The Daily Audio Bible
Today's audio is from the GNT. Switch to the GNT to read along with the audio.
ಜೆರುಸಲೇಮ್ ದಂಡಿಸಲ್ಪಡುವುದು
12 ಆಗ ಯೆಹೋವನ ನುಡಿ ನನಗೆ ಬಂತು. ಆತನು ಹೀಗೆ ಹೇಳಿದನು, 13 “ನರಪುತ್ರನೇ, ನನಗೆ ಅಪನಂಬಿಗಸ್ತರಾಗಿದ್ದು ನನ್ನ ವಿರುದ್ಧ ಪಾಪಮಾಡುವ ಯಾವ ದೇಶವನ್ನಾದರೂ ನಾನು ದಂಡಿಸುತ್ತೇನೆ. ನಾನು ಅವರ ಆಹಾರ ಸರಬರಾಜನ್ನು ನಿಲ್ಲಿಸುತ್ತೇನೆ. ನಾನು ಕ್ಷಾಮವನ್ನು ಕಳುಹಿಸಿ ಅವರ ಜನರನ್ನೂ ಪ್ರಾಣಿಗಳನ್ನೂ ನಾಶಮಾಡುವೆ. 14 ಆ ದೇಶದಲ್ಲಿ ನೋಹ, ದಾನಿಯೇಲ, ಯೋಬ ಜೀವಿಸಿದ್ದರೂ ಆ ಮೂವರು ತಮ್ಮ ಸತ್ಕಾರ್ಯಗಳಿಂದ ತಮ್ಮ ಪ್ರಾಣಗಳನ್ನು ಉಳಿಸಿಕೊಳ್ಳುತ್ತಿದ್ದರೇ ಹೊರತು ಇಡೀ ದೇಶವನ್ನು ರಕ್ಷಿಸಲಾಗುತ್ತಿರಲಿಲ್ಲ.” ಇವುಗಳನ್ನು ನನ್ನ ಒಡೆಯನಾದ ಯೆಹೋವನೇ ಹೇಳಿದ್ದಾನೆ.
15 ದೇವರು ಹೇಳಿದ್ದೇನೆಂದರೆ: “ಒಂದುವೇಳೆ, ನಾನು ಕ್ರೂರಪ್ರಾಣಿಗಳನ್ನು ದೇಶದೊಳಗೆ ಕಳುಹಿಸಿ ಜನರನ್ನು ಕೊಂದರೆ, ಅವುಗಳ ದೆಸೆಯಿಂದ ಯಾವನೂ ದೇಶದಲ್ಲಿ ಪ್ರಯಾಣಮಾಡಲಾಗುತ್ತಿರಲಿಲ್ಲ. 16 ನನ್ನ ಜೀವದಾಣೆ, ನೋಹನಾಗಲಿ ದಾನಿಯೇಲನಾಗಲಿ ಯೋಬನಾಗಲಿ ತಮ್ಮ ಪುತ್ರಪುತ್ರಿಯರನ್ನು ರಕ್ಷಿಸಲಾಗುತ್ತಿರಲಿಲ್ಲ. ಅವರು ತಮ್ಮನ್ನು ಮಾತ್ರ ರಕ್ಷಿಸಿಕೊಳ್ಳಬಹುದಾಗಿತ್ತು. ಆದರೆ ದೇಶವು ನಿರ್ಜನವಾಗುತ್ತಿತ್ತು.” ಇವುಗಳನ್ನು ನನ್ನ ಒಡೆಯನಾದ ಯೆಹೋವನೇ ಹೇಳಿದ್ದಾನೆ.
17 ದೇವರು ಹೇಳಿದ್ದೇನೆಂದರೆ, “ಒಂದುವೇಳೆ, ಅವರ ವಿರುದ್ಧ ಹೋರಾಡಲು ನಾನು ಶತ್ರುಸೈನ್ಯವೊಂದನ್ನು ಕಳುಹಿಸಿದರೆ, ಎಲ್ಲಾ ಜನರು ಮತ್ತು ಎಲ್ಲಾ ಪ್ರಾಣಿಗಳು ನಾಶವಾಗುತ್ತಿದ್ದವು. 18 ದೇವರಾದ ಯೆಹೋವನಾಣೆ, ನೋಹನಾಗಲಿ ದಾನಿಯೇಲನಾಗಲಿ ಯೋಬನಾಗಲಿ ತಮ್ಮ ಪುತ್ರಪುತ್ರಿಯರನ್ನು ರಕ್ಷಿಸಿಕೊಳ್ಳಲಾಗುತ್ತಿರಲಿಲ್ಲ. ಅವರು ತಮ್ಮನ್ನು ಮಾತ್ರ ರಕ್ಷಿಸಿಕೊಳ್ಳಬಹುದಾಗಿತ್ತು.” ಇವುಗಳನ್ನು ನನ್ನ ಒಡೆಯನಾದ ಯೆಹೋವನೇ ಹೇಳಿದ್ದಾನೆ.
19 ದೇವರು ಹೇಳಿದ್ದೇನೆಂದರೆ, “ಒಂದುವೇಳೆ, ನಾನು ದೇಶದ ಮೇಲೆ ರೋಗಗಳನ್ನು ಬರಮಾಡಿದರೆ, ಅಥವಾ ನನ್ನ ಕೋಪವನ್ನು ಸುರಿದು ಜನರನ್ನು ಕೊಂದುಹಾಕಿದರೆ ಮತ್ತು ಪ್ರಾಣಿಗಳನ್ನು ನಾಶಮಾಡಿದರೆ, 20 ದೇವರಾದ ಯೆಹೋವನಾಣೆ, ನೋಹನಾಗಲಿ ದಾನಿಯೇಲನಾಗಲಿ ಯೋಬನಾಗಲಿ ತಮ್ಮ ಪುತ್ರಪುತ್ರಿಯರನ್ನು ರಕ್ಷಿಸಿಕೊಳ್ಳಲಾಗುತ್ತಿರಲಿಲ್ಲ. ಅವರು ತಮ್ಮನ್ನು ಮಾತ್ರ ರಕ್ಷಿಸಿಕೊಳ್ಳಬಹುದಾಗಿತ್ತು.” ಇದು ನನ್ನ ಒಡೆಯನಾದ ಯೆಹೋವನ ನುಡಿ.
21 ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ಭಯಂಕರವಾದ ನಾಲ್ಕು ದಂಡನೆಗಳನ್ನು ನಾನು ಜೆರುಸಲೇಮ್ ಪಟ್ಟಣದ ಮೇಲೆ ಕಳುಹಿಸುವೆನು. ಆದ್ದರಿಂದ ಜೆರುಸಲೇಮಿಗೆ ಇನ್ನೂ ಎಷ್ಟು ಹೆಚ್ಚಾಗಿ ಕಷ್ಟಕರವಾಗಬಹುದೆಂದು ಯೋಚಿಸಿರಿ. ನಾನು ಆ ನಗರದ ವಿರುದ್ಧವಾಗಿ ಶತ್ರು ಸೈನಿಕರನ್ನು, ಹಸಿವೆ, ರೋಗ ಮತ್ತು ಕ್ರೂರಜಂತುಗಳನ್ನು ಕಳುಹಿಸುತ್ತೇನೆ. ದೇಶದಲ್ಲಿರುವ ಎಲ್ಲಾ ಜನರನ್ನೂ ಪಶುಗಳನ್ನೂ ನಿರ್ಮೂಲ ಮಾಡುವೆನು. 22 ಆದರೆ ಆಶ್ಚರ್ಯಕರವಾಗಿ, ಕೆಲವರು ಅದರಲ್ಲಿ ಉಳಿದುಕೊಳ್ಳುವರು, ಪುತ್ರಪುತ್ರಿಯರನ್ನು ನಿಮ್ಮ ಬಳಿಗೆ ಜೀವಂತವಾಗಿ ತರಲಾಗುವುದು. ಆ ಜನರು ಎಷ್ಟು ದುಷ್ಟರೆಂಬುದನ್ನು ಸ್ವತಃ ನೀವೇ ಅರ್ಥಮಾಡಿಕೊಳ್ಳುವಿರಿ. ನಾನು ಜೆರುಸಲೇಮಿನ ಮೇಲೆ ಬರಮಾಡಿದ ಇಡೀ ಆಪತ್ತಿನ ಬಗ್ಗೆ ನೀವು ಬಹಳವಾಗಿ ನೊಂದುಕೊಳ್ಳುವಿರಿ. 23 ಅವರು ಜೀವಿಸುವ ರೀತಿ, ದುಷ್ಟತನವನ್ನು ನಡಿಸುವ ರೀತಿಯನ್ನು ನೀವು ನೋಡುವಿರಿ. ಆಗ ನಾನು ಯಾಕೆ ಅವರನ್ನು ಶಿಕ್ಷಿಸುತ್ತೇನೆಂದು ನಿಮಗೆ ಗೊತ್ತಾಗುವದು.” ಇದು ನನ್ನ ಒಡೆಯನಾದ ಯೆಹೋವನ ನುಡಿ.
ಜೆರುಸಲೇಮಿನ ದ್ರಾಕ್ಷಾಲತೆಯು ಸುಡಲ್ಪಡುವುದು
15 ಯೆಹೋವನ ನುಡಿಯು ನನಗೆ ಬಂತು. ಆತನು ಹೇಳಿದ್ದೇನೆಂದರೆ, 2 “ನರಪುತ್ರನೇ, ದ್ರಾಕ್ಷಾಬಳ್ಳಿಯ ಕಟ್ಟಿಗೆಯಿಂದ ಏನು ಪ್ರಯೋಜನ? ಅದು ಕಾಡಿನಲ್ಲಿರುವ ಮರಗಳಲ್ಲಿ ಒಂದರಂತೆ ಪರಿಗಣಿಸಲ್ಪಟ್ಟರೂ ಅದರ ಉಪಯುಕ್ತತೆಯಲ್ಲಿ ವ್ಯತ್ಯಾಸವಿದೆ. 3 ದ್ರಾಕ್ಷಾಬಳ್ಳಿಯ ಕಟ್ಟಿಗೆಯಿಂದ ಏನನ್ನಾದರೂ ತಯಾರಿಸಬಹುದೋ? ಇಲ್ಲ. ಅದನ್ನು ಗೂಟವನ್ನಾಗಿ ಮಾಡಿ ಅದರಲ್ಲಿ ಪಾತ್ರೆಗಳನ್ನು ತೂಗುಹಾಕಬಹುದೋ? ಇಲ್ಲ. 4 ಅದು ಕೇವಲ ಬೆಂಕಿಯಲ್ಲಿ ಸುಡಲಿಕ್ಕೆ ಯೋಗ್ಯವಾಗಿದೆ. ಕೆಲವು ಎರಡು ಕೊನೆಯಲ್ಲಿ ಉರಿಯುವವು; ಮಧ್ಯಭಾಗವು ಬೆಂಕಿಯಿಂದ ಕಪ್ಪಾಗಾಗುವುದು. ಕಟ್ಟಿಗೆಯು ಸಂಪೂರ್ಣವಾಗಿ ಸುಟ್ಟುಹೋಗುವುದಿಲ್ಲ. ಆ ಸುಟ್ಟ ಕಟ್ಟಿಗೆಯಿಂದ ಏನನ್ನಾದರೂ ತಯಾರಿಸಬಹುದೋ? 5 ಅದು ಸುಡುವ ಮೊದಲು ಅದರಿಂದ ಏನನ್ನೂ ಮಾಡಲಿಕ್ಕೆ ಆಗದಿದ್ದರೆ, ಅದು ಸುಟ್ಟ ನಂತರ ಏನೂ ಮಾಡಲಿಕ್ಕಾಗುವುದಿಲ್ಲ. 6 ದ್ರಾಕ್ಷಿಬಳ್ಳಿಯು ಕಾಡಿನ ಮರಗಳಲ್ಲಿ ಒಂದರಂತೆ ಪರಿಗಣಿಸಲ್ಪಟ್ಟರೂ, ಬೆಂಕಿಗೆ ಬೇಕಾದ ಇಂಧನಕ್ಕಾಗಿ ನಾನು ಅದರ ಕಟ್ಟಿಗೆಯನ್ನು ನೇಮಿಸಿದ್ದೇನೆ. ಇದೇ ಕೆಲಸವನ್ನು ಜೆರುಸಲೇಮಿನ ನಿವಾಸಿಗಳಿಗೂ ನಾನು ನೇಮಿಸಿದ್ದೇನೆ.” ಇವುಗಳನ್ನು ನನ್ನ ಒಡೆಯನಾದ ಯೆಹೋವನು ಹೇಳಿದ್ದಾನೆ. 7 “ನಾನು ಅವರನ್ನು ದಂಡಿಸುವೆನು. ಅವರು ಒಂದು ಬೆಂಕಿಯಿಂದ ತಪ್ಪಿಸಿಕೊಂಡರೂ ಮತ್ತೊಂದು ಬೆಂಕಿಯಿಂದ ಸುಟ್ಟುಹೋಗುವರು. ನಾನು ಅವರನ್ನು ದಂಡಿಸಿದಾಗ, ನಾನೇ ಯೆಹೋವನೆಂದು ನೀನು ತಿಳಿದುಕೊಳ್ಳುವೆ. 8 ಜನರು ನನ್ನನ್ನು ತೊರೆದು ಅನ್ಯ ದೇವರುಗಳನ್ನು ಆರಾಧಿಸಿದ್ದಕ್ಕಾಗಿ ನಾನು ಆ ದೇಶವನ್ನು ನಾಶಮಾಡುವೆನು” ಇವುಗಳನ್ನು ನನ್ನ ಒಡೆಯನಾದ ಯೆಹೋವನು ಹೇಳಿದನು.
ಜೆರುಸಲೇಮಿನ ಮೇಲೆ ಯೆಹೋವನ ಪ್ರೀತಿ
16 ಮತ್ತೆ ಯೆಹೋವನ ವಾಕ್ಯವು ನನಗೆ ಬಂತು. ಆತನು ಹೇಳಿದ್ದೇನೆಂದರೆ, 2 “ನರಪುತ್ರನೇ, ಜೆರುಸಲೇಮ್ ಪಟ್ಟಣಕ್ಕೆ ಅದರ ಅಸಹ್ಯವಾದ ಆಚರಣೆಗಳ ಬಗ್ಗೆ ಹೇಳು. ದುಷ್ಟತ್ವದ ಕುರಿತು ಅವರಿಗೆ ತಿಳಿಸು. 3 ನೀನು ಏನು ಹೇಳಬೇಕೆಂದರೆ, ‘ಜೆರುಸಲೇಮಿಗೆ ನನ್ನ ದೇವರಾದ ಯೆಹೋವನು ಹೀಗೆನ್ನುತ್ತಾನೆ: ನಿನ್ನ ಇತಿಹಾಸವನ್ನು ನೋಡು. ನೀನು ಕಾನಾನ್‌ನಲ್ಲಿ ಜನಿಸಿರುತ್ತೀ. ನಿನ್ನ ತಂದೆಯು ಅಮೋರಿಯನು, ನಿನ್ನ ತಾಯಿ ಹಿತ್ತಿಯಳು. 4 ಜೆರುಸಲೇಮೇ, ನೀನು ಹುಟ್ಟಿದ ಆ ದಿವಸದಲ್ಲಿ ನಿನ್ನ ಹೊಕ್ಕಳ ನಾಳವನ್ನು ಕೊಯ್ಯಲು ಯಾರೂ ಇದ್ದಿಲ್ಲ. ನಿನ್ನ ಮೈಯನ್ನು ನೀರು ಹಾಕಿ ಯಾರೂ ತೊಳೆದು ಶುದ್ಧಮಾಡಿಲ್ಲ. ನಿನ್ನನ್ನು ಯಾರೂ ಉಪ್ಪಿನಿಂದ ಉಜ್ಜಿಲ್ಲ. ಯಾರೂ ನಿನಗೆ ಬಟ್ಟೆ ಸುತ್ತಲಿಲ್ಲ. 5 ಇವುಗಳಲ್ಲಿ ಯಾವುದನ್ನೇ ಮಾಡಲು ನಿನಗೋಸ್ಕರ ಯಾರೂ ಸಾಕಷ್ಟು ಮರುಕಪಡಲಿಲ್ಲ. ಜೆರುಸಲೇಮೇ, ನೀನು ಜನಿಸಿದ ದಿನದಲ್ಲಿ ನಿನಗೆ ಜನ್ಮವಿತ್ತವರು ನಿನ್ನನ್ನು ಹೊರಗೆ ಬಯಲಿನಲ್ಲಿ ಎಸೆದುಬಿಟ್ಟರು. ನೀನು ತಿರಸ್ಕರಿಸಲ್ಪಟ್ಟಿದ್ದೆ.
6 “‘ಆಗ ನಾನು (ದೇವರು) ಆ ಮಾರ್ಗವಾಗಿ ಹಾದುಹೋಗುವಾಗ ನೀನು ರಕ್ತಮಯವಾಗಿ ಹೊರಳಾಡುತ್ತಾ ಬಿದ್ದಿದ್ದೆ. ಆಗ ನಾನು “ಜೀವಿಸು” ಅಂದೆನು. ಹೌದು, ನೀನು ರಕ್ತದಲ್ಲಿ ಮುಳುಗಿದ್ದೀ. ಆಗ ನಾನು “ಜೀವಿಸು” ಅಂದೆನು. 7 ನಾನು, ಹೊಲದಲ್ಲಿ ಸಸಿಯು ಹೇಗೆ ಬೆಳೆಯುತ್ತದೋ ಹಾಗೆಯೇ ನೀನು ಬೆಳೆಯಲು ಸಹಾಯ ಮಾಡಿದೆನು. ನೀನು ಬೆಳೆಯುತ್ತಾ ಯೌವನದ ಹೊಸ್ತಿಲಲ್ಲಿ ಕಾಲಿಟ್ಟ ಹೆಂಗಸಿನಂತಾದೆ. ನಿನಗೆ ಮುಟ್ಟು ಪ್ರಾರಂಭವಾಯಿತು. ನಿನ್ನ ಸ್ತನಗಳು ಬೆಳೆದವು. ಕೂದಲುಗಳು ಬೆಳೆದವು. ಆದರೂ ನೀನು ಬಟ್ಟೆಯಿಲ್ಲದವಳಾಗಿ ಬೆತ್ತಲೆಯಾಗಿದ್ದೆ. 8 ನಾನು ಮತ್ತೆ ಹಾದುಹೋಗುವಾಗ ನಿನ್ನನ್ನು ನೋಡಲಾಗಿ ನೀನು ಸಂಭೋಗಿಸಲು ತಯಾರಾಗಿದ್ದೆ. ನಾನು ನನ್ನ ಹೊದಿಕೆಯನ್ನು ನಿನ್ನ ಮೇಲೆ ಹಾಕಿ ನಿನ್ನ ಬೆತ್ತಲೆ ದೇಹವನ್ನು ಮುಚ್ಚಿದೆನು. ನಿನ್ನನ್ನು ವಿವಾಹವಾಗಲು ಮಾತುಕೊಟ್ಟೆನು. ನಾನು ನಿನ್ನೊಡನೆ ಒಡಂಬಡಿಕೆ ಮಾಡಿಕೊಂಡೆನು. ಆಗ ನೀನು ನನ್ನವಳಾದೆ.’” ಇದು ನನ್ನ ಒಡೆಯನಾದ ಯೆಹೋವನ ನುಡಿ. 9 “‘ನಾನು ನಿನ್ನನ್ನು ನೀರಿನಲ್ಲಿ ತೊಳೆದೆನು. ನಿನ್ನ ರಕ್ತವನ್ನು ತೊಳೆದೆನು. ನಿನ್ನ ಮೈಗೆ ಎಣ್ಣೆ ಹಚ್ಚಿ ಉಜ್ಜಿದೆನು. 10 ನಿನಗೆ ಅಂದವಾದ ಉಡುಪನ್ನು ಕೊಟ್ಟು ಕಾಲಿಗೆ ನಯವಾದ ಚರ್ಮದ ಕೆರಗಳನ್ನು ಕೊಟ್ಟೆನು. ನಿನ್ನ ತಲೆಗೆ ನಾರುಮಡಿಯ ತಲೆಕಟ್ಟನ್ನು ಕೊಟ್ಟೆನು ಮತ್ತು ನಿನಗೆ ರೇಷ್ಮೆಯ ಬಟ್ಟೆಯನ್ನು ಹೊದಿಸಿದೆನು. 11 ಅನಂತರ ನಿನಗೆ ಕೆಲವು ಆಭರಣಗಳನ್ನು ಕೊಟ್ಟೆನು. ನಿನ್ನ ತೋಳುಗಳಿಗೆ ತೋಳುಕಟ್ಟುಗಳನ್ನು, ಕುತ್ತಿಗೆಗೆ ಹಾರವನ್ನು ತೊಡಿಸಿದೆನು. 12 ನಿನಗೆ ಮೂಗುತಿ, ಕಿವಿಗೆ ಕಿವಿಯುಂಗುರಗಳನ್ನು ಮತ್ತು ಒಂದು ಅಂದವಾದ ಕಿರೀಟವನ್ನು ಧರಿಸಲು ಕೊಟ್ಟೆನು. 13 ನಿನ್ನ ಚಿನ್ನ, ಬೆಳ್ಳಿ, ಆಭರಣ, ನಾರುಮಡಿ, ರೇಷ್ಮೆ ಮತ್ತು ಕಸೂತಿ ಹಾಕಿದ ಬಟ್ಟೆಗಳಲ್ಲಿ ನೀನು ಸುಂದರಳಾಗಿ ಕಾಣಿಸುತ್ತಿದ್ದೆ. ನೀನು ಉತ್ತಮವಾದ ಆಹಾರವನ್ನು ಊಟ ಮಾಡಿದೆ: ಉತ್ತಮ ಗೋಧಿಹಿಟ್ಟು, ಜೇನುತುಪ್ಪ ಮತ್ತು ಆಲೀವ್ ಎಣ್ಣೆ. ನೀನು ಅತ್ಯಂತ ಸುಂದರಿಯಾದೆ. ಮತ್ತು ನೀನು ರಾಣಿಯಾಗಿದ್ದೆ. 14 ಹೌದು, ನೀನು ನಿನ್ನ ಸಂಪೂರ್ಣವಾದ ಸೌಂದರ್ಯಕ್ಕಾಗಿ ಜನಾಂಗಗಳ ಮಧ್ಯದಲ್ಲಿ ಹೆಸರು ವಾಸಿಯಾಯಿತು. ಯಾಕೆಂದರೆ ನಾನು ನಿನ್ನನ್ನು ಅತ್ಯಂತ ಸೌಂದರ್ಯವತಿಯನ್ನಾಗಿ ಮಾಡಿದೆನು.’” ಇವುಗಳನ್ನು ನನ್ನ ಒಡೆಯನಾದ ಯೆಹೋವನು ಹೇಳಿದನು.
ಜೆರುಸಲೇಮ್ ನೀತಿಗೆಟ್ಟ ವಧುವು
15 ದೇವರು ಹೀಗೆಂದನು: “ನೀನು ನಿನ್ನ ಸೌಂದರ್ಯದ ಮೇಲೆ ಭರವಸೆ ಉಳ್ಳವಳಾಗಿದ್ದೆ. ನಿನ್ನ ಪ್ರಖ್ಯಾತಿಯಿಂದಾಗಿ ನನಗೆ ಅಪನಂಬಿಗಸ್ತಳಾದಿ. ನಿನ್ನನ್ನು ಹಾದುಹೋಗುವ ಪ್ರತಿವ್ಯಕ್ತಿಯೊಂದಿಗೆ ನೀನು ವೇಶ್ಯೆಯಂತೆ ನಡೆದುಕೊಂಡಿ. ನೀನು ನಿನ್ನನ್ನು ಅವರಿಗೊಪ್ಪಿಸಿದಿ. 16 ನೀನು ನಿನ್ನ ಬಟ್ಟೆಗಳಲ್ಲಿ ಕೆಲವನ್ನು ತೆಗೆದುಕೊಂಡು ನಿನ್ನ ಪೂಜಿಸುವ ಸ್ಥಳಗಳನ್ನು ವರ್ಣರಂಜಿತವನ್ನಾಗಿ ಮಾಡಿದೆ ಮತ್ತು ಆ ಸ್ಥಳಗಳಲ್ಲಿ ನೀನು ಸೂಳೆಯಂತೆ ವರ್ತಿಸಿದೆ. ಹಾದುಹೋಗುವ ಪ್ರತಿಯೊಬ್ಬ ಗಂಡಸಿಗೂ ನೀನು ನಿನ್ನನ್ನು ಒಪ್ಪಿಸಿಕೊಟ್ಟೆ. 17 ನಾನು ನಿನಗೆ ಕೊಟ್ಟ ಬೆಳ್ಳಿಬಂಗಾರಗಳ ಆಭರಣಗಳಿಂದ ನೀನು ಗಂಡು ವಿಗ್ರಹಗಳನ್ನು ಮಾಡಿಕೊಂಡು ಅವುಗಳೊಂದಿಗೆ ಸೂಳೆಯಂತೆ ವರ್ತಿಸಿದೆ. 18 ನಂತರ ನೀನು ಅಂದವಾದ ಬಟ್ಟೆಯಿಂದ ಆ ವಿಗ್ರಹಗಳಿಗೆ ಹೊದಿಸಿದೆ. ನಾನು ನಿನಗೆ ಕೊಟ್ಟಿದ್ದ ಧೂಪ, ಪರಿಮಳದ್ರವ್ಯವನ್ನು ನೀನು ಆ ವಿಗ್ರಹಗಳ ಮುಂದೆ ಹಾಕಿದಿ. 19 ನಾನು ನಿನಗೆ ರೊಟ್ಟಿ, ಜೇನು ಮತ್ತು ಎಣ್ಣೆಯನ್ನು ಕೊಟ್ಟಿದ್ದೆನು. ಆದರೆ ನೀನು ಆ ಆಹಾರವನ್ನು ಮೂರ್ತಿಗಳಿಗೆ ಕೊಟ್ಟೆ. ಆ ಸುಳ್ಳು ದೇವರುಗಳನ್ನು ಮೆಚ್ಚಿಸುವದಕ್ಕೋಸ್ಕರ ನೀನು ಅವುಗಳನ್ನು ಸುಗಂಧವಾಸನೆಯ ಕಾಣಿಕೆಯಂತೆ ಅರ್ಪಿಸಿದೆ.” ನನ್ನ ಒಡೆಯನಾದ ಯೆಹೋವನು ಈ ಸಂಗತಿಗಳನ್ನು ಹೇಳಿದನು.
20 ದೇವರು ಹೇಳಿದ್ದೇನೆಂದರೆ, “ನನ್ನ ಮಕ್ಕಳಾಗಿದ್ದ ನಿನ್ನ ಪುತ್ರಪುತ್ರಿಯರನ್ನು ನೀನು ತೆಗೆದುಕೊಂಡು ಅವರನ್ನು ಆಹಾರವನ್ನಾಗಿ ವಿಗ್ರಹಗಳಿಗೆ ಯಜ್ಞ ಅರ್ಪಿಸಿದೆ. ನಿನ್ನ ಸೂಳೆತನವು ಸಾಕಾಗಿರಲಿಲ್ಲವೇ? 21 ನೀನು ನನ್ನ ಗಂಡುಮಕ್ಕಳನ್ನು ಸಂಹರಿಸಿ ಬೆಂಕಿಯಲ್ಲಿ ದಾಟಿಸಿ ಆ ಸುಳ್ಳುದೇವರಿಗೆ ಕೊಟ್ಟೆ. 22 ನಿನ್ನ ಅಸಹ್ಯಕೃತ್ಯಗಳನ್ನೂ ಸೂಳೆಯಂತೆ ವರ್ತಿಸುತ್ತಿರುವುದನ್ನೂ ನಿನ್ನ ಎಳೆತನದ ಸಮಯವನ್ನೂ ಮತ್ತು ನಿನ್ನ ಸ್ವಂತ ರಕ್ತದಲ್ಲಿ ಬೆತ್ತಲೆಯಾಗಿ ಹೊರಳಾಡುತ್ತಿದ್ದುದನ್ನೂ ನೀನು ಮರೆತುಬಿಟ್ಟೆ.
23 “ಓ ಜೆರುಸಲೇಮೇ, ಎಂಥಾ ಭಯಂಕರ, ನಿನಗೆಂಥಾ ಭಯಂಕರವಾಗಿರುವುದು ಸಂಭವಿಸುತ್ತದೆ!” ಎನ್ನುತ್ತಾನೆ ನನ್ನ ಒಡೆಯನಾದ ಯೆಹೋವನು. 24 “ನೀನು ಎಲ್ಲಾ ದುಷ್ಕೃತ್ಯಗಳನ್ನು ಮಾಡಿದ ನಂತರ ಸುಳ್ಳು ದೇವರುಗಳಿಗಾಗಿ ಎತ್ತರವಾದ ಸ್ಥಳಗಳಲ್ಲಿ ಹೆಚ್ಚು ಪೂಜಾಸ್ಥಳಗಳನ್ನು ಮಾಡಿದೆ. ಪ್ರತಿಯೊಂದು ರಸ್ತೆಯ ಚೌಕಗಳಲ್ಲಿ ಅನ್ಯದೇವರುಗಳಿಗಾಗಿ ಪೂಜಾಸ್ಥಳಗಳನ್ನು ಮಾಡಿದೆ. 25 ಪ್ರತೀ ರಸ್ತೆಯ ಪ್ರಾರಂಭದಲ್ಲಿ ಅಂಥಾ ಪೂಜಾಸ್ಥಳಗಳನ್ನು ನಿರ್ಮಿಸಿದ್ದೀ. ನೀನು ನಿನ್ನ ಸೌಂದರ್ಯವನ್ನು ಹಾಳುಮಾಡಿಕೊಂಡಿ. ನೀನು ಅಸಹ್ಯವಾದ ಕಾರ್ಯಗಳನ್ನು ಮಾಡಲು ನಿನ್ನ ಸೌಂದರ್ಯವನ್ನು ಬಳಸಿಕೊಂಡೆ. ಹಾದಿಯಲ್ಲಿ ಹೋಗುವ ಪ್ರತಿಯೊಬ್ಬ ಗಂಡಸಿಗೂ ನೀನು ಲೈಂಗಿಕ ತೃಪ್ತಿ ನೀಡಿ ನಿನ್ನ ಸೂಳೆತನವನ್ನು ಹೆಚ್ಚಿಸಿಕೊಂಡೆ. 26 ಬಳಿಕ ನಿನ್ನ ನೆರೆಯವರೂ ಅತೀ ಕಾಮುಕರೂ ಆಗಿದ್ದ ಈಜಿಪ್ಟಿನವರ ಬಳಿಗೆ ನೀನು ಹೋದೆ. ನನ್ನನ್ನು ಕೋಪಗೊಳಿಸುವುದಕ್ಕಾಗಿ ನೀನು ಅವರೊಂದಿಗೆ ಹಲವಾರು ಸಲ ಲೈಂಗಿಕ ಸಂಪರ್ಕ ಮಾಡಿದೆ. 27 ಆಗ ನಾನು ನಿನ್ನನ್ನು ಶಿಕ್ಷಿಸಿದೆನು. ನಾನು ನಿನಗೆ ಕೊಟ್ಟ ದೇಶದಿಂದ ಸ್ವಲ್ಪ ಭಾಗವನ್ನು ಕಿತ್ತುಕೊಂಡೆನು. ನಿನ್ನ ಶತ್ರುಗಳಾದ ಫಿಲಿಷ್ಟಿಯರ ಹೆಣ್ಣುಮಕ್ಕಳು ನಿನ್ನೊಂದಿಗೆ ತಮಗೆ ಇಷ್ಟ ಬಂದಂತೆ ವರ್ತಿಸಲುಬಿಟ್ಟೆನು. ನಿನ್ನ ಕೆಟ್ಟಕಾರ್ಯಗಳನ್ನು ನೋಡಿ ಅವರೂ ಅಚ್ಚರಿಗೊಂಡರು. 28 ಆ ಬಳಿಕ ನೀನು ಅಶ್ಶೂರದವರೊಂದಿಗೆ ಸಂಭೋಗಿಸಲು ಹೋದಿ. ನೀನು ತೃಪ್ತಿಗೊಳ್ಳುವಷ್ಟು ಆನಂದ ಸಿಗಲಿಲ್ಲ. ನೀನೆಂದೂ ತೃಪ್ತಿಗೊಂಡವಳಲ್ಲ. 29 ಆದ್ದರಿಂದ ನೀನು ವ್ಯಾಪಾರದ ದೇಶವಾದ ಬಾಬಿಲೋನಿನ ಕಡೆಗೆ ಮುಖ ಮಾಡಿಕೊಂಡೆ. ಆದರೂ ನೀನು ತೃಪ್ತಿ ಪಡೆಯಲಿಲ್ಲ. 30 ನಾಚಿಕೆಯಿಲ್ಲದ ಸೂಳೆಯಂತೆ ನೀನು ಮಾಡಿದ ಈ ಎಲ್ಲಾ ಕಾರ್ಯಗಳಿಂದ ನಾನು ನಿನ್ನ ವಿರುದ್ಧ ಕೋಪದಿಂದ ತುಂಬಿರುವೆ.” ನನ್ನ ಒಡೆಯನಾದ ಯೆಹೋವನು ಈ ಸಂಗತಿಗಳನ್ನು ಹೇಳಿದನು.
31 ದೇವರು ಹೇಳಿದ್ದೇನೆಂದರೆ, “ಆದರೆ ನೀನು ವೇಶ್ಯೆಯ ಹಾಗೆ ಪೂರ್ಣವಾಗಿರಲಿಲ್ಲ. ನೀನು ಎತ್ತರದ ಪೂಜಾಸ್ಥಳಗಳನ್ನು ಪ್ರತೀ ರಸ್ತೆಯ ಪ್ರಾರಂಭದಲ್ಲಿಯೂ ಯಜ್ಞವೇದಿಕೆಗಳನ್ನು ಪ್ರತೀ ರಸ್ತೆಯ ಮೂಲೆಗಳಲ್ಲಿಯೂ ಕಟ್ಟಿಸಿರುವೆ. ಆ ಎಲ್ಲಾ ಪುರುಷರೊಂದಿಗೆ ನೀನು ಸಂಭೋಗಿಸಿರುವೆ. ಆದರೆ ಸೂಳೆಯಂತೆ ಅವರಿಂದ ನೀನು ಹಣ ತೆಗೆದುಕೊಳ್ಳಲಿಲ್ಲ. 32 ವ್ಯಭಿಚಾರಿಣಿಯೇ, ನೀನು ನಿನ್ನ ಸ್ವಂತ ಗಂಡನಿಗಿಂತ ಪರಪುರುಷನನ್ನೇ ಹೆಚ್ಚಾಗಿ ಆಶಿಸುವವಳಾಗಿರುವೆ. 33 ವೇಶ್ಯೆಯರು ತಮ್ಮೊಡನೆ ಕೂಡುವದಕ್ಕಾಗಿ ಪುರುಷರಿಂದ ಹಣ ವಸೂಲಿ ಮಾಡುವರು. ಆದರೆ ನಿನ್ನ ಪ್ರಿಯತಮರಿಗೆ ನೀನೇ ಹಣವನ್ನು ಕೊಟ್ಟಿರುವೆ. ನಿನ್ನೊಂದಿಗೆ ಸಂಭೋಗ ಮಾಡಲು ನೀನೇ ಅವರಿಗೆ ಹಣವನ್ನು ಕೊಟ್ಟಿರುವೆ. 34 ನೀನು ಸೂಳೆಯರಿಗೇ ವಿರುದ್ಧವಾಗಿ ನಡೆದಿರುವೆ. ಅವರು ಪುರುಷರಿಂದ ಹಣ ತೆಗೆದುಕೊಳ್ಳುವಾಗ ನೀನೇ ಅವರಿಗೆ ಹಣಕೊಟ್ಟಿರುವೆ.”
35 ಸೂಳೆಯೇ, ಯೆಹೋವನ ಸಂದೇಶವನ್ನು ಕೇಳು: 36 ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ನಿನ್ನ ಅತಿಯಾದ ಶರೀರದಾಶೆಯಿಂದಾಗಿ, ನಿನ್ನ ಬೆತ್ತಲೆಯ ದೇಹವನ್ನು ನೋಡಿ ನಿನ್ನೊಂದಿಗೆ ಲೈಂಗಿಕ ಸಂಬಂಧವನ್ನು ಹೊಂದಲು ನೀನು ನಿನ್ನ ಪ್ರಿಯತಮರಿಗೂ, ನಿನ್ನ ಹೊಲಸು ದೇವರುಗಳಿಗೂ ಅವಕಾಶ ಮಾಡಿಕೊಟ್ಟೆ. ನೀನು ನಿನ್ನ ಮಕ್ಕಳನ್ನು ಕೊಂದು ಅವರ ರಕ್ತವನ್ನು ಸುರಿಸಿರುವೆ. ಇದು ಆ ಹೊಲಸು ದೇವರುಗಳಿಗೆ ನೀನು ಕೊಟ್ಟ ದಾನ. 37 ಈ ಕಾರಣದಿಂದ, ನೀನು ಸುಖ ಕೊಟ್ಟಿರುವ ನಿನ್ನ ಎಲ್ಲಾ ಪ್ರಿಯರನ್ನು ಅಂದರೆ ಈಗಿನ ಪ್ರಿಯರನ್ನು ಮತ್ತು ನೀನು ತಿರಸ್ಕರಿಸಿರುವ ಹಿಂದಿನ ಪ್ರಿಯರನ್ನೂ ಒಟ್ಟಾಗಿ ಸೇರಿಸಿ, ನಿನ್ನ ಬೆತ್ತಲೆತನವನ್ನು ಅವರು ನೋಡುವಂತೆ ಮಾಡುವೆನು. ಅವರು ನಿನ್ನನ್ನು ಪೂರ್ತಿಯಾಗಿ ನೋಡುವರು. 38 ಬಳಿಕ, ಕೊಲೆಗಾರ್ತಿಯರೂ ವ್ಯಭಿಚಾರಿಣಿಯರೂ ಶಿಕ್ಷಿಸಲ್ಪಡುವಂತೆ ನಾನು ನಿನ್ನನ್ನು ದಂಡಿಸುವೆನು. ನನ್ನ ಭಯಂಕರವಾದ ಕೋಪದಿಂದ ನಿನಗೆ ಮರಣದಂಡನೆಯನ್ನು ವಿಧಿಸುವೆನು. 39 ಆ ನಿನ್ನ ಪ್ರಿಯತಮರಿಗೆ ನಿನ್ನನ್ನು ಬಿಟ್ಟುಕೊಡುವೆನು. ಅವರು ನಿನ್ನ ದಿಬ್ಬಗಳನ್ನು ನಾಶಮಾಡುವರು ಮತ್ತು ಪೂಜಾಯಜ್ಞವೇದಿಕೆಗಳನ್ನು ಕೆಡವಿಹಾಕುವರು. ನಿನ್ನ ಬಟ್ಟೆಗಳನ್ನು ಕಿತ್ತುಕೊಳ್ಳುವರು ಮತ್ತು ಚಂದವಾದ ಆಭರಣಗಳನ್ನು ತೆಗೆದುಕೊಂಡು ಹೋಗುವರು. ಮತ್ತು ನಿನ್ನನ್ನು ಬೆತ್ತಲೆಯಾಗಿ ಮಾಡುವರು. 40 ನಿನ್ನನ್ನು ಕಲ್ಲುಗಳಿಂದ ಕೊಲ್ಲುವದಕ್ಕಾಗಿ ಅವರು ಜನರನ್ನು ಒಂದುಗೂಡಿಸುವರು. ಬಳಿಕ ಅವರು ನಿನ್ನನ್ನು ಖಡ್ಗಗಳಿಂದ ತುಂಡುತುಂಡಾಗಿ ಕತ್ತರಿಸುವರು. 41 ಬಳಿಕ, ಅನೇಕ ಸ್ತ್ರೀಯರು ನೋಡಲೆಂದು ನಿನ್ನ ಮನೆಗಳನ್ನು ಸುಟ್ಟು, ನಿನ್ನನ್ನು ದಂಡಿಸುವರು. ನೀನು ಸೂಳೆಯಂತೆ ಜೀವಿಸುವದನ್ನು ನಾನು ನಿಲ್ಲಿಸುವೆನು. ನೀನು ನಿನ್ನ ಪ್ರಿಯತಮರಿಗೆ ಹಣ ಕೊಡುವದನ್ನು ನಿಲ್ಲಿಸುತ್ತೇನೆ.
18 ಹಳೆಯ ನಿಯಮವು ದುರ್ಬಲವೂ ನಿಷ್ಪ್ರಯೋಜಕವೂ ಆಗಿದ್ದರಿಂದ ರದ್ದಾಯಿತು. 19 ಮೋಶೆಯ ಧರ್ಮಶಾಸ್ತ್ರವು ಯಾವುದನ್ನೂ ಸಿದ್ಧಿಗೆ ತರಲಿಲ್ಲ. ಈಗ ನಮಗೆ ಉತ್ತಮವಾದ ಒಂದು ನಿರೀಕ್ಷೆಯನ್ನು ಕೊಡಲಾಗಿದೆ. ಈ ನಿರೀಕ್ಷೆಯು ನಮ್ಮನ್ನು ದೇವರ ಬಳಿಗೆ ಕೊಂಡೊಯ್ಯಬಲ್ಲದು.
20 ದೇವರು ಯೇಸುವನ್ನು ಪ್ರಧಾನಯಾಜಕನನ್ನಾಗಿ ಮಾಡಿದಾಗ, ಒಂದು ವಾಗ್ದಾನವನ್ನೂ ಮಾಡಿದನು. ಆದರೆ ಬೇರೆಯವರು ಯಾಜಕರಾದಾಗ ಆತನು ವಾಗ್ದಾನ ಮಾಡಲಿಲ್ಲ. 21 ಕ್ರಿಸ್ತನು ದೇವರ ವಾಗ್ದಾನದಂತೆ ಯಾಜಕನಾದನು. ದೇವರು ಆತನಿಗೆ ಹೇಳಿದ್ದೇನೆಂದರೆ:
“‘ನೀನು ಸದಾಕಾಲವೂ ಯಾಜಕನಾಗಿರುವೆ’
ಎಂದು ಪ್ರಭುವೆಂಬ ನಾನು ವಾಗ್ದಾನ ಮಾಡಿದೆನು.
ಇದಕ್ಕಾಗಿ ನಾನೆಂದಿಗೂ ಪಶ್ಚಾತ್ತಾಪಪಡುವುದಿಲ್ಲ.”(A)
22 ದೇವರು ತನ್ನ ಜನರೊಂದಿಗೆ ಮಾಡಿಕೊಂಡ ಶ್ರೇಷ್ಠವಾದ ಒಡಂಬಡಿಕೆಗೆ ಯೇಸುವೇ ಆಧಾರ ಎಂಬುದೇ ಇದರರ್ಥ.
23 ಇದಲ್ಲದೆ ಇತರ ಯಾಜಕರಲ್ಲಿ ಮರಣದ ಕಾರಣದಿಂದ ಒಬ್ಬನೇ ಶಾಶ್ವತವಾಗಿ ಯಾಜಕನಾಗಿ ಮುಂದುವರೆಯಲಾಗಲಿಲ್ಲ. ಆದ್ದರಿಂದ ಅಲ್ಲಿ ಅನೇಕ ಮಂದಿ ಯಾಜಕರಿದ್ದರು. 24 ಆದರೆ ಯೇಸು ಸದಾಕಾಲವೂ ಜೀವಿಸುವವನಾಗಿದ್ದಾನೆ. ಆತನು ತನ್ನ ಯಾಜಕ ಸೇವೆಯನ್ನು ಎಂದೆಂದಿಗೂ ನಿಲ್ಲಿಸುವುದಿಲ್ಲ. 25 ಆದ್ದರಿಂದಲೇ ತನ್ನ ಮೂಲಕ ದೇವರ ಬಳಿಗೆ ಬರುವ ಜನರನ್ನು ಯೇಸು ಯಾವಾಗಲೂ ರಕ್ಷಿಸಬಲ್ಲನು. ಏಕೆಂದರೆ ಆತನು ಸದಾಕಾಲ ಜೀವಿಸುವವನಾಗಿದ್ದಾನೆ ಮತ್ತು ಜನರು ದೇವರ ಸನ್ನಿಧಿಗೆ ಬಂದಾಗ ಜನರಿಗೆ ಸಹಾಯ ಮಾಡಲು ಸಿದ್ಧನಾಗಿದ್ದಾನೆ.
26 ಯೇಸುವೇ ನಮಗೆ ಬೇಕಾಗಿದ್ದ ಪ್ರಧಾನ ಯಾಜಕನು. ಆತನು ಪಾಪರಹಿತನೂ ಪರಿಶುದ್ಧನೂ ನಿಷ್ಕಳಂಕನೂ ಪಾಪಿಗಳ ಪ್ರಭಾವಕ್ಕೆ ಒಳಗಾಗದವನೂ ಆಕಾಶಮಂಡಲಕ್ಕಿಂತ ಉನ್ನತನೂ ಆಗಿದ್ದಾನೆ. 27 ಆತನು ಬೇರೆ ಯಾಜಕರಂತಲ್ಲ. ಅವರಾದರೋ ಪ್ರತಿ ದಿನವೂ ಯಜ್ಞಗಳನ್ನು ಅರ್ಪಿಸಬೇಕು. ಅವರು ತಮ್ಮ ಸ್ವಂತ ಪಾಪಗಳಿಗಾಗಿ ಯಜ್ಞಗಳನ್ನು ಅರ್ಪಿಸಿದ ನಂತರ ಬೇರೆಯವರ ಪಾಪಗಳಿಗಾಗಿ ಅರ್ಪಿಸಬೇಕು. ಆದರೆ ಕ್ರಿಸ್ತನು ಹಾಗೆ ಮಾಡಬೇಕಾಗಿಲ್ಲ. ಆತನು ತನ್ನನ್ನೇ ಯಜ್ಞವಾಗಿ ಅರ್ಪಿಸಿಕೊಂಡು ಒಂದೇ ಸಾರಿ ಆ ಕೆಲಸವನ್ನು ಮಾಡಿ ಮುಗಿಸಿದನು. 28 ಧರ್ಮಶಾಸ್ತ್ರವು ಮನುಷ್ಯರೊಳಗಿಂದ ಪ್ರಧಾನ ಯಾಜಕರನ್ನು ಆರಿಸುತ್ತದೆ. ಆರಿಸಲ್ಪಟ್ಟ ಈ ಜನರು ಮಾನವ ದೌರ್ಬಲ್ಯಗಳನ್ನು ಹೊಂದಿದವರಾಗಿದ್ದಾರೆ. ಆದರೆ ದೇವರು ಧರ್ಮಶಾಸ್ತ್ರದ ನಂತರ ಮಾಡಿದ ವಾಗ್ದಾನ ದೇವರ ಮಗನನ್ನು ಪ್ರಧಾನ ಯಾಜಕನನ್ನಾಗಿ ಮಾಡಿತು. ಆ ಮಗನು ಎಂದೆಂದಿಗೂ ಸರ್ವಸಂಪೂರ್ಣನಾಗಿ ಮಾಡಲ್ಪಟ್ಟಿದ್ದಾನೆ.
106 ಯೆಹೋವನನ್ನು ಸ್ತುತಿಸಿರಿ!
ಆತನು ಒಳ್ಳೆಯವನು! ಆತನಿಗೆ ಕೃತಜ್ಞತಾಸ್ತುತಿಮಾಡಿರಿ.
ಆತನ ಪ್ರೀತಿಯು ಶಾಶ್ವತವಾದದ್ದು!
2 ಯೆಹೋವನ ಮಹತ್ವವನ್ನು ಸಂಪೂರ್ಣವಾಗಿ ವರ್ಣಿಸಲು ಯಾರಿಗೂ ಆಗದು;
ಆತನನ್ನು ಸಂಪೂರ್ಣವಾಗಿ ಸ್ತುತಿಸುವುದಕ್ಕೂ ಯಾರಿಗೂ ಸಾಧ್ಯವಿಲ್ಲ.
3 ದೇವರ ಆಜ್ಞೆಗಳಿಗೆ ವಿಧೇಯರಾಗಿರುವವರು ಭಾಗ್ಯವಂತರೇ ಸರಿ!
ಅವರು ಸತ್ಕಾರ್ಯಗಳನ್ನು ಯಾವಾಗಲೂ ಮಾಡುತ್ತಿರುವರು.
4 ಯೆಹೋವನೇ, ನಿನ್ನ ಜನರಿಗೆ ದಯೆತೋರುವಾಗ ನನ್ನನ್ನು ಜ್ಞಾಪಿಸಿಕೊಂಡು ದಯೆತೋರು.
ನಿನ್ನ ಜನರನ್ನು ರಕ್ಷಿಸುವಾಗ ನನ್ನನ್ನು ನೆನಪು ಮಾಡಿಕೊಂಡು ರಕ್ಷಿಸು.
5 ಯೆಹೋವನೇ, ನಿನ್ನ ಜನರಿಗೋಸ್ಕರ ನೀನು ಮಾಡುವ
ಒಳ್ಳೆಯವುಗಳಲ್ಲಿ ನನಗೂ ಪಾಲು ದೊರೆಯಲಿ.
ನಿನ್ನ ಜನರೊಂದಿಗೆ ನಾನೂ ಸಂತೋಷಪಡುವಂತೆ ಮಾಡು.
ನಿನ್ನ ಜನರೊಂದಿಗೆ ನಾನೂ ನಿನ್ನ ಬಗ್ಗೆ ಹೆಮ್ಮೆಪಡುವಂತಾಗಲಿ.
6 ನಮ್ಮ ಪೂರ್ವಿಕರು ಪಾಪಮಾಡಿದಂತೆಯೇ ನಾವು ಪಾಪ ಮಾಡಿದೆವು.
ನಾವು ಅಪರಾಧಿಗಳಾಗಿದ್ದೆವು; ದುಷ್ಕೃತ್ಯಗಳನ್ನು ಮಾಡಿದೆವು!
7 ನೀನು ಈಜಿಪ್ಟಿನಲ್ಲಿ ಮಾಡಿದ ಮಹತ್ಕಾರ್ಯಗಳಿಂದ
ನಮ್ಮ ಪೂರ್ವಿಕರು ಏನೂ ಕಲಿತುಕೊಳ್ಳಲಿಲ್ಲ.
ಕೆಂಪು ಸಮುದ್ರದ ಬಳಿಯಲ್ಲಿ
ನಮ್ಮ ಪೂರ್ವಿಕರು ನಿನಗೆ ವಿರೋಧವಾಗಿ ತಿರುಗಿದರು.
8 ಆದರೆ ಆತನು ತನ್ನ ಹೆಸರಿನ ನಿಮಿತ್ತವಾಗಿ ನಮ್ಮ ಪೂರ್ವಿಕರನ್ನು ರಕ್ಷಿಸಿದನು;
ತನ್ನ ಮಹಾಶಕ್ತಿಯನ್ನು ತೋರಿಸುವುದಕ್ಕಾಗಿ ಅವರನ್ನು ರಕ್ಷಿಸಿದನು.
9 ಆತನು ಆಜ್ಞಾಪಿಸಲು ಕೆಂಪು ಸಮುದ್ರವು ಒಣಗಿಹೋಯಿತು.
ಆತನು ಆಳವಾದ ಸಮುದ್ರವನ್ನು ಇಬ್ಭಾಗ ಮಾಡಿ ಮರಳುಗಾಡಿನಂತೆ ಒಣಗಿಹೋಗಿದ್ದ ಭೂಮಿಯ ಮೇಲೆ ನಮ್ಮ ಪೂರ್ವಿಕರನ್ನು ನಡೆಸಿದನು.
10 ನಮ್ಮ ಪೂರ್ವಿಕರನ್ನು ಅವರ ಶತ್ರುಗಳಿಂದ ರಕ್ಷಿಸಿದನು!
ವೈರಿಗಳಿಂದ ಪಾರುಮಾಡಿದನು!
11 ಅವರ ಶತ್ರುಗಳನ್ನು ಸಮುದ್ರದಲ್ಲಿ ಮುಳುಗಿಸಿಬಿಟ್ಟನು.
ಅವರ ಶತ್ರುಗಳಲ್ಲಿ ಒಬ್ಬರೂ ತಪ್ಪಿಸಿಕೊಳ್ಳಲಾಗಲಿಲ್ಲ!
12 ನಮ್ಮ ಪೂರ್ವಿಕರು ಆತನ ಆಜ್ಞೆಗಳನ್ನು
ನಂಬಿ ಆತನನ್ನು ಸಂಕೀರ್ತಿಸಿದರು.
4 ಕೋಪವು ಕ್ರೂರ; ಅದು ಪ್ರವಾಹದಂತೆ ನಾಶಕರ. ಹೊಟ್ಟೆಕಿಚ್ಚು ಅದಕ್ಕಿಂತಲೂ ನಾಶಕರ.
5 ಬಹಿರಂಗವಾದ ಟೀಕೆ ಗುಟ್ಟಾದ ಪ್ರೀತಿಗಿಂತಲೂ ಉತ್ತಮ.
6 ಸ್ನೇಹಿತನಿಂದಾಗುವ ಗಾಯಗಳು ಸಹಾಯಕರ. ಶತ್ರುವಿನ ಮುತ್ತುಗಳಾದರೋ ಮೋಸಕರ.
Kannada Holy Bible: Easy-to-Read Version. All rights reserved. © 1997 Bible League International