Chronological
ಜೆರುಸಲೇಮಿನ ವಿರುದ್ಧವಾಗಿ ಯೆಹೆಜ್ಕೇಲನ ಮಾತುಗಳು
22 ಯೆಹೋವನ ಸಂದೇಶವು ನನಗೆ ಬಂತು. ಆತನು ಹೇಳಿದ್ದೇನೆಂದರೆ, 2 “ನರಪುತ್ರನೇ, ನೀನು ಹಂತಕರ ನಗರಕ್ಕೆ ನ್ಯಾಯತೀರಿಸುವೆಯಾ? ಆಕೆಯ ಭಯಂಕರ ದುಷ್ಟತನದ ಬಗ್ಗೆ ಆಕೆಗೆ ತಿಳಿಸು. 3 ನೀನು ಹೀಗೆ ಹೇಳಬೇಕು: ‘ನನ್ನ ಒಡೆಯನಾದ ಯೆಹೋವನ ಮಾತುಗಳಿವು. ಈ ನಗರವು ಕೊಲೆಗಾರರಿಂದ ತುಂಬಿದೆ. ಆದ್ದರಿಂದ ಆಕೆಯ ಶಿಕ್ಷೆಯ ದಿನವು ಬಂದಿದೆ. ಆಕೆ ತನಗೋಸ್ಕರ ಹೊಲಸು ವಿಗ್ರಹಗಳನ್ನು ಮಾಡಿ ತನ್ನನ್ನು ಹೊಲಸು ಮಾಡಿಕೊಂಡಿದ್ದಾಳೆ.
4 “‘ಜೆರುಸಲೇಮಿನ ನಿವಾಸಿಗಳೇ, ನೀವು ಅನೇಕರನ್ನು ಕೊಂದಿದ್ದೀರಿ. ಆದ್ದರಿಂದ ನೀವು ದೋಷಿಗಳು. ನೀವು ಹೊಲಸು ವಿಗ್ರಹಗಳನ್ನು ಮಾಡಿಕೊಂಡಿದ್ದೀರಿ. ಆದ್ದರಿಂದ ನೀವು ಅಶುದ್ಧರು. ನಿಮ್ಮನ್ನು ಶಿಕ್ಷಿಸುವ ಸಮಯ ಈಗ ಬಂದಿದೆ. ನಿಮ್ಮ ಅಂತ್ಯವು ಬಂದಿದೆ. ಆದ್ದರಿಂದಲೇ ಇತರ ಜನಾಂಗಗಳವರು ನಿಮ್ಮನ್ನು ಗೇಲಿಮಾಡುವರು. ಎಲ್ಲಾ ದೇಶಗಳು ನಿಮ್ಮನ್ನು ನೋಡಿ ನಗುವವು. 5 ದೂರ ಮತ್ತು ಹತ್ತಿರದಲ್ಲಿರುವ ಎಲ್ಲರೂ ನಿನ್ನನ್ನು ಹಾಸ್ಯ ಮಾಡುವರು. ನಿನ್ನ ಹೆಸರನ್ನು ನೀನು ಕೆಡಿಸಿದ್ದೀ. ನೀನು ಗದ್ದಲದಿಂದ ತುಂಬಿಹೋಗಿರುವೆ.
6 “‘ಇಗೋ, ಜೆರುಸಲೇಮಿನಲ್ಲಿ ಇತರರನ್ನು ಕೊಲ್ಲುವದಕ್ಕಾಗಿಯೇ ತಮ್ಮನ್ನು ಬಲಿಷ್ಠರನ್ನಾಗಿ ಮಾಡಿಕೊಂಡಿರುವ ಇಸ್ರೇಲಿನ ಅಧಿಪತಿಗಳು ಇದ್ದಾರೆ. 7 ಜೆರುಸಲೇಮಿನ ಜನರು ತಮ್ಮನ್ನು ಹೆತ್ತವರನ್ನು ಸನ್ಮಾನಿಸುವುದಿಲ್ಲ. ಪರದೇಶಸ್ಥರನ್ನು ಹಿಂಸಿಸುವರು. ಆ ಸ್ಥಳದಲ್ಲಿ ವಿಧೆವೆಯರಿಗೂ ಅನಾಥರಿಗೂ ಮೋಸ ಮಾಡುವರು. 8 ನೀವು ನನ್ನ ಪವಿತ್ರ ವಸ್ತುಗಳನ್ನು ಕಡೆಗಾಣಿಸಿರುವಿರಿ. ನಾನು ನೇಮಿಸಿರುವ ವಿಶೇಷ ವಿಶ್ರಾಂತಿಯ ದಿವಸಗಳನ್ನು ಅಲಕ್ಷ್ಯ ಮಾಡುತ್ತೀರಿ. 9 ಜೆರುಸಲೇಮ್ ನಿವಾಸಿಗಳು ಇತರರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಾರೆ. ಆ ನಿರಪರಾಧಿ ಜನರನ್ನು ಹತ್ಯೆ ಮಾಡಲು ಹಾಗೆ ಮಾಡುತ್ತಾರೆ. ಆ ಜನರು ಬೆಟ್ಟದ ಮೇಲೆ ಹೋಗಿ ಸುಳ್ಳುದೇವರುಗಳನ್ನು ಸನ್ಮಾನಿಸುವುದಕ್ಕಾಗಿ ಊಟಮಾಡುತ್ತಾರೆ.
“‘ಜೆರುಸಲೇಮಿನ ಜನರು ಎಲ್ಲಾ ಬಗೆಯ ಲೈಂಗಿಕ ಪಾಪಗಳನ್ನು ಮಾಡುತ್ತಾರೆ. 10 ತಮ್ಮ ತಂದೆಯ ಹೆಂಡತಿಯರೊಂದಿಗೆ ಅನೈತಿಕ ಸಂಬಂಧವಿಟ್ಟುಕೊಳ್ಳುತ್ತಾರೆ. ಸ್ತ್ರೀಯರ ಮೇಲೆ ಅತ್ಯಾಚಾರ ಮಾಡುತ್ತಾರೆ; ಮುಟ್ಟಾಗಿ ಅಶುದ್ಧರಾಗಿರುವ ಸ್ತ್ರೀಯರ ಮೇಲೂ ಅವರು ಅತ್ಯಾಚಾರ ಮಾಡುತ್ತಾರೆ. 11 ಇಂತಹ ಪಾಪಗಳನ್ನು ತಮ್ಮ ನೆರೆಯವನ ಹೆಂಡತಿಯೊಂದಿಗೆ ನಡಿಸುತ್ತಾರೆ. ಒಬ್ಬನು ತನ್ನ ಸ್ವಂತ ಸೊಸೆಯೊಂದಿಗೆ ಮಲಗಿ ಆಕೆಯನ್ನು ಅಶುದ್ಧಳನ್ನಾಗಿ ಮಾಡಿದನು. ಮತ್ತೊಬ್ಬನು ತನ್ನ ತಂದೆಯ ಮಗಳು, ತನ್ನ ತಂಗಿಯನ್ನೇ ಬಲವಂತದಿಂದ ಕೆಡಿಸಿರುತ್ತಾನೆ. 12 ಜೆರುಸಲೇಮಿನಲ್ಲಿ ನೀವು ಕೊಲೆ ಮಾಡುವದಕ್ಕಾಗಿ ಹಣ ತೆಗೆದುಕೊಳ್ಳುತ್ತೀರಿ. ಸಾಲಕೊಟ್ಟು ಅದಕ್ಕೆ ಬಡ್ಡಿ ತೆಗೆದುಕೊಳ್ಳುತ್ತೀರಿ. ಸ್ವಲ್ಪ ಹಣ ಮಾಡುವದಕ್ಕಾಗಿ ನಿಮ್ಮ ನೆರೆಯವನನ್ನೆ ಮೋಸ ಮಾಡುತ್ತೀರಿ. ನನ್ನನ್ನು ನೀವು ಮರೆತುಬಿಟ್ಟಿರುವಿರಿ.’” ನನ್ನ ಒಡೆಯನಾದ ಯೆಹೋವನು ಇದನ್ನು ಹೇಳಿದ್ದಾನೆ.
13 ದೇವರು ಹೀಗೆ ಹೇಳಿದನು: “‘ನೋಡಿರಿ, ನಾನು ಕೈಯನ್ನು ಬಡಿದು ನಿಮ್ಮನ್ನು ನಿಲ್ಲಿಸಿ ಬಿಡುವೆನು. ನೀವು ಮೋಸ ಮಾಡಿದ್ದಕ್ಕಾಗಿಯೂ, ಜನರನ್ನು ಕೊಲೆ ಮಾಡಿದ್ದಕ್ಕಾಗಿಯೂ ನಿಮ್ಮನ್ನು ಶಿಕ್ಷಿಸುವೆನು. 14 ನಾನು ನಿಮ್ಮನ್ನು ಶಿಕ್ಷಿಸಲು ಬಂದಾಗ ನೀವು ಧೈರ್ಯಶಾಲಿಗಳಾಗುವಿರಾ? ನಿಮ್ಮಲ್ಲಿ ಬಲವಿರುವದೋ? ನಾನೇ ಯೆಹೋವನು. ನಾನು ಹೇಳಿದ ಪ್ರಕಾರ ಮಾಡುವೆನು. 15 ನಾನು ನಿಮ್ಮನ್ನು ಜನಾಂಗಗಳ ಮಧ್ಯೆ ಚದರಿಸಿಬಿಡುವೆನು. ನಿಮ್ಮನ್ನು ಬಹುದೇಶಗಳ ಮಧ್ಯೆ ಅಟ್ಟಿಬಿಡುವೆನು. ಈ ನಗರದಲ್ಲಿರುವ ಅಸಹ್ಯ ವಸ್ತುಗಳನ್ನೆಲ್ಲಾ ಸಂಪೂರ್ಣವಾಗಿ ನಾಶಮಾಡುವೆನು. 16 ಜೆರುಸಲೇಮೇ, ನಿನಗೆ ಸಂಭವಿಸುವ ಸಂಗತಿಗಳಿಂದ ಜನಾಂಗಗಳ ಮುಂದೆ ನಿನ್ನ ಕೀರ್ತಿಯು ಹಾಳಾಗುವುದು. ಆಗ ನಾನು ಯೆಹೋವನೆಂದು ನೀನು ತಿಳಿದುಕೊಳ್ಳುವೆ.’”
ಇಸ್ರೇಲ್ ಉಪಯೋಗವಿಲ್ಲದ ಹೊಲಸು
17 ಯೆಹೋವನ ವಾಕ್ಯವು ನನಗೆ ಬಂತು. ಆತನು ಹೀಗೆಂದನು: 18 “ನರಪುತ್ರನೇ, ಇಸ್ರೇಲ್ ಜನಾಂಗವು ನನ್ನ ಪಾಲಿಗೆ ನಿಷ್ಪ್ರಯೋಜಕವಾಗಿದೆ. ಅವರು ತಾಮ್ರದಂತೆ, ತವರದಂತೆ, ಕಬ್ಬಿಣದಂತೆ ಮತ್ತು ಸೀಸದಂತೆ ಮತ್ತು ಬೆಳ್ಳಿಯನ್ನು ಕುಲುಮೆಯಲ್ಲಿ ಕರಗಿಸಿ ಶುದ್ಧೀಕರಿಸಿದಾಗ ಉಳಿಯುವ ಕಂದುಬೆಳ್ಳಿಯಂತೆ ಇದ್ದಾರೆ. 19 ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ. ‘ನೀವೆಲ್ಲರೂ ಪ್ರಯೋಜನವಿಲ್ಲದ ಲೋಹವಾಗಿದ್ದೀರಿ. ಆದ್ದರಿಂದ ನಾನು ನಿಮ್ಮನ್ನು ಜೆರುಸಲೇಮಿನೊಳಗೆ ಒಟ್ಟುಗೂಡಿಸುತ್ತೇನೆ. 20 ಕೆಲಸಗಾರರು ಬೆಳ್ಳಿ, ತಾಮ್ರ, ಸೀಸ, ತವರ, ಕಬ್ಬಿಣ ಇವುಗಳನ್ನೆಲ್ಲಾ ಬೆಂಕಿಗೆ ಹಾಕುವರು. ಬೆಂಕಿಯನ್ನೂದಿ ಶಾಖ ಹೆಚ್ಚು ಮಾಡುವರು. ಆಗ ಲೋಹಗಳು ಕರಗಲು ಪ್ರಾರಂಭವಾಗುವವು. ಅದೇ ರೀತಿಯಲ್ಲಿ ನಾನು ನಿಮ್ಮನ್ನು ನನ್ನ ಬೆಂಕಿಯಲ್ಲಿ ಹಾಕಿ ಕರಗಿಸುವೆನು. ನನ್ನ ರೌದ್ರವೇ ಆ ಬೆಂಕಿ. 21 ನಾನು ನಿಮ್ಮನ್ನು ಆ ಬೆಂಕಿಯಲ್ಲಿ ಹಾಕುವೆನು. ನನ್ನ ರೌದ್ರವೆಂಬ ಬೆಂಕಿಯನ್ನು ಊದಿ ಶಾಖ ಹೆಚ್ಚಿಸುವೆನು. ಆಗ ನೀವು ಕರಗಲು ಪ್ರಾರಂಭಿಸುವಿರಿ. 22 ಬೆಳ್ಳಿಯು ಕುಲುಮೆಯಲ್ಲಿ ಕರಗಿಹೋಗುವಂತೆಯೇ ನೀವು ಪಟ್ಟಣದಲ್ಲಿ ಕರಗಿಹೋಗುವಿರಿ. ಯೆಹೋವನಾದ ನಾನೇ ನನ್ನ ಕೋಪವನ್ನು ನಿಮ್ಮ ಮೇಲೆ ಸುರಿದೆನೆಂದು ಆಗ ನೀವು ಅರ್ಥಮಾಡಿಕೊಳ್ಳುವಿರಿ.’”
ಜೆರುಸಲೇಮ್ ವಿರುದ್ಧ ಯೆಹೆಜ್ಕೇಲನ ಮಾತುಗಳು
23 ಯೆಹೋವನ ವಾಕ್ಯವು ನನಗೆ ಬಂದಿತು. ಆತನು, 24 “ನರಪುತ್ರನೇ, ಇದನ್ನು ಜೆರುಸಲೇಮಿಗೆ ಹೇಳು. ಮಳೆಯನ್ನೇ ಪಡೆದಿಲ್ಲದ ಭೂಮಿಯಂತೆ ಆಕೆ ಇದ್ದಾಳೆಂದು ಆಕೆಗೆ ತಿಳಿಸು. ನನ್ನ ಕೋಪದ ಸಮಯದಲ್ಲಿ ಆಕೆಯ ಮೇಲೆ ಮಳೆಯೇ ಸುರಿದಿಲ್ಲ. 25 ಜೆರುಸಲೇಮಿನ ಪ್ರವಾದಿಗಳು ತಾನು ಬೇಟೆಯಾಡಿ ಕೊಂದ ಪ್ರಾಣಿಯನ್ನು ತಿನ್ನುವ ಗರ್ಜಿಸುವ ಸಿಂಹದಂತಿದ್ದಾರೆ. ಆ ಪ್ರವಾದಿಗಳು ಅನೇಕ ಪ್ರಾಣಗಳನ್ನು ತೆಗೆದುಕೊಂಡಿದ್ದಾರೆ. ಅವರಿಂದ ಬೆಲೆಬಾಳುವ ವಸ್ತುಗಳನ್ನು ಕದ್ದುಕೊಂಡಿದ್ದಾರೆ. ಜೆರುಸಲೇಮಿನಲ್ಲಿ ಅನೇಕ ಸ್ತ್ರೀಯರು ವಿಧವೆಯರಾಗಲು ಅವರೇ ಕಾರಣರಾಗಿದ್ದಾರೆ.
26 “ಯಾಜಕರು ನನ್ನ ಉಪದೇಶವನ್ನು ನಿರಾಕರಿಸಿರುತ್ತಾರೆ; ಪರಿಶುದ್ಧ ವಸ್ತುಗಳನ್ನು ಸರಿಯಾಗಿ ಲಕ್ಷ್ಯ ಮಾಡುತ್ತಿಲ್ಲ; ಅವುಗಳಿಗೆ ಮಹತ್ವವನ್ನು ಕೊಡುತ್ತಿಲ್ಲ. ಅವರು ಪವಿತ್ರ ವಸ್ತುಗಳನ್ನು ಅಪವಿತ್ರ ವಸ್ತುಗಳಂತೆ ನೋಡುತ್ತಿದ್ದಾರೆ. ಯಾವುದು ಶುದ್ಧ, ಯಾವುದು ಅಶುದ್ಧ ಎಂಬುದರ ಬಗ್ಗೆ ಅವರು ಜನರಿಗೆ ಸರಿಯಾಗಿ ಉಪದೇಶಿಸುತ್ತಿಲ್ಲ. ನನ್ನ ವಿಶೇಷ ವಿಶ್ರಾಂತಿ ದಿವಸಗಳನ್ನು ಮಾನ್ಯ ಮಾಡುತ್ತಿಲ್ಲ. ನಾನು ಏನೂ ಅಲ್ಲವೆಂಬಂತೆ ನನ್ನನ್ನು ಅವರು ನೋಡುತ್ತಾರೆ.
27 “ಜೆರುಸಲೇಮಿನ ನಾಯಕರು ತಾನು ಹಿಡಿದ ಪ್ರಾಣಿಯನ್ನು ತಿನ್ನುವ ತೋಳಕ್ಕೆ ಸಮಾನರಾಗಿದ್ದಾರೆ. ಅವರು ಧನಿಕರಾಗುವದಕ್ಕಾಗಿ ಜನರನ್ನು ಹಿಡಿದು ಕೊಲ್ಲುವರು.
28 “ಪ್ರವಾದಿಗಳು ಜನರನ್ನು ಎಚ್ಚರಿಸುವದಿಲ್ಲ. ಸತ್ಯವನ್ನು ಮುಚ್ಚಿಡುತ್ತಾರೆ. ಒಂದು ಗೋಡೆಯನ್ನು ದುರಸ್ತಿ ಮಾಡದೆ ಅದರ ರಂಧ್ರಗಳನ್ನು ಗಾರೆಯಿಂದ ಮುಚ್ಚುವ ಕೆಲಸಗಾರರಂತಿದ್ದಾರೆ. ಅವರು ಸುಳ್ಳುದರ್ಶನಗಳನ್ನೆ ನೋಡುತ್ತಾರೆ. ತಮ್ಮ ಭವಿಷ್ಯದ ಬಗ್ಗೆ ಶಕುನದ ಮೂಲಕ ತಿಳಿದುಕೊಳ್ಳುವುದೆಲ್ಲ ಸುಳ್ಳಾಗಿರುತ್ತದೆ. ಅವರು, ‘ನನ್ನ ಒಡೆಯನಾದ ಯೆಹೋವನು ಹೇಳಿದನು’ ಎಂಬುದಾಗಿ ಸುಳ್ಳು ಹೇಳುವರು. ಆದರೆ ನಿಜವಾಗಿಯೂ ಯೆಹೋವನು ಅವರ ಕೂಡ ಮಾತನಾಡಲಿಲ್ಲ.
29 “ಸಾಮಾನ್ಯ ಜನರು ಮೋಸ ಮಾಡುತ್ತಾರೆ ಮತ್ತು ದರೋಡೆ ಮಾಡುತ್ತಾರೆ. ತಾವು ಧನಿಕರಾಗುವದಕ್ಕೆ ನಿಸ್ಸಹಾಯಕರಾದ ಭಿಕ್ಷೆಗಾರರನ್ನು ಸುಲುಕೊಳ್ಳುವರು. ಅವರು ಪರದೇಶಿಗಳಿಗೆ ಮೋಸಮಾಡಿ ಅವರಿಗೆ ಅನ್ಯಾಯ ಮಾಡುವರು.
30 “ನನ್ನ ಕೋಪದಿಂದ ದೇಶವು ನಾಶವಾಗದಂತೆ ಅದನ್ನು ರಕ್ಷಿಸಲು ಗೋಡೆಯನ್ನು ಸರಿಪಡಿಸುವುದಕ್ಕಾಗಿಯೂ ಗೋಡೆಯು ಒಡೆದುಹೋಗಿದ್ದ ಸ್ಥಳದಲ್ಲಿ ನಿಂತುಕೊಳ್ಳುವುದಕ್ಕಾಗಿ ಅವರಲ್ಲಿ ನಾನು ಒಬ್ಬನನ್ನು ಎದುರುನೋಡಿದೆ. ಆದರೆ ಯಾರೂ ನನಗೆ ಸಿಗಲಿಲ್ಲ. 31 ಅದಕ್ಕಾಗಿ ನಾನು ಅವರಿಗೆ ನನ್ನ ಕೋಪವನ್ನು ತೋರಿಸುವೆನು. ಅವರ ದುಷ್ಟತನಕ್ಕಾಗಿ ನಾನು ಅವರನ್ನು ಶಿಕ್ಷಿಸುವೆನು. ಅವರೇ ಅದಕ್ಕೆ ಜವಾಬ್ದಾರರು.” ಇವು ನನ್ನ ಒಡೆಯನಾದ ಯೆಹೋವನ ನುಡಿಗಳು.
23 ಯೆಹೋವನ ಮಾತುಗಳು ನನಗೆ ಬಂದವು. ಆತನು ಹೇಳಿದ್ದೇನೆಂದರೆ, 2 “ನರಪುತ್ರನೇ, ಸಮಾರ್ಯ ಮತ್ತು ಜೆರುಸಲೇಮಿನ ಈ ಕಥೆಯನ್ನು ಕೇಳು. ಇಬ್ಬರು ಅಕ್ಕತಂಗಿಯರು ಇದ್ದರು. ಅವರು ಒಂದೇ ತಾಯಿಯ ಮಕ್ಕಳಾಗಿದ್ದರು. 3 ಅವರು ಈಜಿಪ್ಟಿನಲ್ಲಿ ಇನ್ನೂ ಎಳೆ ಪ್ರಾಯದಲ್ಲಿರುವಾಗಲೇ ಸೂಳೆಯರಾದರು. ಈಜಿಪ್ಟಿನಲ್ಲಿ ಅವರು ಮೊದಲ ಬಾರಿ ಸಂಭೋಗಿಸಿದರು. ಪುರುಷರು ತಮ್ಮ ಮೊಲೆತೊಟ್ಟುಗಳನ್ನು ಮುಟ್ಟಿ ಅವರ ಎಳೆಸ್ತನಗಳನ್ನು ಹಿಡಿಯಲು ಬಿಟ್ಟರು. 4 ಹಿರಿಯ ಅಕ್ಕನ ಹೆಸರು ಒಹೊಲ. ತಂಗಿಯ ಹೆಸರು ಒಹೊಲೀಬ. ಅವರಿಬ್ಬರೂ ನನ್ನ ಹೆಂಡತಿಯರಾದರು. ಅವರು ಗಂಡುಮಕ್ಕಳನ್ನು ಮತ್ತು ಹೆಣ್ಣುಮಕ್ಕಳನ್ನು ಹೆತ್ತರು. ಒಹೊಲ ಎಂದರೆ ಸಮಾರ್ಯ; ಮತ್ತು ಒಹೊಲೀಬ ಎಂದರೆ ಜೆರುಸಲೇಮ್.
5 “ಒಹೊಲಳು ನನಗೆ ಅಪನಂಬಿಗಸ್ತಳಾದಳು. ಆಕೆ ಸೂಳೆಯಂತೆ ಜೀವಿಸತೊಡಗಿದಳು. ಆಕೆ ಪುರುಷರಿಗಾಗಿ ಆಸೆಪಟ್ಟಳು. 6 ನೀಲಿ ಸಮವಸ್ತ್ರ ಧರಿಸಿದ್ಧ ಅಶ್ಶೂರದ ಸೈನಿಕರನ್ನು ನೋಡಿದಳು. ಅವರೆಲ್ಲಾ ಕುದುರೆ ಸವಾರಿ ಮಾಡುವ ಸುಂದರವಾದ ಯುವಕರು. ಅವರೆಲ್ಲಾ ನಾಯಕರೂ ಅಧಿಕಾರಿಗಳೂ ಆಗಿದ್ದರು. 7 ಒಹೊಲಳು ಅವರೊಂದಿಗೆ ರಮಿಸತೊಡಗಿದಳು. ಅವರೆಲ್ಲರೂ ಅಶ್ಶೂರರ ಸೈನ್ಯದಿಂದ ಆರಿಸಿ ತೆಗೆದವರಾಗಿದ್ದರು. ಆಕೆಗೆ ಅವರೆಲ್ಲರ ಜೊತೆಯಲ್ಲೂ ಮಲಗಬೇಕಿತ್ತು. ಅವರ ಹೊಲಸು ವಿಗ್ರಹಗಳಿಂದ ಹೊಲಸಾದಳು. 8 ಇದರ ಜೊತೆಯಲ್ಲಿಯೇ ಈಜಿಪ್ಟಿನೊಂದಿಗೆ ತನ್ನ ಪ್ರಣಯ ಸಂಬಂಧವನ್ನು ಮುಂದುವರಿಸುತ್ತಿದ್ದಳು. ಆಕೆಯು ಇನ್ನೂ ಎಳೆಯ ಹುಡುಗಿಯಾಗಿದ್ದಾಗಲೇ ಈಜಿಪ್ಟ್ ಆಕೆಯೊಂದಿಗೆ ಸಂಭೋಗ ಮಾಡಿತ್ತು. ಅವಳ ಎಳೆ ಸ್ತನಗಳನ್ನು ಹಿಸುಕಿದವರಲ್ಲಿ ಮೊದಲನೆಯವರು ಈಜಿಪ್ಟಿನವರೇ. ಈಜಿಪ್ಟ್ ತನ್ನ ಅನೈತಿಕ ಪ್ರೀತಿಯನ್ನು ಆಕೆಯ ಮೇಲೆ ಸುರಿಯಿತು. 9 ಆಕೆಯ ಪ್ರಿಯತಮರಿಗೆ ನಾನು ಆಕೆಯನ್ನು ಬಿಟ್ಟುಕೊಟ್ಟೆನು. ಆಕೆಗೆ ಅಶ್ಶೂರದವರು ಬೇಕಾಯಿತು. ನಾನು ಆಕೆಯನ್ನು ಅವರಿಗೆ ಬಿಟ್ಟುಕೊಟ್ಟೆನು. 10 ಅವರು ಬಲವಂತದಿಂದ ಆಕೆಯನ್ನು ಸಂಭೋಗಿಸಿದರು. ಆಕೆಯ ಮಕ್ಕಳನ್ನು ತೆಗೆದುಕೊಂಡರು. ಖಡ್ಗವನ್ನು ತೆಗೆದುಕೊಂಡು ಆಕೆಯನ್ನು ಕೊಂದುಹಾಕಿದರು. ಆಕೆಯನ್ನು ಶಿಕ್ಷಿಸಿದರು. ಸ್ತ್ರೀಯರು ಈಗಲೂ ಆಕೆಯ ವಿಷಯ ಮಾತನಾಡುತ್ತಿದ್ದಾರೆ.
11 “ಆಕೆಯ ತಂಗಿಯಾದ ಒಹೊಲೀಬಳು ಆಕೆಗಾದದ್ದನ್ನೆಲ್ಲಾ ನೋಡಿದ್ದಳು. ಆದರೆ ಒಹೊಲೀಬಳು ಅಕ್ಕನಿಗಿಂತ ಹೆಚ್ಚು ಪಾಪ ಮಾಡಿದಳು. ಆಕೆ ಒಹೊಲಳಿಗಿಂತ ಹೆಚ್ಚು ಅಪನಂಬಿಗಸ್ತಿಕೆಯುಳ್ಳವಳಾಗಿದ್ದಳು. 12 ಆಕೆಗೆ ಅಶ್ಶೂರದ ಅಧಿಕಾರಿಗಳೂ ನಾಯಕರುಗಳೂ ಬೇಕಾಗಿದ್ದರು. ಆಕೆಗೆ ನೀಲ ಸಮವಸ್ತ್ರ ಧರಿಸಿ ಕುದುರೆಸವಾರಿ ಮಾಡುವ ಸೈನಿಕರು ಬೇಕಾಗಿದ್ದರು. ಅವರೆಲ್ಲಾ ಮನೋಹರವಾದ ಯುವಕರು. 13 ಆಕೆಯು ತನ್ನನ್ನು ಹೊಲಸು ಮಾಡಿಕೊಂಡಿರುವುದನ್ನು ನಾನು ನೋಡಿದೆನು. ಆ ಸ್ತ್ರೀಯರಿಬ್ಬರೂ (ನಾಶನದ) ಒಂದೇ ಮಾರ್ಗವನ್ನು ಅನುಸರಿಸುತ್ತಿದ್ದರು.
14 “ಒಹೊಲೀಬಳು ನನಗೆ ಅಪನಂಬಿಗಸ್ತಳಾಗಿ ಮುಂದುವರಿದಳು. ಗೋಡೆಯ ಮೇಲೆ ಕೆತ್ತಲ್ಪಟ್ಟಿದ್ದ ಗಂಡಸರ ಚಿತ್ರಗಳನ್ನು ಆಕೆ ನೋಡಿದಳು. ಅವು ಕೆಂಪು ಸಮವಸ್ತ್ರ ಧರಿಸಿದ್ದ ಕಸ್ದೀಯ ಸೈನಿಕರ ಚಿತ್ರಗಳು. 15 ಅವರು ಸೊಂಟಕ್ಕೆ ಪಟ್ಟಿಯನ್ನು ಬಿಗಿದು, ಉದ್ದ ಮುಂಡಾಸವನ್ನು ಧರಿಸಿದ್ದರು. ಅವರೆಲ್ಲರೂ ಅಧಿಕಾರಿಗಳಂತೆ ಕಾಣುತ್ತಿದ್ದರು. ಅವರೆಲ್ಲರೂ ಬಾಬಿಲೋನಿನಲ್ಲಿಯೇ ಹುಟ್ಟಿ ಬೆಳೆದವರಾಗಿದ್ದರು. 16 ಒಹೊಲೀಬಳು ಅವರನ್ನು ಕಂಡಕೂಡಲೇ ಅವರಿಗಾಗಿ ಆಸೆಪಟ್ಟು ಬಾಬಿಲೋನಿನಲ್ಲಿದ್ದ ಅವರ ಬಳಿಗೆ ಸಂದೇಶಕರನ್ನು ಕಳುಹಿಸಿದಳು. 17 ಆಗ ಆ ಬಾಬಿಲೋನಿನವರು ಬಂದು ಆಕೆಯ ರತಿಮಂಚವನ್ನೆರೀ ಆಕೆಯನ್ನು ಸಂಗಮಿಸಿದರು. ಆಕೆಯನ್ನು ಚೆನ್ನಾಗಿ ಅನುಭೋಗಿಸಿ ಮಲಿನವನ್ನಾಗಿ ಮಾಡಿದರು. ಆದ್ದರಿಂದ ಆಕೆಗೆ ಅವರು ಅಸಹ್ಯವೆನಿಸಿತು.
18 “ತಾನು ಅಪನಂಬಿಗಸ್ತಳೆಂದು ಎಲ್ಲರೂ ತನ್ನನ್ನು ಗುರುತಿಸುವಂತೆ ಒಹೊಲೀಬಳು ಮಾಡಿದಳು. ಆಕೆಯು ತನ್ನ ನಗ್ನ ಶರೀರವನ್ನು ತೋರಿಸಿದಳು. ಆದ್ದರಿಂದ ಅವಳ ಅಕ್ಕ ನನಗೆ ಹೇಗೆ ಅಸಹ್ಯವಾದಳೋ ಅದೇ ರೀತಿ ಈಕೆಯೂ ನನಗೆ ಅಸಹ್ಯವಾದಳು. ನನಗೆ ಆಕೆಯ ಅಕ್ಕನ ಮೇಲಿದ್ದ ಅನುರಾಗ ಹೇಗೆ ತೊಲಗಿಹೋಯಿತೋ ಹಾಗೆಯೇ ಈಕೆಯ ಮೇಲಿನ ಅನುರಾಗವೂ ತೊಲಗಿಹೋಯಿತು. 19 ಮತ್ತೆಮತ್ತೆ ಒಹೊಲೀಬಳು ನನಗೆ ಅಪನಂಬಿಗಸ್ತಳಾದಳು. ಆಕೆಯು ಯುವತಿಯಾಗಿದ್ದಾಗ ಈಜಿಪ್ಟಿನಲ್ಲಿ ತಾನು ಮಾಡಿಕೊಂಡಿದ್ದ ಅನೈತಿಕ ಸಂಬಂಧಗಳನ್ನು ನೆನಪುಮಾಡಿಕೊಂಡಳು. 20 ಕತ್ತೆಗಳ ಲಿಂಗಗಳಂತಿದ್ದ ಲೈಂಗಿಕ ಲಿಂಗಗಳನ್ನು ಹೊಂದಿದ್ದ ಈಜಿಪ್ಟಿನ ಪ್ರಿಯರನ್ನು ಮತ್ತು ಕುದುರೆಯ ವೀರ್ಯದಂತೆ ಹರಿಯುವ ಅವರ ವೀರ್ಯವನ್ನು ಆಕೆ ನೆನಪುಮಾಡಿಕೊಂಡಳು.
21 “ಒಹೊಲೀಬಳೇ, ನಿನ್ನ ಯೌವನ ಕಾಲದಲ್ಲಿ ನೀನು ಅನುಭೋಗಿಸಿದ್ದನ್ನು ಕನಸು ಕಾಣುತ್ತಿ, ನಿನ್ನ ಈಜಿಪ್ಟಿನ ಪ್ರಿಯತಮರು ನಿನ್ನ ಸ್ತನದ ತೊಟ್ಟುಗಳನ್ನು ಮುಟ್ಟಿ ನಿನ್ನ ಎಳೆ ಸ್ತನಗಳನ್ನು ಹಿಸುಕಿದ್ದನ್ನು ನೀನು ಜ್ಞಾಪಕಕ್ಕೆ ತಂದುಕೊಳ್ಳುತ್ತಿರುವೆ. 22 ಆದ್ದರಿಂದ ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ, ‘ಓಹೊಲೀಬಳೇ, ನಿನ್ನ ಪ್ರಿಯತಮರಲ್ಲಿ ಕೆಲವರು ನಿನಗೆ ಅಸಹ್ಯವಾಗಿದ್ದಾರೆ. ಆದರೆ ನಾನು ಆ ಪ್ರಿಯತಮರನ್ನು ಇಲ್ಲಿಗೆ ಕರೆದುಕೊಂಡು ಬರುವೆ. ಅವರು ನಿನ್ನನ್ನು ಸುತ್ತುವರಿಯುವರು. 23 ನಾನು ಬಾಬಿಲೋನಿನ ಕಸ್ದೀಯ ಪುರುಷರನ್ನು ಬರಮಾಡುವೆನು. ನಾನು ಪೆಕೋದ್, ಷೋಯ ಮತ್ತು ಕೋಯ ಇಲ್ಲಿಂದಲೂ, ಅಶ್ಶೂರದ ಯೌವನಸ್ಥರನ್ನು ಬರಮಾಡುವೆನು. ಅಲ್ಲಿಯ ಎಲ್ಲಾ ಅಧಿಕಾರಿಗಳನ್ನೂ ನಾಯಕರನ್ನೂ ಬರಮಾಡುವೆನು. ಅವರೆಲ್ಲರೂ ಸುಂದರವಾದ ಯುವಕರು, ಅಧಿಕಾರಿಗಳು, ಆರಿಸಲ್ಪಟ್ಟ ಯೋಧರು ಮತ್ತು ಅಶ್ವರೂಢರು ಆಗಿರುವರು. 24 ಅವರು ನಿನ್ನ ವಿರುದ್ಧವಾಗಿ ರಥಗಳಲ್ಲಿಯೂ ಅರಸರೂಢರಾಗಿಯೂ ಅಂತರಾಷ್ಟ್ರೀಯ ಸೈನ್ಯವಾಗಿ ಬರುವರು. ಅವರ ಕೈಯಲ್ಲಿ ಬರ್ಜಿ, ಗುರಾಣಿ, ಶಿರಸ್ತ್ರಾಣಗಳಿರುವವು. ಅವರು ನಿನ್ನನ್ನು ಸುತ್ತುವರಿಯುವರು. ನೀನು ನನಗೆ ಏನು ಮಾಡಿದ್ದೀ ಎಂದು ನಾನು ಹೇಳಿದಾಗ ಅವರು ತಮ್ಮ ಇಷ್ಟಪ್ರಕಾರ ನಿನ್ನನ್ನು ಶಿಕ್ಷಿಸುವರು. 25 ನಾನು ನಿನ್ನ ವಿರುದ್ಧವಾಗಿ ನನ್ನ ಈರ್ಷೆಯ ಕೋಪವನ್ನು ನಿನ್ನ ಮೇಲೆ ಸುರಿಸುವೆನು. ಅವರಿಗೆ ಸಿಟ್ಟು ಬಂದು ನಿನ್ನನ್ನು ಹಿಂಸಿಸುವರು. ನಿನ್ನ ಕಿವಿ ಮೂಗುಗಳನ್ನು ಕತ್ತರಿಸಿಹಾಕುವರು. ತಮ್ಮ ಖಡ್ಗದಿಂದ ನಿನ್ನನ್ನು ಸಂಹರಿಸುವರು. ಆಮೇಲೆ ನಿನ್ನ ಮಕ್ಕಳನ್ನು ತೆಗೆದುಕೊಳ್ಳುವರು ಮತ್ತು ನಿನ್ನಲ್ಲಿ ಉಳಿದಿರುವುದನ್ನೆಲ್ಲ ಸುಟ್ಟುಹಾಕುವರು. 26 ನಿನ್ನಲ್ಲಿರುವ ಉತ್ಕೃಷ್ಟವಾದ ಬಟ್ಟೆ, ಆಭರಣಗಳನ್ನೆಲ್ಲಾ ಸುಲುಕೊಳ್ಳುವರು. 27 ಬಳಿಕ, ಈಜಿಪ್ಟ್ ದೇಶದಲ್ಲಿ ಆರಂಭವಾದ ನಿನ್ನ ನೀಚತನಕ್ಕೆ ಮತ್ತು ಅನೈತಿಕ ಜೀವಿತಕ್ಕೆ ತಡೆಹಾಕುವೆನು. ನೀನು ನಿನ್ನ ಕಣ್ಣುಗಳನ್ನು ಅವರ ಕಡೆಗೆ ಇನ್ನೆಂದಿಗೂ ತಿರುಗಿಸುವದಿಲ್ಲ. ನೀನು ಅವರನ್ನು ಜ್ಞಾಪಿಸಿಕೊಳ್ಳುವುದಿಲ್ಲ.’”
28 ನನ್ನ ಒಡೆಯನಾದ ಯೆಹೋವನು ಇದನ್ನು ಹೇಳುತ್ತಾನೆ. “ನೀನು ದ್ವೇಷಿಸುವ ಜನರ ಕೈಗೆ ನಿನ್ನನ್ನು ಒಪ್ಪಿಸುವೆನು. ನೀನು ಜಿಗುಪ್ಸೆಗೊಂಡ ಜನರಿಗೆ ನಿನ್ನನ್ನು ಒಪ್ಪಿಸುವೆನು. 29 ಆಗ ಅವರು ನಿನ್ನನ್ನು ಎಷ್ಟು ದ್ವೇಷಿಸುವರೆಂದು ನಿನಗೆ ತೋರಿಸುವರು. ನೀನು ದುಡಿದವುಗಳನ್ನೆಲ್ಲ ಅವರು ಕಿತ್ತುಕೊಳ್ಳುವರು. ನಿನ್ನನ್ನು ಬೆತ್ತಲೆಮಾಡಿ ಬಿಟ್ಟುಬಿಡುವರು. ಜನರು ನಿನ್ನ ಪಾಪಗಳನ್ನು ಪರಿಪೂರ್ಣವಾಗಿ ನೋಡುವರು. ನೀನು ಸೂಳೆಯಂತೆ ವರ್ತಿಸಿದ್ದನ್ನು ಅವರು ನೋಡುವರು. ನಿನ್ನ ನೀಚತನವೂ ನಿನ್ನ ಸೂಳೆತನವೂ 30 ನಿನ್ನ ಮೇಲೆ ಇವುಗಳನ್ನು ಬರಮಾಡಿದವು; ಯಾಕೆಂದರೆ ನೀನು ನನ್ನನ್ನು ತೊರೆದು ಜನಾಂಗಗಳನ್ನು ಹಿಂಬಾಲಿಸಿದೆ ಮತ್ತು ಅವರ ಕೊಳಕು ವಿಗ್ರಹಗಳಿಂದ ನಿನ್ನನ್ನು ಕೆಡಿಸಿಕೊಂಡೆ. 31 ನೀನು ನಿನ್ನ ಅಕ್ಕನನ್ನು ಅನುಸರಿಸಿ ಆಕೆಯಂತೆ ಜೀವಿಸಿದೆ. ಆದ್ದರಿಂದ ಆಕೆಯ ದಂಡನೆಯ ಲೋಟವನ್ನು ನಾನು ನಿನ್ನ ಕೈಯಲ್ಲಿ ಇಡುತ್ತೇನೆ. 32 ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ:
“ನೀನು ನಿನ್ನ ಅಕ್ಕನ ಲೋಟದಿಂದ ಕುಡಿಯುವೆ.
ಆ ಲೋಟವು ಆಳವಾಗಿಯೂ ಅಗಲವಾಗಿಯೂ ಇದ್ದು ಪೂರ್ತಿ ತುಂಬಿದೆ (ಶಿಕ್ಷೆ).
ಜನರು ನಿನ್ನನ್ನು ನೋಡಿ ನಗಾಡುವರು.
ನಿನ್ನನ್ನು ಕಂಡು ಹಾಸ್ಯ ಮಾಡುವರು.
33 ನೀನು ಅಮಲೇರಿದವಳ ಹಾಗೆ ತೂರಾಡುವೆ.
ನೀನು ಕುಗ್ಗಿಹೋಗುವೆ.
ಆ ಲೋಟವು ನಾಶನದ ಮತ್ತು ಹಾಳುಮಾಡುವ ಲೋಟ.
ನಿನ್ನ ಅಕ್ಕ ಕುಡಿದ ಪಾತ್ರೆಯಂತಿರುವದು.
34 ನೀನು ಆ ಲೋಟದಿಂದ ಕುಡಿಯುವೆ.
ಕಡೆಯ ತೊಟ್ಟಿನವರೆಗೂ ನೀನು ಕುಡಿಯುವೆ.
ನೀನು ಆ ಲೋಟವನ್ನು ಒಡೆದುಹಾಕುವೆ.
ನಿನ್ನ ಸ್ತನಗಳನ್ನು ಬಗಿದುಕೊಳ್ಳುವೆ.
ಒಡೆಯನೂ ಯೆಹೋವನೂ ಆದ ನಾನು
ಇದನ್ನು ಹೇಳುವದರಿಂದ ಇದು ನಡೆಯುವುದು.
35 “ನನ್ನ ಒಡೆಯನಾದ ಯೆಹೋವನು ಹೀಗೆ ಹೇಳಿದನು: ‘ಜೆರುಸಲೇಮೇ, ನೀನು ನನ್ನನ್ನು ಮರೆತುಬಿಟ್ಟೆ. ನೀನು ನನ್ನನ್ನು ತೊರೆದುಬಿಟ್ಟೆ; ಆದ್ದರಿಂದ ನೀನು ನನ್ನನ್ನು ತೊರೆದ ಸೂಳೆಯಂತೆ ಜೀವಿಸಿದ್ದಕ್ಕೆ ಶಿಕ್ಷೆ ಅನುಭವಿಸಬೇಕು. ನಿನ್ನ ನೀಚ ನಡತೆಗಾಗಿ ನೀನು ಕಷ್ಟ ಅನುಭವಿಸಬೇಕು.’”
ಒಹೊಲ ಮತ್ತು ಒಹೊಲೀಬಳ ವಿರುದ್ಧ ನ್ಯಾಯತೀರ್ಪು
36 ನನ್ನ ಒಡೆಯನಾದ ಯೆಹೋವನು ನನಗೆ ಹೀಗೆ ಹೇಳಿದನು, “ನರಪುತ್ರನೇ, ನೀನು ಒಹೊಲ ಮತ್ತು ಒಹೊಲೀಬಳನ್ನು ನ್ಯಾಯವಿಚಾರಣೆ ಮಾಡುವಿಯೋ? ಆಗ ನೀನು, ಗಾಬರಿಗೊಳಿಸುವ ಅವರ ದುಷ್ಟತನವನ್ನು ಅವರಿಗೆ ತಿಳಿಸು. 37 ಅವರು ವ್ಯಭಿಚಾರ ಮಾಡಿದ್ದಾರೆ. ಅವರು ಕೊಲೆ ಮಾಡಿರುತ್ತಾರೆ. ಅವರು ಸೂಳೆಯಂತೆ ವರ್ತಿಸಿದ್ದಾರೆ. ಅವರು ತಮ್ಮ ಹೊಲಸು ವಿಗ್ರಹಗಳೊಂದಿಗೆ ಇರಲು ನನ್ನನ್ನು ತೊರೆದುಬಿಟ್ಟಿದ್ದಾರೆ. ಅವರಲ್ಲಿ ನನ್ನ ಮಕ್ಕಳು ಇದ್ದಾರೆ. ಆದರೆ ಅವರನ್ನು ಬಲವಂತದಿಂದ ಬೆಂಕಿಯ ಮೇಲೆ ದಾಟಿಸಿದರು. ತಮ್ಮ ಹೊಲಸು ವಿಗ್ರಹಗಳಿಗೆ ಆಹಾರ ಕೊಡುವಂತೆ ಅವರು ಹಾಗೆ ಮಾಡಿದರು. 38 ಅಲ್ಲದೆ ನನ್ನ ಪವಿತ್ರ ಆಲಯವನ್ನೂ ನನ್ನ ಪವಿತ್ರವಾದ ವಿಶೇಷ ವಿಶ್ರಾಂತಿ ದಿವಸಗಳನ್ನೂ ಆಲಕ್ಷ್ಯ ಮಾಡಿ ಅದಕ್ಕೆ ಮಹತ್ವವನ್ನು ಕೊಡದೆ ಹೋದರು. 39 ಅವರ ವಿಗ್ರಹಗಳಿಗೋಸ್ಕರ ತಮ್ಮ ಮಕ್ಕಳನ್ನು ಕೊಂದರು. ಅನಂತರ ಅದೇ ದಿನದಲ್ಲೇ ನನ್ನ ಪವಿತ್ರ ಆಲಯದೊಳಕ್ಕೆ ಹೋಗಿ ಅದನ್ನು ಹೊಲೆ ಮಾಡಿದರು. ನನ್ನ ಆಲಯದೊಳಗೆ ಅವರು ಹಾಗೆ ಮಾಡಿದರು.
40 “ಅವರು ದೂರ ಪ್ರಾಂತ್ಯಗಳಿಂದ ಪುರುಷರನ್ನು ಕರಿಸಿದರು. ಅವರಿಗೆ ನೀನು ಸಂದೇಶ ಕಳುಹಿಸಿದೆ. ಅವರು ನಿನ್ನನ್ನು ನೋಡಲು ಬಂದರು. ಅವರಿಗಾಗಿ ನೀನು ಸ್ನಾನ ಮಾಡಿ, ನಿನ್ನ ಕಣ್ಣುಗಳಿಗೆ ಕಾಡಿಗೆ ಹಚ್ಚಿ, ನಿನ್ನ ಆಭರಣಗಳನ್ನು ಧರಿಸಿಕೊಂಡೆ. 41 ನೀನು ಅಮೋಘವಾದ ಮಂಚದಲ್ಲಿ ಕುಳಿತುಕೊಂಡೆ. ಅದರ ಮುಂದೆ ಸಿದ್ಧಪಡಿಸಲ್ಪಟ್ಟಿದ್ದ ಮೇಜಿತ್ತು. ಆ ಮೇಜಿನ ಮೇಲೆ ನನ್ನ ಧೂಪ ಮತ್ತು ಎಣ್ಣೆಯನ್ನು ಇಟ್ಟಿರುವೆ.
42 “ನಿಶ್ಚಿಂತೆಯುಳ್ಳ ಗುಂಪಿನ ಆನಂದಪೂರ್ಣವಾದ ಗದ್ದಲವು ಆಕೆಯ ಸುತ್ತಲೂ ಇತ್ತು. ಔತಣಕ್ಕೆ ಅನೇಕರು ಬಂದರು. ಮರುಭೂಮಿಯ ಕಡೆಯಿಂದ ಜನರು ಬರುತ್ತಿರುವಾಗಲೇ ಅಮಲೇರಿಕೊಂಡು ಬಂದರು. ಅವರು ಬಳೆಗಳನ್ನು, ಸುಂದರವಾದ ಕಿರೀಟಗಳನ್ನು ಹೆಂಗಸರಿಗೆ ಕೊಟ್ಟರು. 43 ಆಗ ನಾನು ಅನೈತಿಕ ಜೀವಿತದಲ್ಲಿ ಬತ್ತಿಹೋದ ಒಬ್ಬ ಹೆಂಗಸಿನ ಬಗ್ಗೆ, (ನನ್ನೊಳಗೆ) ‘ಈಗಲೂ ಸಹ ಅವರು ಆಕೆಯೊಂದಿಗೆ ಲೈಂಗಿಕ ಪಾಪ ಮಾಡುವರೇ?’ ಎಂದುಕೊಂಡೆನು. 44 ಆದರೆ ಅವರು ಒಬ್ಬ ವೇಶ್ಯೆಯ ಬಳಿಗೆ ಹೋಗುವಂತೆಯೇ ಅವರ ಬಳಿಗೆ ಹೋದರು. ಹೌದು ಒಹೊಲ ಮತ್ತು ಒಹೊಲೀಬ ಎಂಬ ಕಾಮುಕ ಸ್ತ್ರೀಯರ ಬಳಿಗೆ ಅವರು ತಿರುಗಿ ಮತ್ತೆಮತ್ತೆ ಹೋದರು.
45 “ನೀತಿವಂತರು ಅವರನ್ನು ವ್ಯಭಿಚಾರ ಮಾಡಿದ ಮತ್ತು ಕೊಲೆ ಮಾಡಿದ ಅಪರಾಧಿಗಳೆಂದು ತೀರ್ಪು ನೀಡುವರು. ಯಾಕೆಂದರೆ, ಒಹೊಲ ಮತ್ತು ಒಹೊಲೀಬಳ ವ್ಯಭಿಚಾರವನ್ನು ಆಚರಣೆ ಮಾಡುತ್ತಾರೆ ಮತ್ತು ರಕ್ತವು ಅವರ ಕೈಗಳ ಮೇಲಿದೆ.”
46 ನನ್ನ ಒಡೆಯನಾದ ಯೆಹೋವನು ನನಗೆ ಹೀಗೆ ಹೇಳಿದನು, “ಜನರನ್ನು ಒಟ್ಟುಗೂಡಿಸು. ಅವರು ಒಟ್ಟಾಗಿ ಸೇರಿ ಒಹೊಲ ಮತ್ತು ಒಹೊಲೀಬರನ್ನು ಶಿಕ್ಷಿಸಲಿ. ಆ ಜನರು ಈ ಸ್ತ್ರೀಯರನ್ನು ಶಿಕ್ಷಿಸಿ ಗೇಲಿ ಮಾಡುವರು. 47 ಆ ಬಳಿಕ ಜನರ ಗುಂಪು ಅವರ ಮೇಲೆ ಕಲ್ಲೆಸೆದು ಅವರನ್ನು ಕೊಲ್ಲುವುದು. ಆಮೇಲೆ ತಮ್ಮ ಖಡ್ಗಗಳಿಂದ ಅವರನ್ನು ತುಂಡುತುಂಡು ಮಾಡುವರು. ಅವರ ಮಕ್ಕಳನ್ನು ಕೊಂದು ಅವರ ಮನೆಗಳನ್ನು ಸುಟ್ಟುಹಾಕುವರು. 48 ಈ ರೀತಿ, ನಾನು ಅವರ ಅವಮಾನಕರವಾದ ನಡತೆಯನ್ನು ದೇಶದಿಂದ ತೆಗೆದುಹಾಕುವೆನು. ಬೇರೆ ಸ್ತ್ರೀಯರು ಇಂಥಾ ನಾಚಿಕೆಗೆಟ್ಟ ಕೆಲಸ ಮಾಡಬಾರದೆಂದು ಎಚ್ಚರಿಸುವರು. 49 ನಿನ್ನ ನಾಚಿಕೆಕರವಾದ ಕಾರ್ಯಗಳಿಗಾಗಿ ಅವರು ನಿನ್ನನ್ನು ಶಿಕ್ಷಿಸುವರು. ನೀನು ಅಸಹ್ಯವಾದ ವಿಗ್ರಹಗಳನ್ನು ಪೂಜೆಮಾಡಿದ್ದಕ್ಕೆ ಶಿಕ್ಷಿಸಲ್ಪಡುವಿ. ಆಗ ನಾನೇ ಒಡೆಯನೂ ಯೆಹೋವನೂ ಎಂದು ನೀನು ತಿಳಿಯುವಿ.”
Kannada Holy Bible: Easy-to-Read Version. All rights reserved. © 1997 Bible League International