Chronological
ದೇವಾಲಯ ಕಟ್ಟುವ ಕಾರ್ಯವನ್ನು ವಿರೋಧಿಸಿದ ವೈರಿಗಳು
4 1-2 ಆ ಪ್ರಾಂತ್ಯದಲ್ಲಿ ವಾಸಿಸುತ್ತಿದ್ದ ಬೇರೆ ಜನರು ಯೆಹೂದ ಮತ್ತು ಬೆನ್ಯಾಮೀನ್ ಕುಲಗಳ ಜನರಿಗೆ ವಿರುದ್ಧವಾಗಿದ್ದರು. ಸೆರೆಯಿಂದ ಬಂದ ಜನರು ಇಸ್ರೇಲರ ದೇವರಾದ ಯೆಹೋವನ ದೇವಾಲಯವನ್ನು ಕಟ್ಟುತ್ತಿದ್ದಾರೆಂಬ ವರ್ತಮಾನವನ್ನು ವೈರಿಗಳು ಕೇಳಿ ಜೆರುಬ್ಬಾಬೆಲನ ಬಳಿಗೂ ಮತ್ತು ಕುಲಪ್ರಧಾನರ ಬಳಿಗೂ ಬಂದು, “ಕಟ್ಟುವ ಕಾರ್ಯದಲ್ಲಿ ನಿಮಗೆ ಸಹಾಯ ಮಾಡಲು ಬಂದಿದ್ದೇವೆ. ನಾವು ಸಹ ನಿಮ್ಮಂತೆಯೇ ದೇವರನ್ನು ಪ್ರಾರ್ಥಿಸುತ್ತೇವೆ. ಅಶ್ಶೂರದ ರಾಜನಾದ ಏಸರ್ಹದ್ದೋನನು ನಮ್ಮನ್ನು ಇಲ್ಲಿಗೆ ತಂದು ಬಿಟ್ಟಂದಿನಿಂದ ನಾವು ನಿಮ್ಮ ದೇವರನ್ನೇ ಆರಾಧಿಸುತ್ತೇವೆ” ಅಂದರು.
3 ಆದರೆ ಜೆರುಬ್ಬಾಬೆಲ್, ಯೇಷೂವ ಮತ್ತು ಗೋತ್ರಪ್ರಧಾನರು ಅವರಿಗೆ ಹೇಳಿದ್ದೇನೆಂದರೆ: “ನೀವು ನಮ್ಮ ದೇವರಿಗೆ ದೇವಾಲಯವನ್ನು ಕಟ್ಟಬಾರದು. ನಾವು ಮಾತ್ರವೇ ಕಟ್ಟಬಹುದು. ಯಾಕೆಂದರೆ ಆತನು ಇಸ್ರೇಲ್ ಜನರ ದೇವರು. ಪರ್ಶಿಯ ರಾಜನಾದ ಸೈರಸನು ಅದೇ ರೀತಿಯಾಗಿ ನಮಗೆ ಅಪ್ಪಣೆ ಮಾಡಿರುತ್ತಾನೆ.”
4 ಇದನ್ನು ಕೇಳಿ ಅವರಿಗೆ ಸಿಟ್ಟುಬಂತು. ಮತ್ತು ಯೆಹೂದ್ಯರಿಗೆ ಉಪದ್ರವ ಕೊಡಲು ಪ್ರಾರಂಭಿಸಿದರು. ದೇವಾಲಯ ಕಟ್ಟುವ ಕೆಲಸವನ್ನು ನಿಲ್ಲಿಸಲೂ ಕಟ್ಟುವವರನ್ನು ನಿರಾಶೆಪಡಿಸಲೂ ಪ್ರಯತ್ನಿಸಿದರು. 5 ಯೆಹೂದ ಜನರ ವಿರುದ್ಧವಾಗಿರಲು ಸರಕಾರದ ಅಧಿಕಾರಿಗಳಿಗೆ ಲಂಚಕೊಟ್ಟು ಪ್ರೋತ್ಸಾಹಿಸಿದರು. ಯೆಹೂದ್ಯರು ದೇವಾಲಯ ಕಟ್ಟುವ ಕಾರ್ಯವನ್ನು ನಿಲ್ಲಿಸಲು ಈ ಅಧಿಕಾರಿಗಳು ಪದೇಪದೇ ತೊಂದರೆಪಡಿಸಿದರು. ಪರ್ಶಿಯಾದ ಅರಸನಾದ ಸೈರಸನ ರಾಜ್ಯಭಾರದ ಆಳ್ವಿಕೆಯಲ್ಲಿಯೂ ಅವನ ನಂತರ ಪಟ್ಟಕ್ಕೆ ಬಂದ ದಾರ್ಯಾವೆಷನ ಆಳ್ವಿಕೆಯಲ್ಲಿಯೂ ಇದೇ ರೀತಿ ಮುಂದುವರಿಯಿತು.
6 ಆ ಶತ್ರುಗಳು ಪರ್ಶಿಯ ರಾಜನಿಗೆ ಪತ್ರವನ್ನು ಬರೆದು ದೇವಾಲಯವನ್ನು ಕಟ್ಟುವ ಕಾರ್ಯವನ್ನು ನಿಲ್ಲಿಸಬೇಕೆಂದು ಬೇಡಿಕೊಂಡರು. ಅಹಷ್ವೇರೋಷನು ಪರ್ಶಿಯ ದೇಶದ ಅರಸನಾದಾಗ ಅವನಿಗೆ ಪತ್ರ ಬರೆದರು.
ಜೆರುಸಲೇಮ್ ನಗರವನ್ನು ಕಟ್ಟುವ ಕಾರ್ಯಕ್ಕೆ ವಿರೋಧಿಸಿದ ಶತ್ರುಗಳು
7 ಅರ್ತಷಸ್ತನು ಪರ್ಶಿಯಾದ ರಾಜನಾದಾಗ ಬಿಷ್ಲಾಮ್, ಮಿತ್ರದಾತ್ ಮತ್ತು ಟಾಬೆಯೇಲ್ ಈ ಮೊದಲಾದವರು ಯೆಹೂದ್ಯರ ವಿರುದ್ಧವಾಗಿ ರಾಜನಿಗೆ ಆಪಾದನಾ ಪತ್ರವನ್ನು ಅರಮೇಯಿಕ್ ಭಾಷೆಯಲ್ಲಿಯೂ ಅದರ ಲಿಪಿಯಲ್ಲಿಯೂ ಬರೆದರು.
8 ಅದಕ್ಕೆ ದೇಶಾಧಿಪತಿಯಾದ ರೆಹೂಮ ಮತ್ತು ಕಾರ್ಯದರ್ಶಿಯಾದ ಶಿಂಷೈ ಜೆರುಸಲೇಮಿನ ನಿವಾಸಿಗಳ ವಿರುದ್ಧವಾಗಿ ರಾಜ ಅರ್ತಷಸ್ತನಿಗೆ ಈ ರೀತಿ ಬರೆದರು:
9 ದೇಶಾಧಿಪತಿಯಾದ ರೆಹೂಮ, ಕಾರ್ಯದರ್ಶಿಯಾದ ಶಿಂಷೈ ಇವರೂ ಇವರ ಜೊತೆಗಾರರಾದ ಟರ್ಪಲಾಯರು, ಪರ್ಶಿಯದವರು, ಯೆರೆಕ್ಯರು, ಬಾಬಿಲೋನಿನವರು, ಕೂಷನಿನ ಏಲಾಮ್ಯರು, 10 ಮತ್ತು ಮಹಾ ಬಲಿಷ್ಠನಾದ ಅಷೂರ್ ಬನಿಪಾಲನು ಕರೆತಂದು ಸಮಾರ್ಯ ಮತ್ತು ಯೂಫ್ರೇಟೀಸ್ ನದಿಯ ಪಶ್ಚಿಮ ಪ್ರಾಂತ್ಯಗಳಲ್ಲಿ ಇರಿಸಿದ ಇತರ ಜನರು,
11 ಯೂಫ್ರೇಟೀಸ್ ನದಿಯ ಪಶ್ಚಿಮ ಪ್ರಾಂತ್ಯದಲ್ಲಿ ವಾಸಿಸುವ ಸೇವಕರು ಅರ್ತಷಸ್ತ ರಾಜನಿಗೆ ಬರೆಯುವ ಪತ್ರ:
12 ಅರ್ತಷಸ್ತ ರಾಜರೇ, ನಿಮ್ಮ ಸನ್ನಿಧಾನದಲ್ಲಿ ನಾವು ತಿಳಿಸುವ ವಿಷಯವೇನೆಂದರೆ, ನೀವು ಕಳುಹಿಸಿರುವ ಯೆಹೂದ್ಯರು ಇಲ್ಲಿಗೆ ಬಂದಿದ್ದಾರೆ. ಅವರು ತಮ್ಮ ನಗರವಾದ ಜೆರುಸಲೇಮನ್ನು ತಿರುಗಿ ಕಟ್ಟುತ್ತಿದ್ದಾರೆ. ಜೆರುಸಲೇಮ್ ಕೆಟ್ಟ ನಗರವಾಗಿದೆ. ಅದರ ನಿವಾಸಿಗಳು ಯಾವಾಗಲೂ ಬೇರೆ ಅರಸುಗಳಿಗೆ ಎದುರು ಬೀಳುವವರಾಗಿದ್ದಾರೆ. ಈಗ ಆ ಯೆಹೂದ್ಯರು ಅಸ್ತಿವಾರವನ್ನು ಹಾಕಿ ಗೋಡೆಯನ್ನು ಕಟ್ಟುತ್ತಿದ್ದಾರೆ.
13 ಅದೇ ಸಮಯದಲ್ಲಿ ರಾಜರೇ, ನೀವು ತಿಳಿಯಬೇಕಾದ ವಿಷಯವೇನೆಂದರೆ, ಜೆರುಸಲೇಮ್ ಮತ್ತು ಅದರ ಪೌಳಿಗೋಡೆಗಳು ಕಟ್ಟಲ್ಪಟ್ಟಲ್ಲಿ ಅಲ್ಲಿಯ ಪ್ರಜೆಗಳು ತೆರಿಗೆ ಕೊಡುವುದನ್ನು ನಿಲ್ಲಿಸುವರು. ನಿನಗೆ ಕಪ್ಪಕಾಣಿಕೆ ಸಲ್ಲಿಸುವುದನ್ನೂ ಇತರ ತೆರಿಗೆಗಳನ್ನು ಕೊಡುವುದನ್ನೂ ನಿಲ್ಲಿಸುವರು. ಇದರಿಂದಾಗಿ ರಾಜರಿಗೆ ದೊಡ್ಡ ನಷ್ಟವಾಗಲಿದೆ.
14 ರಾಜನ ಮೇಲೆ ನಮಗೆ ಜವಾಬ್ದಾರಿ ಇದೆ. ಅಂಥಾ ಸಂಗತಿಗಳು ನಡೆಯಲು ನಾವು ಇಷ್ಟಪಡುವುದಿಲ್ಲ. ಆದ್ದರಿಂದಲೇ ರಾಜರಿಗೆ ಈ ಪತ್ರವನ್ನು ಕಳುಹಿಸುತ್ತಿದ್ದೇವೆ.
15 ರಾಜನಾದ ಅರ್ತಷಸ್ತನೇ, ನಿಮಗಿಂತ ಮೊದಲು ಆಳಿದ ರಾಜರ ಬಗ್ಗೆ ಬರೆದ ವೃತ್ತಾಂತವನ್ನು ಓದಿರಿ ಎಂದು ನಿಮ್ಮನ್ನು ವಿನಂತಿಸುತ್ತೇವೆ. ಜೆರುಸಲೇಮ್ ಯಾವಾಗಲೂ ಇತರ ರಾಜರುಗಳಿಗೆ ಎದುರುಬೀಳುವುದನ್ನು ನೀವು ಅದರಲ್ಲಿ ಕಂಡುಕೊಳ್ಳುವಿರಿ. ಬೇರೆ ರಾಜರನ್ನು ಮತ್ತು ದೇಶಗಳವರನ್ನು ತುಂಬಾ ಕಷ್ಟಕ್ಕೆ ಒಳಪಡಿಸಿದ್ದು ಮಾತ್ರವಲ್ಲ, ಪೂರ್ವಕಾಲದಿಂದಲೂ ಈ ನಗರದಿಂದ ಎಷ್ಟೋ ದಂಗೆಗಳು ಎದ್ದಿವೆ. ಆ ಕಾರಣಕ್ಕಾಗಿಯೇ ಜೆರುಸಲೇಮ್ ನಾಶಮಾಡಲ್ಪಟ್ಟಿತ್ತು.
16 ರಾಜನಾದ ಅರ್ತಷಸ್ತನೇ, ಈ ಪಟ್ಟಣ ಮತ್ತು ಅದರ ಪೌಳಿಗೋಡೆಗಳು ತಿರಿಗಿ ಕಟ್ಟಲ್ಪಟ್ಟರೆ ನೀವು ಯೂಫ್ರೇಟೀಸ್ ನದಿಯ ಪಶ್ಚಿಮ ಪ್ರಾಂತ್ಯಗಳ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳುವಿರಿ.
17 ಈ ಪತ್ರಕ್ಕೆ ಅರಸನಾದ ಅರ್ತಷಸ್ತನು ಈ ರೀತಿಯಾಗಿ ಉತ್ತರಿಸಿದನು.
ದೇಶಾಧಿಪತಿಯಾದ ರೆಹೂಮನಿಗೂ ಕಾರ್ಯದರ್ಶಿಯಾದ ಶಿಂಷೈಗೂ ಮತ್ತು ಸಮಾರ್ಯದಲ್ಲೂ ಯೂಫ್ರೇಟೀಸ್ ಪಶ್ಚಿಮ ಪ್ರಾಂತ್ಯದಲ್ಲೂ ವಾಸಿಸುವ ಜನರಿಗೆ
ವಂದನೆಗಳು.
18 ನೀವು ಕಳುಹಿಸಿದ ಪತ್ರವನ್ನು ಭಾಷಾಂತರ ಮಾಡಿ ನನಗೆ ತಿಳಿಸಲಾಯಿತು. 19 ಹಿಂದಿನ ರಾಜರ ವೃತ್ತಾಂತ ಪುಸ್ತಕಗಳನ್ನು ಶೋಧಿಸಲು ನಾನು ಆಜ್ಞೆ ಕೊಟ್ಟೆನು. ಆ ವೃತ್ತಾಂತಗಳನ್ನು ಓದಿದಾಗ, ರಾಜರ ವಿರುದ್ಧವಾದ ದಂಗೆಯ ದೀರ್ಘ ಇತಿಹಾಸವನ್ನು ಜೆರುಸಲೇಮ್ ಹೊಂದಿರುವುದು ನಮಗೆ ತಿಳಿದು ಬಂತು. ಜೆರುಸಲೇಮಿನಲ್ಲಿ ದಂಗೆ ಮತ್ತು ಪ್ರತಿಭಟನೆ ಆಗಾಗ್ಗೆ ನಡೆದಿದ್ದವು. 20 ಬಲಿಷ್ಠರಾಜರು ಜೆರುಸಲೇಮನ್ನು ಮತ್ತು ಯೂಫ್ರೇಟೀಸ್ ನದಿಯ ಪಶ್ಚಿಮ ಪ್ರಾಂತ್ಯವನ್ನೆಲ್ಲಾ ಆಳಿದರು. ಅವರಿಗೆ ಕಪ್ಪಕಾಣಿಕೆ, ಸುಂಕ, ತೆರಿಗೆಗಳನ್ನು ಸಲ್ಲಿಸಲಾಗುತ್ತಿತ್ತು.
21 ಈಗ ನೀವು ಜೆರುಸಲೇಮ್‌ನಲ್ಲಿ ನಡೆಯುವ ಕೆಲಸವನ್ನು ನಿಲ್ಲಿಸುವಂತೆ ಆಜ್ಞಾಪಿಸಬೇಕು. ನಾನು ತಿಳಿಸುವ ತನಕ ಅದು ತಿರಿಗಿ ಕಟ್ಟಲ್ಪಡಬಾರದು. 22 ಈ ವಿಷಯದಲ್ಲಿ ನೀವು ಅಜಾಗರೂಕರಾಗಬಾರದೆಂದು ನಿಮ್ಮನ್ನು ಎಚ್ಚರಿಸುತ್ತೇನೆ. ಜೆರುಸಲೇಮಿನ ಕಟ್ಟುವಿಕೆಯು ಮುಂದುವರಿಯಬಾರದು. ಮುಂದುವರಿದರೆ ನನಗೆ ಆ ಪ್ರಾಂತ್ಯದಿಂದ ದೊರಕಬೇಕಾದ ಹಣವು ದೊರಕುವುದಿಲ್ಲ.
23 ರಾಜನಾದ ಅರ್ತಷಸ್ತನು ಬರೆದ ಪತ್ರವನ್ನು ರೆಹೂಮನಿಗೂ ಕಾರ್ಯದರ್ಶಿ ಶಿಂಷೈಗೂ ಅವರೊಂದಿಗಿದ್ದ ಜನರ ಮುಂದೆ ಓದಲಾಯಿತು. ಆ ಕೂಡಲೇ ಅವರು ಬೇಗನೆ ಜೆರುಸಲೇಮಿನಲ್ಲಿದ್ದ ಯೆಹೂದ್ಯರ ಬಳಿಗೆ ಹೋಗಿ ಅಲ್ಲಿ ನಡೆಯುತ್ತಿದ್ದ ಕೆಲಸವನ್ನು ಬಲವಂತದಿಂದ ನಿಲ್ಲಿಸಿದರು.
ದೇವಾಲಯ ಕಟ್ಟುವ ಕೆಲಸ ನಿಲ್ಲಿಸಲ್ಪಟ್ಟಿದ್ದು
24 ಜೆರುಸಲೇಮಿನಲ್ಲಿ ಯೆಹೋವನ ಆಲಯದ ಕಾರ್ಯವು ನಿಂತಿತು. ಪರ್ಶಿಯ ರಾಜ ದಾರ್ಯಾವೆಷನ ಆಳ್ವಿಕೆಯ ಎರಡನೆಯ ವರ್ಷದ ತನಕ ಕೆಲಸವು ಮುಂದುವರೆಯಲಿಲ್ಲ.
5 ಆ ಸಮಯಗಳಲ್ಲಿ ಪ್ರವಾದಿಗಳಾದ ಹಗ್ಗಾಯನೂ ಇದ್ದೋವಿನ ಮಗನಾದ ಜೆಕರ್ಯನೂ ದೇವರ ಹೆಸರಿನಲ್ಲಿ ಪ್ರವಾದಿಸುತ್ತಿದ್ದರು. ಯೆಹೂದ ಪ್ರಾಂತ್ಯದಲ್ಲಿದ್ದ ಮತ್ತು ಜೆರುಸಲೇಮಿನಲ್ಲಿದ್ದ ಯೆಹೂದ್ಯರನ್ನು ಅವರು ಪ್ರೋತ್ಸಾಹಿಸಿದರು. 2 ಶೆಯಲ್ತಿಯೇಲನ ಮಗನಾದ ಜೆರುಬ್ಬಾಬೇಲ್ ಮತ್ತು ಯೋಚಾದಾಕನ ಮಗನಾದ ಯೇಷೂವನೂ ಜೆರುಸಲೇಮಿನಲ್ಲಿ ದೇವಾಲಯವನ್ನು ಕಟ್ಟುವ ಕಾರ್ಯವನ್ನು ಮತ್ತೆ ಪ್ರಾರಂಭಿಸಿದರು. ದೇವರ ಪ್ರವಾದಿಗಳೆಲ್ಲರೂ ಅವರೊಂದಿಗಿದ್ದು ಅವರನ್ನು ಪ್ರೋತ್ಸಾಹಪಡಿಸುತ್ತಿದ್ದರು. 3 ಆ ಸಮಯದಲ್ಲಿ ಯೂಫ್ರೇಟೀಸ್ ನದಿಯ ಪಶ್ಚಿಮ ಪ್ರಾಂತ್ಯದ ರಾಜ್ಯಪಾಲನಾಗಿದ್ದ ತತ್ತೆನೈ ಮತ್ತು ಶೆತರ್ಬೋಜೆನೈ ಮತ್ತು ಅವರ ಸಂಗಡಿಗರು ಜೆರುಬ್ಬಾಬೆಲ್, ಯೇಷೂವ ಮತ್ತು ಅವರ ಜೊತೆಗಾರರ ಬಳಿ ಬಂದು, “ನಿಮಗೆ ದೇವಾಲಯವನ್ನು ಮತ್ತೆ ಕಟ್ಟಲೂ ಅದನ್ನು ಹೊಸದಾಗಿ ಮಾಡಲೂ ಅಪ್ಪಣೆ ಕೊಟ್ಟವರು ಯಾರು? 4 ಈ ಕಾರ್ಯದಲ್ಲಿ ಕೆಲಸ ಮಾಡುವವರ ಹೆಸರುಗಳೇನು?” ಎಂದು ವಿಚಾರಿಸಿದರು.
5 ಆದರೆ ಯೆಹೂದ್ಯರ ನಾಯಕರ ಮೇಲೆ ದೇವರ ಕೃಪಾಕಟಾಕ್ಷವಿತ್ತು. ರಾಜನಾದ ದಾರ್ಯಾವೆಷನಿಗೆ ವರದಿ ತಲುಪಿ ಉತ್ತರವನ್ನು ಕಳುಹಿಸುವ ತನಕ ನಾಯಕರು ಕಟ್ಟಡದ ಕೆಲಸವನ್ನು ಮುಂದುವರಿಸುತ್ತಲೇ ಇದ್ದರು. 6 ಯೂಫ್ರೇಟೀಸ್ ನದಿಯ ಪಶ್ಚಿಮದ ಪ್ರಾಂತ್ಯದ ರಾಜ್ಯಪಾಲ ತತ್ತೆನೈ, ಶೆತರ್ಬೋಜೆನೈ ಮತ್ತು ಪ್ರಮುಖರು ರಾಜನಾದ ದಾರ್ಯಾವೆಷನಿಗೆ ಪತ್ರ ಬರೆದರು. 7 ಪತ್ರದ ನಕಲು ಹೀಗಿದೆ:
ಅರಸನಾದ ದಾರ್ಯಾವೆಷನಿಗೆ
ವಂದನೆಗಳು.
8 ರಾಜನೇ, ನಾವು ಯೆಹೂದ ಪ್ರಾಂತ್ಯವನ್ನು ಸಂದರ್ಶಿಸಿದ್ದೇವೆಂದು ನಿಮಗೆ ತಿಳಿಸುತ್ತೇವೆ. ಅಲ್ಲಿ ಮಹೋನ್ನತ ದೇವರ ಆಲಯವನ್ನು ನೋಡಿದೆವು. ಯೆಹೂದ ಪ್ರಾಂತ್ಯದ ಜನರು ದೊಡ್ಡ ಕಲ್ಲುಗಳಿಂದ ದೇವಾಲಯವನ್ನು ಕಟ್ಟುತ್ತಿದ್ದಾರೆ. ದೊಡ್ಡದೊಡ್ಡ ಮರದ ತೊಲೆಗಳನ್ನು ಗೋಡೆಯ ಮೇಲೆ ಕುಳ್ಳಿರಿಸಿದ್ದಾರೆ. ಯೆಹೂದ ಪ್ರಾಂತ್ಯದ ಜನರು ಜಾಗರೂಕತೆಯಿಂದಲೂ ತುಂಬ ಪ್ರಯಾಸದಿಂದಲೂ ಕಾರ್ಯವನ್ನು ನಡಿಸುತ್ತಿದ್ದಾರೆ. ಬಹಳ ವೇಗವಾಗಿ ಕೆಲಸ ಮುಂದುವರಿಯುತ್ತಿರುವದರಿಂದ ದೇವಾಲಯವು ಬೇಗನೆ ಸಂಪೂರ್ಣವಾಗಬಹುದು.
9 “ದೇವಾಲಯವನ್ನು ಕಟ್ಟಲು ನಿಮಗೆ ಯಾರು ಅಪ್ಪಣೆಕೊಟ್ಟರು?” ಎಂದು ಅವರ ನಾಯಕರನ್ನು ಪ್ರಶ್ನಿಸಿದೆವು. 10 ಕೆಲಸಗಾರರ ಹೆಸರುಗಳನ್ನು ನಾವು ಕೇಳಿದೆವು. ಅವರ ನಾಯಕರುಗಳ ಹೆಸರುಗಳನ್ನೂ ಕೇಳಿದೆವು. ಆ ನಾಯಕರುಗಳು ಯಾರೆಂದು ನಿಮಗೆ ತಿಳಿಯುವಂತೆ ಅವರ ಹೆಸರುಗಳನ್ನು ನಿಮಗೆ ತಿಳಿಸಬೇಕೆಂದಿದ್ದೆವು.
11 ಅದಕ್ಕೆ ಅವರು ಈ ರೀತಿಯಾಗಿ ಉತ್ತರಕೊಟ್ಟರು:
“ಭೂಪರಲೋಕಗಳ ದೇವರ ಸೇವಕರಾದ ನಾವು ಬಹಳ ವರ್ಷಗಳ ಹಿಂದೆ ಇಸ್ರೇಲರ ರಾಜನು ಕಟ್ಟಿಸಿ ಮುಗಿಸಿದ ದೇವಾಲಯವನ್ನು ಮತ್ತೆ ಕಟ್ಟುತ್ತಿದ್ದೇವೆ. 12 ನಮ್ಮ ಪೂರ್ವಿಕರು ಪರಲೋಕದ ನಮ್ಮ ದೇವರನ್ನು ಸಿಟ್ಟಿಗೆಬ್ಬಿಸಿದರು. ಆಗ ಆತನು ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನಿಗೆ ನಮ್ಮ ಪೂರ್ವಿಕರನ್ನು ಕೊಟ್ಟುಬಿಟ್ಟನು. ನೆಬೂಕದ್ನೆಚ್ಚರನು ದೇವಾಲಯವನ್ನು ಹಾಳುಗೆಡವಿ ಜನರನ್ನು ಬಲವಂತದಿಂದ ಸೆರೆಯಾಗಿ ಬಾಬಿಲೋನಿಗೆ ಒಯ್ದನು. 13 ಅನಂತರ ಬಾಬಿಲೋನಿನ ಅರಸನಾದ ಸೈರಸನ ಆಳ್ವಿಕೆಯ ಮೊದಲನೆಯ ವರ್ಷದಲ್ಲಿ ದೇವಾಲಯವನ್ನು ತಿರಿಗಿ ಕಟ್ಟಲು ವಿಶೇಷ ಅನುಮತಿಯನ್ನು ಕೊಟ್ಟನು. 14 ಹಿಂದಿನ ಕಾಲದಲ್ಲಿ ನೆಬೂಕದ್ನೆಚ್ಚರನು ಜೆರುಸಲೇಮಿನ ದೇವಾಲಯದಿಂದ ಬೆಳ್ಳಿಬಂಗಾರಗಳ ವಸ್ತುಗಳನ್ನು ತೆಗೆದುಕೊಂಡು ಬಂದು ಬಾಬಿಲೋನಿನಲ್ಲಿದ್ದ ತನ್ನ ವಿಗ್ರಹಾಲಯದಲ್ಲಿಟ್ಟಿದ್ದನು. ಆಲಯದಿಂದ ತೆಗೆದುಕೊಂಡು ಬಂದಿದ್ದ ಆ ಬೆಳ್ಳಿಬಂಗಾರದ ವಸ್ತುಗಳನ್ನು ಸೈರಸನು ಬಾಬಿಲೋನಿನ ತನ್ನ ವಿಗ್ರಹಾಲಯದಿಂದ ತೆಗೆದು ಶೆಷ್ಬಚ್ಚರನಿಗೆ (ಜೆರುಬ್ಬಾಬೆಲನಿಗೆ) ಕೊಟ್ಟು ಅವನನ್ನು ದೇಶಾಧಿಪತಿಯನ್ನಾಗಿ ನೇಮಿಸಿದನು.”
15 ಅರಸನಾದ ಸೈರಸನು ಶೆಷ್ಬಚ್ಚರನಿಗೆ (ಜೆರುಬ್ಬಾಬೆಲನಿಗೆ), “ಈ ಬೆಳ್ಳಿಬಂಗಾರಗಳ ವಸ್ತುಗಳನ್ನು ತೆಗೆದುಕೊಂಡು ಜೆರುಸಲೇಮಿನ ದೇವಾಲಯದಲ್ಲಿಡು. ಹಿಂದೆ ದೇವಾಲಯವು ಎಲ್ಲಿ ಇತ್ತೋ ಅದೇ ಸ್ಥಳದಲ್ಲಿ ಅದನ್ನು ಪುನಃ ಕಟ್ಟು.”
16 ಹೀಗೆ ಶೆಷ್ಬಚ್ಚರನು (ಜೆರುಬ್ಬಾಬೆಲ್), ಜೆರುಸಲೇಮಿನಲ್ಲಿ ದೇವರ ಆಲಯಕ್ಕೆ ಅಸ್ತಿವಾರವನ್ನು ಹಾಕಿದನು. ಅಂದಿನಿಂದ ಇಂದಿನ ತನಕ ಕೆಲಸವು ಮುಂದುವರಿಯುತ್ತಲೇ ಇದೆ. ಆದರೆ ಅದು ಇನ್ನೂ ಸಂಪೂರ್ಣವಾಗಿಲ್ಲ.
17 ರಾಜರಾದ ತಾವು ಅಪೇಕ್ಷಿಸಿದರೆ ರಾಜವೃತ್ತಾಂತವನ್ನು ನೀವೇ ಪರಿಶೋಧಿಸಿ. ಜೆರುಸಲೇಮಿನಲ್ಲಿ ಮತ್ತೆ ದೇವಾಲಯವನ್ನು ಕಟ್ಟಲು ರಾಜ ಸೈರಸನು ಆಜ್ಞಾಪಿಸಿದ್ದು ನಿಜವೇ ಎಂಬುದನ್ನು ನೀವೇ ನೋಡಿರಿ. ಆಮೇಲೆ, ಅರಸನೇ, ಇದರ ವಿಚಾರವಾಗಿ ಏನು ತೀರ್ಮಾನ ಮಾಡಿದ್ದೀರೆಂದು ನಮಗೆ ಪತ್ರದ ಮೂಲಕ ತಿಳಿಸಿರಿ.
ದಾರ್ಯಾವೆಷನ ಆಜ್ಞೆ
6 ತನಗಿಂತ ಮೊದಲು ರಾಜರಾಗಿದ್ದವರ ವೃತ್ತಾಂತ ಪುಸ್ತಕಗಳನ್ನು ತರಿಸಿ ದಾರ್ಯಾವೆಷನು ಶೋಧಿಸಿದನು. ಈ ಪುಸ್ತಕಗಳು ರಾಜ ಖಜಾನೆಯಲ್ಲಿ ಇಡಲ್ಪಟ್ಟಿದ್ದವು. 2 ಮೇದ್ಯ ಪ್ರಾಂತ್ಯದ ಎಕ್‌ಬಟಾನ ಎಂಬ ಕೋಟೆಯೊಳಗೆ ಒಂದು ಸುರುಳಿಯು ದೊರಕಿತು. ಆ ಸುರುಳಿಯಲ್ಲಿ ಈ ರೀತಿಯಾಗಿ ಬರೆದಿತ್ತು:
ಸರಕಾರದ ಆಜ್ಞೆ: 3 ರಾಜನಾದ ಸೈರಸನ ಆಳ್ವಿಕೆಯ ಮೊದಲನೆಯ ವರ್ಷದಲ್ಲಿ ಜೆರುಸಲೇಮಿನಲ್ಲಿರುವ ದೇವಾಲಯದ ವಿಷಯವಾಗಿ ಸೈರಸ್ ರಾಜನು ಹೊರಡಿಸಿದ ರಾಜಾಜ್ಞೆ:
ದೇವಾಲಯವು ಮತ್ತೆ ಕಟ್ಟಲ್ಪಡಲಿ. ಅದು ಹೋಮಯಜ್ಞಾದಿಗಳನ್ನು ಸಮರ್ಪಿಸುವ ಸ್ಥಳವಾಗಲಿ. ದೇವಾಲಯದ ಅಸ್ತಿವಾರವು ಬಲವಾಗಿರಬೇಕು. ಅದರ ಎತ್ತರ ತೊಂಭತ್ತು ಅಡಿ ಇರಬೇಕು. ಅದರ ಅಗಲ ತೊಂಭತ್ತು ಅಡಿ ಇರಬೇಕು. 4 ಅದರ ಗೋಡೆಯಲ್ಲಿ ಮೂರುಸಾಲು ದೊಡ್ಡ ಗಾತ್ರದ ಕಲ್ಲುಗಳಿರಬೇಕು; ಒಂದು ಸಾಲಿನಲ್ಲಿ ಮರದ ತೊಲೆಗಳಿರಬೇಕು. ದೇವಾಲಯ ಕಟ್ಟಲು ತಗಲುವ ಖರ್ಚುವೆಚ್ಚವೆಲ್ಲವನ್ನು ರಾಜನ ಖಜಾನೆಯಿಂದ ಕೊಡಬೇಕು. 5 ಬೆಳ್ಳಿಬಂಗಾರಗಳ ವಸ್ತುಗಳೆಲ್ಲವನ್ನು ಜೆರುಸಲೇಮಿನ ದೇವಾಲಯದಿಂದ ನೆಬೂಕದ್ನೆಚ್ಚರನು ಸೂರೆಮಾಡಿ ಬಾಬಿಲೋನಿಗೆ ತಂದದ್ದನ್ನು ದೇವಾಲಯದಲ್ಲಿ ಇಡಬೇಕು.
6 ಹೀಗಿರುವದರಿಂದ, ದಾರ್ಯಾವೇಷನಾದ ನಾನು,
ಯೂಫ್ರೇಟೀಸ್ ನದಿಯ ಪಶ್ಚಿಮ ಪ್ರಾಂತ್ಯಕ್ಕೆ ರಾಜ್ಯಪಾಲನಾಗಿರುವ ತತ್ತೆನೈ ಎಂಬ ನಿನಗೂ ಶೆತರ್ಬೋಜೆನೈ ಮತ್ತು ಆ ಪ್ರಾಂತ್ಯದ ಎಲ್ಲಾ ಅಧಿಕಾರಿಗಳಿಗೂ ಆಜ್ಞೆ ಕೊಡುವದೇನೆಂದರೆ, ಜೆರುಸಲೇಮಿನಿಂದ ನೀವು ದೂರವಾಗಿರಿ. 7 ಕೆಲಸ ಮಾಡುವವರನ್ನು ತೊಂದರೆಪಡಿಸಬೇಡಿ. ದೇವಾಲಯ ಕಟ್ಟುವ ಕೆಲಸವನ್ನು ನಿಲ್ಲಿಸುವ ಪ್ರಯತ್ನ ಮಾಡಬೇಡಿ. ಯೆಹೂದ್ಯರ ದೇಶಾಧಿಪತಿ ಮತ್ತು ಯೆಹೂದ್ಯ ನಾಯಕರು ಅದನ್ನು ಮತ್ತೆ ಕಟ್ಟಲಿ. ಹಿಂದಿನ ದೇವಾಲಯವಿದ್ದಲ್ಲಿಯೇ ಹೊಸದನ್ನು ಕಟ್ಟಲಿ.
8 ಈಗ ನಾನು ನಿಮಗೆ ಕೊಡುವ ಆಜ್ಞೆ ಏನೆಂದರೆ, ದೇವಾಲಯ ಕಟ್ಟುವ ಯೆಹೂದ್ಯ ನಾಯಕರಿಗೆ ನೀವು ಸಂಪೂರ್ಣ ಖರ್ಚನ್ನು ಸರಕಾರದ ಖಜಾನೆಯಿಂದ ಕೊಡಬೇಕು. ಇದಕ್ಕೆ ಬೇಕಾದ ಹಣವನ್ನು ಯೂಫ್ರೇಟೀಸ್ ನದಿಯ ಪಶ್ಚಿಮ ಪ್ರಾಂತ್ಯದ ಜನರಿಂದ ತೆರಿಗೆವಸೂಲಿ ಮಾಡಿದ ಹಣದಿಂದ ಕೊಡಬೇಕು. ಈ ಕೆಲಸವನ್ನು ನೀವು ಬೇಗನೆ ಮಾಡಬೇಕು. ದೇವಾಲಯದ ಕೆಲಸ ನಿಂತುಹೋಗಬಾರದು. 9 ಆ ಜನರಿಗೆ ಏನು ಅವಶ್ಯಕತೆಯಿದೆಯೋ ಅದನ್ನು ಪೂರೈಸಬೇಕು. ಅವರಿಗೆ ಎಳೆಹೋರಿಗಳು, ಟಗರುಗಳು, ಗಂಡುಕುರಿಗಳು ಪರಲೋಕದ ದೇವರಿಗೆ ಯಜ್ಞವನ್ನರ್ಪಿಸಲು ಬೇಕಾಗಿದ್ದರೆ ಅವುಗಳನ್ನು ಕೊಡಿರಿ. ಜೆರುಸಲೇಮಿನ ಯಾಜಕರು ಗೋಧಿ, ಉಪ್ಪು, ದ್ರಾಕ್ಷಾರಸ, ಎಣ್ಣೆ ಬೇಕು ಎಂದು ಹೇಳಿದರೆ ಅದನ್ನು ಪ್ರತಿದಿನ ತಪ್ಪದೆ ಒದಗಿಸಿರಿ. 10 ಅವುಗಳನ್ನು ಜೆರುಸಲೇಮಿನ ಯಾಜಕರಿಗೆ ಕೊಡಿರಿ. ಅವುಗಳನ್ನು ಯಜ್ಞವಾಗಿ ಸಮರ್ಪಿಸಿದಾಗ ಪರಲೋಕದ ದೇವರು ಅದನ್ನು ಮೆಚ್ಚುವನು. ಯಾಜಕರು ನನಗಾಗಿಯೂ ನನ್ನ ಮಕ್ಕಳಿಗಾಗಿಯು ಪ್ರಾರ್ಥಿಸಲಿ.
11 ಮಾತ್ರವಲ್ಲದೆ, ನನ್ನ ಆಜ್ಞೆ ಏನೆಂದರೆ: ಯಾವನಾದರೂ ನನ್ನ ಆಜ್ಞೆಯನ್ನು ಬದಲಾಯಿಸಿದರೆ ಅವನ ಮನೆಯಿಂದಲೇ ಒಂದು ತೊಲೆಯನ್ನು ಎಳೆದು ಅದನ್ನು ಶೂಲವನ್ನಾಗಿ ಮಾಡಿ, ಅವನನ್ನು ಅದಕ್ಕೆ ನೇತು ಹಾಕಬೇಕು; ಅವನ ಮನೆಯನ್ನು ಕೆಡವಿ ಅದನ್ನು ಮಣ್ಣುದಿಬ್ಬವನ್ನಾಗಿ ಮಾಡಬೇಕು.
12 ಜೆರುಸಲೇಮಿನಲ್ಲಿ ದೇವರು ತನ್ನ ಹೆಸರನ್ನು ಸ್ಥಾಪಿಸಿರುತ್ತಾನೆ. ಆದ್ದರಿಂದ ಯಾವ ಅರಸನಾಗಲಿ ಅಧಿಕಾರಿಯಾಗಲಿ ಈ ಆಜ್ಞೆಗೆ ವಿರುದ್ಧವಾಗಿ ನಡೆದರೆ ದೇವರೇ ಅವನನ್ನು ಸೋಲಿಸುವನು; ಯಾರಾದರೂ ಆ ದೇವಾಲಯವನ್ನು ಕೆಡವಲು ಪ್ರಯತ್ನಿಸಿದರೆ ಅಂಥವರನ್ನು ದೇವರೇ ನಾಶಮಾಡುವನು.
ಇದನ್ನು ದಾರ್ಯಾವೆಷನೆಂಬ ನಾನೇ ಆಜ್ಞಾಪಿಸಿರುತ್ತೇನೆ. ಈ ಆಜ್ಞೆಯನ್ನು ಬೇಗನೆ ಮತ್ತು ಸಂಪೂರ್ಣವಾಗಿ ನೆರವೇರಿಸಬೇಕು.
ದೇವಾಲಯ ಸಂಪೂರ್ಣವಾದದ್ದು ಮತ್ತು ಅದರ ಪ್ರತಿಷ್ಠೆ
13 ಯೂಫ್ರೇಟೀಸ್ ನದಿಯ ಪಶ್ಚಿಮ ಪ್ರಾಂತ್ಯದ ರಾಜ್ಯಪಾಲನಾದ ತತ್ತೆನೈ, ಶೆತರ್ಬೋಜೆನೈ ಮತ್ತು ಅವರ ಸಂಗಡವಿರುವ ಜನರು ರಾಜನಾದ ದಾರ್ಯಾವೆಷನ ಆಜ್ಞೆಗೆ ಅತ್ಯಂತ ಶೀಘ್ರವಾಗಿ ಮತ್ತು ಸಂಪೂರ್ಣವಾಗಿ ವಿಧೇಯರಾದರು. 14 ಹೀಗೆ ಯೆಹೂದ್ಯರ ಹಿರಿಯರು ದೇವಾಲಯದ ಕಟ್ಟಡ ಕೆಲಸವನ್ನು ಮುಂದುವರಿಸಿದರು. ಪ್ರವಾದಿಯಾದ ಹಗ್ಗೈನಂತೆ ಮತ್ತು ಇದ್ದೋವಿನ ಮಗನಾದ ಜೆಕರೀಯನಂತೆ ಅವರನ್ನು ಪ್ರೋತ್ಸಾಹಿಸುತ್ತಾ ಇದ್ದರು. ಆದ್ದರಿಂದ ಅವರು ಯಶಸ್ವಿಯಾದರು. ದೇವಾಲಯದ ಕೆಲಸ ಮುಗಿಯಿತು. ಇಸ್ರೇಲಿನ ದೇವರ ಆಜ್ಞೆಗೆ ವಿಧೇಯರಾಗಿಯೂ, ಸೈರಸ್, ದಾರ್ಯಾವೆಷ ಮತ್ತು ಅರ್ತಷಸ್ತ ಎಂಬ ಪರ್ಶಿಯ ಅರಸರ ಆಜ್ಞೆಗೆ ವಿಧೇಯರಾಗಿಯೂ ಕಟ್ಟಡದ ಕೆಲಸವನ್ನು ಸಂಪೂರ್ಣ ಮಾಡಿದರು. 15 ಆದಾರ್ ತಿಂಗಳಿನ ಮೂರನೆಯ ದಿನದಲ್ಲಿ ಅಂದರೆ ರಾಜ ದಾರ್ಯಾವೆಷನ ಆಳ್ವಿಕೆಯ ಆರನೆಯ ವರ್ಷದಲ್ಲಿ ದೇವಾಲಯವು ಸಂಪೂರ್ಣವಾಯಿತು.
16 ಅನಂತರ ಇಸ್ರೇಲರೆಲ್ಲರೂ ಸೇರಿ ದೇವಾಲಯವನ್ನು ಅತ್ಯಂತ ಹರ್ಷದಿಂದ ಪ್ರತಿಷ್ಠೆ ಮಾಡಿದರು. ಸೆರೆವಾಸದಿಂದ ಹಿಂತಿರುಗಿ ಬಂದಿದ್ದ ಯಾಜಕರು, ಲೇವಿಯರು ಮತ್ತು ಎಲ್ಲಾ ಜನರು ಈ ಆಚರಣೆಯಲ್ಲಿ ಭಾಗವಹಿಸಿದರು.
17 ಆ ದಿವಸ ಸರ್ವಾಂಗಹೋಮವಾಗಿ ನೂರು ಹೋರಿಗಳನ್ನೂ, ಇನ್ನೂರು ಟಗರುಗಳನ್ನೂ ನಾನೂರು ಕುರಿಮರಿಗಳನ್ನೂ ಸಮರ್ಪಿಸಿದರು. ಎಲ್ಲಾ ಇಸ್ರೇಲರ ದೋಷ ಪರಿಹಾರಕ್ಕಾಗಿ ಕುಲಕ್ಕೆ ಒಂದರಂತೆ ಹನ್ನೆರಡು ಹೋತಗಳನ್ನು ಅರ್ಪಿಸಿದರು. 18 ಅನಂತರ ಯಾಜಕರನ್ನು ಮತ್ತು ಲೇವಿಯರನ್ನು ಅವರವರ ವರ್ಗಗಳಿಗನುಸಾರವಾಗಿ, ಮೋಶೆಯ ವಿಧಿಯಂತೆ ದೇವಾಲಯದಲ್ಲಿ ಸೇವೆಮಾಡುವುದಕ್ಕಾಗಿ ಆರಿಸಿದರು.
ಪಸ್ಕಹಬ್ಬ
19 ಮೊದಲನೇ ತಿಂಗಳ ಹದಿನಾಲ್ಕನೆಯ ದಿನದಂದು ಸೆರೆಯಿಂದ ಹಿಂತಿರುಗಿಬಂದಿದ್ದ ಯೆಹೂದ್ಯರು ಪಸ್ಕಹಬ್ಬವನ್ನು ಆಚರಿಸಿದರು. 20 ಯಾಜಕರೂ ಲೇವಿಯರೂ ತಮ್ಮನ್ನು ಶುದ್ಧಮಾಡಿಕೊಂಡು ಹಬ್ಬವನ್ನು ಆಚರಿಸಲು ಸಿದ್ಧರಾದರು. ಪಸ್ಕದ ಕುರಿಮರಿಯನ್ನು ಎಲ್ಲಾ ಇಸ್ರೇಲರಿಗಾಗಿಯೂ ತಮಗಾಗಿಯೂ ಯಾಜಕರಿಗಾಗಿಯೂ ಲೇವಿಯರು ವಧಿಸಿದರು. 21 ಸೆರೆಯಿಂದ ಹಿಂತಿರುಗಿ ಬಂದಿದ್ದ ಇಸ್ರೇಲರೆಲ್ಲರೂ ಪಸ್ಕದ ಊಟವನ್ನು ಮಾಡಿದರು. ಉಳಿದವರು ಅನ್ಯರ ಜೊತೆಯಲ್ಲಿ ವಾಸಿಸುವುದರಿಂದ ತಮ್ಮನ್ನು ಶುದ್ಧಪಡಿಸಿಕೊಂಡವರೆಲ್ಲರೂ ಪಸ್ಕದ ಊಟದಲ್ಲಿ ಪಾಲು ತೆಗೆದುಕೊಂಡರು. ಇಸ್ರೇಲರ ದೇವರಾದ ಯೆಹೋವನ ಬಳಿಗೆ ಸಹಾಯಕ್ಕಾಗಿ ಹೋಗಲು ಸಾಧ್ಯವಾಗುವಂತೆ ಅವರು ಹೀಗೆ ಮಾಡಿದರು. 22 ಹುಳಿಯಿಲ್ಲದ ರೊಟ್ಟಿಯ ಹಬ್ಬವನ್ನು ಅವರು ಏಳು ದಿನಗಳ ತನಕ ಸಂತಸದಿಂದ ಆಚರಿಸಿದರು. ಯಾಕೆಂದರೆ ಅಶ್ಶೂರದ ಅರಸನ ಮನಸ್ಸನ್ನು ಮಾರ್ಪಡಿಸುವುದರ ಮೂಲಕ ಯೆಹೋವನು ಯೆಹೂದ್ಯರನ್ನು ಬಹಳ ಸಂತೋಷಗೊಳಿಸಿದ್ದನು. ಇಸ್ರೇಲ್ ದೇವರ ಆಲಯದ ಕಟ್ಟಡವು ಪೂರ್ಣಗೊಳ್ಳಲು ಅಶ್ಶೂರದ ಅರಸನು ಸಹಾಯ ಮಾಡಿದನು.
137 ನಾವು ಬಾಬಿಲೋನ್ ದೇಶದ ನದಿಗಳ ಬಳಿಯಲ್ಲಿ ಕುಳಿತುಕೊಂಡು
ಚೀಯೋನನ್ನು ನೆನಸಿಕೊಳ್ಳುತ್ತಾ ಅತ್ತೆವು.
2 ಸಮೀಪದಲ್ಲಿದ್ದ ನೀರವಂಜಿ ಮರಗಳಿಗೆ ನಾವು ನಮ್ಮ ಹಾರ್ಪ್‌ವಾದ್ಯಗಳನ್ನು ತೂಗುಹಾಕಿದೆವು.
3 ನಮ್ಮನ್ನು ಸೆರೆಹಿಡಿದಿದ್ದ ಜನರು
ಬಾಬಿಲೋನಿನಲ್ಲಿ ನಮಗೆ ಚೀಯೋನಿನ ಕುರಿತು ಹರ್ಷಗೀತೆಗಳನ್ನು ಹಾಡಲು ಹೇಳಿದರು.
4 ಆದರೆ ಪರದೇಶದಲ್ಲಿ
ಯೆಹೋವನ ಹಾಡುಗಳನ್ನು ನಾವು ಹಾಡುವಂತಿಲ್ಲ!
5 ಜೆರುಸಲೇಮೇ, ನಿನ್ನನ್ನು ನಾನೆಂದಾದರೂ ಮರೆಯುವುದಾದರೆ,
ನಾನು ಮತ್ತೆಂದಿಗೂ ಹಾಡನ್ನು ಹಾಡದಂತಾಗಲಿ.
6 ಜೆರುಸಲೇಮೇ, ನಿನ್ನನ್ನು ನಾನೆಂದಾದರೂ ಮರೆಯುವುದಾದರೆ,
ನಾನು ಮತ್ತೆಂದಿಗೂ ಹಾಡಲು ಶಕ್ತನಾಗದಂತಾಗಲಿ.
ಜೆರುಸಲೇಮೇ, ನಿನ್ನ ವಿಷಯದಲ್ಲೇ
ನಾನು ಅತ್ಯಾನಂದಪಡುವೆನೆಂದು ಪ್ರಮಾಣ ಮಾಡುವೆ.
7 ಯೆಹೋವನೇ ನಿಶ್ಚಯವಾಗಿ ಎದೋಮ್ಯರನ್ನು ದಂಡಿಸು.
ಯಾಕೆಂದರೆ ಜೆರುಸಲೇಮ್ ಸೆರೆಹಿಡಿಯಲ್ಪಟ್ಟಾಗ
ಅವರು, “ಅದರ ಕಟ್ಟಡಗಳನ್ನು ಕೆಡವಿಹಾಕಿ.
ಅವುಗಳನ್ನು ಅಸ್ತಿವಾರ ಸಹಿತ ಹಾಳುಮಾಡಿರಿ” ಎಂದು ಆರ್ಭಟಿಸಿದರು.
8 ಬಾಬಿಲೋನೇ, ನೀನು ನಾಶವಾಗುವೆ!
ನಿನಗೆ ತಕ್ಕ ದಂಡನೆಯನ್ನು ಕೊಡುವವನು ಧನ್ಯನು.
ನೀನು ನಮ್ಮನ್ನು ನೋಯಿಸಿದಂತೆ ನಿನ್ನನ್ನೂ ನೋಯಿಸುವವನು ಧನ್ಯನು.
9 ನಿನ್ನ ಮಕ್ಕಳನ್ನು ಹಿಡಿದು ಬಂಡೆಗೆ ಅಪ್ಪಳಿಸುವವನು ಧನ್ಯನು.
Kannada Holy Bible: Easy-to-Read Version. All rights reserved. © 1997 Bible League International