Print Page Options
Previous Prev Day Next DayNext

Chronological

Read the Bible in the chronological order in which its stories and events occurred.
Duration: 365 days
Kannada Holy Bible: Easy-to-Read Version (KERV)
Version
2 ರಾಜರುಗಳು 24-25

ರಾಜನಾದ ನೆಬೂಕದ್ನೆಚ್ಚರನು ಯೆಹೂದಕ್ಕೆ ಬರುವನು

24 ಯೆಹೋಯಾಕೀಮನ ಕಾಲದಲ್ಲಿ ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನು ಯೆಹೂದ ದೇಶಕ್ಕೆ ಬಂದನು. ಯೆಹೋಯಾಕೀಮನು ಮೂರು ವರ್ಷಗಳವರೆಗೆ ನೆಬೂಕದ್ನೆಚ್ಚರನ ಸೇವೆಮಾಡಿದನು. ನಂತರ ಯೆಹೋಯಾಕೀಮನು ನೆಬೂಕದ್ನೆಚ್ಚರನಿಗೆ ವಿರುದ್ಧವಾಗಿ ದಂಗೆ ಎದ್ದು ಅವನ ಆಳ್ವಿಕೆಯಿಂದ ದೂರವಾದನು. ಯೆಹೋವನು ಬಾಬಿಲೋನಿನವರನ್ನು, ಅರಾಮ್ಯರನ್ನು, ಮೋವಾಬ್ಯರನ್ನು ಮತ್ತು ಅಮ್ಮೋನಿಯರನ್ನು ಯೆಹೋಯಾಕೀಮನ ವಿರುದ್ಧ ಹೋರಾಡಲು ಕಳುಹಿಸಿದನು. ಯೆಹೋವನು ಯೆಹೂದವನ್ನು ನಾಶಗೊಳಿಸಲು ಈ ಗುಂಪುಗಳನ್ನು ಕಳುಹಿಸಿದನು. ಯೆಹೋವನು ತನ್ನ ಸೇವಕರಾದ ಪ್ರವಾದಿಗಳ ಮೂಲಕ ತಿಳಿಸಿದ್ದಂತೆಯೇ ಇದು ಸಂಭವಿಸಿತು.

ಆತನು ಯೆಹೂದ್ಯರನ್ನು ತನ್ನ ಸನ್ನಿಧಿಯಿಂದ ತೆಗೆದುಹಾಕಬೇಕೆಂದಿದ್ದ ಕಾರಣ ಆತನ ಆಜ್ಞೆಯ ಪ್ರಕಾರ ಈ ಶಿಕ್ಷೆಯು ಅವರಿಗಾಯಿತು. ಜೆರುಸಲೇಮನ್ನು ನಿರಪರಾಧದ ರಕ್ತದಿಂದ ತುಂಬಿಸಿದ ಮನಸ್ಸೆಯ ದುಷ್ಕೃತ್ಯಗಳನ್ನು ಯೆಹೋವನು ಕ್ಷಮಿಸಲಿಲ್ಲ.

“ಯೆಹೂದದ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಯೆಹೋಯಾಕೀಮನು ಮಾಡಿದ ಇತರ ಕಾರ್ಯಗಳನ್ನು ಬರೆಯಲಾಗಿದೆ. ಯೆಹೋಯಾಕೀಮನು ತೀರಿಕೊಂಡಾಗ ಅವನನ್ನು ಅವನ ಪೂರ್ವಿಕರ ಜೊತೆಯಲ್ಲಿ ಸಮಾಧಿಮಾಡಿದರು. ಯೆಹೋಯಾಕೀಮನ ಮಗನಾದ ಯೆಹೋಯಾಖೀನನು ಅವನ ನಂತರ ಹೊಸ ರಾಜನಾದನು.

ಈಜಿಪ್ಟಿನ ರಾಜನು ಈಜಿಪ್ಟನ್ನು ಬಿಟ್ಟು ಹೊರಗೆ ಹೋಗಲಿಲ್ಲ. ಏಕೆಂದರೆ ಬಾಬಿಲೋನ್ ರಾಜನು, ಈಜಿಪ್ಟಿನ ಹಳ್ಳದಿಂದ ಯೂಫ್ರೇಟೀಸ್ ನದಿಯವರೆಗಿನ ದೇಶವನ್ನೆಲ್ಲಾ ಆಕ್ರಮಿಸಿಕೊಂಡಿದ್ದನು.

ನೆಬೂಕದ್ನೆಚ್ಚರನು ಜೆರುಸಲೇಮನ್ನು ಆಕ್ರಮಿಸಿಕೊಂಡನು

ಯೆಹೋಯಾಖೀನನು ಆಳಲಾರಂಭಿಸಿದಾಗ ಅವನಿಗೆ ಹದಿನೆಂಟು ವರ್ಷ ವಯಸ್ಸಾಗಿತ್ತು. ಅವನು ಜೆರುಸಲೇಮಿನಲ್ಲಿ ಮೂರು ತಿಂಗಳ ಕಾಲ ಆಳಿದನು. ಅವನ ತಾಯಿಯು ಜೆರುಸಲೇಮಿನ ಎಲ್ನಾತಾನನ ಮಗಳಾದ ನೆಹುಷ್ಟಾ ಎಂಬ ಹೆಸರಿನವಳು. ಯೆಹೋವನು ಕೆಟ್ಟದ್ದೆಂದು ಹೇಳಿದ ಕಾರ್ಯಗಳನ್ನು ಯೆಹೋಯಾಖೀನನು ಮಾಡಿದನು. ಅವನು ತನ್ನ ತಂದೆಯು ಮಾಡಿದಂತಹ ಕಾರ್ಯಗಳನ್ನೆಲ್ಲ ಮಾಡಿದನು.

10 ಆ ಸಮಯದಲ್ಲಿ ಬಾಬಿಲೋನ್ ರಾಜನಾದ ನೆಬೂಕದ್ನೆಚ್ಚರನ ಅಧಿಕಾರಿಗಳು ಜೆರುಸಲೇಮಿಗೆ ಮುತ್ತಿಗೆ ಹಾಕಿದರು. 11 ಆಗ ಬಾಬಿಲೋನ್ ರಾಜನಾದ ನೆಬೂಕದ್ನೆಚ್ಚರನು ಆ ನಗರಕ್ಕೆ ಬಂದನು. 12 ಯೆಹೂದದ ರಾಜನಾದ ಯೆಹೋಯಾಖೀನನು ಬಾಬಿಲೋನ್ ರಾಜನನ್ನು ಭೇಟಿಮಾಡಲು ಹೋದನು. ಯೆಹೋಯಾಖೀನನ ತಾಯಿ, ಅವನ ಅಧಿಕಾರಿಗಳು, ನಾಯಕರು ಮತ್ತು ಸಿಬ್ಬಂದಿಯೆಲ್ಲವೂ ಅವನೊಂದಿಗೆ ಹೋದರು. ಆಗ ಬಾಬಿಲೋನ್ ರಾಜ ಯೆಹೋಯಾಖೀನನನ್ನು ಸೆರೆಹಿಡಿದನು. ಇದು ಸಂಭವಿಸಿದ್ದು ನೆಬೂಕದ್ನೆಚ್ಚರನ ಆಳ್ವಿಕೆಯ ಎಂಟನೆಯ ವರ್ಷದಲ್ಲಿ.

13 ನೆಬೂಕದ್ನೆಚ್ಚರನು ಜೆರುಸಲೇಮಿನ ದೇವಾಲಯದಲ್ಲಿದ್ದ ಭಂಡಾರವನ್ನೆಲ್ಲಾ ಮತ್ತು ರಾಜನ ಅರಮನೆಯಲ್ಲಿದ್ದ ಭಂಡಾರವನ್ನೆಲ್ಲಾ ತೆಗೆದುಕೊಂಡು ಹೋದನು. ಇಸ್ರೇಲರ ರಾಜನಾದ ಸೊಲೊಮೋನನು ದೇವಾಲಯದಲ್ಲಿಟ್ಟಿದ್ದ ಬಂಗಾರವನ್ನೆಲ್ಲಾ ನೆಬೂಕದ್ನೆಚ್ಚರನು ತೆಗೆದುಕೊಂಡನು. ಯೆಹೋವನು ಹೇಳಿದ್ದಂತೆಯೇ ಇದು ಸಂಭವಿಸಿತು.

14 ನೆಬೂಕದ್ನೆಚ್ಚರನು ಜೆರುಸಲೇಮಿನ ಜನರನ್ನೆಲ್ಲಾ ಸೆರೆಹಿಡಿದನು. ಅವನು ಎಲ್ಲಾ ನಾಯಕರನ್ನು ಮತ್ತು ಹಣವಂತರನ್ನು ಸೆರೆಹಿಡಿದನು. ಅವನು ಹತ್ತು ಸಾವಿರ ಜನರನ್ನು ಸೆರೆಯಾಳುಗಳನ್ನಾಗಿ ಒಯ್ದನು. ನೆಬೂಕದ್ನೆಚ್ಚರನು ನುರಿತ ತಜ್ಞರನ್ನು ಮತ್ತು ಕಮ್ಮಾರರನ್ನು ಕರೆದೊಯ್ದನು. ಸಾಮಾನ್ಯ ಜನರನ್ನೂ ಕಡುಬಡವರನ್ನೂ ಬಿಟ್ಟು ಉಳಿದ ಯಾರನ್ನೂ ಬಿಡಲಿಲ್ಲ. 15 ನೆಬೂಕದ್ನೆಚ್ಚರನು ಯೆಹೋಯಾಖೀನನನ್ನು ಸೆರೆಯಾಳಾಗಿ ಬಾಬಿಲೋನಿಗೆ ಕರೆದೊಯ್ದನು. ನೆಬೂಕದ್ನೆಚ್ಚರನು ರಾಜನ ತಾಯಿಯನ್ನು, ಅವನ ಪತ್ನಿಯರನ್ನು, ಅಧಿಕಾರಿಗಳನ್ನು ಮತ್ತು ದೇಶದ ಪ್ರತಿಷ್ಠಿತರನ್ನು ಕರೆದೊಯ್ದನು. ನೆಬೂಕದ್ನೆಚ್ಚರನು ಅವರನ್ನು ಜೆರುಸಲೇಮಿನಿಂದ ಬಾಬಿಲೋನಿಗೆ ಸೆರೆಯಾಳುಗಳನ್ನಾಗಿ ಒಯ್ದನು. 16 ಬಾಬಿಲೋನ್ ರಾಜನು ಏಳು ಸಾವಿರ ಮಂದಿ ಸೈನಿಕರನ್ನು ಮತ್ತು ಒಂದು ಸಾವಿರ ಮಂದಿ ನುರಿತ ತಜ್ಞರನ್ನು ಮತ್ತು ಕಮ್ಮಾರರನ್ನು ಕರೆದೊಯ್ದನು. ಈ ಜನರೆಲ್ಲರೂ ಸೈನಿಕರಾಗಿದ್ದು, ಯುದ್ಧಗಳಲ್ಲಿ ಹೋರಾಡಲು ಸಮರ್ಥರಾಗಿದ್ದರು. ಬಾಬಿಲೋನ್ ರಾಜನು ಅವರನ್ನು ಸೆರೆಯಾಳುಗಳನ್ನಾಗಿ ಬಾಬಿಲೋನಿಗೆ ಒಯ್ದನು.

ರಾಜನಾದ ಚಿದ್ಕೀಯನು

17 ಬಾಬಿಲೋನ್ ರಾಜನು ಮತ್ತನ್ಯನನ್ನು ಹೊಸ ರಾಜನನ್ನಾಗಿ ನೇಮಿಸಿದನು. ಅವನು ಯೆಹೋಯಾಖೀನನ ಸ್ಥಳವನ್ನು ಪಡೆದನು. ಮತ್ತನ್ಯನು ಯೆಹೋಯಾಖೀನನ ಚಿಕ್ಕಪ್ಪ. ಬಾಬಿಲೋನ್ ರಾಜನು ಮತ್ತನ್ಯನ ಹೆಸರನ್ನು ಚಿದ್ಕೀಯ ಎಂದು ಬದಲಾಯಿಸಿದನು. 18 ಚಿದ್ಕೀಯನು ಆಳಲಾರಂಭಿಸಿದಾಗ ಅವನಿಗೆ ಇಪ್ಪತ್ತೊಂದು ವರ್ಷ ವಯಸ್ಸಾಗಿತ್ತು. ಅವನು ಜೆರುಸಲೇಮಿನಲ್ಲಿ ಹನ್ನೊಂದು ವರ್ಷ ಆಳಿದನು. ಅವನ ತಾಯಿಯು ಲಿಬ್ನದ ಯೆರೆಮೀಯನ ಮಗಳಾದ ಹಮೂಟಲ್ ಎಂಬ ಹೆಸರಿನವಳು. 19 ಯೆಹೋವನು ಕೆಟ್ಟದ್ದೆಂದು ಹೇಳಿದ ಕಾರ್ಯಗಳನ್ನು ಚಿದ್ಕೀಯನು ಮಾಡಿದನು. ಚಿದ್ಕೀಯನು ಯೆಹೋಯಾಖೀನನು ಮಾಡಿದಂಥ ಕಾರ್ಯಗಳನ್ನು ಮಾಡಿದನು. 20 ಯೆಹೋವನ ಕೋಪದಿಂದ ಯೆಹೂದಕ್ಕೆ ಮತ್ತು ಜೆರುಸಲೇಮಿಗೆ ಇವೆಲ್ಲವೂ ಸಂಭವಿಸಿದವು. ಹೀಗೆ ಯೆಹೋವನು ಅವರನ್ನು ತನ್ನಿಂದ ದೂರಸರಿಸಿದನು. ಚಿದ್ಕೀಯನು ಬಾಬಿಲೋನ್ ರಾಜನಿಗೆ ವಿರುದ್ಧವಾಗಿ ದಂಗೆ ಎದ್ದನು.

ನೆಬೂಕದ್ನೆಚ್ಚರನು ಚಿದ್ಕೀಯನ ಆಳ್ವಿಕೆಯನ್ನು ಕೊನೆಗೊಳಿಸಿದನು

25 ಆದ್ದರಿಂದ ಬಾಬಿಲೋನ್ ರಾಜನಾದ ನೆಬೂಕದ್ನೆಚ್ಚರನು ಜೆರುಸಲೇಮಿನ ವಿರುದ್ಧ ಯುದ್ಧಮಾಡಲು ತನ್ನ ಎಲ್ಲಾ ಸೇನೆಯೊಡನೆ ಬಂದನು. ನೆಬೂಕದ್ನೆಚ್ಚರನು ಜೆರುಸಲೇಮಿನ ಸುತ್ತಲೂ ಪಾಳೆಯ ಮಾಡಿಕೊಂಡು ಮಣ್ಣಿನ ದಿಬ್ಬವನ್ನು ನಿರ್ಮಿಸಿದನು. ಅವನು ನಗರದೊಳಕ್ಕೆ ಹೋಗುವ ಮತ್ತು ನಗರದಿಂದ ಬರುವ ಜನರನ್ನು ತಡೆಯಲು ಹೀಗೆ ಮಾಡಿದನು. ಇದು ನೆಬೂಕದ್ನೆಚ್ಚರನ ಆಳ್ವಿಕೆಯ ಒಂಭತ್ತನೆಯ ವರ್ಷದ ಹತ್ತನೆಯ ತಿಂಗಳಿನ ಹತ್ತನೆಯ ದಿನದಂದು ಸಂಭವಿಸಿತು. ನೆಬೂಕದ್ನೆಚ್ಚರನ ಸೇನೆಯು ಜೆರುಸಲೇಮಿನ ಸುತ್ತಲೂ, ಚಿದ್ಕೀಯನು ಯೆಹೂದದ ರಾಜನಾದ ಹನ್ನೊಂದನೆಯ ವರ್ಷದವರೆಗೆ ನೆಲೆಸಿತು. ನಾಲ್ಕನೆಯ ತಿಂಗಳ ಒಂಭತ್ತನೆಯ ದಿನದಂದು ನಗರದಲ್ಲಿ ಭೀಕರ ಬರಗಾಲವಿತ್ತು. ಅಲ್ಲಿನ ಸಾಮಾನ್ಯರಿಗೆ ಆಹಾರವೇನೂ ಇರಲಿಲ್ಲ.

ಆಗ ನೆಬೂಕದ್ನೆಚ್ಚರನ ಸೇನೆಯು ನಗರದ ಗೋಡೆಯಲ್ಲಿ ಒಂದು ರಂಧ್ರವನ್ನು ಕೊರೆದರು. ಅಂದಿನ ರಾತ್ರಿ ರಾಜನಾದ ಚಿದ್ಕೀಯ ಮತ್ತು ಅವನ ಸೈನಿಕರೆಲ್ಲರೂ ಓಡಿಹೋದರು. ಅವರು ರಾಜನ ತೋಟದ ಎರಡು ಗೋಡೆಗಳ ಮಧ್ಯಭಾಗದ ರಹಸ್ಯ ಬಾಗಿಲಿನ ಮೂಲಕ ಓಡಿಹೋದರು. ಬಾಬಿಲೋನ್ ಸೇನೆಯು ನಗರವನ್ನು ಸುತ್ತುವರಿದಿತ್ತು. ಆದರೆ ಚಿದ್ಕೀಯ ಮತ್ತು ಅವನ ಸೇನೆಯು ಮರುಭೂಮಿಯ ರಸ್ತೆಯಲ್ಲಿ ತಪ್ಪಿಸಿಕೊಂಡರು. ಬಾಬಿಲೋನ್ ಸೇನೆಯು ರಾಜನಾದ ಚಿದ್ಕೀಯನನ್ನು ಅಟ್ಟಿಸಿಕೊಂಡು ಹೋಗಿ, ಅವನನ್ನು ಜೆರಿಕೊವಿನ ಸಮೀಪದಲ್ಲಿ ಹಿಡಿದರು.

ಬಾಬಿಲೋನಿನವರು ರಾಜನಾದ ಚಿದ್ಕೀಯನನ್ನು ರಿಬ್ಲದಲ್ಲಿ ಬಾಬಿಲೋನ್ ರಾಜನಿಗೆ ಒಪ್ಪಿಸಿದರು. ಬಾಬಿಲೋನ್ ರಾಜನು ಚಿದ್ಕೀಯನನ್ನು ದಂಡಿಸಲು ತೀರ್ಮಾನಿಸಿದನು. ಅವರು ಚಿದ್ಕೀಯನ ಮಕ್ಕಳನ್ನು ಅವನ ಎದುರಿನಲ್ಲಿಯೇ ಕೊಂದುಹಾಕಿದರು. ನಂತರ ಅವರು ಚಿದ್ಕೀಯನ ಕಣ್ಣುಗಳನ್ನು ಕಿತ್ತುಹಾಕಿದರು. ಅವರು ಅವನನ್ನು ಸರಪಣಿಗಳಿಂದ ಬಂಧಿಸಿ, ಬಾಬಿಲೋನಿಗೆ ಕೊಂಡೊಯ್ದರು.

ಜೆರುಸಲೇಮನ್ನು ನಾಶಗೊಳಿಸಲಾಯಿತು

ಬಾಬಿಲೋನ್ ರಾಜನಾಗಿದ್ದ ನೆಬೂಕದ್ನೆಚ್ಚರನು ತನ್ನ ಆಳ್ವಿಕೆಯ ಹತ್ತೊಂಭತ್ತನೆಯ ವರ್ಷದ ಐದನೆಯ ತಿಂಗಳ ಏಳನೆಯ ದಿನದಂದು ಜೆರುಸಲೇಮಿಗೆ ಬಂದನು. ನೆಬೂಜರದಾನ ಎಂಬವನು ನೆಬೂಕದ್ನೆಚ್ಚರನ ರಕ್ಷಕ ದಳದ ಅಧಿಪತಿಯಾಗಿದ್ದನು. ನೆಬೂಜರದಾನನು ದೇವಾಲಯವನ್ನೂ ರಾಜನ ಅರಮನೆಯನ್ನೂ ಜೆರುಸಲೇಮಿನಲ್ಲಿದ್ದ ಮನೆಗಳನ್ನೆಲ್ಲಾ ಸುಟ್ಟುಹಾಕಿದನು. ಅವನು ಮಹಾಸೌಧಗಳನ್ನು ನಾಶಗೊಳಿಸಿದನು.

10 ನಂತರ ನೆಬೂಜರದಾನನೊಂದಿಗಿದ್ದ ಬಾಬಿಲೋನ್ ಸೈನ್ಯವು ಜೆರುಸಲೇಮಿನ ಸುತ್ತಲೂ ಇದ್ದ ಗೋಡೆಯನ್ನು ಕೆಡವಿಹಾಕಿತು. 11 ಆ ನಗರದಲ್ಲಿ ಉಳಿದಿದ್ದ ಜನರನ್ನೆಲ್ಲಾ ನೆಬೂಜರದಾನನು ಸೆರೆಹಿಡಿದನು. ರಾಜನಾದ ನೆಬೂಕದ್ನೆಚ್ಚರನಿಗೆ ವಿಧೇಯರಾಗಿರಲು ಕೆಲವು ಜನರು ಒಪ್ಪಿದರು. ಆದರೆ ನೆಬೂಜರದಾನನು ಆ ಜನರನ್ನೆಲ್ಲಾ ಸೆರೆಹಿಡಿದನು. ಅವನು ನಗರದಲ್ಲಿದ್ದ ಪ್ರತಿಯೊಬ್ಬರನ್ನೂ ಕರೆದೊಯ್ದನು. 12 ಸಾಮಾನ್ಯ ಜನರಲ್ಲಿ ತೀರ ಬಡವರಾದ ಜನರನ್ನು ಮಾತ್ರ ನೆಬೂಜರದಾನನು ಅಲ್ಲಿಯೇ ನೆಲೆಸಲು ಬಿಟ್ಟನು. ಆ ಬಡಜನರು ಅಲ್ಲಿಯೇ ನೆಲೆಸಿ, ಬೇಸಾಯಮಾಡಿ ದ್ರಾಕ್ಷಿಯನ್ನು ಬೆಳೆಯಲು ಅವರನ್ನು ಬಿಟ್ಟುಬಿಟ್ಟನು.

13 ಬಾಬಿಲೋನ್ ಸೈನಿಕರು ದೇವಾಲಯದಲ್ಲಿದ್ದ ತಾಮ್ರದ ಸ್ತಂಭಗಳನ್ನು ಚೂರುಚೂರು ಮಾಡಿದರು. ಅವರು ಯೆಹೋವನ ಆಲಯದಲ್ಲಿದ್ದ ತಾಮ್ರದ ದೊಡ್ಡ ತೊಟ್ಟಿಯನ್ನು ಮತ್ತು ತಾಮ್ರದ ಬಂಡಿಯನ್ನು ಚೂರುಚೂರಾಗಿ ಒಡೆದುಹಾಕಿದರು. ನಂತರ ಬಾಬಿಲೋನ್ ಸೈನಿಕರು ತಾಮ್ರದ ಚೂರುಗಳನ್ನು ಬಾಬಿಲೋನಿಗೆ ತೆಗೆದುಕೊಂಡು ಹೋದರು. 14 ಬಾಬಿಲೋನಿನವರು ದೇವಾಲಯದಲ್ಲಿ ಉಪಯೋಗಿಸುತ್ತಿದ್ದ ಬೋಗುಣಿ, ಸಲಿಕೆ, ಕತ್ತರಿ, ಧೂಪಾರತಿ ಮೊದಲಾದ ತಾಮ್ರದ ವಸ್ತುಗಳನ್ನು ತೆಗೆದುಕೊಂಡು ಹೋದರು. 15 ನೆಬೂಜರದಾನನು ಅಗ್ಗಿಷ್ಟಿಕೆಗಳನ್ನು ಮತ್ತು ಬಟ್ಟಲುಗಳನ್ನು ತೆಗೆದುಕೊಂಡು ಹೋದನು. ಅವನು ಬಂಗಾರದ ವಸ್ತುಗಳನ್ನು ಬಂಗಾರಕ್ಕಾಗಿಯೂ ಬೆಳ್ಳಿಯ ವಸ್ತುಗಳನ್ನು ಬೆಳ್ಳಿಗಾಗಿಯೂ ತೆಗೆದುಕೊಂಡು ಹೋದನು. 16 ಅವನು ತೆಗೆದುಕೊಂಡು ಹೋದ ವಸ್ತುಗಳ ಪಟ್ಟಿಯು ಹೀಗಿದೆ: ಎರಡು ತಾಮ್ರ ಕಂಬಗಳು, ಒಂದು ತೊಟ್ಟಿ ಮತ್ತು ದೇವಾಲಯಕ್ಕೆ ಸೊಲೊಮೋನನು ನಿರ್ಮಿಸಿದ್ದ ಬಂಡಿಗಳು. ಈ ವಸ್ತುಗಳ ತಾಮ್ರವು ತೂಕ ಮಾಡಲಾರದಷ್ಟು ಅಧಿಕವಾಗಿತ್ತು. 17 ಪ್ರತಿಯೊಂದು ಕಂಬವೂ ಸುಮಾರು ಇಪ್ಪತ್ತೇಳು ಅಡಿ ಉದ್ದವಾಗಿತ್ತು. ಕಂಬಗಳ ಮೇಲಿದ್ದ ಬೋದಿಗೆಗಳನ್ನು ತಾಮ್ರದಿಂದ ನಿರ್ಮಿಸಿದ್ದರು. ಪ್ರತಿಯೊಂದು ಬೋದಿಗೆಯೂ ನಾಲ್ಕುವರೆ ಅಡಿ ಉದ್ದವಾಗಿತ್ತು. ಪ್ರತಿಯೊಂದು ಬೋದಿಗೆಯ ಮೇಲೆ ಜಾಲರಿಯ ಆಕಾರವಿತ್ತು ಮತ್ತು ದಾಳಿಂಬೆ ಹಣ್ಣುಗಳ ಆಕಾರಗಳಿದ್ದವು. ಇವೆಲ್ಲವುಗಳನ್ನು ತಾಮ್ರದಿಂದಲೇ ಮಾಡಿದ್ದರು. ಎರಡು ಕಂಬಗಳೂ ಒಂದೇ ರೀತಿಯ ಆಕಾರದಲ್ಲಿದ್ದವು.

ಯೆಹೂದದ ಜನರನ್ನು ಸೆರೆಯಾಳುಗಳನ್ನಾಗಿಸಿ ಕರೆದೊಯ್ದರು

18 ನಂತರ, ನೆಬೂಜರದಾನನು, ಪ್ರಧಾನಯಾಜಕನಾದ ಸೆರಾಯನನ್ನು, ಎರಡನೆಯ ಯಾಜಕನಾದ ಚೆಫನ್ಯನನ್ನು ಮತ್ತು ಮೂವರು ದ್ವಾರಪಾಲಕರನ್ನು ಹಿಡಿದುಕೊಂಡು ಹೋದನು.

19 ನೆಬೂಜರದಾನನು ಸೇನೆಯ ಸೇನಾಧಿಕಾರಿಯೊಬ್ಬನನ್ನು ಹಿಡಿದುಕೊಂಡು ಹೋದನು. ನೆಬೂಜರದಾನನು ನಗರದಲ್ಲಿ ಸಿಕ್ಕಿದ ರಾಜನ ಐದು ಮಂದಿ ಸಲಹೆಗಾರರನ್ನು ಹಿಡಿದೊಯ್ದನು. ಅವನು ಸೇನೆಯ ಅಧಿಕಾರಿಯ ಕಾರ್ಯದರ್ಶಿಯನ್ನು ಹಿಡಿದೊಯ್ದನು. ಸೇನಾಧಿಕಾರಿಯ ಕಾರ್ಯದರ್ಶಿಯು ಸಾಮಾನ್ಯ ಜನರನ್ನು ಒಟ್ಟುಗೂಡಿಸಿ, ಅವರನ್ನು ಸೈನಿಕರನ್ನಾಗಿ ಆರಿಸುತ್ತಿದ್ದನು. ನೆಬೂಜರದಾನನು ನಗರದಲ್ಲಿ ಸಿಕ್ಕಿದ ಇತರ ಅರವತ್ತು ಮಂದಿಯನ್ನು ಹಿಡಿದೊಯ್ದನು. ಈ ಜನರು ಸಾಮಾನ್ಯ ಜನರಾಗಿದ್ದರು.

20 ನಂತರ ನೆಬೂಜರದಾನನು ಆ ಜನರನ್ನೆಲ್ಲ ರಿಬ್ಲದಲ್ಲಿದ್ದ ಬಾಬಿಲೋನ್ ರಾಜನ ಬಳಿಗೆ ಒಯ್ದನು. 21 ಬಾಬಿಲೋನ್ ರಾಜನು ಹಮಾತ್ ದೇಶದ ರಿಬ್ಲದಲ್ಲಿ ಅವರನ್ನೆಲ್ಲ ಕೊಂದುಹಾಕಿದನು. ಹೀಗೆ ಯೆಹೂದದ ಜನರನ್ನೆಲ್ಲ ಅವರ ದೇಶದಿಂದ ಸೆರೆಯಾಳುಗಳನ್ನಾಗಿಸಿ ಹಿಡಿದೊಯ್ದರು.

ನೆಬೂಕದ್ನೆಚ್ಚರನು ಗೆದಲ್ಯನನ್ನು ಯೆಹೂದದ ರಾಜ್ಯಪಾಲನನ್ನಾಗಿ ನೇಮಿಸಿದನು

22 ಬಾಬಿಲೋನ್ ರಾಜನಾದ ನೆಬೂಕದ್ನೆಚ್ಚರನು ಯೆಹೂದ ದೇಶದಲ್ಲಿ ಕೆಲವು ಜನರನ್ನು ಬಿಟ್ಟನು. ಅವನು ಅಹೀಕಾಮನ ಮಗನೂ ಶಾಫಾನನ ಮೊಮ್ಮಗನೂ ಆದ ಗೆದಲ್ಯನನ್ನು ಯೆಹೂದದಲ್ಲಿ ಜನರಿಗೆ ರಾಜ್ಯಪಾಲನನ್ನಾಗಿ ಮಾಡಿದನು.

23 ಬಾಬಿಲೋನ್ ರಾಜನು ಗೆದಲ್ಯನನ್ನು ರಾಜ್ಯಪಾಲನನ್ನಾಗಿ ನೇಮಿಸಿರುವುದನ್ನು ಸೇನಾಧಿಪತಿಗಳು ಮತ್ತು ಅವನ ಜನರು ಕೇಳಿ ಮಿಚ್ಛದಲ್ಲಿದ್ದ ಗೆದಲ್ಯನ ಬಳಿಗೆ ಬಂದರು. ಈ ಸೇನಾಧಿಪತಿಗಳು ಯಾರೆಂದರೆ: ನೆತನ್ಯನ ಮಗನಾದ ಇಷ್ಮಾಯೇಲ, ಕಾರೇಹನ ಮಗನಾದ ಯೋಹಾನಾನ್, ನೆಟೋಫದವನೂ ತನ್ಹುಮೆತನ ಮಗನೂ ಆದ ಸೆರಾಯ, ಮಾಕಾತ್ಯರಲ್ಲಿ ಒಬ್ಬನ ಮಗನಾದ ಯಾಜನ್ಯ. 24 ನಂತರ ಗೆದಲ್ಯನು ಈ ಸೇನಾಧಿಪತಿಗಳಿಗೆ ಮತ್ತು ಅವರ ಜನರಿಗೆ, “ಬಾಬಿಲೋನ್ ಅಧಿಕಾರಿಗಳಿಗೆ ನೀವು ಹೆದರಬೇಡಿ. ನೀವು ದೇಶದಲ್ಲಿ ವಾಸಿಸುತ್ತ ಬಾಬಿಲೋನ್ ರಾಜನ ಸೇವೆಯನ್ನು ಮಾಡಿ. ಆಗ ನಿಮಗೇನೂ ತೊಂದರೆಯಾಗುವುದಿಲ್ಲ” ಎಂದು ಪ್ರಮಾಣ ಮಾಡಿದನು.

25 ಆದರೆ ಏಳನೆಯ ತಿಂಗಳಲ್ಲಿ, ರಾಜನ ಕುಲದವನೂ ಎಲೀಷಾಮನ ಮೊಮ್ಮಗನೂ ನೆತನ್ಯನ ಮಗನೂ ಆದ ಇಷ್ಮಾಯೇಲನು ಹತ್ತು ಜನರೊಂದಿಗೆ ಬಂದು ಗೆದಲ್ಯನನ್ನು ಕೊಂದುಹಾಕಿದನು. ಇಷ್ಮಾಯೇಲ ಮತ್ತು ಅವನ ಜನರು ಮಿಚ್ಛದಲ್ಲಿ ಗೆದಲ್ಯನ ಜೊತೆಗಿದ್ದ ಯೆಹೂದ್ಯರನ್ನು ಮತ್ತು ಬಾಬಿಲೋನಿನವರನ್ನು ಕೊಂದುಹಾಕಿದರು. 26 ಇದಾದ ನಂತರ, ಕನಿಷ್ಠರಾದವರೂ ಮತ್ತು ಅತಿ ಮುಖ್ಯರೂ ಆದ ಜನರೆಲ್ಲರು ಮತ್ತು ಸೇನೆಯ ನಾಯಕರು ಬಾಬಿಲೋನಿನವರಿಗೆ ಹೆದರಿಕೊಂಡು ಈಜಿಪ್ಟಿಗೆ ಓಡಿಹೋದರು.

27 ಬಾಬಿಲೋನ್ ರಾಜನಾದ ಎವೀಲ್ಮೆರೋದಕನು, ಯೆಹೂದದ ರಾಜನಾದ ಯೆಹೋಯಾಖೀನನನ್ನು ಸೆರೆಯಿಂದ ಬಿಡುಗಡೆ ಮಾಡಿದನು. ಯೆಹೋಯಾಖೀನನನ್ನು ಸೆರೆಹಿಡಿದ ಮೂವತ್ತೇಳನೆಯ ವರ್ಷದ ನಂತರ ಇದು ಸಂಭವಿಸಿತು. ಎವೀಲ್ಮೆರೋದಕನ ಆಳ್ವಿಕೆಯ ಹನ್ನೆರಡನೆ ತಿಂಗಳಿನ ಇಪ್ಪತ್ತೇಳನೆಯ ದಿನದಂದು ಇದು ಸಂಭವಿಸಿತು. 28 ಎವೀಲ್ಮೆರೋದಕನು ಯೆಹೋಯಾಖೀನನೊಂದಿಗೆ ದಯೆಯಿಂದ ಮಾತನಾಡಿದನು. ಎವೀಲ್ಮೆರೋದಕನು ಯೆಹೋಯಾಖೀನನ ಸಿಂಹಾಸನವನ್ನು ಬಾಬಿಲೋನಿನಲ್ಲಿ ತನ್ನೊಂದಿಗಿದ್ದ ರಾಜರುಗಳ ಸಿಂಹಾಸನಗಳಿಗಿಂತ ಎತ್ತರದಲ್ಲಿರಿಸಿದನು. 29 ಎವೀಲ್ಮೆರೋದಕನು ಯೆಹೋಯಾಖೀನನ ಸೆರೆವಾಸದ ಬಟ್ಟೆಗಳನ್ನು ತೆಗೆಸಿ ಹೊಸ ಬಟ್ಟೆಗಳನ್ನು ತೊಡಿಸಿದನು. ಯೆಹೋಯಾಖೀನನು ಬದುಕಿರುವ ತನಕ ತನ್ನ ಪಂಕ್ತಿಯಲ್ಲಿ ಊಟಮಾಡಲು ಎವೀಲ್ಮೆರೋದಕನು ಅವಕಾಶ ಮಾಡಿಕೊಟ್ಟನು. 30 ಹೀಗೆ ರಾಜನಾದ ಎವೀಲ್ಮೆರೋದಕನ ಪಂಕ್ತಿಯಲ್ಲಿ ಯೆಹೋಯಾಖೀನನು ತನ್ನ ಉಳಿದ ಜೀವಿತದಲ್ಲಿ ಊಟಮಾಡಿದನು.

2 ಪೂರ್ವಕಾಲವೃತ್ತಾಂತ 36

ಯೆಹೂದದ ಅರಸನಾದ ಯೆಹೋವಾಹಾಜ

36 ಯೆಹೂದದ ಜನರು ಯೆಹೋವಾಹಾಜನನ್ನು ತಮ್ಮ ಹೊಸ ಅರಸನನ್ನಾಗಿ ಜೆರುಸಲೇಮಿನಲ್ಲಿ ಆರಿಸಿದರು. ಯೆಹೋವಾಹಾಜನು ಯೋಷೀಯನ ಮಗನು. ಅವನು ತನ್ನ ಇಪ್ಪತ್ತಮೂರನೆ ವಯಸ್ಸಿನಲ್ಲಿ ಪಟ್ಟಕ್ಕೆ ಬಂದನು. ಅವನು ಜೆರುಸಲೇಮಿನಲ್ಲಿ ಮೂರು ತಿಂಗಳ ಕಾಲ ಆಳಿದನು. ಆ ಬಳಿಕ ಈಜಿಪ್ಟಿನ ನೆಕೋ ಯೆಹೋವಾಹಾಜನನ್ನು ಕೈದಿಯನ್ನಾಗಿ ಮಾಡಿದನು. ಯೆಹೂದದ ಜನರು ತನಗೆ ಮೂರು ಸಾವಿರದ ನಾನೂರು ಕಿಲೋಗ್ರಾಂ ಬೆಳ್ಳಿಯನ್ನೂ ಮೂವತ್ತನಾಲ್ಕು ಕಿಲೋಗ್ರಾಂ ಬಂಗಾರವನ್ನೂ ಕೊಡಲು ಆಜ್ಞಾಪಿಸಿದನು. ನೆಕೋ ಯೆಹೋವಾಹಾಜನ ತಮ್ಮನಾದ ಎಲ್ಯಾಕೀಮನನ್ನು ಯೆಹೋವಾಹಾಜನ ಬದಲಿಗೆ ಯೆಹೂದದ ಮತ್ತು ಜೆರುಸಲೇಮಿನ ಅರಸನನ್ನಾಗಿ ಮಾಡಿದನು. ಅವನಿಗೆ ಎಲ್ಯಾಕೀಮನ ಬದಲು ಯೆಹೋಯಾಕೀಮ ಎಂಬ ಹೆಸರಿಟ್ಟನು. ನೆಕೋ ಯೆಹೋವಾಹಾಜನನ್ನು ಈಜಿಪ್ಟಿಗೆ ತೆಗೆದುಕೊಂಡು ಹೋದನು.

ಯೆಹೂದದ ಅರಸನಾದ ಯೆಹೋಯಾಕೀಮ

ಯೆಹೋಯಾಕೀಮನು ಯೆಹೂದ ದೇಶದ ಪಟ್ಟಕ್ಕೆ ಬಂದಾಗ ಇಪ್ಪತ್ತೈದು ವರ್ಷ ಪ್ರಾಯದವನಾಗಿದ್ದನು. ಅವನು ಜೆರುಸಲೇಮಿನಲ್ಲಿ ಹನ್ನೊಂದು ವರ್ಷ ಆಳಿದನು. ಯೆಹೋಯಾಕೀಮನು ಯೆಹೋವನ ಚಿತ್ತಕ್ಕೆ ಒಳಗಾಗಲಿಲ್ಲ. ಅವನು ತನ್ನ ದೇವರಾದ ಯೆಹೋವನ ವಿರುದ್ಧವಾಗಿ ಪಾಪಮಾಡಿದನು.

ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ಯೆಹೂದ ಪ್ರಾಂತ್ಯದ ಮೇಲೆ ಯುದ್ಧಕ್ಕೆ ಬಂದನು. ಯೆಹೋಯಾಕೀಮನನ್ನು ಸೆರೆಹಿಡಿದು ಅವನನ್ನು ಕಂಚಿನ ಸರಪಣಿಯಿಂದ ಕಟ್ಟಿಸಿದನು. ನಂತರ ಯೆಹೋಯಾಕೀಮನನ್ನು ಬಾಬಿಲೋನಿಗೆ ತೆಗೆದುಕೊಂಡು ಹೋದನು. ನೆಬೂಕದ್ನೆಚ್ಚರನು ದೇವಾಲಯದಿಂದ ಹಲವಾರು ವಸ್ತುಗಳನ್ನು ತೆಗೆದುಕೊಂಡು ಹೋಗಿ ಬಾಬಿಲೋನಿನ ತನ್ನ ಅರಮನೆಯಲ್ಲಿ ಇಟ್ಟುಕೊಂಡನು. ಯೆಹೋಯಾಕೀಮನು ಮಾಡಿದ ದುಷ್ಕ್ರಿಯೆಗಳೆಲ್ಲಾ ಇಸ್ರೇಲಿನ ಮತ್ತು ಯೆಹೂದದ ರಾಜರುಗಳ ಗ್ರಂಥದಲ್ಲಿ ಬರೆಯಲ್ಪಟ್ಟಿವೆ. ಯೆಹೋಯಾಕೀಮನ ಬದಲು ಯೆಹೋಯಾಕೀನನು ಅರಸನಾದನು. ಇವನು ಯೆಹೋಯಾಕೀಮನ ಮಗ.

ಯೆಹೂದದ ಅರಸನಾದ ಯೆಹೋಯಾಕೀನ

ಯೆಹೋಯಾಕೀನನು ಯೆಹೂದ ದೇಶದ ಪಟ್ಟಕ್ಕೆ ಬಂದಾಗ ಹದಿನೆಂಟು ವರ್ಷದವನಾಗಿದ್ದನು. ಅವನು ಜೆರುಸಲೇಮಿನಲ್ಲಿ ಮೂರು ತಿಂಗಳು ಹತ್ತು ದಿವಸಗಳ ಕಾಲ ರಾಜ್ಯವನ್ನಾಳಿದನು. ಅವನು ಯೆಹೋವನ ಚಿತ್ತಕ್ಕನುಸಾರವಾಗಿ ನಡೆಯಲಿಲ್ಲ. ಯೆಹೋಯಾಕೀನನು ದೇವರಿಗೆ ವಿರುದ್ಧವಾಗಿ ಪಾಪ ಮಾಡಿದನು. 10 ವಸಂತ ಕಾಲದಲ್ಲಿ ನೆಬೂಕದ್ನೆಚ್ಚರನು ತನ್ನ ಸೇವಕರನ್ನು ಕಳುಹಿಸಿ ಯೆಹೋಯಾಕೀನನನ್ನು ಕರೆಯಿಸಿದನು. ಆ ಸೇವಕರು ದೇವಾಲಯದ ಕೆಲವು ವಸ್ತುಗಳನ್ನೂ ಅವನ ಜೊತೆಯಲ್ಲಿ ಬಾಬಿಲೋನಿಗೆ ತೆಗೆದುಕೊಂಡು ಹೋದರು. ನೆಬೂಕದ್ನೆಚ್ಚರನು ಯೆಹೂದ ಮತ್ತು ಜೆರುಸಲೇಮಿಗೆ ಚಿದ್ಕೀಯನನ್ನು ಹೊಸ ಅರಸನನ್ನಾಗಿ ಮಾಡಿದನು. ಚಿದ್ಕೀಯನು ಯೆಹೋಯಾಕೀನನ ಸಂಬಂಧಿಕನಾಗಿದ್ದನು.

ಯೆಹೂದದ ಅರಸನಾದ ಚಿದ್ಕೀಯನು

11 ಚಿದ್ಕೀಯನು ಅರಸನಾದಾಗ ಇಪ್ಪತ್ತೊಂದು ವರ್ಷ ಪ್ರಾಯದವನಾಗಿದ್ದನು. ಅವನು ಜೆರುಸಲೇಮಿನಲ್ಲಿ ಹನ್ನೊಂದು ವರ್ಷ ಕಾಲ ರಾಜ್ಯಭಾರ ಮಾಡಿದನು. 12 ಚಿದ್ಕೀಯನು ಯೆಹೋವನ ಚಿತ್ತಾನುಸಾರವಾಗಿ ನಡೆಯಲಿಲ್ಲ. ಅವನು ಯೆಹೋವನಿಗೆ ವಿರುದ್ಧವಾಗಿ ಪಾಪಮಾಡಿದನು. ಪ್ರವಾದಿಯಾದ ಯೆರೆಮೀಯನು ದೇವರ ಸಂದೇಶವನ್ನು ಕೊಡುತ್ತಾ ಬಂದನು. ಆದರೆ ಚಿದ್ಕೀಯನು ದೇವರೆದುರಿಗೆ ತನ್ನನ್ನು ತಗ್ಗಿಸಿಕೊಳ್ಳದೆ ಯೆರೆಮೀಯನ ಮೂಲಕ ಬಂದ ದೇವರ ಆಜ್ಞೆಗಳಿಗೆ ವಿಧೇಯನಾಗಲಿಲ್ಲ.

ಜೆರುಸಲೇಮಿನ ನಾಶನ

13 ಚಿದ್ಕೀಯನು ನೆಬೂಕದ್ನೆಚ್ಚರನಿಗೆ ವಿರುದ್ಧವಾಗಿ ದಂಗೆ ಎದ್ದನು. ನೆಬೂಕದ್ನೆಚ್ಚರನು ತನಗೆ ವಿಧೇಯನಾಗಿರುವಂತೆ ಚಿದ್ಕೀಯನಿಂದ ಪ್ರಮಾಣ ಮಾಡಿಸಿಕೊಂಡಿದ್ದನು. ಚಿದ್ಕೀಯನು ದೇವರ ಹೆಸರಿನಲ್ಲಿ ಆಣೆಯಿಟ್ಟು ತಾನು ನೆಬೂಕದ್ನೆಚ್ಚರನಿಗೆ ನಂಬಿಗಸ್ತನಾಗಿರುವುದಾಗಿ ಪ್ರಮಾಣಮಾಡಿದ್ದನು. ಆದರೆ ಚಿದ್ಕೀಯನು ಮನಸ್ಸನ್ನು ಕಠಿಣಮಾಡಿಕೊಂಡು ಇಸ್ರೇಲಿನ ದೇವರಾದ ಯೆಹೋವನಿಗೆ ವಿಧೇಯನಾಗಲು ನಿರಾಕರಿಸಿದನು. 14 ಅವನು ಮಾತ್ರವಲ್ಲದೆ ಎಲ್ಲಾ ಯಾಜಕರು, ಯೆಹೂದದ ಜನನಾಯಕರು ಬಹಳ ಪಾಪಗಳನ್ನು ಮಾಡಿ ಯೆಹೋವನ ದೃಷ್ಟಿಯಲ್ಲಿ ಕೆಟ್ಟುಹೋಗಿದ್ದರು. ಅವರು ಬೇರೆ ದೇಶಗಳ ನಡವಳಿಕೆಯನ್ನು ಅನುಸರಿಸಿದರು. ಆ ನಾಯಕರುಗಳು ದೇವಾಲಯವನ್ನು ಹಾಳುಮಾಡಿದರು. ಜೆರುಸಲೇಮಿನಲ್ಲಿದ್ದ ಆ ಆಲಯವನ್ನು ಯೆಹೋವನು ತನಗಾಗಿ ಪ್ರತಿಷ್ಠಿಸಿಕೊಂಡಿದ್ದನು. 15 ಅವರ ಪೂರ್ವಿಕರ ದೇವರಾದ ಯೆಹೋವನು ಆಗಾಗ್ಗೆ ತನ್ನ ಪ್ರವಾದಿಗಳನ್ನು ಕಳುಹಿಸಿ ತನ್ನ ಜನರನ್ನು ಎಚ್ಚರಿಸಿದನು. ಯಾಕೆಂದರೆ ಆತನಿಗೆ ತನ್ನ ಜನರೂ ತನ್ನ ಮಂದಿರವೂ ನಾಶವಾಗುವದರಲ್ಲಿ ಇಷ್ಟವಿರಲಿಲ್ಲ. 16 ಆದರೆ ಆತನ ಜನರು ಪ್ರವಾದಿಗಳನ್ನು ಹಾಸ್ಯಮಾಡಿದರು; ಅವರ ಮಾತುಗಳನ್ನು ಕೇಳಲು ನಿರಾಕರಿಸಿದರು; ದೇವರ ಸಂದೇಶವನ್ನು ದ್ವೇಷಿಸಿದರು. ಆಗ ದೇವರ ಕೋಪವು ಅವರ ಮೇಲೆ ಉರಿಯತೊಡಗಿತು. ಅದನ್ನು ನಿಲ್ಲಿಸಲು ಯಾರಿಗೂ ಸಾಧ್ಯವಾಗಲಿಲ್ಲ. 17 ಯೆಹೂದದ ಮತ್ತು ಜೆರುಸಲೇಮಿನ ಜನರನ್ನು ನಾಶಮಾಡಲು ಬಾಬಿಲೋನಿನ ಅರಸನನ್ನು ಕಳುಹಿಸಿದನು. ಬಾಬಿಲೋನಿನ ಅರಸನು ದೇವಾಲಯದೊಳಗಿದ್ದ ಯುವಜನರನ್ನು ಕೊಂದುಹಾಕಿದನು. ಅವನಿಗೆ ಯೆಹೂದದ ಮತ್ತು ಜೆರುಸಲೇಮಿನ ಜನರ ಮೇಲೆ ಕರುಣೆಯೇ ಇರಲಿಲ್ಲ. ಅವನು ಚಿಕ್ಕವರನ್ನೂ ದೊಡ್ಡವರನ್ನೂ ಗಂಡಸರನ್ನೂ ಹೆಂಗಸರನ್ನೂ ಬಿಡದೆ ಸಂಹರಿಸಿದನು. ರೋಗಿಗಳನ್ನೂ ಆರೋಗ್ಯವಂತರನ್ನೂ ಸಂಹರಿಸಿದನು; ಯೆಹೂದದ ಮತ್ತು ಜೆರುಸಲೇಮಿನ ಜನರನ್ನು ಶಿಕ್ಷಿಸಲು ದೇವರು ನೆಬೂಕದ್ನೆಚ್ಚರನನ್ನು ಉಪಯೋಗಿಸಿದನು. 18 ದೇವಾಲಯದೊಳಗಿದ್ದ ಎಲ್ಲಾ ವಸ್ತುಗಳನ್ನು ನೆಬೂಕದ್ನೆಚ್ಚರನು ಬಾಬಿಲೋನಿಗೆ ಸಾಗಿಸಿದನು. ದೇವಾಲಯದೊಳಗೂ ಅರಸನ ಬಳಿಯಲ್ಲಿಯೂ ಅಧಿಕಾರಿಗಳ ಬಳಿಯಲ್ಲಿಯೂ ಇದ್ದ ಬೆಲೆಬಾಳುವ ವಸ್ತುಗಳನ್ನೆಲ್ಲಾ ಬಾಬಿಲೋನಿಗೆ ಸಾಗಿಸಿದನು. 19 ನೆಬೂಕದ್ನೆಚ್ಚರನು ಮತ್ತು ಅವನ ಸೈನಿಕರು ದೇವಾಲಯವನ್ನು ಸುಟ್ಟುಹಾಕಿದರು; ಜೆರುಸಲೇಮ್ ಪಟ್ಟಣದ ಪೌಳಿಗೋಡೆಯನ್ನು ಕೆಡವಿಹಾಕಿದರು; ಅರಸನ ಮತ್ತು ಅವನ ಪರಿವಾರದವರ ಮನೆಗಳನ್ನೆಲ್ಲಾ ಸುಟ್ಟುಹಾಕಿದರು. ಜೆರುಸಲೇಮಿನಲ್ಲಿದ್ದ ಬೆಲೆಬಾಳುವ ವಸ್ತುಗಳನ್ನೆಲ್ಲಾ ದೋಚಿದರು ಮತ್ತು ಸುಟ್ಟುಹಾಕಿದರು; 20 ಜೀವದಿಂದುಳಿದ ಜನರನ್ನು ಸೆರೆಹಿಡಿದು ಬಾಬಿಲೋನಿನಗೆ ತೆಗೆದುಕೊಂಡು ಹೋಗಿ ತಮ್ಮ ಗುಲಾಮರನ್ನಾಗಿ ಮಾಡಿಕೊಂಡರು. ಪಾರಸಿಯ ಸಾಮ್ರಾಜ್ಯ ಸ್ಥಾಪನೆಯಾಗುವ ತನಕ ಅವರು ಅಲ್ಲಿ ಗುಲಾಮರಾಗಿದ್ದರು. 21 ಹೀಗೆ ಯೆಹೋವನು ತನ್ನ ಪ್ರವಾದಿಯಾದ ಯೆರೆಮೀಯನ ಮೂಲಕ ಹೇಳಿಸಿದ ಮಾತುಗಳನ್ನು ನೆರವೇರಿಸಿದನು. “ಈ ಸ್ಥಳವು ಎಪ್ಪತ್ತು ವರ್ಷಗಳ ತನಕ ಪಾಳುಬೀಳುವದು. ಜನರು ಆಚರಿಸದೆಹೋದ ಸಬ್ಬತ್ ಹಬ್ಬಗಳಿಗೆ ಅದು ಪರಿಹಾರವಾಗಿರುವುದು” ಎಂದು ಯೆರೆಮೀಯನು ಹೇಳಿದ್ದನು.[a]

22 ಪಾರಸಿ ರಾಜನಾದ ಕೋರೆಷನ ಆಳ್ವಿಕೆಯ ಮೊದಲನೆಯ ವರ್ಷದಲ್ಲಿ ಯೆಹೋವನು ಅವನಿಂದ ಒಂದು ವಿಶೇಷ ಪ್ರಕಟನೆಯನ್ನು ಹೊರಡಿಸಿದನು. ಯೆರೆಮೀಯನು ಹೇಳಿದ ಮಾತು ನೆರವೇರುವಂತೆ ಇದಾಯಿತು. ಕೊರೇಷನು ತನ್ನ ಸಾಮ್ರಾಜ್ಯದ ಮೂಲೆಮೂಲೆಗಳಿಗೆ ಜನರನ್ನು ಕಳುಹಿಸಿ ಈ ಸಂದೇಶವನ್ನು ಕೊಟ್ಟನು:

23 ಪಾರಸಿ ರಾಜನಾದ ಕೋರೆಷನು ತಿಳಿಸುವದೇನೆಂದರೆ:

ಪರಲೋಕದಲ್ಲಿರುವ ದೇವರಾದ ಯೆಹೋವನು ನನ್ನನ್ನು ಇಡೀ ಭೂಮಿಗೆ ಅರಸನನ್ನಾಗಿ ಮಾಡಿದ್ದಾನೆ. ಆತನು ಜೆರುಸಲೇಮಿನಲ್ಲಿರುವ ತನ್ನ ಆಲಯವನ್ನು ತಿರುಗಿ ಕಟ್ಟುವ ಜವಾಬ್ದಾರಿಕೆಯನ್ನು ನನಗೆ ಕೊಟ್ಟಿರುತ್ತಾನೆ. ಆದ್ದರಿಂದ ದೇವರ ಜನರೆಲ್ಲಾ ಜೆರುಸಲೇಮಿಗೆ ಹಿಂತಿರುಗಿ ಹೋಗಬಹುದು. ನಿಮ್ಮ ದೇವರಾದ ಯೆಹೋವನು ನಿಮ್ಮೊಂದಿಗೆ ಇರಲಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International