Chronological
ನೆಹೆಮೀಯನ ಪ್ರಾರ್ಥನೆ
1 ಇವು ನೆಹೆಮೀಯನ ಮಾತುಗಳು; ನೆಹೆಮೀಯನು ಹಕಲ್ಯನ ಮಗ. ಕಿಸ್ಲೇವ್ ತಿಂಗಳಿನಲ್ಲಿ ರಾಜಧಾನಿಯಾದ ಶೂಷನ್‌ನಲ್ಲಿ ನಾನು ಇದ್ದೆನು. ಅದು ಅರ್ತಷಸ್ತನ ಆಳ್ವಿಕೆಯ ಇಪ್ಪತ್ತನೆಯ ವರ್ಷವಾಗಿತ್ತು. 2 ನಾನು ಶೂಷನ್‌ನಲ್ಲಿದ್ದಾಗ ನನ್ನ ಸಹೋದರರಲ್ಲಿ ಒಬ್ಬನಾದ ಹನಾನೀ ಮತ್ತು ಇನ್ನಿತರರು ಯೆಹೂದ ಪ್ರಾಂತ್ಯದಿಂದ ಬಂದಿದ್ದರು. ನಾನು ಅಲ್ಲಿರುವ ಯೆಹೂದ್ಯರ ಯೋಗಕ್ಷೇಮದ ಬಗ್ಗೆ ವಿಚಾರಿಸಿದೆನು. ಈ ಯೆಹೂದ್ಯರು ಸೆರೆವಾಸದಿಂದ ತಪ್ಪಿಸಿಕೊಂಡು ಇನ್ನೂ ಯೆಹೂದದಲ್ಲಿ ವಾಸವಾಗಿದ್ದರು. ಜೆರುಸಲೇಮ್ ನಗರದ ವಿಷಯವಾಗಿಯೂ ವಿಚಾರಿಸಿದೆನು.
3 ಆಗ ಹನಾನೀ ಮತ್ತು ಅವನ ಜೊತೆಗಾರರು, “ನೆಹೆಮೀಯನೇ, ಸೆರೆಯಿಂದ ತಪ್ಪಿಸಿಕೊಂಡು ಯೆಹೂದ ಪ್ರಾಂತ್ಯಕ್ಕೆ ಹೋಗಿರುವವರು ತುಂಬಾ ಶೋಚನೀಯ ಸ್ಥಿತಿಯಲ್ಲಿದ್ದಾರೆ. ಅವರು ಅನೇಕ ಸಮಸ್ಯೆಗಳಲ್ಲಿ ಸಿಕ್ಕಿಕೊಂಡು ಅವಮಾನಕ್ಕೀಡಾಗಿದ್ದಾರೆ. ಯಾಕೆಂದರೆ ಜೆರುಸಲೇಮಿನ ಪೌಳಿಗೋಡೆಗಳು ಕೆಡವಲ್ಪಟ್ಟಿವೆ; ಅದರ ಬಾಗಿಲುಗಳೆಲ್ಲಾ ಸುಟ್ಟುಹೋಗಿವೆ” ಎಂದು ಹೇಳಿದರು.
4 ಜೆರುಸಲೇಮಿನ ಪೌಳಿಗೋಡೆಯ ಮತ್ತು ಅಲ್ಲಿಯ ಜನರ ವಿಚಾರವಾಗಿ ಕೇಳಿದಾಗ ನಾನು ತುಂಬಾ ಗಲಿಬಿಲಿಗೊಂಡೆನು; ನಾನು ಅಲ್ಲಿಯೇ ನೆಲದ ಮೇಲೆ ಕುಳಿತು ಅತ್ತೆನು; ದುಃಖಕ್ರಾಂತನಾದೆನು; ಅಲ್ಲದೆ ಅನೇಕ ದಿವಸಗಳವರೆಗೆ ಉಪವಾಸಮಾಡಿ ಪರಲೋಕದ ದೇವರಿಗೆ ಪ್ರಾರ್ಥಿಸಿದೆನು. 5 ನಂತರ ನಾನು ಈ ಪ್ರಾರ್ಥನೆ ಮಾಡಿದೆನು:
“ಪರಲೋಕದ ದೇವರಾದ ಯೆಹೋವನೇ, ನೀನು ಮಹಾ ದೇವರೂ ಪರಾಕ್ರಮವುಳ್ಳ ದೇವರೂ ಆಗಿರುವಿ. ನಿನ್ನನ್ನು ಪ್ರೀತಿಸಿ ನಿನ್ನ ಆಜ್ಞೆಗಳಿಗೆ ವಿಧೇಯರಾಗುವವರಿಗೆ ನೀನು ಮಾಡಿದ ವಾಗ್ದಾನವನ್ನು ನೆರವೇರಿಸುವವನಾಗಿರುವಿ.
6 “ಹಗಲಿರುಳು ನಿನ್ನಲ್ಲಿ ಪ್ರಾರ್ಥಿಸುವ ನಿನ್ನ ಸೇವಕನನ್ನು ಕಣ್ತೆರೆದು ನೋಡು; ಅವನ ಪ್ರಾರ್ಥನೆಗೆ ಕಿವಿಗೊಟ್ಟು ಆಲಿಸು. ನಿನ್ನ ಸೇವಕರಾದ ಇಸ್ರೇಲರಿಗಾಗಿ ನಾನು ಪ್ರಾರ್ಥಿಸುತ್ತಿದ್ದೇನೆ. ಇಸ್ರೇಲರಾದ ನಾವು ನಿನಗೆ ವಿರೋಧವಾಗಿ ಮಾಡಿದ ಪಾಪಗಳನ್ನು ನಾನು ನಿನಗೆ ಅರಿಕೆ ಮಾಡುತ್ತೇನೆ. ನಾನೂ ನನ್ನ ತಂದೆಯ ಮನೆಯವರೂ ನಿನಗೆ ವಿರುದ್ಧವಾಗಿ ಮಾಡಿದ ಪಾಪಗಳನ್ನು ನಿನಗೆ ಅರಿಕೆ ಮಾಡುತ್ತೇವೆ. 7 ಇಸ್ರೇಲರಾದ ನಾವು ನಿನಗೆ ಕೆಟ್ಟವರಾಗಿ ಜೀವಿಸಿದೆವು; ನೀನು ನಿನ್ನ ಸೇವಕನಾದ ಮೋಶೆಗೆ ಕೊಟ್ಟ ವಿಧಿನಿಯಮಗಳಿಗೆ ನಾವು ವಿಧೇಯರಾಗಲಿಲ್ಲ.
8 “ನಿನ್ನ ಸೇವಕನಾದ ಮೋಶೆಗೆ ನೀನು ಹೇಳಿದ್ದನ್ನು ನೆನಪುಮಾಡಿಕೊ, ನೀನು ಅವನಿಗೆ, ‘ಇಸ್ರೇಲ್ ಜನರಾದ ನೀವು ನಂಬಿಗಸ್ತರಾಗದಿದ್ದಲ್ಲಿ ನಿಮ್ಮನ್ನು ಅನ್ಯದೇಶಗಳಲ್ಲಿ ಚದರಿಸಿಬಿಡುವೆನು.’ 9 ಆದರೆ ನೀವು ಹಿಂತಿರುಗಿ ನನ್ನ ಬಳಿಗೆ ಬಂದು, ನನ್ನ ಕಟ್ಟಳೆಗಳಿಗೆ ವಿಧೇಯರಾದರೆ, ನಿಮ್ಮ ಜನರನ್ನು ಬಲವಂತವಾಗಿ ಭೂಲೋಕದ ಕಟ್ಟಕಡೆಯವರೆಗೆ ಕೊಂಡೊಯ್ದಿದ್ದರೂ ಅಲ್ಲಿಂದ ನನ್ನ ಹೆಸರನ್ನು ನೆಲೆಗೊಳಿಸುವುದಕ್ಕಾಗಿ ನಾನು ಆರಿಸಿಕೊಂಡ ಸ್ಥಳಕ್ಕೆ ಕರೆದುಕೊಂಡು ಬರುವೆನು” ಎಂದು ಹೇಳಿರುವೆ.
10 “ಇಸ್ರೇಲ್ ಜನರು ನಿನ್ನ ಜನಾಂಗ; ಅವರು ನಿನ್ನ ಸೇವಕರಾಗಿದ್ದಾರೆ. ನೀನು ನಿನ್ನ ಮಹಾಶಕ್ತಿಯನ್ನು ಉಪಯೋಗಿಸಿ ಅವರನ್ನು ರಕ್ಷಿಸಿರುವೆ. 11 ಆದ್ದರಿಂದ ಯೆಹೋವನೇ, ನನ್ನ ಪ್ರಾರ್ಥನೆಯನ್ನು ಆಲೈಸು. ನಾನು ನಿನ್ನ ಸೇವಕ. ನಿನ್ನ ಹೆಸರನ್ನು ಗೌರವಿಸುವ ನಿನ್ನ ಸೇವಕರ ಪ್ರಾರ್ಥನೆಗೆ ಕಿವಿಗೊಡು. ನಾನು ಅರಸನ ಪಾನದಾಯಕನಾಗಿದ್ದೇನೆಂದು ನೀನು ತಿಳಿದಿರುವೆ. ಆದ್ದರಿಂದ ಈ ಹೊತ್ತು ನನಗೆ ಸಹಾಯ ಮಾಡು. ಅರಸನಲ್ಲಿ ಸಹಾಯಕ್ಕಾಗಿ ಕೇಳಿಕೊಳ್ಳುವಾಗ ನನಗೆ ನೆರವು ನೀಡು; ನನಗೆ ಯಶಸ್ಸನ್ನು ದಯಪಾಲಿಸು; ರಾಜನಿಗೆ ನಾನು ಮೆಚ್ಚಿಕೆಯುಳ್ಳವನಾಗಿ ಕಂಡುಬರುವಂತೆ ಸಹಾಯಮಾಡು.”
ನೆಹೆಮೀಯನನ್ನು ಅರ್ತಷಸ್ತನು ಜೆರುಸಲೇಮಿಗೆ ಕಳುಹಿಸಿದ್ದು
2 ಅರ್ತಷಸ್ತನ ಆಳ್ವಿಕೆಯ ಇಪ್ಪತ್ತನೆಯ ವರ್ಷದ ನಿಸ್ಸಾನ್ ತಿಂಗಳಲ್ಲಿ ರಾಜನಿಗೆ ದ್ರಾಕ್ಷಾರಸವನ್ನು ನಾನು ಕೊಟ್ಟೆನು. ನಾನೆಂದೂ ರಾಜನ ಮುಂದೆ ದುಃಖಿತನಾಗಿರಲಿಲ್ಲ. ಆದರೆ ಈ ಸಮಯದಲ್ಲಿ ನನ್ನ ಮುಖವು ಕಳೆಗುಂದಿದ್ದರಿಂದ, 2 “ನೀನು ಕ್ಷೇಮವೋ?” ಎಂದು ಅರಸನು ವಿಚಾರಿಸಿದನು, “ನೀನು ದುಃಖಿತನಾಗಿರುವುದೇಕೆ? ನಿನ್ನ ಹೃದಯವು ವೇದನೆಯಿಂದ ತುಂಬಿರುವ ಹಾಗಿದೆಯಲ್ಲ?”
ಅರಸನ ಈ ಪ್ರಶ್ನೆಗೆ ನಾನು ಭಯಪಟ್ಟೆನು. 3 ನಾನು ಭಯದಿಂದಲೇ, “ಅರಸನೇ ಚಿರಂಜೀವಿಯಾಗಿರು. ನನ್ನ ಪೂರ್ವಿಕರ ಸಮಾಧಿಗಳಿರುವ ಪಟ್ಟಣವು ಹಾಳುದಿಬ್ಬವಾಗಿರುವುದರಿಂದ ನಾನು ದುಃಖಿತನಾಗಿದ್ದೇನೆ; ಅದರ ಬಾಗಿಲುಗಳು ಬೆಂಕಿಯಿಂದ ಸುಟ್ಟುಹೋಗಿವೆ” ಅಂದೆನು.
4 ಆಗ ಅರಸನು, “ನಾನು ನಿನಗೆ ಏನುಮಾಡಬೇಕೆಂದು ಅಪೇಕ್ಷಿಸುವೆ?” ಎಂದು ಕೇಳಿದಾಗ ಅವನಿಗೆ ಉತ್ತರಿಸುವ ಮೊದಲು ನಾನು ಪರಲೋಕದ ದೇವರಿಗೆ ಪ್ರಾರ್ಥಿಸಿದೆನು.
5 ಅನಂತರ ಅರಸನಿಗೆ, “ನಾನು ನಿನಗೆ ಮೆಚ್ಚಿಕೆಯಾಗಿದ್ದಲ್ಲಿ ಮತ್ತು ನಿನಗೆ ಈ ವಿಷಯ ಸರಿಕಂಡಲ್ಲಿ ದಯಮಾಡಿ ಯೆಹೂದ ಪ್ರಾಂತ್ಯದಲ್ಲಿ ನನ್ನ ಪೂರ್ವಿಕರ ಸಮಾಧಿಗಳಿರುವ ಜೆರುಸಲೇಮಿಗೆ ನನ್ನನ್ನು ಕಳುಹಿಸು. ನಾನು ಅಲ್ಲಿಗೆ ಹೋಗಿ ಜೆರುಸಲೇಮನ್ನು ಮತ್ತೆ ಕಟ್ಟಬೇಕು” ಎಂದೆನು.
6 ರಾಣಿಯು ರಾಜನ ಪಕ್ಕದಲ್ಲಿ ಕುಳಿತಿದ್ದಳು. ರಾಜನೂ ರಾಣಿಯೂ, “ನಿನಗೆ ಹೋಗಿ ಬರಲು ಎಷ್ಟು ಸಮಯ ಬೇಕಾಗುವುದು? ನೀನು ಹಿಂದಕ್ಕೆ ಯಾವಾಗ ಬರುವಿ?” ಎಂದು ವಿಚಾರಿಸಿದರು.
ನನ್ನನ್ನು ಕಳುಹಿಸಲು ರಾಜನಿಗೆ ಸಂತೋಷವಿದ್ದುದರಿಂದ ನಾನೊಂದು ಸಮಯವನ್ನು ಸೂಚಿಸಿದೆನು. 7 ಆಮೇಲೆ “ರಾಜನೇ, ನನಗೆ ಸಹಾಯವನ್ನು ಮಾಡಲು ನೀನು ಇಚ್ಫಿಸುವುದಾದರೆ ಯೂಫ್ರೇಟೀಸ್ ನದಿಯ ಪಶ್ಚಿಮದ ಪ್ರಾಂತ್ಯದ ರಾಜ್ಯಪಾಲರಿಗೆ ಪತ್ರಗಳನ್ನು ಬರೆದುಕೊಟ್ಟರೆ ನಾನು ಯೆಹೂದಕ್ಕೆ ಅವರ ಪ್ರಾಂತ್ಯಗಳ ಮೂಲಕವಾಗಿ ಸುರಕ್ಷಿತವಾಗಿ ಹೋಗಲು ಸಾಧ್ಯವಾಗುವುದು. 8 ಅಲ್ಲದೆ ಬಾಗಿಲುಗಳಿಗೆ, ಗೋಡೆಗಳಿಗೆ, ದೇವಾಲಯದ ಆವರಣದ ಗೋಡೆಗಳಿಗೆ ಮತ್ತು ನನ್ನ ಮನೆಗೆ ಮರದ ತೊಲೆಗಳು ಬೇಕಾಗಿವೆ. ಆದ್ದರಿಂದ ನಿಮ್ಮ ಅರಣ್ಯಗಳ ಮುಖ್ಯಾಧಿಕಾರಿಯಾದ ಆಸಾಫನಿಗೂ ಪತ್ರವನ್ನು ಕೊಡಬೇಕು” ಎಂದು ವಿನಂತಿಸಿದೆನು.
ಅರಸನು ಪತ್ರಗಳನ್ನು ಮತ್ತು ನಾನು ಕೇಳಿದ್ದೆಲ್ಲವನ್ನು ನನಗೆ ಕೊಟ್ಟನು. ದೇವರು ನನ್ನನ್ನು ಕರುಣಿಸಿರುವುದರಿಂದ ರಾಜನು ನನಗೆ ಹಾಗೆ ಮಾಡಿದನು.
9 ಯೂಫ್ರೇಟೀಸ್ ನದಿಯ ಪಶ್ಚಿಮದಲ್ಲಿರುವ ರಾಜ್ಯಪಾಲರಿಗೆ ಅರಸನು ಕೊಟ್ಟ ಪತ್ರವನ್ನು ಕೊಟ್ಟೆನು. ರಾಜನು ನನ್ನೊಂದಿಗೆ ಸಿಪಾಯಿಗಳನ್ನೂ ಸೈನ್ಯಾಧಿಪತಿಗಳನ್ನೂ ಅಶ್ವ ಸೈನಿಕರನ್ನೂ ಕಳುಹಿಸಿದ್ದನು. 10 ನಾನು ಏನು ಮಾಡುತ್ತಿದ್ದೇನೆಂದು ಸನ್ಬಲ್ಲಟ್ ಮತ್ತು ಟೋಬೀಯ ಎಂಬವರಿಬ್ಬರು ಕೇಳಿಸಿಕೊಂಡರು. ಇಸ್ರೇಲ್ ಜನರಿಗೆ ಸಹಾಯ ಮಾಡಲು ಬರುತ್ತಿದ್ದಾರೆಂಬ ವಿಷಯವು ಅವರನ್ನು ತಳಮಳಗೊಳಿಸಿತು ಮತ್ತು ಅವರಿಗೆ ಸಿಟ್ಟೂ ಬಂದಿತು. ಸನ್ಬಲ್ಲಟನು ಹೋರೋನಿನವನು ಮತ್ತು ಟೋಬೀಯನು ಅಮ್ಮೋನಿಯ ಅಧಿಕಾರಿಯಾಗಿದ್ದನು.
ನೆಹೆಮೀಯನಿಂದ ಜೆರುಸಲೇಮಿನ ಗೋಡೆಗಳ ಪರೀಕ್ಷೆ
11-12 ನಾನು ಜೆರುಸಲೇಮ್ ಸೇರಿದ ನಂತರ ಮೂರು ದಿವಸ ಅಲ್ಲಿಯೇ ಉಳಿದೆನು. ಜೆರುಸಲೇಮಿಗೋಸ್ಕರ ಮಾಡತಕ್ಕ ಕಾರ್ಯದ ಬಗ್ಗೆ ದೇವರು ನನ್ನಲ್ಲಿ ಯಾವ ಆಲೋಚನೆಯನ್ನು ಹುಟ್ಟಸಿದ್ದಾನೆಂದು ನಾನು ಯಾರಿಗೂ ತಿಳಿಸದೆ ನನ್ನೊಂದಿಗಿದ್ದ ಕೆಲವು ಜನರೊಂದಿಗೆ ರಾತ್ರಿಯಲ್ಲಿ ಹೊರಟೆನು. ನಾನು ಸವಾರಿಮಾಡಿಕೊಂಡು ಬಂದಿದ್ದ ಕುದುರೆಯೊಂದಲ್ಲದೆ ಬೇರೆ ಯಾವ ಕುದುರೆಯೂ ಅಲ್ಲಿರಲಿಲ್ಲ. 13 ಕತ್ತಲೆಯಲ್ಲಿಯೇ ಕಣಿವೆಯ ಬಾಗಿಲಿನ ಮೂಲಕ ಹೊರಟು ಕೆಡವಲ್ಪಟ್ಟಿದ್ದ ಜೆರುಸಲೇಮಿನ ಗೋಡೆಗಳನ್ನು, ಸುಟ್ಟುಹೋಗಿರುವ ಅದರ ಬಾಗಿಲುಗಳನ್ನು ನೋಡುತ್ತಾ ಹೆಬ್ಬಾವು ಬಾವಿಯ ಬಳಿಗೂ ತಿಪ್ಪೆಬಾಗಿಲಿನ ಬಳಿಗೂ ಸವಾರಿಮಾಡಿಕೊಂಡು ಬಂದೆನು. 14 ಅಲ್ಲಿಂದ ಬುಗ್ಗೆಬಾಗಿಲಿಗೂ ಅರಸನ ಕೊಳಕ್ಕೂ ಬಂದೆನು. ಇಲ್ಲಿಂದ ಮುಂದಕ್ಕೆ ಹೋಗಲು ನನ್ನ ಕುದುರೆಗೆ ಸಾಧ್ಯಾವಾಗಲಿಲ್ಲ; 15 ಆದ್ದರಿಂದ ನಾನು ರಾತ್ರಿಯಲ್ಲಿ ಹಳ್ಳದ ಮಾರ್ಗದಿಂದ ಹತ್ತುತ್ತಾ ಗೋಡೆಗಳನ್ನು ಪರೀಕ್ಷಿಸಿ ಕೊನೆಗೆ ಹಿಂದಿರುಗಿ ಕಣಿವೆ ಬಾಗಿಲ ಮೂಲಕ ಮನೆ ಸೇರಿದೆನು. 16 ಇಸ್ರೇಲಿನ ನಾಯಕರಿಗೂ ಅಧಿಕಾರಿಗಳಿಗೂ ನಾನು ಎಲ್ಲಿಗೆ ಹೋದೆನೆಂದು ತಿಳಿದಿರಲಿಲ್ಲ; ನಾನು ಏನು ಮಾಡುತ್ತಿದ್ದೇನೆಂದೂ ಅವರಿಗೆ ಗೊತ್ತಿರಲಿಲ್ಲ. ಯೆಹೂದ್ಯರಿಗಾಗಲಿ ಅಧಿಕಾರಿಗಳಿಗಾಗಲಿ ರಾಜನಿಂದ ನೇಮಕಗೊಂಡ ಕೆಲಸವರ್ಗದವರಿಗಾಗಲಿ ನಾನು ಇನ್ನೂ ಯಾವ ವಿಷಯವನ್ನೂ ಹೇಳಿರಲಿಲ್ಲ.
17 ಆಮೇಲೆ ನಾನು ಎಲ್ಲಾ ಜನರಿಗೆ, “ನಮ್ಮ ದುರವಸ್ಥೆಯನ್ನು ನೀವು ನೋಡುತ್ತಿದ್ದೀರಿ. ಜೆರುಸಲೇಮ್ ಒಂದು ಹಾಳು ದಿಬ್ಬವಾಗಿದೆ; ಅದರ ಬಾಗಿಲುಗಳು ಸುಟ್ಟು ಬೂದಿಯಾಗಿವೆ. ಬನ್ನಿರಿ, ನಾವು ಜೆರುಸಲೇಮಿನ ಪೌಳಿಗೋಡೆಗಳನ್ನು ತಿರುಗಿ ಕಟ್ಟೋಣ. ಆಗ ನಾವು ಇನ್ನೆಂದಿಗೂ ನಾಚಿಕೆಗೆ ಗುರಿಯಾಗುವುದಿಲ್ಲ” ಎಂದು ಹೇಳಿದೆನು.
18 ನಾನು ಅವರಿಗೆ ದೇವರು ನನಗೆ ಕರುಣೆಯನ್ನು ತೋರಿಸಿದ್ದನ್ನು ಮತ್ತು ರಾಜನು ಹೇಳಿದ ವಿಷಯಗಳನ್ನು ತಿಳಿಸಿದೆನು. ಆಗ ಅವರು, “ನಾವು ಈಗಲೇ ಕೆಲಸ ಪ್ರಾರಂಭಿಸೋಣ” ಎಂದು ಹೇಳಿದರು. ಹೀಗೆ ನಾವು ಈ ಒಳ್ಳೆಯ ಕಾರ್ಯವನ್ನು ಪ್ರಾರಂಭಿಸಿದೆವು. 19 ಆದರೆ ಹೋರೋಬಿನ ಸನ್ಬಲ್ಲಟನು, ಅಮ್ಮೋನಿಯ ಅಧಿಕಾರಿಯಾದ ಟೋಬೀಯ ಮತ್ತು ಅರಬಿಯವನಾದ ಗೆಷೆಮ್ ಇವರುಗಳು ನಾವು ಪೌಳಿ ಗೋಡೆಯನ್ನು ಕಟ್ಟುತ್ತೇವೆಂಬ ಸುದ್ಧಿಯನ್ನು ಕೇಳಿ ಅಸಹ್ಯವಾಗಿ ಗೇಲಿಮಾಡಿ, “ನೀವು ಮಾಡುತ್ತಿರುವುದೇನು? ರಾಜನಿಗೆ ವಿರುದ್ಧವಾಗಿ ದಂಗೆ ಏಳುತ್ತಿರುವಿರೋ?” ಎಂದು ಕೇಳಿದರು.
20 ನಾನು ಅವರಿಗೆ, “ಪರಲೋಕದ ದೇವರು ನಮ್ಮ ಕಾರ್ಯವನ್ನು ಸಫಲಪಡಿಸುವನು. ನಾವು ಆತನ ಸೇವಕರು ಮತ್ತು ನಾವು ಈ ಪಟ್ಟಣವನ್ನು ತಿರಿಗಿ ಕಟ್ಟುತ್ತೇವೆ. ನೀವು ನಮ್ಮ ಸಹಾಯಕ್ಕಾಗಿ ಬರುವುದು ಬೇಡ. ನಿಮ್ಮಲ್ಲಿ ಯಾರ ಕುಟುಂಬಗಳವರೂ ಈ ಜೆರುಸಲೇಮಿನಲ್ಲಿ ವಾಸಿಸಲಿಲ್ಲ ಮತ್ತು ಈ ಪ್ರಾಂತ್ಯದಲ್ಲಿ ನಿಮಗೆ ಸ್ವಂತ ಭೂಮಿಯೂ ಇಲ್ಲ. ಆದ್ದರಿಂದ ನಿಮಗೆ ಈ ಪ್ರಾಂತ್ಯದಲ್ಲಿ ಯಾವ ಹಕ್ಕೂ ಇಲ್ಲ” ಎಂದು ಹೇಳಿದೆನು.
ಪೌಳಿಗೋಡೆಯನ್ನು ಕಟ್ಟಿದವರು
3 ಎಲ್ಯಾಷೀಬನು ಮಹಾಯಾಜಕನಾಗಿದ್ದನು. ಅವನೂ ಮತ್ತು ಯಾಜಕರುಗಳಾಗಿದ್ದ ಅವನ ಸಹೋದರರೂ ಕುರಿ ಹೆಬ್ಬಾಗಿಲನ್ನು ಕಟ್ಟಿದರು. ನಂತರ ಪ್ರಾರ್ಥಿಸಿ ಯೆಹೋವನಿಗೆ ಅದನ್ನು ಪ್ರತಿಷ್ಠಿಸಿದರು. ಅವರು ಅದಕ್ಕೆ ಬಾಗಿಲುಗಳನ್ನು ಜೋಡಿಸಿದರು. ಆ ಯಾಜಕರು ನೂರುಗೋಪುರ ಮತ್ತು ಹನನೇಲ್ ಗೋಪುರದವರೆಗೂ ಜೆರುಸಲೇಮಿನ ಗೋಡೆಯನ್ನು ಕಟ್ಟಿದ್ದರು. ಅವರು ಪ್ರಾರ್ಥಿಸಿ ಯೆಹೋವನಿಗೆ ಪ್ರತಿಷ್ಠಿಸಿದರು.
2 ಯಾಜಕರು ಕಟ್ಟಿನಿಲ್ಲಿಸಿದ್ದ ಸ್ಥಳದಿಂದ ಜೆರಿಕೊದವರು ಗೋಡೆ ಕಟ್ಟಿದರು, ಜೆರಿಕೊದವರು ಕಟ್ಟಿ ನಿಲ್ಲಿಸಿದ್ದ ಸ್ಥಳದಿಂದ ಇಮ್ರಿಯ ಮಗನಾದ ಜಕ್ಕೂರನು ಗೋಡೆ ಕಟ್ಟಿದನು.
3 ಹಸ್ಸೆನಾಹನ ಗಂಡುಮಕ್ಕಳು ಮೀನುಬಾಗಿಲನ್ನು ಕಟ್ಟಿ ಅದರ ಮೇಲೆ ತೊಲೆಗಳನ್ನಿಟ್ಟು ಅದಕ್ಕೆ ಕದಗಳು, ಅಗುಳಿ, ತಿರುಗಣಿಗಳನ್ನಿಟ್ಟು ಭದ್ರಪಡಿಸಿದರು.
4 ಇವನ ನಂತರ ಊರೀಯನ ಮಗನಾದ ಮೆರೇಮೋತನು ಗೋಡೆಯನ್ನು ಕಟ್ಟಿದನು. (ಊರೀಯನು ಹಕ್ಕೋಚನ ಮಗ.)
ಇದರ ಮುಂದಿನ ಭಾಗವನ್ನು ಬೆರೆಕ್ಯನ ಮಗನಾದ ಮೆಷುಲ್ಲಾಮನು ಕಟ್ಟಿದನು. (ಬೆರೆಕ್ಯನು ಮೆಷೇಜಬೇಲನ ಮಗ.)
ಈ ಗೋಡೆಯ ನಂತರದ ಭಾಗವನ್ನು ಬಾನನ ಮಗನಾದ ಚಾದೋಕನು ಕಟ್ಟಿದನು.
5 ತೆಕೋವದವರು ಅಲ್ಲಿಂದಾಚೆಗೆ ಗೋಡೆ ಕಟ್ಟಿದರು. ಆದರೆ ಅವರ ನಾಯಕರು ತಮ್ಮ ರಾಜ್ಯಪಾಲನಾದ ನೆಹೆಮೀಯನಿಗಾಗಿ ಕೆಲಸಮಾಡಲು ಒಪ್ಪಲಿಲ್ಲ.
6 ಯೋಯಾದ ಮತ್ತು ಮೆಷುಲ್ಲಾಮ್ ಹಳೆಬಾಗಿಲನ್ನು ಜೋಡಿಸಿದರು. ಯೋಯಾದನು ಪಾಸೇಹನ ಮಗ; ಮೆಷುಲ್ಲಾಮನು ಬೆಸೋದ್ಯನ ಮಗ. ಅವರು ತೊಲೆಗಳನ್ನು ಇಟ್ಟರು; ಬಾಗಿಲುಗಳನ್ನು, ಕದಗಳನ್ನು, ಅಗುಳಿಗಳನ್ನು ಜೋಡಿಸಿದರು.
7 ಗಿಬ್ಯೋನ್ ಮತ್ತು ಮಿಚ್ಫದ ಜನರು ಅಲ್ಲಿಂದಾಚೆಗೆ ಗೋಡೆಯನ್ನು ಕಟ್ಟಿದರು. ಗಿಬ್ಯೋನಿನ ಮೆಲೆಟ್ಯ ಎಂಬವನು ಮತ್ತು ಮೇರೋನೋತಿನ ಯಾದೋನ್ ಎಂಬವನು ಈ ಕೆಲಸವನ್ನು ಮಾಡಿದರು. ಗಿಬ್ಯೋನ್ ಮತ್ತು ಮೇರೋನೋತ್ ಯೂಫ್ರೇಟೀಸ್ ನದಿಯ ಪಶ್ಚಿಮಪ್ರಾಂತ್ಯದ ರಾಜ್ಯಪಾಲರುಗಳ ಆಡಳಿತಕ್ಕೆ ಒಳಪಟ್ಟಿತ್ತು.
8 ಹರ್ಹಯನ ಮಗನಾದ ಉಜ್ಜೀಯೇಲನು ಅಲ್ಲಿಂದಾಚೆಗೆ ಕಟ್ಟಿದನು. ಉಜ್ಜೀಯೇಲನು ಅಕ್ಕಸಾಲಿಗನಾಗಿದ್ದನು; ಹನನ್ಯನು ಸುಗಂಧದ್ರವ್ಯವನ್ನು ತಯಾರುಮಾಡುತ್ತಿದ್ದನು. ಇವರು, “ಅಗಲಗೋಡೆ”ಯವರೆಗೂ ಜೆರುಸಲೇಮ್ ಗೋಡೆಯನ್ನು ಕಟ್ಟಿದರು.
9 ಅರ್ಧ ಜೆರುಸಲೇಮಿನ ರಾಜ್ಯಪಾಲನಾಗಿದ್ದ ಹೂರನ ಮಗನಾದ ರೆಫಾಯನು ಮುಂದಿನ ಭಾಗವನ್ನು ಕಟ್ಟಿ ಮುಗಿಸಿದನು.
10 ಹರೂಮಫನ ಮಗನಾದ ಯೆದಾಯನು ಅಲ್ಲಿಂದಾಚೆಗೆ ಗೋಡೆ ಕಟ್ಟಿದನು. ಅದು ಅವನ ಮನೆಯ ನಂತರವೇ ಇತ್ತು. ಅಲ್ಲಿಂದಾಚೆಗೆ ಹಷಬ್ನೆಯನ ಮಗನಾದ ಹಟ್ಟೂಷನು ಕಟ್ಟಿದನು. 11 ಹಾರೀಮನ ಮಗನಾದ ಮಲ್ಕೀಯನು, ಪಹತ್‌ಮೋವಾಬನ ಮಗನಾದ ಹಷ್ಷೂಬನು ಅಲ್ಲಿಂದಾಚೆಗೆ ಕಟ್ಟಿದರು. ಅವರು ಒಲೆಬುರುಜನ್ನು ಸಹ ಕಟ್ಟಿದರು.
12 ಹಲ್ಲೊಹೇಷನ ಮಗನಾದ ಶಲ್ಲೂಮನು ಮುಂದಿನ ಭಾಗವನ್ನು ರಿಪೇರಿ ಮಾಡಿದನು. ಅವನ ಹೆಣ್ಣುಮಕ್ಕಳು ಅವನಿಗೆ ಸಹಾಯ ಮಾಡಿದರು. ಶಲ್ಲೂಮನು ಜೆರುಸಲೇಮಿನ ಇನ್ನೊಂದು ಭಾಗದ ರಾಜ್ಯಪಾಲನಾಗಿದ್ದನು.
13 ಜಾನೋಹ ಪಟ್ಟಣದಲ್ಲಿ ವಾಸಿಸುವ ಹಾನೂನನೂ ಅವನ ಸಂಗಡಿಗರೂ ಕಣಿವೆ ಬಾಗಿಲನ್ನು ಕಟ್ಟಿ ಅದಕ್ಕೆ ಅಗುಳಿ, ತಿರುಗಣಿ, ಕದಗಳನ್ನಿಟ್ಟು ಭದ್ರಪಡಿಸಿದರು. ಅಲ್ಲದೆ ಒಂದು ಸಾವಿರ ಮೊಳದಷ್ಟು ಉದ್ದದ ಗೋಡೆಯನ್ನು ಕಟ್ಟಿ ತಿಪ್ಪೆಬಾಗಿಲಿನ ತನಕ ಮುಂದುವರಿದರು.
14 ರೇಕಾಬನ ಮಗನಾದ ಮಲ್ಕೀಯನು ತಿಪ್ಪೆಬಾಗಿಲನ್ನು ರಿಪೇರಿಮಾಡಿಸಿದನು. ಇವನು ಬೇತ್ ಹಕ್ಕೆರಿಮಿನ ರಾಜ್ಯಪಾಲನಾಗಿದ್ದನು. ಅವನು ಬಾಗಿಲಿಗೆ ಕದ, ತಿರುಗಣಿ, ಅಗುಳಿಗಳನ್ನಿಟ್ಟು ಭದ್ರಪಡಿಸಿದನು.
15 ಮಿಚ್ಪ ಜಿಲ್ಲಾಧಿಕಾರಿಯಾದ ಶಲ್ಲೂನನು ಬುಗ್ಗೆಬಾಗಿಲನ್ನು ರಿಪೇರಿಮಾಡಿದನು. ಶಲ್ಲೂನನು ಕೊಲ್ಹೋಜಿಯನ ಮಗ. ಬಾಗಿಲಿಗೆ ಕದ, ತಿರುಗಣಿ, ಅಗುಳಿಗಳನ್ನಿಟ್ಟು ಭದ್ರಪಡಿಸಿದನು. ನಂತರ ಗೋಡೆಯನ್ನು ರಾಜನ ತೋಟದ ಸಮೀಪದಲ್ಲಿದ್ದ ಸಿಲೋವಕೊಳದ ತನಕ ಮುಂದುವರಿಸಿ ದಾವೀದನಗರಕ್ಕೆ ಪ್ರವೇಶಿಸುವ ಮೆಟ್ಟಿಲುಗಳ ತನಕ ಗೋಡೆಯನ್ನು ಕಟ್ಟಿದನು.
16 ಅಜ್ಬೂಕನ ಮಗನಾದ ನೆಹೆಮೀಯನು ಗೋಡೆಯ ಮುಂದಿನ ಭಾಗವನ್ನು ಕಟ್ಟಿದನು. ಇವನು ಬೇತ್ಚೂರ್ ಜಿಲ್ಲೆಯ ಅರ್ಧಭಾಗಕ್ಕೆ ಅಧಿಕಾರಿಯಾಗಿದ್ದನು. ದಾವೀದನ ಸಮಾಧಿಯ ತನಕ ಗೋಡೆಯನ್ನು ಮುಂದುವರಿಸಿ ವೀರರ ಮನೆಗಳ ತನಕ ಕಟ್ಟಿದನು.
17 ಮುಂದಿನ ಭಾಗವನ್ನು ಲೇವಿಯರು ಕಟ್ಟಿದರು. ಅವರ ಮುಖ್ಯಸ್ತನು ಬಾನಿಯ ಮಗನಾದ ರೆಹೂಮನು. ಕೆಯೀಲ ಎಂಬ ಅರ್ಧ ಜಿಲ್ಲೆಗೆ ರಾಜ್ಯಪಾಲನಾಗಿದ್ದ ಹಷಬ್ಯನು ಇದರ ಮುಂದಿನ ಭಾಗದ ಗೋಡೆಯನ್ನು ಕಟ್ಟಿದನು. ಇವನು ತನ್ನ ಜಿಲ್ಲೆಯಲ್ಲಿ ಮಾತ್ರ ರಿಪೇರಿ ಮಾಡಿದನು.
18 ಅವರ ಸಹೋದರರು ಕೆಯೀಲದ ಇನ್ನೊಂದು ಅರ್ಧಜಿಲ್ಲೆಗೆ ರಾಜ್ಯಪಾಲನಾಗಿದ್ದ ಬಿನೈನ ನಾಯಕತ್ವದಲ್ಲಿ ಮುಂದಿನ ಭಾಗದ ಗೋಡೆಯನ್ನು ರಿಪೇರಿಮಾಡಿದರು. ಬಿನೈಹೇನಾದಾದನ ಮಗ.
19 ಮಿಚ್ಪದ ರಾಜ್ಯಪಾಲನಾದ ಏಜೆರನು ಮುಂದಿನ ಭಾಗವನ್ನು ರಿಪೇರಿ ಮಾಡಿದನು. ಏಜೆರನು ಯೇಷೂವನ ಮಗ. ಇವನು ಆಯುಧ ಕೋಣೆಯಿಂದ ಹಿಡಿದು ಗೋಡೆಯ ಮೂಲೆಯ ತನಕ ರಿಪೇರಿಮಾಡಿದನು. 20 ಚಬ್ಬಾಯನ ಮಗನಾದ ಬಾರೂಕನು ಮುಂದಿನ ಭಾಗವನ್ನು ರಿಪೇರಿಮಾಡಿದನು. ಇವನು ಪ್ರಯಾಸಪಟ್ಟು ಮೂಲೆಯಿಂದ ಹಿಡಿದು ಪ್ರಧಾನ ಯಾಜಕನಾದ ಎಲ್ಯಾಷೀಬನ ಮನೆ ಮುಂದಿನ ಬಾಗಿಲಿನ ತನಕ ಗೋಡೆಯನ್ನು ಕಟ್ಟಿದನು. 21 ಹಕ್ಕೋಚನ ಮಗನಾದ ಊರೀಯನ ಮಗನಾದ ಮೆರೇಮೋತನು ಎಲ್ಯಾಷೀಬನ ಮನೆ ಮುಂದಿನ ಬಾಗಿಲಿನಿಂದ ಆ ಮನೆಯ ಕೊನೆಯತನಕ ಗೋಡೆಯನ್ನು ಕಟ್ಟಿದನು. 22 ಆ ಪ್ರಾಂತ್ಯದಲ್ಲಿ ವಾಸಿಸಿದ್ದ ಯಾಜಕರು ಸೇರಿ ಮುಂದಿನ ಭಾಗವನ್ನು ಕಟ್ಟಿದರು.
23 ಬೆನ್ಯಾಮೀನ್ ಮತ್ತು ಹಷ್ಷೂಬ್ ತಮ್ಮ ತಮ್ಮ ಸ್ವಂತ ಮನೆಗಳ ಮುಂದಿದ್ದ ಭಾಗವನ್ನು ಕಟ್ಟಿದರು, ಹಾಗೆಯೇ ಮಾಸೇಯನ ಮಗನಾದ ಅಜರ್ಯನು ತನ್ನ ಮನೆ ಮುಂದಿದ್ದ ಗೋಡೆಯನ್ನು ಕಟ್ಟಿದನು.
24 ಹೇನಾದಾದನ ಮಗನಾದ ಬಿನ್ನೂಯ್ ಅಜರ್ಯನ ಮನೆಯಿಂದ ಹಿಡಿದು ಮೂಲೆಯ ತನಕ ಗೋಡೆಯನ್ನು ಕಟ್ಟಿದನು.
25 ಊಜೈಯ ಮಗನಾದ ಪಾಲಾಲನು ಮೂಲೆಯಿಂದ ಹಿಡಿದು ರಾಜನ ಮೇಲ್ಮನೆಯ ಬುರುಜಿನ ತನಕ ಮುಂದುವರಿಸಿದನು. ಇದು ರಾಜನ ಕಾವಲುಪಡೆಯ ಅಂಗಳದ ಸಮೀಪದಲ್ಲಿತ್ತು. ಪರೋಷನ ಮಗನಾದ ಪೆದಾಯನು ಅಲ್ಲಿಂದಾಚೆಗೆ ಅಂದರೆ ಪಾಲಾಲನು ಕೊನೆಗೊಳಿಸಿದಾಚಿನಿಂದ ಮುಂದುವರಿಸಿದನು.
26 ಓಫೇಲ್ ಗುಡ್ಡದಲ್ಲಿ ವಾಸಿಸುತ್ತಿದ್ದ ಆಲಯದ ಸೇವಕರು ಮುಂದಿನ ಭಾಗವನ್ನು “ನೀರು” ಎಂಬ ಬಾಗಿಲಿನ ಪೂರ್ವದ ಕಡೆಯವರೆಗೂ ಅದರ ಬಳಿಯಿದ್ದ ಬುರುಜಿನವರೆಗೂ ರಿಪೇರಿ ಮಾಡಿದರು.
27 ತೆಕೋವದವರು ಉಳಿದ ಆ ಭಾಗವನ್ನು ಅಂದರೆ ದೊಡ್ಡ ಬುರುಜಿನಿಂದ ಹಿಡಿದು ಓಫೇಲ್‌ಗೋಡೆಯ ತನಕ ಮುಂದುವರಿಸಿದರು.
28 ಯಾಜಕರು ಕುದುರೆಬಾಗಿಲಿನ ಮೇಲಿನ ಭಾಗವನ್ನು ಕಟ್ಟಿದರು. ಪ್ರತಿಯೊಬ್ಬ ಯಾಜಕನು ತನ್ನ ಮನೆ ಮುಂದಿದ್ದ ಭಾಗವನ್ನು ರಿಪೇರಿಮಾಡಿದನು. 29 ಇಮೇರನ ಮಗನಾದ ಚಾದೋಕನು ತನ್ನ ಮನೆಯ ಮುಂದಿದ್ದ ಗೋಡೆಯ ಭಾಗವನ್ನು ರಿಪೇರಿ ಮಾಡಿದನು. ಪೂರ್ವ ಬಾಗಿಲಿನ ದ್ವಾರಪಾಲಕನಾಗಿರುವ ಶೆಕನ್ಯನ ಮಗನಾದ ಶೆಮಾಯನು ಮುಂದಿನ ಭಾಗವನ್ನು ರಿಪೇರಿ ಮಾಡಿದನು.
30 ಶೆಲೆಮ್ಯನ ಮಗನಾದ ಹನನ್ಯನೂ ಮತ್ತು ಚಾಲಾಫನ ಆರನೆಯ ಮಗನಾದ ಹಾನೂನನೂ ಉಳಿದ ಭಾಗವನ್ನು ಮುಗಿಸಿದರು.
ಬೆರೆಕ್ಯನ ಮಗನಾದ ಮೆಷುಲ್ಲಾಮ್ ತನ್ನ ಮನೆಯ ಮುಂದಿದ್ದ ಭಾಗವನ್ನು ಕಟ್ಟಿದನು. 31 ವರ್ತಕರ ಮತ್ತು ಆಲಯದ ಸೇವಕರ ಮನೆಗಳ ತನಕದ ಭಾಗವನ್ನು ಮಲ್ಕೀಯನು ರಿಪೇರಿ ಮಾಡಿದನು. ಇದು, “ತನಿಕೆ” ಎಂಬ ಬಾಗಿಲಿನ ಎದುರಿನಲ್ಲಿತ್ತು. ಮೂಲೆಗೋಡೆಯ ಮೇಲಿರುವ ಕೋಣಿಯ ತನಕದ ಭಾಗವನ್ನು ಅಕ್ಕಸಾಲಿಗನಾದ ಮಲ್ಕೀಯನು ರಿಪೇರಿ ಮಾಡಿದನು. 32 ಅಕ್ಕಸಾಲಿಗರು ಮತ್ತು ವರ್ತಕರು ಸೇರಿ ಗೋಡೆ ಮೇಲಿರುವ ಕೋಣಿಯಿಂದ ಹಿಡಿದು, “ಕುರಿ” ಎಂಬ ಬಾಗಿಲಿನ ತನಕದ ಗೋಡೆಯನ್ನು ಕಟ್ಟಿದರು.
ಸನ್ಬಲ್ಲಟ್ ಮತ್ತು ಟೋಬೀಯ
4 ನಾವು ಜೆರುಸಲೇಮಿನ ಗೋಡೆ ಕಟ್ಟುತ್ತಿದ್ದೇವೆ ಎಂಬುದನ್ನು ಕೇಳಿದ ಸನ್ಬಲ್ಲಟನು ಹೊಟ್ಟೆಕಿಚ್ಚಿನಿಂದ ಕೋಪಗೊಂಡನು. ಅವನು ಯೆಹೂದ್ಯರನ್ನು ಹಾಸ್ಯ ಮಾಡಿದನು. 2 ಸಮಾರ್ಯದಲ್ಲಿರುವ ಅವನ ಸ್ನೇಹಿತರೊಡನೆ ಮತ್ತು ಸಮಾರ್ಯದ ಸೈನ್ಯದವರೊಡನೆ ಮಾತನಾಡಿ, “ಈ ಬಲಹೀನ ಯೆಹೂದ್ಯರು ಮಾಡುತ್ತಿರುವುದೇನು? ನಾವು ಇವರನ್ನು ಹೀಗೇಯೇ ಬಿಟ್ಟುಬಿಡುತ್ತೇವೆಂದು ತಿಳಿದುಕೊಂಡಿದ್ದಾರೆಯೇ? ತಾವು ಯಜ್ಞಗಳನ್ನು ಅರ್ಪಿಸುವುದಾಗಿ ತಿಳಿದುಕೊಂಡಿರುವರೇ? ಒಂದೇ ದಿನದಲ್ಲಿ ಕಟ್ಟಿಮುಗಿಸುವುದಾಗಿ ಅವರು ತಿಳಿದುಕೊಂಡಿರಬಹುದು. ಆ ತಿಪ್ಪೆಗುಂಡಿಯೊಳಗಿನ ಕಲ್ಲುಗಳ ರಾಶಿಗೆ ಜೀವಕೊಡಲು ಅವರಿಗೆ ಸಾಧ್ಯವಿಲ್ಲ. ಅವು ಕೇವಲ ಬೂದಿ ಮತ್ತು ಹೊಲಸುಗಳ ಗುಡ್ಡೆಗಳಾಗಿವೆ!” ಎಂದು ಹೇಳಿದನು.
3 ಅವನ ಜೊತೆಯಲ್ಲಿದ್ದ ಅಮ್ಮೋನಿಯನಾದ ಟೋಬೀಯನು, “ಈ ಯೆಹೂದ್ಯರು ಕಟ್ಟುತ್ತಿರುವುದೇನು? ಆ ಗೋಡೆಯ ಮೇಲೆ ಒಂದು ನರಿ ಹಾರಿದರೂ ಗೋಡೆಯು ಕುಸಿದುಬೀಳುವುದು” ಎಂದು ವ್ಯಂಗ್ಯವಾಗಿ ಹೇಳಿದನು.
4 ನೆಹೆಮೀಯನು ಯೆಹೋವನಿಗೆ ಪ್ರಾರ್ಥಿಸುತ್ತಾ, “ನಮ್ಮ ದೇವರೇ, ನಮ್ಮ ಪ್ರಾರ್ಥನೆಗೆ ಕಿವಿಗೊಡು. ಆ ಮನಷ್ಯರು ನಮ್ಮನ್ನು ದ್ವೇಷಿಸುತ್ತಾರೆ. ಸನ್ಬಲ್ಲಟನು ಮತ್ತು ಟೋಬೀಯನು ನಮ್ಮನ್ನು ಅವಮಾನ ಮಾಡುತ್ತಿದ್ದಾರೆ. ಆ ಕೇಡುಗಳು ಅವರಿಗೇ ಸಂಭವಿಸಲಿ. ಅವರು ನಾಚಿಕೆಯಿಂದ ತಲೆತಗ್ಗಿಸಲಿ; ಸೆರೆಹಿಡಿಯಲ್ಪಟ್ಟವರಂತೆ ಅವಮಾನ ಹೊಂದಲಿ. 5 ಅವರು ನಿನ್ನ ದೃಷ್ಟಿಯಲ್ಲಿ ಮಾಡಿದ ಪಾಪಗಳನ್ನು ಮನ್ನಿಸಬೇಡ. ಅವರು ಗೋಡೆಯನ್ನು ಕಟ್ಟುವ ನಿನ್ನ ದಾಸರನ್ನು ನಿಂದಿಸಿ ಅವರನ್ನು ನಿರುತ್ಸಾಹಗೊಳಿಸಿದ್ದಾರೆ.”
6 ಜೆರುಸಲೇಮಿನ ಗೋಡೆಯನ್ನು ನಾವು ಕಟ್ಟಿ ಮುಗಿಸಿದೆವು. ಪಟ್ಟಣದ ಸುತ್ತಲೂ ಪೌಳಿಗೋಡೆಯನ್ನು ಕಟ್ಟಿದೆವು. ಆದರೆ ಅದರ ಎತ್ತರ ಇರಬೇಕಾದಷ್ಟು ಇರದೆ ಅರ್ಧದ ತನಕ ಇದ್ದವು. ನಮ್ಮ ಜನರು ತಮ್ಮ ಹೃದಯ ಪೂರ್ವಕವಾಗಿ ಕೆಲಸ ಮಾಡಿದ್ದುದರಿಂದ ನಮಗೆ ಅಷ್ಟಾದರೂ ಮಾಡುವುದಕ್ಕೆ ಆಯಿತು.
7 ಸನ್ಬಲ್ಲಟನು, ಟೋಬೀಯನು, ಅರಬಿಯರು, ಅಮ್ಮೋನಿಯರು ಮತ್ತು ಅಷ್ಡೋದಿನವರು ತುಂಬಾ ಕೋಪಗೊಂಡಿದ್ದರು. ಯಾಕೆಂದರೆ ಜೆರುಸಲೇಮಿನ ಗೋಡೆಯ ಕೆಲಸ ಮುಂದುವರಿಯುತ್ತಿದೆಯೆಂದೂ ಮತ್ತು ಗೋಡೆಗಳ ಕಿಂಡಿಗಳನ್ನು ರಿಪೇರಿ ಮಾಡಲಾಗುತ್ತಿದೆಯೆಂದೂ ಅವರು ಕೇಳಿದ್ದರು. 8 ಅವರೆಲ್ಲಾ ಸೇರಿ ಜೆರುಸಲೇಮಿಗೆ ವಿರುದ್ಧವಾಗಿ ಗಲಭೆ ಎಬ್ಬಿಸುವ ಹಂಚಿಕೆಯನ್ನು ಹೂಡಿದರು; ಯುದ್ಧ ಮಾಡುವ ಯೋಚನೆ ಮಾಡಿದರು. 9 ನಾವು ದೇವರಿಗೆ ಪ್ರಾರ್ಥಿಸಿದೆವು ಮತ್ತು ನಮ್ಮ ಮೇಲೆ ಬೀಳಲು ಬರುವ ಶತ್ರುಗಳಿಗೆ ನಾವು ತಯಾರಿರುವಂತೆ ಹಗಲು ರಾತ್ರಿ ಪಹರೆ ಮಾಡಲು ಗೋಡೆಯ ಮೇಲೆ ಕಾವಲುಗಾರರನ್ನು ನೇಮಿಸಿದೆವು.
10 ಆ ಸಮಯದಲ್ಲಿ ಯೆಹೂದದ ಜನರು, “ಕೆಲಸಗಾರರು ಆಯಾಸಗೊಳ್ಳುತ್ತಿದ್ದಾರೆ; ದಾರಿಯಲ್ಲೆಲ್ಲಾ ತುಂಬಾ ಧೂಳು ಮತ್ತು ಕಸ ಇರುವುದರಿಂದ ನಾವು ಗೋಡೆಕಟ್ಟಡ ಕೆಲಸವನ್ನು ಮುಂದುವರಿಸಲು ಸಾಧ್ಯವಿಲ್ಲ. 11 ಅಲ್ಲದೆ ನಮ್ಮ ವೈರಿಗಳು, ‘ನಾವು ಅವರ ಮೇಲೆ ಇದ್ದಕ್ಕಿದ್ದಂತೆ ಆಕ್ರಮಣ ಮಾಡುವುದರಿಂದ ನಾವು ಅವರ ಮಧ್ಯದಲ್ಲಿರುವ ತನಕ ಅವರಿಗೆ ಗೊತ್ತಾಗುವುದೂ ಇಲ್ಲ ಕಾಣುವುದೂ ಇಲ್ಲ. ನಾವು ಅವರನ್ನು ಕೊಂದಾಗ ಕೆಲಸ ತಾನಾಗಿಯೇ ನಿಂತುಹೋಗುವುದು’ ಎಂದು ಹೇಳುತ್ತಿದ್ದಾರೆ” ಎಂದರು.
12 ಅನ್ಯಜನರ ಮಧ್ಯೆ ವಾಸಿಸುವ ಯೆಹೂದ್ಯರು ನಮ್ಮ ಬಳಿಗೆ ಬಂದು ಹತ್ತು ಬಾರಿ ನಮಗೆ ತಿಳಿಸಿದರು. “ವೈರಿಗಳು ನಮ್ಮ ಸುತ್ತಮುತ್ತಲೂ ಇದ್ದಾರೆ. ನಾವು ಎತ್ತ ತಿರುಗಿದರೂ ಅಲ್ಲಿ ಅವರಿದ್ದಾರೆ” ಎಂದರು.
13 ಆದ್ದರಿಂದ ನಮ್ಮ ಜನರಲ್ಲಿ ಕೆಲವರನ್ನು ಕುಟಂಬ ಸಮೇತವಾಗಿ ಖಡ್ಗ, ಬರ್ಜಿ ಮತ್ತು ಬಿಲ್ಲುಗಳೊಡನೆ ಗೋಡೆಯ ಉದ್ದಕ್ಕೂ ಇದ್ದ ತಗ್ಗಾದ ಸ್ಥಳಗಳಲ್ಲಿಯೂ ಗೋಡೆಗಳಲ್ಲಿದ್ದ ಕಿಂಡಿಗಳ ಬಳಿಯಲ್ಲಿಯೂ ಇರಿಸಿದೆನು. 14 ನಮಗೆದುರಾಗಿ ಬಂದಿದ್ದ ಪರಿಸ್ಥಿತಿಯನ್ನು ನಾನು ಚೆನ್ನಾಗಿ ಅವಲೋಕಿಸಿ ನಮ್ಮ ಜನರೊಂದಿಗೆ ಕುಟುಂಬ ಕುಟುಂಬವಾಗಿ, ಅಧಿಕಾರಿಗಳಿಗೆ ಮತ್ತು ಉಳಿದ ಜನರಿಗೆ ಹೀಗೆ ಹೇಳಿದೆನು: “ನಮ್ಮ ವೈರಿಗಳ ಬಗ್ಗೆ ನೀವು ಏನೂ ಹೆದರಬೇಡಿರಿ. ನಮ್ಮ ದೇವರನ್ನು ನೆನಪುಮಾಡಿರಿ. ಯೆಹೋವನು ಬಲಶಾಲಿಯೂ ಸರ್ವಶಕ್ತನೂ ಆಗಿದ್ದಾನೆ. ನೀವು ನಿಮ್ಮ ಸಹೋದರರಿಗಾಗಿ, ನಿಮ್ಮ ಗಂಡುಹೆಣ್ಣು ಮಕ್ಕಳಿಗಾಗಿ ನಿಮ್ಮನಿಮ್ಮ ಹೆಂಡತಿಯರಿಗಾಗಿ ಮತ್ತು ಮನೆಗಳಿಗಾಗಿ ಹೋರಾಡಿರಿ.”
15 ಅವರ ಕುತಂತ್ರವು ನಮಗೆ ಗೊತ್ತಾಯಿತೆಂದು ವೈರಿಗಳಿಗೆ ತಿಳಿದಾಗ ದೇವರೇ ಅವರ ಯೋಜನೆಯನ್ನು ನಿಷ್ಫಲಮಾಡಿದನೆಂದು ಅವರು ತಿಳಿದರು. ಮತ್ತೆ ನಾವೆಲ್ಲಾ ಕಟ್ಟುವ ಕೆಲಸಕ್ಕೆ ಕೈಹಾಕಿದೆವು. ಅವರವರ ಭಾಗಕ್ಕೆ ಜನರು ತೆರಳಿ ತಮ್ಮ ಕೆಲಸವನ್ನು ಪ್ರಾರಂಭಿಸಿದರು. 16 ಆ ದಿವಸದಿಂದ ನನ್ನ ಜನರು ಅರ್ಧಭಾಗ ಗೋಡೆಯ ಕೆಲಸದಲ್ಲಿ ನಿರತರಾದರು; ಉಳಿದ ಅರ್ಧ ಜನರು ಭರ್ಜಿಗಳನ್ನೂ ಗುರಾಣಿಗಳನ್ನೂ ಬಿಲ್ಲುಗಳನ್ನೂ ಮತ್ತು ಆಯುಧಗಳನ್ನೂ ಹಿಡಿದುಕೊಂಡು ಕಾವಲಾಗಿದ್ದರು; ಗೋಡೆಯನ್ನು ಕಟ್ಟುತ್ತಿದ್ದ ಯೆಹೂದದ ಜನರ ಹಿಂಭಾಗದಲ್ಲಿ ಸೈನ್ಯಾಧಿಕಾರಿಗಳು ನಿಂತುಕೊಂಡಿದ್ದರು. 17 ಗೋಡೆ ಕಟ್ಟುವವರೂ ಅವರ ಸಹಾಯಕರೂ ಒಂದು ಕೈಯಲ್ಲಿ ಆಯುಧ ಹಿಡಿದುಕೊಂಡು ಇನ್ನೊಂದು ಕೈಯಲ್ಲಿ ಕೆಲಸ ಮಾಡುತ್ತಿದ್ದರು. 18 ಕೆಲಸಗಾರರು ತಮ್ಮ ಖಡ್ಗಗಳನ್ನು ಸೊಂಟಕ್ಕೆ ಬಿಗಿದುಕೊಂಡೇ ಕೆಲಸ ಮಾಡಿದರು. ಜನರನ್ನು ಎಚ್ಚರಗೊಳಿಸಲು ತುತ್ತೂರಿ ಊದುವವನು ನನ್ನ ಬಳಿಯಲ್ಲಿಯೇ ನಿಂತಿರುತ್ತಿದ್ದನು. 19 ಆಗ ನಾನು ಪ್ರಮುಖ ಕುಟುಂಬಗಳವರನ್ನೂ ಅಧಿಕಾರಿಗಳನ್ನೂ ಮತ್ತು ಉಳಿದ ಜನರನ್ನೂ ಕರೆದು, “ನಾವು ಮಾಡುತ್ತಿರುವುದು ಬಹು ದೊಡ್ಡ ಕಾರ್ಯ; ಗೋಡೆಯ ಉದ್ದಕ್ಕೂ ಚದರಿ ಒಬ್ಬರಿಗೊಬ್ಬರು ತುಂಬಾ ದೂರದಲ್ಲಿದ್ದೇವೆ. 20 ತುತ್ತೂರಿಯ ಶಬ್ದ ಕೇಳಿದ ಕೂಡಲೇ ನೀವು ಅಲ್ಲಿಗೆ ಹೋಗಬೇಕು. ನಾವೆಲ್ಲಾ ಆ ಸ್ಥಳದಲ್ಲಿ ಒಟ್ಟಾಗಿ ಸೇರಬೇಕು. ನಮ್ಮ ದೇವರು ನಮಗಾಗಿ ಯುದ್ಧ ಮಾಡುವನು” ಎಂದೆನು.
21 ಹೀಗೆ ನಾವು ಗೋಡೆ ಕಟ್ಟುವ ಕಾರ್ಯವನ್ನು ಮುಂದುವರಿಸಿದೆವು. ಅರ್ಧ ಜನರು ಭರ್ಜಿಗಳನ್ನು ಹಿಡಿದುಕೊಂಡರು. ಮುಂಜಾನೆಯ ಸೂರ್ಯನ ಕಿರಣ ಬೀಳುವ ಹೊತ್ತಿನಿಂದ ಹಿಡಿದು ರಾತ್ರಿ ನಕ್ಷತ್ರಗಳು ಕಾಣುವ ತನಕ ನಾವು ಕೆಲಸದಲ್ಲಿ ನಿರತರಾಗಿರುತ್ತಿದ್ದೆವು.
22 “ಪ್ರತಿಯೊಬ್ಬ ಕೆಲಸಗಾರನೂ ಅವನ ಸಹಾಯಕನೂ ಜೆರುಸಲೇಮಿನೊಳಗೇ ರಾತ್ರಿಯನ್ನು ಕಳೆಯಬೇಕು. ರಾತ್ರಿ ಕಾಲದಲ್ಲಿ ಅವರು ಪಹರೆಯವರಾಗಿಯೂ ಹಗಲಲ್ಲಿ ಗೋಡೆ ಕಟ್ಟುವವರಾಗಿಯೂ ಇರಬೇಕು” ಎಂದು ನಾನು ಜನರಿಗೆ ಹೇಳಿದೆನು. 23 ಇದರಿಂದಾಗಿ ಯಾರೂ ತಮ್ಮ ವಸ್ತ್ರಗಳನ್ನು ಬದಲಾಯಿಸಲಿಲ್ಲ. ನಾನಾಗಲಿ ನನ್ನ ಬಂಧುಗಳಾಗಲಿ ನನ್ನ ಜನರಾಗಲಿ ಪಹರೆಯವರಾಗಲಿ ವಸ್ತ್ರಗಳನ್ನು ಬದಲಾಯಿಸದೆ ಆಯುಧಗಳನ್ನು ಧರಿಸಿಕೊಂಡೇ ಇದ್ದೆವು. ನೀರು ಕುಡಿಯುವಾಗಲೂ ಆಯುಧ ಸನ್ನದ್ಧರಾಗಿರುತ್ತಿದ್ದೆವು.
ಬಡಜನರಿಗೆ ನೆಹೆಮೀಯನ ಸಹಾಯ
5 ಯೆಹೂದ್ಯರಲ್ಲಿ ಎಷ್ಟೋ ಬಡಜನರು ತಮ್ಮ ಬಂಧುಗಳ ವಿಷಯದಲ್ಲಿ ದೂರು ಹೇಳಲಾರಂಭಿಸಿದರು. 2 ಕೆಲವರು ಹೀಗಂದರು: “ನಮ್ಮ ಮನೆಯಲ್ಲಿ ಬಹಳ ಮಕ್ಕಳಿದ್ದಾರೆ. ನಮಗೆ ಊಟಮಾಡಲು ಸಾಕಷ್ಟು ದವಸಧಾನ್ಯವಿಲ್ಲ; ಹೀಗಿರಲು ನಾವು ಜೀವಂತವಾಗಿ ಉಳಿಯುವ ಸಾಧ್ಯತೆಯಿಲ್ಲ.”
3 ಇನ್ನು ಕೆಲವರು, “ನಮಗೀಗ ಬರಗಾಲ ಪ್ರಾಪ್ತಿಯಾಗಿದೆ. ನಮಗೆ ದವಸಧಾನ್ಯ ಕೊಂಡುಕೊಳ್ಳಲು ನಮ್ಮ ಹೊಲಗದ್ದೆಗಳನ್ನು ಮಾರಬೇಕಾಗುತ್ತದೆ” ಅಂದರು.
4 ಇನ್ನೂ ಕೆಲವರು, “ನಮ್ಮ ಹೊಲಗದ್ದೆಗಳ ಮೇಲೆ ಅರಸನಿಗೆ ತೆರಿಗೆ ಕೊಡಬೇಕಾಗಿದೆ. ಆದರೆ ಕೊಡಲು ನಮ್ಮಲ್ಲಿ ಏನೂ ಇಲ್ಲ. ಬೇರೆಯವರಿಂದ ಎರವಲು ಪಡೆದುಕೊಂಡು ಕೊಡಬೇಕಾಗಿದೆ” ಅಂದರು. 5 “ಆ ಧನಿಕರನ್ನು ನೋಡಿರಿ. ನಾವೂ ಅವರಂತೆಯೇ ಇದ್ದೇವೆ. ನಮ್ಮ ಮಕ್ಕಳು ಅವರ ಮಕ್ಕಳಂತೆಯೇ ಇದ್ದಾರೆ. ಆದರೆ ನಾವು ಮಾತ್ರ ನಮ್ಮ ಗಂಡುಹೆಣ್ಣು ಮಕ್ಕಳನ್ನು ಗುಲಾಮರಾಗಿ ಮಾರುವ ಸ್ಥಿತಿಯಲ್ಲಿದ್ದೇವೆ. ನಮ್ಮಲ್ಲಿ ಕೆಲವರು ಆಗಲೇ ತಮ್ಮ ಹೆಣ್ಣುಮಕ್ಕಳನ್ನು ಗುಲಾಮರನ್ನಾಗಿ ಮಾರಿದ್ದಾರೆ. ನಮಗೆ ಬೇರೆ ಮಾರ್ಗವೇ ಇಲ್ಲ. ನಮ್ಮ ಹೊಲಗದ್ದೆಗಳನ್ನು ಯಾವಾಗಲೋ ಕಳೆದುಕೊಂಡಿದ್ದೇವೆ.”
6 ನಾನು ಅವರ ದೂರುಗಳನ್ನು ಕೇಳಿಸಿಕೊಂಡಾಗ ಬಹಳವಾಗಿ ಸಿಟ್ಟುಗೊಂಡೆನು. 7 ನನ್ನ ಕೋಪವು ಶಾಂತವಾದ ಬಳಿಕ ಧನಿಕರ ಮತ್ತು ಅಧಿಕಾರಿಗಳ ಬಳಿಗೆ ಹೋಗಿ, “ನೀವು ನಿಮ್ಮ ಸ್ವಂತ ಜನರಿಗೆ ಕೊಟ್ಟಿರುವ ಸಾಲಕ್ಕೆ ಬಡ್ಡಿಯನ್ನು ಕೊಡಲು ಬಲವಂತ ಮಾಡುತ್ತಿದ್ದೀರಿ. ನೀವು ಕೂಡಲೇ ಅದನ್ನು ನಿಲ್ಲಿಸಬೇಕು” ಎಂದೆನು. ಅನಂತರ ನಾನು ಎಲ್ಲಾ ಜನರನ್ನು ಒಟ್ಟುಗೂಡಿಸಿ, 8 “ನಮ್ಮ ಯೆಹೂದಿ ಜನರನ್ನು ಪರದೇಶಗಳಲ್ಲಿ ಗುಲಾಮರನ್ನಾಗಿ ಮಾರಿದ್ದರು. ಅಂಥವರನ್ನು ನಾವು ಕ್ರಯಕೊಟ್ಟು ಕೊಂಡುಕೊಂಡು ಅವರನ್ನು ಗುಲಾಮತನದಿಂದ ಬಿಡುಗಡೆ ಮಾಡಿಸಿದೆವು. ಆದರೆ ನೀವು ಈಗ ಮತ್ತೆ ಗುಲಾಮರನ್ನಾಗಿ ಮಾಡುತ್ತಿದ್ದೀರಿ” ಎಂದೆನು.
ಸೇರಿಬಂದಿದ್ದ ಶ್ರೀಮಂತರೂ ಅಧಿಕಾರಿಗಳೂ ಸುಮ್ಮನೆ ಬಾಯಿ ಮುಚ್ಚಿಕೊಂಡರು. ಅವರಿಗೆ ಏನೂ ಹೇಳಲಿಕ್ಕೂ ಆಗಲಿಲ್ಲ. 9 ನಾನು ಹೇಳುವುದನ್ನು ಮುಂದುವರಿಸುತ್ತಾ, “ನೀವು ತಪ್ಪು ಕೆಲಸ ಮಾಡುತ್ತಿದ್ದೀರಿ. ದೇವರಿಗೆ ಭಯಪಟ್ಟು ಆತನನ್ನು ಗೌರವಿಸಬೇಕೆಂದು ನಿಮಗೆ ಗೊತ್ತಿದೆ. ಇತರ ಜನರು ಮಾಡುವ ನಾಚಿಕೆಕರವಾದ ಕೆಲಸವನ್ನು ನೀವು ಮಾಡಬಾರದು. 10 ನನ್ನ ಜನರು, ನನ್ನ ಬಂಧುಗಳು ಮತ್ತು ನಾನು ಹಣವನ್ನು ದವಸಧಾನ್ಯಗಳನ್ನು ಎರವಲಾಗಿ ಕೊಡುತ್ತೇವೆ. ಆದರೆ ಅವರಿಂದ ಬಡ್ಡಿಯನ್ನು ವಸೂಲು ಮಾಡುವುದಿಲ್ಲ. ಸಾಲ ಪಡೆದುಕೊಂಡವರಿಂದ ಬಡ್ಡಿಯನ್ನು ಬಲವಂತದಿಂದ ವಸೂಲು ಮಾಡುವುದನ್ನು ನಾವು ನಿಲ್ಲಿಸಬೇಕು. 11 ಅವರಿಂದ ಕಿತ್ತುಕೊಂಡ ಹೊಲಗದ್ದೆಗಳನ್ನು, ದ್ರಾಕ್ಷಾತೋಟ, ಎಣ್ಣೆಮರಗಳ ತೋಟ ಮತ್ತು ಅವರ ಮನೆಗಳನ್ನು ಅವರಿಗೆ ಈಗಲೇ ಹಿಂದಕ್ಕೆ ಕೊಡಿರಿ. ಅವರಿಂದ ವಸೂಲಿ ಮಾಡಿದ ಬಡ್ಡಿಯನ್ನು ಹಿಂದಕ್ಕೆ ಕೊಡಿರಿ. ನೀವು ಯಾವ ಯಾವದಕ್ಕೆ ಬಡ್ಡಿ ವಸೂಲಿ ಮಾಡಿರುವಿರೋ ಎಲ್ಲವನ್ನು ಹಿಂದಕ್ಕೆ ಕೊಡಿರಿ” ಎಂದು ಹೇಳಿದೆನು.
12 ಆಗ ಶ್ರೀಮಂತರೂ ಅಧಿಕಾರಿಗಳೂ, “ನಾವು ಹಿಂದಕ್ಕೆ ಕೊಡುತ್ತೇವೆ. ಅವರಿಂದ ನಾವು ಹೆಚ್ಚೇನೂ ಕೇಳುವುದಿಲ್ಲ. ನೆಹೆಮೀಯನೇ, ನೀನು ಹೇಳಿದಂತೆಯೇ ನಾವು ಮಾಡುತ್ತೇವೆ” ಎಂದರು.
ಆಗ ನಾನು ದೇವರ ಮುಂದೆ ಅವರಿಂದ ಪ್ರತಿಜ್ಞೆ ಮಾಡಿಸಲು ಯಾಜಕರನ್ನು ಕರೆದೆನು. 13 ನಂತರ ನಾನು ನನ್ನ ಉಡುಪಿನ ನೆರಿಗೆಯನ್ನು ಝಾಡಿಸಿ, “ತಾನು ಮಾಡಿದ ಪ್ರತಿಜ್ಞೆಯಂತೆ ನಡೆಯದವನನ್ನು ದೇವರು ಅವನ ಮನೆಯಿಂದ ಝಾಡಿಸಿಬಿಡಲಿ; ಅವನು ತಾನು ಗಳಿಸಿದ್ದೆಲ್ಲವನ್ನು ಕಳೆದುಕೊಳ್ಳಲಿ” ಎಂದು ಹೇಳಿದಾಗ ಜನರೆಲ್ಲರೂ “ಆಮೆನ್” ಅಂದರು; ಯೆಹೋವನನ್ನು ಸ್ತುತಿಸಿದರು. ತಾವು ಮಾಡಿದ ಪ್ರತಿಜ್ಞೆಯಂತೆ ನಡೆದುಕೊಂಡರು.
14 ಯೆಹೂದ ಪ್ರಾಂತ್ಯಕ್ಕೆ ನನ್ನನ್ನು ರಾಜ್ಯಪಾಲನಾಗಿ ನೇಮಿಸಿದಂದಿನಿಂದ, ನಾನಾಗಲಿ ನನ್ನ ಸಹೋದರರಾಗಲಿ ರಾಜ್ಯಪಾಲರಿಗಾಗಿ ಪ್ರತ್ಯೇಕಿಸಿದ ಆಹಾರವನ್ನು ತಿನ್ನಲಿಲ್ಲ; ನನಗಾಗಿ ಆಹಾರವನ್ನು ಕೊಂಡುಕೊಳ್ಳಲು ಜನರಿಂದ ತೆರಿಗೆ ವಸೂಲಿಮಾಡಲಿಲ್ಲ. ಅರ್ತಷಸ್ತನ ಆಳ್ವಿಕೆಯ ಇಪ್ಪತ್ತನೆಯ ವರ್ಷದಿಂದ ಮೂವತ್ತೆರಡನೆ ವರ್ಷದ ತನಕ ನಾನು ರಾಜ್ಯಪಾಲನಾಗಿದ್ದೆನು. ಹೀಗೆ ಹನ್ನೆರಡು ವರ್ಷ ಯೆಹೂದದ ರಾಜ್ಯಪಾಲನಾಗಿದ್ದೆನು. 15 ನನಗಿಂತ ಮೊದಲು ರಾಜ್ಯಪಾಲರಾಗಿದ್ದವರು ಜನರನ್ನು ತುಂಬಾ ಕಷ್ಟಕ್ಕೆ ಒಳಪಡಿಸಿದ್ದರು. ಪ್ರತಿಯೊಬ್ಬರು ಒಂದು ಪೌಂಡ್ ಬೆಳ್ಳಿಯನ್ನೂ ಆಹಾರವನ್ನೂ ದ್ರಾಕ್ಷಾರಸವನ್ನೂ ಕೊಡಬೇಕಿತ್ತು. ಆ ರಾಜ್ಯಪಾಲರ ಅಧಿಕಾರಿಗಳು ಸಹ ಜನರ ಮೇಲೆ ದೊರೆತನ ನಡೆಸಿ ಅವರ ಜೀವನವನ್ನು ಮತ್ತಷ್ಟು ಕಠಿಣಗೊಳಿಸಿದರು. ಆದರೆ ದೇವರಲ್ಲಿ ಭಯಭಕ್ತಿ ಇದ್ದುದರಿಂದ ನಾನು ಆ ರೀತಿ ಮಾಡಲಿಲ್ಲ. 16 ಜೆರುಸಲೇಮಿನ ಗೋಡೆ ಕಟ್ಟುವ ಕೆಲಸದಲ್ಲಿ ನಾನು ತುಂಬಾ ಪ್ರಯಾಸಪಟ್ಟೆನು. ಗೋಡೆಯ ನಿರ್ಮಾಣ ಕೆಲಸಕ್ಕಾಗಿ ನನ್ನ ಜನರೆಲ್ಲರೂ ಒಟ್ಟಾಗಿ ಸೇರಿದರು. ನಾವು ಯಾರಿಂದಲೂ ಭೂಮಿಯನ್ನು ಕಿತ್ತುಕೊಳ್ಳಲಿಲ್ಲ.
17 ಇಷ್ಟೇ ಅಲ್ಲದೆ ಯಾವಾಗಲೂ ನೂರೈವತ್ತು ಮಂದಿ ಯೆಹೂದ್ಯರಿಗೆ ನನ್ನ ಮೇಜಿನ ಮೇಲೆ ಊಟಕ್ಕೆ ಬಡಿಸುತ್ತಿದ್ದೆನು. ನಮ್ಮ ಸುತ್ತಲಿನ ಪ್ರಾಂತ್ಯಗಳಿಂದ ಬಂದ ಜನರೂ ನಮ್ಮೊಂದಿಗೆ ಊಟಮಾಡುತ್ತಿದ್ದರು. 18 ಪ್ರತಿದಿನ ನಮ್ಮ ಊಟಕ್ಕಾಗಿ ಒಂದು ಹೋರಿಯನ್ನು, ಆರು ಕೊಬ್ಬಿದ ಕುರಿಗಳನ್ನು ಮತ್ತು ಅನೇಕ ಕೋಳಿಗಳನ್ನು ಕೊಯ್ಯಲಾಗುತ್ತಿತ್ತು; ಹತ್ತುದಿನಕ್ಕೊಮ್ಮೆ ವಿವಿಧ ರೀತಿಯ ದ್ರಾಕ್ಷಾರಸವನ್ನು ಒದಗಿಸಿಕೊಡುತ್ತಿದ್ದೆನು. ಆದರೂ ರಾಜ್ಯಪಾಲನಿಗೆ ಸಲ್ಲಬೇಕಾಗಿದ್ದ ಆಹಾರಪದಾರ್ಥಗಳನ್ನು ನಾನೆಂದೂ ಕೇಳಲಿಲ್ಲ; ಅದಕ್ಕಾಗಿ ಜನರಿಂದ ತೆರಿಗೆ ತೆಗೆದುಕೊಳ್ಳಲಿಲ್ಲ. ಯಾಕೆಂದರೆ ನನ್ನ ಜನರು ಮಾಡುವ ಕೆಲಸವು ತುಂಬಾ ಪ್ರಯಾಸಕರವಾದದ್ದೆಂದು ನನಗೆ ಗೊತ್ತಿತ್ತು. 19 ದೇವರೇ, ನಾನು ಈ ಜನರಿಗಾಗಿ ಮಾಡಿರುವ ಒಳ್ಳೆಯದನ್ನೆಲ್ಲಾ ಜ್ಞಾಪಿಸಿಕೊ.
Kannada Holy Bible: Easy-to-Read Version. All rights reserved. © 1997 Bible League International