Print Page Options
Previous Prev Day Next DayNext

Read the Gospels in 40 Days

Read through the four Gospels--Matthew, Mark, Luke, and John--in 40 days.
Duration: 40 days
Kannada Holy Bible: Easy-to-Read Version (KERV)
Version
ಯೋಹಾನ 1-2

ಜಗತ್ತಿಗೆ ಕ್ರಿಸ್ತನ ಆಗಮನ

ಜಗತ್ತು ಸೃಷ್ಟಿಯಾಗುವುದಕ್ಕಿಂತ ಮೊದಲೇ ವಾಕ್ಯ[a] ಎಂಬಾತನಿದ್ದನು. ಆ ವಾಕ್ಯ ಎಂಬಾತನು ದೇವರೊಂದಿಗೆ ಇದ್ದನು. ಆ ವಾಕ್ಯ ಎಂಬಾತನೇ ಸ್ವತಃ ದೇವರಾಗಿದ್ದನು. ಆರಂಭದಲ್ಲಿ ಆತನು ದೇವರೊಂದಿಗೆ ಇದ್ದನು. ಎಲ್ಲಾ ವಸ್ತುಗಳು ಆತನ ಮೂಲಕ ನಿರ್ಮಾಣಗೊಂಡವು. ಆತನಿಲ್ಲದೆ ಯಾವುದೂ ನಿರ್ಮಿತವಾಗಲಿಲ್ಲ. ಆತನಲ್ಲಿ ಜೀವವಿತ್ತು. ಆ ಜೀವವು ಮನುಷ್ಯರಿಗೆ ಬೆಳಕಾಗಿತ್ತು. ಬೆಳಕು ಕತ್ತಲೆಯಲ್ಲಿ ಪ್ರಕಾಶಿಸುತ್ತದೆ. ಆದರೆ ಕತ್ತಲೆಯು ಬೆಳಕನ್ನು ಮುಸುಕಲಿಲ್ಲ.

ಯೋಹಾನ[b] ಎಂಬ ಒಬ್ಬ ಮನುಷ್ಯನನ್ನು ದೇವರು ಕಳುಹಿಸಿದನು. ಯೋಹಾನನು ಬೆಳಕಿನ (ಕ್ರಿಸ್ತನ) ಬಗ್ಗೆ ಜನರಿಗೆ ತಿಳಿಸುವುದಕ್ಕಾಗಿ ಬಂದನು. ತನ್ನ ಮೂಲಕ ಎಲ್ಲಾ ಜನರು ಬೆಳಕಿನ ಬಗ್ಗೆ ಕೇಳಿ ನಂಬಿಕೊಳ್ಳಲೆಂದು ಅವನು ಬಂದನು. ಯೋಹಾನನೇ ಆ ಬೆಳಕಾಗಿರಲಿಲ್ಲ. ಆದರೆ ಯೋಹಾನನು ಬೆಳಕಿನ ಬಗ್ಗೆ ಜನರಿಗೆ ಸಾಕ್ಷಿ ನೀಡಲು ಬಂದನು. ನಿಜವಾದ ಬೆಳಕು ಈ ಲೋಕಕ್ಕೆ ಆಗಮಿಸಲಿತ್ತು. ಈ ನಿಜವಾದ ಬೆಳಕೇ ಎಲ್ಲಾ ಜನರಿಗೆ ಬೆಳಕನ್ನು ಕೊಡುತ್ತದೆ.

10 ವಾಕ್ಯ ಎಂಬಾತನು ಆಗಲೇ ಈ ಲೋಕದಲ್ಲಿದ್ದನು. ಈ ಲೋಕವು ವಾಕ್ಯ ಎಂಬಾತನ ಮೂಲಕ ನಿರ್ಮಾಣಗೊಂಡಿತು. ಆದರೆ ಈ ಲೋಕದವರು ಆತನನ್ನು ತಿಳಿದಿರಲಿಲ್ಲ. 11 ಆತನು ತನ್ನ ಸ್ವಾಸ್ತ್ಯಕ್ಕೆ ಬಂದನು. ಆದರೆ ಆತನ ಸ್ವಂತ ಜನರು ಆತನನ್ನು ಸ್ವೀಕರಿಸಿಕೊಳ್ಳಲಿಲ್ಲ. 12 ಯಾರ್ಯಾರು ಆತನನ್ನು ಸ್ವೀಕರಿಸಿಕೊಂಡರೋ ಅಂದರೆ ಆತನಲ್ಲಿ ನಂಬಿಕೆ ಇಟ್ಟರೋ ಅವರಿಗೆ ಆತನು ದೇವರ ಮಕ್ಕಳಾಗುವ ಅಧಿಕಾರ ಕೊಟ್ಟನು. 13 ಇವರು ರಕ್ತದಿಂದಾಗಲಿ ಕಾಮದಿಂದಾಗಲಿ ಪುರುಷನ ಸಂಕಲ್ಪದಿಂದಾಗಲಿ ಹುಟ್ಟಿದವರಲ್ಲ. ಇವರು ದೇವರಿಂದಲೇ ಹುಟ್ಟಿದವರು.

14 ವಾಕ್ಯ ಎಂಬಾತನು ಮನುಷ್ಯನಾಗಿ ನಮ್ಮೊಂದಿಗೆ ವಾಸಿಸಿದನು. ನಾವು ಆತನ ಮಹಿಮೆಯನ್ನು ನೋಡಿದೆವು. ಆ ಮಹಿಮೆಯು ತಂದೆಯ ಒಬ್ಬನೇ ಮಗನಿಗಿರುವ ಮಹಿಮೆಯಾಗಿತ್ತು. ಆತನು ಕೃಪೆಯಿಂದಲೂ ಸತ್ಯದಿಂದಲೂ ತುಂಬಿದವನಾಗಿದ್ದನು. 15 ಯೋಹಾನನು ಆತನ ಬಗ್ಗೆ ಜನರಿಗೆ ತಿಳಿಸುತ್ತಾ, “‘ನನ್ನ ನಂತರ ಬರುವ ಒಬ್ಬನು ನನಗಿಂತಲೂ ಶ್ರೇಷ್ಠನಾಗಿದ್ದಾನೆ. ಆತನು ನನಗಿಂತ ಮೊದಲೇ ಜೀವಿಸುತ್ತಿದ್ದನು’ ಎಂದು ನಾನು ಹೇಳಿದಾಗ ಈತನ ಬಗ್ಗೆಯೇ ಮಾತಾಡುತ್ತಿದ್ದೆನು” ಎಂದು ಗಟ್ಟಿಯಾಗಿ ಕೂಗಿ ಹೇಳಿದನು.

16 ವಾಕ್ಯ ಎಂಬಾತನು ಕೃಪೆಯಿಂದಲೂ ಸತ್ಯದಿಂದಲೂ ತುಂಬಿದವನಾಗಿದ್ದನು. ಆತನಿಂದಲೇ ನಾವೆಲ್ಲರೂ ಕೃಪೆಯ ಮೇಲೆ ಕೃಪೆಯನ್ನು ಹೊಂದಿದೆವು. 17 ಧರ್ಮಶಾಸ್ತ್ರವು ಮೋಶೆಯ ಮೂಲಕ ಕೊಡಲ್ಪಟ್ಟಿತು. ಆದರೆ ಕೃಪೆಯೂ ಸತ್ಯವೂ ಯೇಸು ಕ್ರಿಸ್ತನ ಮೂಲಕ ಬಂದವು. 18 ದೇವರನ್ನು ಯಾರೂ ಎಂದೂ ಕಂಡಿಲ್ಲ. ಆದರೆ ಒಬ್ಬನೇ ಮಗನು (ಯೇಸು) ದೇವರಾಗಿದ್ದಾನೆ ಮತ್ತು ಆತನು ತಂದೆಯ (ದೇವರ) ಎದೆಯಲ್ಲಿದ್ದಾನೆ. ಆತನೇ ತಂದೆಯನ್ನು ತಿಳಿಯಪಡಿಸಿದ್ದಾನೆ.

ಯೇಸುವಿನ ಕುರಿತು ಯೋಹಾನನ ಸಂದೇಶ

(ಮತ್ತಾಯ 3:1-12; ಮಾರ್ಕ 1:2-8; ಲೂಕ 3:15-17)

19 “ನೀನು ಯಾರು?” ಎಂದು ಯೋಹಾನನನ್ನು ಕೇಳುವುದಕ್ಕಾಗಿ ಜೆರುಸಲೇಮಿನ ಯೆಹೂದ್ಯರು ಯೋಹಾನನ ಬಳಿಗೆ ಕೆಲವು ಯಾಜಕರನ್ನು ಮತ್ತು ಲೇವಿಯರನ್ನು ಕಳುಹಿಸಿದರು. 20 ಯೋಹಾನನು ಮರೆಮಾಚದೆ, “ನಾನು ಕ್ರಿಸ್ತನಲ್ಲ” ಎಂದು ಹೇಳಿದನು.

21 ಯೆಹೂದ್ಯರು ಯೋಹಾನನಿಗೆ, “ಹಾಗಾದರೆ ನೀನು ಯಾರು? ನೀನು ಎಲೀಯನೋ?”[c] ಎಂದು ಕೇಳಿದರು.

ಅವನು, “ಇಲ್ಲ, ನಾನು ಎಲೀಯನಲ್ಲ” ಎಂದು ಉತ್ತರಿಸಿದನು.

ಯೆಹೂದ್ಯರು, “ನೀನು ಪ್ರವಾದಿಯೋ?” ಎಂದು ಕೇಳಿದರು.

ಯೋಹಾನನು, “ಇಲ್ಲ, ನಾನು ಪ್ರವಾದಿಯಲ್ಲ” ಎಂದು ಉತ್ತರಕೊಟ್ಟನು.

22 ಆಗ ಯೆಹೂದ್ಯರು, “ನಮಗೆ ಹೇಳು. ನಮ್ಮನ್ನು ಕಳುಹಿಸಿದವರಿಗೆ ನಾವು ತಿಳಿಸಬೇಕಾಗಿದೆ. ನಿನ್ನ ಬಗ್ಗೆ ನೀನು ಏನು ಹೇಳುವೆ?” ಎಂದು ಕೇಳಿದರು.

23 ಅದಕ್ಕೆ ಯೋಹಾನನು,

“‘ಪ್ರಭುವಿಗಾಗಿ ನೇರವಾದ ದಾರಿಯನ್ನು ಸಿದ್ಧಗೊಳಿಸಿರಿ’
    ಎಂದು ಅಡವಿಯಲ್ಲಿ ಕೂಗುವವನ ಸ್ವರವೇ ನಾನು”(A)

ಎಂದು ಪ್ರವಾದಿಯಾದ ಯೆಶಾಯನ ಮಾತುಗಳಲ್ಲೇ ಉತ್ತರಕೊಟ್ಟನು.

24 ಕಳುಹಿಸಲ್ಪಟ್ಟಿದ್ದವರಲ್ಲಿ ಕೆಲವು ಮಂದಿ ಫರಿಸಾಯರೂ[d] ಇದ್ದರು. 25 ಅವರು ಅವನಿಗೆ, “ನೀನು ನಿನ್ನ ಬಗ್ಗೆ, ‘ನಾನು ಕ್ರಿಸ್ತನೂ ಅಲ್ಲ, ಎಲೀಯನೂ ಅಲ್ಲ, ಪ್ರವಾದಿಯೂ ಅಲ್ಲ’ ಎಂದು ಹೇಳುತ್ತಿರುವೆ. ಹಾಗಾದರೆ ನೀನು ಜನರಿಗೆ ಏಕೆ ದೀಕ್ಷಾಸ್ನಾನ ಮಾಡಿಸುವೆ?” ಎಂದು ಕೇಳಿದರು.

26 ಯೋಹಾನನು, “ನಾನು ಜನರಿಗೆ ನೀರಿನಿಂದ ದೀಕ್ಷಾಸ್ನಾನ ಮಾಡಿಸುವೆನು. ಆದರೆ ನಿಮಗೆ ಗೊತ್ತಿಲ್ಲದ ಒಬ್ಬನು ಇಲ್ಲಿದ್ದಾನೆ. 27 ನನ್ನ ನಂತರ ಬರುವವನು ಆತನೇ. ಆತನ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ” ಎಂದು ಹೇಳಿದನು.

28 ಜೋರ್ಡನ್ ನದಿಯ ಆಚೆದಡದಲ್ಲಿದ್ದ ಬೆಥಾನಿ ಎಂಬ ಊರಲ್ಲಿ ಈ ಸಂಗತಿಗಳೆಲ್ಲಾ ನಡೆದವು. ಯೋಹಾನನು ಜನರಿಗೆ ದೀಕ್ಷಾಸ್ನಾನ ಮಾಡಿಸುತ್ತಿದ್ದದ್ದು ಇಲ್ಲಿಯೇ.

ಯೇಸು—ದೇವರ ಕುರಿಮರಿ

29 ಮರುದಿನ ಯೋಹಾನನು, ತನ್ನ ಬಳಿಗೆ ಬರುತ್ತಿದ್ದ ಯೇಸುವನ್ನು ಕಂಡು, “ಇಗೋ, ಯಜ್ಞಕ್ಕಾಗಿ ದೇವರು ನೇಮಿಸಿದ ಕುರಿಮರಿ. ಆತನು ಈ ಲೋಕದ ಪಾಪಗಳನ್ನು ಪರಿಹರಿಸುವನು. 30 ‘ನನ್ನ ನಂತರ ಒಬ್ಬ ವ್ಯಕ್ತಿಯು ಬರುವನು. ಆತನು ನನಗಿಂತಲೂ ದೊಡ್ಡವನು. ಏಕೆಂದರೆ ಆತನು ನನಗಿಂತಲೂ ಮೊದಲೇ ಇದ್ದವನು ಮತ್ತು ಯಾವಾಗಲೂ ಇದ್ದವನು’ ಎಂದು ನಾನು ಹೇಳುತ್ತಿದ್ದುದು ಈತನ ವಿಷಯವಾಗಿಯೇ. 31 ಆತನು ಯಾರೆಂಬುದು ನನಗೂ ಗೊತ್ತಿರಲಿಲ್ಲ. ಆದರೆ ಆತನನ್ನು ಇಸ್ರೇಲರಿಗೆ ತಿಳಿಸುವುದಕ್ಕೋಸ್ಕರ ನಾನು ಜನರಿಗೆ ನೀರಿನಿಂದ ದೀಕ್ಷಾಸ್ನಾನ ಕೊಡುತ್ತಿದ್ದೆನು” ಎಂದು ಹೇಳಿದನು.

32-33 ಇದಲ್ಲದೆ ಯೋಹಾನನು ಸಾಕ್ಷಿಕೊಟ್ಟು ಹೇಳಿದ್ದೇನೆಂದರೆ, “ಆತನು ಯಾರೆಂದು ನನಗೂ ಗೊತ್ತಿರಲಿಲ್ಲ. ಆದರೆ ಜನರಿಗೆ ದೀಕ್ಷಾಸ್ನಾನ ಕೊಡಲು ನನ್ನನ್ನು ಕಳುಹಿಸಿದಾತನು ನನಗೆ, ‘ಪವಿತ್ರಾತ್ಮನು ಇಳಿದುಬಂದು ಒಬ್ಬ ವ್ಯಕ್ತಿಯ ಮೇಲೆ ನೆಲಸುವುದನ್ನು ನೀನು ನೋಡುವೆ. ಪವಿತ್ರಾತ್ಮನಿಂದ ದೀಕ್ಷಾಸ್ನಾನ ಕೊಡುವವನು ಆ ವ್ಯಕ್ತಿಯೇ’ ಎಂದು ಹೇಳಿದ್ದನು. ಇದು ನೆರವೇರುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಪವಿತ್ರಾತ್ಮನು ಪರಲೋಕದಿಂದ ಪಾರಿವಾಳದ ರೂಪದಲ್ಲಿ ಇಳಿದುಬಂದು ಆತನ (ಯೇಸುವಿನ) ಮೇಲೆ ನೆಲಸುವುದನ್ನು ನಾನು ನೋಡಿದೆನು. 34 ಆದ್ದರಿಂದ ಆತನೇ (ಯೇಸುವೇ) ದೇವರ ಮಗನೆಂದು ನಾನು ಜನರಿಗೆ ತಿಳಿಸುವೆನು” ಎಂದನು.

ಯೇಸುವಿನ ಪ್ರಥಮ ಶಿಷ್ಯರು

35 ಮರುದಿನ ಯೋಹಾನನು ತನ್ನ ಇಬ್ಬರು ಶಿಷ್ಯರೊಂದಿಗೆ ಇದ್ದಾಗ, 36 ಸಮೀಪದಲ್ಲಿ ನಡೆದುಹೋಗುತ್ತಿದ್ದ ಯೇಸುವನ್ನು ಕಂಡು, “ಇಗೋ, ಯಜ್ಞಕ್ಕೆ ದೇವರು ನೇಮಿಸಿದ ಕುರಿಮರಿ!” ಎಂದು ಹೇಳಿದನು.

37 ಯೋಹಾನನ ಈ ಮಾತನ್ನು ಕೇಳಿದ ಆ ಇಬ್ಬರು ಶಿಷ್ಯರು ಯೇಸುವನ್ನು ಹಿಂಬಾಲಿಸಿದರು. 38 ಯೇಸು ಹಿಂತಿರುಗಿ ನೋಡಿ, “ನಿಮಗೇನು ಬೇಕು?” ಎಂದು ಕೇಳಿದನು.

ಆ ಇಬ್ಬರು, “ರಬ್ಬಿ, ನೀನು ಎಲ್ಲಿ ಇಳಿದುಕೊಂಡಿರುವೆ?” ಎಂದು ಕೇಳಿದರು. (“ರಬ್ಬಿ” ಅಂದರೆ “ಗುರು” ಎಂದರ್ಥ.)

39 ಯೇಸು, “ನನ್ನೊಂದಿಗೆ ಬನ್ನಿ, ಆಗ ನೀವೇ ನೋಡುವಿರಿ” ಎಂದು ಹೇಳಿದನು. ಆದ್ದರಿಂದ ಆ ಇಬ್ಬರು ಹೋಗಿ ಯೇಸು ಇಳಿದುಕೊಂಡಿದ್ದ ಸ್ಥಳವನ್ನು ನೋಡಿದರು. ಆ ದಿನ ಅವರು ಅಲ್ಲಿಯೇ ಆತನೊಂದಿಗೆ ಇದ್ದರು. ಆಗ ಸಾಯಂಕಾಲ ಸುಮಾರು ನಾಲ್ಕು ಗಂಟೆಯಾಗಿತ್ತು.

40 ಈ ಇಬ್ಬರು ಯೋಹಾನನ ಮಾತನ್ನು ಕೇಳಿ ಯೇಸುವನ್ನು ಹಿಂಬಾಲಿಸಿದರು. ಸೀಮೋನ್ ಪೇತ್ರನ ತಮ್ಮನಾದ ಅಂದ್ರೆಯನು ಇವರಲ್ಲಿ ಒಬ್ಬನಾಗಿದ್ದನು. 41 ಮೊದಲನೆಯದಾಗಿ, ಅವನು ತನ್ನ ಅಣ್ಣನಾದ ಸೀಮೋನನನ್ನು ಕಾಣಲು ಹೋಗಿ ಅವನಿಗೆ, “ನಾವು ಮೆಸ್ಸೀಯನನ್ನು ಕಂಡುಕೊಂಡೆವು” ಎಂದು ಹೇಳಿದನು. (“ಮೆಸ್ಸೀಯ” ಅಂದರೆ “ಕ್ರಿಸ್ತನು” ಎಂದರ್ಥ.)

42 ಅವನು ಸೀಮೋನನನ್ನು ಯೇಸುವಿನ ಬಳಿಗೆ ಕರೆದುಕೊಂಡು ಬಂದನು. ಯೇಸು ಸೀಮೋನನ ಕಡೆಗೆ ನೋಡಿ, “ಯೋಹಾನನ ಮಗನಾದ ನಿನ್ನ ಹೆಸರು ಸೀಮೋನ. ನೀನು ಕೇಫನೆಂದು ಕರೆಸಿಕೊಳ್ಳುವೆ” ಎಂದು ಹೇಳಿದನು. (“ಕೇಫ” ಅಂದರೆ “ಪೇತ್ರ” ಎಂದರ್ಥ).

43 ಮರುದಿನ ಯೇಸು ಗಲಿಲಾಯಕ್ಕೆ ಹೋಗಲು ನಿರ್ಧರಿಸಿದನು. ಯೇಸು ಫಿಲಿಪ್ಪನನ್ನು ಕಂಡು ಅವನಿಗೆ, “ನನ್ನನ್ನು ಹಿಂಬಾಲಿಸು” ಎಂದು ಹೇಳಿದನು. 44 ಅಂದ್ರೆಯ ಮತ್ತು ಪೇತ್ರರಂತೆ ಫಿಲಿಪ್ಪನು ಸಹ ಬೆತ್ಸಾಯಿದ ಎಂಬ ಊರಿನವನಾಗಿದ್ದನು. 45 ಫಿಲಿಪ್ಪನು ನತಾನಿಯೇಲನನ್ನು ಕಂಡು ಅವನಿಗೆ, “ಯಾವನ ವಿಷಯದಲ್ಲಿ ಮೋಶೆಯು ಧರ್ಮಶಾಸ್ತ್ರದಲ್ಲಿ ಬರೆದನೋ ಮತ್ತು ಪ್ರವಾದಿಗಳು ಬರೆದರೋ, ಆತನನ್ನು ನಾವು ಕಂಡುಕೊಂಡೆವು. ಆತನ ಹೆಸರು ಯೇಸು. ಆತನು ಯೋಸೇಫನ ಮಗನು. ಆತನು ನಜರೇತಿನವನು” ಎಂದು ಹೇಳಿದನು.

46 ಆದರೆ ನತಾನಿಯೇಲನು ಫಿಲಿಪ್ಪನಿಗೆ, “ನಜರೇತಿನಿಂದ ಒಳ್ಳೆಯದೇನಾದರೂ ಬರುವುದೇ?” ಎಂದು ಕೇಳಿದನು.

ಫಿಲಿಪ್ಪನು, “ಬಂದು ನೋಡು” ಎಂದು ಉತ್ತರಕೊಟ್ಟನು.

47 ಯೇಸು ತನ್ನ ಬಳಿಗೆ ಬರುತ್ತಿದ್ದ ನತಾನಿಯೇಲನನ್ನು ಕಂಡು ಅವನ ಬಗ್ಗೆ, “ಇವನು ನಿಜವಾದ ಇಸ್ರೇಲ. ಇವನಲ್ಲಿ ಕಪಟವಿಲ್ಲ” ಎಂದು ಹೇಳಿದನು.

48 ನತಾನಿಯೇಲನು, “ನೀನು ನನ್ನನ್ನು ಹೇಗೆ ಬಲ್ಲೆ?” ಎಂದು ಕೇಳಿದನು.

ಯೇಸು, “ಫಿಲಿಪ್ಪನು ನನ್ನ ಬಗ್ಗೆ ನಿನಗೆ ತಿಳಿಸುವುದಕ್ಕಿಂತ ಮೊದಲೇ ನೀನು ಅಂಜೂರದ ಮರದ ಕೆಳಗಿದ್ದಾಗ ನಾನು ನಿನ್ನನ್ನು ನೋಡಿದೆನು” ಎಂದು ಹೇಳಿದನು.

49 ಆಗ ನತಾನಿಯೇಲನು ಯೇಸುವಿಗೆ, “ಗುರುವೇ, ನೀನೇ ದೇವರ ಮಗನು. ನೀನೇ ಇಸ್ರೇಲರ ರಾಜ” ಎಂದು ಹೇಳಿದನು.

50 ಯೇಸು ನತಾನಿಯೇಲನಿಗೆ, “ನಿನ್ನನ್ನು ಅಂಜೂರದ ಮರದ ಕೆಳಗೆ ನೋಡಿದೆನೆಂದು ನಾನು ನಿನಗೆ ಹೇಳಿದ್ದರಿಂದ ನೀನು ನನ್ನನ್ನು ನಂಬುವೆ. ಆದರೆ ಅದಕ್ಕಿಂತಲೂ ಹೆಚ್ಚು ದೊಡ್ಡ ಕಾರ್ಯಗಳನ್ನು ನೀನು ನೋಡುವೆ!” ಎಂದು ಹೇಳಿದನು. 51 ಅದಲ್ಲದೆ ಯೇಸು, “ನಾನು ನಿನಗೆ ಸತ್ಯವನ್ನು ಹೇಳುತ್ತೇನೆ. ಪರಲೋಕವು ತೆರೆದಿರುವುದನ್ನೂ ಮನುಷ್ಯಕುಮಾರನ ಮೇಲೆ ದೇವದೂತರುಗಳು ಏರಿಹೋಗುವುದನ್ನೂ ಕೆಳಗೆ ಇಳಿದುಬರುವುದನ್ನೂ ನೀವು ನೋಡುವಿರಿ” ಎಂದು ಹೇಳಿದನು.

ಕಾನಾ ಊರಿನಲ್ಲಿ ಮದುವೆ

ಮಾರನೆಯ ದಿನ ಗಲಿಲಾಯದ ಕಾನಾ ಊರಿನಲ್ಲಿ ಒಂದು ಮದುವೆ ಇತ್ತು. ಯೇಸುವಿನ ತಾಯಿಯೂ ಬಂದಿದ್ದಳು. ಯೇಸು ಮತ್ತು ಆತನ ಶಿಷ್ಯರನ್ನು ಸಹ ಮದುವೆಗೆ ಆಹ್ವಾನಿಸಲಾಗಿತ್ತು. ಮದುವೆಯಲ್ಲಿ ಸಾಕಷ್ಟು ದ್ರಾಕ್ಷಾರಸವಿರಲಿಲ್ಲ. ಇದ್ದ ದ್ರಾಕ್ಷಾರಸವೆಲ್ಲಾ ಮುಗಿದುಹೋದಾಗ ಯೇಸುವಿನ ತಾಯಿಯು ಆತನಿಗೆ, “ಅವರಲ್ಲಿ ದ್ರಾಕ್ಷಾರಸವೇ ಇಲ್ಲ” ಎಂದು ತಿಳಿಸಿದಳು.

ಯೇಸು, “ಅಮ್ಮಾ, ನನ್ನ ಗೊಡವೆ ನಿನಗೇಕೆ? ನನ್ನ ಸಮಯ ಇನ್ನೂ ಬಂದಿಲ್ಲ” ಎಂದು ಉತ್ತರಕೊಟ್ಟನು.

ಯೇಸುವಿನ ತಾಯಿ ಸೇವಕರಿಗೆ, “ಯೇಸು ನಿಮಗೆ ಏನು ಹೇಳುತ್ತಾನೋ ಅದನ್ನು ಮಾಡಿರಿ” ಎಂದು ಹೇಳಿದಳು.

ಕಲ್ಲಿನಿಂದ ಮಾಡಿದ ಆರು ದೊಡ್ಡ ಬಾನೆಗಳು ಅಲ್ಲಿದ್ದವು. ಯೆಹೂದ್ಯರು ಶುದ್ಧಾಚಾರಗಳಿಗಾಗಿ ಈ ಕಲ್ಲಿನ ಬಾನೆಗಳನ್ನು ಉಪಯೋಗಿಸುತ್ತಿದ್ದರು. ಪ್ರತಿಯೊಂದು ಬಾನೆಯೂ ಸುಮಾರು ನೂರು ಲೀಟರ್‌ಗಳಷ್ಟು ನೀರು ಹಿಡಿಯುತ್ತಿತ್ತು.

ಯೇಸು ಸೇವಕರಿಗೆ, “ಆ ಬಾನೆಗಳಲ್ಲಿ ನೀರನ್ನು ತುಂಬಿರಿ” ಎಂದು ಹೇಳಿದನು. ಅಂತೆಯೇ ಸೇವಕರು ಆ ಬಾನೆಗಳ ಕಂಠದವರೆಗೂ ನೀರನ್ನು ತುಂಬಿದರು.

ಬಳಿಕ ಯೇಸು ಸೇವಕರಿಗೆ, “ಈಗ ಸ್ವಲ್ಪ ನೀರನ್ನು ತೆಗೆದುಕೊಂಡು ಹೋಗಿ ಔತಣದ ಮೇಲ್ವಿಚಾರಕನಿಗೆ ಕೊಡಿರಿ” ಎಂದು ಹೇಳಿದನು.

ಅಂತೆಯೇ ಅವರು ಅದನ್ನು ತೆಗೆದುಕೊಂಡು ಹೋದರು. ಮದುವೆಯ ಮೇಲ್ವಿಚಾರಕನು ದ್ರಾಕ್ಷಾರಸವಾಗಿ ಮಾರ್ಪಟ್ಟಿದ್ದ ನೀರನ್ನು ರುಚಿ ನೋಡಿದನು. ದ್ರಾಕ್ಷಾರಸವು ಎಲ್ಲಿಂದ ಬಂತೆಂಬುದು ಅವನಿಗೆ ಗೊತ್ತಿರಲಿಲ್ಲ. ಆದರೆ ಅದು ಆ ಸೇವಕರಿಗೆ ತಿಳಿದಿತ್ತು. ಮದುವೆಯ ಮೇಲ್ವಿಚಾರಕನು ಮದುಮಗನನ್ನು ಕರೆದು, 10 “ಜನರು ಉತ್ತಮವಾದ ದ್ರಾಕ್ಷಾರಸವನ್ನು ಯಾವಾಗಲೂ ಮೊದಲು ಹಂಚುತ್ತಾರೆ. ಅತಿಥಿಗಳು ಕುಡಿದು ಮತ್ತರಾದ ಮೇಲೆ ಅವರಿಗೆ ಕಡಿಮೆ ದರ್ಜೆಯ ದ್ರಾಕ್ಷಾರಸವನ್ನು ಕೊಡುತ್ತಾರೆ. ಆದರೆ ನೀನು ಉತ್ತಮವಾದ ದ್ರಾಕ್ಷಾರಸವನ್ನು ಈವರೆಗೂ ಇಟ್ಟಿರುವೆ!” ಎಂದು ಹೇಳಿದನು.

11 ಯೇಸು ಮಾಡಿದ ಮೊದಲನೆಯ ಅದ್ಭುತಕಾರ್ಯವಿದು. ಯೇಸು ಇದನ್ನು ಗಲಿಲಾಯದ ಕಾನಾ ಊರಿನಲ್ಲಿ ಮಾಡಿ ತನ್ನ ಮಹತ್ವವನ್ನು ತೋರಿದನು. ಆತನ ಶಿಷ್ಯರೂ ಆತನಲ್ಲಿ ನಂಬಿಕೆ ಇಟ್ಟರು.

12 ಬಳಿಕ ಯೇಸು ಕಪೆರ್ನೌಮ್ ಎಂಬ ಊರಿಗೆ ಹೋದನು. ಯೇಸುವಿನ ತಾಯಿ ಮತ್ತು ಸಹೋದರರು ಹಾಗೂ ಆತನ ಶಿಷ್ಯರು ಆತನೊಡನೆ ಹೋದರು. ಅವರೆಲ್ಲರೂ ಕಪೆರ್ನೌಮ್‌ನಲ್ಲಿ ಕೆಲವು ದಿನ ತಂಗಿದ್ದರು.

ದೇವಾಲಯದಲ್ಲಿ ಯೇಸು

(ಮತ್ತಾಯ 21:12-13; ಮಾರ್ಕ 11:15-17; ಲೂಕ 19:45-46)

13 ಆಗ ಯೆಹೂದ್ಯರ ಪಸ್ಕಹಬ್ಬ ಬಹು ಸಮೀಪವಾಗಿತ್ತು. ಆದ್ದರಿಂದ ಯೇಸು ಜೆರುಸಲೇಮಿಗೆ ಹೋದನು. 14 ದೇವಾಲಯದಲ್ಲಿ ಜನರು ದನ, ಕುರಿ ಮತ್ತು ಪಾರಿವಾಳಗಳನ್ನು ಮಾರುತ್ತಿರುವುದನ್ನು ಯೇಸು ಕಂಡನು. ಇತರ ಕೆಲವು ಜನರು ಮೇಜುಗಳ ಸಮೀಪದಲ್ಲಿ ಕುಳಿತುಕೊಂಡು ಹಣ ವಿನಿಮಯ ಮಾಡುತ್ತಿದ್ದರು ಮತ್ತು ವ್ಯಾಪಾರ ಮಾಡುತ್ತಿದ್ದರು. 15 ಯೇಸು ಹಗ್ಗದ ಕೆಲವು ತುಂಡುಗಳನ್ನು ತೆಗೆದುಕೊಂಡು ಅವುಗಳಿಂದ ಒಂದು ಚಾವಟಿ ಮಾಡಿ ಆ ಜನರನ್ನು ಮತ್ತು ದನಕುರಿಗಳನ್ನು ಬಲವಂತವಾಗಿ ದೇವಾಲಯದಿಂದ ಹೊರಗಟ್ಟಿದನು. ಯೇಸು ಮೇಜುಗಳನ್ನು ಕೆಡವಿ, ಹಣ ವಿನಿಮಯ ಮಾಡುತ್ತಿದ್ದ ಜನರ ಹಣವನ್ನು ಚೆಲ್ಲಿದನು. 16 ಪಾರಿವಾಳಗಳನ್ನು ಮಾರುತ್ತಿದ್ದವರಿಗೆ, “ಇವುಗಳನ್ನು ಹೊರಗೆ ತೆಗೆದುಕೊಂಡು ಹೋಗಿರಿ! ನನ್ನ ತಂದೆಯ ಮನೆಯನ್ನು ವ್ಯಾಪಾರ ಸ್ಥಳವನ್ನಾಗಿ ಮಾಡಬೇಡಿ!” ಎಂದು ಹೇಳಿದನು.

17 “ನಿನ್ನ ಆಲಯದ ಮೇಲಿನ ಅಭಿಮಾನವು ನನ್ನೊಳಗೆ ಬೆಂಕಿಯಂತೆ ಸುಡುತ್ತದೆ”(B)

ಎಂದು ಪವಿತ್ರ ಗ್ರಂಥದಲ್ಲಿ ಬರೆದಿರುವ ವಾಕ್ಯವನ್ನು ಯೇಸುವಿನ ಶಿಷ್ಯರು ಆಗ ಜ್ಞಾಪಿಸಿಕೊಂಡರು.

18 ಯೆಹೂದ್ಯರು ಯೇಸುವಿಗೆ, “ಇಷ್ಟೆಲ್ಲಾ ಮಾಡಲು ನಿನಗೆ ಅಧಿಕಾರವಿದೆ ಎಂದು ರುಜುವಾತುಪಡಿಸಲು ಯಾವ ಸೂಚಕಕಾರ್ಯವನ್ನು ಮಾಡುವೆ?” ಎಂದು ಕೇಳಿದರು.

19 ಯೇಸು, “ಈ ದೇವಾಲಯವನ್ನು ಕೆಡವಿರಿ, ಮೂರು ದಿನಗಳಲ್ಲಿ ಅದನ್ನು ಮತ್ತೆ ಕಟ್ಟುತ್ತೇನೆ” ಎಂದು ಉತ್ತರಕೊಟ್ಟನು.

20 ಯೆಹೂದ್ಯರು, “ಈ ದೇವಾಲಯವನ್ನು ಕಟ್ಟಲು ಜನರು ನಲವತ್ತಾರು ವರ್ಷಗಳ ಕಾಲ ದುಡಿದಿದ್ದಾರೆ! ನೀನು ಮೂರೇ ದಿನಗಳಲ್ಲಿ ಇದನ್ನು ಕಟ್ಟಬಲ್ಲೆಯಾ?” ಎಂದು ಕೇಳಿದರು.

21 (ಆದರೆ ಯೇಸು ತನ್ನ ದೇಹವೇ ದೇವಾಲಯವೆಂಬ ಅರ್ಥದಲ್ಲಿ ಹೇಳಿದ್ದನು. 22 ಯೇಸು ಸತ್ತವರೊಳಗಿಂದ ಎದ್ದುಬಂದಾಗ ಆತನ ಶಿಷ್ಯರು ಆತನ ಈ ಮಾತನ್ನು ಜ್ಞಾಪಿಸಿಕೊಂಡರು. ಅವರು ಪವಿತ್ರ ಗ್ರಂಥವನ್ನು ಮತ್ತು ಆತನು ಹೇಳಿದ ಮಾತುಗಳನ್ನು ನಂಬಿದರು.)

23 ಯೇಸು ಪಸ್ಕಹಬ್ಬಕ್ಕಾಗಿ ಜೆರುಸಲೇಮಿನಲ್ಲಿದ್ದನು. ಆತನು ಮಾಡಿದ ಸೂಚಕಕಾರ್ಯಗಳನ್ನು ನೋಡಿದಾಗ ಅನೇಕ ಜನರು ಆತನನ್ನು ನಂಬಿದರು. 24 ಆದರೆ ಯೇಸು ಅವರಲ್ಲಿ ಭರವಸೆ ಇಡಲಿಲ್ಲ. ಏಕೆಂದರೆ ಆತನು ಅವರನ್ನು ಚೆನ್ನಾಗಿ ಬಲ್ಲವನಾಗಿದ್ದನು. 25 ಜನರ ಬಗ್ಗೆ ಆತನಿಗೆ ಯಾರೂ ತಿಳಿಸುವ ಅಗತ್ಯವಿರಲಿಲ್ಲ. ಮನುಷ್ಯನ ಮನಸ್ಸಿನಲ್ಲಿ ಏನಿದೆ ಎಂಬುದು ಯೇಸುವಿಗೆ ಗೊತ್ತಿತ್ತು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International