Print Page Options
Previous Prev Day Next DayNext

Read the Gospels in 40 Days

Read through the four Gospels--Matthew, Mark, Luke, and John--in 40 days.
Duration: 40 days
Kannada Holy Bible: Easy-to-Read Version (KERV)
Version
ಲೂಕ 15-16

ಸ್ವರ್ಗದಲ್ಲಿ ಆನಂದ

(ಮತ್ತಾಯ 18:12-14)

15 ಅನೇಕ ಸುಂಕವಸೂಲಿಗಾರರು ಮತ್ತು ಪಾಪಿಗಳು ಯೇಸುವಿನ ಉಪದೇಶವನ್ನು ಕೇಳಲು ಬಂದಿದ್ದರು. ಆಗ ಫರಿಸಾಯರು ಮತ್ತು ಧರ್ಮೋಪದೇಶಕರು, “ನೋಡಿರಿ! ಈ ಮನುಷ್ಯನು (ಯೇಸು) ಪಾಪಿಗಳನ್ನು ಬರಮಾಡಿಕೊಳ್ಳುತ್ತಾನೆ; ಅವರ ಜೊತೆಯಲ್ಲಿ ಊಟಮಾಡುತ್ತಾನೆ!” ಎಂದು ದೂರು ಹೇಳತೊಡಗಿದರು.

ಆಗ ಯೇಸು ಅವರಿಗೆ ಈ ಸಾಮ್ಯವನ್ನು ಹೇಳಿದನು: “ನಿಮ್ಮಲ್ಲಿ ಒಬ್ಬನಿಗೆ ನೂರು ಕುರಿಗಳಿವೆ ಎಂದು ತಿಳಿದುಕೊಳ್ಳೋಣ. ಆ ಕುರಿಗಳಲ್ಲಿ ಒಂದು ಕಳೆದುಹೋದರೆ, ಅವನು ಉಳಿದ ತೊಂಭತ್ತೊಂಭತ್ತು ಕುರಿಗಳನ್ನು ಅಲ್ಲೇ ಬಿಟ್ಟು ಕಳೆದುಹೋದ ಒಂದು ಕುರಿಗೋಸ್ಕರ ಹುಡುಕುತ್ತಾ ಹೋಗುವನು. ಆ ಕುರಿಯು ಸಿಕ್ಕುವ ತನಕ ಅವನು ಅದಕ್ಕಾಗಿ ಹುಡುಕುತ್ತಲೇ ಇರುವನು. ಅವನು ಆ ಕುರಿಯನ್ನು ಕಂಡುಕೊಂಡಾಗ ಬಹು ಸಂತೋಷಪಡುವನು. ಅವನು ಆ ಕುರಿಯನ್ನು ತನ್ನ ಮನೆಗೆ ಹೊತ್ತುಕೊಂಡು ಹೋಗುವನು. ಅವನು ತನ್ನ ಸ್ನೇಹಿತರ ಮತ್ತು ನೆರೆಹೊರೆಯವರ ಬಳಿಗೆ ಹೋಗಿ, ‘ನನ್ನೊಡನೆ ಸಂತೋಷಪಡಿರಿ, ಕಳೆದುಹೋದ ನನ್ನ ಕುರಿ ಸಿಕ್ಕಿತು’ ಎಂದು ಹೇಳುವನು. ಅದೇ ರೀತಿಯಲ್ಲಿ, ಒಬ್ಬ ಪಾಪಿ ತನ್ನ ಹೃದಯವನ್ನು ಪರಿವರ್ತಿಸಿಕೊಂಡಾಗ ಸ್ವರ್ಗದಲ್ಲಿ ಬಹಳ ಸಂತೋಷವಾಗುತ್ತದೆ ಎಂದು ನಾನು ನಿಮಗೆ ಹೇಳುತ್ತೇನೆ. ತಮ್ಮ ಹೃದಯಗಳನ್ನು ಪರಿವರ್ತಿಸಲು ಅವಶ್ಯವಿಲ್ಲದ ತೊಂಭತ್ತೊಂಭತ್ತು ಒಳ್ಳೆಯ ಜನರಿಗಿಂತ ಆ ಒಬ್ಬ ಪಾಪಿಯ ವಿಷಯದಲ್ಲಿ ಹೆಚ್ಚು ಸಂತೋಷವಾಗುತ್ತದೆ.

“ಒಬ್ಬ ಸ್ತ್ರೀಯ ಬಳಿ ಹತ್ತು ಬೆಳ್ಳಿನಾಣ್ಯಗಳು ಇವೆಯೆಂದು ಭಾವಿಸಿಕೊಳ್ಳಿರಿ. ಆಕೆಯು ಅವುಗಳಲ್ಲಿ ಒಂದನ್ನು ಕಳೆದುಕೊಳ್ಳುತ್ತಾಳೆ. ಆಕೆ ದೀಪವನ್ನು ತಂದು ಮನೆಯನ್ನು ಗುಡಿಸುತ್ತಾಳೆ. ಆ ನಾಣ್ಯವು ಸಿಕ್ಕುವ ತನಕ ಆಕೆ ಎಚ್ಚರಿಕೆಯಿಂದ ಹುಡುಕುತ್ತಾಳೆ. ಕಳೆದುಹೋದ ಆ ನಾಣ್ಯ ಸಿಕ್ಕಿದಾಗ ಆಕೆ ತನ್ನ ಸ್ನೇಹಿತರನ್ನೂ ನೆರೆಹೊರೆಯವರನ್ನೂ ಕರೆದು, ‘ನನ್ನೊಡನೆ ಸಂತೋಷಪಡಿರಿ ಕಳೆದುಹೋಗಿದ್ದ ನನ್ನ ನಾಣ್ಯ ಸಿಕ್ಕಿತು’ ಎಂದು ಹೇಳುವಳು. 10 ಅದೇರೀತಿ ಒಬ್ಬ ಪಾಪಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳುವಾಗ ದೇವದೂತರ ಮುಂದೆ ಸಂತೋಷವಾಗುವುದು.”

ಮನೆ ಬಿಟ್ಟುಹೋದ ಮಗನು

11 ಬಳಿಕ ಯೇಸು ಹೀಗೆಂದನು: “ಒಬ್ಬ ಮನುಷ್ಯನಿಗೆ ಇಬ್ಬರು ಗಂಡುಮಕ್ಕಳಿದ್ದರು. 12 ಕಿರಿಯ ಮಗನು ತಂದೆಗೆ, ‘ನಿನ್ನ ಆಸ್ತಿಯಲ್ಲಿ ನನಗೆ ಬರಬೇಕಾದ ಪಾಲನ್ನು ಕೊಡು’ ಎಂದು ಕೇಳಿದನು. ಆದ್ದರಿಂದ ತಂದೆಯು ತನ್ನ ಆಸ್ತಿಯನ್ನು ಹಂಚಿಕೊಟ್ಟನು.

13 “ಆಗ ಕಿರಿಮಗನು ತನಗೆ ದೊರೆತ ಪಾಲನ್ನೆಲ್ಲಾ ಕೂಡಿಸಿಕೊಂಡು ದೂರದೇಶಕ್ಕೆ ಪ್ರಯಾಣಮಾಡಿದನು. ಅಲ್ಲಿ ಅವನು ಪಟಿಂಗನಾಗಿ ಬದುಕಿ ತನ್ನ ಹಣವನ್ನೆಲ್ಲಾ ಹಾಳುಮಾಡಿಕೊಂಡನು. 14 ಸ್ವಲ್ಪಕಾಲದ ನಂತರ, ಆ ದೇಶದಲ್ಲಿ ಕ್ಷಾಮ ಉಂಟಾಯಿತು. ಆ ದೇಶದ ಯಾವ ಭಾಗದಲ್ಲಿಯೂ ಸಾಕಷ್ಟು ಆಹಾರವಿರಲಿಲ್ಲ. ಅವನು ಬಹಳ ಹಸಿವೆಗೊಂಡಿದ್ದನು. ಅವನಿಗೆ ಹಣದ ಅಗತ್ಯತೆಯಿತ್ತು. 15 ಆದ್ದರಿಂದ ಅವನು ಆ ದೇಶದ ನಿವಾಸಿಯೊಬ್ಬನ ಬಳಿ ಕೂಲಿಕೆಲಸಕ್ಕೆ ಸೇರಿಕೊಂಡನು. ಆ ಮನುಷ್ಯನು ಹಂದಿ ಮೇಯಿಸುವುದ್ಕಕಾಗಿ ಅವನನ್ನು ಹೊಲಕ್ಕೆ ಕಳುಹಿಸಿದನು. 16 ಆಗ ಅವನು ಬಹಳ ಹಸಿವೆಗೊಂಡಿದ್ದನು. ಆದ್ದರಿಂದ ಹಂದಿಗಳು ತಿನ್ನುತ್ತಿದ್ದ ಕಾಯಿಗಳನ್ನೇ ತಿನ್ನಲು ಹಂಬಲಿಸಿದನು. ಆದರೆ ಅದನ್ನೂ ಅವನಿಗೆ ಯಾರೂ ಕೊಡಲಿಲ್ಲ.

17 “ಆಗ ಅವನಿಗೆ ತಾನು ಮಾಡಿದ ಬುದ್ಧಿಹೀನ ಕಾರ್ಯದ ಅರಿವಾಯಿತು. ಅವನು ತನ್ನೊಳಗೆ, ‘ನನ್ನ ತಂದೆಯ ಬಳಿಯಲ್ಲಿರುವ ಸೇವಕರಿಗೆ ಬೇಕಾದಷ್ಟು ಆಹಾರವಿದೆ. ನಾನಾದರೋ ಇಲ್ಲಿ ಊಟವಿಲ್ಲದೆ ಸಾಯುತ್ತಿದ್ದೇನೆ. 18 ನಾನು ಇಲ್ಲಿಂದ ನನ್ನ ತಂದೆಯ ಬಳಿಗೆ ಹೊರಟುಹೋಗುತ್ತೇನೆ. ನಾನು ನನ್ನ ತಂದೆಗೆ, ಅಪ್ಪಾ, ನಾನು ದೇವರಿಗೆ ವಿರೋಧವಾಗಿಯೂ ನಿನಗೆ ವಿರೋಧವಾಗಿಯೂ ಪಾಪ ಮಾಡಿದ್ದೇನೆ. 19 ನಿನ್ನ ಮಗನೆಂದು ಕರೆಸಿಕೊಳ್ಳುವುದಕ್ಕೆ ನಾನು ಯೋಗ್ಯನಲ್ಲ. ನೀನು ನನ್ನನ್ನು ನಿನ್ನ ಸೇವಕರಲ್ಲಿ ಒಬ್ಬನನ್ನಾಗಿ ಸೇರಿಸಿಕೊ ಎಂದು ಹೇಳುವೆನು’ ಅಂದುಕೊಂಡನು. 20 ಅಂತೆಯೇ ಅವನು ಹೊರಟು ತನ್ನ ತಂದೆಯ ಬಳಿಗೆ ಹೋದನು.

ಕಿರಿಮಗನು ಹಿಂತಿರುಗಿದನು

“ಮಗನು ಇನ್ನೂ ಬಹುದೂರದಲ್ಲಿ ಬರುತ್ತಿರುವಾಗಲೇ ತಂದೆಯು ಅವನನ್ನು ಗುರುತಿಸಿ ಕನಿಕರದಿಂದ ಅವನ ಬಳಿಗೆ ಓಡಿಬಂದು ಅವನನ್ನು ಅಪ್ಪಿಕೊಂಡು ಮುದ್ದಿಟ್ಟನು. 21 ಮಗನು ತನ್ನ ತಂದೆಗೆ, ‘ಅಪ್ಪಾ, ನಾನು ದೇವರಿಗೆ ವಿರೋಧವಾಗಿಯೂ ನಿನಗೆ ವಿರೋಧವಾಗಿಯೂ ಪಾಪಮಾಡಿದ್ದೇನೆ. ನಿನ್ನ ಮಗನೆಂದು ಕರೆಸಿಕೊಳ್ಳುವುದಕ್ಕೆ ನಾನು ಯೋಗ್ಯನಲ್ಲ’ ಎಂದು ಹೇಳಿದನು.

22 “ಆದರೆ ತಂದೆಯು ತನ್ನ ಸೇವಕರಿಗೆ, ‘ತ್ವರೆಮಾಡಿರಿ! ಉತ್ತಮವಾದ ಉಡುಪುಗಳನ್ನು ತಂದು ಇವನಿಗೆ ತೊಡಿಸಿರಿ. ಇವನ ಬೆರಳಿಗೆ ಉಂಗುರವನ್ನು ಹಾಕಿರಿ. ಪಾದಗಳಿಗೆ ಒಳ್ಳೆಯ ಪಾದರಕ್ಷೆಗಳನ್ನು ತೊಡಿಸಿರಿ. 23 ಕೊಬ್ಬಿದ ಕರುವನ್ನು ಕೊಯ್ದು ಉಲ್ಲಾಸಪಡೋಣ. 24 ನನ್ನ ಮಗನು ಸತ್ತುಹೋಗಿದ್ದನು, ಈಗಲಾದರೋ ಮತ್ತೆ ಜೀವಂತನಾಗಿ ಬಂದಿದ್ದಾನೆ! ಇವನು ತಪ್ಪಿಹೋಗಿದ್ದನು. ಈಗಲಾದರೋ ಮತ್ತೆ ಸಿಕ್ಕಿದ್ದಾನೆ!’ ಎಂದು ಹೇಳಿದನು. ಆದ್ದರಿಂದ ಅವರು ಉಲ್ಲಾಸಪಡುವುದಕ್ಕೆ ತೊಡಗಿದರು.

ಹಿರಿಮಗನು ಬಂದನು

25 “ಹಿರಿಯ ಮಗನು ಹೊಲದಲ್ಲಿದ್ದನು. ಅವನು ಮನೆಗೆ ಬರುತ್ತಿದ್ದಾಗ ವಾದ್ಯಗೋಷ್ಠಿಯ ಮತ್ತು ನೃತ್ಯದ ಶಬ್ದವನ್ನು ಕೇಳಿದನು. 26 ಆದ್ದರಿಂದ ಅವನು ತನ್ನ ಸೇವಕರಲ್ಲಿ ಒಬ್ಬನನ್ನು ಕರೆದು, ‘ಇದೇನು?’ ಎಂದು ವಿಚಾರಿಸಿದನು. 27 ಆ ಸೇವಕನು, ‘ನಿನ್ನ ತಮ್ಮ ಮರಳಿ ಬಂದಿದ್ದಾನೆ. ನಿನ್ನ ತಂದೆಯು ಕೊಬ್ಬಿದ ಕರುವನ್ನು ಕೊಯ್ಸಿದ್ದಾನೆ. ನಿನ್ನ ತಮ್ಮನು ಮನೆಗೆ ಸುರಕ್ಷಿತವಾಗಿ ಬಂದದ್ದಕ್ಕಾಗಿ ನಿನ್ನ ತಂದೆಯು ಸಂತೋಷಗೊಂಡಿದ್ದಾನೆ!’ ಎಂದು ಹೇಳಿದನು.

28 “ಆಗ ಹಿರಿಯ ಮಗನು ಕೋಪಗೊಂಡು ಔತಣಕೂಟಕ್ಕೆ ಹೋಗಲಿಲ್ಲ. ಆಗ ಅವನ ತಂದೆ ಹೊರಗೆ ಬಂದು ಅವನನ್ನು ಒಳಗೆ ಕರೆದನು. 29 ಹಿರಿಮಗನು ತಂದೆಗೆ, ‘ನಾನು ಗುಲಾಮನಂತೆ ನಿನಗೆ ಅನೇಕ ವರ್ಷಗಳವರೆಗೆ ಸೇವೆಮಾಡಿದೆನು! ನಾನು ಯಾವಾಗಲೂ ನಿನ್ನ ಅಪ್ಪಣೆಗಳಿಗೆ ವಿಧೇಯನಾದೆನು. ಆದರೆ ನೀನು ನನಗೋಸ್ಕರ ಎಂದೂ ಒಂದು ಆಡನ್ನಾಗಲಿ ಕೊಯ್ಯಲಿಲ್ಲ. ನನಗಾಗಿ ಮತ್ತು ನನ್ನ ಸ್ನೇಹಿತರಿಗಾಗಿ ನೀನೆಂದೂ ಒಂದು ಔತಣಕೂಟವನ್ನು ಏರ್ಪಡಿಸಲಿಲ್ಲ. 30 ಆದರೆ ನಿನ್ನ ಕಿರಿಯ ಮಗನು ನಿನ್ನ ಎಲ್ಲ ಹಣವನ್ನು ಸೂಳೆಯರಿಗೆ ಖರ್ಚುಮಾಡಿ ಮನೆಗೆ ಹಿಂತಿರುಗಿ ಬಂದಾಗ ನೀನು ಅವನಿಗಾಗಿ ಕೊಬ್ಬಿದ ಕರುವನ್ನು ಕೊಯ್ಸಿದ್ದಿ!’ ಅಂದನು.

31 “ಆದರೆ ತಂದೆಯು ಅವನಿಗೆ, ‘ಮಗನೇ, ನೀನು ಯಾವಾಗಲೂ ನನ್ನೊಂದಿಗೆ ಇರುತ್ತೀ. ನನಗಿರುವುದೆಲ್ಲಾ ನಿನ್ನದೇ. 32 ನಾವು ಸಂತೋಷಪಡಬೇಕು. ಉಲ್ಲಾಸಪಡಬೇಕು, ಏಕೆಂದರೆ ನಿನ್ನ ತಮ್ಮನು ಸತ್ತುಹೋಗಿದ್ದನು, ಈಗಲಾದರೋ ಮತ್ತೆ ಜೀವಂತವಾಗಿ ಬಂದಿದ್ದಾನೆ. ಅವನು ಕಳೆದುಹೋಗಿದ್ದನು, ಈಗಲಾದರೋ ಮತ್ತೆ ಸಿಕ್ಕಿದ್ದಾನೆ’ ಅಂದನು.”

ನಿಜವಾದ ಐಶ್ವರ್ಯ

16 ಯೇಸು ತನ್ನ ಶಿಷ್ಯರಿಗೆ ಹೀಗೆಂದನು: “ಒಂದಾನೊಂದು ಕಾಲದಲ್ಲಿ ಒಬ್ಬ ಐಶ್ವರ್ಯವಂತನಿದ್ದನು. ಈ ಐಶ್ವರ್ಯವಂತನು ತನ್ನ ವ್ಯಾಪಾರವನ್ನು ನೋಡಿಕೊಳ್ಳಲು ಒಬ್ಬ ಮೇಲ್ವಿಚಾರಕನನ್ನು ನೇಮಿಸಿದನು. ಸ್ವಲ್ಪಕಾಲದ ನಂತರ, ಆ ಮೇಲ್ವಿಚಾರಕನು ತನಗೆ ಮೋಸಮಾಡುತ್ತಿದ್ದಾನೆಂಬುದು ಐಶ್ವರ್ಯವಂತನಿಗೆ ತಿಳಿಯಿತು. ಆದ್ದರಿಂದ ಅವನು ಆ ಮೇಲ್ವಿಚಾರಕನನ್ನು ಕರೆದು, ‘ನಿನ್ನ ಬಗ್ಗೆ ನನಗೆ ದೂರುಗಳು ಬಂದಿವೆ. ನನ್ನ ಹಣವನ್ನು ನೀನು ಯಾವುದಕ್ಕಾಗಿ ಖರ್ಚು ಮಾಡಿರುವೆ? ನನಗೆ ವರದಿ ಒಪ್ಪಿಸು. ಇನ್ನು ಮೇಲೆ ನನ್ನ ವ್ಯಾಪಾರಕ್ಕೆ ನೀನು ಮೇಲ್ವಿಚಾರಕನಾಗಿರಲು ಸಾಧ್ಯವಿಲ್ಲ’ ಎಂದು ಹೇಳಿದನು.

“ಆಗ, ಆ ಮೇಲ್ವಿಚಾರಕನು ತನ್ನೊಳಗೆ, ‘ಈಗ ನಾನೇನು ಮಾಡಲಿ? ನನ್ನ ಯಜಮಾನನು ನನ್ನನ್ನು ಈ ಕೆಲಸದಿಂದ ತೆಗೆದುಬಿಡುತ್ತಾನೆ! ಗುಂಡಿಗಳನ್ನು ಅಗಿಯುವುದಕ್ಕೂ ನನಗೆ ಬಲವಿಲ್ಲ. ಭಿಕ್ಷೆ ಬೇಡುವುದಕ್ಕೂ ನನಗೆ ನಾಚಿಕೆ. ಈಗ ನಾನೇನು ಮಾಡಬೇಕೆಂಬುದು ನನಗೆ ಗೊತ್ತಿದೆ! ನಾನು ಕೆಲಸವನ್ನು ಕಳೆದುಕೊಂಡ ಮೇಲೆ ಬೇರೆ ಜನರು ನನ್ನನ್ನು ತಮ್ಮ ಮನೆಗಳಿಗೆ ಸೇರಿಸಿಕೊಳ್ಳುವಂಥ ಕಾರ್ಯವೊಂದನ್ನು ನಾನು ಈಗ ಮಾಡುವೆ’ ಅಂದುಕೊಂಡನು.

“ಆಮೇಲೆ ಆ ಮೇಲ್ವಿಚಾರಕನು, ಯಜಮಾನನ ಸಾಲಗಾರರಲ್ಲಿ ಪ್ರತಿಯೊಬ್ಬನನ್ನು ಕರೆದನು. ಅವನು ಮೊದಲನೆಯವನಿಗೆ, ‘ನೀನು ನನ್ನ ಯಜಮಾನನಿಗೆ ಎಷ್ಟು ಸಾಲ ಕೊಡಬೇಕು?’ ಎಂದು ಕೇಳಿದನು. ಅದಕ್ಕೆ ಮೊದಲನೆಯ ವ್ಯಕ್ತಿ, ‘ನಾನು ಎಂಟುಸಾವಿರ ಕಿಲೋಗ್ರಾಂ ಆಲಿವ್ ಎಣ್ಣೆ ಕೊಡಬೇಕು’ ಎಂದು ಉತ್ತರಿಸಿದನು. ಮೇಲ್ವಿಚಾರಕನು ಅವನಿಗೆ, ‘ನಿನ್ನ ಲೆಕ್ಕಪತ್ರ ಇಲ್ಲಿದೆ. ಕುಳಿತುಕೊಂಡು ಬೇಗನೆ ಅದನ್ನು ಕಡಿಮೆಮಾಡಿ ನಾಲ್ಕುಸಾವಿರ ಎಂದು ಬರೆ’ ಅಂದನು.

“ಬಳಿಕ ಆ ಮೇಲ್ವಿಚಾರಕನು ಎರಡನೆಯವನಿಗೆ, ‘ನೀನು ನನ್ನ ಯಜಮಾನನಿಗೆ ಎಷ್ಟು ಕೊಡಬೇಕಾಗಿದೆ’ ಎಂದು ಕೇಳಿದನು. ಎರಡನೆಯವನು, ‘ನಾನು ಅವನಿಗೆ ಅರವತ್ತುಸಾವಿರ ಕಿಲೋಗ್ರಾಂ ಗೋಧಿ ಕೊಡಬೇಕು’ ಎಂದು ಉತ್ತರಿಸಿದನು. ಆಗ ಆ ಮೇಲ್ವಿಚಾರಕನು ಅವನಿಗೆ, ‘ನಿನ್ನ ಲೆಕ್ಕಪತ್ರ ಇಲ್ಲಿದೆ. ನೀನು ಅದನ್ನು ಕಡಿಮೆ ಮಾಡು. ಐವತ್ತುಸಾವಿರ ಎಂದು ಬರೆ’ ಅಂದನು.

“ಬಳಿಕ ಯಜಮಾನನು ಮೋಸಗಾರನಾದ ಮೇಲ್ವಿಚಾರಕನಿಗೆ, ‘ನೀನು ಜಾಣತನ ಮಾಡಿದೆ’ ಎಂದು ಹೇಳಿದನು. ಹೌದು, ಲೌಕಿಕ ಜನರು ತಮ್ಮ ಜನರೊಡನೆ ವ್ಯಾಪಾರದಲ್ಲಿ ದೈವಿಕ ಜನರಿಗಿಂತಲೂ ಜಾಣರಾಗಿದ್ದಾರೆ.

“ಈ ಲೋಕದಲ್ಲಿ ನೀವು ಹೊಂದಿರುವಂಥವುಗಳಿಂದ ದೇವರಿಗೆ ಸ್ನೇಹಿತರನ್ನು ಮಾಡಿಕೊಡಿರಿ. ನೀವು ಹೀಗೆ ಮಾಡಿದರೆ, ಈ ಲೋಕದವುಗಳು ನಿಮ್ಮ ಕೈಬಿಟ್ಟು ಹೋದಾಗ ನಿಮ್ಮನ್ನು ಶಾಶ್ವತವಾದ ಮನೆಗೆ ಸ್ವೀಕರಿಸಿಕೊಳ್ಳಲಾಗುವುದು. 10 ಸ್ವಲ್ಪವಾದದ್ದರಲ್ಲಿ ನಂಬಿಗಸ್ತನಾಗಿರುವವನು ಬಹಳವಾದದ್ದರಲ್ಲಿಯೂ ನಂಬಿಗಸ್ತನಾಗಿರುವನು. ಸ್ವಲ್ಪವಾದದ್ದರಲ್ಲಿ ಅನ್ಯಾಯಗಾರನಾಗಿರುವವನು ಬಹಳವಾದದ್ದರಲ್ಲಿಯೂ ಅನ್ಯಾಯಗಾರನಾಗಿರುವನು. 11 ಲೌಕಿಕ ಐಶ್ವರ್ಯಗಳಲ್ಲಿ ನೀವು ನಂಬಿಗಸ್ತರಾಗಿಲ್ಲದಿದ್ದರೆ ಪರಲೋಕದ ಐಶ್ವರ್ಯಗಳಲ್ಲಿಯೂ ನೀವು ನಂಬಿಗಸ್ತರಾಗಿರುವುದಿಲ್ಲ. 12 ಮತ್ತೊಬ್ಬನ ಸ್ವತ್ತುಗಳಲ್ಲಿ ನೀವು ನಂಬಿಗಸ್ತರಾಗಿಲ್ಲದಿದ್ದರೆ ನಿಮ್ಮ ಸ್ವಂತ ಸ್ವತ್ತುಗಳನ್ನೇ ನಿಮಗೆ ಯಾರೂ ಕೊಡುವುದಿಲ್ಲ.

13 “ಯಾವ ಸೇವಕನೂ ಒಂದೇ ಸಮಯದಲ್ಲಿ ಇಬ್ಬರು ಯಜಮಾನರಿಗೆ ಸೇವೆ ಮಾಡಲಾರನು. ಅವನು ಒಬ್ಬನನ್ನು ದ್ವೇಷಿಸಿ ಇನ್ನೊಬ್ಬನನ್ನು ಪ್ರೀತಿಸುವನು ಅಥವಾ ಒಬ್ಬನಿಗೆ ಹೊಂದಿಕೊಂಡು ಇನ್ನೊಬ್ಬನನ್ನು ತಾತ್ಸಾರ ಮಾಡುವನು. ನೀವು ಒಂದೇ ಸಮಯದಲ್ಲಿ ದೇವರ ಮತ್ತು ಹಣದ ಸೇವೆಮಾಡಲಾರಿರಿ.”

ದೇವರ ಧರ್ಮಶಾಸ್ತ್ರ ಬದಲಾಗಲಾರದು

(ಮತ್ತಾಯ 11:12-13)

14 ಫರಿಸಾಯರು ಈ ಎಲ್ಲಾ ಸಂಗತಿಗಳನ್ನು ಕೇಳುತ್ತಿದ್ದರು. ಫರಿಸಾಯರೆಲ್ಲರು ಹಣದಾಸೆ ಉಳ್ಳವರಾಗಿದ್ದರಿಂದ ಅವರು ಯೇಸುವನ್ನು ಟೀಕಿಸಿದರು. 15 ಯೇಸು ಫರಿಸಾಯರಿಗೆ ಹೀಗೆಂದನು, “ನೀವು ಜನರ ಮುಂದೆ ನಿಮ್ಮನ್ನು ಒಳ್ಳೆಯವರೆಂದು ತೋರಿಸಿಕೊಳ್ಳುತ್ತೀರಿ. ಆದರೆ ನಿಜವಾಗಿಯೂ ನಿಮ್ಮ ಹೃದಯದಲ್ಲಿರುವುದು ದೇವರಿಗೆ ಗೊತ್ತು. ಜನರ ದೃಷ್ಟಿಯಲ್ಲಿ ಅಮೂಲ್ಯವಾದುವುಗಳು ದೇವರ ದೃಷ್ಟಿಯಲ್ಲಿ ಅಸಹ್ಯವಾಗಿವೆ.

16 “ಜನರು ಮೋಶೆಯ ಧರ್ಮಶಾಸ್ತ್ರಕ್ಕೂ ಪ್ರವಾದಿಗಳ ಗ್ರಂಥಗಳಿಗೂ ಅನುಸಾರವಾಗಿ ಜೀವಿಸಬೇಕೆಂಬುದು ದೇವರ ಅಪೇಕ್ಷೆಯಾಗಿತ್ತು. ಸ್ನಾನಿಕನಾದ ಯೋಹಾನನು ಬಂದ ಕಾಲದಿಂದ ದೇವರ ರಾಜ್ಯದ ಸುವಾರ್ತೆಯು ತಿಳಿಸಲ್ಪಡುತ್ತಿದೆ. ಅನೇಕ ಜನರು ದೇವರ ರಾಜ್ಯದೊಳಗೆ ಹೋಗಲು ಬಹಳ ಪ್ರಯಾಸಪಡುತ್ತಿದ್ದಾರೆ. 17 ಧರ್ಮಶಾಸ್ತ್ರದಲ್ಲಿರುವ ಒಂದು ಚುಕ್ಕೆಯು ಬದಲಾಗುವುದಕ್ಕಿಂತಲೂ ಭೂಮ್ಯಾಕಾಶಗಳು ಅಳಿದುಹೋಗುವುದು ಸುಲಭ.

ವಿವಾಹವಿಚ್ಛೇದನ ಮತ್ತು ಪುನರ್ವಿವಾಹ

18 “ತನ್ನ ಪತ್ನಿಯನ್ನು ಬಿಟ್ಟು ಮತ್ತೊಬ್ಬಳನ್ನು ಮದುವೆ ಆಗುವವನು ವ್ಯಭಿಚಾರ ಮಾಡಿದವನಾಗುತ್ತಾನೆ. ವಿವಾಹವಿಚ್ಛೇದನ ಹೊಂದಿದ ಸ್ತ್ರೀಯನ್ನು ಮದುವೆ ಆಗುವವನು ಸಹ ವ್ಯಭಿಚಾರ ಮಾಡಿದವನಾಗುತ್ತಾನೆ.”

ಐಶ್ವರ್ಯವಂತನು ಮತ್ತು ಲಾಜರನು

19 ಯೇಸು ಹೀಗೆಂದನು: “ಒಬ್ಬ ಐಶ್ವರ್ಯವಂತನಿದ್ದನು. ಅವನು ಯಾವಾಗಲೂ ಉತ್ತಮವಾದ ಉಡುಪುಗಳನ್ನು ಧರಿಸುತ್ತಿದ್ದನು. ಅವನು ಬಹಳ ಐಶ್ವರ್ಯವಂತನಾಗಿದ್ದುದರಿಂದ ಪ್ರತಿದಿನವೂ ವೈಭವದೊಡನೆ ಊಟಮಾಡುತ್ತಾ ಸಂತೋಷಪಡುತ್ತಿದ್ದನು. 20 ಅಲ್ಲಿ ಲಾಜರನೆಂಬ ಒಬ್ಬ ಬಡಮನುಷ್ಯನೂ ಇದ್ದನು. ಅವನ ಮೈತುಂಬ ಹುಣ್ಣುಗಳಿದ್ದವು. ಅವನು ಐಶ್ವರ್ಯವಂತನ ಮನೆಯ ಹೊರಬಾಗಿಲ ಬಳಿ ಬಿದ್ದುಕೊಂಡಿರುತ್ತಿದ್ದನು. 21 ಐಶ್ವರ್ಯವಂತನು ಊಟ ಮಾಡಿದ ಮೇಲೆ ಹೊರಗೆಸೆದ ಎಂಜಲನ್ನು ತಿನ್ನುವುದಕ್ಕಾಗಿ ಅಲ್ಲಿ ಬಿದ್ದುಕೊಂಡಿರುತ್ತಿದ್ದನು. ನಾಯಿಗಳು ಬಂದು ಅವನ ಹುಣ್ಣುಗಳನ್ನು ನೆಕ್ಕುತ್ತಿದ್ದವು.

22 “ಸ್ವಲ್ಪ ಸಮಯದ ನಂತರ ಲಾಜರನು ಸತ್ತನು. ದೇವದೂತರು ಲಾಜರನನ್ನು ತೆಗೆದುಕೊಂಡು ಹೋಗಿ ಅಬ್ರಹಾಮನ ಎದೆಗೆ ಒರಗಿಸಿದರು. ಒಂದು ದಿನ ಐಶ್ವರ್ಯವಂತನೂ ಸತ್ತನು. ಅವನಿಗೆ ಸಮಾಧಿ ಮಾಡಲಾಯಿತು. 23 ಆದರೆ ಅವನು ಪಾತಾಳದಲ್ಲಿ ಬಹಳ ಯಾತನೆಪಡುತ್ತಾ ಬಹಳ ದೂರದಲ್ಲಿ ಅಬ್ರಹಾಮನ ಎದೆಗೆ ಒರಗಿಕೊಂಡಿದ್ದ ಲಾಜರನನ್ನು ನೋಡಿ, 24 ‘ತಂದೆಯಾದ ಅಬ್ರಹಾಮನೇ, ನನ್ನ ಮೇಲೆ ಕರುಣೆತೋರು! ಲಾಜರನನ್ನು ನನ್ನ ಬಳಿಗೆ ಕಳುಹಿಸು. ಅವನು ತನ್ನ ಬೆರಳನ್ನು ನೀರಿನಲ್ಲಿ ಅದ್ದಿ ನನ್ನ ನಾಲಿಗೆಯನ್ನು ತಣ್ಣಗೆ ಮಾಡಲಿ, ನಾನು ಈ ಬೆಂಕಿಯಲ್ಲಿ ಯಾತನೆಪಡುತ್ತಿದ್ದೇನೆ!’ ಎಂದು ಬೇಡಿಕೊಂಡನು.

25 “ಅದಕ್ಕೆ ಅಬ್ರಹಾಮನು, ‘ಕಂದಾ, ನಿನ್ನ ಜೀವಮಾನದ ದಿನಗಳು ನಿನಗೆ ನೆನಪಿಲ್ಲವೇ? ಅಲ್ಲಿ ನಿನಗೆ ಎಲ್ಲ ಬಗೆಯ ಸುಖವಿತ್ತು. ಆದರೆ ಲಾಜರಿನಿಗಾದರೋ ಕಷ್ಟಗಳೇ ತುಂಬಿಕೊಂಡಿದ್ದವು. ಆದ್ದರಿಂದ ಈಗ ಅವನು ಸುಖಪಡುತ್ತಿದ್ದಾನೆ, ನೀನು ಸಂಕಟಪಡುತ್ತಿರುವೆ. 26 ಮಾತ್ರವಲ್ಲದೆ ನಿನಗೂ ನಮಗೂ ಮಧ್ಯೆ ದೊಡ್ಡ ಡೊಂಗುರವಿದೆ. ಅಲ್ಲಿಗೆ ಬಂದು ನಿನಗೆ ಸಹಾಯ ಮಾಡಲು ಯಾರಿಗೂ ಸಾಧ್ಯವಿಲ್ಲ. ಅಲ್ಲದೆ ಯಾರು ಅಲ್ಲಿಂದ ಇಲ್ಲಿಗೆ ಬರಲು ಸಾಧ್ಯವಿಲ್ಲ’ ಎಂದು ಹೇಳಿದನು.

27 “ಐಶ್ವರ್ಯವಂತನು, ‘ಹಾಗಾದರೆ, ದಯಮಾಡಿ ಲಾಜರನನ್ನು ಭೂಲೋಕದಲ್ಲಿರುವ ನನ್ನ ತಂದೆಯ ಮನೆಗೆ ಕಳುಹಿಸು! 28 ನನಗೆ ಐದು ಮಂದಿ ಸಹೋದರರಿದ್ದಾರೆ. ಅವರು ಈ ಯಾತನೆಯ ಸ್ಥಳಕ್ಕೆ ಬಾರದಂತೆ ಲಾಜರನು ಅವರನ್ನು ಎಚ್ಚರಿಸಲಿ’ ಎಂದು ಹೇಳಿದನು.

29 “ಅದಕ್ಕೆ ಅಬ್ರಹಾಮನು, ‘ಮೋಶೆಯ ಧರ್ಮಶಾಸ್ತ್ರ ಮತ್ತು ಪ್ರವಾದಿಗಳ ಗ್ರಂಥಗಳು ಅವರಲ್ಲಿ ಇವೆ. ಅವರು ಅವುಗಳನ್ನು ಓದಿ ಕಲಿತುಕೊಳ್ಳಲಿ’ ಅಂದನು.

30 “ಅದಕ್ಕೆ ಐಶ್ವರ್ಯವಂತನು, ‘ತಂದೆಯಾದ ಅಬ್ರಹಾಮನೇ, ಹಾಗೆನ್ನಬೇಡ! ಯಾರಾದರೊಬ್ಬರು ಸತ್ತವರೊಳಗಿಂದ ಎದ್ದುಹೋದರೆ, ಅವರು ತಮ್ಮ ಹೃದಯಗಳನ್ನೂ ಜೀವಿತಗಳನ್ನೂ ಮಾರ್ಪಡಿಸಿಕೊಳ್ಳುವರು’ ಎಂದು ಹೇಳಿದನು.

31 “ಅದಕ್ಕೆ ಅಬ್ರಹಾಮನು ಅವನಿಗೆ, ‘ಇಲ್ಲ! ನಿನ್ನ ಸಹೋದರರು ಮೋಶೆಯ ಮತ್ತು ಪ್ರವಾದಿಗಳ ನುಡಿಗಳನ್ನು ಕೇಳುವುದಿಲ್ಲವಾದರೆ, ಸತ್ತವರೊಳಗಿಂದ ಜೀವಿತನಾಗಿ ಎದ್ದುಬಂದವನ ಮಾತನ್ನೂ ಅವರು ಕೇಳುವುದಿಲ್ಲ’” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International