Read the Gospels in 40 Days
ಯೇಸು ಹುಟ್ಟು ಕುರುಡನನ್ನು ಗುಣಪಡಿಸುವನು
9 ಯೇಸು ನಡೆದುಕೊಂಡು ಹೋಗುತ್ತಿದ್ದಾಗ ಒಬ್ಬ ಹುಟ್ಟು ಕುರುಡನನ್ನು ಕಂಡನು. 2 ಯೇಸುವಿನ ಶಿಷ್ಯರು ಆತನಿಗೆ, “ಗುರುವೇ, ಈ ಮನುಷ್ಯನು ಹುಟ್ಟು ಕುರುಡನಾಗಲು ಯಾರ ಪಾಪ ಕಾರಣ? ಅವನ ಸ್ವಂತ ಪಾಪವೇ ಅಥವಾ ಅವನ ತಂದೆತಾಯಿಗಳ ಪಾಪವೇ?” ಎಂದು ಕೇಳಿದರು.
3 ಯೇಸು, “ಅವನ ಪಾಪವಾಗಲಿ ಅವನ ತಂದೆತಾಯಿಗಳ ಪಾಪವಾಗಲಿ ಇದಕ್ಕೆ ಕಾರಣವಲ್ಲ. ದೇವರ ಕಾರ್ಯವು ಅವನಲ್ಲಿ ತೋರಿಬಲೆಂದು ಹೀಗಾಗಿದ್ದಾನೆ. 4 ನನ್ನನ್ನು ಕಳುಹಿಸಿದಾತನ ಕಾರ್ಯವನ್ನು ಹಗಲಿರುವಾಗಲೇ ನಾವು ಮಾಡಬೇಕು. ರಾತ್ರಿ ಬರುತ್ತದೆ. ಆಗ ಯಾವನೂ ಕೆಲಸ ಮಾಡಲಾರನು. 5 ನಾನು ಈ ಲೋಕದಲ್ಲಿರುವಾಗ, ನಾನೇ ಈ ಲೋಕಕ್ಕೆ ಬೆಳಕಾಗಿದ್ದೇನೆ” ಎಂದು ಹೇಳಿದನು.
6 ಯೇಸು ಈ ಮಾತನ್ನು ಹೇಳಿದ ಮೇಲೆ ನೆಲದ ಮೇಲೆ ಉಗುಳಿ ಅದರಿಂದ ಕೆಸರನ್ನು ಮಾಡಿಕೊಂಡು ಆ ಮನುಷ್ಯನ ಕಣ್ಣುಗಳಿಗೆ ಹಚ್ಚಿದನು. 7 ಯೇಸು ಆ ಮನುಷ್ಯನಿಗೆ, “ಹೋಗಿ ಸಿಲೋವ ಕೊಳದಲ್ಲಿ ತೊಳೆದುಕೊ” ಎಂದು ಹೇಳಿದನು. (ಸಿಲೋವ ಅಂದರೆ “ಕಳುಹಿಸಲ್ಪಟ್ಟವನು.”) ಅಂತೆಯೇ ಅವನು ಹೋಗಿ ತೊಳೆದುಕೊಂಡನು. ಆ ಕೂಡಲೇ ಅವನಿಗೆ ದೃಷ್ಟಿಬಂದಿತು.
8 ಈ ಮನುಷ್ಯನು ಮೊದಲು ಭಿಕ್ಷೆ ಬೇಡುತ್ತಿದ್ದುದನ್ನು ನೋಡಿದ್ದ ಕೆಲವರು ಮತ್ತು ಅವನ ನೆರೆಯವರು, “ನೋಡಿ! ಯಾವಾಗಲೂ ಭಿಕ್ಷೆ ಬೇಡುತ್ತಾ ಕುಳಿತುಕೊಂಡಿದ್ದವನು ಇವನೇ ಅಲ್ಲವೇ” ಎಂದು ವಿಚಾರಿಸಿದರು.
9 ಕೆಲವು ಜನರು, “ಹೌದು ಅವನೇ” ಎಂದು ಹೇಳಿದರು. ಇನ್ನು ಕೆಲವರು, “ಇಲ್ಲ, ಇವನು ಆ ಮನುಷ್ಯನಲ್ಲ. ಇವನು ಅವನಂತಿದ್ದಾನಷ್ಟೇ” ಎಂದು ಹೇಳಿದರು.
ಅದಕ್ಕೆ ಆ ಮನುಷ್ಯನು, “ನಾನೇ ಅವನು” ಎಂದು ಹೇಳಿದನು.
10 ಜನರು, “ನೀನು ದೃಷ್ಟಿಯನ್ನು ಹೇಗೆ ಪಡೆದುಕೊಂಡೆ?” ಎಂದು ಕೇಳಿದರು.
11 ಆ ಮನುಷ್ಯನು, “ಯೇಸು ಎಂಬವನು ಸ್ವಲ್ಪ ಕೆಸರನ್ನು ಮಾಡಿ ನನ್ನ ಕಣ್ಣುಗಳಿಗೆ ಹಚ್ಚಿ, ಸಿಲೋವ ಕೊಳಕ್ಕೆ ಹೋಗಿ ತೊಳೆದುಕೊಳ್ಳಲು ಹೇಳಿದನು. ಅಂತೆಯೇ ನಾನು ತೊಳೆದುಕೊಂಡೆನು. ಈಗ ನನಗೆ ಕಣ್ಣು ಕಾಣಿಸುತ್ತಿದೆ” ಎಂದು ಉತ್ತರಕೊಟ್ಟನು.
12 ಜನರು ಆ ಮನುಷ್ಯನಿಗೆ, “ಆ ವ್ಯಕ್ತಿ ಎಲ್ಲಿದ್ದಾನೆ?” ಎಂದು ಕೇಳಿದರು.
ಆ ಮನುಷ್ಯನು, “ನನಗೆ ಗೊತ್ತಿಲ್ಲ” ಎಂದು ಉತ್ತರಕೊಟ್ಟನು.
ಗುಣಹೊಂದಿದ ವ್ಯಕ್ತಿಗೆ ಫರಿಸಾಯರಿಂದ ವಿಚಾರಣೆ
13 ಬಳಿಕ ಜನರು ಆ ಮನುಷ್ಯನನ್ನು ಫರಿಸಾಯರ ಬಳಿಗೆ ಕರೆದು ತಂದರು. ಮೊದಲು ಕುರುಡನಾಗಿದ್ದವನು ಅವನೇ. 14 ಯೇಸು ಕೆಸರು ಮಾಡಿ ಅವನ ಕಣ್ಣುಗಳನ್ನು ಗುಣಪಡಿಸಿದ್ದನು. ಯೇಸು ಈ ಕಾರ್ಯವನ್ನು ಮಾಡಿದ್ದು ಸಬ್ಬತ್ದಿನದಲ್ಲಿ. 15 ಆದ್ದರಿಂದ ಅವರು ಆ ಮನುಷ್ಯನಿಗೆ, “ನೀನು ದೃಷ್ಟಿಯನ್ನು ಹೇಗೆ ಪಡೆದುಕೊಂಡೆ?” ಎಂದು ಕೇಳಿದರು.
ಆ ಮನುಷ್ಯನು, “ಆತನು ನನ್ನ ಕಣ್ಣುಗಳಿಗೆ ಕೆಸರನ್ನು ಹಚ್ಚಿದನು. ನಾನು ತೊಳೆದುಕೊಂಡೆನು. ಈಗ ನನಗೆ ಕಣ್ಣು ಕಾಣಿಸುತ್ತಿದೆ” ಎಂದು ಉತ್ತರಕೊಟ್ಟನು.
16 ಫರಿಸಾಯರಲ್ಲಿ ಕೆಲವರು, “ಈ ಮನುಷ್ಯನು (ಯೇಸು) ಸಬ್ಬತ್ದಿನದ ವಿಷಯದಲ್ಲಿ ಧರ್ಮಶಾಸ್ತ್ರಕ್ಕೆ ವಿಧೇಯನಾಗುವುದಿಲ್ಲ. ಆದ್ದರಿಂದ ಇವನು ದೇವರಿಂದ ಬಂದಿಲ್ಲ” ಎಂದು ಹೇಳಿದರು.
ಇತರರು, “ಇವನು ಪಾಪಿಯಾಗಿದ್ದರೆ ಇಂಥ ಅದ್ಭುತಕಾರ್ಯಗಳನ್ನು ಹೇಗೆ ಮಾಡಲಾದೀತು?” ಎಂದರು. ಹೀಗೆ ಯೆಹೂದ್ಯರಲ್ಲೇ ಭಿನ್ನಾಭಿಪ್ರಾಯ ಉಂಟಾಯಿತು.
17 ಯೆಹೂದ್ಯನಾಯಕರು ಗುಣಹೊಂದಿದವನಿಗೆ, “ಆ ಮನುಷ್ಯನು (ಯೇಸು) ನಿನ್ನನ್ನು ಗುಣಪಡಿಸಿದನು ಮತ್ತು ನಿನಗೆ ಕಣ್ಣು ಕಾಣಿಸುತ್ತಿದೆ. ಆದರೆ ಅವನ ಬಗ್ಗೆ ನಿನಗೇನು ಅನ್ನಿಸುತ್ತದೆ?” ಎಂದು ಕೇಳಿದರು.
ಅದಕ್ಕೆ ಅವನು, “ಆತನು ಒಬ್ಬ ಪ್ರವಾದಿ” ಎಂದು ಉತ್ತರಕೊಟ್ಟನು.
18 ಈ ಮನುಷ್ಯನು ಮೊದಲು ಕುರುಡನಾಗಿದ್ದನು. ಆದರೆ ಈಗ ಇವನಿಗೆ ಗುಣವಾಗಿದೆ ಎಂದು ಯೆಹೂದ್ಯನಾಯಕರುಗಳು ನಂಬಲಿಲ್ಲ. ಆದ್ದರಿಂದ ಅವರು ಅವನ ತಂದೆತಾಯಿಗಳನ್ನು ಕರೆಯಿಸಿದರು. 19 ಅವರು ಅವನ ತಂದೆತಾಯಿಗಳಿಗೆ, “ಇವನು ನಿಮ್ಮ ಮಗನೋ? ಇವನು ಹುಟ್ಟುಕುರುಡನೆಂದು ನೀವು ಹೇಳುತ್ತೀರಿ. ಹಾಗಾದರೆ ಇವನಿಗೆ ಈಗ ಹೇಗೆ ಕಣ್ಣು ಕಾಣಿಸುತ್ತದೆ?” ಎಂದು ಕೇಳಿದರು.
20 ತಂದೆತಾಯಿಗಳು, “ಇವನು ನಮ್ಮ ಮಗನೆಂದು ನಮಗೆ ಗೊತ್ತು. ಇವನು ಹುಟ್ಟುಕುರುಡನೆಂಬುದೂ ನಮಗೆ ಗೊತ್ತು. 21 ಆದರೆ ಈಗ ಅವನಿಗೆ ಹೇಗೆ ಕಣ್ಣು ಕಾಣಿಸುತ್ತದೆಯೋ ಯಾರು ಗುಣಪಡಿಸಿದರೋ ನಮಗೆ ತಿಳಿಯದು. ಅವನನ್ನೇ ಕೇಳಿ. ಇವನು ತನ್ನ ವಿಷಯವಾಗಿ ಹೇಳುವಷ್ಟು ಪ್ರಾಯಸ್ಥನಾಗಿದ್ದಾನೆ” ಎಂದು ಉತ್ತರಕೊಟ್ಟರು. 22 ಅವನ ತಂದೆತಾಯಿಗಳು ಯೆಹೂದ್ಯ ನಾಯಕರಿಗೆ ಹೆದರಿಕೊಂಡಿದ್ದರಿಂದ ಹಾಗೆ ಹೇಳಿದರು. ಯೇಸುವನ್ನು ಕ್ರಿಸ್ತನೆಂದು ಹೇಳುವ ಯಾರನ್ನೇ ಆಗಲಿ ಸಭಾಮಂದಿರದಿಂದ ಬಹಿಷ್ಕರಿಸುವುದಾಗಿ ಯೆಹೂದ್ಯನಾಯಕರುಗಳು ಪ್ರಕಟಿಸಿದ್ದರು. 23 ಆದಕಾರಣವೇ ಅವನ ತಂದೆತಾಯಿಗಳು, “ಅವನು ಪ್ರಾಯಸ್ಥನಾಗಿದ್ದಾನೆ. ಅವನನ್ನೇ ಕೇಳಿ” ಎಂದು ಹೇಳಿದರು.
24 ಯೆಹೂದ್ಯನಾಯಕರು ಕುರುಡನಾಗಿದ್ದ ಆ ಮನುಷ್ಯನನ್ನು ಒಳಗೆ ಕರೆದು, “ನೀನು ದೇವರನ್ನು ಮಹಿಮೆಪಡಿಸಬೇಕು. ಈ ಮನುಷ್ಯನು (ಯೇಸು) ಪಾಪಿಯೆಂದು ನಮಗೆ ಗೊತ್ತಿದೆ” ಎಂದರು.
25 ಆ ಮನುಷ್ಯನು, “ಅವನು ಪಾಪಿಯೋ ಅಲ್ಲವೋ ನನಗೆ ಗೊತ್ತಿಲ್ಲ. ಆದರೆ ನಾನು ಕುರುಡನಾಗಿದ್ದೆನು; ಈಗ ನನಗೆ ದೃಷ್ಟಿ ಬಂದಿದೆ ಎಂಬುದಂತೂ ನನಗೆ ಗೊತ್ತಿದೆ” ಎಂದು ಉತ್ತರಕೊಟ್ಟನು.
26 ಯೆಹೂದ್ಯನಾಯಕರು, “ಅವನು (ಯೇಸು) ನಿನಗೇನು ಮಾಡಿದನು? ಅವನು ನಿನ್ನ ಕಣ್ಣುಗಳನ್ನು ಹೇಗೆ ಗುಣಪಡಿಸಿದನು?” ಎಂದು ಕೇಳಿದರು.
27 ಆ ಮನುಷ್ಯನು, “ಆಗಲೇ ನಿಮಗೆ ಅದನ್ನು ತಿಳಿಸಿದ್ದೇನೆ. ಆದರೆ ನೀವು ನನಗೆ ಕಿವಿಗೊಡಲಿಲ್ಲ. ಈಗ ಅದನ್ನು ಮತ್ತೆ ಏಕೆ ಕೇಳಬೇಕೆಂದಿದ್ದೀರಿ? ನೀವು ಸಹ ಆತನ ಹಿಂಬಾಲಕರಾಗಬೇಕೆಂದಿದ್ದೀರೋ?” ಎಂದು ಉತ್ತರಕೊಟ್ಟನು.
28 ಯೆಹೂದ್ಯನಾಯಕರು ಕೋಪಗೊಂಡು ಆ ಮನುಷ್ಯನನ್ನು ಅಪಹಾಸ್ಯಮಾಡಿ, “ನೀನು ಅವನ (ಯೇಸು) ಹಿಂಬಾಲಕನಾಗಿರುವೆ. ನಾವು ಮೋಶೆಯ ಹಿಂಬಾಲಕರಾಗಿದ್ದೇವೆ. 29 ದೇವರು ಮೋಶೆಯೊಂದಿಗೆ ಮಾತಾಡಿದನೆಂಬುದನ್ನು ನಾವು ಬಲ್ಲೆವು. ಆದರೆ ಆ ಮನುಷ್ಯನು (ಯೇಸು) ಎಲ್ಲಿಂದ ಬಂದನೆಂಬುದು ಸಹ ನಮಗೆ ಗೊತ್ತಿಲ್ಲ!” ಎಂದು ಹೇಳಿದರು.
30 ಆ ಮನುಷ್ಯನು, “ಇದು ಬಹು ಆಶ್ಚರ್ಯಕರವಾದ ಸಂಗತಿ. ಯೇಸು ಎಲ್ಲಿಂದ ಬಂದನೆಂಬುದು ನಿಮಗೆ ಗೊತ್ತಿಲ್ಲ. ಆದರೆ ಆತನು ನನ್ನ ಕಣ್ಣುಗಳನ್ನು ಗುಣಪಡಿಸಿದನು. 31 ದೇವರು ಪಾಪಿಗಳಿಗೆ ಕಿವಿಗೊಡುವುದಿಲ್ಲವೆಂಬುದು ನಮ್ಮೆಲರಿಗೂ ಗೊತ್ತಿದೆ. ಆದರೆ ದೇವರು ತನ್ನನ್ನು ಆರಾಧಿಸುವವನಿಗೂ ಮತ್ತು ತನಗೆ ವಿಧೇಯನಾಗುವವನಿಗೂ ಕಿವಿಗೊಡುತ್ತಾನೆ. 32 ಹುಟ್ಟುಕುರುಡನೊಬ್ಬನನ್ನು ಯಾರಾದರೂ ಎಂದಾದರೂ ಗುಣಪಡಿಸಿರುವುದು ಇದೇ ಮೊದಲನೆ ಸಲ. 33 ಆ ಮನುಷ್ಯನು (ಯೇಸು) ದೇವರಿಂದಲೇ ಬಂದಿರಬೇಕು. ಆತನು ದೇವರಿಂದ ಬಂದಿಲ್ಲದಿದ್ದರೆ, ಇಂಥ ಕಾರ್ಯಗಳನ್ನು ಮಾಡಲಾಗುತ್ತಿರಲಿಲ್ಲ” ಎಂದು ಉತ್ತರಕೊಟ್ಟನು.
34 ಯೆಹೂದ್ಯನಾಯಕರು, “ಪಾಪದಲ್ಲೇ ಹುಟ್ಟಿ ಬೆಳೆದವನು ನೀನು! ನಮಗೇ ಉಪದೇಶಮಾಡುವಿಯಾ?” ಎಂದು ಉತ್ತರಕೊಟ್ಟರು. ಅಲ್ಲದೆ ಅವರು ಅವನನ್ನು ಬಲವಂತವಾಗಿ ಹೊರಗಟ್ಟಿದರು.
ಆತ್ಮಿಕ ಅಂಧತೆ
35 ಯೆಹೂದ್ಯನಾಯಕರು ಆ ಮನುಷ್ಯನನ್ನು ಹೊರಗಟ್ಟಿದ್ದು ಯೇಸುವಿಗೆ ತಿಳಿಯಿತು. ಯೇಸು ಆ ಮನುಷ್ಯನನ್ನು ಕಂಡು, “ನೀನು ಮನುಷ್ಯಕುಮಾರನಲ್ಲಿ ನಂಬಿಕೆಯಿಡುವಿಯಾ?” ಎಂದು ಕೇಳಿದನು.
36 ಆ ಮನುಷ್ಯನು, “ಸ್ವಾಮೀ, ಆ ಮನುಷ್ಯಕುಮಾರನು ಯಾರು? ನನಗೆ ತಿಳಿಸು. ನಾನು ಆತನಲ್ಲಿ ನಂಬಿಕೆ ಇಡುತ್ತೇನೆ” ಎಂದು ಹೇಳಿದನು.
37 ಯೇಸು, “ನೀನು ಆತನನ್ನು ಈಗಾಗಲೇ ನೋಡಿರುವೆ. ಈಗ ನಿನ್ನೊಂದಿಗೆ ಮಾತಾಡುತ್ತಿರುವಾತನೇ ಮನುಷ್ಯಕುಮಾರನು” ಎಂದು ಹೇಳಿದನು.
38 ಆ ಮನುಷ್ಯನು, “ಹೌದು ಪ್ರಭುವೇ, ನಾನು ನಂಬುತ್ತೇನೆ!” ಎಂದು ಉತ್ತರಕೊಟ್ಟನು. ಬಳಿಕ ಅವನು ಯೇಸುವಿಗೆ ಅಡ್ಡಬಿದ್ದು ಆರಾಧಿಸಿದನು.
39 ಯೇಸು, “ಈ ಲೋಕಕ್ಕೆ ತೀರ್ಪಾಗಲೆಂದು ನಾನು ಈ ಲೋಕಕ್ಕೆ ಬಂದೆನು. ಕುರುಡರು ಕಾಣುವಂತಾಗಲೆಂದೂ ಕಣ್ಣುಳ್ಳವರು ಕುರುಡರಾಗಲೆಂದೂ ನಾನು ಬಂದೆನು” ಎಂದು ಹೇಳಿದನು.
40 ಅಲ್ಲಿದ್ದ ಫರಿಸಾಯರು ಇದನ್ನು ಕೇಳಿ, “ಏನು? ನಮ್ಮನ್ನು ಸಹ ಕುರುಡರೆಂದು ಹೇಳುತ್ತಿರುವೆಯಾ?” ಎಂದು ಪ್ರಶ್ನಿಸಿದರು.
41 ಯೇಸು, “ನೀವು ನಿಜವಾಗಿಯೂ ಕುರುಡರಾಗಿದ್ದರೆ ಪಾಪವೆಂಬ ಅಪರಾಧಕ್ಕೆ ಗುರಿಯಾಗುತ್ತಿರಲಿಲ್ಲ. ಆದರೆ ನೀವು, ‘ನಮಗೆ ಕಣ್ಣು ಕಾಣುತ್ತದೆ’ ಎಂದು ಹೇಳುತ್ತೀರಿ. ಆದ್ದರಿಂದ ನೀವು ಪಾಪಿಗಳೇ ಆಗಿದ್ದೀರಿ” ಎಂದು ಹೇಳಿದನು.
ಕುರುಬನು ಮತ್ತು ಅವನ ಕುರಿಗಳು
10 ಯೇಸು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಒಬ್ಬನು ಕುರಿಹಟ್ಟಿಯೊಳಗೆ ಪ್ರವೇಶಿಸುವಾಗ ಬಾಗಿಲಿನ ಮೂಲಕ ಪ್ರವೇಶಿಸಬೇಕು. ಮತ್ತೆಲ್ಲಿಂದಾದರೂ ಹತ್ತಿ ಬರುವವನು ಸುಲಿಗೆಗಾರನಾಗಿದ್ದಾನೆ; ಕುರಿಗಳನ್ನು ಕದ್ದುಕೊಳ್ಳಲು ಪ್ರಯತ್ನಿಸುವವನಾಗಿದ್ದಾನೆ. 2 ಆದರೆ ಕುರುಬನು ಬಾಗಿಲ ಮೂಲಕ ಪ್ರವೇಶಿಸುತ್ತಾನೆ. 3 ಕಾವಲುಗಾರನು ಕುರುಬನಿಗೆ ಬಾಗಿಲನ್ನು ತೆರೆಯುತ್ತಾನೆ. ಕುರಿಗಳು ಅವನ ಸ್ವರಕ್ಕೆ ಕಿವಿಗೊಡುತ್ತವೆ. ಕುರುಬನು ತನ್ನ ಸ್ವಂತ ಕುರಿಗಳನ್ನು ಹೆಸರು ಹಿಡಿದು ಕರೆದು ಹೊರಗೆ ಬಿಡುತ್ತಾನೆ. 4 ಆ ಬಳಿಕ ಅವುಗಳ ಮುಂದೆ ಹೋಗುತ್ತಾ ಅವುಗಳಿಗೆ ಮಾರ್ಗದರ್ಶನ ಮಾಡುತ್ತಾನೆ. ಕುರಿಗಳು ಅವನನ್ನು ಹಿಂಬಾಲಿಸುತ್ತವೆ; ಏಕೆಂದರೆ ಅವು ಅವನ ಸ್ವರವನ್ನು ತಿಳಿದಿವೆ. 5 ಆದರೆ ಕುರಿಗಳು ತಮಗೆ ಗೊತ್ತಿಲ್ಲದ ವ್ಯಕ್ತಿಯನ್ನು ಎಂದಿಗೂ ಹಿಂಬಾಲಿಸುವುದಿಲ್ಲ. ಅವುಗಳು ಆ ವ್ಯಕ್ತಿಯ ಬಳಿಯಿಂದ ಓಡಿಹೋಗುತ್ತವೆ. ಏಕೆಂದರೆ ಅವುಗಳು ಅವನ ಸ್ವರವನ್ನು ತಿಳಿದಿಲ್ಲ” ಎಂದು ಹೇಳಿದನು.
6 ಯೇಸು ಹೇಳಿದ ಈ ಸಾಮ್ಯದ ಅರ್ಥವನ್ನು ಜನರು ಗ್ರಹಿಸಿಕೊಳ್ಳಲಿಲ್ಲ.
ಯೇಸು ಒಳ್ಳೆಯ ಕುರುಬ
7 ಆದ್ದರಿಂದ ಯೇಸು ಮತ್ತೆ, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನಾನೇ ಕುರಿಗಳಿಗೆ ಬಾಗಿಲಾಗಿದ್ದೇನೆ. 8 ನಾನು ಬರುವುದಕ್ಕಿಂತ ಮೊದಲು ಬಂದವರೆಲ್ಲರೂ ಕಳ್ಳರಾಗಿದ್ದರು ಮತ್ತು ಸುಲಿಗೆಗಾರರಾಗಿದ್ದರು. ಕುರಿಗಳು ಅವರಿಗೆ ಕಿವಿಗೊಡಲಿಲ್ಲ. 9 ನಾನೇ ಬಾಗಿಲಾಗಿದ್ದೇನೆ. ನನ್ನ ಮೂಲಕವಾಗಿ ಪ್ರವೇಶಿಸುವವರು ರಕ್ಷಣೆ ಹೊಂದುವರು. ಅವರು ಒಳಗೆ ಬರಬಲ್ಲರು. ಹೊರಗೆ ಹೋಗಬಲ್ಲರು ಮತ್ತು ಹುಲ್ಲುಗಾವಲನ್ನು ಕಂಡುಕೊಳ್ಳುವರು. 10 ಕಳ್ಳನು ಕದಿಯುವುದಕ್ಕೂ ಕೊಲ್ಲುವುದಕ್ಕೂ ನಾಶಮಾಡುವುದಕ್ಕೂ ಬರುತ್ತಾನೆ. ನಾನಾದರೋ ಸಮೃದ್ಧಿಕರವಾದ ಜೀವವನ್ನು ಕೊಡಲು ಬಂದೆನು.
11 “ನಾನೇ ಒಳ್ಳೆಯ ಕುರುಬ. ಒಳ್ಳೆಯ ಕುರುಬನು ಕುರಿಗಳಿಗಾಗಿ ತನ್ನ ಪ್ರಾಣವನ್ನು ಕೊಡುತ್ತಾನೆ. 12 ಕುರಿಗಳನ್ನು ನೋಡಿಕೊಳ್ಳುವುದಕ್ಕಾಗಿ ನೇಮಿತನಾಗಿರುವ ಕೂಲಿಯಾಳು ಕುರುಬನಿಗಿಂತ ಭಿನ್ನವಾಗಿದ್ದಾನೆ. ಕೂಲಿಯಾಳು ಕುರಿಗಳ ಒಡೆಯನಲ್ಲ. ಆದ್ದರಿಂದ ಕೂಲಿಯಾಳು ತೋಳ ಬರುವುದನ್ನು ಕಾಣುವಾಗ ಕುರಿಗಳನ್ನು ಬಿಟ್ಟು ಓಡಿಹೋಗುತ್ತಾನೆ. ಆಗ ತೋಳವು ಕುರಿಗಳ ಮೇಲೆ ಬಿದ್ದು ಅವುಗಳನ್ನು ಚದರಿಸಿಬಿಡುತ್ತದೆ. 13 ಆ ವ್ಯಕ್ತಿಯು ಓಡಿಹೋಗುತ್ತಾನೆ. ಏಕೆಂದರೆ ಅವನು ಕೇವಲ ಕೂಲಿಗಾರನಾಗಿದ್ದಾನೆ. ಅವನ ಕುರಿಗಳ ಬಗ್ಗೆ ನಿಜವಾಗಿಯೂ ಚಿಂತಿಸುವುದಿಲ್ಲ.
14-15 “ನಾನು ಕುರಿಗಳಿಗಾಗಿ (ಜನರಿಗಾಗಿ) ಚಿಂತಿಸುವ ಕುರುಬನಾಗಿದ್ದೇನೆ. ನನ್ನ ತಂದೆಯು ನನ್ನನ್ನು ತಿಳಿದಿರುವಂತೆ ನನ್ನ ಕುರಿಗಳನ್ನು ನಾನು ತಿಳಿದಿದ್ದೇನೆ. ಮತ್ತು ನಾನು ನನ್ನ ತಂದೆಯನ್ನು ತಿಳಿದಿರುವಂತೆ ನನ್ನ ಕುರಿಗಳು ನನ್ನನ್ನು ತಿಳಿದಿವೆ. ಈ ಕುರಿಗಳಿಗೋಸ್ಕರ ನನ್ನ ಜೀವವನ್ನೇ ಕೊಡುತ್ತೇನೆ. 16 ನನಗೆ ಬೇರೆ ಕುರಿಗಳು ಸಹ ಇವೆ. ಅವುಗಳು ಇಲ್ಲಿರುವ ಈ ಮಂದೆಯಲ್ಲಿಲ್ಲ. ನಾನು ಅವುಗಳನ್ನು ಸಹ ಒಳಗೆ ನಡೆಸಬೇಕು. ಅವುಗಳು ನನ್ನ ಸ್ವರಕ್ಕೆ ಕಿವಿಗೊಡುತ್ತವೆ. ಮುಂದಿನ ಕಾಲದಲ್ಲಿ ಒಂದೇ ಮಂದೆಯಿರುವುದು ಮತ್ತು ಒಬ್ಬನೇ ಕುರುಬನಿರುವನು. 17 ತಂದೆಯು ನನ್ನನ್ನು ಪ್ರೀತಿಸುತ್ತಾನೆ. ಏಕೆಂದರೆ ನಾನು ನನ್ನ ಪ್ರಾಣವನ್ನು ಮತ್ತೆ ಪಡೆದುಕೊಳ್ಳುವುದಕ್ಕಾಗಿ ಕೊಡುತ್ತೇನೆ. 18 ನನ್ನ ಪ್ರಾಣವನ್ನು ಯಾರೂ ನನ್ನಿಂದ ಕಸಿದುಕೊಳ್ಳಲಾರರು; ನಾನೇ ಅದನ್ನು ಇಚ್ಛಾಪೂರ್ವಕವಾಗಿ ಕೊಡುತ್ತೇನೆ. ನನ್ನ ಪ್ರಾಣವನ್ನು ಕೊಡುವುದಕ್ಕೂ ಅದನ್ನು ಮತ್ತೆ ಪಡೆದುಕೊಳ್ಳುವುದಕ್ಕೂ ನನಗೆ ಹಕ್ಕಿದೆ. ಹೀಗೆ ಮಾಡಬೇಕೆಂದು ತಂದೆಯೇ ನನಗೆ ಆಜ್ಞಾಪಿಸಿದ್ದಾನೆ” ಎಂದು ಹೇಳಿದನು.
19 ಯೇಸು ಈ ಸಂಗತಿಗಳನ್ನು ಹೇಳಿದ್ದರಿಂದ ಯೆಹೂದ್ಯರಲ್ಲಿ ಮತ್ತೆ ಭೇದ ಉಂಟಾಯಿತು. 20 ಅವರಲ್ಲಿ ಅನೇಕರು, “ಅವನೊಳಗೆ ದೆವ್ವವು ಸೇರಿಕೊಂಡು ಅವನನ್ನು ಹುಚ್ಚನನ್ನಾಗಿ ಮಾಡಿದೆ. ಅವನಿಗೆ ಏಕೆ ಕಿವಿಗೊಡುತ್ತೀರಿ?” ಎಂದು ಹೇಳಿದರು.
21 ಆದರೆ ಇತರರು, “ದೆವ್ವದಿಂದ ಹುಚ್ಚು ಹಿಡಿದಿರುವ ಮನುಷ್ಯನು ಈ ರೀತಿಯ ಸಂಗತಿಗಳನ್ನು ಹೇಳುವುದಿಲ್ಲ. ಕುರುಡರ ಕಣ್ಣುಗಳನ್ನು ಗುಣಪಡಿಸಲು ದೆವ್ವಕ್ಕೆ ಸಾಧ್ಯವೇ? ಇಲ್ಲ!” ಎಂದು ಹೇಳಿದರು.
ಯೇಸುವಿನ ವಿರುದ್ಧ ಯೆಹೂದ್ಯರು
22 ಜೆರುಸಲೇಮಿನಲ್ಲಿ ಆಚರಿಸುವ ಪ್ರತಿಷ್ಠೆಯ ಹಬ್ಬವು ನಡೆಯುತ್ತಿತ್ತು. ಅದು ಚಳಿಗಾಲದಲ್ಲಿ ಆಚರಿಸುವ ಹಬ್ಬ. 23 ಯೇಸು ದೇವಾಲಯದೊಳಗೆ ಸೊಲೊಮೋನನ ಆಲಯದಲ್ಲಿದ್ದನು. 24 ಯೆಹೂದ್ಯರು ಯೇಸುವಿನ ಸುತ್ತಲೂ ನೆರೆದರು. ಅವರು ಆತನಿಗೆ, “ಇನ್ನೆಷ್ಟುಕಾಲ ನೀನು ನಿನ್ನ ಬಗ್ಗೆ ನಮ್ಮನ್ನು ಆಶ್ಚರ್ಯಗೊಳಿಸುವೆ? ನೀನು ಕ್ರಿಸ್ತನಾಗಿದ್ದರೆ, ನಮಗೆ ಸ್ಪಷ್ಟವಾಗಿ ತಿಳಿಸು” ಎಂದು ಹೇಳಿದರು.
25 ಯೇಸು, “ನಾನು ಆಗಲೇ ನಿಮಗೆ ಹೇಳಿದೆನು. ಆದರೆ ನೀವು ನಂಬಲಿಲ್ಲ. ನನ್ನ ತಂದೆಯ ಹೆಸರಿನಲ್ಲಿ ನಾನು ಅದ್ಭುತಕಾರ್ಯಗಳನ್ನು ಮಾಡುತ್ತೇನೆ. ನಾನು ಯಾರೆಂಬುದನ್ನು ಆ ಅದ್ಭುತಕಾರ್ಯಗಳು ತೋರಿಸುತ್ತವೆ. 26 ಆದರೆ ನೀವು ನಂಬುವುದಿಲ್ಲ. ಏಕೆಂದರೆ ನೀವು ನನ್ನ ಕುರಿಗಳಲ್ಲ (ಜನರಲ್ಲ). 27 ನನ್ನ ಕುರಿಗಳು ನನ್ನ ಸ್ವರಕ್ಕೆ ಕಿವಿಗೊಡುತ್ತವೆ. ನಾನು ಅವುಗಳನ್ನು ಬಲ್ಲೆನು ಮತ್ತು ಅವುಗಳು ನನ್ನನ್ನು ಹಿಂಬಾಲಿಸುತ್ತವೆ. 28 ನನ್ನ ಕುರಿಗಳಿಗೆ ನಾನು ನಿತ್ಯಜೀವವನ್ನು ಕೊಡುತ್ತೇನೆ. ಅವು ಎಂದಿಗೂ ಸಾಯುವುದಿಲ್ಲ, ಮತ್ತು ಅವುಗಳನ್ನು ಯಾರೂ ನನ್ನಿಂದ ಕಸಿದುಕೊಳ್ಳಲಾರರು. 29 ನನ್ನ ಕುರಿಗಳನ್ನು ನನ್ನ ತಂದೆಯೇ ನನಗೆ ಕೊಟ್ಟನು. ಆತನು ಎಲ್ಲರಿಗಿಂತಲೂ ದೊಡ್ಡವನಾಗಿದ್ದಾನೆ. ನನ್ನ ಕುರಿಗಳನ್ನು ನನ್ನ ತಂದೆಯ ಕೈಯಿಂದ ಯಾರೂ ಕದ್ದುಕೊಳ್ಳಲಾರರು. 30 ತಂದೆಯು ಮತ್ತು ನಾನು ಒಂದೇ ಆಗಿದ್ದೇವೆ” ಎಂದು ಉತ್ತರಕೊಟ್ಟನು.
31 ಯೆಹೂದ್ಯರು ಯೇಸುವನ್ನು ಕೊಲ್ಲಲು ಮತ್ತೆ ಕಲ್ಲುಗಳನ್ನು ತೆಗೆದುಕೊಂಡರು. 32 ಆದರೆ ಯೇಸು ಅವರಿಗೆ, “ನಾನು ತಂದೆಯಿಂದ ಅನೇಕ ಒಳ್ಳೆಯ ಕಾರ್ಯಗಳನ್ನು ಮಾಡಿದ್ದೇನೆ. ನೀವು ಆ ಕಾರ್ಯಗಳನ್ನು ನೋಡಿದ್ದೀರಿ. ಆ ಒಳ್ಳೆಯ ಕಾರ್ಯಗಳಲ್ಲಿ ಯಾವುದರ ನಿಮಿತ್ತ ನೀವು ನನ್ನನ್ನು ಕೊಲ್ಲಬೇಕೆಂದಿದ್ದೀರಿ?” ಎಂದು ಹೇಳಿದನು.
33 ಯೆಹೂದ್ಯರು, “ನಾವು ನಿನ್ನನ್ನು ಕೊಲ್ಲುತ್ತಿರುವುದು ನೀನು ಮಾಡಿದ ಯಾವುದೇ ಒಳ್ಳೆಯ ಕಾರ್ಯದ ನಿಮಿತ್ತದಿಂದಲ್ಲ. ನೀನು ಮಾಡುತ್ತಿರುವ ದೇವದೂಷಣೆಗಾಗಿ. ನೀನು ಕೇವಲ ಒಬ್ಬ ಮನುಷ್ಯ. ನೀನು ನಿನ್ನನ್ನೇ ದೇವರೆಂದು ಹೇಳಿಕೊಳ್ಳುತ್ತಿರುವೆ! ಆದಕಾರಣ ಕಲ್ಲುಗಳಿಂದ ನಿನ್ನನ್ನು ಕೊಲ್ಲಬೇಕೆಂದಿದ್ದೇವೆ!” ಎಂದು ಉತ್ತರಕೊಟ್ಟರು.
34 ಅದಕ್ಕೆ ಯೇಸು, “ನಿಮ್ಮ ಧರ್ಮಶಾಸ್ತ್ರದಲ್ಲಿ, ‘ನಾನು ನಿಮ್ಮನ್ನು ದೇವರುಗಳೆಂದು ಹೇಳಿದೆನು’(A) ಎಂಬುದಾಗಿ ಬರೆದಿದೆ. 35 ದೇವರ ಸಂದೇಶವನ್ನು ಹೊಂದಿದ್ದ ಜನರನ್ನು ಈ ಪವಿತ್ರ ಗ್ರಂಥವು ದೇವರುಗಳೆಂದು ಕರೆದಿದೆ. ಪವಿತ್ರ ಗ್ರಂಥವು ಯಾವಾಗಲೂ ಸತ್ಯವಾದದ್ದು. 36 ತಂದೆಯೇ ನನ್ನನ್ನು ಪ್ರತಿಷ್ಠಿಸಿ ಈ ಲೋಕಕ್ಕೆ ಕಳುಹಿಸಿಕೊಟ್ಟಿರುವುದರಿಂದ ನಾನು ದೇವರ ಮಗನು ಎಂದು ಹೇಳಿದ್ದಕ್ಕೆ ನೀವು ನನ್ನನ್ನು ದೇವದೂಷಣೆ ಮಾಡುವವನೆಂದು ಹೇಳುವುದೇಕೆ? 37 ನನ್ನ ತಂದೆಯು ಮಾಡುವುದನ್ನು ನಾನು ಮಾಡದಿದ್ದರೆ, ನಾನು ಹೇಳುವುದನ್ನು ನಂಬಬೇಡಿ. 38 ಆದರೆ ನನ್ನ ತಂದೆಯು ಮಾಡುವ ಕಾರ್ಯಗಳನ್ನೇ ನಾನು ಮಾಡಿದರೆ, ಆ ಕಾರ್ಯಗಳಲ್ಲಿ ನೀವು ನಂಬಿಕೆ ಇಡಬೇಕು. ನೀವು ನನ್ನಲ್ಲಿ ನಂಬಿಕೆ ಇಡದಿದ್ದರೂ ನನ್ನ ಕಾರ್ಯಗಳಲ್ಲಾದರೂ ನಂಬಿಕೆ ಇಡಿರಿ. ತಂದೆಯು ನನ್ನಲ್ಲಿದ್ದಾನೆ ಮತ್ತು ನಾನು ತಂದೆಯಲ್ಲಿದ್ದೇನೆ ಎಂಬುದನ್ನು ಆಗ ನೀವು ತಿಳಿದುಕೊಳ್ಳುವಿರಿ ಮತ್ತು ಅರ್ಥಮಾಡಿಕೊಳ್ಳುವಿರಿ” ಎಂದು ಹೇಳಿದನು.
39 ಯೇಸುವನ್ನು ಬಂಧಿಸಲು ಯೆಹೂದ್ಯರು ಮತ್ತೆ ಪ್ರಯತ್ನಿಸಿದರು. ಆದರೆ ಯೇಸು ಅವರಿಂದ ತಪ್ಪಿಸಿಕೊಂಡನು.
40 ಬಳಿಕ ಯೇಸು ಜೋರ್ಡನ್ ನದಿಯ ಆಚೆಯ ದಡಕ್ಕೆ ಹೋದನು. ಯೋಹಾನನು ಮೊದಲು ದೀಕ್ಷಾಸ್ನಾನ ಕೊಡುತ್ತಿದ್ದ ಸ್ಥಳಕ್ಕೆ ಯೇಸು ಹೋಗಿ ಅಲ್ಲಿ ತಂಗಿದನು. 41 ಆಗ ಅನೇಕ ಜನರು ಆತನ ಬಳಿಗೆ ಬಂದರು. “ಯೋಹಾನನು ಎಂದೂ ಅದ್ಭುತಕಾರ್ಯವನ್ನು ಮಾಡಲಿಲ್ಲ. ಆದರೆ ಯೋಹಾನನು ಈ ಮನುಷ್ಯನ (ಯೇಸುವಿನ) ಬಗ್ಗೆ ಹೇಳಿದ ಪ್ರತಿಯೊಂದೂ ಸತ್ಯವಾದದ್ದು” ಎಂದು ಅವರು ಮಾತಾಡಿಕೊಂಡರು. 42 ಮತ್ತು ಅಲ್ಲಿ ಅನೇಕ ಜನರು ಯೇಸುವಿನಲ್ಲಿ ನಂಬಿಕೆ ಇಟ್ಟರು.
Kannada Holy Bible: Easy-to-Read Version. All rights reserved. © 1997 Bible League International