರಿಸಾಯರಲ್ಲಿ ಒಬ್ಬನಾಗಿದ್ದನು. ಅವನು ಒಬ್ಬ ಮುಖ್ಯ ಯೆಹೂದ್ಯ ನಾಯಕನಾಗಿದ್ದನು. 2 ಒಂದು ರಾತ್ರಿ ನಿಕೊದೇಮನು ಯೇಸುವಿನ ಬಳಿಗೆ ಬಂದನು. ನಿಕೊದೇಮನು, “ಗುರುವೇ, ನೀನು ದೇವರಿಂದ ಕಳುಹಿಸಲ್ಪಟ್ಟ ಉಪದೇಶಕನೆಂದು ನಮಗೆ ಗೊತ್ತಿದೆ. ನೀನು ಮಾಡುವ ಈ ಸೂಚಕಕಾರ್ಯಗಳನ್ನು ದೇವರ ಸಹಾಯದಿಂದಲ್ಲದೆ ಯಾರೂ ಮಾಡಲಾರರು” ಎಂದು ಹೇಳಿದನು.
3 ಯೇಸು “ನಾನು ನಿನಗೆ ಸತ್ಯವನ್ನು ಹೇಳುತ್ತೇನೆ. ಒಬ್ಬನು ಹೊಸದಾಗಿ ಹುಟ್ಟಲೇಬೇಕು. ಒಬ್ಬನು ಹೊಸದಾಗಿ ಹುಟ್ಟಿಲ್ಲದಿದ್ದರೆ ಅವನು ದೇವರ ರಾಜ್ಯವನ್ನು ಕಾಣಲಾರನು” ಎಂದು ಉತ್ತರಿಸಿದನು.
4 ನಿಕೊದೇಮನು, “ಮನುಷ್ಯನು ಮುದುಕನಾದ ಮೇಲೆ ಹುಟ್ಟುವುದು ಹೇಗೆ? ಒಬ್ಬನು ತನ್ನ ತಾಯಿಯ ಗರ್ಭದೊಳಗೆ ಮತ್ತೆ ಪ್ರವೇಶಿಸಲು ಸಾಧ್ಯವೇ?” ಎಂದು ಕೇಳಿದನು.
5 ಅದಕ್ಕೆ ಯೇಸು, “ನಾನು ನಿನಗೆ ಸತ್ಯವನ್ನು ಹೇಳುತ್ತೇನೆ. ಒಬ್ಬನು ನೀರಿನಿಂದಲೂ ಆತ್ಮನಿಂದಲೂ ಹುಟ್ಟಲೇಬೇಕು. ಇಲ್ಲವಾದರೆ ಅವನು ದೇವರ ರಾಜ್ಯವನ್ನು ಪ್ರವೇಶಿಸಲಾರನು. 6 ದೇಹವು ಮಾನುಷ ತಂದೆತಾಯಿಗಳಿಂದ ಹುಟ್ಟಿದ್ದು. ಆದರೆ ಆತ್ಮಿಕ ಜೀವನವು ಆತ್ಮನಿಂದ ಹುಟ್ಟಿದ್ದು. 7 ‘ನೀನು ಹೊಸದಾಗಿ ಹುಟ್ಟಲೇಬೇಕು’ ಎಂದು ನಾನು ಹೇಳಿದ್ದಕ್ಕೆ ಆಶ್ಚರ್ಯಪಡಬೇಡ. 8 ಗಾಳಿಯು ತನಗಿಷ್ಟ ಬಂದ ಕಡೆಗೆ ಹೋಗುತ್ತದೆ. ಗಾಳಿ ಬೀಸುವ ಶಬ್ದವನ್ನು ನೀನು ಕೇಳುವೆ. ಆದರೆ ಗಾಳಿ ಎಲ್ಲಿಂದ ಬರುತ್ತದೋ ಮತ್ತು ಎಲ್ಲಿಗೆ ಹೋಗುತ್ತದೋ ನಿನಗೆ ತಿಳಿಯದು. ಆತ್ಮನಿಂದ ಹುಟ್ಟಿದ ಪ್ರತಿಯೊಬ್ಬರೂ ಅದರಂತಿದ್ದಾರೆ” ಎಂದು ಹೇಳಿದನು.
9 ನಿಕೊದೇಮನು, “ಇದೆಲ್ಲಾ ಹೇಗೆ ಸಾಧ್ಯ?” ಎಂದು ಕೇಳಿದನು.
10 ಯೇಸು, “ನೀನು ಇಸ್ರೇಲಿನ ಉಪದೇಶಕನಾಗಿರುವೆ. ಆದರೆ ನಿನಗೆ ಈ ಸಂಗತಿಗಳು ಇನ್ನೂ ಅರ್ಥವಾಗುವುದಿಲ್ಲವೇ? 11 ನಾನು ನಿನಗೆ ಸತ್ಯವನ್ನು ಹೇಳುತ್ತೇನೆ. ನಮಗೆ ಗೊತ್ತಿರುವುದರ ಬಗ್ಗೆ ನಾವು ಮಾತಾಡುತ್ತೇವೆ. ನಾವು ಕಂಡದ್ದರ ಬಗ್ಗೆ ನಾವು ಸಾಕ್ಷಿ ಕೊಡುತ್ತೇವೆ. ಆದರೆ ನಾವು ಹೇಳುವುದನ್ನು ನೀವು ಸ್ವೀಕರಿಸಿಕೊಳ್ಳುವುದಿಲ್ಲ. 12 ನಾನು ನಿಮಗೆ ಭೂಲೋಕದ ಸಂಗತಿಗಳ ಬಗ್ಗೆ ಹೇಳಿದೆ, ಆದರೆ ನೀವು ನನ್ನನ್ನು ನಂಬುವುದಿಲ್ಲ. ಆದ್ದರಿಂದ ನಾನು ಪರಲೋಕದ ಸಂಗತಿಗಳ ಬಗ್ಗೆ ನಿನಗೆ ಹೇಳಿದರೂ ನೀವು ಖಂಡಿತವಾಗಿ ನಂಬುವುದಿಲ್ಲ! 13 ಪರಲೋಕದಿಂದ ಇಳಿದುಬಂದ ಮನುಷ್ಯಕುಮಾರನೊಬ್ಬನೇ ಪರಲೋಕಕ್ಕೆ ಏರಿಹೋದ ಏಕೈಕ ವ್ಯಕ್ತಿಯಾಗಿದ್ದಾನೆ.
14 “ಮೋಶೆಯು ಮರಳುಗಾಡಿನಲ್ಲಿ ಸರ್ಪವನ್ನು ಎತ್ತರವಾದ ಕಂಬದ ಮೇಲಿಟ್ಟನು. ಅಂತೆಯೇ ಮನುಷ್ಯಕುಮಾರನನ್ನು ಸಹ ಎತ್ತರವಾದ ಕಂಬದ ಮೇಲಿಡಬೇಕು. 15 ಆತನಲ್ಲಿ ನಂಬಿಕೆ ಇಡುವ ಪ್ರತಿಯೊಬ್ಬರೂ ನಿತ್ಯಜೀವವನ್ನು ಹೊಂದಿಕೊಳ್ಳುವರು” ಎಂದು ಹೇಳಿದನು.
16 ಹೌದು, ದೇವರು ಲೋಕವನ್ನು ಎಷ್ಟೋ ಪ್ರೀತಿಸಿ ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಹೊಂದಬೇಕೆಂದು ಆತನನ್ನು ಕೊಟ್ಟನು. 17 ದೇವರು ತನ್ನ ಮಗನನ್ನು ಈ ಲೋಕಕ್ಕೆ ಕಳುಹಿಸಿದ್ದು, ಆತನ ಮೂಲಕವಾಗಿ ಈ ಲೋಕದ ಜನರನ್ನು ಅಪರಾಧಿಗಳೆಂದು ತೀರ್ಪು ಮಾಡುವುದಕ್ಕಾಗಿಯಲ್ಲ. ಈ ಲೋಕದವರು ರಕ್ಷಣೆ ಹೊಂದಿಕೊಳ್ಳಲೆಂದು ದೇವರು ಆತನನ್ನು ಕಳುಹಿಸಿಕೊಟ್ಟನು. 18 ದೇವರ ಮಗನಲ್ಲಿ ನಂಬಿಕೆ ಇಡುವವನಿಗೆ ತೀರ್ಪಾಗುವುದಿಲ್ಲ. ಆದರೆ ನಂಬದವನಿಗೆ ಆಗಲೇ ತೀರ್ಪಾಗಿದೆ. ಏಕೆಂದರೆ ಅವನು ದೇವರ ಒಬ್ಬನೇ ಮಗನಲ್ಲಿ ನಂಬಿಕೆ ಇಡಲಿಲ್ಲ. 19 ಆ ತೀರ್ಪು ಏನೆಂದರೆ: ಬೆಳಕು ಈ ಲೋಕಕ್ಕೆ ಬಂದಿದೆ, ಆದರೆ ಜನರು ಬೆಳಕನ್ನು ಅಪೇಕ್ಷಿಸದೆ ಕತ್ತಲೆಯನ್ನೇ ಬಯಸಿದರು. ಏಕೆಂದರೆ ಅವರು ದುಷ್ಕೃತ್ಯಗಳನ್ನು ಮಾಡುತ್ತಿದ್ದರು. 20 ಕೇಡನ್ನು ಮಾಡುವ ಪ್ರತಿಯೊಬ್ಬನೂ ಬೆಳಕನ್ನು ದ್ವೇಷಿಸುವನು. ಅವನು ಬೆಳಕಿಗೆ ಬರುವುದಿಲ್ಲ. ಏಕೆಂದರೆ ಅವನು ಮಾಡಿರುವ ಕೆಟ್ಟಕಾರ್ಯಗಳನ್ನೆಲ್ಲಾ ಬೆಳಕು ತೋರಿಸುತ್ತದೆ. 21 ಆದರೆ ಸತ್ಯಮಾರ್ಗವನ್ನು ಅನುಸರಿಸುವವನು ಬೆಳಕಿಗೆ ಬರುತ್ತಾನೆ. ಅವನು ಮಾಡಿರುವ ಕಾರ್ಯಗಳೆಲ್ಲಾ ದೇವರ ಮೂಲಕವಾಗಿ ಮಾಡಿದ ಕಾರ್ಯಗಳೆಂದು ಬೆಳಕು ತೋರಿಸುತ್ತದೆ.
ಯೇಸು ಮತ್ತು ಸ್ನಾನಿಕ ಯೋಹಾನ
22 ಇದಾದ ನಂತರ, ಯೇಸು ಮತ್ತು ಆತನ ಶಿಷ್ಯರು ಜುದೇಯ ಪ್ರಾಂತ್ಯಕ್ಕೆ ಹೋದರು. ಅಲ್ಲಿ ಯೇಸು ತನ್ನ ಶಿಷ್ಯರೊಡನೆ ತಂಗಿದ್ದು, ಜನರಿಗೆ ದೀಕ್ಷಾಸ್ನಾನ ಮಾಡಿಸಿದನು. 23 ಯೋಹಾನನು ಸಹ ಐನೋನ್ ಎಂಬ ಸ್ಥಳದಲ್ಲಿ ದೀಕ್ಷಾಸ್ನಾನ ಮಾಡಿಸುತ್ತಿದ್ದನು. ಐನೋನ್ ಎಂಬ ಊರು ಸಲೀಮ್ ಊರಿನ ಸಮೀಪದಲ್ಲಿದೆ. ಅಲ್ಲಿ ಬೇಕಾದಷ್ಟು ನೀರಿದ್ದುದರಿಂದ ಯೋಹಾನನು ಅಲ್ಲಿ ಜನರಿಗೆ ದೀಕ್ಷಾಸ್ನಾನ ಮಾಡಿಸುತ್ತಿದ್ದನು. ಜನರು ಅಲ್ಲಿಗೆ ಬಂದು ದೀಕ್ಷಾಸ್ನಾನ ತೆಗೆದುಕೊಳ್ಳುತ್ತಿದ್ದರು. 24 (ಆಗ ಯೋಹಾನನನ್ನು ಇನ್ನೂ ಸೆರೆಮನೆಗೆ ಹಾಕಿರಲಿಲ್ಲ.)
25 ಯೋಹಾನನ ಶಿಷ್ಯರಲ್ಲಿ ಕೆಲವರಿಗೂ ಮತ್ತೊಬ್ಬ ಯೆಹೂದ್ಯನಿಗೂ ಶುದ್ಧಾಚಾರದ ಬಗ್ಗೆ ವಾದವಾಯಿತು. 26 ಆದ್ದರಿಂದ ಶಿಷ್ಯರು ಯೋಹಾನನ ಬಳಿಗೆ ಬಂದು, “ಗುರುವೇ, ಜೋರ್ಡನ್ ನದಿಯ ಆಚೆದಡದಲ್ಲಿ ನಿನ್ನೊಂದಿಗಿದ್ದ ವ್ಯಕ್ತಿಯನ್ನು ಜ್ಞಾಪಿಸಿಕೊ. ಆತನ ಕುರಿತಾಗಿ ನೀನೇ ಸಾಕ್ಷಿ ಹೇಳಲಿಲ್ಲವೇ? ಆತನು ಜನರಿಗೆ ದೀಕ್ಷಾಸ್ನಾನ ಕೊಡುತ್ತಿದ್ದಾನೆ. ಅನೇಕ ಜನರು ಆತನ ಬಳಿಗೆ ಹೋಗುತ್ತಿದ್ದಾರೆ” ಎಂದು ಹೇಳಿದರು.
27 ಯೋಹಾನನು, “ದೇವರು ಏನು ಕೊಡುತ್ತಾನೋ ಅದನ್ನು ಮಾತ್ರ ಒಬ್ಬನು ಪಡೆದುಕೊಳ್ಳಬಲ್ಲನು. 28 ‘ನಾನು ಕ್ರಿಸ್ತನಲ್ಲ. ಆತನಿಗಾಗಿ ಹಾದಿಯನ್ನು ಸಿದ್ಧಪಡಿಸುವುದಕ್ಕಾಗಿ ಮಾತ್ರ ಕಳುಹಿಸಲ್ಪಟ್ಟಿದ್ದೇನೆ’ ಎಂದು ನಾನು ಹೇಳಿದ್ದಕ್ಕೆ ನೀವೇ ಸಾಕ್ಷಿಗಳಾಗಿದ್ದೀರಿ. 29 ಮದುಮಗಳು ಮದುಮಗನಿಗೆ ಮಾತ್ರ ಸೇರಿದವಳಾಗಿದ್ದಾಳೆ. ಮದುಮಗನಿಗೆ ಸಹಾಯಮಾಡುವ ಸ್ನೇಹಿತನು ಮದುಮಗನ ಬರುವಿಕೆಗಾಗಿ ಕಾಯುತ್ತಿರುತ್ತಾನೆ ಮತ್ತು ಆತನ ಕರೆಗಾಗಿ ಆಲಿಸುತ್ತಿರುತ್ತಾನೆ. ಮದುಮಗನ ಸ್ವರವನ್ನು ಕೇಳುವಾಗ ಈ ಸ್ನೇಹಿತನು ಬಹು ಸಂತೋಷಪಡುವನು. ಅದೇ ಸಂತೋಷ ನನಗಿದೆ. ನನ್ನ ಪೂರ್ಣಾನಂದದ ಸಮಯವು ಇದೇ ಆಗಿದೆ. 30 ಆತನು (ಯೇಸು) ವೃದ್ಧಿಯಾಗಬೇಕು ಮತ್ತು ನಾನು ಕಡಿಮೆಯಾಗಬೇಕು.
ಪರಲೋಕದಿಂದ ಬರುವ ವ್ಯಕ್ತಿ
31 “ಮೇಲಿನಿಂದ ಬರುವ ಒಬ್ಬನು (ಯೇಸು) ಬೇರೆಲ್ಲಾ ಜನರಿಗಿಂತಲೂ ದೊಡ್ಡವನಾಗಿದ್ದಾನೆ. ಈ ಲೋಕದ ವ್ಯಕ್ತಿಯು ಈ ಲೋಕಕ್ಕೆ ಸೇರಿದವನಾಗಿದ್ದಾನೆ. ಅವನು ಈ ಲೋಕದಲ್ಲಿನ ಸಂಗತಿಗಳ ಬಗ್ಗೆ ಮಾತಾಡುತ್ತಾನೆ. ಆದರೆ ಪರಲೋಕದಿಂದ ಬರುವ ಒಬ್ಬನು ಬೇರೆಲ್ಲಾ ಜನರಿಗಿಂತಲೂ ದೊಡ್ಡವನಾಗಿದ್ದಾನೆ. 32 ಆತನು ತಾನು ಕಂಡಿರುವುದರ ಬಗ್ಗೆ ಮತ್ತು ಕೇಳಿರುವುದರ ಬಗ್ಗೆ ಸಾಕ್ಷಿ ನೀಡುತ್ತಾನೆ. ಆದರೆ ಆತನ ಸಾಕ್ಷಿಯನ್ನು ಜನರು ಸ್ವೀಕರಿಸಿಕೊಳ್ಳುವುದಿಲ್ಲ. 33 ಆತನ ಸಾಕ್ಷಿಯನ್ನು ಸ್ವೀಕರಿಸಿಕೊಳ್ಳುವ ವ್ಯಕ್ತಿಯು ದೇವರೇ ಸತ್ಯವಂತನೆಂದು ನಿರೂಪಿಸುತ್ತಾನೆ. 34 ದೇವರು ಆತನನ್ನು (ಯೇಸುವನ್ನು) ಕಳುಹಿಸಿದನು. ದೇವರು ಹೇಳುವ ಸಂಗತಿಗಳನ್ನು ಆತನು ಹೇಳುತ್ತಾನೆ. ಏಕೆಂದರೆ ದೇವರು ಆತನಿಗೆ ಆತ್ಮವನ್ನು ಅಮಿತವಾಗಿ ಕೊಡುತ್ತಾನೆ. 35 ತಂದೆಯು ಮಗನನ್ನು ಪ್ರೀತಿಸುತ್ತಾನೆ. ತಂದೆಯು ಮಗನಿಗೆ ಪ್ರತಿಯೊಂದರ ಮೇಲೆಯೂ ಅಧಿಕಾರವನ್ನು ಕೊಟ್ಟಿದ್ದಾನೆ. 36 ಮಗನಲ್ಲಿ ನಂಬಿಕೆ ಇಡುವವನು ನಿತ್ಯಜೀವವನ್ನು ಹೊಂದಿದ್ದಾನೆ. ಆದರೆ ಮಗನಿಗೆ ವಿಧೇಯನಾಗದವನು ಆ ಜೀವವನ್ನು ಎಂದಿಗೂ ಹೊಂದಿಕೊಳ್ಳುವುದಿಲ್ಲ. ದೇವರ ಕೋಪವು ಅವನ ಮೇಲೆ ನೆಲೆಗೊಂಡಿರುವುದು” ಎಂದು ಉತ್ತರಕೊಟ್ಟನು.
ಯೇಸು ಮತ್ತು ಸಮಾರ್ಯ ಸ್ತ್ರೀಯ ಸಂಭಾಷಣೆ
4 ತಾನು ಯೋಹಾನನಿಗಿಂತಲೂ ಹೆಚ್ಚು ಶಿಷ್ಯರನ್ನು ಮಾಡಿಕೊಂಡು ಅವರಿಗೆ ದೀಕ್ಷಾಸ್ನಾನ ಮಾಡಿಸುತ್ತಿರುವ ಸುದ್ದಿಯು ಫರಿಸಾಯರಿಗೆ ತಿಳಿಯಿತೆಂಬುದು ಯೇಸುವಿಗೆ ಗೊತ್ತಾಯಿತು. 2 (ವಾಸ್ತವವಾಗಿ ಜನರಿಗೆ ದೀಕ್ಷಾಸ್ನಾನ ಕೊಟ್ಟದ್ದು ಯೇಸುವಲ್ಲ. ಆತನ ಶಿಷ್ಯರೇ ಜನರಿಗೆ ದೀಕ್ಷಾಸ್ನಾನ ಮಾಡಿಸಿದರು.) 3 ಆಗ, ಆತನು ಜುದೇಯವನ್ನು ಬಿಟ್ಟು ಮತ್ತೆ ಗಲಿಲಾಯಕ್ಕೆ ಹೋದನು. 4 ಸಮಾರ್ಯ ಪ್ರಾಂತ್ಯದ ಮೂಲಕವೇ ಗಲಿಲಾಯಕ್ಕೆ ಹೋಗಬೇಕಿತ್ತು.
5 ಯೇಸು ಸಮಾರ್ಯದ ಪಟ್ಟಣವಾದ ಸಿಖಾರ್ ಎಂಬಲ್ಲಿಗೆ ಬಂದನು. ಯಾಕೋಬನು ತನ್ನ ಮಗನಾದ ಯೋಸೇಫನಿಗೆ ಕೊಟ್ಟ ಭೂಮಿಯ ಸಮೀಪದಲ್ಲಿ ಆ ಊರಿದೆ. 6 ಯಾಕೋಬನ ಬಾವಿಯು ಅಲ್ಲಿತ್ತು. ಯೇಸು ತನ್ನ ದೀರ್ಘ ಪ್ರಯಾಣದಿಂದ ಆಯಾಸಗೊಂಡಿದ್ದನು. ಆದ್ದರಿಂದ ಆತನು ಬಾವಿಯ ಬಳಿ ಕುಳಿತುಕೊಂಡನು. ಆಗ ಸುಮಾರು ಮಧ್ಯಾಹ್ನದ ಸಮಯವಾಗಿತ್ತು. 7 ಸಮಾರ್ಯದ ಸ್ತ್ರೀಯೊಬ್ಬಳು ನೀರನ್ನು ತೆಗೆದುಕೊಂಡು ಹೋಗುವುದಕ್ಕಾಗಿ ಆ ಬಾವಿಗೆ ಬಂದಳು. ಯೇಸು ಆಕೆಗೆ, “ದಯವಿಟ್ಟು, ಕುಡಿಯಲು ಸ್ವಲ್ಪ ನೀರು ಕೊಡು” ಎಂದು ಕೇಳಿದನು. 8 (ಯೇಸುವಿನ ಶಿಷ್ಯರು ಆಹಾರಪದಾರ್ಥವನ್ನು ಕೊಂಡುಕೊಂಡು ಬರಲು ಪಟ್ಟಣದೊಳಗೆ ಹೋಗಿದ್ದಾಗ ಇದು ಸಂಭವಿಸಿತು.)
9 ಸಮಾರ್ಯದ ಸ್ತ್ರೀಯು, “ಕುಡಿಯುವ ನೀರಿಗಾಗಿ ನೀನು ನನ್ನನ್ನು ಕೇಳುತ್ತಿರುವುದು ನನಗೆ ಆಶ್ಚರ್ಯವನ್ನು ಉಂಟುಮಾಡಿದೆ! ನೀನಾದರೋ ಯೆಹೂದ್ಯನು. ನಾನಾದರೋ ಸಮಾರ್ಯದವಳು!” ಎಂದು ಹೇಳಿದಳು. (ಯೆಹೂದ್ಯರು ಸಮಾರ್ಯದವರೊಂದಿಗೆ ಸ್ನೇಹದಿಂದಿರಲಿಲ್ಲ.)
10 ಯೇಸು ಆಕೆಗೆ, “ದೇವರು ಏನು ಕೊಡುತ್ತಾನೆಂಬುದು ನಿನಗೆ ಗೊತ್ತಿಲ್ಲ ಮತ್ತು ಕುಡಿಯಲು ನೀರನ್ನು ಕೇಳಿದ ನಾನು ಯಾರೆಂಬುದೂ ನಿನಗೆ ಗೊತ್ತಿಲ್ಲ. ನಿನಗೆ ಈ ಸಂಗತಿಗಳು ಗೊತ್ತಿದ್ದರೆ, ನೀನು ನನ್ನನ್ನು ಕೇಳಿಕೊಳ್ಳುತ್ತಿದ್ದೆ, ಮತ್ತು ನಾನು ನಿನಗೆ ಜೀವಜಲವನ್ನು ಕೊಡುತ್ತಿದ್ದೆ” ಎಂದನು.
11 ಆ ಸ್ತ್ರೀಯು, “ಅಯ್ಯಾ, ಆ ಜೀವಜಲ ನಿನಗೆಲ್ಲಿ ಸಿಕ್ಕುವುದು? ಬಾವಿಯು ಬಹು ಆಳವಾಗಿದೆ ಮತ್ತು ನೀರು ಸೇದುವುದಕ್ಕೆ ನಿನ್ನಲ್ಲಿ ಏನೂ ಇಲ್ಲ. 12 ನಮ್ಮ ಪಿತೃವಾದ ಯಾಕೋಬನಿಗಿಂತಲೂ ನೀನು ದೊಡ್ಡವನೋ? ನಮಗೆ ಈ ಬಾವಿಯನ್ನು ಯಾಕೋಬನೇ ಕೊಟ್ಟನು. ಸ್ವತಃ ಅವನೇ ಈ ನೀರನ್ನು ಕುಡಿದನು. ಅಲ್ಲದೆ ಅವನ ಮಕ್ಕಳು ಈ ಬಾವಿಯ ನೀರನ್ನು ಕುಡಿದರು ಮತ್ತು ಅವನ ಪಶುಗಳೆಲ್ಲಾ ಈ ಬಾವಿಯ ನೀರನ್ನು ಕುಡಿದವು” ಎಂದು ಹೇಳಿದಳು.
13 ಯೇಸು, “ಈ ನೀರನ್ನು ಕುಡಿಯುವ ಪ್ರತಿಯೊಬ್ಬನಿಗೂ ಮತ್ತೆ ದಾಹವಾಗುವುದು. 14 ಆದರೆ ನಾನು ಕೊಡುವ ನೀರನ್ನು ಕುಡಿಯುವವನಿಗೆ ದಾಹವಾಗುವುದೇ ಇಲ್ಲ. ನಾನು ಅವನಿಗೆ ಕೊಡುವ ನೀರು ಅವನೊಳಗೆ ಉಕ್ಕಿಹರಿಯುವ ನೀರಿನ ಬುಗ್ಗೆಯಾಗುವುದು. ಆ ನೀರು ಅವನಿಗೆ ನಿತ್ಯಜೀವವನ್ನು ತರುತ್ತದೆ” ಎಂದು ಉತ್ತರಕೊಟ್ಟನು.
15 ಆ ಸ್ತ್ರೀಯು ಯೇಸುವಿಗೆ, “ಅಯ್ಯಾ, ಆ ನೀರನ್ನು ನನಗೆ ಕೊಡು. ಆಗ ನನಗೆ ಮತ್ತೆಂದಿಗೂ ದಾಹವಾಗುವುದಿಲ್ಲ. ನೀರನ್ನು ತೆಗೆದುಕೊಂಡು ಹೋಗುವುದಕ್ಕಾಗಿ ನಾನು ಇಲ್ಲಿಗೆ ಮತ್ತೆ ಬರುವ ಅಗತ್ಯವೂ ಇರುವುದಿಲ್ಲ” ಎಂದು ಹೇಳಿದಳು.
16 ಯೇಸು ಆಕೆಗೆ, “ಹೋಗಿ ನಿನ್ನ ಗಂಡನನ್ನು ಕರೆದುಕೊಂಡು ಬಾ” ಎಂದನು.
17 ಆ ಸ್ತ್ರೀಯು, “ನನಗೆ ಗಂಡನಿಲ್ಲ” ಎಂದು ಹೇಳಿದಳು.
ಯೇಸು ಆಕೆಗೆ, “ಗಂಡನಿಲ್ಲವೆಂದು ಸರಿಯಾಗಿ ಹೇಳಿದೆ. 18 ನಿಜವಾಗಿಯೂ ನಿನಗೆ ಐದು ಮಂದಿ ಗಂಡಂದಿರಿದ್ದರು. ಆದರೆ ಈಗ ನೀನು ಯಾರೊಂದಿಗೆ ವಾಸಿಸುತ್ತಿರುವಿಯೋ ಅವನು ನಿನ್ನ ಗಂಡನಲ್ಲ. ನೀನು ನನಗೆ ಸತ್ಯವನ್ನು ತಿಳಿಸಿದೆ” ಎಂದು ಹೇಳಿದನು.
19 ಆ ಸ್ತ್ರೀಯು, “ಅಯ್ಯಾ, ನೀನು ಪ್ರವಾದಿಯೆಂದು ಕಾಣುತ್ತದೆ. 20 ನಮ್ಮ ಪಿತೃಗಳು ಈ ಗುಡ್ಡದ ಮೇಲೆ ಆರಾಧಿಸಿದರು. ಆದರೆ ಜನರು ಆರಾಧಿಸಬೇಕಾದ ಸ್ಥಳ ಜೆರುಸಲೇಮ್ ಎಂದು ಯೆಹೂದ್ಯರಾದ ನೀವು ಹೇಳುತ್ತೀರಲ್ಲಾ” ಎಂದಳು.
21 ಯೇಸು, “ಅಮ್ಮಾ, ನನ್ನನ್ನು ನಂಬು! ನೀವು ಇನ್ನೆಂದಿಗೂ ತಂದೆಯನ್ನು (ದೇವರನ್ನು) ಜೆರುಸಲೇಮಿನಲ್ಲಾಗಲಿ ಈ ಗುಡ್ಡದ ಮೇಲಾಗಲಿ ಆರಾಧಿಸಬೇಕಿಲ್ಲ. 22 ನೀವು ನಿಮಗೆ ತಿಳಿದಿಲ್ಲದ ಯಾವುದನ್ನೋ ಆರಾಧಿಸುತ್ತೀರಿ. ನಮಗಾದರೋ ನಾವು ಯಾರನ್ನು ಆರಾಧಿಸುತ್ತಿದ್ದೇವೆ ಎಂಬುದು ತಿಳಿದಿದೆ. ರಕ್ಷಣೆಯು ಯೆಹೂದ್ಯರಿಂದ ಬರುತ್ತದೆ. 23 ನಿಜವಾದ ಆರಾಧಕರು ತಂದೆಯ ಚಿತ್ತಕ್ಕನುಸಾರವಾಗಿ ತಂದೆಯನ್ನು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸುವ ಕಾಲ ಬರುತ್ತದೆ. ಆ ಕಾಲ ಈಗಲೇ ಬಂದಿದೆ ಮತ್ತು ಅಂಥ ಜನರೇ ತನ್ನ ಆರಾಧಕರಾಗಿರಬೇಕೆಂದು ತಂದೆಯು ಬಯಸುತ್ತಾನೆ. 24 ದೇವರು ಆತ್ಮಸ್ವರೂಪಿ. ಆದ್ದರಿಂದ ದೇವರನ್ನು ಆರಾಧಿಸುವವರು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸಬೇಕು” ಎಂದು ಹೇಳಿದನು.
25 ಆ ಸ್ತ್ರೀಯು, “ಮೆಸ್ಸೀಯನು ಬರುತ್ತಾನೆಂದು ನನಗೆ ಗೊತ್ತು. ಆತನು ಬಂದಾಗ ನಮಗೆ ಪ್ರತಿಯೊಂದನ್ನೂ ವಿವರಿಸುವನು” ಎಂದು ಹೇಳಿದಳು. (“ಮೆಸ್ಸೀಯನು” ಅಂದರೆ “ಕ್ರಿಸ್ತನು”)
26 ಆಗ ಯೇಸು, “ಆತನೇ ಈಗ ನಿನ್ನೊಂದಿಗೆ ಮಾತಾಡುತ್ತಿದ್ದಾನೆ. ನಾನೇ ಮೆಸ್ಸೀಯ” ಎಂದು ಹೇಳಿದನು.
27 ಆ ಸಮಯದಲ್ಲಿ ಆತನ ಶಿಷ್ಯರು ಹಿಂತಿರುಗಿ ಬಂದರು. ಯೇಸು ಒಬ್ಬ ಸ್ತ್ರೀಯೊಂದಿಗೆ ಮಾತಾಡುತ್ತಿರುವುದನ್ನು ನೋಡಿ ಅವರು ಆಶ್ಚರ್ಯಗೊಂಡರು. ಆದರೆ, “ನಿನಗೇನು ಬೇಕು?” ಎಂದಾಗಲಿ “ನೀನು ಆಕೆಯೊಂದಿಗೆ ಏಕೆ ಮಾತಾಡುತ್ತಿರುವೆ?” ಎಂದಾಗಲಿ ಅವರಲ್ಲಿ ಒಬ್ಬರೂ ಕೇಳಲಿಲ್ಲ.
28 ಬಳಿಕ ಆ ಸ್ತ್ರೀಯು, ತನ್ನ ಕೊಡವನ್ನು ಅಲ್ಲಿಯೇ ಬಿಟ್ಟು ಊರಿಗೆ ಹಿಂತಿರುಗಿ ಹೋಗಿ ಜನರಿಗೆ, 29 “ನಾನು ಈವರೆಗೆ ಮಾಡಿರುವ ಪ್ರತಿಯೊಂದನ್ನೂ ಒಬ್ಬ ವ್ಯಕ್ತಿ ನನಗೆ ತಿಳಿಸಿದನು. ಬಂದು ಅವನನ್ನು ನೋಡಿರಿ. ಆತನೇ ಕ್ರಿಸ್ತನಿರಬಹುದು” ಎಂದು ಹೇಳಿದಳು. 30 ಆದ್ದರಿಂದ ಜನರು ಆತನನ್ನು ನೋಡಲು ಪಟ್ಟಣದಿಂದ ಹೊರಬಂದರು.
31 ಅಷ್ಟರಲ್ಲಿ ಯೇಸುವಿನ ಶಿಷ್ಯರು, “ಗುರುವೇ, ಊಟಮಾಡು” ಎಂದು ಆತನನ್ನು ಒತ್ತಾಯ ಮಾಡಿದರು.
32 ಅದಕ್ಕೆ ಯೇಸು, “ನನ್ನಲ್ಲಿ ಆಹಾರವಿದೆ. ಆ ಆಹಾರದ ಬಗ್ಗೆ ನಿಮಗೇನೂ ಗೊತ್ತಿಲ್ಲ” ಎಂದನು.
33 ಆದ್ದರಿಂದ ಶಿಷ್ಯರು, “ಯಾರಾದರೂ ಆತನಿಗೆ ಮೊದಲೇ ಆಹಾರವನ್ನು ತಂದುಕೊಟ್ಟರೇ?” ಎಂದು ತಮ್ಮತಮ್ಮೊಳಗೆ ಕೇಳತೊಡಗಿದರು.
34 ಯೇಸು, “ನನ್ನನ್ನು ಕಳುಹಿಸಿದಾತನು (ದೇವರು) ನಾನು ಏನು ಮಾಡಬೇಕೆಂದು ಬಯಸುವನೋ ಅದನ್ನು ಮಾಡುವುದೇ ನನಗೆ ಆಹಾರವಾಗಿದೆ. ಆತನು ನನಗೆ ಕೊಟ್ಟಿರುವ ಕೆಲಸವನ್ನು ಪೂರೈಸುವುದೇ ನನಗೆ ಆಹಾರವಾಗಿದೆ. 35 ‘ಸುಗ್ಗಿಗೆ ಇನ್ನೂ ನಾಲ್ಕು ತಿಂಗಳು ಕಾಯಬೇಕು’ ಎಂದು ನೀವು ಹೇಳುವಿರಿ. ಆದರೆ ನಾನು ನಿಮಗೆ ಹೇಳುತ್ತೇನೆ, ನಿಮ್ಮ ಕಣ್ಣುಗಳನ್ನು ತೆರೆಯಿರಿ. ಹೊಲಗಳ ಸುತ್ತಲೆಲ್ಲಾ ನೋಡಿರಿ, ಅವು ಕೊಯ್ಲಿಗೆ ಬಂದಿವೆ. 36 ಈಗಲೂ ಸಹ, ಬೆಳೆಯನ್ನು ಕೊಯ್ಯುವವನಿಗೆ ಕೂಲಿ ದೊರೆಯುತ್ತದೆ. ಅವನು ಬೆಳೆಗಳನ್ನು ನಿತ್ಯಜೀವಕ್ಕಾಗಿ ಕೂಡಿಸುತ್ತಿದ್ದಾನೆ. ಆದ್ದರಿಂದ ಈಗ ಬಿತ್ತುವವರೂ ಮತ್ತು ಕೊಯ್ಯುವವರೂ ಒಟ್ಟಿಗೆ ಸಂತೋಷವಾಗಿರುವರು. 37 ‘ಒಬ್ಬನು ಬಿತ್ತುತ್ತಾನೆ, ಆದರೆ ಮತ್ತೊಬ್ಬನು ಬೆಳೆಯನ್ನು ಕೊಯ್ಯುತ್ತಾನೆ’ ಎಂದು ನಾವು ಹೇಳುವ ನಾಣ್ಣುಡಿ ಸತ್ಯವಾದದ್ದು. 38 ನೀವು ದುಡಿದಿಲ್ಲದ ಬೆಳೆಯನ್ನು ಕೊಯ್ಯುವುದಕ್ಕಾಗಿ ನಾನು ನಿಮ್ಮನ್ನು ಕಳುಹಿಸುತ್ತಿದ್ದೇನೆ. ಬೇರೆಯವರು ದುಡಿದರು, ಆದರೆ ಅವರ ದುಡಿಮೆಯಿಂದ ನೀವು ಲಾಭವನ್ನು ಪಡೆಯುತ್ತೀರಿ” ಎಂದು ಹೇಳಿದನು.
39 ಆ ಸಮಾರ್ಯ ಪಟ್ಟಣದ ಜನರಲ್ಲಿ ಅನೇಕರು ಯೇಸುವನ್ನು ನಂಬಿದರು. ಏಕೆಂದರೆ ಆ ಸ್ತ್ರೀಯು ಆತನ ವಿಷಯವಾಗಿ ಅವರಿಗೆ, “ನಾನು ಮಾಡಿರುವ ಪ್ರತಿಯೊಂದನ್ನೂ ಆತನು ನನಗೆ ತಿಳಿಸಿದನು” ಎಂದು ಹೇಳಿದ್ದಳು. 40 ಸಮಾರ್ಯದವರು ಯೇಸುವಿನ ಬಳಿಗೆ ಹೋಗಿ ತಮ್ಮೊಂದಿಗೆ ಇರಬೇಕೆಂದು ಆತನನ್ನು ಬೇಡಿಕೊಂಡರು. ಆದ್ದರಿಂದ ಆತನು ಅಲ್ಲಿ ಎರಡು ದಿನ ಇದ್ದನು. 41 ಆತನು ಹೇಳಿದ ಸಂಗತಿಗಳನ್ನು ಕೇಳಿ ಇನ್ನೂ ಅನೇಕ ಜನರು ನಂಬಿದರು.
42 ಅವರು ಆ ಸ್ತ್ರೀಗೆ, “ನಾವು ಮೊದಲು ನಿನ್ನ ಮಾತನ್ನು ಕೇಳಿ ಯೇಸುವನ್ನು ನಂಬಿದೆವು. ಆದರೆ ಈಗ ಸ್ವತಃ ನಾವೇ ಆತನ ಮಾತನ್ನು ಕೇಳಿದ್ದರಿಂದ ನಂಬುತ್ತೇವೆ. ನಿಜವಾಗಿಯೂ ಈತನೇ ಲೋಕರಕ್ಷಕನೆಂದು ಈಗ ನಮಗೆ ತಿಳಿದಿದೆ” ಎಂದು ಹೇಳಿದರು.
ಗುಣಹೊಂದಿದ ಅಧಿಕಾರಿಯ ಮಗ
(ಮತ್ತಾಯ 8:5-13; ಲೂಕ 7:1-10)
43 ಎರಡು ದಿನಗಳಾದ ನಂತರ ಯೇಸು ಅಲ್ಲಿಂದ ಗಲಿಲಾಯಕ್ಕೆ ಹೋದನು. 44 (ಪ್ರವಾದಿಗೆ ಸ್ವಂತ ಊರಿನಲ್ಲಿ ಗೌರವವಿಲ್ಲವೆಂದು ಸ್ವತಃ ಯೇಸುವೇ ತಿಳಿಸಿದ್ದನು.) 45 ಆತನು ಗಲಿಲಾಯವನ್ನು ತಲುಪಿದಾಗ, ಅಲ್ಲಿಯ ಜನರು ಆತನನ್ನು ಸ್ವಾಗತಿಸಿದರು. ಈ ಜನರು ಪಸ್ಕಹಬ್ಬಕ್ಕಾಗಿ ಜೆರುಸಲೇಮಿಗೆ ಹೋಗಿದ್ದಾಗ ಹಬ್ಬದ ಸಮಯದಲ್ಲಿ ಆತನು ಮಾಡಿದ ಕಾರ್ಯಗಳನ್ನೆಲ್ಲಾ ನೋಡಿದ್ದರು.
46 ಯೇಸು ಗಲಿಲಾಯದ ಕಾನಾ ಊರಿಗೆ ಮತ್ತೊಮ್ಮೆ ಭೇಟಿ ನೀಡಿದನು. ಆತನು ನೀರನ್ನು ದ್ರಾಕ್ಷಾರಸವನ್ನಾಗಿ ಮಾರ್ಪಡಿಸಿದ್ದು ಆ ಊರಿನಲ್ಲೇ. ರಾಜನ ಒಬ್ಬ ಅಧಿಕಾರಿಯು ಕಪೆರ್ನೌಮ್ ಪಟ್ಟಣದಲ್ಲಿ ವಾಸವಾಗಿದ್ದನು. ಅವನ ಮಗನಿಗೆ ಕಾಯಿಲೆಯಾಗಿತ್ತು. 47 ಯೇಸು ಜುದೇಯದಿಂದ ಬಂದು ಈಗ ಗಲಿಲಾಯದಲ್ಲಿ ಇದ್ದಾನೆ ಎಂಬ ಸುದ್ದಿಯನ್ನು ಅವನು ಕೇಳಿದನು. ಆದ್ದರಿಂದ ಅವನು ಆತನ ಬಳಿಗೆ ಹೋಗಿ ತನ್ನ ಮಗನನ್ನು ಗುಣಪಡಿಸುವುದಕ್ಕಾಗಿ ಕಪೆರ್ನೌಮ್‌ಗೆ ಬರಬೇಕೆಂದು ಆತನನ್ನು ಬೇಡಿಕೊಂಡನು. ಅವನ ಮಗನು ಸಾಯುವ ಸ್ಥಿತಿಯಲ್ಲಿದ್ದನು. 48 ಯೇಸು ಅವನಿಗೆ, “ನೀವು ಸೂಚಕಕಾರ್ಯಗಳನ್ನು ಮತ್ತು ಆಶ್ಚರ್ಯಕರವಾದ ಕಾರ್ಯಗಳನ್ನು ನೋಡದ ಹೊರತು ನನ್ನನ್ನು ನಂಬುವುದೇ ಇಲ್ಲ” ಎಂದು ಹೇಳಿದನು.
49 ರಾಜನ ಅಧಿಕಾರಿ, “ಸ್ವಾಮೀ, ನನ್ನ ಮಗನು ಸಾಯುವ ಮೊದಲೇ ನೀನು ಬರಬೇಕು” ಎಂದು ಕೇಳಿಕೊಂಡನು.
50 ಯೇಸು ಅವನಿಗೆ, “ಹೋಗು, ನಿನ್ನ ಮಗನು ಬದುಕುವನು” ಎಂದು ಉತ್ತರಕೊಟ್ಟನು.
ಯೇಸುವಿನ ಮಾತನ್ನು ಅವನು ನಂಬಿ ಮನೆಗೆ ಹಿಂತಿರುಗಿದನು. 51 ಅವನು ಮನೆಗೆ ಹೋಗುತ್ತಿರುವಾಗ ಅವನ ಸೇವಕರುಗಳು ಬಂದು ಅವನನ್ನು ಭೇಟಿಯಾಗಿ, “ನಿನ್ನ ಮಗನು ಗುಣಹೊಂದಿದನು” ಎಂದು ತಿಳಿಸಿದರು.
52 ಅವನು, “ನನ್ನ ಮಗನಿಗೆ ಯಾವಾಗ ಗುಣವಾಯಿತು?” ಎಂದು ಕೇಳಿದನು.
ಸೇವಕರುಗಳು, “ನಿನ್ನೆ ಮಧ್ಯಾಹ್ನ ಸುಮಾರು ಒಂದು ಗಂಟೆಯಲ್ಲಿ ಅವನ ಜ್ವರವು ಬಿಟ್ಟಿತು” ಎಂದು ಉತ್ತರಕೊಟ್ಟರು.
53 “ನಿನ್ನ ಮಗನು ಬದುಕುವನು” ಎಂದು ಯೇಸು ಹೇಳಿದ್ದು ಇದೇ ಹೊತ್ತಿನಲ್ಲಿ ಎಂಬುದು ತಂದೆಗೆ ತಿಳಿದಿತ್ತು. ಆದ್ದರಿಂದ ಅವನು ಮತ್ತು ಅವನ ಮನೆಯವರೆಲ್ಲ ಯೇಸುವನ್ನು ನಂಬಿದರು.
54 ಯೇಸು ಜುದೇಯದಿಂದ ಗಲಿಲಾಯಕ್ಕೆ ಬಂದ ಮೇಲೆ ಮಾಡಿದ ಎರಡನೆಯ ಸೂಚಕಕಾರ್ಯವಿದು.
Kannada Holy Bible: Easy-to-Read Version. All rights reserved. © 1997 Bible League International