Print Page Options
Previous Prev Day Next DayNext

Chronological

Read the Bible in the chronological order in which its stories and events occurred.
Duration: 365 days
Kannada Holy Bible: Easy-to-Read Version (KERV)
Version
ತೀತನಿಗೆ 1-3

ದೇವರ ಸೇವಕನಾದ ಮತ್ತು ಯೇಸು ಕ್ರಿಸ್ತನ ಅಪೊಸ್ತಲನಾದ ಪೌಲನು ಬರೆಯುವ ಪತ್ರ. ದೇವರು ಆರಿಸಿಕೊಂಡ ಜನರ ನಂಬಿಕೆಯನ್ನು ವೃದ್ಧಿಗೊಳಿಸುವುದಕ್ಕಾಗಿ ಮತ್ತು ಅವರಿಗೆ ಸತ್ಯವನ್ನು ತಿಳಿಸುವುದಕ್ಕಾಗಿ ನನ್ನನ್ನು ಕಳುಹಿಸಲಾಯಿತು. ದೇವರ ಸೇವೆಯನ್ನು ಹೇಗೆ ಮಾಡಬೇಕೆಂಬುದನ್ನು ಆ ಸತ್ಯವು ತೋರ್ಪಡಿಸುತ್ತಿದೆ. ನಿತ್ಯಜೀವದ ಮೇಲೆ ನಮಗಿರುವ ನಿರೀಕ್ಷೆಯಿಂದಲೇ ಆ ನಂಬಿಕೆ ಮತ್ತು ಜ್ಞಾನಗಳು ಉಂಟಾಗಿವೆ. ನಿತ್ಯಜೀವವನ್ನು ಕೊಡುವುದಾಗಿ ದೇವರು ನಮಗೆ ಅನಾದಿಕಾಲದಲ್ಲಿಯೇ ವಾಗ್ದಾನ ಮಾಡಿದ್ದನು. ದೇವರು ಸುಳ್ಳು ಹೇಳುವುದಿಲ್ಲ. ತಕ್ಕಕಾಲ ಬಂದಾಗ ದೇವರು ಆ ನಿತ್ಯಜೀವವನ್ನು ಲೋಕಕ್ಕೆ ಪ್ರಕಟಿಸಿದನು. ನನಗೊಪ್ಪಿಸಿರುವ ಈ ಸಂದೇಶವನ್ನು ನಮ್ಮ ರಕ್ಷಕನಾದ ದೇವರ ಆಜ್ಞೆಗನುಸಾರವಾಗಿ ಸಾರುತ್ತಿದ್ದೇನೆ.

ನಾನು ಈ ಪತ್ರವನ್ನು ತೀತನಿಗೆ ಬರೆಯುತ್ತಿದ್ದೇನೆ. ನಮ್ಮೆಲ್ಲರ ನಂಬಿಕೆಯ ಸಂಬಂಧದಲ್ಲಿ ನೀನು ನನಗೆ ನಿಜವಾದ ಮಗನಂತಿರುವೆ.

ನಮ್ಮ ತಂದೆಯಾದ ದೇವರಿಂದಲೂ ನಮ್ಮ ರಕ್ಷಕನಾದ ಕ್ರಿಸ್ತ ಯೇಸುವಿನಿಂದಲೂ ನಿನಗೆ ಕೃಪೆಯೂ ಶಾಂತಿಯೂ ಲಭಿಸಲಿ.

ಕ್ರೇತದಲ್ಲಿ ತೀತನ ಕಾರ್ಯ

ಇನ್ನೂ ಪೂರ್ಣವಾಗಿಲ್ಲದ ಕಾರ್ಯಗಳನ್ನು ಪೂರ್ಣಗೊಳಿಸುವುದಕ್ಕಾಗಿಯೂ ಪ್ರತಿಯೊಂದು ಪಟ್ಟಣದಲ್ಲಿ ಸಭಾಹಿರಿಯರನ್ನು ಆರಿಸುವುದಕ್ಕಾಗಿಯೂ ನಾನು ನಿನ್ನನ್ನು ಕ್ರೇತದಲ್ಲಿ ಬಿಟ್ಟು ಬಂದೆನು. ಸಭೆಯ ಹಿರಿಯನಾಗುವವನು ಅಪರಾಧಿಯೆಂಬ ನಿಂದನೆಗೆ ಗುರಿಯಾಗಿರಬಾರದು. ಅವನಿಗೆ ಒಬ್ಬಳೇ ಪತ್ನಿಯಿರಬೇಕು. ಅವನ ಮಕ್ಕಳು ವಿಶ್ವಾಸಿಗಳಾಗಿರಬೇಕು; ಅವರು ದುಷ್ಟರೆಂದಾಗಲಿ ಅವಿಧೇಯರೆಂದಾಗಲಿ ಹೇಳಿಸಿಕೊಂಡಿರಬಾರದು. ಸಭಾಹಿರಿಯನು ದೇವರ ಸೇವೆಯ ಜವಾಬ್ದಾರಿಯನ್ನು ಹೊತ್ತು ಕೊಂಡವನಾಗಿದ್ದಾನೆ. ಆದ್ದರಿಂದ ಅವನು ಅಪರಾಧಿಯೆಂಬ ನಿಂದನೆಗೆ ಒಳಗಾಗಿರಬಾರದು; ಗರ್ವಿಷ್ಠನಾಗಿರಬಾರದು; ಸ್ವಾರ್ಥಿಯಾಗಿರಬಾರದು ಮತ್ತು ಮುಂಗೋಪಿಯಾಗಿರಬಾರದು; ದ್ರಾಕ್ಷಾರಸವನ್ನು ಅತಿಯಾಗಿ ಕುಡಿಯುವವನಾಗಿರಬಾರದು; ಜಗಳಗಂಟನಾಗಿರಬಾರದು; ಜನರನ್ನು ವಂಚಿಸಿ ಶ್ರೀಮಂತನಾಗಲು ಪ್ರಯತ್ನಿಸುವವನಾಗಿರಬಾರದು. ಸಭಾಹಿರಿಯನು ಜನರನ್ನು ತನ್ನ ಮನೆಗೆ ಆಹ್ವಾನಿಸಿ ಅತಿಥಿಸತ್ಕಾರ ಮಾಡಲು ಸಿದ್ಧನಾಗಿರಬೇಕು. ಅವನು ಒಳ್ಳೆಯದನ್ನು ಪ್ರೀತಿಸಬೇಕು; ಜ್ಞಾನಿಯಾಗಿರಬೇಕು; ನ್ಯಾಯವಂತನಾಗಿರಬೇಕು; ಪವಿತ್ರನಾಗಿರಬೇಕು. ಅವನು ತನ್ನನ್ನು ಹತೋಟಿಯಲ್ಲಿ ಇಟ್ಟುಕೊಂಡಿರಬೇಕು. ನಾವು ಬೋಧಿಸುವ ಸತ್ಯವಾಕ್ಯವನ್ನು ಅವನು ನಂಬಿಗಸ್ತಿಕೆಯಿಂದ ಅನುಸರಿಸಬೇಕು. ಸತ್ಯವಾದ ಮತ್ತು ಯೋಗ್ಯವಾದ ಬೋಧನೆಯಿಂದ ಅವನು ಜನರಿಗೆ ಸಹಾಯ ಮಾಡುವವನಾಗಿರಬೇಕು. ಅವನು ಸತ್ಯಬೋಧನೆಗೆ ವಿರುದ್ಧವಾದ ಜನರಿಗೆ ಅವರ ತಪ್ಪನ್ನು ತೋರಿಸಿಕೊಡುವ ಸಾಮರ್ಥ್ಯ ಉಳ್ಳವನಾಗಿರಬೇಕು.

10 ಅವಿಧೇಯರಾಗಿರುವ ಜನರು ಅನೇಕರಿದ್ದಾರೆ. ಅವರು ನಿರರ್ಥಕವಾದುದನ್ನು ಕುರಿತು ಮಾತನಾಡುತ್ತಲೇ ಇರುತ್ತಾರೆ ಮತ್ತು ಉಳಿದ ಜನರನ್ನು ತಪ್ಪುದಾರಿಗೆ ಎಳೆಯುತ್ತಾರೆ. ಯೆಹೂದ್ಯರಲ್ಲದ ಜನರೆಲ್ಲರೂ ಸುನ್ನತಿ ಮಾಡಿಸಿಕೊಳ್ಳಬೇಕೆಂದು ಬೋಧಿಸುವ ಜನರ ಬಗ್ಗೆಯೇ ನಾನು ಹೇಳುತ್ತಿರುವುದು. 11 ಆ ಜನರ ಬೋಧನೆ ತಪ್ಪೆಂದು ನಿರೂಪಿಸಲು ಮತ್ತು ಉಪಯೋಗವಿಲ್ಲದ ಆ ಸಂಗತಿಗಳನ್ನು ಬೋಧಿಸದಂತೆ ಮಾಡಲು ಸಭಾಹಿರಿಯನು ಸಮರ್ಥನಾಗಿರಬೇಕು. ಅವರು ಉಪದೇಶ ಮಾಡಬಾರದ ಸಂಗತಿಗಳನ್ನು ಉಪದೇಶಿಸುತ್ತಾ ಇಡೀ ಕುಟುಂಬಗಳನ್ನೇ ಸಂಪೂರ್ಣವಾಗಿ ನಾಶಗೊಳಿಸುತ್ತಿದ್ದಾರೆ. ಅವರು ಜನರನ್ನು ವಂಚಿಸಿ, ಹಣವನ್ನು ಸಂಪಾದಿಸುವುದಕ್ಕೋಸ್ಕರ ಆ ಸಂಗತಿಗಳನ್ನು ಉಪದೇಶಿಸುತ್ತಿದ್ದಾರೆ. 12 ಅವರ ಪ್ರವಾದಿಗಳಲ್ಲಿ ಒಬ್ಬನು, “ಕ್ರೇತದ ಜನರು ಯಾವಾಗಲೂ ಸುಳ್ಳು ಹೇಳುತ್ತಾರೆ. ಅವರು ದುಷ್ಟ ಮೃಗಗಳಾಗಿದ್ದಾರೆ; ಸೋಮಾರಿತನದಿಂದ ಕೆಲಸವನ್ನೇ ಮಾಡದೆ ಹೊಟ್ಟೆಬಾಕರಾಗಿದ್ದಾರೆ” ಎಂದು ಹೇಳಿದ್ದಾನೆ. 13 ಪ್ರವಾದಿಯು ಹೇಳಿದ ಮಾತುಗಳು ಸತ್ಯವಾಗಿವೆ. ಆದ್ದರಿಂದ ಅವರು ಮಾಡುತ್ತಿರುವ ತಪ್ಪುಗಳನ್ನು ಅವರಿಗೆ ತಿಳಿಸು. ನೀನು ಅವರ ವಿಷಯದಲ್ಲಿ ಕಟ್ಟುನಿಟ್ಟಾಗಿರಬೇಕು. ಆಗ ಅವರು ತಮ್ಮ ನಂಬಿಕೆಯಲ್ಲಿ ದೃಢವಾಗಿದ್ದು, 14 ಯೆಹೂದ್ಯರ ಕಟ್ಟುಕಥೆಗಳನ್ನು ಒಪ್ಪಿಕೊಳ್ಳುವುದಿಲ್ಲ ಮತ್ತು ಸತ್ಯವನ್ನು ಒಪ್ಪಿಕೊಳ್ಳದ ಜನರ ಆಜ್ಞೆಗಳನ್ನು ಅನುಸರಿಸುವುದಿಲ್ಲ.

15 ಪರಿಶುದ್ಧರಾದ ಜನರಿಗೆ ಎಲ್ಲಾ ಸಂಗತಿಗಳು ಪರಿಶುದ್ಧವಾಗಿರುತ್ತವೆ. ಆದರೆ ಪಾಪಗಳನ್ನೇ ತುಂಬಿಕೊಂಡಿರುವ ಮತ್ತು ನಂಬಿಕೆಯಿಲ್ಲದ ಜನರಿಗೆ ಯಾವುದೂ ಪರಿಶುದ್ಧವಾಗಿರುವುದಿಲ್ಲ. ನಿಜವಾಗಿಯೂ, ಅವರ ಮನಸ್ಸುಗಳು ಮತ್ತು ಮನಸ್ಸಾಕ್ಷಿಗಳು ಮಲಿನವಾಗಿವೆ. 16 ದೇವರ ಬಗ್ಗೆ ತಮಗೆ ತಿಳಿದಿದೆಯೆಂದು ಅವರು ಹೇಳಿದರೂ ಅವರು ದೇವರನ್ನು ತಿಳಿದಿಲ್ಲವೆಂದು ಅವರ ಕೆಟ್ಟಕಾರ್ಯಗಳೇ ಸ್ಪಷ್ಟಪಡಿಸುತ್ತವೆ. ಅವರು ಭಯಂಕರವಾದ ಜನರು ಮತ್ತು ಅವಿಧೇಯರು. ಯಾವ ಸತ್ಕಾರ್ಯಗಳನ್ನು ಮಾಡುವುದಕ್ಕೂ ಅವರು ಯೋಗ್ಯರಲ್ಲ.

ಸತ್ಯಬೋಧನೆಯನ್ನು ಅನುಸರಿಸಿರಿ

ಸತ್ಯಬೋಧನೆಯನ್ನು ಅನುಸರಿಸಲು ಜನರು ಮಾಡಬೇಕಾದ ಕಾರ್ಯಗಳನ್ನು ಅವರಿಗೆ ನೀನು ತಿಳಿಸು. ವೃದ್ಧರಾದವರು, ಜಿತೇಂದ್ರಿಯರೂ ಗಂಭೀರ ಸ್ವಭಾವದವರೂ ವಿವೇಕವುಳ್ಳವರೂ ಆಗಿರಬೇಕೆಂದು ತಿಳಿಸು. ಅವರು ತಮ್ಮ ನಂಬಿಕೆಯಲ್ಲಿ, ಪ್ರೀತಿಯಲ್ಲಿ ಮತ್ತು ತಾಳ್ಮೆಯಲ್ಲಿ ಬಲವಾಗಿರಬೇಕೆಂದು ತಿಳಿಸು.

ಅಂತೆಯೇ ವೃದ್ಧ ಸ್ತ್ರೀಯರು ಸಭ್ಯರಾಗಿ ವರ್ತಿಸಬೇಕು. ಅವರು ಚಾಡಿ ಹೇಳಬಾರದು; ಮದ್ಯಾಸಕ್ತರಾಗಿರಬಾರದು. ಅವರು ಒಳ್ಳೆಯದನ್ನೇ ಉಪದೇಶಿಸಬೇಕು. ಅವರು ಗೃಹಿಣಿಯರಿಗೆ, “ನಿಮ್ಮ ಗಂಡಂದಿರನ್ನು ಮತ್ತು ಮಕ್ಕಳನ್ನು ಪ್ರೀತಿಸಿರಿ. ಜ್ಞಾನವುಳ್ಳವರಾಗಿರಿ, ಪರಿಶುದ್ಧರಾಗಿರಿ, ನಿಮ್ಮ ಮನೆಕೆಲಸವನ್ನು ನೋಡಿಕೊಳ್ಳಿರಿ, ದಯೆಯುಳ್ಳವರಾಗಿರಿ, ನಿಮ್ಮ ಗಂಡಂದಿರಿಗೆ ವಿಧೇಯರಾಗಿರಿ” ಎಂದು ಉಪದೇಶಿಸಬೇಕು. ಆಗ ದೇವರು ನಮಗೆ ದಯಪಾಲಿಸಿದ ಬೋಧನೆಯನ್ನು ಟೀಕಿಸಲು ಯಾರಿಗೂ ಸಾಧ್ಯವಾಗುವುದಿಲ್ಲ.

ಇದೇ ರೀತಿಯಲ್ಲಿ ಯುವಕರಿಗೆ ಜ್ಞಾನಿಗಳಾಗಿರಲು ತಿಳಿಸು. ನೀನು ಒಳ್ಳೆಯ ಕಾರ್ಯಗಳನ್ನು ಮಾಡುತ್ತಾ ಯುವಕರಿಗೆ ಸರ್ವವಿಧದಲ್ಲಿಯೂ ಮಾದರಿಯಾಗಿರಬೇಕು. ನಿನ್ನ ಉಪದೇಶದಲ್ಲಿ ಯಥಾರ್ಥತೆಯನ್ನು ಮತ್ತು ಗಂಭೀರತೆಯನ್ನು ತೋರಿಸಿಕೊಡು. ನೀನು ಸತ್ಯವನ್ನೇ ಮಾತನಾಡು. ಆಗ ನಿನ್ನನ್ನು ಟೀಕಿಸಲು ಸಾಧ್ಯವಿಲ್ಲದೆ ನಿನ್ನ ವಿರೋಧಿಗಳು ಅಪಮಾನಕ್ಕೆ ಗುರಿಯಾಗುವರು.

ಗುಲಾಮರಿಗೆ ಈ ಸಂಗತಿಗಳನ್ನು ತಿಳಿಸು: ಅವರು ತಮ್ಮ ಯಜಮಾನರಿಗೆ ಯಾವಾಗಲೂ ವಿಧೇಯರಾಗಿದ್ದು ಅವರನ್ನು ಮೆಚ್ಚಿಸಲು ಪ್ರಯತ್ನಿಸಬೇಕು. ಅವರು ತಮ್ಮ ಯಜಮಾನರ ಜೊತೆಯಲ್ಲಿ ವಾಗ್ವಾದ ಮಾಡಬಾರದು; 10 ಅವರು ವಸ್ತುಗಳನ್ನು ಕದಿಯಬಾರದು; ಮತ್ತು ತಾವು ನಂಬಿಗಸ್ತರೆಂಬುದನ್ನು ತೋರಿಸಿಕೊಡಬೇಕು. ಗುಲಾಮರು ಹೀಗೆ ನಡೆದುಕೊಳ್ಳುವುದಾದರೆ, ಅವರು ಮಾಡುವ ಪ್ರತಿಯೊಂದು ಕೆಲಸದಲ್ಲಿಯೂ ನಮ್ಮ ರಕ್ಷಕನಾದ ದೇವರ ಉಪದೇಶವು ಶ್ರೇಷ್ಠವಾದದ್ದೆಂದು ತೋರ್ಪಡಿಸಲು ಸಾಧ್ಯವಾಗುತ್ತದೆ.

11 ಎಲ್ಲರಿಗೂ ರಕ್ಷಣೆಯನ್ನು ಕೊಡುವ ದೇವರ ಕೃಪೆಯು ಪ್ರತ್ಯಕ್ಷವಾಗಿದೆ. 12 ನಾವು ದೇವರಿಗೆ ವಿರುದ್ಧವಾಗಿ ಜೀವಿಸದಂತೆಯೂ ಲೋಕದ ಜನರು ಮಾಡಲಪೇಕ್ಷಿಸುವ ಕೆಟ್ಟಕಾರ್ಯಗಳನ್ನು ಮಾಡದಂತೆಯೂ ಅದು ತಡೆಯುತ್ತದೆ. ನಾವು ದೇವರ ಸೇವೆಯನ್ನು ಮಾಡುತ್ತಿದ್ದೇವೆ ಎಂಬುದನ್ನು ತೋರಿಸುವುದಕ್ಕಾಗಿ ನೀತಿವಂತರಾಗಿಯೂ ಜ್ಞಾನಿಗಳಾಗಿಯೂ ಲೋಕದಲ್ಲಿ ಈಗ ಬಾಳಬೇಕೆಂದು ಅದು ಬೋಧಿಸುತ್ತದೆ. 13 ನಮ್ಮ ಮಹಾದೇವರು ಮತ್ತು ರಕ್ಷಕನಾದ ಯೇಸುಕ್ರಿಸ್ತನ ಪ್ರತ್ಯಕ್ಷತೆಯನ್ನು ಎದುರುನೋಡುತ್ತಿರುವ ನಾವು ಆ ರೀತಿಯಲ್ಲಿಯೇ ಬಾಳಬೇಕು. ಆತನೇ ನಮ್ಮ ಮಹಾ ನಿರೀಕ್ಷೆಯಾಗಿದ್ದಾನೆ. ಆತನು ತನ್ನ ಮಹಿಮೆಯೊಂದಿಗೆ ಬರುತ್ತಾನೆ. 14 ಆತನು ನಮಗೋಸ್ಕರ ತನ್ನನ್ನು ಒಪ್ಪಿಸಿಕೊಟ್ಟನು. ನಮ್ಮನ್ನು ಪಾಪದಿಂದ ಬಿಡುಗಡೆ ಮಾಡಲು ಮತ್ತು ಯಾವಾಗಲೂ ಒಳ್ಳೆಯ ಕಾರ್ಯಗಳನ್ನೇ ಮಾಡ ಬಯಸುವ ತನ್ನ ಪರಿಶುದ್ಧ ಜನರನ್ನಾಗಿ ಮಾಡಲು ಆತನು ಮರಣ ಹೊಂದಿದನು.

15 ಈ ಸಂಗತಿಗಳನ್ನು ಜನರಿಗೆ ತಿಳಿಸಲು ನಿನಗೆ ಸಂಪೂರ್ಣ ಅಧಿಕಾರವಿದೆ. ಜನರನ್ನು ಬಲಗೊಳಿಸಲು ಈ ಅಧಿಕಾರವನ್ನು ಬಳಸಿಕೊಂಡು, ಅವರು ಮಾಡಬೇಕಾದುದನ್ನು ತಿಳಿಸು. ನೀನು ಮುಖ್ಯನಾದವನಲ್ಲವೆಂದು ಯಾರೂ ನಿನ್ನನ್ನು ಪರಿಗಣಿಸದಂತೆ ನೋಡಿಕೊ.

ಜೀವಿಸಲು ಯೋಗ್ಯವಾದ ಮಾರ್ಗ

ನೀನು ಜನರಿಗೆ ತಿಳಿಸಬೇಕಾದದ್ದೇನೆಂದರೆ: ನಿಮ್ಮ ಅಧಿಪತಿಗಳಿಗೂ ಅಧಿಕಾರಿಗಳಿಗೂ ಅಧೀನರಾಗಿರಿ; ಸಕಲ ಸತ್ಕಾರ್ಯಗಳನ್ನು ಮಾಡಲು ಸಿದ್ಧರಾಗಿರಿ. ಯಾರನ್ನೂ ದೂಷಿಸದೆ, ಯಾರೊಂದಿಗೂ ಜಗಳವಾಡದೆ ಮೃದುವಾಗಿ ಎಲ್ಲರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳಿರಿ.

ಮೊದಲು ನಾವು ಸಹ ಅವಿವೇಕಿಗಳಾಗಿದ್ದೆವು. ನಾವು ವಿಧೇಯರಾಗಿರಲಿಲ್ಲ. ನಾವು ಮೋಸಹೋಗಿದ್ದೆವು. ಅನೇಕ ಬಗೆಯ ಆಸೆಗಳಿಗೆ ಮತ್ತು ಭೋಗಗಳಿಗೆ ದಾಸರಾಗಿದ್ದೆವು; ಕೆಟ್ಟದ್ದನ್ನು ಮಾಡುವವರೂ ಹೊಟ್ಟೆಕಿಚ್ಚುಳ್ಳವರೂ ಆಗಿದ್ದೆವು. ಜನರು ನಮ್ಮನ್ನು ದ್ವೇಷಿಸುತ್ತಿದ್ದರು. ನಾವು ಒಬ್ಬರನ್ನೊಬ್ಬರು ದ್ವೇಷಿಸುತ್ತಿದ್ದೆವು. ಆಗ ನಮ್ಮ ರಕ್ಷಕನಾದ ದೇವರ ಪ್ರೀತಿಯೂ ಕೃಪೆಯೂ ಪ್ರತ್ಯಕ್ಷವಾದವು. ಆತನು ನಮ್ಮನ್ನು ರಕ್ಷಿಸಿದ್ದು ತನ್ನ ಕರುಣೆಯಿಂದಲೇ ಹೊರತು ನೀತಿವಂತರಾಗಲು ನಾವು ಮಾಡಿದ ಒಳ್ಳೆಯ ಕಾರ್ಯಗಳಿಂದಲ್ಲ. ಆತನು ನಮ್ಮನ್ನು ಸ್ನಾನದ ಮೂಲಕವಾಗಿಯೂ ಪವಿತ್ರಾತ್ಮನ ಮೂಲಕವಾಗಿಯೂ ಹೊಸಬರನ್ನಾಗಿ ಮಾಡಿ ರಕ್ಷಿಸಿದನು. ನಮ್ಮ ರಕ್ಷಕನಾದ ಯೇಸುಕ್ರಿಸ್ತನ ಮೂಲಕ ದೇವರು ಪವಿತ್ರಾತ್ಮನನ್ನು ನಮ್ಮ ಮೇಲೆ ಸಮೃದ್ಧಿಯಾಗಿ ಸುರಿಸಿದನು. ದೇವರು ತನ್ನ ಕೃಪೆಯಿಂದ ನಮ್ಮನ್ನು ನೀತಿವಂತರನ್ನಾಗಿ ಮಾಡಿದನು. ನಾವು ನಿತ್ಯಜೀವವನ್ನು ಪಡೆಯುವಂತೆ ಆತನು ನಮಗೆ ಪವಿತ್ರಾತ್ಮನನ್ನು ಕೊಟ್ಟನು. ಅದೇ ನಮ್ಮ ನಿರೀಕ್ಷೆ. ಈ ಬೋಧನೆಯು ಸತ್ಯವಾದದ್ದು.

ನೀನು ಜನರಿಗೆ ಈ ಸಂಗತಿಗಳನ್ನು ಒತ್ತಿಹೇಳಬೇಕೆಂದು ನಾನು ಅಪೇಕ್ಷಿಸುತ್ತೇನೆ. ಆಗ, ದೇವರಲ್ಲಿ ನಂಬಿಕೆ ಇಟ್ಟಿರುವವರು ಜಾಗರೂಕರಾಗಿದ್ದು ತಮ್ಮ ಜೀವನದಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡುವರು. ಇವು ಎಲ್ಲರಿಗೂ ಹಿತಕರವಾಗಿವೆ ಮತ್ತು ಪ್ರಯೋಜನಕರವಾಗಿವೆ.

ಬುದ್ಧಿಯಿಲ್ಲದೆ ಕುತರ್ಕ ಮಾಡುವ ಜನರಿಂದ, ನಿರರ್ಥಕವಾದ ವಂಶಾವಳಿಗಳ ಚರಿತ್ರೆಯ ಬಗ್ಗೆ ಮಾತನಾಡುವ ಜನರಿಂದ, ಮೋಶೆಯು ಬರೆದಿರುವ ಧರ್ಮಶಾಸ್ತ್ರದಲ್ಲಿರುವ ನಿಯಮಗಳ ಬಗ್ಗೆ ತೊಂದರೆಯನ್ನು ಉಂಟುಮಾಡುವ ಮತ್ತು ವಾಗ್ವಾದ ಮಾಡುವ ಜನರಿಂದ ದೂರವಾಗಿರು. ಅವುಗಳಿಗೆ ಯಾವ ಬೆಲೆಯೂ ಇಲ್ಲ, ಅವುಗಳಿಂದ ಜನರಿಗೆ ಯಾವ ಪ್ರಯೋಜನವೂ ಇಲ್ಲ. 10 ಯಾವನಾದರೂ ಭೇದ ಹುಟ್ಟಿಸುತ್ತಿದ್ದರೆ, ಅವನಿಗೆ ಎಚ್ಚರಿಕೆ ನೀಡು. ಅವನಿನ್ನೂ ಮುಂದುವರಿಸಿದರೆ ಮತ್ತೊಮ್ಮೆ ಎಚ್ಚರಿಕೆ ನೀಡು. ಆದರೂ ಅವನು ಕೇಳದೆಹೋದರೆ ಅವನ ಸಹವಾಸವನ್ನು ತೊರೆದುಬಿಡು. 11 ಅಂಥವನು ಕೆಟ್ಟವನೂ ಪಾಪಪೂರಿತನೂ ಆಗಿದ್ದಾನೆ ಎಂಬುದು ನಿನಗೂ ತಿಳಿದಿದೆ. ಅವನು ತನ್ನ ಸ್ವಕಾರ್ಯಗಳಿಂದಲೇ ತಪ್ಪಿತಸ್ಥನೆಂಬ ತೀರ್ಪನ್ನು ಹೊಂದಿದ್ದಾನೆ.

ನೆನಪಿನಲ್ಲಿಡಬೇಕಾದ ಕೆಲವು ಸಂಗತಿಗಳು

12 ನಾನು ನಿನ್ನ ಬಳಿಗೆ ಅರ್ತೆಮನನ್ನು ಮತ್ತು ತುಖಿಕನನ್ನು ಕಳುಹಿಸಿದಾಗ, ನಿಕೊಪೊಲಿಯಲ್ಲಿರುವ ನನ್ನ ಬಳಿಗೆ ಬರಲು ಆದಷ್ಟು ಪ್ರಯತ್ನಿಸು. ನಾನು ಈ ಚಳಿಗಾಲವನ್ನು ಅಲ್ಲಿಯೇ ಕಳೆಯಬೇಕೆಂದಿದ್ದೇನೆ. 13 ವಕೀಲನಾದ ಜೇನನೂ ಅಪೊಲ್ಲೋಸನೂ ಅಲ್ಲಿಂದ ಪ್ರಯಾಣ ಮಾಡುತ್ತಾರೆ. ಅವರ ಪ್ರಯಾಣಕ್ಕೆ ನಿನ್ನಿಂದ ಸಾಧ್ಯವಾದಷ್ಟು ಸಹಾಯಮಾಡು. ಅವರಿಗೆ ಯಾವ ಕೊರತೆಯೂ ಆಗದಂತೆ ನೋಡಿಕೊ. 14 ನಮ್ಮ ಜನರು ತಮ್ಮ ಜೀವನವು ನಿಷ್ಪ್ರಯೋಜಕವಾಗದಂತೆ ಪರೋಪಕಾರವನ್ನು ಕಲಿತುಕೊಂಡು ಕೊರತೆಯಲ್ಲಿರುವವರಿಗೆ ಉಪಕಾರ ಮಾಡಬೇಕು.

15 ಇಲ್ಲಿ ನನ್ನೊಡನೆ ಇರುವ ಜನರೆಲ್ಲರೂ ನಿನಗೆ ವಂದನೆ ಹೇಳುತ್ತಾರೆ. ಕ್ರಿಸ್ತನಲ್ಲಿ ನಂಬಿಕೆ ಇಟ್ಟವರಾಗಿದ್ದು ನಮ್ಮನ್ನು ಪ್ರೀತಿಸುವವರಿಗೆಲ್ಲ ನಮ್ಮ ವಂದನೆ ತಿಳಿಸು.

ದೇವರ ಕೃಪೆಯು ನಿಮ್ಮೊಂದಿಗಿರಲಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International