Daily Reading for Personal Growth, 40 Days with God
1 ದೇವರ ಮತ್ತು ಪ್ರಭುವಾದ ಯೇಸು ಕ್ರಿಸ್ತನ ಸೇವಕನಾದ ಯಾಕೋಬನು ಲೋಕದಲ್ಲೆಲ್ಲಾ ಚದರಿಹೋಗಿರುವ (ಇಸ್ರೇಲಿನ) ಹನ್ನೆರಡು ಕುಲದವರಿಗೆ ಬರೆದ ಪತ್ರ. ನಿಮಗೆ ಶುಭವಾಗಲಿ.
ನಂಬಿಕೆ ಮತ್ತು ಜ್ಞಾನ
2 ನನ್ನ ಸಹೋದರ ಸಹೋದರಿಯರೇ, ನಿಮಗೆ ಅನೇಕ ತೊಂದರೆಗಳು ಬರುತ್ತವೆ. ಆದರೆ ಅವುಗಳು ಬಂದಾಗ ನೀವು ಬಹಳ ಸಂತೋಷಪಡಬೇಕು. 3 ಏಕೆಂದರೆ ಅವುಗಳು ನಿಮ್ಮ ನಂಬಿಕೆಯನ್ನು ಪರಿಶೋಧಿಸಲು ಬಂದಿವೆ ಎಂಬುದು ನಿಮಗೆ ತಿಳಿದದೆ. ಅವು ನಿಮ್ಮಲ್ಲಿ ತಾಳ್ಮೆಯನ್ನು ಉಂಟುಮಾಡುತ್ತವೆ. 4 ತಾಳ್ಮೆಯು ತನ್ನ ಕಾರ್ಯವನ್ನು ಪೂರೈಸಲಿ. ಆಗ ನೀವು ನಿಷ್ಕಳಂಕರೂ ಮತ್ತು ಪರಿಪೂರ್ಣರೂ ಆಗುವಿರಿ ಮತ್ತು ನಿಮಗೆ ಬೇಕಾದುದೆಲ್ಲವೂ ದೊರೆಯುವುದು.
5 ಆದರೆ ನಿಮ್ಮಲ್ಲಿ ಯಾರಿಗಾದರೂ ಜ್ಞಾನವು ಬೇಕಾಗಿದ್ದರೆ ಅಂಥವರು ದೇವರಲ್ಲಿ ಕೇಳಿಕೊಳ್ಳಲಿ. ದೇವರು ಉದಾರಿಯಾಗಿರುವುದರಿಂದ ಮತ್ತು ಎಲ್ಲಾ ಜನರಿಗೆ ಸಂತೋಷದಿಂದ ಕೊಡುವುದರಿಂದ ನಿಮಗೆ ಜ್ಞಾನವನ್ನು ದಯಪಾಲಿಸುತ್ತಾನೆ. 6 ಆದರೆ ನೀವು ದೇವರನ್ನು ಕೇಳಿಕೊಳ್ಳುವಾಗ ಆತನಲ್ಲಿ ನಿಮಗೆ ನಂಬಿಕೆಯಿರಬೇಕು. ದೇವರ ಬಗ್ಗೆ ಸಂದೇಹಪಡದಿರಿ. ಸಂದೇಹಪಡುವವನು ಸಾಗರದಲ್ಲಿನ ಅಲೆಯಂತಿದ್ದಾನೆ. ಗಾಳಿಯು ಬೀಸಿದಾಗ ಅಲೆಯು ಮೇಲೆದ್ದು ಬೀಳುತ್ತದೆ. ಸಂದೇಹಪಡುವವನು ಆ ಅಲೆಯಂತಿರುವನು. 7-8 ಅವನು ಒಂದೇ ಕಾಲದಲ್ಲಿ ಎರಡು ರೀತಿಯ ಸಂಗತಿಗಳನ್ನು ಯೋಚಿಸುತ್ತಾನೆ. ಅವನು ತಾನು ಮಾಡುವ ಯಾವುದೇ ಕಾರ್ಯದಲ್ಲಾಗಲಿ ಒಂದು ತೀರ್ಮಾನಕ್ಕೆ ಬರಲಾರನು. ಅಂಥವನು ತನಗೆ ಪ್ರಭುವಿನಿಂದ ಏನಾದರೂ ದೊರೆಯುತ್ತದೆ ಎಂದು ಯೋಚಿಸದಿರಲಿ.
ನಿಜ ಶ್ರೀಮಂತಿಕೆ
9 ಬಡವನಾಗಿರುವ ವಿಶ್ವಾಸಿಯು ಹೆಮ್ಮೆಪಡಲಿ, ಏಕೆಂದರೆ ದೇವರು ಅವನನ್ನು ಆತ್ಮಿಕ ವಿಷಯದಲ್ಲಿ ಐಶ್ವರ್ಯವಂತನನ್ನಾಗಿ ಮಾಡಿದ್ದಾನೆ. 10 ಐಶ್ವರ್ಯವಂತನಾಗಿರುವ ವಿಶ್ವಾಸಿಯೂ ಹೆಮ್ಮೆಪಡಬೇಕು. ಏಕೆಂದರೆ ಆತ್ಮಿಕ ವಿಷಯದಲ್ಲಿ ಅವನಿಗಿರುವ ಬಡತನವನ್ನು ದೇವರು ಅವನಿಗೆ ತೋರಿಸಿಕೊಟ್ಟಿದ್ದಾನೆ. ಐಶ್ವರ್ಯವಂತನು ಹುಲ್ಲಿನ ಹೂವಿನಂತೆ ಗತಿಸುವನು. 11 ಸೂರ್ಯನು ಮೇಲೇರಿದಂತೆ ಬಿಸಿಲು ಹೆಚ್ಚಾಗುವುದು. ಸೂರ್ಯನ ತಾಪದಿಂದ ಗಿಡಗಳು ಒಣಗಿಹೋಗುವವು; ಹೂವುಗಳು ಉದುರಿ ಹೋಗುವವು. ಹೂವು ಸುಂದರವಾಗಿತ್ತು, ಆದರೆ ಈಗ ಅದು ಒಣಗಿಹೋಯಿತು. ಐಶ್ವರ್ಯವಂತನಿಗೂ ಇದೇ ರೀತಿಯಾಗುವುದು. ಅವನು ತನ್ನ ವ್ಯಾಪಾರದ ಬಗ್ಗೆ ಯೋಜನೆಗಳನ್ನು ಮಾಡುತ್ತಿರುವಾಗಲೇ ಸತ್ತುಹೋಗುವನು.
ಶೋಧನೆಯು ದೇವರಿಂದ ಬರುವುದಿಲ್ಲ
12 ಶೋಧನೆಯನ್ನು ಎದುರಿಸುತ್ತಿದ್ದರೂ ದೃಢವಾಗಿರುವವನೇ ಧನ್ಯನು. ಏಕೆಂದರೆ ಅವನು ತನ್ನ ನಂಬಿಕೆಯನ್ನು ನಿರೂಪಿಸಿದಾಗ, ಜೀವವೆಂಬ ಜಯಮಾಲೆಯನ್ನು ಹೊಂದುವನು. ದೇವರು ತನ್ನನ್ನು ಪ್ರೀತಿಸುವ ಜನರಿಗೆಲ್ಲರಿಗೂ ಇದನ್ನು ವಾಗ್ದಾನ ಮಾಡಿದ್ದಾನೆ.
Kannada Holy Bible: Easy-to-Read Version. All rights reserved. © 1997 Bible League International