Daily Reading for Personal Growth, 40 Days with God
ಕ್ರಿಸ್ತನಲ್ಲಿ ನಿಮ್ಮ ಹೊಸಜೀವನ
3 ನೀವು ಕ್ರಿಸ್ತನ ಜೊತೆಯಲ್ಲಿ ಜೀವಂತವಾಗಿ ಎದ್ದುಬಂದಿರುವುದರಿಂದ ಪರಲೋಕದವುಗಳನ್ನು ಪಡೆಯಲು ಪ್ರಯತ್ನಿಸಿರಿ. ಕ್ರಿಸ್ತ ಯೇಸು ಪರಲೋಕದಲ್ಲಿ ದೇವರ ಬಲಗಡೆ ಆಸನಾರೂಢನಾಗಿದ್ದಾನೆ. 2 ಪರಲೋಕದವುಗಳನ್ನು ಮಾತ್ರ ಆಲೋಚಿಸಿ, ಭೂಲೋಕದವುಗಳನ್ನು ಆಲೋಚಿಸಬೇಡಿ. 3 ನಿಮ್ಮ ಹಳೆಯ ಸ್ವಭಾವ ಸತ್ತುಹೋಗಿದೆ, ನಿಮ್ಮ ಹೊಸ ಜೀವವು ಕ್ರಿಸ್ತನೊಂದಿಗೆ ದೇವರಲ್ಲಿದೆ. 4 ಕ್ರಿಸ್ತನೇ ನಿಮ್ಮ ಜೀವ, ಆತನು ಮರಳಿ ಪ್ರತ್ಯಕ್ಷನಾದಾಗ, ನೀವೂ ಆತನ ಪ್ರಭಾವದೊಂದಿಗೆ ಪ್ರತ್ಯಕ್ಷರಾಗುವಿರಿ.
5 ಆದ್ದರಿಂದ ದುಷ್ಕೃತ್ಯಗಳಾದ ಲೈಂಗಿಕ ಪಾಪ, ದುರಾಚಾರ, ಕಾಮಾಭಿಲಾಷೆ, ದುರಾಶೆ ಮತ್ತು ಸ್ವಾರ್ಥತೆಗಳನ್ನು ನಿಮ್ಮ ಜೀವಿತದಿಂದ ತೆಗೆದುಹಾಕಿರಿ. ಸ್ವಾರ್ಥವು ವಿಗ್ರಹಾರಾಧನೆಗೆ ಸಮವಾಗಿದೆ. 6 ಇವು ದೇವರನ್ನು ಕೋಪಗೊಳಿಸುತ್ತವೆ. 7 ಪೂರ್ವಕಾಲದ ನಿಮ್ಮ ದುಷ್ಟಜೀವನದಲ್ಲಿ ಈ ಕಾರ್ಯಗಳನ್ನೆಲ್ಲ ನೀವು ಮಾಡಿರುವಿರಿ.
8 ಈಗಲಾದರೋ ಕೋಪ, ಕ್ರೋಧ, ಮತ್ಸರ, ಚುಚ್ಚು ಮಾತು ಮತ್ತು ದುರ್ಭಾಷೆಗಳನ್ನು ನಿಮ್ಮ ಜೀವಿತದಿಂದ ತೆಗೆದುಹಾಕಿರಿ. 9 ಒಬ್ಬರಿಗೊಬ್ಬರು ಸುಳ್ಳು ಹೇಳಬೇಡಿ. ಏಕೆಂದರೆ ನೀವು ನಿಮ್ಮ ಹಳೆಯ ಪಾಪಪೂರಿತ ಜೀವನವನ್ನು ಮತ್ತು ನಿಮ್ಮ ಮೊದಲಿನ ಕಾರ್ಯಗಳನ್ನು ಬಿಟ್ಟುಬಿಟ್ಟಿದ್ದೀರಿ. 10 ನೀವು ಹೊಸ ಜೀವನವನ್ನು ಆರಂಭಿಸಿರುವಿರಿ. ಈ ಹೊಸ ಜೀವನದಲ್ಲಿ ನೀವು ನಿಮ್ಮನ್ನು ಸೃಷ್ಟಿಸಿದಾತನ ಹೋಲಿಕೆಯ ಮೇರೆಗೆ ನೂತನರಾಗುತ್ತಿದ್ದೀರಿ. ದೇವರ ಬಗ್ಗೆ ನಿಜವಾದ ತಿಳುವಳಿಕೆಯನ್ನು ಈ ಹೊಸ ಜೀವನ ಕೊಡುತ್ತದೆ. 11 ಈ ಹೊಸ ಜೀವನದಲ್ಲಿ ಗ್ರೀಕರ ಮತ್ತು ಯೆಹೂದ್ಯರ ಮಧ್ಯದಲ್ಲಾಗಲಿ, ಸುನ್ನತಿಯನ್ನು ಮಾಡಿಸಿಕೊಂಡಿರುವ ಮತ್ತು ಮಾಡಿಸಿಕೊಂಡಿಲ್ಲದ ಜನರ ಮಧ್ಯದಲ್ಲಾಗಲಿ ಪರದೇಶದವರ ಅಥವಾ ಅನಾಗರೀಕರ ಮಧ್ಯದಲ್ಲಾಗಲಿ, ಗುಲಾಮರ ಅಥವಾ ಸ್ವತಂತ್ರರಾದ ಜನರ ಮಧ್ಯದಲ್ಲಾಗಲಿ ಯಾವ ಭೇದವೂ ಇಲ್ಲ. ಎಲ್ಲಾ ವಿಶ್ವಾಸಿಗಳಲ್ಲಿಯೂ ಕ್ರಿಸ್ತನಿದ್ದಾನೆ. ಅವರಿಗೆ ಕ್ರಿಸ್ತನೊಬ್ಬನೇ ಅಗತ್ಯ.
Kannada Holy Bible: Easy-to-Read Version. All rights reserved. © 1997 Bible League International