Print Page Options
Previous Prev Day Next DayNext

Read the Gospels in 40 Days

Read through the four Gospels--Matthew, Mark, Luke, and John--in 40 days.
Duration: 40 days
Kannada Holy Bible: Easy-to-Read Version (KERV)
Version
ಲೂಕ 10-12

ಸುವಾರ್ತಾಸೇವೆಗೆ ಹೊರಟ ಎಪ್ಪತ್ತೆರಡು ಮಂದಿ

10 ಇದಾದನಂತರ, ಯೇಸು ಇನೂ ಎಪ್ಪತ್ತೆರಡು[a] ಮಂದಿಯನ್ನು ಆರಿಸಿಕೊಂಡು ತಾನು ಹೋಗಬೇಕೆಂದು ಯೋಚಿಸಿದ ಪ್ರತಿಯೊಂದು ಪಟ್ಟಣಕ್ಕೂ ಸ್ಥಳಕ್ಕೂ ಅವರನ್ನು ಇಬ್ಬಿಬ್ಬರನ್ನಾಗಿ ಮುಂಚಿತವಾಗಿ ಕಳುಹಿಸಿದನು. ಯೇಸು ಅವರಿಗೆ, “ಬೆಳೆಯು ಬಹಳ, ಆದರೆ ಕೆಲಸಗಾರರು ಕೆಲವರೇ. ದೇವರೇ ಬೆಳೆಗೆ (ಜನರ) ಯಜಮಾನನು. ಬೆಳೆಯನ್ನು ಒಟ್ಟುಗೂಡಿಸುವುದಕ್ಕಾಗಿ ಹೆಚ್ಚು ಕೆಲಸಗಾರರನ್ನು ಕಳುಹಿಸಿಕೊಡುವಂತೆ ಯಜಮಾನನನ್ನು ಬೇಡಿಕೊಳ್ಳಿರಿ.

“ಈಗ ನೀವು ಹೋಗಬಹುದು. ಆದರೆ ನನ್ನ ಈ ಮಾತನ್ನು ಕೇಳಿರಿ! ತೋಳಗಳ ಮಧ್ಯೆ ಕುರಿಗಳನ್ನು ಕಳುಹಿಸುವಂತೆ ನಾನು ನಿಮ್ಮನು ಕಳುಹಿಸುತ್ತಿದ್ದೇನೆ. ಕೈಚೀಲವನ್ನಾಗಲಿ ಹಣವನ್ನಾಗಲಿ ಅಥವಾ ಪಾದರಕ್ಷೆಗಳನ್ನಾಗಲಿ ತೆಗೆದುಕೊಂಡು ಹೋಗಬೇಡಿರಿ. ದಾರಿಯಲ್ಲಿ ನಿಂತುಕೊಂಡು ಜನರೊಡನೆ ಮಾತನಾಡಬೇಡಿ. ನೀವು ಮನೆಯೊಳಗೆ ಹೋಗುವ ಮೊದಲು, ‘ನಿಮಗೆ ಶುಭವಾಗಲಿ’ ಎಂದು ಹೇಳಿರಿ. ಆ ಮನೆಯಲ್ಲಿ ಶಾಂತಸ್ವಭಾವದ ಮನುಷ್ಯನಿದ್ದರೆ, ನಿಮ್ಮ ಆಶೀರ್ವಾದ ಅವನಿಗೆ ದೊರೆಯುವುದು. ಅವನು ಶಾಂತಸ್ವಭಾವದವನಾಗಿಲ್ಲದಿದ್ದರೆ ನಿಮ್ಮ ಆಶೀರ್ವಾದ ನಿಮಗೇ ಹಿಂತಿರುಗಿ ಬರುವುದು. ಆ ಮನೆಯಲ್ಲಿ ಇಳಿದುಕೊಂಡು ಅವರು ಕೊಡುವುದನ್ನು ತಿನ್ನಿರಿ, ಕುಡಿಯಿರಿ. ಕೆಲಸಗಾರನು ಸಂಬಳಕ್ಕೆ ಯೋಗ್ಯನಾಗಿದ್ದಾನೆ. ಆದ್ದರಿಂದ ಇಳಿದುಕೊಳ್ಳುವುದಕ್ಕಾಗಿ ಆ ಮನೆಯನ್ನು ಬಿಟ್ಟು ಇನ್ನೊಂದು ಮನೆಗೆ ಹೋಗಬೇಡಿರಿ.

“ನೀವು ಒಂದು ಊರಿಗೆ ಹೋದಾಗ ಆ ಊರಿನ ಜನರು ನಿಮ್ಮನ್ನು ಸ್ವಾಗತಿಸಿದರೆ, ಅವರು ಕೊಡುವ ಆಹಾರವನ್ನು ಊಟಮಾಡಿರಿ. ಅಲ್ಲಿಯ ರೋಗಿಗಳನ್ನು ವಾಸಿಮಾಡಿರಿ. ಅಲ್ಲಿಯ ಜನರಿಗೆ, ‘ದೇವರ ರಾಜ್ಯವು ಸಮೀಪಿಸುತ್ತಿದೆ!’ ಎಂದು ತಿಳಿಸಿರಿ.

10 “ಆದರೆ ನೀವು ಒಂದು ಊರಿಗೆ ಹೋದಾಗ, ಅಲ್ಲಿಯ ಜನರು ನಿಮ್ಮನ್ನು ಸ್ವಾಗತಿಸದಿದ್ದರೆ, ನೀವು ಆ ಊರಿನ ಬೀದಿಗಳಿಗೆ ಹೋಗಿ, 11 ‘ನಮ್ಮ ಕಾಲುಗಳಿಗೆ ಹತ್ತಿದ ನಿಮ್ಮ ಊರಿನ ಧೂಳನ್ನು ನಿಮಗೆ ವಿರುದ್ಧವಾಗಿ ಝಾಡಿಸಿಬಿಡುತ್ತೇವೆ. ದೇವರ ರಾಜ್ಯ ಸಮೀಪಿಸುತ್ತಿದೆ ಎಂಬುದು ನಿಮಗೆ ತಿಳಿದಿರಲಿ’ ಎಂದು ಹೇಳಿರಿ. 12 ನ್ಯಾಯತೀರ್ಪಿನ ದಿನದಲ್ಲಿ ಆ ಜನರ ಗತಿಯು ಸೊದೋಮಿನ[b] ಜನರ ಗತಿಗಿಂತಲೂ ಕಠಿಣವಾಗಿರುವುದು” ಎಂದು ಹೇಳಿದನು.

ನಂಬಲೊಲ್ಲದ ಜನರಿಗೆ ಯೇಸುವಿನ ಎಚ್ಚರಿಕೆ

(ಮತ್ತಾಯ 11:20-24)

13 “ಕೊರಾಜಿನೇ, ಬೆತ್ಸಾಯಿದವೇ,[c] ನಿಮ್ಮ ಗತಿಯನ್ನು ಏನು ಹೇಳಲಿ! ನಿಮ್ಮಲ್ಲಿ ನಾನು ಅನೇಕ ಸೂಚಕಕಾರ್ಯಗಳನ್ನು ಮಾಡಿದೆನು. ಅದೇ ಸೂಚಕ ಕಾರ್ಯಗಳು ಟೈರ್ ಮತ್ತು ಸಿದೋನ್ ಪಟ್ಟಣಗಳಲ್ಲಿ ನಡೆದಿದ್ದರೆ, ಅವುಗಳ ಜನರು ಬಹಳ ಹಿಂದೆಯೇ, ತಮ್ಮ ಜೀವಿತಗಳನ್ನು ಮಾರ್ಪಡಿಸಿಕೊಂಡು, ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು, ಗೋಣಿತಟ್ಟನ್ನು ಧರಿಸಿಕೊಂಡು, ಬೂದಿಯನ್ನು ಬಳಿದುಕೊಳ್ಳುತ್ತಿದ್ದರು. 14 ಆದರೆ ನ್ಯಾಯತೀರ್ಪಿನ ದಿನದಲ್ಲಿ ನಿನ್ನ ಸ್ಥಿತಿಯು ಟೈರ್ ಮತ್ತು ಸಿದೋನ್‌ಗಳ ಸ್ಥಿತಿಗಿಂತಲೂ ಕಠಿಣವಾಗಿರುವುದು. 15 ಕಪೆರ್ನೌಮೇ,[d] ನೀನು ಪರಲೋಕಕ್ಕೆ ಏರಿಸಲ್ಪಡುವಿಯೋ? ಇಲ್ಲ! ನೀನು ಪಾತಾಳಕ್ಕೆ ಇಳಿಯುವೆ!

16 “ನಿಮ್ಮ ಮಾತನ್ನು ಕೇಳುವವನು ನನ್ನ ಮಾತನ್ನೇ ಕೇಳುವವನಾಗಿದ್ದಾನೆ. ನಿಮ್ಮನ್ನು ಅಂಗೀಕರಿಸದವನು ನನ್ನನ್ನೇ ಅಂಗಿಕರಿಸದವನಾಗಿದ್ದಾನೆ. ನನ್ನನ್ನು ನಿರಾಕರಿಸುವವನು ನನ್ನನ್ನು ಕಳುಹಿಸಿದಾತನನ್ನೇ (ದೇವರು) ನಿರಾಕರಿಸುವವನಾಗಿದ್ದಾನೆ” ಎಂದು ಹೇಳಿದನು.

ಸೈತಾನನ ಬೀಳುವಿಕೆ

17 ಎಪ್ಪತ್ತೆರಡು ಮಂದಿ ಶಿಷ್ಯರು ತಮ್ಮ ಪ್ರವಾಸದಿಂದ ಹಿಂತಿರುಗಿ ಬಂದಾಗ ಬಹಳ ಸಂತೋಷವಾಗಿದ್ದರು. ಅವರು ಯೇಸುವಿಗೆ, “ಪ್ರಭುವೇ, ನಾವು ನಿನ್ನ ಹೆಸರನ್ನು ಹೇಳಿದಾಗ ದೆವ್ವಗಳು ಸಹ ನಮಗೆ ವಿಧೇಯವಾದವು!” ಎಂದು ಹೇಳಿದರು.

18 ಯೇಸು ಅವರಿಗೆ, “ಸೈತಾನನು ಮಿಂಚಿನೋಪಾದಿಯಲ್ಲಿ ಆಕಾಶದಿಂದ ಕೆಳಗೆ ಬೀಳುವುದನ್ನು ನಾನು ನೋಡಿದೆನು. 19 ಕೇಳಿರಿ! ಹಾವುಗಳ ಮತ್ತು ಚೇಳುಗಳ ಮೇಲೆ ನಡೆಯುವುದಕ್ಕೆ ನಿಮಗೆ ಅಧಿಕಾರ ಕೊಟ್ಟಿದ್ದೇನೆ. ವೈರಿಗಿರುವ ಅಧಿಕಾರಕ್ಕಿಂತಲೂ (ಸೈತಾನ) ಹೆಚ್ಚಿನ ಅಧಿಕಾರವನ್ನು ನಿಮಗೆ ಕೊಟ್ಟಿದ್ದೇನೆ. ಯಾವುದೂ ನಿಮಗೆ ಕೇಡು ಮಾಡುವುದಿಲ್ಲ. 20 ಹೌದು, ದೆವ್ವಗಳೂ ನಿಮಗೆ ವಿಧೇಯವಾಗುತ್ತವೆ. ಈ ಅಧಿಕಾರ ನಿಮಗಿದೆ ಎಂಬುದರ ನಿಮಿತ್ತ ಸಂತೋಷಪಡದೆ ನಿಮ್ಮ ಹೆಸರುಗಳು ಪರಲೋಕದಲ್ಲಿ ಬರೆಯಲ್ಪಟ್ಟಿವೆ ಎಂಬುದಕ್ಕಾಗಿ ಸಂತೋಷಪಡಿರಿ” ಅಂದನು.

ಯೇಸು ತಂದೆಗೆ ಮಾಡಿದ ಪ್ರಾರ್ಥನೆ

(ಮತ್ತಾಯ 11:25-27; 13:16-17)

21 ಬಳಿಕ ಯೇಸು ಪವಿತ್ರಾತ್ಮನ ಮೂಲಕ ಬಹಳ ಸಂತೋಷಗೊಂಡು ಹೀಗೆ ಪ್ರಾರ್ಥಿಸಿದನು: “ಪರಲೋಕ ಭೂಲೋಕಗಳ ಪ್ರಭುವಾದ ತಂದೆಯೇ, ನಾನು ನಿನ್ನನ್ನು ಸ್ತುತಿಸುತ್ತೇನೆ. ನೀನು ಜ್ಞಾನಿಗಳಿಗೂ ಬುದ್ಧಿವಂತರಿಗೂ ಈ ಸಂಗತಿಗಳನ್ನು ಮರೆಮಾಡಿದ್ದಕ್ಕಾಗಿ ನಾನು ನಿನ್ನನ್ನು ಸ್ತುತಿಸುತ್ತೇನೆ. ಆದರೆ ನೀನು ಚಿಕ್ಕಮಕ್ಕಳಂತಿರುವ ಜನರಿಗೆ ಈ ಸಂಗತಿಗಳನ್ನು ಪ್ರಕಟಮಾಡಿದೆ. ಹೌದು, ತಂದೆಯೇ, ಅದೇ ನಿನ್ನ ಅಪೇಕ್ಷೆಯಾಗಿತ್ತು.

22 “ನನ್ನ ತಂದೆಯು ಎಲ್ಲವನ್ನೂ ನನಗೆ ಕೊಟ್ಟಿದ್ದಾನೆ. ಮಗನು ಯಾರೆಂಬುದು ಯಾರಿಗೂ ಗೊತ್ತಿಲ್ಲ. ತಂದೆಯೊಬ್ಬನಿಗೇ ಗೊತ್ತಿದೆ. ತಂದೆಯು ಯಾರೆಂಬುದು ಮಗನಿಗೆ ಮಾತ್ರ ಗೊತ್ತಿದೆ. ಮಗನು ತಂದೆಯ ಬಗ್ಗೆ ಯಾರಿಗೆ ತಿಳಿಸುತ್ತಾನೋ ಅವರು ಮಾತ್ರ ತಂದೆಯ ಬಗ್ಗೆ ತಿಳಿದುಕೊಳ್ಳುವರು.”

23 ಬಳಿಕ ಯೇಸು ತನ್ನ ಶಿಷ್ಯರ ಕಡೆಗೆ ತಿರುಗಿ ನೋಡಿದನು. ಅಲ್ಲಿ ಆತನ ಶಿಷ್ಯರು ಮಾತ್ರವಿದ್ದರು. ಯೇಸು ಅವರಿಗೆ, “ಈಗ ನಡೆಯುವ ಸಂಗತಿಗಳನ್ನು ನೋಡುತ್ತಿರುವ ನೀವು ಧನ್ಯರು! 24 ಅನೇಕ ಪ್ರವಾದಿಗಳೂ ಅರಸರೂ ಈಗ ನೀವು ನೋಡುತ್ತಿರುವ ಈ ಸಂಗತಿಗಳನ್ನು ನೋಡಬೇಕೆಂದು ಮತ್ತು ಈಗ ನೀವು ಕೇಳುತ್ತಿರುವ ಸಂಗತಿಗಳನ್ನು ಕೇಳಬೇಕೆಂದು ಅಪೇಕ್ಷಿಸಿದರು. ಆದರೆ ಅವರಿಗೆ ಸಾಧ್ಯವಾಗಲಿಲ್ಲ” ಎಂದನು.

ಒಳ್ಳೆಯ ಸಮಾರ್ಯದವನ ಸಾಮ್ಯ

25 ಆಗ ಧರ್ಮೋಪದೇಶಕನೊಬ್ಬನು ಯೇಸುವನ್ನು ಪರೀಕ್ಷಿಸಲು ಎದ್ದುನಿಂತು, “ಬೋಧಕನೇ, ನಾನು ನಿತ್ಯಜೀವ ಹೊಂದಲು ಏನು ಮಾಡಬೇಕು?” ಎಂದು ಕೇಳಿದನು.

26 ಯೇಸು ಅವನಿಗೆ, “ಧರ್ಮಶಾಸ್ತ್ರದಲ್ಲಿ ಇದರ ಕುರಿತು ಏನು ಬರೆದಿದೆ?” ಎಂದು ಕೇಳಿದನು.

27 ಅದಕ್ಕೆ ಅವನು, “‘ನೀನು ನಿನ್ನ ಪ್ರಭುವಾದ ದೇವರನ್ನು ಪೂರ್ಣಹೃದಯದಿಂದ, ಪೂರ್ಣಪ್ರಾಣದಿಂದ, ಪೂರ್ಣಶಕ್ತಿಯಿಂದ ಮತ್ತು ಪೂರ್ಣಮನಸ್ಸಿನಿಂದ ಪ್ರೀತಿಸಬೇಕು’(A) ಮತ್ತು ‘ನೀನು ನಿನ್ನನ್ನು ಪ್ರೀತಿಸುವಂತೆ ನಿನ್ನ ನೆರೆಯವರನ್ನು ಪ್ರೀತಿಸಬೇಕು’(B) ಎಂದು ಬರೆದಿದೆ” ಎಂಬುದಾಗಿ ಹೇಳಿದನು.

28 ಯೇಸು, “ನಿನ್ನ ಉತ್ತರ ಸರಿಯಾಗಿದೆ. ನೀನು ಹಾಗೆಯೇ ಮಾಡು, ಆಗ ನಿನಗೆ ನಿತ್ಯಜೀವ ದೊರೆಯುವುದು” ಅಂದನು.

29 ಆದರೆ ಆ ಮನುಷ್ಯನು ತನ್ನನ್ನು ನೀತಿವಂತನೆಂದು ತೋರಿಸಿಕೊಳ್ಳಲು ಬಯಸಿ, ಯೇಸುವಿಗೆ, “ನಾನು ಪ್ರೀತಿಸಬೇಕಾದ ನೆರೆಯವರು ಯಾರು?” ಎಂದು ಕೇಳಿದನು.

30 ಆಗ ಯೇಸು ಅವನಿಗೆ ಹೇಳಿದ್ದೇನೆಂದರೆ: “ಒಬ್ಬ ಮನುಷ್ಯನು ಜೆರುಸಲೇಮಿನಿಂದ ಇಳಿದು ಜೆರಿಕೊವಿನ ಮಾರ್ಗವಾಗಿ ಹೋಗುತ್ತಿದ್ದನು. ಕೆಲವು ದರೋಡೆಗಾರರು ಅವನನ್ನು ಸುತ್ತುಗಟ್ಟಿದರು. ಅವರು ಅವನ ಬಟ್ಟೆಯನ್ನು ಹರಿದುಹಾಕಿ ಅವನನ್ನು ಹೊಡೆದರು. ಅವನು ಮೇಲೇಳಲಾರದೆ ನೆಲದಮೇಲೆ ಬಿದ್ದುಕೊಂಡನು. ದರೋಡೆಗಾರರು ಅವನನ್ನು ನೆಲದ ಮೇಲೆಯೇ ಬಿಟ್ಟುಹೋದರು. ಅವನು ಸಾಯುವ ಸ್ಥಿತಿಯಲ್ಲಿದ್ದನು.

31 “ಅದೇ ಸಮಯದಲ್ಲಿ ಯೆಹೂದ್ಯ ಯಾಜಕನು ಆ ದಾರಿಯಲ್ಲಿ ಹೋಗುತ್ತಿದ್ದನು. ಯಾಜಕನು ಆ ಮನುಷ್ಯನನ್ನು ನೋಡಿದರೂ ಅವನಿಗೆ ಸಹಾಯಮಾಡದೆ, ತನ್ನ ಪ್ರಯಾಣವನ್ನು ಮುಂದುವರಿಸಿದನು. 32 ನಂತರ, ಒಬ್ಬ ಲೇವಿಯು ಅದೇ ದಾರಿಯಲ್ಲಿ ಹೋಗುತ್ತಾ ಅವನ ಹತ್ತಿರ ಬಂದನು. ಲೇವಿಯು ಗಾಯಗೊಂಡಿದ್ದ ಮನುಷ್ಯನನ್ನು ನೋಡಿದರೂ ಅವನಿಗೆ ಸಹಾಯ ಮಾಡದೆ ತನ್ನ ಪ್ರಯಾಣವನ್ನು ಮುಂದುವರಿಸಿದನು.

33 “ಬಳಿಕ ಒಬ್ಬ ಸಮಾರ್ಯದವನು ಆ ದಾರಿಯಲ್ಲಿ ಪ್ರಯಾಣ ಮಾಡುತ್ತಾ ಆ ಸ್ಥಳಕ್ಕೆ ಬಂದನು. ಅವನು ಗಾಯಗೊಂಡಿದ್ದ ಮತ್ತು ದಾರಿಯಲ್ಲಿ ಬಿದ್ದುಕೊಂಡಿದ್ದ ಮನುಷ್ಯನನ್ನು ನೋಡಿ ಬಹಳ ಮರುಕಗೊಂಡನು. 34 ಸಮಾರ್ಯದವನು ಅವನ ಬಳಿಗೆ ಹೋಗಿ ಅವನ ಗಾಯಗಳಿಗೆ ಆಲಿವ್ ಎಣ್ಣೆಯನ್ನೂ ದ್ರಾಕ್ಷಾರಸವನ್ನೂ ಹಚ್ಚಿ ಬಟ್ಟೆಯಿಂದ ಕಟ್ಟಿದನು. ಸಮಾರ್ಯದವನು ಒಂದು ಕತ್ತೆಯ ಮೇಲೆ ಪ್ರಯಾಣ ಮಾಡುತ್ತಾ ಅಲ್ಲಿಗೆ ಬಂದಿದ್ದನು. ಗಾಯಗೊಂಡಿದ್ದ ಆ ಮನುಷ್ಯನನ್ನು ಅವನು ತನ್ನ ಕತ್ತೆಯ ಮೇಲೆ ಕುಳ್ಳಿರಿಸಿ, ಛತ್ರಕ್ಕೆ ಕರೆದುಕೊಂಡು ಹೋಗಿ, ಅವನನ್ನು ಆರೈಕೆ ಮಾಡಿದನು. 35 ಮರುದಿನ, ಸಮಾರ್ಯದವನು ಎರಡು ಬೆಳ್ಳಿ ನಾಣ್ಯಗಳನ್ನು ಆ ಛತ್ರದವನಿಗೆ ಕೊಟ್ಟು, ‘ಗಾಯಗೊಂಡ ಇವನನ್ನು ಆರೈಕೆ ಮಾಡು. ಇದಕ್ಕಿಂತ ಹೆಚ್ಚಾಗಿ ಖರ್ಚಾದರೆ ನಾನು ಮತ್ತೆ ಬಂದಾಗ ನಿನಗೆ ಕೊಡುತ್ತೇನೆ’ ಎಂದು ಹೇಳಿದನು.”

36 ಯೇಸು ಅವನಿಗೆ, “ಈ ಮೂವರಲ್ಲಿ (ಯಾಜಕ, ಲೇವಿ ಮತ್ತು ಸಮಾರ್ಯದವನು) ಯಾವನು ದರೋಡೆಗಾರರಿಂದ ಗಾಯಗೊಂಡಿದ್ದ ಮನುಷ್ಯನಿಗೆ ಪ್ರೀತಿ ತೋರಿಸಿದನು?” ಎಂದು ಕೇಳಿದನು.

37 ಧರ್ಮೋಪದೇಶಕನು, “ಅವನಿಗೆ ಸಹಾಯ ಮಾಡಿದವನೇ” ಎಂದು ಉತ್ತರಿಸಿದನು.

ಆಗ ಯೇಸು ಅವನಿಗೆ, “ಹಾಗಾದರೆ, ನೀನು ಹೋಗಿ ನೆರೆಯವರಿಗೆ[e] ಹಾಗೆಯೇ ಮಾಡು!” ಎಂದನು.

ಮರಿಯಳು ಮತ್ತು ಮಾರ್ಥಳು

38 ಯೇಸು ಮತ್ತು ಆತನ ಶಿಷ್ಯರು ಪ್ರಯಾಣ ಮಾಡುತ್ತಾ ಒಂದು ಊರಿಗೆ ಬಂದರು. ಮಾರ್ಥಳೆಂಬ ಸ್ತ್ರೀ ಯೇಸುವನ್ನು ತನ್ನ ಮನೆಗೆ ಆಮಂತ್ರಿಸಿದಳು. 39 ಆಕೆಗೆ ಮರಿಯಳೆಂಬ ತಂಗಿ ಇದ್ದಳು. ಮರಿಯಳು ಯೇಸುವಿನ ಪಾದಗಳ ಬಳಿ ಕುಳಿತುಕೊಂಡು ಆತನ ಉಪದೇಶವನ್ನು ಕೇಳುತ್ತಿದ್ದಳು. ಆದರೆ ಆಕೆಯ ಸಹೋದರಿಯಾದ ಮಾರ್ಥಳು ಅತಿಥಿಸತ್ಕಾರ ಮಾಡುತ್ತಿದ್ದಳು. 40 ಮನೆಯಲ್ಲಿ ಬಹಳ ಕೆಲಸವಿದ್ದುದರಿಂದ ಮಾರ್ಥಳು ಕೋಪಗೊಂಡು ಯೇಸುವಿನ ಬಳಿಗೆ ಬಂದು, “ಪ್ರಭುವೇ, ನನ್ನ ತಂಗಿಯು ಮನೆಯ ಕೆಲಸವನ್ನೆಲ್ಲಾ ನನಗೇ ಬಿಟ್ಟುಬಂದಿದ್ದಾಳೆ. ಇದರ ಬಗ್ಗೆ ನಿನಗೆ ಚಿಂತೆಯಿಲ್ಲವೋ? ನನಗೆ ಸಹಾಯ ಮಾಡಲು ಆಕೆಗೆ ಹೇಳು?” ಎಂದಳು.

41 ಆದರೆ ಪ್ರಭುವು ಅವಳಿಗೆ, “ಮಾರ್ಥಾ, ಮಾರ್ಥಾ, ನೀನು ಅನೇಕ ಕೆಲಸಗಳ ಬಗ್ಗೆ ಚಿಂತಿಸುತ್ತಾ ಗಲಿಬಿಲಿಯಾಗಿರುವೆ. 42 ಒಂದೇ ಒಂದು ಮುಖ್ಯವಾದದ್ದು. ಮರಿಯಳು ಮಾಡಿದ ಆಯ್ಕೆ ಸರಿಯಾದದ್ದು. ಆಕೆಯಿಂದ ಅದು ಎಂದಿಗೂ ತೆಗೆಯಲ್ಪಡುವುದಿಲ್ಲ” ಎಂದನು.

ಪ್ರಾರ್ಥನೆಯ ಕುರಿತು ಯೇಸುವಿನ ಉಪದೇಶ

(ಮತ್ತಾಯ 6:9-15)

11 ಒಮ್ಮೆ ಯೇಸು ಒಂದು ಸ್ಥಳದಲ್ಲಿ ಪ್ರಾರ್ಥಿಸುತ್ತಿದ್ದನು. ಯೇಸು ಪ್ರಾರ್ಥನೆ ಮಾಡಿ ಮುಗಿಸಿದಾಗ, ಆತನ ಶಿಷ್ಯರಲ್ಲೊಬ್ಬನು, “ಪ್ರಭುವೇ, ಯೋಹಾನನು ತನ್ನ ಶಿಷ್ಯರಿಗೆ ಪ್ರಾರ್ಥಿಸುವ ವಿಧಾನವನ್ನು ಕಲಿಸಿದಂತೆ, ದಯಮಾಡಿ ನಮಗೂ ಪ್ರಾರ್ಥಿಸುವ ವಿಧಾನವನ್ನು ಹೇಳಿಕೊಡು” ಎಂದನು.

ಯೇಸು ಅವರಿಗೆ ಹೀಗೆಂದನು: “ನೀವು ಹೀಗೆ ಪ್ರಾರ್ಥಿಸಿರಿ:

‘ತಂದೆಯೇ, ನಿನ್ನ ನಾಮವು ಯಾವಾಗಲೂ ಪರಿಶುದ್ಧವಾಗಿರಲಿ.
ನಿನ್ನ ರಾಜ್ಯವು ಬರಲಿ.
ನಮ್ಮ ಅನುದಿನದ ಆಹಾರವನ್ನು ನಮಗೆ ದಯಪಾಲಿಸು.
ನಮಗೆ ತಪ್ಪುಮಾಡಿದವರನ್ನು ನಾವು ಕ್ಷಮಿಸುವಂತೆ
    ನಮ್ಮಪಾಪಗಳನ್ನೂ ಕ್ಷಮಿಸು.
ನಮ್ಮನ್ನು ಶೋಧನೆಗೆ ಒಳಪಡಿಸಬೇಡ.’”

ಎಡಬಿಡದೆ ಪ್ರಾರ್ಥಿಸಿ

(ಮತ್ತಾಯ 7:7-11)

5-6 ಆಗ ಯೇಸು ಅವರಿಗೆ, “ನಿಮ್ಮಲ್ಲಿ ಒಬ್ಬನು ತನ್ನ ಸ್ನೇಹಿತನೊಬ್ಬನ ಮನೆಗೆ ರಾತ್ರಿ ಬಹಳ ತಡವಾಗಿ ಹೋಗಿದ್ದಾನೆ ಎಂದು ಭಾವಿಸಿಕೊಳ್ಳೋಣ. ಅವನು ತನ್ನ ಸ್ನೇಹಿತನಿಗೆ, ‘ನನ್ನ ಗೆಳೆಯನೊಬ್ಬನು ನನ್ನನ್ನು ನೋಡಲು ದೂರದಿಂದ ನಮ್ಮ ಮನೆಗೆ ಬಂದಿದ್ದಾನೆ. ಆದರೆ ಅವನಿಗೆ ಊಟಕ್ಕೆ ಕೊಡಲು ನನಲ್ಲಿ ಏನೂ ಇಲ್ಲ. ದಯಮಾಡಿ ನನಗೆ ಮೂರು ರೊಟ್ಟಿಗಳನ್ನು ಕೊಡು’ ಎಂದು ಕೇಳುತ್ತಾನೆ. ಮನೆಯೊಳಗಿರುವ ಸ್ನೇಹಿತನು, ‘ಹೊರಟುಹೋಗು! ನನಗೆ ತೊಂದರೆ ಕೊಡಬೇಡ! ಬಾಗಿಲು ಮುಚ್ಚಿದೆ! ನಾನು ಮತ್ತು ನನ್ನ ಮಕ್ಕಳು ಮಲಗಿದ್ದೇವೆ. ಈಗ ಎದ್ದು ನಿನಗೆ ರೊಟ್ಟಿ ಕೊಡಲಾರೆ’ ಎಂದು ಉತ್ತರಕೊಡುತ್ತಾನೆ. ಕೇವಲ ಸ್ನೇಹವೊಂದೇ ಅವನನ್ನು ಏಳಿಸಿ ರೊಟ್ಟಿ ಕೊಡುವಂತೆ ಮಾಡಲಾರದೆಂದು ನಾನು ನಿಮಗೆ ಹೇಳುತ್ತೇನೆ. ಆದರೆ ಅವನು ಎಡಬಿಡದೆ ಕೇಳುತ್ತಲೇ ಇದ್ದರೆ, ಅವನು ಎದ್ದು ತನ್ನ ಸ್ನೇಹಿತನಿಗೆ ಬೇಕಾಗಿರುವ ರೊಟ್ಟಿಯನ್ನು ಖಂಡಿತವಾಗಿ ಕೊಡುವನು. ಆದ್ದರಿಂದ ನಾನು ನಿಮಗೆ ಹೇಳುವುದೇನೆಂದರೆ, ಬೇಡಿಕೊಳ್ಳಿರಿ, ನಿಮಗೆ ದೊರೆಯುವುದು. ಹುಡುಕಿರಿ, ಆಗ ನೀವು ಕಂಡುಕೊಳ್ಳುವಿರಿ. ತಟ್ಟಿರಿ, ಆಗ ನಿಮಗೆ ಬಾಗಿಲು ತೆರೆಯುವುದು. 10 ಹೌದು, ಎಡಬಿಡದೆ ಬೇಡಿಕೊಳ್ಳುವವನಿಗೆ ದೊರೆಯುವುದು. ಎಡಬಿಡದೆ ಹುಡುಕುವವನು ಕಂಡುಕೊಳ್ಳುವನು. ಒಬ್ಬನು ಎಡಬಿಡದೆ ತಟ್ಟುತ್ತಿದ್ದರೆ, ಅವನಿಗೆ ಬಾಗಿಲು ತೆರೆಯಲ್ಪಡುವುದು. 11 ನಿಮ್ಮಲ್ಲಿ ಎಷ್ಟು ಜನರು ತಂದೆಗಳಾಗಿದ್ದೀರಿ? ನಿಮ್ಮ ಮಗನು ಮೀನನ್ನು ಕೇಳಿದರೆ, ನೀವು ಅವನಿಗೆ ಹಾವನ್ನು ಕೊಡುವಿರೋ? ಇಲ್ಲ! ನೀವು ಮೀನನ್ನೇ ಕೊಡುತ್ತೀರಿ. 12 ನಿಮ್ಮ ಮಗನು ಮೊಟ್ಟೆಯನ್ನು ಕೇಳಿದರೆ, ನೀವು ಅವನಿಗೆ ಚೇಳನ್ನು ಕೊಡುವಿರೋ? ಇಲ್ಲ! 13 ನೀವು ಇತರ ಜನರಂತೆ ಕೆಟ್ಟವರಾಗಿದ್ದೀರಿ. ಆದರೆ ನಿಮ್ಮ ಮಕ್ಕಳಿಗೆ ಒಳ್ಳೆಯ ಪದಾರ್ಥಗಳನ್ನು ಕೊಡುತ್ತೀರಿ. ಅದೇ ರೀತಿಯಲ್ಲಿ ಪರಲೋಕದಲ್ಲಿರುವ ನಿಮ್ಮ ತಂದೆಯು ಸಹ ತನ್ನನ್ನು ಬೇಡಿಕೊಳ್ಳುವವರಿಗೆ ಪವಿತ್ರಾತ್ಮನನ್ನು ಖಂಡಿತವಾಗಿ ಕೊಡುತ್ತಾನೆ” ಎಂದು ಹೇಳಿದನು.

ಯೇಸುವಿನ ಶಕ್ತಿ ದೇವರಿಂದ ಬಂದದ್ದು

(ಮತ್ತಾಯ 12:22-30; ಮಾರ್ಕ 3:20-27)

14 ಒಮ್ಮೆ ಯೇಸು ಮೂಕದೆವ್ವದಿಂದ ಪೀಡಿತನಾಗಿದ್ದ ಒಬ್ಬನನ್ನು ಬಿಡಿಸುತ್ತಿದ್ದನು. ಆ ದೆವ್ವವು ಅವನನ್ನು ಬಿಟ್ಟು ಹೊರಗೆ ಬಂದಾಗ ಅವನು ಮಾತಾಡಿದನು. ಇದನ್ನು ಕಂಡ ಜನರು ಬೆರಗಾದರು. 15 ಆದರೆ ಕೆಲವರು, “ದೆವ್ವದಿಂದ ಪೀಡಿತರಾಗಿರುವವರನ್ನು ಇವನು ಬೆಲ್ಜೆಬೂಲನ ಶಕ್ತಿಯಿಂದ ಬಿಡಿಸುತ್ತಾನೆ. ಬೆಲ್ಜೆಬೂಲನು ದೆವ್ವಗಳ ಅಧಿಪತಿ” ಎಂದು ಹೇಳಿದರು.

16 ಇತರ ಜನರು ಯೇಸುವನ್ನು ಪರೀಕ್ಷಿಸಬೇಕೆಂದು ದೇವರಿಂದ ಒಂದು ಸೂಚಕಕಾರ್ಯವನ್ನು ನಮಗೆ ತೋರಿಸು ಎಂದು ಕೇಳಿದರು. 17 ಆದರೆ ಅವರ ಆಲೋಚನೆಯನ್ನು ತಿಳಿದಿದ್ದ ಯೇಸು ಅವರಿಗೆ, “ಒಡೆದುಹೋದ ಮತ್ತು ತನಗೆ ವಿರುದ್ಧವಾಗಿ ತಾನೇ ಕಾದಾಡುವ ರಾಜ್ಯವು ನಾಶವಾಗುವುದು. ಭೇದಭಾವದಿಂದ ಕೂಡಿರುವ ಕುಟುಂಬವು ಮುರಿದು ಹೋಗುವುದು. 18 ಅಂತೆಯೇ, ಸೈತಾನನು ತನಗೆ ವಿರುದ್ಧವಾಗಿ ತಾನೇ ಕಾದಾಡಿದರೆ ಅವನ ರಾಜ್ಯವು ಮುಂದುವರಿಯಲು ಹೇಗೆ ಸಾಧ್ಯ? ನಾನು ದೆವ್ವಗಳನ್ನು ಬೆಲ್ಜೆಬೂಲನ ಶಕ್ತಿಯಿಂದ ಬಿಡಿಸುತ್ತೇನೆಂದು ನೀವು ಹೇಳುತ್ತೀರಿ. 19 ನಾನು ಬೆಲ್ಜೆಬೂಲನ ಶಕ್ತಿಯಿಂದ ದೆವ್ವಗಳನ್ನು ಬಿಡಿಸುವುದಾಗಿದ್ದರೆ, ನಿಮ್ಮ ಜನರು ದೆವ್ವಗಳನ್ನು ಯಾವ ಶಕ್ತಿಯಿಂದ ಬಿಡಿಸುತ್ತಾರೆ? ಆದ್ದರಿಂದ ನಿಮ್ಮ ಸ್ವಂತ ಜನರೇ ನಿಮ್ಮನು ತಪ್ಪಿತಸ್ಥರೆಂದು ಹೇಳುತ್ತಾರೆ. 20 ಆದರೆ ನಾನು ದೆವ್ವಗಳನ್ನು ದೇವರ ಬಲದಿಂದ ಹೊರಡಿಸುವುದಾದರೆ ದೇವರ ರಾಜ್ಯವು ನಿಮ್ಮ ಬಳಿಗೆ ಬಂದಿದೆ ಎಂಬುದಕ್ಕೆ ಇದೇ ಸಾಕ್ಷಿಯಾಗಿದೆ.

21 “ಒಬ್ಬ ಬಲಿಷ್ಠನು ಅನೇಕ ಆಯುಧಗಳಿಂದ ಸುಸಜ್ಜಿತನಾಗಿ ತನ್ನ ಮನೆಯನ್ನು ಕಾಯುತ್ತಿರುವಾಗ, ಮನೆಯೊಳಗಿರುವ ವಸ್ತುಗಳು ಸುರಕ್ಷಿತವಾಗಿರುತ್ತವೆ. 22 ಆದರೆ ಅವನಿಗಿಂತಲೂ ಬಲಿಷ್ಠನಾದ ಮತ್ತೊಬ್ಬನು ಬಂದು ಅವನನ್ನು ಸೋಲಿಸಿದರೆ, ಮೊದಲನೆಯ ಬಲಿಷ್ಠನು ತನ್ನ ಮನೆಯನ್ನು ಸುರಕ್ಷಿತವಾಗಿಡುವುದಕ್ಕಾಗಿ ಅವಲಂಬಿಸಿಕೊಂಡಿದ್ದ ಆಯುಧಗಳನ್ನೆಲ್ಲಾ ಆ ಮತ್ತೊಬ್ಬ ಬಲಿಷ್ಠನು ತೆಗೆದುಕೊಂಡು ಹೋಗುವನು. ಬಳಿಕ ಆ ಮತ್ತೊಬ್ಬ ಬಲಿಷ್ಠನು ಆ ಮನುಷ್ಯನ ವಸ್ತುಗಳನ್ನು ತನಗೆ ಇಷ್ಟಬಂದ ಹಾಗೆ ಮಾಡುವನು.

23 “ನನ್ನೊಂದಿಗಿಲ್ಲದವನು ನನಗೆ ವಿರೋಧವಾಗಿದ್ದಾನೆ. ನನ್ನೊಂದಿಗೆ ಶೇಖರಿಸದವನು ಚದರಿಸುವವನಾಗಿದ್ದಾನೆ.

ಬರಿದಾದ ಹೃದಯ

(ಮತ್ತಾಯ 12:43-45)

24 “ದೆವ್ವವು ಒಬ್ಬ ವ್ಯಕ್ತಿಯಿಂದ ಹೊರಗೆ ಬಂದ ಮೇಲೆ ವಿಶ್ರಾಂತಿಗಾಗಿ ಸ್ಥಳವನ್ನು ಹುಡುಕುತ್ತಾ ನೀರಿಲ್ಲದ ಸ್ಥಳಗಳಲ್ಲಿ ಅಲೆದಾಡುತ್ತದೆ. ಆದರೆ ವಿಶ್ರಮಿಸಿಕೊಳ್ಳಲು ಅದಕ್ಕೆ ಸ್ಥಳ ದೊರೆಯುವುದಿಲ್ಲ. ಆದ್ದರಿಂದ ‘ನಾನು ಬಿಟ್ಟುಬಂದ ಮನೆಗೆ (ವ್ಯಕ್ತಿ) ಹಿಂತಿರುಗುವೆನು’ ಎಂದುಕೊಳ್ಳುತ್ತದೆ. 25 ಅದು ಆ ವ್ಯಕ್ತಿಯ ಬಳಿಗೆ ಹಿಂತಿರುಗಿ ಬಂದಾಗ, ಆ ಮನೆಯನ್ನು (ವ್ಯಕ್ತಿ) ಗುಡಿಸಿ ಅಲಂಕರಿಸಿರುವುದನ್ನು ಕಾಣುತ್ತದೆ. 26 ಆಗ ಹೊರಟುಹೋಗಿ ತನಗಿಂತಲೂ ಹೆಚ್ಚು ಕೆಟ್ಟವುಗಳಾದ ಬೇರೆ ಏಳು ದೆವ್ವಗಳನ್ನು ಕರೆದುಕೊಂಡು ಬರುತ್ತದೆ. ಬಳಿಕ ಆ ದೆವ್ವಗಳೆಲ್ಲಾ ಆ ಮನುಷ್ಯನೊಳಗೆ ಹೋಗಿ ಅಲ್ಲೇ ವಾಸಿಸುತ್ತವೆ. ಆಗ ಆ ವ್ಯಕ್ತಿಯು ಮೊದಲಿಗಿಂತಲೂ ಹೆಚ್ಚಿನ ಸಂಕಟಕ್ಕೆ ಒಳಗಾಗುತ್ತಾನೆ” ಎಂದು ಹೇಳಿದನು.

ನಿಜವಾದ ಭಾಗ್ಯವಂತರು

27 ಯೇಸು ಈ ಸಂಗತಿಗಳನ್ನು ಹೇಳಿದಾಗ, ಅಲ್ಲಿ, ಜನರೊಂದಿಗಿದ್ದ ಒಬ್ಬ ಸ್ತ್ರೀ ಯೇಸುವಿಗೆ, “ನಿನ್ನನ್ನು ಹೆತ್ತು ಪೋಷಿಸಿದ ತಾಯಿ ಭಾಗ್ಯವಂತಳೇ ಸರಿ!” ಎಂದು ಹೇಳಿದಳು.

28 ಆದರೆ ಯೇಸು, “ದೇವರ ವಾಕ್ಯವನ್ನು ಕೇಳಿ ಅದಕ್ಕೆ ವಿಧೇಯರಾಗುವ ಜನರೇ ಭಾಗ್ಯವಂತರು!” ಎಂದನು.

ನಮಗೆ ಸಾಕ್ಷಿ ಕೊಡು!

(ಮತ್ತಾಯ 12:38-42; ಮಾರ್ಕ 8:12)

29 ಜನರ ಗುಂಪು ದೊಡ್ಡದಾಗುತ್ತಿರಲು ಯೇಸು ಅವರಿಗೆ, “ಈ ಸಂತತಿಯು ಕೆಟ್ಟ ಸಂತತಿಯೇ ಸರಿ! ಇದು ಸೂಚಕಕಾರ್ಯವನ್ನು ನೋಡಬೇಕೆನ್ನುತ್ತದೆ. ಆದರೆ ಯೋನನ ಜೀವಿತದಲ್ಲಾದ ಸೂಚಕಕಾರ್ಯದ ಹೊರತು ಬೇರೆ ಯಾವುದೂ ಇದಕ್ಕೆ ದೊರೆಯುವುದಿಲ್ಲ. 30 ನಿನೆವೆಯಲ್ಲಿ ಜೀವಿಸುತ್ತಿದ್ದ ಜನರಿಗೆ ಯೋನನು ಒಂದು ಸೂಚನೆಯಾಗಿದ್ದನು. ಅದೇ ರೀತಿಯಲ್ಲಿ ಈ ಕಾಲದ ಜನರಿಗೆ ಮನುಷ್ಯಕುಮಾರನು ಸೂಚನೆಯಾಗಿದ್ದಾನೆ.

31 “ನ್ಯಾಯತೀರ್ಪಿನ ದಿನದಲ್ಲಿ ದಕ್ಷಿಣ ದೇಶದ ರಾಣಿಯು ಈ ಪೀಳಿಗೆಯವರೊಂದಿಗೆ ಎದ್ದುನಿಂತು ಇವರನ್ನು ಅಪರಾಧಿಗಳೆಂದು ಹೇಳುವಳು. ಏಕೆಂದರೆ ಆ ರಾಣಿಯು ಬಹುದೂರದಿಂದ ಸೊಲೊಮೋನನ ಜ್ಞಾನಬೋಧನೆಯನ್ನು ಕೇಳಲು ಬಂದಳು. ಆದರೆ ನಾನು ನಿಮಗೆ ಹೇಳುವುದೇನೆಂದರೆ, ನಾನು ಸೊಲೊಮೋನನಿಗಿಂತಲೂ ಹೆಚ್ಚಿನವನಾಗಿದ್ದೇನೆ!

32 “ನ್ಯಾಯತೀರ್ಪಿನ ದಿನದಲ್ಲಿ ನಿನೆವೆ ಪಟ್ಟಣದವರು ಈ ಸಂತತಿಗೆ ಎದುರಾಗಿ ನಿಂತು ಇವರನ್ನು ಅಪರಾಧಿಗಳೆಂದು ತೋರಿಸುವರು. ಏಕೆಂದರೆ ಅವರು ಪ್ರವಾದಿಯಾದ ಯೋನನ ಬೋಧನೆಯನ್ನು ಕೇಳಿ ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡರು. ಆದರೆ ನಾನು ಪ್ರವಾದಿ ಯೋನನಿಗಿಂತಲೂ ಹೆಚ್ಚಿನವನಾಗಿದ್ದೇನೆ.

ಲೋಕಕ್ಕೆ ಬೆಳಕಾಗಿರಿ!

(ಮತ್ತಾಯ 5:15; 6:22-23)

33 “ದೀಪವನ್ನು ಹಚ್ಚಿ ಪಾತ್ರೆಯೊಳಗಾಗಲಿ ಬೇರೆ ಎಲ್ಲೇ ಆಗಲಿ ಅಡಗಿಸಿಡುವುದಿಲ್ಲ. ಒಳಗೆ ಬರುವವರಿಗೆ ಬೆಳಕು ಕಾಣಿಸಲೆಂದು ದೀಪವನ್ನು ದೀಪಸ್ತಂಭದ ಮೇಲೆ ಇಡುತ್ತಾರೆ. 34 ನಿನ್ನ ಕಣ್ಣು ದೇಹಕ್ಕೆ ಬೆಳಕಾಗಿದೆ, ನಿನ್ನ ಕಣ್ಣು ಒಳ್ಳೆಯದಾಗಿದ್ದರೆ, ನಿನ್ನ ದೇಹವೆಲ್ಲಾ ಪೂರ್ಣ ಬೆಳಕಾಗಿರುವುದು. ನಿನ್ನ ಕಣ್ಣು ಕೆಟ್ಟದ್ದಾಗಿದ್ದರೆ, ನಿನ್ನ ದೇಹವೆಲ್ಲಾ ಪೂರ್ಣಕತ್ತಲಾಗಿರುವುದು. 35 ಆದ್ದರಿಂದ ಎಚ್ಚರಿಕೆಯಾಗಿರು! ನಿನ್ನೊಳಗಿರುವ ಬೆಳಕು ಕತ್ತಲಾಗದಂತೆ ನೋಡಿಕೊ. 36 ನಿನ್ನ ದೇಹವೆಲ್ಲಾ ಬೆಳಕಿನಿಂದ ತುಂಬಿದ್ದು ಯಾವ ಭಾಗದಲ್ಲಿಯೂ ಕತ್ತಲಿಲ್ಲದಿದ್ದರೆ ನೀನು ಪ್ರಜ್ವಲಿಸುವ ಬೆಳಕಿನಂತಿರುವೆ” ಎಂದು ಹೇಳಿದನು.

ಯೇಸು ಫರಿಸಾಯರನ್ನು ಖಂಡಿಸಿದನು

(ಮತ್ತಾಯ 23:1-36; ಮಾರ್ಕ 12:38-40; ಲೂಕ 20:45-47)

37 ಯೇಸು ಮಾತಾಡಿ ಮುಗಿಸಿದ ಮೇಲೆ ಫರಿಸಾಯನೊಬ್ಬನು ಯೇಸುವನ್ನು ತನ್ನ ಮನೆಗೆ ಊಟಕ್ಕೆ ಬರಬೇಕೆಂದು ಕರೆದನು. ಆದ್ದರಿಂದ ಯೇಸು ಅವನ ಮನೆಯೊಳಗೆ ಹೋಗಿ ಊಟಕ್ಕೆ ಕುಳಿತುಕೊಂಡನು. 38 ಆದರೆ ಯೇಸು ತನ್ನ ಕೈಗಳನ್ನು ತೊಳೆದುಕೊಳ್ಳದೆ ಊಟಕ್ಕೆ ಕುಳಿತಿರುವುದನ್ನು ಕಂಡಾಗ ಫರಿಸಾಯನಿಗೆ ಆಶ್ಚರ್ಯವಾಯಿತು. 39 ಪ್ರಭುವು (ಯೇಸು) ಅವನಿಗೆ ಹೇಳಿದ್ದೇನೆಂದರೆ: “ಫರಿಸಾಯರಾದ ನೀವು ಪಾತ್ರೆಯ ಮತ್ತು ಬಟ್ಟಲಿನ ಹೊರಭಾಗವನ್ನು ಶುಚಿಮಾಡುತ್ತೀರಿ. ಆದರೆ ನಿಮ್ಮ ಒಳಭಾಗವು ಮೋಸದಿಂದಲೂ ಕೆಟ್ಟತನದಿಂದಲೂ ತುಂಬಿಹೋಗಿದೆ. 40 ನೀವು ಬುದ್ಧಿಹೀನರು! ಹೊರಭಾಗವನ್ನು ಮಾಡಿದಾತನೇ (ದೇವರು) ಒಳಭಾಗವನ್ನೂ ಮಾಡಿದ್ದಾನೆ. 41 ಆದ್ದರಿಂದ ಪಾತ್ರೆ ಮತ್ತು ಬಟ್ಟಲುಗಳ ಒಳಗಿರುವುದನ್ನು ಬಡವರಿಗೆ ದಾನಮಾಡಿರಿ. ಆಗ ನೀವು ಪೂರ್ಣಶುದ್ಧರಾಗುತ್ತೀರಿ.

42 “ಫರಿಸಾಯರೇ, ನಿಮ್ಮ ಗತಿಯನ್ನು ಏನು ಹೇಳಲಿ! ನೀವು ದೇವರಿಗೆ ನಿಮ್ಮಲ್ಲಿರುವ ಪ್ರತಿಯೊಂದರಲ್ಲಿಯೂ ಹತ್ತನೆಯ ಒಂದು ಭಾಗವನ್ನು ಕೊಡುತ್ತೀರಿ. ನಿಮ್ಮ ತೋಟದಲ್ಲಿ ಬೆಳೆಯುವ ಮರುಗ, ಸದಾಪು ಮುಂತಾದ ಚಿಕ್ಕ ಸಸಿಗಳಲ್ಲಿಯೂ ಹತ್ತನೆಯ ಒಂದು ಭಾಗವನ್ನು ಕೊಡುತ್ತೀರಿ. ಆದರೆ ಬೇರೆಯವರಿಗೆ ನ್ಯಾಯತೋರಿಸುವುದನ್ನೂ ದೇವರನ್ನು ಪ್ರೀತಿಸುವುದನ್ನೂ ಮರೆತುಬಿಟ್ಟಿದ್ದೀರಿ. ನೀವು ಮೊದಲು ಇವುಗಳನ್ನು ಮಾಡಬೇಕು ಮತ್ತು ಉಳಿದವುಗಳನ್ನು ಕಡೆಗಣಿಸಬಾರದು.

43 “ಫರಿಸಾಯರೇ, ನಿಮ್ಮ ಗತಿಯನ್ನು ಏನು ಹೇಳಲಿ! ನೀವು ಸಭಾಮಂದಿರಗಳಲ್ಲಿ ಉನ್ನತಪೀಠಗಳನ್ನೂ ಮಾರುಕಟ್ಟೆಗಳಲ್ಲಿ ಜನರಿಂದ ಗೌರವವನ್ನೂ ಆಶಿಸುತ್ತೀರಿ. 44 ನೀವು ಮರೆಯಾಗಿರುವ ಸಮಾಧಿಗಳಂತಿದ್ದೀರಿ. ಜನರು ಸಮಾಧಿಗಳೆಂದು ತಿಳಿಯದೆ ಅವುಗಳ ಮೇಲೆ ನಡೆಯುತ್ತಾರೆ.”

ಧರ್ಮೋಪದೇಶಕನಿಗೆ ಯೇಸು ನೀಡಿದ ಉತ್ತರ

45 ಧರ್ಮೋಪದೇಶಕನೊಬ್ಬನು ಯೇಸುವಿಗೆ, “ಬೋಧಕನೇ, ನೀನು ಫರಿಸಾಯರ ಕುರಿತಾಗಿ ಈ ಸಂಗತಿಗಳನ್ನು ಹೇಳಿದಾಗ ನಮ್ಮನ್ನು ಸಹ ಖಂಡಿಸಿದಂತಾಯಿತು” ಎಂದು ಹೇಳಿದನು.

46 ಅದಕ್ಕೆ ಯೇಸು, “ಧರ್ಮೋಪದೇಶಕರೇ, ನಿಮ್ಮ ಗತಿಯನ್ನು ಏನು ಹೇಳಲಿ! ಜನರು ಅನುಸರಿಸಲಾಗದ ನಿಯಮಗಳನ್ನು ನೀವು ಮಾಡುತ್ತೀರಿ.[f] ಆ ನಿಯಮಗಳಿಗೆ ವಿಧೇಯರಾಗುವಂತೆ ಬೇರೆಯವರಿಗೆ ಬಲವಂತ ಮಾಡುತ್ತೀರಿ. ಆದರೆ ಆ ನಿಯಮಗಳಲ್ಲಿ ಒಂದನ್ನಾದರೂ ಪಾಲಿಸಲು ನೀವು ಪ್ರಯತ್ನಿಸುವುದಿಲ್ಲ. 47 ನಿಮ್ಮ ಗತಿಯನ್ನು ಏನು ಹೇಳಲಿ! ನೀವು ಪ್ರವಾದಿಗಳಿಗೆ ಗೋರಿಗಳನ್ನು[g] ಕಟ್ಟುತ್ತೀರಿ. ಆದರೆ ಆ ಪ್ರವಾದಿಗಳನ್ನು ಕೊಂದವರು ನಿಮ್ಮ ಪಿತೃಗಳೇ! 48 ಇದರಿಂದಾಗಿ, ನಿಮ್ಮ ಪಿತೃಗಳು ಮಾಡಿದ ಕೃತ್ಯಗಳನ್ನು ನೀವು ಒಪ್ಪಿಕೊಂಡಿದ್ದೀರೆಂಬುದನ್ನು ಎಲ್ಲಾ ಜನರಿಗೆ ತೋರಿಸುತ್ತೀರಿ. ಅವರು ಪ್ರವಾದಿಗಳನ್ನು ಕೊಂದರು. ನೀವು ಆ ಪ್ರವಾದಿಗಳಿಗಾಗಿ ಗೋರಿಗಳನ್ನು ಕಟ್ಟುತ್ತೀರಿ! 49 ಆದಕಾರಣ ದೇವರ ಜ್ಞಾನವು ಹೇಳಿದ್ದೇನೆಂದರೆ, ‘ನಾನು ಅವರ ಬಳಿಗೆ ಪ್ರವಾದಿಗಳನ್ನೂ ಅಪೊಸ್ತಲರನ್ನೂ ಕಳುಹಿಸುವೆನು. ನನ್ನ ಕೆಲವು ಪ್ರವಾದಿಗಳು ಮತ್ತು ಅಪೊಸ್ತಲರು ಕೆಡುಕರಿಂದ ಹತರಾಗುವರು. ಬೇರೆ ಕೆಲವರು ಸಂಕಟಕ್ಕೆ ಗುರಿಯಾಗುವರು.’

50 “ಆದ್ದರಿಂದ ಲೋಕಾದಿಯಿಂದ ಹತರಾದ ಎಲ್ಲಾ ಪ್ರವಾದಿಗಳ ಸಾವಿಗೆ ಈ ಕಾಲದ ಜನರಾದ ನೀವು ದಂಡನೆ ಹೊಂದುವಿರಿ. 51 ಹೇಬೆಲನನ್ನು ಕೊಂದದ್ದಕ್ಕಾಗಿಯೂ ಜಕರೀಯನನ್ನು ಕೊಂದದ್ದಕ್ಕಾಗಿಯೂ ನಿಮಗೆ ದಂಡನೆಯಾಗುವುದು. ಜಕರೀಯನನ್ನು ಯಜ್ಞವೇದಿ ಮತ್ತು ದೇವಾಲಯದ ನಡುವೆ ಕೊಲ್ಲಲಾಯಿತು. ಹೌದು, ಅವರೆಲ್ಲರ ಕೊಲೆಗಳಿಗಾಗಿ ಈಗ ಜೀವಿಸುತ್ತಿರುವ ನಿಮಗೆ ದಂಡನೆ ಆಗುವುದು.

52 “ಧರ್ಮೋಪದೇಶಕರೇ, ನಿಮ್ಮ ಗತಿಯನ್ನು ಏನು ಹೇಳಲಿ! ದೇವರ ಕುರಿತಾಗಿ ಕಲಿಯಲು ಸಾಧನವಾಗಿರುವ ಬೀಗದ ಕೈಯನ್ನು ನೀವು ಬಚ್ಚಿಟ್ಟಿದ್ದೀರಿ. ನೀವೂ ಕಲಿಯುವುದಿಲ್ಲ, ಬೇರೆಯವರಿಗೂ ಕಲಿಯಲು ಬಿಡುವುದಿಲ್ಲ” ಎಂದು ಹೇಳಿದನು.

53 ಯೇಸು ಅಲ್ಲಿಂದ ಹೊರಟಾಗ ಧರ್ಮೋಪದೇಶಕರು ಮತ್ತು ಫರಿಸಾಯರು ಆತನಿಗೆ ಮತ್ತಷ್ಟು ತೊಂದರೆ ಕೊಡಲು ಪ್ರಾರಂಭಿಸಿದರು. ಅವರು ಅನೇಕ ಸಂಗತಿಗಳ ಕುರಿತು ಪ್ರಶ್ನೆಗಳನ್ನು ಕೇಳಿ, ಆತನಿಂದ ಉತ್ತರ ಹೇಳಿಸುವುದಕ್ಕೆ ಪ್ರಯತ್ನಿಸಿದರು. 54 ಯೇಸುವನ್ನು ಮಾತಿನಲ್ಲಿ ಹಿಡಿಯಬೇಕೆಂದು ಯೋಚಿಸಿ, ಆತನು ಏನಾದರೂ ತಪ್ಪು ಹೇಳುವಂತೆ ಮಾಡಲು ಪ್ರಯತ್ನಿಸುತ್ತಿದ್ದರು.

ಫರಿಸಾಯರಂತಾಗಬೇಡಿ

12 ಸಾವಿರಾರು ಜನರು ಒಬ್ಬರನ್ನೊಬ್ಬರು ನೂಕುತ್ತಾ ಕಿಕ್ಕಿರಿದು ನೆರೆದಿದ್ದರು. ಜನರಿಗೆ ಉಪದೇಶಿಸುವ ಮೊದಲು ಯೇಸು ತನ್ನ ಶಿಷ್ಯರಿಗೆ, “ಫರಿಸಾಯರ ಹುಳಿಹಿಟ್ಟಿನ ಬಗ್ಗೆ ಅಂದರೆ ಅವರ ಕಪಟತನದ ಬಗ್ಗೆ ಎಚ್ಚರಿಕೆಯಾಗಿರಿ. ಮರೆಯಾದ ಪ್ರತಿಯೊಂದೂ ಬಯಲಾಗುವುದು. ಗುಪ್ತವಾಗಿರುವ ಪ್ರತಿಯೊಂದೂ ಪ್ರಕಟಿಸಲ್ಪಡುವುದು. ಕತ್ತಲಿನಲ್ಲಿ (ಗುಪ್ತವಾಗಿ) ನೀವು ಹೇಳುವ ವಿಷಯಗಳು ಬೆಳಕಿನಲ್ಲಿ (ಬಹಿರಂಗವಾಗಿ) ತಿಳಿಸಲ್ಪಡುವವು. ಗುಪ್ತವಾಗಿ ಕೋಣೆಯಲ್ಲಿ ನೀವು ಪಿಸುಗುಟ್ಟುವ ವಿಷಯಗಳು, ಮನೆಯ ಮೇಲಿನಿಂದ ಗಟ್ಟಿಯಾಗಿ ಪ್ರಕಟಿಸಲ್ಪಡುವವು” ಎಂದು ಹೇಳಿದನು.

ದೇವರಿಗೆ ಮಾತ್ರ ಭಯಪಡಿರಿ

(ಮತ್ತಾಯ 10:28-31)

ಬಳಿಕ ಯೇಸು ಜನರಿಗೆ ಹೀಗೆಂದನು: “ಗೆಳೆಯರೇ, ನಾನು ನಿಮಗೆ ಹೇಳುವುದೇನೆಂದರೆ, ಮನುಷ್ಯರಿಗೆ ಭಯಪಡಬೇಡಿ. ಅವರು ನಿಮ್ಮನ್ನು ಕೊಲ್ಲಬಹುದಷ್ಟೇ. ಆ ಬಳಿಕ ಬೇರೇನೂ ಮಾಡಲು ಅವರಿಂದಾಗದು. ನೀವು ಯಾರಿಗೆ ಭಯಪಡಬೇಕೆಂದರೆ, ನಿಮ್ಮನ್ನು ಕೊಂದು ನರಕಕ್ಕೆ ಹಾಕಲು ಅಧಿಕಾರವುಳ್ಳಾತನಿಗಷ್ಟೇ (ದೇವರಿಗೆ). ಹೌದು, ಆತನೊಬ್ಬನಿಗೇ ನೀವು ಭಯಪಡಬೇಕು.

“ಐದು ಗುಬ್ಬಿಗಳ ಬೆಲೆ ಕೇವಲ ಎರಡು ಪೈಸೆಗಳು. ಆದರೆ ದೇವರು ಅವುಗಳಲ್ಲಿ ಒಂದನ್ನೂ ಮರೆತುಬಿಡುವುದಿಲ್ಲ. ಹೌದು, ನಿಮ್ಮ ತಲೆಯಲ್ಲಿ ಎಷ್ಟು ಕೂದಲುಗಳಿವೆ ಎಂಬುದು ಸಹ ದೇವರಿಗೆ ಗೊತ್ತಿದೆ. ಹೆದರಬೇಡಿರಿ. ನೀವು ಅನೇಕ ಗುಬ್ಬಿಗಳಿಗಿಂತ ಹೆಚ್ಚು ಬೆಲೆಯುಳ್ಳವರಾಗಿದ್ದೀರಿ.

ಯೇಸುವಿನ ಕುರಿತು ನಾಚಿಕೆಪಡಬೇಡಿರಿ

(ಮತ್ತಾಯ 10:32-33; 12:32; 10:19-20)

“ನಾನು ನಿಮಗೆ ಹೇಳುವುದೇನೆಂದರೆ, ಯಾವನಾದರೂ ಬೇರೆಯವರ ಎದುರಿನಲ್ಲಿ ತಾನು ನನ್ನವನೆಂದು ಹೇಳಿದರೆ, ನಾನು ಸಹ[h] ಅವನನ್ನು ನನ್ನವನೆಂದು ದೇವದೂತರ ಮುಂದೆ ಹೇಳುವೆನು. ಆದರೆ ಯಾವನಾದರೂ ಬೇರೆಯವರ ಎದುರಿನಲ್ಲಿ ತಾನು ನನ್ನವನಲ್ಲವೆಂದು ಹೇಳಿದರೆ, ನಾನು ಸಹ ದೇವದೂತರ ಮುಂದೆ ಅವನನ್ನು ನನ್ನವನಲ್ಲವೆಂದು ಹೇಳುವೆನು.

10 “ಯಾವನಾದರೂ ಮನುಷ್ಯಕುಮಾರನಿಗೆ ವಿರೋಧವಾಗಿ ಮಾತಾಡಿದರೆ ಅವನಿಗೆ ಕ್ಷಮೆ ದೊರಕಬಹುದು. ಆದರೆ ಪವಿತ್ರಾತ್ಮನನ್ನು ದೂಷಿಸುವವನಿಗೆ ಕ್ಷಮೆಯೇ ಇಲ್ಲ.

11 “ಜನರು ನಿಮ್ಮನ್ನು ಸಭಾಮಂದಿರಗಳಿಗೂ ನ್ಯಾಯಾಧಿಪತಿಗಳ ಮತ್ತು ದೇಶಾಧಿಕಾರಿಗಳ ಬಳಿಗೂ ಎಳೆದೊಯ್ಯುವಾಗ ಅವರಿಗೆ ಏನು ಹೇಳಬೇಕೆಂದು ಚಿಂತೆ ಮಾಡಬೇಡಿ. 12 ಆ ಸಮಯದಲ್ಲಿ ನೀವು ಹೇಳಬೇಕಾದುದನ್ನು ಪವಿತ್ರಾತ್ಮನೇ ನಿಮಗೆ ತಿಳಿಸುವನು.”

ಸ್ವಾರ್ಥತೆಯ ಬಗ್ಗೆ ಯೇಸುವಿನ ಎಚ್ಚರಿಕೆ

13 ಸಮೀಪದಲ್ಲಿದ್ದ ಒಬ್ಬನು ಯೇಸುವಿಗೆ, “ಬೋಧಕನೇ, ನಮ್ಮ ತಂದೆ ಇದೀಗ ಸತ್ತುಹೋದನು. ನಮ್ಮ ತಂದೆಯ ಆಸ್ತಿಯಲ್ಲಿ ನನಗೆ ಪಾಲುಕೊಡಬೇಕೆಂದು ನನ್ನ ಅಣ್ಣನಿಗೆ ಹೇಳು” ಎಂದು ಹೇಳಿದನು.

14 ಆದರೆ ಯೇಸು ಅವನಿಗೆ, “ನಾನು ನಿಮ್ಮ ನ್ಯಾಯಾಧಿಪತಿ ಎಂದಾಗಲಿ ನಿಮ್ಮ ತಂದೆಯ ಆಸ್ತಿಯನ್ನು ನಿಮ್ಮಿಬ್ಬರಿಗೆ ಹಂಚಿಕೊಡುವವನು ಎಂದಾಗಲಿ ನಿನಗೆ ಯಾರು ಹೇಳಿದರು?” ಎಂದು ಕೇಳಿದನು. 15 ಬಳಿಕ ಯೇಸು ನೆರೆದಿದ್ದ ಜನರಿಗೆ, “ಎಚ್ಚರಿಕೆ, ಯಾವ ವಿಧವಾದ ಸ್ವಾರ್ಥಕ್ಕೂ ಒಳಗಾಗದಂತೆ ಜಾಗರೂಕರಾಗಿರಿ. ಒಬ್ಬನಿಗೆ ಎಷ್ಟೇ ಆಸ್ತಿಯಿದ್ದರೂ ಅದರಿಂದ ಅವನು ಜೀವವನ್ನು ಪಡೆದುಕೊಳ್ಳಲಾರನು” ಎಂದನು.

16 ಬಳಿಕ ಯೇಸು ಈ ಸಾಮ್ಯವನ್ನು ಹೇಳಿದನು: “ಒಬ್ಬ ಐಶ್ವರ್ಯವಂತನಿದ್ದನು. ಅವನಿಗೆ ಬಹಳ ಜಮೀನಿತ್ತು. ಒಮ್ಮೆ ಅವನ ಜಮೀನಿನಲ್ಲಿ ಸಮೃದ್ಧಿಯಾದ ಬೆಳೆ ಆಯಿತು. 17 ಆಗ ಐಶ್ವರ್ಯವಂತನು, ‘ನಾನೇನು ಮಾಡಲಿ? ನನ್ನ ಬೆಳೆಯನ್ನೆಲ್ಲಾ ತುಂಬಿಡಲು ನನಗೆ ಸ್ಥಳವಿಲ್ಲವಲ್ಲಾ!’ ಎಂದುಕೊಂಡನು.

18 “ಬಳಿಕ ಅವನು, ‘ನಾನೇನು ಮಾಡಬೇಕೆಂಬುದು ನನಗೆ ತಿಳಿದದೆ. ನನ್ನ ಕಣಜಗಳನ್ನು ಕೆಡವಿ, ದೊಡ್ಡ ಕಣಜಗಳನ್ನು ಕಟ್ಟುವೆನು! ನನ್ನ ಹೊಸ ಕಣಜಗಳಲ್ಲಿ ಗೋಧಿಯನ್ನೂ ಒಳ್ಳೆಯ ಪದಾರ್ಥಗಳನ್ನೂ ತುಂಬಿಸಿಡುವೆನು.’ 19 ಆ ಬಳಿಕ ನಾನು ‘ನನಗೆ ಅನೇಕ ವರ್ಷಗಳವರೆಗೆ ಬೇಕಾದಷ್ಟು ಸರಕನ್ನು ಕೂಡಿಸಿಟ್ಟಿದ್ದೇನೆ. ವಿಶ್ರಮಿಸಿಕೊ, ತಿನ್ನು, ಕುಡಿ, ಸಂತೋಷಪಡು! ಎಂದು ಹೇಳಿಕೊಳ್ಳುವೆನು’ ಎಂಬುದಾಗಿ ಆಲೋಚಿಸಿಕೊಂಡನು.

20 “ಆದರೆ ದೇವರು ಅವನಿಗೆ, ‘ನೀನು ಬುದ್ಧಿಹೀನ! ಈ ರಾತ್ರಿ ನೀನು ಸಾಯುವೆ! ಈಗ ಹೇಳು, ನೀನು ಕೂಡಿಟ್ಟ ಪದಾರ್ಥಗಳ ಗತಿ ಏನಾಗುವುದು? ಅವು ಯಾರ ಪಾಲಾಗುತ್ತವೆ?’ ಎಂದು ಕೇಳಿದನು.

21 “ತನಗೋಸ್ಕರ ಮಾತ್ರ ಸಂಪತ್ತನ್ನು ಕೂಡಿಸಿಟ್ಟುಕೊಳ್ಳುವವನ ಗತಿ ಇದೇ. ದೇವರ ದೃಷ್ಟಿಯಲ್ಲಿ ಅವನು ಐಶ್ವರ್ಯವಂತನಲ್ಲ.”

ದೇವರ ರಾಜ್ಯಕ್ಕೆ ಮೊದಲನೆ ಪ್ರಾಧಾನ್ಯತೆ

(ಮತ್ತಾಯ 6:25-34,19-21)

22 ಯೇಸು ತನ್ನ ಶಿಷ್ಯರಿಗೆ ಹೀಗೆ ಹೇಳಿದನು: “ಈ ಕಾರಣದಿಂದ ನಾನು ನಿಮಗೆ ಹೇಳುವುದೇನೆಂದರೆ, ನಿಮ್ಮ ಪ್ರಾಣಧಾರಣೆಗೆ ಬೇಕಾದ ಊಟಕ್ಕಾಗಿ ಮತ್ತು ತೊಟ್ಟುಕೊಳ್ಳಲು ಬೇಕಾದ ಬಟ್ಟೆಗಾಗಿ ಚಿಂತಿಸಬೇಡಿರಿ. 23 ಆಹಾರಕ್ಕಿಂತ ಪ್ರಾಣ ಹೆಚ್ಚು ಪ್ರಾಮುಖ್ಯವಾದದ್ದು. ಬಟ್ಟೆಗಿಂತಲೂ ದೇಹ ಹೆಚ್ಚು ಪ್ರಾಮುಖ್ಯವಾದದ್ದು. 24 ಪಕ್ಷಿಗಳನ್ನು ನೋಡಿರಿ. ಅವು ಬಿತ್ತುವುದೂ ಇಲ್ಲ, ಕೊಯ್ಯುವುದೂ ಇಲ್ಲ. ಅವು ಆಹಾರವನ್ನು ಮನೆಗಳಲ್ಲಾಗಲಿ ಕಣಜಗಳಲ್ಲಾಗಲಿ ತುಂಬಿಟ್ಟುಕೊಳ್ಳುವುದಿಲ್ಲ. ದೇವರೇ ಅವುಗಳನ್ನು ಪರಿಪಾಲಿಸುತ್ತಾನೆ. ನೀವು ಪಕ್ಷಿಗಳಿಗಿಂತ ಎಷ್ಟೋ ಅಮೂಲ್ಯರಾಗಿದ್ದೀರಿ. 25 ನೀವು ಊಟಬಟ್ಟೆಗಳಿಗಾಗಿ ಎಷ್ಟೇ ಚಿಂತಿಸಿದರೂ ನಿಮ್ಮ ಆಯುಷ್ಯೇನೂ ಹೆಚ್ಚಾಗುವುದಿಲ್ಲ. 26 ಚಿಕ್ಕಕಾರ್ಯಗಳನ್ನೇ ಮಾಡಲು ನಿಮಗೆ ಸಾಧ್ಯವಿಲ್ಲದಿರುವಾಗ, ದೊಡ್ಡಕಾರ್ಯಗಳ ಕುರಿತು ನೀವು ಚಿಂತಿಸುವುದೇಕೆ?

27 “ಅಡವಿಯ ಹೂವುಗಳು ಬೆಳೆಯುವ ಬಗೆಯನ್ನು ನೋಡಿರಿ. ಅವು ದುಡಿಯುವುದಿಲ್ಲ. ತಮಗಾಗಿ ಉಡುಪುಗಳನ್ನು ಹೊಲಿದುಕೊಳ್ಳುವುದಿಲ್ಲ. ಆದರೂ ಸೊಲೊಮೋನ ರಾಜನು ತನ್ನ ಸಕಲ ವೈಭವದಲ್ಲಿ ಇದ್ದಾಗಲೂ ಈ ಹೂವುಗಳಲ್ಲಿ ಒಂದರಷ್ಟೂ ಸುಂದರವಾದ ಉಡುಪನ್ನು ಧರಿಸಿರಲಿಲ್ಲ. 28 ದೇವರು ಬಯಲಿನ ಹುಲ್ಲಿಗೂ ಹೀಗೆ ಉಡಿಸುತ್ತಾನೆ. ಹುಲ್ಲಾದರೋ ಈ ಹೊತ್ತಿದ್ದು ನಾಳೆ ಬೆಂಕಿಯ ಪಾಲಾಗುವುದು. ಹೀಗಿರಲು ದೇವರು ನಿಮಗೆ ಎಷ್ಟೋ ಹೆಚ್ಚಾಗಿ ಉಡಿಸುವುದಿಲ್ಲವೇ? ಆದ್ದರಿಂದ ಅಲ್ಪವಿಶ್ವಾಸಿಗಳಾಗಿರಬೇಡಿ!

29 “ಏನು ಊಟಮಾಡಬೇಕು? ಏನು ಕುಡಿಯಬೇಕು? ಎಂದು ಯಾವಾಗಲೂ ಆಲೋಚಿಸಬೇಡಿರಿ ಮತ್ತು ಚಿಂತಿಸಬೇಡಿರಿ. 30 ಅವುಗಳನ್ನು ಪಡೆದುಕೊಳ್ಳುವುದಕ್ಕಾಗಿ ಲೋಕದ ಜನರೆಲ್ಲರೂ ಪ್ರಯತ್ನಿಸುತ್ತಾರೆ. ಅವುಗಳ ಅವಶ್ಯಕತೆ ನಿಮಗೂ ಇದೆ ಎಂಬುದು ನಿಮ್ಮ ತಂದೆಗೆ (ದೇವರು) ತಿಳಿದಿದೆ. 31 ನೀವು ದೇವರ ರಾಜ್ಯಕ್ಕೆ ಮೊದಲನೆ ಪ್ರಾಧಾನ್ಯತೆಯನ್ನು ಕೊಡಿರಿ. ಆಗ ನಿಮಗೆ ಬೇಕಾಗಿರುವ ಉಳಿದವುಗಳನ್ನು ಕೊಡಲಾಗುವುದು.

ಹಣದಲ್ಲಿ ಭರವಸೆ ಇಡಬೇಡಿ

32 “ಚಿಕ್ಕ ಮಂದೆಯೇ, ಹೆದರಬೇಡ, ನಿಮಗೆ ರಾಜ್ಯವನ್ನು ಕೊಡಲು ನಿಮ್ಮ ತಂದೆ ಬಯಸಿದ್ದಾನೆ. 33 ನಿಮ್ಮಲ್ಲಿರುವ ಆಸ್ತಿಯನ್ನು ಮಾರಿ, ಬಂದ ಹಣವನ್ನು ಕೊರತೆಯಲ್ಲಿರುವ ಜನರಿಗೆ ಕೊಡಿರಿ. ಈ ಲೋಕದ ಐಶ್ವರ್ಯ ಶಾಶ್ವತವಲ್ಲ. ಆದ್ದರಿಂದ ಶಾಶ್ವತವಾದ ಐಶ್ವರ್ಯವನ್ನು ಗಳಿಸಿಕೊಳ್ಳಿರಿ. ಲಯವಾಗದ ಸಂಪತ್ತನ್ನು ಪರಲೋಕದಲ್ಲಿ ಶೇಖರಿಸಿಟ್ಟುಕೊಳ್ಳಿರಿ. ಆ ಭಂಡಾರವನ್ನು ಕಳ್ಳರು ಕದಿಯಲಾಗುವುದಿಲ್ಲ ಮತ್ತು ಹುಳಗಳು ನಾಶಮಾಡಲಾಗುವುದಿಲ್ಲ. 34 ನಿಮ್ಮ ಭಂಡಾರ ಎಲ್ಲಿದೆಯೋ ಅಲ್ಲಿಯೇ ನಿಮ್ಮ ಹೃದಯವೂ ಇರುತ್ತದೆ.

ಯಾವಾಗಲೂ ಸಿದ್ಧವಾಗಿರಿ

(ಮತ್ತಾಯ 24:42-44)

35 “ಉಡುಪನ್ನು ಧರಿಸಿಕೊಂಡು ಪೂರ್ಣಸಿದ್ಧರಾಗಿರಿ! ನಿಮ್ಮ ದೀಪಗಳು ಉರಿಯುತ್ತಿರಲಿ. 36 ಮದುವೆಯ ಔತಣದಿಂದ ಮನೆಗೆ ಮರಳಿಬರುವ ಯಜಮಾನನನ್ನು ಎದುರುನೋಡುತ್ತಿರುವ ಸೇವಕರಂತಿರಿ. ಯಜಮಾನನು ಬಂದು ಬಾಗಿಲನ್ನು ತಟ್ಟಿದಾಗ ಸೇವಕರು ಬಾಗಿಲನ್ನು ತೆರೆಯುತ್ತಾರೆ. 37 ಆ ಸೇವಕರೇ ಧನ್ಯರು. ಏಕೆಂದರೆ, ಅವರು ಸಿದ್ಧರಾಗಿದ್ದು ತನಗೋಸ್ಕರ ಕಾಯುತ್ತಿದ್ದುದನ್ನು ಯಜಮಾನನು ನೋಡುತ್ತಾನೆ. ನಾನು ನಿಮಗೆ ಸತ್ಯವಾಗಿ ಹೇಳುವುದೇನೆಂದರೆ, ಆಗ ಯಜಮಾನನು ತಾನೇ ಸೇವಕರ ಉಡುಪನ್ನು ಧರಿಸಿಕೊಂಡು, ಆ ಸೇವಕರನ್ನು ಕುಳ್ಳಿರಿಸಿ, ಅವರಿಗೆ ಊಟ ಬಡಿಸುತ್ತಾನೆ. 38 ಆ ಆಳುಗಳು ತಮ್ಮ ಯಜಮಾನನಿಗಾಗಿ ಮಧ್ಯರಾತ್ರಿಯವರೆಗೆ ಅಥವಾ ಇನ್ನೂ ಹೆಚ್ಚು ಸಮಯದವರೆಗೆ ಎಚ್ಚರದಿಂದ ಇರಬೇಕಾಗಬಹುದು. ಆದರೆ ಯಜಮಾನನು ಬಂದು, ಇನ್ನೂ ಎಚ್ಚರದಿಂದಿರುವ ಅವರನ್ನು ಕಂಡಾಗ ಅವರಿಗೆ ಸಂತೋಷವಾಗುವುದು.

39 “ಇದು ನಿಮ್ಮ ನೆನಪಿನಲ್ಲಿರಲಿ: ಕಳ್ಳನು ಬರುವ ಗಳಿಗೆಯು ಯಜಮಾನನಿಗೆ ತಿಳಿದರೆ, ಅವನು ತನ್ನ ಮನೆಗೆ ಕನ್ನಹಾಕಲು ಬಿಡುವನೇ? ಇಲ್ಲ! 40 ಅಂತೆಯೇ, ನೀವೂ ಸಿದ್ಧರಾಗಿರಿ! ನೀವು ನಿರೀಕ್ಷಿಸದ ಗಳಿಗೆಯಲ್ಲಿ ಮನುಷ್ಯಕುಮಾರನು ಬರುವನು!”

ನಂಬಿಗಸ್ತನಾದ ಆಳು ಯಾರು?

41 ಪೇತ್ರನು, “ಪ್ರಭುವೇ, ನೀನು ಈ ಸಾಮ್ಯವನ್ನು ಹೇಳಿದ್ದು ನಮಗಾಗಿಯೋ ಅಥವಾ ಎಲ್ಲಾ ಜನರಿಗಾಗಿಯೋ?” ಎಂದು ಕೇಳಿದನು.

42 ಪ್ರಭುವು ಹೀಗೆಂದನು: “ವಿವೇಕಿಯೂ ನಂಬಿಗಸ್ತನೂ ಆದ ಆಳು ಯಾರು? ಕಾಲಕಾಲಕ್ಕೆ ಸರಿಯಾಗಿ ಕೂಲಿಯಾಳುಗಳಿಗೆ ದವಸಧಾನ್ಯವನ್ನು ಅಳೆದುಕೊಟ್ಟು, ಮನೆಯ ಮೇಲ್ವಿಚಾರಣೆಯನ್ನು ನೋಡಿಕೊಳ್ಳಲು ಯಜಮಾನನಿಂದ ನೇಮಿಸಲ್ಪಟ್ಟವನೇ. 43 ಆ ಸೇವಕನು ತನ್ನ ಕರ್ತವ್ಯವನ್ನು ನಿಷ್ಠೆಯಿಂದ ಮಾಡುತ್ತಿದ್ದರೆ, ಯಜಮಾನನು ಬಂದಾಗ ಅವನಿಗೆ ಬಹಳ ಸಂತೋಷವಾಗುವುದು. 44 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಯಜಮಾನನು ಆ ಸೇವಕನನ್ನು ತನ್ನ ಆಸ್ತಿಗೆಲ್ಲಾ ಮೇಲ್ವಿಚಾರಕನನ್ನಾಗಿ ನೇಮಿಸುವನು.

45 “ಆದರೆ ಆ ಸೇವಕನು ದುಷ್ಟನಾಗಿ ತನ್ನ ಯಜಮಾನನು ಬೇಗನೆ ಹಿಂತಿರುಗಿ ಬರುವುದಿಲ್ಲ ಎಂದುಕೊಂಡರೆ ಏನಾಗುವುದು? ಆ ಸೇವಕನು ಯಜಮಾನನ ಇತರ ದಾಸದಾಸಿಯರನ್ನು ಹೊಡೆಯುವುದಕ್ಕೂ ತಿಂದುಕುಡಿದು ಮತ್ತನಾಗುವುದಕ್ಕೂ ತೊಡಗುವನು. 46 ಬಳಿಕ ಅವನು ನಿರೀಕ್ಷಿಸಿಲ್ಲದ ಗಳಿಗೆಯಲ್ಲಿ ಯಜಮಾನನು ಬಂದು ಅವನನ್ನು ದಂಡಿಸಿ ಅಪನಂಬಿಗಸ್ತರಿರುವ ಸ್ಥಳಕ್ಕೆ ದಬ್ಬುವನು.

47 “ತನ್ನ ಯಜಮಾನನು ತನ್ನಿಂದ ಏನು ಅಪೇಕ್ಷಿಸುತ್ತಾನೆ ಎಂಬುದು ಆ ಸೇವಕನಿಗೆ ಗೊತ್ತಿತ್ತು. ಆದರೆ ಅವನು ತನ್ನನ್ನು ಸಿದ್ಧಪಡಿಸಿಕೊಳ್ಳಲಿಲ್ಲ ಮತ್ತು ತನ್ನ ಕೆಲಸವನ್ನು ಪೂರೈಸಲು ಪ್ರಯತ್ನಿಸಲಿಲ್ಲ. ಆದ್ದರಿಂದ ಅವನು ಕಠಿಣ ದಂಡನೆಗೆ ಗುರಿಯಾಗುವನು! 48 ಆದರೆ ತನ್ನ ಯಜಮಾನನ ಬಯಕೆಯನ್ನು ತಿಳಿದಿಲ್ಲದ ಸೇವಕನಿಗೆ ಏನಾಗುವುದು? ಇವನು ಸಹ ದಂಡನೆಗೆ ಅರ್ಹವಾದ ಕಾರ್ಯಗಳನ್ನು ಮಾಡುತ್ತಾನೆ. ಆದರೆ ತನ್ನ ಕರ್ತವ್ಯವನ್ನು ತಿಳಿದಿದ್ದರೂ ಮಾಡದೆಹೋದ ಸೇವಕನಿಗಿಂತ ಇವನಿಗೆ ಕಡಿಮೆ ದಂಡನೆ ಆಗುವುದು. ಹೆಚ್ಚು ಪಡೆದವನಿಂದ ಹೆಚ್ಚು ನಿರೀಕ್ಷಿಸಲಾಗುವುದು. ಇನ್ನೂ ಹೆಚ್ಚು ಪಡೆದವನಿಂದ ಇನ್ನೂ ಹೆಚ್ಚಾಗಿ ನಿರೀಕ್ಷಿಸಲಾಗುವುದು.”

ಯೇಸುವಿನ ಬಗ್ಗೆ ಭಿನ್ನಾಭಿಪ್ರಾಯ

(ಮತ್ತಾಯ 10:34-36)

49 ಯೇಸು ತನ್ನ ಮಾತನ್ನು ಮುಂದುವರೆಸಿ ಹೀಗೆಂದನು: “ನಾನು ಈ ಲೋಕಕ್ಕೆ ಬೆಂಕಿಹಾಕಲು ಬಂದೆನು! ಅದು ಇಷ್ಟರೊಳಗೆ ಉರಿಯುತ್ತಿದ್ದರೆ ನನಗೆ ಸಂತೋಷ! 50 ನಾನು ಬೇರೊಂದು ರೀತಿಯ ದೀಕ್ಷಾಸ್ನಾನ ಹೊಂದಬೇಕು. ಅದನ್ನು ಹೊಂದುವ ತನಕ ನಾನು ಬಹಳ ತೊಂದರೆಯಲ್ಲಿದ್ದೇನೆ. 51 ನಾನು ಲೋಕಕ್ಕೆ ಸಮಾಧಾನವನ್ನು ಕೊಡುವುದಕ್ಕೆ ಬಂದೆನೆಂದು ನೀವು ಭಾವಿಸುತ್ತೀರೋ? ಇಲ್ಲ! ನಾನು ಲೋಕದಲ್ಲಿ ಭೇದವನ್ನು ಉಂಟುಮಾಡಲು ಬಂದೆನು! 52 ಇಂದಿನಿಂದ, ಐದು ಜನರಿರುವ ಕುಟುಂಬದಲ್ಲಿ ಭೇದ ಉಂಟಾಗುವುದು. ಅವರಲ್ಲಿ ಮೂವರು ಇಬ್ಬರಿಗೆ ವಿರೋಧವಾಗುವರು ಮತ್ತು ಇಬ್ಬರು ಮೂವರಿಗೆ ವಿರೋಧವಾಗುವರು.

53 ತಂದೆಗೂ ಮಗನಿಗೂ ಭೇದ ಉಂಟಾಗುವುದು.
    ಮಗನು ತನ್ನ ತಂದೆಗೆ ವಿರೋಧವಾಗುವನು.
    ತಂದೆಯು ತನ್ನ ಮಗನಿಗೆ ವಿರೋಧವಾಗುವನು,
ತಾಯಿಗೂ ಮಗಳಿಗೂ ಭೇದ ಉಂಟಾಗುವುದು.
    ಮಗಳು ತನ್ನ ತಾಯಿಗೆ ವಿರೋಧವಾಗುವಳು,
    ತಾಯಿ ತನ್ನ ಮಗಳಿಗೆ ವಿರೋಧವಾಗುವಳು.
ಅತ್ತೆಗೂ ಸೊಸೆಗೂ ಭೇದವಿರುವುದು.
    ಸೊಸೆಯು ತನ್ನ ಅತ್ತೆಗೆ ವಿರೋಧವಾಗುವಳು,
    ಅತ್ತೆಯು ತನ್ನ ಸೊಸೆಗೆ ವಿರೋಧವಾಗುವಳು.”[i]

ಕಾಲಮಾನವನ್ನು ಗ್ರಹಿಸಿಕೊಳ್ಳಿರಿ

(ಮತ್ತಾಯ 16:2-3)

54 ಬಳಿಕ ಯೇಸು ಜನರಿಗೆ ಹೀಗೆಂದನು: “ಮೋಡವು ಪಶ್ಚಿಮ ದಿಕ್ಕಿನಲ್ಲಿ ದೊಡ್ಡದಾಗುತ್ತಿರುವುದನ್ನು ನೀವು ನೋಡುವಾಗ ‘ಇಂದು ಮಳೆ ಬರುತ್ತದೆ’ ಎಂದು ಹೇಳುತ್ತೀರಿ. ಅಂತೆಯೇ ಅಂದು ಮಳೆಯಾಗುತ್ತದೆ. 55 ದಕ್ಷಿಣ ದಿಕ್ಕಿನಿಂದ ಗಾಳಿ ಬೀಸತೊಡಗಿದಾಗ, ‘ಈ ದಿನ ತುಂಬಾ ಸೆಕೆ ಇರುವುದು’ ಎನ್ನುತ್ತೀರಿ. ಅಂತೆಯೇ ಸೆಕೆ ಇರುವುದು. 56 ನೀವು ಕಪಟಿಗಳು! ಹವಾಮಾನವನ್ನು ತಿಳಿದುಕೊಳ್ಳಬಲ್ಲ ನೀವು ಈಗ ನಡೆಯುತ್ತಿರುವುದನ್ನು ಗ್ರಹಿಸಿಕೊಳ್ಳಲು ಸಾಧ್ಯವಿಲ್ಲವೇ?

ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿರಿ

(ಮತ್ತಾಯ 5:25-26)

57 “ನೀವೇ ನ್ಯಾಯನಿರ್ಣಯವನ್ನು ಮಾಡಬಾರದೇಕೆ? 58 ಒಬ್ಬನು ನಿಮ್ಮ ಮೇಲೆ ದಾವೆ ಹೂಡಲು ನ್ಯಾಯಾಲಯಕ್ಕೆ ಹೋಗುತ್ತಿರುವಾಗ ನಿಮ್ಮ ಸಮಸ್ಯೆಯನ್ನು ದಾರಿಯಲ್ಲಿಯೇ ಪರಿಹರಿಸಲು ನಿಮ್ಮಿಂದಾದಷ್ಟು ಪ್ರಯತ್ನಿಸಿರಿ. ಇಲ್ಲವಾದರೆ, ಅವನು ನಿಮ್ಮನ್ನು ನ್ಯಾಯಾಧೀಶನ ಬಳಿಗೆ ಕೊಂಡೊಯ್ಯುವನು. ನ್ಯಾಯಾಧೀಶನು ನಿಮ್ಮನ್ನು ಸೆರೆಮನೆಗೆ ಹಾಕಿಸುವನು. 59 ನೀವು ನಿಮ್ಮ ಸಾಲವನ್ನೆಲ್ಲಾ ಕೊನೆಯ ಪೈಸದವರೆಗೆ ತೀರಿಸುವ ತನಕ ಸೆರೆಮನೆಯಿಂದ ಹೊರಗೆ ಬರಲು ಸಾಧ್ಯವೇ ಇಲ್ಲ!”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International